ಭಾರತದಲ್ಲಿ ಪ್ರವಾಸೋದ್ಯಮ ಯೋಜನೆ ಮತ್ತು ನೀತಿ

ಭಾರತದಲ್ಲಿ ಪ್ರವಾಸೋದ್ಯಮ ಯೋಜನೆ ಮತ್ತು ನೀತಿ

ಪೀಠಿಕೆ:

ಪ್ರವಾಸೋದ್ಯಮ ಅಭಿವೃದ್ಧಿಗೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಲು ಭಾರತ ಸರ್ಕಾರವು 1945ರಲ್ಲಿ ಸರ್‌.ಜಾನ್ ಸಾರ್ಜೆಂಟ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಸಾರ್ಜೆಂಟ್ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ 1958 ರಲ್ಲಿ ಸಾರಿಗೆ ಸಚಿವಾಲಯವು ಪ್ರತ್ಯೇಕ ಪ್ರವಾಸ ಉದ್ಯಮ ಇಲಾಖೆಯನ್ನು ರಚಿಸಿತು. ಈ ಪ್ರವಾಸೋದ್ಯಮ ಇಲಾಖೆಯು ಕಾಲಕಾಲಕ್ಕೆ ಪ್ರವಾಸೋದ್ಯಮದ ಬೆಳವಣಿಗೆಯ ಕುರಿತು ಅನೇಕ ಕಾನೂನುಗಳು, ನೀತಿ ನಿಯಮಗಳು ಹಾಗೂ ಸಲಹೆ ಸೂಚನೆಗಳನ್ನು ಪಾಸು ಮಾಡಿತು. ಪರಿಣಾಮವಾಗಿ ಪ್ರವಾಸೋದ್ಯಮ ಇಲಾಖೆಯು ದೆಹಲಿ, ಕಲ್ಕತ್ತಾ, ಮುಂಬೈ ಹಾಗೂ ಮದ್ರಾಸ್‌ಗಳಲ್ಲಿ ತನ್ನ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಿತು. ಈ ಕೇಂದ್ರಗಳಲ್ಲಿ ಪ್ರವಾಸೋದ್ಯಮದ ಕುರಿತು ಪ್ರಚಾರ ಕೈಗೊಳ್ಳಲಾಯಿತು. ಮುಂದೆ 1963ರಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಎಲ್‌.ಕೆ.ಜಾ ಸಮಿತಿ ನೇಮಕವಾಯಿತು. ಈ ಸಮಿತಿ ಸಲ್ಲಿಸಿದ ವರದಿಯನ್ನು ಇಟ್ಟುಕೊಂಡು 1966ರಲ್ಲಿ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ITDC) ಯನ್ನು   ಸ್ಥಾಪಿಸಲಾಯಿತು. ITDC ಯು ಭಾರತೀಯ ರೈಲ್ವೆ ಇಲಾಖೆಯ ಸಹಭಾಗಿತ್ವದೊಂದಿಗೆ ಋತುಮಾನದ ಪ್ರವಾಸಗಳು, ಪ್ಯಾಕೇಜ್ ಪ್ರವಾಸ, ಕ್ರೀಡೆ ಹಾಗೂ ಜಾತ್ರಾ ವಿಶೇಷ ಪ್ರವಾಸವನ್ನು ಹಮ್ಮಿಕೊಂಡಿತು. ಈ ನಿಟ್ಟಿನಲ್ಲಿ ಅಶೋಕ ಗ್ರೂಪ್‌ ಆಫ್‌ ಹೋಟೆಲ್‌ನ ಪ್ರಯತ್ನ ಶ್ಲಾಘನೀವಾದುದು. ಅದು ಪ್ರವಾಸಿಗರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತ ಪ್ರವಾಸಿಗರನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಈ ಹಿಂದೆ ಇದ್ದ ಪ್ರವಾಸೋದ್ಯಮ ಇಲಾಖೆಯ ಸಾರಿಗೆ ಸಚಿವಾಲಯದ ಸಹಭಾಗಿತ್ವವನ್ನು ರದ್ದುಗೊಳಿಸಿ 1967ರಲ್ಲಿ ಪ್ರತ್ಯೇಕವಾದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವನ್ನು ಸೃಷ್ಟಿಸಲಾಯಿತು. ಭಾರತದ ಪ್ರವಾಸೋದ್ಯಮವು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳೆಂದರೆ 1982ರ ಪ್ರವಾಸೋದ್ಯಮ ನೀತಿ ಹಾಗೂ ರಾಷ್ಟ್ರೀಯ ಪ್ರವಾಸ ಉದ್ಯಮ ಸಮಿತಿ-1986.

1. 1982ರ ಪ್ರವಾಸೋದ್ಯಮ ನೀತಿ (Tourism Policy of 1982)

1982 ರಲ್ಲಿ ಭಾರತೀಯ ಪ್ರವಾಸೋದ್ಯಮ ನೀತಿಯು ದೇಶದ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ, ಉತ್ತೇಜಿಸುವ ಹಾಗೂ ಪ್ರದರ್ಶಿಸುವ ಗುರಿಯನ್ನು ಹೊಂದಿದ್ದ ಪ್ರಥಮ ಸಮಗ್ರ ನೀತಿಯಾಗಿದೆ. ಈ ನೀತಿಯು ಸಾಮಾಜಿಕ- ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಪ್ರವಾಸಿಗರಿಗೆ ಮೂಲ ಸೌಕರ್ಯ, ಸುರಕ್ಷತೆ ಹಾಗೂ ಸಹಕಾರದ ಮೇಲೆ ಕೇಂದ್ರಿಕರಿಸಿತು. ಈ ನೀತಿಯನ್ನು ಪ್ರಥಮ ಬಾರಿಗೆ ದೇಶದಲ್ಲಿ ಪರಿಚಯಿಸಿದವರು ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು. ಈ ನೀತಿಯ ಪ್ರಮುಖ ಅಂಶಗಳು ಹೀಗಿವೆ.

  1. ಪ್ರವಾಸೋದ್ಯಮದ ಮುಖಾಂತರ ಭಾರತದ ಐತಿಹಾಸಿಕ ಸ್ಥಳಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಅವುಗಳು ಹಾಳಾಗದಂತೆ ಉಳಿಸಿಕೊಂಡು ಬರುವುದು.
  2. ಪ್ರವಾಸೋದ್ಯಮವು ಒಂದು ಉದ್ಯಮವಾಗಿದ್ದು ಅದನ್ನು ಆರ್ಥಿಕ ಅಭಿವೃದ್ಧಿ, ಆದಾಯ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಯ ಸಾಧನವನ್ನಾಗಿ ಬಳಸಿಕೊಳ್ಳುವುದು.
  3. ಪ್ರವಾಸಿ ತಾಣಗಳಿಗೆ ಬಂದ ಪ್ರವಾಸಿಗರಿಗೆ ಉತ್ತಮ ಸ್ವಾಗತ, ಪ್ರವಾಸೋದ್ಯಮದ ಕುರಿತು ಮಾಹಿತಿ, ತಾವು ಪ್ರವಾಸಿಗರಿಗೆ ನೀಡುವ ಸುರಕ್ಷತೆ ಹಾಗೂ ಪ್ರವಾಸೋದ್ಯಮ ನೀಡುವ ಮೂಲ ಸೌಕರ್ಯಗಳ ಕುರಿತು ಮಾಹಿತಿ ನೀಡುವುದು.
  4. ಸುರಕ್ಷತೆ ಹಾಗೂ ಅಭಿವೃದ್ಧಿಯ ನಡುವೆ ಸಮತೋಲನವನ್ನು ಸಾಧಿಸುವುದು.
  5. ಪ್ರವಾಸೋದ್ಯಮದ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ತಿಳುವಳಿಕೆಯನ್ನು ನೀಡುವುದು.
  6. ಉದ್ಯೋಗದ ಜೊತೆಗೆ ಪರಿಸರ ರಕ್ಷಣೆ ಮಾಡುವುದು.
  7. ಧಾರ್ಮಿಕ ಪ್ರವಾಸವನ್ನು ಏರ್ಪಡಿಸುವ ಮೂಲಕ ಗ್ರಾಮೀಣ ಜನರಲ್ಲಿ ಐಕ್ಯತೆಯನ್ನು ತರುವುದು.

2. ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 1986 (National Tourism Committee)

ಭಾರತದಲ್ಲಿ ಪ್ರವಾಸೋದ್ಯಮ ನೀತಿ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಯು 1986ರ ದಶಕದಲ್ಲಿ ಮಹತ್ವದ ಬದಲಾವಣೆಯನ್ನು ಕಂಡಿತು. ಈ ಅವಧಿಯಲ್ಲಿ ಪ್ರವಾಸೋದ್ಯಮವನ್ನು ಕೈಗಾರಿಕೆಯಾಗಿ ಗುರುತಿಸಿತು. ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಸಲುವಾಗಿ ಪ್ರವಾಸೋದ್ಯಮವನ್ನು ಬಂಡವಾಳ ಹೂಡಿಕೆಗೆ ಅಗ್ರ ವಲಯವಾಗಿ ಘೋಷಿಸುವಂತೆ ಸೂಚಿಸಲಾಯಿತು. ಹೀಗಾಗಿ ಅಂದಿನ ಭಾರತದ ಪ್ರಧಾನಿ ರಾಜೀವಗಾಂಧಿ ಸರ್ಕಾರ ಹಾಗೂ 15 ರಾಜ್ಯ ಸರ್ಕಾರಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಪ್ರವಾಸೋದ್ಯಮವನ್ನು ಒಂದು ಉದ್ದಿಮೆಯಾಗಿ ಘೋಷಿಸಿದವು. ಇದಕ್ಕಾಗಿ 1989ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಣಕಾಸು ನಿಗಮವನ್ನು ಸ್ಥಾಪಿಸಲಾಯಿತು. ಸ್ವತಃ ಪ್ರವಾಸೋದ್ಯಮ ಸಚಿವರಾಗಿದ್ದ ರಾಜೀವಗಾಂಧಿ ಅವರು “ಟ್ರೇಡ್ ಫೇರ್ ಅಥಾರಿಟಿ ಆಫ್ ಇಂಡಿಯಾ” ಅಧ್ಯಕ್ಷರಾಗಿದ್ದ ಮೊಹಮ್ಮದ್ ಯೂನಿಸ್‌ರವರ ನೇತೃತ್ವದಲ್ಲಿ ನ್ಯಾಷನಲ್ ಟೂರಿಸಂ ಕೌನ್ಸಿಲ್‌ನ್ನು ನೇಮಿಸಿದರು. ಇವರು 1987 ನವೆಂಬರ್‌ನಲ್ಲಿ ತಮ್ಮ ವರದಿಯನ್ನು ಸಲ್ಲಿಸಿದರು. ಅದರ ಮುಖ್ಯಾಂಶಗಳು ಹೀಗಿವೆ.

  1. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಆ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದು ಮತ್ತು ಉದ್ಯೋಗವನ್ನು ಸೃಷ್ಟಿಸುವುದು.
  2. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ಸೂಕ್ತ ಭದ್ರತೆ ನೀಡುವುದು ಮತ್ತು ಪ್ರವಾಸಿ ಸ್ಥಳಗಳ ಬಗ್ಗೆ ಅವರಿಗೆ ಮಾಹಿತಿ ಒದಗಿಸುವುದು.
  3. ಪ್ರವಾಸೋದ್ಯಮವನ್ನು ವಿದೇಶಿ ವಿನಿಮಯ ಗಳಿಕೆಯ ಸಾಧನವಾಗಿ ಬಳಸಿಕೊಳ್ಳುವುದು.
  4. ಕ್ರಿ.ಶ 2000ದ ವೇಳೆಗೆ ಪ್ರವಾಸೋದ್ಯಮವು 5000 ಕೋಟಿ ಆದಾಯ ಗಳಿಕೆಯ ಉದ್ಯಮವನ್ನಾಗಿ ರೂಪಿಸುವುದು.
  5. ವಿದೇಶಗಳಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ಹೋಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಉತ್ತಮ ಗುಣಮಟ್ಟದ ವಸತಿ ಹಾಗೂ ಆಹಾರ ಪೂರೈಕೆ ಮಾಡುವುದು.
  6. ಭಾರತೀಯ ವಸ್ತುಗಳನ್ನು ವಿದೇಶಿಯರು ಖರೀದಿ ಮಾಡುವ ಹಾಗೆ ಪ್ರಚಾರ ಮಾಡುವುದು.
  7. ವಿದೇಶಿ ಪ್ರವಾಸಿಗರ ಸಂಚಾರ ಸೌಲಭ್ಯಗಳನ್ನು ದ್ವಿಗುಣಗೊಳಿಸುವುದು.
  8. ಇಂಡಿಯನ್‌ ಏರ್‌ಲೈನ್ಸ್‌ನ್ನು ಖಾಸಗೀಕರಣಗೊಳಿಸಿ ಹೊಸ ವಿಮಾನಯಾನ ಕಂಪನಿಗಳನ್ನು ಆರಂಭಿಸುವುದು.
  9. ರಾಷ್ಟ್ರೀಯ ಪ್ರವಾಸೋದ್ಯಮ ಮಂಡಲಿಯ ಕಾರ್ಯಕ್ಷೇತ್ರದ ವಿಸ್ತರಣೆ.
  10. ಪ್ರವಾಸೋದ್ಯಮಕ್ಕೆ ನೇಮಕ ಮಾಡುವ ನೌಕರರಿಗೆ ತರಬೇತಿ ನೀಡಲು ತರಬೇತಿ ಸಂಸ್ಥೆಗಳನ್ನು ಆರಂಭಿಸುವುದು.

1985ರ ವೇಳೆಗೆ ಭಾರತ ಸರ್ಕಾರವು ಪ್ರವಾಸೋದ್ಯಮವನ್ನು ಒಂದು ಉದ್ದಿಮೆ ಎಂದು ಪರಿಗಣಿಸಿತು. ಆಗ ಪ್ರವಾಸೋದ್ಯಮದಲ್ಲಿ ಬಂಡವಾಳವನ್ನು ತೊಡಗಿಸುವವರಿಗೆ ತೆರಿಗೆ ವಿನಾಯಿತಿ ಸಹಾಯಧನ ಸೌಲಭ್ಯಗಳನ್ನು ನೀಡಲಾಯಿತು. 1991ರಲ್ಲಿ ಪ್ರವಾಸೋದ್ಯವನ್ನು ವಿದೇಶಿ ಬಂಡವಾಳ ಹೂಡಿಕೆಯ ಅಗ್ರವಲಯ ಎಂದು ಘೋಷಣೆ ಮಾಡಲಾಯಿತು.

3. CRZ: ಕರಾವಳಿ ನಿಯಂತ್ರಣ ವಲಯ:

 ಕರಾವಳಿ ತೀರಗಳು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಸರಾಗಿವೆ. ಇಲ್ಲಿ ಸಮುದ್ರ ಕ್ರೀಡೆಗಳಾದ ಸರ್ಪಿಂಗ್‌, ಸೇಲಿಂಗ್, ವಿಂಡ್ ಸರ್ಫಿಂಗ್ ಹಾಗೂ ಈಜುವುದು ಮೊದಲಾದ ಕ್ರೀಡೆಗಳು ನಡೆಯುತ್ತಿವೆ. 1986ರಲ್ಲಿ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯನ್ನು ಹೊರಡಿಸಲಾಯಿತು. CRZ  ನಿಯಮಗಳು ಭಾರತದ ಸೂಕ್ಷ್ಮ ಕರಾವಳಿ ಪರಿಸರ ವ್ಯವಸ್ಥೆಯನ್ನು ರಕ್ಷಿಸುವುದರೊಂದಿಗೆ ಅಭಿವೃದ್ಧಿ ಅಗತ್ಯಗಳನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ. 1986ರ ಕಾಯಿದೆ ಪ್ರಕಾರ ಕರಾವಳಿ ತೀರವನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

  1. CRZ-1 ಇವು ಕರಾವಳಿ ಪರಿಸರ ವ್ಯವಸ್ಥೆಯ ಸಂರಕ್ಷಣೆಗೆ ನಿರ್ಣಾಯಕವಾದ ಪರಿಸರ ಸೂಕ್ಷ್ಮ ಸ್ಥಳಗಳಾಗಿವೆ.
  2. CRZ-2ಕರಾವಳಿಯಿಂದ ಕರಾವಳಿಯವರೆಗೆ ಈಗಾಗಲೇ ಅಭಿವೃದ್ಧಿ ಹೊಂದಿದ ಎಲ್ಲಾ ಸ್ಥಳಗಳನ್ನು ಒಳಗೊಂಡಿದೆ.
  3. CRZ-3ಈ ವಲಯವುಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಒಳಗೊಂಡಿದೆ.
  4. CRZ-4 ಈ ಪ್ರದೇಶಗಳು ಲಕ್ಷ ದ್ವೀಪ ಅಂಡಮಾನ್, ನಿಕೋಬಾರ್ ದ್ವೀಪಗಳು ಹಾಗೂ ಕೆಲವು ಚಿಕ್ಕ ದ್ವೀಪಗಳನ್ನು ಒಳಗೊಂಡಿದೆ.

CRZ ನ ನಿಯಮಗಳು:

  1. ಕರಾವಳಿಯ ಸಮೀಪ ಮಾನವ ಚಟುವಟಿಕೆ ಜೊತೆಗೆ ಕೈಗಾರಿಕಾ ಚಟುವಟಿಕೆಯನ್ನು ನಿಯಂತ್ರಿಸುವುದು.
  2. ಕರಾವಳಿಯಿಂದ ನಿರ್ದಿಷ್ಟ ಅಂತರದಲ್ಲಿ ಕೆಲವು ಕಾರ್ಯಾಚರಣೆಗಳನ್ನು ಮಿತಿಗೊಳಿಸುವುದು. ಉದಾಹರಣೆಗೆ ಹೊಸ ವ್ಯವಹಾರ ಸ್ಥಾಪನೆ, ಅಪಾಯಕಾರಿ ವಸ್ತುಗಳ ಸಂಗ್ರಹಣೆ, ಗಣಿಗಾರಿಕೆ ಹಾಗೂ ಬದು ನಿರ್ಮಾಣ.
  3. CRZನ2011ರ ತಿದ್ದುಪಡಿಯಂತೆ ನವೀ ಮುಂಬೈ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಪರಮಾಣು ಇಂಧನ ಇಲಾಖೆಯ ಯೋಜನೆಗಳ ಅಭಿವೃದ್ಧಿಗಾಗಿ ಹೊರಗಿಡಲಾಗಿದೆ.
  4. ಇತ್ತೀಚಿನ 2018-19ರ CRZಅಧಿನಿಯಮದ ಪ್ರಕಾರ ಕೆಲವು ಅಭಿವೃದ್ಧಿ ನೀತಿಗಳನ್ನು ತೆಗೆದುಹಾಕಲಾಗಿದೆ.
  5. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಮುದ್ರ ಹಿನ್ನೀರಿನ 400 ಮೀಟರ್ ಪ್ರದೇಶವನ್ನು ರಕ್ಷಿತ ವಲಯ ಎಂದು ಘೋಷಿಸಿ ಅಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸದಂತೆ ನಿರ್ಬಂಧ ಏರುವುದು.

4. ರಾಷ್ಟ್ರೀಯ ಕಾರ್ಯಯೋಜನೆ 1992 (National Action Plan) 

1992ರಲ್ಲಿ ಆಗಿನ ಪ್ರವಾಸೋದ್ಯಮ ಸಚಿವರಾದ ಮಾಧವರಾವ್ ಸಿಂಧಿಯಾರವರು ರಾಷ್ಟ್ರೀಯ ಕ್ರಿಯಾಯೋಜನೆಯನ್ನು ರಚಿಸಿದರು. ಇದರ ಮೂಲ ಗುರಿ ಭಾರತದಲ್ಲಿ ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ಗಳಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು. ಇದು ವಿಶೇಷ ಪ್ರವಾಸೋದ್ಯಮ ವಲಯಗಳನ್ನು ಗುರುತಿಸುವುದು ಮತ್ತು ಖಾಸಗಿ ವಲಯದ ಭಾಗವಹಿಸುವಿಕೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದೇ ಆಗಿದೆ. ಇದರ ಇತರೆ ಉದ್ದೇಶಗಳು ಹೀಗಿವೆ.

  1. ಪ್ರವಾಸೋದ್ಯಮದ ಮೂಲಕ ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
  2. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ವಿದೇಶಿ ವಿನಿಮಯವನ್ನು ಹೆಚ್ಚಿಸುವುದು.
  3. ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ನಿರ್ದಿಷ್ಟ ಸ್ಥಳಗಳನ್ನು ಗುರುತಿಸುವುದು.
  4. ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಪ್ರವಾಸಿ ಸೌಲಭ್ಯಗಳನ್ನು ಹೆಚ್ಚಿಸುವುದು.
  5. ಸ್ಥಳೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಕೈಗೆಟುಕುವ ದರಗಳಲ್ಲಿ ವಸತಿ ಸೌಕರ್ಯಗಳನ್ನು ಕಲ್ಪಿಸುವುದು.
  6. ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮತ್ತು ನವೀಕರಣ.
  7. ಟ್ರೇನಿಂಗ್ ಟ್ರಕ್ಕಿಂಗ್ ಹಾಗೂ ಬೀಚ್ ರೆಸಾರ್ಟ್‌ಗಳಂತಹ ವಿಶೇಷ ಪ್ರವಾಸೋದ್ಯಮ ಪ್ರಕಾರಗಳನ್ನು ಅಭಿವೃದ್ಧಿಪಡಿಸುವುದು.
  8. ಹೋಟೆಲ್ ವಸತಿಯನ್ನು ಮುಂದಿನ 3 ವರ್ಷಗಳಲ್ಲಿ 44,000 ಕೊಠಡಿಗಳಿಂದ 1,20,000 ಕೊಠಡಿಗಳಿಗೆ ಹೆಚ್ಚಿಸುವುದು.

