ಶ್ರೀ ಕೃಷ್ಣದೇವರಾಯನ ಸಾಧನೆಗಳು

ಶ್ರೀ ಕೃಷ್ಣದೇವರಾಯನ ಸಾಧನೆಗಳು

ಕೃಷ್ಣದೇವರಾಯ (1509-1529): ಈತ ವಿಜಯನಗರ ಅರಸರಲ್ಲಿಯೇ ಅಲ್ಲದೆ ಇಡೀ ಭಾರತದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠದೊರೆ ಎಂದು ಪ್ರಸಿದ್ಧನಾಗಿದ್ದಾನೆ. ಸಾ.ಶ.1509 ಅಗಸ್ಟ್ 8ನೆಯ ತಾರೀಖು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣದೇವರಾಯನು ಪಟ್ಟಾಭಿಷಿಕ್ತನಾದನು. ಆಗ ಆತನಿಗೆ ಕೇವಲ 25 ವರ್ಷ ವಯಸ್ಸು. ಸಾ.ಶ. 1509 ರಿಂದ 1529 ರವರೆಗೆ ಸುಮಾರು 20 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಈತ ವಿಜಯನಗರವನ್ನು ವೈಭವ ಹಾಗೂ ಕೀರ್ತಿಯ ಉನ್ನತ ಶಿಖರಕ್ಕೆ ಏರಿಸಿದನು. ಕೃಷ್ಣದೇವರಾಯ ಒಬ್ಬ ದಕ್ಷ ಆಡಳಿತಗಾರ, ವೀರಯೋಧ, ಅಪ್ರತಿಮ ಸಾಹಸಿ, ಚತುರ ರಾಜಕಾರಣಿ ಹಾಗೂ ಕಲೆ ವಾಸ್ತುಶಿಲ್ಪಗಳ ಆರಾಧಕನಾಗಿದ್ದನು.

ಕೃಷ್ಣದೇವರಾಯನ ದಿಗ್ವಿಜಯಗಳು
1) ವಿಜಾಪೂರ ಸುಲ್ತಾನನೊಂದಿಗೆ ಯುದ್ಧ (ಕ್ರಿ.ಶ. 1509):

ಕೃಷ್ಣದೇವರಾಯ ಸಿಂಹಾಸನಾಧೀಶ್ವರನಾದ ಕೆಲವೇ ದಿನಗಳಲ್ಲಿ ವಿಜಾಪುರದ ಸುಲ್ತಾನ ಯೂಸುಫ್ ಆದಿಲ್‌ಷಾ ಬಹಮನಿಯ ಸುಲ್ತಾನನಾಗಿದ್ದ ಮಹಮದ್‌ಷಾನ ಜೊತೆ ಸೇರಿ ರಾಯನ ಮೇಲೆ ಯುದ್ಧ ಸಾರಿದನು. ಆಗ ಕೃಷ್ಣದೇವರಾಯ ಸಿಡಿಲಿನಂತೆ ಅವರ ಮೇಲೆರಗಿ ‘ಡೋಣಿ’ ಎಂಬಲ್ಲಿ ಅವರನ್ನು ಸೋಲಿಸಿದನು. ಸೋತ ಮಹಮದ್ ಷಾ ಯುದ್ಧ ರಂಗದಿಂದ ಪಲಾಯನ ಮಾಡಿದನು. ಯೂಸಫ್ ಆದಿಲ್‌ ಷಾನನ್ನು ಕೋವಿಲಕೊಂಡದ ಬಳಿ ಸೋಲಿಸಿದನು. ಯೂಸಫ್ ಆದಿಲ್‌ಷಾ ರಣರಂಗದಲ್ಲಿ ವೀರಮರಣವನ್ನು ಹೊಂದಿದನು.

2) ಬೀದರ್ ಮುತ್ತಿಗೆ (ಕ್ರಿ.ಶ. 1514):

ವಿಜಾಪುರದ ಸುಲ್ತಾನನನ್ನು ಸೋಲಿಸಿದ ಕೃಷ್ಣದೇವರಾಯ ಬೀದರಿಗೆ ಮುತ್ತಿಗೆ ಹಾಕಿ ಅಲ್ಲಿ ತನ್ನ ಪ್ರಧಾನಮಂತ್ರಿಯಿಂದ ಬಂಧಿತನಾಗಿದ್ದ ಎರಡನೆಯ ಮಹಮ್ಮದ್ಾನನ್ನು ಬಂಧನದಿಂದ ಬಿಡುಗಡೆಗೊಳಿಸಿ ಪುನಃ ಸಿಂಹಾಸನದ ಮೇಲೆ ಕೂಡಿಸಿದನು. ಇದರಿಂದಾಗಿ ರಾಯನು ‘ಯವನರಾಜ ಪ್ರತಿಷ್ಠಾಪನಚಾರ್ಯ’ ಎಂಬ ಬಿರುದನ್ನು ಪಡೆದನು.

3) ಉಮ್ಮತ್ತೂರಿನ ಮುತ್ತಿಗೆ:

ಉಮ್ಮತ್ತೂರಿನ ಪಾಳೆಯಗಾರ ಗಂಗರಾಜನು ಬಂಡೆದ್ದು ಪೆನುಕೊಂಡೆಯನ್ನು ಆಕ್ರಮಿಸಿದನು. ಇವನ ಸೊಕ್ಕನ್ನು ಅಡಗಿಸಲು ಕೃಷ್ಣದೇವರಾಯನು ಸೈನ್ಯ ಸಮೇತ ಅಲ್ಲಿಗೆ ಧಾವಿಸಿ ಬಂದು ಪಾಳೆಯಗಾರನ ಮುಖ್ಯ ಕೇಂದ್ರಗಳಾಗಿದ್ದ ಶ್ರೀರಂಗಪಟ್ಟಣ ಹಾಗೂ ಶಿವನಸಮುದ್ರಗಳನ್ನು ಮುತ್ತಿ ಅವುಗಳನ್ನು ವಶಪಡಿಸಿಕೊಂಡನು. ನಂತರ ಅವುಗಳ ಆಡಳಿತವನ್ನು ಬೆಂಗಳೂರು ಕೆಂಪೇಗೌಡನಿಗೆ ವಹಿಸಿಕೊಟ್ಟನು.

4) ಕಳಿಂಗ, ಆಂಧ್ರಗಳ ಮುತ್ತಿಗೆ (ಕ್ರಿ.ಶ. 1513):

ಸಾ.ಶ. 1513ರಲ್ಲಿ ಕೃಷ್ಣದೇವರಾಯನು ಓರಿಸ್ಸಾದ ಪ್ರತಾಪರುದ್ರನ ವಿರುದ್ಧ ಯುದ್ಧವನ್ನು ಘೋಷಿಸಿ ಅವನನ್ನು ಸೋಲಿಸಿ ಉದಯಗಿರಿಯನ್ನು ಗೆದ್ದುಕೊಂಡನು. ನಂತರ ಕಳಿಂಗ ಕದನದಲ್ಲಿ ಆದಂಕಿ ಕಂದಕೂರು, ಪೆನುಕೊಂಡ, ನಾಗಾರ್ಜುನಕೊಂಡ, ಬಿಲ್ಲಮಕೊಂಡ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡನು.ನಂತರ ತನ್ನ ದಿಗ್ವಿಜಯ ಯಾತ್ರೆಯನ್ನು ಓರಿಸ್ಸಾದವರೆಗೆ ಮುಂದುವರೆಸಿ ಅದರ ರಾಜಧಾನಿಯಾಗಿದ್ದ ‘ಕಟಕ್’ನ್ನು ಗೆದ್ದುಕೊಂಡನು. ಗಜಪತಿ ಪ್ರತಾಪರುದ್ರ ವಿಧಿಯಿಲ್ಲದೆ ಕೃಷ್ಣದೇವರಾಯನಿಗೆ ಶರಣಾದನು. ನಂತರ ಕೃಷ್ಣದೇವರಾಯನೊಂದಿಗೆ ಶಾಂತಿಒಪ್ಪಂದ ಮಾಡಿಕೊಂಡು ತನ್ನ ಮಗಳಾದ ಜಗನ್‌ಮೋಹಿನಿಯನ್ನು ರಾಯನಿಗೆ ಕೊಟ್ಟು ಮದುವೆ ಮಾಡಿದನು.

5) ಗೋಲ್ಕಂಡ ಯುದ್ಧ (ಕ್ರಿ.ಶ.1512):

ಗೋಲ್ಕಂಡದ ಕುಲಿ ಕುತುಬ್‌ ಷಾ ವಿಜಯನಗರದ ಮೇಲೆ ದಾಳಿ ಮಾಡಿದನು. ಇವನನ್ನು ಎದುರಿಸಲು ರಾಯನು ಸಾಳುವ ತಿಮ್ಮರಸನ ನೇತೃತ್ವದಲ್ಲಿ ಸೈನ್ಯವನ್ನು ರವಾನಿಸಿದನು. ತಿಮ್ಮರಸ ಗೋಲ್ಕಂಡದ ಸುಲ್ತಾನನನ್ನು ಸೋಲಿಸಿ ಅಲ್ಲಿಂದ ಓಡಿಸಿದನು.

6) ರಾಯಚೂರು ಯುದ್ಧ (ಕ್ರಿ.ಶ.1520):

ವಿಜಾಪುರದ ಸುಲ್ತಾನ ಇಸ್ಮಾಯಿಲ್ ಆದಿಲ್‌ಷಾ ರಾಯಚೂರಿನ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡನು. ಇದರಿಂದ ಕುಪಿತಗೊಂಡ ಕೃಷ್ಣದೇವರಾಯನು ಇಸ್ಮಾಯಿಲ್‌ನನ್ನು ರಾಯಚೂರು ಕದನದಲ್ಲಿ ಸೋಲಿಸಿದನು. ನಂತರ ಸೋತ ಇಸ್ಮಾಯಿಲ್ ಅಲ್ಲಿಂದ ಪಲಾಯನ ಮಾಡಿದನು.

7) ಪೋರ್ಚುಗೀಸರೊಂದಿಗೆ ಉತ್ತಮ ಸಂಬಂಧ:

ಸಾ.ಶ. 1510ರಲ್ಲಿ ಪೋರ್ಚುಗೀಸರು ಗೋವೆಯನ್ನು ವಿಜಾಪುರದ ಸುಲ್ತಾನನಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೆ ರಾಯನು ಪರೋಕ್ಷವಾಗಿ ಬೆಂಬಲ ನೀಡಿದ್ದನು. ಇದರಿಂದ ಸಂತೃಪ್ತರಾಗಿದ್ದ ಪೋರ್ಚುಗೀಸರು ಕೃಷ್ಣದೇವರಾಯನೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡಿದ್ದರಲ್ಲದೆ. ಅವನಿಗೆ ಕುದುರೆಗಳನ್ನು ಸರಬರಾಜು ಮಾಡಿದರು.

8) ದಖನ್ ದಂಡಯಾತ್ರೆ:

ಕೃಷ್ಣದೇವರಾಯನ ಸೇನಾನಾಯಕನಾದ ವಿಜಯಪ್ಪ ಎಂಬುವವನು ದಕ್ಷಿಣ ಭಾರತದ ಮೇಲೆ ದಾಳಿಮಾಡಿ ಚೋಳ ಹಾಗೂ ಪಾಂಡ್ಯರನ್ನು ಸೋಲಿಸಿ ಕೊಡಗು ಹಾಗೂ ಮಲಬಾರನ್ನು ವಶಪಡಿಸಿಕೊಂಡನು.

9) ಶ್ರೀಲಂಕಾದ ವಿರುದ್ಧ ಯುದ್ಧ:

ಸಿಂಹಳದ ಪ್ರಜೆಗಳು ಅಲ್ಲಿನ ದೊರೆ ರಾಜವಿಜಯಬಾಹುವನ್ನು ದೇಶ ಬಿಟ್ಟು ಹೊರಹಾಕಿದರು. ಹೀಗೆ ದೇಶ ಭ್ರಷ್ಟನಾಗಿ ಬಂದ ರಾಜವಿಜಯ ಬಾಹು ಶ್ರೀಕೃಷ್ಣದೇವರಾಯನ ಸಹಾಯ ಯಾಚಿಸಿದನು. ಆಗ ರಾಯನು ರಾಜವಿಜಯಬಾಹುವಿನ ಪರವಾಗಿ ಹೋರಾಟ ಮಾಡಿ ಸಿಂಹಳಿಯರನ್ನು ಸೋಲಿಸಿ ವಿಜಯ ಬಾಹುವಿನ ಮಗನಾದ “ಭುವನೈಕ್ಯಬಾಹುವನ್ನು” ಸಿಂಹಳದ ಸಿಂಹಾಸನಕ್ಕೆ ತಂದನು. ಆಗ ಕೃಷ್ಣದೇವರಾಯನು ದಕ್ಷಿಣಾಧಿಪತಿ ಎಂಬ ಬಿರುದನ್ನು ಪಡೆದನು.

10) ಸಾಂಸ್ಕೃತಿಕ ಸಾಧನೆಗಳು:

ಕೃಷ್ಣದೇವರಾಯನು ವೈಷ್ಣವನಾಗಿದ್ದರೂ, ಅನ್ಯಧರ್ಮಗಳನ್ನು ಎಂದೂ ಕಡೆಗಣಿಸಲಿಲ್ಲ. ರಾಯನು ಕ್ರೈಸ್ತ, ಇಸ್ಲಾಂ, ಶೈವ, ಬೌದ್ಧ ಹಾಗೂ ಜೈನ ಧರ್ಮಗಳಿಗೆ ದಾನ ದತ್ತಿಗಳನ್ನು ನೀಡಿದನು. ಉದಯಗಿರಿಯಿಂದ ಬಾಲಗೋಪಾಲ ವಿಗ್ರಹವನ್ನು ತಂದು ರಾಜಧಾನಿಯಲ್ಲಿ ಪ್ರತಿಷ್ಠಾಪಿಸಿದನು. ಹಂಪೆಯ ವಿರುಪಾಕ್ಷ ದೇವಾಲಯದ ಪೂಜೆ ಮಾಡಲು ಸಕಲ ಕ್ರಮ ಕೈಗೊಂಡನು. ರಾಯನ ಆಸ್ಥಾನಕ್ಕೆ ಯಾರೇ ಬಂದರೂ ಅವರನ್ನು ಕ್ರೈಸ್ತರೇ? ಯಹೂದಿಗಳೇ?ಜೈನರೇ? ಮುಸಲ್ಮಾನರೇ? ಎಂದು ಪ್ರಶ್ನಿಸದೇ ಅವರನ್ನು ಉದಾರವಾಗಿ ಕಾಣುತ್ತಿದ್ದನು.

11)ಕಲೆ ಮತ್ತು ವಾಸ್ತುಶಿಲ್ಪ:

ಕೃಷ್ಣದೇವರಾಯನು ಮಹಾ ನಿರ್ಮಾಣಕಾರನಾಗಿದ್ದನು. ಇವನು ಹಂಪಿಯಲ್ಲಿ ಉಗ್ರನರಸಿಂಹ, ಏಕಶಿಲಾರಥ, ಭವ್ಯ ಕಟ್ಟಡಗಳು ಹಾಗೂ ಮೂರ್ತಿಗಳನ್ನು ನಿರ್ಮಿಸಿದ್ದಾನೆ. ಹಂಪಿಯ ಹಜಾರರಾಮಸ್ವಾಮಿ ದೇವಾಲಯ, ಕೃಷ್ಣಸ್ವಾಮಿ, ವಿಜಯವಿಠಲಸ್ವಾಮಿ ಹಾಗೂ ಮಹಾನವಮಿ ದಿಬ್ಬಗಳನ್ನು ನಿರ್ಮಾಣಮಾಡಿದನು. ಅದಲ್ಲದೆ ರಾಯಗೋಪುರ, ಕಲ್ಯಾಣಮಂಟಪ, ಗೋಪುರ ಮುಂತಾದವುಗಳು ಇವನ ಕಾಲದಲ್ಲಿ ಆರಂಭಗೊಂಡವು. ರಾಯನು ತನ್ನ ತಾಯಿ ನಾಗಲಾಂಬ ಹೆಸರಿನಲ್ಲಿ ನಾಗಲಾಪುರವನ್ನು ಮತ್ತು ತನ್ನ ರಾಣಿ ತಿರುಮಲಾದೇವಿಯ ಹೆಸರಿನಲ್ಲಿ ಹೊಸಪೇಟೆಯನ್ನು ನಿರ್ಮಿಸಿದನು. ತನ್ನ ಪ್ರೀತಿಯ ಮಡದಿ ಚಿನ್ನಾಂಬೆಯ ಹೆಸರಿನಲ್ಲಿ ಒಂದು ನಗರವನ್ನು ನಿರ್ಮಿಸಿದನು. ಅಲ್ಲದೆ ಅನೇಕ ಕೋಟೆಗಳು, ಕೆರೆಗಳು ಹಾಗೂ ಅಣೆಕಟ್ಟೆಗಳನ್ನು ನಿರ್ಮಿಸಿದನು. ಇವನಿಗೆ ಕನ್ನಡರಾಜ್ಯರಮಾರಮಣ,ಕವಿಪುಂಗವ, ಕರ್ನಾಟಕಾಂದ್ರಭೋಜ ಮತ್ತು ಯವನರಾಜ್ಯಪ್ರತಿಸ್ಥಾಪನಾಚಾರ್ಯಎಂಬ ಬಿರುದುಗಳಿದ್ದವು.

