ಹಸಿರು ಮನೆ ಅನಿಲಗಳು

ಹಸಿರು ಮನೆ ಅನಿಲಗಳು

ಭೂಮಿಯ ವಾತಾವರಣದಲ್ಲಿ ಇರುವ ಕೆಲವು ಅನಿಲಗಳು ಸೂರ್ಯನಿಂದ ಬರುವ ಉಷ್ಣತೆಯನ್ನು ಹಿಡಿದುಕೊಳ್ಳುವ ಮೂಲಕ ಭೂಮಿಯನ್ನು ಬಿಸಿಯಾಗಿಸುತ್ತವೆ. ಇವುಗಳನ್ನು ಹಸಿರುಮನೆ ಅನಿಲಗಳು ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಾನವ ಚಟುವಟಿಕೆಗಳಿಂದ ಈ ಅನಿಲಗಳ ಪ್ರಮಾಣ ಅತಿಯಾಗಿ ಹೆಚ್ಚಾಗಿದೆ.

1. ಇಂಗಾಲದಡೈಆಕ್ಸೈಡ್:

ಭೂಮೇಲ್ಮೈ ಕಾಯುವಿಕೆಗೆ ಪ್ರಮುಖವಾದ ಕಾರಣವೆಂದರೆ ಹಸಿರುಮನೆ ಅನಿಲ ಇಂಗಾಲದ ಡೈ ಆಕ್ಸೈಡ್. ಇದು ಶೇ 60ರಷ್ಟು ಭೂಮಿಯ ತಾಪಮಾನಕ್ಕೆ ಕಾರಣವಾಗಿದೆ. ಕೈಗಾರಿಕಾ ಕ್ರಾಂತಿಗೆ ಮುನ್ನ ಭೂಮಿಯ ತಾಪಮಾನ 280 ರಷ್ಟು ಇತ್ತು. ಆದರೆ ಈಗ ಅದು 380 ರಷ್ಟು ಹೆಚ್ಚಳವಾಗಿದೆ. ಅಂದರೆ ಕೈಗಾರಿಕಾ ಕ್ರಾಂತಿಯ ನಂತರ ಶೇಕಡ 30ರಷ್ಟು ಅಧಿಕವಾಗಿದೆ. ಕೈಗಾರಿಕೆ, ಅರಣ್ಯನಾಶ, ನಗರಗಳ ಬೆಳವಣಿಗೆ, ವಾಹನ ಸಂಚಾರ ಮುಂತಾದವುಗಳಿಂದ ಇಂಗಾಲದ ಡೈಆಕ್ಸೈಡ್‌ ಬಿಡುಗಡೆಯಾಗಿ ವಾಯುಮಂಡಲದಲ್ಲಿ ಸೇರಿಕೊಳ್ಳುತ್ತದೆ. ಇಂಗಾಲದ ಡೈ ಆಕ್ಸಡ್‌ನ್ನು ಬಿಡುಗಡೆ ಮಾಡುವ ಅತಿ ದೊಡ್ಡ ದೇಶವೆಂದರೆ ಅದು ಅಮೆರಿಕ. ಸಿಮೆಂಟ್, ಕಬ್ಬಿಣ ಉಕ್ಕು, ರಸಾಯನಿಕ ಉತ್ಪಾದನೆಯಲ್ಲಿ, CO2 ಬಿಡುಗಡೆಯಾಗುತ್ತದೆ. ಪ್ರಾಣಿಗಳ ಉಸಿರಾಟದಲ್ಲಿ ಸಹ CO2 ಬಿಡುಗಡೆಯಾಗುತ್ತದೆ.

2. ಮೀಥೇನ್:

ಮಿಥೇನ್ ಸಹಭೂಮಂಡಲದ ಕಾಯುವಿಕೆಗೆ ಶೇಕಡ 18ರಷ್ಟು ಕಾರಣವಾಗಿದೆ. ಆಮ್ಲಜನಕದ ಕೊರತೆಯುಳ್ಳ ತೇವಾಂಶದ ಭಾಗಗಳಲ್ಲಿ ಮೀಥೇನ್ ಬ್ಯಾಕ್ಟೀರಿಯ ಸಾಯುವ ವಸ್ತುವನ್ನು ವಿಘಟನೆ ಮಾಡುವುದರ ಮೂಲಕ ಮೀಥೇನ್ ಬಿಡುಗಡೆ ಮಾಡುತ್ತದೆ. ಹೀಗಾಗಿ ಇದು ಜವಗೂ ಪ್ರದೇಶ ಭತ್ತದ ಗದ್ದೆ, ನೆಲಭರ್ತಿ, ಹಸು, ಎಮ್ಮೆ, ಕುರಿ, ಮೇಕೆ, ಗೆದ್ದಲು ಹಾಗೂ ಪಚನ ಕ್ರಿಯೆಗಳಲ್ಲಿ ಕಂಡುಬರುತ್ತದೆ. ಸ್ವಾಭಾವಿಕ ಅನಿಲ, ಕಚ್ಚಾ ತೈಲ ಸಾಗಾಣಿಕೆ, ಉತ್ಪಾದನೆ ಸಂಗ್ರಹಣೆ ಹಾಗೂ ಹಂಚಿಕೆಯಲ್ಲಿ ಮೀಥೇನ್ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರೊಂದಿಗೆ ಮಾನವನು ಎಸೆಯುವ ಘನ ತ್ಯಾಜ್ಯ ವಸ್ತುಗಳಿಂದಲೂ ಮೀಥೇನ್ ಉತ್ಪತ್ತಿಯಾಗುತ್ತದೆ.

3.  ನೈಟ್ರಸ್ ಆಕ್ಸೈಡ್: 

 ಇದು ಮಣ್ಣಿನಲ್ಲಿ ನೈಟ್ರೀಕರಣ ಹಾಗೂ ಡಿ ನೈಟ್ರೀಕರಣದ ಸೂಕ್ಷ್ಮಾಣು ಜೀವಿಗಳ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುತ್ತದೆ ಇದು ಹಸಿರು ಮನೆ ಅನಿಲವಲ್ಲದೆ ಓಜೋನ್ ಪದರು ಹಾಳಾಗಲು ಕಾರಣವಾಗುತ್ತದೆ. ರಸಾಯನಿಕ ಗೊಬ್ಬರಗಳು, ಪಳೆಯುಳಿಕೆ ಇಂಧನ ದಹನ, ಜೈವಿಕ ರಾಶಿ ದಹನ ಕ್ರಿಯೆ ಹಾಗೂ ಲೈಲಾನ್ ಮತ್ತು ಪಾಲಿ ತಯಾರಿಕೆಯಲ್ಲಿಯೂ ಉತ್ಪತ್ತಿಯಾಗುತ್ತದೆ. ಇದು ವಾಯುಮಂಡಲದಲ್ಲಿ ಸೇರಿಕೊಂಡಾಗ ಭೂಮಿಯ ತಾಪಮಾನದಲ್ಲಿ ಹೆಚ್ಚಳವಾಗುತ್ತದೆ. ನೈಟ್ರಸ್ ಆಕ್ಸೈಡ್ ಈಗಾಗಲೇ ಶೇಕಡ 15ರಷ್ಟು ಹೆಚ್ಚಾಗಿದೆ. ವಾತಾವರಣದಲ್ಲಿ 1 ಕೆ.ಜಿ ನೈಟ್ರೇಸ್ ಆಕ್ಸೈಡ್ 100 ವರ್ಷಗಳಲ್ಲಿ 296 ಕೆ.ಜಿ ಯಷ್ಟು ಹೆಚ್ಚುತ್ತದೆ.

4. ಕ್ಲೋರೋ ಫ್ಲೋರೋ ಕಾರ್ಬನ್: 

ಇದೊಂದು ಮಾನವ ನಿರ್ಮಿತ ರಸಾಯನಿಕ. ಇದು ಪ್ಲೋರಿನ್, ಕ್ಲೋರಿನ್ ಹಾಗೂ ಕಾರ್ಬನ್‌ಗಳ ಸಂಯೋಗದಿಂದ ತಯಾರಾಗಿದೆ. ಇದನ್ನು ಸಾಂಕೇತಿಕವಾಗಿ CFCs  ಎಂದು ಕರೆಯುತ್ತಾರೆ. ಇದನ್ನು ಥಾಮಸ್ ಮಿಡಗ್ಲಿ ಎಂಬ ವಿಜ್ಞಾನಿ 1728 ರಲ್ಲಿ ವಸ್ತುಗಳನ್ನು ತಂಪುಗೊಳಿಸಲು ಕಂಡುಹಿಡಿದನು. ಇದು ಶೇಕಡ 15ರಷ್ಟು ಭೂಮಂಡಲದ ತಾಪಮಾನಕ್ಕೆ ಕಾರಣವಾಗಿದೆ.  CFCs ನ್ನುಅಲುಮಿನಿಯಂ ಸೆಮಿಕಂಡಕ್ಟರ್ ಉತ್ಪಾದನೆ, ವಿದ್ಯುತ್ ಸಾಗಾಣಿಕೆ, ಸರ್ಕ್ಯೂಟ್ ಬ್ರೇಕ್‌ಗಳಲ್ಲಿ, ಶೈತ್ಯಗಾರ, ರೆಫ್ರಿಜರೇಟರ್, ಪೋಮ್‌ ಪ್ಲಾಸ್ಟಿಕ್ ಹಾಗೂ ಸಿಂಪಡಣಾ ಕ್ಯಾನ್‌, ಸೌಂದರ್ಯ ವರ್ಧಕಗಳ ಉತ್ಪಾದನೆಯಲ್ಲಿ ಬಳಸುತ್ತಾರೆ. CFCs ಒಮ್ಮೆ ವಾಯುಮಂಡಲವನ್ನು ಸೇರಿಕೊಂಡರೆ ಸುಮಾರು 75 ವರ್ಷಗಳ ಕಾಲ ಉಳಿಯಬಲ್ಲದು.

5. ಪರ್‌ಪ್ಲೋರೋ ಕಾರ್ಬನ್: 

 ಹಸಿರು ಮನೆ ಅನಿಲಗಳಲ್ಲಿ ಪರ್‌ಪ್ಲೋರೋ ಕಾರ್ಬನ್‌ ಅತ್ಯಂತ ಶಕ್ತಿಶಾಲಿ ಅನಿಲಗಳಾಗಿದ್ದು. ಇವುಗಳು ಇಂಧನ ದಹಿಸುವಿಕೆಯಿಂದ ಬಿಡುಗಡೆಗೊಳ್ಳುತ್ತವೆ. ವಾತಾವರಣದಲ್ಲಿ ಇವುಗಳು ಸುಮಾರು 50000 ವರ್ಷಗಳ ಕಾಲ ಜೀವಿಸಬಲ್ಲವುಗಳಾಗಿವೆ.

6. ಸಲ್ಫರ್ ಹೆಕ್ಸಾ ಫ್ಲೋರೈಡ್: 

 ಇದು ಕೂಡ ಭೂಮಂಡಲದ ಕಾಯುವಿಕೆಗೆ ಕಾರಣವಾಗಿದೆ. ಇದು ಕಾರ್ಬನ್ ಡೈಆಕ್ಸೈಡ್‌ ಗಿಂತ ಸುಮಾರು 22,200 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಪಳಿಯುಳಿಕೆ ಇಂಧನ, ಉರವಲು ಅರೆಬರೆ ಸುಡುವುದರಿಂದ, ಊದು ಕುಲುಮೆ, ಅಡುಗೆ ಒಲೆ, ಕಾರ್ಖಾನೆ, ಧೂಮಪಾನ, ಸ್ವಯಂಚಾಲಿತ ವಾಹನ ಹಾಗೂ ವಿಮಾನಗಳ ಇಂಧನಗಳ ದಹನ ಕ್ರಿಯೆ ಮುಂತಾದವುಗಳಿಂದ ಬಿಡುಗಡೆಯಾಗುತ್ತದೆ.

