ಮಣ್ಣಿನ ಮಾಲಿನ್ಯದ ಪರಿಣಾಮಗಳು ಮತ್ತು ನಿಯಂತ್ರಿಸುವ ನಿವಾರಣೋಪಾಯಗಳು

ಮಣ್ಣಿನ ಮಾಲಿನ್ಯದ ಪರಿಣಾಮಗಳು ಮತ್ತು ನಿಯಂತ್ರಿಸುವ ನಿವಾರಣೋಪಾಯಗಳು

ಕೈಗಾರೀಕರಣ, ನಗರೀಕರಣ ಮತ್ತು ಆಧುನಿಕ ಕೃಷಿ ಪದ್ಧತಿಗಳ ಪರಿಣಾಮವಾಗಿ ಮಣ್ಣಿನ ಗುಣಮಟ್ಟ ಕುಸಿಯುತ್ತಿದೆ. ಇದರಿಂದ ಪರಿಸರ ಸಮತೋಲನ ಹಾಗೂ ಮಾನವನ ಆರೋಗ್ಯ ಎರಡಕ್ಕೂ ಗಂಭೀರ ಸಮಸ್ಯೆಗಳು ಎದುರಾಗಿವೆ.

ಮಣ್ಣಿನ ಮಾಲಿನ್ಯದ ಪರಿಣಾಮಗಳು:        

  1.  ಭೂಮಿಯ ಮಾಲಿನ್ಯದಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಮಣ್ಣಿನಲ್ಲಿನ ಬೌದ್ಧಿಕ ಹಾಗೂ ಜೈವಿಕ ರಸಾಯನಿಕಗಳು ನಾಶವಾಗುತ್ತವೆ. ಮಣ್ಣಿನ ಉಷ್ಣಾಂಶತೆ ಹಾಗೂ ಆರ್ದ್ರತೆಯಲ್ಲಿ ಏರುಪೇರು ಕಂಡು ಬರುತ್ತದೆ, ಇದರಿಂದ ಭೂಮಿ ಒಣಗಿ ಬಿರುಕು ಬಿಡುತ್ತದೆ.
  2.  ಕೃಷಿ ಕಾರ್ಯಗಳಿಂದ ಮಣ್ಣಿನ ಸವೆತ ಹೆಚ್ಚಾಗಿ, ಮಣ್ಣಿನ ಪೋಷಕಾಂಶಗಳು ಕಡಿಮೆಯಾಗುತ್ತವೆ. ಪರಿಣಾಮವಾಗಿ ಇಳುವರಿ ಕಡಿಮೆಯಾಗಿ ಲವಣಾಂಶ ಹೆಚ್ಚುತ್ತದೆ. ಕೆರೆ ಹಾಗೂ ಜಲಾಶಯಗಳಲ್ಲಿ ನೀರು ತುಂಬಿ ಕೃಷಿ ನೀರಿನ ಕೊರತೆ ಕಂಡು ಬರಬಹುದು.
  3. ಅಪಾಯಕಾರಿ ರಸಾಯನಿಕಗಳ ಬಳಕೆಯಿಂದ ಮಾನವನು ಹಲವಾರು ರೋಗಗಳಿಗೆ ತುತ್ತಾಗಬಹುದು.
  4.  ಸಸ್ಯಗಳ ಫಲವತ್ತತೆ ಕಡಿಮೆಯಾಗುವುದರ ಜೊತೆಗೆ ಪರಿಸರದಲ್ಲಿ ಅಸಮತೋಲನ ಕಂಡುಬರುತ್ತದೆ. ಮಣ್ಣಿನ ಮಾಲಿನ್ಯದಿಂದ ಮಣ್ಣಿನಲ್ಲಿರುವ ಪ್ರಾಣಿ ಹಾಗೂ ಸಸ್ಯವರ್ಗಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗಬಹುದು.
  5.  ಮಣ್ಣಿನ ಮಾಲಿನ್ಯದಿಂದ ನಗರದ ಚರಂಡಿಗಳು ತುಂಬಿಕೊಂಡು ನೀರು ಮನೆಯೊಳಗೂ ಪ್ರವೇಶಿಸಬಹುದು. ಬೆಂಗಳೂರಿನಂತಹ ನಗರದಲ್ಲಿ ಮನೆಯೊಳಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಹೀಗೆ ಆದಾಗ ಅಸಹನೆಯುಕ್ತ ವಾಸನೆ ಕಂಡುಬರುತ್ತದೆ. ತ್ಯಾಜ್ಯ ನಿರ್ವಹಣೆಗೆ ತೊಂದರೆ ಕಾಣಿಸಬಹುದು.
  6. ಮಣ್ಣಿನ ಶಿಥಿಲೀಕರಣದಿಂದ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಬಂಜರುಭೂಮಿ ನಿರ್ಮಾಣವಾಗಬಹುದು.
  7.  ರೋಗನಿರೋಧಕ ಔಷಧಿಗಳು, ಕೀಟನಾಶಕಗಳು ಹಾಗೂ ಕಳೆನಾಶಕಗಳು ಮಣ್ಣಿನಲ್ಲಿ ಸೇರಿ ಸಸ್ಯ ಬೇರುಗಳಿಗೆ ಸೇರಿಕೊಳ್ಳುತ್ತವೆ. ಇದು ಮಾನವನ ಶರೀರಕ್ಕೂ ಸೇರಿ ಆರೋಗ್ಯವನ್ನು ಹದಗೆಡಿಸಬಹುದು.
  8.  ವಿಷಕಾರಿ ಲೋಹಗಳು ಮಣ್ಣಿನಲ್ಲಿ ಸೇರುವುದರಿಂದ ಸೂಕ್ಷ್ಮಜೀವಿಗಳ ಉಳಿವಿಗೆ ತೊಂದರೆಯಾಗುತ್ತದೆ.
  9.  ಸತ್ತಪ್ರಾಣಿಗಳ ಕಳೇಬರ, ಮಾನವ ಮತ್ತು ಪ್ರಾಣಿಗಳ ಮಲಮೂತ್ರಗಳು, ಕೊಳೆತ ವಸ್ತುಗಳು ಹಾಗೂ ಹಳಸಿದ ಪದಾರ್ಥಗಳು ಮಣ್ಣಿನಲ್ಲಿ ಸೇರುವುದರಿಂದ ಸುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿರುತ್ತದೆ.
  10. ಜನರು ಎಸೆಯುವ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಕಪ್ಪುಗಳು, ಮಣ್ಣಿನಲ್ಲಿ ಕೊಳೆಯದೆ ಹಾಗೆ ಉಳಿದುಬಿಡುತ್ತವೆ. ಕೃಷಿ ಕಾರ್ಯ ಕೈಗೊಂಡ ಸಮಯದಲ್ಲಿ ಸಸ್ಯಗಳ ಬೇರುಗಳು ಹೆಚ್ಚು ಆಳಕ್ಕೆ ಇಳಿಯದಂತೆ ಈ ಪ್ಲಾಸ್ಟಿಕ್ ತಡೆಯುತ್ತದೆ. ಜೋರಾಗಿ ಗಾಳಿ ಬೀಸಿದರೆ ಫಲವತ್ತಾಗಿ ಬೆಳೆದ ಬೆಳೆಗಳು ಉದುರಿ ಬೀಳುತ್ತವೆ. ಇದರಿಂದ ಇಳುವರಿ ಕಡಿಮೆಯಾಗಿ ಆಹಾರದ ಅಭಾವ ಕಾಣಿಸಿಕೊಳ್ಳುತ್ತದೆ.

ಮಣ್ಣು ಮಾಲಿನ್ಯವನ್ನು ನಿಯಂತ್ರಿಸುವ ನಿವಾರಣೋಪಾಯಗಳು:

  1.  ಮಣ್ಣಿನ ಮಾಲಿನ್ಯವನ್ನು ತಡೆಯಬೇಕೆಂದರೆ ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಬೇಕು.
  2. ಜೈವಿಕ ಕಿಟನಾಶಕಗಳು ಹಾಗೂ ಜೈವಿಕ ಗೊಬ್ಬರಗಳನ್ನು ಬಳಸುವಂತೆ ರೈತರಿಗೆ ಮಾರ್ಗದರ್ಶನ ನೀಡಬೇಕು. ಆಗ ಇಳುವರಿ ಹೆಚ್ಚಾಗುತ್ತದೆ. ಮಣ್ಣಿನ ಮಾಲಿನ್ಯವು ಕಡಿಮೆಯಾಗುತ್ತದೆ.
  3. ಆಧುನಿಕ ಬೇಸಾಯ ಪದ್ಧತಿಯನ್ನು ನಿಲ್ಲಿಸಿ ಸಾವಯವ ಕೃಷಿ ಪದ್ಧತಿಯನ್ನು ಹಮ್ಮಿಕೊಳ್ಳಬೇಕು.
  4. ಸಾಮಾಜಿಕ ಅರಣ್ಣೀಕರಣ ರೈತರ ಹಾಗೂ ಸಾರ್ವಜನಿಕರ ಗುರಿಯಾಗಬೇಕು.
  5.   ಘನ ತ್ಯಾಜ್ಯವನ್ನು ಶುದ್ಧೀಕರಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿ ಮಣ್ಣಿನ ಮಾಲಿನ್ಯ ಕಡಿಮೆಯಾಗುತ್ತದೆ.
  6.  ಮಣ್ಣಿನ ಸವೆತವನ್ನು ಕಡಿಮೆ ಮಾಡಲು ಇಳಿಜಾರು ಕ್ರಮದಲ್ಲಿ ಕೃಷಿ ಕಾರ್ಯಗಳನ್ನು ಮಾಡಬೇಕು ನೀರು ಹರಿದು ಹೋಗದಂತೆ ಇಳಿಜಾರಿಗೆ ಅಡ್ಡಲಾಗಿ ಬದುಕುಗಳನ್ನು ನಿರ್ಮಿಸಬೇಕು.
  7.  ಕೈಗಾರಿಕಾ ವಲಯದ ಕೊಳಕು ನೀರು ಹಾಗೂ ನಗರಗಳ ಚರಂಡಿ ನೀರನ್ನು ಹೊಲಗಳ ಕಡೆಗೆ ಹರಿದು ಬರದಂತೆ ನಿಯಂತ್ರಣ ಮಾಡಬೇಕು.
  8.  ಹೊಲಗಳಲ್ಲಿ ಡಿ.ಡಿ.ಟಿಯನ್ನು ಬಳಸದಂತೆ ನಿಷೇಧ ಹೇರಬೇಕು.
  9.  ಜೋಳ, ಭತ್ತದ ಹೊಟ್ಟು, ಕಬ್ಬಿನ ಸಿಪ್ಪೆ, ತಂಬಾಕು, ಸೆಣಬು, ತೆಂಗಿನನಾರು ಸಿಪ್ಪೆ, ಕಬ್ಬಿನ ಸಿಪ್ಪೆ, ಮುಂತಾದವುಗಳನ್ನು ವ್ಯರ್ಥವಾಗಿ ಎಸೆಯುವ ಬದಲಾಗಿ ಕಾಗದ ಹಾಗೂ ರಟ್ಟು ತಯಾರಿಸಲು ಬಳಸಬೇಕು.
  10. ಪರಿಸರ ಕಾಳಜಿ ಪ್ರದರ್ಶನಗಳನ್ನು ಮಾಡುವುದರಿಂದ ರೈತರು ಅದರ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಉಪಸಂಹಾರ

ಮಣ್ಣಿನ ಮಾಲಿನ್ಯವು ಕೃಷಿ, ಆರೋಗ್ಯ ಮತ್ತು ಪರಿಸರದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುತ್ತದೆ. ರಸಾಯನಿಕಗಳ ಅತಿಯಾದ ಬಳಕೆ, ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ ಮತ್ತು ಕೈಗಾರಿಕಾ ಮಲಿನ ನೀರುಗಳು ಮಣ್ಣಿನ ಫಲವತ್ತತೆಯನ್ನು ಹದಗೆಡಿಸುತ್ತಿವೆ. ಇದನ್ನು ನಿಯಂತ್ರಿಸಲು ಸಾವಯವ ಕೃಷಿ, ಜೈವಿಕ ಗೊಬ್ಬರಗಳ ಬಳಕೆ ಹಾಗೂ ಸಾರ್ವಜನಿಕ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರೂ ಪರಿಸರದ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದರೆ ಮಾತ್ರ ಆರೋಗ್ಯಕರ ಮಣ್ಣು ಮತ್ತು ಸುರಕ್ಷಿತ ಭವಿಷ್ಯವನ್ನು ನಿರ್ಮಿಸಬಹುದು.