12) ಸಾಹಿತ್ಯ:

ಕೃಷ್ಣದೇವರಾಯನ ಕಾಲದಲ್ಲಿ ಸಾಹಿತ್ಯ ಸಾಕಷ್ಟು ಹುಲುಸಾಗಿ ಬೆಳೆಯಿತು. ಇವನು ಸ್ವತಃ ಸಂಸ್ಕೃತ ಹಾಗೂ ತೆಲುಗು ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದನು. ಕೃಷ್ಣದೇವರಾಯನು ತೆಲುಗು ಭಾಷೆಯಲ್ಲಿ ಅಮುಕ್ತಮಲ್ಯದ ಹಾಗೂ ಸಂಸ್ಕೃತದಲ್ಲಿ ಜಾಂಬುವತಿ ಕಲ್ಯಾಣ, ಉಷಾಪರಿಣಯ, ಮದಲಸ ಚರಿತ ಮುಂತಾದವುಗಳನ್ನು ರಚಿಸಿದನು. ಇವನ ಆಸ್ಥಾನದಲ್ಲಿ ಅಷ್ಟದಿಗ್ಗಜರು ಎಂಬ ಎಂಟು ಕವಿಗಳಿದ್ದರು. ಅವರುಗಳೆಂದರೆ.

1. ಅಲ್ಲಸಾನಿ ಪೆದ್ದಣ್ಣ

2. ನಂದಿ ತಿಮ್ಮಣ್ಣ

3. ಮಾದಯ್ಯಗಾರಿ ಮಲ್ಲಣ್ಣ  

4. ರಾಮರಾಜ ಭೂಷಣ

5. ಪಿಂಗಳಿ ಸೂರಣ್ಣ

6. ರಾಮಭದ್ರಿಯ

7.ತೆನಾಲಿ ರಾಮಕೃಷ್ಣ

8. ದೂರ್ಜಟಿ.

ಕೃಷ್ಣದೇವರಾಯ ಒಬ್ಬ ಶ್ರೇಷ್ಠ ಆಡಳಿತಗಾರ, ರಾಜನೀತಿನಿಪುಣ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಮಹಾಪೋಷಕನಾಗಿದ್ದನು. ಕೃಷ್ಣದೇವರಾಯ ಉತ್ತಮ ಕವಿ, ನ್ಯಾಯಪರ ಹಾಗೂ ನಿಷ್ಪಕ್ಷಪಾತಿ ದೊರೆಯಾಗಿದ್ದನು. ಪೋರ್ಚುಗೀಸ್ ಪ್ರವಾಸಿ ಪೇಯಿಸ್ ಹೇಳಿರುವಂತೆ “ರಾಯನು ಮಧ್ಯಮ ಎತ್ತರದವನಾಗಿದ್ದು ಆಕರ್ಷಕ ಮೈಬಣ್ಣ ಹಾಗೂ ಮೈಕಟ್ಟನ್ನು ಹೊಂದಿದ್ದಾನೆ. ಇವನ ಮುಖದ ಮೇಲೆ ಸಿಡುಬಿನ ಕಲೆಗಳಿವೆ. ಇವನು ಸದಾ ಹಸನ್ಮುಖಿಯಾಗಿದ್ದು ವಿನೋಧಪರನಾಗಿದ್ದಾನೆ” ಎಂದಿದ್ದಾನೆ.

ಮಹಮ್ಮದ್-ಬಿನ್ – ತುಘಲಕನ  ಆಡಳಿತಾತ್ಮಕ ಪ್ರಯೋಗಗಳು

ಮಹಮ್ಮದ್-ಬಿನ್ – ತುಘಲಕನ ಆಡಳಿತಾತ್ಮಕ ಪ್ರಯೋಗಗಳು

ಮಹಮ್ಮದ್-ಬಿನ್-ತುಘಲಕನು(1325-1351) ಘಿಯಾಸುದ್ದೀನ್ ತುಘಲಕನ ಮಗ ಹಾಗೂ ತುಘಲಕ್ ಸಂತತಿಯ ಶ್ರೇಷ್ಠ ದೊರೆ. ಬಾಲ್ಯದಲ್ಲಿ ಮಹಮ್ಮದ್ ಬಿನ್ ತುಗಲಕ್ ಪ್ರತಿಭಾವಂತನಾಗಿದ್ದು ಪರ್ಶಿಯನ್, ಅರೇಬಿಕ್ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದನು. ಇತಿಹಾಸ, ಗಣಿತ, ಅರ್ಥಶಾಸ್ತ್ರ, ತರ್ಕಶಾಸ್ತ್ರ, ಖಗೋಳಶಾಸ್ತ್ರ ಹಾಗೂ ತತ್ವಶಾಸ್ತ್ರಗಳಲ್ಲಿ ಪಾರಂಗತನಾಗಿದ್ದನು. ಮಹಮ್ಮದ್-ಬಿನ್-ತುಘಲಕ್ ತನ್ನ ತಂದೆಗೆ ಸಿಂಹಾಸನವನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದನು. ಇವನು ತನ್ನ ತಂದೆಯ ಅಧಿಕಾರಾವಧಿಯಲ್ಲಿ ವಾರಂಗಲ್ಲಿನ ಮೇಲೆ ಸತತವಾಗಿ ಎರಡು ಬಾರಿ ದಂಡಯಾತ್ರೆ ಕೈಗೊಂಡು ಯಶಸ್ವಿಯಾದನು. ಇದರಿಂದ ಸುಪ್ರೀತನಾದ ಘಿಯಾಸುದ್ದೀನ್ ಮಗನಿಗೆ ‘ಜುನಾಖಾನ್’ ಎಂಬ ಬಿರುದನ್ನು ಕೊಟ್ಟು ಗೌರವಿಸಿದನು.

ಸಿಂಹಾಸನಾರೋಹಣ:

ಘಿಯಾಸುದ್ದೀನನ ಮರಣದ ನಂತರ ಅವನ ಹಿರಿಯ ಮಗನಾದ ಜುನಾಖಾನನು ಮಹಮ್ಮದ್-ಬಿನ್- ತುಘಲಕ್ ಎಂಬ ಹೆಸರಿನಿಂದ ಸಾ.ಶ.1325ರಲ್ಲಿ ಸಿಂಹಾಸನಕ್ಕೆ ಬಂದನು. ಇವನು ಸುಮಾರು 25 ವರ್ಷಗಳ ಕಾಲ ದೆಹಲಿಯ ಸುಲ್ತಾನನಾಗಿದ್ದನು.

ಮಹಮ್ಮದ್-ಬಿನ್-ತುಘಲಕ್‌ ದಂಡಯಾತ್ರೆಗಳು:
1) ವಾರಂಗಲ್ ಆಕ್ರಮಣ (1323):

ಮಹಮ್ಮದ್-ಬಿನ್-ತುಘಲಕ್ ಸಾ.ಶ. 1323 ರಲ್ಲಿ ವಾರಂಗಲ್ ಮೇಲೆ ದಾಳಿ ಮಾಡಿ ಅಲ್ಲಿನ ದೊರೆ ಪ್ರತಾಪರುದ್ರನನ್ನು ಸೋಲಿಸಿದನು. ಸೋತ ಪ್ರತಾಪರುದ್ರನು ತುಗಲಕ್‌ನಿಗೆ ಕಪ್ಪಕಾಣಿಕೆಗಳನ್ನು ನೀಡಿ ಆತನ ಸಾರ್ವಭೌಮತ್ವವನ್ನು ಒಪ್ಪಿಕೆ ಅಂಡನು.

2) ನಾಗರಕೋಟೆ ಆಕ್ರಮಣ (1337):

ಪಂಜಾಬಿನ ಕಾಂಗ್ರಾ ಜಿಲ್ಲೆಯಲ್ಲಿರುವ ನಾಗರಕೋಟೆಯನ್ನು ಸಾ. ಶ. 1337 ರಲ್ಲಿ ಮುತ್ತಿದ ಮಹಮ್ಮದ್-ಬಿನ್-ತುಘಲಕ್ ಅಲ್ಲಿನ ಹಿಂದೂ ರಾಜನನ್ನು ಸೋಲಿಸಿ ನಾಗರಕೋಟೆಯನ್ನು ವಶಪಡಿಸಿಕೊಂಡನು.

3) ಮಧ್ಯ ಏಷ್ಯಾದ ಆಕ್ರಮಣ:

ಮಧ್ಯ ಏಷ್ಯಾದ ಖೋರಾಸನ್, ಇರಾಕ್ ಹಾಗೂ ಟ್ರಾನ್ಸ್ ಆಕ್ಸಿಯಾನಾ ಪ್ರದೇಶಗಳನ್ನು ಗೆಲ್ಲುವ ಆಸೆಯಿಂದ ಮಹಮ್ಮದ್-ಬಿನ್-ತುಘಲಕ್ 3,70,000ದಷ್ಟು ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿ ಮುಂಗಡವಾಗಿ ಒಂದು ವರ್ಷದ ವೇತನವನ್ನು ನೀಡಿದ. ಯುದ್ಧೋಪಕರಣಗಳ ಖರೀದಿಗಾಗಿ ಲಕ್ಷಾಂತರ ರೂಪಾಯಿ ಖರ್ಚುಮಾಡಿದ. ಯುದ್ಧದ ಮೊದಲೇ ಅವನ ಬೊಕ್ಕಸವಲ್ಲಾ ಬರಿದಾಯಿತು. ಆದರೆ ಈ ಪ್ರದೇಶಗಳ ದಾಳಿಯ ಸಂದರ್ಭದಲ್ಲಿ ಆಗುವ ತೊಂದರೆಯನ್ನು ನೆನೆದು ಈ ದಂಡಯಾತ್ರೆಯನ್ನು ಕೈಬಿಟ್ಟನು.

4) ಕಾರಾಜಲ್ ಗಂಡಯಾತ್ರೆ (1337-38):

ಭಾರತ ಹಾಗೂ ಚೀನಾದ ಗಡಿ ಪ್ರದೇಶವಾಗಿದ್ದ ಕಾರಾಜಲ್ ಯೋಜನೆಯೊಂದನ್ನು ರೂಪಿಸಿದ ಮಹಮ್ಮದ್-ಬಿನ್-ತುಘಲಕ್‌ನು ಖುಸ್ರು ಮಲಿಕನ ನೇತೃತ್ವದಲ್ಲಿ ಕಾರಾಜಲ್ ವಿರುದ್ಧ ಒಂದು ಸೈನ್ಯವನ್ನು ಕಳುಹಿಸಿದನು. ಆದರೆ ಅಲ್ಲಿನ ಚಳಿ, ಗಾಳಿ, ಹಿಮ ಹಾಗೂ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾವಿರಾರು ಸೈನಿಕರು ಸಾವಿಗೀಡಾದರು. ಈ ದಂಡಯಾತ್ರೆಯಲ್ಲಿ ಭಾಗವಹಿಸಿದ್ದ ಒಟ್ಟು 10,000 ಸೈನಿಕರಲ್ಲಿ ಕೇವಲ 10 ಮಂದಿ ಸೈನಿಕರು ಮಾತ್ರ ಬದುಕುಳಿದು ಬಂದರೆಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಮಹಮ್ಮದ್-ಬಿನ್-ತುಘಲಕ್‌ ಸುಧಾರಣೆಗಳು: ಆಡಳಿತಾತ್ಮಕ ಪ್ರಯೋಗಗಳು
1) ದೋ ಅಬ್-ಪ್ರದೇಶಗಳಲ್ಲಿ ತೆರಿಗೆ ಹೆಚ್ಚಳ:

ಗಂಗಾ-ಯಮುನಾ ನಡುವಿನ ಬಯಲು ಪ್ರದೇಶವೇ ದೋ-ಅಬ್. ಇದು ಸಂಪದ್ಭರಿತ ಪ್ರದೇಶವಾಗಿದ್ದರಿಂದ ತುಘಲಕ್ ವಿವೇಚನೆ ಇಲ್ಲದೆ ಆ ಪ್ರದೇಶದಲ್ಲಿ ತೆರಿಗೆ ದರವನ್ನು ಹೆಚ್ಚಿಸಿದ. ಇದಕ್ಕೆ ಕಾರಣವೆಂದರೆ

ಎ) ದೋ-ಅಬ್ ಪ್ರದೇಶದ ಜನರು ಶ್ರೀಮಂತರೂ ಹಾಗೂ ಕ್ರಾಂತಿಕಾರಿಗಳಾಗಿದ್ದುದು,

ಬಿ) ಸುಲ್ತಾನನು ತನ್ನ ಸೈನ್ಯವನ್ನು ಹೆಚ್ಚಿಸುವುದು ಮತ್ತು ಆಡಳಿತ ವರ್ಗವನ್ನು ದಕ್ಷತೆಯಿಂದ ವ್ಯವಸ್ಥೆಗೊಳಿಸುವುದು.

ಈ ಕಾರಣಗಳನ್ನು ಮುಂದಿಟ್ಟುಕೊಂಡು ಸುಲ್ತಾನ ತೆರಿಗೆಯಲ್ಲಿ 10-20 ಪಟ್ಟು ಹೆಚ್ಚಳವನ್ನು ಮಾಡಿದನು. ಇದರ ಜೊತೆಗೆ ಮನೆಗಂದಾಯ (ಗರಿ) ಮತ್ತು ಗೋಮಾಳ (ಚರಾಯಿ) ತೆರಿಗೆಗಳಲ್ಲೂ ಹೆಚ್ಚಳ ಕಂಡುಬಂದಿತು. ದೋ-ಅಬ್ ಜನತೆ ಹೆಚ್ಚಿನ ಕಂದಾಯ ನೀಡಲಾಗದೆ ಬಡತನಕ್ಕೆ ತಳ್ಳಲ್ಪಟ್ಟರು. ಅದೇ ವರ್ಷ ದೋ-ಅಬ್ ಪ್ರದೇಶ ಬರಗಾಲಕ್ಕೆ ತುತ್ತಾಯಿತು. ಹೀಗಾಗಿ ರೈತರು ಸರ್ಕಾರಕ್ಕೆ ತೆರಿಗೆಯನ್ನು ನೀಡಲು ಮುಂದೆ ಬರಲಿಲ್ಲ. ಆದರೆ ಕಂದಾಯ ಅಧಿಕಾರಿಗಳು ಮಾತ್ರ ತೆರಿಗೆ ವಸೂಲಿ ಕಾರ್ಯವನ್ನು ನಿಲ್ಲಿಸಲಿಲ್ಲ. ಎಷ್ಟೋ ಜನ ಕಂದಾಯ ನೀಡಲು ವಿಫಲರಾಗಿ ಕಾಡಿಗೆ ಓಡಿಹೋದರು. ಇದರಿಂದ ಕುಪಿತಗೊಂಡ ಸುಲ್ತಾನ ಕಾಡಿನಲ್ಲಿ ಅಡಗಿಕೊಂಡಿದ್ದ ರೈತರನ್ನು ಕಾಡು ಮೃಗಗಳಂತೆ ಬೇಟೆಯಾಡಿದ. ತುಘಲಕ್‌ನ ಕಂದಾಯ ನೀತಿಯನ್ನು ಭರಣಿ ಈ ರೀತಿ ವಿವರಿಸಿದ್ದಾನೆ. “ರೈತರ ಬೆನ್ನು ಮುರಿಯಲಾಯಿತು. ಶ್ರೀಮಂತರು ದಂಗೆಕೋರರಾದರು.ಭೂಮಿ ಪಾಳು ಬಿದ್ದಿತು. ಸಾಗುವಳಿ ನಿಂತು ಹೋಯಿತು. ಸಾವಿರಾರು ಜನರು ಹಸಿವಿನಿಂದ ಸತ್ತರು”.ಮಹಮ್ಮದ್ ಬಿನ್-ತುಗಲಕ’ನಿಗೆ ತಡವಾಗಿ ಜ್ಞಾನೋದಯವಾಯಿತು. ತನ್ನ ಮನಸ್ಥಿತಿಯನ್ನು ತಿದ್ದಿಕೊಂಡು ಊರು ಬಿಟ್ಟು ಕಾಡಿಗೆ ಓಡಿ ಹೋಗಿದ್ದ ಜನರನ್ನು ಮತ್ತೆ ನಗರಕ್ಕೆ ಬರುವಂತೆ ವಿನಂತಿಸಿಕೊಂಡನು. ಕ್ಷಾಮ ಪರಿಹಾರಕ್ಕಾಗಿ ಕೆರೆ, ಬಾವಿ ಹಾಗೂ ಕಾಲುವೆಗಳನ್ನು ನಿರ್ಮಿಸಿದನು. ಕೃಷಿಕರಿಗೆ ಸಾಲ ನೀಡಿದನು. ಅವನು ನೀಡಿದ ಪರಿಹಾರಗಳು ಜನರಿಗೆ ತಲುಪಲಿಲ್ಲ. ಪರಿಣಾಮವಾಗಿ ಈ ಯೋಜನೆ ಸಂಪೂರ್ಣವಾಗಿ ವಿಫಲಗೊಂಡಿತು.

