ʻʻ ಭಾರತದಲ್ಲಿ ನಿಜವಾದ ಫೆಡರಲ್ ಮಾದರಿಯ ಸರ್ಕಾರವಿಲ್ಲ ರಾಜ್ಯಗಳ ಅಳಿವು ಉಳಿವು ಕೇಂದ್ರ ಸರ್ಕಾರದ ಕೃಪೆಗೆ ಒಳಗಾಗಿದೆ. ರಾಜ್ಯಗಳಿಗೆ ನೀಡಿದ ಅಲ್ಪ ಸ್ವಾಯತ್ತತೆಯೂ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಗಾಗಿದೆ.ʼʼ ಕಾರ್ಲ್‌ ಜೆ ಪ್ರೆಡರಿಚ್.

ಭಾರತವು ಪ್ರಬಲ ಕೇಂದ್ರ ಸರ್ಕಾರ ಮತ್ತು ದುರ್ಬಲ ವಿವಿಧ ರಾಜ್ಯಗಳಿಂದ ಕೂಡಿರುವ ಒಂದು ಒಕ್ಕೂಟ ವ್ಯವಸ್ಥೆಯಾಗಿದೆ. ಈ ಕಾರಣಗಳಿಂದ ನಮ್ಮ ಸಂವಿಧಾನ ರಚನಾಕಾರರು ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯ ಪಟ್ಟಿಗಳನ್ನು ಸಂವಿಧಾನದಲ್ಲಿ ಅಳವಡಿಸಿ ಭವಿಷ್ಯದಲ್ಲಿ ಈ ಎರಡೂ ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ತಡೆಯಲು ಯತ್ನಿಸಿದರು ಸಂವಿಧಾನದ 11 ಮತ್ತು 12ನೇ ಭಾಗದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸನೀಯ, ಆಡಳಿತಾತ್ಮಕ ಹಾಗೂ ಆರ್ಥಿಕ ಸಂಬಂಧಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು.

A)  ಶಾಸನೀಯ ಸಂಬಂಧಗಳು: (Legislative Relations)

ಸಂವಿಧಾನದ 11ನೇ ಭಾಗದ ಮೊದಲ ಅಧ್ಯಾಯದಲ್ಲಿ 245 ರಿಂದ 256 ರವರೆಗಿನ ವಿಧಿಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಶಾಸನೀಯ ಸಂಬಂಧಗಳನ್ನು ವಿವರಿಸಲಾಗಿದೆ. ನಮ್ಮ ಸಂವಿಧಾನ ರಚನಾಕಾರರು ಅಮೇರಿಕಾದ ಸಂವಿಧಾನದ ಬದಲು ಕೆನಡಾ ಸಂವಿಧಾನದಿಂದ ಪ್ರಭಾವಿತರಾಗಿ ಕೆನಡಾ ಸಂವಿಧಾನದ ಅಂಶಗಳನ್ನು ಭಾರತ ಸಂವಿಧಾನದಲ್ಲಿ ಅಳವಡಿಸಿಕೊಂಡ ಕಾರಣ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗಿಂತ ಶಾಸನೀಯ ಸಂಬಂಧದಲ್ಲಿ ಕೇಂದ್ರ ಪ್ರಭಾವಶಾಲಿಯಾಯಿತು. ಅವುಗಳನ್ನು ಕೆಳಕಂಡಂತೆ ವಿಶ್ಲೇಷಿಸಬಹುದು.

1)  ಸಂವಿಧಾನದ 245 ನೇ ವಿಧಿಯಲ್ಲಿರುವ (೨)ನೇ ಉಪವಿಧಿಯ ಪ್ರಕಾರ ಸಂಸತ್ತು ಮಾಡಿದ ಕಾನೂನು ತನ್ನ ಎಲ್ಲೆ ಮೀರಿ ಜಾರಿಯಲ್ಲಿದೆ ಎಂಬ ಕಾರಣಕ್ಕಾಗಿ ಅದನ್ನು ಅನೂರ್ಜಿತ ಎಂದು ಭಾವಿಸಕೂಡದು.