ಉಪಸಂಹಾರ

ಹಸಿರುಮನೆ ಅನಿಲಗಳ ಹೆಚ್ಚಳವು ಭೂಮಿಯ ಹವಾಮಾನ ಸಮತೋಲನವನ್ನು ಗಂಭೀರವಾಗಿ ಹದಗೆಡಿಸುತ್ತಿದೆ. ಇವುಗಳಿಂದ ಜಾಗತಿಕ ತಾಪಮಾನ ವೃದ್ಧಿ, ಹಿಮನದಿಗಳ ಕರಗುವಿಕೆ ಹಾಗೂ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಪರಿಸರವನ್ನು ಉಳಿಸಲು ಕೈಗಾರಿಕಾ ಮಾಲಿನ್ಯ ನಿಯಂತ್ರಣ, ಅರಣ್ಯ ಸಂರಕ್ಷಣೆ ಮತ್ತು ಪರ್ಯಾಯ ಇಂಧನಗಳ ಬಳಕೆ ಅತ್ಯಾವಶ್ಯಕವಾಗಿದೆ. ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಭವಿಷ್ಯದ ಭೂಮಿಯನ್ನು ರಕ್ಷಿಸಬಹುದು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಜಾಗತಿಕ ತಾಪಮಾನ

ಜಾಗತಿಕ ತಾಪಮಾನ

ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್‌, ಮಿಥೇನ್ ಹಾಗೂ ನೀರಾವಿಗಳು ಭೂಮಿಯ ಮೇಲ್ಮೈಯಿಂದ ಪ್ರತಿಫಲನಗೊಳ್ಳುವ ಶಾಖವನ್ನು ಹಿಡಿದು ಇಟ್ಟುಕೊಂಡಾಗ ವಾತಾವರಣದಲ್ಲಿ ಉಷ್ಣತೆ ಅಧಿಕಗೊಳ್ಳುತ್ತದೆ. ಇದನ್ನು ಹಸಿರು ಮನೆ ಪರಿಣಾಮ ಎಂದು ಕರೆಯುವರು. ಭೂಮಂಡಲ ಬಿಸಿಯಾಗಲು ಮುಖ್ಯವಾದ ಕಾರಣವೆಂದರೆ ಇಂಗಾಲದ ಡೈಆಕ್ಸೈಡ್‌, ಮಿಥೇನ್ ಹಾಗೂ ನೀರಾವಿಗಳು. ಇದರೊಂದಿಗೆ ಕ್ಲೋರೋಫ್ಲೋರೋ ಕಾರ್ಬನ್‌ಗಳೆಂಬ ಮಾನವ ಕಂಡುಹಿಡಿದ ಕೃತಕ ಹಸಿರು ಮನೆ ಅನಿಲವೂ ಸೇರಿಕೊಂಡಿದೆ. ಇದರಿಂದಾಗಿ ಹಸಿರು ಮನೆ ಪರಿಣಾಮದ ತೀವ್ರತೆ ಹೆಚ್ಚಿ ಭೂಮಿಯ ವಾಯುಮಂಡಲ ಅಪಾಯಕಾರಿ ಮಟ್ಟದಲ್ಲಿ ಬಿಸಿಯಾಗಿದೆ.

ಇಂದಿನ ವಾಯುಮಂಡಲದ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಇದು ವಾಯುಗುಣದ ಬದಲಾವಣೆಗೆ ಕಾರಣವಾಗಿದೆ. 1970 ರಿಂದ 1999ರ ಅವಧಿಯಲ್ಲಿ ಹೆಚ್ಚಾದ ತಾಪಮಾನದ ಶೇಖರಣೆಯ ಹೊರತಾಗಿ ಸಮುದ್ರ ಹಾಗೂ ಭೂಮಿಯ ಮೇಲ್ಮೈ ಈ ಎರಡರಲ್ಲಿಯೂ ಆದ ಸರಾಸರಿ ಹೆಚ್ಚಳವನ್ನು ದಾಖಲು ಮಾಡಲಾಗಿದೆ.  20ನೇ ಶತಮಾನದಲ್ಲಿ ಜಾಗತಿಕ ಉಷ್ಣತೆಯಲ್ಲಿ 0.8 c (1.4 F) ನಷ್ಟು ಏರಿಕೆಯಾಗಿದೆ. ಇದರಲ್ಲಿ 1980 ನಂತರ 3/2 ಭಾಗದಷ್ಟು ಏರಿಕೆಯನ್ನು ದಾಖಲಿಸಲಾಗಿದೆ.  ಶೇಕಡ 90ರಷ್ಟು ಜಾಗತಿಕ ತಾಪಮಾನ ಹಸಿರು ಮನೆ ಅನಿಲದ ಸಾಂದ್ರತೆಯ ಏರಿಕೆಯ ಪರಿಣಾಮವೆಂದು ವಿಜ್ಞಾನಿಗಳ ಅಭಿಮತವಾಗಿದೆ. 

ನಮ್ಮ ಭೂಮಿಯ ಮೇಲ್ಮೈನ ಸರಾಸರಿ ತಾಪಮಾನ 15° c (59F) ಇದೆ. ಆದರೆ ಕಳೆದ ಶತಮಾನಗಳಲ್ಲಿ ಈ ತಾಪಮಾನದ ಪ್ರಮಾಣ 0.6 c (1F) ನಷ್ಟು ಹೆಚ್ಚಳವಾಗಿದೆ. 2100  ವೇಳೆಗೆ ಅದು 1.4 ರಿಂದ 5.80 c ಅಂದರೆ (2.5 ರಿಂದ 10.4 ಸೆ.) ಹೆಚ್ಚಳವಾಗುವ ಸಾಧ್ಯತೆ ಇದೆ. ತಾಪಮಾನದ ಹೆಚ್ಚಳದಿಂದ ಧ್ರುವ ಪ್ರದೇಶಗಳ ಹಿಮಕರಗಿ ನೀರಾಗುತ್ತದೆ. ಮತ್ತು ಸಾಗರದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ. ಇದರೊಂದಿಗೆ ತಾಪಮಾನದ ಏರಿಕೆಯಾಗುವ ಸಂಭವವು ಹೆಚ್ಚಾಗಿದೆ. ಭೂಮಿಯು ತನ್ನ 4.65 ಬಿಲಿಯನ್ ವರ್ಷಗಳಲ್ಲಿ  ಹಲವಾರು ಬಾರಿ ಬೆಚ್ಚನೆಯಿಂದ ಕೂಡಿದ್ದು ಹಾಗೂ ಹಲವು ತಂಪಾಗಿದೆ. ಆದರೆ ಇತ್ತೀಚಿಗೆ ತಾಪಮಾನದಲ್ಲಿ ತೀವ್ರತೆಯನ್ನು ಭೂಮಿ ಎದುರಿಸುವಂತಾಗಿದೆ.

ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣಗಳು

  1. ಜೈವಿಕ ಇಂಧನಗಳನ್ನು ಅಳತೆ ಮೀರಿ ಉರಿಸುವುದು ಹಾಗೂ ವಾಹನಗಳು ಬಿಡುವ ಹೊಗೆ ಮತ್ತು ಸೌದೆಯನ್ನು ದಹಿಸುವುದರಿಂದ ಭೂಮಂಡಲದಲ್ಲಿ ಅಧಿಕ ಹೊಗೆ ಹರಡಿಕೊಳ್ಳುತ್ತದೆ. ಇದರಿಂದ ಇಂಗಾಲದ ಡೈಆಕ್ಸೈಡ್‌ ಪ್ರಮಾಣ ಹೆಚ್ಚಾಗುತ್ತದೆ. ಅರಣ್ಯ ನಾಶದಿಂದಾಗಿಯೂ ತಾಪಮಾನ ಏರಿಕೆಯಾಗುತ್ತಿದೆ.
  2. ಭತ್ತದ ಗದ್ದೆಗಳು ಮತ್ತು ಹಸುಗಳ ಸಗಣಿಯಲ್ಲಿರುವ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯಿಂದ ಮೀಥೇನ್ ಉತ್ಪಾದನೆಯಾಗಿ ವಾತಾವರಣ ಸೇರುತ್ತದೆ. ಹೀಗಾಗಿ ಜಾಗತಿಕ ತಾಪಮಾನದಲ್ಲಿ ಹೆಚ್ಚಳ ಕಂಡುಬರುತ್ತದೆ.
  3. ರಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಅತಿಯಾದ ಬಳಕೆ ಮಾಡುವುದು, ಘನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಸಹ ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತದೆ.
  4.  ಮಿತಿಮೀರಿದ ಕೈಗಾರಿಕೆಗಳ ಸ್ಥಾಪನೆ ಹಾಗೂ ಘನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುರಿಯುವುದು.
  5.  ವಾಹನಗಳ ಹೊಗೆ, ಪೆಟ್ರೋಲ್‌ ದಹನ ಇತ್ಯಾದಿ ಕಾರಣಗಳಿಂದ ಉಷ್ಣತೆಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಓಜೋನ್ ಪದರದ ಶಿಥಿಲತೆಯಿಂದ ಭೂ ಮಂಡಲ ಕಾವೇರುತ್ತದೆ.
  6.  ಅಣುಸ್ಥಾವರ ಮತ್ತು ಶಾಖೋತ್ಪನ್ನ ಘಟಕಗಳನ್ನು ಅತಿಯಾಗಿ ಸ್ಥಾಪನೆ ಮಾಡುವುದರಿಂದ ಭೂಮಂಡಲ ಅತ್ಯಂತ ಹೆಚ್ಚು ತಾಪಮಾನದಿಂದ ಕೂಡಿರುತ್ತದೆ.
  7.  ಜನಸಂಖ್ಯೆಯ ನಿರಂತರ ಏರಿಕೆಯೂ ಭೂಮಿಯ ತಾಪಮಾನಕ್ಕೆ ಕಾರಣವಾಗಿದೆ.

