ಕೇನ್ಸನ ಉದ್ಯೋಗ ಸಿದ್ಧಾಂತ

ಕೇನ್ಸನ ಉದ್ಯೋಗ ಸಿದ್ಧಾಂತ

ಕೇನ್ಸ್‌ನು ಕ್ರಿ.ಶ. 1936ರಲ್ಲಿ ಪ್ರಕಟವಾದ ತನ್ನ ‘ಉದ್ಯೋಗ, ಬಡ್ಡಿ ಮತ್ತು ಹಣದ ಸಾಮಾನ್ಯ ಸಿದ್ಧಾಂತ’ (General theory of Employment, Interest and Money) ಎಂಬ ಕೃತಿಯಲ್ಲಿ ಸಂಪ್ರದಾಯ ಪಂಥದವರ ಉದ್ಯೋಗ ಸಿದ್ಧಾಂತವನ್ನು ಕಟುವಾಗಿ ಟೀಕಿಸಿರುವುದಲ್ಲದೇ ತಮ್ಮದೇ ಆದಂತಹ ಒಂದು ಹೊಸ ಉದ್ಯೋಗ ಸಿದ್ದಾಂತವನ್ನು ಪ್ರತಿಪಾದಿಸಿದರು. ಈ ಕೃತಿಯು ಪ್ರಕಟವಾಗುವುದಕ್ಕೆ ಮುಂಚಿತವಾಗಿ ರಾಷ್ಟ್ರೀಯ ವರಮಾನ ಮತ್ತು ಉದ್ಯೋಗ ಸಿದ್ದಾಂತದ ಬಗ್ಗೆ ನವೀನ ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಹೆಚ್ಚು ಗಮನ ನೀಡಿರಲಿಲ್ಲ. ಅವರು ಜೆ.ಬಿ.ಸೇ, ಅವರ “ಮಾರುಕಟ್ಟೆಯ ನಿಯಮ”ದಲ್ಲಿ ಅಪಾರವಾದ ನಂಬಿಕೆ ಇಟ್ಟಿದ್ದರಲ್ಲದೇ, ಅರ್ಥವ್ಯವಸ್ಥೆಯಲ್ಲಿ ಯಾವಾಗಲೂ ಪೂರ್ಣೋದ್ಯೋಗ ಇರುತ್ತದೆಯೆಂದು ಭಾವಿಸಿದ್ದರು. ಆದರೆ 1929-30ರ ಅವಧಿಯಲ್ಲಿ ಅಮೇರಿಕದಲ್ಲಿ ಸಂಭವಿಸಿದ ‘ಮಹಾ ಆರ್ಥಿಕ ಮುಗ್ಗಟ್ಟು’ ಸಂಪ್ರದಾಯ ಪಂಥದ ಔಚಿತ್ಯವನ್ನೇ ಪ್ರಶ್ನಿಸುವಂತೆ ಮಾಡಿತು. ಏಕೆಂದರೆ ಈ ಮಹಾ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಲು ಸಂಪ್ರದಾಯ ಪಂಥದವರ ವಿಶ್ಲೇಷಣೆಯು ವಿಫಲವಾಯಿತು. ಪರಿಣಾಮವಾಗಿ ಹೊಸ ಪರಿಣಾಮಕಾರಿ ಆರ್ಥಿಕ ಅಸ್ತ್ರವೊಂದರ ಅಗತ್ಯ ಉಂಟಾಯಿತು. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೇನ್ಸ್‌ರವರು ತಮ್ಮ ಅದ್ವಿತೀಯ ಪಾಂಡಿತ್ಯವನ್ನು ಬಳಸಿ ಒಂದು ಹೊಸ ಮೀಮಾಂಸೆಯಾದ ‘ಸಾಮಾನ್ಯ ಸಿದ್ಧಾಂತ’ವನ್ನು ರಚಿಸಿದರು. ಈ ಕೃತಿಯು ಅರ್ಥಶಾಸ್ತ್ರದ ವಿಚಾರಧಾರೆಯಲ್ಲಿ ಕ್ರಾಂತಿಯನ್ನೆ ಉಂಟುಮಾಡಿದುದಲ್ಲದೇ ಒಂದು ಹೊಸ ಮಾರ್ಗವನ್ನೇ ಹುಟ್ಟುಹಾಕಿತು. ಕೇನ್ಸ್‌ರವರ ಅರ್ಥಶಾಸ್ತ್ರಕ್ಕೆ ‘ನವೀನ ಅರ್ಥಶಾಸ್ತ್ರ’ (Neo Economics) ಎಂಬ ಹೆಸರು ಸಹ ಇದೆ. 18ನೇ ಶತಮಾನದಲ್ಲಿ ಆಡಂಸ್ಮಿತ್‌ರ ‘ರಾಷ್ಟ್ರಗಳ ಸಂಪತ್ತು’ (Wealth of Nations) ಎಂಬ ಗ್ರಂಥಕ್ಕೂ ಮತ್ತು 19ನೇ ಶತಮಾನದಲ್ಲಿ ಕಾರ್ಲ್‌ಮಾರ್ಕ್ಸರ “ದಾಸ್ ಕ್ಯಾಪಿಟಲ್” ಎಂಬ ಗ್ರಂಥಕ್ಕೂ ದೊರೆತಷ್ಟು ಮನ್ನಣೆ ಇಪ್ಪತ್ತನೇ ಶತಮಾನದಲ್ಲಿ ಕೇನ್ಸ್‌ರವರ ‘ಸಾಮಾನ್ಯ ಸಿದ್ಧಾಂತ’ಕ್ಕೆ ದೊರೆತಿದೆ ಮತ್ತು ಸರಕಾರದ ಹಸ್ತಕ್ಷೇಪ ರಹಿತ ತಾಟಸ್ಯ ನೀತಿಯ ನಿರಾಕರಣೆಯಾಗಿದೆ ಎಂದು ಪ್ರೊ. ಡಡ್ಲೆ ಡಿಲಾರ್ಡ್ ಅವರು ಅಭಿಪ್ರಾಯ ಪಡುತ್ತಾರೆ. ಕೇನ್ಸ್‌ರವರು ತಮ್ಮ ಸಿದ್ಧಾಂತದ ವಿಶ್ಲೇಷಣೆಯ ಸರಳತೆಗೋಸ್ಕರ ಕೆಲವು ಅಂಶಗಳನ್ನು ಊಹಿಸಿ ತಮ್ಮ ಸಿದ್ಧಾಂತವನ್ನು ಸೃಜಿಸಿದ್ದಾರೆ. ಅವುಗಳು ಈ ಕೆಳಗಿನಂತಿವೆ.

