ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ತಾಲೂಕು ಪಂಚಾಯತನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ. ತಾಲೂಕು ಪಂಚಾಯಿತಿಯು ಇಡೀ ತಾಲೂಕಿನ ಮೇಲೆ ಅಧಿಕಾರವನ್ನು ಹೊಂದಿರುತ್ತದೆ. ಮೂರು ಹಂತದ ಪಂಚಾಯಿತಿಗಳಲ್ಲಿ ತಾಲೂಕು ಪಂಚಾಯಿತಿಯೂ ಒಂದಾಗಿದೆ. ಇದು ಗ್ರಾಮ ಪಂಚಾಯಿತಿಯ ಮೇಲಿನ ಹಾಗೂ ಜಿಲ್ಲಾ ಪಂಚಾಯಿತಿಯ ಕೆಳಗಿನ ಮಾಧ್ಯಮಿಕ ಸ್ಥರದಲ್ಲಿ ಕೆಲಸ ನಿರ್ವಹಿಸುವ ಸಂಸ್ಥೆಯಾಗಿದೆ.
ರಚನೆ: (Structure)
ಪ್ರತಿಯೊಂದು ತಾಲೂಕು ಪಂಚಾಯತ್ ಚುನಾಯಿತ ಸದಸ್ಯರನ್ನು ಹೊಂದಿದೆ. ಸಾರ್ವತ್ರಿಕ ಮತದಾನ ಪದ್ಧತಿಯ ಮೂಲಕ ಅಂದರೆ 18 ವರ್ಷ ತುಂಬಿದ ಪ್ರತಿಯೊಬ್ಬ ಸ್ತ್ರೀ ಪುರುಷರು ಮತದಾನ ಮಾಡುವ ಮೂಲಕ ತಾಲೂಕು ಪಂಚಾಯತ್ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಇವರೊಂದಿಗೆ ತಾಲೂಕನ್ನು ಪ್ರತಿನಿಧಿಸುವ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ತಾಲೂಕಿನ ಮತದಾರರ ಪಟ್ಟಿಯಲ್ಲಿರುವ ರಾಜ್ಯ ವಿಧಾನಸಭಾ ಮತ್ತು ವಿಧಾನಪರಿಷತ್ತಿನ ಸದಸ್ಯರು ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ತಾಲೂಕು ಪಂಚಾಯಿತಿಗೆ 10,000 ಜನಸಂಖ್ಯೆಗೆ ಒಬ್ಬರಂತೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಚುನಾವಣೆ: (Election)
ಈಗಾಗಲೇ ಮೇಲೆ ತಿಳಿಸಿರುವಂತೆ ಪ್ರತಿ 10೦೦೦ ಜನಸಂಖ್ಯೆಗೆ ಒಬ್ಬ ಸದಸ್ಯರಂತೆ ತಾಲೂಕು ಪಂಚಾಯಿತಿಗೆ ಆಯ್ಕೆಯಾಗುತ್ತಾರೆ. ಈ ಚುನಾವಣೆಯು ಏಕವ್ಯಕ್ತಿ ಏಕಮತ ಹಾಗೂ ರಹಸ್ಯ ಮತದಾನ ತತ್ವವನ್ನು ಆಧರಿಸುತ್ತದೆ.
ಮೀಸಲಾತಿ : (Reservation)
ತಾಲೂಕು ಪಂಚಾಯಿತಿಯ ಒಟ್ಟು ಸ್ಥಾನಗಳಲ್ಲಿ ಶೇಕಡ 15 ರಷ್ಟು ಪರಿಶಿಷ್ಟ ಜಾತಿಯವರಿಗೆ, ಶೇಕಡ ೩% ರಷ್ಟು ಪರಿಶಿಷ್ಟ ಪಂಗಡದವರಿಗೆ ಹಾಗೂ ಮೂರನೇ ಒಂದರಷ್ಟು ಸ್ಥಾನಗಳನ್ನು ಇತರೆ ಹಿಂದುಳಿದವರಿಗೆ ಮೀಸಲಾಗಿರಿಸಲಾಗುತ್ತದೆ. ಇಲ್ಲಿ ಮಹಿಳಾ ಮೀಸಲಾತಿಯನ್ನು ಸಹ ನೀಡಲಾಗುತ್ತದೆ.
