ಪ್ರವಾಹಕ್ಕೆ ಕಾರಣಗಳು

ಪ್ರವಾಹಕ್ಕೆ ಕಾರಣಗಳು

ಪ್ರವಾಹವು ಭಾರತದಲ್ಲಿ ಆಗಾಗ ಸಂಭವಿಸುವ ಪ್ರಮುಖ ಪ್ರಾಕೃತಿಕ ವಿಕೋಪಗಳಲ್ಲಿ ಒಂದಾಗಿದೆ. ಹವಾಮಾನ ವೈಪರಿತ್ಯ, ಭೌತಿಕ ಪರಿಸ್ಥಿತಿಗಳು ಮತ್ತು ಮಾನವನ ಕೃತಕ ಚಟುವಟಿಕೆಗಳು ಪ್ರವಾಹಕ್ಕೆ ಮುಖ್ಯ ಕಾರಣಗಳಾಗಿವೆ. ಈ ಲೇಖನದಲ್ಲಿ ಪ್ರವಾಹಕ್ಕೆ ಕಾರಣವಾಗುವ ಅಂಶಗಳನ್ನು ವಿವರವಾಗಿ ತಿಳಿದುಕೊಳ್ಳೋಣ.

ಪ್ರವಾಹದ ಕಾರಣಗಳು ಈ ಕೆಳಗಿನಂತಿವೆ.

  1.  ಹವಾಮಾನ ಅಂಶಗಳು
  2.  ಭೌತಿಕ ಅಂಶಗಳು
  3.  ಕೃತಕ ಅಂಶಗಳು

1. ಹವಾಮಾನ ಅಂಶಗಳು:(Clinatic Factors)

1. ಅತ್ಯಧಿಕ ಮಳೆ (ಅತಿವೃಷ್ಠಿ): ಭಾರತದಲ್ಲಿ ಮಾನ್ಸೂನ್ ಮಳೆಯು ಜುಲೈ ಮಧ್ಯದಲ್ಲಿ ಪ್ರವೇಶಿಸಿ ಸೆಪ್ಟೆಂಬರ್ ಕೊನೆಯವರೆಗೂ ಇರುತ್ತದೆ. ಈ ಸಮಯದಲ್ಲಿ ಅತ್ಯಧಿಕ ಮಳೆಯಾದರೆ ಅತಿವೃಷ್ಟಿ ಸಂಭವಿಸಿ ಮಳೆ ನೀರು ಜಲಾಶಯಗಳನ್ನು ತುಂಬಿಕೊಳ್ಳುತ್ತದೆ. ಜಲಾಶಯಗಳಲ್ಲಿ ಸಂಗ್ರಹಣಾ ಸಾಮರ್ಥ್ಯಕ್ಕಿಂತ ಹೆಚ್ಚುವರಿ ನೀರನ್ನು ಇಟ್ಟುಕೊಳ್ಳಲು ಬರುವುದಿಲ್ಲ. ನೀರು ಸಂಗ್ರಹಣಾ ಸಾಮರ್ಥ್ಯ ಜಲಾಶಯಗಳಲ್ಲಿ ಮಿತಿಮೀರಿದಾಗ ಅದು ಪ್ರವಾಹದಲ್ಲಿ ಕೊನೆಯಾಗುತ್ತದೆ. ಈ ಪ್ರವಾಹ ಪರಿಸ್ಥಿತಿ ಉತ್ತರ ಭಾರತದ ಪಶ್ಚಿಮ ಬಂಗಾಳ, ಹಿಮಾಲಯದ ಪ್ರದೇಶಗಳು, ಸಿಂಧೂ-ಗಂಗಾ ನದಿಯ ಬಯಲುಗಳು, ಪಶ್ಚಿಮ ಘಟ್ಟಗಳು ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಸಂಭವಿಸುತ್ತದೆ. ದಾಮೋದರ ನದಿಯ ಬಯಲಿನಲ್ಲಿ ಹೆಚ್ಚಿನ ಪ್ರಮಾಣದ ಪ್ರವಾಹಗಳು ಸಂಭವಿಸುವ ಕಾರಣ ಇದನ್ನು ʻʻಬಂಗಾಳದ ಕಣ್ಣೀರಿನ ನದಿʼʼ ಎಂದೇ ಕರೆಯುತ್ತಾರೆ. ಹಾಗೇ ಕೋಸಿ ನದಿಯು ಸಹ ಬಿಹಾರಿನಲ್ಲಿ ಪ್ರವಾಹಕ್ಕೆ ಕಾರಣವಾಗುವುದರಿಂದ ಇದನ್ನು ʻʻಬಿಹಾರಿನ ಕಣ್ಣೀರಿನ ನದಿʼʼ ಎಂದು ಹಾಗೂ ಮಹಾನದಿಯನ್ನು ʻಒರಿಸ್ಸಾದ ಕಣ್ಣೀರಿನ ನದಿʼ ಎಂದು ಕರೆಯುವರು.

2. ಮೇಘ ಸ್ಫೋಟ: ಹವಾಮಾನದ ವೈಪರಿತ್ಯದಿಂದ ಆಲಿಕಲ್ಲು ಹಾಗೂ ಗುಡುಗುಸಹಿತ ಭಾರೀ ಗಾತ್ರದಲ್ಲಿ ಮಳೆಯು ಬರುವ ಕಾರಣದಿಂದ ಅದಕ್ಕೆ ಮೇಘಸ್ಪೋಟ ಎಂದು ಕರೆಯುತ್ತಾರೆ. 2013ರಲ್ಲಿ ಮೇಘ ಸ್ಪೋಟದಿಂದ ಉತ್ತರಖಾಂಡದ ಕೆಲವು ಪ್ರದೇಶಗಳು ಹಠಾತ್ ಪ್ರವಾಹಕ್ಕೆ ಈಡಾದವು.

3. ಚಂಡಮಾರುತಗಳು: ಚಂಡಮಾರುತಗಳಿಂದ ಪ್ರವಾಹ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಂಡಮಾರುತ ಸುತ್ತುವ ಮೂಲಕ ಪ್ರವಾಹದ ಭೀತಿಯನ್ನು ಉಂಟುಮಾಡುತ್ತದೆ.4. 

4. ಜಾಗತಿಕ ತಾಪಮಾನ (World Temperature): ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಭೂಮಿ ಉಷ್ಣಾಂಶ ಹೆಚ್ಚುತ್ತದೆ. ಆಗ ಹಿಮನದಿಗಳು ಕರಗಲು ಆರಂಭಿಸುತ್ತವೆ.  ಅತಿಯಾದ ಹಿಮ ನದಿಯ ಕರುಗುವಿಕೆಯಿಂದ ಪ್ರವಾಹ ಸೃಷ್ಟಿಯಾಗುತ್ತದೆ.

5. ಭೂಕಂಪ ಹಾಗೂ ಭೂಕುಸಿತಗಳು (Earth quake and Land Slide): ಭೂಕಂಪ ಹಾಗೂ ಭೂಕಸಿತಗಳು ಪ್ರವಾಹಕ್ಕೆ ಕಾರಣವಾಗಿ ಪರಿಣಮಿಸುತ್ತವೆ. ಭೂಮಿಯ ಮೇಲಿನ ಬದಲಾವಣೆಯು ನೀರಿನ ಹರಿವಿನ ದಿಕ್ಕುಗಳನ್ನೇ ಬದಲಿಸುತ್ತದೆ. ಇದರಿಂದ ಪದೇ ಪದೇ ಪ್ರವಾಹಗಳು ಸಂಭವಿಸುತ್ತವೆ. ೧೯೫೦ರ ವೇಳೆಗೆ ಭೂಕಂಪವು ಬ್ರಹ್ಮಪುತ್ರ ನದಿಯನ್ನು ಹೆಚ್ಚು ಅಸ್ಥಿರಗೊಳಿಸಿತು. ಈ ಕಾರಣದಿಂದ ನದಿಯ ಹರಿವಿನ ಹಾದಿ ಬದಲಾಯಿತು ಮತ್ತು ಮಣ್ಣಿನ ಸವಕಳಿ ಕಂಡುಬಂದಿತು. ಇದು ಮುಂದಿನ 10 ವರ್ಷಗಳವರೆಗೆ ಕೆಟ್ಟ ಪ್ರವಾಹಗಳಿಗೆ ದಾರಿ ಮಾಡಿಕೊಟ್ಟಿತು. ಇಂದಿಗೂ ಅಂದಿನ ಭೂಕಂಪದ ಪರಿಣಾಮವಾಗಿ ಬ್ರಹ್ಮಪುತ್ರಾ ಕಣಿವೆಯು ಆಗಾಗ ಪ್ರವಾಹಕ್ಕೆ ತುತ್ತಾಗುತ್ತಿದೆ.

2. ಭೌತಿಕ ಅಂಶಗಳು:

1. ಅಸಮರ್ಪಕ ಚರಂಡಿ ನಿರ್ವಹಣೆ: ಕೈಗಾರಿಕರಣ ಹಾಗೂ ನಗರೀಕರಣದ ಭರಾಟೆಯಲ್ಲಿ ಆಧುನಿಕ ಮಾನವರು ಚರಂಡಿಗಳನ್ನು ನಿರ್ಲಕ್ಷಿಸಿದ್ದಾರೆ. ಭಾರೀ ಮಳೆಗಾಲದಲ್ಲಿ ಚರಂಡಿಗಳು ತುಂಬಿಹೋಗುತ್ತವೆ. ಹಾಗೇ ಹೆಚ್ಚುವರಿ ನೀರು ಚರಂಡಿಯ ಮೂಲಕ ಹೋಗಲು ಸಾಧ್ಯವಾಗದೆ ಪ್ರವಾಹಕ್ಕೆ ಕಾರಣವಾಗುತ್ತದೆ.

2. ಜಲಾನಯನ ಪ್ರದೇಶ: ಮಳೆಗಾಲ ಅಥವಾ ಪ್ರವಾಹದ ಸಮಯದಲ್ಲಿ ಜಲಾನಯನ ಪ್ರದೇಶಗಳು ತಮ್ಮ ಹಿಡುವಳಿ ಸಾಮರ್ಥ್ಯದ ಮಿತಿಯನ್ನು ಮೀರಿದಾಗ ಅದು ಪ್ರವಾಹಕ್ಕೆ ಕಾರಣವಾಗುತ್ತದೆ.

3. ಕೃತಕ ಅಂಶಗಳು:

1. ನದಿ, ತೊರೆ, ಹಳ್ಳ, ಸರೋವರ, ಕೆರೆ, ಹೊಂಡಗಳ ತಳಭಾಗದಲ್ಲಿ ವಿಪರೀತ ಪ್ರಮಾಣದಲ್ಲಿ ಹೂಳು ತುಂಬಿಕೊಳ್ಳುವುದರಿಂದ ಪ್ರವಾಹ ಸಂಭವಿಸುತ್ತದೆ.

2. ಅಸಮರ್ಪಕ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ಪ್ರವಾಹ ಕಂಡುಬರುತ್ತದೆ.

