ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಕೈಗಾರೀಕರಣ ಮತ್ತು ಜನಸಂಖ್ಯಾ ವೃದ್ಧಿಯ ಪರಿಣಾಮವಾಗಿ ಘನ ತ್ಯಾಜ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಬಳಸಿ ಎಸೆಯುವ ಸಂಸ್ಕೃತಿ ಹಾಗೂ ಪ್ಲಾಸ್ಟಿಕ್‌ನ ಅತಿಯಾದ ಬಳಕೆ ಪರಿಸರ  ಸಮತೋಲನವನ್ನು ಹದಗೆಡಿಸುತ್ತಿದೆ. ಸರಿಯಾದ ತ್ಯಾಜ್ಯ ನಿರ್ವಹಣೆ ಇಲ್ಲದಿದ್ದರೆ ಮಣ್ಣು, ನೀರು ಮತ್ತು ವಾಯು ಮಾಲಿನ್ಯ ಉಂಟಾಗುತ್ತದೆ. ಇದರಿಂದ ಮಾನವನ ಆರೋಗ್ಯದ ಮೇಲೆ ಮಾತ್ರವಲ್ಲದೆ ಪ್ರಾಣಿ–ಪಕ್ಷಿ ಹಾಗೂ ಜಲಚರ ಜೀವಿಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಆದುದರಿಂದ ಘನ ತ್ಯಾಜ್ಯದ ಪರಿಣಾಮಗಳು ಮತ್ತು ಅದರ ನಿಯಂತ್ರಣ ಕ್ರಮಗಳ ಕುರಿತು ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ.

ಘನ ತ್ಯಾಜ್ಯಗಳ ಪರಿಣಾಮಗಳು : (Results of Solid Waste) 

1. ಪರಿಸರ ಮಾಲಿನ್ಯ:  ಘನ ತ್ಯಾಜ್ಯ ವಸ್ತುಗಳನ್ನು ರಸ್ತೆಗಳು, ಚರಂಡಿಗಳು, ಖಾಲಿ ಜಾಗಗಳು, ಸಾರ್ವಜನಿಕ ಪ್ರದೇಶಗಳು, ಆಸ್ಪತ್ರೆ ಆವರಣ, ಶಾಲಾ ಕಾಲೇಜುಗಳ ಸುತ್ತಮುತ್ತ, ಕಾರ್ಖಾನೆಗಳ ಸುತ್ತಮುತ್ತ, ಎಲ್ಲೆಂದರಲ್ಲಿ ಎಸೆಯುವುದರ ಫಲಶೃತಿಯಂದರೆ ಅದು ಪರಿಸರ ಮಾಲಿನ್ಯ.

2. ಸಾರ್ವಜನಿಕ ಆರೋಗ್ಯ ಸಮಸ್ಯೆ:  ಅಲ್ಲಲ್ಲಿ ರಾಶಿಯಾಗಿ ಹಾಕಲಾದ ಕೊಳೆತ ಆಹಾರ ಪದಾರ್ಥಗಳು, ತರಕಾರಿ ಸಿಪ್ಪೆಗಳು, ಜೈವಿಕ ತ್ಯಾಜ್ಯಗಳು, ಮುಂತಾದವುಗಳಲ್ಲಿ ಇಲಿಗಳು, ಹೆಗ್ಗಣಗಳು, ನೊಣಗಳು, ಹಂದಿಗಳು ಸೇರಿ ರೋಗವನ್ನು ಎಲ್ಲೆಡೆ ಹರಡುತ್ತವೆ. ಕೊಳೆಯುತ್ತಿರುವ ಪದಾರ್ಥಗಳ ಮೇಲೆ ಕುರಿತ ನೊಣಗಳು ಟೈಪಾಯಿಡ್‌, ವಾಂತಿಭೇದಿ, ಕರುಳುಬೇನೆ, ಜಠರದ ರೋಗಗಳು ಹಾಗೂ ಸಾಲ್ಮನೆಲ್ಲೋಸಿಸ್‌  ನಂತಹ ರೋಗಗಳನ್ನು ತರುತ್ತವೆ. ಅದರ ಮೇಲೆ ಕುಳಿತ ಸೊಳ್ಳೆಗಳು ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಹಂದಿ ಜ್ವರ, ಇಲಿಜ್ವರ, ಆನೆಕಾಲು ರೋಗ ಮುಂತಾದ ರೋಗಗಳಿಗೆ ಕಾರಣವಾಗಿವೆ.