5. 1998ರ ನೂತನ ನೀತಿ (New Tourism Planning Policy of 1998)

ಭಾರತ ಸರ್ಕಾರವು 1998ರಲ್ಲಿ ನೂತನ ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸಿತು. ಅದರ ಪ್ರಕಾರ ರಾಷ್ಟ್ರೀಯತೆ, ಸಮಗ್ರತೆ ಹಾಗೂ ಐಕ್ಯತೆಯನ್ನು ಕಾಪಾಡುವುದು ಮತ್ತು ಯುವಕರಿಗೆ ಉದ್ಯೋಗಾವಕಾಶವನ್ನು ನೀಡುವ ಉದ್ದಿಮೆಯಾಗಿ ಪ್ರವಾಸೋದ್ಯಮವನ್ನು ರೂಪಿಸುವುದು ಈ ನೀತಿಯ ಉದ್ದೇಶವಾಗಿದೆ. ಇದರೊಂದಿಗೆ ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ಪರಿಸರ ಸಂರಕ್ಷಣೆಯ ಸಾಧನವಾಗಿ ಪ್ರವಾಸೋದ್ಯಮವನ್ನು ಗುರುತಿಸಲಾಯಿತು.

1999 ಮತ್ತು 2000ರ ನೂತನ ಸಹಸ್ರಮಾನದ ನೆನಪಿಗಾಗಿ ಭಾರತದ ಪ್ರವಾಸೋದ್ಯಮವನ್ನು “ಎಕ್ಸ್‌ಪ್ಲೋರ್‌ ಇಂಡಿಯಾ” ಎಂಬ ವರ್ಷಾಚರಣೆಯನ್ನಾಗಿ ಘೋಷಿಸಿ ಹಲವಾರು ಪ್ರವಾಸಿ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹಬ್ಬಗಳು, ಜಾತ್ರೆ, ಸಂಗೀತ, ನೃತ್ಯ, ಕರಕುಶಲತೆ, ವಾಣಿಜ್ಯ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಪ್ರವಾಸಿಗರನ್ನು ಆಕರ್ಷಿಸಲಾಯಿತು.

ಪ್ರವಾಸೋದ್ಯಮ ಅಭಿವೃದ್ಧಿಯ ಯೋಜನ ಕಾರ್ಯವಿಧಾನ

ಪ್ರವಾಸೋದ್ಯಮ ಅಭಿವೃದ್ಧಿಯ ಯೋಜನ ಕಾರ್ಯವಿಧಾನ

ಪೀಠಿಕೆ

ಪ್ರವಾಸೋದ್ಯಮ ಬೆಳವಣಿಗೆ ಯೋಜನಾಕಾರ್ಯ ವಿಧಾನವು ಅರ್ಥಪೂರ್ಣವಾದ ಸಂಬಂಧವನ್ನು ಸಾಧಿಸಿದಾಗ ನಿರ್ದಿಷ್ಟ ಅಥವಾ ಉನ್ನತವಾದ ಸಾಧನೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಒಂದು ದೇಶ ಅಥವಾ ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸಬೇಕಾದರೆ ಆ ಪ್ರದೇಶದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಎಲ್ಲ ಸೌಲಭ್ಯಗಳು ದೊರಕುವಂತಿರಬೇಕು. ಅಲ್ಲಿರುವ ಪ್ರವಾಸೋದ್ಯಮದ ನೌಕರರು ಪ್ರವಾಸಿಗರಿಗೆ ಆತಿಥ್ಯವನ್ನು ನೀಡುವಲ್ಲಿ ಹಿಂದೆ ಬೀಳಬಾರದು. ಆಗ ಮಾತ್ರ ಪ್ರವಾಸಿಗರು ಆ ಪ್ರದೇಶವನ್ನು ಇಷ್ಟಪಡುತ್ತಾರೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಅವುಗಳೆಂದರೆ

1. ಪ್ರವಾಸೋದ್ಯಮ ಬೇಡಿಕೆ ಮತ್ತು ಪೂರೈಕೆಗಳನ್ನು ಅಳೆಯುವುದು:

ಆರಂಭದಲ್ಲಿ ಒಂದು ದೇಶದ ಪ್ರಾದೇಶಿಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇರುವ ಪ್ರವಾಸಿ ತಾಣಗಳ ಕುರಿತು ಕಲೆಹಾಕಬೇಕು. ಪ್ರವಾಸಿ ತಾಣಗಳನ್ನು ಗುರುತಿಸುವಿಕೆ. ಅಂದರೆ ಪ್ರವಾಸೋದ್ಯಮದ ಬೇಡಿಕೆ ಹಾಗೂ ಪೂರೈಕೆಗಳನ್ನು ಅಂದಾಜು ಮಾಡುವುದು ಎಂದರ್ಥ. ಪ್ರವಾಸೋದ್ಯಮ ಯೋಜನೆಯಲ್ಲಿ ಅಲ್ಲಿನ ವಸ್ತು ಸ್ಥಿತಿಯನ್ನು ಮೊದಲು ಅರಿತುಕೊಳ್ಳಬೇಕು. ಹಾಗೆ ನಿರ್ದಿಷ್ಟ ಪ್ರಗತಿಯನ್ನು ಸಾಧಿಸಲು ಮಾಹಿತಿ ಪಡೆದುಕೊಳ್ಳಬೇಕು. ಇದು ಪ್ರವಾಸೋದ್ಯಮದ ಪ್ರಥಮ ಪ್ರಯತ್ನವೂ ಹೌದು. ಪ್ರವಾಸಿ ಆಕರ್ಷಣೆಗಳು ಅನುಕೂಲತೆಗಳು ಹಾಗೂ ಸೇವೆಗಳು ಪ್ರವಾಸೋದ್ಯಮದ ಪೂರೈಕೆ ಅಂಶಗಳಾದರೆ ಪ್ರವಾಸಿಗಳು ಬೇಡಿಕೆಯ ಅಂಶಗಳಾಗಿವೆ. ಬೇಡಿಕೆ ಮತ್ತು ಪೂರೈಕೆ ಅಂದಾಜು ಮಾಡುವಿಕೆಯ ಮೂಲಕ ಭವಿಷ್ಯದ ಯೋಜನೆಯನ್ನು ರೂಪಿಸಲು ಸಾಧ್ಯವಾಗುತ್ತದೆ. ಪೂರೈಕೆ ಅಂಶಗಳು ಸದಾಕಾಲ ದೊರೆಯುವಂತಾದರೆ ಅಂತಹ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಆಕರ್ಷಿತರಾಗುತ್ತಾರೆ. ಮೈಕಲ್ ಪೀಟರ್ಸ್‌ರವರು ಪ್ರವಾಸಿ ಆಕರ್ಷಣೆಗಳನ್ನು ಅಂದಾಜು ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನು ತನ್ನ ಗ್ರಂಥ ಒಂದರಲ್ಲಿ ತಿಳಿಸಿದ್ದಾರೆ. ಅವು ಹೀಗಿವೆ.

  1. ಒಂದು ಪ್ರದೇಶದ ಪ್ರವಾಸಿ ಸ್ಥಳಗಳನ್ನು ನಿರಂತರವಾಗಿ ಅಭಿವೃದ್ಧಿಗೊಳಿಸಬೇಕು. ಇದರಿಂದ ಪ್ರವಾಸೋದ್ಯಮವು ದೇಶದಾದ್ಯಂತ ವ್ಯಾಪಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಆರ್ಥಿಕ ಲಾಭವು ಸಿಗುತ್ತದೆ.
  2. ಪ್ರವಾಸಿ ತಾಣಗಳು ವರ್ಷವಿಡೀ ಪ್ರವಾಸಿಗರಿಗೆ ದೊರಕುವಂತಿರಬೇಕು ಈ ಸೂತ್ರವನ್ನು ಅನುಸರಿಸಿದರೆ ನಿರ್ದಿಷ್ಟ ಋತುಮಾನವನ್ನು ಪ್ರವಾಸಕ್ಕಾಗಿ ಮೀಸಲಿಡುವುದು ತಪ್ಪುತ್ತದೆ. ಇದರಿಂದ ಪ್ರವಾಸೋದ್ಯಮವು ಸರ್ವಋತುಗಳಲ್ಲಿ ಬೆಳವಣಿಗೆ ಆದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.
  3. ಸುಲಭವಾಗಿ ಮತ್ತು ತೀವ್ರವಾಗಿ ಅಭಿವೃದ್ಧಿಯನ್ನು ಸಾಧಿಸುವ ಪ್ರವಾಸಿ ತಾಣಗಳಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕು. ಪ್ರಸ್ತುತ ಲಭ್ಯವಿರುವ ಮೂಲಸೌಕರ್ಯಗಳನ್ನು ಉಪಯೋಗಿಸಿಕೊಂಡು ಕಡಿಮೆ ವೆಚ್ಚದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು.
  4. ದೇಶದ ಎಲ್ಲಾ ಪ್ರವಾಸಿ ತಾಣಗಳನ್ನು ಏಕಕಾಲದಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರದೇಶಗಳನ್ನು ಮಾತ್ರ ಅಭಿವೃದ್ಧಿಗೊಳಿಸಬೇಕು.
  5. ಸಾಮಾನ್ಯವಾಗಿ ಪ್ರವಾಸಿಗರು ಹೊಸ ಹೊಸ ಅನುಭವಗಳನ್ನು ಪಡೆಯಲು ಪ್ರವಾಸಿ ತಾಣಗಳಿಗೆ ಬರುತ್ತಾರೆ. ಯಾವ ಪ್ರವಾಸಿ ತಾಣಗಳ ಕುರಿತು ಅವರು ಅನುಭವ ಪಡೆಯಲು ಹಾತೊರೆಯುತ್ತಾರೋ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಂತಹ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಬೇಕು.

2. ಉದ್ದೇಶ ನಿರೂಪಿಸುವಿಕೆ ( Framing Objectives)

ಪ್ರವಾಸಿ ತಾಣದ ಬಗ್ಗೆ ಸಂಗ್ರಹಿಸಿದ ಪ್ರಥಮ ಮಾಹಿತಿಯಿಂದ ಅದರ ಬಗ್ಗೆ ಸಂಯುಕ್ತ ಚಿತ್ರಣವನ್ನು ರೂಪಿಸಬಹುದು. ಇದಾದ ನಂತರ ಪ್ರವಾಸದ ಉದ್ದೇಶವನ್ನು ನಿರೂಪಿಸಬೇಕು ಎಂಬುದನ್ನು ನಿರ್ಧರಿಸಬೇಕು. ಈ ಉದ್ದೇಶ ನಿರೂಪಣೆಯಲ್ಲಿ ಆಡಳಿತಾತ್ಮಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಂಶಗಳು ಸೇರಿವೆ. ಆಡಳಿತಾತ್ಮಕ ವಿಷಯಗಳು ರಾಜಕೀಯ ಸಂಬಂಧಗಳ ಸ್ಥಾಪನೆ ಸೇರಿದ್ದರೆ, ಆದಾಯ, ಉದ್ಯೋಗ, ನಿರ್ಮಾಣ, ವಿದೇಶಿ ವಿನಿಮಯ ಗಳಿಕೆ ಮುಂತಾದವುಗಳು ಆರ್ಥಿಕ ಅಂಶದಲ್ಲಿ ಬರುತ್ತದೆ. ಹಾಗೆಯೇ ಮನರಂಜನೆ, ಅಂತರಾಷ್ಟ್ರೀಯ ಒಡಂಬಡಿಕೆ, ಸಾಂಸ್ಕೃತಿಕ ಪರಂಪರೆಯ ರಕ್ಷಣೆ, ಜನಾಂಗ ಸಮಸ್ಯೆ, ಶಿಕ್ಷಣ, ಸಂಶೋಧನೆ, ಸಾಂಸ್ಕೃತಿಕ ಉದ್ದೇಶಗಳು ಸಾಂಸ್ಕೃತಿಕ ಅಂಶಗಳಲ್ಲಿ ಸೇರಿವೆ.

 ಪ್ರವಾಸೋದ್ಯಮದ ಉದ್ದೇಶಗಳಿಂದ ಅದರ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಇದನ್ನೇ ಪರಿಕಲ್ಪನಾತ್ಮಕ ಯೋಜನೆ ಎಂದು ಕರೆಯಬಹುದು. ಪ್ರವಾಸೋದ್ಯಮದ ಬೆಳವಣಿಗೆಗಾಗಿ ನೂತನ ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಈ ಮಾರುಕಟ್ಟೆ ವ್ಯವಸ್ಥೆಯು ಪರಿಕಲ್ಪನಾತ್ಮಕ ಯೋಜನೆಗೆ ತಳಹದಿಯನ್ನು ಒದಗಿಸುತ್ತದೆ.

3. ಆರ್ಥಿಕ ಅಥವಾ ಹಣಕಾಸಿನ ಯೋಜನೆ ( Financial Planning)

ಪ್ರವಾಸೋದ್ಯಮವು ಇಂದು ಒಂದು ಬೃಹತ್ ಉದ್ದಿಮೆಯಾಗಿ ಬೆಳವಣಿಗೆಯನ್ನು ಹೊಂದುತ್ತಿದೆ. ಹೀಗಾಗಿ ಇದನ್ನು ಅಭಿವೃದ್ಧಿ ಚಟುವಟಿಕೆ ಎಂದು ಕರೆಯಬಹುದಾಗಿದೆ. ಈ ಅಭಿವೃದ್ಧಿಯ ಚಟುವಟಿಕೆಯು ಯಶಸ್ಸನ್ನು ಕಾಣಬೇಕಾದರೆ ಆರ್ಥಿಕ ಯೋಜನೆ ಅಗತ್ಯವಾಗಿದೆ. ಯಾವುದಾದರೂ ಒಂದು ಪ್ರವಾಸಿ ಕೇಂದ್ರವು ಪ್ರವಾಸಿಗರನ್ನು ಆಕರ್ಷಿಸಬೇಕಾದರೆ. ಆ ಪ್ರವಾಸಿ ಕೇಂದ್ರದಲ್ಲಿ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇತರ ಉದ್ದಮೆಗಳಂತೆ ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಅವಶ್ಯಕತೆ ಇರುತ್ತದೆ. ಸರ್ಕಾರ ಮೊದಲು ಬಂಡವಾಳವನ್ನು ಹೂಡಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ತದನಂತರ ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಬೇಕಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮವು ಹೆಚ್ಚು ಬೆಳವಣಿಗೆಯನ್ನು ಕಾಣಬಹುದು. ಕೇಂದ್ರೀಯ ಅರ್ಥ ವ್ಯವಸ್ಥೆ ಇರುವ ಪೋಲ್ಯಾಂಡ್, ಯುಗ್ಲೋಸೋಮಿಯ ಮುಂತಾದ ದೇಶಗಳಲ್ಲಿ ಪ್ರವಾಸೋದ್ಯಮದ ಇಂತಹ ವ್ಯವಸ್ಥೆಗೆ ಅವಕಾಶವಿಲ್ಲ. ಆದರೆ ಮಿಶ್ರ ಆರ್ಥಿಕ ವ್ಯವಸ್ಥೆ ಇರುವ ಇಟಲಿ, ಇಂಗ್ಲೆಂಡ್, ಫ್ರಾನ್ಸ್, ಗ್ರೀಸ್ ಹಾಗೂ ಭಾರತದಂತಹ ದೇಶಗಳಲ್ಲಿ ಇದಕ್ಕೆ ಅನುಕೂಲವಿರುವುದನ್ನು ಕಾಣಬಹುದು. ಪ್ರವಾಸೋದ್ಯಮದ ಪ್ರಯೋಜಿತ ಕಾರ್ಯಗಳ ಅಭಿವೃದ್ಧಿಯನ್ನು ಸರ್ಕಾರ ಕಾರ್ಯಾರಂಭವನ್ನು ಮಾಡಿ ಖಾಸಗಿ ಹೂಡಿಕೆದಾರರಿಗೆ ಅವಕಾಶವನ್ನು ನೀಡುತ್ತದೆ. ಇದರಿಂದ ಖಾಸಗಿಯವರು ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಅವರಿಗೆ ಸಹಾಯಧನ, ತೆರಿಗೆ ವಿನಾಯಿತಿ, ಕಡಿಮೆ ಬಡ್ಡಿಗೆ ಸಾಲ ಹಾಗೂ ಭೂಮಿಯನ್ನು ಕೊಂಡುಕೊಳ್ಳಲು ಹೊಸ ಕಾನೂನುಗಳನ್ನು ಮಾಡಿದರೆ ಅವರು ಸರ್ಕಾರದೊಂದಿಗೆ ಕೈಜೋಡಿಸುತ್ತಾರೆ. ಇದರಿಂದ ಪ್ರವಾಸೋದ್ಯಮಕ್ಕೆ ಅಪಾರ ಪ್ರಮಾಣದಲ್ಲಿ ಬಂಡವಾಳ ಹರಿದು ಬರುತ್ತದೆ. ಪರಿಣಾಮವಾಗಿ ದೇಶದ ಸಮಗ್ರ ಆರ್ಥಿಕ ಪ್ರಗತಿ ಉಂಟಾಗುತ್ತದೆ.

4. ಪ್ರಾದೇಶಿಕ ಯೋಜನೆ (Territorial Planning)

ಪ್ರವಾಸೋದ್ಯಮ ಯೋಜನೆಯನ್ನು ರೂಪಿಸುವಾಗ ಪ್ರಮುಖವಾಗಿ ಪ್ರಾದೇಶಿಕ ಯೋಜನೆಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು. ಅಭಿವೃದ್ಧಿಯಿಂದ ವಂಚಿತವಾದ ಪ್ರವಾಸಿ ಗಮ್ಯಸ್ಥಾನವನ್ನು ಆಯ್ಕೆ ಮಾಡಿಕೊಂಡು ಅದನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಆಗ ಪ್ರಾದೇಶಿಕ ಅಸಮತೋಲನ ಕಡಿಮೆಯಾಗಿ ಅಲ್ಲಿ ಸಮತೋಲನ ಕಂಡುಬರುತ್ತದೆ. ಇದರಿಂದ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಗಮ್ಯಸ್ಥಾನಗಳ ಜನದಟ್ಟಣೆ ಕಡಿಮೆಯಾಗುತ್ತದೆ. ನಗರೀಕರಣ ಹಾಗೂ ಕೈಗಾರಿಕರಣವನ್ನು ಸ್ವಲ್ಪ ಮಟ್ಟಿಗಾದರು ಕಡಿಮೆ ಮಾಡಬಹುದು. ಪ್ರಾದೇಶಿಕ ಯೋಜನೆಗಳಿಂದ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆಯುತ್ತದೆ. ಪರಿಸರ ರಕ್ಷಣೆಯನ್ನು ಮಾಡಲು ಅನುಕೂಲವಾಗುತ್ತದೆ. ಆದರೆ ಪ್ರಾದೇಶಿಕ ಯೋಜನೆಯನ್ನು ಹಮ್ಮಿಕೊಳ್ಳುವಾಗ ಪರಿಸರ ನಾಶ, ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಹಾಗೂ ಸ್ಥಳೀಯ ಸಂಪನ್ಮೂಲಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದು ಒಳಿತು.

5. ಮೂಲಸೌಕರ್ಯಗಳು (Basic Infrastructure)

ಇಂದು ದೇಶದ ಎಲ್ಲಾ ಭಾಗಗಳಲ್ಲಿ ಪ್ರವಾಸಿ ತಾಣಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಆದರೆ ಅವುಗಳು ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಮೂಲಸೌಕರ್ಯಗಳು ಬೇಕು. ಉದಾ: ವಸತಿ, ಸಾರಿಗೆ, ಆಹಾರ, ಉತ್ತಮ ರಸ್ತೆ, ಕುಡಿಯುವ ನೀರು, ಶೌಚಾಲಯ, ಒಳ ಚರಂಡಿ, ಸಿನಿಮಾ, ಮನೋರಂಜನೆ, ಉತ್ತಮ ಮಾರ್ಗದರ್ಶಿಗಳು, ಕಾರು ಬಾಡಿಗೆ, ವಿಮೆ, ವಿದ್ಯುತ್ ಪೂರೈಕೆ, ಹೆದ್ದಾರಿಗಳ ಸಂಪರ್ಕ ಮುಂತಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಇದರಿಂದ ಪ್ರವಾಸಿಗರು ಹೆಚ್ಚು ಆಕರ್ಷಿತರಾಗಿ ಪ್ರವಾಸೋದ್ಯಮದ ಬೆಳವಣಿಗೆಗೆ ಕಾರಣರಾಗುತ್ತಾರೆ. ಮೂಲಸೌಕರ್ಯಗಳು ಇಲ್ಲದೆ ಹೋದರೆ ಪ್ರವಾಸಿಗರು ಆಕರ್ಷಣೆಗೆ ಒಳಗಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲರೂ ಮನಗಾಣಬೇಕು.

6. ಸಮನ್ವಯ ಯೋಜನೆ (Co-ordinal Planning)

ಪ್ರವಾಸೋದ್ಯಮವು ಏಕಮುಖವಾದ ಉದ್ದಿಮೆಯಾಗಿಲ್ಲ. ಅದು ಹಲವು ಉದ್ಯಮಿಗಳ ಒಂದು ಉದ್ದಿಮೆಯಾಗಿದೆ. ಪ್ರವಾಸ ಉದ್ಯಮವು ಹಲವು ಉದ್ಯಮಗಳೊಂದಿಗೆ ಸಹಕಾರದಿಂದ ನಡೆಯುವ ಉದ್ದಿಮೆಯಾಗಿದೆ. ಇದರ ಬೆಳವಣಿಗೆಗೆ ಹಲವು ಪೂರಕ ಉದ್ದಿಮೆಗಳು ಸಮನ್ವಯ ಸಾಧಿಸಬೇಕು. ಉದಾಹರಣೆಗೆ ಸಾರಿಗೆ, ಹೋಟೆಲ್, ಬ್ಯಾಂಕುಗಳು ಹಾಗೂ ವಾಣಿಜ್ಯ ಸಂಘ ಸಂಸ್ಥೆಗಳು ಪ್ರವಾಸೋದ್ಯಮ ಇಲಾಖೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಆದಾಯ ದ್ವಿಗುಣಗೊಳ್ಳುತ್ತದೆ.