3. ಕೃಷಿಕಾರ್ಯಗಳಿಗೆ, ಜಲಾಶಯ ನಿರ್ಮಾಣ, ಸೇತುವೆ ನಿರ್ಮಾಣ, ಕೈಗಾರಿಕಾ ನಿರ್ಮಾಣ, ಆಸ್ಪತ್ರೆಗಳ ನಿರ್ಮಾಣ, ನಗರೀಕರಣದಿಂದ ಇಂದು ಹೆಚ್ಚಿನ ಪ್ರಮಾಣದಲ್ಲಿ ಕಾಡು ನಾಶವಾಗುತ್ತಿದೆ. ಅರಣ್ಯನಾಶದಿಂದ ಪ್ರವಾಹಗಳು ಆಗಾಗ ಸಂಭವಿಸುತ್ತದೆ.

4. ಅಣೆಕಟ್ಟುಗಳು ಇದ್ದಕ್ಕಿದ್ದಂತೆ ಕುಸಿತ ಕಂಡರೆ ಪ್ರವಾಹ ಉಂಟಾಗುತ್ತದೆ.

ಉಪಸಂಹಾರ 

ಪ್ರವಾಹವು ಕೇವಲ ಪ್ರಾಕೃತಿಕ ಕಾರಣಗಳಿಂದ ಮಾತ್ರವಲ್ಲದೆ ಮಾನವನ ಅಸಮರ್ಪಕ ಚಟುವಟಿಕೆಗಳಿಂದಲೂ ಉಂಟಾಗುತ್ತದೆ. ಅರಣ್ಯನಾಶ, ಅಸಮರ್ಪಕ ನಗರ ಯೋಜನೆ ಹಾಗೂ ಜಲಸಂಪನ್ಮೂಲಗಳ ದುರುಪಯೋಗವು ಪ್ರವಾಹದ ಭೀತಿಯನ್ನು ಹೆಚ್ಚಿಸುತ್ತಿವೆ. ಪ್ರವಾಹವನ್ನು ನಿಯಂತ್ರಿಸಲು ವೈಜ್ಞಾನಿಕ ಜಲ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಅತ್ಯಾವಶ್ಯಕ. ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವುದೇ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ.

ಮಾನವ ಆರೋಗ್ಯ ಮತ್ತು ಕಲ್ಯಾಣದ ಮೇಲೆ ಜನಸಂಖ್ಯಾ ಬೆಳವಣಿಗೆಯ ಪರಿಣಾಮ

ಮಾನವ ಆರೋಗ್ಯ ಮತ್ತು ಕಲ್ಯಾಣದ ಮೇಲೆ ಜನಸಂಖ್ಯಾ ಬೆಳವಣಿಗೆಯ ಪರಿಣಾಮ

ಮಾನವ ಆರೋಗ್ಯ ಹಾಗೂ ಪರಿಸರದ ನಡುವೆ ಅವಿನಾಭಾವ ಸಂಬಂಧ ಇದೆ. ಏಕೆಂದರೆ ಪರಿಸರದಲ್ಲಿ ಆಗುವ ಯಾವುದೇ ಬದಲಾವಣೆಗಳು ಮಾನವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಮಾನವನ ಆರೋಗ್ಯದ ಗುಣಮಟ್ಟ ಹಾಗೂ ಪರಿಸರದ ಗುಣಮಟ್ಟಗಳ ನಡುವೆ ಪ್ರತ್ಯಕ್ಷ ಸಂಬಂಧವಿದೆ. ನಮ್ಮ ಆರೋಗ್ಯವನ್ನು ಹೇಗೆ ಮುತುವರ್ಜಿಯಿಂದ ಕಾಪಾಡಿಕೊಂಡು ಬರುತ್ತೇವೆಯೋ ಹಾಗೇ ಪರಿಸರದ ಗುಣಮಟ್ಟವನ್ನು ಕಾಪಾಡಿಕೊಂಡು ಬರಬೇಕು. ಮಾಲಿನ್ಯರಹಿತ ಪರಿಸರವಿದ್ದರೆ ಮಾನವ ಯಾವ ಆಸ್ಪತ್ರೆಗಳಿಗೂ ಹೋಗುವ ಅಗತ್ಯತೆಗಳು ಇರುವುದಿಲ್ಲ. ಸಾಮಾನ್ಯವಾಗಿ ಆರೋಗ್ಯವೆಂದರೆ ʻʻಒಬ್ಬ ವ್ಯಕ್ತಿ ಯಾವುದೇ ರೋಗವಿಲ್ಲದೆ ದೈಹಿಕವಾಗಿ ಸುಸ್ಥಿಯಲ್ಲಿ ಇರುತ್ತಾನೋ ಅವನನ್ನು ಆರೋಗ್ಯವಂತ ಮನುಷ್ಯ ಎಂದು ಕರೆಯಬಹುದು. ಮಾನವನ ಆರೋಗ್ಯ ನಾವು ಸೇವಿಸುವ ಆಹಾರ, ರಸಾಯನಿಕ ವಸ್ತುಗಳು, ಮಾನಸಿಕ ಸ್ವಸ್ಥತೆ ಹಾಗೂ ಪರಿಸರದ ಪ್ರಭಾವದ ಮೇಲೆ ಅವಲಂಬಿಸಿರುತ್ತದೆ. ಪರಿಸರ ಮಾಲಿನ್ಯದ ವೈಪರಿತ್ಯವು ಮಾನವನಿಗೆ ಹಲವಾರು ರೋಗಗಳನ್ನು ಹರಡಿ ಅವನ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ತಾನು ಪರಿಸರವನ್ನು ಹಾಳು ಮಾಡಿದರೆ ಪರಿಸರ ತನ್ನನ್ನು ಹಾಳುಮಾಡುತ್ತದೆ ಎಂಬುದನ್ನು ಮಾನವನು ಅರಿತುಕೊಳ್ಳಬೇಕಾಗಿದೆ. ಪರಿಸರಕ್ಕೆ ಧಕ್ಕೆ ತಂದರೆ ತನಗೆ ಧಕ್ಕೆಯನ್ನು ತಂದುಕೊಂಡಂತೆ ಪರಿಸರವನ್ನು ಉಳಿಸಿದರೆ ತಾನು ಉಳಿದುಕೊಂಡಂತೆ, ಶುದ್ಧ, ಸ್ವಚ್ಛ ಹಾಗೂ ಸಮತೋಲನಯುಕ್ತ ಪರಿಸರವಿದ್ದರೆ ಮಾನವನಿಗೆ ಯಾವುದೇ ಚಿಕಿತ್ಸೆಯ ಅವಶ್ಯಕತೆ ಬರುವುದಿಲ್ಲ. ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಸಂಬಂಧಪಟ್ಟ ವಿವರಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ. 

1. ವಾಯು ಮಾಲಿನ್ಯ ಮತ್ತು ಆರೋಗ್ಯ: ಭಾರತದಲ್ಲಿ ಹೆಚ್ಚುತ್ತಿರುವ ಕೈಗಾರಿಕೆಗಳು, ನಗರೀಕರಣ, ಅತಿಯಾದ ವಾಹನಗಳ ದಟ್ಟಣೆ, ಗಣಿಗಾರಿಕೆ, ಮೊದಲಾದವುಗಳಿಂದ ಹೊರಬರುವ ಗಂಧಕದ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್‌ನಂತಹ ಮಾಲಿನ್ಯಕಾರಕಗಳು ಶಾಖೋತ್ಪನ್ನ ಘಟಕಗಳಿಂದ ಹೊರಬರುವ ಧೂಳು ಅಥವಾ ಬೂದಿಯ ಕಣಗಳು ಇತ್ಯಾದಿ ಮಾನವನಿಗೆ ಹಲವಾರು ರೋಗಗಳು ಬರುವಂತೆ ಮಾಡುತ್ತವೆ. ವಾಯುಮಾಲಿನ್ಯ ಸಾಮಾನ್ಯವಾಗಿ ನಗರ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹೀಗಾಗಿ ನಗರವಾಸಿಗಳು ಶ್ವಾಸಕೋಶಿ ಸಂಬಂಧಿ ಕಾಯಿಲೆಗಳು, ಅಸ್ತಮಾ, ಅಲರ್ಜಿ, ಕೆಮ್ಮು, ನೆಗಡಿ, ಕ್ಷಯ, ಶ್ವಾಸಕೋಶದ ಕ್ಯಾನ್ಸರ್, ನ್ಯೂಮೋನಿಯಾ ಗಂಟಲು ಬೇನೆ, ಚರ್ಮರೋಗ ರಕ್ತಸ್ರಾವ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಬೆಂಗಳೂರು ನಗರದಲ್ಲಿ ಕೈಗೊಂಡ ಅಧ್ಯಯನದಿಂದ ವಾಹನ ದಟ್ಟಣೆ ಅಧಿಕವಾದ ಕಾರಣ ಅಲ್ಲಿನ ಶಾಲಾ ಮಕ್ಕಳಲ್ಲಿ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆಗಳ ಪ್ರಕರಣಗಳು ಬೇರೆ ಪ್ರದೇಶದ ಮಕ್ಕಳಿಗಿಂತಲೂ ಹೆಚ್ಚು ಕಂಡು ಬಂದಿವೆ. ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸರು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ಕಾರ್ಬನ್ ಮೊನಾಕ್ಸೈಡ್, ಸೀಸಗಳಂತಹ ವಿಷಕಾರಿ ವಸ್ತುಗಳು ದೇಹವನ್ನು ಸೇರಿದಾಗ ದೇಹದ ಕೆಲವು ಭಾಗಗಳು ಹಾನಿಗೊಳಗಾಗುತ್ತದೆ.  ಬೆಂಜಿನ್ ಎನ್ನುವ ರಸಾಯನಿಕ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ.

ಹಳ್ಳಿಗಳ ಕೆಲ ಮಹಿಳೆಯರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಸೌದೆ ಒಲೆ ಹಾಗೂ ಸೀಮೆಎಣ್ಣೆ ಸ್ಟೌ ಇತ್ಯಾದಿಗಳಿಂದ ಹೊರಬರುವ ಹೊಗೆಯ ಸೇವನೆಯೇ ಆಗಿದೆ. ಮನೆಯ ಒಳಗಿನ ಮಲಿನತೆಯಿಂದ ಉಸಿರಾಟದ ತೊಂದರೆ, ತಲೆಸುತ್ತು, ಎಂಪೈಸಿಯಾ, ಉಸಿರುಗಟ್ಟುವಿಕೆ, ಶ್ವಾಸಕೋಶದಂತಹ ಸಮಸ್ಯೆಗಳು ಉಲ್ಬಣಿಸುತ್ತವೆ .

ಬೀಡಿ ಹಾಗೂ ಸಿಗರೇಟ್‌ಗಳಿಂದ ಬಿಡುವ ಹೊಗೆಯು ಅಪಾಯಕಾರಿ ರೋಗಗಳನ್ನು ತರುತ್ತದೆ. ಈ ಹೊಗೆಯ ಸೇವನೆಯಿಂದ ಅಸ್ತಮಾದಿಂದ ಹಿಡಿದು ಕ್ಷಯರೋಗಿನವರೆಗಿನ ತೊಂದರೆಗಳು ಕಾಣಿಸಬಹುದು. ಗರ್ಭಿಣಿಯರು ಈ ಹೊಗೆಯನ್ನು ಸೇವಿಸಿದರೆ ಗರ್ಭದಲ್ಲಿರುವ ಮಗುವಿಗೂ ದುಷ್ಪರಿಣಾಮ ಉಂಟಾಗುತ್ತದೆ.

