ಶಾಸನಗಳ ಮಹತ್ವ

ಶಾಸನಗಳ ಮಹತ್ವ

ಶಾಸನಗಳು ಚರಿತ್ರೆಯ ರಚನೆಯಲ್ಲಿ ಸಿಂಹಪಾಲು ಪಾತ್ರವನ್ನು ಹೊಂದಿವೆ. ಶಾಸನಗಳು ಇತಿಹಾಸ ರಚನೆಗೆ ಬಹು ಉಪಯುಕ್ತ ಆಕರಗಳು, ಶಾಸನಗಳ ರಚನಾಕಾರ್ಯ ಅಶೋಕ ಮಹಾಶಯನ ಕಾಲದಿಂದ ಆರಂಭಗೊಂಡಿತು. ಹೀಗಾಗಿ ಅಶೋಕನನ್ನು ಶಾಸನಗಳ ಆದ್ಯ ಪ್ರವರ್ತಕನೆಂದು ಹೆಸರಿಸಲಾಗಿದೆ. ಅಶೋಕನ ಶಾಸನಗಳನ್ನು ಶಿಲಾಶಾಸನಗಳು, ಗೌಣಶಿಲಾಶಾಸನಗಳು, ಸ್ತಂಭಶಾಸನಗಳು, ಬಂಡೆಕಲ್ಲು ಶಾಸನಗಳೆಂದು ವಿಂಗಡಿಸಲಾಗಿದೆ. ಅಶೋಕನ ಶಾಸನಗಳು  ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳಲ್ಲಿವೆ. ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಅನೇಕ ಶಾಸನಗಳು ಕಂಡು ಬರುತ್ತವೆ.

 ಈ ಶಾಸನಗಳಿಂದ ರಾಜರ ದಿಗ್ವಿಜಯಗಳು, ಸಾಮ್ರಾಜ್ಯ ವಿಸ್ತರಣೆ, ಆಡಳಿತ ಕ್ರಮ, ರಾಜರು ನೀಡಿದ ದಾನದತ್ತಿಗಳು, ಮೊದಲಾದ ಹಲವು ಹತ್ತು ವಿಷಯಗಳು ತಿಳಿದುಬರುತ್ತವೆ. ಶಾಸನಗಳಲ್ಲಿ ಕೆಲವು ಕೂಟ ಶಾಸನಗಳಿರುತ್ತವೆ. ಅಧ್ಯಯನ ಮಾಡುವಾಗ ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಪ್ರತ್ಯೇಕಿಸಿ ಮಹತ್ವವನ್ನು ಅರಿಯಬಹುದು.

ಇತಿಹಾಸ ಅಧ್ಯಯನಕ್ಕೆ ಶಾಸನಗಳ ಪ್ರಯೋಜನಗಳು :

  1. ನಮ್ಮ ಪ್ರಾಚೀನರಲ್ಲಿ ಐತಿಹಾಸಿಕ ಪ್ರಜ್ಞೆ ಇತ್ತು ಎಂಬುದಕ್ಕೆ ಶಾಸನಗಳು ಸಾಕ್ಷಿ ಒದಗಿಸುತ್ತದೆ.
  2. ಶಾಸನಗಳಿಂದ ರಾಜರ ಸೈನಿಕ ಸಾಧನೆಯನ್ನು ತಿಳಿಯಬಹುದು.
  3. ಶಾಸನಗಳು ದೊರೆತ ಸ್ಥಳದ ಆಧಾರದ ಮೇಲೆ ಸಾಮ್ರಾಜ್ಯದ ವ್ಯಾಪ್ತಿಯನ್ನು ಗುರುತಿಸಬಹುದು.
  4. ಶಾಸನಗಳಿಂದ ಖಚಿತ ಕಾಲ ಗಣನೆ ಮಾಡಲು ಸಾಧ್ಯವಾಗುತ್ತದೆ.
  5. ಶಾಸನಗಳಿಂದ ಅರಸರ ಬಿರುದು ಬಾವಲಿಗಳು ಮತ್ತು ಅವರ ವಂಶಾವಳಿ ತಿಳಿಯುತ್ತದೆ.
  6. ಶಾಸನಗಳ ಸಹಾಯದಿಂದ ಭಾಷೆ ಮತ್ತು ಲಿಪಿ ಬೆಳೆದು ಬಂದ ಬಗೆಯನ್ನು ಗುರುತಿಸಬಹುದು.
  7. ಶಾಸನಗಳು ಹಿಂದಿನವರ ಸಂಪ್ರದಾಯ, ಆಚರಣೆ, ನಂಬಿಕೆ ಮತ್ತು ಆರಾಧನೆಯ ಮೇಲೆ ಬೆಳಕು ಚೆಲ್ಲುತ್ತದೆ.
  8. ಮೆಹರೂಲಿ ಕಬ್ಬಿಣ ಸ್ತಂಭ ಶಾಸನದಿಂದ ಲೋಹಶಾಸ್ತ್ರದ ಪ್ರಗತಿಯನ್ನು ತಿಳಿಯಬಹುದು.
  9. ಶಾಸನಗಳು ದೇವಾಲಯ, ಬಸದಿ, ಚೈತ್ಯಾಲಯಗಳ ನಿರ್ಮಾತೃಗಳು ಯಾರೆಂಬುದನ್ನು ತಿಳಿಸುತ್ತದೆ.
  10. ಭಾರತದ ಹೆಚ್ಚಿನ ಶಾಸನಗಳು ದಾನ ದತ್ತಿಗೆ ಸಂಬಂಧ ಪಟ್ಟಿರುವುದರಿಂದ ಅವುಗಳ ವಿವರಗಳು ಶಾಸನ ಮುಖೇನ ತಿಳಿಯುತ್ತದೆ. ದತ್ತಿ ನೀಡಿ ಜಮೀನಿನ ಮೇರೆಯೂ ಲಭ್ಯವಾಗುತ್ತದೆ.

ಕೆಲವು ಪ್ರಮುಖ ಶಾಸನಗಳು

ಶಾಸನದ ಹೆಸರು

ಶಾಸನದ ಕತೃ

ಒದಗಿಸುವ ಐತಿಹಾಸಿಕ ಮಾಹಿತಿ

ರುಮ್ಮಿಂಡೈ ಶಾಸನ

ಅಶೋಕ

ಅಶೋಕನ ಬೌದ್ಧಧರ್ಮಕ್ಕೆ ಮತಾಂತರನಾದ ಸಂಗತಿ ಇದೆ.

ಹಾಥಿಗುಂಪ ಶಾಸನ

ಖಾರವೇಲ

ಕಳಿಂಗ ಅರಸ ಖಾರವೇಲನ ಸಾಧನೆಗಳು

ಗಿರ್ನಾರ್ ಶಾಸನ

ರುದ್ರದಾಮ

ಮೌರ್ಯ ಮತ್ತು ಗುಪ್ತಾರ ನೀರಾವರಿ ಕಾರ್ಯಗಳನ್ನು ಕುರಿತು ಮಾಹಿತಿ ನೀಡುತ್ತದೆ.