2) ರಾಜಧಾನಿ ಬದಲಾವಣೆ(1327):

ಸುಲ್ತಾನನು ಕೈಗೊಂಡ ಆಡಳಿತಾತ್ಮಕ ಪ್ರಯೋಗಗಳಲ್ಲಿ ರಾಜಧಾನಿ ಬದಲಾವಣೆಯು ಒಂದು. ಇವನು ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವರ್ಗಾಯಿಸಿ ಅದಕ್ಕೆ ದೌಲತಾಬಾದ್ ಎಂದು ಹೆಸರಿಸಿದನು. ಈ ರೀತಿಯ ವರ್ಗಾವಣೆಗೆ ಮಹಮ್ಮದ್ ಬಿನ್ ತುಘಲಕ್ಕು ಕೊಡುವ ಕಾರಣಗಳೆಂದರೆ,

1) ದೌಲತಾಬಾದ್ ಉತ್ತರದ ದೆಹಲಿಯಿಂದ ಸಾಮ್ರಾಜ್ಯದ ಕೇಂದ್ರ ಭಾಗದಲ್ಲಿದ್ದು ವಿವಿಧ ಭಾಗಗಳಿಗೆ ಸಂಪರ್ಕವಿಟ್ಟುಕೊಳ್ಳಲು ಸುಲಭವಾಗಿತ್ತು.

2) ಉತ್ತರ ಭಾರತಕ್ಕಿಂತ ಇದು ಹೆಚ್ಚು ಫಲವತ್ತಾಗಿತ್ತು.

3) ಉತ್ತರ ಭಾರತಕ್ಕೆ ಮೀಸಲಾಗಿದ್ದ ಇಸ್ಲಾಂ ಧರ್ಮವನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸುವುದು.

4) ಪದೇ ಪದೆ ಸಂಭವಿಸುತ್ತಿದ್ದ ಮಂಗೋಲರ ದಾಳಿಗಳಿಂದ ರಾಜ್ಯವನ್ನು ರಕ್ಷಿಸುವುದು.

ರಾಜಧಾನಿಯನ್ನು ಬದಲಾಯಿಸಲು ನಿರ್ಧರಿಸಿದ ಮಹಮ್ಮದ್-ಬಿನ್-ತುಘಲಕ್ ದೆಹಲಿಯ ಸಮಸ್ತ ಜನರನ್ನು ದೌಲತಾಬಾದಿಗೆ ಹೋಗಬೇಕೆಂದು ಆಜ್ಞಾಪಿಸಿದನು. ಈ ಎರಡು ನಗರಗಳ ನಡುವಿನ ದೂರ ಸುಮಾರು 1120 ಕಿ.ಮೀಟರ್‌ಗಳಾಗಿದ್ದು ಜನರ ಪ್ರಯಾಣಕ್ಕಾಗಿ ಬೊಕ್ಕಸದಿಂದ ಸಾಕಷ್ಟು ಹಣವನ್ನು ವಿನಿಯೋಗಿಸಿದನು. ದೆಹಲಿ ಮತ್ತು ದೌಲತಾಬಾದ್‌ಗಳ ನಡುವೆ ರಸ್ತೆಗಳ ನಿರ್ಮಾಣ, ಇಕ್ಕೆಲಗಳಲ್ಲಿ ಛತ್ರಗಳ ನಿರ್ಮಾಣ, ಇತ್ಯಾದಿಗೆ ನೀರಿನಂತೆ ಹಣ ಖರ್ಚಾಯಿತು. ರಾಜನ ಆಜ್ಞೆಯಂತೆ ದೆಹಲಿಯ ಜನ ತಮ್ಮ ಗಂಟುಮೂಟೆಗಳೊಂದಿಗೆ ದೌಲತಾಬಾದಿಗೆ ಪ್ರಯಾಣಿಸಿದರು. ಆದರೆ ಒಬ್ಬ ಕುರುಡ ಹಾಗೂ ಕುಂಟ ಮಾತ್ರ ತಮ್ಮ ಪೂರ್ವಜರು ನೆಲಸಿದ ನಾಡನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. ಆಗ ಕುಂಟನನ್ನು ಕೊಲ್ಲಲಾಯಿತು. ಕುರುಡನನ್ನು ಆನೆಯ ಕಾಲಿಗೆ ಕಟ್ಟಿ ಎಳೆದೊಯ್ಯಲಾಯಿತು. ಎಳೆದುಕೊಂಡು ಹೋಗುವ ರಭಸಕ್ಕೆ ಅವನ ಒಂದು ಕಾಲು ಮಾತ್ರ ದೇವಗಿರಿಯನ್ನು ತಲುಪಿತು ಎಂದು ಇಬ್ಬಬತೂತ ವಿವರಿಸಿದ್ದಾನೆ. ಪ್ರಯಾಣದ ಸಂದರ್ಭದಲ್ಲಿ ಸಾವಿರಾರು ಜನರು ಅಸುನೀಗಿದರು. ದೆಹಲಿಯಲ್ಲಿ ಈಗ ಒಂದು ನರಪಿಳ್ಳೆಯೂ ಇರಲಿಲ್ಲ. ಅಲ್ಲಿ ಸ್ಮಶಾನ ಮೌನ ಆವರಿಸಿತು. ಈ ರೀತಿ ಜನರ ಮಾನಸಿಕ ತೊಳಲಾಟವನ್ನು, ದೈಹಿಕ ಹಿಂಸೆಯನ್ನು ಕಂಡ ಮಹಮ್ಮದ್ ಬಿನ್-ತುಘಲಕ್ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಮೂರ್ಖತನದ ನಿರ್ಣಯವನ್ನು ಕೈಗೊಂಡನು. ಎಲ್ಲಾ ಜನರು ದೌಲತಾಬಾದಿನಿಂದ ದೆಹಲಿಗೆ ತೆರಳಬೇಕೆಂದು ಆಜ್ಞೆ ಹೊರಡಿಸಿದನು. ಇದನ್ನು ಕೇಳಿ ಜನರ ಜಂಗಾಬಲವೇ ಉಡುಗಿಹೋಯಿತು. ಮತ್ತೆ ಅವರು ದೆಹಲಿಯ ಕಡೆಗೆ ಪ್ರಯಾಣಿಸಿದರು. ಈ ಅವಧಿಯಲ್ಲಿ ಮತ್ತಷ್ಟು ಜನರು ಸತ್ತರು. ದೆಹಲಿಗೆ ಹೋದ ಮೇಲೆ ಜನರಿಗಾದ ನಷ್ಟವನ್ನು ತುಂಬಿಕೊಡಲು ಸುಲ್ತಾನ ಸಾಕಷ್ಟು ಪ್ರಯತ್ನಿಸಿದನು. ದೇಶದ ವಿವಿಧ ಭಾಗಗಳಿಂದ ವಿದ್ವಾಂಸರು ಹಾಗೂ ವ್ಯಾಪಾರಿಗಳನ್ನು ಆಮಂತ್ರಿಸಿದನು. ಇದಕ್ಕೆ ಯಾರು ಸೊಪ್ಪು ಹಾಕಲಿಲ್ಲ. ಹೀಗಾಗಿ ದೆಹಲಿ ತನ್ನ ಮೊದಲಿನ ವೈಭವವನ್ನು ಪುನ: ಪಡೆಯಲು ಹಲವಾರು ವರ್ಷಗಳನ್ನೇ ತೆಗೆದುಕೊಂಡಿತೆಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

3) ತಾಮ್ರದ ನಾಣ್ಯ ಚಲಾವಣೆ:

ಮಹಮ್ಮದ್-ಬಿನ್-ತುಘಲಕ್ ಇಲ್ಲಿವರೆಗೆ ಕೈಗೊಂಡ ಕಂದಾಯ ಏರಿಕೆ, ರಾಜಧಾನಿ ಬದಲಾವಣೆ ಹಾಗೂ ಕೃಷಿಕಾರ್ಯದಲ್ಲಿ ಆದ ಬದಲಾವಣೆಗಳಿಂದ ರಾಜ್ಯದ ಬೊಕ್ಕಸ ಬರಿದಾಯಿತು.ಆಗ ಅವನಿಗೆ ಏನುಮಾಡಲು ತೋಚದಿದ್ದಾಗ ಚಿನ್ನದ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು. ಒಂದು ಆಜ್ಞೆಯನ್ನು ಹೊರಡಿಸಿ ಇನ್ನು ಮುಂದೆ ತಾಮ್ರದ ನಾಣ್ಯಗಳನ್ನು ಚಿನ್ನದ ನಾಣ್ಯಗಳ ಬದಲಾಗಿ ಎಲ್ಲಾ ವ್ಯವಹಾರಗಳಲ್ಲಿ ಉಪಯೋಗಿಸಬಹುದೆಂದು, ಈ ನಾಣ್ಯಗಳು ಚಿನ್ನದ ನಾಣ್ಯಗಳಿಗೆ ಸಮವಾಗಿವೆ ಎಂದು ಘೋಷಿಸಿದನು. ತಾಮ್ರದ ನಾಣ್ಯಗಳನ್ನು ಟಂಕಿಸುವ ಅಧಿಕಾರವನ್ನು ಖಾಸಗಿ ವ್ಯಕ್ತಿಗಳಿಗೂ ನೀಡಿದನು. ಇವರಿಗೆ ನಾಣ್ಯಗಳನ್ನು ಟಂಕಿಸುವಾಗ ಯಾವುದೇ ನಿರ್ಬಂಧಗಳನ್ನು ಹೇರಿರಲಿಲ್ಲವಾದ್ದರಿಂದ ಇವರು ಖೋಟಾ ನಾಣ್ಯಗಳನ್ನು ಟಂಕಿಸಲು ಆರಂಭಿಸಿದರು. ಪರಿಣಾಮವಾಗಿ ಪ್ರತಿಯೊಂದು ಮನೆಯೂ ಖೋಟಾ ನಾಣ್ಯಗಳ ಟಂಕಶಾಲೆಯಾಗಿ ಪರಿವರ್ತಿತವಾಯಿತು. ಜನಸಾಮನ್ಯರು ತಮ್ಮಲ್ಲಿರುವ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಭದ್ರಪಡಿಸಿಕೊಂಡು ಖೋಟಾ ನಾಣ್ಯಗಳನ್ನೇ ತೆರಿಗೆಯಾಗಿ ಸಲ್ಲಿಸಲು ಆರಂಭಿಸಿದರು. ಇವರ ಜೊತೆ ಸೇರಿ ಸರ್ಕಾರಿ ಅಧಿಕಾರಿಗಳೂ ಸುಲ್ತಾನನಿಗೆ ಮೋಸಮಾಡಿದರು. ಹೀಗಾಗಿ ಸರ್ಕಾರದ ಖಜಾನೆಯಲ್ಲಿ ತಾಮ್ರದ ನಾಣ್ಯಗಳ ರಾಶಿಯೇ ಕಂಡುಬಂದಿತು. ವ್ಯಾಪಾರ ಕುಸಿಯಿತು, ಹಣದ ಮೌಲ್ಯ ‘ಒಡೆದ ಮಡಿಕೆಯ ಚೂರಾಯಿತು!’ ರಾಜ್ಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳ ಅಭಾವ ಕಂಡು ಬಂದಿತು. ಇದರಿಂದ ಗೊಂದಲಕ್ಕೆ ಸಿಲುಕಿದಂತಾದ ಸುಲ್ತಾನನು ತಾಮ್ರದ ನಾಣ್ಯಗಳ ಚಲಾವಣೆಯನ್ನು ರದ್ದು ಪಡಿಸಿದನು. ಮತ್ತೊಂದು ಆಜ್ಞೆಯನ್ನು ಹೊರಡಿಸಿ ತಾಮ್ರದ ನಾಣ್ಯಗಳನ್ನು ಹಿಂತಿರುಗಿಸಿ ಅದರ ಮುಖಬೆಲೆಯ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಪಡೆಯುವಂತೆ ಜನರಿಗೆ ತಿಳಿಸಿದನು.ಆಗ ಜನ ತಮ್ಮ ಬಳಿಯಿದ್ದ ಮೂಟೆಗಟ್ಟಲೆ ತಾಮ್ರದ ನಾಣ್ಯಗಳನ್ನು ಹಿಂತಿರುಗಿಸಿ ಅಪ್ಪಟ್ಟ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಪಡೆದುಕೊಂಡರು. ಹೀಗೆ ಸುಲ್ತಾನ ತನ್ನ ಪ್ರಜೆಗಳಿಂದಲೇ ಮೋಸಹೋದನು. ಸಂಗ್ರಹವಾದ ರಾಶಿರಾಶಿ ತಾಮ್ರದ ನಾಣ್ಯಗಳು ಸುಲ್ತಾನನ ಮೂರ್ಖತನದ ವೈಪಲ್ಯವನ್ನು ಸಾರುತ್ತಾ ಬಿದ್ದಿದ್ದವು. ಸುಲ್ತಾನನ ಈ ಮೇಲಿನ ಆಡಳಿತಾತ್ಮಕ ಪ್ರಯೋಗಗಳು ಸಂಪೂರ್ಣ ವಿಫಲಗೊಂಡವು. ಈ ಕಾರಣದಿಂದಾಗಿ ಮಹಮ್ಮದ್ ಬಿನ್ ತುಘಲಕನನ್ನು ದ್ವಂದ್ವಗಳ ಮಿಶ್ರಣ(ವೈರುದ್ಯಗಳ) ಎಂದು ಕರೆಯಲಾಗುತ್ತದೆ.