2. ಜಲಮಾಲಿನ್ಯ ಮತ್ತು ಆರೋಗ್ಯ:

ಕೈಗಾರಿಕೆಗಳ ತ್ಯಾಜ್ಯಗಳು, ರಸಾಯನಿಕಗಳು, ಕೀಟನಾಶಕಗಳು ಕಲುಷಿತ ನೀರು, ರಸ ಗೊಬ್ಬರಗಳಂತಹ ಕೃಷಿ ರಸಾಯನಿಕಗಳು,  ಮಲ-ಮೂತ್ರಗಳಂತಹ ಕೊಳಚೆ ವಸ್ತುಗಳು ಇತ್ಯಾದಿಗಳು ಶುದ್ಧವಾದ ನೀರಿನೊಂದಿಗೆ ಸೇರಿಕೊಂಡರೆ ನೀರು ಮಲಿನವಾಗುತ್ತದೆ. ಈ ಮಲಿನವಾದ ನೀರನ್ನು ಸೇವಿಸಿದಾಗ ಅಪಾಯಕಾರಿಯಾದ ರಸಾಯನಿಕಗಳು ದೇಹದೊಳಗೆ ಸೇರಿಕೊಳ್ಳುತ್ತವೆ. ಇದರಿಂದ ವಿಚಿತ್ರವಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಉದಾ: ಕರುಳಿನ ಸೋಂಕುಗಳು, ವಾಂತಿಭೇದಿ, ಟೈಪಾಯಿಡ್‌, ಕಾಮಾಲೆ, ಕಾಲರಾ, ಕ್ಯಾನ್ಸರ್, ಅತಿಸಾರ, ವಿಷಮ ಶೀತಜ್ವರ, ಡೆಂಗ್ಯೂ, ಚಿಕನ್ ಗುನ್ಯಾ, ಹೆಪಾಟೈಟಸ್ ʻಬಿʼ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಜೊತೆಗೆ ಕರೋನಾ ಎಂಬ ಹೊಸ ಕಾಯಿಲೆ ಕಾಣಿಸಿಕೊಂಡು ಇಡೀ ಜಗತನ್ನೇ ತಲ್ಲಣಗೊಳಿಸಿತು. ಈ ರೋಗದಿಂದ ಲಕ್ಷಾಂತರ ಜನರು ಸಾವಿಗೀಡಾದರು. ಫ್ಲೋರೈಡ್ ಮಿಶ್ರಿತ ನೀರು ಕುಡಿಯುವುದರಿಂದ ಅಂಗವಿಕಲತೆ ಹಾಗೂ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ನಿಂತ ನೀರಿನಿಂದ ಮಲೇರಿಯಾ ಹರಡುತ್ತದೆ. ಕೇರಳದ ಕಾಸರಗೋಡು ಜಿಲ್ಲೆಯ ಹಲವು ಭಾಗಗಳಲ್ಲಿ ಗೇರು ಬೆಳೆಗೆ ಸತತ ʻʻಎಂಡೋಸಲ್ಪಾನ್‌ʼʼ ಎಂಬ ಕೀಟನಾಶಕವನ್ನು ಬಳಸುತ್ತಿದ್ದ ಪರಿಣಾಮವಾಗಿ ಅಲ್ಲಿನ ಬಾವಿ, ನದಿ ಹಾಗೂ ಅಂತರ್ಜಲದಲ್ಲಿ ಎಂಡೋಸಲ್ಪಾನ್‌ ಸೇರಿಕೊಂಡಿದ್ದು ಹಲವು ರೀತಿಯ ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟಿವೆ. ಪಂಜಾಬಿನ ಭಟಿಂಡಾ ಮತ್ತು ಇತರೆ ಜಿಲ್ಲೆಗಳಲ್ಲಿ ರೈತರು ತಮ್ಮ ಕೃಷಿ ಭೂಮಿಗೆ ಕೀಟನಾಶಕಗಳ ಪ್ರಮಾಣವನ್ನು ಹೆಚ್ಚು ಬಳಕೆ ಮಾಡಿದ ಕಾರಣ ಅಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

 3. ಮಣ್ಣು ಮಾಲಿನ್ಯ ಹಾಗೂ ಆರೋಗ್ಯ:

ಇಂದು ವಿವಿಧ ಘನ, ದ್ರವ ಹಾಗೂ ಅನಿಲ ರೂಪದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುವುದರಿಂದ ಮಣ್ಣು ಮಲಿನವಾಗುತ್ತದೆ. ಉದಾ:  ಕಸ, ಕೊಳಚೆ ಕಸಗಳು, ನೀರು, ವಿಷಕಾರಿ ರಸಾಯನಿಕ ವಸ್ತುಗಳು, ಪ್ಲಾಸ್ಟಿಕ್ ಲೋಹದ ತುಣುಕುಗಳು ರಬ್ಬರ್ ವಸ್ತುಗಳು, ಟೀ ಕಪ್‌ಗಳು, ಚಾಕಲೇಟ್ ಕವರ್‌ಗಳು, ಐಸ್‌ಕ್ರೀಂ ಕಪ್‌ಗಳು ಮುಂತಾದವುಗಳು ಮಣ್ಣನ್ನು ಮಲಿನಗೊಳಿಸುತ್ತವೆ. ಇದರಿಂದ ಕ್ಯಾನ್ಸರ್, ಹೆಪಾಟೈಟಸ್ ಬಿ, ಕಾಲರಾ, ಆಮಶಂಕೆ ಮುಂತಾದ ರೋಗಗಳು ಹರಡುತ್ತವೆ. ಮಲಿನಗೊಂಡ ಮಣ್ಣಿನಿಂದ ತರಕಾರಿ ಬೆಳೆದರೆ ಅದನ್ನು ಸೇವಿಸುವ ಜನರು ಹಲವಾರು ರೋಗಗಳಿಗೆ ಬಲಿಯಾಗುತ್ತಾರೆ.

4. ಆಸ್ಪತ್ರೆ ತ್ಯಾಜ್ಯ ಹಾಗೂ ಆರೋಗ್ಯ:

ಆಸ್ಪತ್ರೆಗಳಲ್ಲಿ ಉಪಯೋಗಿಸಿದ ಚುಚ್ಚುಮದ್ದು, ಬ್ಯಾಂಡೇಜ್ ಬಟ್ಟೆಗಳು, ಸೋಂಕುಪೂರಿತ ವಾರ್ಡ್‌ಗಳ ತ್ಯಾಜ್ಯ, ಚಿಕಿತ್ಸಾಲಯ ಪ್ರಯೋಗಾಲಯ, ಸಂಶೋಧನಾಲಯ ಪ್ರಸೂತಿ ಕೊಠಡಿಗಳು, ಬ್ಲಡ್ ಬ್ಯಾಂಕ್‌ಗಳು, ಐಸಿಯು, ಫಾರ್ಮಸಿ, ಇಂಜೆಕ್ಷನ್ ಕೊಠಡಿಗಳು, ಡಯಾಲಿಸಿಸ್ ಕೊಠಡಿಗಳು, ವಿಕಿರಣ ಕೊಠಡಿಗಳ ತ್ಯಾಜ್ಯ ವಸ್ತುಗಳು, ಅವಯವಗಳು ಅಂಗಾಂಶಗಳು, ರಕ್ತ, ದೇಹದ ದ್ರವಗಳು, ಡ್ರೆಸ್ಸಿಂಗ್, ಧೂಳಾದ ಹತ್ತಿಗಳು, ಪ್ಲಾಸ್ಟಿಕ್‌ಗಳು, ಸೂಜಿ, ದಾರಗಳು, ಕತ್ತರಿಸಿದ ಎಸೆದ ಮಾನವನ ಅಂಗಾಗಳು, ಹೆರಿಗೆ, ಗರ್ಭಪಾತ ಇತ್ಯಾದಿ ತ್ಯಾಜ್ಯಗಳು ಹಲವು ರೋಗಗಳಿಗೆ ಕಾರಣವಾಗಿವೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ನಗರಪಾಲಿಕೆ ನೌಕರರು ಇಂತಹ ಅಪಾಯಗಳಿಗೆ ಸಿಲುಕುತ್ತಾರೆ.

5. ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಆರೋಗ್ಯ:

ನಗರ ತ್ಯಾಜ್ಯ ವಸ್ತುಗಳಲ್ಲಿ ಹೆಚ್ಚು ಅಪಾಯಕಾರಿ ರೋಗಗಳು ಕಂಡುಬರುತ್ತವೆ, ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಲ್ಲಿ 6.25% ನಷ್ಟು ಪ್ಲಾಸ್ಟಿಕ್ ಉತ್ಪನ್ನಗಳಿವೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾಮಾನ್ಯವಾಗಿ ಸುಡುವ ಮೂಲಕ ನಾಶ ಮಾಡಲಾಗುತ್ತದೆ. ಆದರೆ ಪ್ಲಾಸ್ಟಿಕ್ ಉರಿಯುವಾಗ ಉತ್ಪತ್ತಿಯಾಗುವ ವಿಷಕಾರಿ ಅನಿಲಗಳು ಕಣ್ಣುರಿ ಹಾಗೂ ಲುಕೇಮಿಯಾದಂತಹ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

6. ಶಬ್ದ ಮಾಲಿನ್ಯ ಹಾಗೂ ಆರೋಗ್ಯ:

ಶಬ್ದ ಮಾಲಿನ್ಯ ಅಧಿಕ ಪ್ರಮಾಣದಲ್ಲಿ ಕಂಡು ಬಂದರೆ ಶ್ರವಣದೋಷ ಉಂಟಾಗುತ್ತದೆ. ಮತ್ತು ರಕ್ತದ ಒತ್ತಡ, ನಿದ್ರಾಹೀನತೆ, ಹೃದಯ ಕಾಯಿಲೆ, ಮಾನಸಿಕ ಕಾಯಿಲೆ, ಜ್ಞಾಪಕ ಶಕ್ತಿ ಕುಂಟಿತ ಹಾಗೂ ಮನೋವ್ಯಾಕುಲತೆ ಮುಂತಾದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಭವಿಸುತ್ತವೆ.

7. ವಿಕಿರಣ ಮತ್ತು ಆರೋಗ್ಯ:

ಅತಿ ನೇರಳೆ ಪರಮಾಣು ವಿಕಿರಣಗಳು ಹೊರಹೊಮ್ಮಿ ದೇಹದ ಜೀವಕೋಶಗಳಲ್ಲಿ ಬದಲಾವಣೆಯನ್ನು ಉಂಟು ಮಾಡುವ ಮೂಲಕ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಉದಾ:  ಕ್ಯಾನ್ಸರ್, ಕ್ಷಯರೋಗ, ಶ್ವಾಸಕೋಶ ತೊಂದರೆ, ಚರ್ಮರೋಗ ತಲೆಸುತ್ತುವಿಕೆ ಹಾಗೂ ಕೂದಲು ಉದುರುವಿಕೆ ಮುಂತಾದ ರೋಗಗಳು ಕಂಡುಬರುತ್ತವೆ.

