ಪರಿಸರವೆಂದರೆ ಭೂಮಿಯ ಮೇಲೆ ಜೀವಿಸುವ ಎಲ್ಲಾ ಜೀವಿಗಳಿಗೆ ಅಗತ್ಯವಾದ ನೈಸರ್ಗಿಕ ಅಂಶಗಳ ಸಮಗ್ರ ವ್ಯವಸ್ಥೆ. ಈ ಪರಿಸರವು ವಿವಿಧ ಗೋಳಗಳ ಸಮನ್ವಯದಿಂದ ರೂಪುಗೊಂಡಿದ್ದು ಜೀವನದ ಅಸ್ತಿತ್ವಕ್ಕೆ ಆಧಾರವಾಗಿದೆ.
ಪರಿಸರವನ್ನು ಪ್ರಮುಖವಾಗಿ ನಾಲ್ಕು ಗೋಳಗಳನ್ನಾಗಿ ವಿಂಗಡಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ:
1. ವಾಯುಗೋಳ
2. ಶಿಲಾಗೋಳ
3. ಜಲಗೋಳ
4. ಜೀವಗೋಳ
1. ವಾಯುಗೋಳ ( Atmosphere)
ʻʻವಿವಿಧ ಅನಿಲಗಳು, ನೀರಾವಿ ಹಾಗೂ ದೂಳಿನ ಕಣಗಳ ಮಿಶ್ರಣವೇ ವಾಯುಗೋಳ ಎಂದು ಕರೆಯಲಾಗಿದೆ.ʼʼ ಈ ಮಿಶ್ರಣವು ಕಾಲದಿಂದ ಕಾಲಕ್ಕೆ ಹಾಗೂ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ. ಅಟ್ಮೋಸ್‌ಪೇರ್ ಎಂಬ ಆಂಗ್ಲ ಪದವು ಅಟ್ಮೋಸ್(ವಾಯು) + ಸ್ಪೇರ್ ( ಮಂಡಲ) ಎಂಬ ಎರಡು ಗ್ರೀಕ್ ಪದದಿಂದ ಬಂದಿದೆ.
2. ಶಿಲಾಗೋಳ (Lithosphere) ́
ʻʻಭೂಮಿಯ ಹೊರಭಾಗ ಅಥವಾ ಗಟ್ಟಿಯಾದ ಭೂಮಿಯ ಹೊರ ಕವಚವನ್ನು ಶಿಲಾಗೋಳ ಎಂದು ಕರೆಯಲಾಗಿದೆ.ʼʼ ಈ ಗೋಳವು ಕಲ್ಲು ಬಂಡೆಗಳು, ಭೂಮಿ, ಮಣ್ಣುಗಳು, ಜೈವಿಕ, ಅಜೈವಿಕ ಅಂಶಗಳು ಹಾಗೂ ನೀರನ್ನು ಒಳಗೊಂಡಿದೆ. ಹಲವು ಬಗೆಯ ಖನಿಜಗಳು ಸಹ ಇಲ್ಲಿ ಕಂಡುಬರುತ್ತವೆ. ಶಿಲಾಗೋಳದ ಒಟ್ಟು ದಪ್ಪ 40 ಕಿ.ಮೀ ನಷ್ಟು ಆಗಿರುವುದು. ಉಳಿದಂತೆ 10 ರಿಂದ 12 ಕೀ.ಮಿನಷ್ಟು ಸಾಗರದ ಪ್ರದೇಶದಲ್ಲಿ ಕಂಡು ಬರುತ್ತದೆ.