ಅಲಹಾಬಾದ್ ಸ್ಥಂಭ ಶಾಸನ

ಹರಿಷೇಣ

ಸಮುದ್ರಗುಪ್ತನ ದಿಗ್ವಿಜಯಗಳು, ಇದು ಪ್ರಶಸ್ತಿ ಶಾಸನ

ಮಹ್ರೌಲಿ ಕಬ್ಬಿಣ ಸ್ಥಂಬ ಶಾಸನ

2ನೇ ಚಂದ್ರಗುಪ್ತ

2ನೇ ಚಂದ್ರಗುಪ್ತನ ಸಾಧನೆಗಳು

ಮಂದಸಾರ ಶಾಸನ

2ನೇ ಕುಮಾರಗುಪ್ತ

2ನೇ ಕುಮಾರಗುಪ್ತನ ಸಾಧನೆಗಳು

ಬಿತೈರಿ ಶಾಸನ

ಸ್ಕಂದ ಗುಪ್ತ

ಸ್ಕಂದಗುಪ್ತನ ಸಾಧನೆಗಳು

ಜುನಾಗಡ ಶಾಸನ

ಸ್ಕಂದ ಗುಪ್ತ

ಸ್ಕಂದ ಗುಪ್ತನ ಸಾಧನೆಗಳು

ಮಧುಬಾನ್ ಶಾಸನ

ಹರ್ಷವರ್ಧನ

ಹರ್ಷನ ಸಾಧನೆಗಳು

ಉತ್ತರಮೇರೂರು ಶಾಸನ

1ನೇ ಪಾರಂತಕಚೋಳ

ಚೋಳರ ಗ್ರಾಮಾಡಳಿತ ವಿವರಣೆ

ನಾಸಿಕ್ ಶಾಸನ

ಗೌತಮಿ ಬಾಳಶ್ರೀ

ಗೌತಮಿಪುತ್ರನ ಸಾಧನೆಗಳು ಗುಪ್ತರ ಆಡಳಿತ

ಉದಯಗಿರಿ ಮಲೈ ಶಾಸನ

1ನೇಮಹೇಂದ್ರವರ್ಮ

1ನೇ ಮಹೇಂದ್ರವರ್ಮನ ಸಾಧನೆಗಳು

ತಾಳಗುಂದ ಶಾಸನ

ಶಾಂತಿವರ್ಮ

ಕದಂಬರ ಮೂಲ ಪ್ರಸ್ತಾಪ

ಚಂದ್ರವಳ್ಳಿ ಶಾಸನ

ಮಯೂರವರ್ಮ

ಮಯೂರವರ್ಮನ ಸಾಧನೆಗಳು

ಐಹೊಳೆ ಶಾಸನ

ರವಿಕೀರ್ತಿ

ಇಮ್ಮಡಿ ಪುಲಿಕೇಶಿಯ ದಿಗ್ವಿಜಯಗಳು

ಗ್ವಾಲಿಯಾರ್ ಶಾಸನ

ಭೋಜರಾಜ

ಪ್ರತಿಹಾರ ರಾಜ ಭೋಜರಾಜನ ಸಾಧನೆಗಳು

ಆಧಾರಗಳು

ಆಧಾರಗಳು

ಚರಿತ್ರೆಯ ರಚನೆಯಲ್ಲಿ ಆಧಾರಗಳು ಅದ್ವಿತೀಯವಾದ ಪಾತ್ರವನ್ನು ವಹಿಸುತ್ತವೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ʻಆಧಾರ’ ಈ ಮೂರು ಅಕ್ಷರಗಳ ಅರ್ಥ ಬಹುವ್ಯಾಪಕ. ಇತಿಹಾಸಕ್ಕೆ ಆಧಾರಗಳೇ ಉಸಿರು. ಆಧಾರಗಳಿಲ್ಲದೆ ರಚನೆಗೊಂಡ ಚರಿತ್ರೆ ನಾವಿಕನಿಲ್ಲದ ದೋಣಿಯಂತೆ, ಚುಕ್ಕಾಣಿಯಿಲ್ಲದ ಹಡಗಿನಂತೆ.

ಪ್ರಾಚೀನ ಭಾರತದ ಇತಿಹಾಸ ರಚನೆಗೆ ಸಂಬಂಧಿಸಿದಂತೆ ಸಾಕಷ್ಟು ವಿಪುಲ ಆಧಾರಗಳು ಲಭ್ಯವಾಗುವುದಿಲ್ಲ. ದೊರೆತಿರುವ ಅಲ್ಪಸ್ವಲ್ಪ ಆಧಾರಗಳನ್ನು ಆಧರಿಸಿ ಇತಿಹಾಸವನ್ನು ರಚಿಸಲಾಗಿದೆ. ಅಲ್ಬೆರೂನಿ ‘ತಕ್ವಿಕ್ ಅಲ್ ಹಿಂದ್’ ಎಂಬ ಕೃತಿಯಲ್ಲಿ ʻಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಅರಿವಿಲ್ಲ. ಪ್ರಚಲಿತ ವಿಷಯಗಳ ಕುರಿತು ಪ್ರಶ್ನಿಸಿದಾಗ ಅಡುಗೂಲಜ್ಜಿಯ ಕಥೆ ಹೇಳಲು ಆರಂಭಿಸುತ್ತಾರೆ’ ಎಂದು ಅಭಿಪ್ರಾಯ ಪಟ್ಟಿದ್ದಾನೆ. ಈ ಅಭಿಪ್ರಾಯದಿಂದ ಭಾರತೀಯರಲ್ಲಿ ಚಾರಿತ್ರಿಕ ಪ್ರಜ್ಞೆಯ ಅರಿವು ಇರಲಿಲ್ಲ ಎಂಬುದು ತಿಳಿದುಬರುತ್ತದೆ. ಆದರೆ ಅಲ್ಬೆರೂನಿಯ ಅಭಿಪ್ರಾಯದಲ್ಲಿಯೇ ಭಾರತೀಯರು ಪುರಾಣಗಳನ್ನು, ಮಹಾಕಾವ್ಯಗಳನ್ನೆಲ್ಲಾ ರಚಿಸಿದ್ದಾರೆ. ಆದರೆ ಚಾರಿತ್ರಿಕ ಕೃತಿಗಳನ್ನು ರಚಿಸಿರುವುದಿಲ್ಲ. ಹೀಗಾಗಿ ವಾಸ್ತವವಾದಿಗಳಾಗಿರದೆ ಅದೃಷ್ಟವಾದಿಗಳಾಗಿರುವುದು ಮತ್ತು ದಂತಕಥೆಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದು ಕಂಡುಬರುತ್ತದೆ.

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ಸಹಕಾರಿಯಾದ ಮೂಲಾಧಾರಗಳನ್ನು ಹೀಗೆ ವರ್ಗೀಕರಿಸಿ ಅವುಗಳ ಗುಣಾತ್ಮಕ ಮೌಲ್ಯವನ್ನು ಪರಿಗಣಿಸಬಹುದಾಗಿದೆ. ಅವುಗಳೆಂದರೆ

1. ಪ್ರಾಕ್ತನಶಾಸ್ತ್ರಾದಾರಗಳು (ಪುರಾತತ್ವ ಆಧಾರಗಳು)

2. ಲಿಖಿತ ಆಧಾರಗಳು. (ಸಾಹಿತ್ಯಾಧಾರಗಳು)

1. ಪ್ರಾಕ್ತನ ಶಾಸ್ತ್ರಾಧಾರಗಳು

ಇತಿಹಾಸ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳು ಗಮನಾರ್ಹವಾದ ಪಾತ್ರವನ್ನು ಹೊಂದಿವೆ ಇವುಗಳನ್ನು ಅವು ದೊರೆತಿರುವ ಅವಶೇಷಗಳಿಗೆ ಅನುಗುಣವಾಗಿ 4 ಭಾಗಗಳಾಗಿ ವಿಂಗಡಿಸಬಹುದಾಗಿದೆ.

1.ಭೂಸಂಶೋಧನೆ,

2. ಶಾಸನಗಳು,

3. ನಾಣ್ಯಗಳು,

4. ಐತಿಹಾಸಿಕ ಸ್ಮಾರಕಗಳು.