7. ಸಾರಿಗೆ ಸಂಪರ್ಕಗಳು (Road and Transport)

ಪ್ರವಾಸಿಗರು ತಾವು ಪ್ರವಾಸ ಕೈಗೊಳ್ಳುವ ಪ್ರದೇಶಗಳಿಗೆ ಬಸ್ಸು, ರೈಲು, ವಿಮಾನ ಹಾಗೂ ಹಡಗುಗಳ ಮೂಲಕ ಬರುತ್ತಾರೆ. ಪ್ರವಾಸೋದ್ಯಮವು ಬಸ್ಸು, ರೈಲು, ವಿಮಾನ ಹಾಗೂ ಹಡಗುಗಳ ವೇಳಾಪಟ್ಟಿಗಳು ಪ್ರವಾಸಿಗರಿಗೆ ದೊರಕುವಂತಹ ವ್ಯವಸ್ಥೆಯನ್ನು ಮಾಡಬೇಕು.

8. ಮಾನವ ಸಂಪನ್ಮೂಲಗಳು (Human Resources Planning)

ಪ್ರವಾಸೋದ್ಯಮವು ಒಂದು ಅಭಿವೃದ್ಧಿಶೀಲ ಉದ್ಯಮವಾಗಿದೆ. ಈ ಉದ್ದಿಮೆ ಅತ್ಯಂತ ದಕ್ಷತೆಯಿಂದ ಕೂಡಿರಬೇಕಾದರೆ ಅಲ್ಲಿ ಪ್ರಾಮಾಣಿಕ ಹಾಗೂ ಸೇವಾ ನಿರತ ನೌಕರರು ಇರಬೇಕು. ಈ ನೌಕರರು ಸೂಕ್ತ ತರಬೇತಿಯನ್ನು ಪಡೆಯಲು ಅರ್ಹತೆಯನ್ನು ಹೊಂದಿರುವವರಾಗಿರಬೇಕು. ಅವರು ವೃತ್ತಿ ನೈಪುಣ್ಯತೆಯನ್ನು ಪಡೆದಿರಬೇಕು. ಉದಾಹರಣೆಗೆ ಪ್ರವಾಸಿ ಏಜೆಂಟರು ನಿರ್ವಾಹಕರು, ಹೋಟೆಲ್ ಸಿಬ್ಬಂದಿಗಳು, ಬಾಣಸಿಗರು, ವೃತ್ತಿಪರ ತರಬೇತಿ ಪಡೆದವರಾಗಿರಬೇಕು. ಚಾಲಕರು ಪ್ರವಾಸಿ ತಾಣದ ಸಂಪೂರ್ಣ ಪರಿಚಯ ಹೊಂದಿರಬೇಕು. ಹೋಟೆಲ್ ನೌಕರರು ಅತಿಥಿ ಸತ್ಕಾರಕ್ಕೆ ಹೆಸರಾಗಿರಬೇಕು. ಅಡುಗೆಯವರು ಆಹಾರ ತಯಾರಿಕೆಯಲ್ಲಿ ನುರಿತವರಾಗಿರಬೇಕು. ಶುಚಿತ್ವವನ್ನು ಕಾಪಾಡಬೇಕು, ರುಚಿತ್ವವನ್ನು ನೀಡಬೇಕು. ಸೌಜನ್ಯ ಗುಣವನ್ನು ಹೊಂದಿರಬೇಕು.

9. ಮಾರಾಟ ಪ್ರವರ್ತನೆ ಮತ್ತು ಪ್ರಚಾರ ವ್ಯವಸ್ಥೆ (Marketing Promotion and Publicity) 

ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದ ನಂತರ ಪ್ರವಾಸೋದ್ಯಮದ ಕುರಿತು ಪ್ರಚಾರವನ್ನು ಮಾಡಬೇಕು. ಆಗ ಮಾತ್ರ ಪ್ರವಾಸಿ ಸ್ಥಳದ ಬಗ್ಗೆ ಪ್ರವಾಸಿಗರಿಂದ ಬೇಡಿಕೆ ಹೆಚ್ಚುತ್ತದೆ. ಪ್ರವಾಸಿತಾಣಗಳು ಪ್ರವಾಸಿಗರಿಂದ ಆಕರ್ಷಣೆಗೊಳಗಾಗಬೇಕೆಂದರೆ ಪ್ರವಾಸೋದ್ಯಮ ಇಲಾಖೆಯು ಅವುಗಳ ಕುರಿತು ಸೂಕ್ತ ರೀತಿಯಲ್ಲಿ ಪ್ರಚಾರ ಮಾಡಬೇಕು. ಈ ಉದ್ದೇಶಕ್ಕಾಗಿ ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ಕಚೇರಿಗಳನ್ನು ಸ್ಥಾಪಿಸಬೇಕು. ವೃತ್ತಪತ್ರಿಕೆ, ರೇಡಿಯೋ, ಟೆಲಿವಿಜನ್‌, ಯುಟ್ಯೂಬ್‌, ಜಾಹೀರಾತು, ಪ್ರವಾಸಿ ಮಾರ್ಗದರ್ಶಿಕೆಗಳು, ಪೋಸ್ಟರ್‌ಗಳು, ಪ್ರವಾಸಿ ಕೈಪಿಡಿ, ಕಿರು ಹೊತ್ತಿಗೆ ಹಾಗೂ ಸಾಹಿತ್ಯ ಪುಸ್ತಕಗಳ ಮೂಲಕ ಪ್ರಚಾರ ಮಾಡಬೇಕು. ಖರೀದಿ ವ್ಯವಸ್ಥೆ ಹಾಗೂ ಪ್ರವಾಸಿ ತಾಣಗಳಲ್ಲಿ ಸಿಗುವ ಸವಲತ್ತುಗಳ ಕುರಿತು ಚಿಕ್ಕ-ಚಿಕ್ಕ ಪುಸ್ತಕಗಳನ್ನು ಪ್ರಕಟಿಸಬೇಕು.

10. ಮೇಲ್ವಿಚಾರಣಾ ಪ್ರಗತಿ:

ಪ್ರವಾಸೋದ್ಯಮದ ಬಗ್ಗೆ ತೆಗೆದುಕೊಂಡ ತೀರ್ಮಾನಗಳು ಹಾಗೂ ಅವುಗಳನ್ನು ಪ್ರವಾಸಿಗರಿಗೆ ತಲುಪಿಸಲು ತೆಗೆದುಕೊಂಡ ಮಾರುಕಟ್ಟೆ ತೀರ್ಮಾನಗಳ ಕಾರ್ಯವೈಖರಿಯನ್ನು ನಿಯಮಿತವಾಗಿ ಗಮನಿಸಬೇಕು. ಇದನ್ನೇ ಮೇಲ್ವಿಚಾರಣ ಪ್ರಗತಿ ಎಂದು ಕರೆಯುತ್ತಾರೆ. ಯೋಜನೆಯಂತೆ ವಾರ್ಷಿಕವಾಗಿ ಅಥವಾ ಮೂರು ಅಥವಾ ಐದು ವರ್ಷಗಳ ಕಾಲಾವಧಿಯಲ್ಲಿ ಸಾಧನೆ ಮಾಡಬೇಕೆಂದಿರುವ ಗುರಿಯ ಮೇಲ್ವಿಚಾರಣೆ ನಡೆಯಬೇಕು. ಅವುಗಳನ್ನು ಆಗಾಗ ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಹಾಗೆ ಮಾಡುವಾಗ ಬದಲಾದ ಸನ್ನಿವೇಶ ಸಂಪನ್ಮೂಲಗಳು ಅನುಭವದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಯೋಜನೆಗಳನ್ನು ಪರಿಷ್ಕರಣೆ ಮಾಡಬೇಕು.

ಉಪಸಂಹಾರ :

ಮೇಲೆ ವಿವರಿಸಲಾದ ಅಂಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯವಾದ ಯೋಜನಾ ವಿಧಾನಗಳು ಮತ್ತು ಅವುಗಳ ಮಹತ್ವವನ್ನು ವಿವರಿಸಲಾಗಿದೆ. ಪ್ರವಾಸೋದ್ಯಮವು ಯಶಸ್ವಿಯಾಗಲು ಬೇಡಿಕೆ–ಪೂರೈಕೆ ವಿಶ್ಲೇಷಣೆ, ಸ್ಪಷ್ಟ ಉದ್ದೇಶ ನಿರೂಪಣೆ, ಸಮರ್ಪಕ ಹಣಕಾಸಿನ ಯೋಜನೆ, ಪ್ರಾದೇಶಿಕ ಸಮತೋಲನ, ಮೂಲಸೌಕರ್ಯಗಳ ಅಭಿವೃದ್ಧಿ, ವಿವಿಧ ಕ್ಷೇತ್ರಗಳ ಸಮನ್ವಯ, ಉತ್ತಮ ಸಾರಿಗೆ ಸಂಪರ್ಕಗಳು, ದಕ್ಷ ಮಾನವ ಸಂಪನ್ಮೂಲ ಹಾಗೂ ಪರಿಣಾಮಕಾರಿ ಪ್ರಚಾರ ಕ್ರಮಗಳು ಅತ್ಯಾವಶ್ಯಕವಾಗಿವೆ. ಇವುಗಳೊಂದಿಗೆ ನಿರಂತರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ಕೈಗೊಳ್ಳುವುದರಿಂದ ಪ್ರವಾಸೋದ್ಯಮ ಕ್ಷೇತ್ರವು ಸ್ಥಿರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ ಸರಿಯಾದ ಯೋಜನೆ, ಕಾರ್ಯನಿರ್ವಹಣೆ ಮತ್ತು ಸಹಕಾರದ ಮೂಲಕ ಪ್ರವಾಸೋದ್ಯಮವು ದೇಶದ ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡುವ ಶಕ್ತಿಯುತ ಕ್ಷೇತ್ರವಾಗುತ್ತದೆ.

ಪ್ರವಾಸ ಮಾರ್ಗದರ್ಶಕರಿಗಾಗಿ ಮಾರ್ಗಸೂಚಿಗಳು

ಪ್ರವಾಸ ಮಾರ್ಗದರ್ಶಕರಿಗಾಗಿ ಮಾರ್ಗಸೂಚಿಗಳು

ಪೀಠಿಕೆ :

ಭಾರತದಲ್ಲಿ ಪ್ರವಾಸೋದ್ಯಮವು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ದೇಶದ ಆರ್ಥಿಕತೆ, ಸಾಂಸ್ಕೃತಿಕ ವಿನಿಮಯ ಮತ್ತು ಜಾಗತಿಕ ಪ್ರತಿಷ್ಠೆಗೆ ಮಹತ್ವದ ಕೊಡುಗೆ ನೀಡುತ್ತದೆ. ತನ್ನ ವೈವಿಧ್ಯಮಯ ಪರಂಪರೆ, ಭಾಷೆಗಳು, ಸಂಪ್ರದಾಯಗಳು ಮತ್ತು ಪ್ರಕೃತಿ ಸೌಂದರ್ಯದಿಂದ ಭಾರತವು ಪ್ರತಿವರ್ಷ ಲಕ್ಷಾಂತರ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ, ಪ್ರವಾಸ ಮಾರ್ಗದರ್ಶಕರು ಸಾಂಸ್ಕೃತಿಕ ರಾಯಭಾರಿಗಳಾಗಿ, ಇತಿಹಾಸದ ವಿವರಣೆಕಾರರಾಗಿ ಮತ್ತು ಅರ್ಥಪೂರ್ಣ ಪ್ರವಾಸ ಅನುಭವಗಳನ್ನು ಸೃಷ್ಟಿಸುವವರಾಗಿ ಪ್ರಮುಖ ಪಾತ್ರವಹಿಸುತ್ತಾರೆ. ಅವರ ವರ್ತನೆ, ಜ್ಞಾನ ಮತ್ತು ವೃತ್ತಿಪರತೆ ಪ್ರವಾಸಿಗರ ಮನಸ್ಸಿನಲ್ಲಿ ದೇಶದ ಬಗ್ಗೆ ಮೂಡುವ ಅಭಿಪ್ರಾಯವನ್ನು ನಿರ್ಧರಿಸುತ್ತದೆ. ಆದ್ದರಿಂದ, ಗುಣಮಟ್ಟದ ಸೇವೆ, ನೈತಿಕತೆ ಮತ್ತು ಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸ್ಪಷ್ಟ ಮಾರ್ಗಸೂಚಿಗಳು ಅಗತ್ಯವಿವೆ.

1. ವೃತ್ತಿಪರ ಜ್ಞಾನ ಮತ್ತು ಸಾಮರ್ಥ್ಯ

ಒಬ್ಬ ಪ್ರವಾಸ ಮಾರ್ಗದರ್ಶಕನು ತನ್ನ ಕ್ಷೇತ್ರದ ಕುರಿತು ಆಳವಾದ ಜ್ಞಾನವನ್ನು ಹೊಂದಿರಬೇಕು. ಇದರಲ್ಲಿ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ, ಸ್ಥಳೀಯ ಸಂಪ್ರದಾಯಗಳು ಮತ್ತು ಆಧುನಿಕ ಮಹತ್ವ ಒಳಗೊಂಡಿರಬೇಕು.

ಮಾರ್ಗದರ್ಶಕರು:

  • ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಬೇಕು
  • ಇಂಗ್ಲಿಷ್ ಹಾಗೂ ಸ್ಥಳೀಯ ಭಾಷೆಗಳ ಮೇಲೆ ಪಟ್ಟು ಹೊಂದಿರಬೇಕು.
  • ನಿಖರ ಮತ್ತು ಸತ್ಯ ಮಾಹಿತಿಯನ್ನು ನೀಡಬೇಕು.

ಹೀಗೆ ವೃತ್ತಿಪರ ನಿಲುವು ಮತ್ತು ಸಾಮರ್ಥ್ಯವು ಮಾರ್ಗದರ್ಶಕರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.

2. ಸಂವಹನ ಕೌಶಲ್ಯಗಳು

ಸಮರ್ಥ ಸಂವಹನವು ಉತ್ತಮ ಮಾರ್ಗದರ್ಶಕರ ಪ್ರಮುಖ ಗುಣವಾಗಿದೆ.

ಮಾರ್ಗದರ್ಶಕರು:

  • ಸ್ಪಷ್ಟವಾಗಿ, ನಿಖರವಾಗಿ ಮತ್ತು ಆತ್ಮವಿಶ್ವಾಸದಿಂದ ಮಾತನಾಡಬೇಕು
  • ಪ್ರವಾಸಿಗರ ಹಿನ್ನೆಲೆಗೆ ಅನುಗುಣವಾಗಿ ಮಾತಿನ ಶೈಲಿಯನ್ನು ಬದಲಿಸಬೇಕು
  • ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸಬೇಕು

ಉತ್ತಮ ಸಂವಹನವು ಪ್ರವಾಸವನ್ನು ಜ್ಞಾನಪೂರ್ಣ ಮತ್ತು ಸ್ಮರಣೀಯವಾಗಿಸುತ್ತದೆ.

3. ನೈತಿಕ ನಡೆ ಮತ್ತು ಸತ್ಯನಿಷ್ಠೆ

ಮಾರ್ಗದರ್ಶಕರು ಉನ್ನತ ನೈತಿಕ ಮೌಲ್ಯಗಳನ್ನು ಪಾಲಿಸಬೇಕು.

ಅವುಗಳಲ್ಲಿ:

  • ಪ್ರವಾಸಿಗರನ್ನು ಮೋಸ ಮಾಡಬಾರದು
  • ಕಮಿಷನ್‌ಗಾಗಿ ಅಂಗಡಿಗಳನ್ನು ಒತ್ತಾಯಿಸಬಾರದು
  • ಪ್ರವಾಸಿಗರ ಗೌಪ್ಯತೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು

ನೈತಿಕ ನಡೆ ವಿಶ್ವಾಸವನ್ನು ಹೆಚ್ಚಿಸುತ್ತದೆ.

4. ಸಾಂಸ್ಕೃತಿಕ ಸಂವೇದನೆ – ಗೌರವ

ಭಾರತವು ವಿವಿಧ ಸಂಸ್ಕೃತಿಗಳ ದೇಶವಾಗಿದೆ.

ಮಾರ್ಗದರ್ಶಕರು:

  • ಸ್ಥಳೀಯ ಸಂಪ್ರದಾಯಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸಬೇಕು
  • ಧಾರ್ಮಿಕ ಸ್ಥಳಗಳನ್ನು ಗೌರವಿಸುವಂತೆ ಪ್ರೇರೇಪಿಸಬೇಕು
  • ಯಾವುದೇ ಭೇದಭಾವವನ್ನು ತಡೆಯಬೇಕು

ಇದು ಸಂಸ್ಕೃತಿಗಳ ನಡುವೆ ಸಮನ್ವಯವನ್ನು ಬೆಳೆಸುತ್ತದೆ.

5. ಭದ್ರತೆ ಮತ್ತು ಜವಾಬ್ದಾರಿ

ಮಾರ್ಗದರ್ಶಕರು ಪ್ರವಾಸಿಗರ ಸುರಕ್ಷತೆಗಾಗಿ ಹೊಣೆಗಾರರಾಗಿರುತ್ತಾರೆ.

ಅವರು:

  • ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಿರಬೇಕು
  • ಸ್ಪಷ್ಟ ಸೂಚನೆಗಳನ್ನು ನೀಡಬೇಕು
  • ಅಪಾಯಕರ ಸ್ಥಳಗಳಲ್ಲಿ ಜಾಗ್ರತೆ ವಹಿಸಬೇಕು

ಭದ್ರತೆ ಅತ್ಯಂತ ಮುಖ್ಯವಾದ ಅಂಶವಾಗಿದೆ.

6. ಪರಿಸರ ಜಾಗೃತಿ

ಸ್ಥಿರ ಪ್ರವಾಸೋದ್ಯಮವು ಇಂದಿನ ಕಾಲದಲ್ಲಿ ಅತ್ಯಗತ್ಯವಾಗಿದೆ.

ಮಾರ್ಗದರ್ಶಕರು:

  • ಪರಿಸರ ಸ್ನೇಹಿ ವರ್ತನೆಗೆ ಉತ್ತೇಜನ ನೀಡಬೇಕು
  • ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ತಿಳಿಸಬೇಕು
  • ಸ್ಥಳೀಯ ಪರಿಸರ ಯೋಜನೆಗಳಿಗೆ ಬೆಂಬಲ ನೀಡಬೇಕು

ಇದು ಭವಿಷ್ಯದ ಪೀಳಿಗೆಗೆ ಸಂಪತ್ತನ್ನು ಉಳಿಸುತ್ತದೆ.

7. ವೃತ್ತಿಪರ ವ್ಯಕ್ತಿತ್ವ ಮತ್ತು ನಡೆ

ಮಾರ್ಗದರ್ಶಕರ ವ್ಯಕ್ತಿತ್ವವು ಅವರ ವೃತ್ತಿಪರತೆಯನ್ನು ತೋರಿಸುತ್ತದೆ.

ಅವರು:

  • ಶಿಸ್ತಿನ ಮತ್ತು ಸ್ವಚ್ಛ ಉಡುಪನ್ನು ಧರಿಸಬೇಕು
  • ಸಮಯಪಾಲನೆ ಮಾಡಬೇಕು
  • ಸ್ನೇಹಪರವಾಗಿ ವರ್ತಿಸಬೇಕು

ಇದು ಉತ್ತಮ ಪ್ರಭಾವವನ್ನು ಮೂಡಿಸುತ್ತದೆ.

8. ಕಾನೂನು ಪಾಲನೆ ಮತ್ತು ಪ್ರಮಾಣ        ಪತ್ರ

ಭಾರತದಲ್ಲಿ ಮಾರ್ಗದರ್ಶಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು.

ಅವರು:

  • ಮಾನ್ಯ ಪ್ರಮಾಣಪತ್ರ ಹೊಂದಿರಬೇಕು
  • ಗುರುತಿನ ಚೀಟಿಯನ್ನು ಕೊಂಡಿರಬೇಕು
  • ನಿಯಮಗಳನ್ನು ಪಾಲಿಸಬೇಕು

ಇದು ವ್ಯವಸ್ಥಿತ ಪ್ರವಾಸೋದ್ಯಮಕ್ಕೆ ಸಹಾಯಕ ವಾಗುತ್ತದೆ.