1. ಅರ್ಥ ವ್ಯವಸ್ಥೆಯಲ್ಲಿ ಪರಿಪೂರ್ಣ ಪೈಪೋಟಿ ಅಸ್ತಿತ್ವದಲ್ಲಿರುತ್ತದೆ.

2. ಉತ್ಪಾದನೆಯು ಇಳಿಮುಖ ಪ್ರತಿಫಲ ನಿಯಮಕ್ಕೊಳಪಡುತ್ತದೆ.

3. ಆರ್ಥಿಕ ಸಮಸ್ಯೆಗಳು ಅಲ್ಪಾವಧಿಗೆ ಸಂಬಂಧಿಸಿರುತ್ತದೆ.(ಈ ಕಾರಣದಿಂದಲೇ ಕೇನ್ಸ್‌ರವರ ಅರ್ಥಶಾಸ್ತ್ರವನ್ನು ಅಲ್ಪಾವಧಿಯ ಅರ್ಥಶಾಸ್ತ್ರವೆಂದು ಕರೆಯಲಾಗಿದೆ.)

4. ಮುಕ್ತ ಆರ್ಥಿಕತೆಗೆ ಬದಲಾಗಿ ನಿರ್ಬಂಧಿತ ಆರ್ಥಿಕ ವ್ಯವಸ್ಥೆ ಇರುತ್ತದೆ.

5. ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪವಿರುತ್ತದೆ.

6. ಅರ್ಥ ವ್ಯವಸ್ಥೆಯಲ್ಲಿ ಪೂರ್ಣೋದ್ಯೋಗವಿರದೆ ಅರೆ ಉದ್ಯೋಗವಿರುತ್ತದೆ.

7. ಅಲ್ಪಾವಧಿಯಲ್ಲಿ ಜನಸಂಖ್ಯೆ, ಶ್ರಮ ಬಲ, ಶ್ರಮದಕ್ಷತೆ ಮತ್ತು ತಂತ್ರಜ್ಞಾನ ಸ್ಥಿರವಿರುತ್ತದೆ.

ಪೂರೈಕೆ ಮತ್ತು ಬೇಡಿಕೆಗಳು ಆರ್ಥಿಕ ವಿಶ್ಲೇಷಣೆಯ ಎರಡು ಮುಖ್ಯ ಭಾಗಗಳಾಗಿವೆ. ಆರ್ಥಿಕ ಚಟುವಟಿಕೆಗಳ ಕಾರಣ- ಪರಿಣಾಮಗಳನ್ನು ಈ ಎರಡು ಅಂಶಗಳ ಸಹಾಯದಿಂದ ಅಧ್ಯಯನ ಮಾಡಬಹುದಾಗಿದೆ. ಆ ಮೇರೆಗೆ ಕೇನ್ಸ್‌ರವರು ಪೂರೈಕೆಯ ಭಾಗಕ್ಕಿಂತ ಬೇಡಿಕೆಯ ಭಾಗಕ್ಕೆ ಹೆಚ್ಚು ಒತ್ತು ನೀಡಿರುತ್ತಾರೆ. ಕೇನ್ಸ್‌ರ ಅರ್ಥಶಾಸ್ತ್ರವು ಅಲ್ಪಾವಧಿಗೆ ಸಂಬಂಧಿಸಿರುವುದರಿಂದ ಈ ಸಮಯದಲ್ಲಿ ಪೂರೈಕೆಯು ಯಾವುದೇ ಬದಲಾವಣೆಗಳಿಲ್ಲದೆ ಸ್ಥಿರವಾಗಿರುತ್ತದೆಂದು ಅವರು ಊಹಿಸುತ್ತಾರೆ. ಅಷ್ಟೇ ಅಲ್ಲದೆ ಸಮಗ್ರ ನೀಡಿಕೆಯ ಕಾರ್ಯವು ಸ್ಥಿರವಾಗಿರುತ್ತದೆಂದು ಅವರು ಊಹಿಸುತ್ತಾರೆ. ಕೇನ್ಸರು ಸಮಗ್ರ ಬೇಡಿಕೆಯ ಕಾರ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿರುತ್ತಾರೆ. ಕೇನ್ಸರ ಪ್ರಕಾರ ಸಮಗ್ರ ಬೇಡಿಕೆಯ ಕಾರ್ಯವು ಎರಡು ಅಂಶಗಳನ್ನು ಅವಲಂಬಿಸಿದೆ. ಅವುಗಳೆಂದರೆ,