1. ಭೂಸಂಶೋಧನೆ :

ಭೂಸಂಶೋಧನೆ ಎಂದರೆ ಭೂ ಉತ್ಖನನ ಎಂದರ್ಥ (ವೈಜ್ಞಾನಿಕವಾಗಿ ಭೂಮಿಯನ್ನು ಅಗೆಯುವುದು), ಭಾರತದಲ್ಲಿ ಬ್ರಿಟೀಷ್ ವೈಸ್ರಾಯ್ ಆಗಿದ್ದ ಲಾರ್ಡ್ ಕರ್ಜನ್ ಪ್ರಾಕ್ತನ ಇಲಾಖೆಯನ್ನು ಪ್ರಾರಂಭಿಸಿದರು. ಸರ್ಜಾನ್ ಮಾರ್ಷಲ್ ಈ ಇಲಾಖೆಯ ನಿರ್ದೇಶಕರಾಗಿದ್ದಾಗ ಭೂ ಉತ್ಖನದ ಕಾರ್ಯ ಆರಂಭಗೊಂಡಿತು.

1921-22ರಲ್ಲಿ ಹರಪ್ಪ ಮತ್ತು ಮೆಹೆಂಜೋದಾರೋಗಳಲ್ಲಿ ನಡೆದ ಭೂ ಉತ್ಖನನಗಳು ಭಾರತವು ಪ್ರಾಚೀನ ಕಾಲದಲ್ಲಿಯೇ ʻನಾಗರೀಕತೆಗಳ ತೊಟ್ಟಿಲು ರಾಷ್ಟ್ರ’ವಾಗಿತ್ತೆಂದು ತಿಳಿಯುತ್ತದೆ. ತಕ್ಷಶಿಲೆಯ ಉತ್ಖನನವು ಕುಶಾನರ ಇತಿಹಾಸದ ಮೇಲೂ, ಪಾಟಲಿಪುತ್ರದ ಉತ್ಖನನವು ಮೌರ್ಯರ ಇತಿಹಾಸದ ಮೇಲೂ ಬೆಳಕು ಚೆಲ್ಲಲು ಸಹಕಾರಿಯಾಗಿದೆ. ದಕ್ಷಿಣ ಭಾರತದ ಪಾಂಡಿಚೇರಿ, ಅರಿಕಮೇಡು, ಆದಿತ್ಯನಲ್ಲೂರು, ತಿನ್ನವೆಲ್ಲಿ, ಮಸ್ಕಿ, ಬ್ರಹ್ಮಗಿರಿ, ಚಂದ್ರವಳ್ಳಿ, ಸನ್ನತಿಯ ಉತ್ಖನನಗಳು, ಶಿಲಾಯುಗ ಮತ್ತು ತಾಮ್ರಯುಗದ ಚರಿತ್ರೆಯನ್ನು ಬೆಳಕಿಗೆ ತಂದಿವೆ. ಒಟ್ಟಿನಲ್ಲಿ ಭೂ ಉತ್ಖನನದಿಂದ ಭೂಮಿಯ ಗರ್ಭದಲ್ಲಿನ ಐತಿಹಾಸಿಕ ಅವಶೇಷಗಳನ್ನು ಹೊರತೆಗೆದಾಗ ಇತಿಹಾಸವನ್ನು ರಚಿಸಲು ಸಹಕಾರಿಯಾಗುತ್ತದೆ.

ನಾಣ್ಯಗಳು :

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ನಾಣ್ಯಗಳು ಕೂಡ ಮಹತ್ತರ ಪಾತ್ರವಹಿಸುತ್ತವೆ. ನಾಣ್ಯಗಳ ವ್ಯವಸ್ಥಿತ ಅಧ್ಯಯನಕ್ಕೆ ʻನ್ಯುಮಿಸ್‌ಮ್ಯಾಟಿಕ್ಸ್’ ಎಂದು ಕರೆಯಲಾಗಿದೆ. ನಮಗೆ ಚಿನ್ನ, ಬೆಳ್ಳಿ, ತಾಮ್ರ, ಸೀಸ ಮೊದಲಾದ ಲೋಹದ ನಾಣ್ಯಗಳು ದೊರೆತಿವೆ. ಈ ನಾಣ್ಯಗಳು ರಾಜರ ಕಾಲ, ಹೆಸರು, ಬಿರುದು, ಸ್ಥಳ, ವಿದೇಶಗಳೊಡನೆ ಹೊಂದಿದ್ದ ಸಂಬಂಧ, ಲಲಿತಕಲೆಗಳ ಬಗ್ಗೆ ಆಸಕ್ತಿ ಮೊದಲಾದ ಹಲವು ವಿಚಾರಗಳ ಬಗ್ಗೆ ಸ್ಪಷ್ಟಿಕರಿಸುತ್ತವೆ. ಉದಾ: ವಿಷ್ಣುವರ್ದನನ ನಾಣ್ಯಗಳು ಕಂಚಿಗೊಂಡ, ನೊಳಂಬವಾಡಿಗೊಂಡ, ಮಲಪರೋಳಂಡ ಎಂಬ ವಿವರ ಒಳಗೊಂಡಿದೆ. ಸಮುದ್ರಗುಪ್ತನ ನಾಣ್ಯಗಳು ಅವನು ವೀಣಾಪಾಣಿಯಾಗಿ ಕುಳಿತಿರುವ ಚಿತ್ರವನ್ನು ಒಳಗೊಂಡಿವೆ. ನಾಣ್ಯಗಳು ವಿನಿಮಯದ ಮಾಧ್ಯಮವಾಗಿ ವ್ಯಾಪಾರ ವಾಣಿಜ್ಯದಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದವು.

ಇತಿಹಾಸ ಅಧ್ಯಯನಕ್ಕೆ ನಾಣ್ಯಗಳ ಉಪಯೋಗಗಳು :