ಉಪಸಂಹಾರ

ಪ್ರವಾಸ ಮಾರ್ಗದರ್ಶಕರು ಭಾರತದಲ್ಲಿ ಪ್ರವಾಸೋದ್ಯಮದ ಹೃದಯವಾಗಿದ್ದಾರೆ. ಅವರು ಕೇವಲ ಮಾಹಿತಿ ನೀಡುವವರಲ್ಲ, ಅವರು ಸಂಸ್ಕೃತಿಯನ್ನು ಪರಿಚಯಿಸುವವರು ಮತ್ತು ಪ್ರವಾಸವನ್ನು ಅರ್ಥಪೂರ್ಣವಾಗಿಸುವವರು. ಜ್ಞಾನ, ನೈತಿಕತೆ, ಸಂವಹನ, ಭದ್ರತೆ ಮತ್ತು ಪರಿಸರ ಜಾಗೃತಿ ಎಂಬ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಮಾರ್ಗದರ್ಶಕರು ಉತ್ತಮ ಸೇವೆಯನ್ನು ನೀಡಬಹುದು. ಭಾರತಂಥ ವೈವಿಧ್ಯಮಯ ದೇಶದಲ್ಲಿ, ಉತ್ತಮ ಮಾರ್ಗದರ್ಶಕರು ಪ್ರವಾಸೋದ್ಯಮದ ಅಭಿವೃದ್ಧಿಗೆ ಅವಿಭಾಜ್ಯ ಅಂಗವಾಗಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಹಾಯಕ ಸೇವೆಗಳ ಪಾತ್ರ

ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಹಾಯಕ ಸೇವೆಗಳ ಪಾತ್ರ

ಸಹಾಯಕ ಸೇವೆಗಳು (Supportive Services)

ಪ್ರವಾಸೋದ್ಯಮ ಇಲಾಖೆಯು ಇಂದು ಅಭಿವೃದ್ಧಿಯ ಪಥದತ್ತ ಸಾಗಿದೆ. ಇದಕ್ಕೆ ಮೂಲ ಕಾರಣವೆಂದರೆ ಸಾರಿಗೆ, ವಸತಿ ವ್ಯವಸ್ಥೆ, ಆಹಾರ ಸೌಲಭ್ಯ ಹಾಗೂ ಮೂಲ ಸೌಕರ್ಯಗಳು ದೊರಕುವಿಕೆ. ಆದುದರಿಂದ ಇವುಗಳನ್ನು ಅಗತ್ಯ ಸೇವೆಗಳು ಎಂದು ಕರೆಯಲಾಗುತ್ತದೆ. ಇದರ ಹೊರತಾಗಿ ವಿದೇಶಿ ವಿನಿಮಯ ವಿಮಾ ಸೌಲಭ್ಯಗಳು, ಖರೀದಿ, ಸುರಕ್ಷತೆ ಪ್ರವಾಸಿ ದಾಖಲೆಗಳು, ಸ್ಥಳೀಯ ಸಹಾಯ, ಪ್ರವಾಸಿ ಮಾಹಿತಿ ಸೇವೆ ಹಾಗೂ ಮಾರ್ಗದರ್ಶಿಗಳ ಸೇವೆ ಮೊದಲಾದವುಗಳನ್ನು ಸಹಾಯಕ ಸೇವೆಗಳು ಎಂದು ಕರೆಯಲಾಗಿದೆ. ಪ್ರವಾಸೋದ್ಯಮವನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಕಾರಣಕ್ಕಾಗಿ ಇವುಗಳನ್ನು ಸಹಾಯಕ ಸೇವಗಳೆಂದು ಹೆಸರಿಸಲಾಗಿದೆ. ಇವುಗಳನ್ನು ಸಂಕ್ಷಿಪ್ತವಾಗಿ ನೋಡೋಣ.

1. ಮಾರ್ಗದರ್ಶಿಗಳ ಸೇವೆ (Guides Service) :

 ಪ್ರವಾಸೋದ್ಯಮವು ಅಭಿವೃದ್ಧಿಯಾಗಲು ಕೇವಲ ವಸತಿ, ಊಟ ಹಾಗೂ ಸುರಕ್ಷತೆಯಂತಹ ಸೌಲಭ್ಯಗಳಿದ್ದರೆ ಸಾಲದು ಮುಖ್ಯವಾಗಿ ಪ್ರವಾಸೋದ್ಯಮದಲ್ಲಿ ಮಾರ್ಗದರ್ಶಿಗಳ ಸೇವೆ ಬಹಳ ಅಗತ್ಯ. ಪ್ರವಾಸಿಗರು ತಾವು ಪ್ರವಾಸ ಬಯಸುವ ಸ್ಥಳಗಳಿಗೆ ತಾವಾಗಿಯೇ ಹೋಗಲಾರರು, ಬದಲಾಗಿ ಅವರಿಗೆ ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸದ ಗಮ್ಯ ಸ್ಥಾನಗಳ ಮಹತ್ವ, ಅಲ್ಲಿರುವ ಸೌಲಭ್ಯಗಳು ಮತ್ತು ಅಲ್ಲಿನ ಸುರಕ್ಷತೆಯ ಕುರಿತು ಮಾಹಿತಿಯನ್ನು ನೀಡುವ ಮೂಲಕ ಅವರನ್ನು ಗಮ್ಯ ಸ್ಥಾನಕ್ಕೆ ಕರೆದೊಯ್ಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾರ್ಗದರ್ಶಿಗಳು ಪ್ರವಾಸಕ್ಕೆ ಬರುವ ತಂಡಗಳ ನಾಯಕನಾಗಿ, ನಿರ್ವಾಹಕನಾಗಿ ಹಾಗೂ ಏಜೆಂಟಾಗಿ ಸೇವೆ ಸಲ್ಲಿಸುವ ಮೂಲಕ ಅವರಿಂದ ಇಂತಿಷ್ಟು ಅಂತ ಸೇವಾ ಶುಲ್ಕ ಪಡೆಯುತ್ತಾನೆ.

ಇದರ ಜೊತೆಗೆ ಮಾರ್ಗದರ್ಶಿಯು ಪ್ರವಾಸಿಗರಿಗೆ ಟಿಕೇಟ್ ಖರೀದಿ, ಹಣಕಾಸಿನ ಸೌಲಭ್ಯ, ವಸತಿ ವ್ಯವಸ್ಥೆ, ವಿಮಾನ ಹಾಗೂ ಬಸ್ ಟಿಕೇಟುಗಳ ಖರೀದಿ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಈ ರೀತಿ ಮಾಡುವ ಕಾರ್ಯವನ್ನು ಮಾರ್ಗದರ್ಶಿ ಸೇವೆಗಳು ಎಂದು ಕರೆಯುತ್ತಾರೆ. ಇಂತಹ ಮಾರ್ಗದರ್ಶಿ ಸೇವೆಯನ್ನು ಒದಗಿಸುವಲ್ಲಿ ಇಂಗ್ಲೆಂಡಿನ ಥಾಮಸ್ ಕುಕ್‌ ಕಂಪನಿ ಹಾಗೂ ಅಮೆರಿಕಾದ ಎಕ್ಸ್‌ಪ್ರೆಸ್ ಕಂಪನಿಗಳು ಜಗತ್ತಿನಲ್ಲಿ ಹೆಚ್ಚು ಹೆಸರನ್ನು ಪಡೆದಿವೆ. ಥಾಮಸ್ ಕುಕ್‌ ಕಂಪನಿಯು ವಿಶ್ವದಲ್ಲಿಯೇ ಪ್ರಸಿದ್ಧ ಏಜೆನ್ಸಿಯಾಗಿದ್ದು 145 ದೇಶಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. ತನ್ಮೂಲಕ ಪ್ರವಾಸಿಗರಿಗೆ ಅಗತ್ಯ ಸೇವೆಗಳನ್ನು ನೀಡುತ್ತಿದೆ. ಅಂದಾಜಿನ ಪ್ರಕಾರ ಸುಮಾರು 13 ಸಾವಿರಕ್ಕೂ ಹೆಚ್ಚು ನೌಕರರನ್ನು ಈ ಕಂಪನಿ ಹೊಂದಿದೆ.

2. ಮಾಹಿತಿ ಸೇವೆ (Information Service) :

ಪ್ರವಾಸಿಗರು ನಿಸರ್ಗ ಪ್ರೇಮಿಗಳು. ನಿಸರ್ಗದ ಸವಿಯನ್ನು ಸವಿಯಲು, ವನ್ಯಪ್ರಾಣಿ ಹಾಗೂ ಪಕ್ಷಿ ಸಂಕುಲಗಳನ್ನು ವೀಕ್ಷಿಸಲು ಕೆರೆ ತೊರೆಗಳನ್ನು ನೋಡಲು, ಜಲಪಾತದ ಬೋರ್ಗರೆತವನ್ನು ನೋಡಲು ಬರುತ್ತಾರೆ. ಆದರೆ ಅವರಿಗೆ ತಾವು ಹೋಗುವ ಪ್ರದೇಶಗಳ ಮಹತ್ವ, ಅಲ್ಲಿ ದೊರೆಯುವ ಸಾರಿಗೆ, ವಸತಿ ಸೌಲಭ್ಯ, ಊಟ-ಉಪಹಾರದ ಬಗ್ಗೆ ಮಾಹಿತಿ ನೀಡಿ ಗಮ್ಯ ಸ್ಥಾನಕ್ಕೆ ಪ್ರವಾಸಿಗರನ್ನು ಸೆಳೆಯಲು ಪ್ರವಾಸಿ ಸೇವೆ ಅತ್ಯಂತ ಮಹತ್ವದಾಗಿದೆ. ಈ ಕೆಲಸವನ್ನು ಪ್ರಯಾಣ ಏಜೆಂಟರು ಇಲ್ಲವೇ ಪ್ರವಾಸಿ ಆಪರೇಟರ್‌ಗಳು ಅಲ್ಲಿ ಸಿಗುವ ಕಾರು ಬಾಡಿಗೆ. ಆ ಪ್ರದೇಶದಲ್ಲಿ ಸಿಗುವ ವಸ್ತುಗಳ ಮಾಹಿತಿ, ಪ್ರವಾಸಿ ಮಾರ್ಗದರ್ಶಿಗಳು ದೊರಕುವಿಕೆ. ಮಾಹಿತಿ ಪುಸ್ತಕ, ಬಿತ್ತಿ ಚಿತ್ರಗಳು, ಕಿರು ಹೊತ್ತಿಗೆ ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ಮಾಹಿತಿಯನ್ನು ನೀಡುತ್ತಾರೆ. ಇದು ಪ್ರವಾಸ ಕೈಗೊಳ್ಳುವವರಿಗೆ ತುಂಬಾ ಅನುಕೂಲವಾಗುತ್ತದೆ.

3. ವಿದೇಶಿ ವಿನಿಮಯ ಸೇವೆ (Foreign Exchange Service) :

ಪ್ರವಾಸಿಗರು ತಾವು ತಲುಪಬೇಕಾದ ಪ್ರದೇಶದ ನಿಲ್ದಾಣದಲ್ಲಿ ಇಳಿದಾಗ ತಕ್ಷಣವೇ ತಮ್ಮ ದೇಶದ ಕರೆನ್ಸಿಗಳನ್ನು ಈ ದೇಶದ ಕರೆನ್ಸಿಗೆ ಬದಲಾಯಿಸಿಕೊಳ್ಳುವ ವ್ಯವಸ್ಥೆಯನ್ನು ಇಂದು ಮಾಡಲಾಗಿದೆ. ಕೆಲವು ಪ್ರಮುಖ ನಗರಗಳಲ್ಲಿ ವಿದೇಶಿ ಬ್ಯಾಂಕುಗಳು ಇದ್ದು ಅವುಗಳು ವಿದೇಶಿ ವಿನಿಮಯ ಸೌಲಭ್ಯಗಳನ್ನು ಹೊಂದಿವೆ. ಕೆಲವು ಸಂದರ್ಭಗಳಲ್ಲಿ ಪ್ರವಾಸಿ ಏಜೆಂಟರುಗಳು ವಿದೇಶಿ ವಿನಿಮಯದ ಅನುಕೂಲತೆಗಳನ್ನು ಪ್ರವಾಸಿಗರಿಗೆ ಒದಗಿಸಿಕೊಡುತ್ತಾರೆ. ಕೆಲವು ಏಜೆಂಟರುಗಳು ಪ್ರವಾಸಿ ಚೆಕ್ಕುಗಳನ್ನು ನೀಡುತ್ತಾರೆ. ಬಹಳ ವರ್ಷಗಳ ಹಿಂದಿನ ಮಾತು ಜನರು ಪ್ರವಾಸವನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕೈಗೊಂಡರೆ ಅಗತ್ಯವಾದಷ್ಟು ಹಣವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಯಾವುದೇ ರಾಷ್ಟ್ರ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಈ ಕಾರಣದಿಂದಾಗಿ ವಿದೇಶಿ ಪ್ರವಾಸಿಗರು ಹಣದ ಬದಲಾಗಿ ಪ್ರವಾಸಿ ಚೆಕ್, ಕ್ರೆಡಿಟ್ ಕಾರ್ಡ್ ಹಾಗೂ ಮಾಸ್ಟರ್ ಕಾರ್ಡ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಇವುಗಳು ಅಂತರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿದ್ದು ಒಂದು ನಿಗದಿತ ವಿದೇಶಿ ಬ್ಯಾಂಕುಗಳಿಂದ ಹಣವನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಈ ವಿದೇಶಿ ವಿನಿಮಯ ಪದ್ಧತಿಯನ್ನು ಬಳಕೆಯಲ್ಲಿ ತಂದ ಕೀರ್ತಿ ಥಾಮಸ್ ಕುಕ್‌ ಕಂಪನಿಗೆ ಸೇರಬೇಕಾಗಿದೆ.

4. ವಿಮಾ ಸೌಲಭ್ಯ: (Insurance Service) :

ಯಾವುದೇ ಒಬ್ಬ ಪ್ರವಾಸಿಯು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುವಾಗ ಅಥವಾ ಅನ್ಯ ದೇಶದಿಂದ ನಮ್ಮ ದೇಶಕ್ಕೆ ಬರುವಾಗ ಅವನ ಪ್ರಾಣ ಬಹಳ ಮುಖ್ಯ. ಜೊತೆಗೆ ಆತ ತೆಗೆದುಕೊಂಡು ಹೋಗುವ ವಸ್ತುಗಳು ಅಷ್ಟೇ ಮೌಲ್ಯವುಳ್ಳವುಗಳು ಆಗಿರುತ್ತವೆ. ಪ್ರಯಾಣಿಕ ಪ್ರವಾಸದ ಸಂದರ್ಭದಲ್ಲಿ ಸಾಯಬಹುದು ಅಥವಾ ಅಪಘಾತಕ್ಕೀಡಾಗಬಹುದು. ಹಾಗಾದಾಗ ಅವನ ಜೀವ ರಕ್ಷಣೆಗಾಗಿ ವೈದ್ಯಕೀಯ ವಿಮೆ ಸೌಲಭ್ಯಗಳು ಇರಬೇಕು. ಜೊತೆಗೆ ಅವನಿಗೆ ನಷ್ಟ ಸಂಭವಿಸಬಹುದು. ಅವರ ಬ್ಯಾಗುಗಳು ಕಳೆದು ಹೋಗಬಹುದು. ವಿಮಾನಗಳು ತಡವಾಗಿ ಬರುವುದು ಹಾಗೂ ನಿರ್ಗಮಿಸಬಹುದು. ಪ್ರವಾಸಿಗನಿಗೆ ಅನಾರೋಗ್ಯ ಕಾಡಬಹುದು. ಇವೆಲ್ಲ ಕಾರಣಗಳಿಂದಾಗಿ ಅವನ ನಷ್ಟವನ್ನು ತುಂಬಿಕೊಡಲು ವಿಮಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಪ್ರವಾಸಿಗರಿಂದ ಹಣ ವಸೂಲಿ ಮಾಡಿ ವಿಮೆಮಾಡಿಸಿರುತ್ತಾರೆ. ಒಂದು ವೇಳೆ ಪ್ರವಾಸಿಗರು ದಿವಾಳಿಯಾದರೆ ವಿಮಾ ಕಂಪನಿಯೇ ಅವರ ನಷ್ಟವನ್ನು ತುಂಬಿ ಕೊಡುತ್ತದೆ.

5. ಮಾರುಕಟ್ಟೆ ಸೇವೆ (Market Service) :

ಪ್ರವಾಸೋದ್ಯಮ ಕಂಪನಿಗಳು ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡು ಆ ಮೂಲಕ ವಿವಿಧ ಮಾರುಕಟ್ಟೆಗಳು ಅಲ್ಲಿ ಸಿಗಬಹುದಾದ ವಸ್ತುಗಳು ಆ ವಸ್ತುಗಳ ಕುರಿತು ಪ್ರಚಾರ, ವ್ಯವಹಾರ ಸಲಹೆ, ಜಾಹೀರಾತು, ಮುದ್ರಣ, ವಿತರಣೆ ಮತ್ತು ವಸ್ತುಗಳು ಸಕಾಲದಲ್ಲಿ ಪ್ರವಾಸಿಗರಿಗೆ ತಲುಪುವಂತೆ ಕ್ರಮ ಕೈಗೊಳ್ಳುತ್ತವೆ. ಇದರಿಂದ ಪ್ರವಾಸಿಗರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವುದು, ಉಪಯೋಗಿಸುವುದು ಮೊದಲಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವುದನ್ನು ಪ್ರವಾಸೋದ್ಯಮ ಮಾರುಕಟ್ಟೆ ಮಾಡುತ್ತದೆ.

6. ಮನರಂಜನೆ ಸೇವೆಗಳು (Amusment Service) :

ಪ್ರವಾಸಿಗರು ನೆಮ್ಮದಿ, ಶಾಂತಿ, ನಿಸರ್ಗ ವೀಕ್ಷಣೆ, ಸಮುದ್ರದಲ್ಲಿ ಈಜಲು, ವನ್ಯಧಾಮ ವೀಕ್ಷಣೆ ಹಾಗೂ ಪಕ್ಷಿಧಾಮಗಳನ್ನು ನೋಡಲೆಂದೇ ಪ್ರವಾಸವನ್ನು ಕೈಗೊಳ್ಳುತ್ತಾರೆ. ಪ್ರವಾಸಿಗರ ಪ್ರವಾಸದ ಅತಿ ಮುಖ್ಯವಾದ ಗುರಿ ಎಂದರೆ ಮನರಂಜನೆಯನ್ನು ಪಡೆಯುವುದಾಗಿರುತ್ತದೆ. ಹೀಗಾಗಿ ಪ್ರವಾಸೋದ್ಯಮವು ಪ್ರವಾಸಿಗರಿಗೆ ಪ್ರವಾಸಿ ತಾಣಗಳಲ್ಲಿ ಸಂಗೀತ, ನೃತ್ಯ, ವಸ್ತು ಪ್ರದರ್ಶನ, ಚಲನಚಿತ್ರ ತೋರಿಸುವುದು, ಹಬ್ಬಗಳ ಆಚರಣೆ, ಬೆಳಕು ಕಾರ್ಯಕ್ರಮ ಮೊದಲಾದ ಮನರಂಜನ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯಬೇಕು. ಇಂತಹ ಮನರಂಜನಾ ಸಾಧನಗಳು ಎಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತವೆಯೋ ಅಲ್ಲಿ ಮಾತ್ರ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಅಂತಹ ಪ್ರದೇಶಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತವೆ. ಈ ಕಾರಣದಿಂದ ಪ್ರವಾಸಿ ತಾಣಗಳಲ್ಲಿ ಪಾರ್ಕ್‌ಗಳು, ಮನರಂಜನೆ ನೀಡುವ ಚಿತ್ರಮಂದಿರಗಳು ಹಾಗೂ ಹೋಟೆಲ್ ಮತ್ತು ಕಲಾಮಂದಿರಗಳನ್ನು ಆರಂಭಿಸಬೇಕು.

7. ಆರೋಗ್ಯ ಸೇವೆಗಳು (Health Service) :

ದೂರ ದೂರದ ಊರು ಮತ್ತು ನಗರಗಳಿಂದ ಪ್ರವಾಸಿ ತಾಣಗಳಿಗೆ ತಾಯಂದಿರು ತಮ್ಮ ಮಕ್ಕಳೊಂದಿಗೆ, ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ಪ್ರವಾಸವನ್ನು ಕೈಗೊಳ್ಳುತ್ತಾರೆ. ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೆ ಮತ್ತು ಆರೋಗ್ಯವಂತರಿಂದ ಹಿಡಿದು ಅನಾರೋಗ್ಯ ಪೀಡಿತರಾದವರು ಎಲ್ಲಾ ವಯೋಮಾನದ ಜನರು ಭೇಟಿ ನೀಡುತ್ತಾರೆ. ಪ್ರವಾಸದ ಸಂದರ್ಭಗಳಲ್ಲಿ ಪ್ರವಾಸಿಗರು ಕಾಯಿಲೆಗೆ ತುತ್ತಾಗಬಹುದು ಅಥವಾ ಅಪಘಾತಕ್ಕೆ ಈಡಾಗಬಹುದು. ಅಂತಹ ಸಂದರ್ಭಗಳಲ್ಲಿ ಪ್ರವಾಸಿ ಕೇಂದ್ರಗಳಲ್ಲಿ ತುರ್ತು ಚಿಕಿತ್ಸೆಯನ್ನು ನೀಡುವಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಕಳುಹಿಸಿದರೆ ಪ್ರವಾಸವನ್ನು ಆನಂದದಿಂದ ಅನುಭವಿಸುತ್ತಾರೆ. ಪ್ರವಾಸಿ ತಾಣಗಳಿಗೆ ಹೋಗುವ ಹೆದ್ದಾರಿಗಳ ಎಡಬಲಗಳಲ್ಲಿ ಇಂತಹ ಸೌಲಭ್ಯಗಳನ್ನು ಒದಗಿಸಬೇಕು.

8. ಮೋಟಾರ್ ಹೋಟೆಲ್ (Motar Hotels) :

ಪ್ರವಾಸಿಗರು ಪ್ರವಾಸದ ವೇಳೆಯಲ್ಲಿ ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ಬದಿಯಲ್ಲಿ ಉಪಹಾರವನ್ನು ಒದಗಿಸಲು ಹೋಟೆಲ್‌ಗಳನ್ನು ಸ್ಥಾಪಿಸಲಾಗುತ್ತದೆ. ಇಂತಹ ಹೋಟೆಲ್‌ಗಳನ್ನು ಮೋಟಾರ್ ಹೋಟೆಲ್‌ಗಳು ಎಂದು ಕರೆಯಲಾಗುವುದು. ಇವುಗಳು ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸುವುದು, ನಿಲ್ಲಿಸುವುದಕ್ಕಾಗಿ ಸ್ಥಳಗಳನ್ನು ದೊರಕಿಸಿಕೊಡುವುದು ಒಂದು ವೇಳೆ ಅವರ ವಾಹನಗಳು ಕೆಟ್ಟು ನಿಂತರೆ ಅವುಗಳನ್ನು ದುರಸ್ತಿ ಮಾಡಿಕೊಡುವುದು, ಪ್ರವಾಸಿಗರಿಗೆ ಶೌಚಾಲಯದ ಸೌಲಭ್ಯ ನೀಡುವುದು, ವನಭೋಜನ ಹಾಗೂ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆಯನ್ನು ದೊರಕಿಸಿಕೊಡುವುದು ಮೊದಲಾದ ಸವಲತ್ತುಗಳನ್ನು ನೀಡುತ್ತವೆ.