1. ಅನುಭೋಗ ಕಾರ್ಯ ಅಥವಾ ಅನುಭೋಗ ವೆಚ್ಚ

2. ಹೂಡಿಕೆಯ ಕಾರ್ಯ ಅಥವಾ ಹೂಡಿಕೆಯ ವೆಚ್ಚ

ಆದ್ದರಿಂದ ಸಮಗ್ರ ಬೇಡಿಕೆಯ ಕಾರ್ಯವನ್ನು ಈ ರೀತಿಯಾಗಿ ವ್ಯಾಖ್ಯಾನಿಸಬಹುದು.

ಸಮಗ್ರ ಬೇಡಿಕೆ = ಅನುಭೋಗ ಕಾರ್ಯ (ವೆಚ್ಚ+ ಹೂಡಿಕೆಯ ಕಾರ್ಯ (ವೆಚ್ಚ)

ಸಂಪ್ರದಾಯ ಪಂಥದ ಉಳಿತಾಯ ಮತ್ತು ಹೂಡಿಕೆ ಸಿದ್ಧಾಂತ

ಕೇನ್ಸರ ಉದ್ಯೋಗ ಸಿದ್ಧಾಂತಕ್ಕೆ ‘ಬೇಡಿಕೆ ಕೊರತೆಯ ಸಿದ್ಧಾಂತ’ (Demand Deficiency Theory) ಎಂಬ ಹೆಸರು ಕೂಡ ಇದೆ. ಕೇನ್ಸ್‌ರವರ ಅಭಿಪ್ರಾಯದಲ್ಲಿ ಪೂರ್ಣೋದ್ಯೋಗವು ಎಂದೆಂದಿಗೂ ಕೂಡ ಅಸ್ತಿತ್ವದಲ್ಲಿರುವುದಿಲ್ಲ. ಅರ್ಥವ್ಯವಸ್ಥೆಯಲ್ಲಿ ಪೂರ್ಣೋದ್ಯೋಗ ನೆಲೆಸಿದರೆ ನಮ್ಮ ಕಷ್ಟಗಳೆಲ್ಲವು ದೂರಾದಂತೆಯೇ ಎಂದು ಕೇನ್ಸ್ ಘೋಷಿಸುತ್ತಾರೆ. ಯಾವಾಗಲೂ ಅರ್ಥವ್ಯವಸ್ಥೆಯಲ್ಲಿ ಅರೆ ಉದ್ಯೋಗ ಮಟ್ಟವಿರುತ್ತದೆ. ಪರಿಣಾಮಕಾರಿ ಬೇಡಿಕೆಯ ಕೊರತೆಯೇ ನಿರುದ್ಯೋಗಕ್ಕೆ ಕಾರಣವಾಗಿದೆ ಎಂದು ಕೇನ್ಸ್‌ರವರು ಅಭಿಪ್ರಾಯ ಪಡುತ್ತಾರೆ. ಪರಿಣಾಮಕಾರಿ ಬೇಡಿಕೆ ಪರಿಭಾವನೆಯು ಕೇನ್ಸರ ಉದ್ಯೋಗ ಸಿದ್ಧಾಂತದ ಆಧಾರಸ್ತಂಭವಾಗಿದೆ. ಪರಿಣಾಮಕಾರಿ ಬೇಡಿಕೆ ಎಂದರೆ ಸರಕು ಮತ್ತು ಸೇವೆಗಳನ್ನು ಕೊಳ್ಳುವ ಶಕ್ತಿ ಮತ್ತು ಕೊಳ್ಳುವ ಮನಸ್ಸು ಮತ್ತು ವಾಸ್ತವ ಕೊಳ್ಳುವಿಕೆಯ ಪ್ರಮಾಣ. ಪರಿಣಾಮಕಾರಿ ಬೇಡಿಕೆಯು ಎರಡು ಅಂಶಗಳನ್ನು ಒಳಗೊಳ್ಳುತ್ತದೆ. ಅವುಗಳೆಂದರೆ;