ಜಾಗತಿಕ ತಾಪಮಾನದ ಪರಿಣಾಮಗಳು

  1.  ಜಾಗತಿಕ ತಾಪಮಾನದಲ್ಲಿ ಉತ್ತರ ಧ್ರುವ ಪ್ರದೇಶಗಳು ಹೆಚ್ಚು ಶಾಕಯುಕ್ತವಾಗುವ ಕಾರಣ ಅಲ್ಲಿನ ಮಂಜುಗಡ್ಡೆಗಳು ಕಡಿಮೆಯಾಗುತ್ತವೆ. ಆಗ ಚಳಿಗಾಲದಲ್ಲಿ ಕೆಲವು ಪ್ರದೇಶಗಳಲ್ಲಿ ಮಂಜು ಬೀಳದೇ ಹೋಗಬಹುದು. ಸಮಶೀತೋಷ್ಣವಲಯದ ಮಂಜು ಅವಧಿಗಿಂತ ಮುಂಚಿತವಾಗಿ ಕರಗಿ ಹೋಗುವುದರಿಂದ ಕಾಲಮಾನಗಳ ಅವಧಿಯಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಆಗ ಚಳಿಗಾಲ ಮತ್ತು ರಾತ್ರಿಯ ವೇಳೆ ಉಷ್ಣಾಂಶ ಹೆಚ್ಚಾಗುವುದು.
  2.  ಬೆಚ್ಚನೆಯ ಪ್ರದೇಶಗಳು ಅರ್ದ್ರತೆಯಿಂದ ಕೂಡಿರುವುದರಿಂದ ನೀರಾವಿ ಹೆಚ್ಚಾಗುತ್ತದೆ. ಇದರಿಂದ ಮಳೆಯ ಪ್ರಮಾಣ ಅಧಿಕವಾಗುತ್ತದೆ. ಇದರೊಂದಿಗೆ ಬಿರುಗಾಳಿ ತೀವ್ರವಾಗುತ್ತದೆ. ಆಗ ಮಣ್ಣಿನಲ್ಲಿನ ತೇವಾಂಶ ಶಾಖದಿಂದ ಬೇಗನೆ ಆವಿಯಾಗಿ ಮಣ್ಣು ಬರಡಾಗುತ್ತದೆ.
  3. ಸಾಗರದ ಮೇಲ್ಮೈ ಪದರ ಬಿಸಿಯಾಗುತ್ತಿದ್ದಂತೆ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಇದರಿಂದ ಮಂಜುಗಡ್ಡೆ ಶೀಘ್ರವಾಗಿ ಕರಗುವುದರಿಂದ ಸಮುದ್ರಕ್ಕೆ ಉಕ್ಕಿ ಹರಿಯುತ್ತದೆ. ಆಗ ತೀರ ಪ್ರದೇಶಗಳು ಮುಳುಗಡೆಯಾಗುವ ಭೀತಿ ಎದುರಾಗುತ್ತದೆ.
  4.  ವಾತಾವರಣ ಬಿಸಿಯಾಗುತ್ತಿದ್ದಂತೆ ಪ್ರಾಣಿ ಪಕ್ಷಿಗಳು ಬದಲಾದ ಪರಿಸ್ಥಿತಿಗೆ ಒಗ್ಗಿಕೊಳ್ಳಲಾಗದೆ ತುಂಬಾ ವೇದನೆಯನ್ನು ಪಡುತ್ತವೆ. ಸಾವಿರಾರು ಜಾತಿಯ ಸಸ್ಯಗಳು ನಾಶವಾಗುತ್ತದೆ. ಪ್ರಾಣಿಗಳು ತಂಪು ಪ್ರದೇಶಗಳ ಕಡೆಗೆ ಗುಳೇ ಹೋಗುತ್ತವೆ.
  5.  ಜನರು ತುಂಬಾ ಒತ್ತಡಗಳಿಗೆ ಒಳಗಾಗಬಹುದು ಉಷ್ಣವಲಯದ ಸೊಳ್ಳೆ ಹಾಗೂ ಇತರ ಜೀವಿಗಳು ಉಷ್ಣವಲಯದಿಂದ ಶೀತ ವಲಯದ ಕಡೆಗೆ ಪ್ರಯಾಣಿಸಬಹುದು. ಇದರಿಂದ ರೋಗಗಳು ಅಲ್ಲಿ ತೀವ್ರವಾಗಿ ಹರಡಬಹುದು.
  6.  ಜಾಗತಿಕ ತಾಪಮಾನದಿಂದ ಹಿಮನದಿಗಳು ಕರಗುತ್ತವೆ.
  7.  ಕೃಷಿ ಭೂಮಿ ಕಡಿಮೆಯಾಗಿ ಆಹಾರ ಧಾನ್ಯಗಳು ಜನರಿಗೆ ಸಿಗದೇ ಹೋಗಬಹುದು.
  8.  ಹೆಚ್ಚಿನ ಹಿಮಪಾತಗಳು ಅತಿಯಾದ ಮಳೆ ಮತ್ತು ಹೆಚ್ಚಿನ ಪ್ರಮಾಣದ ಚಂಡಮಾರುತಗಳು ಉಂಟಾಗಬಹುದು.
  9.  ಮಳೆಯ ಹಂಚಿಕೆಯು ಬದಲಾವಣೆಯಾದರೆ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟವನ್ನು ಅನುಭವಿಸ ಬೇಕಾಗವುದು.
  10. ಶೀತ ವಲಯಗಳು ಮತ್ತು ತಗ್ಗು ಪ್ರದೇಶಗಳು ಸಾಗರದಲ್ಲಿ ಮುಳುಗಿ ಹೋಗಬಹುದು.

ಉಪಸಂಹಾರ 

ಜಾಗತಿಕ ತಾಪಮಾನವು ಭೂಮಿಯ ಜೀವ ವೈವಿಧ್ಯತೆ, ಹವಾಮಾನ ಹಾಗೂ ಮಾನವ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅರಣ್ಯ ನಾಶ, ಇಂಧನದ ಅತಿಯಾದ ಬಳಕೆ ಮತ್ತು ಮಾಲಿನ್ಯ ಈ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸುತ್ತಿವೆ. ಪ್ರಕೃತಿಯನ್ನು ರಕ್ಷಿಸುವುದು ಮತ್ತು ಹಸಿರುಮನೆ ಅನಿಲಗಳ ನಿಯಂತ್ರಣವೇ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆಯೂ ಮಹತ್ವದ್ದಾಗಿದೆ. ಇಂದು ಎಚ್ಚೆತ್ತುಕೊಂಡರೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ಉಳಿಸಬಹುದು.

ವಾಯುಗುಣದ ಬದಲಾವಣೆಗೆ ಕಾರಣಗಳು

ವಾಯುಗುಣದ ಬದಲಾವಣೆಗೆ ಕಾರಣಗಳು

ವಾಯುಗಣದ ಬದಲಾವಣೆಗೆ ಎರಡು ಅಂಶಗಳು ಪ್ರಮುಖವಾಗಿ ಕಾರಣಗಳಾಗಿವೆ. ಅವುಗಳೆಂದರೆ ನೈಸರ್ಗಿಕ ಕಾರಣಗಳು ಮತ್ತು ಮಾನವ ನಿರ್ಮಿತ ಕಾರಣಗಳು.

ವಾಯುಗಣದ ಬದಲಾವಣೆಗೆ ಎರಡು ಅಂಶಗಳು ಪ್ರಮುಖವಾಗಿ ಕಾರಣಗಳಾಗಿವೆ. ಅವುಗಳೆಂದರೆ ನೈಸರ್ಗಿಕ ಕಾರಣಗಳು ಮತ್ತು ಮಾನವ ನಿರ್ಮಿತ ಕಾರಣಗಳು.

1. ನೈಸರ್ಗಿಕ ಕಾರಣಗಳು: (Natural Causes)

ಭೂಮಿಯ ವಾಯುಗುಣ ಯಾವಾಗಲೂ ಒಂದೇ ರೀತಿಯಾಗಿರುವುದಿಲ್ಲ. ಅದು ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತಲೇ ಇರುತ್ತದೆ. ವಿವಿಧ ನೈಸರ್ಗಿಕ ಕಾರಣಗಳಿಂದಾಗಿ ವಾಯುಗುಣ ಬದಲಾಗುತ್ತಿರುವುದು ನಮಗೆ ಗೋಚರಿಸುತ್ತದೆ.

1.ಭೂಖಂಡಗಳ ಚಲನೆ:  ಭೂ ಖಂಡಗಳು ವಿವಿಧ ವಾಯುಗುಣ ವಲಯಗಳಿಗೆ ಬದಲಾವಣೆಗೊಂಡಿವೆ. ಅಂಟಾರ್ಟಿಕ ಖಂಡ ಹಿಂದೆ ಉಷ್ಣವಲಯವಾಗಿದ್ದು ಈಗ ಹಿಮಾಲಯವಾಗಿ ಬದಲಾದ ಕಾರಣ ಅಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಕಂಡುಬಂದಿವೆ.

2.ಜ್ವಾಲಾಮುಖಿಗಳು:  ಪದೇ ಪದೇ ಭೂಮಿಯ ಮೇಲೆ ಜ್ವಾಲಾಮುಖಿಗಳು ಸಂಭವಿಸುವುದರಿಂದ ಗಂಧಕದ ಡೈಆಕ್ಸೈಡ್‌, ನೀರು, ಆವಿ, ಗಾಳಿ ಹಾಗೂ ದೂಳು ವಾಯುಮಂಡಲದಲ್ಲಿ ಸೇರುತ್ತದೆ. ಇದು ನೂರಾರು ವರ್ಷಗಳವರೆಗೆ ಹೀಗೆ ನಿರಂತರವಾಗಿ ನಡೆದಾಗ ವಾಯುಗುಣದಲ್ಲಿ ಸಹಜವಾಗಿ ಬದಲಾವಣೆ ಕಂಡುಬರುತ್ತದೆ.

3.ಭೂಮಿ ಅಕ್ಷದ ಬದಲಾವಣೆ: ಭೂಮಿಯು ತನ್ನ ಕಕ್ಷೆಯ ಮೇಲೆ 23½  ಕೋನದಲ್ಲಿ ಓರೆಯಾಗಿ ಸುತ್ತುತ್ತದೆ. ಈ ಓರೆಯಾಗುವಿಕೆ ಒಂದೇ ರೀತಿಯಾಗಿರದೆ  ಅದು ಒಂದು ಶತಮಾನದಲ್ಲಿ ಅರ್ಧ ಡಿಗ್ರಿಉಷ್ಟು ಬದಲಾವಣೆ ಹೊಂದಿದೆಯೆಂದು ಅಂದಾಜು ಮಾಡಲಾಗಿದೆ.  ಈ ಕಾರಣದಿಂದಲೂ ವಾಯುಗುಣದಲ್ಲಿ ಬದಲಾವಣೆ ಕಂಡು ಬರುತ್ತದೆ.

2.ಮಾನವ ನಿರ್ಮಿತ ಕಾರಣಗಳು: (Man Included Causes)

ಇತ್ತೀಚಿನ ದಶಕಗಳಲ್ಲಿ ವಾಯುಗುಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವುದು ದೃಢಪಟ್ಟಿದೆ. ಮಾನವನ ವಿವಿಧ ಬಗೆಯ ಅಹಿತಕರ ಘಟನೆಗಳ ಕಾರಣ ವಾಯುಮಂಡಲದಲ್ಲಿ ತೀವ್ರತರವಾದ ಬದಲಾವಣೆಗಳು ಗೋಚರಿಸುತ್ತವೆ. ಕೈಗಾರಿಕಾ ಕ್ರಾಂತಿಯ ನಂತರ ವಾಯುಮಂಡಲದ ಉಷ್ಣಾಂಶದಲ್ಲಿ ಸಾಕಷ್ಟು ಏರುಪೇರುಗಳು ಕಂಡುಬಂದವು. ವಿದ್ಯುತ್ ಉತ್ಪಾದನೆ, ಕಾಗದ ಉತ್ಪಾದನೆ, ವ್ಯವಸಾಯ, ಪ್ರಾಣಿ ಸಾಗಾಣಿಕೆ, ಮೀನುಗಾರಿಕೆ ವಿಸ್ತಾರ ಹೊಂದಿದಂತೆ ಕಾಡುಗಳ ನಾಶವು ಹೆಚ್ಚಾಯಿತು. ಇದರಿಂದಾಗಿ ನೈಸರ್ಗಿಕ ಪರಿಸರದಲ್ಲಿ ಬದಲಾವಣೆಗಳಾಗಿ ವಾಯುಮಂಡಲದಲ್ಲಿ ಬಿಸಿಯಾಗಿದೆ. 18ನೇ ಶತಮಾನದ ಆರಂಭದಲ್ಲಿ ಜಾಗತಿಕ ತಾಪಮಾನ 14c ಸೆ ನಷ್ಟಿತ್ತು. 2017ರ ವೇಳೆಗೆ ಅದು 10 ಡಿಗ್ರಿ ಸೆ ನಷ್ಟು ಹೆಚ್ಚಾಗಿದೆ. 2015ರ ಕಾನ್ಫರೆನ್ಸ್ ಆಫ್ ಪಾರ್ಟಿಸ್‌ ಸಮಾವೇಶದಲ್ಲಿ ಜಗತ್ತಿನ 195 ದೇಶಗಳು ಭಾಗವಹಿಸಿ ಜಾಗತಿಕ ತಾಪಮಾನವು ಕೈಗಾರಿಕಾ ಪೂರ್ವ ಹಂತಕ್ಕಿಂತ 1.5° ಸೆ ಗಿಂತ ಹೆಚ್ಚಾಗದಂತೆ ನಿಯಂತ್ರಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಆದರೂ ಯಾವ ಪ್ರಯೋಜನಗಳೂ ಸದ್ಯಕ್ಕೆ ಕಂಡು ಬರುತ್ತಿಲ್ಲ.

