ಭಾರತದ ಜೀವ ವೈವಿಧ್ಯತೆಯ ಬಿಸಿ ತಾಣಗಳು
ಪ್ರಪಂಚದ 35 ಮಹಾಜೀವ ವೈವಿಧ್ಯತೆಯ ಬಿಸಿ ತಾಣಗಳಲ್ಲಿ ಭಾರತದ ಈ ಕೆಳಗಿನ ಎರಡು ವಲಯಗಳು ಸೇರಿವೆ. ಅವುಗಳೆಂದರೆ,
- ಪೂರ್ವ ಹಿಮಾಲಯ ಪರ್ವತ
- ಪಶ್ಚಿಮ ಘಟ್ಟ ಪ್ರದೇಶ
1. ಪೂರ್ವ ಹಿಮಾಲಯ ಪರ್ವತ: (The eastern Himalayas)
ಹಿಮಾಲಯ ಪರ್ವತವು ಭಾರತದ ವಿಶಿಷ್ಟವಾದ ನೆಲೆಯಾಗಿದೆ. ಇದು ಭಾರತದ ತಡೆಗೋಡೆಯಾಗಿದೆ. ಶತ್ರುಗಳಿಂದ ಭಾರತವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಹಿಮಾಲಯವು ಸಾವಿರಾರು ಜಾತಿಯ ಗಿಡಮೂಲಿಕೆ ಔಷಧಿ ಸಸ್ಯಗಳ ಅಗರವಾಗಿದೆ. ಬಿಸಿ ಗಾಳಿಯನ್ನು ತಡೆಗಟ್ಟಿ ಭಾರತಕ್ಕೆ ತಂಪಾದ ಗಾಳಿಯನ್ನು ನೀಡುತ್ತದೆ. ಸಿಂಧು, ಗಂಗಾ, ಬ್ರಹ್ಮಪುತ್ರ ನದಿಗಳ ಉಗಮ ಸ್ಥಾನವಾಗಿದೆ. ಇಂತಹ ಹಿಮಾಲಯವು ನೇಪಾಳ, ಟಿಬೆಟ್, ಭೂತಾನ್, ಸಿಕ್ಕಿಂ ಭಾರತದ ಈಶಾನ್ಯ ಹಾಗೂ ವಾಯುವ್ಯ ರಾಜ್ಯಗಳು ಹಾಗೂ ಚೀನಾ ದೇಶದ ಯಮನ್ ಪ್ರಾಂತ್ಯವನ್ನು ಒಳಗೊಂಡಿದೆ.
ಹಿಮಾಲಯ ಪ್ರದೇಶವು ಸುಮಾರು 9000 ಬಗೆಯ ಸಸ್ಯ ಪ್ರಭೇದಗಳನ್ನು ಹೊಂದಿದೆ. ಇವುಗಳಲ್ಲಿ 3500 ಸಸ್ಯ ಪ್ರಭೇದಗಳು ಸ್ಥಳೀಯ ಪ್ರಭೇದಗಳಾಗಿವೆ. ದಾಖಲಾತಿಯ ಪ್ರಕಾರ ಇಲ್ಲಿ 175 ಸರೀಸೃಪಗಳ ಪೈಕಿ 50 ಸ್ಥಳೀಯ ಸರಿಸೃಪಗಳಾಗಿವೆ.