) ಅನುಭೋಗ ವೆಚ್ಚ

) ಹೂಡಿಕೆಯ ವೆಚ್ಚ

ಜನರು ಅನುಭೋಗಕ್ಕಾಗಿ ಕೊಳ್ಳುವ ಸರಕು ಮತ್ತು ಸೇವೆಗಳ ಮೇಲಿನ ವೆಚ್ಚವು ಅನುಭೋಗ ವೆಚ್ಚವಾಗಿದೆ. ಅರ್ಥವ್ಯವಸ್ಥೆಯಲ್ಲಿ ಹೊಸ ಕಾರ್ಖಾನೆಗಳ ನಿರ್ಮಾಣ, ಉತ್ಪಾದನೆಗೆ ಅಗತ್ಯವಿರುವ ಸಾಧನ ಸಾಮಗ್ರಿಗಳ ಖರೀದಿ, ಯಂತ್ರಗಳ ಸ್ಥಾಪನೆ ಮೊದಲಾದವುಗಳ ಮೇಲೆ ಮಾಡಲಾಗುವ ವೆಚ್ಚವು ಹೂಡಿಕೆಯ ವೆಚ್ಚ ಎನಿಸಿಕೊಳ್ಳುತ್ತದೆ. ಅರ್ಥವ್ಯವಸ್ಥೆಯಲ್ಲಿನ ಒಟ್ಟು ವೆಚ್ಚವು ಈ ಎರಡು ರೀತಿಯ ವೆಚ್ಚಗಳನ್ನು ಒಳಗೊಂಡಿರುತ್ತದೆ. ಈ ಒಟ್ಟು ವೆಚ್ಚವು ಒಟ್ಟು ರಾಷ್ಟ್ರೀಯ ಆದಾಯಕ್ಕೆ ಸಮನಾಗಿರುತ್ತದೆ. ಈ ಅಂಶವನ್ನು ಒಂದು ಸೂತ್ರದ ಮೂಲಕ ವ್ಯಕ್ತಪಡಿಸಬಹುದು.

= C + I

ಈ ಸಮೀಕರಣದಲ್ಲಿ,

Y = ಒಟ್ಟು ರಾಷ್ಟ್ರೀಯ ಆದಾಯ

C = ಒಟ್ಟು ಅನುಭೋಗ ವೆಚ್ಚ

I = ಒಟ್ಟು ಹೂಡಿಕೆಯ ವೆಚ್ಚ

ಕೇನ್ಸ್‌ರವರ ಪ್ರಕಾರ ಪರಿಣಾಮಕಾರಿ ಬೇಡಿಕೆಯು ಅರ್ಥವ್ಯವಸ್ಥೆಯಲ್ಲಿ ಉದ್ಯೋಗ, ಉತ್ಪನ್ನ ಮತ್ತು ಆದಾಯವನ್ನು ನಿರ್ಧರಿಸುತ್ತದೆ. ಪರಿಣಾಮಕಾರಿ ಬೇಡಿಕೆಯು ಹೆಚ್ಚಿದ್ದರೆ ಉದ್ಯೋಗ, ಉತ್ಪನ್ನ, ಆದಾಯ ಮತ್ತು ಹೂಡಿಕೆಗಳು ಅಧಿಕವಾಗಿರುತ್ತವೆ ಮತ್ತು ಪರಿಣಾಮಕಾರಿ ಬೇಡಿಕೆಯು ಕಡಿಮೆಯಾದರೆ ಈ ಅಂಶಗಳು ಕೂಡ ಕುಗ್ಗುತ್ತವೆ. ಆದರೆ ಪರಿಣಾಮಕಾರಿ ಬೇಡಿಕೆಯು ಸಾಮಾನ್ಯವಾಗಿ ಕುಗ್ಗಿದ ಮಟ್ಟದಲ್ಲಿರುತ್ತದೆ. ಈ ಕೊರತೆಗೆ ಕಾರಣವೆಂದರೆ ಆದಾಯ ಮತ್ತು ಅನುಭೋಗದ ನಡುವಿನ ಅಂತರವಾಗಿದೆ. ಆದಾಯವು ಹೆಚ್ಚಳಗೊಂಡ ದರದಲ್ಲಿಯೇ ಅನುಭೋಗವು ಹೆಚ್ಚದಿರುವುದರಿಂದ ಬೇಡಿಕೆಯ ಕೊರತೆ ಸಂಭವಿಸುತ್ತದೆ. ಈ ಕೊರತೆಯನ್ನು ಹೂಡಿಕೆಯ ಹೆಚ್ಚಳದ ಮೂಲಕ ತುಂಬದಿದ್ದರೆ ನಿರುದ್ಯೋಗವು ಉಂಟಾಗುತ್ತದೆಂದು ಕೇನ್ಸರು ಹೇಳುತ್ತಾರೆ. ಪರಿಣಾಮಕಾರಿ ಬೇಡಿಕೆಯು ಎರಡು ಅಂಶಗಳಿಂದ ನಿರ್ಧಾರವಾಗುತ್ತದೆ. ಅವುಗಳೆಂದರೆ :

1. ಸಮಗ್ರ ಬೇಡಿಕೆಯ ಬೆಲೆ ಅಥವಾ ಸಮಗ್ರ ಬೇಡಿಕೆಯ ಕಾರ್ಯ.

2. ಸಮಗ್ರ ನೀಡಿಕೆಯ ಬೆಲೆ ಅಥವಾ ಸಮಗ್ರ ನೀಡಿಕೆಯ ಕಾರ್ಯ.

