
ಯೋಗಕ್ಷೇಮ ವ್ಯಾಖ್ಯಾನ
ಅಲ್ಫ್ರೆಡ್ ಮಾರ್ಷಲ್, ಎ.ಸಿ.ಪಿಗು, ಎಡ್ರಿನ್ ಕ್ಯಾನನ್, ಬೆವರಿಜ್ ಮುಂತಾದ ಅರ್ಥಶಾಸ್ತ್ರಜ್ಞರು ಈ ಯೋಗಕ್ಷೇಮ ವ್ಯಾಖ್ಯಾನದ ಪ್ರತಿಪಾದಕರಾಗಿದ್ದಾರೆ. ಈ ಎಲ್ಲಾ ಅರ್ಥಶಾಸ್ತ್ರಜ್ಞರು ನವ ಸಂಪ್ರದಾಯ ಪಂಥಕ್ಕೆ ಸೇರಿದವರಾಗಿರುವುದರಿಂದ ಈ ವ್ಯಾಖ್ಯೆಯನ್ನು ‘ನವ ಸಂಪ್ರದಾಯ ಪಂಥದ ವ್ಯಾಖ್ಯೆ” ಎಂದೂ ಕರೆಯಲಾಗಿದೆ. ಮಾರ್ಷಲ್ ಮತ್ತು ಅವರ ಅನುಯಾಯಿಗಳು ಸಂಪತ್ತಿಗಿಂತಲೂ ಮಾನವನ ಯೋಗಕ್ಷೇಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದುದರಿಂದ ಈ ವ್ಯಾಖ್ಯಾನವನ್ನು “ಯೋಗಕ್ಷೇಮ ವ್ಯಾಖ್ಯೆ” ಎಂದು ಕರೆಯಲಾಗಿದೆ.
ಮಾರ್ಷಲ್ ರವರು 1890 ರಲ್ಲಿ ಪ್ರಕಟಿಸಿದ “ದಿ ಪಿನ್ಸಿಪಲ್ಸ್ ಆಫ್ ಎಕನಾಮಿಕ್ಸ್” ಎಂಬ ಗ್ರಂಥದಲ್ಲಿ ಅರ್ಥಶಾಸ್ತ್ರವು ಮಾನವನ ದೈನಂದಿನ ವ್ಯವಹಾರಗಳನ್ನು ಕುರಿತು ಅಭ್ಯಸಿಸುತ್ತದೆ. ಮಾನವನ ಯೋಗಕ್ಷೇಮಕ್ಕೆ ಅಗತ್ಯವಿರುವ ಭೌತಿಕ ವಸ್ತುಗಳ ಗಳಿಕೆ ಮತ್ತು ಅವುಗಳ ಉಪಯೋಗದ ವಿಷಯದಲ್ಲಿ ವ್ಯಕ್ತಿ ಮತ್ತು ಸಮಾಜ ನಿರ್ವಹಿಸುವ ಕ್ರಿಯೆಗಳನ್ನು ಅದು ಪರಿಶೀಲಿಸುತ್ತದೆ. ಈ ರೀತಿಯಾಗಿ ಅರ್ಥಶಾಸ್ತ್ರ ಒಂದು ಕಡೆ ಸಂಪತ್ತನ್ನು ಕುರಿತು ಅಭ್ಯಸಿಸಿದರೆ ಮತ್ತೊಂದು ಕಡೆ ಮಾನವನನ್ನೇ ಕುರಿತು ಅಭ್ಯಸಿಸುತ್ತದೆ.
ಮಾರ್ಷಲ್ ಅವರ ವ್ಯಾಖ್ಯಾನ ಅರ್ಥಶಾಸ್ತ್ರದ ವಿಷಯ ವಸ್ತುವನ್ನು ಸಂಪತ್ತಿನಿಂದ ಯೋಗಕ್ಷೇಮಕ್ಕೆ ವರ್ಗಾಯಿಸಿತು. ಮಾರ್ಷಲರ ವ್ಯಾಖ್ಯಾನವು ಮುಖ್ಯವಾಗಿ ನಾಲ್ಕು ಅಂಶಗಳನ್ನು ಒಳಗೊಂಡಿದೆ. ಅವುಗಳು ಈ ಕೆಳಗಿನಂತಿವೆ.