2)  ಸಂವಿಧಾನದ 246ನೇ ವಿಧಿಯಲ್ಲಿ (೪)ನೇ ಉಪವಿಧಿ ಅನ್ವಯ ಕೇಂದ್ರ ಸಂಸತ್ತು ಅಧಿಕಾರ ಹಂಚಿಕೆಯ ಮೂರು ಪಟ್ಟಿಗಳಾದ ಕೇಂದ್ರ, ರಾಜ್ಯ ಹಾಗೂ ಸಮವರ್ತಿ ಪಟ್ಟಿಯಲ್ಲಿನ ವಿಷಯಗಳ ಮೇಲೆ ಶಾಸನವನ್ನು ರಚಿಸಲು ಅಧಿಕಾರ ಪಡೆದಿದೆ. ಆದರೆ ರಾಜ್ಯ ಶಾಸಕಾಂಗಗಳು ಉಳಿಕೆ ಪಟ್ಟಿಯ ವಿಷಯಗಳಲ್ಲಿ ಮಾತ್ರ ಶಾಸನ ರಚಿಸಲು ಅವಕಾಶವನ್ನು ಪಡೆದಿರುತ್ತವೆ.

3)  ಸಂವಿಧಾನದ 247ನೇ ವಿಧಿಯು ಹೇಳುವ ಪ್ರಕಾರ ಕೇಂದ್ರ ಕಾನೂನಿಗೆ ಸಂಬಂಧಿಸಿದಂತೆ ಸಂಸತ್ತು ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಬಹುದು.

4) ಸಂವಿಧಾನದ 248ನೇ ವಿಧಿಯ ಅನ್ವಯ ಸಂವಿಧಾನದಲ್ಲಿ ನಮೂದಿಸದೇ ಇರುವ ಅಧಿಕಾರಗಳನ್ನು (Residuary Powers) ರಾಜ್ಯಗಳಿಗೆ ನೀಡಲಾಗಿದೆ. 

5) ಸಂವಿಧಾನದ 249ನೇ ವಿಧಿಯಂತೆ ರಾಷ್ಟ್ರದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯಸಭೆಯು ೨/೩  ಬಹುಮತದೊಂದಿಗೆ ರಾಜ್ಯ ಪಟ್ಟಿಯಲ್ಲಿರುವ ಯಾವುದಾದರೂ ಒಂದು ವಿಷಯದ ಬಗ್ಗೆ ಸಂಸತ್ತು ಕಾನೂನು ಮಾಡುವಂತೆ ಅಧಿಕಾರ ನೀಡಬಹುದು. ಆಗ ಕೇಂದ್ರ ಹಾಗೂ ಸಮವರ್ತಿ ಪಟ್ಟಿಯೊಡನೆ ಸಂಸತ್ತು ರಾಜ್ಯ ಪಟ್ಟಿಯ ವಿಷಯಗಳ ಮೇಲೆಯೂ ಶಾಸನ ರಚಿಸುವ ಅಧಿಕಾರ ಪಡೆಯುತ್ತದೆ. ರಾಜ್ಯಸಭೆಯು ಅಂಗೀಕರಿಸಿದ ಈ ನಿರ್ಣಯ ಒಂದು ವರ್ಷ ಜಾರಿಯಲ್ಲಿರುತ್ತದೆ. ಈ ವಿಧಿಯ ಮುಂದುವರಿಕೆಗೆ ಪ್ರತಿವರ್ಷ ರಾಜ್ಯಸಭೆಯು ತನ್ನ ಒಪ್ಪಿಗೆಯನ್ನು ನೀಡಬೇಕು.

6)  ಸಂವಿಧಾನದ 250ನೇ ವಿಧಿಯ ಪ್ರಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಕೇಂದ್ರವು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನುಗಳನ್ನು ಮಾಡಬಹುದಾಗಿದೆ.