ಘೋರಿ ಮಹಮ್ಮದನ ಆಕ್ರಮಣಗಳು ಮತ್ತು ಅವುಗಳ ಪರಿಣಾಮಗಳು

ಘೋರಿ ಮಹಮ್ಮದನ ಆಕ್ರಮಣಗಳು ಮತ್ತು ಅವುಗಳ ಪರಿಣಾಮಗಳು

ಉತ್ತರ ಭಾರತದಲ್ಲಿ ಮುಸ್ಲಿಂ ಆಳ್ವಿಕೆಯ ಸಂಸ್ಥಾಪಕರಾದ ಘೋರಿಯ ಮುಹಮ್ಮದ್, ಉಪಖಂಡದ ಮಧ್ಯಕಾಲೀನ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 12 ನೇ ಶತಮಾನದ ಉತ್ತರಾರ್ಧದಲ್ಲಿ ಅವನ ಆಕ್ರಮಣಗಳು ಹೊಸ ಯುಗದ ಆರಂಭವನ್ನು ಗುರುತಿಸಿದವು, ದೆಹಲಿ ಸುಲ್ತಾನರ ಸ್ಥಾಪನೆಗೆ ಮತ್ತು ಪ್ರದೇಶದಾದ್ಯಂತ ಇಸ್ಲಾಂ ಧರ್ಮದ ಹರಡುವಿಕೆಗೆ ದಾರಿ ಮಾಡಿಕೊಟ್ಟಿತು. ಅವನ ಆಕ್ರಮಣಗಳು ಮತ್ತು ಅವುಗಳ ಆಳವಾದ ಪರಿಣಾಮಗಳ ವಿವರವಾದ ಪರಿಶೋಧನೆಯನ್ನು ಕೆಳಗೆ ನೀಡಲಾಗಿದೆ.

ಘೋರಿಯ ಮಹಮ್ಮದನ ಹಿನ್ನೆಲೆ

1. ಘೋರ್ (ಇಂದಿನ ಅಫ್ಘಾನಿಸ್ತಾನ) ನಲ್ಲಿ ಜನಿಸಿದ ಘೋರಿಯ ಮುಹಮ್ಮದ್ (ಮುಯಿಜ್ ಅಲ್-ದಿನ್ ಎಂದೂ ಕರೆಯುತ್ತಾರೆ) ಘಜ್ನಾವಿಡ್ ಸಾಮ್ರಾಜ್ಯವನ್ನು ಉರುಳಿಸಿದ ನಂತರ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ ಘುರಿದ್ ರಾಜವಂಶದ ಪ್ರಮುಖ ನಾಯಕರಾಗಿದ್ದರು.

2. ಘಜ್ನಿಯ ಮಹಮೂದ್ ನೇತೃತ್ವದ ಹಿಂದಿನ ಘಜ್ನಾವಿಡ್ ಆಕ್ರಮಣಗಳಿಗಿಂತ ಭಿನ್ನವಾಗಿ, ಲೂಟಿಯ ಮೇಲೆ ಕೇಂದ್ರೀಕರಿಸಿದ, ಘೋರಿಯ ಮುಹಮ್ಮದ್ ಭಾರತದಲ್ಲಿ ಶಾಶ್ವತ ರಾಜಕೀಯ ನಿಯಂತ್ರಣವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದನು.

3. ಭಾರತದ ಸಂಪತ್ತು ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಗುರುತಿಸಿ, ಅವರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಮಿಲಿಟರಿ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದರು.

ಪ್ರಮುಖ ಆಕ್ರಮಣಗಳು
1. ಮೊದಲ ತರೈನ್ ಕದನ (1191)

 * ಘೋರಿಯ ಮುಹಮ್ಮದ್ ಅಜ್ಮೀರ್ ಮತ್ತು ದೆಹಲಿಯ ಪ್ರಬಲ ರಜಪೂತ ರಾಜ ಪೃಥ್ವಿರಾಜ್ ಚೌಹಾನ್ ಅವರನ್ನು ಎದುರಿಸಿದರು.  ಯುದ್ಧವು ತರೈನ್ (ಇಂದಿನ ಹರಿಯಾಣ) ಬಳಿ ನಡೆಯಿತು.

* ರಜಪೂತ ಸೇನೆಯು ಘೋರಿಯ ಮುಹಮ್ಮದ್‌ನನ್ನು ನಿರ್ಣಾಯಕವಾಗಿ ಸೋಲಿಸಿತು, ಘಜ್ನಿಯಲ್ಲಿನ ಅವನ ನೆಲೆಗೆ ಹಿಮ್ಮೆಟ್ಟುವಂತೆ ಒತ್ತಾಯಿಸಿತು.

 * ಈ ಸೋಲು ಗಮನಾರ್ಹ ಹಿನ್ನಡೆಯಾಗಿತ್ತು, ಆದರೆ ಘೋರಿಯ ಮುಹಮ್ಮದ್ ಎರಡನೇ ಕಾರ್ಯಾಚರಣೆಗೆ ನಿಖರವಾಗಿ ಸಿದ್ಧಪಡಿಸಿದರು.

2. ಎರಡನೇ ತರೈನ್ ಕದನ (1192)

* ಘೋರಿಯ ಮುಹಮ್ಮದ್ ಉತ್ತಮವಾದ ಮಿಲಿಟರಿ ತಂತ್ರಗಳನ್ನು ಮತ್ತು ಶಿಸ್ತಿನ ಅಶ್ವಸೈನ್ಯವನ್ನು ಬಳಸಿಕೊಂಡು ಸುಸಂಘಟಿತ ಸೈನ್ಯದೊಂದಿಗೆ ಹಿಂದಿರುಗಿದನು.

* ಪೃಥ್ವಿರಾಜ್ ಚೌಹಾಣ್ ನೇತೃತ್ವದ ರಜಪೂತ ಒಕ್ಕೂಟವು ಈ ಯುದ್ಧದಲ್ಲಿ ಸೋತಿತು. ಪೃಥ್ವಿರಾಜ್ ನನ್ನು ಸೆರೆಹಿಡಿದು ನಂತರ ಗಲ್ಲಿಗೇರಿಸಲಾಯಿತು.

* ತಾರೈನ್‌ನಲ್ಲಿನ ವಿಜಯವು ಉತ್ತರ ಭಾರತದ ದ್ವಾರಗಳನ್ನು ಘೋರಿಯ ಮುಹಮ್ಮದ್‌ಗೆ ತೆರೆಯಿತು, ಈ ಪ್ರದೇಶದಲ್ಲಿ ಮುಸ್ಲಿಂ ರಾಜಕೀಯ ಪ್ರಾಬಲ್ಯದ ಆರಂಭವನ್ನು ಗುರುತಿಸಿತು.

3. ದೆಹಲಿ ಮತ್ತು ಅಜ್ಮೀರ್ ವಿಜಯ

* ಎರಡನೇ ತರೈನ್ ಕದನದ ನಂತರ, ಘೋರಿಯ ಮುಹಮ್ಮದ್ ದೆಹಲಿ ಮತ್ತು ಅಜ್ಮೀರ್ ಮೇಲೆ ತನ್ನ ನಿಯಂತ್ರಣವನ್ನು ಕ್ರೋಢೀಕರಿಸಿದನು, ತನ್ನ ವಿಶ್ವಾಸಾರ್ಹ ಜನರಲ್ ಕುತುಬ್-ಉದ್-ದಿನ್ ಐಬಕ್ನನ್ನು ಗವರ್ನರ್ ಆಗಿ ನೇಮಿಸಿದನು.

* ದೆಹಲಿಯು ಮುಸ್ಲಿಂ ಆಡಳಿತದ ಅಡಿಯಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿ ಹೊರಹೊಮ್ಮಿತು.

4. ಬಂಗಾಳ ಮತ್ತು ಬಿಹಾರದ ವಿಜಯ (1194–1199)

* ಘೋರಿಯ ಮುಹಮ್ಮದ್ ಮತ್ತು ಅವನ ಸೇನಾಪತಿಗಳು, ವಿಶೇಷವಾಗಿ ಭಕ್ತಿಯಾರ್ ಖಿಲ್ಜಿ, ಬಂಗಾಳ ಮತ್ತು ಬಿಹಾರವನ್ನು ವಶಪಡಿಸಿಕೊಂಡು ಪೂರ್ವಕ್ಕೆ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಿದರು.

* ಇದು ಫಲವತ್ತಾದ ಗಂಗಾ ಬಯಲು ಪ್ರದೇಶವನ್ನು ಘುರಿದ್ ನಿಯಂತ್ರಣಕ್ಕೆ ತಂದಿತು, ಉತ್ತರ ಭಾರತದಲ್ಲಿ ಅವರ ಹಿಡಿತವನ್ನು ಮತ್ತಷ್ಟು ಬಲಪಡಿಸಿತು.

ಮುಹಮ್ಮದ್ ಆಫ್ ಘೋರಿಯ ಆಕ್ರಮಣಗಳ ಪರಿಣಾಮಗಳು
1. ಭಾರತದಲ್ಲಿ ಮುಸ್ಲಿಂ ಆಡಳಿತದ ಅಡಿಪಾಯ:

* ಮುಹಮ್ಮದ್ ಆಫ್ ಘೋರಿಯ ಆಕ್ರಮಣಗಳು ಮೂರು ಶತಮಾನಗಳಿಗೂ ಹೆಚ್ಚು ಕಾಲ ಉತ್ತರ ಭಾರತವನ್ನು ಆಳಿದ ದೆಹಲಿ ಸುಲ್ತಾನರ ಸ್ಥಾಪನೆಗೆ ಅಡಿಪಾಯ ಹಾಕಿದವು.

* ಇದು ಭಾರತೀಯ ಇತಿಹಾಸದಲ್ಲಿ ಹೊಸ ಯುಗದ ಆರಂಭವನ್ನು ಗುರುತಿಸಿತು, ಗಮನಾರ್ಹವಾದ ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಬದಲಾವಣೆಗಳಿಂದ ನಿರೂಪಿಸಲ್ಪಟ್ಟಿದೆ.

2. ಕೇಂದ್ರೀಕೃತ ಆಡಳಿತದ ಪರಿಚಯ

* ಘೋರಿಯ ಮುಹಮ್ಮದ್ ಪರ್ಷಿಯನ್-ಪ್ರಭಾವಿತ ಆಡಳಿತ ವ್ಯವಸ್ಥೆಯನ್ನು ಪರಿಚಯಿಸಿದನು, ಇದು ಭಾರತದಲ್ಲಿ ಮುಸ್ಲಿಂ ಆಡಳಿತದ ವಿಶಿಷ್ಟ ಲಕ್ಷಣವಾಯಿತು.

* ಭೂ ಕಂದಾಯ ಸಂಗ್ರಹಣೆ, ಸಮರ್ಥ ಸೇನಾ ಸಂಘಟನೆ ಮತ್ತು ಕೇಂದ್ರೀಕೃತ ಅಧಿಕಾರಶಾಹಿಯನ್ನು ಸ್ಥಾಪಿಸಲಾಯಿತು.

3. ಇಸ್ಲಾಂ ಧರ್ಮದ ಹರಡುವಿಕೆ

* ಆಕ್ರಮಣಗಳು ಉತ್ತರ ಭಾರತದಲ್ಲಿ ಇಸ್ಲಾಂ ಧರ್ಮದ ಹರಡುವಿಕೆಯನ್ನು ಸುಲಭಗೊಳಿಸಿದವು.

* ಕಾಲಾನಂತರದಲ್ಲಿ, ಭಾರತೀಯ ಸಮಾಜವು ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯ ಸೇರಿದಂತೆ ಇಂಡೋ-ಇಸ್ಲಾಮಿಕ್ ಸಂಸ್ಕೃತಿಯ ಬೆಳವಣಿಗೆಗೆ ಸಾಕ್ಷಿಯಾಯಿತು.

4. ರಜಪೂತ ಶಕ್ತಿಯ ಕುಸಿತ

* ಪೃಥ್ವಿರಾಜ್ ಚೌಹಾಣ್ ಸೇರಿದಂತೆ ಪ್ರಬಲ ರಜಪೂತ ಆಡಳಿತಗಾರರ ಸೋಲು ಉತ್ತರ ಭಾರತದಲ್ಲಿ ರಜಪೂತ ಪ್ರಾಬಲ್ಯದ ಕುಸಿತವನ್ನು ಗುರುತಿಸಿತು.

* ರಜಪೂತರು ಸಣ್ಣ ರಾಜ್ಯಗಳು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಹಿಮ್ಮೆಟ್ಟಿದರು, ಅಲ್ಲಿ ಅವರು ಮುಸ್ಲಿಂ ವಿಸ್ತರಣೆಯನ್ನು ವಿರೋಧಿಸುವುದನ್ನು ಮುಂದುವರೆಸಿದರು.

5. ಕುತುಬ್-ಉದ್-ದಿನ್ ಐಬಕ್ ಮತ್ತು ದೆಹಲಿ ಸುಲ್ತಾನರು

* 1206 ರಲ್ಲಿ ಘೋರಿಯ ಮುಹಮ್ಮದ್ ಹತ್ಯೆಯ ನಂತರ, ಕುತುಬ್-ಉದ್-ದಿನ್ ಐಬಕ್ ಸ್ವಾತಂತ್ರ್ಯವನ್ನು ಘೋಷಿಸಿದನು ಮತ್ತು ದೆಹಲಿ ಸುಲ್ತಾನರ ಮೊದಲ ರಾಜವಂಶವಾದ ಮಾಮ್ಲುಕ್ (ಗುಲಾಮ) ರಾಜವಂಶವನ್ನು ಸ್ಥಾಪಿಸಿದನು.

* ಕುತುಬ್ ಮಿನಾರ್‌ನಂತಹ ಸ್ಮಾರಕಗಳ ನಿರ್ಮಾಣವು ಹೊಸ ರಾಜಕೀಯ ಮತ್ತು ಸಾಂಸ್ಕೃತಿಕ ಯುಗವನ್ನು ಸಂಕೇತಿಸುತ್ತದೆ.

6. ಆರ್ಥಿಕ ಪರಿಣಾಮ

* ಆಕ್ರಮಣಗಳು ಭಾರತವನ್ನು ಮಧ್ಯ ಏಷ್ಯಾ ಮತ್ತು ಇಸ್ಲಾಮಿಕ್ ಪ್ರಪಂಚದೊಂದಿಗೆ ಹೊಸ ವ್ಯಾಪಾರ ಜಾಲಗಳಿಗೆ ತೆರೆಯಿತು.

* ಭಾರತೀಯ ನಗರಗಳು ವ್ಯಾಪಾರದ ಪ್ರಮುಖ ಕೇಂದ್ರಗಳಾಗಿ ಮಾರ್ಪಟ್ಟವು, ವಿಶಾಲವಾದ ಮಧ್ಯಕಾಲೀನ ವ್ಯಾಪಾರ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಘೋರಿಯ ಆಕ್ರಮಣಗಳ ಮಹಮ್ಮದ್‌ನ ಮಹತ್ವ

ಘೋರಿಯ ಮುಹಮ್ಮದ್‌ನ ಆಕ್ರಮಣಗಳು ಭಾರತೀಯ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ನೀಡಿತು, ಪ್ರಧಾನವಾಗಿ ಪ್ರಾದೇಶಿಕ ಹಿಂದೂ ರಾಜಕೀಯ ಉಪಖಂಡದ ಭೂದೃಶ್ಯವು  ಇಸ್ಲಾಮಿಕ್ ಪ್ರಭಾವಕ್ಕೆ ಒಳಗಾಗಲು ಪ್ರೇರೇಪಿಸಿತು. ಅವರ ಪ್ರಾಬಲ್ಯವು ಶತಮಾನಗಳ ಕಾಲ ಮುಸ್ಲಿಂ ಆಳ್ವಿಕೆಯ ಚೌಕಟ್ಟನ್ನು ಸ್ಥಾಪಿಸಿದವು ಮತ್ತು ಇಂದು ಭಾರತದ  ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಮೃದ್ಧತೆಗೆ ಕೊಡುಗೆ ನೀಡಿತು.

ಅವನ ಮರಣದ ನಂತರ ಅವನ ಸಾಮ್ರಾಜ್ಯವು ಛಿದ್ರವಾಗಿದ್ದರೂ, ಅವನ ಪರಂಪರೆಯು ದೆಹಲಿ ಸುಲ್ತಾನೇಟ್ ಮತ್ತು ನಂತರದ ಇಸ್ಲಾಮಿಕ್ ರಾಜವಂಶಗಳ ಮೂಲಕ ಬದುಕಿತು, ಇದು ಭಾರತೀಯ ರಾಜಕೀಯ, ಸಮಾಜ ಮತ್ತು ಸಂಸ್ಕೃತಿಯ ಮೇಲೆ ಅಳಿಸಲಾಗದ ಗುರುತು ಹಾಕಿತು.