9. ಹೆದ್ದಾರಿ ಸೂಚನಾ ಫಲಕಗಳು (Highways Boards ) :

ಪ್ರವಾಸಿಗರು ತಮ್ಮ ಪ್ರವಾಸದ ಗಮ್ಯ ಸ್ಥಾನವನ್ನು ತಲುಪಲು ಪ್ರಯಾಣಿಸುವಾಗ ಹೆದ್ದಾರಿಯ ಪಕ್ಕದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲೆಂದು ಅವರು ತಲುಪಬೇಕಾದ ಸ್ಥಳದ ದೂರ, ಮುಂದೆ ಸಿಗಬಹುದಾದ ಹೋಟೆಲ್‌ಗಳು, ಭೋಜನ ಶಾಲೆಗಳು, ದವಾಖಾನೆಗಳು, ಇಂಧನ, ವಾಹನಗಳು ಕೆಟ್ಟು ನಿಂತಾಗ ಅವರು ಮೊಬೈಲ್ ಕರೆಮಾಡಲು ದೂರವಾಣಿ ಸಂಖ್ಯೆ ಮೊದಲಾದವುಗಳು. ಇಂತಹವುಗಳ ಮಾಹಿತಿಯನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳನ್ನೊಳಗೊಂಡ ಸೂಚನಾ ಫಲಕಗಳ ಮೇಲೆ ಬರೆದು ರಸ್ತೆ ಬದಿಯಲ್ಲಿ ಹಾಕಿದರೆ ಪ್ರವಾಸಿಗರಿಗೆ ಬಹಳ ಅನುಕೂಲವಾಗುತ್ತದೆ.

    10. ರಸ್ತೆ ಪಕ್ಕ ಹೂದೋಟಗಳು (Road Side Parks) :

    ಪ್ರವಾಸಿಗರು ಪ್ರವಾಸ ಕೈಗೊಂಡಾಗ ಅಲ್ಲಲ್ಲಿ ಉದ್ಯಾನವನಗಳನ್ನು ನಿರ್ಮಿಸಿದರೆ ಅವರು ವಿಶ್ರಾಂತಿ ಪಡೆದು ಮುಂದೆ ಹೋಗಲು ಅನುಕೂಲವಾಗುತ್ತದೆ ಮತ್ತು ಪ್ರವಾಸಿಗರು ಅಂತಹ ಪ್ರದೇಶಗಳಲ್ಲಿ ಸಂಚರಿಸಲು ಬಹಳ ಸಂತೋಷ ಪಡುತ್ತಾರೆ. ಮಧ್ಯಾಹ್ನದ ಊಟ, ವಿಶ್ರಾಂತಿ, ಆಸನ ವ್ಯವಸ್ಥೆ, ಈಜುಕೊಳ, ಗ್ರಂಥಾಲಯ, ವಾಹನ ನಿಲ್ದಾಣ, ಸುತ್ತಮುತ್ತಲೂ ನೋಡಬಹುದು. ರಮಣೀಯ ತಾಣಗಳ ಬಗ್ಗೆ ಮಾಹಿತಿ ಇದ್ದರೆ ಪ್ರವಾಸಿಗರಿಗೆ ಹಬ್ಬವೋ ಹಬ್ಬ.

    11. ಇಂಧನ ಸೇವೆ (Fuel Service) :

    ಇಂದಿನ ಯುಗದಲ್ಲಿ ಪ್ರವಾಸಿಗರು ತಮ್ಮ ಪ್ರವಾಸಕ್ಕಾಗಿ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ. ಹೀಗಾಗಿ ರಸ್ತೆಗಳಲ್ಲಿ ವಾಹನಗಳಲ್ಲಿ ಸಂಚರಿಸುವಾಗ ಒಂದು ವೇಳೆ ಇಂಧನ ಖಾಲಿಯಾದರೆ ಇಂಧನವನ್ನು ಪೂರೈಸುವಂತಹ ಕೇಂದ್ರಗಳನ್ನು ರಸ್ತೆ ಬದಿಗಳಲ್ಲಿ ನಿರ್ಮಿಸಬೇಕು. ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಮುಂತಾದ ಇಂಧನಗಳ ಸೌಲಭ್ಯವನ್ನು ಪ್ರವಾಸಿಗರಿಗೆ ಒದಗಿಸಿದರೆ ಅವರು ಸಂತೋಷದಿಂದ ಪ್ರವಾಸವನ್ನು ಕೈಗೊಳ್ಳುತ್ತಾರೆ. ಎಲ್ಲೆಲ್ಲಿ ಇಂಧನ ಸಿಗುತ್ತದೆ, ಗಮ್ಯಸ್ಥಾನ ಮತ್ತು ಇಂಧನ ಕೇಂದ್ರಗಳ ನಡುವೆ ಎಷ್ಟು ದೂರವಿದೆ ಎಂಬುದನ್ನು ಸೂಚನಾ ಫಲಕಗಳ ಮೂಲಕ ಮಾಹಿತಿಯನ್ನು ನೀಡಬೇಕು. ಇಂಧನ ಕೇಂದ್ರಗಳು 24*7 ಎಂಬ ಬರಹಗಳನ್ನು ಒಳಗೊಂಡ ಸೂಚನಾ ಫಲಕಗಳನ್ನು ತೂಗುಹಾಕಿರಬೇಕು.

    12. ಭದ್ರತಾ ವ್ಯವಸ್ಥೆ (Security) :

    ಇತ್ತೀಚಿನ ವರ್ಷಗಳಲ್ಲಿ ಹೆದ್ದಾರಿ ದರೋಡೆ, ಅಪಹರಣ ಹಾಗೂ ಭಯೋತ್ಪಾದನೆಗಳು ಹೆಚ್ಚುತ್ತಿವೆ. ಇದರಿಂದ ಪ್ರವಾಸಿಗರಲ್ಲಿ ಆತಂಕ ಮನೆಮಾಡಿದೆ. ಜೊತೆಗೆ ವಾಹನಗಳ ಕಳ್ಳತನ ಮತ್ತು ವಾಹನಗಳ ಅಪಘಾತಗಳು ಹೆಚ್ಚು ಹೆಚ್ಚು ಸಂಭವಿಸುತ್ತಿವೆ. ಪ್ರವಾಸಿ ತಾಣಗಳು ಮತ್ತು ಆಸುಪಾಸಿನಲ್ಲಿ ಕೊಲೆಗಳು ಆಗುತ್ತಿವೆ. ಇವೆಲ್ಲವುಗಳಿಗೆ ಕಡಿವಾಣ ಹಾಕಲು ಪ್ರವಾಸಿ ತಾಣಗಳು ಮತ್ತು ಹೆದ್ದಾರಿಗಳ ಪಕ್ಕದಲ್ಲಿ ಅಲ್ಲಲ್ಲಿ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ ಪ್ರವಾಸಿಗರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಇದು ಅಲ್ಲದೆ ಪ್ರವಾಸಿ ಕೇಂದ್ರಗಳಲ್ಲಿ ಗಲಭೆ, ಗದ್ದಲ, ಕಳ್ಳತನ, ಕೊಲೆ, ಅಪಹರಣ ಹಾಗೂ ಬೆದರಿಕೆಗಳು ಸಾಮಾನ್ಯವಾಗಿವೆ. ಇಂತಹ ಘಟನೆಗಳಿಂದ ಪ್ರವಾಸಿ ಕೇಂದ್ರಗಳನ್ನು ಮುಕ್ತಗೊಳಿಸಬೇಕು.

    13. ತೆರಿಗೆ ರಹಿತ ವ್ಯಾಪಾರ (Free Duty shop) :

    ಪ್ರವಾಸಿಗರು ಪ್ರಯಾಣ ಮಾಡುವಾಗ ವಿಮಾನ ನಿಲ್ದಾಣ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳು ಮತ್ತು ತಾವು ಇಳಿದುಕೊಂಡು ಹೋಟೆಲ್‌ಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ತೆರಿಗೆ ರಹಿತ ವ್ಯಾಪಾರಿ ಮಳಿಗೆಗಳನ್ನು ತೆರೆಯಬೇಕು. ಪ್ರವಾಸಿಗರನ್ನು ಆಕರ್ಷಿಸುವ ಒಂದು ಸೇವೆ ಇದಾಗಿದೆ.

    14. ಸಾರ್ವಜನಿಕ ಉಪಯುಕ್ತ ಸೇವೆಗಳು (Public useful Service) :

    ದೂರ ದೂರದ ಪ್ರದೇಶಗಳಿಂದ ಪ್ರವಾಸಕ್ಕೆ ಬರುವ ಪ್ರಯಾಣಿಕರಿಗೆ ಪ್ರವಾಸಿ ಕೇಂದ್ರಗಳಲ್ಲಿ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯ, ಸ್ವಚ್ಛವಾದ ಶೌಚಾಲಯಗಳು, ಪ್ರವಾಸಿ ಕೇಂದ್ರದ ಸುತ್ತಲೂ ಇರುವ ಚರಂಡಿಗಳನ್ನು ಶುದ್ಧೀಕರಿಸುವುದು. ಉತ್ತಮವಾದ ವೈದ್ಯಕೀಯ ಸೇವೆಗಳು ಸಾರಿಗೆ ಸಂಪರ್ಕ ವಾಹನ ನಿಲುಗಡೆ ವ್ಯವಸ್ಥೆ. ಘನ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಮುಂತಾದ ಸಾರ್ವಜನಿಕ ಉಪಯುಕ್ತ ಸೇವೆಗಳನ್ನು ಪ್ರವಾಸೋದ್ಯಮವು ಒದಗಿಸಿದರೆ ಪ್ರವಾಸಿಗರು ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಾರೆ.

    15. ಕಾರು ಬಾಡಿಗೆ (Car Rental) :

    ಪ್ರವಾಸೋದ್ಯಮ ಇಂದು ಬೃಹದಾಕಾರವಾಗಿ ಬೆಳೆದಿದೆ. ದೇಶವಿದೇಶಗಳಿಂದ ಪ್ರವಾಸಿಗರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ಅನಾನುಕೂಲಗಳು ಆಗದಿರಲೆಂದು ಪ್ರವಾಸೋದ್ಯಮವು ಕಾರುಗಳನ್ನು ಬಾಡಿಗೆಗೆ ಒದಗಿಸುತ್ತದೆ. ಮುಂಚಿತವಾಗಿ ಹೋಟೆಲ್‌ಗಳಲ್ಲಿ ಸೀಟುಗಳನ್ನು ಕಾಯ್ದಿರಿಸುತ್ತದೆ. ವಿಮಾನ ಹಾಗೂ ರೈಲು ಟಿಕೆಟ್‌ಗಳನ್ನು ಖರೀದಿ ಮಾಡಿ ನೀಡುತ್ತದೆ. ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಿಕೊಡುತ್ತದೆ. ಇದಕ್ಕೆ ಪ್ರತಿಯಾಗಿ ಟ್ರಾವೆಲ್ ಏಜೆನ್ಸಿಗಳು ಪ್ರವಾಸಿಗರಿಂದ 10 ರಿಂದ 15% ರಷ್ಟು ಕಮಿಷನ್ ಪಡೆಯುತ್ತವೆ.

    16. ಪ್ರಯಾಣ ದಾಖಲೆಗಳು (Travel Documents)  :

    ಭಾರತಕ್ಕೆ ಬರುವ ಮತ್ತು ಭಾರತದಿಂದ ಹೊರ ಹೋಗುವ ವಿದೇಶಿ ಪ್ರವಾಸಿಗರು ಪ್ರವಾಸಕ್ಕೆ ಸಂಬಂಧಿಸಿದ ಕೆಲವು ಪ್ರಮುಖವಾದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅವುಗಳೆಂದರೆ

    1. ಪರವಾನಗಿ ಪತ್ರ ಅಥವಾ ಪಾಸ್‌ಪೋರ್ಟ್‌
    2. ಪ್ರವಾಸಿ ಕಾರ್ಡ್ (Tourist card)
    3. ವೀಸಾ (Visitors Intended Stay Abroad) 
    4. ಆರೋಗ್ಯ ಪ್ರಮಾಣ ಪತ್ರ (Health Certificate)
    5. ಪೊಲೀಸ್ ಪ್ರಮಾಣ ಪತ್ರ (Police Certificate)

    ಈ ದಾಖಲೆಗಳನ್ನು ಪ್ರವಾಸಿಗರಿಗೆ ಪ್ರಯಾಣ ಏಜೆನ್ಸಿಗಳು ಒದಗಿಸುತ್ತಾರೆ.

    ಪಾಸ್‌ಪೋರ್ಟ್‌ 

    ಭಾರತಕ್ಕೆ ಬರುವ ಮತ್ತು ಭಾರತದಿಂದ ಹೊರ ಹೋಗುವ ವಿದೇಶಿ ಪ್ರವಾಸಿಗರು ಕಡ್ಡಾಯವಾಗಿ ಪರವಾನಗಿ ಪತ್ರ ಅಥವಾ ಪಾಸ್‌ಪೋರ್ಟ್‌ನ್ನು ಹೊಂದಿರಲೇಬೇಕು. ಪಾಸ್‌ಪೋರ್ಟ್‌ ಎಂದರೆ ದೇಶ ಒಂದರಲ್ಲಿ ವಿದೇಶಿ ಪ್ರವಾಸಿಗನು ಸಂಚರಿಸಲು ಅವನ ದೇಶದ ಸರ್ಕಾರ ನೀಡಿದ ಪರವಾನಿಗೆ ಪತ್ರ. ಪಾಸ್‌ಪೋರ್ಟ್‌ ಎಂದರೆ ಪ್ರವಾಸಿಗರಿಗೆ ಒಂದು ದೇಶ ನೀಡಿದ ಸಿಂಧುತ್ವ ಪ್ರಮಾಣ ಪತ್ರ ಅಥವಾ ಪರಿಚಯದ ಪತ್ರ ಅಥವಾ ಅಪ್ಪಣೆ ಪತ್ರ ಎಂದರ್ಥ. ಈ ಪರವಾನಿಗೆ ಪತ್ರವು ವ್ಯಕ್ತಿಯ ಜನ್ಮ ದಿನಾಂಕ, ರಾಷ್ಟ್ರೀಯತೆ, ಪೌರತ್ವ ಹಾಗೂ ಗುರುತನ್ನು ಪ್ರಮಾಣಿಕರಿಸುತ್ತದೆ. ೧೯೧೫ರ ನಂತರ ಭಾರತಕ್ಕೆ ಆಗಮಿಸುವ ಪ್ರವಾಸಿಗರಿಗೆ ಪರವಾನಿಗೆ ಪತ್ರವನ್ನು ಕಡ್ಡಾಯಗೊಳಿಸಲಾಯಿತು. ಈ ಪರವಾನಿಗೆ ಪತ್ರವನ್ನು ಭಾರತದಲ್ಲಿ ʻʻPassport Authority of Indiaʼʼ ಎನ್ನುವ ಕೇಂದ್ರ ಸರ್ಕಾರದ ಶಾಸನಬದ್ಧ ಇಲಾಖೆ ನೀಡುತ್ತದೆ.

      ಪಾಸ್‌ಪೋರ್ಟ್‌ ಪಡೆಯಲು ಬೇಕಾದ ಕಾರಣಗಳು

    1. ಅಂತರಾಷ್ಟ್ರೀಯ ಪ್ರಯಾಣ ಮಾಡಲು
    2.  ವೀಸಾ ಪಡೆಯಲು
    3.  ಭದ್ರತೆಯ ಗುರುತು
    4.  ಅಂತರಾಷ್ಟ್ರೀಯ ಸೇವೆಗಳಿಗಾಗಿ

     ಪಾಸ್‌ಪೋರ್ಟ್‌ ವಿಧಗಳು: (Types of Passport)

    ಭಾರತದಲ್ಲಿ 4 ವಿಧದ ಪಾಸ್‌ಪೋರ್ಟ್‌ಗಳಿವೆ ಅವುಗಳೆಂದರೆ

    1.  ಸಾಮಾನ್ಯ ಪಾಸ್‌ಪೋರ್ಟ್‌ (ನೀಲಿ) – ಸಾಮಾನ್ಯ ನಾಗರಿಕ ಪ್ರಯಾಣಕ್ಕಾಗಿ
    2.  ಸೇವಾ ಪಾಸ್‌ಪೋರ್ಟ್‌ (ಕಿತ್ತಳೆ) – ಸರ್ಕಾರಿ ಉದ್ಯೋಗಿಗಳ ಸೇವಾ ಪ್ರಯಾಣಕ್ಕಾಗಿ
    3.  ಅಧಿಕಾರಿ ಪಾಸ್‌ಪೋರ್ಟ್‌ (ಬಿಳಿ) – ಕೆಲವು ಸರ್ಕಾರಿ ಅಧಿಕೃತ ಅಧಿಕಾರಿಗಳಿಗೆ
    4.  ರಾಜ್ಯ ತಾಂತ್ರಿಕ ಪಾಸ್‌ಪೋರ್ಟ್‌ (ಕೆಂಪು)- ರಾಜತಾಂತ್ರಿಕರು, ರಾಯಭಾರ ಅಧಿಕಾರಿಗಳಿಗೆ ಮಾತ್ರ.

     ಪಾಸ್‌ಪೋರ್ಟ್ ಪಡೆಯಲು ದಾಖಲೆಗಳು

    1.  ವಿಳಾಸಪುರಾವೆ: ಆಧಾರ್ ಕಾರ್ಡ್, ಮತದಾರರ ಐ.ಡಿ, ಪಾನ್ ಕಾರ್ಡ್.
    2.  ಗುರುತಿನ ಪ್ರಮಾಣ ಪತ್ರ
    3.  ಪ್ರವಾಸಿಯ 8 ಫೋಟೋಗಳು
    4.  ಪೌರತ್ವ ದೃಢೀಕರಣ ಪತ್ರ
    5.  ಜನ್ಮ ಪ್ರಮಾಣ ಪತ್ರ (SSLC  ಸರ್ಟಿಫಿಕೇಟ್)
    6.  ಪಾಸ್‌ಪೋರ್ಟ್‌ ಶುಲ್ಕ
    7.  ಪಾಸ್‌ಪೋರ್ಟ್‌ ಅರ್ಜಿ

      ವೀಸಾ (Visitors Intended Stay Abroad) 

      ವೀಸಾ ಎಂದರೆ ವಿದೇಶಿ ಪ್ರವಾಸ ಶಿಕ್ಷಣ, ಉದ್ಯೋಗ ಮುಂತಾದ ಉದ್ದೇಶಗಳಿಗಾಗಿ ಬೇರೆ ದೇಶಕ್ಕೆ ಭೇಟಿ ನೀಡಲು ಆ ದೇಶದ ಸರ್ಕಾರವು ನೀಡುವ ಅಧಿಕೃತ ಅನುಮತಿ ಪತ್ರ ಅಥವಾ ವಿದೇಶ ಪ್ರಮಾಣ ಅನುಮತಿ ಪತ್ರ ಎಂದು ಕರೆಯಲಾಗುತ್ತದೆ. ಇದು ಪಾಸ್‌ಪೋರ್ಟ್‌ ಮೇಲೆ ನಿರ್ದಿಷ್ಟ ಪ್ರವಾಸಕ್ಕೆ ನೀಡಿದ ಅನುಮತಿ ಪತ್ರವಾಗಿದೆ. 3 ರಿಂದ 180 ದಿನಗಳು. ಆನಂತರ ಅದನ್ನು ನವೀಕರಿಸಬಹುದು. ದೆಹಲಿ, ಕಲ್ಕತ್ತಾ ಹಾಗೂ ಮುಂಬೈ, ಬೆಂಗಳೂರು ನಗರಗಳಲ್ಲಿ ನವೀಕರಣ ಕೇಂದ್ರಗಳಿವೆ. ವೀಸಾ ಪಡೆಯಲು ಪ್ರವಾಸಿಯ ಹೆಸರು, ಪಾಸ್‌ಪೋರ್ಟ್‌ ಸಂಖ್ಯೆ, ಪ್ರವಾಸದ ಉದ್ದೇಶ, ಪ್ರವಾಸದ ದಿನಾಂಕ ಹಾಗೂ ಪ್ರವಾಸದ ವೇಳೆ ಮುಂತಾದ ವಿವರಗಳನ್ನು ಸಲ್ಲಿಸಬೇಕು.

       ವೀಸಾ ಬಗೆಗಳು (Types of Visa)

      1. ಪ್ರವಾಸಿ ವೀಸಾ
      2. ವ್ಯಾಪಾರ ಅಥವಾ ಉದ್ಯೋಗ ವೀಸಾ
      3.  ಬದಲಾವಣೆಯ ವೀಸಾ
      4.  ವಿದ್ಯಾರ್ಥಿ ವೀಸಾ
      5.  ವಲಸೆ ಗಾರರ ವೇಸ
      6.  ಏಕ ಪ್ರವೇಶದ ವೀಸಾ
      7.  ಡಬಲ್ ಎಂಟ್ರಿ ವೀಸಾ
      8.  ಬಹು ಪ್ರವೇಶದ ವೀಸಾ
      9.  ದೀರ್ಘಾವಧಿ ವೀಸಾ
      10.  ಸಮೂಹ  ವೀಸಾ  ವೀಸಾ ಪಡೆಯಲು ವೀಸಾ ಶುಲ್ಕವನ್ನು ಬರಿಸಬೇಕು

       

      3. ಆರೋಗ್ಯ ಪ್ರಮಾಣ ಪತ್ರ (Health Certificate)

      ವೀಸಾ ಪಡೆದ ನಂತರ ಪ್ರವಾಸಿಗರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಪಡೆಯಬೇಕು. ವೀಸಾ ಪಡೆಯುವಾಗ ಆತ ಕಾಲರಾ, ಸಿಡುಬು, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳಿಂದ ಮುಕ್ತನಾದ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ತೋರಿಸಬೇಕು. ಒಂದು ವೇಳೆ ಅಂತಹ ಯಾವುದಾದರೂ ಕಾಯಿಲೆಗಳು ಇದ್ದರೆ ಅವನು 10 ದಿನಗಳ ಮುಂಚಿತವಾಗಿ ಅದಕ್ಕೆ ಸಂಬಂಧಿಸಿದ ಚುಚ್ಚುಮದ್ದನ್ನು ಪಡೆದಿರಬೇಕು. ಇಲ್ಲವಾದರೆ ವೀಸಾ ರದ್ದಾಗುತ್ತದೆ.