ಅರ್ಹತೆಗಳು ಮತ್ತು ಅನರ್ಹತೆಗಳು: (Qualification and UnQualification)
ತಾಲೂಕು ಪಂಚಾಯಿತಿಯ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಹಾಗೂ 21 ವರ್ಷ ತುಂಬಿದವರು ತಾಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಕಾನೂನಿನ ಅನ್ವಯ ಅನರ್ಹರಾಗಿದ್ದರೆ, ಕ್ರಿಮಿನಲ್ ಮೊಕದ್ದಮೆಗಾಗಿ ಶಿಕ್ಷೆಗೆ ಒಳಪಟ್ಟಿದ್ದರೆ ಹಾಗೂ 21 ವರ್ಷ ವಯಸ್ಸಾಗದೆ ಇದ್ದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಅಧಿಕಾರಾವಧಿ: (Term of Office)
ತಾಲೂಕು ಪಂಚಾಯತ ಸದಸ್ಯರ ಅಧಿಕಾರಾವಧಿಯು ಐದು ವರ್ಷಗಳು. ಸದಸ್ಯರು ರಾಜೀನಾಮೆ ನೀಡಿದರೆ, ಪಕ್ಷಾಂತರ ಮಾಡಿದರೆ ಹಾಗೂ ದುರ್ನಡತೆಗಾಗಿ ಅವರನ್ನು ತೆಗೆದು ಹಾಕಿದರೆ ಅವರ ಸ್ಥಾನಖಾಲಿಯಾದಾಗ ಮರುಚುನಾವಣೆ ಮಾಡಬೇಕು. ಸದಸ್ಯರು ಒಂದು ವೇಳೆ ರಾಜೀನಾಮೆ ನೀಡುವ ಸಂದರ್ಭ ಒದಗಿ ಬಂದರೆ ʻʻಅವರು ರಾಜೀನಾಮೆ ಪತ್ರವನ್ನು ಅಧ್ಯಕ್ಷರಿಗೆ ನೀಡಿ ಪದತ್ಯಾಗ ಮಾಡಬೇಕು.ʼʼ
ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು: (President and Vice President)
ತಾಲೂಕು ಪಂಚಾಯತ್ ಅದಿನಿಯಮದ ಪ್ರಕಾರ ತಾಲೂಕು ಪಂಚಾಯಿತಿಯ ಸದಸ್ಯರು ಒಬ್ಬ ಅಧ್ಯಕ್ಷ ಹಾಗೂ ಉಪಾಧ್ಯಕ್ಷನನ್ನು ತಮ್ಮೊಳಗೆ ಆಯ್ಕೆ ಮಾಡಿಕೊಳ್ಳುತ್ತಾರೆ̤ ಅಧ್ಯಕ್ಷರು ತಾಲೂಕು ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ̤ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಆಯ್ಕೆಯಲ್ಲಿಯೂ ಪರಿಶಿಷ್ಟ ಜಾತಿ ಅಥವಾ ವರ್ಗ, ಹಿಂದುಳಿದ ಜಾತಿ ಅಥವಾ ವರ್ಗ ಹಾಗೂ ಮಹಿಳೆಯರಿಗೂ ಮೀಸಲಾತಿಯನ್ನು ಅನುಸರಿಸಲಾಗುತ್ತದೆ.
ಸಭೆ: (Meeting)
ತಾಲೂಕು ಪಂಚಾಯತಿಯು ಎರಡು ತಿಂಗಳಿಗೆ ಒಮ್ಮೆಯಾದರೂ ಸಭೆಯನ್ನು ನಡೆಸಬೇಕು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷರೇ ನಿರ್ವಹಿಸುತ್ತಾರೆ. ಅಧ್ಯಕ್ಷರ ಗೈರುಹಾಜರಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ತಾಲೂಕು ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ ೧/೩ ಸದಸ್ಯರು ಹಾಜರಿದ್ದು ತೀರ್ಮಾನಗಳನ್ನು ಕೈಗೊಳ್ಳುತ್ತಾರೆ.