  1. ನಾಣ್ಯಗಳಿಂದ ಅದನ್ನು ಟಂಕಿಸಿದ ಅರಸನ ಹೆಸರು, ಅವನ ಕಾಲ, ಅವನ ಸಂತತಿ, ರಾಜಲಾಂಛನ ಮುಂತಾದವು ತಿಳಿಯುತ್ತದೆ.
  2. ನಾಣ್ಯಗಳಿಂದ ಅರಸನ ವೈಯಕ್ತಿಕ ಧರ್ಮದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಉದಾ : ಕುಶಾನರ ನಾಣ್ಯದ ಮೇಲೆ ಇರುವ ಶಿವನ ಚಿತ್ರ, ಚಾಲುಕ್ಯರ
  3. ನಾಣ್ಯಗಳಲ್ಲಿನ ವರಾಹ ಚಿತ್ರ, ಸಮುದ್ರಗುಪ್ತನ ನಾಣ್ಯಗಳ ಮೇಲಿನ ಲಕ್ಷ್ಮಿಯ ಚಿತ್ರ ಸಂಬಂಧಿತ ಅರಸರ ಆರಾಧನೆಯನ್ನು ಸಾಭೀತುಪಡಿಸುತ್ತದೆ. ನಾಣ್ಯಗಳ ಮುಖೇನ ಅರಸರ ಬಿರುದಾವಳಿಗಳು ಬೆಳಕಿಗೆ ಬರುತ್ತದೆ. ಅದು ಎಷ್ಟೋ ಸಲ ಅವನ ಸಾಧನೆಯನ್ನು ದಾಖಲುಗೊಳಿಸುತ್ತದೆ. ಉದಾ ಹೊಯ್ಸಳ ವಿಷ್ಣುವರ್ಧನನ ತಲಕಾಡುಗೊಂಡ, ಮಲೆಷ್ಟೊರೊಳಂಡ ಬಿರುದುಗಳು. ಸಮುದ್ರ ಗುಪ್ತನ ಶಾಸನಗಳಲ್ಲಿ ಅವನ ಶತೃಗಳನ್ನು ನಿಗ್ರಹಿಸಿ ಸ್ವರ್ಗವನ್ನು ಗೆದ್ದಿದ್ದನೆಂದು ಉಲ್ಲೇಖಿಸುತ್ತದೆ.
  4. ನಾಣ್ಯಗಳಿಂದ ಅರಸರ ಕಲಾಭಿರುಚಿಯನ್ನು ಮನಗಾಣಬಹುದು. ಉದಾ : ಸಮುದ್ರಗುಪ್ತನ ನಾಣ್ಯಗಳಲ್ಲಿ ಅವನು ವೀಣೆ ನುಡಿಸುತ್ತಿರುವ ಚಿತ್ರವಿದ್ದು, ಅದು ಸಂಗೀತದಲ್ಲಿ ಇದ್ದ ಅವನ ಆಸಕ್ತಿಯನ್ನು ಹೊರಗೆಡಹುತ್ತದೆ.
  5. ಪ್ರಾಚೀನ ಕಾಲದ ನಾಣ್ಯಗಳು ದೊರೆತ ಸ್ಥಳವನ್ನು ಅವಲಂಬಿಸಿ ಅರಸರ ಸಾಮ್ರಾಜ್ಯದ ಮೇರೆಯನ್ನು ಗುರುತಿಸಬಹುದು.
  6. ವಿದೇಶಿ ನಾಣ್ಯಗಳು ಸ್ವದೇಶದಲ್ಲಿ ಸಿಕ್ಕ ಪ್ರದೇಶದ ಆಧಾರದ ಮೇಲೆ ಆ ಪ್ರದೇಶ ಪ್ರಾಚೀನ ಕಾಲದಲ್ಲಿ ವಿದೇಶದೊಂದಿಗೆ ವ್ಯಾಪಾರಿ ಸಂಪರ್ಕ ಹೊಂದಿತ್ತೆಂದು ತಿಳಿದು ಬರುತ್ತದೆ. ಉದಾಹರಣೆಗೆ ಬೆಂಗಳೂರು ಮತ್ತು ತಲಕಾಡುಗಳಲ್ಲಿ ದೊರೆತ ರೋಮನ್ ನಾಣ್ಯಗಳಿಂದ ಇದು ದೃಢಪಟ್ಟಿದೆ.
  7. ಹೊರಡಿಸಿದ ನಾಣ್ಯಗಳ ಲೋಹದ ಮೌಲ್ಯವು ಆಯಾ ಕಾಲದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುವ ಕೈಗನ್ನಡಿಯಾಗಿದೆ. ಉದಾಹರಣೆಗೆ ಗುಪ್ತರ ಕಾಲದ ಚಿನ್ನದ ನಾಣ್ಯಗಳು ಆರ್ಥಿಕ ಸುಭಿಕ್ಷತೆಯ ದ್ಯೋತಕವಾದರೆ, ಮಹಮ್ಮದ್ ಬಿನ್ ತುಗಲಕ್ ಕಾಲದ ತಾಮ್ರದ ನಾಣ್ಯಗಳು ಆರ್ಥಿಕ ಪರಿಸ್ಥಿತಿಯ ಹಿನ್ನಡೆಗೆ ದಾಖಲೆಯಾಗಿದೆ.
  8. ನಾಣ್ಯಗಳ ಸಹಾಯದಿಂದ ಕಾಲ ಗಣನೆಯು ಸುಲಭವಾಗುತ್ತದೆ.
  9. ನಾಣ್ಯಗಳು ಆಯಾ ಕಾಲದ ಕಲಾ ಬೆಳವಣಿಗೆ ಮತ್ತು ಲೋಹ ವಿಜ್ಞಾನದ ಪ್ರಗತಿಯ ಮೇಲೆ ಬೆಳಕು ಚೆಲ್ಲುತ್ತದೆ.

ಐತಿಹಾಸಿಕ ಸ್ಮಾರಕಗಳು : ಚರಿತ್ರೆಯ ರಚನೆಯಲ್ಲಿ ಐತಿಹಾಸಿಕ ಸ್ಮಾರಕಗಳ ಪಾತ್ರ ವಿಶಿಷ್ಟವಾದುದು. ಭಾರತದಲ್ಲಿ ಬೆಳವಣಿಗೆ ಗೊಂಡ ಕಲೆಯ ಬಗ್ಗೆ ಅಧ್ಯಯನ ಮಾಡಲು ಸ್ಮಾರಕಗಳೇ ಆಧಾರ. ಕಟ್ಟಡಗಳು, ಚೈತಾಲಯಗಳು, ದೇವಾಲಯಗಳು, ಮಂದಿರಗಳು, ಬಸದಿಗಳು, ಮೂರ್ತಿಶಿಲ್ಪಗಳು ಕಲಾ ಪರಂಪರೆಯ ಬೆಳವಣಿಗೆಗೆ ಕೈಗನ್ನಡಿಯಿದ್ದಂತೆ. ಸ್ಮಾರಕಗಳ ಸೂಕ್ಷ್ಮ ಅಧ್ಯಯನ ಮಾಡಿ ನೋಡಿದಾಗ ರಾಜರ ಆಸ್ಥಾನ, ವೈಭವ, ಜನರ ಉಡಿಗೆ-ತೊಡಿಗೆ, ಸಮಕಾಲೀನ ಪ್ರಾಣಿಸಂಕುಲ, ಸಸ್ಯವರ್ಗ, ಸೇನಾ ಸಂಘಟನೆ, ಶಸ್ತ್ರಾಸ್ತ್ರಗಳು, ನೃತ್ಯ ಮೊದಲಾದ ವಿಚಾರಗಳು ಸ್ಪಷ್ಟವಾಗಿ ತಿಳಿದುಬರುತ್ತವೆ. ಅಂತಹ ಪ್ರಮುಖ ಸ್ಮಾರಕಗಳೆಂದರೆ ಮೌರ್ಯರ ಕಾಲದ ಸ್ತೂಪಗಳು, ಸ್ತಂಭಗಳು, ವಿಹಾರಗಳು, ಜೈನ ಬಸದಿಗಳು ಮತ್ತು ತೀರ್ಥಂಕರರ ಮೂರ್ತಿಗಳು, ಎಲ್ಲೋರ ಅಜಂತ, ಖಜುರಾಹೋ, ಆಗ್ರಾ, ಸಾಂಚಿ, ಮಹಾಬಲಿಪುರಂ, ನಾಸಿಕ್, ಕಾರ್ಲೆ, ಬೇಲೂರು, ಹಳೇಬೀಡು, ದೇವಾಲಯಗಳು- ಹೀಗೆ ಕಂಡುಬರುವ ಸ್ಮಾರಕಗಳು ಚರಿತ್ರೆಯ ರಚನೆಗೆ ಸಹಕಾರಿಯಾಗುವುದರ ಜೊತೆಗೆ ಪ್ರವಾಸಿಗರ ಕಣ್ಮನಗಳಿಗೆ ಅನಿರ್ವಚನೀಯ ಸೌಂದರ್ಯ ನೀಡುವಂತಿದೆ.

ಸಾಹಿತ್ಯಾಧಾರಗಳು

ಸಾಹಿತ್ಯಾಧಾರಗಳು

ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳಂತೆಯೇ ಸಾಹಿತ್ಯಾಧಾರಗಳು ಸಹ ಭಿನ್ನವಾದ ಐತಿಹಾಸಿಕ ವಿಚಾರಗಳ ಸಂಗ್ರಹಣೆಗೆ ಅನುಕೂಲಕರವಾಗಿದೆ. ಸಾಹಿತ್ಯಾಧಾರಗನ್ನು ಅವುಗಳ ಲಭ್ಯತೆಗೆ ಅನುಸಾರವಾಗಿ 2 ವಿಭಾಗಗಳಲ್ಲಿ ವರ್ಗೀಕರಿಸಿ ನೋಡಬಹುದಾಗಿದೆ.