      4. ಪೊಲೀಸ್ ಪ್ರಮಾಣ ಪತ್ರ (Police Certificate)

      ಪ್ರವಾಸಿಗನು ವೀಸಾ ಪಡೆಯುವಾಗ ಉತ್ತಮ ನಡುವಳಿಕೆಯನ್ನು ಹೊಂದಿದ್ದಾನೆ ಎಂಬುದರ ಕುರಿತು ಪೊಲೀಸ್ ಪ್ರಮಾಣ ಪತ್ರವನ್ನು ಪಡೆದಿರಬೇಕು. ಏಕೆಂದರೆ “ಪ್ರವಾಸಿಗರ ಒಳಿತೇ ಪ್ರವಾಸೋದ್ಯಮದ ಒಳಿತಾಗಿದೆ.”

      5. ಪ್ರವಾಸಿ ಕಾರ್ಡ್ (Tourist card) 

      ಪ್ರವಾಸ ಕೈಗೊಳ್ಳುವ ಪ್ರವಾಸಿಗನು ಪಾಸ್‌ಪೋರ್ಟ್‌ ಜೊತೆಗೆ ಪ್ರವಾಸಿ ಕಾರ್ಡನ್ನು ಹೊಂದಿರಬೇಕಾದುದು ಅಗತ್ಯ. ಈ ಕಾರ್ಡನ್ನು ಪ್ರವಾಸಿಗನು ಒಂದು ದೇಶಕ್ಕೆ ಬರುವಾಗ ಮತ್ತು ದೇಶದಿಂದ ಹಿಂತಿರುಗುವಾಗ ಪ್ರವಾಸಿ ಕಾರ್ಡನ್ನು ತೋರಿಸಬೇಕಾಗುತ್ತದೆ.

      ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ  ವಸತಿ ಮೂಲ ಸೌಕರ್ಯಗಳ ಪಾತ್ರ

      ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ವಸತಿ ಮೂಲ ಸೌಕರ್ಯಗಳ ಪಾತ್ರ

      ವಸತಿ ಅಥವಾ ಹೋಟೆಲ್ ಗಳು ಪ್ರವಾಸೋದ್ಯಮದ ನರನಾಡಿಗಳಿದ್ದಂತೆ ಹೋಟೆಲ್‌ಗಳು ಅಥವಾ ವಸತಿ ವ್ಯವಸ್ಥೆಗಳು ಸರಿಯಾಗಿ ಇಲ್ಲದಿದ್ದರೆ ಪ್ರವಾಸಿಗರು ಪ್ರವಾಸವನ್ನು ಕೈಗೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಪ್ರವಾಸಿಗರು ದೂರ ದೂರ ಹೋಗಬೇಕಾಗಿರುವುದರಿಂದ ಅವರಿಗೆ ಸೂಕ್ತವಾದ ವಸತಿ ಹಾಗೂ ಆಹಾರದ ವ್ಯವಸ್ಥೆಗಳು ಬೇಕೇ ಬೇಕು. ಹಾಗಾಗಿ ಇಂದು ಪ್ರವಾಸೋದ್ಯಮವು ಸುಸಜ್ಜಿತವಾದ ಹೋಟೆಲ್‌ಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲತೆಗಳನ್ನು ಒದಗಿಸಿಕೊಡುತ್ತದೆ. ಇದರಿಂದ ದೂರ ದೂರದ ಪ್ರದೇಶಗಳಿಂದ ಬರುವ ಪ್ರವಾಸಿಗರಿಗೆ ಸಾಕಷ್ಟು ಅನುಕೂಲತೆಗಳು ಆಗುತ್ತವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ಮಾದರಿಯ ಹೋಟೆಲ್ ಗಳು ಪ್ರವಾಸಿಗರ ಅನುಕೂಲಕ್ಕೆ ಮೂಲಸೌಕರ್ಯಗಳಾದ ಶುಚಿತ್ವ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಗಾಳಿ ಬೆಳಕಿನ ಸೌಲಭ್ಯ, ಒಳಚರಂಡಿ, ವಾಹನ ನಿಲುಗಡೆಗೆ, ಪಾರ್ಕಿಂಗ್ ವ್ಯವಸ್ಥೆ, ಟಿ.ವಿ, ಕಲಾಮಂದಿರ, ಸಾರಿಗೆ ಸಂಪರ್ಕ ವ್ಯವಸ್ಥೆ, ವೃತ್ತ ಪತ್ರಿಕೆ, ಮನರಂಜನೆ ಹಾಗೂ ಬಹುಭಾಷ ಕೆಲಸಗಾರರಂತಹ ಬಹುಮುಖ್ಯವಾದ ಸೌಕರ್ಯಗಳನ್ನು ಪ್ರವಾಸಿಗರಿಗೆ ದೊರಕಿಸಿ ಕೊಡಬೇಕು. ಪ್ರವಾಸಿಗರನ್ನು ಆಕರ್ಷಿಸಲು ವಸತಿ ನಿಲಯಗಳಲ್ಲಿ ಮೆದುವಾದ ಬೆಡ್‌ಗಳು, ಹವಾ ನಿಯಂತ್ರಿತ ಕೊಠಡಿಗಳು, ಅಲ್ಲಿ ಬಿಸಿ ನೀರಿನ ಸೌಲಭ್ಯಗಳು ಸಿಗುವಂತಿರಬೇಕು. ಭಾರತೀಯ ಹೋಟೆಲ್‌ಗಳನ್ನು ಪ್ರವಾಸಿಗರ ಪಾವತಿ ಅನುಸಾರ ಮೊದಲಸ್ಟಾರ್‌ನಿಂದ 7 ಸ್ಟಾರ್ ಹೋಟೆಲ್‌ಗಳಾಗಿ ವಿಂಗಡಿಸಲಾಗಿದೆ. 

      ಹೋಟೆಲ್‌ಗಳ ವರ್ಗೀಕರಣ:

      1. ಅಂತರಾಷ್ಟೀಯ ಹೋಟೆಲ್‌ಗಳು
      2. ವಾಣಿಜ್ಯ ಹೋಟೆಲ್‌ಗಳು
      3. ರೆಸಾರ್ಟ್‌ ಹೋಟೆಲ್‌ಗಳು
      4. ನಿವಾಸ ಹೋಟೆಲ್‌ಗಳು
      5. ತೇಲುವ ಹೋಟೆಲ್‌ಗಳು
      6. ಸಂಯುಕ್ತ ಹೋಟೆಲ್‌ಗಳು
      7. ಏರ್‌ಪೋರ್ಟ್‌ ಹೋಟೆಲ್‌ಗಳು

      ಭಾರತದ ಪ್ರಮುಖ ಹೋಟೆಲ್‌ಗಳು: ಭಾರತದ ಪ್ರಮುಖ ಹೋಟೆಲ್‌ಗಳು ಈ ಕೆಳಗಿನಂತಿವೆ.

      1. ಹೆರಿಟೇಜ್‌ ಹೋಟೆಲ್‌ಗಳು: ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ದೇಶಿಯ ರಾಜರುಗಳು ತಮ್ಮ ಅಧಿಕಾರವನ್ನು ಕಳೆದುಕೊಂಡರು. ರಾಜರುಗಳು ಬಳಕೆ ಮಾಡುತ್ತಿದ್ದ ಅರಮನೆಗಳು ವ್ಯರ್ಥವಾಗಿ ಉಳಿದವು. ಆಗ 1966 ರಲ್ಲಿ ಭಾರತದ ಪ್ರವಾಸೋದ್ಯಮ ಇಲಾಖೆಯು ಹೀಗೆ ವ್ಯರ್ಥವಾಗಿ ಉಳಿದ ಅರಮನೆಗಳನ್ನು ಹೆರಿಟೇಜ್‌ ಹೋಟೆಲ್‌ಗಳಾಗಿ ಪರಿವರ್ತಿಸಿತು. ಮತ್ತು ಪ್ರವಾಸಿಗರ ಅನುಕೂಲಕ್ಕೆ ತಕ್ಕ ಹಾಗೆ ಅವುಗಳಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಿತು. ಅನೇಕ ಅರಮನೆಗಳು ಮಹಲುಗಳು, ಕೋಟೆಗಳು ಮತ್ತು ರಾಜ-ರಾಣಿಯರ ವಾಸಸ್ಥಾನಗಳನ್ನು ಹೆರಿಟೇಜ್‌ ಹೊಟೇಲ್‌ಗಳಾಗಿ ಪರಿವರ್ತನೆಯಾದವು. ಐತಿಹಾಸಿಕ ದೃಶ್ಯಗಳನ್ನು ಈ ಹೊಟೇಲ್‌ಗಳಲ್ಲಿ ಬಿಂಬಿಸಲಾಯಿತು. ಈ ಹೊಟೇಲ್‌ಗಳಲ್ಲಿ ಕನಿಷ್ಟ, ಉತ್ಕೃಷ್ಟ ಹಾಗೂ ವೈಭವ ಪರಂಪರೆಗಳೆಂಬ 3 ವಿಧಗಳಲ್ಲಿ ವಿಂಗಡಿಸಲಾಗಿದೆ. ಅಂತಹ ಹೋಟೆಲುಗಳು ಭಾರತದಲ್ಲಿ ಒಟ್ಟು 100 ಇವೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ನೀಡಲಾಗಿದೆ.

      1. ಶಿವ ವಿಲಾಸ ಅರಮನೆ, ಹಂಪಿ
      2. ಜೀರಾಬಾಗ ಅರಮನೆ ಹೋಟೆಲ್, ಮಾಂಡು
      3. ಜಗತ್‌ ನಿವಾಸ್ ಅರಮನೆ ಮತ್ತು ಅಮಿತ್ ಹವೇಲಿ ಅರಮನೆ ಹೋಟೆಲ್, ಉದಯಪುರ.
      4. ಟೀ ಬಂಗಲೋ, ಕೊಚ್ಚಿನ್
      5. ಉಷಾ ಕಿರಣ ಅರಮನೆ ಹೋಟೆಲ್, ಗ್ವಾಲಿಯರ್
      6. ಹೌಸ್ ಆಫ್ ಎಂ ಜಿ, ಅಹಮದಾಬಾದ್
      7. ಹೋಟೆಲ್ ಗಂಗಾಸ್‌, ವಾರಣಾಸಿ.
      8. ರಣಜಿತ್ ಸ್ವಾಸ, ಅಮೃತಸರ್
      9. ಸ್ವಾತ್ಮ ಹೋಟೆಲ್, ತಂಜಾವೂರ್
      1. ಅಶೋಕ ಹೋಟೆಲ್‌ಗಳು: ಈ ಅಶೋಕ ಹೋಟೆಲ್‌ಗಳಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಎಲೈಟ್‌, ಕಂಫರ್ಟ್ ಹಾಗೂ ಕ್ಲಾಸಿಕ್. ಈ ಹೋಟೆಲ್‌ಗಳನ್ನು ITDC ನಿರ್ವಹಣೆ ಮಾಡುತ್ತಿದೆ. ಇವು ಗಾಳಿ ಬೆಳಕಿನ ಸೌಲಭ್ಯ, ವಾಹನ ನಿಲುಗಡೆ, ಟಿವಿ, ಕಲಾಮಂದಿರ, ಮನರಂಜನೆ ಹಾಗೂ ದಿನಪತ್ರಿಕೆಗಳನ್ನು ಒಳಗೊಂಡಿರುತ್ತವೆ. ಅಗರ್ಭ ಶ್ರೀಮಂತರ ಹೋಟೆಲ್‌ಗಳಾಗಿವೆ.
      1. ಅಶೋಕ ಹೋಟೆಲ್ ದಾವಣಗೆರೆ.
      2. ಅಶೋಕ ಹೋಟೆಲ್ ಗಂಗಾವತಿ
      3. ಅಶೋಕ ಹೋಟೆಲ್, ಚನ್ನಪಟ್ಟಣ
      4. ಅಶೋಕ ಹೋಟೆಲ್ ಮೈಸೂರು
      5. ಅಶೋಕ ಹೋಟೆಲ್ ನರಸೀಪುರ
      6. ದಿ ಅಶೋಕ-ಚಾಣಕ್ಯಪುರಿ ನವ ದೆಹಲಿ
      7. ದಿ ಅಶೋಕ ಹೋಟೆಲ್ ವಿಜಯಪುರ
      1. ಅಂತರಾಷ್ಟ್ರೀಯ ಹೋಟೆಲ್‌ಗಳು: ಈ ಹೋಟೆಲ್‌ಗಳು ತ್ರಿತಾರಾ, ಪಂಚತಾರಾ, ಪಂಚತಾರಾ ಡೀಲಕ್ಸ್ ಹೋಟೆಲ್ ಗಳಾಗಿವೆ. ಇವುಗಳು ಸಹ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು ಅಂತರಾಷ್ಟ್ರೀಯ ಮನ್ನಣೆಯನ್ನು ಗಳಿಸಿವೆ. ಈ ಹೋಟೆಲ್‌ಗಳು ದೆಹಲಿ, ಮುಂಬೈ ಹಾಗೂ ಕಲ್ಕತ್ತಾಗಳಲ್ಲಿ ಇವೆ.
      1. ವಿಹಾರ ವಿಶ್ರಾಂತಿ ಧಾಮಗಳು: ಈ ಹೋಟೆಲ್‌ಗಳು ಪ್ರಕೃತಿ ವಿಶ್ರಾಂತಿ ಧಾಮಗಳಾಗಿವೆ. ಈ ಹೋಟೆಲ್‌ಗಳಲ್ಲಿ ಸ್ಪಾ, ಸ್ನಾನದ ವ್ಯವಸ್ಥೆ, ಅಧ್ಯಯನ, ವ್ಯಾಯಾಮ, ಗ್ರಂಥಾಲಯ, ಸಿನೆಮಾ ಹಾಗೂ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಹೋಟೆಲ್‌ಗಳು ಸಾಮಾನ್ಯವಾಗಿ ಗುಡ್ಡ, ಬೆಟ್ಟ, ಗಿರಿಧಾಮ ಹಾಗೂ ಕಡಲ ತೀರ ಪ್ರದೇಶಗಳಲ್ಲಿ ವಸತಿ ವ್ಯವಸ್ಥೆಗಳನ್ನು ಕಲ್ಪಿಸುತ್ತವೆ.
      1. ನೌಕಾ ವಿಹಾರ ಧಾಮ: ಈ ರೀತಿಯ ಹೋಟೆಲ್‌ಗಳು ಸಮುದ್ರ ತೀರಗಳಲ್ಲಿ ಸಂಚರಿಸುವ ಹಡಗುಗಳಲ್ಲಿ ಇರುತ್ತವೆ. ಈ ಹೋಟೆಲ್‌ಗಳಲ್ಲಿ ವಿಶ್ರಾಂತಿ, ಉಪಹಾರ, ಊಟ, ಕ್ರೀಡೆ, ಗ್ರಂಥಾಲಯ ಹಾಗೂ ಸಿನಿಮಾ ಸೌಲಭ್ಯಗಳನ್ನು ನೀಡಲಾಗುತ್ತದೆ.
      1. ವಾಣಿಜ್ಯ ಹೋಟೆಲ್‌ಗಳು: ಈ ಹೋಟೆಲ್‌ಗಳು ಬಡವರು ಹಾಗೂ ಮದ್ಯಮವರ್ಗದವರನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿತವಾದವುಗಳಾಗಿವೆ. ಕಡಿಮೆ ಖರ್ಚಿನಲ್ಲಿ ವಸತಿ ಸೌಲಭ್ಯ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತವೆ.
      1. ನಿವಾಸ ಹೋಟೆಲ್‌ಗಳು: ಪ್ರವಾಸಿಗರು ಅತಿ ಹೆಚ್ಚು ಕಾಲದವರೆಗೆ ಒಂದೇ ಕಡೆ ನೆಲೆಸಿದರೆ ಅವರಿಗೆ ತಿಂಗಳಿಗೆ ಹಣವನ್ನು ಪಾವತಿ ಮಾಡುವ ರೀತಿಯಲ್ಲಿ ವಸತಿಯನ್ನು ಕಲ್ಪಿಸುವ ಹೋಟೆಲಿಗಳಿಗೆ ನಿವಾಸಿ ಹೋಟೆಲ್‌ಗಳು ಎಂದು ಕರೆಯುತ್ತಾರೆ. ಈ ಹೋಟೆಲ್‌ಗಳು ಸಾಮಾನ್ಯವಾಗಿ ನಗರಗಳಲ್ಲಿದ್ದು ಪ್ರವಾಸಿಗರಿಗೆ ಸಾಮಾನ್ಯ ಸೌಲಭ್ಯಗಳನ್ನು ನೀಡುತ್ತವೆ.

      1. ತೇಲು ಹೋಟೆಲ್‌ಗಳು: ಈ ರೀತಿಯ ಹೋಟೆಲ್‌ಗಳನ್ನು ನಾವು ಕಾಶ್ಮೀರದಲ್ಲಿ ನೋಡಬಹುದು. ನದಿ, ಸರೋವರಗಳ ಮೇಲೆ ತೇಲುವ ತೆಪ್ಪಗಳಲ್ಲಿ ಅಂದರೆ ವಿಶಾಲವಾದ ದೋಣಿಗಳಲ್ಲಿ ಇಂತಹ ಹೋಟೆಲ್‌ಗಳನ್ನ ನಡೆಸುತ್ತಾರೆ. ಬಂದ ಪ್ರವಾಸಿಗರಿಗೆ ವಸತಿ ಹಾಗೂ ಊಟದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
      1. ಜಂಗಲ್ ಲಾಡ್ಜ್: ಪರಿಸರ ವೀಕ್ಷಣೆ, ವನ್ಯ ಪ್ರಾಣಿಧಾಮ ನೋಡಲು ಬರುವ ಪ್ರವಾಸಿಗರಿಗಾಗಿ ವಸತಿ ಸೌಲಭ್ಯಗಳನ್ನು ನೀಡುವ ಸಲುವಾಗಿ ಹುಟ್ಟಿಕೊಂಡ ಹೋಟೆಲ್‌ಗಳಿವು. ಇಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಗಳಿರುತ್ತವೆ. ಉದಾ: ಕಾರಾವಾರ, ದೇವಬಾಗ್‌, ಬಂಡಿಪುರ ಹಾಗೂ ಕಬನಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಂಗಲ್ ಲಾಡ್ಜ್‌ಗಳನ್ನು ಸ್ಥಾಪಿಸಲಾಗಿದೆ. ಇದು ಅಲ್ಲದೆ ಕಾಟೇಜ್‌ ಹೋಟೆಲ್‌ಗಳು ಹಾಗೂ ಪ್ರವಾಸಿ ಮಂದಿರಗಳು ಸಹ ಇಲ್ಲಿ ಲಭ್ಯವಿರುತ್ತದೆ.
      1. ರಸ್ತೆ ಬದಿಯ ಉಪಹಾರ ಗೃಹಗಳು: ಪ್ರವಾಸಿಗಳು ತಮ್ಮ ಸ್ವಂತ ವಾಹನಗಳ ಮೂಲಕ ಪ್ರಯಾಣ ಮಾಡುವಾಗ ಉಪಹಾರ ಮತ್ತು ಊಟವನ್ನು ನೀಡಲೆಂದೇ ರಸ್ತೆ ಬದಿಗಳಲ್ಲಿ ಸ್ಥಾಪಿಸಲ್ಪಟ್ಟ ಹೋಟೆಲ್‌ಗಳು ಇವುಗಳಾಗಿವೆ. ಪ್ರವಾಸಕ್ಕೆ ಬಂದ ಪ್ರವಾಸಿಗರ ವಾಹನಗಳು ನಿಲ್ಲುವುದಕ್ಕಾಗಿ ವಾಹನ ನಿಲ್ದಾಣಗಳು, ವಸತಿ, ಆಹಾರ, ಮನರಂಜನೆ ಮೊದಲಾದ ಸೌಕರ್ಯಗಳನ್ನು ಒದಗಿಸುತ್ತವೆ. ಇದರ ಜೊತೆಗೆ ಪ್ರವಾಸಿಗರ ವಾಹನಗಳು ಕೆಟ್ಟು ನಿಂತರೆ ಅವುಗಳನ್ನು ದುರಸ್ತಿ ಮಾಡುವ ವ್ಯವಸ್ಥೆಗಳನ್ನು ಸಹ ಇಲ್ಲಿ ಮಾಡಲಾಗುತ್ತದೆ. ಈ ಹೋಟೆಲ್‌ಗಳು ನಗರಗಳ ಹೊರಗೆ ಹೆದ್ದಾರಿ ಪಕ್ಕದ ರಸ್ತೆಗಳು ಸೇರುವ ಕಡೆಗಳಲ್ಲಿ ಇರುತ್ತವೆ.
      1. ಯೂಥ್ ಹಾಸ್ಟೆಲುಗಳು: ಯುವಕರು ಮತ್ತು ಯುವತಿಯರು ಕ್ರೀಡೆ, ಚಾರಣ, ಸ್ಕಿಯಿಂಗ್ ಹಾಗೂ ಜಾರುವಿಕೆ ಮೊದಲಾದ ಕಾರಣಗಳಿಗಾಗಿ ಪ್ರವಾಸ ಕೈಗೊಂಡರೆ ಅವರಿಗಾಗಿ ಕಡಿಮೆ ದರದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಕ್ಕಾಗಿ ಈ ಹಾಸ್ಟೇಲುಗಳನ್ನು ನಿರ್ಮಿಸಲಾಗಿರುತ್ತದೆ. ಈ ಯೂತ್‌ ಹಾಸ್ಟೆಲ್‌ ಪರಿಕಲ್ಪನೆಯು 1900 ರಲ್ಲಿ ಜರ್ಮನಿಯಲ್ಲಿ ಬೆಳೆದು ಬಂದಿತು.
      1. ಕ್ಯಾರವಾನ್ ಟೆಂಟ್ ಹೌಸ್‌ಗಳು: ಇಂತಹ ಟೆಂಟ್ ಹೌಸ್‌ಗಳು ಸಾಮಾನ್ಯವಾಗಿ ಮರುಭೂಮಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮರುಭೂಮಿಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ವಸತಿ ಸೌಲಭ್ಯವನ್ನು ಒದಗಿಸುವ ಸಲುವಾಗಿ ಸ್ಥಾಪನೆಯಾದ ಟೆಂಟುಗಳು ಇವುಗಳಾಗಿವೆ. ಉದಾ: ರಾಜಸ್ಥಾನದ ಮರುಭೂಮಿ ಹಾಗೂ ಆಫ್ರಿಕಾದ ಸಹರಾ ಮತ್ತು ಥಾರ್ ಮರುಭೂಮಿಗಳಲ್ಲಿ ಒಂಟೆಯ ಮೇಲೆ ಪ್ರಯಾಣಿಸುವ ಪ್ರವಾಸಿಗರಿಗಾಗಿ ಈ ಟೆಂಟುಗಳನ್ನು ಸ್ಥಾಪಿಸಲಾಗಿರುತ್ತದೆ.