8. ಓಝೋನ್ ಹಾಗೂ ಆರೋಗ್ಯ:

ಓಜೋನ್ ಪದರು ತೆಳುವಾಗುವುದರಿಂದ ಭೂಮಿಯ ಮೇಲೆ ಪ್ರತಿಫಲನಗೊಳ್ಳುವ ಅಪಾಯಕಾರಿ ನೇರಳಾತೀತ ಕಿರಣಗಳು ಚರ್ಮದ ಕ್ಯಾನ್ಸರ್, ತಲೆ ಕೂದಲು ಉದುರುವಿಕೆ, ಚರ್ಮರೋಗ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ.

9. ಅತಿಹೆಚ್ಚಿನ ಜನಸಂಖ್ಯೆಯು ಕಲ್ಯಾಣದ ಮೇಲೆ ಪ್ರಭಾವ:

ಅತಿಹೆಚ್ಚಿನ ಜನಸಂಖ್ಯೆಯು ದೇಶದಲ್ಲಿ ಶಿಕ್ಷಣ ಮಟ್ಟದ ಕುಸಿತಕ್ಕೆ ಕಾರಣವಾಗುತ್ತದೆ. ಅನಕ್ಷರತೆಯಿಂದ ಮಾನವ ಕಲ್ಯಾಣ ಸಾಧ್ಯವಾಗುವುದಿಲ್ಲ ಸ್ತ್ರೀಯರಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜದಲ್ಲಿ ಅವರ ಸ್ಥಾನಮಾನವನ್ನು ಉತ್ತಮ ಪಡಿಸಿದರೆ ಮಾತ್ರ ಜನಸಂಖ್ಯಾ ಹೆಚ್ಚಳದಲ್ಲಿ ನಿಯಂತ್ರವನ್ನು ಸಾಧಿಸಿ ಆ ಮೂಲಕ ಮಾನವ ಕಲ್ಯಾಣವನ್ನು ಸಾಧಿಸಬಹುದು. ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇದರಿಂದ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ವರದಕ್ಷಿಣೆ ಸಾವು, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.10. ಜನಸಂಖ್ಯಾ ಶಿಕ್ಷಣ:

ಮಾನವ ಆರೋಗ್ಯ ಹಾಗೂ ಕಲ್ಯಾಣಕ್ಕಾಗಿ ಜನಸಂಖ್ಯಾ ನಿಯಂತ್ರಣ ಯೋಜನೆಯಲ್ಲಿ ಮತ್ತೊಂದು ಪ್ರಮುಖ ಅಂಶ ಜನಸಂಖ್ಯಾ ಶಿಕ್ಷಣ ಈ ಶಿಕ್ಷಣದ ಮೂಲಕ.

  1.  ದೇಶದ ಪ್ರಸ್ತುತ ಜನಸಂಖ್ಯೆಯ ಕುರಿತು ಸಮಗ್ರವಾಗಿ ಮಾಹಿತಿ ನೀಡುವುದು.
  2.  ಜನಸಂಖ್ಯೆಯ ಬೆಳವಣಿಗೆಗೆ ಕಾರಣ ಮತ್ತು ಅದರ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು.
  3.  ಪರಿಸರ ಕಾಳಜಿ ಹಾಗೂ ವೈಯಕ್ತಿಕ ಶುಚಿತ್ವದ ಬಗ್ಗೆ ಜ್ಞಾನವನ್ನುಂಟು ಮಾಡುವುದು.
  4.  ಕೌಟುಂಬಿಕ ಜೀವನದ ಮಟ್ಟದಲ್ಲಿ ಸುಧಾರಣೆಯನ್ನು ತರುವುದು.
ಭಾರತದಲ್ಲಿ ಜನಸಂಖ್ಯೆ ನಿಯಂತ್ರಿಸುವ ಕ್ರಮಗಳು

ಭಾರತದಲ್ಲಿ ಜನಸಂಖ್ಯೆ ನಿಯಂತ್ರಿಸುವ ಕ್ರಮಗಳು

ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಮುಂದೆ ಅದು ದೊಡ್ಡ ಸವಾಲಾಗಿ ಪರಿಣಮಿಸಬಹುದು. ಸರ್ಕಾರ ಸಂಘ ಸಂಸ್ಥೆಗಳು ನೀತಿ ನಿರೂಪಕರು ಒಟ್ಟಾಗಿ ಸೇರಿ ಜನಸಂಖ್ಯೆಯನ್ನು ನಿಯಂತ್ರಿಸಲು ಎಲ್ಲಿಲ್ಲದ ಪ್ರಯತ್ನವನ್ನು ಮಾಡಬೇಕು. ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅವುಗಳು ಪರಿಣಾಮಕಾರಿಯಾಗಿಲ್ಲವೆಂದೇ ಹೇಳಬೇಕು. ಕೆಲವು ನಿಯಂತ್ರಣ ಕ್ರಮಗಳು ಹೀಗಿವೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಗರ್ಭನಿರೋಧಕ ಬಳಕೆ, ಲೈಂಗಿಕ ಶಿಕ್ಷಣ, ಜನಿಸುವ ಮಕ್ಕಳ ನಡುವಿನ ಅಂತರ ಹೆಚ್ಚಿಸುವುದು, ಸ್ತ್ರೀ ಸಬಲೀಕರಣ, ಆರೋಗ್ಯ ಕೇಂದ್ರಗಳ ಸ್ಥಾಪನೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇತ್ಯಾದಿಗಳು.

ಕಲ್ಯಾಣ ಸೇವೆಗಳು 

  1. ಕೊಳಚೆ ಪ್ರದೇಶದ ನಿವಾಸಿಗಳಿಗೆ ಪ್ರಾಥಮಿಕ ಆರೋಗ್ಯ ಹಾಗೂ ಮೂಲಭೂತ ವೈದ್ಯಕೀಯ ಸೇವೆಯನ್ನು ಕಲ್ಪಿಸುವುದು.
  2. ನಗರ ಸಭೆಗಳ ಸಹಯೋಗದೊಂದಿಗೆ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ತಾಜ್ಯ ವಿಲೇವಾರಿ ಕ್ರಮ, ಹಿಂದುಳಿದ ಬೆಟ್ಟ ಗುಡ್ಡಗಾಡು ಪ್ರದೇಶದ ಜನರಲ್ಲಿ ಅರಿವು ಮೂಡಿಸುವುದು. ಗ್ರಾಮೀಣ ಪ್ರದೇಶಗಳಿಗೆ ಸಂಚಾರಿ ವೈದ್ಯಕೀಯ ವಾಹನಗಳ ನಿಯೋಜನೆ ಮಾಡುವುದು.
  3.  ವಿವಾಹ ಪೂರ್ವ ಗರ್ಭಿಣಿಯರಾಗುವುದನ್ನು ತಡೆಗಟ್ಟುವುದು, ನಿಧಾನವಾಗಿ ಮದುವೆಯಾಗಲು ಉತ್ತೇಜನ ನೀಡುವುದು ಹಾಗೂ ಸುರಕ್ಷಿತ ಲೈಂಗಿಕ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡುವುದು.
  4.  ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಕುಡಿಯುವ ನೀರು, ಚಿಕ್ಕ ಕುಟುಂಬ, ಶೌಚ, ಗ್ರಾಮೀಣ ರಸ್ತೆ ಸಾರಿಗೆ, ಅರಣ್ಯಾಭಿವೃದ್ಧಿ ಮತ್ತು ಪರಿಸರ ಅಭಿವೃದ್ಧಿ ಮುಂತಾದವುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಣವನ್ನು ಒದಗಿಸಲಾಗುತ್ತದೆ.
  5. ಜನನ ಪ್ರಮಾಣವನ್ನು ತಡೆಗಟ್ಟಲು ತಡವಾಗಿ ಮದುವೆಯಾಗುವುದಕ್ಕೆ ಪ್ರೋತ್ಸಾಹಿಸಬೇಕು.
  6.  ಮದುವೆಯ ವಯಸ್ಸನ್ನು ಗಂಡಿಗೆ 30 ಹೆಣ್ಣಿಗೆ 25 ಎಂದು ನಿರ್ಧರಿಸಬೇಕು.

ಕುಟುಂಬ ಯೋಜನಾ ಕಾರ್ಯಕ್ರಮಗಳು:

ಕುಟುಂಬ ಕಲ್ಯಾಣ ಯೋಜನೆಯು ಈ ಕೆಳಕಂಡ ಗುರಿಗಳನ್ನು ಇಟ್ಟುಕೊಂಡು ಕಾರ್ಯಯೋನ್ಮುಖವಾಗಿದೆ.

1.  ಕುಟುಂಬದ ಗಾತ್ರವನ್ನು ತಗ್ಗಿಸುವುದು:  ಸಣ್ಣ ಕುಟುಂಬ ಸುಖಿ ಕುಟುಂಬ, ಸುಖಸಂಸಾರಕ್ಕೆ ಮಕ್ಕಳೆರಡೇ ಇರಲಿ, ನಾವಿಬ್ಬರು ನಮಗಿಬ್ಬರು, ಹತ್ತು ಹಡೆಯುವುದಕ್ಕಿಂತ ಒಂದು ಮುತ್ತು ಹಡಿ, ನೂರು ಇಲಿಗಳಿಗಿಂತ ಒಂದು ಹುಲಿ ಮುಖ್ಯ, ಒಂದು  ಮತ್ತು ಎರಡನೇ ಮಗುವಿನ ನಡುವೆ ಸಾಕಷ್ಟು ಅಂತರವಿರಲಿ, ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬ ನಾಣ್ಣುಡಿಗಳನ್ನು ಸರ್ಕಾರ ಘೋಷಿಸಿದೆ.

2.  ಕುಟುಂಬದ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸುವುದು:  ಒಂದು ಅಥವಾ ಎರಡು ಮಕ್ಕಳು ಜನಿಸಿದ ನಂತರ ತಂದೆ ತಾಯಿಗಳು ಶಸ್ತ್ರ ಚಿಕಿತ್ಸೆಯ ಮೂಲಕ ಶಾಶ್ವತವಾಗಿ ಮಕ್ಕಳಾಗುವುದನ್ನು ತಡೆಗಟ್ಟಬಹುದು.

3. ಮಕ್ಕಳ ನಡುವಿನ ಅಂತರ ಹೆಚ್ಚಿಸುವುದು:  ಮೊದಲು ಹಾಗೂ ಎರಡನೇ ಮಗುವಿನ ಜನನದ ನಡುವೆ ಸಾಕಷ್ಟು ಅಂತರವನ್ನು ತಂದೆ-ತಾಯಿಗಳು ಪಾಲಿಸಿದರೆ ಪ್ರತಿ ಮಗುವಿನ ಲಾಲನೆ-ಪಾಲನೆ ಕೂಡ ಸಮರ್ಪಕವಾಗಿ ಆಗುತ್ತದೆ. ಇದರಿಂದ ಶಿಶುಗಳ ಆರೋಗ್ಯ ವೃದ್ಧಿಸಿ ಮರಣದ ಪ್ರಮಾಣ ಇಳಿಕೆಯಾಗುತ್ತದೆ. ಪದೇ ಪದೆ ಮಕ್ಕಳನ್ನು ಹೇರುವುದು ಮತ್ತು ಗರ್ಭಪಾತಕ್ಕೆ ಒಳಗಾಗುವುದರಿಂದ ತಾಯಿಯ ಆರೋಗ್ಯ  ಹದಗೆಟ್ಟು ಅವಳ ಪ್ರಾಣಕ್ಕೂ ಅಪಾಯ ಬರಬಹುದು.