1. ಕಾಡುಗಳ ನಾಶ: (Deforeststion) ಪ್ರಪಂಚದಲ್ಲಿ ಹಲವಾರು ಕಾರಣಗಳಿಂದ ಕಾಡುಗಳು ನಾಶಗೊಂಡಿವೆ. ವ್ಯವಸಾಯ, ಅಣೆಕಟ್ಟು ನಿರ್ಮಾಣ, ರೈಲು ಹಳಿಗಳ ನಿರ್ಮಾಣ, ನೀರಾವರಿ, ಪಶು ಸಂಗೋಪನೆ, ಅರಣ್ಯ ವಸ್ತುಗಳ ಬಳಕೆ, ವಸತಿ ಯೋಜನೆ, ಕಾಡಿಗೆ ಬೆಂಕಿ ಮೊದಲಾದ ಕಾರಣಗಳಿಂದ ಕಾಡುಗಳು ನಾಶವಾಗಿವೆ. ಇದರ ಪರಿಣಾಮದಿಂದ ವಾಯುಮಂಡಲದಲ್ಲಿ ಇಂಗಾಲಾಮ್ಲ ಹೆಚ್ಚಾಗಿದೆ. ಇದು ವಾಯುಗುಣದ ಬದಲಾವಣೆಗೆ ಕಾರಣವಾಗಿದೆ. ಇತ್ತೀಚಿಗೆ ಕಾಡುಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಅದರಿಂದ ಯಾವುದೇ ಯಶಸ್ಸು ಕಂಡುಬಂದಿಲ್ಲ.

2.ಕೈಗಾರಿಕೆಗಳ ಸ್ಥಾಪನೆ: (Establishment of Industries) ಪ್ರಪಂಚದಲ್ಲಿ ಬಿಲಿಯನ್ ಕೈಗಾರಿಕೆಗಳು ಸ್ಥಾಪನೆಯಾಗಿವೆ.. ಅವುಗಳಲ್ಲಿ ಸಿಮೆಂಟ್, ಕಬ್ಬಿಣ ಮತ್ತು ಉಕ್ಕು ರಾಸಾಯನಿಕ ಗೊಬ್ಬರ ಮುಂತಾದ ಕಾರ್ಖಾನೆಗಳು 23% ಅಧಿಕ ಹಸಿರು ಮನೆ ಅನಿಲಗಳಾದ ಇಂಗಾಲದ ಡೈಆಕ್ಸೈಡ್‌ ಹಾಗೂ ಇತರೆ ಅನಿಲಗಳನ್ನು ಉತ್ಪಾದಿಸುತ್ತವೆ. ಇವುಗಳು ವಾಯುಗುಣದ ಬದಲಾವಣೆಗೆ ಕಾರಣಗಳಾಗಿವೆಯಲ್ಲದೆ ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರಿವೆ.

3.ಶಾಕೋತ್ಪನ್ನ ಘಟಕಗಳು: (Thermal Plants) ಇಂದು ಮಾನವನ ಅಗತ್ಯಗಳಲ್ಲಿ ಒಂದಾದ ವಿದ್ಯುತ್ ಶಕ್ತಿ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ವಿಶ್ವದೆಲ್ಲೆಡೆ ಜಲವಿದ್ಯುತ್, ಅಣುವಿದ್ಯುತ್, ಶಾಖವಿದ್ಯುತ್, ಸೌರವಿದ್ಯುತ್, ಪವನವಿದ್ಯುತ್, ಮೊದಲಾದ ವಿದ್ಯುತ್ ಉತ್ಪಾದನೆ ಘಟಕಗಳನ್ನು  ಆರಂಭಿಸಲಾಗಿದೆ. ಇವುಗಳಲ್ಲಿ ಶಾಕೋತ್ಪನ್ನ ಪ್ರಮಾಣವೇ ಇಂದು ಹೆಚ್ಚಾಗಿದೆ. ಈ ಘಟಕಗಳಿಗೆ ಅಧಿಕ ಪ್ರಮಾಣದ ಕಲ್ಲಿದ್ದಲನ್ನು ಬಳಸುತ್ತಾರೆ. ಇದು ವಾಯುಮಂಡಲದಲ್ಲಿನ ಇಂಗಾಲದ ಡೈಆಕ್ಸೈಡ್‌ ಹೆಚ್ಚಳಕ್ಕೆ ಕಾರಣವಾಗಿದೆ. ಶೇಕಡ 25ರಷ್ಟು ಇಂಗಾಲದ ಡೈಆಕ್ಸೈಡ್‌ ವಾತಾವರಣವನ್ನು ಸೇರುವುದೆಂದು ಅಂದಾಜಿಸಲಾಗಿದೆ. ಶಾಕೋತ್ಪನ್ನ ಕೇಂದ್ರಗಳಲ್ಲಿ 1 ಕಿ.ವ್ಯಾಟ್‌ ವಿದ್ಯುತ್ ಉತ್ಪಾದಿಸಿದರೆ 950 ಗ್ರಾಂ ಇಂಗಾಲದ ಡೈಆಕ್ಸೈಡ್‌ ವಾಯು ಮಂಡಲವನ್ನು ಸೇರುತ್ತದೆ.

4.ಸಾರಿಗೆ: (Transport) ಆಧುನಿಕ ಜಗತ್ತಿನಲ್ಲಿ ಸಾರಿಗೆ-ಸಂಪರ್ಕಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸಾರಿಗೆ ಸಂಪರ್ಕಗಳು ನಮ್ಮ ದೇಶದ ನರನಾಡಿಗಳು ಇದ್ದ ಹಾಗೆ. ರಸ್ತೆ ಸಾರಿಗೆ, ರೈಲು ಸಾರಿಗೆ, ವಾಯು ಸಾರಿಗೆ ಹಾಗೂ ಜಲ ಸಾರಿಗೆಗಳು ಇವೆ. ಇವೆಲ್ಲಾ ಸಾರಿಗೆಗಳಿಗೆ ಬಳಕೆಯಾಗುವುದು ಪೆಟ್ರೋಲಿಯಂ ಇಂಧನಗಳು. ಪೆಟ್ರೋಲಿಯಂ ಬಳಕೆಯಿಂದ ಸೋರಿದ ಹೊಗೆಯಲ್ಲಿ ಅಪಾರ ಪ್ರಮಾಣದ ಇಂಗಾಲದ ಮೊನಾಕ್ಸೈಡ್ ಹಾಗೂ ಸಾರಜನಕ ಆಕ್ಸೈಡ್‌ಗಳು ವಾಯುಮಂಡಲವನ್ನು ಸೇರುತ್ತವೆ. ಇವುಗಳು ವಾಯುಗುಣದ ಬದಲಾವಣೆ ಕಾರಣವಾಗುತ್ತದೆ.

5.ಕೃಷಿ: (Agriculture) ಆಧುನಿಕ ಬೇಸಾಯ ಪದ್ಧತಿಯಲ್ಲಿ ಮಾನವನು ಹೆಚ್ಚು ಇಳುವರಿಗಾಗಿ ವಿವಿಧ ಬಗೆಯ ರಸಗೊಬ್ಬರ ಕ್ರಿಮಿನಾಶಕ ಹಾಗೂ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾನೆ. ಇದರಿಂದ ಇಂಗಾಲದ ಡೈಆಕ್ಸೈಡ್‌ ಭೂಮಂಡಲವನ್ನು ಸೇರಿ ವಾಯುಗುಣದ ಏರುಪೇರಿಗೆ ಕಾರಣವಾಗುತ್ತದೆ.

6.ಘನ ತ್ಯಾಜ್ಯ: (Solid Waste)  ಮಾನವನಿಂದ ದಿನವೊಂದಕ್ಕೆ ಸುಮಾರು 60 ದಶಲಕ್ಷ ಟನ್‌ಗಳಷ್ಟು ಘನ ತ್ಯಾಜ್ಯ ಉತ್ಪಾದನೆ ಯಾಗುತ್ತದೆ ಎಂದು ಅಂದಾಜಿಸಲಾಗಿದೆ. ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ಉತ್ಪಾದನೆ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇವುಗಳನ್ನು ವಿಲೇವಾರಿ ಮಾಡಲು ಈಗ ಸ್ಥಳವೇ ಇಲ್ಲದಂತಾಗಿದೆ. ಕೆಲವೊಂದು ತ್ಯಾಜ್ಯಗಳು ಕೊಳೆತು ಗಬ್ಬು ವಾಸನೆ ಹರಡುತ್ತವೆ. ಘನ ತ್ಯಾಜ್ಯ ವಸ್ತುಗಳಿಂದ ಇಂಗಾಲಾಮ್ಲ ಹಾಗೂ ಮಿಥೇನ್ ಬಿಡುಗಡೆ ಹೊಂದಿ ವಾಯುಮಂಡಲವನ್ನು ಸೇರುತ್ತವೆ. ಇವುಗಳು ವಾಯುಗುಣದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ.

7.ತೈಲ ಮತ್ತು ಅನಿಲ ಬಾವಿಗಳು:  ಇಂದು ಜಗತ್ತಿನಲ್ಲಿ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೆ ಹೋಗುತ್ತಿದೆ. ಹೆಚ್ಚುತ್ತಿರುವ ವಾಹನಗಳಿಗೆ ಇಂಧನದ ಅಗತ್ಯವಿದೆ. ಹಾಗಾಗಿ ಜಗತ್ತಿನಾದ್ಯಂತ ತೈಲ ಬಾವಿಗಳನ್ನು ನಿರಂತರವಾಗಿ ಕೊರೆಯಲಾಗುತ್ತದೆ. ಹೀಗೆ ತೈಲ ಮತ್ತು ಅನಿಲ ಬಾವಿಗಳನ್ನು ಕೊರೆದಾಗ ಅಪಾರ ಪ್ರಮಾಣದಲ್ಲಿ ಮಿಥೇನ್‌ ಬಿಡುಗಡೆಯಾಗುತ್ತದೆ. ಜೊತೆಗೆ ಸಮುದ್ರದಲ್ಲಿ ಇಂಧನ ಸೋರಿಕೆಯಾಗುವುದು. ಇವೆಲ್ಲಾ ಕಾರಣಗಳಿಂದ ವಾಯುಮಂಡಲದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ.