      ಡಾರ್ಮೆಟರಿಗಳು: ಪ್ರವಾಸಿಗರು ಒಂದು ದಿನದ ಮಟ್ಟಿಗೆ ವಸತಿಯನ್ನು ಪಡೆಯಲು ಈ ಡಾರ್ಮೆಂಟರಿಗಳಿಗೆ ಬರುತ್ತಾರೆ. ಆದರೆ ಇಲ್ಲಿ ಪ್ರತ್ಯೇಕವಾದ ಆಸನ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ಸಾಮೂಹಿಕವಾಗಿ ಮಲಗಬೇಕಾಗುತ್ತದೆ.

      1963 ರಲ್ಲಿ ರೋಂ ಪ್ರವಾಸೋದ್ಯಮ ಸಮ್ಮೇಳನದಲ್ಲಿ ಹೋಟೆಲ್‌ಗಳು ನೀಡುವ ವಿವಿಧ ರೀತಿಯ ಸೌಕರ್ಯಗಳನ್ನು ಆಧರಿಸಿ ಏಕತಾರಾ, ದ್ವಿತಾರಾ, ತ್ರಿತಾರಾ, ಚತುರ್‌ತಾರ ಹಾಗೂ ಪಂಚತಾರಾ ಹೋಟೆಲ್‌ಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಪಂಚತಾರಾ ಹೋಟೆಲ್‌ಗಳು ಅತ್ಯಂತ ಆಡಂಬರದಿಂದ ಕೂಡಿದ್ದು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಅಂತರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದು ಅತ್ಯಂತ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತವೆ.

      2025ರಲ್ಲಿನ ಅಂದಾಜಿನಂತೆ ಭಾರತದಲ್ಲಿ ಸುಮಾರು 3,00,000 ಹೋಟೆಲ್ ಕೊರಡಿಗಳು ಇದ್ದು, 2029ರ ವೇಳೆಗೆ ಹೊಸದಾಗಿ 1,00,000 ಕೊಠಡಿಗಳು ಸೇರ್ಪಡೆಗೊಳ್ಳುವ ಅಂದಾಜು ಇದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ಒಂದರಲ್ಲಿಯೇ ನಮ್ಮ ದೇಶದ ಕೊಠಡಿಗಳಿಗಿಂತ ಹೆಚ್ಚಿಗೆ ಇವೆ. ಆಸ್ಟ್ರೇಲಿಯಾದ ಕ್ರಿನ್ಸ್‌ಲ್ಯಾಂಡ್ ಎಂಬ ಕಡಲ ತೀರದಲ್ಲಿ ಸುಮಾರು 20,000 ಎಕರೆ ಭೂಪ್ರದೇಶದಲ್ಲಿ ಅಂತರಾಷ್ಟ್ರೀಯ ರೆಸಾರ್ಟ್ ಒಂದು ತಲೆ ಎತ್ತಿದೆ. ಇಲ್ಲಿ ಆಧುನಿಕ ಎಲ್ಲಾ ಸೌಲಭ್ಯಗಳು ಸಿಗುತ್ತವೆ.

      ಆಹಾರ ವ್ಯವಸ್ಥೆ

      ಭಾರತೀಯ ಹೋಟೆಲ್‌ಗಳಲ್ಲಿ ವಿದೇಶಿ ಪ್ರವಾಸಿಗರು ಬಯಸುವ ಬಗೆ ಬಗೆಯ ತಿಂಡಿ ಹಾಗೂ ಊಟಗಳನ್ನು ಒದಗಿಸಬೇಕು. ಸಸ್ಯಾಹಾರಿಯಾದ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಊಟವನ್ನು ನೀಡಬೇಕು. ಇದರೊಂದಿಗೆ ಇಂದಿನ ಹೋಟೆಲ್‌ಗಳು ಪಾನಿಪುರಿ, ಗೋಬಿಮಂಚೂರಿ, ಪಿಜ್ಜಾ ಹಾಗೂ ಬರ್ಗರ್‌ಗಳನ್ನು ಸಹ ಸರಬರಾಜು ಮಾಡುತ್ತಿವೆ. ಅನೇಕ ಹೋಟೆಲ್‌ಗಳಲ್ಲಿ ಬಗೆ ಬಗೆಯ ಮಾಂಸಹಾರ ಊಟವನ್ನು ಒದಗಿಸುತ್ತವೆ. ರುಚಿಕರವಾದ ಮಾಂಸಹಾರ ಹಾಗೂ ಸಸ್ಯಹಾರ ಪದಾರ್ಥಗಳನ್ನು ಹೋಟೆಲ್‌ಗಳು ಒದಗಿಸಿದರೆ ಪ್ರವಾಸಿಗರು ಆಕರ್ಷಿತರಾಗುತ್ತಾರೆ. ರೆಸ್ಟೋರೆಂಟ್‌ಗಳಲ್ಲಿ ಬಗೆ ಬಗೆಯ ಊಟ ಉಪಹಾರದ ಪಟ್ಟಿಯನ್ನು ತಯಾರಿಸಿ ಪ್ರವಾಸಿಗರಿಗೆ ನೀಡುತ್ತಾರೆ. ಆಗ ಪ್ರವಾಸಿಗರು ತಮಗೆ ಬೇಕಾದ ಭಕ್ಷ್ಯ ಭೋಜನಗಳನ್ನು ತರಿಸಿ ಊಟ ಮಾಡಲು ಸಹಕಾರಿಯಾಗುತ್ತದೆ. ಇಂತಹ ರೆಸ್ಟೋರೆಂಟ್‌ಗಳಲ್ಲಿ ವಿವಿಧ ಭಾಷೆಗಳನ್ನು ಬಲ್ಲ ಸಿಬ್ಬಂದಿಗಳು ಇರಬೇಕು. ಅವರು ಅತಿಥಿ ಸತ್ಕಾರಕ್ಕೆ ಹೆಸರಾಗಿರಬೇಕು. ಪ್ರವಾಸೋದ್ಯಮದ ಅಭಿವೃದ್ಧಿ ಮೂಲ ಸೌಕರ್ಯಗಳನ್ನು ಅವಲಂಬಿಸಿದೆ ಎಂಬುದನ್ನು ಎಲ್ಲಾ ದೇಶಗಳು ಮನವರಿಕೆ ಮಾಡಿಕೊಂಡಿವೆ.

      ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಸಾರಿಗೆ ಸೌಕರ್ಯದ ಪಾತ್ರ

      ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಸಾರಿಗೆ ಸೌಕರ್ಯದ ಪಾತ್ರ

      ಸಾರಿಗೆ ವ್ಯವಸ್ಥೆ (Transport)

      ಪ್ರವಾಸಿಗನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಇರಬೇಕು. ಸಾರಿಗೆ ವ್ಯವಸ್ಥೆ ಇಲ್ಲದೆ ಹೋದರೆ ಪ್ರವಾಸೋದ್ಯಮ ನಡೆಯುವುದೇ ಇಲ್ಲ. ಒಂದು ಪ್ರವಾಸೋದ್ಯಮದ ಸ್ಥಳವು ದೇಶ, ವಿದೇಶ ಪ್ರವಾಸಿಗರನ್ನು ಆಕರ್ಷಿಸಲು ಆ ಸ್ಥಳಕ್ಕೆ ಸೂಕ್ತವಾದ ಸಾರಿಗೆ ಸಂಪರ್ಕ ವ್ಯವಸ್ಥೆ ಇರಬೇಕು. ಬಂದ ಪ್ರವಾಸಿಗರಿಗೆ ಉಳಿದುಕೊಳ್ಳಲು ಉತ್ತಮ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಆಗ ಮಾತ್ರ ಪ್ರವಾಸಿಗರು ಆ ಪ್ರದೇಶಗಳನ್ನು ಇಷ್ಟಪಡುತ್ತಾರೆ. ಸಾರಿಗೆ ವ್ಯವಸ್ಥೆಯನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ.

      ಅವುಗಳೆಂದರೆ        1. ರಸ್ತೆಗಳು        2. ವಿಮಾನಯಾನ      3.ರೈಲುಮಾರ್ಗ      4. ಜಲಮಾರ್ಗ

      1. ರಸ್ತೆಗಳು: ಮಾನವ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಬೇಕೆಂದರೆ ರಸ್ತೆ ಸಾರಿಗೆ ಅತಿ ಮುಖ್ಯವಾಗಿದೆ. ಇಂದು ರಸ್ತೆ ಸಾರಿಗೆ ಅತ್ಯಂತ ಜನಪ್ರಿಯ ಸಾರಿಗೆಗಳಲ್ಲಿ ಒಂದು ರಸ್ತೆ ಸಾರಿಗೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ ಹಾಗೂ ತಾಲೂಕು ಹೆದ್ದಾರಿಗಳೆಂದು ವಿಭಜಿಸಲಾಗಿದೆ. ಈ ಹೆದ್ದಾರಿಗಳು ಸುರಕ್ಷಿತ ಮತ್ತು ಸುವ್ಯವಸ್ಥಿತವಾಗಿದ್ದರೆ ಮಾತ್ರ ಪ್ರವಾಸಿಗರು ತಮಗೆ ಇಚ್ಛಿಸಿದ ಪ್ರವಾಸಿ ತಾಣಗಳಿಗೆ ಹೋಗಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯು ಅತ್ಯಂತ ಸುಭದ್ರವಾದ ರಸ್ತೆ ಮಾರ್ಗಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು. ರಸ್ತೆಗಳ ಬದಿಗಳಲ್ಲಿ ಉತ್ತಮವಾದ ಮಾರ್ಗಸೂಚಿ ಫಲಕಗಳು ಇರಬೇಕು. ಪ್ರವಾಸಿಗರು ಸಂಚರಿಸುವ ರಸ್ತೆಗಳ ಎಡಬಲ ಬದಿಗಳಲ್ಲಿ ಸುಸಜ್ಜಿತವಾದ ಹೋಟೆಲ್‌ಗಳನ್ನು ನಿರ್ಮಿಸಬೇಕು. ರಸ್ತೆ ಸುರಕ್ಷತೆಗೆ ಹೆಚ್ಚು ಗಮನ ಹರಿಸಬೇಕು. ಇದರೊಂದಿಗೆ ಭದ್ರತೆಯು ಅಷ್ಟೇ ಪ್ರಮುಖವಾಗಿರುತ್ತದೆ. ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ಇಂಧನ ಪೂರೈಸುವ ವ್ಯವಸ್ಥೆಯನ್ನು ಕಲ್ಪಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉತ್ತಮವಾದ ರಸ್ತೆಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಪ್ರವಾಸ ತಾಣಗಳಿಗೆ ಆಕರ್ಷಿಸಬೇಕು, ನಂತರ ಪ್ರವಾಸಿ ಗಮ್ಯ ಸ್ಥಾನಗಳಿಗೆ ತಲುಪಲು ಮೋಟಾರ್‌ ಕೋಚುಗಳನ್ನು ಒದಗಿಸಬೇಕು. ಈ ಮೋಟಾರು ಕೋಚ್‌ಗಳಲ್ಲಿ ಸುಸ್ತಜಿತವಾದ ಆಸನ, ಕಿಟಕಿ, ಹವಾನಿಯಂತ್ರಕ ಸೌಲಭ್ಯಗಳನ್ನು ಒದಗಿಸಬೇಕು. ಬಂದ ಅತಿಥಿಗಳನ್ನು ಸತ್ಕರಿಸಲು ವಿವಿಧ ಭಾಷಾ ಕೌಶಲ್ಯವುಳ್ಳ ಚಾಲಕರನ್ನು ಮೋಟರು ಕೋಚ್‌ಗಳು ಹೊಂದಿರಬೇಕು. ಪ್ರವಾಸಿಗರ ತಂಗುದಾಣಗಳಲ್ಲಿ ಉತ್ತಮ ಸಾರಿಗೆ ಟ್ಯಾಕ್ಸಿಗಳು ಹಾಗೂ ಬಾಡಿಗೆ ಕಾರುಗಳನ್ನು ಒದಗಿಸಬೇಕು. ಟ್ಯಾಕ್ಸಿ ನಿರ್ವಾಹಕರು ಬಹು ಭಾಷೆಗಳನ್ನು ಬಲ್ಲವರಾಗಿರಬೇಕು.

      ಪ್ರವಾಸೋದ್ಯಮ ಅಭಿವೃದ್ಧಿಗೆ ಹೆದ್ದಾರಿಗಳು ಎಷ್ಟು ಮಹತ್ವದ್ದಾಗಿವೆ ಎಂಬುದನ್ನು ಅರಿತ ಅಮೆರಿಕ ಹಾಗೂ ಇಂಗ್ಲೆಂಡ್‌ಗಳು ವೇಗದ ಹಾಗೂ ಮತ್ತು ಅತಿ ವೇಗದ ಹೆದ್ದಾರಿಗಳನ್ನು ನಿರ್ಮಿಸಿದವು.  ಜಾಗತಿಕವಾಗಿ ಹೆಚ್ಚು ಪ್ರಖ್ಯಾತವಾದ ಇಂದಿನ ಹೆದ್ದಾರಿಗಳೆಂದರೆ ಅಮೆರಿಕದ, ಪಾನ್‌ ಅಮೆರಿಕ ಹೆದ್ದಾರಿಯು ಸುಮಾರು 23000 ಮೈಲಿ ಉದ್ದವಾಗಿದೆ. ಇದು ಅಲ್ಲದೆ ಟ್ರಾನ್ಸ್ ಯುರೋಪ್‌ ನಾರ್ತ್‌ ಸೌತ್‌ ಹೈವೇ. ಇದು ಸಿರಿಯಾದಿಂದ ಗ್ರೀಸ್ ವರೆಗೆ ವಿಸ್ತರಿಸಿದೆ. ಟ್ರಾನ್ಸ್‌-ಆಫ್ರಿಕನ್ ಹೆದ್ದಾರಿ ಈ ಹೆದ್ದಾರಿಯು ಕೀನ್ಯಾ ಉಗಾಂಡ ಹಾಗೂ ನೈಜೀರಿಯಾಗಳನ್ನು ಒಂದುಗೂಡಿಸುತ್ತದೆ. ಟ್ರಾನ್ಸ್ ವೆಸ್ಟ್ ಆಫ್ರಿಕನ್ ಹೆದ್ದಾರಿ. ಟ್ರಾನ್ಸ್ ಈಸ್ಟ್ ಆಫ್ರಿಕನ್ ಹೈವೇ ಫ್ಯಾನ್ ಅಮೆರಿಕನ್ ಹೈವೇ ಹಾಗೂ ಏಷ್ಯನ್ ಹೈವೇ ಪ್ರಮುಖವಾದವುಗಳಾಗಿವೆ. ಹೆದ್ದಾರಿಗಳನ್ನು  ನಿರ್ಮಿಸುವಾಗ ಗಟ್ಟಿಮುಟ್ಟಾದ ಅತಿ ಹೆಚ್ಚು ವರ್ಷಗಳವರೆಗೆ ಬಾಳಿಕೆ ಬರುವಂತಹ ಮತ್ತು ಸರ್ವ ಋತುಗಳಿಗೆ ಹೊಂದಿಕೆಯಾಗುವಂತಹ ಅಂತರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವಂತೆ ಗಮನಹರಿಸಬೇಕು. ರಸ್ತೆಗಳ ಪಕ್ಕದಲ್ಲಿ ಹೋಟೆಲ್‌ಗಳು, ಶೌಚಾಲಯಗಳು, ಪಾರ್ಕ್‌ಗಳು, ತಿಂಡಿ ತಿನಿಸುಗಳು ದೊರಕುವಂತಿರಬೇಕು. ಅವುಗಳ ಕುರಿತು ರಸ್ತೆ ಫಲಕಗಳ ಮೂಲಕ ಸೂಚಿಸಬೇಕು. ಇದರಿಂದ ಪ್ರವಾಸಿಗರು ಸುಲಭವಾಗಿ ತಮ್ಮ ಪ್ರವಾಸಿ ತಾಣಗಳನ್ನು ತಲುಪಲು ಸಾಧ್ಯವಾಗುತ್ತದೆ.

      ಭಾರತದಲ್ಲಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೆಂದರೆ ಪಶ್ಚಿಮ ವೇಗದೂತ ಹೆದ್ದಾರಿ, ಪೂರ್ವ ವೇಗದ ಹೆದ್ದಾರಿ, ಕಲ್ಕತ್ತಾ ಹಾಗೂ  ಡಂಡಂ ನಡುವಿನ ರಾಷ್ಟ್ರೀಯ ಹೆದ್ದಾರಿ, ಗ್ರ್ಯಾಂಡ್ ಟ್ರಂಕ್ ಹೆದ್ದಾರಿ ಹಾಗೂ ಕಲ್ಕತ್ತಾ ಹಾಗೂ ದುರ್ಗಾಪುರ ನಡುವಿನ ಹೆದ್ದಾರಿ.

      1. ವಿಮಾನಯಾನ: ವಿಮಾನಯಾನ ಸಾರಿಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖವಾದ ಸಾರಿಗೆ ವ್ಯವಸ್ಥೆಯಾಗಿದೆ. ದೀರ್ಘಾವಧಿ ಪ್ರಯಾಣಕ್ಕೆ ವಾಯು ಸಾರಿಗೆಯು ಹೆಚ್ಚು ಫಲಪ್ರದವಾಗಿದೆ. ವಿಮಾನಯಾನ ಸಾರಿಗೆಯು ವಿದೇಶಿಯರನ್ನು ಬಹುಬೇಗನೆ ಸೆಳೆಯುತ್ತದೆ. ವಿಮಾನಯಾನ ಸಾರಿಗೆಯು ಪ್ರವಾಸಿಗರ ಕೈಗೆಟಕುವ ದರಗಳು ಅದರಲ್ಲಿನ ಶುಚಿತ್ವ ಕಾಲಕಾಲಕ್ಕೆ ದೊರಕುವ ಊಟ ತಿಂಡಿಗಳು ಹಾಗೂ ಅತ್ಯಂತ ಭದ್ರತೆಯಿಂದ ಕೂಡಿದ್ದರೆ ಪ್ರವಾಸಿಗರು ಹೆಚ್ಚು ಹೆಚ್ಚು ವಿಮಾನಯಾನವನ್ನು ಬಯಸುತ್ತಾರೆ. 1958ರ ವೇಳೆಗೆ ಅತಿ ವೇಗದ ಜಟ್ ವಿಮಾನ ಸಂಚಾರ ಜಾರಿಗೆ ಬಂದ ನಂತರ ರೈಲು ಹಾಗೂ ರಸ್ತೆ ಮತ್ತು ಹಡಗು ಸಂಚಾರದಲ್ಲಿ ಸ್ವಲ್ಪಮಟ್ಟಿಗೆ ಇಳಿತವನ್ನು ಕಾಣಲಾಯಿತು. ನ್ಯೂಯಾರ್ಕ್‌ ಹಾಗೂ ಪ್ಯಾರಿಸ್ ನಡುವೆ ಅಮೆರಿಕ ಬೋರಿಂಗ್ 707 ಎಂಬ ವಿಮಾನವು 1958 ರಲ್ಲಿ ಪ್ರಥಮ ಬಾರಿಗೆ ತನ್ನ ಹಾರಾಟವನ್ನು ಆರಂಭಿಸಿತು. ಇದರ ಹಿಂದೆಯೇ 1968ರಲ್ಲಿ ಎಲ್ಲಾ ಯುರೋಪಿನ ಏರ್‌ಲೈನ್‌ಗಳು ಜೆಟ್ ವಿಮಾನ ಸಾರಿಗೆ ವ್ಯವಸ್ಥೆಯನ್ನು ಆರಂಭಮಾಡಿದವು. ಅದರಂತೆ 1970ರಲ್ಲಿ ಜಂಬೋಜೆಟ್‌ ವಿಮಾನದ ಹಾರಾಟ ಆರಂಭವಾಯಿತು. ಇಲ್ಲಿಂದ ಅಂತರಾಷ್ಟ್ರೀಯ ಪ್ರವಾಸೋದ್ಯಮ ವಿಶಾಲವಾಗಿ ಹರಡಿತು. ವಿಮಾನ ಹಾರಾಟದ ಪರಿಣಾಮವಾಗಿ ವಿಶ್ವ ಇಂದು ಬಹಳ ಚಿಕ್ಕದಾಗಿ ಪರಿಣಮಿಸಿದೆ. ನಮ್ಮ ದೇಶದಲ್ಲಿಯೂ ಸಹ ಇಂಡಿಯನ್ ಏರ್‌ಲೈನ್ ಮತ್ತು ಖಾಸಗಿ ಒಡೆತನದಲ್ಲಿನ ಸಹರಾ, ಕಿಂಗ್‌ಫಿಷರ್, ಡೆಕ್ಕನ್ ಜೆಟ್, ಏರ್‌ಲೈನ್‌ಗಳು ಅತ್ಯುತ್ತಮವಾದ ಸಾರಿಗೆಯನ್ನು ಒದಗಿಸುತ್ತಿವೆ.