4. ಜನನ ನಿಯಂತ್ರಣ ಸಾಧನಗಳು: ಗಂಡ-ಹೆಂಡತಿಯರಿಬ್ಬರೂ ತಾತ್ಕಾಲಿಕ ಗರ್ಭ ನಿಯಂತ್ರಣ ಸಾಧನೆಗಳನ್ನು ಬಳಸಬಹುದು. ಅವುಗಳ ಬಳಕೆಯ ಮೂಲಕ ಗರ್ಭಧಾರಣೆಯನ್ನು ಮುಂದೂಡಬಹುದು.

5. ಕುಟುಂಬ ಸದಸ್ಯರ ಪಾತ್ರ:  ಕುಟುಂಬದ ಸದಸ್ಯರು ಶಿಶುಗಳ ಮತ್ತು ತಾಯಂದಿರ ಆರೋಗ್ಯ ರಕ್ಷಣೆಯ  ಮಹತ್ವವನ್ನು ಅರಿತುಕೊಂಡು ಅವರ ಹಾರೈಕೆಯನ್ನು ಕ್ರಮಬದ್ಧವಾಗಿ ಮಾಡಬೇಕು. ಇದರೊಂದಿಗೆ ಶಿಶುಗಳನ್ನು ಕಾಡುವ ಸಾಂಕ್ರಾಮಿಕ ರೋಗಗಳನ್ನು ತೊಡೆದು ಹಾಕುವುದು, ಅದಕ್ಕೆ ಸೂಕ್ತ ಲಸಿಕೆ ನೀಡುವುದು, ಗರ್ಭಿಣಿಯರ ಹಾಗೂ ಮಾತೆಯರ ಆರೋಗ್ಯ ತಪಾಸಣೆ ಮಾಡುವುದು ಮುಂತಾದ ಕಾರ್ಯಗಳನ್ನು ದಾದಿಯರು ಹಾಗೂ ವೈದ್ಯಾಧಿಕಾರಿಗಳು ನಿರ್ವಹಿಸುತ್ತಾರೆ.

6. ನೈತಿಕ ನಿಯಂತ್ರಣವನ್ನು ಅನುಸರಿಸುವುದು:  ಕುಟುಂಬ ಯೋಜನೆಯ ಪ್ರಮುಖ ಕಾರ್ಯಗಳಲ್ಲಿ ಒಂದಾದ ನೈತಿಕ ನಿಯಂತ್ರಣ ವಿಧಾನದಲ್ಲಿ ವಿವಾಹವನ್ನು ಮುಂದೂಡುವುದು, ವಿವಾಹದ ವಯಸ್ಸನ್ನು ಹೆಚ್ಚಿಸುವುದು ಬ್ರಹ್ಮಚರ್ಯೆ ಪಾಲನೆ, ಆತ್ಮಸಂಹಮ  ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳ ಜನನವನ್ನು ತಡೆಗಟ್ಟುವುದು.

7.  ಗರ್ಭ ನಿರೋಧಕ ಕ್ರಮಗಳು:  ಈ ವಿಧಾನದಲ್ಲಿ ಗರ್ಭನಿರೋಧಕಗಳ ಬಳಕೆ, ವಂಕಿಧಾರಣೆ, ಶಸ್ತ್ರಚಿಕಿತ್ಸೆ ಸುರಕ್ಷಾವಧಿ ಅನುಕರಣೆ, IUDS  , ಇತ್ಯಾದಿಗಳ ಮೂಲಕ ಗರ್ಭಧಾರಣೆಯನ್ನು ತಡೆಗಟ್ಟಬಹುದು.

8.  ಕುಟುಂಬ ಯೋಜನೆಗಳಿಗೆ ಒಳಪಡುವವರಿಗೆ ಪ್ರೋತ್ಸಾಹ:  ಕುಟುಂಬ ಯೋಜನೆಗೆ ಒಳಪಡುವ ಗ್ರಾಮೀಣ ದಂಪತಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎರಡು ಮಕ್ಕಳಾದ ನಂತರ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ದಂಪತಿಗಳಿಗೆ ಪ್ರೋತ್ಸಾಹ ಧನ, ಸರ್ಕಾರಿ ನೌಕರರಿಗೆ ಭಡ್ತಿ, ಮುಂತಾದವುಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಸಣ್ಣ ಕುಟುಂಬವನ್ನು ಪ್ರೋತ್ಸಾಹಿಸುವುದರೊಂದಿಗೆ ದೊಡ್ಡ ಕುಟುಂಬಗಳಿಗೆ ಕೆಲವು ಸರ್ಕಾರಿ ಸೌಲತ್ತುಗಳನ್ನು ಮತ್ತು ಅವಕಾಶಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಅವರಿಗೆ ನಿರುತ್ತೇಜನಗೊಳಿಸುವ ಕಾರ್ಯವನ್ನು ಮಾಡಬೇಕು. ಉದಾ: ಪಡಿತರ ಆಹಾರವನ್ನು ತಡೆಹಿಡಿಯುವುದು, ಚುನಾವಣೆಯಲ್ಲಿ ಭಾಗವಹಿಸಿದಂತೆ ಕ್ರಮ ಜರುಗಿಸುವುದು, ಸರ್ಕಾರಿ ಕೆಲಸಗಳನ್ನು ನೀಡದಿರುವುದು ಮುಂತಾದ ಕ್ರಮಗಳನ್ನು ಜಾರಿಗೆ ತರಬೇಕು.

9. ಭಾರತವು ಬಹುಧರ್ಮಿಯ ಜಾತಿಗಳ ಹಾಗೂ ಭಾಷೆಗಳನ್ನಾಡುವ ದೇಶವಾದ ಕಾರಣ ಎಲ್ಲರಿಗೂ ಕುಟುಂಬ ಯೋಜನೆಯನ್ನು ಕಡ್ಡಾಯಗೊಳಿಸಬೇಕು.

10.  ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅವರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ದೊರೆಯುವಂತೆ ಮಾಡಬೇಕು.

11. ಶಾಲಾ ಕಾಲೇಜುಗಳ ಮಟ್ಟದಲ್ಲಿಯೇ ಲೈಂಗಿಕ ಶಿಕ್ಷಣದ ಕುರಿತು ಮಾಹಿತಿ ನೀಡಬೇಕು.

12.  ಕುಟುಂಬ ಯೋಜನೆಗೆ ಒಳಗಾದವರಿಗೆ ಸೂಕ್ತ ವಸತಿಯೋಜನೆ, ಮಕ್ಕಳ ಪೌಷ್ಟಿಕಾಂಶ ಲಸಿಕೆ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರವು ಮಾಡಬೇಕು.

ಉಪಸಂಹಾರ

ಭಾರತದಲ್ಲಿ ಜನಸಂಖ್ಯೆ ನಿಯಂತ್ರಣವು ಸರ್ಕಾರದ ಹೊಣೆಗಾರಿಕೆಯಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಕುಟುಂಬ ಯೋಜನೆ, ಮಹಿಳಾ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಾರ್ವಜನಿಕ ಜಾಗೃತಿ ಇವುಗಳ ಸಮನ್ವಯದಿಂದ ಮಾತ್ರ ಜನಸಂಖ್ಯೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ. ಸಣ್ಣ ಕುಟುಂಬದ ಮೂಲಕವೇ ಸುಸ್ಥಿರ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಬಹುದು.

ಜನಸಂಖ್ಯಾ ಬೆಳವಣಿಗೆಯ ಪರಿಣಾಮಗಳು

ಜನಸಂಖ್ಯಾ ಬೆಳವಣಿಗೆಯ ಪರಿಣಾಮಗಳು

ಜನಸಂಖ್ಯೆ ಹೆಚ್ಚಿದಂತೆ ದೇಶದ ಮೇಲೆ ಅದರ ಪರಿಣಾಮಗಳು ಕೂಡ ಹೆಚ್ಚಾಗುತ್ತವೆ. ಆಹಾರ, ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯದಂತಹ ಮೂಲಭೂತ ಅಗತ್ಯಗಳ ಮೇಲೆ ಜನಸಂಖ್ಯಾ ಬೆಳವಣಿಗೆ ನೇರ ಪರಿಣಾಮ ಬೀರುತ್ತದೆ. ಈ ಬ್ಲಾಗ್‌ನಲ್ಲಿ ಜನಸಂಖ್ಯಾ ಏರಿಕೆಯ ವಿವಿಧ ದುಷ್ಪರಿಣಾಮಗಳನ್ನು ವಿವರಿಸಲಾಗಿದೆ.

1.  ತಲಾ ಆದಾಯ ಕಡಿಮೆ:  ಭಾರತವು ಕೃಷಿ ಪ್ರಧಾನವಾದ ದೇಶ. ಶೇ 80% ಜನ ಕೃಷಿಯನ್ನೇ  ಅವಲಂಬಿಸಿ ಬದುಕುತ್ತಿದ್ದಾರೆ. ಜನಸಂಖ್ಯೆ ಏರಿದಂತೆ ಕೃಷಿ ಭೂಮಿಯಲ್ಲಿ ಭಾಗಗಳಾಗುತ್ತದೆ. ಹೀಗೆ ಆದಾಗ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗುತ್ತದೆ. ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾದರೆ ತಲಾ ಆದಾಯವೂ ಇಳಿಮುಖವಾಗುತ್ತದೆ. ಯಾವಾಗ ತಲಾ ಆದಾಯವು ಇಳಿಕೆಯಾಗುವುದೋ ರಾಷ್ಟ್ರೀಯ ಆದಾಯವೂ ಸಹ ಕುಸಿಯುತ್ತದೆ.

2. ಬಡತನ:  ಜನಸಂಖ್ಯಾ ಏರಿಕೆ ಮತ್ತು ಬಡತನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹೆಚ್ಚುತ್ತಿರುವ ಜನಸಂಖ್ಯೆ ಬಡತನಕ್ಕೆ ಕಾರಣವಾದರೆ, ಬಡತನವು ಅಧಿಕ ಜನಸಂಖ್ಯೆಗೆ ಕಾರಣವಾಗುತ್ತದೆ. ಜನಸಂಖ್ಯೆ ಹೆಚ್ಚಿದಂತೆ ಆಹಾರ, ವಸತಿ, ಬಟ್ಟೆ ಪೌಷ್ಟಿಕ ಆಹಾರದಲ್ಲಿಯೂ ಕೊರತೆ ಎದ್ದುಕಾಣುತ್ತದೆ. ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದಂತೆ ಚಿಕ್ಕ ಮನೆಯಲ್ಲಿ ಗಾಳಿ, ಬೆಳಕಿನ ಸೌಲಭ್ಯಗಳಿಲ್ಲದೆ ಹಲವಾರು ರೋಗಗಳಿಗೆ ಗುರಿಯಾಗಬೇಕಾಗುವುದು. ಬಡತನದಿಂದ ಅರೆಹೊಟ್ಟೆ ಉಂಡು, ಹರುಕು ಬಟ್ಟೆಗಳನ್ನು ಹಾಕಿ, ಮರುಕು ಮನೆಯಲ್ಲಿ ವಾಸಿಸುವ ಪರಿಸ್ಥಿತಿ ಬರುತ್ತದೆ.

