ಭಾರತೀಯ ಸಂವಿಧಾನದ 169 ಮತ್ತು 171ನೇ ವಿಧಿಗಳ ಪ್ರಕಾರ ಕೆಲವು ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ತು ರಚನೆಯಾಗಿದೆ. ಪ್ರಸ್ತುತ ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ್, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಧಾನಪರಿಷತ್ತು ಅಸ್ತಿತ್ವದಲ್ಲಿದೆ. ಇದು ರಾಜ್ಯ ವಿಧಾನಸಭೆಗೆ ಸಹಾಯಕವಾಗಿದ್ದು ಶಾಸನ ಪ್ರಕ್ರಿಯೆಯಲ್ಲಿ ಸಮತೋಲನವನ್ನು ಕಾಪಾಡುತ್ತದೆ. ವಿಶೇಷ ವರ್ಗಗಳ ಪ್ರತಿನಿಧಿತ್ವಕ್ಕೆ ಅವಕಾಶ ನೀಡುವ ಮೂಲಕ ಜನಪ್ರಾತಿನಿಧ್ಯವನ್ನು ವಿಸ್ತರಿಸುತ್ತದೆ.
ವಿಧಾನಪರಿಷತ್ ರಚನೆ: (Compostition of Legislative Council or Upper House)
ʻʻವಿಧಾನ ಪರಿಷತ್ತನ್ನು ರಾಜ್ಯ ಶಾಸಕಾಂಗದ ಮೇಲ್ಮನೆಯಂದು ಕರೆಯಲಾಗಿದೆʼʼ. ಭಾರತದ ಒಕ್ಕೂಟದ ಎಲ್ಲಾ ರಾಜ್ಯಗಳ ಶಾಸಕಾಂಗಗಳು ವಿಧಾನ ಪರಿಷತ್ತನ್ನು ಹೊಂದಿಲ್ಲ. ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ತು ರಚನೆಯಾಗಿರುವುದು ಕಂಡುಬರುತ್ತದೆ. ಪ್ರಸ್ತುತ ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ್ ಮತ್ತು ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ತು ಅಸ್ತಿತ್ವದಲ್ಲಿದೆ. ಸಂವಿಧಾನದ 169 ನೇ ವಿಧಿಯ ಪ್ರಕಾರ ಸಂಸತ್ತು ರಾಜ್ಯವೊಂದರಲ್ಲಿ ವಿಧಾನ ಪರಿಷತ್ತನ್ನು ಹೊಸದಾಗಿ ರಚಿಸುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ವಿಧಾನ ಪರಿಷತ್ತನ್ನು ರದ್ದುಪಡಿಸುವ ಅಧಿಕಾರವನ್ನು ಹೊಂದಿದೆ. ಆದರೆ ವಿಧಾನಪರಿಷತ್ತಿನ ರಚನೆ ಮತ್ತು ರದ್ದತಿಗೆ ಆಯಾ ರಾಜ್ಯ ವಿಧಾನ ಸಭೆಯ ೨/೩ ರಷ್ಟು ಸದಸ್ಯರು ಹಾಜರಿದ್ದು ಒಟ್ಟು ಸದಸ್ಯ ಸ್ಥಾನಗಳ ಅರ್ಧಕ್ಕಿಂತಲೂ ಹೆಚ್ಚು ಬಹುಮತದೊಂದಿಗೆ ನಿರ್ಣಯವನ್ನು ಅಂಗೀಕರಿಸಿ ಅದನ್ನು ಸಂಸತ್ತಿಗೆ ಕಳುಹಿಸಿಕೊಡಬೇಕು. ಆಗ ಸಂಸತ್ತು ಸರಳ ಬಹುಮತದೊಂದಿಗೆ ಅಂಗೀಕರಿಸಿ ಕಾನೂನಾಗಿ ಮಾಡಿ ವಿಧಾನಸಭೆಯ ನಿರ್ಣಯಕ್ಕೆ ಸಂವಿಧಾನಾತ್ಮಕ ಸ್ಥಾನವನ್ನು ನೀಡುತ್ತದೆ.