  1. ದೇಶೀಯ ಸಾಹಿತ್ಯಾಧಾರಗಳು 2. ವಿದೇಶಿಯ ಸಾಹಿತ್ಯಾಧಾರಗಳು.
  1. ದೇಶೀಯ ಸಾಹಿತ್ಯಾಧಾರಗಳು : ದೇಶೀಯ ಸಾಹಿತ್ಯಾಧಾರಗಳೆಂದರೆ ಆಸ್ಥಾನದ ಕವಿಗಳು ಮತ್ತು ಚರಿತ್ರಾಕಾರರಿಂದ ರಚಿಸಲ್ಪಟ್ಟ ಬರವಣಿಗೆಗಳು. ದೇಶೀಯ ಆಕರಗಳು ಚರಿತ್ರೆಯನ್ನು ಹೆಚ್ಚು ಸ್ಪಷ್ಟವಾಗಿ ನಿಖರವಾಗಿ ನಿರೂಪಿಸಲು ಸಹಕಾರಿಯಾಗಿವೆ. ಅಂತಹ ಆಧಾರಗಳೆಂದರೆ,

(ಅ) ಧಾರ್ಮಿಕ ಗ್ರಂಥಗಳು: ದೀಪವಂಶ ಮತ್ತು ಮಹಾವಂಶ ಕೃತಿಗಳು ತ್ರಿಪಿಠಕಗಳು, ಜೈನ ಆಗಮ ಸಿದ್ದಾಂತಗಳು, ಅಂಗಗಳು, ಉಪಾಂಗಗಳು ಬೌದ್ಧ ಮತ್ತು ಜೈನ ಧರ್ಮದ ಇತಿಹಾಸ ರಚನೆಗೆ ಹೆಚ್ಚು ಸಹಕಾರಿಯಾಗಿವೆ.

ವೇದವಾಙ್ಮಯ : ವೈದಿಕ ಸಂಸ್ಕೃತಿಯನ್ನು ಅರಿಯಲು ವೇದವಾಙ್ಮಯವೇ ಮೂಲಾಧಾರ. ವೇದವಾಙ್ಮಯದಲ್ಲಿ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಅರಣ್ಯಕಗಳು ಮತ್ತು ಉಪನಿಷತ್ಗಳು ಅಡಕವಾಗಿವೆ.

(ಆ) ಮಹಾಕಾವ್ಯಗಳು, ಪುರಾಣಗಳು: ಭಾರತೀಯರ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ಆರ್ಯರು ಮತ್ತು ಗಂಗಾ ನದಿಯ ಬಯಲಿನ ರಾಜರ ಸಂತತಿಯ ಬಗ್ಗೆ ವಿವರ ನೀಡುತ್ತವೆ. ಪ್ರಾಚೀನ ಇತಿಹಾಸದ ರಚನೆಯಲ್ಲಿ ಪುರಾಣಗಳು ಮತ್ತು ಸ್ಮೃತಿಗಳಪಾತ್ರವು ಕಂಡುಬರುತ್ತದೆ.

(ಇ) ಚಾರಿತ್ರಿಕ ಗ್ರಂಥಗಳು: ಕೌಟಿಲ್ಯನ ಅರ್ಥಶಾಸ್ತ್ರ, ಕಲ್ಹಣನ ರಾಜತರಂಗಿಣಿ, ಚರಕನ ಚರಕ ಸಂಹಿತೆ, ಸುಶೃತನ ಸುಶೃತಸಂಹಿತೆ, ಸಮುದ್ರಗುಪ್ತನ ಕೃಷ್ಣಚರಿತ, ಮಹೇಂದ್ರವರ್ಮನ ಮತ್ತವಿಲಾಸ ಪ್ರಹಸನ, ಇಳಂಗೋಅಡಿಗಳ್ ರವರ ತಿಲಪ್ಪದಿಕಾರಂ, ಸಾತ್ತನಾರ್‌ನ ಮಣಿಮೇಖಲೈ, ತಿರುತಕ್ಕದೇವರ್‌ನ ಜೀವಿಕ ಚಿಂತಾಮಣಿ, ಚಾವುಂಡರಾಯನ ಚಾವುಂಡರಾಯಪುರಾಣ, ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯ, ಶಿವಮಾರನ ಗಜಶತಕ, 3ನೇ ಸೋಮೇಶ್ವರನ ಮಾನಸೋಲ್ಲಾಸ, ನಾಗವರ್ಮನ ಛಂದೋಂಬುದಿ ಮೊದಲಾದ ಗ್ರಂಥಗಳಲ್ಲಿ ಹೆಚ್ಚು ಚಾರಿತ್ರಿಕ ವಿಷಯಗಳು ಮೂಡಿಬಂದಿವೆ. ಅಶ್ವಘೋಶನ ಬುದ್ಧ ಚರಿತ, ಬಾಣಭಟ್ಟನ ಹರ್ಷಚರಿತೆ, ಹೇಮಚಂದ್ರನ ಕುಮಾರಪಾಲಚರಿತೆ, ಚಾಂದ್ ಬರ್ದಾಯಿಯ ಪೃಥ್ವಿರಾಜ ರಾಸೋ, ಬಿಲ್ಲಣನ ವಿಕ್ರಮಾಂಕ ದೇವಚರಿತೆ, ರನ್ನನ ಗದಾಯುದ್ಧ – ಈ ಕೃತಿಗಳು ರಾಜರ ಆಸ್ಥಾನದಲ್ಲಿದ್ದ ಚರಿತ್ರಾಕಾರರಿಂದ ರಚನೆಗೊಂಡಿದ್ದು ಹೆಚ್ಚು ಐತಿಹಾಸಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತವೆ.

ಈ) ನಾಟಕಗಳು: ಕಾಳಿದಾಸನ ರಘುವಂಶ, ಮಾಳವಿಕಾಗ್ನಿಮಿತ್ರ, ವಿಶಾಖದತ್ತನ ಮುದ್ರಾರಾಕ್ಷಸ, ಶೂದ್ರಕನ ಮೃಚ್ಚಕಟಿಕ ಮೊದಲಾದ ನಾಟಕರೂಪದ ಕೃತಿಗಳಲ್ಲಿ ಅಲ್ಪ ಸ್ವಲ್ಪ ಚಾರಿತ್ರಿಕ ಮಾಹಿತಿ ಲಭ್ಯವಾಗುತ್ತದೆ.

  1. ವಿದೇಶಿಯ ಸಾಹಿತ್ಯಾಧಾರಗಳು (ವಿದೇಶಿಯರ ಬರವಣಿಗೆಗಳು):

ಭಾರತವು ಪ್ರಾಚೀನ ಕಾಲದಿಂದ ನಾಗರೀಕತೆ ಸಂಸ್ಕೃತಿಯ ಆವಾಸಸ್ಥಾನ ರಾಷ್ಟ್ರವಾದುದರಿಂದ ಅನೇಕ ವಿದೇಶಿ ಪ್ರವಾಸಿಗರು, ಮತಪ್ರಚಾರಕರು, ವ್ಯಾಪಾರ ವಾಣಿಜ್ಯೋದ್ಯಮಿಗಳು ಭಾರತಕ್ಕೆ ಭೇಟಿನೀಡಿದ್ದರು. ಹಾಗೆ ಬಂದ ವಿದೇಶಿಯರು ತಾವು ಕಂಡು ಕೇಳಿದ ವಿಚಾರಗಳನ್ನು ತಮ್ಮ ಬರವಣಿಗೆಗಳಲ್ಲಿ, ಪ್ರವಾಸ ಕಥನಗಳಲ್ಲಿ ನಮೂದಿಸಿದ್ದಾರೆ. ಅಂತಹ ಬರವಣಿಗೆಗಳು ಭಾರತೀಯ ಚರಿತ್ರೆಯ ಹಲವು ಹತ್ತು ವಿಚಾರಗಳು ಪ್ರಸ್ತಾಪಿಸಲ್ಪಟ್ಟಿವೆ.