ಮಣ್ಣಿನ ಮಾಲಿನ್ಯದ ಕಾರಣಗಳು ಅಥವಾ ಮೂಲಗಳು

ಮಣ್ಣಿನ ಮಾಲಿನ್ಯದ ಕಾರಣಗಳು ಅಥವಾ ಮೂಲಗಳು

ಮಣ್ಣು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು ಮಾನವನ ಆಹಾರ, ವಾಸಸ್ಥಳ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಆಧಾರವಾಗಿದೆ. ಕೃಷಿ, ಕೈಗಾರಿಕೆ ಮತ್ತು ನಗರೀಕರಣದ ವೇಗವಾದ ಬೆಳವಣಿಗೆಯಿಂದ ಮಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀರುತ್ತಿದೆ. ಮಾನವ ನಿರ್ಮಿತ ಚಟುವಟಿಕೆಗಳಿಂದ ಮಣ್ಣಿನಲ್ಲಿ ವಿಷಪೂರಿತ ರಸಾಯನಿಕಗಳು ಸೇರಿ ಅದರ ಸಹಜ ಗುಣಗಳನ್ನು ಹಾಳುಮಾಡುತ್ತಿವೆ. ಮಣ್ಣಿನ ಮಾಲಿನ್ಯವು ಬೆಳೆಗಳ ಗುಣಮಟ್ಟ ಕುಗ್ಗಿಸುವುದರ ಜೊತೆಗೆ ಜೀವವೈವಿಧ್ಯತೆ ನಾಶಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಮಣ್ಣಿನ ಮಾಲಿನ್ಯದ ಕಾರಣಗಳು ಮತ್ತು ಪರಿಣಾಮಗಳನ್ನು ತಿಳಿದುಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಮಣ್ಣಿನ ಮಾಲಿನ್ಯದ ಕಾರಣಗಳು ಅಥವಾ ಮೂಲಗಳು:

1. ಕೈಗಾರಿಕೆಗಳ ತ್ಯಾಜ್ಯಗಳು: ರಸಾಯನಿಕಗಳಾದ ಪಾದರಸ, ತಾಮ್ರ, ಸೀಸ, ಸತು, ಕಾಡ್ಮಿಯಂ ,ಸೈನೆಡ್‌ಗಳು, ಕ್ರೋಮೇಟ್‌ಗಳು, ಆಮ್ಲಗಳು, ಆಲ್ಕಲಿಸ್ ಹಾಗೂ ಜೈವಿಕ ವಸ್ತುಗಳು ಮಣ್ಣಿನಲ್ಲಿ ಸೇರಿ ಮಾಲಿನ್ಯಗೊಳಿಸುತ್ತವೆ. ಕೈಗಾರಿಕೆಗಳಲ್ಲಿ ಬಳಸುವ ಕಚ್ಚಾವಸ್ತುಗಳಲ್ಲಿ ಶೇಕಡ 50ರಷ್ಟು ವ್ಯರ್ಥವಾದ ಪದಾರ್ಥಗಳಿರುತ್ತವೆ. ಅದರಲ್ಲಿ ಶೇ. 15 ರಷ್ಟು ವಿಷಪೂರಿತವಾಗಿರುತ್ತದೆ. ಇದರ ಜೊತೆಗೆ ಗಣಿಗಾರಿಕೆಯಿಂದಲೂ ಸಾಕಷ್ಟು ವ್ಯರ್ಥ ಪದಾರ್ಥಗಳು ಉತ್ಪತ್ತಿಯಾಗುವುದರ ಮೂಲಕ ಮಣ್ಣಿನ ಮಾಲಿನ್ಯತೆಗೆ ಕಾರಣವಾಗುತ್ತದೆ.

2. ಕೀಟನಾಶಕಗಳು:  ಆಧುನಿಕ ಬೇಸಾಯ ಪದ್ಧತಿಯಲ್ಲಿ ಫಸಲುಗಳನ್ನು ಬೇಗ ಬೇಗ ಪಡೆಯಬೇಕೆನ್ನುವ ಆಸೆಯಿಂದ ಕಾಯಿಗಳು ದಪ್ಪವಾಗಿ ಇರಬೇಕೆಂಬ ಕಾರಣಗಳಿಂದ  ರೈತರು ಕೀಟಗಳ ನಿಯಂತ್ರಣಕ್ಕಾಗಿ ಔಷಧಿಗಳು ಹಾಗೂ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇದರಿಂದ ಎಲ್ಲಾ ಬಗೆಯ ಕೀಟಗಳು ನಾಶವಾಗಿ ಜೀವವೈವಿಧ್ಯತೆಗಳು ನಾಶವಾಗುತ್ತಿವೆ. ಕೆಲವು ಔಷಧಿಗಳು ಹಾಳಾಗದೆ ಆಹಾರದ ಸರಪಳಿಯಲ್ಲಿ ಅಂಟಿಕೊಂಡು ಒಂದು ಬೆಳೆಯಿಂದ ಮತ್ತೊಂದು ಬೆಳೆಗೆ ಸಾಗಿಸಲ್ಪಡುವುದರಿಂದ ಮಾನವನ ಆರೋಗ್ಯದ ಮೇಲೆ ಪರಿಣಾಮಗಳನ್ನುಂಟು ಮಾಡುತ್ತದೆ. ರೈತರು ಹೆಚ್ಚಾಗಿ ಡಿಡಿಟಿಯನ್ನು ಬಳಸುವುದರಿಂದ ಅದು ಎಲೆಯ ಕಾಂಡದಲ್ಲಿ ಹಾಗೆ ಉಳಿದುಕೊಳ್ಳುವುದು. ಮಳೆಗಾಲದಲ್ಲಿ ಈ ರಸಾಯನಿಕ ಪದಾರ್ಥವು ಮಣ್ಣಿನಲ್ಲಿ ಸೇರುವುದರಿಂದ ಮಣ್ಣು ಮಲಿನವಾಗುತ್ತದೆ.

3. ತಿರಸ್ಕರಿಸಲ್ಪಟ್ಟ ವಸ್ತುಗಳು:  ಬೇಡವಾದ ವಸ್ತುಗಳಾದ ಕಾಂಕ್ರೀಟ್, ಡಾಂಬರ್, ಚರ್ಮ, ಕ್ಯಾನ್‌ಗಳು, ಪ್ಲಾಸ್ಟಿಕ್ ಗ್ಲಾಸ್‌, ಬಿಸಾಕಿದ ಆಹಾರ ಪದಾರ್ಥ, ಕಾಗದ ಮತ್ತು ಇತರ ವಸ್ತುಗಳು ಮಣ್ಣಿನೊಳಗೆ ಬೆರೆತು ಮಣ್ಣಿನ ಮಲಿನತೆಯನ್ನು ಉಂಟುಮಾಡುತ್ತವೆ.

4. ಆಸ್ಪತ್ರೆ ತ್ಯಾಜ್ಯಗಳು:  ಇಂದು ಭಾರತದಲ್ಲಿ ಆಸ್ಪತ್ರೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಆಸ್ಪತ್ರೆಯ ತ್ಯಾಜ್ಯ ವಸ್ತುಗಳಾದ ಸಿರಿಂಜ್, ಕೈಗೆ ಹಾಕುವ ಗ್ಲೌಸ್, ಔಷಧಿ ಬಾಟಲಿಗಳು, ನಿರುಪಯುಕ್ತ ಪದಾರ್ಥಗಳು, ಶಸ್ತ್ರಚಿಕಿತ್ಸೆಯ ನಂತರ ಕಲೆಹಾಕಿದ ಮಲಿನಕಾರಕ ವಸ್ತುಗಳು ಮುಂತಾದವುಗಳನ್ನು ಇಂದು ರಾಶಿ ರಾಶಿಯಾಗಿ ಎಲ್ಲೆಂದರಲ್ಲಿ ಗುಡ್ಡೆ ಹಾಕಲಾಗುತ್ತದೆ. ಮಳೆಗಾಲದಲ್ಲಿ ಇದರಲ್ಲಿನ ದ್ರವ ಪದಾರ್ಥಗಳು ನೀರಿನಲ್ಲಿ ಮತ್ತು ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ. ಆಗ ಮಣ್ಣು ಮಲಿನವಾಗಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

5. ಜೈವಿಕ ಮೂಲಗಳು:  ಮಾನವ ಮತ್ತು ಪ್ರಾಣಿಗಳ ಮಲಮೂತ್ರಗಳು, ಕಸದ ಕೊಳೆತ ಪದಾರ್ಥಗಳು, ಮನೆಗಳಿಂದ ಹೊರ ಹಾಕಿದ ತ್ಯಾಜ್ಯಗಳು, ಮಣ್ಣಿನಲ್ಲಿ ಸೇರಿಕೊಂಡು ಮಣ್ಣುಮಲಿನವಾಗುವುದಕ್ಕೆ ಕಾರಣವಾಗುತ್ತದೆ.

6. ಮಣ್ಣಿನ ಸವೆತ : ವೇಗವಾಗಿ ಹರಿಯುವ ನೀರು, ಬೀಸುವ ಗಾಳಿ, ಹಿಮ, ಸಮುದ್ರದ ಅಲೆಗಳು ಮುಂತಾದ ನೈಸರ್ಗಿಕ ಕ್ರಿಯೆಗಳಿಂದ ಮಣ್ಣು ಸವಕಳಿ ಹೊಂದುತ್ತದೆ. ಮೇಲ್ಪದರು ಕೊಚ್ಚಿ ಹೋದ ನಂತರ ಕೆಳಗಿನ ಮಣ್ಣಿನ ಪದರು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಇದರ ಜೊತೆಗೆ ಧನ ಕರುಗಳನ್ನು ಅತಿಯಾಗಿ ಮೇಯಿಸುವುದು, ವ್ಯವಸಾಯ ಕ್ಷೇತ್ರದ ವಿಸ್ತಾರ ಮುಂತಾದ ಕಾರಣಗಳಿಂದ ಮಣ್ಣು ಮಾಲಿನ್ಯವಾಗುತ್ತದೆ. ಭಾರತದ ಒಟ್ಟು ಭೂಪ್ರದೇಶದ 28ರಲ್ಲಿ ಶೇಕಡ 15ರಷ್ಟು ಮಣ್ಣು ಹಾಳಾಗಿದೆ. ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 53000 ದಶಲಕ್ಷ ಟನ್ ಮಣ್ಣನ್ನು ವಿವಿಧ ಕಾರಣಗಳಿಂದಾಗಿ ಸಾಗಿಸುವುದರಿಂದ ಉತ್ಪಾದನಾ ಮಟ್ಟ ಕುಂಠಿತವಾಗುತ್ತದೆ.

7. ಜೀವಿ ಪರಿಸರ ವ್ಯವಸ್ಥೆಯ ನಾಶ: ಸಾಮಾನ್ಯವಾಗಿ ಒಂದು ಹೆಕ್ಟೇರ್‌ ಪ್ರದೇಶದಲ್ಲಿ 300 ದಶಲಕ್ಷ ಜೀವಿಗಳು ವಾಸಿಸುತ್ತವೆ ಎಂದು ಹೇಳಲಾಗುತ್ತಿದೆ. ಇಲಿ, ಹೆಗ್ಗಣ, ಕೀಟಗಳು, ಹಾವು, ಜೇಡ, ಪ್ರೋಟೋಜೋವ್‌ ಮುಂತಾದ ಹಲವು ಜೀವಿಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಆಧುನಿಕ ಬೇಸಾಯ ಕ್ರಮದಿಂದ ರಸಾಯನಿಕ ಬಳಕೆ ಮಾಡುತ್ತಿರುವುದು ಈ ಜೈವಿಕ ವ್ಯವಸ್ಥೆ ಹಾಳಾಗಲು ಕಾರಣವಾಗಿದೆ.

8. ಜನಸಂಖ್ಯಾ ಬೆಳವಣಿಗೆ: ಜನಸಂಖ್ಯೆ ವೇಗವಾಗಿ ಬೆಳೆದಂತೆ ಅವನ ಅಗತ್ಯತೆಗಳು ಸಹ ಹೆಚ್ಚಾಗುತ್ತವೆ. ವಸತಿಗಾಗಿ ಕಾಡುಗಳನ್ನು ಕಡೆಯುವುದು, ಕೃಷಿ ಭೂಮಿಯನ್ನು ವಿಸ್ತರಿಸುವುದು, ಅಣೆಕಟ್ಟುಗಳನ್ನು ನಿರ್ಮಿಸುವುದು, ಸೇತುವೆಗಳ ನಿರ್ಮಾಣ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಅತಿ ಹೆಚ್ಚು ಭೂಮಿಯನ್ನು ಬಳಸಿಕೊಳ್ಳುತ್ತಾನೆ. ಇದರಿಂದ ಭೂಮಿಗೆ ಧಕ್ಕೆ ಉಂಟಾಗುತ್ತದೆ.

9. ಆಮ್ಲೀಕರಣ: ಮಿತಿಮೀರಿದ ಆಮ್ಲೀಕರಣ ಗುಣಗಳುಳ್ಳ ರಸಗೊಬ್ಬರಗಳ ಬಳಕೆ ಮತ್ತು ಆಮ್ಲ ಮಳೆಗಳ ಕಾರಣದಿಂದ ಮಣ್ಣಿನಲ್ಲಿ ಆಮ್ಲಿಯತೆ ಅಧಿಕಗೊಳ್ಳುತ್ತದೆ. ಇದರಿಂದ ಹುಳಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ.

10. ಮಣ್ಣಿನ ಮೇಲ್ಪದರು ಗಟ್ಟಿಯಾಗುವುದು: ಭೂಮಿಯ ಮೇಲ್ಪದರು ಗಟ್ಟಿಯಾದರೆ ಕೃಷಿಕಾರ್ಯಕ್ಕೆ ತೊಂದರೆಯಾಗುತ್ತದೆ. ಬೀಜಗಳು ಮೊಳಕೆಯೊಡೆದು ಸಸಿಗಳು ಹೊರಬರಲು ಗಟ್ಟಿಮಣ್ಣು ತಡೆಯೊಡ್ಡುತ್ತದೆ. ಮಣ್ಣಿನಲ್ಲಿ ನೀರು ಇಂಗಲು ಸಾಧ್ಯವಾಗುವುದಿಲ್ಲ. ನೀರು ಇಂಗುವಿಕೆ ಕಡಿಮೆಯಾದಾಗ ನೀರಿನ ಹರಿಯುವ ಪ್ರಮಾಣ ಹೆಚ್ಚಾಗಿ ಸವಕಳಿಯ ಪ್ರಮಾಣವು ಹೆಚ್ಚುತ್ತದೆ.