1. ಒಟ್ಟು ಸದಸ್ಯರ ಸಂಖ್ಯೆ: (Total Number of Members)
ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ಇಷ್ಟೇ ಇರಬೇಕು ಎಂಬುದನ್ನು ನಿಗದಿಪಡಿಸಿರುವುದಿಲ್ಲ. ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ಆಯಾ ರಾಜ್ಯಗಳ ಜನಸಂಖ್ಯೆಯನ್ನು ಆಧರಿಸಿ ನಿಗದಿಪಡಿಸಲಾಗುತ್ತದೆ. ಸಂವಿಧಾನದ 171(೧) ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ 40 ಕ್ಕಿಂತ ಕಡಿಮೆ ಇರಬಾರದು ಮತ್ತು ಸಂಬಂಧಿಸಿದ ರಾಜ್ಯ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ೧/೩ಕ್ಕಿಂತ ಹೆಚ್ಚಿರಬಾರದು ಎಂದು ಸೂಚಿಸಿದೆ. ಹೀಗಾಗಿ ಕರ್ನಾಟಕದಲ್ಲಿ 224 ಚುನಾಯಿತ ಹಾಗೂ ಒಬ್ಬ ಆಂಗ್ಲೋ ಇಂಡಿಯನ್ ಸದಸ್ಯ ಸೇರಿದಂತೆ ವಿಧಾನ ಸಭೆಯು 225 ಸ್ಥಾನಗಳನ್ನು ಹೊಂದಿದೆ. ಹಾಗಾಗಿ ವಿಧಾನ ಪರಿಷತ್ತು ವಿಧಾನಸಭೆಯ ೧/೩ ರಷ್ಟು ಸ್ಥಾನಗಳನ್ನು ಅಂದರೆ 75 ಸದಸ್ಯರಿಂದ ಕೂಡಿದೆ.
2. ಚುನಾವಣಾ ವಿಧಾನ: (Election Method)
ವಿಧಾನಸಭೆಯ ಸದಸ್ಯರಂತೆ ವಿಧಾನ ಪರಿಷತ್ತಿನ ಸದಸ್ಯರು ನೇರವಾಗಿ ಜನರಿಂದ ಆಯ್ಕೆಯಾಗುವುದಿಲ್ಲ. ಬದಲಾಗಿ ವಿವಿಧ ವರ್ಗಗಳ ವಿಶೇಷ ಮತದಾರರಿಂದ ಪರೋಕ್ಷ ಚುನಾವಣೆಯ ಮೂಲಕ ಆಯ್ಕೆಕೊಳ್ಳುತ್ತಾರೆ. ಈ ಸದನದ ಎಲ್ಲಾ ಸದಸ್ಯರು ವಿವಿಧ ಕ್ಷೇತ್ರಗಳಿಂದ ಏಕ ಮತವನ್ನು ವರ್ಗಾಯಿಸುವ ಪ್ರಮಾಣಾನುಗುಣ ಪದ್ಧತಿಯ ಮೂಲಕ ಚುನಾಯಿತರಾಗುತ್ತಾರೆ. ಸಂವಿಧಾನದ 171(೧) ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿನ ಸದಸ್ಯರು ಕೆಳಕಂಡಂತೆ ಚುನಾಯಿತರಾಗುತ್ತಾರೆ.
- ೧/೩ ರಷ್ಟು ಭಾಗದಷ್ಟು ಸದಸ್ಯರು ಸ್ಥಳೀಯ ಸಂಸ್ಥೆಗಳಾದ ಮುನಸಿಲಾಲಿಟಿ, ಜಿಲ್ಲಾ ಮಂಡಳಿ ಹಾಗೂ ಸಂಸತ್ತಿನ ಕಾನೂನಿನಿಂದ ರಾಜ್ಯದಲ್ಲಿ ನಿರ್ಧರಿಸಲ್ಪಡುವ ಇತರ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗುತ್ತಾರೆ.
- ರಾಜ್ಯ ವಿಧಾನ ಸಭೆಯ ಸದಸ್ಯರು ೧/೩ ಭಾಗದಷ್ಟು ಸದಸ್ಯರನ್ನು ವಿಧಾನ ಸಭೆಯ ಸದಸ್ಯರಲ್ಲದವರನ್ನು ಚುನಾಯಿಸುತ್ತಾರೆ.
- ೧/೧೨ ಭಾಗದಷ್ಟು ಸದಸ್ಯರು ದೇಶದ ಯಾವುದೇ ವಿಶ್ವವಿದ್ಯಾಲಯದಿಂದಲಾದರೂ ಪದವಿಯನ್ನು ಪಡೆದ ಪದವೀಧರರಿಂದ ಚುನಾಯಿತರಾಗುತ್ತಾರೆ.