7)  249 ಮತ್ತು 250ನೇ ವಿಧಿಗಳ ಪ್ರಕಾರ ಕೇಂದ್ರ ಹಾಗೂ ರಾಜ್ಯಗಳು ರಚಿಸುವ ಕಾನೂನುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಆಗ ಕೇಂದ್ರ ರಚಿಸಿದ ಕಾನೂನುಗಳೇ ಊರ್ಜಿತವಾಗುತ್ತವೆ. (251ನೇ ವಿಧಿ.)

8)  ಸಂವಿಧಾನದ 252ನೇ ವಿಧಿಯಂತೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ರಾಜ್ಯಗಳು ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಮೇಲೆ ಶಾಸನವನ್ನು ಮಾಡುವಂತೆ ಕೇಂದ್ರವನ್ನು ಕೇಳಿಕೊಂಡಾಗ ಕೇಂದ್ರವು ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನನ್ನು ಮಾಡಬಹುದು. ಇತರ ರಾಜ್ಯಗಳ ಶಾಸನವನ್ನು ತಮ್ಮ ರಾಜ್ಯಗಳಿಗೂ ಅನ್ವಯವಾಗುವಂತೆ ಮಾಡಲು ಕೇಂದ್ರ ಸರ್ಕಾರವನ್ನು ಕೇಳಿಕೊಂಡಾಗ ಕೇಂದ್ರವು ಆ ರಾಜ್ಯಗಳಿಗೆ ತಾನು ರಚಿಸಿದ ಕಾನೂನನ್ನು ಅಳವಡಿಸಬಹುದು.

9)  ಸಂವಿಧಾನದ 253ನೇ ವಿಧಿಯ ಪ್ರಕಾರ ವಿಶ್ವ ಒಪ್ಪಂದ. ಅಂತರಾಷ್ಟ್ರೀಯ ಸಮ್ಮೇಳನ ಮತ್ತು ಜಾಗತಿಕ ಮಟ್ಟದ ತೀರ್ಮಾನಗಳನ್ನು ಭಾರತದಲ್ಲಿ ಅನುಷ್ಠಾನಗೊಳಿಸಲು ಅಥವಾ ದೇಶದ ಯಾವುದಾದರೂ ಒಂದು ಭಾಗದಲ್ಲಿ ಅನ್ವಯವಾಗುವಂತೆ ಕಾನೂನು ಮಾಡಲು ಕೇಂದ್ರ ಸಂಸತ್ತು ಅಧಿಕಾರವನ್ನು ಪಡೆದಿದೆ.

10) ಸಂವಿಧಾನದ 254ನೇ ವಿಧಿಯ ಅನ್ವಯ ಸಮವರ್ತಿ ಪಟ್ಟಿಯ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ಏಕಕಾಲದಲ್ಲಿ ರಚಿಸಿದ ಕಾನೂನುಗಳು ಪರಸ್ಪರ ವಿರುದ್ಧವಾಗಿದ್ದರೆ ರಾಜ್ಯ ಶಾಸಕಾಂಗದ ಕಾನೂನುಗಳು ರದ್ದುಗೊಂಡು ಕೇಂದ್ರದ ಕಾನೂನು ಗಳೇ ಊರ್ಜಿತಗೊಳ್ಳುತ್ತವೆ.