11. ಭೂಕುಸಿತಗಳು: ಗುಡ್ಡಗಳ ಇಳಿಜಾರು ಭಾಗದಲ್ಲಿ ಅರಣ್ಯಗಳು ಹಾಗೂ ಸಸ್ಯಗಳು ಅಲ್ಲಿನ ಮಣ್ಣನ್ನು ಗಟ್ಟಿಯಾಗಿ ಹಿಡಿದಿಡುತ್ತವೆ. ಆದರೆ ಸಸ್ಯಗಳು ಹಾಗೂ ಅರಣ್ಯಗಳು ನಾಶವಾದಂತೆ ಅಲ್ಲಿನ ಮಣ್ಣು ಸಡಿಲಗೊಳ್ಳುತ್ತದೆ. ವಿಪರೀತ ಮಳೆ ಬಂದರೆ ಇಂತಹ ಭೂಪ್ರದೇಶಗಳು ಕುಸಿಯಲು ಆರಂಭಿಸುತ್ತವೆ.  ಇದನ್ನೇ ಭೂ ಕುಸಿತ ಎಂದು ಕರೆಯುವರು. ಗಣಿಗಾರಿಕೆ ಹಾಗೂ ರೈಲು ಮಾರ್ಗಗಳನ್ನು ನಿರ್ಮಾಣ ಮಾಡುವಾಗ ಭೂಕುಸಿತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಉಪಸಂಹಾರ

ಮಣ್ಣಿನ ಮಾಲಿನ್ಯವು ಕೃಷಿ ಉತ್ಪಾದನೆ, ಜೀವವೈವಿಧ್ಯತೆ ಮತ್ತು ಮಾನವ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತಿಯಾದ ರಸಾಯನಿಕ ಬಳಕೆ, ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ ಮತ್ತು ಅರಣ್ಯ ನಾಶವನ್ನು ತಡೆಯುವುದು ಅತ್ಯಂತ ಅಗತ್ಯವಾಗಿದೆ. ಪರಿಸರ ಸ್ನೇಹಿ ಕೃಷಿ ವಿಧಾನಗಳು, ತ್ಯಾಜ್ಯ ವಿಂಗಡಣೆ ಮತ್ತು ಮಣ್ಣಿನ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರೂ ಒಟ್ಟಾಗಿ ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಮಣ್ಣಿನ ಮಾಲಿನ್ಯವನ್ನು ನಿಯಂತ್ರಿಸಬಹುದು. ಭವಿಷ್ಯದ ತಲೆಮಾರಿಗಾಗಿ ಮಣ್ಣನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಜಲಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಜಲಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳು

ನೀರು ಜೀವದ ಮೂಲವಾಗಿದ್ದು ಮಾನವ ಹಾಗೂ ಪ್ರಕೃತಿಯ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದೆ. ಆದರೆ ಮಾನವ ಕ್ರಿಯೆಗಳ ಪರಿಣಾಮವಾಗಿ ಇಂದು ಜಲಮೂಲಗಳು ಭಾರೀ ಪ್ರಮಾಣದಲ್ಲಿ ಮಾಲಿನ್ಯಗೊಳ್ಳುತ್ತಿವೆ.

ಜಲಮಾಲಿನ್ಯದ ಪರಿಣಾಮಗಳು: (Results of Water Pollution)

  1. ಜಲಮಾಲಿನ್ಯದಿಂದಾಗಿ ಹಲವಾರು ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಉದಾ:  ಕಾಲರಾ, ಟೈಪಾಯಿಡ್‌, ಅತಿಸಾರ, ಅಮಶಂಕೆ, ಕಾಮಾಲೆ, ಡೆಂಗ್ಯೂ, ಚಿಕನ್ ಗುನ್ಯಾ, ಕರೋನಾ ಮೊದಲಾದವುಗಳು.
  2. 1955ರಲ್ಲಿ ದೆಹಲಿಯ ನಿವಾಸಗಳು ಕೊಳಚೆ ನೀರಿನ ಮಾಲಿನ್ಯದಿಂದ ಸುಮಾರು 35000 ಜನರು ಕಾಮಾಲೆ ರೋಗಕ್ಕೆ ತುತ್ತಾದರು.
  3. ಪ್ರತಿ ವರ್ಷ ಸಮುದ್ರಕ್ಕೆ ಸೇರುವ ತೈಲದಿಂದ ನೀರು ಮಾಲಿನ್ಯಕಾರಕವಾಗುವುದರಿಂದ ಸಸ್ಯಗಳು ಹಾಗೂ ಮೀನುಗಳು ಸಾವನ್ನಪ್ಪುತ್ತವೆ. ಪ್ರತಿವರ್ಷ 50,000 ದಿಂದ 2,50,000ದಷ್ಟು ಪಕ್ಷಿಗಳು ಸಾವನ್ನಪ್ಪುತ್ತವೆ ಎಂದು ವರದಿಯಾಗಿದೆ.
  4. ಪ್ರತಿ ವರ್ಷ ಸುಮಾರು 10000 ಜನರು ಕೀಟನಾಶಕಗಳ ಪ್ರಭಾವದಿಂದ ಸಾವಿಗೀಡಾಗುತ್ತಾರೆ ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
  5. ಮಲಿನಗೊಂಡ ಸರೋವರ, ನದಿ, ಕೆರೆ ಹಾಗೂ ಅಂತರ್ಜಲದ ನೀರನ್ನು ಬಳಸುವುದರಿಂದ ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ.
  6. ಗಂಗಾ ನದಿಯ ದಂಡೆಯ ರುದ್ರ ಭೂಮಿಗಳಿಂದ ದಿನವೊಂದಕ್ಕೆ 100-120 ಅರೆಬೆಂದ ಶವಗಳು ಹಾಗೂ ಗಂಗಾ ನದಿಯ ಸಮೀಪವಿರುವ ತೈಲ ಕೇಂದ್ರ ಸಂರಕ್ಷಣಾ ಕೇಂದ್ರವೊಂದರಿಂದ ಹರಿದು ಬಂದ ವ್ಯರ್ಥ ವಸ್ತುವಿನಿಂದ 1968ರಲ್ಲಿ ಮಾಂಘೈರ್ ನದಿ ಹೊತ್ತಿ ಉರಿಯಿತು.
  7. ವಿವಿಧ ಪ್ರಕಾರದ ಕೀಟನಾಶಕಗಳು ಹಾಗೂ ಕ್ರಿಮಿನಾಶಕಗಳು ಆಧುನಿಕ ವ್ಯವಸಾಯ ಪದ್ಧತಿಗೆ ಬಳಕೆಯಾಗುತ್ತಿರುವುದರಿಂದ ಇವುಗಳಿಂದ ಹೊರಹೊಮ್ಮುವ ವಿಷಕಾರಿ ರಸಾಯನಿಕಗಳು ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತವೆ. ನರಮಂಡಲದ ತೊಂದರೆ, ಲಿವರ್ ಹಾಗೂ ಮೂತ್ರ ಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
  8. ಸೀಸ ಒಂದು ವಿಷಯುಕ್ತವಾದ ರಸಾಯನಿಕವಾಗಿದ್ದು ಕೈಗಾರಿಕಾ ತ್ಯಾಜ್ಯಗಳ ಮೂಲಕ ನದಿಯ ನೀರನ್ನು ಸೇರಿಕೊಳ್ಳುತ್ತದೆ. ಇದರಿಂದ ಅನೀಮಿಯ ರಕ್ತಹೀನತೆಯಂತಹ ಖಾಯಿಲೆಗಳು ಬರುತ್ತವೆ. ದೇಹದಲ್ಲಿ ಸೀಸದ ಪ್ರಮಾಣ ಹೆಚ್ಚಾದರೆ ನರಮಂಡಲದ ಕಾಯಿಲೆಯಿಂದಾಗಿ ಪಾರ್ಶ್ವವಾಯು ಪೀಡಿತರಾಗುವ ಸಾಧ್ಯತೆ ಹೆಚ್ಚು. ಈ ರೀತಿ ಪಾಶ್ವ ವಾಯುವಿಗೆ ʻʻಲೆಡ್‌ಪಾಲ್ಸಿʼʼ ಎಂದು ಕರೆಯುವರು.
  9. ದೇಹದಲ್ಲಿ ಕ್ಲೋರೈಡ್ ಪ್ರಮಾಣ ಹೆಚ್ಚಾದರೆ ಹಲ್ಲಿನ ವಿರೂಪತೆ, ಮೂಳೆಗಳು ಬಿರುಸು ಹಾಗೂ ಗಡಸಾಗುವುದು, ಕೀಲು ನೋವು ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ. ಇದರ ಪರಿಣಾಮದಿಂದಾಗಿ ಫ್ಲೋರೋಸಿಸ್ ಎಂಬ ಕಾಯಿಲೆ ಕಾಣಿಸಿಕೊಳ್ಳುತ್ತದೆ.
  10. ನೀರಿನ ವಿಕಿರಣ ಮಾಲಿನ್ಯದಿಂದ ಥೈರೊಯ್ಡ್ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕ್ಯಾನ್ಸರ್‌ಗಳು ಬರುತ್ತವೆ.
  11. ರಸಾಯನಿಕ ಗೊಬ್ಬರಗಳ ಬಳಕೆಯಿಂದ ನೀರಿನಲ್ಲಿ ರಸಾಯನಿಕ ನೈಟ್ರೇಟ್ ಸೇರಿಕೊಳ್ಳುತ್ತದೆ. ಇದರಿಂದ ಮಕ್ಕಳಲ್ಲಿ ನೀಲಿ ಶಿಶು ಕಾಯಿಲೆ ಕಾಣಿಸಿಕೊಳ್ಳುತ್ತದೆ.
  12. ಅರ್ಸೆನಿಕ್‌ ಒಂದು ವಿಷಕಾರಿ ರಸಾಯನಿಕವಾಗಿದೆ. ಇದರಿಂದ ಕಪ್ಪು ಪಾದರೋಗ ಬರುತ್ತದೆ. ಕೀಟನಾಶಕಗಳು ನೀರಿನಲ್ಲಿ ಸೇರಿದಾಗ ಅದರ ಜೊತೆಗೆ ಅರ್ಸೆನಿಕ್ ಸಹ ನೀರಿನಲ್ಲಿ ಸೇರಿಕೊಳ್ಳುತ್ತದೆ.
  13. ತುಂಗಭದ್ರ ನದಿಯ ದಡದಲ್ಲಿರುವ ಕಾರ್ಖಾನೆಯಿಂದ ಹೊರ ಸೂಸಲ್ಪಟ್ಟ ನೀರು ತುಂಗಭದ್ರ ನದಿಯನ್ನು ಸೇರಿತು. ಅಲ್ಲಿನ ನಲವಾಗಲು ಎಂಬ ಗ್ರಾಮದ ಜನರು ನದಿಯ ನೀರನ್ನು ಸೇವಿಸಿದಾಗ ಅವರಿಗೆ ಯಕೃತ್ತಿನ ಕಾಯಿಲೆ, ಕಣ್ಣು ಉರಿ, ಗಂಟಲು ಉರಿ, ಚರ್ಮರೋಗ, ಎದೆ ಉರಿ, ಕೆಮ್ಮು ಮುಂತಾದ ರೋಗಗಳು ಕಾಣಿಸಿಕೊಂಡವು.  ಹರಿಹರದ ಭಾಗದ 4 ಹಳ್ಳಿಗಳ 40,000 ಜನ ಭದ್ರಾವತಿಯ ಭದ್ರಾ ನದಿ ದಂಡೆಯ 9 ಹಳ್ಳಿಯ 13,000 ಜನ ತೀವ್ರತರವಾದ ಹಲವು ಕಾಯಿಲೆಗಳಿಂದ ಇಂದಿಗೂ ಬಳಲುತ್ತಿದ್ದಾರೆ.
  14. ಭಾರವಾದ ಲೋಹಗಳಾದ ಪಾದರಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದ ವಿಷಕಾರಕವಾದ ರಸಾಯನಿಕಗಳು ಮೀನಮಾಟ, ಇಟಾಯಿ ಇಟಾಯಿ ಎಂಬ ಹೊಸ ಹೊಸ ಕಾಯಿಲೆಗಳಿಗೆ ಕಾರಣವಾಗುತ್ತಿವೆ.

ರೋಗ

ಜೀವಿ

ರೋಗಲಕ್ಷಣ

1

ಕಾಲಾರಾ

ಬ್ಯಾಕ್ಟೀರಿಯಾ

 ತೀವ್ರ ವಾಂತಿ ಭೇದಿ ನಿರ್ಜಲೀಕರಣ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಾಪಾಯ

2

 ಟೈಪಾಯಿಡ್‌

 ಬ್ಯಾಕ್ಟೀರಿಯ

 ಕರುಳು ಬೇನೆ ಚಿಕಿತ್ಸೆ ಬಹಳ ಮುಖ್ಯ

3

 ಹೆಪಾಟೈಟಸ್‌

 ವೈರಸ್

 ಹಳದಿ ಕಾಮಾಲೆ ಚರ್ಮ ಕಾಯಿಲೆ ಯಕೃತ್ ಊತ ವಾಂತಿ ಹೊಟ್ಟೆ ನೋವು

4

ಅತಿಸಾರ

 ಬ್ಯಾಕ್ಟೀರಿಯಾ

 ತೀವ್ರವಂತಿ ಭೇದಿ ಅತಿಸಾರ ನಿರ್ಜಲೀಕರಣ

5

ಅಮಿಬಿಕ್‌ ಅತಿಸಾರ 

 ಪ್ರೋಟೋಜೋವಾ

ಭೇದಿ ಬಹು ದಿನಗಳವರೆಗೆ

ಜಲ ಮಾಲಿನ್ಯದ ನಿವಾರಣೋಪಾಯಗಳು:

  1.  ನದಿ ತೀರದಲ್ಲಿ ಬಫರ್ ವಲಯಗಳನ್ನು ಸ್ಥಾಪಿಸುವುದು
  2.  ಚರಂಡಿಯ ನೀರು ನದಿ, ಸರೋವರ, ಕೊಳ, ಕೆರೆ ಹಾಗೂ ಹೊಂಡಗಳಿಗೆ ಹರಿದು ಹೋಗದಂತೆ ನಿಯಂತ್ರಿಸಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು.
  3.  ಚರಂಡಿ ನೀರು ಹಾಗೂ ಕೈಗಾರಿಕಾ ತ್ಯಾಜ್ಯ ನೀರನ್ನು ನದಿ ನೀರಿಗೆ ಸೇರಿಸುವ ಮುಂಚೆ ಸಂಸ್ಕರಿಸಬೇಕು.
  4.  ಅಣು ವಿದ್ಯುತ್ ಹಾಗೂ ಥರ್ಮಲ್ ವಿದ್ಯುತ್ ಸ್ಥಾವರಗಳಿಂದ ಬಿಡುವ ಬಿಸಿ ನೀರನ್ನು ತಂಪಾಗಿಸಿ ನಂತರ ಬಿಡಬೇಕು.
  5.  ಧಾರ್ಮಿಕ ಹಾಗೂ ಮೂಢನಂಬಿಕೆಗೆ ಒಳಗಾಗಿ ಹೆಣಗಳನ್ನು ಹಾಗೂ ಅವುಗಳ ಬಟ್ಟೆಗಳನ್ನು ನದಿಗಳಲ್ಲಿ ಬಿಡುವುದನ್ನು ತಡೆಗಟ್ಟಬೇಕು.
  6.  ಕೆರೆ, ಹೊಳೆಗಳು, ಹೊಂಡಗಳು ಹಾಗೂ ನದಿಗಳಲ್ಲಿ ದನ ಕರುಗಳನ್ನು ಈಜಲು ಬಿಡುವುದು ಮತ್ತು ಅವುಗಳ ಮೈತೊಳೆಯುವುದನ್ನು ನಿಯಂತ್ರಿಸಬೇಕು.
  7.  ಕೃಷಿ ಭೂಮಿಗಳಿಗೆ ಅತಿಯಾದ ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಉಪಯೋಗಿಸುವುದನ್ನು ತಡೆಯಬೇಕು.
  8.  ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಲಮೂತ್ರಗಳನ್ನು ಶುದ್ಧೀಕರಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು.
  9.  ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜನರು ಬಯಲು ಶೌಚಾಲಯವನ್ನು ಬಳಸುತ್ತಿದ್ದಾರೆ. ಹಾಗಾಗಿ ಅಧಿಕ ಸಂಖ್ಯೆಯಲ್ಲಿ ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಸಾರ್ವಜನಿಕರಲ್ಲಿ ಸ್ಥಳಗಳಲ್ಲಿ ನೈರ್ಮಲ್ಯವನ್ನು ಕಾಪಾಡಬೇಕು.
  10.  ನಾಯಿ, ನರಿ, ಪ್ರಾಣಿಗಳು, ದನ ಕರುಗಳು ಹಾಗೂ ಮುಂತಾದವುಗಳ ಸತ್ತ ದೇಹಗಳನ್ನು ನದಿಯಲ್ಲಿ ಎಸೆಯದಂತೆ ನಿರ್ಬಂಧ ಹೇರಬೇಕು.
  11.  ನೀರಿನ ಬಳಕೆಯನ್ನು ಇತಿಮಿತಿಗೊಳಿಸಬೇಕು.
  12. ಜಲ ಮಾಲಿನ್ಯಕ್ಕೆ ಕಾರಣವಾಗುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
  13.  ಪ್ರವಾಸ ಹಾಗೂ ನದಿ ನೀರಿನಲ್ಲಿ ಈಜಲು ಹೋದಾಗ ತಿಂದು ಬಿಸಾಕಿದ ಪದಾರ್ಥಗಳು ರಟ್ಟು, ಪ್ಲಾಸ್ಟಿಕ್ ಬಾಟಲಿಗಳು, ಟೀ ಕಪ್ಪುಗಳು, ಊಟದ ತಟ್ಟೆಗಳು, ಮಾಂಸದ ತುಂಡುಗಳನ್ನು ನದಿಗಳಲ್ಲಿ ಎಸೆಯದಂತೆ ಕ್ರಮ ಕೈಗೊಳ್ಳಬೇಕು.
  14.  ಸಮುದ್ರದಲ್ಲಿ ಹಡಗುಗಳಿಂದ ತೈಲ ಸೋರಿಕೆಯನ್ನು ತಡೆಗಟ್ಟುವುದು.
  15.  ಜಲ ಮಾಲಿನ್ಯವನ್ನು ನಿಯಂತ್ರಿಸಲು 1974ರಲ್ಲಿ ಜಲಮಾಲಿನ್ಯ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲಾಗಿದೆ.

ಉಪಸಂಹಾರ

ಜಲಮಾಲಿನ್ಯವು ಮಾನವ ಜೀವನ, ಪ್ರಾಣಿ–ಪಕ್ಷಿಗಳು ಹಾಗೂ ಸಂಪೂರ್ಣ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಶುದ್ಧ ನೀರಿನಿಂದ ಅನೇಕ ಮಾರಕ ರೋಗಗಳು ಹರಡುತ್ತಿದ್ದು ಜನಜೀವನ ಸಂಕಷ್ಟಕ್ಕೆ ಒಳಗಾಗುತ್ತಿದೆ. ಜಲಮೂಲಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ. ಜಲಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ. ಶುದ್ಧ ನೀರನ್ನು ಉಳಿಸಿಕೊಳ್ಳುವುದೇ ಭವಿಷ್ಯದ ಆರೋಗ್ಯಕರ ಸಮಾಜದ ಮೂಲಾಧಾರವಾಗಿದೆ.

ಜಲಮಾಲಿನ್ಯದ ಮೂಲಗಳು ಅಥವಾ ಕಾರಣಗಳು

ಜಲಮಾಲಿನ್ಯದ ಮೂಲಗಳು ಅಥವಾ ಕಾರಣಗಳು

ಮಣ್ಣಿನ ಸವಕಳಿ, ಭೂಕಂಪ, ಭೂಕುಸಿತ, ಜ್ವಾಲಾಮುಖಿ, ಖನಿಜಗಳು, ಸಸ್ಯಗಳು, ಪ್ರಾಣಿ ಹಾಗೂ ಸಸ್ಯಗಳ ಕೊಳೆತ ಪದಾರ್ಥಗಳು, ನದಿ, ಸಾಗರ ಹಾಗೂ ಸಮುದ್ರಗಳಲ್ಲಿ ಸೇರಿ ಜಲಮಾಲಿನ್ಯವನ್ನು ಉಂಟುಮಾಡುತ್ತವೆ. ನಿಕ್ಕಲ್‌, ಸೀಸ, ಕೋಬಾಲ್ಡ್‌ ಹಾಗೂ ಪಾದರಸ ಸಹ ಜಲಮಾಲಿನ್ಯಕ್ಕೆ ಕಾರಣಗಳಾಗಿವೆ. ಜಲಮಾಲಿನ್ಯದ ಮೂಲಗಳು ಅಥವಾ ಕಾರಣಗಳು. ಈ ಕೆಳಗಿನಂತಿವೆ.

1. ಸಮುದಾಯ ಮಾಲಿನ್ಯಗಳು: ಮಾನವ ಸಮುದಾಯದ ಹೇಯ ಕೃತ್ಯದಿಂದ ಜಲಮಾಲಿನ್ಯ ಹೆಚ್ಚು ಕಂಡುಬರುತ್ತದೆ. ಮನೆಗಳಿಂದ ಹೊರಬರುವ ತ್ಯಾಜ್ಯ, ವಾಣಿಜ್ಯಕೈಗಾರಿಕಾ ತ್ಯಾಜ್ಯಗಳು, ಸಾರ್ವಜನಿಕ ಚರಂಡಿನೀರು, ಈ ಚರಂಡಿಯಲ್ಲಿ ಮಾನವ ಮತ್ತು ಪ್ರಾಣಿಗಳ ಮಲಮೂತ್ರಗಳು, ಆಹಾರದ ಉಳಿಯುವಿಕೆ, ಕೊಳೆಯುವಿಕೆ, ಸಾಬೂನು ನೀರು ಸ್ನಾನದಿಂದ ಬಳಸಿದ ನೀರು, ಬಟ್ಟೆಯನ್ನು ತೊಳೆದ ನೀರು ಮುಂತಾದವುಗಳು ನದಿ, ಹಳ್ಳ,ಕೆರೆ, ಸರೋವರ ಹಾಗೂ ಸಾಗರವನ್ನು ಸೇರಿ ಜಲಮಲಿನಗೊಳಿಸುವುದು.

2. ನಗರ ಹಾಗೂ ಪಟ್ಟಣಗಳ ನೀರು:  ಇಂದು ನಗರ ಹಾಗೂ ಪಟ್ಟಣಗಳು ದಿನೇ ದಿನೇ ಬೆಳೆಯುತ್ತಿರುವುದರಿಂದ ಆ ಪ್ರದೇಶಗಳು ಹೆಚ್ಚು ಕೊಳಗೇರಿಗಳಾಗಿರುತ್ತವೆ. ಹೋಟೆಲ್‌ಗಳು, ಅಂಗಡಿಗಳು, ಗ್ಯಾರೇಜ್, ಮೀನುಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳು ಮುಂತಾದವುಗಳಿಂದ ಸಂಗ್ರಹ ಗೊಂಡ ಚಿಂದಿ ಕಾಗದ, ಬಟ್ಟೆ, ಪ್ಲಾಸ್ಟಿಕ್, ಮೀನು ಹಾಗೂ ತರಕಾರಿಗಳ ತ್ಯಾಜ್ಯ ವಸ್ತುಗಳು ಹಾಗೂ ಪ್ರಾಣಿಗಳ ಮಾಂಸವನ್ನು ಕತ್ತರಿಸಿದ ನೀರು ಮುಂತಾದವುಗಳು ಚರಂಡಿ ಅಥವಾ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಜಲಮಾಲಿನ್ಯಕ್ಕೆ ಕಾರಣವಾಗುತ್ತದೆ.

3. ಕೈಗಾರಿಕೆಗಳ ಮಾಲಿನ್ಯ:  ದೇಶದಾದ್ಯಂತ ಸಾವಿರಾರು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಈ ಕೈಗಾರಿಕೆಗಳು ಸಾಮಾನ್ಯವಾಗಿ ನದಿಗಳ ದಂಡೆಯ ಮೇಲೆ ನಿರ್ಮಾಣವಾದ ಕಾರಣ ಅವುಗಳು ಹೊರಬಿಡುವ ತ್ಯಾಜ್ಯಗಳು ನದಿಗಳ ನೀರಿನಲ್ಲಿ  ಸೇರಿಹೋಗುತ್ತವೆ. ಉದಾ:  ಮರದ ತಿರುಳು, ಕಾಗದ ತಯಾರಿಕೆ, ರಾಸಾಯನಿಕ ಹಾಗೂ ಪೆಟ್ರೋ ರಸಾಯನಿಕ ಕೈಗಾರಿಕೆಗಳು, ತೈಲ ಶುದ್ಧೀಕರಣ ಕೇಂದ್ರಗಳು, ಲೋಹ ಕೈಗಾರಿಕೆ, ಆಹಾರ ಸಂರಕ್ಷಣಾ ಕೇಂದ್ರಗಳು, ಕಬ್ಬು ಹಾಗೂ ಸಕ್ಕರೆ ಕಾರ್ಖಾನೆಗಳು, ಬಟ್ಟೆಗಿರಣಿಗಳು, ಡಿಸ್ಟಿಲರೀಸ್‌, ಸಾಬೂನು ತಯಾರಿಕಾ ಕಾರ್ಖಾನೆ, ಟೂತ್‌ಪೇಸ್ಟ್ ತಯಾರಿಕಾ ಕಾರ್ಖಾನೆ, ಮುಂತಾದವುಗಳು ಪ್ರತಿದಿನ ಹರಿಬಿಡುವ ತ್ಯಾಜ್ಯಗಳಿಗೆ ಲೆಕ್ಕವಿಲ್ಲ. ಇದರಿಂದ ಭಾರತದ ಶೇಕಡ 90ರಷ್ಟು ನದಿಗಳು ಮಲಿನಗೊಂಡಿವೆ.

4. ಕೃಷಿಯ ಮೂಲಗಳು: ಸಸ್ಯ ಪೋಷಕಾಂಶಗಳನ್ನು ಹೊಂದಿರುವ ಗೊಬ್ಬರಗಳು, ನೈಟ್ರೋಜನ್, ಪಾಸ್ಪರಸ್ ಹಾಗೂ ಪೊಟ್ಯಾಶಿಯಂ ಗೊಬ್ಬರಗಳು ನದಿ ನೀರನ್ನು ಸೇರುವುದು. ಕೀಟನಾಶಕಗಳು, ಶಿಲೀಂದ್ರಗಳು, ಸಸ್ಯನಾಶಕಗಳು, ಸಾವಯವ ಪಾಸ್ಪೇಟಗಳು, ಕಾರ್ಬೋನೇಟ್‌ಗಳು, ರಸಾಯನಿಕಗಳು, ಕ್ಲೋರಿನೇಟೆಡ್‌  ಹೈಡ್ರೋಕಾರ್ಬನ್‌ಗಳು ಮುಂತಾದವುಗಳು. ಪ್ರಾಣಿಗಳ ತ್ಯಾಜ್ಯವಾದ ಮಲ, ಮೂತ್ರ, ಕೋಳಿ ಫಾರಂಗಳ ತ್ಯಾಜ್ಯ ಹಾಗೂ ಕಸಾಯಿಖಾನೆಗಳ ತ್ಯಾಜ್ಯ ನೀರಿನ ಮೂಲಗಳನ್ನು ಸೇರಿ ಜಲ ಮಾಲಿನ್ಯವನ್ನು ಉಂಟುಮಾಡುತ್ತವೆ.

5. ಉಷ್ಣ ವಿದ್ಯುತ್ ಸ್ಥಾವರಗಳಿಂದ ಮಾಲಿನ್ಯ:  ಉಷ್ಣವಿದ್ಯುತ್‌ ಸ್ಥಾವರಗಳು ಹಾಗೂ ಇತರೆ ವಿದ್ಯುತ್‌ ಘಟಕಗಳಿಂದ ಕಾಯ್ದ ನೀರನ್ನು ಹೊರಗಡೆ ಬಿಡುವುದರಿಂದ ಆ ನೀರು ಶುದ್ಧ ನೀರಿನ ಜೊತೆಗೆ ವಿಲೀನಗೊಂಡಾಗ ನದಿ ನೀರು ಹೆಚ್ಚು ತಾಪಮಾನಕ್ಕೆ ಒಳಗಾಗುತ್ತದೆ. ನೀರಿನಲ್ಲಿದ್ದ ಮೀನುಗಳು ಹಾಗೂ ಇತರೆ ಜಲಚರಗಳು ಸಾವಿಗೀಡಾಗುತ್ತವೆ. ಇತ್ತೀಚಿಗೆ ಈ ಸಮಸ್ಯೆ ಬಹಳ ಗಂಭೀರವಾಗಿದ್ದು ಜಲಚರ ವ್ಯವಸ್ಥೆಗೆ ಮಾರಕವಾಗಿದೆ.