- ೧/೧೨ಭಾಗದಷ್ಟು ಸದಸ್ಯರು ಕನಿಷ್ಟ ಪಕ್ಷ ಮೂರು ವರ್ಷಗಳವರೆಗೆ ಸೆಕೆಂಡರಿ ಶಾಲೆಗಿಂತ ಕಡಿಮೆ ಇರದ ವಿದ್ಯಾಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರಿಂದ ಚುನಾಯಿತರಾಗುತ್ತಾರೆ.
- ೧/೬ ಭಾಗದಷ್ಟು ಸದಸ್ಯರನ್ನು ವಿಜ್ಞಾನ ಕಲೆ, ಸಮಾಜಿಕ ಸೇವೆಗಳಲ್ಲಿ ಹೆಚ್ಚಿನ ಜ್ಞಾನ ಮತ್ತು ಅನುಭವ ಪಡೆದವರನ್ನು ರಾಜ್ಯಪಾಲರು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಿಸುತ್ತಾರೆ.
3. ವಿಧಾನ ಪರಿಷತ್ತಿನ ಸದಸ್ಯರ ಅರ್ಹತೆಗಳು: (Qualification of Legislative Council)
ಸಂವಿಧಾನ 173 ನೇ ವಿಧಿಯ ಪ್ರಕಾರ ವಿಧಾನ ಪರಿಷತ್ತಿನ ಸದಸ್ಯರ ಅರ್ಹತೆಗಳು ಈ ಕೆಳಗಿನಂತಿವೆ:
- ಅವರು ಭಾರತದ ಪ್ರಜೆಯಾಗಿರಬೇಕು.
- ಅವರಿಗೆ 30 ವರ್ಷ ವಯಸ್ಸಾಗಿರಬೇಕು.
- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.
- ಅವನು ಹುಚ್ಚಮತಿ ವಿಕಲ ಅಥವಾ ಅಪರಾಧಿಯಾಗಿರಬಾರದು.
- ಸಂಸತ್ತು ನಿರ್ಧರಿಸುವ ಇತರೆ ಅರ್ಹತೆಗಳನ್ನು ಹೊಂದಿರಬೇಕು.
ಸದಸ್ಯರು ಚುನಾಯಿತರಾದ ಮೇಲೆ 191ನೇ ವಿಧಿಯಲ್ಲಿ ನಮೂದಿಸಿದ ಅರ್ಹತೆಗಳನ್ನು ಹೊಂದಿರದಿದ್ದರೆ ಆತ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾನೆ. 190(೩) (b) ವಿಧಿಯ ಅನ್ವಯ ವಿಧಾನ ಪರಿಷತ್ತಿನ ಚೇರ್‌ಮೆನ್‌ರವರಿಗೆ ರಾಜೀನಾಮೆ ಪತ್ರ ಬರೆದು ಸದಸ್ಯತ್ವವನ್ನು ತ್ಯಜಿಸಬಹುದು. ಇದೇ ವಿಧಿಯ (೪)ನೇ ಉಪವಿಧಿಯ ಅನ್ವಯ ಸದನದ ಆರಮತಿ ಇಲ್ಲದೆ 60 ದಿನಗಳು ಎಲ್ಲಾ ಸಭೆಗಳಿಗೆ ಗೈರು ಹಾಜರಾದರೆ ಸದಸ್ಯತ್ವ ರದ್ದಾಗುತ್ತದೆ.
4. ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರಾವಧಿ: (Terms and Power of Legislative Council)
ಸಾಮಾನ್ಯವಾಗಿ ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರ ಅವಧಿ ೬ ವರ್ಷಗಳು. ಅವಧಿಗಿಂತ ಮುಂಚಿತವಾಗಿ ಯಾರಾದರೂ ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ, ಉಳಿದ ಅವಧಿಗೆ ಚುನಾವಣೆ ನಡೆಯುತ್ತದೆ. ೬ ವರ್ಷದ ಅವಧಿ ಮುಗಿದ ೧/೩ ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ ನಿವೃತ್ತರಾಗುತ್ತಾರೆ. ಆಗ ೧/೩ ಭಾಗದಷ್ಟು ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಸಂವಿಧಾನದ 1೭2 (೨)ನೇ ಎರಡು ವಿಧಿಯ ಪ್ರಕಾರ ವಿಧಾನ ಪರಿಷತ್ತನ್ನು ವಿಸರ್ಜಿಸುವಂತಿಲ್ಲ.
5. ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ: (Oath of Legislative Council)
ಸಂವಿಧಾನದ 188 ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿಗೆ ಆಯ್ಕೆಗೊಂಡ ಸದಸ್ಯರು ಪ್ರಮಾಣ ವಚನ ಸ್ವೀಕರಿಸಬೇಕು. ಸಂವಿಧಾನದ ೩ನೇ ಅನುಸೂಚಿಯಲ್ಲಿ ನಮೂದಿಸಿರುವಂತೆ ಸಂವಿಧಾನವನ್ನು ಗೌರವಿಸಿ ದೇಶದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿದು ಕರ್ತವ್ಯವನ್ನು ಪ್ರಮಾಣಿಕತೆಯಿಂದ ನಿರ್ವಹಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಬೇಕು. ಪ್ರಮಾಣವಚನವನ್ನು ಸ್ವೀಕರಿಸದೆ ಸದನದಲ್ಲಿ ಹಾಜರಾದರೆ ಅಥವಾ ಮತ ಚಲಾಯಿಸಿದರೆ ಪ್ರತಿದಿನ 500ರೂಗಳ ದಂಡ ನೀಡಬೇಕು ಎಂದು ಸಂವಿಧಾನ ೧೯೩ ನೇ ವಿಧಿತಿಳಿಸುತ್ತದೆ. ಹಾಗೆಯೇ ಸದಸ್ಯತ್ವವನ್ನು ಕಳೆದುಕೊಂಡು ಸದನಕ್ಕೆ ಹಾಜರಾದರೆ 500ರೂ ದಂಡ ವಿಧಿಸಲಾಗುವುದು.
6. ಅಧಿವೇಶನಗಳು: (Sessions)
ವಿಧಾನಸಭೆಯ ಜೊತೆಗೆ ವಿಧಾನ ಪರಿಷತ್ತಿನ ಅಧಿವೇಶನವನ್ನು ಕರೆಯುವ ಹಾಗೂ ಮುಂದೂಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ವಿಧಾನ ಪರಿಷತ್ತು ವರ್ಷದಲ್ಲಿ ಮೂರು ಬಾರಿ ಸಭೆ ಸೇರುತ್ತದೆ. ಈ ಅಧಿವೇಶನಗಳು ಮುಂಗಡಪತ್ರ ಅಧಿವೇಶನ, ಮಳೆಗಾಲದ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳಾಗಿವೆ. ವಿಧಾನ ಪರಿಷತ್ತಿನ ಎರಡು ಸದನಗಳ ನಡುವಿನ ಅಂತರ ೬ ತಿಂಗಳುಗಳನ್ನು ಮೀರುವಂತಿಲ್ಲ. ಅಂದರೆ ವರ್ಷದಲ್ಲಿ ಎರಡು ಬಾರಿ ಅಧಿವೇಶನಗಳು ನಡೆಯಲೇಬೇಕು.
7. ಕೋರಂ: (Quoram)
ಅಧಿವೇಶನದ ಅವಧಿಯಲ್ಲಿ ವಿಧಾನ ಪರಿಷತ್ತಿನ ಕಲಾಪಗಳು ಜರುಗಲು ಹಾಜರಾಗಬೇಕಾದ ಕನಿಷ್ಠ ಸದಸ್ಯರ ಸಂಖ್ಯೆಯನ್ನು ಕೋರಂ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ವಿಧಾನ ಪರಿಷತ್ತಿನ ಒಟ್ಟು 75 ಸದಸ್ಯರ ಪೈಕಿ ೮ ಸದಸ್ಯರು ಹಾಜರಾದರೆ ಸಾಕು ಕೋರಂ ಬಂದಂತೆ ಎಂದಾಗುತ್ತದೆ. ಒಂದು ವೇಳೆ ಸದನದಲ್ಲಿ ಕೋರಂ ಇಲ್ಲದೆ ಹೋದರೆ ಸಭಾಪತಿಗಳು ಅಧಿವೇಶನವನ್ನು ಮುಂದೂಡುವ ಅಧಿಕಾರವನ್ನು ಹೊಂದಿರುತ್ತಾರೆ.