ಸಸ್ಯಗಳು: ಪೂರ್ವ ಹಿಮಾಲಯ ಪರ್ವತ ವಲಯವು ವೈವಿಧ್ಯಮಯವಾದ ಸಸ್ಯ ಪ್ರಭೇದಗಳಿಂದ ಕೂಡಿದೆ. ಇವುಗಳಲ್ಲಿ 55 ಪ್ರಭೇದಗಳು ಈ ಪ್ರದೇಶದ ಮೂಲ ಪ್ರಭೇದಗಳಾಗಿವೆ. ಇಲ್ಲಿ ಬೆಳೆಯುವ ಪಿಚರ್ ಪ್ಲಾಂಟ್ ಎಂಬ ಸಸ್ಯ ಈ ಪ್ರದೇಶದ ಸ್ಥಳೀಯ ವಂಶಕ್ಕೆ ಸೇರಿದ್ದಾಗಿದೆ. ಈ ಸ್ಥಳಗಳು ಸುಂದರವಾದ ಹೂಗಳನ್ನು ಬಿಡುತ್ತವೆ. ಹಾಗಾಗಿ ಇದನ್ನು ಪ್ರಭೇದದ ತೊಟ್ಟಿಲು ಎಂದು ಕರೆಯುತ್ತಾರೆ. ಇಲ್ಲಿ ಬೆಳೆಯುವ ಟಾಕ್ಸ್ಸ್ ಗಿಡ ಇದು ಟಾಕ್ಸಲ್ ಎಂಬ ಕ್ಯಾನ್ಸರ್ ಕಾಯಿಲೆಗೆ ಮೂಲ ಔಷಧಿಯಾಗಿದೆ. ಈ ಪ್ರದೇಶದ ಇನ್ನೊಂದು ಸ್ಥಳೀಯ ಸಸ್ಯ ಪ್ರಭೇದವೆಂದರೆ ಅದು ಚಹಾ. ಸುಮಾರು 40 ಸಾವಿರ ವರ್ಷಗಳಿಂದಲೂ ಚಹಾದ ಬಗ್ಗೆ ಇಲ್ಲಿನ ಜನರಿಗೆ ತಿಳಿದಿತ್ತು. ಚಹದ ವಿವಿಧ ಪ್ರಭೇದಗಳು ಸಹ ಇಲ್ಲಿ ಕಂಡುಬರುತ್ತವೆ. ಇದರ ಜೊತೆಗೆ ಸೆಣಬು ಹಾಗೂ ಖರ್ಜೂರದಂತಹ ಆರ್ಥಿಕ ಮಹತ್ವದ ಬೆಳೆ ಗಿಡಗಳ ವಿಕಾಸದಲ್ಲಿ ಪೂರ್ವ ಹಿಮಾಲಯವು ಮಹತ್ವದ ಪಾತ್ರ ವಹಿಸಿದೆ.
ಪ್ರಾಣಿಗಳು: ಪೂರ್ವ ಹಿಮಾಲಯದಲ್ಲಿಯೂ ವಿವಿಧ ರೀತಿಯ ಪ್ರಾಣಿ ಪ್ರಭೇದಗಳು ಕಂಡುಬರುತ್ತವೆ. ಭಾರತದ ಭೂ ವಲಯದ 63 ರಷ್ಟು ಸಸ್ತನಿಗಳು ಈ ವಲಯದಿಂದ ಇತರೆ ವಲಯಗಳಿಗೆ ವಲಸೆ ಹೋಗುತ್ತವೆ. ಇಲ್ಲಿ ನೂತನವಾಗಿ ಪ್ರಾಣಿ ಪ್ರಭೇದಗಳು ಸತತವಾಗಿ ಪತ್ತೆಯಾಗುತ್ತಿರುವುದು ಅತ್ಯಂತ ಸಂತಸದ ಸುದ್ದಿ. ಅರುಣಾಚಲ ಪ್ರದೇಶದಲ್ಲಿರುವ ನಾಮ್‌ಧಪ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯೊಳಗೆ ಸುಮಾರು 30 ಪ್ರಾಣಿ ಪ್ರಭೇದಗಳನ್ನು ಶೋಧಿಸಲಾಗಿದೆ. ಇದರಲ್ಲಿ ಅಪರೂಪದ ಹಾರುವ ಅಳಿಲು ಸಹ ಸೇರಿದೆ. ಅಸ್ಸಾಂ, ಭೂತಾನ್ ವಲಯದ ಗೋಲ್ಡನ್ ಲಾಂಗೂರ್ ಅತ್ಯಂತ ಸುಂದರವಾದ ಪ್ರಾಣಿಯಾಗಿದೆ.