ಮುಹಮ್ಮದ್ ಘೋರಿಯ ಆಕ್ರಮಣಗಳು ಅವರ ಮಿಲಿಟರಿ ಸಾಧನೆಗಳಿಗಾಗಿ ಮಾತ್ರವಲ್ಲದೆ ಭಾರತೀಯ ಉಪಖಂಡದ ಇತಿಹಾಸದ ಮೇಲೆ ಅವರ ದಾಳಿಯ ಪ್ರಭಾವದ ಹಿನ್ನೆಲೆಯಲ್ಲಿ ಬಹುಮುಖ್ಯನಾಗುತ್ತಾನೆ.

ಸಿಂಧ್‌ನ ಅರಬ್ ಆಕ್ರಮಣ (ಕ್ರಿ.ಶ 711 )

ಸಿಂಧ್‌ನ ಅರಬ್ ಆಕ್ರಮಣ (ಕ್ರಿ.ಶ 711 )

ಸಿಂಧ್‌ನ ಅರಬ್ ಆಕ್ರಮಣವು ಭಾರತದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಮುಹಮ್ಮದ್ ಬಿನ್ ಕಾಸಿಮ್ ನೇತೃತ್ವದಲ್ಲಿ, ಈ ಘಟನೆಯು ಭಾರತೀಯ ಉಪಖಂಡದಲ್ಲಿ ಮೊದಲ ಇಸ್ಲಾಮಿಕ್ ನೆಲೆಯನ್ನು ಸ್ಥಾಪಿಸಿತು. ಇದು ಈ ಪ್ರದೇಶದ ಇತಿಹಾಸವನ್ನು ರೂಪಿಸುವ ಸಾಂಸ್ಕೃತಿಕ ಮತ್ತು ಆರ್ಥಿಕ ವಿನಿಮಯವನ್ನು ಪ್ರಾರಂಭಿಸಿತು. ಆಕ್ರಮಣ ಮತ್ತು ಅದರ ಪರಿಣಾಮಗಳ ಅವಲೋಕನವನ್ನು ಕೆಳಗೆ ನೀಡಲಾಗಿದೆ:

ಹಿನ್ನೆಲೆ

* ಸಿಂಧ್‌ನ ಆಕ್ರಮಣವು ಕಲಿಫ್ ಅಲ್-ವಾಲಿದ್ I ರ ಅಡಿಯಲ್ಲಿ ಉಮಯ್ಯದ್ ಕ್ಯಾಲಿಫೇಟ್‌ನ ವಿಸ್ತರಣಾ ನೀತಿಗಳ ಭಾಗವಾಗಿತ್ತು.

* ರಾಜಾ ದಾಹಿರ್ ಅಡಿಯಲ್ಲಿ ಬ್ರಾಹ್ಮಣ ರಾಜವಂಶದಿಂದ ಆಳಲ್ಪಟ್ಟ ಸಿಂಧ್ ಪ್ರದೇಶವು ಆರ್ಥಿಕವಾಗಿ ಸಮೃದ್ಧವಾಗಿತ್ತು ಮತ್ತು ಅರೇಬಿಯನ್ ಪೆನಿನ್ಸುಲಾ, ಪರ್ಷಿಯಾ ಮತ್ತು ಭಾರತವನ್ನು ಸಂಪರ್ಕಿಸುವ ವ್ಯಾಪಾರ ಮಾರ್ಗಗಳ ಬಳಿ ಆಯಕಟ್ಟಿನ ಸ್ಥಳವಾಗಿದೆ.

* ಆಕ್ರಮಣಕ್ಕೆ ತಕ್ಷಣದ ಪ್ರಚೋದನೆಯು ಸ್ಥಳೀಯ ಕಡಲ್ಗಳ್ಳರಿಂದ ದೆಬಾಲ್ ಬಂದರಿನ ಬಳಿ ಅರಬ್ ವ್ಯಾಪಾರಿ ಹಡಗುಗಳ ಲೂಟಿಯಾಗಿದೆ. ರಾಜಾ ದಾಹಿರ್‌ಗೆ ನ್ಯಾಯಕ್ಕಾಗಿ ಮಾಡಿದ ಮನವಿಗಳು ವಿಫಲವಾದವುಇದು ಮಿಲಿಟರಿ ಕಾರ್ಯಾಚರಣೆಗೆ ಆದೇಶ ನೀಡಲು  ಪ್ರೇರೇಪಿಸಿತು.

ಆಕ್ರಮಣ

* ಯುವ ಮತ್ತು ನುರಿತ ಜನರಲ್ ಮುಹಮ್ಮದ್ ಬಿನ್ ಕಾಸಿಮ್ ಅವರನ್ನು ಅಭಿಯಾನದ ನೇತೃತ್ವ ವಹಿಸಲು ನೇಮಿಸಲಾಯಿತು.

* 711 CE ನಲ್ಲಿ, ಖಾಸಿಮ್ ತನ್ನ ಆಕ್ರಮಣವನ್ನು ಸುಸಜ್ಜಿತ ಸೈನ್ಯ ಮತ್ತು ಮುಂದುವರಿದ ಮುತ್ತಿಗೆ ಶಸ್ತ್ರಾಸ್ತ್ರಗಳೊಂದಿಗೆ ಪ್ರಾರಂಭಿಸಿದನು.

ಆಕ್ರಮಣದ ಪ್ರಮುಖ ಘಟನೆಗಳು:

* ದೇಬಲ್‌ನ ವಶ: ಉಗ್ರ ಪ್ರತಿರೋಧದ ನಂತರ ಖಾಸಿಮ್‌ನ ಪಡೆಗಳು ಬಂದರು ನಗರವಾದ ದೆಬಾಲ್ ಅನ್ನು ವಶಪಡಿಸಿಕೊಂಡವು.

* ರಾಜಾ ದಾಹಿರ್ ಮೇಲೆ ವಿಜಯ: ನಿರ್ಣಾಯಕ ಯುದ್ಧವು ಸಿಂಧೂ ನದಿಯ ಬಳಿ ನಡೆಯಿತು, ಅಲ್ಲಿ ರಾಜ ದಾಹಿರ್ ಸೋಲಿಸಲ್ಪಟ್ಟನು ಮತ್ತು ಕೊಲ್ಲಲ್ಪಟ್ಟನು.

* ಸಿಂಧ್ ಮತ್ತು ಮುಲ್ತಾನ್ ವಿಜಯ: ಅರಬ್ ಪಡೆಗಳು ಬ್ರಾಹ್ಮಣಾಬಾದ್ ಮತ್ತು ಮುಲ್ತಾನ್ ನಂತಹ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಮುಂದಾದವು, ಸಿಂಧ್ ಮೇಲೆ ತಮ್ಮ ನಿಯಂತ್ರಣವನ್ನು ಬಲಪಡಿಸಿತು.

ಆಕ್ರಮಣದ ಪರಿಣಾಮಗಳು
1. ಇಸ್ಲಾಮಿಕ್ ಆಡಳಿತದ ಸ್ಥಾಪನೆ:

* ಸಿಂಧ್ ಉಮಯ್ಯದ್ ಕ್ಯಾಲಿಫೇಟ್‌ನ ಭಾಗವಾಯಿತು, ಭಾರತದಲ್ಲಿ ಮೊದಲ ಇಸ್ಲಾಮಿಕ್ ಪ್ರಾಂತ್ಯವನ್ನು ಸ್ಥಾಪಿಸಿತು.

* ಇದು ಭಾರತೀಯ ಉಪಖಂಡದಲ್ಲಿ ಇಸ್ಲಾಂ ಅಸ್ತಿತ್ವದ ಆರಂಭವನ್ನು ಗುರುತಿಸಿತು.

2. ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಭಾವ:

* ಅರಬ್ ಆಡಳಿತಗಾರರು ಧಾರ್ಮಿಕ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡರು, ಸ್ಥಳೀಯ ಹಿಂದೂಗಳು ಮತ್ತು ಬೌದ್ಧರು ಜಿಜ್ಯಾ (ತೆರಿಗೆ) ಪಾವತಿಸಲು ಬದಲಾಗಿ ತಮ್ಮ ನಂಬಿಕೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು.

* ಆಕ್ರಮಣವು ಸಿಂಧ್‌ಗೆ ಇಸ್ಲಾಮಿಕ್ ಸಂಸ್ಕೃತಿ, ಆಡಳಿತ ಮತ್ತು ಕಾನೂನನ್ನು ಪರಿಚಯಿಸಿತು.

3. ವ್ಯಾಪಾರ ಮತ್ತು ಆರ್ಥಿಕ ಪರಿಣಾಮ:

* ಸಿಂಡ್‌ನ ಕ್ಯಾಲಿಫೇಟ್‌ನ ಸಂಯೋಜನೆಯು ಭಾರತ, ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದ ನಡುವಿನ ವ್ಯಾಪಾರವನ್ನು ವಿಸ್ತರಿಸಿತು.

* ಡೆಬಾಲ್ ನಂತಹ ಬಂದರುಗಳು ಸರಕುಗಳು, ಕಲ್ಪನೆಗಳು ಮತ್ತು ತಂತ್ರಜ್ಞಾನಗಳ ವಿನಿಮಯವನ್ನು ಸುಗಮಗೊಳಿಸಿದವು.

4. ದೀರ್ಘಾವಧಿಯ ಪ್ರಭಾವ:

ಅರಬ್ ಆಕ್ರಮಣವು ನಂತರದ ಮುಸ್ಲಿಂ ಆಕ್ರಮಣಗಳಿಗೆ ದಾರಿ ಮಾಡಿಕೊಟ್ಟಿತು ಮತ್ತು ಅಂತಿಮವಾಗಿ ಭಾರತದಲ್ಲಿ ಇಸ್ಲಾಮಿಕ್ ಸಾಮ್ರಾಜ್ಯಗಳ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು, ಉದಾಹರಣೆಗೆ ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯ.

* ಇದು ಅರಬ್ ಮತ್ತು ಭಾರತೀಯ ಸಂಪ್ರದಾಯಗಳನ್ನು ಮಿಶ್ರಣ ಮಾಡುವ ಮೂಲಕ ಪ್ರದೇಶದ ಸಾಂಸ್ಕೃತಿಕ ಮತ್ತು ಭಾಷಿಕ ಬೆಳವಣಿಗೆಯ ಮೇಲೂ ಪ್ರಭಾವ ಬೀರಿತು.

ಮಹತ್ವ

ಸಿಂಧ್‌ನ ಅರಬ್ ಆಕ್ರಮಣವು ಕೇವಲ ಮಿಲಿಟರಿ ವಿಜಯವಾಗಿರಲಿಲ್ಲ; ಇದು ಉಪಖಂಡದಲ್ಲಿ ಇಸ್ಲಾಮಿಕ್ ಪ್ರಭಾವದ ಆರಂಭವನ್ನು ಗುರುತಿಸಿದ ಭಾರತೀಯ ಇತಿಹಾಸದಲ್ಲಿ ಒಂದು ಮಹತ್ವದ ತಿರುವು. ಪ್ರಾದೇಶಿಕ ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ, ಈ ಆಕ್ರಮಣದಿಂದ ಪ್ರಾರಂಭವಾದ ಸಾಂಸ್ಕೃತಿಕ ಮತ್ತು ಆರ್ಥಿಕ ಸಂವಹನಗಳು ಭಾರತೀಯ ಉಪಖಂಡದ ಇತಿಹಾಸ ಮತ್ತು ಗುರುತಿನ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿತು.

ಸಂಘಂ ಯುಗ ಅಥವಾ ಸಂಘಂ ಸಾಹಿತ್ಯ

ಸಂಘಂ ಯುಗ ಅಥವಾ ಸಂಘಂ ಸಾಹಿತ್ಯ

ಸಂಘಂ ಅರ್ಥ:

ಸಂಘಂ ಎಂದರೆ ಒಂದು ಕೂಟ ಎಂದರ್ಥ, ಸಂಘಂ ಎಂಬ ಪದವು ತಮಿಳಿನ ಕೂಡಲ್ ಎಂಬ ಪದದಿಂದ ಬಂದಿದೆ. ತಮಿಳಿನ ಕೂಡಲ್ ಎಂಬ ಪದವನ್ನು ಬೌದ್ಧರು ಹಾಗೂ ಜೈನರು ಸಂಘ ಎಂಬ ಸಂಸ್ಕೃತ ಪದಕ್ಕೆ ಸಮಾನವಾಗಿ ಬಳಸಿದರು. ಆದ್ದರಿಂದ ಕೂಡಲ್ ಹಾಗೂ ಸಂಘಂ ಎಂಬ ಎರಡು ಪದಗಳು ಸಮಾನಾರ್ಥ ಪದಗಳಾಗಿವೆ. ಸಂಘಂ ಎಂಬುದು ತಮಿಳು ಸಾಹಿತ್ಯರಾಶಿಯನ್ನು ಸೃಷ್ಠಿಸಿದ ಒಂದು ಸಂಸ್ಥೆ.  ಅಂದರೆ ಕೂಟದ ಅಥವಾ ಸಂಘದ ವಿದ್ವತ್ ಜನರು ರಚಿಸಿದ ವಿಚಾರ ಪೂರಿತ ಸಾಹಿತ್ಯ. ಈ ಸಾಹಿತ್ಯ ಗೋಷ್ಠಿಯಲ್ಲಿ ಅಸಂಖ್ಯಾತ ದಾರ್ಶನಿಕರು, ಕವಿಗಳು ಹಾಗೂ ವಿದ್ವಾಂಸರು ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಸಂಘಂ ಸಾಹಿತ್ಯಗೋಷ್ಠಿಗಳು ಪಾಂಡ್ಯ ಅರಸರ ಆಶ್ರಯದಲ್ಲಿ ನಡೆಯುತ್ತಿದ್ದುದರಿಂದ ಅವರೂ ಸಹ ವಿದ್ವತ್ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದರು. ಈ ಗೋಷ್ಠಿಯಲ್ಲಿ ರಾಜಮನೆತನದವರೇ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದರಿಂದ ಅದು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಂದಿತು. ಅದರಲ್ಲೂ ತಮಿಳು ಭಾಷೆಯೇ ಈ ಗೋಷ್ಠಿಯ ಪ್ರಧಾನ ಭಾಷೆಯಾದ ಕಾರಣದಿಂದ ಪಾಂಡ್ಯರು, ಚೇರರು ಹಾಗೂ ಚೋಳರು ವಿಶೇಷವಾಗಿ ಅದರ ಪ್ರಚಾರಕ್ಕೆ ಶ್ರಮಿಸಿದರು. ಈ ಕಾಲವನ್ನು ‘ಸಂಘಂ ಯುಗ’ ಎಂದು ಕರೆಯಲಾಗಿದೆ.

ಪ್ರಾಚೀನ ಕಾಲದಲ್ಲಿ ಒಟ್ಟು ಮೂರು ಸಂಘಂಗಳು ಅಸ್ತಿತ್ವದಲ್ಲಿ ಇದ್ದವು. ಈ ಮೂರು ಸಂಘಂಗಳ ಒಟ್ಟು  ಕಾಲಾವಧಿ 9990 ವರ್ಷಗಳೆಂದು ಹೇಳಲಾಗಿದ್ದು  ಕೇವಲ ಕಾಲ್ಪನಿಕವಾಗಿದೆ. ಈ ಅವಧಿಯಲ್ಲಿ    8598 ಕವಿಗಳು ಭಾಗವಹಿಸಿದ್ದರು. ಸುಮಾರು 197 ಪಾಂಡ್ಯ ಅರಸರು ಸಂಘಂ ಗೋಷ್ಠಿಗೆ ಮಹಾ ಪೋಷಕರಾಗಿದ್ದರು. 