8. ಸಭಾಪತಿ ಮತ್ತು ಉಪ ಸಭಾಪತಿ: (Chairman and Deputy Chairman)
ವಿಧಾನಪರಿಷತ್ತಿನ ಚುನಾವಣೆಯ ನಂತರ ಆಯ್ಕೆಯಾದ ಸದಸ್ಯರುಗಳು ತಮ್ಮಲ್ಲಿ ಒಬ್ಬ ಸಭಾಪತಿ ಹಾಗೂ ಒಬ್ಬ ಉಪಸಭಾಪತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಭಾಪತಿಯಾದವನು ವಿಧಾನ ಪರಿಷತ್ತಿನ ಕಲಾಪಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಾನೆ. ಆತ ಸದನದಲ್ಲಿ ಶಿಸ್ತು, ಸಂಯಮದಿಂದ ನಡೆದುಕೊಂಡು ಸದನದ ಗೌರವವನ್ನು ಕಾಪಾಡುವಂತೆ ಸದಸ್ಯರಿಗೆ ಮನವಿ ಮಾಡುತ್ತಾರೆ. ಒಂದು ವೇಳೆ ಅಧ್ಯಕ್ಷರು ಗೈರು ಹಾಜರಾದರೆ ಉಪಾಧ್ಯಕ್ಷರು ಸದನವನ್ನು ಮುಂದುವರಿಸಿಕೊಂಡು ಹೋಗುತ್ತಾರೆ.
9. ವೇತನ ಹಾಗೂ ವಿನಾಯಿತಿಗಳು: (Salary and Immunities)
ಸಂವಿಧಾನದ 195 ನೇ ವಿಧಿಯ ಪ್ರಕಾರ ರಾಜ್ಯಗಳ ಶಾಸಕರಿಗೆ ಕಾನೂನಿನ ಮೂಲಕ ವೇತನ ಹಾಗೂ ಇತರೆ ಭತ್ಯೆಗಳನ್ನು ನಿರ್ಧರಿಸುವ ಅಧಿಕಾರ ರಾಜ್ಯ ಶಾಸಕಾಂಗಕ್ಕೆ ಇದೆ. ಕರ್ನಾಟಕ ಶಾಸಕಾಂಗ ಎಂ.ಎಲ್.ಎ ಹಾಗೂ ಎಂ.ಎಲ್.ಸಿ ಗಳ ವೇತನ ಹಾಗೂ ಭತ್ಯೆಗಳನ್ನು ಆಗಾಗ ಪರಿಷ್ಕರಿಸಿದೆ. ವಿಧಾನ ಪರಿಷತ್ತಿನ ಶಾಸಕರಿಗೆ 40,000 ಮಾಸಿಕ ವೇತನ ನೀಡಲಾಗುತ್ತದೆ. ಇದರ ಜೊತೆಗೆ ದೂರವಾಣಿ ಭತ್ಯೆ, ಚುನಾವಣಾ ಕ್ಷೇತ್ರದ ಭತ್ಯೆ, ಅಂಚೆ ವೆಚ್ಚಗಳ ಭತ್ಯೆ, ಪ್ರತಿ ಅಧಿವೇಶನಕ್ಕೆ ಹಾಜರಾದಾಗ ದಿನವೊಂದಕ್ಕೆ 200೦ ರೂಗಳ ಭತ್ಯೆ, ತಿಂಗಳಿಗೆ ಕನಿಷ್ಠ ಪಿಂಚಣಿ ೧೫೦೦೦ ದಿಂದ 25,000 ವರೆಗೆ ನೀಡಲಾಗುತ್ತದೆ. ಅದು ಅಲ್ಲದೆ ವೈದ್ಯಕೀಯ ಸೌಲಭ್ಯ, ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಹಾಗೂ ವಾಹನಗಳನ್ನು ಖರೀದಿಸಲು ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ.
ಉಪಸಂಹಾರ
ವಿಧಾನಪರಿಷತ್ತು ರಾಜ್ಯದ ಶಾಸನಾತ್ಮಕ ವ್ಯವಸ್ಥೆಗೆ ಸ್ಥಿರತೆ ಮತ್ತು ಗಂಭೀರತೆ ನೀಡುವ ಪ್ರಮುಖ ಸಂಸ್ಥೆಯಾಗಿದೆ. ಇದು ವಿಧಾನಸಭೆಯ ನಿರ್ಣಯಗಳನ್ನು ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಕಾನೂನು ರಚನೆಗೆ ಗುಣಮಟ್ಟವನ್ನು ಹೆಚ್ಚಿಸುತ್ತದೆ. ವಿವಿಧ ಕ್ಷೇತ್ರಗಳ ಪರಿಣಿತರನ್ನು ಒಳಗೊಂಡಿರುವುದರಿಂದ ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುತ್ತದೆ. ಹೀಗಾಗಿ ವಿಧಾನಪರಿಷತ್ತು ರಾಜ್ಯ ಆಡಳಿತದಲ್ಲಿ ಸಮತೋಲನ ಮತ್ತು ಸಮರ್ಥತೆಯನ್ನು ಒದಗಿಸುವ ಮಹತ್ವದ ಸದನವಾಗಿದೆ.