ಪಕ್ಷಿಗಳು: ಪೂರ್ವ ಹಿಮಾಲಯವು ಹಲವಾರು ಪಕ್ಷಿ ವೈವಿಧ್ಯತೆಗೆ ಹೆಸರಾದ ತಾಣವಾಗಿದೆ. ಈಶಾನ್ಯ ವಲಯದಲ್ಲಿ ಭಾರತದ ಒಟ್ಟು ಪಕ್ಷಿ ಪ್ರಭೇದದ ಶೇಕಡ 60ರಷ್ಟು ಪ್ರಭೇದಗಳನ್ನು ಗುರುತಿಸಲಾಗಿದ್ದು ಇಲ್ಲಿ ಎರಡು ಬಗೆಯ ಹಲ್ಲಿಗಳ ವರ್ಗಗಳಿವೆ. ಸುಮಾರು 35 ಉರಗ ಸಂತತಿಗಳು, ಎರಡು ರೀತಿಯ ಆಮೆಗಳು ಈ ವಲಯದಲ್ಲಿಯೇ ಹುಟ್ಟಿ ಬೆಳೆದಿವೆ. ಭಾರತದ ಒಟ್ಟು 204 ಜೀವಿ ಪ್ರಭೇದಗಳಲ್ಲಿ ಸುಮಾರು 60 ಬಗೆಯ ಉಭಯವಾಸಿಗಳು ಈ ವಲಯದಲ್ಲಿ ಕಂಡುಬರುತ್ತವೆ. ಅರುಣಾಚಲ ಪ್ರದೇಶದ ನಾಮದಫ್ ವನ್ಯಜೀವಿ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಹೊಸ ಸಸ್ತನಿ, ಉಭಯವಾಸಿಗಳ ಆರು ಪ್ರಭೇದಗಳು, 15 ಬೀಟರ್ ಪ್ರಭೇದಗಳು, ನಾಲ್ಕು ಹೊಸ ಬಗೆಯ ಮೀನುಗಳು ಹಾಗೂ ಆರು ಹೊಸ ಬಗೆಯ ನೊಣಗಳನ್ನು ಪತ್ತೆಹಚ್ಚಲಾಗಿದೆ.
2) ಪಶ್ಚಿಮ ಘಟ್ಟ ಪ್ರದೇಶ: (The western ghat region)
ಪಶ್ಚಿಮ ಘಟ್ಟ ಪ್ರದೇಶವು ಭಾರತದ ಎರಡನೇ ಮಹಾ ಜೀವ ವೈವಿಧ್ಯತೆಯ ತಾಣವಾಗಿದೆ. ಭಾರತದ ಪರ್ಯಾಯ ಪ್ರಸ್ಥಭೂಮಿಯ ಪಶ್ಚಿಮ ಕರಾವಳಿಯವರೆಗೆ ಸಮಾನವಾಗಿ ಹಂಚಿಕೆಯಾಗಿರುವ ಘಟ್ಟಗಳ ಸಾಲುಗಳನ್ನು ಪಶ್ಚಿಮ ಘಟ್ಟಗಳು ಎಂದು ಕರೆಯಲಾಗಿದೆ. ಇದರ ಒಟ್ಟು ಉದ್ದ 600 ಕಿ.ಮೀಗಳು. ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಈ ಪ್ರದೇಶ ವ್ಯಾಪಿಸಿದೆ. ಸಮುದ್ರಮಟ್ಟದಿಂದ ಸುಮಾರು 500 ಮೀ ಎತ್ತರದ ವರೆಗೆ ಪಶ್ಚಿಮ ಘಟ್ಟಗಳ ನಿತ್ಯ ಹರಿದ್ವರ್ಣ ಕಾಡುಗಳು ಇವೆ. ಈ ಪ್ರದೇಶದಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು ಜೀವ ವೈವಿಧ್ಯತೆಯ ಬೆಳವಣಿಗೆಗೆ ಈ ಪ್ರದೇಶದ ಮಳೆಯೇ ಕಾರಣವಾಗಿದೆ. ಈ ಪ್ರದೇಶದಲ್ಲಿ ವಿಶಿಷ್ಟ ಜೀವಿಗಳು ವಾಸಿಸುತ್ತವೆ. ಅವುಗಳನ್ನು ಸಂರಕ್ಷಿಸಲು ಭಾರತ ಸರ್ಕಾರವು ಮಾಧವ ಗಾಡ್ಗಿಳ್ ಸಮಿತಿ ಹಾಗೂ ಕಸ್ತೂರಿರಂಗನ್ ಸಮಿತಿಗಳನ್ನು ನೇಮಕಗೊಳಿಸಿದ್ದಿತು. ಈ ಎರಡು ಸಮಿತಿಗಳು ಸಲ್ಲಿಸಿದ್ದ ವರದಿಗಳನ್ನು ರಾಜ್ಯ ಸರ್ಕಾರಗಳು ತಿರಸ್ಕರಿಸಿದವು.
