ʻಸೂಫಿ’ ಎಂಬುದು ಪರ್ಷಿಯನ್ ಪದವಾಗಿದೆ. ಇದು ‘ಸೂಫ್’ ಎಂಬ ಪದದಿಂದ ಉಗಮವಾಗಿದೆ. ಸೂಫಿ ಎಂದರೆ ಉಣ್ಣೆ ಎಂಬ ಅರ್ಥವಿದೆ. ಅಂದರೆ ಉಣ್ಣೆಯ ನಿಲುವಂಗಿಯನ್ನು ಧರಿಸುವವನು ಎಂದರ್ಥ. ಉಣ್ಣೆ ಬಟ್ಟೆ ಸರಳತೆಯ ಚಿಹ್ನೆ ಎಂದು ಭಾವಿಸಲಾಗಿದೆ. ಸರಳ ಜೀವನವನ್ನು ನಡೆಸಲು ಹಾಗೂ ಸತ್ಯದಿಂದ ಬದುಕುವ ಯಾವುದೇ ವಿಧದಲ್ಲಿ ಪರವಾಶರಾಗದ ವ್ಯಕ್ತಿಗಳು ಸೂಫಿಗಳಾಗುತ್ತಾರೆ. ಸಾಫ್ ಎಂಬ ಪದಕ್ಕೆ ಪರಿಶುದ್ಧ ನಡೆ-ನುಡಿಯುಳ್ಳವರು ಎಂಬ ಅರ್ಥವಿದೆ. ಸೂಫಿಜಮ್ ಎಂದರೆ ಇಸ್ಲಾಂ ಧರ್ಮದಲ್ಲಿನ ಅಧ್ಯಾತ್ಮಿಕ ಅನುಭೂತಿ ಮತ್ತು ತತ್ತೋಪದೇಶಕ್ಕೆ ಇರುವ ಮತ್ತೊಂದು ಹೆಸರು ಎಂದೇ ಭಾವಿಸಲಾಗಿದೆ.

ಗ್ರೀಕ್ ಭಾಷೆಯಲ್ಲಿ ‘ಸೋಫಿಯ’ ಎಂದರೆ ಜ್ಞಾನ ಎಂದರ್ಥ. ಹೀಗಾಗಿ ಗ್ರೀಕ್ ತತ್ವಶಾಸ್ತ್ರದ ಸೋಫಿಸ್ಪರಿಂದ ಸೂಫಿ ಎಂಬ ಶಬ್ದ ಬಂದಿತೆಂಬ ವಾದವೂ ಇದೆ. ಈ ಸಂಗತಿ ಗ್ರೀಕ್ ಮತ್ತು ಅರಬ್ಬರ ನಡುವಣ ತತ್ವ ದರ್ಶನಗಳ ಕೊಡುಕೊಳ್ಳುವಿಕೆಯನ್ನು ಸೂಚಿಸುತ್ತದೆ.

ಸೂಫಿ ಚಳುವಳಿಯು ಮೊದಲು ಪ್ರಾರಂಭವಾದದ್ದು ಆರೇಬಿಯಾದಲ್ಲಿ ನಂತರ ಪರ್ಷಿಯಾ(ಇರಾನ್), ಬಾಗ್ವಾದ್ ಹಾಗೂ ಭಾರತದಲ್ಲೂ ಹರಡಿತ್ತು. ಷೇಕ್ ಸಲೀಂ ಚಿಸ್ತಿ, ಷೇಕ್ ಇಸ್ಮಾಯಿಲ್, ನಿಜಾಂ-ಉದ್ದೀನ್ ಜಾಲಿ, ಕವಾಜ ಮುಯಿನ್-ಉದ್ದೀನ್ ಚಿಸ್ತಿ ಮತ್ತು ದಾತಾಗಂಜ್ ಬಕ್ಸ್ ಎಂಬುವರು ಭಾರತ ಪ್ರಮುಖ ಸೂಫಿ ಸಂತರಲ್ಲಿ ಪ್ರಮುಖರಾಗಿದ್ದಾರೆ. ಗುಲ್ಬರ್ಗಾದ ಬಂದೇ ನವಾಜ್, ಜೀವರ್ಗಿಯ ಅಮೀನುದ್ದೀನ್ ಚಂದಾಹುಸ್ಸೇನಿ, ರಾಯಚೂರಿನ ಖಾದರ್‌ಲಿಂಗ (ಅಲ್ಲಾ ಉದ್ದೀನ್ ಖಾದರ್), ಚನ್ನಗಿರಿಯ ಮಹಮದ್ ಷಾ ಮಸ್ತಾನ್ ಮುಂತಾದವರು ಕರ್ನಾಟಕದ ಪ್ರಮುಖ ಸೂಫಿ ಸಂತರಾಗಿದ್ದಾರೆ.