3. ನಿರುದ್ಯೋಗ :  ಮಿತಿಮೀರಿದ ಜನಸಂಖ್ಯೆ ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಕೃಷಿಯ ಯಾಂತ್ರೀಕರಣ ಫಲವಾಗಿ ಸಾವಿರಾರು ಗ್ರಾಮೀಣರು ನಿರುದ್ಯೋಗಿಗಳಾಗಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿನ ಹೊಸತನ, ವಿಜ್ಞಾನ ತಂತ್ರಜ್ಞಾನ, ಗಣಕ ಯಂತ್ರದ ಉಪಯೋಗ, ಬುಲ್‌ಡೋಜರ್‌ ಬಳಕೆ ಮೊದಲಾದ ವಿಶೇಷ ಸಾಧನೆಗಳಿಂದ ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಹೆಚ್ಚುತ್ತಿದೆ.

4. ಮಾನವ ಶಕ್ತಿಯ ಬಳಕೆ:  ಆರ್ಥಿಕವಾಗಿ ಹಿಂದುಳಿಯುವಿಕೆ, ಮಂದಗತಿಯ ವ್ಯಾಪಾರ ಅಭಿವೃದ್ಧಿ ಮತ್ತು ವಿಸ್ತರಣೆ ಚಟುವಟಿಕೆಗಳಿಂದ ಮಾನವ ಶಕ್ತಿಯ ಬಳಕೆ ಕಡಿಮೆಯಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾನವ ಶಕ್ತಿಯ ಬಳಕೆಯ ಅಭಾವದಿಂದಾಗಿ ನಿರುದ್ಯೋಗ, ಬಡತನ ಹಾಗೂ ಕಡಿಮೆ ಉತ್ಪಾದನೆಯಂತಹ ಸಮಸ್ಯೆಗಳು ಕಾಡುತ್ತಿವೆ.

5. ಕಡಿಮೆ ಉತ್ಪಾದನೆ ಖರ್ಚು ಹೆಚ್ಚು:  ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ಆಹಾರ ಉತ್ಪಾದನೆ ಕಡಿಮೆಯಾಗಿ ಖರ್ಚು ಹೆಚ್ಚಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಉತ್ಪಾದನೆ ಮತ್ತು ವಿತರಣೆ ಸಾಧ್ಯವಾಗದೇ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರ ಪರಿಣಾಮವೇ ಹಣದುಬ್ಬರ ಎಂದು ಹೇಳಬಹುದು.

6. ಮೂಲಸೌಕರ್ಯಗಳ ಕೊರತೆ: ಮಾನವನ ಮೂಲಸೌಕರ್ಯಗಳಾದ ಆಹಾರ, ನೀರು, ವಸತಿ ಹಾಗೂ ಶಿಕ್ಷಣ ಮೊದಲಾದ ಅಭಿವೃದ್ಧಿಗಳು ಜನಸಂಖ್ಯಾ ಬೆಳವಣಿಗೆ ಅಗತ್ಯಕ್ಕೆ ಸಮಾನಾಗಿ ಆಗುತ್ತಿಲ್ಲ. ಇದರ ಪರಿಣಾಮ ಕುಡಿಯುವ ನೀರು ಆರೋಗ್ಯ ಆಹಾರ ವಸತಿ ಸೌಲಭ್ಯ ಮೊದಲಾದವುಗಳ ಮೇಲೆ ಬೀರುತ್ತದೆ.

7. ಕೆಲಸ ಮಾಡುವವರ ಸಂಖ್ಯೆ ಕಡಿಮೆ:  ಒಬ್ಬ ವ್ಯಕ್ತಿ ದುಡಿಯುವುದು ಹಲವಾರು ಜನರು ಕುಳಿತು ಉಣ್ಣುವುದು ಇದು ಅತಿಯಾದ ಜನಸಂಖ್ಯಾ ಏರಿಕೆಯ ಪ್ರಭಾವ. ಕುಟುಂಬದ ಯಜಮಾನ ಒಬ್ಬನೇ ದುಡಿದು ಹಾಕುವುದು ಮತ್ತು ಐದಾರು ಜನರು ದುಡಿಯದೇ ಹಾಗೆ ಇರುವುದು ಆದಾಯದ ಅಸಮಾನತೆಗೆ ಕಾರಣವಾಗುತ್ತದೆ.

8.  ಕಡಿಮೆ ಉಳಿತಾಯ: ಜನಸಂಖ್ಯಾ ಸ್ಪೋಟದಿಂದ ಉಳಿತಾಯ ಮಾಡುವುದು ಬಹಳ ಕಷ್ಟವಾಗುತ್ತಿದೆ. ಬಂದ ಆದಾಯ ಮಕ್ಕಳ ಆರೋಗ್ಯ, ಬಟ್ಟೆ, ಆಹಾರ, ನೀರು, ಶಿಕ್ಷಣ ಮುಂತಾದವುಗಳಿಗೆ ಖರ್ಚಾಗುತ್ತದೆ. ಇದರಿಂದ ಉಳಿತಾಯ ಮಾಡುವುದು ಕುಟುಂಬದ ಹಿರಿಯರಿಗೆ ತುಂಬಾ ನೋವಿನ ಸಂಗತಿಯಾಗಿದೆ.

9.  ವಸ್ತುಗಳ ಬೆಲೆ ಏರಿಕೆ: . ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ವಸ್ತುಗಳ ಉತ್ಪಾದನೆ ಮಾಡಲು ಸಾಧ್ಯವಾಗದ ಕಾರಣದಿಂದ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಜನರ ಬೇಡಿಕೆಗೆ ತಕ್ಕ ವಸ್ತುಗಳ ಪೂರೈಕೆ ಇರದಿದ್ದರೆ ಬೆಲೆಗಳು ಏರಿ ಸಮಸ್ಯೆಗಳು ಉದ್ಭವವಾಗುತ್ತವೆ.

10. ವೈದ್ಯಕೀಯ ಸೌಲಭ್ಯಗಳ ಅಭಾವ: 2000 ದ ವೇಳೆಗೆ ಪ್ರಪಂಚದ ಎಲ್ಲಾ ಜನರಿಗೂ ಆರೋಗ್ಯ ಎಂಬ ವಿಶ್ವಸಂಸ್ಥೆಯ ಪೋಷಣೆಯು ಹಾಗೆಯೇ ಉಳಿದಿದೆ. ಜನಸಂಖ್ಯೆ ಪ್ರಮಾಣ ಅಧಿಕವಾಗಿ ಬೆಳೆಯುತ್ತಿರುವ ಕಾರಣ ಆರೋಗ್ಯ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ದಿನೇ ದಿನೇ ಔಷಧಿಗಳ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಜನಸಂಖ್ಯೆಯೇ ಕಾರಣವಾಗಿದೆ.

ಉಪಸಂಹಾರ

ಹೀಗೆ ಜನಸಂಖ್ಯೆಯು ಮಿತಿಮೀರಿ ಏರುತ್ತಿರುವುದರಿಂದ ಸರ್ಕಾರ ರೂಪಿಸುವ ಯಾವುದೇ ಕಲ್ಯಾಣ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಮಹಿಳೆಯರ ಮೇಲಿನ ಶೋಷಣೆ ಹೆಚ್ಚುತ್ತದೆ. ಪರಿಸರ ಹಾಳಾಗಿ ಮಾನವ ಶಕ್ತಿ ನಷ್ಟವಾಗುತ್ತದೆ. ಪ್ರಾದೇಶಿಕ ಅಸಮತೋಲನ ಉಂಟಾಗಿ ಜನರಲ್ಲಿ ಕ್ಷೋಭೆಗಳು ಉಂಟಾಗುತ್ತವೆ. ಇದರಿಂದ ಸಮಾಜದಲ್ಲಿ ಶಾಂತಿ, ಸುರಕ್ಷತೆ, ನೆಮ್ಮದಿಗೆ ಭಂಗಗಳುಂಟಾಗುತ್ತವೆ.

ಭಾರತದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಕಾರಣಗಳು

ಭಾರತದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಕಾರಣಗಳು

ವಿಶ್ವದಲ್ಲಿ ಭಾರತದ ಜನಸಂಖ್ಯೆಯ ಪಾಲು 2.4% ರಷ್ಟು ಇದೆ. ಪ್ರತಿವರ್ಷ ಭಾರತದ ಜನಸಂಖ್ಯೆ ಏರಿಕೆ ಆಗುತ್ತದೆ. 2021 ಕ್ಕೆ ಭಾರತದ ಜನಸಂಖ್ಯೆ 140 ಕೋಟಿಯಷ್ಟಾಗಿದೆ. ಇದೇ ರೀತಿ ಭಾರತದ ಜನಸಂಖ್ಯೆ ಏರಿಕೆಯಾದರೆ ಮುಂದೊಂದು ದಿನ ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸುವ ಸಂದರ್ಭಗಳು ಬರಬಹುದು. ಭಾರತದ ಜನಸಂಖ್ಯಾ ಸ್ಫೋಟಕ್ಕೆ ಈ ಕೆಳಗಿನ ಪ್ರಮುಖ ಅಂಶಗಳು ಕಾರಣಗಳಾಗಿವೆ.

1.  ಮರಣ ಪ್ರದೇಶದಲ್ಲಿ ಇಳಿಕೆ:

1921 ರಿಂದ ಇಂದಿನವರೆಗೆ ಭಾರತದ ಜನಸಂಖ್ಯೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ ಮರಣ ಪ್ರಮಾಣದಲ್ಲಿ ಮಾತ್ರ ತುಂಬಾ ಇಳಿಕೆ ಕಂಡುಬರುತ್ತದೆ. ಹೆಚ್ಚಿನ ಪ್ರಮಾಣದ ಔಷಧಿಗಳ ಲಭ್ಯತೆಯ ಕಾರಣದಿಂದ ಮರಣ ಪ್ರಮಾಣವು 1000ಕ್ಕೆ 27.4% ರಿಂದ 10.9% ವರೆಗೆ ಇಳಿದಿದೆ. ಹೀಗೆ ಮರಣ ಪ್ರಮಾಣವು ಕಡಿಮೆಯಾಗಿ ಜನನ ಪ್ರಮಾಣವು ಏರಿಕೆಯಾದರೆ ಜನಸಂಖ್ಯಾ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತದೆ.