ಪಶ್ಚಿಮ ಘಟ್ಟದಲ್ಲಿ ವೈವಿಧ್ಯತೆಯಿಂದ ಕೂಡಿದ ಮರಗಳನ್ನು ಕಾಣಬಹುದಾಗಿದೆ. ಈ ವಲಯದಲ್ಲಿ ಸುಮಾರು 38 ಬಗೆಯ ಮರಗಳನ್ನು ಗುರುತಿಸಲಾಗಿದ್ದು ಇವುಗಳ ವೈವಿಧ್ಯತೆ 8 ಡಿಗ್ರಿ ಉತ್ತರ ಅಕ್ಷಾಂಶದಿಂದ 30 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಅತಿ ಹೆಚ್ಚು ಕಂಡುಬರುತ್ತವೆ. ಇದರಲ್ಲಿ ಗಿಡಮೂಲಿಕೆ ಔಷಧಿ ಗಿಡಗಳೇ ಅಧಿಕವಾಗಿವೆ. ಈ ಬಿಸಿ ತಾಣದಲ್ಲಿ 1500ಕ್ಕೂ ಹೆಚ್ಚಿನ ಬಗೆಯ ಸಸ್ಯ ಪ್ರಭೇದಗಳಿವೆ.
ಈ ಪ್ರದೇಶವು ಸಸ್ಯ ಪ್ರಭೇದಗಳಿಗೆ ಹೆಸರಾಗಿದ್ದಂತೆ ಪ್ರಾಣಿಪ್ರಭೇದಗಳಿಗೂ ಹೆಸರಾಗಿದೆ. 315 ದೇಶಿಯ ಪ್ರಭೇದದ ಅಕಸೇರುಕಗಳು ಇಲ್ಲಿವೆ. ಇವುಗಳ ಪೈಕಿ 7 ಸಸ್ತನಿ, 13 ಪಕ್ಷಿ, 84 ಉಭಯವಾಸಿ ಹಾಗೂ 104 ಮೀನಿನ ಪ್ರಭೇದಗಳು ಇವೆ.
ಮಾನವನ ಅತಿಯಾದ ಮೋಹಕ್ಕೆ ಬಲಿಯಾಗಿ ಅನೇಕ ಪ್ರಾಣಿ ಸಂತತಿಗಳು ವಿನಾಶದ ಅಂಚಿಗೆ ಬಂದು ತಲುಪಿದೆ. ಸುಮಾರು 235 ಬಗೆಯ ಸ್ಥಳೀಯ ಪುಷ್ಪ ಪ್ರಭೇದಗಳು ಅಳಿವಿನ ಅಂಚಿನಲ್ಲಿದೆ. ಸಿಂಹಬಾಲದ ಮಕಾಕ್, ನೀಲಗಿರಿ ಲಂಗೂರ್, ತಹರ್, ಹಾರುವ ಅಳಿಲು ಹಾಗೂ ಮಲಬಾರ್ ಗ್ರೇ ಹಾರ್ನ್ ಬಿಲ್ ಪಕ್ಷಿಗಳು ಹೆಚ್ಚು ಗಮನ ಸೆಳೆಯುತ್ತವೆ. ಇಲ್ಲಿನ 165 ಪ್ರಭೇದದ ಉರಗಗಳಲ್ಲಿ 88 ದೇಶಿಯ ಪ್ರಭೇದದ ಉರಗಗಳಿವೆ.
ಉಪಸಂಹಾರ
ಪೂರ್ವ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು ಭಾರತದ ಜೀವ ವೈವಿಧ್ಯತೆಯ ಅಮೂಲ್ಯ ಧನವಾಗಿವೆ. ಇವುಗಳಲ್ಲಿ ಅನೇಕ ಸ್ಥಳೀಯ ಹಾಗೂ ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ವಾಸಿಸುತ್ತಿವೆ. ಮಾನವನ ಅತಿಯಾದ ಹಸ್ತಕ್ಷೇಪದಿಂದ ಈ ಬಿಸಿ ತಾಣಗಳು ಅಪಾಯದ ಅಂಚಿಗೆ ತಲುಪುತ್ತಿವೆ. ಆದುದರಿಂದ ಇಂತಹ ಪ್ರಕೃತಿ ಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭವಿಷ್ಯದ ಪೀಳಿಗೆಗಾಗಿ ಜೀವ ವೈವಿಧ್ಯತೆಯನ್ನು ಕಾಪಾಡುವುದು ಅತ್ಯಂತ ಅವಶ್ಯಕವಾಗಿದೆ.