» ಈಗ ಈ ಎರಡು ಅಂಶಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

1.ಸಮಗ್ರ ಬೇಡಿಕೆಯ ಕಾರ್ಯ:-

ಒಂದು ರಾಷ್ಟ್ರದ ಎಲ್ಲ ಉದ್ಯಮಗಳು ವಿವಿಧ ಉದ್ಯೋಗ ಮಟ್ಟಗಳಲ್ಲಿ ಉತ್ಪಾದಿಸಿದ ಉತ್ಪನ್ನಗಳ ಮಾರಾಟದಿಂದ ನಿರೀಕ್ಷಿಸುವ ವರಮಾನದ ಒಟ್ಟು ಮೊತ್ತ ಅಥವಾ ಮೊಬಲಗನ್ನು ಸಮಗ್ರ ಬೇಡಿಕೆಯ ಬೆಲೆ ಅಥವಾ ಸಮಗ್ರ ಬೇಡಿಕೆಯ ಕಾರ್ಯ ಎಂದು ಕರೆಯಲಾಗಿದೆ. ತಮ್ಮ ಉತ್ಪನ್ನಗಳ ಮಾರಾಟದಿಂದ ಉದ್ಯಮಿಗಳಿಗೆ ಸಂದಾಯವಾಗಬೇಕಿರುವ ಹಣದ ಮೊತ್ತವನ್ನು ಇದು ಸೂಚಿಸುತ್ತದೆ. ಉದ್ಯೋಗದ ಪ್ರಮಾಣ ಹೆಚ್ಚಿದಂತೆ ಉತ್ಪಾದನೆಯೂ ಹೆಚ್ಚಿ ಸಮಗ್ರ ಬೇಡಿಕೆಯ ಮೊತ್ತವು ಅಧಿಕಗೊಳ್ಳುತ್ತದೆ. ಉದ್ಯೋಗದ ಪ್ರಮಾಣ ಕಡಿಮೆಯಾದರೆ ಸಮಗ್ರ ಬೇಡಿಕೆಯ ಬೆಲೆಯೂ ಕೂಡ ಕಡಿಮೆಯಾಗುತ್ತದೆ.

2)ಸಮಗ್ರ ನೀಡಿಕೆಯ ಕಾರ್ಯ:-

ಉದ್ಯಮಿಗಳು ಕೆಲಸಗಾರರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವಾಗ ಮಾಡಬೇಕಾದ ವೆಚ್ಚವನ್ನು ಸಮಗ್ರ ನೀಡಿಕೆಯ ಕಾರ್ಯವು ಸೂಚಿಸುತ್ತದೆ. ಉದ್ಯಮಿಗಳು ಉತ್ಪಾದನೆಯನ್ನು ಕೈಗೊಳ್ಳಲು ಕಾರ್ಮಿಕರನ್ನು ನೇಮಿಸಿಕೊಳ್ಳಬೇಕಾಗಿರುತ್ತದೆ ಹಾಗೂ ಅವರ ವೇತನಕ್ಕಾಗಿ ಒಂದಷ್ಟು ಆದಾಯವನ್ನು ಪಡೆಯಲೇಬೇಕಾಗಿರುತ್ತದೆ. ಪರಿಣಾಮವಾಗಿ ಎಲ್ಲಾ ಉದ್ಯಮಿಗಳು ವಿವಿಧ ಉದ್ಯೋಗ ಮಟ್ಟಗಳಲ್ಲಿ ತಮ್ಮ ಉತ್ಪನ್ನಗಳ ಮಾರಾಟದಿಂದ ಪಡೆಯಲೇಬೇಕಾದ ಆದಾಯದ ಮೊತ್ತವೇ ಸಮಗ್ರ ನೀಡಿಕೆಯ ಕಾರ್ಯ ಅಥವಾ ಸಮಗ್ರ ನೀಡಿಕೆಯ ಕಾರ್ಯವಾಗಿದೆ.

ಕಾರ್ಮಿಕರನ್ನು ನೇಮಿಸಿಕೊಳ್ಳಲು ತಗಲುವ ವೆಚ್ಚ ಕಡಿಮೆ ಇದ್ದಷ್ಟೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳಲು ಉದ್ಯಮಿಗಳು ಮುಂದಾಗುತ್ತಾರೆ. ವೆಚ್ಚ ಅಧಿಕವಾದಂತೆಲ್ಲಾ ಕಾರ್ಮಿಕರ ನೇಮಕದ ಪ್ರಮಾಣ ಕುಗ್ಗತೊಡಗುತ್ತದೆ.