11) ಸಂವಿಧಾನದ 255ನೇ ವಿಧಿಯ ಪ್ರಕಾರ ರಾಜ್ಯ ಶಾಸಕಾಂಗಗಳು ರಚಿಸಿದ ಕೆಲವು ಮಸೂದೆಗಳು ಅಗತ್ಯವಾಗಿವೆ ಎಂದು ಅನಿಸಿದರೆ ಅವುಗಳನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ರಾಜ್ಯಪಾಲರು 200ನೇ ವಿಧಿಯ ಅನ್ವಯ ಕಾಯ್ದಿರಿಸಬಹುದು. 2೦1ನೇ ವಿಧಿಯ ಅನ್ವಯ ರಾಷ್ಟ್ರಪತಿಗಳು ಈ ಮಸೂದೆಗೆ ಒಪ್ಪಿಗೆಯನ್ನು ನೀಡಬಹುದು ಅಥವಾ ತಡೆಹಿಡಿಯಬಹುದು ಅಥವಾ ಸಂಬಂಧಿಸಿದ ಶಾಸಕಾಂಗದ ಪುನರ್ ಪರಿಶೀಲನೆಗೆ ವಾಪಸ್ಸು ಕಳಿಸಬಹುದು. ಆರು ತಿಂಗಳೊಳಗೆ ಈ ಮಸೂದೆಯನ್ನು ಮತ್ತೆ ರಾಜ್ಯ ಶಾಸಕಾಂಗವು ಪರಿಶೀಲಿಸಿ ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಿದಾಗ ಅವರು ತಮ್ಮ ಒಪ್ಪಿಗೆಯನ್ನು ಕೊಡಬಹುದು ಅಥವಾ ನಿರಾಕರಿಸಬಹುದು.

B) ಆಡಳಿತಾತ್ಮಕ ಸಂಬಂಧಗಳು: (Administrative Relations)

ಭಾರತದ ಸಂವಿಧಾನದ 11ನೇ ಭಾಗದಲ್ಲಿ ಎರಡನೇ ಅಧ್ಯಾಯದಲ್ಲಿನ 256 ರಿಂದ 263 ರವರೆಗಿನ ವಿಧಿಗಳು ಕೇಂದ್ರ ಹಾಗೂ ರಾಜ್ಯಗಳ ಆಡಳಿತಾತ್ಮಕ ಸಂಬಂಧಗಳನ್ನು ಮತ್ತು ಆಡಳಿತಾಧಿಕಾರಿ ವಿಷಯಗಳ ಕುರಿತು ವಿವರಿಸಲಾಗಿದೆ. ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ರಕ್ಷಿಸುವ ಸಂಯುಕ್ತ ರಚನೆಯ ಆಶಯಗಳನ್ನು ಬಲಪಡಿಸುವುದು ಅದರ ಉದ್ದೇಶವಾಗಿದೆ.

1)  ಭಾರತದ ರಾಷ್ಟ್ರಪತಿಗಳು ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲರು ಮತ್ತು ಉಪರಾಜ್ಯಪಾಲರು ಮತ್ತು ಆಡಳಿತ ಅಧಿಕಾರಗಳನ್ನು ನೇಮಿಸುವ ಅಧಿಕಾರ ಹೊಂದಿದ್ದಾರೆ. ಕೇಂದ್ರ ಮಂತ್ರಿಮಂಡಲದ ಆಶಯದಂತೆ ರಾಜ್ಯಪಾಲರು ನೇಮಕಗೊಂಡು ಕೇಂದ್ರದ ಪ್ರತಿನಿಧಿಯಂತೆ ರಾಜ್ಯಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.

2) ಸಂವಿಧಾನದ 256ನೇ ವಿಧಿಯ ಪ್ರಕಾರ ಪ್ರತಿಯೊಂದು ರಾಜ್ಯವು ತನ್ನ ಕಾರ್ಯಾಂಗಾಧಿಕಾರವನ್ನು ಚಲಾಯಿಸುವಾಗ ಸಂಸತ್ತಿನ ಕಾನೂನುಗಳನ್ನು ಅನುಸರಿಸಬೇಕು. ಈ ವಿಷಯವಾಗಿ ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ಕೊಡಬಹುದು.