1. ಗ್ರೀಕ್ ರೋಮನ್ನರ ಬರವಣಿಗೆಗಳು:

  1. ಹೆರೋಡಾಟಸ್‌ನ ಬರವಣಿಗೆಗಳಲ್ಲಿ ಪರ್ಷಿಯನ್ನರ ಆಕ್ರಮಣದ ವಿವರಗಳಿವೆ.
  2. ಪ್ಲಿನಿ ಮತ್ತು ಟಾಲಮಿಯ ಪ್ರಾಕೃತಿಕ ಚರಿತ್ರೆ ಮತ್ತು ಭೂಗೋಳಶಾಸ್ತ್ರ ಕೃತಿಗಳಲ್ಲಿ ಭಾರತವು ಪ್ರಾಚೀನ ಕಾಲದಲ್ಲಿ ಹೊಂದಿದ್ದ ವ್ಯಾಪಾರ ವಾಣಿಜ್ಯದ ವಿವರಗಳು, ತೀರಪ್ರದೇಶದ ಬಂದರುಗಳ ಪಾತ್ರ ವಿವರಿಸಲ್ಪಟ್ಟಿದೆ.
  3. ಮೆಗಾಸ್ಥನೀಸನ ಇಂಡಿಕಾ ಮೌರ್ಯರ ಇತಿಹಾಸ ಬಗ್ಗೆ ಬೆಳಕು ಚೆಲ್ಲುತ್ತದೆ.
  4. ಗ್ರೀಕ್ ಅನಾಮಧೇಯನಿಂದ ರಚನೆಗೊಂಡ ʻದಿ ಪರಿಪ್ಲಸ್ ಆಫ್ ದಿ ಎರಿತ್ರಿಯನ್‌’ ಕ್ರಿಶ 1ನೇಶತಮಾನದ ವ್ಯಾಪಾರ ವಹಿವಾಟಿನ ವಿವರಗಳನ್ನೊಳಗೊಂಡಿದೆ.
ಭಾರತೀಯ ಇತಿಹಾಸದ ರಚನೆಗೆ ಪ್ರಾಚೀನ ಮೂಲಗಳ ಪ್ರಾಮುಖ್ಯತೆ

ಭಾರತೀಯ ಇತಿಹಾಸದ ರಚನೆಗೆ ಪ್ರಾಚೀನ ಮೂಲಗಳ ಪ್ರಾಮುಖ್ಯತೆ

ಭಾರತದ ವಿಶಾಲವಾದ ಮತ್ತು ಸಂಕೀರ್ಣವಾದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಪ್ರಾಚೀನ ಮೂಲಗಳ ವ್ಯಾಪ್ತಿಯನ್ನು ಪರಿಶೀಲಿಸುವ ಅಗತ್ಯವಿದೆ. ಈ ಮೂಲಗಳು ದೇಶದ ಶ್ರೀಮಂತ ಪರಂಪರೆಯನ್ನು ಒಟ್ಟುಗೂಡಿಸಲು ನಿರ್ಣಾಯಕವಾಗಿವೆ, ವಿಶೇಷವಾಗಿ ಲಿಖಿತ ದಾಖಲೆಗಳು ವಿರಳವಾಗಿದ್ದಾಗ. ಭಾರತದ ಇತಿಹಾಸ, ಅದರ ಇತಿಹಾಸಪೂರ್ವ ನಾಗರಿಕತೆಗಳಿಂದ ಮಧ್ಯಕಾಲೀನ ಸಾಮ್ರಾಜ್ಯಗಳವರೆಗೆ, ಪುರಾತತ್ತ್ವ ಶಾಸ್ತ್ರದ ಪುರಾವೆಗಳು, ಶಾಸನಗಳು, ನಾಣ್ಯಗಳು, ಸ್ಮಾರಕಗಳು ಮತ್ತು ವರ್ಣಚಿತ್ರಗಳ ಮೂಲಕ ಬಹುಮಟ್ಟಿಗೆ ಪುನರ್ ನಿರ್ಮಿಸಲಾಗಿದೆ. ಈ ಪ್ರಾಚೀನ ಮೂಲಗಳು ಭಾರತೀಯ ಇತಿಹಾಸದ ರಚನೆಗೆ ಹೇಗೆ ಕೊಡುಗೆ ನೀಡುತ್ತವೆ ಎಂಬುದು ಇಲ್ಲಿದೆ:

ಪುರಾತತ್ತ್ವ ಶಾಸ್ತ್ರದ ಮೂಲಗಳು

ಲಿಖಿತ ದಾಖಲೆಗಳು ಲಭ್ಯವಿಲ್ಲದ ಅವಧಿಗಳ ಅಧ್ಯಯನಕ್ಕೆ ಬಂದಾಗ, ಇತಿಹಾಸಕಾರರು ಪುರಾತತ್ತ್ವ ಶಾಸ್ತ್ರದ ಮೂಲಗಳನ್ನು ಅವಲಂಬಿಸಬೇಕು. ಈ ಮೂಲಗಳು ಪ್ರಾಚೀನ ನಾಗರಿಕತೆಗಳ ಜೀವನ, ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತವೆ. ಉತ್ಖನನದ ಮೂಲಕ ಈ ಪ್ರಾಚೀನ ಅವಶೇಷಗಳನ್ನು ಹೊರತೆಗೆಯುವ ಪ್ರಕ್ರಿಯೆಯು ಭಾರತದಲ್ಲಿನ ಮಾನವ ಸಮಾಜಗಳ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಅವಶ್ಯಕವಾಗಿದೆ.

1. ಉತ್ಖನನ

ಉತ್ಖನನವು ಪ್ರಾಚೀನ ನಾಗರಿಕತೆಯ ಕಲಾಕೃತಿಗಳು, ರಚನೆಗಳು ಮತ್ತು ಇತರ ಅವಶೇಷಗಳನ್ನು ಬಹಿರಂಗಪಡಿಸಲು ಭೂಮಿಗೆ ಅಗೆಯುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಬೋಧಗಯಾ, ಭರೂತ್, ಸಾಂಚಿ, ಸಾರನಾಥ, ಕುಶಿನಗರ, ಹಂಪಿ ಮತ್ತು ಪಾಟಲಿಪುತ್ರದಂತಹ ತಾಣಗಳು ಪುರಾತತ್ತ್ವ ಶಾಸ್ತ್ರಜ್ಞರಿಗೆ ಆರಂಭಿಕ ಭಾರತೀಯ ಜೀವನದ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಅಂಶಗಳ ಬಗ್ಗೆ ಅಪಾರ ಪ್ರಮಾಣದ ಮಾಹಿತಿಯನ್ನು ಒದಗಿಸಿವೆ. ಹೆಚ್ಚುವರಿಯಾಗಿ, ಕಾರ್ಬನ್-14 ಮತ್ತು ಪೊಟ್ಯಾಸಿಯಮ್ ಡೇಟಿಂಗ್‌ನಂತಹ ವಿಧಾನಗಳು ಈ ಸ್ಥಳಗಳಲ್ಲಿ ಕಂಡುಬರುವ ಪಳೆಯುಳಿಕೆಗಳು ಮತ್ತು ಕಲಾಕೃತಿಗಳ ವಯಸ್ಸನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಐತಿಹಾಸಿಕ ಘಟನೆಗಳ ಟೈಮ್‌ಲೈನ್ ಅನ್ನು ನೀಡುತ್ತದೆ. ಈ ಉತ್ಖನನಗಳು ಭಾರತದ ಸಾಂಸ್ಕೃತಿಕ ಬೆಳವಣಿಗೆ ಮತ್ತು ಅದರ ಆರಂಭಿಕ ನಾಗರಿಕತೆಗಳಾದ ಸಿಂಧೂ ಕಣಿವೆ ನಾಗರಿಕತೆ ಮತ್ತು ಮೌರ್ಯ ಸಾಮ್ರಾಜ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಮುಖವಾಗಿವೆ.

2. ಶಾಸನಗಳು

ಭಾರತೀಯ ಇತಿಹಾಸವನ್ನು ಪುನರ್ ನಿರ್ಮಿಸುವಲ್ಲಿ ಶಾಸನಗಳು ಪ್ರಮುಖ ಪಾತ್ರವಹಿಸಿವೆ, ವಿವಿಧ ಯುಗಗಳ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಅಂಶಗಳ ನೇರ ಪುರಾವೆಗಳನ್ನು ಒದಗಿಸುತ್ತವೆ. ಶಾಸನಗಳ ಅಧ್ಯಯನವು ಶಿಲಾಶಾಸನ ಎಂದು ಕರೆಯಲ್ಪಡುತ್ತದೆ, ಇದು ಕಲ್ಲುಗಳು, ಲೋಹಗಳು ಮತ್ತು ಇತರ ಬಾಳಿಕೆ ಬರುವ ವಸ್ತುಗಳ ಮೇಲೆ ಕಂಡುಬರುವ ಕೆತ್ತನೆಯ ಪಠ್ಯಗಳನ್ನು ವಿಶ್ಲೇಷಿಸುವುದನ್ನು ಒಳಗೊಂಡಿರುತ್ತದೆ.

ಇಲ್ಲಿಯವರೆಗೆ, ಭಾರತದಲ್ಲಿ 75,000 ಕ್ಕೂ ಹೆಚ್ಚು ಶಾಸನಗಳು ಕಂಡುಬಂದಿವೆ, ಇದನ್ನು ಪಾಲಿ, ಪ್ರಾಕೃತ, ಸಂಸ್ಕೃತ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಬರೆಯಲಾಗಿದೆ. ಈ ಶಾಸನಗಳು ಬ್ರಾಹ್ಮಿ ಮತ್ತು ಖರೋಸ್ತಿಯಂತಹ ಲಿಪಿಗಳನ್ನು ಬಳಸುತ್ತವೆ, ಬ್ರಾಹ್ಮಿಯನ್ನು ಎಡದಿಂದ ಬಲಕ್ಕೆ ಮತ್ತು ಖರೋಸ್ತಿಯನ್ನು ಬಲದಿಂದ ಎಡಕ್ಕೆ ಬರೆಯಲಾಗಿದೆ.

ಚಕ್ರವರ್ತಿ ಅಶೋಕನ ಕಾಲದ ಶಾಸನಗಳ ಅತ್ಯಂತ ಪ್ರಸಿದ್ಧವಾದ ಸೆಟ್‌ಗಳಲ್ಲಿ ಒಂದಾಗಿದೆ, ಅವರ 14 ಪ್ರಮುಖ ಶಾಸನಗಳು ಮತ್ತು ದ್ವಿತೀಯ ಶಾಸನಗಳು, ಭಾರತದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ, ಅವರ ಆಳ್ವಿಕೆ ಮತ್ತು ಧಾರ್ಮಿಕ ನೀತಿಗಳನ್ನು ಬೆಳಗಿಸುತ್ತವೆ. ಖಾರವೇಲನ ಹತ್ತಿಗುಂಪ ಶಾಸನ ಮತ್ತು ಹರಿಷೇನನ ಅಲಹಾಬಾದ್ ಪಿಲ್ಲರ್ ಶಾಸನವು ರಾಜಕೀಯ ಮತ್ತು ಮಿಲಿಟರಿ ಘಟನೆಗಳಿಗೆ ಕಿಟಕಿಯನ್ನು ನೀಡುವ ಇತರ ಪ್ರಮುಖ ಉದಾಹರಣೆಗಳಾಗಿವೆ. ಈ ಶಾಸನಗಳು ಸಾಮಾನ್ಯವಾಗಿ ರಾಜಮನೆತನದ ತೀರ್ಪುಗಳು, ಧಾರ್ಮಿಕ ಸುಧಾರಣೆಗಳು ಮತ್ತು ಪ್ರಾದೇಶಿಕ ವಿಜಯಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒಳಗೊಂಡಿರುತ್ತವೆ, ಇದು ಭಾರತೀಯ ಇತಿಹಾಸದ ಪುನರ್ ನಿರ್ಮಾಣದಲ್ಲಿ ಗಣನೀಯವಾಗಿ ಸಹಾಯ ಮಾಡುತ್ತದೆ.

3. ನಾಣ್ಯಗಳು

ಪ್ರಾಚೀನ ನಾಣ್ಯಗಳು ಅಥವಾ ನಾಣ್ಯಶಾಸ್ತ್ರದ ಅಧ್ಯಯನವು ಭಾರತೀಯ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮತ್ತೊಂದು ನಿರ್ಣಾಯಕ ಮೂಲವಾಗಿದೆ. ಚಿನ್ನ, ಬೆಳ್ಳಿ, ತಾಮ್ರ ಮತ್ತು ಸೀಸದಂತಹ ಲೋಹಗಳಿಂದ ಮಾಡಿದ ನಾಣ್ಯಗಳು ಪ್ರಾಚೀನ ಭಾರತದ ಆರ್ಥಿಕತೆ, ವ್ಯಾಪಾರ ಮತ್ತು ರಾಜಕೀಯ ಇತಿಹಾಸದ ಒಳನೋಟಗಳನ್ನು ಒದಗಿಸುತ್ತವೆ.

ನಾಣ್ಯಗಳು ಇತಿಹಾಸಕಾರರಿಗೆ ವಿವಿಧ ರಾಜರು ಮತ್ತು ರಾಜವಂಶಗಳ ಕಾಲಗಣನೆಯನ್ನು ಪತ್ತೆಹಚ್ಚಲು ಮತ್ತು ಅವರ ಪ್ರಾಂತ್ಯಗಳ ವ್ಯಾಪ್ತಿಯನ್ನು ನಕ್ಷೆ ಮಾಡಲು ಸಹಾಯ ಮಾಡುತ್ತದೆ. ಚಿಹ್ನೆಗಳು, ಶಾಸನಗಳು ಮತ್ತು ಈ ನಾಣ್ಯಗಳ ತೂಕದ ಅಧ್ಯಯನವು ಆ ಯುಗದ ಧರ್ಮ, ಸಂಸ್ಕೃತಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಉದಾಹರಣೆಗೆ, ಸುಮಾರು ಎರಡು ಶತಮಾನಗಳ ಕಾಲ ವಾಯುವ್ಯ ಭಾರತದ ಭಾಗಗಳನ್ನು ಆಳಿದ ಗ್ರೀಕರು, ಇಂಡೋ-ಸಿಥಿಯನ್ನರು, ಪಾರ್ಥಿಯನ್ನರು ಮತ್ತು ಕುಶಾನರ ಆಳ್ವಿಕೆಯ ಬಗ್ಗೆ ನಾಣ್ಯಗಳು ನಿರ್ಣಾಯಕ ಪುರಾವೆಗಳನ್ನು ಒದಗಿಸುತ್ತವೆ.