ಆದಾಯ ಮತ್ತು ಉದ್ಯೋಗದ ಸಮತೋಲನ

ಸಮಗ್ರ ಬೇಡಿಕೆಯ ಕಾರ್ಯವು ಉದ್ಯಮಿಗಳ ನಿರೀಕ್ಷಿತ ಆದಾಯವನ್ನು ಮತ್ತು ಸಮಗ್ರ ನೀಡಿಕೆಯ ಕಾರ್ಯವು ಉದ್ಯಮಿಗಳು ಮಾಡಲೇಬೇಕಾದಂತಹ ವೆಚ್ಚವನ್ನು ಪ್ರತಿನಿಧಿಸುತ್ತದೆ. ಆದಾಯ ಮತ್ತು ವೆಚ್ಚಗಳು ಸಮನಾಗುವವರೆಗೆ ಉದ್ಯಮಿಗಳು ಕಾರ್ಮಿಕರನ್ನು ನೇಮಿಸಿಕೊಂಡು ಉತ್ಪಾದನೆಯನ್ನು ವೃದ್ಧಿಸತೊಡಗುತ್ತಾರೆ. ವೆಚ್ಚವು ಆದಾಯವನ್ನು ಮೀರುವ ಹಂತದಲ್ಲಿ ಉದ್ಯಮಿಗಳು ಹೊಸ ಶ್ರಮಿಕರ ನೇಮಕಾತಿಯನ್ನು ನಿಲ್ಲಿಸಿ ಉತ್ಪಾದನೆಯ ಹೆಚ್ಚಳವನ್ನು ಸ್ಥಗಿತಗೊಳಿಸುತ್ತದೆ.

ಸಮಗ್ರ ಬೇಡಿಕೆಯ ಕಾರ್ಯ ಮತ್ತು ಸಮಗ್ರ ನೀಡಿಕೆಯ ಕಾರ್ಯಗಳ ಸಮತೋಲನದ ಬಿಂದುವಿನಲ್ಲಿ ಪರಿಣಾಮಕಾರಿ ಬೇಡಿಕೆಯು ನಿರ್ಧರಿತವಾಗುತ್ತದೆ. ಇದು ಸಮತೋಲನದ ಉದ್ಯೋಗ ಮಟ್ಟವಾಗಿದೆ. ಈ ಅಂಶವನ್ನು ಒಂದು ರೇಖಾಚಿತ್ರದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಈ ಮೇಲಿನ ರೇಖಾಚಿತ್ರದಲ್ಲಿ AD ಸಮಗ್ರ ಬೇಡಿಕೆಯ ಕಾರ್ಯದ ರೇಖೆ ಮತ್ತು AS ಸಮಗ್ರ ನೀಡಿಕೆಯ ಕಾರ್ಯದ ರೇಖೆಗಳಾಗಿವೆ. ಈ ಎರಡು ರೇಖೆಗಳು N ಬಿಂದುವಿನಲ್ಲಿ ಸಂಧಿಸಿವೆ. ಈ ಬಿಂದುವಿನಲ್ಲಿ ಆದಾಯ ಮತ್ತು ವೆಚ್ಚಗಳು ಸಮನಾಗಿರುತ್ತವೆ. OQ ಸಮತೋಲನ ಮಟ್ಟದ ಆದಾಯ ಮತ್ತು ವೆಚ್ಚಗಳಾಗಿವೆ. OM ಸಮತೋಲನದ ಉದ್ಯೋಗ ಮಟ್ಟವಾಗಿದೆ. ಇದನ್ನು ಹೊರತುಪಡಿಸಿ ಬೇರಾವುದೇ ಉದ್ಯೋಗ ಮಟ್ಟದಲ್ಲಿ ಆದಾಯ ಮತ್ತು ವೆಚ್ಚದ ಸಮತೋಲನವು ಕದಡುತ್ತದೆ. ಉದಾ : OM1 ಉದ್ಯೋಗ ಮಟ್ಟದಲ್ಲಿ ಸಮಗ್ರ ಬೇಡಿಕೆಯ ಕಾರ್ಯವು (ಆದಾಯ) M1N1 ಆಗಿರುತ್ತದೆ  ಮತ್ತು ಸಮಗ್ರ  ನೀಡಿಕೆಯ ಕಾರ್ಯವು (ವೆಚ್ಚ) M1 P ಆಗಿರುತ್ತದೆ. ಉದ್ಯಮಿಗಳಿಗೆ ದೊರೆಯುವ ಆದಾಯವು PN ನಷ್ಟು ಅಧಿಕವಾಗಿರುವುದರಿಂದ ಉದ್ಯಮಿಗಳು ಇನ್ನೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗುತ್ತಾರೆ. ಬದಲಾಗಿ OMಉದ್ಯೋಗ ಮಟ್ಟದಲ್ಲಿ ಸಮಗ್ರ ಬೇಡಿಕೆಯು ಕಾರ್ಯವು (ಆದಾಯ) M2P1 ಮತ್ತು ಸಮಗ್ರ ನೀಡಿಕೆಯ ಕಾರ್ಯವು (ವೆಚ್ಚ) M2N2, ಆಗಿದೆ. ವೆಚ್ಚವು ಆದಾಯಕ್ಕಿಂತ N2P1 ನಷ್ಟು ಅಧಿಕವಾಗಿರುವುದರಿಂದ ಈ ಮಟ್ಟದಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡರೆ ಉದ್ಯಮಿಗಳಿಗೆ ನಷ್ಟವಾಗುತ್ತದೆ. ಪರಿಣಾಮವಾಗಿ ಉದ್ಯಮಿಗಳು OM ಪ್ರಮಾಣದಲ್ಲಿಯೇ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸುತ್ತಾರೆ. ಅಂತಿಮವಾಗಿ OM ಸಮತೋಲನ ಉದ್ಯೋಗ ಮಟ್ಟ ಮತ್ತು OQ ಸಮತೋಲನ ಆದಾಯ ಮತ್ತು ವೆಚ್ಚ ಪ್ರಮಾಣವಾಗಿದೆ. 