8.ಕೊಳ್ಳುಬಾಕತನ:  ಮೂಲಭೂತ ಅಗತ್ಯಗಳು ಈಡೇರಿದ ನಂತರ ತೆಪ್ಪಗಿರದ ಮನುಷ್ಯ ತಾನು ಸಮಾಜದಲ್ಲಿ ದೊಡ್ಡವನು ಎಂದು ತೋರಿಸಿಕೊಳ್ಳುವುದಕ್ಕೋ ಅಥವಾ ತನ್ನ ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಳ್ಳುವುದಕ್ಕೋ ತನಗೆ ಬೇಡವಾದ ವಸ್ತುಗಳನ್ನು ಅಥವಾ ಅಗತ್ಯವನ್ನು ಮೀರಿದ ವಸ್ತುಗಳನ್ನು ದಿನೇ ದಿನೇ ಕೊಂಡುಕೊಳ್ಳುತ್ತಾನೆ. ಉದಾ: ಚಿನ್ನ, ಮನೆ,ಉಡುಪು ಇತ್ಯಾದಿಗಳನ್ನು ಕೊಳ್ಳುವುದು ಹೆಚ್ಚಾಗಿದೆ. ಈ ಅಧಿಕ ಕೊಳ್ಳುವಿಕೆಯಿಂದ ಪ್ರತಿ ವಸ್ತುಗಳ ಉತ್ಪಾದನೆಗೂ ಅಧಿಕ ಸಂಪನ್ಮೂಲದ ಅಗತ್ಯತೆ ಇರುತ್ತದೆ. ಇದು ವಾಯುಗುಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಉಪಸಂಹಾರ

ವಾಯುಗುಣದ ಬದಲಾವಣೆ ನೈಸರ್ಗಿಕವಾಗಿಯೂ ಹಾಗೂ ಮಾನವ ನಿರ್ಮಿತ ಕಾರಣಗಳಿಂದಲೂ ಸಂಭವಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ವಿಶೇಷವಾಗಿ ಕೈಗಾರಿಕೆ, ಸಾರಿಗೆ, ಕಾಡುಗಳ ನಾಶ ಮತ್ತು ಅತಿಯಾದ ಸಂಪನ್ಮೂಲ ಬಳಕೆ ವಾಯುಗುಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ, ಅರಣ್ಯ ಸಂರಕ್ಷಣೆ ಹಾಗೂ ಜಾಗೃತ ಜೀವನಶೈಲಿ ಅಗತ್ಯವಾಗಿದೆ. ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ನಡೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ನೀಡಲು ಸಹಕಾರಿಯಾಗುತ್ತದೆ.

ಘನ ತ್ಯಾಜ್ಯಗಳ ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳು

ಘನ ತ್ಯಾಜ್ಯಗಳ ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳು

ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಕೈಗಾರೀಕರಣ ಮತ್ತು ಜನಸಂಖ್ಯಾ ವೃದ್ಧಿಯ ಪರಿಣಾಮವಾಗಿ ಘನ ತ್ಯಾಜ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಬಳಸಿ ಎಸೆಯುವ ಸಂಸ್ಕೃತಿ ಹಾಗೂ ಪ್ಲಾಸ್ಟಿಕ್‌ನ ಅತಿಯಾದ ಬಳಕೆ ಪರಿಸರ  ಸಮತೋಲನವನ್ನು ಹದಗೆಡಿಸುತ್ತಿದೆ. ಸರಿಯಾದ ತ್ಯಾಜ್ಯ ನಿರ್ವಹಣೆ ಇಲ್ಲದಿದ್ದರೆ ಮಣ್ಣು, ನೀರು ಮತ್ತು ವಾಯು ಮಾಲಿನ್ಯ ಉಂಟಾಗುತ್ತದೆ. ಇದರಿಂದ ಮಾನವನ ಆರೋಗ್ಯದ ಮೇಲೆ ಮಾತ್ರವಲ್ಲದೆ ಪ್ರಾಣಿ–ಪಕ್ಷಿ ಹಾಗೂ ಜಲಚರ ಜೀವಿಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಆದುದರಿಂದ ಘನ ತ್ಯಾಜ್ಯದ ಪರಿಣಾಮಗಳು ಮತ್ತು ಅದರ ನಿಯಂತ್ರಣ ಕ್ರಮಗಳ ಕುರಿತು ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ.

ಘನ ತ್ಯಾಜ್ಯಗಳ ಪರಿಣಾಮಗಳು : (Results of Solid Waste) 

1. ಪರಿಸರ ಮಾಲಿನ್ಯ:  ಘನ ತ್ಯಾಜ್ಯ ವಸ್ತುಗಳನ್ನು ರಸ್ತೆಗಳು, ಚರಂಡಿಗಳು, ಖಾಲಿ ಜಾಗಗಳು, ಸಾರ್ವಜನಿಕ ಪ್ರದೇಶಗಳು, ಆಸ್ಪತ್ರೆ ಆವರಣ, ಶಾಲಾ ಕಾಲೇಜುಗಳ ಸುತ್ತಮುತ್ತ, ಕಾರ್ಖಾನೆಗಳ ಸುತ್ತಮುತ್ತ, ಎಲ್ಲೆಂದರಲ್ಲಿ ಎಸೆಯುವುದರ ಫಲಶೃತಿಯಂದರೆ ಅದು ಪರಿಸರ ಮಾಲಿನ್ಯ.

2. ಸಾರ್ವಜನಿಕ ಆರೋಗ್ಯ ಸಮಸ್ಯೆ:  ಅಲ್ಲಲ್ಲಿ ರಾಶಿಯಾಗಿ ಹಾಕಲಾದ ಕೊಳೆತ ಆಹಾರ ಪದಾರ್ಥಗಳು, ತರಕಾರಿ ಸಿಪ್ಪೆಗಳು, ಜೈವಿಕ ತ್ಯಾಜ್ಯಗಳು, ಮುಂತಾದವುಗಳಲ್ಲಿ ಇಲಿಗಳು, ಹೆಗ್ಗಣಗಳು, ನೊಣಗಳು, ಹಂದಿಗಳು ಸೇರಿ ರೋಗವನ್ನು ಎಲ್ಲೆಡೆ ಹರಡುತ್ತವೆ. ಕೊಳೆಯುತ್ತಿರುವ ಪದಾರ್ಥಗಳ ಮೇಲೆ ಕುರಿತ ನೊಣಗಳು ಟೈಪಾಯಿಡ್‌, ವಾಂತಿಭೇದಿ, ಕರುಳುಬೇನೆ, ಜಠರದ ರೋಗಗಳು ಹಾಗೂ ಸಾಲ್ಮನೆಲ್ಲೋಸಿಸ್‌  ನಂತಹ ರೋಗಗಳನ್ನು ತರುತ್ತವೆ. ಅದರ ಮೇಲೆ ಕುಳಿತ ಸೊಳ್ಳೆಗಳು ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಹಂದಿ ಜ್ವರ, ಇಲಿಜ್ವರ, ಆನೆಕಾಲು ರೋಗ ಮುಂತಾದ ರೋಗಗಳಿಗೆ ಕಾರಣವಾಗಿವೆ.

3. ಕೈಗಾರಿಕೆ ಹಾಗೂ ನಗರಗಳ ತ್ಯಾಜ್ಯದ ಸಮಸ್ಯೆ:  ಕೈಗಾರಿಕೆಗಳು ಹಾಗೂ ನಗರಗಳಿಂದ ಹೊರಬೀಡುವ ಘನ ವಸ್ತುಗಳು ಹೆಚ್ಚು ಅಪಾಯಕಾರಿಯಾಗಿದ್ದು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಪ್ಲಾಸ್ಟಿಕ್, ರಾಸಾಯನಿಕಗಳು, ಕೀಟನಾಶಕಗಳು ಮತ್ತು ತವರ ಮುಂತಾದವುಗಳು ಕರುಳು ಬೆನೆ, ಕ್ಯಾನ್ಸರ್, ಉಬ್ಬಸ ರೋಗ, ಕೆಮ್ಮು ಮುಂತಾದ ರೋಗ ಕಾರಕಗಳಾಗಿವೆ.

4. ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಭೂಮಿಯಲ್ಲಿನ ಪ್ಲಾಸ್ಟಿಕ್ ಚೀಲ ನೀರನ್ನು ತುಂಬಿಕೊಳ್ಳುವುದರಿಂದ ಅದರ ಕೊಳಕು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಡೈಯಾಕ್ಲಿನ್‌ ಎಂಬ ರಾಸಾಯನಿಕ ತಾಯಿಯ ಹಾಲಿನ ಮೂಲಕ ಮಗುವಿಗೆ ರವಾನೆಯಾಗುತ್ತದೆ. ಪ್ಲಾಸ್ಟಿಕ್‌ ಮಾನವ ಮತ್ತು ವನ್ಯಜೀವಿಗಳ ಸಂತಾನೋತ್ಪತ್ತಿ ಕ್ರಿಯೆಗಳನ್ನು ಕುಂಠಿತಗೊಳಿಸುತ್ತದೆ. ಪ್ಲಾಸಿಕ್‌ ಸುಡುವುದರಿಂದ ʻʻಡಯಕ್ಲಿನ್‌ ಹಾಗೂ ಪೈರಾನ್‌ ಎಂಬ ವಿಷಕಾರಿ ರಸಾಯನಿಕ ವಾತಾವರಣದಲ್ಲಿ ಬಿಡುಗಡೆಯಾಗುತ್ತದೆ. ಇವು ಪರಿಸರ ನಾಶಕ್ಕೆ ಕಾರಣವಾಗುತ್ತವೆ. ಪ್ಲಾಸ್ಟಿಕ್‌ನ್ನು ಎಸೆಯುವುದರಿಂದ ಚರಂಡಿಗಳು ಹಾಗೂ ಮಣ್ಣಿನ ರಂಧ್ರಗಳು ಮುಚ್ಚಿ ನೀರನ್ನು ಭೂಮಿಯೊಳಗೆ ಇಂಗದಂತೆ ತಡೆಯುತ್ತವೆ. ಭೂಮಿಯ ಮೇಲಿನ ಎಷ್ಟೋ ಪ್ಲಾಸ್ಟಿಕ್‌ಗಳನ್ನು ತಿಂದ ದನಕರುಗಳು ಹಾಗೂ ಜಲಚರ ಪ್ರಾಣಿಗಳು ಸಾವನ್ನಪ್ಪಿದ ಅದೆಷ್ಟೋ ಘಟನೆಗಳಿವೆ. ಅದೆಷ್ಟೋ ಪ್ರಾಣಿಗಳಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಪ್ಲಾಸ್ಟಿಕ್‌ ಸುರುಳಿಗಳನ್ನು ಹೊರ ತಗೆದ್ದಿದೆ. ಇಂತಹ ನೂರಾರು ಘಟನೆಗಳು ದೇಶದಲ್ಲಿ ಸಂಭವಿಸುತ್ತಿವೆ. ಆದರೂ ಸರ್ಕಾರವಾಗಲಿ ಸಂಘ-ಸಂಸ್ಥೆಗಳಾಗಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿವೆ.

5. ಆಸ್ಪತ್ರೆ ತ್ಯಾಜ್ಯ ಸಮಸ್ಯೆ:  ನಮ್ಮ ದೇಶದಲ್ಲಿ ಆಸ್ಪತ್ರೆಗಳಿಂದಲೇ ದಿನಕ್ಕೆ ೬೦೦ ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ ನೋಂದಣಿಯಾಗದ ನರ್ಸಿಂಗ್ ಹೋಂಗಳು, ನಕಲಿ ವೈದ್ಯರು ಉತ್ಪಾದಿಸುವ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಾಗಿದೆ. ಈ ತ್ಯಾಜ್ಯಗಳಿಂದ ಹಲವಾರು ರೋಗಗಳು ಬರುತ್ತವೆ. ವಾಂತಿ, ಭೇದಿ, ಕರುಳು ಬೇನೆ, ಅತಿಸಾರ, ಅಮಶಂಕೆ, ಟೈಫಾಯಿಡ್, ಜ್ವರ, ಮುಂತಾದ ರೋಗಗಳು ಇಂದು ಸಾಮಾನ್ಯವೆಂಬಂತೆ ಕಾಣಿಸುತ್ತದೆ.