6.ಅಂತರ್ಜಲ ಮಾಲಿನ್ಯ ಮೂಲಗಳು: ನಗರ ಪ್ರದೇಶಗಳ ಕೈಗಾರಿಕೆಗಳು ಹಾಗೂ ಪುರಸಭೆಯ ತ್ಯಾಜ್ಯಗಳು ಹಾಗೂ ತ್ಯಾಜ್ಯಜಲದ ಕಾಲುವೆಯ ಸೋರಿಕೆಯಿಂದ ಅಂತರ್ಜಲ ನೀರಿನ ಮಾಲಿನ್ಯ ಹೆಚ್ಚಾಗಿ ಕಂಡುಬರುತ್ತಿದೆ.

7. ತೈಲ ಸೋರಿಕೆ ಮೂಲಗಳು : ಪ್ರಸ್ತುತ ದಿನಗಳಲ್ಲಿ ಸಮುದ್ರದಲ್ಲಿ ತೈಲ ಸೋರಿಕೆಯಿಂದ ನೀರು ಮಲಿನಗೊಳ್ಳುವುದು ಸಾಮಾನ್ಯವಾಗಿದೆ. ಸಮುದ್ರಯಾನದಿಂದ ವಿಸರ್ಜನೆಯಾಗುವ ತೈಲಗಳು, ಗ್ರೀಸ್‌, ಸಾಬೂನು, ಕಸ, ವಿಕೀರಣ ತ್ಯಾಜ್ಯ, ಸಾಗರದ ತೈಲ, ಗಣಿಗಾರಿಕೆ, ತೈಲಸೋರಿಕೆಗಳು ಸಾಗರದ ಮಾಲಿನ್ಯಕ್ಕೆ ಕಾರವಾಗಿದೆ. ಸಮುದ್ರದ ತೀರದಾಚೆ ತೈಲಬಾವಿಗಳ ತೋಡುವ ಕಾರ್ಯಾಚರಣೆಯಿಂದ ಜಲಮಾಲಿನ್ಯವಾಗುತ್ತದೆ.

8. ವಿಕೀರಣ ವಸ್ತು : ದೇಶದಲ್ಲಿ ಆಗಾಗ ಅಣುಬಾಂಬುಗಳ ಪರೀಕ್ಷೆಗಳು ನಡೆಯುತ್ತವೆ. ಆಗ ವಿಕೀರಣಶೀಲ ವಸ್ತುಗಳು ವಾಯುಮಂಡಲದಲ್ಲಿ ವ್ಯಾಪಕವಾಗಿ ಹರಡಿ ಅವು ನಂತರ ಮಳೆಯ ರೀತಿಯಲ್ಲಿ ಭೂಮಿಯ ಮೇಲೆ ಬೀಳುತ್ತವೆ. ಆನಂತರ ಅವುಗಳು ನದಿಯ ಸೇರಿ ಜಲಮಾಲಿನ್ಯಕ್ಕೆ ಕಾರಣವಾಗುತ್ತವೆ.

9. ಒಳನಾಡಿನ ಜಲ ಮಾಲಿನ್ಯ ಮೂಲಗಳು: ಜನಸಂಖ್ಯಾ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ, ನಗರಗಳ ಬೆಳವಣಿಗೆಯಿಂದ ಜಲ ಮಾಲಿನ್ಯವು ಒಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಒಳನಾಡಿನ ಜಲಮೂಲಗಳು ಅತೀವವಾಗಿ ಮಲಿನಗೊಂಡಿವೆ. ಸಕ್ಕರೆ ಕಾರ್ಖಾನೆ, ಡಿಸ್ಟಿಲರಿಸ್ ಕಾರ್ಖಾನೆ, ರೇಷ್ಮೆ, ಗ್ಲಿಸರಿನ್, ಡಿಡಿಟಿ, ರಸಾಯನಿಕ, ರಸಗೊಬ್ಬರ, ರಬ್ಬರ್, ಕಾಗದ, ಸಿಮೆಂಟ್, ಚರ್ಮ ಹದ ಮಾಡುವ ಹಾಗೂ ಬಣ್ಣ ತಯಾರಿಕಾ ಕಾರ್ಖಾನೆಗಳಿಂದ ಹೊರಬರುವ ಕೊಳಚೆ ಹಾಗೂ ತ್ಯಾಜ್ಯ ವಸ್ತುಗಳು, ಸಮೀಪದ ಕೆರೆ, ಸರೋವರ, ನದಿ, ಹೊಂಡಗಳಲ್ಲಿ ಸೇರಿ ಜಲಮಾಲಿನ್ಯವನ್ನು ಉಂಟುಮಾಡುತ್ತದೆ. ಉದಾ: ಕರ್ನಾಟಕದ ಕಪಿಲಾ ಹಾಗೂ ತುಂಗಭದ್ರಾ ನದಿಗಳು ಗಣನೀಯವಾಗಿ ಮಲಿನಗೊಂಡಿವೆ. ತುಂಗಭದ್ರಾ ನದಿಗೆ ಹರಿಹರದ ಪಾಲಿ ಫೈಬರ್ ಕಾರ್ಖಾನೆಯ ತ್ಯಾಜ್ಯ ವಸ್ತುಗಳನ್ನು ಬಿಡುವುದರಿಂದ ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಾರವಾರದ ಸಮೀಪ ಬಿಣಗದಲ್ಲಿ ಒಂದು ಕಾಸ್ಟಿಕ್ ಸೋಡಾ ಕಾರ್ಖಾನೆ ಇದೆ. ಇದರ ತ್ಯಾಜ್ಯ ಸಮುದ್ರಕ್ಕೆ ಸೇರುವುದರಿಂದ ಆ ನೀರು ಮಾಲಿನ್ಯಯುಕ್ತವಾಗಿದೆ. ಭದ್ರಾವತಿಯ ಹತ್ತಿರ ಭದ್ರಾ ನದಿಯ ಗತಿಯೂ ಇದೇ ರೀತಿ ಆಗಿದೆ. ಧರ್ಮಸ್ಥಳದ ನೇತ್ರಾವತಿ ಪೂರ್ಣಕಲುಷಿತಗೊಂಡಿದೆ. ತುಂಗಭದ್ರಾನದಿಯೂ ಮಾಲಿನ್ಯಕಾರಕವಾಗಿದ್ದು ನದಿಯ ದಂಡೆಯಲ್ಲಿ ಸ್ನಾನ ಮಾಡಿದ ಹಳೆ ಬಟ್ಟೆಗಳು, ಪ್ಲಾಸ್ಟಿಕ್ ಬಾಟಲ್‌ಗಳು, ಹರಿದ ಚಪ್ಪಲಿಗಳು, ಕಸ ಕಡ್ಡಿಗಳು, ರಾಶಿ ರಾಶಿ ಆಗಿ ಬಿದ್ದಿದೆ. ಮಳೆಗಾಲದಲ್ಲಿ ಇವುಗಳು ನದಿಯನ್ನು ಸೇರಿದಾಗ ನದಿಯ ನೀರು ಮಲಿನಗೊಳ್ಳುತ್ತದೆ. ಬೆಂಗಳೂರು ನಗರದ ಮೂಲಕ ಹರಿಯುತ್ತಿದ್ದ ವೃಷಭಾವತಿ ನದಿಯು ಇಂದು ನಗರದ ಒಳ ಚರಂಡಿ ನೀರನ್ನು ಹೊರ ಹಾಕುವ ಮಾರ್ಗವಾಗಿದೆ. ವೃಷಭಾವತಿ ಅದೊಂದು ನದಿಯಂತೆ ಕಾಣುವುದಿಲ್ಲ. ಅದನ್ನು ನದಿಯಾಗಿ ಗುರುತಿಸುವುದು ಕಷ್ಟ. ಅಷ್ಟೊಂದು ಮಲಿನವಾಗಿ ಚರಂಡಿಯ ಹಾಗೆ ಕಂಡುಬರುತ್ತದೆ.

ಭಾರತದ ಪರಿಸ್ಥಿತಿ:  ಭಾರತದ ಬಹುತೇಕ ನದಿಗಳು ಶೇಕಡ 70ರಷ್ಟು ಮಲಿನಗೊಂಡು ಹಾನಿಕಾರಕವಾಗಿವೆ ಎಂಬುದು ವಿಜ್ಞಾನಿಗಳ ಅಭಿಮತವಾಗಿದೆ.

ಭಾರತದ ಅತ್ಯಂತ ಪವಿತ್ರವಾದ ನದಿ ಎಂದು ಹೆಸರಾಗಿದ್ದ ಗಂಗಾ ನದಿಯ ನೀರು ಉತ್ತರ ಭಾರತದ ಎಲ್ಲಾ ನದಿಗಳಿಗಿಂತ ಮಲಿನವಾಗಿದೆ. ʻʻಗಂಗಾಸ್ನಾನಂ ತುಂಗಾಪಾನಂʼʼ ಎಂಬ ನಾಣ್ಣುಡಿಗೆ ಇಂದು ಬೆಂಕಿ ಬಿದ್ದಿದೆ. ಈ ನದಿಯ ಇಕ್ಕೆಲುಗಳಲ್ಲಿ ಸಾವಿರಾರು ಯಾತ್ರಾ ಸ್ಥಳಗಳು, ಕೈಗಾರಿಕಾ ಕೇಂದ್ರಗಳು ಹಾಗೂ ನಗರಗಳು ಬೆಳೆದಿವೆ. ಅವುಗಳಿಂದ ಹೊರ ಬರುತ್ತಿರುವ ಹೊಲಸು ನೀರು ಗಂಗಾನದಿಯನ್ನು ಸೇರಿ ಅಕ್ಷರಶಃ ಗಂಗಾ ನದಿಯನ್ನು ಒಳಚರಂಡಿಯಾಗಿಸಿವೆ. ಗಂಗಾ ನದಿಯ ದಂಡೆಯ ಮೇಲೆ ನಿರ್ಮಾಣವಾಗಿರುವ ಹೆಣಗಳನ್ನು ಸುಡುವ ತಾಣಗಳು, ಹೆಣಗಳನ್ನು ಸುಡಲೆಂದೇ ರಾಶಿ ಹಾಕಿರುವ ಕಟ್ಟಿಗೆಗಳು, ಸತ್ತ ಪ್ರಾಣಿಗಳಿಂದ ವಿಸರ್ಜಿಸಲಾಗುವ ಕೊಳಕುಗಳು ನೀರನ್ನು ಮಲಿನಗೊಳಿಸಿವೆ. ನದಿಯ ದಡದಲ್ಲಿಯೇ ಹೆಣಗಳನ್ನು ಸುಡುವುದು ಇಲ್ಲವೇ ಅರ್ಧಬೆಂದ ಹೆಣಗಳನ್ನು ನದಿಯಲ್ಲಿ ಬಿಡುವುದು. ಧಾರ್ಮಿಕ ನಂಬಿಕೆಯಿಂದ ತೇಲಿ ಬಿಡುವ ವಸ್ತುಗಳು ನದಿಯ ದಂಡೆಯಲ್ಲಿ ರಾಶಿಯಾಗಿ ಬಂದು ಬೀಳುತ್ತವೆ. ಇದರ ಜೊತೆಗೆ ಹೆಣಗಳನ್ನು ಒಂದು ಚಪ್ಪಟೆಯಾದ ಕಲ್ಲಿನ ಮೇಲೆ ಇಟ್ಟು ಅವುಗಳನ್ನು ನದಿಗಳ ಮಧ್ಯ ಭಾಗದಲ್ಲಿ ತೆಗೆದುಕೊಂಡು ಹೋಗಿ ಬಿಡುವುದು ಮುಂತಾದವುಗಳಿಂದ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಸುತ್ತಲಿನ ಪ್ರದೇಶಗಳ ಕಸ ಕಡ್ಡಿ ಹೆಣವನ್ನು ಸುಟ್ಟ ಬೂದಿ ಹಾಗೂ ಇತರೆ ತ್ಯಾಜ್ಯ ವಸ್ತುಗಳು ನದಿಯನ್ನು ಸೇರುತ್ತದೆ. ಹೀಗೆ ವಿವಿಧ ಮೂಲಗಳಿಂದ ಪ್ರತಿದಿನ ನದಿಯಲ್ಲಿ 10 ದಶಲಕ್ಷ ಟನ್ ಕೊಳಕು ಸೇರುತ್ತದೆ.

ಇನ್ನು ತಾಜ್‌ಮಹಲ್ ಸುತ್ತಲೂ ಹರಿಯುತ್ತಿರುವ ಯಮುನಾ ನದಿಯ ಸ್ಥಿತಿಯಂತೂ ಹೇಳತೀರದು. ಈ ನದಿಯು ದೆಹಲಿಯಿಂದ 48 ಕಿ.ಮೀ ದೂರದಲ್ಲಿದ್ದು ದಿನವೊಂದಕ್ಕೆ 200 ಮಿಲಿಯನ್ ಲೀಟರ್‌ನಷ್ಟು ಚರಂಡಿ ನೀರನ್ನು ತನ್ನೊಂದಿಗೆ ಹೊತ್ತುಕೊಂಡು ಹೋಗುತ್ತಿದೆಯಂದರೆ ಯಮುನೆ ಎಷ್ಟೊಂದು ಕಲುಷಿತಗೊಂಡಿದ್ದಾಳೆ ಎಂಬುದನ್ನು ಊಹಿಸಿಕೊಳ್ಳಿ. ಇದರೊಂದಿಗೆ ಕಾರ್ಖಾನೆಗಳ ಕೊಳಚೆ ನೀರು ಹಾಗೂ ಅರ್ಧ ಮಿಲಿಯನ್ ಲೀಟರ್ ಡಿ.ಡಿ.ಟಿ. ಭರಿತ ಕಲ್ಮಶ ನದಿಯನ್ನು ಸೇರಿಕೊಳ್ಳುತ್ತದೆ.