ಅನುಭೋಗ ಕಾರ್ಯ(Consumption Function)

ಅನುಭೋಗ ಕ್ರಿಯೆ ಪರಿಭಾವನೆಯನ್ನು ಮಾಲ್ತಸ್ ಮೊದಲಾದ ಅರ್ಥಶಾಸ್ತ್ರಜ್ಞರು ಉಪಯೋಗಿಸಿದ್ದರೂ ಕೂಡ ಅದಕ್ಕೊಂದು ಸ್ಪಷ್ಟ ರೂಪವನ್ನು ನೀಡಿದ ಶ್ರೇಯಸ್ಸು ಕೇನ್ಸರಿಗೆ ಸಲ್ಲುತ್ತದೆ. ಅನುಭೋಗ ಕಾರ್ಯ ಅಥವಾ ಅನುಭೋಗ ಕ್ರಿಯೆ ಅಥವಾ ಅನುಭೋಗ ಪ್ರವೃತ್ತಿಯು ಪರಿಣಾಮಕಾರಿ ಬೇಡಿಕೆಯು ಪ್ರಮುಖ ನಿರ್ಧಾರಕವೆಂದು ಕೇನ್ಸ್‌ರವರು ಪ್ರತಿಪಾದಿಸಿದ್ದಾರೆ.

ಅನುಭೋಗ ಕಾರ್ಯವು ಕುಗ್ಗಿದ್ದರೆ ಪರಿಣಾಮಕಾರಿ ಬೇಡಿಕೆಯೂ ಕೊರತೆಯಿಂದ ಕೂಡಿರುತ್ತದೆ. ತತ್ಪರಿಣಾಮವಾಗಿ ಉತ್ಪನ್ನ, ಆದಾಯ ಮತ್ತು ಉದ್ಯೋಗದ ಮಟ್ಟಗಳೂ ಕಡಿಮೆ ಇರುತ್ತವೆ.

ಆದಾಯದಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಅನುಭೋಗಕ್ಕಾಗಿ ಖರ್ಚು ಮಾಡಲಾಗುತ್ತದೆ. ಇದುವೇ ಅನುಭೋಗ ವೆಚ್ಚ ಎನಿಸಿಕೊಳ್ಳುತ್ತದೆ. ಆದರೆ ಅನುಭೋಗ ಕಾರ್ಯ ಅಥವಾ ಅನುಭೋಗ ಕ್ರಿಯೆ ಎನ್ನುವುದು ವಿವಿಧ ಮಟ್ಟಗಳ ಆದಾಯದಲ್ಲಿ ಅನುಭೋಗದ ಉದ್ದೇಶಕ್ಕಾಗಿ ಖರ್ಚು ಮಾಡಲಾಗುವ ಒಟ್ಟು ಮೊತ್ತವನ್ನು ವ್ಯಕ್ತಪಡಿಸುವ ಒಂದು ಅನುಸೂಚಿ ಅಥವಾ ಪಟ್ಟಿಯಾಗಿದೆ. ಅಂದರೆ ಅನುಭೋಗ ಕಾರ್ಯವು ಆದಾಯ ಮತ್ತು ಅನುಭೋಗದ ನಡುವಿನ ಸಂಬಂಧವನ್ನು ತೋರಿಸುವ ಒಂದು ಅನುಸೂಚಿಯಾಗಿದೆ. ಆದಾಯದಲ್ಲಿನ ಬದಲಾವಣೆಯೊಂದಿಗೆ ಅನುಭೋಗದಲ್ಲಿ ಉಂಟಾಗುವ ಬದಲಾವಣೆಯ ಪ್ರಮಾಣವನ್ನು ವ್ಯಕ್ತ ಪಡಿಸುತ್ತದೆ. ಈ ಸಂಬಂಧವನ್ನು ಒಂದು ಸಮೀಕರಣದ ಮೂಲಕ ವ್ಯಕ್ತಪಡಿಸಬಹುದಾಗಿದೆ.

C = f(y)  ಈ ಸಮೀಕರಣದಲ್ಲಿ

C – ಅನುಭೋಗ

y – ಆದಾಯ

f – ಕಾರ್ಯ

ಕೇನ್ಸ್‌ನ ಅನುಭೋಗದ ಮಾನಸಿಕ ನಿಯಮ

ಕೇನ್ನನು ತನ್ನ “ಅನುಭೋಗ ಮೀಮಾಂಸೆ”ಯಲ್ಲಿ ಅನುಭೋಗದ ಮಾನಸಿಕ ನಿಯಮವನ್ನು ಪ್ರತಿಪಾದಿಸಿದ್ದಾನೆ. ಜನರ ಆದಾಯದ ಮಟ್ಟ ಹೆಚ್ಚಿದಂತೆಲ್ಲಾ ಅನುಭೋಗದ ಪ್ರಮಾಣವು ಹೆಚ್ಚಾಗತೊಡಗುತ್ತದೆ. ಆದರೆ ಆದಾಯ ಹೆಚ್ಚಿದ ಪ್ರಮಾಣದಲ್ಲಿಯೇ ಅವರ ಅನುಭೋಗವೂ ಹೆಚ್ಚುವುದಿಲ್ಲ. ಹೆಚ್ಚಿನ ಆದಾಯ ಮಟ್ಟದಲ್ಲಿ ಜನರು ಹಣವನ್ನು ಅಧಿಕವಾಗಿ ಉಳಿತಾಯ ಮಾಡುವ ಮನೋಭಾವನೆ ಅಥವಾ ಪ್ರವೃತ್ತಿಯನ್ನು ತೋರ ತೊಡಗುತ್ತಾರೆ. ಇದೊಂದು ಮಾನಸಿಕ ಪ್ರವೃತ್ತಿಯಾಗಿದೆ.