3. ಕೈಗಾರಿಕೆ ಹಾಗೂ ನಗರಗಳ ತ್ಯಾಜ್ಯದ ಸಮಸ್ಯೆ:  ಕೈಗಾರಿಕೆಗಳು ಹಾಗೂ ನಗರಗಳಿಂದ ಹೊರಬೀಡುವ ಘನ ವಸ್ತುಗಳು ಹೆಚ್ಚು ಅಪಾಯಕಾರಿಯಾಗಿದ್ದು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಪ್ಲಾಸ್ಟಿಕ್, ರಾಸಾಯನಿಕಗಳು, ಕೀಟನಾಶಕಗಳು ಮತ್ತು ತವರ ಮುಂತಾದವುಗಳು ಕರುಳು ಬೆನೆ, ಕ್ಯಾನ್ಸರ್, ಉಬ್ಬಸ ರೋಗ, ಕೆಮ್ಮು ಮುಂತಾದ ರೋಗ ಕಾರಕಗಳಾಗಿವೆ.

4. ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಭೂಮಿಯಲ್ಲಿನ ಪ್ಲಾಸ್ಟಿಕ್ ಚೀಲ ನೀರನ್ನು ತುಂಬಿಕೊಳ್ಳುವುದರಿಂದ ಅದರ ಕೊಳಕು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಡೈಯಾಕ್ಲಿನ್‌ ಎಂಬ ರಾಸಾಯನಿಕ ತಾಯಿಯ ಹಾಲಿನ ಮೂಲಕ ಮಗುವಿಗೆ ರವಾನೆಯಾಗುತ್ತದೆ. ಪ್ಲಾಸ್ಟಿಕ್‌ ಮಾನವ ಮತ್ತು ವನ್ಯಜೀವಿಗಳ ಸಂತಾನೋತ್ಪತ್ತಿ ಪ್ರಿಯೆಗಳನ್ನು ಕುಂಠಿತಗೊಳಿಸುತ್ತದೆ. ಪ್ಲಾಸಿಕ್‌ ಸುಡುವುದರಿಂದ ʻʻಡಯಕ್ಲಿನ್‌ ಹಾಗೂ ಪೈರಾನ್‌ ಎಂಬ ವಿಷಕಾರಿ ರಸಾಯನಿಕ ವಾತಾವರಣದಲ್ಲಿ ಬಿಡುಗಡೆಯಾಗುತ್ತದೆ. ಇವು ಪರಿಸರ ನಾಶಕ್ಕೆ ಕಾರಣವಾಗುತ್ತವೆ. ಪ್ಲಾಸ್ಟಿಕ್‌ನ್ನು ಎಸೆಯುವುದರಿಂದ ಚರಂಡಿಗಳು ಹಾಗೂ ಮಣ್ಣಿನ ರಂಧ್ರಗಳು ಮುಚ್ಚಿ ನೀರನ್ನು ಭೂಮಿಯೊಳಗೆ ಇಂಗದಂತೆ ತಡೆಯುತ್ತವೆ. ಭೂಮಿಯ ಮೇಲಿನ ಎಷ್ಟೋ ಪ್ಲಾಸ್ಟಿಕ್‌ಗಳನ್ನು ತಿಂದ ದನಕರುಗಳು ಹಾಗೂ ಜಲಚರ ಪ್ರಾಣಿಗಳು ಸಾವನ್ನಪ್ಪಿದ ಅದೆಷ್ಟೋ ಘಟನೆಗಳಿವೆ. ಅದೆಷ್ಟೋ ಪ್ರಾಣಿಗಳಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಪ್ಲಾಸ್ಟಿಕ್‌ ಸುರುಳಿಗಳನ್ನು ಹೊರ ತಗೆದ್ದಿದೆ. ಇಂತಹ ನೂರಾರು ಘಟನೆಗಳು ದೇಶದಲ್ಲಿ ಸಂಭವಿಸುತ್ತಿವೆ. ಆದರೂ ಸರ್ಕಾರವಾಗಲಿ ಸಂಘ-ಸಂಸ್ಥೆಗಳಾಗಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿವೆ.