      ವಿಮಾನ ಸಂಸ್ಥೆಗಳು ಗಮ್ಯಸ್ಥಾನಗಳಿಗೆ ಹತ್ತಿರವಾಗಿರುವಂತೆ ರನ್‌ವೇಗಳನ್ನು ನಿರ್ಮಿಸಬೇಕು. ಪ್ರವಾಸಿಗರು ವಿಮಾನ ನಿಲ್ದಾಣಗಳಲ್ಲಿ ಇಳಿದ ನಂತರ ಅವರಿಗೆ ವಿಶ್ರಾಂತಿಗಾಗಿ ವಿಶ್ರಾಂತಿ ಕೊಠಡಿಗಳು, ಪೊಲೀಸ್ ಭದ್ರತೆ, ಆರೋಗ್ಯ ಸೇವೆಗಳು ತೆರಿಗೆ ಇಲ್ಲದೆ ವಸ್ತುಗಳ ಖರೀದಿ, ಉಪಹಾರ ವ್ಯವಸ್ಥೆ, ಮಧ್ಯದಂಗಡಿ, ವಿದೇಶಿ ವಿನಿಮಯ, ಸೀಟು ಖರೀದಿಯ ಅನುಕೂಲತೆ, ಬಾಡಿಗೆ ಕಾರುಗಳು, ಪ್ರವಾಸಿ ಏಜೆನ್ಸಿಗಳು ಮತ್ತು ತರಬೇತಿ ಹೊಂದಿದ ಸಿಬ್ಬಂದಿಗಳ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು. ಇತ್ತೀಚಿಗೆ ವಿಮಾನಗಳ ಪತನ, ಅಪಹರಣ ಹಾಗೂ ಭಯೋತ್ಪಾದನೆಗಳು ಹೆಚ್ಚುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ. ನಿಲ್ದಾಣಗಳು ಉತ್ತಮ ಗುಣಮಟ್ಟವನ್ನು ಹೊಂದಿರಬೇಕು. ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ವಿಮಾನಗಳು ರನ್‌ವೇಗಳಿಂದ ಜಾರಿ ಅಪಘಾತಕ್ಕೆ ಈಡಾಗಿ ನೂರಾರು ಜನ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತೇವೆ ಹಾಗೂ ಸೂಕ್ತ ಭದ್ರತೆ ಇದ್ದಷ್ಟು ಒಳ್ಳೆಯದು.

      1. ರೈಲು ಮಾರ್ಗಗಳು: ಪ್ರವಾಸಿಗರಿಗೆ ರೈಲು ಸಂಚಾರ ಅತ್ಯಂತ ಕಡಿಮೆ ವೆಚ್ಚದ್ದಾಗಿದ್ದು ಮತ್ತು ದೀರ್ಘಾವಧಿ ಪ್ರವಾಸಕ್ಕೆ ಯೋಗ್ಯಕರವಾಗಿದೆ. ಭಾರತೀಯ ರೈಲುಗಳು ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕಾಗಿದೆ. ರೈಲುಗಳು ಚೊಕ್ಕಟವಾಗಿದ್ದು ಉತ್ತಮವಾದ ಆಸನಗಳನ್ನು ಹೊಂದಿರಬೇಕು.  ರೈಲುಗಳಲ್ಲಿ ಹವಾನಿಯಂತ್ರಕಗಳಿದ್ದು ಶೌಚಾಲಯ, ಗಾಳಿ, ಬೆಳಕು, ನೀರಿನ ಪೂರೈಕೆ, ಉಪಹಾರ ಸೌಲಭ್ಯಗಳನ್ನು ರೈಲ್ವೆ ಇಲಾಖೆ ಪ್ರವಾಸಿಗರಿಗೆ ಒದಗಿಸಬೇಕು. ರೈಲು ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ ಇರಬೇಕು. ಆರೋಗ್ಯ ಸೇವೆಯನ್ನು ಒದಗಿಸಬೇಕು ರೈಲುಗಳನ್ನು ಕಾಲಕಾಲಕ್ಕೆ ಆಧುನಿಕರಣಗೊಳಿಸಬೇಕು. ಋತುಮಾನಕ್ಕೆ ಅನುಗುಣವಾಗಿ ರೈಲುಗಳನ್ನು ಓಡಿಸುವ ವ್ಯವಸ್ಥೆ ಮಾಡಬೇಕು. ಟಿಕೆಟ್ ಬುಕಿಂಗ್‌ನಲ್ಲಿ ಆಗುತ್ತಿರುವ ಅನಾನುಕೂಲತೆಯನ್ನು ನಿವಾರಿಸಬೇಕು. ಇತ್ತೀಚಿಗೆ ದೇಶದಲ್ಲೆಲ್ಲಡೆ “ವಂದೇ ಭಾರತ್‌” ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ. ಪ್ರವಾಸಿಗರಿಗೆ ಉತ್ತಮವಾದ ಆಸನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಊಟದ ವ್ಯವಸ್ಥೆ ಹಾಗೂ ಪ್ರಯಾಣಿಕರಿಗೆ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಯತ್ತ  ಸಾಗುತ್ತಿದೆ ಎಂದು ಹೇಳಬಹುದಾಗಿದೆ. ವಿದೇಶಿ ರೈಲುಗಳಿಗೆ ಹೋಲಿಸಿದರೆ ಭಾರತೀಯ ರೈಲುಗಳ ಗುಣಮಟ್ಟ ಬಹಳ ಕಳಪೆಯಾಗಿದೆ. ಆಧುನಿಕ ಜನರ ಗಾದೆ ಮಾತೊಂದಿದೆ “ವಿದೇಶಿ ರೈಲಿನಲ್ಲಿ ಕಾಲು ತೊಳೆದುಕೊಂಡು ಕಾಲಿಡಬೇಕು, ಆದರೆ ಭಾರತೀಯ ರೈಲಿನಲ್ಲಿ ತಿರುಗಾಡಿಕೊಂಡು ಬಂದು ಕಾಲು ತೊಳೆದುಕೊಳ್ಳಬೇಕು”.  ಚೀನಾ, ಜಪಾನ್, ಫ್ರಾನ್ಸ್‌ಗಳು ಗಂಟೆಗೆ 700 ರಿಂದ 1000 ಕಿ.ಮಿ ವೇಗವಾಗಿ ಚಲಿಸುವ ಬುಲೆಟ್ ಟ್ರೈನ್‌ಗಳನ್ನು ಓಡಿಸುತ್ತಿವೆ. ಆದರೆ ಭಾರತೀಯ ರೈಲುಗಳ ವೇಗ ಮಾತ್ರ ವೃದ್ಧಿಯಾಗಲೇ ಇಲ್ಲ. ಅವುಗಳು ಗಂಟೆಗೆ 150 ಕಿ.ಮೀ ಓಡಿದರೆ ಅದೇ ಹೆಚ್ಚುಗಾರಿಕೆ. ರೈಲುಗಳಲ್ಲಿನ ಶುಚಿತ್ವದ ಕೊರತೆಯಿಂದ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿಲ್ಲ. ಶುಚಿತ್ವ ಇದ್ದರೆ ಮಾತ್ರ ಪ್ರಯಾಣಿಕರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ರೈಲು ನಿಲ್ದಾಣದಿಂದ ಪ್ರವಾಸಿಗರು ತಮ್ಮ ತಂಗುದಾಣಗಳಿಗೆ ಹೋಗಲು ಸೂಕ್ತ ವಾಹನಗಳ ಸೌಲಭ್ಯಗಳನ್ನು ಕಲ್ಪಿಸಬೇಕು. ರೈಲು ಹಾಗೂ ವಿಮಾನಗಳ ವೇಳಾಪಟ್ಟಿಯಲ್ಲಿ ಸಮನ್ವಯತೆ ಇರುವಂತೆ ನೋಡಿಕೊಂಡರೆ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಪ್ರವಾಸಿಗರು ಬರುವ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹೋಟೆಲ್, ಆರೋಗ್ಯ ಕೇಂದ್ರಗಳು, ನೈರ್ಮಲ್ಯ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಬೇಕು.

      ಗಾಲಿಗಳ ಮೇಲೆ ಅರಮನೆ:

      ಭಾರತದ ಅತ್ಯಂತ ಐಷಾರಾಮಿ ರೈಲು ಇದಾಗಿದೆ. ಇದು ಚಕ್ರ ಅಥವಾ ಗಾಲಿಗಳ ಮೇಲೆ ಚಲಿಸುತ್ತದೆ. ಅರಮನೆಯಲ್ಲಿ ಸಿಗಬಹುದಾದ ಎಲ್ಲಾ ಮೂಲಭೂತ ಸೌಕರ್ಯಗಳು ಈ ರೈಲಿನಲ್ಲಿ ಲಭ್ಯ. ಅಂದರೆ ಸುಖಾಸನ ಹವಾನಿಯಂತ್ರಕ, ಬಿಸಿನೀರು, ಬಾರ್ ಅಂಡ್ ರೆಸ್ಟೋರೆಂಟ್, ಉಪಹಾರ, ಗ್ರಂಥಾಲಯ ಶೌಚಾಲಯ ಹಾಗೂ ವಿಶ್ರಾಂತಿ ಗೃಹಗಳು ಮುಂತಾದ ಸೌಲಭ್ಯಗಳು ದೊರಕುತ್ತಿವೆ. ಈ ರೈಲನ್ನು ಅರಮನೆಯ ಹಾಗೆ ಶೃಂಗಾರ ಮಾಡಲಾಗಿರುತ್ತವೆ.  ಈ ರೈಲು ದೆಹಲಿಯಿಂದ ಆರಂಭವಾಗಿ ಜೋದಪುರ ಚಿತ್ತೂರ್ಗರ್‌, ಉದಯಪುರ, ಜೈಸಲ್ಮೇಲ್‌, ಭರತಪುರ ಹಾಗೂ ಆಗ್ರಾಗಳನ್ನು ಸಂದರ್ಶಿಸಿ ಮತ್ತೆ ದೆಹಲಿಯನ್ನು ಬಂದು ಸೇರುತ್ತದೆ. ಪ್ರಯಾಣದ ಸಮಯ 7 ರಾತ್ರಿ 8 ದಿನಗಳು. ಈ ರೈಲು ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ರೈಲಿನಲ್ಲಿ ಪ್ರಯಾಣ ಮಾಡಿದರೆ ದೇಶದ ಗತವೈಭವ ನೆನಪಾಗುತ್ತದೆ.  ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತವಾದ ಅನುಭವ. ಇದೇ ರೀತಿಯ ರೈಲು ವ್ಯವಸ್ಥೆ ರಾಜಸ್ಥಾನ್ ಹಾಗೂ ಕರ್ನಾಟಕದಲ್ಲಿ ಪರಿಚಯಿಸಲಾಗಿದೆ.

      ಸುವರ್ಣ ರಥ

      ಭಾರತದ ಪ್ರಮುಖ ಐಷಾರಾಮಿ ಪ್ರವಾಸಿ ರೈಲುಗಳಲ್ಲಿ ಒಂದಾಗಿದ್ದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇದನ್ನು ನಿರ್ವಹಿಸುತ್ತಿದೆ. ಕರ್ನಾಟಕ, ಗೋವಾ, ಕೇರಳ ಹಾಗೂ ತಮಿಳುನಾಡಿನ ಪ್ರಸಿದ್ಧ ವಿಶ್ವ ಪರಂಪರೆಯ ತಾಣಗಳು ಹಾಗೂ ಪ್ರವಾಸಿ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಈ ರೈಲು ದಕ್ಷಿಣ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಇತಿಹಾಸವನ್ನು ಅನುಭವಿಸಲು ಉತ್ತಮ ಅವಕಾಶ ಕಲ್ಪಿಸುತ್ತದೆ.

      ಈ ರೈಲನ್ನು 2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲರು ಉದ್ಘಾಟಿಸಿದ್ದರು. ಈ ರೈಲಿನಲ್ಲಿ 11 ಬೋಗಿಗಳಿದ್ದು ಪ್ರತಿಯೊಂದು ಬೋಗಿಯಲ್ಲಿ ಟಿ.ವಿ, ವೈ ಪೈ ಪರಿಸರ, ವಿದೇಶಿಯ ಪ್ರವಾಸಿಗರು ಬಯಸುವ ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಸ್ಪಾ ಹಾಗೂ ವ್ಯಾಯಾಮ ಶಾಲೆಗಳು ಇವೆ. ರೈಲುಭೋಗಿಗಳನ್ನು ಮೈಸೂರು. ಹಳೆಬೀಡುಗಳ ವಾಸ್ತುಶಿಲ್ಪದಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಭೋಗಿಗಳಿಗೆ ಕನ್ನಡನಾಡಿನ ಆಳರಸರ ಹೆಸರನ್ನು ಇಡಲಾಗಿದೆ. ರೈಲಿನಲ್ಲಿ ರುಚಿಕರವಾದ ಆಹಾರವನ್ನು ಒದಗಿಸುವ ಎರಡು ರೆಸ್ಟೋರೆಂಟ್‌ಗಳು ಇವೆ. ಇಲ್ಲಿ ರುಚಿ ರುಚಿಯಾದ ಪಾಕಗಳನ್ನು ಸಿದ್ಧಪಡಿಸಿಕೊಡಲಾಗುತ್ತದೆ.

      ಈ ರೈಲು ಬೆಂಗಳೂರು ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಹಂಪಿ ಬಾದಾಮಿ, ಗೋವಾ, ಕಬಿನಿ, ಮೈಸೂರು, ಬೃಂದಾವನ, ಹಳೇಬೀಡು, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪಿ, ಪಟ್ಟದಕಲ್ಲು ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಪುನ ಬೆಂಗಳೂರಿಗೆ ಬಂದು ಸೇರುತ್ತದೆ. ಒಟ್ಟು 7 ದಿನಗಳ ಪ್ರವಾಸವಿದ್ದು 30 ಜನ ಪ್ರವಾಸಿಗರು ಕುಳಿತುಕೊಳ್ಳಬಹುದಾದಷ್ಟು ಆಸನಗಳು ಇವೆ. ಒಂದು ವಾರದಲ್ಲಿ 500 ಕಿ ಮೀ ದೂರವನ್ನು ಸಂಚರಿಸಿ 1500 ವರ್ಷಗಳ ಇತಿಹಾಸದ ಅನುಭವ ನೀಡುತ್ತದೆ. ವಿವಿಧ ಪ್ಯಾಕೇಜ್‌ಗಳಲ್ಲಿ ಇದು ಸಂಚರಿಸುತ್ತದೆ.

      ಇದು ಅತ್ಯಂತ ದುಬಾರಿಯಾಗಿದ್ದು ಒಬ್ಬರಿಗೆ ಕನಿಷ್ಠ 4 ಲಕ್ಷ ರೂಗಳಷ್ಟು ಖರ್ಚಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ ʻಗರಿಬೀ ರಥʼ ಎನ್ನುವ ಮತ್ತೊಂದು ರೈಲು ಬಡವರಿಗಾಗಿ ಉದ್ಘಾಟನೆಯಾಗಿದೆ.

      1. ಜಲ ಸಾರಿಗೆ: ದ್ವೀಪಗಳನ್ನು ಸಂದರ್ಶಿಸುವ ಪ್ರವಾಸಿಗರಿಗೆ ಹಡಗು, ಹರಿಗೋಲು ಹಾಗೂ ವಸತಿ ದೋಣಿಗಳನ್ನು ಪ್ರವಾಸೋದ್ಯಮ ಇಲಾಖೆ ಒದಗಿಸಬೇಕು. ಪ್ರವಾಸಿ ಹಡುಗುಗಳಲ್ಲಿ ಈಜುಕೊಳ, ವ್ಯಾಯಾಮಶಾಲೆ, ಜೂಜುಕಟ್ಟೆ, ಹೋಟೆಲ್, ಚಲನಚಿತ್ರ, ಕ್ರೀಡೆ, ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಬೇಕು. ಉದಾ: ಗ್ರೀಸ್, ಪ್ಲಾರಿಡಾ, ಹವಾಯ್‌, ಮೆಕ್ಸಿಕೋ, ಕೆರೆಬಿಯನ್ ಹಾಗೂ ಆಸ್ಟ್ರೇಲಿಯಾ ಸಮುದ್ರಯಾನಿಗಳಿಗೆ ಈ ರೀತಿಯಾದ ಹಡಗುಗಳ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ.

      ಕರ್ನಾಟಕ ಪ್ರವಾಸೋದ್ಯಮವು ನದಿ, ಸರೋವರ, ಕರಾವಳಿ ತೀರಗಳಲ್ಲಿ ಪ್ರವಾಸಿಗರಿಗೆ ದೋಣಿ ವಿಹಾರ ಮತ್ತು ಕ್ರೂಸ್ ಅನುಭವಗಳನ್ನು ಒದಗಿಸುವ ಮೂಲಕ ಆಲಮಟ್ಟಿ ಬಾಗಲಕೋಟೆ, ಕರಾವಳಿ ಭಾಗಗಳಲ್ಲಿ ದೋಣಿ ಹಾಗೂ ಫೈಬರ್ ದೋಣಿ ಸೇವೆಗಳನ್ನು ಒಳನಾಡಿನ ಸಾರಿಗೆ ಇಲಾಖೆಯು ಪ್ರೋತ್ಸಾಹಿಸುತ್ತಿದೆ. ಇದು ಪ್ರವಾಸೋದ್ಯಮದ ಮೂಲಕ ಆದಾಯ ಮತ್ತು ಮನರಂಜನೆ ಹೆಚ್ಚಿಸುವ ಸುಸ್ಥಿರ ಮಾರ್ಗವಾಗಿದೆ.

      ದೋಣಿ ವಿಹಾರ:  ಕೆರೆ ನದಿ ಹಿನ್ನಿರು ಪ್ರದೇಶಗಳಲ್ಲಿ ಜನಪ್ರಿಯ.

      ಹೌಸ್ ಬೋಟ್ ಮತ್ತು ಕ್ರೂಸ್:  ಕರಾವಳಿ ಹಾಗೂ ಪ್ರಮುಖ ಜಲಾಶಯಗಳಲ್ಲಿ ವಸತಿ ಹಾಗೂ ವಿಹಾರದ ಅನುಭವ ನೀಡುತ್ತವೆ.

      ಪರಿಸರ ಪ್ರವಾಸೋದ್ಯಮ:  ನದಿ ದಂಡೆಗಳ ಸೌಂದರ್ಯವನ್ನು ಸವಿಯಲು ಜನಸಾರಿಗೆ ಸಹಾಯಮಾಡುತ್ತದೆ.

      ಜಲಸಾರಿಗೆ ವಾಹನ  ವಿಧಗಳು:  ಹಡಗುಗಳು, ದೋಣಿಗಳು ಮತ್ತು ಬೋಟುಗಳು, ಪೆರ್ರಿಗಳು, ರೋ-ರೋ,  ಸ್ಟೀಮರ್‌ಗಳು ಟ್ಯಾಂಕರ್‌ಗಳು ಮೊದಲಾದವುಗಳು.

      ಸಾರಿಗೆಯಲ್ಲಿ ಹೊಸ ಮೈಲುಗಲ್ಲುಗಳು 

      1. ರೈಟ್ ಸಹೋದರರು ಪ್ರಪ್ರಥಮ ಬಾರಿಗೆ ವಿಮಾನವನ್ನು ಕಂಡುಹಿಡಿದರು.
      2. 1975ರಲ್ಲಿ ಪ್ರಪ್ರಥಮವಾಗಿ ಫ್ರಾನ್ಸ್‌ನ ಪೆರ್ರಿಯರಿನಿಂದ ಉಗಿ ಹಡಗು ಶೋಧನೆಯಾಯಿತು.
      3. 1939ರಲ್ಲಿ ರಷ್ಯಾದ ಇಗೋರ್‌ ಸಿಕೋರಸ್ಕಿಯಿಂದ ಹೆಲಿಕ್ಯಾಪ್ಟರ್ ಸಂಶೋಧನೆಯಾಯಿತು.
      4. 1927ರಲ್ಲಿ ಪ್ರಥಮ ಬಾರಿಗೆ ದೆಹಲಿಯಿಂದ ಕೈರೋಗೆ ಮೊದಲ ಇಂಡಿಯನ್ ವಿಮಾನವನ್ನು ಹಾರಿಸಲಾಯಿತು.
      5. 1927ರಲ್ಲಿ ದೆಹಲಿಯಲ್ಲಿ ಮೊದಲ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಯಿತು.
      6. 1919 ರಲ್ಲಿ ಪ್ರಥಮ ಫ್ರಾನ್ಸ್ ಅಟ್ಲಾಂಟ್ ಏರ್ಲೈನ್ ನ್ಯೂಪೌಂಡ್‌ಲ್ಯಾಂಡಿನಿಂದ ಐರ್ಲ್ಯಾಂಡ್‌ಗೆ ಹಾರಾಟ.
      7. 1981 ರಲ್ಲಿ ಜೂಲಿಯನ್ ನಾಟಿ ಎಂಬುವವನು ಪ್ರಥಮ ಸೋಲಾರ್ ಚಾಲಿತ ಪ್ಯಾರಾಚ್ಯೂಟ್ ಕಂಡು ಹಿಡಿದನು.
      8. 1984ರ ವೇಳೆಗೆ ರಾಕೇಶ್ ಶರ್ಮ ರಷ್ಯಾದ ಸಹಾಯದಿಂದ ಪ್ರಥಮ ಬಾರಿಗೆ ಗಗನ ನೌಕಯಾತ್ರೆ ಮಾಡಿದನು.
      9. ಕಲ್ಪನಾ ಚಾವ್ಲಾ ಪ್ರಥಮ ಗಗನಯಾತ್ರಿ ಎಂಬ ಕೀರ್ತಿಗೆ ಪಾತ್ರಳಾದಳು.
      10. 2002 ರಲ್ಲಿ ಪ್ರಥಮ ಆಧುನಿಕ ಸಬಮರಿನ್ ಸಂಶೋಧನೆಯಾಯಿತು.