ಅ) ಅರ್ಥಶಾಸ್ತ್ರ ಸಂಪತ್ತನ್ನು ಗಳಿಸುವುದನ್ನೇ ಆರ್ಥಿಕ ಚಟುವಟಿಕೆಗಳ ಪರಮ ಉದ್ದೇಶವನ್ನಾಗಿ ಪರಿಗಣಿಸುವುದಿಲ್ಲ, ಮಾರ್ಷಲರ ಪ್ರಕಾರ ಸಂಪತ್ತು ಮಾನವನ ಕಲ್ಯಾಣಕ್ಕೋಸ್ಕರ ಇದೆಯೇ ಹೊರತು ಮಾನವನು ಸಂಪತ್ತಿಗಲ್ಲ. ಸಂಪತ್ತು ಕೇವಲ ಸಾಧನ ಮಾತ್ರ; ಮಾನವನ ಯೋಗಕ್ಷೇಮವನ್ನು ಹೆಚ್ಚಿಸುವುದೇ ಸಂಪತ್ತು ಗಳಿಕೆಯ ಗುರಿ ಆದ್ದರಿಂದ ಮಾರ್ಷಲರು ಸಂಪತ್ತನ್ನು ಎರಡನೇ ಸ್ಥಾನಕ್ಕೆ ತಳ್ಳಿದರು.
ಆ) ಅರ್ಥಶಾಸ್ತ್ರ ಪ್ರೀತಿ ಮತ್ತು ವಿಶ್ವಾಸ ಹೊಂದಿ ಸಹಬಾಳ್ವೆಯನ್ನು ಇಷ್ಟಪಡುವ ಜನ ಸಾಮಾನ್ಯರನ್ನು ಕುರಿತು ಅಭ್ಯಸಿಸುತ್ತದೆಯೇ ಹೊರತು, ಸಂಪತ್ತಿಗಾಗಿಯೇ ವರ್ತಿಸುವ ಅರ್ಥವನ್ನು ಹೊಂದಿಲ್ಲ.
ಇ) ಅರ್ಥಶಾಸ್ತ್ರ ಒಂದು ಸಮಾಜ ವಿಜ್ಞಾನವಾಗಿದ್ದು ಅದು ಸಮಾಜದಲ್ಲಿ ಜೀವಿಸುವ, ಸಮಾಜದ ಮೇಲೆ ಪ್ರಭಾವ ಬೀರುವ ಮತ್ತು ಪ್ರಭಾವಿತನಾಗುವ ವ್ಯಕ್ತಿಯನ್ನು ಕುರಿತು ಅಭ್ಯಸಿಸುತ್ತದೆ. ಅರ್ಥಶಾಸ್ತ್ರ ಮಾನವನನ್ನು ಸಮಾಜದಿಂದ ಪ್ರತ್ಯೇಕಿಸಿ ಅಭ್ಯಸಿಸುವುದಿಲ್ಲ.
ಈ) ಅರ್ಥಶಾಸ್ತ್ರ ಕೇವಲ ಭೌತಿಕ ಯೋಗಕ್ಷೇಮವನ್ನು ಕುರಿತು ಅಭ್ಯಸಿಸುತ್ತದೆ ಹಾಗು ಅಭೌತಿಕ ಅಂಶಗಳನ್ನು ನಿರ್ಲಕ್ಷಿಸುತ್ತದೆ.