ಚಂಬಲ್ ನದಿಯು ಸಹ ರಾಸಾಯನಿಕ ಗೊಬ್ಬರ ಕಾರ್ಖಾನೆ, ವಿದ್ಯುತ್ ಕೇಂದ್ರ ಹಾಗೂ ಶಾಖ ವಿದ್ಯುತ್ ಕೇಂದ್ರಗಳಿಂದ ವಿಸರ್ಜನೆಗೊಳ್ಳುವ ರಾಸಾಯನಿಕ ವಸ್ತುಗಳಿಂದ ಮಲಿನವಾಗಿದೆ.  ಹೂಗ್ಲಿ ನದಿಯು ಸೆಣಬಿನ ಕಾರ್ಖಾನೆ, ಬಟ್ಟೆ ಕಾರ್ಖಾನೆ, ಚರ್ಮಹದಮಾಡುವ ಹಾಗೂ ಕಾಗದ ಕಾರ್ಖಾನೆಗಳಿಂದ ಬಿಡುವ ತ್ಯಾಜ್ಯದಿಂದ ಮಲಿನಗೊಂಡಿದೆ. ಹೃದ್ರಾಬಾದನ ಮೂಸಿನದಿಯು ಇಂದು ದೊಡ್ಡ ಚರಂಡಿಯಾಗಿದೆ. ಗುಜರಾತಿನ ʻವಾಪಿʼ ಕೈಗಾರಿಕಾ ವಲಯ ರಸಾಯನಿಕ ನೀರಿನಿಂದ ಅಂತರ್ಜಲ ಮಲಿನವಾಗಿದೆ.

ಉಪಸಂಹಾರ

ಜಲಮಾಲಿನ್ಯವು ಮಾನವನ ಅಜಾಗರೂಕತೆ ಮತ್ತು ಅತಿಯಾದ ಅಭಿವೃದ್ಧಿಯ ಪರಿಣಾಮವಾಗಿ ಉಂಟಾಗುತ್ತಿರುವ ಗಂಭೀರ ಪರಿಸರ ಸಮಸ್ಯೆಯಾಗಿದೆ. ಶುದ್ಧ ನೀರಿನ ಕೊರತೆ ಮಾನವ ಆರೋಗ್ಯ, ಕೃಷಿ ಹಾಗೂ ಜೀವ ವೈವಿಧ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ. ಕೈಗಾರಿಕಾ ತ್ಯಾಜ್ಯ ನಿಯಂತ್ರಣ, ಶುದ್ಧೀಕರಣ ಘಟಕಗಳ ಸ್ಥಾಪನೆ ಹಾಗೂ ಜನಜಾಗೃತಿ ಅತ್ಯಂತ ಅಗತ್ಯವಾಗಿದೆ. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಜಲಮಾಲಿನ್ಯವನ್ನು ಕಡಿಮೆ ಮಾಡಬಹುದು. ಶುದ್ಧ ನೀರನ್ನು ಉಳಿಸುವುದು ನಮ್ಮ ಭವಿಷ್ಯವನ್ನು ಉಳಿಸುವುದಕ್ಕೆ ಸಮಾನವಾಗಿದೆ.

ವಾಯುಮಾಲಿನ್ಯದ ಪರಿಣಾಮಗಳು

ವಾಯುಮಾಲಿನ್ಯದ ಪರಿಣಾಮಗಳು

ಮಾನವನಿಗೆ ಊಟ, ನಿದ್ರೆ, ಆಹಾರ ಹಾಗೂ ವಸತಿ ಹೇಗೆ ಅಗತ್ಯವಾಗಿದೆಯೋ ಹಾಗೇ ಗಾಳಿಯೂ ಅಗತ್ಯವಾಗಿ ಬೇಕು. ಉಸಿರಾಟಕ್ಕೆ ಶುದ್ಧವಾದ ಗಾಳಿ ಮನುಷ್ಯನಿಗೆ ಅವಶ್ಯಕವಾಗಿದೆ. ಆಹಾರವಿಲ್ಲದೆ, ನೀರಿಲ್ಲದೆ, ಮನುಷ್ಯ ಹಲವು ದಿನಗಳ ಕಾಲ ಬದುಕಬಲ್ಲ. ಆದರೆ ಗಾಳಿ ಇಲ್ಲದಿದ್ದರೆ ಮೂರು ನಿಮಿಷವೂ ಬದುಕಿರಲಾರ. ಒಂದು ವೇಳೆ ಆಮ್ಲಜನಕ  ಮಾನವನಿಗೆ ದೊರಕದೆ ಹೋದರೆ ಅವನ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ವಾಯು ಮಾಲಿನ್ಯ ಇಂದು ಎಲ್ಲಾ ಕಡೆಗಳಲ್ಲಿ ಹೆಚ್ಚು ಹೆಚ್ಚು ಕಂಡುಬರುತ್ತದೆ. ಅಂತಹ ಮಾಲಿನ್ಯದಿಂದ ಆಗುವ ಪರಿಣಾಮಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

1. ಇಂಗಾಲದ ಡೈ ಆಕ್ಸೈಡ್‌:

ಇಂಗಾಲದ ಡೈ ಆಕ್ಸೈಡ್‌ ವಾಯುಮಂಡಲದ ಅನಿಲಗಳಲ್ಲಿ ಅತ್ಯಂತ ಪ್ರಮುಖವಾದುದು. ಇದು ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿರಬೇಕು. ಆದರೆ ಇಂಧನಗಳು ಉರಿದಾಗ ಹಾಗೂ ಥರ್ಮಲ್‌ ವಿದ್ಯುತ್‌ ಸ್ಥಾವರ, ಕೈಗಾರಿಕೆಗಳು, ವಾಹನಗಳು ಹಾಗೂ ಜ್ವಾಲಾಮುಖಿ ಸ್ಫೋಟಗೊಂಡಾಗ ಹೊಗೆ ಉಸಿರಾಟದ ಮುಖಾಂತರ ದೇಹವನ್ನು ಸೇರುತ್ತದೆ. ಇದು ಹಿಮೊಗ್ಲೋಬಿನ್‌ ಜೊತೆ ಸೇರಿ ಕಾರ್ಬಾಕ್ಸಿ ಹಿಮೋಗ್ಲೋಬಿನ್‌ ಆಗಿ ಪರಿವರ್ತನೆ ಹೊಂದುತ್ತದೆ. ಆಗ ಇದು ರಕ್ತದಲ್ಲಿ ಆಮ್ಲಜನಕದ ಸರಬರಾಜನ್ನು ಕಡಿಮೆಗೊಳ್ಳುತ್ತದೆ. ಇದರಿಂದಾಗಿ ಮನಸ್ಸಿನ ಏಕಾಗ್ರತೆ ಕಡಿಮೆಯಾಗಿ ಮನುಷ್ಯ ಹುಚ್ಚನಂತೆ ವರ್ತಸುತ್ತಾನೆ. ಅತಿಯಾದ ಇಂಧನದ ಬಿಡುಗಡೆಯಿಂದಾಗಿ ಭೂಮಿಯ ತಾಪಮಾನ ಏರಿಕೆಯಾಗುತ್ತದೆ.

2. ಇಂಗಾಲದ ಮೊನಾಕ್ಸೈಡ್‌:

ಇಂಗಾಲದ ಮೊನಾಕ್ಸೈಡ್‌ ಸೌಧೆಗಳನ್ನು ಅರ್ಧಂಬರ್ಧ ಸುವುವುದರಿಂದ ಬಿಡುಗಡೆಯಾಗುತ್ತದೆ. ಇದರೊಂದಿಗೆ ಮನೆಯಲ್ಲಿನ ಸ್ಟೌವ್‌ಗಳು, ಗ್ರಾಮೀಣಭಾಗದ ಕುಲುಮೆ, ಕಾರ್ಖಾನೆ, ಹೊಗೆ ಹಾಗೂ ಧೂಮಪಾನ ಮಾಡುವುದರಿಂದಲೂ ಇಂಗಾಲದ ಮೊನಾಕ್ಸೈಡ್‌ ವಾತಾವರಣದಲ್ಲಿ ಸೇರಿಕೊಳ್ಳುತ್ತದೆ. ಇದು ಅತ್ಯಂತ ಅಪಾಯಕಾರಿಯಾದ ಅನಿಲವಾಗಿದ್ದು ಪ್ರಾಣಾಪಾಯಕ್ಕೂ ಕಾರಣವಾಗುತ್ತದೆ.

3. ಸಲ್ಫರ್‌ ಡೈ ಆಕ್ಸೈಡ್‌:

ಇದು ಥರ್ಮಲ್‌ ವಿದ್ಯುತ್‌ ಕೇಂದ್ರಗಳು, ತೈಲ ಶುದ್ಧೀಕರಣ ಕೇಂದ್ರಗಳು ಹಾಗೂ ಸ್ವಯಂಚಾಲಿತ ವಾಹನಗಳಿಂದ ಬಿಡುಗಡೆಯಾಗುತ್ತದೆ. ಇದು ಸಹ ಮಾನವನ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡುತ್ತದೆ.

4. ಕ್ಲೋರೋ ಪೋರೋಕಾರ್ಬನ್ಸ್‌:

ಶೈತ್ಯಾಗಾರ, ರೆಫ್ರಿರೇಟರ್‌, ಪೋಮ್‌ಪ್ಲಾಸ್ಟಿಕ್‌, ಸೌಂದರ್ಯವರ್ಧಕ ಮುಂತಾದ ಅಂಶಗಳು ಇದರಲ್ಲಿವೆ. ಇವುಗಳ ಸಾಂಧ್ರೀಕರಣವು ವಾಯುಮಾಲಿನ್ಯದ ಅಪಾಯಕಾರಿ ಅನಿಲವಾಗಿದೆ. ಇದು ಓಜೋನ್‌ ಪದರು ನಾಶವಾಗಲು ಕಾರವಾಗುತ್ತದೆ.

5. ರಸಾಯನಿಕ ಸ್ಮಾಗ್‌ : 

ಸ್ಮಾಗ್‌ ಮುಸುಕಾದ ಗಾಳಿಯಂತಿದ್ದು ಉಸಿರಾಟದ ತೊಂದರೆಯನ್ನುಂಟು ಮಾಡುತ್ತದೆ. ನೀರಾವಿ ಹಾಗೂ ದೂಳಿನ ಜೊತೆ ಸೇರಿ ಇದು ರಚನೆಗೊಳ್ಳುತ್ತದೆ. ಇದು ಆಮ್ಲಮಳೆಗೆ ಕಾರವಾಗುತ್ತದೆ. ಉಸಿರಾಟದ ತೊಂದರೆಗೆ ಕಾರಣವಾಗುವುದು. ಇದರಿಂದ ಶ್ವಾಸಕೋಶಗಳಿಗೆ ಹಾನಿಯಾಗುವ ಕಾರಣ ಸಾವು ಬರುತ್ತದೆ.

6. ವಾಯುಮಾಲಿನ್ಯದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳು : 

ಸಲ್ಫರ್‌ ಡೈ ಆಕ್ಸೈಡ್‌ ಮತ್ತು ಇಂಗಾಲದ ಮೊನಾಕ್ಸೈಡ್‌ಗಳಂತಹ ವಿಷಾನಿಲಗಳು ವಾಯುಮಂಡಲ ಸೇರಿಕೊಂಡರೆ ವಾತಾವರಣ ಮಲೀನವಾಗುತ್ತದೆ. ಆಗ ಮಾನವರು ಈ ವಿಷಾನಿಲವನ್ನು ಸೇವಿಸಿದರೆ ಹೃದಯ ಸಂಬಂಧಿ ಖಾಯಿಲೆಗಳು, ಶ್ವಾಸಕೋಶ ಸಂಬಂಧಿ ಕಾಯಿಲೆ, ಅರ್ಬುದ ರೋಗ, ಗಂಟಲು, ಕಿವಿ, ಬಾಯಿರೋಗ, ನಿಮೋನಿಯಾದಂತಹ ರೋಗಗಳು ಬರುತ್ತವೆ. ಕೆಲಮೊಮ್ಮೆ ಆಮ್ಲಜನಕದ ತೊಂದರೆಯನ್ನು ಅನುಭವಿಸಬಹುದು.

7. ಹೊಗೆಸೊಪ್ಪಿನ ಹೊಗೆ:

ಹೊಗೆಸೊಪ್ಪಿನಲ್ಲಿ ನಿಕೋಟಿನ್‌ ಎಂಬ ಮಾದಕ ವಸ್ತು ಇರುತ್ತದೆ. ಈ ಹೊಗೆಸೊಪ್ಪನ್ನು ಎಲೆ ಅಡಿಕೆಯ ಜೊತೆಗೆ ಜಗಿಯಲು ಸಿಗರೇಟ್‌ ಸೇದಲು, ಬೀಡಿ ಸೇದಲು ಬಳಸುತ್ತಾರೆ. ಇದರೊಳಗೆ ಬೆನ್ಸೊಪೈರಿಕ್‌ ಅಂಶ ಇದ್ದು ಕ್ಯಾನ್ಸರಿಗೆ ಕಾರಣವಾಗುತ್ತದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್‌ ಖಾಯಿಲೆ ಹರಡುತ್ತದೆ. 

8. ಹಸಿರು ಮನೆ ಪರಿಣಾಮ:

ದಟ್ಟವಾದ ಇಂಗಾಲದ ಡೈಆಕ್ಸೈಡ್‌ ಸ್ತರವು ಹಸಿರುಮನೆ ಗಾಜಿನಂತೆ ವರ್ತಿಸುತ್ತದೆ. ಹೀಗೆ ಹಸಿರುಮನೆ ಅನಿಲಗಳು ಶಾಖವನ್ನು ನೆಲದ ಕಡೆಗೆ ಬಿಡುವಕಾರಣ ಭೂಮಂಡಲ ಅತೀ ಶಾಖದಿಂದಿರುವಂತೆ ಮಾಡುತ್ತದೆ. ಹಸಿರುಮನೆಯ ಪರಿಣಾಮವಾಗಿ ಮಳೆಯ ಪ್ರಮಾಣ ಕೆಡಿಮೆಯಾಗಿ ಮಣ್ಣಿನ ತೇವಾಂಶವು ಇಲ್ಲದಂತಾಗುತ್ತದೆ. ಸಾಗರೀಯ ಆಮ್ಲೀಯತೆಯು ಜಲಚರಗಳ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.  