ಸಂಘಂ ಕಾಲ:

ತಮಿಳು ಭಾಷೆಯ ಸಾಹಿತ್ಯದ ಆರಂಭದ ಯುಗವನ್ನು ಸಾಮಾನ್ಯವಾಗಿ ಸಂಘಂ ಯುಗ ಎಂದು ನಂಬಲಾಗಿದೆಯಾದರೂ ಭಾರತದ ಆನೇಕ ಇತಿಹಾಸತಜ್ಞರು ಸಂಘಂ ಯುಗದ ಬಗ್ಗೆ ತಮ್ಮದೇ ಆದ ವಿಭಿನ್ನ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸಂಘಂ ಯುಗದಲ್ಲಿ ರಚಿತವಾದ ಕವಿತೆಗಳು ಹಾಗೂ ಮಹಾಕಾವ್ಯಗಳಾದ ಶಿಲಪ್ಪಧಿಕಾರಂ ಹಾಗೂ ಮಣಿಮೇಖಲೈಗಳಲ್ಲಿ ಉಲ್ಲೇಖವಾಗಿರುವ ಸಾಮಾಜಿಕ ಜೀವನ ಮತ್ತು ಕ್ರಿಶ ಮೊದಲನೆಯ ಶತಮಾನದಲ್ಲಿ ರಚಿತವಾದ ಗ್ರೀಕ್ ಹಾಗೂ ರೋಮನ್ ಬರಹಗಳ ನಡುವೆ ಸಾಕಷ್ಟು ಸಾಮ್ಯತೆ ಇರುವುದರಿಂದ ಸಂಘಂ ಯುಗ ಕ್ರಿಶ. ಮೊದಲನೆಯ ಶತಮಾನದಲ್ಲಿ ಆರಂಭವಾಯಿತೆಂದು ಡಾ.ಎನ್.ಸುಬ್ರಮಣ್ಯಂರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಪ್ರೊ. ಕೆ.ಎ.ನೀಲಕಂಠಶಾಸ್ತ್ರೀಯವರು ಕ್ರಿಶ. ಮೊದಲ ಮೂರು ಶತಮಾನಗಳು ಸಹ ಸಂಘಂ ಕಾಲಗಳೆಂದೇ ಹೇಳಿದ್ದಾರೆ. ಇವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಪ್ರೊ.ಕೆ.ಸತ್ಯನಾಥ ಅಯ್ಯರ್ ಅವರು ಪುಷ್ಟೀಕರಿಸಿದ್ದಾರೆ. ಪಾಂಡ್ಯ ಅರಸರಿಂದ ಪೋಷಣೆಗೊಳಗಾಗಿದ್ದ ಸಂಘಂಗಳು ಈ ಕೆಳಗಿನಂತಿದೆ.

1) ಮೊದಲನೆಯ ಸಂಘಂ

ಮೊದಲನೆಯ ಸಂಘಂ ಕಾಲವು ದಕ್ಷಿಣ ಮಧುರೈ ನಗರದಲ್ಲಿ ಕಂಡು ಬಂದಿತು. ಇದು ಆದಿ ತಮಿಳು ಸಾಹಿತ್ಯದ ಕೇಂದ್ರಸ್ಥಾನವಾಗಿತ್ತು. ಮಧುರೈ ನಗರವು ಇಂದಿನ ಕನ್ಯಾಕುಮಾರಿಯವರೆಗೂ ವ್ಯಾಪಿಸಿತ್ತು. ನಂತರ ಕಡಲು ಕೊರೆತದ ಪರಿಣಾಮವಾಗಿ ಮಧುರೈ ನಗರ ಸಮುದ್ರದಲ್ಲಿ ಮುಳುಗಿ ಹೋಯಿತು. ಮೊದಲ ಸಂಘಂ ಸಂಸ್ಕೃತಿಯ ಅಧ್ಯಕ್ಷತೆಯನ್ನು ಆಗತ್ತಿಯರ್ (ಅಗಸ್ತ್ಯ)  ವ್ಯಕ್ತಿ ನಿರ್ವಹಿಸಿದ್ದನು. ಇದರಲ್ಲಿ ಒಟ್ಟು 549 ಜನ ಸದಸ್ಯರಿದ್ದರು. ಇದು ಸುಮಾರು 4400 ವರ್ಷಗಳ ಕಾಲ ಅಸ್ತಿತ್ವದಲ್ಲಿ ಇದ್ದಿತು. ಈ ಅವಧಿಯಲ್ಲಿ ರಚಿತವಾದ ಯಾವುದೇ ಗ್ರಂಥಗಳಾಗಲಿ, ಕೃತಿಗಳಾಗಲಿ ಮತ್ತು ಅವಶೇಷಗಳಾಗಲಿ ನಮಗೆ ಇಂದು ದೊರಕಿಲ್ಲ.

2) ಎರಡನೆಯ ಸಂಘಂ

ಎರಡನೆಯ ಸಂಘಂ ಸಂಸ್ಕೃತಿಯು ಕಪಾಟಪುರಂನಲ್ಲಿ ಕಂಡು ಬಂದಿತು. ಕಪಾಟಿ ಎಂದರೆ ಬಾಗಿಲು ಅಥವಾ ದ್ವಾರ ಎಂದರ್ಥ. ಈ ನಗರವನ್ನು ಪಾಂಡ್ಯ ಅರಸರು ಸ್ಥಾಪಿಸಿದ್ದರು. ಇದು ಸಹ ಕಡಲ ಕೊರೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಹೋಯಿತು.  ಸಂಘಂನ ಮೊದಲ ನಗರದ ನಾಶದಿಂದ ಪಾಂಡ್ಯರು ಪಾಠ ಕಲಿಯಲಿಲ್ಲವಾದ್ದರಿಂದ ಅವರು ಎರಡನೆಯ ನಗರವನ್ನು ಸಹ ಕಳೆದುಕೊಳ್ಳಬೇಕಾಯಿತು. ಈ ನಗರದ ಕುರಿತು ರಾಮಾಯಣದಲ್ಲಿ ಪ್ರಸ್ತಾಪ ಮಾಡಲಾಗಿದೆ. ಎರಡನೆಯ ಸಂಘಂನ ಅಧ್ಯಕ್ಷರಾಗಿ ಆಗತ್ತಿಯರ್ ಕಾರ್ಯ ನಿರ್ವಹಿಸಿದನು. ಇದರ ಸದಸ್ಯರ ಒಟ್ಟು ಸಂಖ್ಯೆ 49ರಷ್ಟು ಇದ್ದೀತು. ಇದು 3700 ವರ್ಷಗಳ ಬಾಳಿತು.(ಕಾಲ್ಪನಿಕ). ಇದನ್ನು ಸುಮಾರು 59 ಪಾಂಡ್ಯ ಅರಸರು  ಪೋಷಿಸಿ ಬೆಳೆಸಿದರು. ಈ ಅವಧಿಯಲ್ಲಿ ಅನೇಕ ಕೃತಿಗಳು ರಚನೆಯಾದರೂ ಅವುಗಳೆಲ್ಲಾ ನಾಶವಾಗಿ ಕೇವಲ ಒಂದೇ ಒಂದು ಕೃತಿ ಇಂದಿಗೂ ಉಳಿದು ಬಂದಿದೆ, ಅದುವೇ ತೊಲ್ಕಾಪಿಯಂ. ಈಗಿರುವ ಸಂಘಂ ಸಾಹಿತ್ಯ ಕೃತಿಗಳಲ್ಲಿ ಇದು ಅತ್ಯಂತ ಪ್ರಾಚೀನವಾದ ಕೃತಿಯಾಗಿದೆ. ಇದು ತಮಿಳು ಭಾಷೆ ಹಾಗೂ ವ್ಯಾಕರಣದ ಕುರಿತು ಮಹತ್ವ ಪೂರ್ಣವಾದ ಮಾಹಿತಿಯನ್ನು ಒದಗಿಸುತ್ತದೆ. ತೊಲ್ಕಾಪಿಯಂ ಕೃತಿಯನ್ನು ತೊಲ್ಕಾಪಿಯರ್ ಎಂಬುವವನು ರಚಿಸಿದನು. ಇವನು ಅಗಸ್ತ್ಯ ಮುನಿಯ ಶಿಷ್ಯನೆಂದು ನಂಬಲಾಗಿದೆ.

3. ಮೂರನೆಯ ಸಂಘಂ

ಮೂರನೆಯ ಸಂಘಂ ಸಂಸ್ಕೃತಿಯು ಇಂದಿನ ಮಧುರೈ ನಗರದಲ್ಲಿ ಆರಂಭವಾಯಿತು. ಕಪಾಟಿಪುರಂ ನಗರವು ಸಮುದ್ರದ ಕೊರೆತಕ್ಕೆ ಸಿಕ್ಕು ನಾಶವಾದ ನಂತರ ಪಾಂಡ್ಯ ದೊರೆಯಾದ ಉಗ್ರಪ್ಪೆರುವಲುಡಿ ಎಂಬಾತನು ವೈಗೈ ನದಿಯ ದಂಡೆಯ ಮೇಲೆ ಮಧುರೈ ನಗರವನ್ನು ಸ್ಥಾಪಿಸಿ ಅದನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಮೂರನೆಯ ಸಂಘಂನ ಅಧ್ಯಕ್ಷತೆಯನ್ನು ನಕ್ಕಿನಾರ್ ಎಂಬಾತ ವಹಿಸಿದ್ದನು. ಇದರ ಒಟ್ಟು ಸದಸ್ಯರ ಸಂಖ್ಯೆ 49ರಷ್ಟು ಇತ್ತು. ಇದು ಸುಮಾರು 1850 ವರ್ಷಗಳ ಕಾಲ ಬಾಳಿದ್ದಿತು. ಇದನ್ನು ಒಟ್ಟು 59 ಪಾಂಡ್ಯ ಅರಸರು ಪೋಷಿಸಿಕೊಂಡು ಬಂದಿದ್ದರು. ಇತಿಹಾಸಕಾರರ ಪ್ರಕಾರ ಮೊದಲೆರಡು ಸಂಘಂಗಳ ವರ್ಣನೆಯು ಅತ್ಯಂತ ಉತ್ತೇಕ್ಷೆಯಿಂದ ಕೂಡಿದ್ದು ಮೂರನೆಯ ಸಂಘಂ ಮಾತ್ರ ಐತಿಹಾಸಿಕವಾಗಿ ಅಸ್ತಿತ್ವದಲ್ಲಿ ಇದ್ದಿತೆಂದು ಹೇಳಲಾಗಿದೆ.

ಸಂಘಂ ಸಾಹಿತ್ಯ:

ತೊಲ್ಕಾಪಿಯಂ ಎಂಬ ವ್ಯಾಕರಣ ಕೃತಿಯು ತೊಳ್ಕಾಪಿಯರ್‌ನಿಂದ ರಚನೆಯಾಗಿದ್ದು, ಎರಡನೆಯ ಸಂಘಂ ಸಾಹಿತ್ಯದಲ್ಲಿ ಉಳಿದಿರುವ ಏಕೈಕ ಪ್ರಾಚೀನ ಕೃತಿಯಾಗಿದೆ. ಇದು ಅಕ್ಷರ ಸಂಯೋಜನೆ, ಪದ ಸಂಯೋಜನೆ, ಛಂದಸ್ಸು ಶಾಸ್ತ್ರ, ಪದಗಳ ವಿಂಗಡನೆ, ಅಂದಿನ ಸಾಮಾಜಿಕ ಆಚರಣೆಗಳು, ಸಾಹಿತ್ಯ ನಿಯಮಗಳು ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಈ ಕೃತಿಯು ಮೂರು ಪ್ರಮುಖ ವಿಭಾಗಗಳನ್ನು ಹೊಂದಿದ್ದು, ಪ್ರತಿ ವಿಭಾಗವೂ 9 ಉಪ ಅಧ್ಯಾಯವನ್ನು ಒಳಗೊಂಡಿದೆ. ಜೊತೆಗೆ 1612 ಸೂತ್ರಗಳು ಇದರಲ್ಲಿವೆ. 

1) ಐಂಗೂರು ನೂರು ಎಂಬುದು 500 ಶೃಂಗಾರ ಕಾವ್ಯವಾಗಿದ್ದು ಇದನ್ನು ಗುಡಲೂರ್ ಕಿಲಾರಿಯವರು ಸಂಗ್ರಹ ಮಾಡಿದ್ದಾರೆ.

2) ನರಿನೈ ಕವನ ಸಂಗ್ರಹವು 400 ಕವನಗಳನ್ನು ಒಳಗೊಂಡಿದೆ. ಇದು ಸಂಗೀತ ಹಾಗೂ ಸಂಗೀತಗಾರರ ಬಗ್ಗೆ ಮಾಹಿತಿ ನೀಡುತ್ತದೆ. ಅಂದಿನ ಕಾಲದ ಪ್ರಮುಖ ರೇವು ಪಟ್ಟಣಗಳು ಮತ್ತು ಬೃಹತ್ ನಗರಗಳ ಕುರಿತು ಸಾಕಷ್ಟು ವಿವರಣೆ ಈ ಕೃತಿಯಲ್ಲಿದೆ.

3) ಆಕನಾನೂರು ಎಂಬ ಕಾವ್ಯ ಸುಮಾರು 400 ಪ್ರೇಮ ಕವನಗಳನ್ನು ಒಳಗೊಂಡಿದೆ. ಇದನ್ನು ರುದ್ರಶರ್ಮನೆಂಬುವವನು ಸಂಗ್ರಹಿಸಿದನು. ಇದು ಯುದ್ಧ ಹಾಗೂ ಸೈನಿಕರ ಬಗ್ಗೆ ಅಪಾರವಾದ ಮಾಹಿತಿಯನ್ನು ನೀಡುವ ಅತ್ಯಂತ ಜನಪ್ರಿಯವಾದ ಗ್ರಂಥವಾಗಿದೆ.

4) ಕುರಂತುಗೊಯ್ ಎಂಬುದು ಸಹ 400 ಪ್ರೇಮ ಕವನಗಳನ್ನು ಒಳಗೊಂಡಿದೆ. ಈ ಕವನ ಸಂಕಲನವು ಸಂಘಂ ಯುಗದ ಸುಂದರ ಸಾಮಾಜಿಕ ವ್ಯವಸ್ಥೆಯ ಕುರಿತು ವಿಪುಲವಾದ ಮಾಹಿತಿಯನ್ನು ನೀಡುತ್ತದೆ.

5) ಪುರನಾನೂರು 400 ಕವನಗಳನ್ನು ಹೊಂದಿದ ಒಂದು ಬೃಹತ್ ಕೃತಿಯಾಗಿದೆ. ಈ ಕವನ ಸಂಕಲನದಲ್ಲಿ ಅಂದಿನ ರಾಜರನ್ನು ಹೊಗಳಿ ಬರೆಯಲಾಗಿದೆ.

6) ಕಲಿತ್ತೊಗೈ ಎಂಬುದು 150 ಪ್ರೇಮ ಪ್ರಸಂಗಗಳನ್ನು ಒಳಗೊಂಡ ಕವನ ಸಂಕಲನವಾಗಿದೆ.

7) ಪರಿಪಾದಲ್ 24 ಪದ್ಯಗಳನ್ನು ಒಳಗೊಂಡ ಕೃತಿಯಾಗಿದ್ದು, ಇದರಲ್ಲಿ ದೇವರನ್ನು ಕುರಿತು ಹೊಗಳಿ ಬರೆಯಲಾಗಿದೆ.

8) ಪದಿರುಪತ್ತು ಚೇರ ರಾಜರನ್ನು ಹೊಗಳಿ ಬರೆದ 8 ಪದ್ಯಗಳ ಕೃತಿಯಾಗಿದೆ.

ಈ ಮೇಲಿನ ಎಂಟು ಕವಿತಾ ಸಂಗ್ರಹಗಳು ಒಟ್ಟು 2282 ಪದ್ಯಗಳನ್ನು ಹೊಂದಿದ್ದು, ಇವುಗಳನ್ನು ಒಟ್ಟು 200 ಕವಿಗಳು ಬರೆದಿರಬಹುದೆಂದು ನಂಬಲಾಗಿದೆ.

ಪತ್ತುಪಾಟ್ಟು: (ಹತ್ತು ಕಾವ್ಯ ಸಂಕಲನಗಳು)

ಪತ್ತುಪಾಟ್ಟು ಎಂಬ ಹತ್ತು ಕಾವ್ಯ ಸಂಕಲನಗಳು ಈ ಕಾಲದಲ್ಲಿ ರಚನೆಯಾದವು. ಅವುಗಳೆಂದರೆ,

1) ತಿರುಮುರುಗಾರುಪ್ಪಡೈ

2) ಪೊಠುನಾರಾರುಪ್ಪಡೈ

3) ಶಿರುಪಾನಾರುಪ್ಪಡ್ಡೆ

4) ಪೆರುಂಪಾಣಾರುಪ್ಪಡೈ

5) ಮಲೈಪ್ರಾಟ್ಟು

6) ಮಧುರೈಕಾಂಚಿ

7) ನೆಡುನಾಂಲವಾಡೈ

8) ಕುರಿಯಂಜಿಪ್ಪಾಟು

9) ಪಟ್ಟಿನಪಾಲೈ

10) ಮಲೈಪಡುಕಾಡಾಂ.