5. ಆಸ್ಪತ್ರೆ ತ್ಯಾಜ್ಯ ಸಮಸ್ಯೆ:  ನಮ್ಮ ದೇಶದಲ್ಲಿ ಆಸ್ಪತ್ರೆಗಳಿಂದಲೇ ದಿನಕ್ಕೆ ೬೦೦ ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ ನೋಂದಣಿಯಾಗದ ನರ್ಸಿಂಗ್ ಹೋಂಗಳು, ನಕಲಿ ವೈದ್ಯರು ಉತ್ಪಾದಿಸುವ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಾಗಿದೆ. ಈ ತ್ಯಾಜ್ಯಗಳಿಂದ ಹಲವಾರು ರೋಗಗಳು ಬರುತ್ತವೆ. ವಾಂತಿ, ಭೇದಿ, ಕರುಳು ಬೇನೆ, ಅತಿಸಾರ, ಅಮಶಂಕೆ, ಟೈಫಾಯಿಡ್, ಜ್ವರ, ಮುಂತಾದ ರೋಗಗಳು ಇಂದು ಸಾಮಾನ್ಯವೆಂಬಂತೆ ಕಾಣಿಸುತ್ತದೆ.

ಘನ ತ್ಯಾಜ್ಯದ ನಿಯಂತ್ರಣ ಕ್ರಮಗಳು : 

1. ತೆರೆದ ಹಳ್ಳಗಳು:  ಇವುಗಳು ಒಂದು ರೀತಿಯ ತಗ್ಗು ಪ್ರದೇಶಗಳಾಗಿವೆ. ಇಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ಹಾಕಲಾಗುತ್ತದೆ. ಈ ಹಳ್ಳಗಳನ್ನು ಮುಚ್ಚದೆ ಇರುವ ಕಾರಣ ಇಲಿಗಳು, ನೊಣಗಳು ಹಾಗೂ ಬೇರೆ ಬೇರೆ ಕೀಟಗಳು ಬಂದು ಸೇರಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಆಗ ಸುತ್ತಲಿನ ಪ್ರದೇಶಗಳಿಗೆ ರೋಗ ಹರಡುತ್ತದೆ. ತೆರೆದ ಹಳ್ಳಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಅದರ ಅಕ್ಕ ಪಕ್ಕದ ಭೂಮಿಗಳ ನೀರು ಸಹ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

2. ಘನ ತ್ಯಾಜ್ಯವನ್ನು ಭೂಮಿಯಲ್ಲಿ ಹೂಳೂವುದು: ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಭೂಮಿಯಲ್ಲಿ ಆಳವಾಗಿ ಗುಂಡಿಯನ್ನು ಜೋಡಿ ಘನ ತ್ಯಾಜ್ಯವನ್ನು ಅದರೊಳಗೆ ಹಾಕಿ ಮುಚ್ಚಲಾಗುತ್ತದೆ. ಹೀಗೆ ಮಾಡುವುದರಿಂದ ನೊಣಗಳು ಹಾಗೂ ಸೊಳ್ಳೆಗಳು ಸಂತಾನೋತ್ಪತ್ತಿಯನ್ನು ಮಾಡಲು ತಡೆಯಬಹುದು ಹಾಗೂ ರೋಗ ಹರಡದಂತೆ ಕ್ರಮ ಕೈಗೊಳ್ಳಬಹುದು.