3)  ಸಂವಿಧಾನದ 257ನೇ ವಿಧಿಯ ಪ್ರಕಾರ ಅಗತ್ಯವೆನಿಸಿದರೆ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಾಷ್ಟ್ರೀಯ ಏಕತೆ, ರಕ್ಷಣೆ, ಸಾರಿಗೆ, ಸಂಪರ್ಕ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮುಂತಾದವುಗಳ ಕುರಿತಾಗಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಸೂಕ್ತ ಮಾರ್ಗದರ್ಶನ ನೀಡುವ ಅಧಿಕಾರ ಹೊಂದಿದೆ.

4)  ಸಂವಿಧಾನದ 258ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರವು ಒಂದು ಕಾಯ್ದೆಯನ್ನು ಅಂಗೀಕರಿಸುವ ಮೂಲಕ ರಾಜ್ಯಗಳ ಅನುಮತಿ ಪಡೆದು ಅಥವಾ ಪಡೆಯದೆ ತನ್ನ ಅಧಿಕಾರವನ್ನು ರಾಜ್ಯಗಳಿಗೆ ನಿಯೋಜನೆ ಮಾಡುವ ಅಧಿಕಾರವನ್ನು ಹೊಂದಿದೆ.

5) ಸಂವಿಧಾನದ 262ನೇ ವಿಧಿಯ ಪ್ರಕಾರ ಅಂತರರಾಜ್ಯಗಳ ಜಲವಿವಾದಗಳನ್ನು ಬಗೆಹರಿಸಲು ಕಾನೂನು ರಚಿಸುವ ಅಧಿಕಾರವನ್ನು ಕೇಂದ್ರ ಸಂಸತ್ತು ಹೊಂದಿದೆ.

6)  ಸಂವಿಧಾನದ 263 ನೇ ವಿಧಿಯನ್ವಯ ರಾಷ್ಟ್ರಪತಿಗಳು ಭಾರತ ಒಕ್ಕೂಟದ ಕೇಂದ್ರ ಮತ್ತು ವಿವಿಧ ರಾಜ್ಯಗಳ ನಡುವಿನ ಸಾಮಾನ್ಯ ವಿಷಯಗಳನ್ನು ಚರ್ಚಿಸಲು ಅಗತ್ಯವೆನಿಸಿದರೆ ಅಂತರ ರಾಜ್ಯ ಮಂಡಳಿಯನ್ನು ರಚಿಸಬಹುದಾಗಿದೆ.

7)  ಸಂವಿಧಾನದ 3೦1 ರಿಂದ 3೦5 ರವರೆಗಿನ ವಿಧಿಗಳ ಪ್ರಕಾರ ಒಕ್ಕೂಟದ ರಾಜ್ಯಗಳ ನಡುವಿನ ಸೌಹಾರ್ಧಯುತ ಸಂಬಂಧಗಳನ್ನು ಕಾಯ್ದುಕೊಳ್ಳುವ ಅಂತರರಾಜ್ಯ ವಾಣಿಜ್ಯ ಆಯೋಗವನ್ನು ರಚಿಸುವ ಅಧಿಕಾರ ಕೇಂದ್ರ ಸಂಸತ್ತಿಗೆ ಇದೆ.

8)  ಅಖಿಲ ಭಾರತ ಸೇವೆಗಳಾದ ಐ.ಎ.ಎಸ್ ಐ.ಪಿ.ಎಸ್ ಮತ್ತು ಐ.ಎಫ್.ಎಸ್ ಗಳನ್ನು ಕೇಂದ್ರ ಲೋಕಸೇವಾ ಆಯೋಗದಿಂದ ಆಯ್ಕೆ ಮಾಡಿ ಕೇಂದ್ರ ಹಾಗೂ ರಾಜ್ಯಗಳಿಗೆ ನೇಮಕ ಮಾಡಲಾಗುತ್ತದೆ. ಇವರ ವೇತನ ಹಾಗೂ ಭತ್ಯೆಗಳನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈ ಸೇವೆಗಳಿಗೆ ಸೇರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುವುದರಿಂದ ರಾಜ್ಯ ಸರ್ಕಾರಗಳು ಅವರ ಮೇಲೆ ಹೆಚ್ಚು ನಿಯಂತ್ರಣ ಹೊಂದಿರುವುದಿಲ್ಲ.