9. ಭೂಮಿಯ ತಾಪಮಾನ : 

ಹಸಿರು ಮನೆ ಪರಿಣಾಮದಿಂದ ಭೂಮಿಯ ಕಾಯುವಿಕೆ ಹೆಚ್ಚಾಗುತ್ತದೆ. ಆಗ ಭೂಪ್ರದೇಶದ ಹಿಮ ಮತ್ತು ನಿರ್ಗಲ್ಲುಗಳು ಕರಗುತ್ತವೆ. ಇದರಿಂದ ನೀರಿನ  ಮಟ್ಟದಲ್ಲಿ ಏರಿಕೆಯಾಗಿ ಸಮುದ್ರ ತೀರಗಳು ಹಾಗೂ ನದಿ ಮುಖಜ ಭೂಮಿಗಳು ಮುಳುಗಡೆಯಾಗಬಹುದು.

10. ತೇಲಾಡುವ ದೂಳಿನ ಕಣಗಳು:

ತೇಲಾಡುವ ದೂಳಿನ ಕಣಗಳು ವಾಯುಮಂಡಲದೊಳಗೆ ಸೇರಿಕೊಂಡರೆ ಅದರಿಂದ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಇದರಿಂದ ಹೃದಯ ರೋಗ ಹಾಗೂ ಅತೀ ಹೆಚ್ಚು ಸಾವಿಗೂ ಸಂಬಂಧವಿದೆಯೆಂದು ಹೇಳಲಾಗಿದೆ. ಭಾರತದಲ್ಲಿ ಪ್ರತಿದಿನ ನಗರ ಪ್ರದೇಶಗಳಲ್ಲಿ 20 ರಿಂದ 25 ಟನ್‌ಗಳಷ್ಟು ಗಂಧಕದ ಡೈ ಆಕ್ಸೈಡ್‌, 80 ರಿಂದ 100 ಟನ್‌ ಇಂಗಾಲದ ಮೊನಾಕ್ಸೈಡ್‌, 60 ರಿಂದ 80 ಟನ್‌ಗಳಷ್ಟು ಹೈಡ್ರೋಕಾರ್ಬನ್‌ ಸಂಯುಕ್ತಗಳು ಹಾಗೂ 80 ಟನ್‌ಗಳಷ್ಟು ಸಾರಜನಕ ಆಕ್ಸೈಡ್‌ಗಳು ವಾಯು ಮಂಡಲವನ್ನು ಸೇರಿ ವಾಯುಮಾಲಿನ್ಯವನ್ನು ಉಂಟುಮಾಡುತ್ತವೆ. 

11. ಓಜೋನ್‌ ಪದರು ನಾಶ:

ವಾಯುಮಾಲಿನ್ಯದಿಂದ ಓಜೋನ್‌ ಪದರು ತೆಳುವಾಗಿ ಭೂಮಿಯ ತಾಪಮಾನ ಈಗಿರುವುದಕ್ಕಿಂತ ಎರಡರಷ್ಟಾಗಬಹುದು. ಆಗ ಭೂಮಿಯ ಮೇಲೆ ಒಂದು ಜೀವಿಯೂ ಉಳಿಯಲು ಸಾಧ್ಯವಿಲ್ಲ. 

12. ಸಾಕು ಪ್ರಾಣಿಗಳ ನಾಶ:

ಮಾನವನ ಹಾಗೆಯೇ ಸಸ್ಯಗಳು ಮತ್ತು ಪ್ರಾಣಿಗಳೂ ಸಹ ವಾಯುಮಾಲಿನ್ಯದಿಂದ ಸರ್ವನಾಶವಾಗುತ್ತವೆ. ಅವುಗಳ ಹಾಲು ಮತ್ತು ಅವುಗಳಿಂದ ಜನಿಸುವ ಕರುಗಳಿಗೂ ಈ ವಿಷಕಾರಕ ಅಂಶಗಳು ಅಂಟಿಕೊಂಡಿರುತ್ತವೆ. 

13. ವಸ್ತುಗಳ ನಾಶ:

ವಾಯು ಮಾಲಿನ್ಯದ ಪರಿಣಾಮವಾಗಿ ನಾವು ದಿನನಿತ್ಯ ಉಪಯೋಗಿಸುವ ವಸ್ತುಗಳಾದ ರಬ್ಬರ್‌, ಕಾಗದ, ಬಟ್ಟೆ, ಗಾಜಿನ ಮೇಲ್ಮೈಗಳು ಹಾಳಾಗುವ ಸಾಧ್ಯತೆ ಹೆಚ್ಚು.

ಉಪಸಂಹಾರ 

ವಾಯುಮಾಲಿನ್ಯವು ಕೇವಲ ಮಾನವನ ಆರೋಗ್ಯಕ್ಕೆ ಮಾತ್ರವಲ್ಲದೆ ಸಸ್ಯ, ಪ್ರಾಣಿ ಹಾಗೂ ಸಂಪೂರ್ಣ ಪರಿಸರ ವ್ಯವಸ್ಥೆಯನ್ನೇ ಹಾನಿಗೊಳಿಸುತ್ತಿದೆ. ಹಸಿರುಮನೆ ಪರಿಣಾಮ, ಭೂಮಿಯ ತಾಪಮಾನ ಏರಿಕೆ ಹಾಗೂ ಓಜೋನ್‌ ಪದರದ ನಾಶವು ಭವಿಷ್ಯದಲ್ಲಿ ಭೂಮಿಯ ಜೀವಿತವನ್ನೇ ಅಪಾಯಕ್ಕೆ ಒಳಪಡಿಸುತ್ತದೆ. ಆದ್ದರಿಂದ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮರ ನೆಡುವುದು, ಸ್ವಚ್ಛ ಇಂಧನ ಬಳಕೆ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಾವಶ್ಯಕ. ಇಂದೇ ಜಾಗೃತರಾಗದಿದ್ದರೆ ನಾಳೆಯ ಭವಿಷ್ಯ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ

ಜೀವವೈವಿಧ್ಯಕ್ಕೆ ಬೆದರಿಕೆಗಳು

ಜೀವವೈವಿಧ್ಯಕ್ಕೆ ಬೆದರಿಕೆಗಳು

ಜೀವವೈವಿಧ್ಯತೆ ಎಂದರೆ ಭೂಮಿಯ ಮೇಲಿನ ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮ ಜೀವಿಗಳ ವೈವಿಧ್ಯಮಯ ಅಸ್ತಿತ್ವ. ಈ ವೈವಿಧ್ಯತೆ ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಮಾನವನ ಅತಿಯಾದ ಅಭಿವೃದ್ಧಿ ಚಟುವಟಿಕೆಗಳಿಂದ ಇಂದು ಜೀವವೈವಿಧ್ಯತೆ ಗಂಭೀರ ಅಪಾಯವನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ ಅನೇಕ ಜೀವ ಪ್ರಭೇದಗಳು ಅಳಿವಿನ ಅಂಚಿಗೆ ತಲುಪಿವೆ.

1. ವಾಸಸ್ಥಾನದ ನಷ್ಟ: (habitat loss)

ಮಾನವನಾದಿಯಾಗಿ ಪ್ರತಿಯೊಂದು ಜೀವಿಯು ಒಂದು ಸೂಕ್ತವಾದ ಪ್ರದೇಶಕ್ಕೆ ಹೊಂದಿಕೊಂಡು ಜೀವಿಸುತ್ತದೆ. ಅಲ್ಲಿ ಅವುಗಳು ನಿರ್ದಿಷ್ಟ ಆಹಾರವನ್ನು ಪಡೆದುಕೊಳ್ಳುತ್ತವೆ. ಒಂದು ವೇಳೆ ವಾಸಸ್ಥಳವು ಬದಲಾವಣೆ ಆದರೆ ಆ ಪ್ರದೇಶದಲ್ಲಿ ಹೊಂದಿಕೊಂಡು ಬಾಳಲು ಯತ್ನಿಸುತ್ತವೆ. ಈ ಹೊಂದಾಣಿಕೆ ದೀರ್ಘಕಾಲವನ್ನು ತೆಗೆದುಕೊಳ್ಳಬಹುದು. ಒಂದು ವೇಳೆ ಹೊಂದಾಣಿಕೆ ಸಾಧ್ಯವಾಗದಿದ್ದರೆ ಈ ಪ್ರಭೇದಗಳು ನಾಶವಾಗುತ್ತವೆ. ಮಾನವನ ಹಲವಾರು ಅಭಿವೃದ್ಧಿಪರ ಯೋಜನೆಗಳು ಉದಾ:  ಮನೆಗಳನ್ನು ಕಟ್ಟುವುದು, ರಸ್ತೆ ನಿರ್ಮಾಣ, ದನ ಕರುಗಳನ್ನು ಮೇಯಿಸುವುದು, ಕೃಷಿ ಭೂಮಿಯನ್ನು ನಿರ್ಮಾಣ ಮಾಡುವುದು, ನಗರಗಳನ್ನು ನಿರ್ಮಿಸುವುದು, ಪಶು ಪಾಲನೆ, ಅರಣ್ಯಗಳನ್ನು ಕಡಿಯುವುದು ಮುಂತಾದ ಕಾರ್ಯಗಳನ್ನು ಕೈಗೊಂಡರೆ ಜೀವ ವೈವಿಧ್ಯತೆ ಅವನತಿಯ ಹಾದಿಯನ್ನು ತುಳಿಯುತ್ತದೆ. ಸ್ವಾತಂತ್ರ ಬಂದ ನಂತರ ಭಾರತದಲ್ಲಿ 4697 ದಶಲಕ್ಷ ಹೆಕ್ಟರ್ ಭೂಮಿಯನ್ನು ವಿವಿಧ ಉದ್ದೇಶಗಳಿಗಾಗಿ ಬಳಕೆ ಮಾಡಲಾಗಿದೆ. ಸುಮಾರು 70,000 ಹೆಕ್ಟರ್ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. 4.97 ದಶಲಕ್ಷ ಹೆಕ್ಟರ್ ಭೂಮಿಯನ್ನು ಅರಣ್ಯದಿಂದ ಕೃಷಿಗಾಗಿ ಪರಿವರ್ತಿಸಲಾಗಿದೆ. ಜಲಾಶಯಗಳ ನಿರ್ಮಾಣಕ್ಕಾಗಿ 5,20,000  ಹೆಕ್ಟೇರ್‌  ಭೂಮಿಯನ್ನು, ಕೈಗಾರಿಕೆಗಳ ಸ್ಥಾಪನೆಗೆ 1,40,00 ಹೆಕ್ಟರ್ ಭೂಮಿಯನ್ನು,  ವಿದ್ಯುತ್ ಲೈನ್ ಹಾಗೂ ರಸ್ತೆ ನಿರ್ಮಾಣ, 60,000 ಹೆಕ್ಟರ್ ಭೂಮಿಯನ್ನು ಗೃಹ ನಿರ್ಮಾಣಕ್ಕಾಗಿ ಬಳಸಲಾಗಿದೆ. ಇದೆಲ್ಲವೂ ಕಾಡುಗಳ ನಾಶದಿಂದ  ಆದ ಪರಿಣಾಮಗಳಾಗಿವೆ. ಅತಿಯಾದ ಕಾಡುಗಳ ನಾಶದಿಂದ ಹುಲಿ, ಚಿರತೆ, ಆನೆ, ನರಿಗಳು, ತೋಳ, ಸಿಂಹದಂತಹ ಪ್ರಾಣಿಗಳು ಆಹಾರವನ್ನು ಅರಸಿ ನಗರಗಳಿಗೆ ಲಗ್ಗೆ ಇಡುತ್ತಿರುವ ದೃಶ್ಯಗಳನ್ನು ನಾವಿಂದು ಎಲ್ಲ ಕಡೆಗಳಲ್ಲಿಯೂ ಕಾಣುತ್ತಿದ್ದೇವೆ. ಹೆಬ್ಬಾವು, ಕಾಳಿಂಗ ಸರ್ಪ, ನಾಗರಹಾವು, ಕೆರೆ ಹಾವು ಮುಂತಾದವುಗಳು ನಗರಗಳಿಗೆ ಪ್ರವೇಶಿಸಿ ಎಲ್ಲೆಂದರಲ್ಲಿ ಮನೆಯ ಬಾಗಿಲಗಳ ಹಾಗೂ ಮನೆಯ ಮುಂದಿನ ಹೂವಿನ ಪಾಟ್‌ಗಳಲ್ಲಿ ಆಶ್ರಯ ಪಡೆದುಕೊಂಡಿರುವುದು ಸಾಮಾನ್ಯ ಸಂಗತಿಯಾಗಿದೆ.