ಮಾರ್ಷಲ್ ಅವರ ಈ ಅಭಿಪ್ರಾಯವನ್ನು ಪ್ರೊ.ಎ.ಸಿ.ಪಿಗು, ಎಡ್ರಿನ್ ಕ್ಯಾನನ್, ಬೆವರಿಚ್ ಮುಂತಾದವರು ಸಮರ್ಥಿಸಿದರು. ಪ್ರೊ.ಪಿಗು ಅವರ ಪ್ರಕಾರ, “ಅರ್ಥಶಾಸ್ತ್ರವು ಆರ್ಥಿಕ ಯೋಗಕ್ಷೇಮದ ಪರಿಶೀಲನೆಯ ಶಾಸ್ತ್ರ, ಆರ್ಥಿಕ ಯೋಗಕ್ಷೇಮವೆಂದರೆ ಹಣದ ಮಾನದಂಡದಿಂದ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಅಳೆಯಲು ಸಾಧ್ಯವಾಗುವಂತಹುದು”, ಎಡ್ರಿಸ್ ಕ್ಯಾನನ್ ರವರ ಪ್ರಕಾರ “ಮಾನವನ ಭೌತಿಕ ಯೋಗಕ್ಷೇಮಕ್ಕೆ ಕಾರಣವಾಗುವ ಅಂಶಗಳನ್ನು ಪರಿಶೀಲಿಸುವ ಶಾಸ್ತ್ರವೇ ಅರ್ಥಶಾಸ್ತ್ರ”.
ಟೀಕೆಗಳು: ಮಾರ್ಷಲ್ ಯೋಗಕ್ಷೇಮ ವ್ಯಾಖ್ಯಾನವು ಸಂಪತ್ತಿನ ವ್ಯಾಖ್ಯಾನದಿಂದ ಅರ್ಥಶಾಸ್ತ್ರಕ್ಕೆ ಅಂಟಿಕೊಂಡಿದ್ದ ಅಪಖ್ಯಾತಿಯನ್ನು ನಿವಾರಿಸಿ ಅದರ ಮಹತ್ವ ಮತ್ತು ವ್ಯಾಪ್ತಿಯನ್ನು ಹಿಗ್ಗಿಸುವಲ್ಲಿ ಯಶಸ್ವಿಯಾದರೂ ಕೂಡ ಅನೇಕ ಕಾರಣಗಳಿಂದ ಟೀಕಿಸಲ್ಪಟ್ಟಿದೆ. ಪ್ರೊ.ಲಿಯೋನೆಲ್ ರಾಬಿನ್ಸ್ರವರು ಯೋಗಕ್ಷೇಮ ವ್ಯಾಖ್ಯಾನದ ಪ್ರಮುಖ ಟೀಕಾಕಾರರಾಗಿದ್ದಾರೆ. ಅವರ ಪ್ರಮುಖ ಟೀಕೆಗಳು ಇಂತಿವೆ.
1. ಮಾರ್ಷಲರ ವ್ಯಾಖ್ಯಾನದ ಪ್ರಕಾರ ಕೇವಲ ಭೌತಿಕ ಸರಕುಗಳು ಮಾತ್ರ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತವದಲ್ಲಿ ವೈದ್ಯರು, ಉಪಾಧ್ಯಾಯರು, ವಕೀಲರು, ವಿಜ್ಞಾನಿಗಳು ಮುಂತಾದವರ ಸೇವೆಗಳು ಕೂಡ ಮಾನವನ ಯೋಗಕ್ಷೇಮವನ್ನು ಹೆಚ್ಚಿಸಬಲ್ಲವು. ಆದುದರಿಂದ ಮಾರ್ಷಲ್ ರವರ ವ್ಯಾಖ್ಯಾನವು ಸಂಕುಚಿತ ಮತ್ತು ಅವೈಜ್ಞಾನಿಕವಾದುದಾಗಿದೆ ಎಂದು ರಾಬಿನ್ಸ್ರವರು ಟೀಕಿಸುತ್ತಾರೆ.