4. ಸ್ಮಾರಕಗಳು

ಅರಮನೆಗಳು, ದೇವಾಲಯಗಳು, ಸ್ತೂಪಗಳು, ವಿಹಾರಗಳು, ಮಸೀದಿಗಳು ಮತ್ತು ಗೋರಿಗಳಂತಹ ಸ್ಮಾರಕಗಳು ಭಾರತದ ವಾಸ್ತುಶಿಲ್ಪ, ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದ ಭೌತಿಕ ಜ್ಞಾಪನೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ರಚನೆಗಳನ್ನು ಸಾಮಾನ್ಯವಾಗಿ ಪ್ರಮುಖ ಘಟನೆಗಳು, ಆಡಳಿತಗಾರರು ಅಥವಾ ಧಾರ್ಮಿಕ ವ್ಯಕ್ತಿಗಳ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ ಮತ್ತು ಅವರು ತಮ್ಮ ಕಾಲದ ಕಲಾತ್ಮಕ ಮತ್ತು ಎಂಜಿನಿಯರಿಂಗ್ ಕೌಶಲ್ಯಗಳನ್ನು ಪ್ರತಿಬಿಂಬಿಸುತ್ತಾರೆ.

ಅಜಂತಾ ಮತ್ತು ಎಲ್ಲೋರಾ ಗುಹೆಗಳು ತಮ್ಮ ಚೈತ್ಯಗಳು ಮತ್ತು ವಿಹಾರಗಳಿಗೆ ಪ್ರಸಿದ್ಧವಾಗಿವೆ, ಬೌದ್ಧ ಸಂಪ್ರದಾಯಗಳು ಮತ್ತು ಶಾತವಾಹನರ ಕಾಲದಲ್ಲಿ ಕಲೆಯ ಪ್ರೋತ್ಸಾಹದ ಬಗ್ಗೆ ಗಮನಾರ್ಹ ಒಳನೋಟಗಳನ್ನು ಒದಗಿಸುತ್ತವೆ. ಅದೇ ರೀತಿ, ಬಾದಾಮಿ ಚಾಲುಕ್ಯರ ಕಾಲದ ವಾಸ್ತುಶಿಲ್ಪದ ಅದ್ಭುತಗಳು, ಪಟ್ಟದಕಲ್ಲು, ಐಹೊಳೆ ಮತ್ತು ಬಾದಾಮಿ ಮುಂತಾದ ಸ್ಥಳಗಳಲ್ಲಿ ಕಂಡುಬರುತ್ತವೆ, ಅವರ ಕಾಲದ ಧಾರ್ಮಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಈ ಪುರಾತನ ಸ್ಮಾರಕಗಳು ಇತಿಹಾಸಕಾರರು ಮತ್ತು ಪುರಾತತ್ವಶಾಸ್ತ್ರಜ್ಞರಿಗೆ ಪ್ರಾಚೀನ ನಾಗರಿಕತೆಗಳು ಹೇಗೆ ಕಾರ್ಯನಿರ್ವಹಿಸಿದವು, ಅವುಗಳ ಮೌಲ್ಯಗಳು ಮತ್ತು ಅವರ ಸಾಮಾಜಿಕ ರಚನೆಯನ್ನು ಅರ್ಥಮಾಡಿಕೊಳ್ಳಲು ವಸ್ತು ಪುರಾವೆಗಳನ್ನು ನೀಡುತ್ತವೆ.

5. ವರ್ಣಚಿತ್ರಗಳು

ಐತಿಹಾಸಿಕ ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಂಶಗಳನ್ನು ಅರ್ಥಮಾಡಿಕೊಳ್ಳಲು ಪ್ರಾಚೀನ ವರ್ಣಚಿತ್ರಗಳು ಮತ್ತೊಂದು ಪ್ರಮುಖ ಮೂಲವಾಗಿದೆ. ಈ ಕಲಾಕೃತಿಗಳು ಸಾಮಾನ್ಯವಾಗಿ ಸಾರ್ವಜನಿಕ ಜೀವನ, ಆಚರಣೆಗಳು, ಹಬ್ಬಗಳು, ಉಡುಪುಗಳು ಮತ್ತು ಮನರಂಜನೆಯ ದೃಶ್ಯಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತವೆ, ಪ್ರಾಚೀನ ಕಾಲದಲ್ಲಿ ದೈನಂದಿನ ಜೀವನದಲ್ಲಿ ಒಂದು ನೋಟವನ್ನು ನೀಡುತ್ತದೆ.

ಅಜಂತಾ ಗುಹೆಗಳಲ್ಲಿ ಕಂಡುಬರುವ ಭಿತ್ತಿಚಿತ್ರಗಳು ಮತ್ತು ವರ್ಣಚಿತ್ರಗಳು ಬೌದ್ಧ ಗ್ರಂಥಗಳ ಕಥೆಗಳು, ರಾಜಮನೆತನದ ವೈಭವ ಮತ್ತು ಆ ಯುಗದ ಕಲಾತ್ಮಕ ಅಭಿವ್ಯಕ್ತಿಗಳ ವೈವಿಧ್ಯತೆಯನ್ನು ವಿವರಿಸುವ ಕೆಲವು ಪ್ರಸಿದ್ಧ ಉದಾಹರಣೆಗಳಾಗಿವೆ. ಈ ವರ್ಣಚಿತ್ರಗಳು ಇತಿಹಾಸಕಾರರಿಗೆ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಯನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತವೆ ಪ್ರಾಚೀನ ಭಾರತದ.

ಉಪಸಂಹಾರ

ಭಾರತೀಯ ಇತಿಹಾಸದ ರಚನೆಯು ಈ ಪ್ರಾಚೀನ ಮೂಲಗಳ ಅಧ್ಯಯನದ ಮೇಲೆ ಹೆಚ್ಚು ಅವಲಂಬಿತವಾಗಿದೆ, ಪ್ರತಿಯೊಂದೂ ಪ್ರಾಚೀನ ಭಾರತದಲ್ಲಿನ ಜೀವನದ ವಿವಿಧ ಅಂಶಗಳ ಬಗ್ಗೆ ಅನನ್ಯ ಒಳನೋಟಗಳನ್ನು ನೀಡುತ್ತದೆ. ಉತ್ಖನನಗಳು, ಶಾಸನಗಳು, ನಾಣ್ಯಗಳು, ಸ್ಮಾರಕಗಳು ಮತ್ತು ವರ್ಣಚಿತ್ರಗಳು ಒಟ್ಟಾಗಿ ಭಾರತದ ಹಿಂದಿನ ನಮ್ಮ ತಿಳುವಳಿಕೆಯ ಬೆನ್ನೆಲುಬನ್ನು ರೂಪಿಸುತ್ತವೆ. ಅವರು ರಾಜಕೀಯ ರಚನೆ, ಆರ್ಥಿಕ ಪರಿಸ್ಥಿತಿಗಳು, ಸಾಮಾಜಿಕ ರೂಢಿಗಳು, ಧಾರ್ಮಿಕ ನಂಬಿಕೆಗಳು ಮತ್ತು ವಿವಿಧ ಯುಗಗಳ ಸಾಂಸ್ಕೃತಿಕ ಆಚರಣೆಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುತ್ತಾರೆ. ಈ ಮೂಲಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವ ಮೂಲಕ, ಇತಿಹಾಸಕಾರರು ಭಾರತೀಯ ಇತಿಹಾಸದ ಹೆಚ್ಚು ಸಮಗ್ರ ಮತ್ತು ನಿಖರವಾದ ಚಿತ್ರವನ್ನು ಪುನರ್ ನಿರ್ಮಿಸಬಹುದು, ಉಪಖಂಡದ ಶ್ರೀಮಂತ ಮತ್ತು ವೈವಿಧ್ಯಮಯ ಪರಂಪರೆಯ ಪರಂಪರೆಯನ್ನು ಸಂರಕ್ಷಿಸಬಹುದು.