2. ವನ್ಯಜೀವಿಗಳ ಬೇಟೆಯಾಡುವಿಕೆ: 

ಭೂಮಿಯ ಮೇಲಿನ ವನ್ಯಜೀವಿಗಳ ಸಂತತಿಯ ನಾಶವಾಗುವಿಕೆ ಇಂದಿನ ದಿನಗಳಲ್ಲಿ ಮಿತಿಮೀರಿದೆ.  ಇದಕ್ಕೆ ಮೂಲ ಕಾರಣವೆಂದರೆ ವನ್ಯಜೀವಿಗಳ ಬೇಟೆಯಾಡುವಿಕೆ. ಸರ್ಕಾರಗಳು ಪ್ರಾಣಿಗಳ ಬೇಟೆಗೆ ಎಷ್ಟೇ ನಿಷೇಧವನ್ನು ಹೇರಿದ್ದರೂ ಕಳ್ಳತನದಲ್ಲಿ ಬೇಟೆಯಾಡುವುದನ್ನು ಜನರು ನಿಲ್ಲಿಸಿಲ್ಲ. 19ನೇ ಶತಮಾನದ ಪೂರ್ವಾರ್ಧದಲ್ಲಿ ಭಾರತದಲ್ಲಿ ವನ್ಯಜೀವಿ ಸಂಪತ್ತು ಅಪಾರವಾಗಿತ್ತು. ಹಾಗಾಗಿ ದೇಶ ನೈಸರ್ಗಿಕ ಸಂಪತ್ತಿನಿಂದ ತುಂಬಿ ತುಳುಕುತ್ತಿತ್ತು. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಪ್ರಾಣಿಗಳ ಬೇಟೆಗಾರಿಕೆಯನ್ನು ಒಂದು ವಿನೋದ ಎಂಬಂತೆ ಪರಿಗಣಿಸಿದ್ದರು. ಪರಿಣಾಮವಾಗಿ ಸಾವಿರಾರು ಆನೆಗಳು, ಹುಲಿಗಳು, ಕೋಣಗಳು, ಜಿಂಕೆಗಳು ಮಹಾರಾಜರ ವ್ಯಾಮೋಹಕ್ಕೆ ಸಿಲುಕಿ ಸರ್ವನಾಶವಾದವು. ಪ್ರಸ್ತುತ ವಿವಿಧ ಮೂಲಗಳಿಂದ  ಮಾನವರು ಪ್ರಾಣಿಗಳನ್ನು ಬೇಟೆಯಾಡಲು ತೊಡಗಿದ್ದಾರೆ. ಪ್ರಾಣಿಗಳ ಚರ್ಮ, ಕೊಂಬು, ಮಾಂಸ, ತೈಲಗಳಿಗಾಗಿ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಎರಡು ಕೊಂಬಿನ ಖಡ್ಗ ಮೃಗ, ಕಾಡು ಕತ್ತೆ, ಏಷ್ಯಾದ ಸಿಂಹ, ಕಾಶ್ಮೀರಿನ ಸಾರಂಗ, ಬಾತುಕೋಳಿ, ಬಕ ಪಕ್ಷಿ, ಬಸ್ಟರ್ಡ್, ಬಿಳಿ ರೆಕ್ಕೆಯ ಮರಬಾತು ಕೋಳಿ ಮುಂತಾದವುಗಳು ಕಣ್ಮರೆಯಾಗಿವೆ. ಹುಲಿಗಳು, ಸಿಂಹ, ಚಿರತೆ, ಕಾಡೆಮ್ಮೆ, ಕಾಡುಕೋಣ, ಜಿಂಕೆಗಳು ಅಳಿವಿನ ಅಂಚಿಕೆ ಬಂದು ತಲುಪಿವೆ. ಯಾವುದೇ ಒಂದು ಗಂಡು ಪ್ರಾಣಿ ಕಡಿಮೆಯಾದರೂ ಸಂತಾನೋತ್ಪತ್ತಿಯ ಅಭಾವವನ್ನು ಎದುರಿಸಬೇಕಾಗುತ್ತದೆ.

3. ಮಾನವ ವನ್ಯಜೀವಿ ಸಂಘರ್ಷಗಳು: (Man wildlife conflict)

ಇಂದಿನ ಲಕ್ಷಾಂತರ ಜೀವ ವೈವಿಧ್ಯತೆಗಳ ನಾಶಕ್ಕೆ ಮಾನವನೇ ಪರೋಕ್ಷವಾಗಿ ಕಾರಣನಾಗಿದ್ದಾನೆ. ಇವನ ಅತಿಯಾದ ದುರಾಸೆ ಹಾಗೂ ಪರಿಸರದ ಮೇಲಿನ ವ್ಯಾಮೋಹ ಮುಂತಾದ ಕಾರಣಗಳಿಂದ ಪರಿಸರದ ಮೇಲೆ ಮಾನವನ ಹಸ್ತಕ್ಷೇಪ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದಾಗಿ ಜೀವ ವೈವಿಧ್ಯತೆಯ ಉಳಿವಿನಲ್ಲಿ ಏರುಪೇರು ಕಂಡುಬಂದಿದೆ. ಹಲವು ಪ್ರಭೇದಗಳು ನಾಶಗೊಂಡು ವಿನಾಶದ ಅಂಚಿನಲ್ಲಿವೆ. ಕಾಡುಗಳನ್ನು ಕಡಿದು ವ್ಯವಸಾಯ ಭೂಮಿಯನ್ನು ತಯಾರು ಮಾಡುವುದು, ನದಿಗಳನ್ನು ಮುಚ್ಚುವುದು, ಕೈಗಾರಿಕೆಗಳು, ಅಣೆಕಟ್ಟುಗಳು, ರಸ್ತೆಗಳು, ರೈಲು ಮಾರ್ಗಗಳು, ಸೇತುವೆಗಳು, ವಸತಿ ನಿವೇಶನಗಳ ನಿರ್ಮಾಣ ಮುಂತಾದ ಕಾರಣಗಳಿಗಾಗಿ ಕಾಡುಗಳು ಹುಲ್ಲುಗಾವಲುಗಳು, ಚೌಗು ಪ್ರದೇಶಗಳು, ನದಿ ತೀರಗಳು, ಬೆಟ್ಟದ ಇಳಿಜಾರು  ಪ್ರದೇಶಗಳನ್ನು ನಿತ್ಯವೂ ಮಾನವ ಆಕ್ರಮಿಸುತ್ತಲೇ ಇದ್ದಾನೆ. ಈ ಕಾರಣದಿಂದ ಕಾಡಿನಲ್ಲಿರುವ ಜೀವವೈವಿಧ್ಯಗಳು ಆಹಾರವಿಲ್ಲದೆ ಕೊರಗುತ್ತವೆ.  ಮತ್ತು ಆಹಾರವನ್ನು ಅರಸಿ ನಗರಗಳಿಗೆ ಲಗ್ಗೆ ಇಡುತ್ತವೆ. ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಕೊರತೆಯಿಂದ ಕಾಡು ಮೃಗಗಳು, ಹಾವು ಮತ್ತು ಇತರೆ ಜೀವಿಗಳು ನೆರೆಯ ವಸತಿ ಸಮುಚ್ಚಯಗಳಿಗೆ ಲಗ್ಗೆ ಇಡುತ್ತವೆ. ಮುಂಬೈ, ಮೈಸೂರಿನಂತಹ ನಗರಗಳಿಗೂ ಚಿರತೆಗಳು ಬಂದು ದಾಳಿ ಮಾಡಿದ ಉದಾಹರಣೆಗಳು ಇವೆ. ಹೀಗಾಗಿ ಕಾಡಿನಂಚಿನಲ್ಲಿರುವ ಜನರ ಮತ್ತು ವನ್ಯಜೀವಿಗಳ ನಡುವೆ ನಿರಂತರವಾಗಿ ಸಂಘರ್ಷಗಳು ನಡೆಯುತ್ತಿವೆ. ನಗರ ಜನರ ಹಾಗೂ ಚಿರತೆ, ಹುಲಿ, ಕರಡಿ ಹಾಗೂ ಹಾವುಗಳ ನಡುವಿನ ಹೋರಾಟ ಮುಂದುವರೆದಿದೆ. ಭಾರತದಲ್ಲಿ ಈ ಸಮಸ್ಯೆ ಮಿತಿಮೀರಿದೆ. ರೈತರು ಮೈಚಳಿ ಬಿಟ್ಟು ತಮ್ಮ ತೋಟ, ಹೊಲ-ಗದ್ದೆಗಳಿಗೆ ಹೋಗುವಂತಿಲ್ಲ. ದನಗಾಹಿಗಳ ಮೇಲೆ ಚಿರತೆ, ಹುಲಿಗಳು ಎರಗಿದ ಉದಾಹರಣೆಗಳು ಇವೆ. ಕಾಡಾನೆಗಳ ದಾಳಿ ಮಾನವನ ಮೇಲೆ ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಮಾನವನ ಸ್ವಯಂಕೃತ ಅಪರಾಧವೇ ಕಾರಣ ಎಂದರು ತಪ್ಪಲ್ಲ. ಕಾಡುಗಳ ನಾಶ ಹೀಗೆಯೇ ಮುಂದುವರೆದರೆ ಹಾಡು ಹಗಲೇ ವನ್ಯಮೃಗಗಳು, ಹಾವು, ಚೇಳುಗಳು ವಸತಿ ಸಮುಚ್ಚಯದಲ್ಲಿ ಬಂದು ವಾಸಿಸುವ ದಿನಗಳು ದೂರ ಉಳಿದಿಲ್ಲವೆಂದು ಹೇಳಬಹುದು.

ಹುಲಿ, ಚಿರತೆ, ಆನೆಗಳು ಹಾಗೂ ತೋಳ ಮುಂತಾದ ಪ್ರಾಣಿಗಳು ಮಾನವನ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಆಹಾರಕ್ಕಾಗಿ ಮನುಷ್ಯನನ್ನೇ ತಿನ್ನುವ ಹಂತಕ್ಕೆ ಬಂದಿವೆ. ಹೀಗಾಗಿ ಇದನ್ನು ಜೈವಿಕ ಅಕ್ರಮಣ ಎಂದು ಕರೆಯಬಹುದಾಗಿದೆ. ಕರ್ನಾಟಕದ ಸಂಡೂರಿನಲ್ಲಿ ಕರಡಿಗಳ ಸಂತತಿ ಹೆಚ್ಚಿದ್ದು ಕಾಡಿಗೆ ಹೋದ ಜನರ ಮೇಲೆ ಕರಡಿಗಳು ಆಗಾಗ ಆಕ್ರಮಣ ಮಾಡಿದ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದುತ್ತೇವೆ.

4. ಅನುವಂಶಿಯ ಮಾಲಿನ್ಯ: (Genetic pollution)

ಅನುವಂಶಿಯ ಮಾಲಿನ್ಯದಿಂದ ಸ್ಥಳೀಯ ಪ್ರಭೇದಗಳು ವಿನಾಶದತ್ತ ಸಾಗುತ್ತಿವೆ. ಅನುವಂಶೀಯ ಮಾಲಿನ್ಯದ ಪರಿಣಾಮವಾಗಿ ಜೀವ ಪ್ರಭೇದದ ಜೀನ್ ಕಣಜವು ನಿಷ್ಕ್ರಿಯಗೊಳ್ಳುತ್ತದೆ.

5. ಹವಾಮಾನದ ಬದಲಾವಣೆ: (Climate change)

ವಿಪರೀತ ತಾಪಮಾನ ಒಂದು ಕಡೆ ವಿಪರೀತ ಶೀತ ವಲಯ ಇನ್ನೊಂದು ಕಡೆ ಅರೆ ಮಳೆಗಾಲ ಹಾಗೂ ಅತಿಯಾದ ಮಳೆಗಾಲ ಮತ್ತೊಂದು ಕಡೆ ಇದ್ದು ಭೂ ಮಂಡಲವು ಅಸಮತೋಲನದಿಂದ ಕೂಡಿದೆ. ಹೀಗೆ ಹವಾಮಾನದಲ್ಲಿ ಏರುಪೇರು ಕಂಡುಬರುವುದರಿಂದ ಜೀವ ಪ್ರಭೇದಗಳು ಹಾಗೂ ಪರಿಸರ ವ್ಯವಸ್ಥೆಯನ್ನು ಗಂಡಾಂತರದಲ್ಲಿ ಸಿಲುಕಿಸಿದೆ. ಸಸ್ಯವರ್ಗ ಹಾಗು ಪ್ರಾಣಿ ಸಂಸ್ಕೃತಿಯ ಮೇಲೆ ಈ ಹವಾಮಾನದ ಪ್ರಭಾವ ಹೆಚ್ಚಾದರೆ ಅವುಗಳು ಸಹ ವಿನಾಶಕ್ಕೆ ತಳ್ಳಲ್ಪಡುತ್ತವೆ. ವಾಯುಮಂಡಲದಲ್ಲಿ  ಹೆಚ್ಚುತ್ತಿರುವ co2 ಪ್ರಮಾಣ ಸಸ್ಯಗಳ ರಚನೆಯ ಮೇಲೆ ಖಚಿತವಾಗಿ ಪರಿಣಾಮ ಬೀರುತ್ತದೆ.

ಉಪಸಂಹಾರ

ಜೀವವೈವಿಧ್ಯತೆಯ ನಾಶವು ಪ್ರಕೃತಿಯ ಸಮತೋಲನವನ್ನು ಭಂಗಪಡಿಸುವ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ವಾಸಸ್ಥಾನದ ನಷ್ಟ, ವನ್ಯಜೀವಿಗಳ ಬೇಟೆ, ಮಾನವ–ವನ್ಯಜೀವಿ ಸಂಘರ್ಷ, ಅನುವಂಶಿಯ ಮಾಲಿನ್ಯ ಹಾಗೂ ಹವಾಮಾನ ಬದಲಾವಣೆಗಳು ಜೀವಜಗತ್ತನ್ನು ಅಳಿವಿನ ಅಂಚಿಗೆ ತಳ್ಳುತ್ತಿವೆ. ಈ ಸಮಸ್ಯೆಗೆ ಮಾನವನೇ ಪ್ರಮುಖ ಕಾರಣವಾಗಿರುವುದರಿಂದ ಪರಿಹಾರವೂ ಮಾನವನಿಂದಲೇ ಬರಬೇಕು. ಪರಿಸರ ಸಂರಕ್ಷಣೆ, ಅರಣ್ಯ ರಕ್ಷಣೆ ಮತ್ತು ಜಾಗೃತಿಯ ಮೂಲಕ ಮಾತ್ರ ಜೀವವೈವಿಧ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಂದಿನ ಎಚ್ಚರಿಕೆಯ ನಡೆ ನಾಳೆಯ ಜೀವಜಗತ್ತಿನ ಭವಿಷ್ಯವನ್ನು ರಕ್ಷಿಸುತ್ತದೆ.