ಘನ ತ್ಯಾಜ್ಯದ ನಿಯಂತ್ರಣ ಕ್ರಮಗಳು : 

1. ತೆರೆದ ಹಳ್ಳಗಳು:  ಇವುಗಳು ಒಂದು ರೀತಿಯ ತಗ್ಗು ಪ್ರದೇಶಗಳಾಗಿವೆ. ಇಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ಹಾಕಲಾಗುತ್ತದೆ. ಈ ಹಳ್ಳಗಳನ್ನು ಮುಚ್ಚದೆ ಇರುವ ಕಾರಣ ಇಲಿಗಳು, ನೊಣಗಳು ಹಾಗೂ ಬೇರೆ ಬೇರೆ ಕೀಟಗಳು ಬಂದು ಸೇರಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಆಗ ಸುತ್ತಲಿನ ಪ್ರದೇಶಗಳಿಗೆ ರೋಗ ಹರಡುತ್ತದೆ. ತೆರೆದ ಹಳ್ಳಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಅದರ ಅಕ್ಕ ಪಕ್ಕದ ಭೂಮಿಗಳ ನೀರು ಸಹ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

2. ಘನ ತ್ಯಾಜ್ಯವನ್ನು ಭೂಮಿಯಲ್ಲಿ ಹೂಳೂವುದು: ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಭೂಮಿಯಲ್ಲಿ ಆಳವಾಗಿ ಗುಂಡಿಯನ್ನು ತೋಡಿ ಘನ ತ್ಯಾಜ್ಯವನ್ನು ಅದರೊಳಗೆ ಹಾಕಿ ಮುಚ್ಚಲಾಗುತ್ತದೆ. ಹೀಗೆ ಮಾಡುವುದರಿಂದ ನೊಣಗಳು ಹಾಗೂ ಸೊಳ್ಳೆಗಳು ಸಂತಾನೋತ್ಪತ್ತಿಯನ್ನು ಮಾಡಲು ತಡೆಯಬಹುದು ಹಾಗೂ ರೋಗ ಹರಡದಂತೆ ಕ್ರಮ ಕೈಗೊಳ್ಳಬಹುದು.

3. ನೈರ್ಮಲ್ಯ ನೆಲ ಇವುಗಳನ್ನು ಆರೋಗ್ಯಕರವಾಗಿ ರಚಿಸಿ ಅದರೊಳಗೆ ಘನ ತ್ಯಾಜ್ಯಗಳನ್ನು ಸುರಿಯಲಾಗುತ್ತದೆ. ನೆಲದ ಅಡಿಪಾಯವನ್ನು ಗಟ್ಟಿಗೊಳಿಸಲು ಪ್ಲಾಸ್ಟಿಕ್ ಹಾಗೂ ಜೇಡಿ ಮಣ್ಣಿನಿಂದ ಸುತ್ತಲೂ ಕವಚವನ್ನು ಮಾಡಲಾಗುತ್ತದೆ.

4. ದಹನ ಕ್ರಿಯೆ:   ಆಮ್ಲಜನಕದ ಸಹಾಯದಿಂದ ತ್ಯಾಜ್ಯ ವಸ್ತುಗಳನ್ನು ಸುಡುವ ಪ್ರಕ್ರಿಯೆಯನ್ನು ದಹನ ಕ್ರಿಯೆ ಎಂದು ಕರೆಯುತ್ತಾರೆ. ಅನಿಲ ಹಾಗೂ ದ್ರವಗಳನ್ನು ಇಂಧನವಾಗಿ ಬಳಸಲಾಗುತ್ತದೆ.

5. ಕಾಂಪೋಸ್ಟಿಂಗ್ :  ಇದು ಒಂದು ಜೈವಿಕ ಪ್ರಕ್ರಿಯೆ. ಸೂಕ್ಷ್ಮಾಣು ಜೀವಿಗಳಾದ ಶಿಲೀಂಧ್ರಗಳು ಹಾಗೂ ಬ್ಯಾಕ್ಟೀರಿಯಗಳು ವಿಘಟನೆ ಹೊಂದುವಂತಹ ಸಾವಯವ ತ್ಯಾಜ್ಯಗಳನ್ನು ಆಮ್ಲಜನಕದ ಅನುಪಸ್ಥಿತಿಯಲ್ಲಿ ಗೊಬ್ಬರವಾಗಿ ಮಾರ್ಪಾಡಿಸಲಾಗುವುದು.

6. ಎರೆಹುಳು ಗೊಬ್ಬರ:   ಎರೆಹುಳುಗಳನ್ನು ಬಳಸಿಕೊಂಡು ತ್ಯಾಜ್ಯವನ್ನು ಬೇರ್ಪಡಿಸಲಾಗುತ್ತದೆ. ಆಗ ಎರೆಹುಳು ಮಲಗೊಬ್ಬರವನ್ನು ಹೆಚ್ಚು ಪೋಷಕಾಂಶಯುಕ್ತವಾಗಿ ಮಾಡುತ್ತದೆ.

7. ಪೌರಘನ ತ್ಯಾಜ್ಯ ನಿಯಮಾವಳಿಗಳು 2016ರ ಪ್ರಕಾರ ಹಸಿಕಸವನ್ನು ಮತ್ತು ಒಣಕಸವನ್ನು ಬೇರೆ ಬೇರೆ ಮಾಡಿ ಸಾಗಾಣಿಕೆ ಮಾಡುವ ಮೂಲಕ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನ ಮಾಡಲಾಗಿದೆ.

8. ಪೌರಘನ ತ್ಯಾಜ್ಯ ಅಧಿನಿಯಮ 2016ರ ನಿಯಮ 4(a) ರಂತೆ ಎಲ್ಲಾ ಸಂಸ್ಥೆಗಳು ಮನೆ ಮನೆಗೆ ಹೋಗಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸಾಗಾಣಿಕೆ ಮಾಡುವುದು ಕಡ್ಡಾಯವಾಗಿದೆ. ಅದೇ ರೀತಿ ಪೌರಸಭೆ ಈ ಕೆಲಸವನ್ನು ನಿರ್ವಹಿಸುತ್ತಿದೆ.

9. ಘನತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ಏನು? ಅದರ ಕಾರ್ಯಕ್ಷಮತೆಯ ಸಾಧನೆಯಿಂದ ಆಗುವ ಅನುಕೂಲತೆಗಳು ಯಾವುವು ಎಂಬುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಅದರ ಅಸಮರ್ಪಕ ನಿರ್ವಹಣೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಮಾಹಿತಿ ನೀಡುವುದು.

10. ಪರಿಸರ ಸ್ನೇಹಿ ತಂತ್ರಜ್ಞಾನಗಳಾದ ಗೊಬ್ಬರ ತಯಾರಿಕೆ, ಜೈವಿಕ ಮಿಥೇನ್ ಅನಿಲ ತಯಾರಿಕೆ RDF ಉರುವಲು ಹಾಗೂ ಇತರೆ ಶಕ್ತಿ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು.

11. ತ್ಯಾಜ್ಯ ಸಂಸ್ಕರಣೆಯನ್ನು ಶೇ 100 ರಷ್ಟು ಸಾಧಿಸಲು ವಲಯವಾರು ಬೇರ್ಪಡಿಸುವಿಕೆ ಹಾಗೂ ಸಂಸ್ಕರಣಾ ವ್ಯವಸ್ಥೆಯನ್ನು ಸ್ಥಾಪಿಸುವುದು.

12. ಪೌರಘನ ತ್ಯಾಜ್ಯ ನಿಯಮಗಳು 2016ರ ಅದಿನಿಯಮದ ಮಾದರಿ ಉಪನಿಯಮ 2019ನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು.

ತ್ಯಾಜ್ಯಗಳ ಉತ್ಪಾದನೆಯನ್ನು ತಡೆಯುವ ಸಲುವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಈ ಕೆಳಗಿನ ಮೂರುವಿಧಾನಗಳನ್ನು ಅನುಸರಿಸಬೇಕು.

ಉಪಸಂಹಾರ

ಘನ ತ್ಯಾಜ್ಯದ ಅಸಮರ್ಪಕ ನಿರ್ವಹಣೆ ಪರಿಸರ ಮಾಲಿನ್ಯ ಹಾಗೂ ಅನೇಕ ರೋಗಗಳಿಗೆ ಪ್ರಮುಖ ಕಾರಣವಾಗುತ್ತಿದೆ. ತ್ಯಾಜ್ಯವನ್ನು ಮೂಲದಲ್ಲೇ ಕಡಿಮೆ ಮಾಡುವುದು, ಬೇರ್ಪಡಿಸುವುದು ಮತ್ತು ವೈಜ್ಞಾನಿಕವಾಗಿ ಸಂಸ್ಕರಿಸುವುದು ಅತ್ಯಗತ್ಯವಾಗಿದೆ. ಸರ್ಕಾರದ ನಿಯಮಗಳ ಜೊತೆಗೆ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯೇ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಕೀಲಕವಾಗಿದೆ. ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ ಮತ್ತು ಜಾಗೃತಿ ಮೂಡಿಸುವ ಮೂಲಕ ಸ್ವಚ್ಛ ಹಾಗೂ ಆರೋಗ್ಯಕರ ಸಮಾಜವನ್ನು ನಿರ್ಮಿಸಬಹುದು. ಇದು ನಮ್ಮ ಜವಾಬ್ದಾರಿ ಮಾತ್ರವಲ್ಲ, ಭವಿಷ್ಯದ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯೂ ಹೌದು.