ಅನುಭೋಗದ ಮಾನಸಿಕ ನಿಯಮವು ವ್ಯಕ್ತ ಪಡಿಸುವ ಪ್ರಮುಖ ಸಂಗತಿಗಳೆಂದರೆ

) ಆದಾಯದ ಮಟ್ಟದಲ್ಲಿನ ಹೆಚ್ಚಳದೊಡನೆ ಅನುಭೋಗದ ಪ್ರಮಾಣವು ಹೆಚ್ಚುತ್ತದೆ. ಆದರೆ ಅನುಭೋಗದಲ್ಲಿನ ಹೆಚ್ಚಳದ ಪ್ರಮಾಣವು ಆದಾಯದ ಹೆಚ್ಚಳ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ. ಉದಾ: ಆದಾಯವು 100ರೂ ಹೆಚ್ಚಿದರೆ ಅನುಭೋಗವು ರೂ 80 ರಷ್ಟು ಹೆಚ್ಚುತ್ತದೆ. ಏಕೆಂದರೆ ಜನರು ಕಡಿಮೆ ಆದಾಯ ಮಟ್ಟದಲ್ಲಿ ಹೆಚ್ಚು ಪ್ರಮಾಣದ ಹಣವನ್ನು ಜೀವನಾಶ್ಯಕ ಹಾಗೂ ತುರ್ತು ಅಗತ್ಯವಿರುವ ವಸ್ತುಗಳನ್ನು ಕೊಳ್ಳಲು ಖರ್ಚು ಮಾಡಿರುತ್ತಾರೆ. ಆದರೆ ಹೆಚ್ಚಿನ ಆದಾಯ ಮಟ್ಟದಲ್ಲಿ ಜನರು ಜೀವನಾವಶ್ಯಕ ವಸ್ತುಗಳ ಮೇಲೆ ಮಾಡುವ ವೆಚ್ಚವು ಕಡಿಮೆ ಇರುತ್ತದೆ.

ಆದಾಯ ಹೆಚ್ಚಳದೊಂದಿಗೆ ಅನುಭೋಗ ಮತ್ತು ಉಳಿತಾಯಗಳೆರಡೂ ಅಧಿಕಗೊಳ್ಳುತ್ತ ಹೋಗುತ್ತದೆ.

) ಹೆಚ್ಚುವರಿಯಾಗಿ ದೊರಕಿದ ಆದಾಯವು ಅನುಭೋಗ ಮತ್ತು ಉಳಿತಾಯದ ನಡುವೆ ಹಂಚಿ ಹೋಗುತ್ತದೆ. ಅಂದರೆ ಅಧಿಕ ಮಟ್ಟದ ಹೆಚ್ಚುವರಿ ಆದಾಯವು ದೊರಕಿದಾಗ ಸ್ವಲ್ಪ ಮೊತ್ತವನ್ನು ಅನುಭೋಗಕ್ಕಾಗಿ ವೆಚ್ಚಮಾಡಿ ಉಳಿದ ಮೊತ್ತವನ್ನು ಉಳಿತಾಯ ಮಾಡಲಾಗುತ್ತದೆ.

ಈ ನಿಯಮವು ಕೆಲವು ಕಲ್ಪನೆಗಳ ಮೇಲೆ ಆಧಾರಿತವಾಗಿದೆ. ಅವುಗಳೆಂದರೆ,

1.ಅಲ್ಪಾವಧಿಯಲ್ಲಿ ಅನುಭೋಗದ ಕ್ರಿಯೆಯು ಸ್ಥಿರವಾಗಿರುತ್ತದೆ. ಈ ಅವಧಿಯಲ್ಲಿ ಕೇವಲ ಆದಾಯದಲ್ಲಿ ಬದಲಾವಣೆಯಾಗಬಹುದೇ ಹೊರತು ಜನಸಂಖ್ಯೆ, ಬೆಲೆ ಮತ್ತು ಆದಾಯದ ಹಂಚಿಕೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

2.ಸರ್ಕಾರವು ಜನರ ಅನುಭೋಗದ ಮೇಲೆ ಯಾವುದೇ ನಿಯಂತ್ರಣಗಳನ್ನು ವಿಧಿಸಿರುವುದಿಲ್ಲ.

3.ಅರ್ಥವ್ಯವಸ್ಥೆಯಲ್ಲಿ ಮುಗ್ಗಟ್ಟು, ಮಿತಿ ಮೀರಿದ ಹಣದುಬ್ಬರ ಮುಂತಾದ ಸನ್ನಿವೇಶಗಳಿರುವುದಿಲ್ಲ. 

Sacred Heart English Higher Primary School E-Magazine