3. ಜಲಗೋಳ (Hydrosphere)
ʻʻಸಮುದ್ರ, ಸಾಗರ, ಸರೋವರ, ಹಳ್ಳಕೊಳ್ಳ, ಕೆರೆ, ಖಾರಿ, ಕೊಲ್ಲಿ, ಹಿಮ ಪರ್ವತ, ಅಂತರ್ಜಲ ಜಲರಾಶಿಯನ್ನು ಒಳಗೊಂಡ ಭೂಪ್ರದೇಶವನ್ನು ಜಲಗೋಳ ಎಂದು ಕರೆಯಲಾಗಿದೆ.ʼʼ ಭೂಮಿಯ ಮೇಲೆ ನೀರು ಉಂಟಾಗುವ ಪ್ರಕ್ರಿಯೆಯನ್ನು ಜಲಚಕ್ರ ಎಂದು ಕರೆಯುತ್ತೇವೆ. ಭೂಮಿಯ ಮೇಲಿನ ಜಲ ಭಾಗಗಳು ದ್ರವ ಹಾಗೂ ಘನ ರೂಪದಲ್ಲಿ ಕಂಡುಬರುತ್ತಿದ್ದು ಶೇಕಡಾ 71% ರಷ್ಟು ಅಥವಾ 361 ಮಿಲಿಯನ್ ಚ.ಕಿ.ಮೀಗಳಷ್ಟು ಹೊಂದಿದೆ. ಇದರಲ್ಲಿ 97.3ರಷ್ಟು ನೀರು ಉಪ್ಪು ನೀರಾಗಿದ್ದು ಮಾನವನ ಬಳಕೆಗೆ ಯೋಗ್ಯವಾಗಿಲ್ಲ. ಉಳಿದ ಕೇವಲ 2.7 ರಷ್ಟು ಭೂಭಾಗ ಸಿಹಿ ನೀರಿನಿಂದ ಕೂಡಿದ್ದು ಮಾನವನ ಬಳಕೆಗೆ ಯೋಗ್ಯವಾಗಿದೆ. ಸಿಹಿ ನೀರಿನ ಶೇಕಡ 68.7 ರಷ್ಟು ನೀರು ಹಿಮನದಿ ಹಾಗೂ ಹಿಮಗಡ್ಡೆ, ಇನ್ನುಳಿದ 30ರಷ್ಟು ನೀರು ಅಂತರ್ಜಲ ರೂಪದಲ್ಲಿದೆ. ಇನ್ನುಳಿದ ಸಿಹಿ ನೀರು ಸರೋವರ ಹಾಗೂ ನದಿಗಳ ರೂಪದಲ್ಲಿ ಕಂಡು ಬರುತ್ತದೆ. ಅಂತರ್ಜಲ ನೀರಾವರಿ ವ್ಯವಸ್ಥೆಯನ್ನು ಹೊಂದಿದ ವಿಶ್ವದ ಮೊದಲ ದೇಶ ಭಾರತವಾಗಿದೆ. ಎರಡನೇ ಸ್ಥಾನದಲ್ಲಿ ಚೀನಾ ಇದ್ದರೆ ಮೂರನೇ ಸ್ಥಾನದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವಿದೆ. ಇನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ.
4. ಜೀವಗೋಳ (Biosphere)
ʻʻಭೂಮಿಯು ವಿವಿಧ ರೀತಿಯ ಜೀವರಾಶಿಯನ್ನು ಹೊಂದಿರುವುದರಿಂದ ಇದನ್ನು ಜೀವ ಗೋಳ ಅಥವಾ ಜೀವ ಗ್ರಹ ಎಂದು ಕರೆಯಲಾಗಿದೆ.ʼʼ ಜೀವಗೋಳವು ಸಮುದ್ರದಿಂದ ಸುಮಾರು 10 ಸಾವಿರ ಕಿ.ಮೀ ಆಳದವರೆಗೆ ಇದೆ. ಸುಮಾರು 6 ಸಾವಿರ ಮೀಟರ್ ಎತ್ತರದಿಂದ ಕೂಡಿದೆ. ಜೀವಗೋಳವು ವಾಯುಗೋಳ, ಶಿಲಾಗೋಳ ಹಾಗೂ ಜಲಗೋಳಗಳ ಜೊತೆಗೆ ಅಂತರ್ ಸಂಪರ್ಕವನ್ನು ಹೊಂದಿದೆ.
ಉಪಸಂಹಾರ:
ಪರಿಸರದ ರಚನೆ ವಾಯುಗೋಳ, ಶಿಲಾಗೋಳ, ಜಲಗೋಳ ಮತ್ತು ಜೀವಗೋಳ ಎಂಬ ನಾಲ್ಕು ಪ್ರಮುಖ ಗೋಳಗಳಿಂದ ರೂಪುಗೊಂಡಿದೆ. ಈ ಗೋಳಗಳು ಪರಸ್ಪರ ಅವಿಭಾಜ್ಯವಾಗಿ ಸಂಪರ್ಕ ಹೊಂದಿದ್ದು ಭೂಮಿಯ ಮೇಲಿನ ಜೀವನಕ್ಕೆ ಅಗತ್ಯವಾದ ಸಮತೋಲನವನ್ನು ಕಾಪಾಡುತ್ತವೆ. ವಾಯು, ನೀರು, ಮಣ್ಣು ಹಾಗೂ ಜೀವಜಗತ್ತು ಒಂದರ ಮೇಲೆ ಮತ್ತೊಂದು ಅವಲಂಬಿತವಾಗಿವೆ. ಪರಿಸರದ ಈ ಸಮನ್ವಯವನ್ನು ಅರಿತುಕೊಳ್ಳುವುದು ಮಾನವನ ಜವಾಬ್ದಾರಿಯುತ ಜೀವನಕ್ಕೆ ಅತೀ ಅವಶ್ಯಕವಾಗಿದೆ. ಪರಿಸರ ಸಂರಕ್ಷಣೆಯ ಮೂಲಕವೇ ಭವಿಷ್ಯದ ತಲೆಮಾರಿಗೆ ಸುರಕ್ಷಿತ ಭೂಮಿಯನ್ನು ಉಳಿಸಬಹುದು.