2. ಕಡ್ಡಾಯ ಮದುವೆ:  ವಿವಾಹವು ಭಾರತೀಯ ಸಮಾಜದಲ್ಲಿ ಸಾರ್ವತ್ರಿಕ ಮತ್ತು ಕಡ್ಡಾಯವಾಗಿದೆ. ಸ್ತ್ರೀ-ಪುರುಷರು ವಯಸ್ಸಿಗೆ ಬಂದನಂತರ ಕಡ್ಡಾಯವಾಗಿ ಮದುವೆಯಾಗಬೇಕೆಂಬ ನಿಬಂಧನೆಗಳಿವೆ. ಇದಕ್ಕೆ ಧಾರ್ಮಿಕ ಬೆಂಬಲವೂ ಬಹಳಷ್ಟಿದೆ.  ಸ್ತ್ರೀ ಪುರುಷರು ಕಡ್ಡಾಯವಾಗಿ ಮತ್ತು ಬಹುಬೇಗನೆ ಮದುವೆಯಾಗುವ ಕಾರಣ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

3. ಬೇಗನೆ ಮದುವೆ: ಭಾರತೀಯ ಸಮಾಜದಲ್ಲಿ ಸ್ತ್ರೀ ಪುರುಷರಿಗೆ ಬೇಗನೆ ಮದುವೆ ಮಾಡುವ ಸಂಪ್ರದಾಯವಿದೆ. ಹೆಣ್ಣು ಮಕ್ಕಳು ಋತುಮತಿಯಾದ ತಕ್ಷಣವೇ ಮದುವೆ ಮಾಡುವ ಪದ್ಧತಿ ಭಾರತೀಯ ಗ್ರಾಮೀಣ ಸಮುದಾಯದಲ್ಲಿದೆ. ಇಂದಿಗೂ ಭಾರತೀಯ ಅನೇಕ ಗ್ರಾಮಗಳಲ್ಲಿ ಬಾಲ್ಯವಿವಾಹ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಬೇಗನೆ ಮದುವೆಯಾಗುವುದರಿಂದ ಹೆಚ್ಚು ಮಕ್ಕಳನ್ನು ಪಡೆಯುವ ಸಾಧ್ಯತೆ ಇರುತ್ತದೆ. ಸುಮಾರು 20ನೇ ವಯಸ್ಸಿಗೆ ಬರುವುದರೊಳಗಾಗಿ 2-3 ಮಕ್ಕಳ ತಂದೆ ತಾಯಿಗಳಾಗುತ್ತಾರೆ. ಹೀಗಾಗಿ ಜನಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ. 

4. ಬಡತನ:  ಬಡತನವು ಅತಿ ಹೆಚ್ಚು ಮಕ್ಕಳನ್ನು ಪಡೆಯುವಂತೆ ಮಾಡುತ್ತದೆ. ಹೆಚ್ಚು ಮಕ್ಕಳು ಜನಿಸಿದರೆ ತಮಗೆ ದುಡಿಮೆಯಲ್ಲಿ ಆಸರೆಯಾಗುತ್ತಾರೆ ಮತ್ತು ಆರ್ಥಿಕವಾಗಿ ಮಕ್ಕಳು ದುಡಿದು ತಂದು ಬಡತನವನ್ನು ತೊಲಗಿಸಲು ಸಹಾಯ ಮಾಡುತ್ತಾರೆ ಎಂಬ ನಂಬಿಕೆಯಿಂದ ತಂದೆ-ತಾಯಿಗಳು ಹೆಚ್ಚು ಮಕ್ಕಳನ್ನು ಪಡೆಯಲು ಇಷ್ಟಪಡುತ್ತಾರೆ. ಬಡತನವು ಜನಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿದೆ.

5. ಗಂಡು ಸಂತಾನದ ವ್ಯಾಮೋಹ:  ಗಂಡು ಸಂತಾನದ ಅಪೇಕ್ಷೆಯಿಂದ ಸುಮಾರು 8 ಜನ ಹೆಣ್ಣು ಮಕ್ಕಳು ಜನಿಸಿ ಆನಂತರ ಗಂಡು ಮಗುವನ್ನು ಪಡೆದಂತಹ ಕುಟುಂಬಗಳು ಭಾರತೀಯ ಸಮಾಜದಲ್ಲಿ ಸಾಕಷ್ಟು ಕಂಡುಬರುತ್ತವೆ. ಗಂಡು ಸಂತಾನದ ನಿರೀಕ್ಷೆಯಲ್ಲಿದ್ದವರಿಗೆ ಪದೇ ಪದೇ ಹೆಣ್ಣು ಹುಟ್ಟಿದರೆ ಮರಳಿ ಪ್ರಯತ್ನಿಸು ಎಂಬ ಗಾದೆಯಂತೆ ಹಲವಾರು ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ. ಇದು ಜನಸಂಖ್ಯಾ ಬೆಳವಣಿಗೆಗೆ ಕಾರಣವಾಗುತ್ತದೆ.

6. ಅನಕ್ಷರತೆ ಮತ್ತು ಅಜ್ಞಾನ:  ಭಾರತದೇಶದಲ್ಲಿ ಸುಶಿಕ್ಷಿತರಗಿಂತ ಅನಕ್ಷರಸ್ಥರ ಸಂಖ್ಯೆ ಅಧಿಕವಾಗಿದೆ. ಜನರಲ್ಲಿ ಅಜ್ಞಾನ ತಾಂಡವವಾಡುತ್ತಿದೆ. ತಮಗೆ ಎಷ್ಟು ಜನ ಮಕ್ಕಳಾದರೂ ಚಿಂತಿಸುವುದಿಲ್ಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ ಎಂದು ಪದೇ ಪದೇ ಪ್ರಯತ್ನಿಸುತ್ತಲೇ ಇರುತ್ತಾರೆ. ಇದರಿಂದ ಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚಾಗಿ ಜನಸಂಖ್ಯೆ ಏರುತ್ತಲೇ ಹೋಗುತ್ತದೆ.

7. ಧಾರ್ಮಿಕ ನಂಬಿಕೆ:  ಗಂಡು ವಂಶೋದ್ಧಾರಕ ಗಂಡು ಇಲ್ಲದೆ ಸದ್ಗತಿ ಇಲ್ಲ. ಮೋಕ್ಷ ಪಡೆಯಲು ಗಂಡು ಮಗುವೇ ಬೇಕು ಎಂಬ ಧಾರ್ಮಿಕ ಭಾವನೆಗಳಿಂದ ಅವರಿಗೆ ಎಷ್ಟೇ ಹೆಣ್ಣು ಮಕ್ಕಳಾದರೂ ಗಂಡು ಸಂತತಿಗಾಗಿ ಹಾತೊರೆಯುತ್ತಾರೆ. ಇದು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

8. ಅವಿಭಕ್ತ ಕುಟುಂಬ:  ಭಾರತದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಅವಿಭಕ್ತ ಕುಟುಂಬಗಳು ಕಾರಣವಾಗಿವೆ. ಅವಿಭಕ್ತ ಕುಟುಂಬದಲ್ಲಿ ಭೂ ಹಿಡುವಳಿ ಅಧಿಕವಾಗಿರುತ್ತದೆ. ಕೃಷಿ ಅವರ ಮೂಲ  ಉದ್ಯೋಗವಾಗಿರುತ್ತದೆ. ಕೃಷಿ ಕಾರ್ಮಿಕರಿಗೆ ಹೆಚ್ಚಿನ ಸಂಬಳ ನೀಡುವ ಬದಲಾಗಿ ತಾವೇ ಮಕ್ಕಳ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡರೆ ದುಡಿಮೆಗೂ ಸಹಾಯವಾಗುತ್ತದೆ. ಸಂಬಳವೂ ಉಳಿಯುತ್ತದೆ ಎಂಬ ಕಾರಣಗಳಿಂದ ಮಕ್ಕಳ ಜನಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋಗುತ್ತಾರೆ. ಇದು ಜನಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿ ಪರಿಣಮಿಸುತ್ತದೆ.

9. ಕುಟುಂಬ ಯೋಜನೆ:  ಭಾರತೀಯ ಗ್ರಾಮೀಣ ಪ್ರದೇಶದ ಜನರಿಗೆ ಕುಟುಂಬ ಯೋಜನೆಯ ಬಗ್ಗೆ ಸ್ಪಷ್ಟ ಕಲ್ಪನೆಗಳು ಇಲ್ಲ. ಅವರು ಕುಟುಂಬ ಯೋಜನೆಯನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ದಿನೇ ದಿನೇ ಏರುತ್ತಲೆ ಇರುತ್ತದೆ.

10. ಹವಾಮಾನ:  ಭಾರತದ ಹವಾಮಾನ ಜನಸಂಖ್ಯಾ ಸ್ಪೋಟಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ 12 ರಿಂದ 14 ವರ್ಷದ ಹುಡುಗಿಯರು ಋತುಮತಿಯಾಗುತ್ತಾರೆ. ಹೀಗೆ ಋತುಮತಿಯಾದ ಹುಡುಗಿಯರನ್ನು ಬೇಗನೆ ಮದುವೆ ಮಾಡುತ್ತಾರೆ. ಹೀಗಾಗಿ ಅವರು 15 ರಿಂದ 45 ವರ್ಷಗಳವರೆಗೆ ಮಕ್ಕಳನ್ನು ಪಡೆಯುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಈ ಕಾರಣದಿಂದ ಜನಸಂಖ್ಯೆ ಏರಿಕೆಯು ಕಂಡುಬರುತ್ತದೆ.

ಉಪಸಂಹಾರ

ಭಾರತದಲ್ಲಿ ಜನಸಂಖ್ಯಾ ಸ್ಫೋಟವು ಒಂದೇ ಒಂದು ಕಾರಣದಿಂದ ಉಂಟಾಗಿಲ್ಲ; ಬದಲಾಗಿ ಅನೇಕ ಸಾಮಾಜಿಕ ಹಾಗೂ ಆರ್ಥಿಕ ಅಂಶಗಳ ಸಮೂಹ ಫಲಿತಾಂಶವಾಗಿದೆ. ಅನಕ್ಷರತೆ, ಬಡತನ, ಬಾಲ್ಯವಿವಾಹ, ಗಂಡು ಸಂತಾನದ ವ್ಯಾಮೋಹ ಮತ್ತು ಕುಟುಂಬ ಯೋಜನೆಯ ಅರಿವಿನ ಕೊರತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣದ ವಿಸ್ತರಣೆ, ಮಹಿಳಾ ಸಬಲೀಕರಣ ಮತ್ತು ಪರಿಣಾಮಕಾರಿ ಕುಟುಂಬ ಯೋಜನಾ ಕಾರ್ಯಕ್ರಮಗಳು ಅಗತ್ಯವಾಗಿವೆ. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಜಾಗೃತಿ ಮೂಡಿಸಿದರೆ ಮಾತ್ರ ಭವಿಷ್ಯದಲ್ಲಿ ಜನಸಂಖ್ಯಾ ಸಮಸ್ಯೆಯನ್ನು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಪರಿಸರ ಮಾಲಿನ್ಯ

ಪರಿಸರ ಮಾಲಿನ್ಯ

ಮಾಲಿನ್ಯ ಎಂದರೆ ಮಲೀನತೆ, ಕೊಳೆ, ಕಲ್ಮಶ, ತ್ಯಾಜ್ಯ ಹಾಗೂ ದೋಷ ಎಂದರ್ಥ. ಇನ್ನೊಂದು ಅರ್ಥದಲ್ಲಿ ಮಲಿನತೆಯನ್ನು ಕಳೆದುಕೊಂಡಿರುವುದು, aಪವಿತ್ರವಾದದು ಹಾಗೂ ಪರಿಶುದ್ಧತೆಯನ್ನು ಕಳೆದುಕೊಂಡಿರುವುದು ಎಂದಾಗುತ್ತದೆ. ಒಟ್ಟಿನಲ್ಲಿ ಮಲೀನಗೊಂಡ ಪರಿಸರವನ್ನು ಪರಿಸರ ಮಾಲಿನ್ಯ ಎಂದು ಕರೆಯುವರು. Pollution  ಎಂಬ ಇಂಗ್ಲಿಷ್ ಪದವು Pollutionem  ಎಂಬ ಪದದಿಂದ ಉತ್ಪತ್ತಿಯಾಗಿದೆ. ಪೊಲಿಷಿಯಂ ಎಂದರೆ ಹಾಳು ಮಾಡುವುದು ಅಥವಾ ಕೊಳಕು ಮಾಡುವುದು ಎಂದಾಗುತ್ತದೆ. ಪರಿಸರ ಮಾಲಿನ್ಯದ ಕುರಿತು ಈ ಕೆಳಗಿನ ವ್ಯಾಖ್ಯೆಗಳನ್ನು ಗಮನಿಸಬಹುದು