2. ಮಾರ್ಷಲ್ ಪ್ರಕಾರ ಭೌತಿಕ ಸರಕುಗಳು ಮಾನವನ ಕಲ್ಯಾಣ ಅಥವಾ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತವವಾಗಿ ಎಲ್ಲಾ ಭೌತಿಕ ಸರಕುಗಳು ಮಾನವನ ಯೋಗಕ್ಷೇಮವನ್ನು ಹೆಚ್ಚಿಸುವುದಿಲ್ಲ. ಉದಾಹರಣೆಗೆ: ಭೌತಿಕ ಸರಕುಗಳಾದ ತಂಬಾಕು, ಅಫೀಮು, ಮದ್ಯ, ಮುಂತಾದವು ಮಾನವನ ಕಲ್ಯಾಣವನ್ನು ಹೆಚ್ಚಿಸುವುದರ ಬದಲು ಕಡಿಮೆಗೊಳಿಸುತ್ತವೆ.
3. ಪ್ರೊ ರಾಬಿನ್ಸ್ರವರ ಪ್ರಕಾರ “ಯೋಗಕ್ಷೇಮ ಎಂಬ ಪದವು ನೈತಿಕ ಮೌಲ್ಯಗಳನ್ನು ಒಳಗೊಂಡಿರುವುದರಿಂದ ಅರ್ಥಶಾಸ್ತ್ರ ಎಂಬ ಪರಿಶುದ್ದ. ವಿಜ್ಞಾನದಲ್ಲಿ ಅಂತಹ ಪದಗಳನ್ನು ಬಳಸಲೇಬಾರದು”.
4. ಮಾನವನ ಯೋಗಕ್ಷೇಮವನ್ನು ಹಣದ ಅಳತೆಗೋಲಿನಿಂದ ಅಳೆಯುವುದು ಸಾಧ್ಯವಿದೆ ಎಂದು ಯೋಗಕ್ಷೇಮ ವ್ಯಾಖ್ಯಾನ ಅಭಿಪ್ರಾಯ ತಾಳುತ್ತದೆ. ಆದರೆ ವಾಸ್ತವವಾಗಿ ಯೋಗಕ್ಷೇಮದ ನೇರ ಮಾಪನ ಅಸಾಧ್ಯ. ಏಕೆಂದರೆ ಯೋಗಕ್ಷೇಮ ವ್ಯಕ್ತಿಯಿಂದ ವ್ಯಕ್ತಿಗೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ ಹಾಗೂ ಅದು ಮಾನಸಿಕವಾದುದಾಗಿದೆ.
5. ಮಾರ್ಷಲರ ವ್ಯಾಖ್ಯಾನವು ಅರ್ಥಶಾಸ್ತ್ರದ ಮೂಲ ಸಮಸ್ಯೆಗಳಾದ ಮಿತವಾದ ಸಂಪನ್ಮೂಲಗಳು, ಅಪರಿಮಿತ ಬಯಕೆಗಳು, ಆಯ್ಕೆಯ ಸಮಸ್ಯೆ ಮುಂತಾದವುಗಳನ್ನು ಪರಿಗಣಿಸುವುದಿಲ್ಲ. ಇಷ್ಟೇ ಅಲ್ಲದೆ ಆಧುನಿಕ ಆರ್ಥಿಕ ವ್ಯವಸ್ಥೆಗಳ ಜಟಿಲ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಆರ್ಥಿಕ ಆವರ್ತಗಳು, ಅನಭಿವೃದ್ಧಿ ಮುಂತಾದವುಗಳನ್ನು ಪರಿಗಣಿಸುವುದಿಲ್ಲ.
ಈ ಮೇಲಿನ ಟೀಕೆಗಳಿದ್ದರೂ ಕೂಡ ಯೋಗಕ್ಷೇಮ ವ್ಯಾಖ್ಯಾನವು ಸಾಕಷ್ಟು ಜನಪ್ರಿಯವಾಗಿದೆ.
Call Us : +91 8431122691
Mail Us: admin@softonis.com
Visit Once: Opposite Abhishek optical Second cross right side, Ashok Nagara, Shivamogga, Karnataka 577202.