ಕಾರ್ಯನಿರ್ವಾಹಕ ಅಧಿಕಾರಿ: (Excutive Officer)
ತಾಲೂಕು ಪಂಚಾಯಿತಿಗೆ ಸರ್ಕಾರದಿಂದ ಕಾರ್ಯನಿರ್ವಾಹಕ ಅಧಿಕಾರಿ ನೇಮಕವಾಗುತ್ತಾನೆ. ಈತ ಇಡೀ ತಾಲೂಕು ಪಂಚಾಯಿತಿಯ ಕಾರ್ಯಾಂಗದ ಮೇಲೆ ಹತೋಟಿಯನ್ನು ಹೊಂದಿರುತ್ತಾನೆ. ಇವರೊಂದಿಗೆ ಒಬ್ಬ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಜವಾನರು ಕಾರ್ಯನಿರ್ವಹಿಸುತ್ತಾರೆ.
ತಾಲೂಕು ಪಂಚಾಯಿತಿಯ ಕಾರ್ಯಗಳು: (Functions of Taluk Panchayat)
1) ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿಗಳಿಂದ ನಿರ್ವಹಿಸಿದ ಕಾರ್ಯಗಳನ್ನು ವಾರ್ಷಿಕ ಯೋಜನೆಯನ್ನು ಸಿದ್ಧಪಡಿಸುವುದು.
2) ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವಾರ್ಷಿಕ ಯೋಜನೆಗಳನ್ನು ಕ್ರೋಢೀಕರಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವುದು.
3) ತಾಲೂಕಿನ ಮುಂಗಡಪತ್ರವನ್ನು ತಯಾರಿಸಿ ಜಿಲ್ಲಾ ಪಂಚಾಯಿತಿಗೆ ಕಳುಹಿಸುವುದು.
4) ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿ ಆದೇಶಿಸಿದ ಕಾರ್ಯಗಳನ್ನು ನೆರವೇರಿಸುವುದು.
5) ಮೀನು ಸಾಗಾಣಿಕೆ ಹಾಗೂ ಮೀನು ಸಾಗಾಣಿಕೆ ಅಭಿವೃದ್ಧಿ ಮತ್ತು ಮೀನುಗಾರರ ಕಲ್ಯಾಣ ಕಾರ್ಯಗಳು.
6) ಗ್ರಾಮೀಣ ಗುಡಿ ಕೈಗಾರಿಕೆ ಪ್ರೋತ್ಸಾಹ ನೀಡುವುದು ಮತ್ತು ಅವುಗಳಿಗೆ ಮಾರುಕಟ್ಟೆಗಳನ್ನು ಒದಗಿಸುವುದು.
7) ಸಣ್ಣ ಕೈಗಾರಿಕೆಗಳ ಪ್ರೋತ್ಸಾಹ.
8) ಗ್ರಾಮೀಣ ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು
ಉಪಸಂಹಾರ
ಒಟ್ಟಾರೆ ತಾಲೂಕು ಪಂಚಾಯಿತಿಯು ಸ್ಥಳೀಯ ಸ್ವಾಯತ್ತ ಆಡಳಿತ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಅಭಿವೃದ್ಧಿ, ಕಲ್ಯಾಣ ಮತ್ತು ಆಡಳಿತ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಇದು ಗ್ರಾಮೀಣ ಸಮಾಜದ ಉನ್ನತಿಗೆ ಸಹಕಾರ ನೀಡುತ್ತದೆ. ಜನಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಉತ್ತಮ ಆಡಳಿತ ಸಾಧ್ಯವಾಗುತ್ತದೆ. ಹೀಗಾಗಿ, ತಾಲೂಕು ಪಂಚಾಯಿತಿ ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿಯೇ ಉಳಿದಿದೆ.