ಶಬ್ಧ ಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಶಬ್ಧ ಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಆಧುನಿಕ ಯುಗದಲ್ಲಿ ಕೈಗಾರಿಕೆಕರಣ, ನಗರೀಕರಣ ಮತ್ತು ವಾಹನಗಳ ಹೆಚ್ಚಳದಿಂದ ಶಬ್ಧ ಮಾಲಿನ್ಯವು ಗಂಭೀರ ಪರಿಸರ ಸಮಸ್ಯೆಯಾಗಿ ಪರಿಣಮಿಸಿದೆ. ಅತಿಯಾದ ಹಾಗೂ ಅಸಮಂಜಸ ಶಬ್ಧವು ಮನುಷ್ಯನ ದೈನಂದಿನ ಜೀವನದಲ್ಲಿ ಅಶಾಂತಿಯನ್ನುಂಟುಮಾಡುತ್ತದೆ. ಇದು ಕೇವಲ ಕಿವಿಗೆ ಮಾತ್ರವಲ್ಲದೆ ದೇಹದ ಇತರೆ ಅಂಗಗಳು ಹಾಗೂ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಶಬ್ಧ ಮಾಲಿನ್ಯದಿಂದ ಏಕಾಗ್ರತೆ ಕುಂಠಿತವಾಗಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದ್ದರಿಂದ ಶಬ್ಧ ಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಶಬ್ಧ ಮಾಲಿನ್ಯದ ಪರಿಣಾಮಗಳು: (Results of Sound Pollution)

 ಶಬ್ಧ ಮಾಲಿನ್ಯದಿಂದ ಉಂಟಾಗುವ ಪರಿಣಾಮಗಳೆಂದರೆ

  1. ಶಬ್ಧಗಳಲ್ಲಿನ ಏರುಪೇರಿನಿಂದ ಕೇಳುಗರಿಗೆ ಕಿರಿಕಿರಿಯುಂಟಾಗುತ್ತದೆ.
  2.  ಶಬ್ಧ ಮಾಲಿನ್ಯದಿಂದ ಶ್ರವಣೇಂದ್ರಯಗಳ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತದೆ.
  3.  ಅತಿಯಾದ ಶಬ್ಧದಿಂದ ಮನುಷ್ಯನ ಏಕಾಗ್ರತೆ ಹಾಳಾಗಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಗೊಳ್ಳುತ್ತದೆ.
  4.  ಶಬ್ಧದ ತೀವ್ರತೆಯು 100db  ಮೀರಿದರೆ ಹೃದಯ ಬಡಿತ ಹೆಚ್ಚುತ್ತದೆ
  5. ಶಬ್ಧದ ತೀವ್ರತೆಯು 120 db  ಮೀರಿದರೆ ನೋವಿನ ಸಂವೇದನೆ ಹೆಚ್ಚುತ್ತದೆ.
  6. ಶಬ್ಧದ ತ್ರೀವ್ರತೆ 130 db  ಮೀರಿದರೆ ವಿಪರೀತ ವಾಂತಿ ಹಾಗೂ ಮಂಪರು ಉಂಟಾಗುತ್ತದೆ.
  7. ಶಬ್ಧದ ತ್ರೀವ್ರತೆ 140 db  ಮೀರಿದರೆ  ಕರ್ಣಪಟಲ ಹರಿದು ಹೋಗುತ್ತದೆ.
  8. ಶಬ್ಧಮಾಲಿನ್ಯದಿಂದ ಶಾರೀರಿಕ ದಣಿವು ಉಂಟಾಗಿ ಮಾನಸಿಕ ದುಗುಡ, ವ್ಯಾಕುಲತೆ, ಭಾವೋದ್ವೇಗ ಹಾಗೂ ರಕ್ತದೊತ್ತಡ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.
  9. ಶಬ್ಧ ಮಾಲಿನ್ಯದಿಂದ ನಿದ್ರಾಹೀನತೆ, ದೃಷ್ಞಿದೋಷ, ಕಾಣಿಸಿಕೊಳ್ಳುತ್ತವೆ.
  10. ಅತಿಯಾದ ಶಬ್ಧಮಾಲಿನ್ಯದಿಂದಾಗಿ ಪ್ರಾಣಿ ಹಾಗೂ ಪಕ್ಷಿಗಳ ವರ್ತನೆಯ ಮೇಲೆಯೂ ಪರಿಣಾಮ ಬೀರುತ್ತದೆ. ಗರ್ಭಿಣಿ ಸ್ತ್ರೀಯರ ಹಾಗೂ ಮಕ್ಕಳ ಮೇಲೂ ಶಬ್ಧ ಮಾಲಿನ್ಯ ಪರಿಣಾಮ ಬೀರುತ್ತದೆ.

ಶಬ್ಧ ಮಾಲಿನ್ಯದ ನಿವಾರಣೋಪಾಯಗಳು:

 ಶಬ್ಧ ಮಾಲಿನ್ಯವನ್ನು ತಡೆಗಟ್ಟಲು ಇರುವ ನಿವಾರಣೋಪಾಯಗಳು ಈ ಕೆಳಗಿನಂತಿವೆ.

  1.  ಅತೀ ಹೆಚ್ಚು ಶಬ್ಧವನ್ನು ಉತ್ಪತ್ತಿ ಮಾಡುವ ಕಾರ್ಖಾನೆಗಳನ್ನು ಜನವಸತಿ ಪ್ರದೇಶಗಳಿಂದ ದೂರದಲ್ಲಿ ನಿರ್ಮಿಸಬೇಕು. ಅತಿಯಾದ ಶಬ್ಧವು ಹೊರಗೆ ಬರದಂತೆ ತಡೆಗೋಡೆಗಳನ್ನು ಕಾರ್ಖಾನೆಯ ಸುತ್ತ ಎತ್ತರವಾಗಿ ನಿರ್ಮಿಸಬೇಕು.
  2.  ಗೃಹಪಯೋಗಿ ಉಪಕರಣಗಳು ವಾಹನಗಳು ಹಾಗೂ ಕಾರ್ಖಾನೆಗಳಿಗೆ ಶಬ್ಧವನ್ನು ನಿಯಂತ್ರಣ ಮಾಡುವ ಉಪಕರಣಗಳನ್ನು ಅಳವಡಿಸಬೇಕು.
  3. ಅನಾವಶ್ಯಕ ಹಾರನ್‌ಗಳು, ಸೈರನ್‌ಗಳು ಹಾಗೂ ದ್ವನಿವರ್ಧಕಗಳನ್ನು ನಿಷೇಧಿಸಬೇಕು.
  4.  ಹಳೆಯದಾದ ಅತಿ ಹೆಚ್ಚು ಶಬ್ಧ ಮಾಡುವ ಯಂತ್ರೋಪಕರಣಗಳು ಹಾಗೂ ಇತರೆ ವಸ್ತುಗಳನ್ನು  ಅವಧಿ ಮೀರಿದ ನಂತರ ಬದಲಾಯಿಸಬೇಕು.
  5.  ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಶ್ರವಣಶಕ್ತಿ ಸಂರಕ್ಷಣಾ ಉಪಕರಣಗಳನ್ನು ಪೂರೈಸಬೇಕು.
  6.  ಶಬ್ಧವನ್ನು ನಿಯಂತ್ರಿಸುವ ಆಧುನಿಕ ವಿನ್ಯಾಸವುಳ್ಳ ಬಾಗಿಲು ಕಿಟಕಿಗಳನ್ನು ಮನೆಗಳಿಗೆ ಹಾಗೂ ಕಾರ್ಖಾನೆಗಳಿಗೆ ಅಳವಡಿಸಬೇಕು.
  7.  ಶಾಲಾ ಕಾಲೇಜು, ಆಸ್ಪತ್ರೆ, ಗ್ರಂಥಾಲಯ ಸಾರ್ವಜನಿಕ ಕಚೇರಿಗಳು ಹಾಗೂ ನ್ಯಾಯಾಲಯದ ಸುತ್ತಮುತ್ತ ಶಬ್ಧಕ್ಕೆ ಕಾರಣವಾಗುವ ಯಾವುದೇ ವಾಹನಗಳ ದುರಸ್ತಿ ಕಾರ್ಯಗಾರ ಕಾರ್ಖಾನೆ ಮುಂತಾದವುಗಳನ್ನು ಸ್ಥಾಪಿಸಿದಂತೆ ಎಚ್ಚರಿಕೆ ವಹಿಸಬೇಕು.
  8. ವಿಮಾನ ನಿಲ್ದಾಣಗಳನ್ನು ವಸತಿ ಕೇಂದ್ರಗಳಿಂದ ಬಹು ದೂರದಲ್ಲಿ ನಿರ್ಮಿಸಬೇಕು.
  9.  ಶಬ್ಧವನ್ನುಂಟು ಮಾಡುವ ಭಾರಿ ವಾಹನಗಳನ್ನು ಊರ ಹೊರಗೆ ನಿಲುಗಡೆ ಮಾಡುವ ವ್ಯವಸ್ಥೆ ಮಾಡಬೇಕು.
  10.  ಶಬ್ಧ ಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಶಾಸನಗಳನ್ನು ರಚಿಸಬೇಕು.
  11.  ಪರಿಸರ ಶಿಕ್ಷಣ ಹಾಗೂ ಸಂಶೋಧನೆಗಳ ಕುರಿತು ಜನಜಾಗೃತಿಯನ್ನು ಉಂಟು ಮಾಡಬೇಕು.
  12.  ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹಾಗೂ ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಮದ್ದುಗಳ ಬಳಕೆಯನ್ನು ನಿಷೇಧಿಸಬೇಕು.
  13.  ಶಬ್ಧವನ್ನು ನಿಯಂತ್ರಿಸುವ ವಿವಿಧ ಜಾತಿಯ ಮರಗಳನ್ನು ಕಾರ್ಖಾನೆಯ ಸುತ್ತ ಹಾಗೂ ಕಟ್ಟಡಗಳ ಸುತ್ತಲೂ ಬೆಳೆಸಬೇಕು.

 ಧ್ವನಿವರ್ಧಕಗಳನ್ನು ಅಗತ್ಯವೆನಿಸಿದಾಗ ಮಾತ್ರ ಬಳಕೆ ಮಾಡಬೇಕು. ಉಪಯೋಗಿಸಲೇಬೇಕಾದ ಸಮಯದಲ್ಲಿ ಶಬ್ಧವು ಜೋರಾಗಿ ಕೇಳಿಸದಂತೆ ಹಿತಮಿತವಾಗಿ ಬಳಕೆ ಮಾಡಬೇಕು.

ಉಪಸಂಹಾರ

ಶಬ್ಧ ಮಾಲಿನ್ಯವು ಮನುಷ್ಯನ ಆರೋಗ್ಯ, ಏಕಾಗ್ರತೆ ಹಾಗೂ ಸಾಮಾಜಿಕ ಜೀವನದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಒತ್ತಡ, ನಿದ್ರಾಹೀನತೆ ಹಾಗೂ ಶ್ರವಣಶಕ್ತಿ ಹಾನಿ ಹೆಚ್ಚುತ್ತಿದೆ. ಆದ್ದರಿಂದ ಶಬ್ಧ ಮಾಲಿನ್ಯವನ್ನು ನಿಯಂತ್ರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸರ್ಕಾರದ ನಿಯಮಗಳ ಜೊತೆಗೆ ಸಾರ್ವಜನಿಕ ಜಾಗೃತಿ ಹಾಗೂ ಸಹಕಾರ ಅತ್ಯಂತ ಅಗತ್ಯ. ಶಾಂತ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ನಾವು ಎಲ್ಲರೂ ಕೈಜೋಡಿಸಬೇಕಾಗಿದೆ

ಶಬ್ಧ ಮಾಲಿನ್ಯಕ್ಕೆ ಕಾರಣಗಳು

ಶಬ್ಧ ಮಾಲಿನ್ಯಕ್ಕೆ ಕಾರಣಗಳು

ಶಬ್ಧವು ಸಂವಹನದ ಪ್ರಮುಖ ಮಾಧ್ಯಮವಾಗಿದ್ದರೂ, ಅದರ ಅತಿಯಾದ ಬಳಕೆ ಮಾಲಿನ್ಯವಾಗಿ ಪರಿವರ್ತಿತವಾಗುತ್ತದೆ. ಇಂದಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡಲ್ಲೂ ಶಬ್ಧ ಮಾಲಿನ್ಯ ವೇಗವಾಗಿ ಹೆಚ್ಚುತ್ತಿದೆ. ಯಂತ್ರೋಪಕರಣಗಳು, ವಾಹನ ಸಂಚಾರ, ಧ್ವನಿವರ್ಧಕಗಳು ಹಾಗೂ ಸಾಮಾಜಿಕ ಸಮಾರಂಭಗಳು ಶಬ್ಧ ಮಾಲಿನ್ಯದ ಪ್ರಮುಖ ಕಾರಣಗಳಾಗಿವೆ. ಇದರಿಂದ ನಿದ್ರಾಭಂಗ, ಕಿವಿ ಹಾನಿ, ತಲೆನೋವು ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಶಬ್ಧ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ.