9)  ರಾಷ್ಟ್ರೀಯ ಐಕ್ಯತಾ ಸಮಿತಿಯನ್ನು 1961 ರಲ್ಲಿ ಸ್ಥಾಪಿಸಲಾಯಿತು. ಕೋಮುವಾದ, ಜಾತಿವಾದ ಹಾಗೂ ಪ್ರಾದೇಶಿಕತೆ ಮತ್ತು ಭಾಷಾಭಿಮಾನ ಮುಂತಾದವುಗಳನ್ನಾಧರಿಸಿ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವುದು ಈ ಸಮಿತಿಯ ಕಾರ್ಯವಾಗಿದೆ.

10)  ಕೇಂದ್ರ ಲೋಕಸೇವಾ ಆಯೋಗವನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಜೊತೆಗೆ ಆಯೋಗದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡುವ ಮತ್ತು ಅವರನ್ನು ಪದಚ್ಯುತಗೊಳಿಸುವ ಅಧಿಕಾರವನ್ನು ರಾಷ್ಟ್ರಪತಿಗಳೇ ಹೊಂದಿದ್ದಾರೆ.

11) ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯಗಳ ಉಚ್ಛನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳನ್ನು ನೇಮಕ ಮಾಡುವ ಅಧಿಕಾರ ರಾಷ್ಟ್ರಪತಿಯವರಿಗಿದ್ದು ಇಡೀ ದೇಶದಲ್ಲಿ ಸ್ವತಂತ್ರ ಏಕೀಕೃತ ನ್ಯಾಯಾಂಗ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ.

C)  ಹಣಕಾಸಿನ ಸಂಬಂಧಗಳು: (Financial Relations)

ಸಂವಿಧಾನದ ೨೬೪ ರಿಂದ ೨೬೭ ವರೆಗಿನ ವಿಧಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಉತ್ತಮ ಆರ್ಥಿಕ ಸಂಬಂಧವನ್ನು ಹೊಂದುವ ಸಂವಿಧಾನಾತ್ಮಕ ಅವಕಾಶಗಳನ್ನು ನೀಡಲಾಗಿದೆ ಅವುಗಳೆಂದರೆ

1)  ಸಂವಿಧಾನದ 268ನೇ ವಿಧಿಯಂತೆ ಕೇಂದ್ರವು ತೆರಿಗೆಯನ್ನು ವಿಧಿಸಿದಾಗ ರಾಜ್ಯಗಳು ಆ ತೆರಿಗೆಯನ್ನು ವಸೂಲಿ ಮಾಡಿಕೊಂಡು ತಾವೇ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

2)  ಸಂವಿಧಾನದ 269 ನೇ ವಿಧಿಯ ಪ್ರಕಾರ ಕೆಲವು ತೆರಿಗೆಗಳನ್ನು ಕೇಂದ್ರ ಸರ್ಕಾರವೇ ವಿಧಿಸಿ ಸಂಗ್ರಹಿಸಿ ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಉದಾಹರಣೆ ರೈಲು ದರ, ಸರಕುಗಳ ಮೇಲೆ ವಿಧಿಸುವ ತೆರಿಗೆ, ವಿಮಾನ ಪ್ರಯಾಣ ತೆರಿಗೆ, ಆಸ್ತಿಯ ಸುಂಕ, ವೃತ್ತ ಪತ್ರಿಕೆಗಳ ಮಾರಾಟ ತೆರಿಗೆ ಮುಂತಾದವುಗಳು.