ಈ ಮೇಲಿನ ಎಲ್ಲಾ ಕೃತಿಗಳಲ್ಲಿ  ಪ್ರೇಮ,  ತಮಿಳು ಭೂಮಿ, ಬೆಟ್ಟ ಪ್ರದೇಶ, ಒಣಭೂಮಿ, ಅರಣ್ಯ ಸಾಗುವಳಿ, ಬಯಲು ಮತ್ತು ಕರಾವಳಿ ಪ್ರದೇಶಗಳ ವರ್ಣನೆ ಹೊಂದಿದೆ.

ಪಡಿನೆಂಕಿಲ್ಲನಕ್ಕು (ಹದಿನೆಂಟು ಸಣ್ಣ ಗ್ರಂಥಗಳು)

ಇವು ಚಿಕ್ಕಚಿಕ್ಕ ಪದಿನೆಂಟು ಕವನ ಸಂಗ್ರಹಗಳಾಗಿವೆ. ಇವು ಯುದ್ಧ, ಜನಜೀವನ ಹಾಗೂ ಸೈನಿಕರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿವೆ. ಇವುಗಳು ಹೆಚ್ಚಾಗಿ ನೀತಿಬೋಧೆ ಹಾಗೂ ನೈತಿಕ ನಿಯಮಗಳನ್ನು ಬೋಧಿಸುತ್ತದೆ. ಇವುಗಳಲ್ಲಿ ಬಹುಮುಖ್ಯವಾದವುಗಳೆಂದರೆ

1) ನಾಲಡಿಯರ್

2) ನಮ್ಮಡಿಕ್ಕಡಿಗೈ

3) ಇನ್ಸಾನಾರ್ ಪಾಡು

4) ಇನಿಯನಾರ್ ಪಾಡು

5) ಕಾರ್‌ನಾರ್‌ ಪಾಡು

6) ಕಳಿವಡಿನಾರ್ ನಾಡು

7) ಪಿಂಟಿನೈ ಐಂಪಾಡು

8)ಪಿಂಟಿನೈ ಎಳಪಾಡು

9) ತಿಣೈಮೊಳಿ ಐಂಪಾಟು

10) ತಿಣ್ಣೆಮೊಲೆನೂರೈಂಪಾಡು

11) ಇನ್ನಿಲೈ

12) ಕುರಳ್

13) ತಿರಿಕಡಗಂ

14) ಆಚಾರಕ್ಕೊವೈ

15) ತಳಿಮೊಳಿ

16) ಶಿರುಪಂಚಮೂಲಂ

17) ಮುದುಮೊಳೆಕ್ಕಾಂಚಿ

18) ಎಳಾದಿ

ಇವುಗಳಲ್ಲಿ ಅತ್ಯಂತ ಪ್ರಮುಖವಾದ ಕೃತಿ ಎಂದರೆ ತಿರುವಳ್ಳುವರ್ ರಚಿಸಿದ  ತಿರುಕ್ಕುರಳ್. ಇದನ್ನು  ತಮಿಳುನಾಡಿನ ಬೈಬಲ್ ಎಂದು ಕರೆಯಲಾಗಿದೆ. ಇದರಲ್ಲಿ ೧೩೩ ವಿಭಾಗಗಳಿವೆ. ಪ್ರತಿ ವಿಭಾಗದಲ್ಲಿ ೧೦ ದ್ವಿಪದಿಗಳಿವೆ. ಒಟ್ಟು ೧೩೩೦ ದ್ವಿಪದಿಗಳಿವೆ.

ಮೇಲಿನ ಎಲ್ಲಾ ಕೃತಿಗಳು ಆರ್ಯಧರ್ಮ, ವಿಚಾರಗಳು ಮತ್ತು ಆಚರಣೆಗಳ  ಕುರಿತು ಮಾಹಿತಿ ತಿಳಿಸುತ್ತವೆ.

ಎರಡು ಮಹಾಕಾವ್ಯಗಳು:

ಕ್ರಿಶ.ಎರಡನೆಯ ಶತಮಾನವನ್ನು ತಮಿಳು ಸಾಹಿತ್ಯದ ಸುವರ್ಣಯುಗ ಎಂದು ಕರೆಯಲಾಗಿದೆ. ಕಾರಣ ಈ ಅವಧಿಯಲ್ಲಿ ಆನೇಕ ಮಹಾಕಾವ್ಯಗಳು ರಚನೆಯಾದವು. ಅವುಗಳೆಂದರೆ ಶಿಲಪ್ಪದಿಕಾರಂ, ಮಣಿಮೇಖಲೈ, ಜೀವನ ಸಿಂತಾಮಣಿ, ವಳಯಾಪಟಿ ಮತ್ತು ಕುಂಡಲಕೇಶಿ. ಇವುಗಳಲ್ಲಿ ಎರಡನ್ನು ಕ್ರಿಶ ಎರಡನೆಯ ಶತಮಾನದಲ್ಲಿ ಬರೆಯಲಾಗಿದೆ ಎಂದು ಹೇಳಲಾಗಿದೆ. ಅವುಗಳೆಂದರೆ ಇಳಂಗೋ-ಅಡಿಗಳ್ ಅವರಿಂದ ಬರೆಯಲಾದ ಶಿಲಪ್ಪದಿಕಾರಂ ಹಾಗೂ ಸತ್ತಲೈ ಸಾತ್ತನಾ‌ರ್ ಬರೆದ ಮಣಿಮೇಖಲೈ. ಈ ಎರಡೂ ಕೃತಿಗಳನ್ನು ಗ್ರೀಕಿನ ಹೋಮರ್ ಕವಿಯ ಇಲಿಯಡ್ ಹಾಗು ಓಡಿಸ್ಸಿ ಮಹಾಕಾವ್ಯಗಳಿಗೆ ಹೋಲಿಸಲಾಗಿದೆ.

1) ಶಿಲಪ್ಪದಿಕಾರಂ:

ಶಿಲಪ್ಪದಿಕಾರಂ ಕಾವ್ಯವು ಇಳಂಗೊ ಅಡಿಗಳ್ ಎಂಬುವವರಿಂದ ರಚಿತವಾಯಿತು. ಇವನು ಚೋಳ ಅರಸನಾದ ಕರಿಕಾಲ ಚೋಳನ ಮೊಮ್ಮಗ. ಇಳಂಗೋ ಅಡಿಗಳ್ ಈ ಕಾವ್ಯವನ್ನು ಕ್ರಿ.ಶ. ಎರಡನೆಯ ಶತಮಾನದಲ್ಲಿ ರಚಿಸಿದನು. ಶಿಲಪ್ಪದಿಕಾರಂ‌ ಎಂದರೆ ರತ್ನಾಭರಣಗಳ ಕಾಲ್ಗಡಗ.  ಈ ಕೃತಿಯು ವರ್ತಕ ಕೋವಲನ್ ಹಾಗೂ ಕನ್ನಗಿಯರ ಕಥೆಯನ್ನು ಒಳಗೊಂಡಿದೆ. ಪ್ರಹರ್ ಪಟ್ಟಣದ ವರ್ತಕನಾದ ಕೋವಲನ್ ಎಂಬುವವನು ಮಾಧವಿ ಎಂಬ ವೇಶೈಯ ಮೋಹಕ್ಕೆ ಒಳಗಾಗಿ ಸಾದ್ವಿ ಹಾಗೂ ಸುಂದರವಾದ ತನ್ನ ಹೆಂಡತಿ ಕನ್ನಗಿಯನ್ನು ಕಡೆಗಣಿಸುತ್ತಾನೆ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಮಾಧವಿಯ ಮನೆಯಲ್ಲಿಯೇ ಕಾಲ ಕಳೆಯುತ್ತಾನೆ. ಈ ಅವಧಿಯಲ್ಲಿ ಕೋವಲನ್ ತಾನು ಸಂಪಾದಿಸಿದ ಆಸ್ತಿಯೆಲ್ಲವನ್ನು ಮಾಧವಿ ಕಸಿದುಕೊಳ್ಳುತ್ತಾಳೆ.  ಏನೂ ಇಲ್ಲದಾದ ಮೇಲೆ ಮನೆಯಿಂದ ಹೊರಹಾಕುತ್ತಾಳೆ. ಇದರಿಂದ ಪ್ರಾಯಶ್ಚಿತಕ್ಕೆ ಒಳಗಾದ ಕೋವಲನ್‌  ಮತ್ತೆ ತನ್ನ ಹೆಂಡತಿಯಾದ ಕನ್ನಗಿಯ ಬಳಿಗೆ ಹಿಂತಿರುಗುತ್ತಾನೆ. ಗಂಡ ಮಾಡಿದ ತಪ್ಪನ್ನು ಕ್ಷಮಿಸಿದ ಕನ್ನಗಿಯು ಕೋವಲನ್‌ನನ್ನು ಪ್ರಹಾರ್ ಪಟ್ಟಣದಿಂದ ಕರೆದುಕೊಂಡು ಮಧುರಾ ನಗರಕ್ಕೆ ಹೋಗಿ ಹೊಸ ಜೀವನವನ್ನು ಆರಂಭಿಸುತ್ತಾಳೆ. ಮಧುರಾ ನಗರದಲ್ಲಿ ಇದ್ದಾಗ ಜೀವನ ಸಾಗಿಸುವುದು ಅವರಿಗೆ ತುಂಬಾ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಗಿಯು ತನ್ನ ಬಳಿ ಇದ್ದ ಕಾಲಂದಿಗೆಯಲ್ಲಿ ಒಂದನ್ನು ಮಾಡಲು ಕೋವಲನ್‌‌ನಿಗೆ ನೀಡುತ್ತಾಳೆ. ಕಾಲಂದಿಗೆಯನ್ನು ಮಾರಿ ಬಂದ ಹಣದಿಂದ ಹೊಸ ಜೀವನವನ್ನು ಆರಂಭಿಸುತ್ತಾರೆ. ಆದರೆ, ಅಲ್ಲಿನ ರಾಜನು ತನ್ನ ಹೆಂಡತಿಯ ಕಾಲಂದಿಗೆಯನ್ನೇ ಮಾರಿದ್ದಾನೆ ಎಂದು ಕೋವಲನ್ ಮೇಲೆ ಕಳ್ಳತನದ ಆಪಾದನೆಯನ್ನು ಹೊರಿಸುತ್ತಾನೆ. ಪರಿಣಾಮವಾಗಿ ಆತ ಮರಣದಂಡನೆ ಶಿಕ್ಷೆಗೆ ಒಳಗಾಗುತ್ತಾನೆ. ಆಗ ಕನ್ನಗಿಯು ತನ್ನ ಬಳಿ ಇದ್ದ ಇನ್ನೊಂದು ಕಾಲಂದಿಗೆಯನ್ನು ಅರಸನಿಗೆ ತೋರಿಸುವುದರ ಮೂಲಕ ಕೋವಲನ್ ನಿರಪರಾಧಿ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತಾಳೆ. ತನ್ನ ತಪ್ಪಿಗೆ ಪ್ರಾಯಶ್ಚಿತ ಎಂಬಂತೆ ಅರಸ ಹೃದಯಾಘಾತಕ್ಕೆ ಒಳಗಾಗಿ ನಿಧನನಾಗುತ್ತಾನೆ. ಇದೊಂದು ಜೈನ ಕಾವ್ಯ. ಇದು ಮುಖ್ಯವಾಗಿ ಕನ್ನಗಿಯ ಪಾತಿವ್ರತ್ಯ, ಜೀವನ ಪ್ರೇಮ, ವಾತ್ಸಲ್ಯ ಹಾಗೂ ವಿಧಿಯ ಅಟ್ಟಹಾಸದ ಕುರಿತು ವಿವರಣೆ ನೀಡುತ್ತದೆ. ಕನ್ನಗಿಯನ್ನು ಪಾತಿವ್ರತ್ಯದ ದೇವತೆಯಾಗಿ ಆಕೆಗೆ ಚೇರ ಅರಸ ಶೆಂಗುಟ್ಟುವನ್ ದೇವಾಲಯವನ್ನು ಕಟ್ಟಿಸಿರುವುದನ್ನು ಈ ಮಹಾಕಾವ್ಯ ತಿಳಿಸುತ್ತದೆ. ಕನ್ನಗಿಯು ಸ್ವರ್ಗದಲ್ಲಿ ತನ್ನ ಗಂಡನನ್ನು ಸೇರಿಕೊಳ್ಳುತ್ತಾಳೆ. ಪರಿಣಾಮವಾಗಿ ಈ ನಾಡಿನಲ್ಲಿ ಕನ್ನಗಿ ಎಂಬ ಪಂಥವೊಂದು ಹುಟ್ಟಿಕೊಳ್ಳುತ್ತದೆ.

ಮಣಿಮೇಖಲೈ:

ಈ ಕಾವ್ಯವನ್ನು ಚಾತನಾರ್ ಎಂಬುವವನು ರಚಿಸಿದನು. ಇದೊಂದು ಬೌದ್ಧ ಕಾವ್ಯ. ಇದು ಕೋವಲನ್ ಹಾಗೂ ಮಾಧವಿಯವರ ಮಗಳಾಗಿದ್ದ ಮಣೀಮೇಖಲೈಳ ಸಾಧನೆಯ ಕುರಿತು ಮಾಹಿತಿ ಒದಗಿಸುತ್ತದೆ. ಮಣಿಮೇಖಲೈ ಹೇಗೆ ತನ್ನ ಪಾತಿವ್ರತ್ಯವನ್ನು ರಾಜಕುಮಾರ ಉದಯ ಕುಮಾರನಿಂದ ರಕ್ಷಿಸಿಕೊಂಡಳು  ಎನ್ನುವ ಅಂಶವನ್ನು ಈ ಮಹಾಕಾವ್ಯ ಒಳಗೊಂಡಿದೆ.   ಜೊತೆಗೆ ಬೌದ್ಧ ಧರ್ಮವನ್ನು  ಪ್ರಚಾರ ಮಾಡಿದ ಮಾಹಿತಿ ಇದೆ. ಅವಳು  ಬುದ್ಧ, ಧರ್ಮ ಮತ್ತು ಸಂಘಕ್ಕೆ ಹೇಗೆ ತನ್ನನ್ನು ಸಮರ್ಪಿಸಿಕೊಂಡು  ಜನರ ಹಸಿವು ರೋಗರುಜಿನ ಮತ್ತು ಬಡತನವನ್ನು ನಿವಾರಿಸಲು ಹೋರಾಟ ನಡೆಸಿದಳು ಎಂಬುದರ ಕುರಿತು ಈ ಕೃತಿ ಹೇಳುತ್ತದೆ.

ಉಪಸಂಹಾರ

ಸಂಘಂ ಯುಗವು  ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ವದ ಕಾಲ. ಈ ಯುಗದಲ್ಲಿ ರಚಿತವಾದ ಸಾಹಿತ್ಯ ರಾಶಿಯು ಪ್ರಾಚೀನ ತಮಿಳು ಸಮಾಜದ ದೈನಂದಿನ ಜೀವನ, ಆಡಳಿತ, ನೈತಿಕತೆ ಮತ್ತು ಭಾವನೆಗಳ ಆಳವಾದ ತಿಳುವಳಿಕೆಯನ್ನು ನೀಡುತ್ತದೆ. ಅಲ್ಲದೇ ಈ ಅವಧಿಯ ಸುಧಾರಿತ ಕೃಷಿ ಪದ್ಧತಿ, ಸಮುದ್ರ ಮಾರ್ಗದ ವ್ಯಾಪಾರ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಾರೆ,  ಸಂಘಂ ಯುಗವು ತಮಿಳು ಪರಂಪರೆಯ ಸುವರ್ಣಯುಗವಾಗಿ, ಭಾರತದ ಸಂಸ್ಕೃತಿಯ  ಐತಿಹಾಸಿಕ ಪರಂಪರೆಗೆ ಮಹತ್ತರ ಕೊಡುಗೆ ನೀಡಿದೆ.

ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ

ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ

ಪಲ್ಲವ ರಾಜನು ಕಲೋಪಾಸಕರಾಗಿದ್ದು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಪ್ರೋತ್ಸಾಹ ನೀಡಿದರು. ಪರಿಣಾಮವಾಗಿ ಭಾರತೀಯ ಕಲಾಚರಿತ್ರೆಯಲ್ಲಿ ನವೀನ ಶೈಲಿಯೊಂದು ಹುಟ್ಟಿಕೊಂಡಿತು. ಇಂತಹ ಶೈಲಿಯನ್ನು ‘ದ್ರಾವಿಡ ಶೈಲಿ’ ಎಂದು ಹೆಸರಿಸಲಾಗಿದೆ. ದ್ರಾವಿಡ ಶೈಲಿಯನ್ನಾದರಿಸಿ ಉತ್ತಮ ಕಲಾಸ್ಮಾರಕಗಳು ಪಲ್ಲವರ ಕಾಲದಲ್ಲಿ ನಿರ್ಮಾಣಗೊಂಡವು ಪಲ್ಲವರ ವಾಸ್ತುಶಿಲ್ಪವನ್ನು ಅದರ ಬೆಳವಣಿಗೆಗೆ ಅನುಗುಣವಾಗಿ 2 ಭಾಗಗಳಲ್ಲಿ ವಿಂಗಡಿಸಬಹುದು.

1. ಗುಹಾ ದೇವಾಲಯಗಳು,

2. ದೇವಾಲಯಗಳು, 

1. ಗುಹಾ ದೇವಾಲಯಗಳು:

ಗುಹಾ ದೇವಾಲಯಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ನೋಡಬಹುದು.

ಎ) ಸ್ತಂಭಮಂಟಪಗಳು,

ಬಿ) ಏಕಶಿಲೆಯ ದೇವಾಲಯಗಳು.

ಎ) ಸ್ತಂಭಮಂಟಪಗಳು:

1ನೇ ಮಹೇಂದ್ರವರ್ಮನ ಕಾಲದಲ್ಲಿ ಈ ಶೈಲಿಯು ಬೆಳವಣಿಗೆ ಹೊಂದಿದ್ದರಿಂದ ಮಹೇಂದ್ರವರ್ಮನ ಶೈಲಿಯೆಂದು ಸಹ ಕರೆಯಲಾಗಿದೆ. ಸ್ತಂಭ ಮಂಟಪಗಳ ಗುಹಾದೇವಾಲಯಗಳು ಮಹಾಬಲಿಪುರಂನಲ್ಲಿರುವ 100 ಆಡಿ ಎತ್ತರದಲ್ಲಿ ಹಬ್ಬಿರುವ ಶಿಲಾಬೆಟ್ಟದಲ್ಲಿ ಕಂಡುಬರುತ್ತವೆ. ಸ್ತಂಭ ಮಂಟಪಗಳ ನಿರ್ಮಾಣಕ್ಕೆ ಇಟ್ಟಿಗೆ, ಮರ, ಲೋಹ ಅಥವಾ ಗಾರೆಯನ್ನು ಬಳಸಿರುವುದಿಲ್ಲ. ಸರಳವಾದ ಸ್ತಂಭಮಂಟಪಗಳಾಗಿದ್ದು ಒಂದು ಅಥವಾ ಎರಡು ಗರ್ಭಗೃಹಗಳನ್ನು ಒಳಗೊಂಡಿವೆ. ಈ ಶೈಲಿಯ ಪ್ರಮುಖ ಲಕ್ಷಣವೆಂದರೆ ಸ್ತಂಭಮಂಟಪಗಳ ಮುಂಭಾಗ ಏಳು ಅಡಿಗಳ ಸ್ತಂಭಗಳ ಸಾಲನ್ನು ಒಳಗೊಂಡಿರುವುದು.

ಬಿ) ಏಕಶಿಲಾ ದೇವಾಲಯಗಳು:

ಈ ಶೈಲಿಯು ನರಸಿಂಹವರ್ಮನ್ ಕಾಲದಲ್ಲಿ ಬೆಳವಣಿಗೆಯಾದ ಕಾರಣ ನರಸಿಂಹವರ್ಮನ್ ಶೈಲಿಯೆಂದೇ ಹೆಸರಾಗಿದೆ. ಈ ಶೈಲಿಯಲ್ಲಿ ಕೆತ್ತಲ್ಪಟ್ಟ ಮಂಟಪಗಳು ಮಹಾಬಲಿಪುರಂ ನಲ್ಲಿ ಕಂಡುಬರುತ್ತವೆ. ಅಂತಹ ಪ್ರಮುಖ 8 ರಥಗಳೆಂದರೆ, ಭೀಮ, ಅರ್ಜುನ, ಧರ್ಮರಾಯ, ನಕುಲ, ಸಹದೇವ ಇವು ಪಂಚಪಾಂಡವರ ಹೆಸರಿನಲ್ಲಿದ್ದರೆ, ಉಳಿದೆರೆಡು ರಥಗಳೆಂದರೆ ಗಣೇಶ ರಥ ಮತ್ತು ಒಳ್ಳೆಯಾನ್ ಕುಟ್ಟಿರಥ ಅತೀ ಉದ್ದವಾದ ಮತ್ತು ಪೂರ್ಣಗೊಂಡ ರಥವೆಂದರೆ ಧರ್ಮರಾಜರಥ. ಇದರಲ್ಲಿ ಪಲ್ಲವ ಶೈಲಿಯ ಲಕ್ಷಣಗಳು ಕಂಡುಬರುತ್ತವೆ. ಭೀಮ, ಗಣೇಶ ಮತ್ತು ಸಹದೇವ ರಥಗಳನ್ನು ಚಚೌಕ ಆಕಾರದಲ್ಲಿ ಕೆತ್ತಲಾಗಿದೆ. ಎರಡು ಮತ್ತು ಮೂರು ಅಂತಸ್ತುಗಳನ್ನು ಒಳಗೊಂಡಿದೆ. ಬ್ರೌಪದಿ ರಥವು ಅತ್ಯಂತ ಚಿಕ್ಕ ರಥವಾಗಿದ್ದರೆ, ಭೀಮರಥ ಅತ್ಯಂತ ದೊಡ್ಡ ರಥವಾಗಿದೆ. ಪ್ರತಿಯೊಂದು ರಥವನ್ನು ಒಂದೇ ಆಖಂಡ ಶಿಲೆಯಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದು ರಥವು ಒಂದು ದೇವಾಲಯದ ವಿನ್ಯಾಸವನ್ನು ಹೊಂದಿದೆ.

2. ದೇವಾಲಯಗಳು:

ಪಲ್ಲವರ ಕಾಲದ ದೇವಾಲಯಗಳನ್ನು

ಎ)ರಾಜಸಿಂಹ ಶೈಲಿ,

ಬಿ)ಅಪರಾಜಿತ ಶೈಲಿಯ ದೇವಾಲಯಗಳೆಂದು ವಿಂಗಡಿಸಿ ನೋಡಬಹುದು.

ಎ) ರಾಜಸಿಂಹಶೈಲಿ:

ರಾಜಸಿಂಹನು ಈ ಶೈಲಿಯ ಕರ್ತೃವಾಗಿದ್ದನು. ಈ ಶೈಲಿಯ ಕಲಾಕೃತಿಗಳೆಂದರೆ ಮಹಾಬಲಿಪುರಂನಲ್ಲಿನ ತೀರದ ದೇವಾಲಯ, ಈಶ್ವರ ದೇವಾಲಯ ಮತ್ತು ಮುಕುಂದ ದೇವಾಲಯಗಳು, ಕಂಚಿಯಲ್ಲಿ ನಿರ್ಮಾಣ ಗೊಂಡಿರುವ ಕೈಲಾಸನಾಥ ದೇವಾಲಯ ಮತ್ತು ವೈಕುಂಟ ಪೆರುಮಾಳ್‌ ದೇವಾಲಯಗಳು ಈ ಶೈಲಿಯಲ್ಲಿನ ಎತ್ತರದ ಗೋಪುರಗಳನ್ನು ಒಳಗೊಂಡ ದೇವಾಲಯಗಳಾಗಿದೆ. ಇಂತಹ ದೇವಾಲಯಗಳ ಶಿಲ್ಪಗಳಲ್ಲಿ ರಾಜ-ರಾಣಿಯರ ಪೂರ್ಣ ವಿಗ್ರಹಗಳಿವೆ.

ತೀರದೇವಾಲಯ:

ಮಹಾಬಲಿಪುರಂ ನಲ್ಲಿರುವ ‘ತೀರ ದೇವಾಲಯ’ ಪಲ್ಲವರ ಕಾಲದ ಪ್ರಮುಖ ದೇವಾಲಯಗಳಲ್ಲಿ ಒಂದು. ಈ ದೇವಾಲಯದಲ್ಲಿ ಪಲ್ಲವರ ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಸಮುದ್ರ ದಂಚಿನಲ್ಲಿರುವ ದೇವಾಲಯ ವಾದುದರಿಂದ ಅಲೆಗಳ ಹೊಡೆತಕ್ಕೆ ಸಿಕ್ಕು ಶಿಥಿಲಗೊಂಡಿದೆ. ಕೈಲಾಸನಾಥ ದೇವಾಲಯದಲ್ಲಿ ಪಿರಮಿಡ್ಡಿನಾಕಾರದ ಶಿಖರ, ಸಮತಟ್ಟಾದ ಭಾವಣಿಯ ಮಂಟಪ ಹಾಗೂ ಮಂಟಪದ ಸ್ತಂಭಗಳಿಗೆ ಸಿಂಹಪೋಷಕವಾಗಿರುವಂತೆ ಕೆತ್ತಲಾಗಿದೆ. ಈ ದೇವಾಲಯ ಪಲ್ಲವರ ಶೈಲಿಯಲ್ಲಿನ ಮುಖಮಂಟಪ, ಸಭಾಮಂಟಪ ಹಾಗೂ ಗರ್ಭಗೃಹಗಳನ್ನು ಒಳಗೊಂಡಿದೆ. ಈ ದೇವಾಲಯದಲ್ಲಿ ಪಲ್ಲವರ ಶೈಲಿಯ ಎಲ್ಲಾ ಲಕ್ಷಣಗಳು ಕಂಡುಬರುತ್ತವೆ. ಈ ದೇವಾಲಯದ ತಳಭಾಗದ ಕಟ್ಟಡಕ್ಕೆ ಗ್ರಾನೈಟ್ ಶಿಲೆಯನ್ನು ಬಳಸಿದ್ದಾರೆ. ಮೇಲ್ಕಟ್ಟಡಕ್ಕೆ ಮರಳು ಶಿಲೆಯನ್ನು ಬಳಸಲಾಗಿದೆ.

ವೈಕುಂಠ ಪೆರುಮಾಳ್ ದೇವಾಲಯ ಕೈಲಾಸನಾಥ ದೇವಾಲಯಕ್ಕಿಂತಲೂ ವಿಸ್ತ್ರತವಾಗಿದೆ. ಈ ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ಮುಖಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದ ಮೇಲ್ಬಾಗದಲ್ಲಿ ಗೋಪುರವು ಕಂಡುಬರುತ್ತದೆ.

ಬಿ) ಅಪರಾಜಿತ ಶೈಲಿ:

ಕ್ರಿಶ 9ನೇ ಶತಮಾನಕ್ಕೆ ಸೇರಿದ ಕಟ್ಟಡಗಳನ್ನು ‘ಅಪರಾಜಿತ ಶೈಲಿ’ ಎಂದು ಗುರುತಿಸಿ ಅದೇ ಹೆಸರಿನಲ್ಲಿ ಕರೆಯಲಾಗಿದೆ. ಚೋಳಕಲೆಗೆ ಅಪರಾಜಿತ ಶೈಲಿಯು ಸ್ಪಷ್ಟ ನಿದರ್ಶನವಾಗಿವೆ. ಈ ಶೈಲಿಯಲ್ಲಿ ಲಿಂಗಗಳನ್ನು ವರ್ತುಲಾಕಾರದಲ್ಲಿ ನಿರ್ಮಿಸಲಾಗಿದೆ.

ಮೂರ್ತಿಶಿಲ್ಪ:

ಪಲ್ಲವರ ಕಾಲದಲ್ಲಿ ಮೂರ್ತಿಶಿಲ್ಪ ಕೂಡ ಅಭಿವೃದ್ಧಿಗೊಂಡಿತ್ತು, ಮಹಾಬಲಿಪುರಂ ನಲ್ಲಿರುವ ‘ದೇವಗಂಗೆಯ ಭೂಸ್ಪರ್ಶ’ ಅಥವಾ ‘ಗಂಗಾವತರಣ’ ಶಿಲ್ಪವು ಅತ್ಯುತ್ತಮ ಉದಾಹರಣೆ ಎನಿಸಿದೆ. ಈ ಶಿಲ್ಪಕಲೆಯ ದೃಶ್ಯವನ್ನು ಏಕಶಿಲೆಯಲ್ಲಿ ನಿರ್ಮಿಸಲಾಗಿದೆ. ಈ ಶಿಲೆಯು 99 ಅಡಿ ಉದ್ದ, 45 ಅಡಿ ಅಗಲ ಮತ್ತು 30ಅಡಿ ಎತ್ತರವಿದೆ.

ಮೊದಲನೇ ಮಹೇಂದ್ರವರ್ಮನು ಚಿತ್ರಕಲೆಗೆ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದರಿಂದ ‘ಚಿತ್ತಕಾರಪುಲಿ’ (ಚಿತ್ರಕಾರರಲ್ಲಿ ಹುಲಿ) ಎಂಬ ಬಿರುದಿಗೆ ಪಾತ್ರನಾಗಿದ್ದನು. ಮಹಾಬಲಿಪುರಂನ ಮಂಟಪದಲ್ಲಿನ ಅನಂತಶಯನ, ಮಹಿಷಾಸುರಮರ್ದಿನಿ ಹಾಗೂ ಶ್ರೀಕೃಷ್ಣ ಗೋವರ್ಧನಗಿರಿಯನ್ನು ಎತ್ತಿಹಿಡಿದಿರುವ ದೃಶ್ಯ ನೋಡಲು ನಯನ ಮನೋಹರವಾಗಿದೆ.

ಪಲ್ಲವರ ಕಾಲದ ಗುಹಾ ದೇವಾಲಯಗಳಲ್ಲಿ ಭಿತ್ತಿಚಿತ್ರಗಳ ಬೆಳವಣಿಗೆಯನ್ನು ಕಾಣಬಹುದು. ಸಿತ್ತನ್ನವಾಸಲ್ ನಲ್ಲಿ ನೃತ್ಯಭಂಗಿಯಲ್ಲಿರುವ ಅಪ್ಸರೆಯರ ಚಿತ್ರಗಳಿವೆ.

ಕಂಚಿಯ ಪಲ್ಲವರ ಕಲಾಭಿವೃದ್ಧಿಯನ್ನು ಅವಲೋಕಿಸಿ ಪ್ರಖ್ಯಾತ ಕಲಾತಜ್ಞ ‘ಪರ್ಸಿಬ್ರೌನ್’ ದಕ್ಷಿಣಭಾರತದ ಕಲಾಶೈಲಿಯ ಅಭ್ಯುದಯಕ್ಕೆ ಪಲ್ಲವರು ಅಡಿಪಾಯಹಾಕಿದರು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿ.ಎ.ಸ್ಮಿತ್ ರವರು ‘ದಕ್ಷಿಣ ಭಾರತದ ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಯ ಚರಿತ್ರೆ 6ನೇ ಶತಮಾನದ ಅಂತ್ಯದಲ್ಲಿ ಆರಂಭಗೊಂಡಿತು’ ಎಂದಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಪಲ್ಲವರ ಕಾಲವು ಸಾಂಸ್ಕೃತಿಕ ವೈಭವದ ಮೇಲ್ಪಂಕ್ತಿಯ ಕಾಲವೆನಿಸಿದೆ.