ಶಬ್ಧ ಮಾಲಿನ್ಯಕ್ಕೆ ಕಾರಣಗಳು:

  1. ಗುಡುಗು, ಸಿಡಿಲು, ಜ್ವಾಲಾಮುಖಿ, ಭೂಕಂಪ, ಭಾರಿ ಮಳೆ, ಜಲಪಾತ ಹಾಗೂ ಸಮುದ್ರದ ಅಲೆಗಳು ಇತ್ಯಾದಿ ಮೂಲಗಳಿಂದ ಶಬ್ಧಗಳು  ಹೊರ ಬರುತ್ತಿವೆಯಾದರೂ ಇವುಗಳು ಕಿವಿಗೆ ಅಷ್ಟೊಂದು ಅಪಾಯಕಾರಿಯಾಗಿ ಪರಿಣಮಿಸಲಾರವು.
  2.  ಹಿಟ್ಟಿನ ಗಿರಣಿಗಳು, ಬಾವಿ ತೋಡುವುದು, ರೈಲು ಮಾರ್ಗಗಳನ್ನು ಕೊರೆಯುವುದು, ಗಣಿಗಾರಿಕೆಯನ್ನು ಕೊರೆಯುವುದು ಹಾಗೂ ಕಾರ್ಖಾನೆಯಿಂದ ಹೊರಡುವ ಶಬ್ಧಗಳು ಕಿವಿಗೆ ಅಸಹನೀಯವಾಗುತ್ತವೆ.
  3.  ರಸ್ತೆಯ ಮೇಲಿನ ವಾಹನಗಳು, ರೈಲು, ವಿಮಾನ, ಲಾರಿಗಳು, ಬೈಕ್‌ಗಳು, ಅಗ್ನಿಶಾಮಕ ದಳದ ವಾಹನಗಳು ಆಂಬುಲೆನ್ಸ್, ಪೊಲೀಸ್ ವಾಹನಗಳು, ಬುಲ್ಡೋಜರ್, ಟ್ರ್ಯಾಕ್ಟರ್ ಹಾಗೂ ಜೆಟ್‌ಗಳ ಓಡಾಟದಿಂದ ಹೊರಡುವ ಶಬ್ಧ ಕಿವಿಗೆ ಅಪ್ಪಳಿಸಿದಂತಾಗುತ್ತದೆ.
  4. ಸಾಮಾಜಿಕ ಸಮಾರಂಭಗಳಲ್ಲಿ ಹಾಕಲಾಗುವ ಲೌಡ್‌ಸ್ಪೀಕರ್ ಹಾಗೂ ಗಣೇಶ ವಿಸರ್ಜನೆ ಸಮಯದಲ್ಲಿ ಹಾಕುವ ಡಿಜೇ ಸೌಂಡ್ ಹೃದಯವೇ ಒಡೆದು ಹೋದಂತಹ ಅನುಭವವನ್ನು ಉಂಟುಮಾಡುತ್ತದೆ.
  5.  ಮನೆ ಬಳಕೆಯ ವಸ್ತುಗಳಾದ ಗ್ರಾಂಡರ್, ಮಿಕ್ಸಿ, ವಾಷಿಂಗ್ ಮಷೀನ್, ಕೂಲರ್, ವ್ಯಾಕ್ಯೂಮ್ ಕ್ಲೀನರ್, ಹವಾ ನಿಯಂತ್ರಕಗಳು, ಫ್ಯಾನ್‌ಗಳು, ರೇಡಿಯೋ, ದೂರದರ್ಶನ, ವಾದ್ಯ ಸಂಗೀತ ಉಪಕರಣ, ಧ್ವನಿವರ್ಧಕಗಳು, ಶಬ್ಧ ಮಾಲಿನ್ಯಕ್ಕೆ  ಕಾರಣವಾಗಿವೆ.
  6. ನಗರಗಳಲ್ಲಿನ ಬೀದಿ ನಾಯಿಗಳು, ಬೆಕ್ಕುಗಳು ಬೊಗಳುವಾಗ ಹಾಗೂ ಚೀರಾಡುವಾಗ ಬರುವ ಶಬ್ಧಗಳಿಂದ ರಾತ್ರಿ ನಿದ್ರೆಗೆ ಭಂಗ ಉಂಟಾಗುತ್ತದೆ.
  7.  ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳ ಶಿಖರಗಳ ಮೇಲೆ ಲೌಡ್‌ಸ್ಪೀಕರ್ ಇಟ್ಟು ಬೆಳಗ್ಗೆ ಮತ್ತು ರಾತ್ರಿ ಅತಿ ಹೆಚ್ಚು ಸೌಂಡನ್ನು ಇಟ್ಟು ಹಾಡುಗಳನ್ನು ಹಾಕುವುದರಿಂದ ಜನರಿಗೆ ಮಾತನಾಡಲು ಕಿರಿಕಿರಿಯನ್ನುಂಟು ಮಾಡುತ್ತದೆ.
  8.  ಸಭೆ, ಸಮಾರಂಭ, ಮದುವೆ, ನಾಮಕರಣ ಹಾಗೂ ಸೀಮಂತ ಕಾರ್ಯಗಳಲ್ಲಿ ಇಂದು ಧ್ವನಿವರ್ಧಕಗಳನ್ನು ಬಳಸುವುದರಿಂದ ಸಾರ್ವಜನಿಕರಿಗೆ ಬಹಳ ಮುಜುಗರ ಉಂಟಾಗುತ್ತದೆ.
  9.  ನಗರ ಪ್ರದೇಶದಲ್ಲಿ ಜನಸಂದಣಿ ಇಂದ ಕೂಡಿದ ಮಾರುಕಟ್ಟೆ ಸಂಕೀರ್ಣ ಶಬ್ಧ ಮಾಲಿನ್ಯದ ಕೇಂದ್ರಗಳಾಗಿವೆ. ಗಿರಾಕಿಗಳನ್ನು ಜೋರಾಗಿ ಕೂಗುವ ವ್ಯಾಪಾರಿಗಳು, ಚೌಕಾಶಿಯಲ್ಲಿ ತೊಡಗಿದ ಗ್ರಾಹಕರು, ಓಡಾಡುವ ವಾಹನಗಳು ಪ್ರಚಾರ ಮಾಡುವವರು ಬಳಸುವ ದ್ವನಿವರ್ಧಕಗಳು, ಕರ್ಕಶವಾದ ಪರಿಸರವನ್ನು ಸೃಷ್ಟಿಸುತ್ತವೆ.
  10. ಸೈರನ್‌ಗಳು, ವಾಹನಗಳ ಹಾರನ್‌ಗಳು, ಪಟಾಕಿಗಳು, ಸಿಡಿಮದ್ದುಗಳು, ಡೈನಾಮೆಟ್‌ಗಳು, ಬಾಂಬ್‌ಗಳು ಹಾಗೂ ಡಿಸ್ಕೋ ಪಾರ್ಟಿಗಳು ಶಬ್ಧ ಮಾಲಿನ್ಯಕ್ಕೆ ಕಾರಣಗಳಾಗಿವೆ.

ಶಬ್ಧವನ್ನು ಗ್ರಹಿಸುವ ಪ್ರಮುಖ ಸಾಧನವೆಂದರೆ ಅದು ಕಿವಿಗಳು ಮಾತ್ರ. ಇವುಗಳು ಮಾನವನ ಪ್ರಮುಖ ಶ್ರವಣಕೇಂದ್ರಗಳಿದ್ದಂತೆ. ಮಾನವನ ಕಿವಿಗಳು ಅತಿ ಸೂಕ್ಷ್ಮತೆಯಿಂದ ಕೂಡಿವೆ. ಶಬ್ಧವನ್ನು ಗ್ರಹಿಸುವುದು ಧ್ವನಿ, ಸ್ವರ, ಸದ್ದು ಹಾಗೂ ಕಂಪನಗಳ ಮುಖಾಂತರ ಶಬ್ಧವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಚಲಿಸುತ್ತದೆ. ಶಬ್ಧವು ಒಂದು ಸೆಕೆಂಡಿಗೆ 330 ಮೀಟರ್ ವೇಗದಲ್ಲಿ ಚಲಿಸುತ್ತದೆ. ಶಬ್ಧವನ್ನು ಡೆಸಿಬಲ್‌ (Decibel dB) ಎಂಬ ಮೂಲ ಮಾನದಿಂದ ಅಳೆಯುತ್ತಾರೆ. ಒಂದು ಡೆಸಿಬಿಲ್ ಎಂದರೆ ಮನುಷ್ಯ ಕೇಳಬಹುದಾದ ಅತ್ಯಂತ ಸೂಕ್ಷ್ಮ ಪ್ರಮಾಣದ ಶಬ್ಧ ವಿಶ್ವಸಂಸ್ಥೆಯ WHO ಆರೋಗ್ಯ ಸಂಸ್ಥೆಯ ಶಿಫಾರಸು ಮಾಡಿದ ಶಬ್ಧದ ತೀವ್ರತೆಯ ಮಟ್ಟವಾಗಿದೆ.

ಮೂಲಗಳು

ತೀವ್ರತೆ

ಹಗಲು

ರಾತ್ರಿ

1

ಮನುಷ್ಯನ ಉಸಿರಾಟ

10db

 ಕೈಗಾರಿಕಾ ಪ್ರದೇಶ      75

70db

2

 ಮೆಲ್ಲನೆ ಕಿವಿಮಾತು

20 ರಿಂದ 30db

 ವಾಣಿಜ್ಯ ಪ್ರದೇಶ    65

53db

3

 ಗ್ರಂಥಾಲಯ

30-35db

 ವಾಸದ ಸ್ಥಳಗಳು  55

45db

4

 ಸಾಮಾನ್ಯ ಸಂಭಾಷಣೆ

40-60db

 ನಿಶಬ್ಧ ವಲಯ  50

40db

5

 ವಾಹನ ಸಂಚಾರ

60-90 db

6

 ಮೋಟಾರ್ ಬೈಕ್

105db

7

ಸಿಂಹ ಘರ್ಜನೆ 

105 ರಿಂದ 110 db

8

ಜೆಟ್

120db

9

 ರಾಕೆಟ್ ಉಡಾವಣೆ

170-180db

ಉಪಸಂಹಾರ

ಶಬ್ಧ ಮಾಲಿನ್ಯವು ಕೇವಲ ಕಿವಿಗೆ ಮಾತ್ರವಲ್ಲದೆ ಮನಸ್ಸು, ಹೃದಯ ಹಾಗೂ ದೈನಂದಿನ ಜೀವನದ ಗುಣಮಟ್ಟದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ನಿಯಂತ್ರಣರಹಿತ ಧ್ವನಿವರ್ಧಕ ಬಳಕೆ, ವಾಹನಗಳ ಹಾರ್ನ್ ಹಾಗೂ ಕೈಗಾರಿಕಾ ಶಬ್ಧಗಳು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. WHO ಶಿಫಾರಸು ಮಾಡಿದ ಶಬ್ಧ ಮಿತಿಗಳನ್ನು ಪಾಲಿಸುವುದು ಅತ್ಯಂತ ಅಗತ್ಯ. ಸಾರ್ವಜನಿಕ ಜಾಗೃತಿ ಮತ್ತು ಕಾನೂನು ಪಾಲನೆಯ ಮೂಲಕ ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಶಾಂತ ಪರಿಸರವೇ ಆರೋಗ್ಯಕರ ಸಮಾಜದ ಆಧಾರ ಎಂಬುದನ್ನು ಪ್ರತಿಯೊಬ್ಬರೂ ಅರಿತು ನಡೆದುಕೊಳ್ಳಬೇಕು.