3)  ಸಂವಿಧಾನದ 270ನೇ ವಿಧಿಯ ಪ್ರಕಾರ ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರವೇ ವಿಧಿಸಿ ಸಂಗ್ರಹಿಸಿ ಅದನ್ನು ತನಗೆ ಹಾಗೂ ಇತರ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಆದಾಯ ತೆರಿಗೆಯ ಶೇಕಡ 85% ರಷ್ಟು ಭಾಗ ರಾಜ್ಯ ಸರ್ಕಾರಗಳಿಗೆ ಹೋಗಬೇಕು.

4)  ಸಂವಿಧಾನದ 271ನೇ ವಿಧಿಯ ಪ್ರಕಾರ ರಾಜ್ಯಗಳ 18 ವಿಷಯಗಳ ಮೇಲೆ ತೆರಿಗೆಯನ್ನು ವಿಧಿಸಿ, ಸಂಗ್ರಹಿಸಿ ತಾವೇ ಬಳಕೆ ಮಾಡಿಕೊಳ್ಳಬಹುದಾಗಿದೆ.

5)  ಸಂವಿಧಾನದ 275 ನೇ ವಿಧಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರ ಅಭಿವೃದ್ಧಿಗಾಗಿ ರಾಜ್ಯಗಳು ಕೇಂದ್ರದಿಂದ ಅನುದಾನವನ್ನು ಕೇಳಿದರೆ ಕೇಂದ್ರ ರಾಜ್ಯಗಳಿಗೆ ಅನುದಾನವನ್ನು ನೀಡಬಹುದು.

6)  ಸಂವಿಧಾನದ 282ನೇ ವಿಧಿಯ ಪ್ರಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನವನ್ನು ನೀಡಬಹುದು ಉದಾಹರಣೆ ಬರಗಾಲ ಮತ್ತು ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಕೇಂದ್ರ ಹಣಕಾಸಿನ ನೆರವನ್ನು ಅಂತಹ ರಾಜ್ಯಗಳಿಗೆ ನೀಡಬಹುದು.

7)  ಕೇಂದ್ರ ಸರ್ಕಾರ ಹಣಕಾಸು ಆಯೋಗವನ್ನು ರಚಿಸುವುದು.

8) ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿದ್ದಾಗ ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಕೇಂದ್ರ ಸರ್ಕಾರವೇ ನಿರ್ವಹಣೆ ಮಾಡುತ್ತದೆ.

9)  ರಾಜ್ಯಗಳು ದೇಶದ ಹೊರಗಿನಿಂದ ಸಾಲವನ್ನು ಪಡೆಯುವಂತಿಲ್ಲ. ಆದರೆ ಕೇಂದ್ರ ಸರ್ಕಾರವೇ ಸಾಲದ ರೂಪದಲ್ಲಿ ರಾಜ್ಯಗಳಿಗೆ ಹಣಕಾಸಿ ನೆರವನ್ನು ನೀಡುತ್ತದೆ.

ಉಪಸಂಹಾರ

ಭಾರತೀಯ ಸಂವಿಧಾನವು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯಾತ್ಮಕ ಸಂಬಂಧವನ್ನು ನಿರ್ಮಿಸಲು ವಿಶೇಷ ವಿಧಿಗಳನ್ನು ಹೊಂದಿದೆ. ತುರ್ತು ಪರಿಸ್ಥಿತಿ, ರಾಷ್ಟ್ರ ಹಿತ ಮತ್ತು ಆರ್ಥಿಕ ಸಮತೋಲನದ ದೃಷ್ಟಿಯಿಂದ ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಆದರೂ ರಾಜ್ಯಗಳ ಅಭಿವೃದ್ಧಿ ಮತ್ತು ಸ್ವಾಯತ್ತತೆಯನ್ನು ಸಂರಕ್ಷಿಸುವ ಪ್ರಯತ್ನವೂ ಕಂಡುಬರುತ್ತದೆ. ಈ ಸಂಬಂಧಗಳ ಸಮತೋಲನವೇ ಭಾರತದ ಏಕತೆ ಮತ್ತು ಪ್ರಗತಿಗೆ ಆಧಾರವಾಗಿದೆ.