ಸೂಫಿ ಸಿದ್ಧಾಂತದಲ್ಲಿ ಭಕ್ತಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನಿಜವಾದ ಸೂಫಿಗೆ ಮೋಹವನ್ನು ನಾಶ ಮಾಡಬೇಕಾದುದ್ದು ಅತ್ಯಂತ ಅವಶ್ಯಕವಾಗಿತ್ತು. ನಮಾಜಿನಿಂದ (ಪ್ರಾರ್ಥನೆ) ಅಂತಃಶುದ್ದಿ ಪಡೆದು ಮನಸ್ಸನ್ನು ದೇವರಲ್ಲಿ ಕೇಂದ್ರೀಕರಿಸುವುದು ಇದರ ಉದ್ದೇಶವಾಗಿತ್ತು. ಪವಿತ್ರ ಖುರಾನ್ ಮತ್ತು ಶರೀಯತ್ ಎಂಬ ಇಸ್ಲಾಮಿ ಕಾಯಿದೆಯನ್ನು ಮೀರಿದ ಉದಾತ್ತ ಧಾರ್ಮಿಕ ಸಹೋದರತ್ವ ಮತ್ತು ಸಹಿಷ್ಣುತೆಯನ್ನು ಇವರು ಆಚರಿಸಿ ಪ್ರಚಾರ ಮಾಡಿದ್ದರು. ಶರೀಯತ್ (ಸಂಪ್ರದಾಯ) ಮತ್ತು ತರೀಯತ್ (ವೈಚಾರಿಕತೆ)ಗಳಲ್ಲಿ ಸಮನ್ವಯ ಉಂಟು ಮಾಡುವ ಪ್ರಯತ್ನ ಆದಾಗಿತ್ತು.

ಇಸ್ಲಾಂ ಧರ್ಮದಲ್ಲಿ ಸಂಗೀತ ಮತ್ತು ನೃತ್ಯಕ್ಕೆ ನಿಷೇದವಿದ್ದರೂ ಸೂಫಿ ಸಂತರು ಸಂಗೀತ ಸಾಧನಗಳನ್ನು ಬಳಸಿ ಭಕ್ತಿ ಗೀತೆಗಳನ್ನು ಹಾಡುತ್ತಾ, ಭಜಿಸುತ್ತಾ, ಮೈ ಮರೆತು ಆನಂದ ಪರವಶರಾಗುತ್ತಿದ್ದರು. ಇದರ ಉದ್ದೇಶ ದೈವ ಸಾಕ್ಷಾತ್ಕಾರವಾಗಿತ್ತು. ಸೂಫಿ ಸಂತರು ತಮ್ಮನ್ನೇ ದೇವರ ಅಂಶವೆಂದು ಭಾವಿಸಿದ್ದರು. ಅವರ ಪ್ರಕಾರ “ಲಾ ಇಲಾಹ ಇಲ್ಲಲ್ಲ” (ದೇವರೊಬ್ಬನೇ ಅವನನ್ನು ಬಿಟ್ಟರೆ ಬೇರೆ ದೇವರಿಲ್ಲ) ಎಂದು ಹೇಳುತ್ತಿದ್ದರು. ಉಳಿದ ಭಾಗವಾದ “ಮಹಮದ್ ಉರ್ ಸೂಲುಲ್ಲ” (ಮಹಮ್ಮದ್ ದೇವರ ಪ್ರತಿನಿಧಿ) ಎಂದು ಹೇಳುತ್ತಿರಲಿಲ್ಲ.