3. ನೈರ್ಮಲ್ಯ ನೆಲ ಇವುಗಳನ್ನು ಆರೋಗ್ಯಕರವಾಗಿ ರಚಿಸಿ ಅದರೊಳಗೆ ಘನ ತ್ಯಾಜ್ಯಗಳನ್ನು ಸುರಿಯಲಾಗುತ್ತದೆ. ನೆಲದ ಅಡಿಪಾಯವನ್ನು ಗಟ್ಟಿಗೊಳಿಸಲು ಪ್ಲಾಸ್ಟಿಕ್ ಹಾಗೂ ಜೇಡಿ ಮಣ್ಣಿನಿಂದ ಸುತ್ತಲೂ ಕವಚವನ್ನು ಮಾಡಲಾಗುತ್ತದೆ.

4. ದಹನ ಕ್ರಿಯೆ:   ಆಮ್ಲಜನಕದ ಸಹಾಯದಿಂದ ತ್ಯಾಜ್ಯ ವಸ್ತುಗಳನ್ನು ಸುಡುವ ಪ್ರಕ್ರಿಯೆಯನ್ನು ದಹನ ಕ್ರಿಯೆ ಎಂದು ಕರೆಯುತ್ತಾರೆ. ಅನಿಲ ಹಾಗೂ ದ್ರವಗಳನ್ನು ಇಂಧನವಾಗಿ ಬಳಸಲಾಗುತ್ತದೆ.

5. ಕಾಂಪೋಸ್ಟಿಂಗ್ :  ಇದು ಒಂದು ಜೈವಿಕ ಪ್ರಕ್ರಿಯೆ. ಸೂಕ್ಷ್ಮಾಣು ಜೀವಿಗಳಾದ ಶಿಲೀಂಧ್ರಗಳು ಹಾಗೂ ಬ್ಯಾಕ್ಟೀರಿಯಗಳು ವಿಘಟನೆ ಹೊಂದುವಂತಹ ಸಾವಯವ ತ್ಯಾಜ್ಯಗಳನ್ನು ಆಮ್ಲಜನಕದ ಅನುಪಸ್ಥಿತಿಯಲ್ಲಿ ಗೊಬ್ಬರವಾಗಿ ಮಾರ್ಪಾಡಿಸಲಾಗುವುದು.

6. ಎರೆಹುಳು ಗೊಬ್ಬರ:   ಎರೆಹುಳುಗಳನ್ನು ಬಳಸಿಕೊಂಡು ತ್ಯಾಜ್ಯವನ್ನು ಬೇರ್ಪಡಿಸಲಾಗುತ್ತದೆ. ಆಗ ಎರೆಹುಳು ಮಲಗೊಬ್ಬರವನ್ನು ಹೆಚ್ಚು ಪೋಷಕಾಂಶಯುಕ್ತವಾಗಿ ಮಾಡುತ್ತದೆ.

7. ಪೌರಘನ ತ್ಯಾಜ್ಯ ನಿಯಮಾವಳಿಗಳು 2016ರ ಪ್ರಕಾರ ಹಸಿಕಸವನ್ನು ಮತ್ತು ಒಣಕಸವನ್ನು ಬೇರೆ ಬೇರೆ ಮಾಡಿ ಸಾಗಾಣಿಕೆ ಮಾಡುವ ಮೂಲಕ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನ ಮಾಡಲಾಗಿದೆ. 

8. ಪೌರಘನ ತ್ಯಾಜ್ಯ ಅಧಿನಿಯಮ 2016ರ ನಿಯಮ 4(a) ರಂತೆ ಎಲ್ಲಾ ಸಂಸ್ಥೆಗಳು ಮನೆ ಮನೆಗೆ ಹೋಗಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸಾಗಾಣಿಕೆ ಮಾಡುವುದು ಕಡ್ಡಾಯವಾಗಿದೆ. ಅದೇ ರೀತಿ ಪೌರಸಭೆ ಈ ಕೆಲಸವನ್ನು ನಿರ್ವಹಿಸುತ್ತಿದೆ.

9. ಘನತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ಏನು? ಅದರ ಕಾರ್ಯಕ್ಷಮತೆಯ ಸಾಧನೆಯಿಂದ ಆಗುವ ಅನುಕೂಲತೆಗಳು ಯಾವುವು ಎಂಬುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಅದರ ಅಸಮರ್ಪಕ ನಿರ್ವಹಣೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಮಾಹಿತಿ ನೀಡುವುದು.

10. ಪರಿಸರ ಸ್ನೇಹಿ ತಂತ್ರಜ್ಞಾನಗಳಾದ ಗೊಬ್ಬರ ತಯಾರಿಕೆ, ಜೈವಿಕ ಮಿಥೇನ್ ಅನಿಲ ತಯಾರಿಕೆ RDF ಉರುವಲು ಹಾಗೂ ಇತರೆ ಶಕ್ತಿ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು.

11. ತ್ಯಾಜ್ಯ ಸಂಸ್ಕರಣೆಯನ್ನು ಶೇ 100 ರಷ್ಟು ಸಾಧಿಸಲು ವಲಯವಾರು ಬೇರ್ಪಡಿಸುವಿಕೆ ಹಾಗೂ ಸಂಸ್ಕರಣಾ ವ್ಯವಸ್ಥೆಯನ್ನು ಸ್ಥಾಪಿಸುವುದು.

12. ಪೌರಘನ ತ್ಯಾಜ್ಯ ನಿಯಮಗಳು 2016ರ ಅದಿನಿಯಮದ ಮಾದರಿ ಉಪನಿಯಮ 2019ನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು.

ತ್ಯಾಜ್ಯಗಳ ಉತ್ಪಾದನೆಯನ್ನು ತಡೆಯುವ ಸಲುವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಈ ಕೆಳಗಿನ ಮೂರುವಿಧಾನಗಳನ್ನು ಅನುಸರಿಸಬೇಕು.

ಉಪಸಂಹಾರ

ಘನ ತ್ಯಾಜ್ಯದ ಅಸಮರ್ಪಕ ನಿರ್ವಹಣೆ ಪರಿಸರ ಮಾಲಿನ್ಯ ಹಾಗೂ ಅನೇಕ ರೋಗಗಳಿಗೆ ಪ್ರಮುಖ ಕಾರಣವಾಗುತ್ತಿದೆ. ತ್ಯಾಜ್ಯವನ್ನು ಮೂಲದಲ್ಲೇ ಕಡಿಮೆ ಮಾಡುವುದು, ಬೇರ್ಪಡಿಸುವುದು ಮತ್ತು ವೈಜ್ಞಾನಿಕವಾಗಿ ಸಂಸ್ಕರಿಸುವುದು ಅತ್ಯಗತ್ಯವಾಗಿದೆ. ಸರ್ಕಾರದ ನಿಯಮಗಳ ಜೊತೆಗೆ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯೇ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಕೀಲಕವಾಗಿದೆ. ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ ಮತ್ತು ಜಾಗೃತಿ ಮೂಡಿಸುವ ಮೂಲಕ ಸ್ವಚ್ಛ ಹಾಗೂ ಆರೋಗ್ಯಕರ ಸಮಾಜವನ್ನು ನಿರ್ಮಿಸಬಹುದು. ಇದು ನಮ್ಮ ಜವಾಬ್ದಾರಿ ಮಾತ್ರವಲ್ಲ, ಭವಿಷ್ಯದ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯೂ ಹೌದು.