ಮಾಲಿನ್ಯಕ್ಕೆ ಕಾರಣವಾದ ಅಂಶಗಳು:

ಮಸಿ ಅಥವಾ ಕಾಡಿಗೆ, ಹೊಗೆ, ಡಾಮರು ಧೂಳು, ಇಂಗಾಲದ ಡೈ ಆಕ್ಸೈಡ್, ಬೂದಿ ಧೂಳಿನ ಕಣಗಳು ಪ್ರವಾಹ, ಚಂಡಮಾರುತ, ಕೈಗಾರಿಕಾತ್ಯಾಜ್ಯಗಳು ನಗರದ ಕೊಳಚೆ ವಸ್ತುಗಳು, ಜನಸಂಖ್ಯಾ ಸ್ಪೋಟದಿಂದ ಉಂಟಾದ ಮಲಿನಕಾರಕಗಳು ವಾಹನಗಳ ಕೊಳೆ, ಅಣುಬಾಂಬ್ ಸ್ಪೋಟನೆ, ಗಂಧಕದ ಆಕ್ಸೈಡ್, ಕ್ಲೋರಿನ್ ಅಯೋಡಿನ್, ಪಾದರಸ, ಸೀಸ್, ಸತು, ಕಬ್ಬಿಣ, ನಿಕ್ಕಲ್, ಕಾಡ್ಮಿಯಂ, ರಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು, ಕಳೆನಾಶಕಗಳು, ಶಿಲೀಂಧ್ರಗಳು, ನೀರಿನಲ್ಲಿ ಕರಗುವ ಹಾಗೂ ಕರಗಬಲ್ಲ ವಸ್ತುಗಳು, ವ್ಯರ್ಥ ನೀರು, ಮುಂತಾದವುಗಳು ಮಾಲಿನ್ಯಕ್ಕೆ ಕಾರಣವಾದ ಅಂಶಗಳಾಗಿವೆ.

 ಪ್ಲಾಸ್ಟಿಕ್ ಪರಿಸರ ಮಾಲಿನ್ಯಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬಾಲ್‌ ಪೆನ್ನುಗಳು, ವಿಮಾನದ ಬಿಡಿ ಭಾಗಗಳು ಹಾಗೂ ಹಾಲಿನ ಪ್ಯಾಕೆಟ್‌ಗಳು ಇಂದು ರಾಶಿ ರಾಶಿ ಆಗಿ ಬೀಳುತ್ತಿವೆ. ಇವುಗಳು ಮಣ್ಣಿನಲ್ಲಿ ಕೊಳೆಯದೇ ಪರಿಸರ ಹಾನಿಗೆ ತಮ್ಮ ಕೊಡುಗೆಯನ್ನು ನೀಡುತ್ತಿವೆ. ಆಸ್ಪತ್ರೆಯಿಂದ ಹೊರ ಹಾಕುವ ಸಿರಿಂಜ್‌ಗಳು, ಔಷಧಿ ಬಾಟಲಿಗಳು, ಗ್ಲೌಸ್‌ಗಳು, ತ್ಯಾಜ್ಯಗಳು ದೊಡ್ಡ ಪರ್ವತದ ಹಾಗೆ ಬೀಳುತ್ತಿರುವುದು ಬಹಳ ಆತಂಕದ ವಿಷಯವಾಗಿದೆ. ಹಾಳಾದ ಪ್ಲಾಸ್ಟಿಕ್ ಪೆನ್ನುಗಳು  ಟಿ.ವಿಯ ಬಿಡಿ ಭಾಗಗಳು ಹಲ್ಲುಜ್ಜುವ ಬ್ರೆಸ್‌ಗಳು, ಟೂತ್‌ಪೇಸ್ಟ್‌ ಖಾಲಿ ಕವಚಗಳು, ಹಾಳಾದ ಚಪ್ಪಲಿಗಳು, ಮನೆಯ ಕಸಕಡ್ಡಿಗಳು ಪರಿಸರ ಮಾಲಿನ್ಯಕ್ಕೆ ಪ್ರತ್ಯಕ್ಷವಾದ ಕಾರಣಗಳಾಗಿವೆ. ವಿಷಕಾರಿಯಾದ ಡಿಡಿಟಿ, Co2 ಚರಂಡಿ ನೀರು , ಗಾಜು, ಕಾಗದ, ಮುಂತಾದವುಗಳು ಸಹ ಪರಿಸರವನ್ನು ದೊಡ್ಡ ಪ್ರಮಾಣದಲ್ಲಿ ಹಾಳುಮಾಡುತ್ತವೆ. ಥರ್ಮಲ್‌ ವಿದ್ಯುತ್‌ ಸ್ಥಾವರಗಳಿಂದ ಹೊರಸೂಸುವ ವಿಷಪೂರಿತವಾದ ಬೂದಿ ಮಾನವನ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುವುದಲ್ಲದೆ ಕಣ್ಣುಉರಿ, ಆಸ್ತಮಾ, ಹೃದಯ ಖಾಯಿಲೆ, ಕಾಲುಬೇನೆ, ಅಜೀರ್ಣಸಮಸ್ಯೆ ಮುಂತಾದ ರೋಗಗಳಿಗೆ ಕಾರಣವಾಗುತ್ತದೆ. ದೇಶಧ 75 ಉಷ್ಣಸ್ಥಾವರಗಳು ಪರಿಸರ ಮಾಲಿನ್ಯಕ್ಕೆ ಅಪಾರ ಕೊಡುಗೆಯನ್ನು ನೀಡುತ್ತವೆ. ದೆಹಲಿ ಒಂದರಲ್ಲಿಯೇ ಬಂದರ್‌ಪುರ ಹಾಗೂ ಇಂದ್ರಪ್ರಸ್ತ ಉಷ್ಣಸ್ಥಾವರಗಳಿಂದ ದಿನವೊಂದಕ್ಕೆ 180 ಟನ್‌ ಗಂಧಕದ ಸುಟ್ಟ ಕಲ್ಲಿದ್ದಲು ದೂಳು, 70 ಟನ್‌ ಗಂಧಕದ ಡೈ ಆಕ್ಸೈಡ್‌ SO2 ನ್ನು ವಾಯುಮಂಡಲಕ್ಕೆ ಬಿಡುಗಡೆಗೊಳಿಸುತ್ತದೆ. ಈ ಸ್ಥಾವರಗಳ ದಟ್ಟ ಹೊಗೆ ಆ ಪ್ರದೇಶದ ಸ್ಮಾರಕಗಳಿಗೆ ಕಪ್ಪು ಮಸಿಯನ್ನು ಬಳಿದಂತೆ ಅಂಟಿಕೊಂಡಿದೆ. 

ಮಾಲಿನ್ಯದ ಅಂಶಗಳು

ಮೂಲ

ಪರಿಣಾಮಗಳು

1.

ಗಂಧಕದ ಆಕ್ಸೈಡ್‌ಗಳು

ಪಳಿಯುಳಿಕೆ ಇಂಧನ ಸುಡುವುದು ಕಬ್ಬಿಣದ ಅದಿರನ್ನು ಕರಗಿಸುವುದು ತೈಲ ಸಂಕ್ಷರಣಾ ಘಟಕ

ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ

2. 

ನೈಟ್ರೋಜನ್‌ ಆಕ್ಸೈಡ್‌ 

ಅಟೋಮೊಬೈ̧ಲ್‌ ವಿದ್ಯುತ್‌ ಸ್ಥಾವರಗಳಲ್ಲಿನ ನೈಟ್ರೋಜನ್‌ ಫೆರಾಕ್ಸೆಡ್‌ ಬಿಡುಗಡೆ ವಾಹನಗಳ ಹೊಗೆ

ಉಸಿರಾಟದ ತೊಂದರೆಗಳು

3. 

ಹೈಡ್ರೋ ಕಾರ್ಬನ್‌ಗಳು

ಪಳಿಯುಳಿಕೆ ಇಂಧನ ದಹನ ಸಿಗರೇಟ್‌ ಹೊಗೆ

ಶ್ವಾಸಕೋಶದ ಕ್ಯಾನ್ಸರ್‌

4. 

ಕಾಡ್ಮಿಯಂ

ಕೈಗಾರಿಕೆಗಳ ಇ-ತ್ಯಾಜ್ಯ

ಹೃದಯ ಸಂಬಂಧಿ ಕಾಯಿಲೆ 

5. 

ಪಾದರಸ 

ಕೈಗಾರಿಕೆಗಳ ತ್ಯಾಜ್ಯ ವಸ್ತುಗಳು

ನರಸಂಬಂಧಿ ಕಾಯಿಲೆ

6. 

ಕಾರ್ಬನ್‌ ಡೈ ಆಕ್ಸೈಡ್‌ 

ಪಳಿಯುಳಿಕೆ ಇಂಧನ ದಹಿಕೆ

ತಲೆನೋವು, ಹೃದಯ ಕಾಯಿಲೆ 

7.

ಕಲ್ನಾರು

ಗಣಿ ಮತ್ತು ಯಂತ್ರಾಗಾರಗಳು

ಶ್ವಾಸಕೋಶದ ಕ್ಯಾನ್ಸರ್‌

8.

ಸೀಸ

ಪೆಟ್ರೋಲ್‌ ಇ-ತ್ಯಾಜ್ಯ

ನರಸಂಬಂಧಿ ಕಾಯಿಲೆ

9. 

ಓಜೋನ್‌ (O3)

ವಾಹನಗಳ ಹೊಗೆ ಓಜೋನ್‌ ಉತ್ಪಾದಕಾ ಘಟಕಗಳು ವಿಮಾನ ಕ್ಯಾಬಿನ್‌ಗಳು.

ಉಸಿರಾಟದ ತೊಂದರೆಗಳು

ಉಪಸಂಹಾರ

ಪರಿಸರ ಮಾಲಿನ್ಯವು ಕೇವಲ ಪ್ರಕೃತಿಗೆ ಮಾತ್ರವಲ್ಲ, ಮಾನವನ ಜೀವನಕ್ಕೂ ಗಂಭೀರ ಬೆದರಿಕೆಯಾಗುತ್ತಿದೆ. ವಾಯು, ನೀರು ಮತ್ತು ಮಣ್ಣಿನ ಮಾಲಿನ್ಯದಿಂದ ಅನೇಕ ರೋಗಗಳು ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಅತ್ಯಾವಶ್ಯಕ. ಸರ್ಕಾರದೊಂದಿಗೆ ನಾಗರಿಕರೂ ಸಹ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಶುದ್ಧ ಪರಿಸರವೇ ಆರೋಗ್ಯಕರ ಭವಿಷ್ಯಕ್ಕೆ ಆಧಾರ ಎಂಬುದನ್ನು ನಾವು ಮರೆಯಬಾರದು.