ಭಾರತದ ವೇದಾಂತ ತತ್ವ, ಅದೈತ ತತ್ವಗಳಂತೆಯೇ ಸೂಫಿ ಪಂಥವು ‘ಮನುಷ್ಯನೊಳಗೆ ಪರಮಾತ್ಮ ಇದ್ದಾನೆ’ ಎನ್ನುತ್ತದೆ. ದೇವರಿಗಿಂತ ಗುರುವಿಗೆ, ಗುರು ಶಿಷ್ಯ ಪರಂಪರೆಗೆ ಹಾಗೂ ವ್ಯಕ್ತಿಯ ಸಾಧನೆಗೆ ಹೆಚ್ಚಿನ ಒತ್ತು ನೀಡುವುದು ಈ ಪಂಥದ ಪ್ರಮುಖ ಗುಣ. ಸೂಫಿ ತತ್ವ ಧರ್ಮವನ್ನು ಮಸೀದಿಯೊಳಗೆ ಶೋಧಿಸುವುದಿಲ್ಲ. ಅದರ ಹುಡುಕಾಟ ನಡೆಯುವುದು ಪ್ರೇಮ ತತ್ವದ ನೆಲೆಯಲ್ಲಿ, ಜ್ಞಾನವನ್ನು ಅರಸುತ್ತಾ ಹೋದರೆ ಜಾತಿ, ಧರ್ಮಗಳು ಮುಖ್ಯವಾಗುವುದಿಲ್ಲ ಎಂಬುದು ಸೂಫಿ ಪಂಥದ ಚಿಂತನೆಯಾಗಿದೆ. ಈ ದೃಷ್ಟಿಯಿಂದ ಸೂಫಿ ಪಂಥ ರಾಷ್ಟ್ರೀಯತೆಯ ಸೀಮಿತತೆಯನ್ನು ಮೀರಿದ ವಿಶ್ವಮಾನವತ್ವದಲ್ಲಿ ನಂಬಿಕೆ ಇಡುತ್ತದೆ. ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ದಕ್ಷಿಣ ಭಾರತದ ದೊಡ್ಡ ಸೂಫಿ ತಾಣವಾಗಿದ್ದು, ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಸ್ಥಳವಾಗಿದೆ. ಆದರೆ ಕುದ್ರ ರಾಜಕೀಯದಿಂದಾಗಿ ‘ಕರ್ನಾಟಕದ ಆಯೋಧ್ಯೆ’ ಆಗುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಸೂಫಿ ಪಂಥದ ಪ್ರಮುಖ ತತ್ವಗಳು :

  1. ದೇವರು ಒಬ್ಬನೆ, ಮಾನವರೆಲ್ಲರೂ ಆತನ ಮಕ್ಕಳು ಮತ್ತು ಸರಿಸಮಾನರು.
  2. ಅಚಲವಾದ ಪ್ರೀತಿ ಮತ್ತು ಭಕ್ತಿಯಿಂದ ಭಕ್ತನು ತನ್ನ ವ್ಯಕ್ತಿತ್ವವನ್ನು ದೇವನಲ್ಲಿ ಲೀನಗೊಳಿಸಬಹುದು.
  3. ಸರಳ ಜೀವನ, ಶ್ರದ್ಧೆ ಹಾಗೂ ಗಾಢವಾದ ಭಕ್ತಿ ಹೊಂದಿರಬೇಕು.
  4. ಪಿರ್ ಎನ್ನುವ ಗುರುವಿನಲ್ಲಿ ನಂಬಿಕೆ ಹೊಂದಿದ್ದು, ಈತನ ಸಹಾಯವಿಲ್ಲದೆ ಯಾರೂ ಸಹ ದೇವರನ್ನು ಕಾಣಲು ಸಾಧ್ಯವಿಲ.
  5. ಮನುಷ್ಯ ಆಸೆಯನ್ನು ತ್ಯಜಿಸಬೇಕು. ಆಸೆಯನ್ನು ತ್ಯಜಿಸದೇ ದೇವರನ್ನು ಕಾಣಲು ಸಾಧ್ಯವಿಲ್ಲ.
  6. ಐದು ಹಂತಗಳಲ್ಲಿ ದೈವ ಸಾಕ್ಷಾತ್ಕಾರ ಸಾಧಿಸಬಹುದು.
  7. ಭಾವಶುದ್ಧಿ,
  8. ಆತ್ಮಶುದ್ಧಿ
  9. ಆಹಂಕಾರ ವರ್ಜನೆ
  10. ದೈವ ಚಿಂತನೆ
  11. ದೈವಸಾಕ್ಷಾತ್ಕಾರ (ಮೋಕ್ಷ).

