ಮಹಮ್ಮದ್-ಬಿನ್ – ತುಘಲಕನ  ಆಡಳಿತಾತ್ಮಕ ಪ್ರಯೋಗಗಳು

ಮಹಮ್ಮದ್-ಬಿನ್ – ತುಘಲಕನ ಆಡಳಿತಾತ್ಮಕ ಪ್ರಯೋಗಗಳು

ಮಹಮ್ಮದ್-ಬಿನ್-ತುಘಲಕನು(1325-1351) ಘಿಯಾಸುದ್ದೀನ್ ತುಘಲಕನ ಮಗ ಹಾಗೂ ತುಘಲಕ್ ಸಂತತಿಯ ಶ್ರೇಷ್ಠ ದೊರೆ. ಬಾಲ್ಯದಲ್ಲಿ ಮಹಮ್ಮದ್ ಬಿನ್ ತುಗಲಕ್ ಪ್ರತಿಭಾವಂತನಾಗಿದ್ದು ಪರ್ಶಿಯನ್, ಅರೇಬಿಕ್ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದನು. ಇತಿಹಾಸ, ಗಣಿತ, ಅರ್ಥಶಾಸ್ತ್ರ, ತರ್ಕಶಾಸ್ತ್ರ, ಖಗೋಳಶಾಸ್ತ್ರ ಹಾಗೂ ತತ್ವಶಾಸ್ತ್ರಗಳಲ್ಲಿ ಪಾರಂಗತನಾಗಿದ್ದನು. ಮಹಮ್ಮದ್-ಬಿನ್-ತುಘಲಕ್ ತನ್ನ ತಂದೆಗೆ ಸಿಂಹಾಸನವನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದನು. ಇವನು ತನ್ನ ತಂದೆಯ ಅಧಿಕಾರಾವಧಿಯಲ್ಲಿ ವಾರಂಗಲ್ಲಿನ ಮೇಲೆ ಸತತವಾಗಿ ಎರಡು ಬಾರಿ ದಂಡಯಾತ್ರೆ ಕೈಗೊಂಡು ಯಶಸ್ವಿಯಾದನು. ಇದರಿಂದ ಸುಪ್ರೀತನಾದ ಘಿಯಾಸುದ್ದೀನ್ ಮಗನಿಗೆ ‘ಜುನಾಖಾನ್’ ಎಂಬ ಬಿರುದನ್ನು ಕೊಟ್ಟು ಗೌರವಿಸಿದನು.

ಸಿಂಹಾಸನಾರೋಹಣ:

ಘಿಯಾಸುದ್ದೀನನ ಮರಣದ ನಂತರ ಅವನ ಹಿರಿಯ ಮಗನಾದ ಜುನಾಖಾನನು ಮಹಮ್ಮದ್-ಬಿನ್- ತುಘಲಕ್ ಎಂಬ ಹೆಸರಿನಿಂದ ಸಾ.ಶ.1325ರಲ್ಲಿ ಸಿಂಹಾಸನಕ್ಕೆ ಬಂದನು. ಇವನು ಸುಮಾರು 25 ವರ್ಷಗಳ ಕಾಲ ದೆಹಲಿಯ ಸುಲ್ತಾನನಾಗಿದ್ದನು.

ಮಹಮ್ಮದ್-ಬಿನ್-ತುಘಲಕ್‌ ದಂಡಯಾತ್ರೆಗಳು:
1) ವಾರಂಗಲ್ ಆಕ್ರಮಣ (1323):

ಮಹಮ್ಮದ್-ಬಿನ್-ತುಘಲಕ್ ಸಾ.ಶ. 1323 ರಲ್ಲಿ ವಾರಂಗಲ್ ಮೇಲೆ ದಾಳಿ ಮಾಡಿ ಅಲ್ಲಿನ ದೊರೆ ಪ್ರತಾಪರುದ್ರನನ್ನು ಸೋಲಿಸಿದನು. ಸೋತ ಪ್ರತಾಪರುದ್ರನು ತುಗಲಕ್‌ನಿಗೆ ಕಪ್ಪಕಾಣಿಕೆಗಳನ್ನು ನೀಡಿ ಆತನ ಸಾರ್ವಭೌಮತ್ವವನ್ನು ಒಪ್ಪಿಕೆ ಅಂಡನು.

2) ನಾಗರಕೋಟೆ ಆಕ್ರಮಣ (1337):

ಪಂಜಾಬಿನ ಕಾಂಗ್ರಾ ಜಿಲ್ಲೆಯಲ್ಲಿರುವ ನಾಗರಕೋಟೆಯನ್ನು ಸಾ. ಶ. 1337 ರಲ್ಲಿ ಮುತ್ತಿದ ಮಹಮ್ಮದ್-ಬಿನ್-ತುಘಲಕ್ ಅಲ್ಲಿನ ಹಿಂದೂ ರಾಜನನ್ನು ಸೋಲಿಸಿ ನಾಗರಕೋಟೆಯನ್ನು ವಶಪಡಿಸಿಕೊಂಡನು.

3) ಮಧ್ಯ ಏಷ್ಯಾದ ಆಕ್ರಮಣ:

ಮಧ್ಯ ಏಷ್ಯಾದ ಖೋರಾಸನ್, ಇರಾಕ್ ಹಾಗೂ ಟ್ರಾನ್ಸ್ ಆಕ್ಸಿಯಾನಾ ಪ್ರದೇಶಗಳನ್ನು ಗೆಲ್ಲುವ ಆಸೆಯಿಂದ ಮಹಮ್ಮದ್-ಬಿನ್-ತುಘಲಕ್ 3,70,000ದಷ್ಟು ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿ ಮುಂಗಡವಾಗಿ ಒಂದು ವರ್ಷದ ವೇತನವನ್ನು ನೀಡಿದ. ಯುದ್ಧೋಪಕರಣಗಳ ಖರೀದಿಗಾಗಿ ಲಕ್ಷಾಂತರ ರೂಪಾಯಿ ಖರ್ಚುಮಾಡಿದ. ಯುದ್ಧದ ಮೊದಲೇ ಅವನ ಬೊಕ್ಕಸವಲ್ಲಾ ಬರಿದಾಯಿತು. ಆದರೆ ಈ ಪ್ರದೇಶಗಳ ದಾಳಿಯ ಸಂದರ್ಭದಲ್ಲಿ ಆಗುವ ತೊಂದರೆಯನ್ನು ನೆನೆದು ಈ ದಂಡಯಾತ್ರೆಯನ್ನು ಕೈಬಿಟ್ಟನು.

4) ಕಾರಾಜಲ್ ಗಂಡಯಾತ್ರೆ (1337-38):

ಭಾರತ ಹಾಗೂ ಚೀನಾದ ಗಡಿ ಪ್ರದೇಶವಾಗಿದ್ದ ಕಾರಾಜಲ್ ಯೋಜನೆಯೊಂದನ್ನು ರೂಪಿಸಿದ ಮಹಮ್ಮದ್-ಬಿನ್-ತುಘಲಕ್‌ನು ಖುಸ್ರು ಮಲಿಕನ ನೇತೃತ್ವದಲ್ಲಿ ಕಾರಾಜಲ್ ವಿರುದ್ಧ ಒಂದು ಸೈನ್ಯವನ್ನು ಕಳುಹಿಸಿದನು. ಆದರೆ ಅಲ್ಲಿನ ಚಳಿ, ಗಾಳಿ, ಹಿಮ ಹಾಗೂ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾವಿರಾರು ಸೈನಿಕರು ಸಾವಿಗೀಡಾದರು. ಈ ದಂಡಯಾತ್ರೆಯಲ್ಲಿ ಭಾಗವಹಿಸಿದ್ದ ಒಟ್ಟು 10,000 ಸೈನಿಕರಲ್ಲಿ ಕೇವಲ 10 ಮಂದಿ ಸೈನಿಕರು ಮಾತ್ರ ಬದುಕುಳಿದು ಬಂದರೆಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಮಹಮ್ಮದ್-ಬಿನ್-ತುಘಲಕ್‌ ಸುಧಾರಣೆಗಳು: ಆಡಳಿತಾತ್ಮಕ ಪ್ರಯೋಗಗಳು
1) ದೋ ಅಬ್-ಪ್ರದೇಶಗಳಲ್ಲಿ ತೆರಿಗೆ ಹೆಚ್ಚಳ:

ಗಂಗಾ-ಯಮುನಾ ನಡುವಿನ ಬಯಲು ಪ್ರದೇಶವೇ ದೋ-ಅಬ್. ಇದು ಸಂಪದ್ಭರಿತ ಪ್ರದೇಶವಾಗಿದ್ದರಿಂದ ತುಘಲಕ್ ವಿವೇಚನೆ ಇಲ್ಲದೆ ಆ ಪ್ರದೇಶದಲ್ಲಿ ತೆರಿಗೆ ದರವನ್ನು ಹೆಚ್ಚಿಸಿದ. ಇದಕ್ಕೆ ಕಾರಣವೆಂದರೆ

ಎ) ದೋ-ಅಬ್ ಪ್ರದೇಶದ ಜನರು ಶ್ರೀಮಂತರೂ ಹಾಗೂ ಕ್ರಾಂತಿಕಾರಿಗಳಾಗಿದ್ದುದು,

ಬಿ) ಸುಲ್ತಾನನು ತನ್ನ ಸೈನ್ಯವನ್ನು ಹೆಚ್ಚಿಸುವುದು ಮತ್ತು ಆಡಳಿತ ವರ್ಗವನ್ನು ದಕ್ಷತೆಯಿಂದ ವ್ಯವಸ್ಥೆಗೊಳಿಸುವುದು.

ಈ ಕಾರಣಗಳನ್ನು ಮುಂದಿಟ್ಟುಕೊಂಡು ಸುಲ್ತಾನ ತೆರಿಗೆಯಲ್ಲಿ 10-20 ಪಟ್ಟು ಹೆಚ್ಚಳವನ್ನು ಮಾಡಿದನು. ಇದರ ಜೊತೆಗೆ ಮನೆಗಂದಾಯ (ಗರಿ) ಮತ್ತು ಗೋಮಾಳ (ಚರಾಯಿ) ತೆರಿಗೆಗಳಲ್ಲೂ ಹೆಚ್ಚಳ ಕಂಡುಬಂದಿತು. ದೋ-ಅಬ್ ಜನತೆ ಹೆಚ್ಚಿನ ಕಂದಾಯ ನೀಡಲಾಗದೆ ಬಡತನಕ್ಕೆ ತಳ್ಳಲ್ಪಟ್ಟರು. ಅದೇ ವರ್ಷ ದೋ-ಅಬ್ ಪ್ರದೇಶ ಬರಗಾಲಕ್ಕೆ ತುತ್ತಾಯಿತು. ಹೀಗಾಗಿ ರೈತರು ಸರ್ಕಾರಕ್ಕೆ ತೆರಿಗೆಯನ್ನು ನೀಡಲು ಮುಂದೆ ಬರಲಿಲ್ಲ. ಆದರೆ ಕಂದಾಯ ಅಧಿಕಾರಿಗಳು ಮಾತ್ರ ತೆರಿಗೆ ವಸೂಲಿ ಕಾರ್ಯವನ್ನು ನಿಲ್ಲಿಸಲಿಲ್ಲ. ಎಷ್ಟೋ ಜನ ಕಂದಾಯ ನೀಡಲು ವಿಫಲರಾಗಿ ಕಾಡಿಗೆ ಓಡಿಹೋದರು. ಇದರಿಂದ ಕುಪಿತಗೊಂಡ ಸುಲ್ತಾನ ಕಾಡಿನಲ್ಲಿ ಅಡಗಿಕೊಂಡಿದ್ದ ರೈತರನ್ನು ಕಾಡು ಮೃಗಗಳಂತೆ ಬೇಟೆಯಾಡಿದ. ತುಘಲಕ್‌ನ ಕಂದಾಯ ನೀತಿಯನ್ನು ಭರಣಿ ಈ ರೀತಿ ವಿವರಿಸಿದ್ದಾನೆ. “ರೈತರ ಬೆನ್ನು ಮುರಿಯಲಾಯಿತು. ಶ್ರೀಮಂತರು ದಂಗೆಕೋರರಾದರು.ಭೂಮಿ ಪಾಳು ಬಿದ್ದಿತು. ಸಾಗುವಳಿ ನಿಂತು ಹೋಯಿತು. ಸಾವಿರಾರು ಜನರು ಹಸಿವಿನಿಂದ ಸತ್ತರು”.ಮಹಮ್ಮದ್ ಬಿನ್-ತುಗಲಕ’ನಿಗೆ ತಡವಾಗಿ ಜ್ಞಾನೋದಯವಾಯಿತು. ತನ್ನ ಮನಸ್ಥಿತಿಯನ್ನು ತಿದ್ದಿಕೊಂಡು ಊರು ಬಿಟ್ಟು ಕಾಡಿಗೆ ಓಡಿ ಹೋಗಿದ್ದ ಜನರನ್ನು ಮತ್ತೆ ನಗರಕ್ಕೆ ಬರುವಂತೆ ವಿನಂತಿಸಿಕೊಂಡನು. ಕ್ಷಾಮ ಪರಿಹಾರಕ್ಕಾಗಿ ಕೆರೆ, ಬಾವಿ ಹಾಗೂ ಕಾಲುವೆಗಳನ್ನು ನಿರ್ಮಿಸಿದನು. ಕೃಷಿಕರಿಗೆ ಸಾಲ ನೀಡಿದನು. ಅವನು ನೀಡಿದ ಪರಿಹಾರಗಳು ಜನರಿಗೆ ತಲುಪಲಿಲ್ಲ. ಪರಿಣಾಮವಾಗಿ ಈ ಯೋಜನೆ ಸಂಪೂರ್ಣವಾಗಿ ವಿಫಲಗೊಂಡಿತು.

2) ರಾಜಧಾನಿ ಬದಲಾವಣೆ(1327):

ಸುಲ್ತಾನನು ಕೈಗೊಂಡ ಆಡಳಿತಾತ್ಮಕ ಪ್ರಯೋಗಗಳಲ್ಲಿ ರಾಜಧಾನಿ ಬದಲಾವಣೆಯು ಒಂದು. ಇವನು ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವರ್ಗಾಯಿಸಿ ಅದಕ್ಕೆ ದೌಲತಾಬಾದ್ ಎಂದು ಹೆಸರಿಸಿದನು. ಈ ರೀತಿಯ ವರ್ಗಾವಣೆಗೆ ಮಹಮ್ಮದ್ ಬಿನ್ ತುಘಲಕ್ಕು ಕೊಡುವ ಕಾರಣಗಳೆಂದರೆ,

1) ದೌಲತಾಬಾದ್ ಉತ್ತರದ ದೆಹಲಿಯಿಂದ ಸಾಮ್ರಾಜ್ಯದ ಕೇಂದ್ರ ಭಾಗದಲ್ಲಿದ್ದು ವಿವಿಧ ಭಾಗಗಳಿಗೆ ಸಂಪರ್ಕವಿಟ್ಟುಕೊಳ್ಳಲು ಸುಲಭವಾಗಿತ್ತು.

2) ಉತ್ತರ ಭಾರತಕ್ಕಿಂತ ಇದು ಹೆಚ್ಚು ಫಲವತ್ತಾಗಿತ್ತು.

3) ಉತ್ತರ ಭಾರತಕ್ಕೆ ಮೀಸಲಾಗಿದ್ದ ಇಸ್ಲಾಂ ಧರ್ಮವನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸುವುದು.

4) ಪದೇ ಪದೆ ಸಂಭವಿಸುತ್ತಿದ್ದ ಮಂಗೋಲರ ದಾಳಿಗಳಿಂದ ರಾಜ್ಯವನ್ನು ರಕ್ಷಿಸುವುದು.

ರಾಜಧಾನಿಯನ್ನು ಬದಲಾಯಿಸಲು ನಿರ್ಧರಿಸಿದ ಮಹಮ್ಮದ್-ಬಿನ್-ತುಘಲಕ್ ದೆಹಲಿಯ ಸಮಸ್ತ ಜನರನ್ನು ದೌಲತಾಬಾದಿಗೆ ಹೋಗಬೇಕೆಂದು ಆಜ್ಞಾಪಿಸಿದನು. ಈ ಎರಡು ನಗರಗಳ ನಡುವಿನ ದೂರ ಸುಮಾರು 1120 ಕಿ.ಮೀಟರ್‌ಗಳಾಗಿದ್ದು ಜನರ ಪ್ರಯಾಣಕ್ಕಾಗಿ ಬೊಕ್ಕಸದಿಂದ ಸಾಕಷ್ಟು ಹಣವನ್ನು ವಿನಿಯೋಗಿಸಿದನು. ದೆಹಲಿ ಮತ್ತು ದೌಲತಾಬಾದ್‌ಗಳ ನಡುವೆ ರಸ್ತೆಗಳ ನಿರ್ಮಾಣ, ಇಕ್ಕೆಲಗಳಲ್ಲಿ ಛತ್ರಗಳ ನಿರ್ಮಾಣ, ಇತ್ಯಾದಿಗೆ ನೀರಿನಂತೆ ಹಣ ಖರ್ಚಾಯಿತು. ರಾಜನ ಆಜ್ಞೆಯಂತೆ ದೆಹಲಿಯ ಜನ ತಮ್ಮ ಗಂಟುಮೂಟೆಗಳೊಂದಿಗೆ ದೌಲತಾಬಾದಿಗೆ ಪ್ರಯಾಣಿಸಿದರು. ಆದರೆ ಒಬ್ಬ ಕುರುಡ ಹಾಗೂ ಕುಂಟ ಮಾತ್ರ ತಮ್ಮ ಪೂರ್ವಜರು ನೆಲಸಿದ ನಾಡನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. ಆಗ ಕುಂಟನನ್ನು ಕೊಲ್ಲಲಾಯಿತು. ಕುರುಡನನ್ನು ಆನೆಯ ಕಾಲಿಗೆ ಕಟ್ಟಿ ಎಳೆದೊಯ್ಯಲಾಯಿತು. ಎಳೆದುಕೊಂಡು ಹೋಗುವ ರಭಸಕ್ಕೆ ಅವನ ಒಂದು ಕಾಲು ಮಾತ್ರ ದೇವಗಿರಿಯನ್ನು ತಲುಪಿತು ಎಂದು ಇಬ್ಬಬತೂತ ವಿವರಿಸಿದ್ದಾನೆ. ಪ್ರಯಾಣದ ಸಂದರ್ಭದಲ್ಲಿ ಸಾವಿರಾರು ಜನರು ಅಸುನೀಗಿದರು. ದೆಹಲಿಯಲ್ಲಿ ಈಗ ಒಂದು ನರಪಿಳ್ಳೆಯೂ ಇರಲಿಲ್ಲ. ಅಲ್ಲಿ ಸ್ಮಶಾನ ಮೌನ ಆವರಿಸಿತು. ಈ ರೀತಿ ಜನರ ಮಾನಸಿಕ ತೊಳಲಾಟವನ್ನು, ದೈಹಿಕ ಹಿಂಸೆಯನ್ನು ಕಂಡ ಮಹಮ್ಮದ್ ಬಿನ್-ತುಘಲಕ್ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಮೂರ್ಖತನದ ನಿರ್ಣಯವನ್ನು ಕೈಗೊಂಡನು. ಎಲ್ಲಾ ಜನರು ದೌಲತಾಬಾದಿನಿಂದ ದೆಹಲಿಗೆ ತೆರಳಬೇಕೆಂದು ಆಜ್ಞೆ ಹೊರಡಿಸಿದನು. ಇದನ್ನು ಕೇಳಿ ಜನರ ಜಂಗಾಬಲವೇ ಉಡುಗಿಹೋಯಿತು. ಮತ್ತೆ ಅವರು ದೆಹಲಿಯ ಕಡೆಗೆ ಪ್ರಯಾಣಿಸಿದರು. ಈ ಅವಧಿಯಲ್ಲಿ ಮತ್ತಷ್ಟು ಜನರು ಸತ್ತರು. ದೆಹಲಿಗೆ ಹೋದ ಮೇಲೆ ಜನರಿಗಾದ ನಷ್ಟವನ್ನು ತುಂಬಿಕೊಡಲು ಸುಲ್ತಾನ ಸಾಕಷ್ಟು ಪ್ರಯತ್ನಿಸಿದನು. ದೇಶದ ವಿವಿಧ ಭಾಗಗಳಿಂದ ವಿದ್ವಾಂಸರು ಹಾಗೂ ವ್ಯಾಪಾರಿಗಳನ್ನು ಆಮಂತ್ರಿಸಿದನು. ಇದಕ್ಕೆ ಯಾರು ಸೊಪ್ಪು ಹಾಕಲಿಲ್ಲ. ಹೀಗಾಗಿ ದೆಹಲಿ ತನ್ನ ಮೊದಲಿನ ವೈಭವವನ್ನು ಪುನ: ಪಡೆಯಲು ಹಲವಾರು ವರ್ಷಗಳನ್ನೇ ತೆಗೆದುಕೊಂಡಿತೆಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

3) ತಾಮ್ರದ ನಾಣ್ಯ ಚಲಾವಣೆ:

ಮಹಮ್ಮದ್-ಬಿನ್-ತುಘಲಕ್ ಇಲ್ಲಿವರೆಗೆ ಕೈಗೊಂಡ ಕಂದಾಯ ಏರಿಕೆ, ರಾಜಧಾನಿ ಬದಲಾವಣೆ ಹಾಗೂ ಕೃಷಿಕಾರ್ಯದಲ್ಲಿ ಆದ ಬದಲಾವಣೆಗಳಿಂದ ರಾಜ್ಯದ ಬೊಕ್ಕಸ ಬರಿದಾಯಿತು.ಆಗ ಅವನಿಗೆ ಏನುಮಾಡಲು ತೋಚದಿದ್ದಾಗ ಚಿನ್ನದ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು. ಒಂದು ಆಜ್ಞೆಯನ್ನು ಹೊರಡಿಸಿ ಇನ್ನು ಮುಂದೆ ತಾಮ್ರದ ನಾಣ್ಯಗಳನ್ನು ಚಿನ್ನದ ನಾಣ್ಯಗಳ ಬದಲಾಗಿ ಎಲ್ಲಾ ವ್ಯವಹಾರಗಳಲ್ಲಿ ಉಪಯೋಗಿಸಬಹುದೆಂದು, ಈ ನಾಣ್ಯಗಳು ಚಿನ್ನದ ನಾಣ್ಯಗಳಿಗೆ ಸಮವಾಗಿವೆ ಎಂದು ಘೋಷಿಸಿದನು. ತಾಮ್ರದ ನಾಣ್ಯಗಳನ್ನು ಟಂಕಿಸುವ ಅಧಿಕಾರವನ್ನು ಖಾಸಗಿ ವ್ಯಕ್ತಿಗಳಿಗೂ ನೀಡಿದನು. ಇವರಿಗೆ ನಾಣ್ಯಗಳನ್ನು ಟಂಕಿಸುವಾಗ ಯಾವುದೇ ನಿರ್ಬಂಧಗಳನ್ನು ಹೇರಿರಲಿಲ್ಲವಾದ್ದರಿಂದ ಇವರು ಖೋಟಾ ನಾಣ್ಯಗಳನ್ನು ಟಂಕಿಸಲು ಆರಂಭಿಸಿದರು. ಪರಿಣಾಮವಾಗಿ ಪ್ರತಿಯೊಂದು ಮನೆಯೂ ಖೋಟಾ ನಾಣ್ಯಗಳ ಟಂಕಶಾಲೆಯಾಗಿ ಪರಿವರ್ತಿತವಾಯಿತು. ಜನಸಾಮನ್ಯರು ತಮ್ಮಲ್ಲಿರುವ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಭದ್ರಪಡಿಸಿಕೊಂಡು ಖೋಟಾ ನಾಣ್ಯಗಳನ್ನೇ ತೆರಿಗೆಯಾಗಿ ಸಲ್ಲಿಸಲು ಆರಂಭಿಸಿದರು. ಇವರ ಜೊತೆ ಸೇರಿ ಸರ್ಕಾರಿ ಅಧಿಕಾರಿಗಳೂ ಸುಲ್ತಾನನಿಗೆ ಮೋಸಮಾಡಿದರು. ಹೀಗಾಗಿ ಸರ್ಕಾರದ ಖಜಾನೆಯಲ್ಲಿ ತಾಮ್ರದ ನಾಣ್ಯಗಳ ರಾಶಿಯೇ ಕಂಡುಬಂದಿತು. ವ್ಯಾಪಾರ ಕುಸಿಯಿತು, ಹಣದ ಮೌಲ್ಯ ‘ಒಡೆದ ಮಡಿಕೆಯ ಚೂರಾಯಿತು!’ ರಾಜ್ಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳ ಅಭಾವ ಕಂಡು ಬಂದಿತು. ಇದರಿಂದ ಗೊಂದಲಕ್ಕೆ ಸಿಲುಕಿದಂತಾದ ಸುಲ್ತಾನನು ತಾಮ್ರದ ನಾಣ್ಯಗಳ ಚಲಾವಣೆಯನ್ನು ರದ್ದು ಪಡಿಸಿದನು. ಮತ್ತೊಂದು ಆಜ್ಞೆಯನ್ನು ಹೊರಡಿಸಿ ತಾಮ್ರದ ನಾಣ್ಯಗಳನ್ನು ಹಿಂತಿರುಗಿಸಿ ಅದರ ಮುಖಬೆಲೆಯ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಪಡೆಯುವಂತೆ ಜನರಿಗೆ ತಿಳಿಸಿದನು.ಆಗ ಜನ ತಮ್ಮ ಬಳಿಯಿದ್ದ ಮೂಟೆಗಟ್ಟಲೆ ತಾಮ್ರದ ನಾಣ್ಯಗಳನ್ನು ಹಿಂತಿರುಗಿಸಿ ಅಪ್ಪಟ್ಟ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಪಡೆದುಕೊಂಡರು. ಹೀಗೆ ಸುಲ್ತಾನ ತನ್ನ ಪ್ರಜೆಗಳಿಂದಲೇ ಮೋಸಹೋದನು. ಸಂಗ್ರಹವಾದ ರಾಶಿರಾಶಿ ತಾಮ್ರದ ನಾಣ್ಯಗಳು ಸುಲ್ತಾನನ ಮೂರ್ಖತನದ ವೈಪಲ್ಯವನ್ನು ಸಾರುತ್ತಾ ಬಿದ್ದಿದ್ದವು. ಸುಲ್ತಾನನ ಈ ಮೇಲಿನ ಆಡಳಿತಾತ್ಮಕ ಪ್ರಯೋಗಗಳು ಸಂಪೂರ್ಣ ವಿಫಲಗೊಂಡವು. ಈ ಕಾರಣದಿಂದಾಗಿ ಮಹಮ್ಮದ್ ಬಿನ್ ತುಘಲಕನನ್ನು ದ್ವಂದ್ವಗಳ ಮಿಶ್ರಣ(ವೈರುದ್ಯಗಳ) ಎಂದು ಕರೆಯಲಾಗುತ್ತದೆ.