ಸೂಫಿ ಪಂಥದ ವಿಶೇಷ ಅಂಶಗಳು :

  1. ಇವರು ಮೂಢ ನಂಬಿಕೆ, ಬಹುದೇವತಾರಾಧನೆ ಮತ್ತು ಮೂರ್ತಿಪೂಜೆಯನ್ನು ಖಂಡಿಸಿದರು.
  2. ಭಕ್ತಿ ಗೀತೆ, ಭಜನೆ ಮತ್ತು ನರ್ತನಗಳನ್ನು ದೈವ ಸಾಕ್ಷಾತ್ಕಾರಕ್ಕೆ ಬಳಸಿಕೊಂಡರು.
  3. ದೇವರನ್ನು ಸ್ಮರಿಸಲು ಸಂಗೀತ ಇವರ ಪ್ರಮುಖ ಸಾಧನವಾಗಿತ್ತು.
  4. ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ತಮ್ಮ ಪಂಥದ ಪ್ರಚಾರ ಮಾಡಿದ್ದರು.
  5. ಕರ್ನಾಟಕದ ಸೂಫಿಗಳು ಮತ್ತು ಸೂಫಿ ಪರಂಪರೆಗೆ ಆಕರ್ಷಿತರಾದ ಕನ್ನಡಿಗರು ವಿಫುಲ ಸಾಹಿತ್ಯ ಸೃಷ್ಟಿಸಿದರು.
  6. ಕರ್ನಾಟಕದ ಸ್ಥಳೀಯ ಪಂಥಗಳೊಂದಿಗೆ ಅನುಸಂಧಾನ ನಡೆಸಿದ ಸೂಫಿಗಳು ಧಾರ್ಮಿಕ ಸಹೋದರತ್ವವನ್ನು ಮತ್ತು ಭಾವೈಕ್ಯತೆಯನ್ನು ಮೆರೆದರು.
  7. ಹಿಂದೂಸ್ತಾನಿ ಸಂಗೀತದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದರು.

ಪ್ರಮುಖ ಸೂಫಿ ಪಂಗಡಗಳು : ಸುಹರ್‌ವರ್ಧಿ, ಚಿಸ್ತಿ, ಖಾದ್ರಿಯಾ, ನಿಜಾಮಿಯಾ, ಸಬರಿಯಾ, ಸತ್ತರಿಯಾ, ಫಿರ್‌ದೌಸಿ, ಜಮಾಲಿಯಾ, ನಕ್ಷಬಂದಿಯಾ.

ಸೂಫಿ ಪಂಥದ ಪರಿಣಾಮಗಳು :

(1) ಸೂಫಿ ಪಂಥವು ಮುಸ್ಲಿಂರಲ್ಲಿ ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿತು.

(2) ಹಿಂದೂ ಮತ್ತು ಮುಸ್ಲಿಂರಲ್ಲಿ ಸಹೋದರತ್ವವನ್ನು ಬೆಳೆಸಿತು.

(3) ಸೂಫಿ ಪಂಥವು ಹಿಂದೂ ಧರ್ಮದ ಭಕ್ತಿಪಂಥದ ಜನಪ್ರಿಯತೆಗೆ ಕಾರಣವಾಯಿತು.

(4) ಮಧ್ಯಯುಗದ ಕೆಲವು ಮುಸ್ಲಿಂ ಸುಲ್ತಾನರು ಅನ್ಯಮತ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಸೂಫಿ ಪಂಥ ಕಾರಣವಾಯಿತು.

(5) ಆಕ್ಟರ್‌ನ ದಿನ್-ಇ-ಇಲಾಹಿ ಪಂಥದ ಹುಟ್ಟಿಗೆ ಪ್ರೇರಣೆಯಾಯಿತು.

(6) ಹಿಂದೂಸ್ತಾನಿ ಸಂಗೀತ ಮತ್ತು ದೇಶಿಯ ಭಾಷೆಗಳ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿತು.

ಉಪಸಂಹಾರ

ಸೂಫಿ ಪಂಥವು ಮಧ್ಯಯುಗೀನ ಭಾರತೀಯ ಸಮಾಜದಲ್ಲಿ ಧಾರ್ಮಿಕ ಸಹಿಷ್ಣುತೆ, ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸಿತು. ಸೂಫಿ ಸಂತರ ಉಪದೇಶಗಳು ಜಾತಿ ಮತ್ತು ಧರ್ಮದ ಭೇದಗಳನ್ನು ಮೀರಿ ವಿಶ್ವಮಾನವತ್ವದ ಸಂದೇಶವನ್ನು ಹರಡಿದವು. ಇವರ ಕೊಡುಗೆಯಿಂದ ಹಿಂದೂ-ಮುಸ್ಲಿಂ ಸಾಂಸ್ಕೃತಿಕ ಏಕತೆ ಮತ್ತು ಸಂಗೀತ-ಸಾಹಿತ್ಯದ ಬೆಳವಣಿಗೆಗೆ ಸಹಾಯವಾಯಿತು. ಆದ್ದರಿಂದ ಸೂಫಿ ಪಂಥವು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ.