ಪ್ರಧಾನ ಮಂತ್ರಿ ಅಧಿಕಾರ ಕಾರ್ಯಗಳು

ಪ್ರಧಾನ ಮಂತ್ರಿ ಅಧಿಕಾರ ಕಾರ್ಯಗಳು

ಪ್ರಧಾನಮಂತ್ರಿ ಭಾರತದ ಆಡಳಿತ ವ್ಯವಸ್ಥೆಯ ಕೇಂದ್ರೀಯ ಶಕ್ತಿಯಾಗಿದೆ. ಕೇಂದ್ರ ಮಂತ್ರಿಮಂಡಲದ ನೇತೃತ್ವ ವಹಿಸುವ ಮೂಲಕ ದೇಶದ ಆಡಳಿತವನ್ನು ಸರಾಗವಾಗಿ ನಡೆಸುವ ಹೊಣೆಗಾರಿಕೆ ಇವರ ಮೇಲಿದೆ. ಸಂವಿಧಾನದ ಅನೇಕ ವಿಧಿಗಳು ಪ್ರಧಾನಮಂತ್ರಿಗೆ ವಿಶಿಷ್ಟ ಅಧಿಕಾರಗಳನ್ನು ನೀಡಿವೆ.

ಪ್ರಧಾನ ಮಂತ್ರಿ ಕೇಂದ್ರ ಮಂತ್ರಿ ಮಂಡಲದ ನಕ್ಷತ್ರದೊಳಗಿನ ಚಂದ್ರನಂತೆ ಈತನ ಕಾರ್ಯಗಳು ಈ ಕೆಳಗಿನಂತಿವೆ:

1.  ಕೇಂದ್ರ ಮಂತ್ರಿ ಮಂಡಲದ ರಚನೆ: (Formation of Central Minister)

ಸಂವಿಧಾನದ 74ನೇ ವಿಧಿಯ ಪ್ರಕಾರ  ಪ್ರಧಾನಮಂತ್ರಿ ನೇತೃತ್ವದ ಕೇಂದ್ರ ಮಂತ್ರಿಮಂಡಲ ಇರಬೇಕೆಂದು ಹೇಳಿದೆ. ಪ್ರಧಾನಮಂತ್ರಿಯ ಮೊದಲ ಕಾರ್ಯವೆಂದರೆ ಮಂತ್ರಿಮಂಡಲ ರಚನೆ. ರಾಷ್ಟ್ರಪತಿಗಳಿಂದ ಪ್ರಧಾನಮಂತ್ರಿಯಾಗಲು ಆಹ್ವಾನ ಬಂದ ನಂತರ ಪ್ರಧಾನಮಂತ್ರಿ ಆದವರು ತನ್ನ ಮಂತ್ರಿಮಂಡಲದಲ್ಲಿ ಇರಬೇಕಾದ ಸಚಿವರ ಪಟ್ಟಿಯನ್ನು ತಯಾರಿಸಿ ಪ್ರಮಾಣವಚನ ನೀಡುವುದಕ್ಕಾಗಿ ರಾಷ್ಟ್ರಪತಿಗೆ ಸಲ್ಲಿಸುತ್ತಾರೆ. ನಂತರ ರಾಷ್ಟ್ರಪತಿಗಳು ಪ್ರಮಾಣವಚನ ನೀಡುವುದರ ಮೂಲಕ ಸಚಿವರನ್ನು ನೇಮಕ ಮಾಡುತ್ತಾರೆ. ತಮಗೆ ನಿಷ್ಠರಾದವರನ್ನೇ ಪ್ರಧಾನಿಗಳು ಮಂತ್ರಿಗಳನ್ನಾಗಿ ನೇಮಿಸುತ್ತಾರೆ. ಜೊತೆಗೆ ಪಕ್ಷಕ್ಕಾಗಿ ದುಡಿದ ದಕ್ಷತೆ ಮತ್ತು ಪ್ರಾಮಾಣಿಕ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಾರೆ. ಇದರೊಂದಿಗೆ ಜಾತಿವಾರು, ಪ್ರಾದೇಶಿಕತೆ, ರಾಜ್ಯ, ಜನಾಂಗ ಹಾಗೂ ಭಾಷೆಗಳಿಗೆ ಪ್ರಾಧಾನ್ಯತೆಯನ್ನು ನೀಡುವ ಮೂಲಕ ಮಂತ್ರಿಗಳನ್ನು ನೇಮಿಸುವ ಪರಮಾಧಿಕಾರ ಪ್ರಧಾನ ಮಂತ್ರಿಗಳಿಗಿದೆ. ಮಂತ್ರಿ ಮಂಡಳದ ಗಾತ್ರ ಎಷ್ಟಿರಬೇಕೆಂಬುದನ್ನು ಪ್ರಧಾನಮಂತ್ರಿ ನಿರ್ಧರಿಸುತ್ತಾರೆ. ಆದ್ದರಿಂದ ಪ್ರಧಾನಿಯನ್ನು ʻʻಕಿಂಗ್ ಮೇಕರ್ʼʼ ಚಕ್ರದೊಳಗಿನ ಚಕ್ರ ʻʻಸರ್ಕಾರದ ನೀತಿ ರಚನೆಯ ಆಯಸ್ಕಾಂತʼʼ ಎಂದು ಕರೆಯಲಾಗಿದೆ.

2. ಖಾತೆಗಳ ಹಂಚಿಕೆ: 

ಪ್ರಧಾನಮಂತ್ರಿ ತನ್ನ ಮಂತ್ರಿ ಮಂಡಲದ ರಚನೆಯ ನಂತರ ಮಾಡುವ ಮತ್ತೊಂದು ಕೆಲಸವೆಂದರೆ ಖಾತೆಗಳ ಹಂಚಿಕೆಯ ಪ್ರಹಸನ. ಈ ಖಾತೆಗಳ ಹಂಚಿಕೆಯಲ್ಲಿ ಪ್ರಧಾನಿ ಸರ್ವಸ್ವತಂತ್ರರಾಗಿರುತ್ತಾರೆ. ಆಯಾಮಂತ್ರಿಯ ವಿಶ್ವಾಸಾರ್ಹತೆ, ಸಾಮರ್ಥ್ಯ, ಶಿಕ್ಷಣ, ಅನುಭವ, ಚಾರಿತ್ರ್ಯವನ್ನು ಗಣನೆಗೆ ತೆಗೆದುಕೊಂಡು ಖಾತೆಗಳನ್ನು ಹಂಚುತ್ತಾರೆ. ಕೆಲವು ವೇಳೆ ರಾಜಕೀಯ ಒತ್ತಡದಿಂದಾಗಿ ಕೆಲವರಿಗೆ ಅವರಿಷ್ಟ ಪಟ್ಟ ಖಾತೆಗಳನ್ನು ನೀಡಬೇಕಾಗುತ್ತದೆ. 1967 ರಲ್ಲಿ ಇಂದಿರಾಗಾಂಧಿಯವರು ಮುರಾರ್ಜಿ ದೇಸಾಯಿ ಅವರಿಗೆ ಗೃಹ ಖಾತೆ ಕೊಡಲು ಇಷ್ಟವಿಲ್ಲದಿದ್ದರೂ ಅರ್ಥ ಖಾತೆಯನ್ನು ಕೊಡಬೇಕಾಯಿತು. 1977 ರಲ್ಲಿ ಚರಣಸಿಂಗ್ ಮೊದಲ ಬಾರಿಗೆ ಕೇಂದ್ರದಲ್ಲಿ ಮಂತ್ರಿ ಆದಾಗ ಅವರಿಗೆ ಗೃಹ ಖಾತೆ ನೀಡಲಾಯಿತು. ನೆಹರು ದಕ್ಷರಿಗೆ ಉತ್ತಮ ಖಾತೆಗಳನ್ನು ನೀಡಿದರೆ ಇಂದಿರಾಗಾಂಧಿ ಅದನ್ನು ಪಾಲಿಸಲಿಲ್ಲ. ಆಂಧ್ರಪ್ರದೇಶದ ಮುಲ್ಕಿ ಸಮಸ್ಯೆಯನ್ನು ಬಗೆಹರಿಸದ ಪಿ.ವಿ ನರಸಿಂಹರಾವ್ ಅವರನ್ನು ವಿದೇಶಾಂಗ ಮಂತ್ರಿ ಆಗಿ ಮಾಡಲಾಯಿತು. ಹೀಗೆ ಅಧಕ್ಷರಿಗೆ ಉತ್ತಮ ಖಾತೆಗಳು ದೊರತಾಗ ಅನುಭವದ ಕೊರತೆಯಿಂದ ಆಡಳಿತ ಯಂತ್ರ ಕುಸಿದು ಬೀಳುವ ಸಂಭವ ಹೆಚ್ಚಾಗಿ ಕಂಡುಬರುತ್ತದೆ.

3. ಮಂತ್ರಿಮಂಡಲದ ಪುನರ್ ರಚನೆ:

ಸಾಮಾನ್ಯವಾಗಿ ಪ್ರಧಾನಮಂತ್ರಿಯೇ ಮಂತ್ರಿ ಮಂಡಲದ ಕೇಂದ್ರ ಬಿಂದುವಾಗಿದ್ದು ಆಕಾಶದಲ್ಲಿ ಪ್ರಜ್ವಲಿಸುತ್ತಿರುವ ನಕ್ಷತ್ರಗಳ ನಡುವಿನ ಚಂದ್ರನಂತೆ ಕಂಗೊಳಿಸುತ್ತಾನೆ ಎಂದು ಹೇಳಬಹುದು. ಹೀಗಾಗಿ ಮಂತ್ರಿಮಂಡಲದ ಜವಾಬ್ದಾರಿಯನ್ನು ಆತನೇ ಹೊತ್ತುಕೊಂಡಿರುತ್ತಾನೆ. ಮಂತ್ರಿ ಮಂಡಳದ ರಚನೆಯಿಂದ ಹಿಡಿದು ಮಂತ್ರಿಗಳನ್ನು ವಜಾಗೊಳಿಸುವ ಸಂಪೂರ್ಣ ಅಧಿಕಾರ ಅವನ ಹಿಡಿತದಲ್ಲಿ ಇರುತ್ತದೆ. ಅಸಮರ್ಥತೆ ಭ್ರಷ್ಟಾಚಾರ, ಅವಿಧೇಯತೆ ಮುಂತಾದ ಕಾರಣಗಳಿಂದ ಮಂತ್ರಿಯೊಬ್ಬನಿಂದ ರಾಜೀನಾಮೆ ಪಡೆದು ಆ ಖಾತೆಯನ್ನು ಬೇರೊಬ್ಬನಿಗೆ ವಹಿಸಿಕೊಡುಬಹುದು. ಜೊತೆಗೆ ಮಂತ್ರಿಗಳ ಖಾತೆಯನ್ನು ಅದಲು ಬದಲು ಮಾಡುವ ಅಧಿಕಾರ ಪ್ರಧಾನಮಂತ್ರಿಗೆ ಇದೆ.

4. ಸಚಿವ ಸಂಪುಟದ ಮುಖ್ಯಸ್ಥ:

ಕೇಂದ್ರ ಶಾಸಕಾಂಗದ ಸಂಪುಟದ ಮಂತ್ರಿಗಳನ್ನು ಸಚಿವರು ಎಂದು ಕರೆಯುತ್ತಾರೆ. ಈ ಸಚಿವರನ್ನು ಒಳಗೊಂಡ ಸಮಿತಿಯನ್ನು ಸಚಿವ ಸಂಪುಟ ಸಮಿತಿ ಎಂದು ಹೆಸರಿಸಲಾಗಿದೆ. ಈ ಸಚಿವ ಸಂಪುಟದ ಸಮಿತಿಯ ಸಭೆಯನ್ನು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಏರ್ಪಡಿಸಲಾಗುತ್ತದೆ. ಸಚಿವ ಸಂಪುಟವನ್ನು ಕರೆಯುವ ಮತ್ತು ಸಭೆಯಲ್ಲಿ ನಡೆದ ತೀರ್ಮಾನಗಳನ್ನು ಪ್ರಕಟಿಸುವ ಅಂತಿಮ ಅಧಿಕಾರ ಪ್ರಧಾನಿಗಿದೆ. ಸಚಿವರ ಕಾರ್ಯ ವೈಖರಿಯನ್ನು ಹೊಗಳುವ ಮತ್ತು ದೋಷಗಳು ಕಂಡು ಬಂದಾಗ ತಿದ್ದುಪಡಿ ಮಾಡಿಕೊಳ್ಳುವಂತೆ ಸೂಚಿಸುವ ಕೆಲಸವನ್ನು ಪ್ರಧಾನಿ ಮಾಡಬೇಕಾಗುತ್ತದೆ.

 5. ಸರ್ಕಾರದ ಮುಖಂಡ:

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯಾವುದೇ ಪಕ್ಷದ ಸರ್ಕಾರವಿದ್ದರೂ ಅದು ಜನರ ಮತ್ತು ವಿರೋಧ ಪಕ್ಷಗಳ ವಿಮರ್ಶೆಗೆ ಒಳಗಾಗಬೇಕಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳು, ಜನರಿಗೆ ಅದು ಕೊಡುವ ಭರವಸೆಗಳು ಹಾಗೂ ಕೈಗೆತ್ತಿಕೊಳ್ಳುವ ಕಾರ್ಯಗಳಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವುದನ್ನು ಯಾವುದೇ ವಿರೋಧ ಪಕ್ಷವಾದರೂ ಅದನ್ನು ಸಹಿಸುವುದಿಲ್ಲ. ಹೀಗಾಗಿ ಪ್ರಧಾನಿಯಾದವರು ಸಂಸತ್ತಿನ ಒಳಗೆ ಮತ್ತು ಹೊರಗೆ ಸರ್ಕಾರ ಕೈಗೊಂಡಿರುವ ತೀರ್ಮಾನಗಳನ್ನು ತರ್ಕಬದ್ದ ವಿವರಣೆಗಳ ಮೂಲಕ ಉತ್ತರಗಳನ್ನು ನೀಡುತ್ತಾ ಸರ್ಕಾರದ ಸಾಧನೆಗಳನ್ನು ಸಮರ್ಥಿಸಿಕೊಳ್ಳಬೇಕು. 17 ವರ್ಷಗಳ ಅಧಿಕಾರ ಅವಧಿಯಲ್ಲಿ ಜವಹರಲಾಲ್‌ ನೆಹರು ಯೋಜನಾ ಪದ್ಧತಿಯ ಮೂಲಕ ದೇಶದಲ್ಲಿ ಏಕತೆಯನ್ನು ತರಲು ಪ್ರಯತ್ನಿಸಿದರೆ, ಕೇವಲ 18 ತಿಂಗಳ ಅವಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸಿದರು. 1964 ರಲ್ಲಿ ಇಂದಿರಾಗಾಂಧಿ 14 ಬ್ಯಾಂಕುಗಳ ರಾಷ್ಟ್ರೀಕರಣಗೊಳಿಸಿದರು. ಗ್ರಾಮೀಣಾಭಿವೃದ್ಧಿಗೆ ಬುನಾದಿ ಹಾಕಿದವರು. ಪಿ ವಿ ನರಸಿಂಹರಾವ್. 1998ರಲ್ಲಿ ಪೋಕರಾನ್‌ ಮರುಭೂಮಿಯಲ್ಲಿ ಅಣುಸ್ಫೋಟಕ್ಕೆ ಅನುಮತಿ ನೀಡಿದವರು ವಾಜಪೇಯಿ.

 6. ಹೊಂದಾಣಿಕೆ ಮತ್ತು ಮೇಲ್ವಿಚಾರಣೆ:

 ಸರ್ಕಾರದ ಆಡಳಿತ ಯಂತ್ರ ಸುಗಮವಾಗಿ ನಡೆಯುವಲ್ಲಿ ಹಲವಾರು ತೊಂದರೆ ತಾಪತ್ರೆಯಗಳು ಕಂಡುಬರುತ್ತವೆ. ಹೀಗಾಗಿ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಗಳನ್ನು ಒಂದುಗೂಡಿಸಿ ಆಡಳಿತವನ್ನು ನಡೆಸಿಕೊಂಡು ಹೋಗುವಲ್ಲಿ ಪ್ರಧಾನಮಂತ್ರಿಯ ಪಾತ್ರ ಹಿರಿದಾಗಿದೆ. ಜೊತೆಗೆ ಅದರಲ್ಲಿ ಅವರ ಸಾಮರ್ಥ್ಯವೂ ಅಡಗಿದೆ. ಪ್ರಧಾನಮಂತ್ರಿ ಮಂತ್ರಿ ಮಂಡಲದ ಒಂದು ತಂಡವನ್ನು ಆಯ್ದುಕೊಂಡ ನಂತರ ಆ ತಂಡವು ವಿಚಲಿತವಾಗದಂತೆ ಅದನ್ನು ಹಾಗೆ ಉಳಿಸಿಕೊಂಡು ಹೋಗಬೇಕು. ಸರ್ಕಾರದ ಗುರಿ ಮತ್ತು ಉದ್ದೇಶಗಳನ್ನು ಕಾಪಾಡುವ ಸಲುವಾಗಿ ಮಂತ್ರಿ ಮಂಡಲದ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಆಗ ಪ್ರಧಾನಮಂತ್ರಿ ಮಧ್ಯಪ್ರವೇಶಸಿ ಮಾತುಕತೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಬೇಕು. ಇಡೀ ಮಂತ್ರಾಲಯದ ಮೇಲೆ ಪ್ರಧಾನಿಗೆ ಹಿಡಿತವಿರುವ ಕಾರಣ ಅದರ ಮೇಲ್ವಿಚಾರಣೆಯ ಜವಾಬ್ದಾರಿ ಅವರಿಗಿದ್ದು ಕಾಲಕಾಲಕ್ಕೆ ಅದರ ಪರಿಶೀಲನೆ ಮಾಡಿ ಸರಿದಾರಿಗೆ ತರಬೇಕು. ಮಂತ್ರಿಗಳು ತಮ್ಮ ಇಲಾಖೆಯನ್ನು ಎಷ್ಟೇ ಮತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದರೂ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಹೋದರೆ ನಾವಿಕ ನಿಲ್ಲದ ಹಡಗಿನಂತಾಗುತ್ತದೆ. ಆಡಳಿತ ಯಂತ್ರ ಸುಗಮವಾಗಿ ನಡೆಯಲು ಪ್ರಧಾನಿ ಆಗಾಗ ಅವರ ಮೇಲೆ ನಿಗಾ ಇಡಬೇಕಾದುದು ಅಗತ್ಯವಾಗಿದೆ. ಯಾವುದಾದರು ಇಲಾಖೆಯ ಆಡಳಿತದಲ್ಲಿ ದೋಷ ಕಂಡು ಬಂದರೆ ಕೂಡಲೇ ಮಧ್ಯಪ್ರವೇಶಿಸಿ ದೋಷ ನಿವಾರಣೆಗೆ ಸಲಹೆ ನೀಡಬೇಕು. ಅದು ಪ್ರಧಾನಿಯ ಮುಖ್ಯ ಕೆಲಸವಾಗಿದೆ.

7. ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ:

ಪ್ರಧಾನ ಮಂತ್ರಿ ರಾಷ್ಟ್ರಪತಿ ಹಾಗೂ ಮಂತ್ರಿಮಂಡಲದ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಾರೆ. ಸಂವಿಧಾನದ 78ನೇ ವಿಧಿಯ ಅನ್ವಯ ಮಂತ್ರಿ ಮಂಡಲ ತೆಗೆದುಕೊಂಡ ತೀರ್ಮಾನಗಳನ್ನು ಪ್ರಧಾನಿ ರಾಷ್ಟ್ರಪತಿಗೆ ತಿಳಿಸಬೇಕು. ಮಂತ್ರಿಯೊಬ್ಬರು ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರಗಳನ್ನು ಮಂತ್ರಿಮಂಡಲ ಚರ್ಚೆ ಮಾಡಬೇಕೆಂದು ರಾಷ್ಟ್ರಪತಿ ಸಲಹೆ ನೀಡಿದರೆ. ಪ್ರಧಾನಿ ಅಂತಹ ತೀರ್ಮಾನಗಳನ್ನು ಮಂತ್ರಿಮಂಡಲದ ಮುಂದೆ ತರಬೇಕು. ರಾಷ್ಟ್ರಪತಿಗಳು ಸಂವಿಧಾನದ ರಕ್ಷಕರಾಗಿರುವುದರಿಂದ ಮಂತ್ರಿಮಂಡಲ ಸಂವಿಧಾನಕ್ಕನುಗುಣವಾಗಿ  ಕೆಲಸ ನಿರ್ವಹಿಸಬೇಕು ಎಂಬುದು ಅವರ ಆಶಯವಾಗಿದೆ. ಈ ಕಾರಣದಿಂದ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ನಡುವೆ ಪರಸ್ಪರ ಹೊಂದಾಣಿಕೆ ಇರಬೇಕು. ಸಾಮಾನ್ಯವಾಗಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಪ್ರಧಾನಮಂತ್ರಿ ರಾಷ್ಟ್ರಪತಿಗಳನ್ನು ಭೇಟಿಯಾಗುತ್ತಾರೆ.

ಜವಹರಲಾಲ್‌ ನೆಹರು ಅವರು ರಾಷ್ಟ್ರಪತಿ ಅವರನ್ನು ಪ್ರತಿ ಸೋಮವಾರ ಮತ್ತು ಮಂತ್ರಿಮಂಡಲದ ಸದಸ್ಯರು ತಿಂಗಳಿಗೊಮ್ಮೆ ರಾಷ್ಟ್ರಪತಿಯನ್ನು ಭೇಟಿ ಮಾಡುತ್ತಿದ್ದರು. ಶಾಸ್ತ್ರೀಯವರು ಎರಡು ವಾರಕ್ಕೊಮ್ಮೆ ಭೇಟಿ, ಹಾಗೆಯೇ ದೇಸಾಯಿ ಮತ್ತು ಇಂದಿರಾಗಾಂಧಿ ಇದನ್ನೇ ಮುಂದುವರಿಸಿಕೊಂಡು ಬಂದರು. ಆದರೆ ರಾಜೀವ್ ಗಾಂಧಿ ಜೇಲ್‌ಸಿಂಗರನ್ನು ಭೇಟಿ ಮಾಡುವ ಸಂಪ್ರದಾಯವನ್ನು ಮುಂದುವರಿಸಲಿಲ್ಲ. ಆರ್ ವೆಂಕಟರಾಮನ್ ರಾಷ್ಟ್ರಪತಿ ಆದಾಗ ರಾಜೀವ್ ಗಾಂಧಿ ಆಗಾಗ ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತಿದ್ದರು. ನಂತರ ವಾಜಪೇಯಿ ಮತ್ತು ಮನಮೋಹನ್ ಸಿಂಗರ ಕಾಲದಲ್ಲೂ ರಾಷ್ಟ್ರಪತಿ ಭೇಟಿ ಮುಂದುವರೆಯಿತು.

8.  ಲೋಕಸಭೆಯ ವಿಸರ್ಜನಾಧಿಕಾರಗಳು:

ಪ್ರಧಾನಮಂತ್ರಿಯ ಇಚ್ಛೆಯ ಮೇರೆಗೆ ಲೋಕಸಭಾಸದಸ್ಯರು ಲೋಕಸಭೆಯಲ್ಲಿರುತ್ತಾರೆ. ಏಕೆಂದರೆ ಅವಧಿ ಮುನ್ನವೇ ಪ್ರಧಾನಮಂತ್ರಿಯು ಲೋಕಸಭೆಯನ್ನು ವಿಸರ್ಜಿಸಬಹುದು. ಹಾಗೆ ಮಾಡಲು ಅವರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬಹುದು ಕ್ಯಾಬಿನೆಟ್‌ನಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ತಲೆದೂರಿದಾಗ ಅಥವಾ ಸರ್ಕಾರದ ಮಸೂದೆಗಳು ಸಂಸತ್ತಿನಲ್ಲಿ ಸೋಲನ್ನು ಅನುಭವಿಸಿದಾಗ ಪ್ರಧಾನಮಂತ್ರಿ ಲೋಕಸಭೆಯ ವಿಸರ್ಜನೆಗೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬಹುದು. ಉದಾಹರಣೆ ಲೋಕಸಭೆಯಲ್ಲಿ ವಿಶ್ವಾಸ ಮತ ಕಳೆದುಕೊಂಡ ವಾಜಪೇಯಿ ಸರಕಾರವು 12ನೇ ಲೋಕಸಭೆಯ ವಿಸರ್ಜನೆಗಾಗಿ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಿತು. 2004ರಲ್ಲಿ ಚುನಾವಣೆಯಲ್ಲಿ ವಾಜಪೇಯಿ ಸರ್ಕಾರವು ಅವಧಿಗೆ ಮುನ್ನವೇ ಲೋಕಸಭೆಯ ವಿಸರ್ಜನೆಗೆ ಶಿಫಾರಸ್ಸು ಮಾಡಿತು.

9. ನೇಮಕಾತಿ ಪ್ರಾಧಿಕಾರ:

 ರಾಷ್ಟ್ರಪತಿಗಳು ನಾಗರಿಕ, ಸೈನಿಕ, ನ್ಯಾಯಿಕ ಹಾಗೂ ರಾಯಭಾರಿ ಕ್ಷೇತ್ರಗಳ ಉನ್ನತ ಸ್ಥಾನಗಳಿಗೆ ನೇಮಕಾತಿ ಮಾಡುವ ಅಧಿಕಾರವನ್ನು ಹೊಂದಿದ್ದರೂ ಪ್ರಧಾನಮಂತ್ರಿಗಳ ಶಿಫಾರಸ್ಸು ಇಲ್ಲದೆ ಅವರು ಮುಂದುವರೆಯುವಂತಿಲ್ಲ. ಮುಖ್ಯ ಚುನಾವಣಾ ಅಧಿಕಾರಿಗಳು, ರಾಜ್ಯಪಾಲರು, ರಕ್ಷಣಾ ಬಲಗಳ ಮುಖ್ಯಸ್ಥರು, ಉಚ್ಛ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರು, ರಾಯಭಾರಿಗಳು  ಮುಂತಾದವರನ್ನು  ನೇಮಕ ಮಾಡಲು ಪ್ರಧಾನಿಗಳು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡುತ್ತಾರೆ.

10. ವಿಶೇಷ ಅಧಿಕಾರಗಳು:

ಪ್ರಧಾನಮಂತ್ರಿಗಳು ಕೇಂದ್ರ ಸಂಸತ್ತಿನ ಮುಖ್ಯಸ್ಥರಾಗಿರುವ ಕಾರಣ ವಿದೇಶಾಂಗ ವ್ಯವಹಾರ, ರಾಷ್ಟ್ರ ರಕ್ಷಣೆ ಮತ್ತು ಆರ್ಥಿಕ ವಿಷಯಗಳಲ್ಲಿ ಅವರಿಗೆ ಸಂಪೂರ್ಣ ಅಧಿಕಾರವಿರುತ್ತದೆ. ಪ್ರಧಾನ ಮಂತ್ರಿ ಆಡುವ ಪ್ರತಿಯೊಂದು ಮಾತುಗಳು ಹಾಗೂ ಮಾಡುವ ಪ್ರತಿ ಕಾರ್ಯಗಳನ್ನು ಭಾರತ ದೇಶ ಅಷ್ಟೇ ಅಲ್ಲದೆ ಇಡೀ ವಿಶ್ವವೇ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಹಾಗಾಗಿ ಪ್ರಧಾನಿಯವರು ಕಣ್ಣಲ್ಲಿ ಕಣ್ಣಾಗಿ ನಡೆದುಕೊಳ್ಳಬೇಕಾಗುತ್ತದೆ. ಉದಾಹರಣೆ: ಪಂಚಶೀಲ ಒಪ್ಪಂದ ಮಾಡಿಕೊಳ್ಳುವಾಗ ನೆಹರು ಅವರ ಪಾತ್ರ, ತಾಸ್ಕೇಂಡ್ ಒಪ್ಪಂದದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪಾತ್ರ, ಭಾರತ ಸೋವಿಯತ್ ಒಪ್ಪಂದದಲ್ಲಿ ಇಂದಿರಾಗಾಂಧಿಯವರ ಪಾತ್ರ, ಭಾರತ ಶ್ರೀಲಂಕಾ ಒಪ್ಪಂದದಲ್ಲಿ ರಾಜೀವ್ ಗಾಂಧಿ ಅವರ ಪಾತ್ರ, ಅವಿಸ್ಮರಣೀಯವಾಗಿದೆ. ಇನ್ನೂ ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ರಕ್ಷಣಾ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ರಾಷ್ಟ್ರ ರಕ್ಷಣಾ ವಿಷಯದಲ್ಲಿ ಧಕ್ಕೆ ಉಂಟಾದರೆ ತಕ್ಷಣ ಕಾರ್ಯ ಮಗ್ನರಾಗುತ್ತಾರೆ. ಉದಾಹರಣೆ 1965 ಮತ್ತು 1971ರ ಯುದ್ಧಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾಗಾಂಧಿ ಅನುಕ್ರಮವಾಗಿ ನಾಯಕತ್ವ ವಹಿಸಿದ್ದರು. 1971ರ ಸಮಯದಲ್ಲಿ ಇಂದಿರಾಗಾಂಧಿ ಯುದ್ಧ ವೆಚ್ಚಕ್ಕಾಗಿ ಜನರಿಂದ ಹಣ, ಬಟ್ಟೆ ಹಾಗೂ  ಧಾನ್ಯಗಳನ್ನು ಸಂಗ್ರಹಿಸಿದರು.

ಪ್ರಧಾನ ಮಂತ್ರಿ ಆರ್ಥಿಕ ಹಾಗೂ ಹಣಕಾಸಿನ ವಿಷಯಗಳಲ್ಲಿ ವಿಶೇಷ ತಜ್ಞರಲ್ಲದಿದ್ದರೂ ಆರ್ಥಿಕ ಬೆಳವಣಿಗೆಗಳಾದ ಬೆಲೆ ಏರಿಕೆ, ಉತ್ಪಾದನೆ, ಕೈಗಾರಿಕಾ ಅಭಿವೃದ್ಧಿ ಇತ್ಯಾದಿ ವಿಷಯಗಳ ಬಗ್ಗೆ ಸಾಕಷ್ಟು ಗಮನಹರಿಸುತ್ತಾರೆ. ಉದಾಹರಣೆ 20 ಅಂಶಗಳ ಕಾರ್ಯಕ್ರಮ ರೂಪಗೊಳ್ಳಲು ಇಂದಿರಾಗಾಂಧಿ ಕಾರಣರಾದರೆ, ಭಾರತದ ಅರ್ಥವ್ಯವಸ್ಥೆಯನ್ನು ಉದಾರಿಕರಣದ ಮೂಲಕ ವಿಶ್ವ ಆರ್ಥಿಕ ವ್ಯವಸ್ಥೆಯೊಡನೆ ಸೇರಿಸುವಲ್ಲಿ ಪಿ.ವಿ ನರಸಿಂಹ ರಾವ್ ಕಾರಣರಾದರು. ಹೀಗಾಗಿ ಪ್ರಧಾನಮಂತ್ರಿ ರಾಷ್ಟ್ರದ ಪ್ರಮುಖ ಆಂತರಿಕ ಹಾಗೂ ಬಾಹ್ಯ ನೀತಿಗಳ ಉಗಮ ಬಿಂದು ಎಂದು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

11. ಅಂತರಾಷ್ಟ್ರೀಯ ಸಂಬಂಧಗಳ ವಕ್ತಾರ:

ಪ್ರಧಾನಮಂತ್ರಿ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ. ಕಾಮನ್‌ವೆಲ್ತ್ ಆಫ್ ನೇಷನ್ಸ್, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ, ಬ್ರಿಕ್ಸ್ ಹಾಗೂ ವಿಶ್ವಸಂಸ್ಥೆ ಮುಂತಾದ ಅಂತರಾಷ್ಟ್ರೀಯ ಸಂಸ್ಥೆಗಳ ಸಭೆಗಳಲ್ಲಿ ಪ್ರಧಾನಿ ಖುದ್ದಾಗಿ ದೇಶದ ಪರವಾಗಿ ಭಾಗವಹಿಸುತ್ತಾರೆ. ಸಂಬಂಧಗಳನ್ನು ಗಟ್ಟಿಗೊಳಿಸಲು ವಿದೇಶಗಳಿಗೆ ಭೇಟಿ ನೀಡುತ್ತಾರೆ. ವಿದೇಶಿ ನಾಯಕರು ಭಾರತಕ್ಕೆ ಆಗಮಿಸಿದರೆ ಅವರನ್ನು ಆದರದಿಂದ ಸ್ವಾಗತಿಸುತ್ತಾರೆ. ವಿದೇಶಿ ರಾಯಭಾರಿಗಳೊಂದಿಗೆ ಯಾವಾಗಲೂ ನಿಕಟ ಸಂಪರ್ಕದಲ್ಲಿ ಇರುತ್ತಾರೆ.

ಉಪಸಂಹಾರ

ಒಟ್ಟಾರೆ, ಪ್ರಧಾನಮಂತ್ರಿ ಭಾರತದ ಆಡಳಿತ ವ್ಯವಸ್ಥೆಯ ನಡುಬಿಂದು ಎಂದು ಹೇಳಬಹುದು. ಮಂತ್ರಿಮಂಡಲದ ರಚನೆ, ನೀತಿ ರೂಪಣೆ, ಸಂಸತ್ತಿನ ನಾಯಕತ್ವ ಮತ್ತು ಅಂತರಾಷ್ಟ್ರೀಯ ಪ್ರತಿನಿಧಿತ್ವ ಎಲ್ಲವೂ ಅವರ ಜವಾಬ್ದಾರಿಯಾಗಿದೆ. ಸಮರ್ಥ ಹಾಗೂ ದೃಢ ನಾಯಕತ್ವವಿದ್ದಾಗ ಮಾತ್ರ ದೇಶವು ಶಾಂತಿ, ಪ್ರಗತಿ ಮತ್ತು ಸ್ಥಿರತೆಯನ್ನು ಸಾಧಿಸಬಹುದು. ಆದ್ದರಿಂದ ಪ್ರಧಾನಮಂತ್ರಿಯ ಅಧಿಕಾರಗಳು ಮತ್ತು ಕಾರ್ಯಗಳು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಿವೆ.

ತುರ್ತು ಪರಿಸ್ಥಿತಿ ಘೋಷಣಾ ಅಧಿಕಾರಗಳು

ತುರ್ತು ಪರಿಸ್ಥಿತಿ ಘೋಷಣಾ ಅಧಿಕಾರಗಳು

ʻʻದೇಶದ ಸುವ್ಯವಸ್ಥಿತ ಹಾಗೂ ಶಾಂತಿಯುತ ಆಡಳಿತಕ್ಕೆ ಭಂಗ ಉಂಟಾಗುವ ಸನ್ನಿವೇಶವನ್ನು ತುರ್ತು ಪರಿಸ್ಥಿತಿ ಎಂದು ಕರೆಯಲಾಗಿದೆ.ʼʼ ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಿ ದೇಶವನ್ನು ಸುಸ್ಥಿರವಾಗಿಡಲು ರಾಷ್ಟ್ರಪತಿಗಳು ಮೂರು ಬಗೆಯ ತುರ್ತುಪರಿಸ್ಥಿತಿಗಳನ್ನು ಘೋಷಿಸುತ್ತಾರೆ. ಅವುಗಳು ಈ ಕೆಳಗಿನಂತಿವೆ:

ರಾಷ್ಟ್ರೀಯ ತುರ್ತು ಪರಿಸ್ಥಿತಿ: (National Emergency)

 ಸಂವಿಧಾನದ 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು, ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವರು. ರಾಷ್ಟ್ರಪತಿಗಳು ದೇಶದ ಭದ್ರತೆಗೆ ಬಾಹ್ಯ ಆಕ್ರಮಣ ಅಥವಾ ಆಂತರಿಕ ದಂಗೆಗಳ ಕಾರಣಗಳಿಂದ ಭಯವಿದೆ ಎಂದುಕಂಡುಬಂದರೆ. ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ತುರ್ತು ಪರಿಸ್ಥಿತಿ ಘೋಷಣೆಯಾದ 30 ದಿನದೊಳಗೆ ಸಂಸತ್ತಿನ ಉಭಯ ಸದನಗಳ ೨/೩  ರಷ್ಟು ಸದಸ್ಯರು ಹಾಜರಿದ್ದು ಅದಕ್ಕೆ ಅಂಕಿತವನ್ನು ಹಾಕಬೇಕು. ಇಲ್ಲವಾದರೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ಸ್ಥಗಿತಗೊಳ್ಳುತ್ತದೆ. ಸಂಸತ್ತಿನ ಅನುಮೋದನೆಗೊಂಡ ತುರ್ತುಪರಿಸ್ಥಿತಿಯು ಜಾರಿಗೆ ಬಂದ ದಿನದಿಂದ ಆರು ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಆರು ತಿಂಗಳ ನಂತರವೂ ತುರ್ತುಪರಿಸ್ಥಿತಿ ಮುಂದುವರಿಯಬೇಕಾದರೆ  ತುರ್ತು ಪರಿಸ್ಥಿತಿ ಘೋಷಣೆಯನ್ನು ಮರಳಿ ಅನುಮೋದಿಸಬೇಕಾಗುತ್ತದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ರದ್ದುಗೊಳಿಸಲು ಲೋಕಸಭೆಯ ಒಟ್ಟು ೧/೧೦  ರಷ್ಟು ಸದಸ್ಯರು ಲಿಖಿತ ರೂಪದಲ್ಲಿ ನೋಟಿಸ್ ಅನ್ನು ಅಧಿವೇಶನದ ಸಮಯದಲ್ಲಿ ಸ್ಪೀಕರ್ ಅವರಿಗೆ ಅಥವಾ ಅಧಿವೇಶನ ಮುಂದೂಡಿದಾಗ ರಾಷ್ಟ್ರಪತಿಗೆ ಕೊಡಬಹುದು. ಈ ನೋಟಿಸ್ ತಲುಪಿಸಿದ 14 ದಿನಗಳೊಳಗೆ ಲೋಕಸಭೆಯ ವಿಶೇಷ ಅಧಿವೇಶನ ಕರೆಯಬಹುದು. ತುರ್ತುಪರಿಸ್ಥಿತಿಯನ್ನು ರದ್ದುಗೊಳಿಸಬಹುದೆಂದು ಅಲ್ಪ ಬಹುಮತದಿಂದ ಲೋಕಸಭೆ ಒಪ್ಪಿದರೆ ಅದು ರದ್ದಾಗುತ್ತದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗ ಕೇಂದ್ರ ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳು ಪಾಲಿಸಬೇಕಾಗುತ್ತದೆ.

B.ರಾಜ್ಯ ತುರ್ತು ಪರಿಸ್ಥಿತಿ: (State Emergency)

ಭಾರತದ ಒಕ್ಕೂಟದ ಯಾವುದಾದರೂ ರಾಜ್ಯದಲ್ಲಿನ ಆಡಳಿತ ಯಂತ್ರ ಕುಸಿದು ಬಿದ್ದಾಗ ರಾಜ್ಯಪಾಲರ ವರದಿಯನ್ನು ಆಧರಿಸಿ ರಾಷ್ಟ್ರಪತಿಗಳು ಆ ರಾಜ್ಯದಲ್ಲಿ ಘೋಷಿಸುವ ತುರ್ತು ಪರಿಸ್ಥಿತಿಗೆ ರಾಜ್ಯ ತುರ್ತುಪರಿಸ್ಥಿತಿ ಎಂದು ಕರೆಯುತ್ತೇವೆ.ʼʼ ಈ ಬಗ್ಗೆ ತುರ್ತು ಪರಿಸ್ಥಿತಿಯನ್ನು ರಾಷ್ಟ್ರಪತಿ ಆಳ್ವಿಕೆ ಎಂದು ಹೇಳಲಾಗುತ್ತದೆ.ʼʼ ಸಂವಿಧಾನದ 356ನೇ ವಿಧಿಯಂತೆ ರಾಷ್ಟ್ರಪತಿಗಳು ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸುವರು

 C .ಆರ್ಥಿಕ ತುರ್ತು ಪರಿಸ್ಥಿತಿ: (Econamic Emergency)

ದೇಶದ ಆರ್ಥಿಕ ಪರಿಸ್ಥಿತಿ ದುಸ್ಥಿತಿಗೆ ಒಳಗಾದಾಗ ರಾಷ್ಟ್ರಪತಿಗಳು ಘೋಷಿಸುವ ತುರ್ತು ಪರಿಸ್ಥಿತಿಯನ್ನು ಆರ್ಥಿಕ ತುರ್ತು ಪರಿಸ್ಥಿತಿ ಎಂದು ಕರೆಯುವರು.

ಉಪಸಂಹಾರ

ತುರ್ತು ಪರಿಸ್ಥಿತಿ ಘೋಷಣೆ ದೇಶದ ಆಡಳಿತವನ್ನು ಸುಸ್ಥಿರಗೊಳಿಸುವ ಮಹತ್ವದ ಉಪಕರಣವಾಗಿದೆ. ಆದರೆ ಇದರ ದುರುಪಯೋಗವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯನ್ನುಂಟುಮಾಡಬಹುದು. ಆದ್ದರಿಂದ ಸಂವಿಧಾನದಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಸಂಸತ್ತಿನ ಮೇಲ್ವಿಚಾರಣೆ ಅಗತ್ಯವಾಗಿದೆ. ತುರ್ತು ಪರಿಸ್ಥಿತಿಯ ಸರಿಯಾದ ಅರಿವು ಪ್ರಜೆಯಾಗಿ ನಮ್ಮ ಕರ್ತವ್ಯವನ್ನು ಬಲಪಡಿಸುತ್ತದೆ.

ಸ್ಪೀಕರ್‌ನ ಅಧಿಕಾರ ಕಾರ್ಯಗಳು

ಸ್ಪೀಕರ್‌ನ ಅಧಿಕಾರ ಕಾರ್ಯಗಳು

ಸ್ಪೀಕರ್ ಎಂಬುದು ಕೇವಲ ಸ್ಥಾನವಲ್ಲ, ಅದು ಸಂಸತ್ತಿನ ಗೌರವದ ಪ್ರತೀಕವಾಗಿದೆ. ಸದನದ ಶಾಂತಿ, ಶಿಸ್ತು ಮತ್ತು ಸಮನ್ವಯವನ್ನು ಕಾಪಾಡುವಲ್ಲಿ ಸ್ಪೀಕರ್ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಜಾಪ್ರಭುತ್ವದ ಯಶಸ್ಸು ಸ್ಪೀಕರ್ ಅವರ ನ್ಯಾಯಸಮ್ಮತ ಕಾರ್ಯನಿರ್ವಹಣೆಯ ಮೇಲೆ ಅವಲಂಬಿತವಾಗಿದೆ.

ಸ್ಪೀಕರ್ ನ ಕಾರ್ಯಗಳು ಈ ಕೆಳಗಿನಂತಿವೆ

  1. ಸ್ಪೀಕರ್ ಲೋಕಸಭೆಯ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ ಸದನದ ಕಲಾಪಗಳನ್ನು ನಿಯಮಾವಳಿಗನುಸಾರ  ನಡೆಯುವಂತೆ ನೋಡಿಕೊಳ್ಳುತ್ತಾರೆ. ವಿವಿಧ ವಿಷಯಗಳ ಚರ್ಚೆಗೆ ಸಮಯವನ್ನು ನಿಗದಿ ಮಾಡುತ್ತಾರೆ.
  2. ಸದನದಲ್ಲಿ ಯಾರು ಮಾತನಾಡಬೇಕು ಮತ್ತು ಎಷ್ಟು ಮಾತನಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್ ಅವರಿಗೆ ಇರುತ್ತದೆ. ಜೊತೆಗೆ ಅನ್‌ಪಾರ್ಲಿಮೆಂಟರಿ ಪದಗಳನ್ನು ಪ್ರಯೋಗಿಸಿ ಮಾತನಾಡದಂತೆ ತಡೆಯುತ್ತಾರೆ.
  3. ಸದನದಲ್ಲಿ ನಿರ್ದಿಷ್ಟ ಹಾಜರಾತಿ ಇರದೆ ಹೋದರೆ ಸಭೆಯನ್ನು ಮುಂದೂಡುತ್ತಾರೆ. ಸಭೆಯಲ್ಲಿ ಗದ್ದಲ ಮತ್ತು ಕೋಲಹಲವಾದರೂ ಕೆಲವು ನಿಮಿಷಗಳವರೆಗೆ ಸಭೆಯನ್ನು ಮುಂದೂಡುತ್ತಾರೆ.
  4. ಲೋಕಸಭಾ ಸದಸ್ಯರು ಸ್ಪೀಕರ್ ಅವರ ಅನುಮತಿ ಮೇರೆಗೆ ಪ್ರಶ್ನೆ ಕೇಳುವುದು ಹಾಗೂ ಚರ್ಚೆನಡೆಯುವುದರ ಮೂಲಕ ನಿರ್ಣಯಗಳನ್ನು ಮತ್ತು ಮಸೂದೆಗಳನ್ನು ಮಂಡಿಸಬೇಕು.
  5. ಸದನದಲ್ಲಿ ಮೊದಲು ಚರ್ಚಿಸಬೇಕಾದ ವಿಷಯಗಳನ್ನು ಸ್ಪೀಕರ್ ತೀರ್ಮಾನಿಸುತ್ತಾರೆ. ಯಾವುದಾದರೂ ಮಸೂದೆ ಅದು ಹಣಕಾಸಿನ ಮಸೂದೆಯೋ ಅಥವಾ ಅಲ್ಲವೋ ಎಂಬುದನ್ನು ತೀರ್ಮಾನಿಸುವ ಅಂತಿಮ ಅಧಿಕಾರ ಅವರಿಗೆ ಇದೆ.
  6. ಸದನದಲ್ಲಿ ಶಿಸ್ತು, ಶಾಂತಿ ಹಾಗೂ ಸಂಯಮಗಳನ್ನು ಸ್ಪೀಕರ್ ಕಾಪಾಡುತ್ತಾರೆ. ಸದಸ್ಯರು ಒಂದು ವೇಳೆ ಅಶಿಸ್ತಿನಿಂದ ನಡೆದುಕೊಂಡರೆ ಅವರನ್ನು ಸದನದಿಂದ ಹೊರ ಹೋಗುವಂತೆ ಹೇಳುವ ಅಧಿಕಾರವನ್ನು ಸ್ಪೀಕರ್ ಪಡೆದಿದ್ದಾರೆ.
  7. ಸದನದಲ್ಲಿ ಚರ್ಚೆಯಾದ ಮಸೂದೆಯ ಪರ ವಿರೋಧ ಸಮಾನ ಮತಗಳು ಬಂದರೆ ಸ್ಪೀಕರ್ ತಮ್ಮ ಮತ(Casting Vote)ನ್ನು ಚಲಾಯಿಸಬಹುದು.
  8. ಅಸಂಬದ್ಧ ಚರ್ಚೆಗಳನ್ನು ಕಲಾಪ ಪಟ್ಟಿಯಿಂದ ತೆಗೆದು ಹಾಕುವ ಅಧಿಕಾರವು ಸ್ಪೀಕರಿಗೆ ಇದೆ.
  9. ಸ್ಪೀಕರ್ ಅವರು ರೂಲ್ಸ್ ಕಮಿಟಿ ಮತ್ತು ಬಿಸಿನೆಸ್ ಅಡ್ವೆಸರಿ ಕಮಿಟಿಗಳ ಅಧ್ಯಕ್ಷರಾಗಿದ್ದು ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅಂದಾಜು ಸಮಿತಿ ಹಾಗೂ ಸಾರ್ವಜನಿಕ ಉದ್ಯಮ ಸಮಿತಿಗಳ ಅಧ್ಯಕ್ಷರುಗಳನ್ನು ಸ್ಪೀಕರ್ ಅವರೇ ನೇಮಿಸುತ್ತಾರೆ.
  10. ಸ್ಪೀಕರ್ ಸ್ಥಾನ ಶ್ರೇಷ್ಠವಾದದ್ದು ಹಾಗೂ ಗೌರವತವಾದುದು ಇವರು ಆಳುವ ಪಕ್ಷದಿಂದ ಆಯ್ಕೆಯಾದರೂ ಸದನದಲ್ಲಿ ಯಾವುದೇ ತಾರತಮ್ಯ ಮಾಡದೆ ಸದನದ ಗೌರವವನ್ನು ಕಾಪಾಡುತ್ತಾರೆ.
  11. ಲೋಕಸಭೆಯ ಸದಸ್ಯರ ಪಕ್ಷಾಂತರ ಕುರಿತಂತೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಲೋಕಸಭಾ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಅಧ್ಯಕ್ಷನಿಗಿರುತ್ತದೆ.
  12. ಲೋಕಸಭಾ ಸದಸ್ಯರ ರಾಜೀನಾಮೆಯನ್ನು ಸ್ವೀಕರಿಸುವ ಹಾಗೂ ರಾಜೀನಾಮೆಯ ನೈಜತೆಯನ್ನು ಪರಿಶೀಲಿಸುವ ಅಧಿಕಾರಸ್ಪೀಕರ್‌ವರಿಗಿದೆ. 

ಉಪಸಂಹಾರ

ಈ ಹಿಂದೆ ಜೀವಿ ಮಾವಲಂಕರ್ ಮತ್ತು ವಿಠ್ಠಲ್‌ಬಾಯಿ ಪಟೇಲರು ಧೈರ್ಯ ಹಾಗೂ ದಿಟ್ಟತನದಿಂದ ನಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕ್ಲಿಪ್ಟನ್ ಬ್ರೌನ್ ಹೇಳಿದಂತೆ ಸ್ಪೀಕರ್ ಗಮನಿಸಬೇಕಾದ ವಿಷಯವೆಂದರೆ I am not  government man nar the opposition man and I am the house of the commons man ಸಭೆಯಲ್ಲಿ ಗೊಂದಲ ಹಾಗೂ ಉದ್ರೇಕಗಳುಂಟಾದರೆ ಸ್ಪೀಕರ್ ತಮ್ಮ ನಗುವಿನ ಹಾಗೂ  ಹಾಸ್ಯ ಚಟಾಕಿಗಳ ಮೂಲಕ ಸದಸ್ಯರನ್ನು ಸಮಾಧಾನಗೊಳಿಸಬೇಕು.

ಲೋಕಸಭೆಯ ರಚನೆ

ಲೋಕಸಭೆಯ ರಚನೆ

ʻʻಭಾರತದ ಕೇಂದ್ರ ಶಾಸಕಾಂಗವಾದ ಸಂಸತ್ತಿನ ಕೆಳಮನೆಯನ್ನು ಲೋಕಸಭೆ ಎನ್ನಲಾಗುತ್ತದೆ.ʼʼ ಲೋಕಸಭೆಯು ಭಾರತದ ಪ್ರಜೆಗಳನ್ನು ಪ್ರತಿನಿಧಿಸುತ್ತಿರುವುದರಿಂದ ಇದನ್ನು ʻಕೆಳಮನೆʼ ʻಪ್ರತಿನಿಧಿಸಭೆʼ ಜನತಾ ಸದನ ಹಾಗೂ ಪ್ರಜಾಸದನ ಎಂದು ಸಹ ಕರೆಯಲಾಗುತ್ತದೆ. ಲೋಕಸಭೆಯು ಇಂಗ್ಲೆಂಡಿನ ಹೌಸ್‌ ಆಫ್‌ ಕಾಮನ್ಸ್‌ ಮತ್ತು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್‌ಗೆ ಸಮನಾಗಿದೆ.

1. ಲೋಕಸಭೆಯ ಗಾತ್ರ: (Size of Loksabha)

ಭಾರತದ ಸಂವಿಧಾನದಲ್ಲಿ ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆಯನ್ನು 552 ಕ್ಕೆ ನಿಗದಿಪಡಿಸಲಾಗಿದೆ. ಈ ೫೫೨ ಸ್ಥಾನಗಳಲ್ಲಿ ರಾಷ್ಟ್ರಪತಿಗಳು ಇಬ್ಬರು ಆಂಗ್ಲೋ ಇಂಡಿಯನ್ನರನ್ನು ನಾಮಕರಣಗೊಳಿಸುತ್ತಾರೆ. ಉಳಿದ 550 ಸ್ಥಾನಗಳು ಪ್ರಜೆಗಳಿಂದ ಚುನಾವಣೆಯಲ್ಲಿ ಆಯ್ಕೆಗೊಂಡ ಪ್ರತಿನಿಧಿಗಳಿಗೆ ಮೀಸಲಾಗಿದ್ದವು. 2019ರ ವೇಳೆಗೆ ಲೋಕಸಭೆಯ ಸದಸ್ಯರ ಸಂಖ್ಯೆ 545ಕ್ಕೆ ಸೀಮಿತಗೊಂಡಿದೆ. ಅದರಲ್ಲಿ ಇಬ್ಬರು ಆಂಗ್ಲೋ ಇಂಡಿಯನ್ನರು ನೇಮಕವಾದರೆ ಉಳಿದ 543 ಸ್ಥಾನಗಳು ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಮೀಸಲು. 2019 ರಲ್ಲಿ ಸಂವಿಧಾನದ 104ನೇ ತಿದ್ದುಪಡಿಯನ್ವಯ ಆಂಗ್ಲೋ ಇಂಡಿಯನ್ ಸದಸ್ಯರುಗಳ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ. ಪರಿಣಾಮವಾಗಿ ಇಂದು 543 ಸ್ಥಾನಗಳು ಮಾತ್ರ ಉಳಿದಿವೆ. 543 ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿಡಲಾಗಿದೆ.

2.  ಚುನಾವಣಾ ವಿಧಾನ: (Election Method)

ಲೋಕಸಭೆಯ 543 ಮತ ಕ್ಷೇತ್ರಗಳ ಅಭ್ಯರ್ಥಿಗಳು ನೇರವಾಗಿ ಪ್ರಜೆಗಳಿಂದ ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾಗುತ್ತಾರೆ. ಉಳಿದ ಎರಡು ಸ್ಥಾನಗಳನ್ನು ರಾಷ್ಟ್ರಪತಿಗಳು ನಾಮಕರಣಗೊಳಿಸುತ್ತಾರೆ. ಭಾರತದ ಜನಸಂಖ್ಯೆಗನುಗುಣವಾಗಿ ಭಾರತದ ಪ್ರತಿಯೊಂದು ರಾಜ್ಯಗಳ ಮತಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಗೊಳ್ಳಬೇಕಾದ ಸ್ಥಾನಮಾನಗಳನ್ನು ಸಂವಿಧಾನದಲ್ಲಿ ನಿಗದಿಪಡಿಸಲಾಗಿದೆ. ಅದರಂತೆ ಕರ್ನಾಟಕವು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಚುನಾವಣಾ ಆಯೋಗವು ಭಾರತದ ಭೂ ಭಾಗವನ್ನು 543 ಲೋಕಸಭಾ ಮತಕ್ಷೇತ್ರಗಳನ್ನಾಗಿ ವಿಂಗಡಿಸಿ ಆಯಾ ಸಮುದಾಯಗಳಿಗೆ ಸಮಾನವಾಗಿ ಸೀಟುಗಳನ್ನು ಹಂಚಿಕೆ ಮಾಡುತ್ತದೆ. ಪರಿಶಿಷ್ಟ ಜಾತಿಗಳಿಗೆ 87 ಹಾಗೂ ಪರಿಶಿಷ್ಟ ಪಂಗಡಗಳಿಗೆ 44 ಸೀಟುಗಳನ್ನು ಒಟ್ಟು 132 ಮತಕ್ಷೇತ್ರಗಳನ್ನು ಮೀಸಲಿಡಲಾಗುತ್ತದೆ. ಈ ಕ್ಷೇತ್ರಗಳ ಚುನಾವಣೆಯನ್ನು ವಯಸ್ಕ ಮತದಾನ ಪದ್ದತಿಯಂತೆ ನಡೆಸಲಾಗುತ್ತದೆ.

3.  ಅರ್ಹತೆಗಳು: (Qualification)

 ಲೋಕಸಭಾ ಸದಸ್ಯನಾಗಬಯಸುವ ವ್ಯಕ್ತಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.

  1.  ಆತ ಭಾರತದ ಪ್ರಜೆಯಾಗಿರಬೇಕು.
  2.  ಆತನಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
  3.  ಆತ ಯಾವುದಾದರೂ ಲೋಕಸಭಾ ಕ್ಷೇತ್ರದ ಮತದಾರನಾಗಿಬೇಕು.
  4.  ಲೋಕಸಭಾ ಸದಸ್ಯನಿಗಿರಬೇಕಾದ ಎಲ್ಲಾ ಅರ್ಹತೆಗಳು ಇರಬೇಕು.
  5.  ಕೇಂದ್ರ ರಾಜ್ಯ ಅಥವಾ ಯಾವುದೇ ಸರ್ಕಾರಿ ಹುದ್ದೆಯಲ್ಲಿರಬಾರದು.
  6. ಆತ ಹುಚ್ಚ, ದಿವಾಳಿ ಅಥವಾ ಮತಿವಿಕಲನಾಗಿರಬಾರದು

 4. ಅಧಿಕಾರ ಅವಧಿ: (Term of Power)

ಲೋಕಸಭಾ ಸದಸ್ಯರ ಅಧಿಕಾರಾವಧಿ ಸಾಮಾನ್ಯವಾಗಿ ಐದು ವರ್ಷಗಳು. ಚುನಾವಣೆಗಳು ನಡೆದು ಮೊದಲನೇ ಅಧಿವೇಶನವು ಸೇರುವ ದಿನದಿಂದ ಐದು ವರ್ಷಗಳ ಕಾಲದವರೆಗೆ ಅಧಿಕಾರದಲ್ಲಿರುವುದು. ಆದರೆ ರಾಷ್ಟ್ರಪತಿಗಳು ಲೋಕಸಭಾ ಅಧಿಕಾರಾವಧಿ ಮುಗಿಯುವ ಮುಂಚಿತವಾಗಿ ವಿಸರ್ಜನೆಗೊಳಿಸಬಹುದು. ಈ ರೀತಿಯ ವಿಸರ್ಜನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಹಲವು ಬಾರಿ ರಾಷ್ಟ್ರಪತಿಗಳು ಲೋಕಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಿದ್ದಾರೆ. ಉದಾಹರಣೆ 1998ರ 12ನೇ ಲೋಕಸಭೆಯನ್ನು 1999 ರಲ್ಲಿ ವಿಸರ್ಜಿಸಲಾಯಿತು. ಇದರೊಂದಿಗೆ ತುರ್ತುಪರಿಸ್ಥಿತಿಯೇನಾದರೂ ಸಂಭವಿಸಿದರೆ ಲೋಕಸಭೆಯ ಅವಧಿಯನ್ನು ಒಂದು ವರ್ಷ ಮುಂದೂಡಬಹುದು. ಅದಕ್ಕೆ ಸಂಸತ್ತಿನ ಅನುಮತಿ ಬೇಕು, ತುರ್ತುಪರಿಸ್ಥಿತಿ ಮುಗಿದ ಆರು ತಿಂಗಳೊಳಗೆ ಚುನಾವಣೆಗಳು ನಡೆಯಬೇಕು.

5. ಅಧಿವೇಶನಗಳು: (Sessions)

ರಾಷ್ಟ್ರಪತಿಗಳು ಲೋಕಸಭೆಯ ಅಧಿವೇಶನವನ್ನು ಕರೆಯುವ ಅಥವಾ ಮುಂದೂಡುವ ಅಧಿಕಾರವನ್ನು ಹೊಂದಿದ್ದಾರೆ ಲೋಕಸಭೆಯು ಸಾಮಾನ್ಯವಾಗಿ ಮೂರು ಬಾರಿ ಅಧಿವೇಶನವನ್ನು ಕರೆಯುತ್ತದೆ. ಬಜೆಟ್ ಅಧಿವೇಶನ( ಫೆಬ್ರವರಿ- ಮೇ)  ಮುಂಗಾರು ಅಧಿವೇಶನ (ಜುಲೈ-ಸೆಪ್ಟೆಂಬರ್) ಹಾಗೂ ಚಳಿಗಾಲದ ಅಧಿವೇಶನ (ನವೆಂಬರ್-ಡಿಸೆಂಬರ್) ಸಂವಿಧಾನದ ಪ್ರಕಾರ ಲೋಕಸಭೆಯ ಎರಡು ಅಧಿವೇಶನಗಳ ನಡುವಿನ ಅಂತರ ಆರು ತಿಂಗಳು ಮೀರುವಂತಿಲ್ಲ. ಆದರೆ ಪ್ರತಿವರ್ಷ ಎರಡು ಅಧಿವೇಶನಗಳು ನಡೆಯಲೇಬೇಕು.

6. ಕೋರಂ: (Quoram)

ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ಕಲಾಪಗಳು ಜರುಗಲು ಹಾಜರಿರಬೇಕಾದ ಕನಿಷ್ಠ ಸದಸ್ಯರ ಸಂಖ್ಯೆಯನ್ನು ಕೋರಂ ಎಂದು ಕರೆಯಲಾಗುತ್ತದೆ. ಲೋಕಸಭೆಯ ಕೋರಂ ಸಂಖ್ಯೆ ಒಟ್ಟು ಸದಸ್ಯರ ೧/೧೦ ಷ್ಟು ಬಹುಮತ ಇರಬೇಕು. ಲೋಕಸಭಾ ಅಧಿವೇಶನದಲ್ಲಿ ಬಹುಮತದ ಸಂಖ್ಯೆಯಷ್ಟು ಸದಸ್ಯರು ಹಾಜರಾಗದಿದ್ದರೆ ಸ್ಪೀಕರ್ ಅಧಿವೇಶನವನ್ನು ಮುಂದೂಡುತ್ತಾರೆ.

7. ಅಧ್ಯಕ್ಷ ಮತ್ತು ಉಪಾಧ್ಯಕ್ಷ: (Speaker and Deputy Speaker)

ʻʻ ಲೋಕಸಭೆಯ ಅಧ್ಯಕ್ಷನನ್ನು ಸ್ಪೀಕರ್ ಎಂದು ಕರೆಯಲಾಗಿದೆʼʼ. ಲೋಕಸಭೆಯ ಸದಸ್ಯರು ತನ್ನಲ್ಲಿಯೇ ಒಬ್ಬ ಅಧ್ಯಕ್ಷ ಮತ್ತು ಉಪಾಧ್ಯಕ್ಷನ್ನು ಆಯ್ಕೆ ಮಾಡುತ್ತಾರೆ. ಲೋಕಸಭೆಯ ಕಾರ್ಯಕಲಾಪಗಳು ಲೋಕಸಭಾ ಸ್ಪೀಕರ್ ನೇತೃತ್ವದಲ್ಲಿಯೇ ನಡೆಯುತ್ತವೆ. ಅಧ್ಯಕ್ಷರ ಅನುಪಸ್ಥಿಯಲ್ಲಿ ಉಪಾಧ್ಯಕ್ಷರು ಸಭೆಯ ಕಾರ್ಯಕಲಾಪಗಳನ್ನು ನಿರ್ವಹಿಸಿಕೊಂಡು ಹೋಗುತ್ತಾರೆ.

8. ವೇತನ ಹಾಗೂ ವಿನಾಯಿತಿಗಳು: 

ಲೋಕಸಭಾ ಸದಸ್ಯರಿಗೆ ೧ ಲಕ್ಷ ರೂ ವೇತನ ೭೦ ಸಾವಿರ ಕ್ಷೇತ್ರ ಭತ್ಯೆಯೇ ಹಾಗೂ 60,000 ಕಚೇರಿ ವೆಚ್ಚರವನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಜೊತೆಗೆ ಅಧಿವೇಶನಕ್ಕೆ ಹಾಜರಾಗಿ ಸಹಿ ಮಾಡಿದರೆ ಪ್ರತಿದಿನ 2,000ರೂ ಭತ್ಯೆಯನ್ನು ನೀಡಲಾಗುತ್ತದೆ. ಇದರೊಂದಿಗೆ ಉಚಿತ ರೈಲು ಹಾಗೂ ವಿಮಾನ ಪ್ರಯಾಣ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಅದು ಅಲ್ಲದೆ ಉಚಿತ ನಿವೇಶನ, ದೂರವಾಣಿ ಕರೆಗಳು, ವಿದ್ಯುತ್, ಆರೋಗ್ಯ ಹಾಗೂ ನೀರಿನ ಸೌಲಭ್ಯಗಳನ್ನು ಸಹ ಕಲ್ಪಿಸಿಕೊಡಲಾಗುತ್ತದೆ. ಲೋಕಸಭಾ ಸದಸ್ಯರು ಅಧಿವೇಶನದ ಸಂದರ್ಭದಲ್ಲಿ ಅನಿರ್ಬಂದಿತವಾಗಿ ಮಾತನಾಡುವ ಹಕ್ಕನ್ನು ಪಡೆದಿರುತ್ತಾರೆ. ಅಧಿವೇಶನದ ವೇಳೆ ಮಾತನಾಡುವ ಮಾತುಗಳಿಗೆ ಶಿಕ್ಷೆ ನೀಡುವಂತಿಲ್ಲ. ಅಧಿವೇಶನ ನಡೆಯುವ ಮುನ್ನ ಹಾಗೂ ಅಧಿವೇಶನದ ಸಂದರ್ಭಗಳಲ್ಲಿ ಹಾಗೂ ನಂತರ 40 ದಿನಗಳವರೆಗೆ ಲೋಕಸಭಾ ಸದಸ್ಯನನ್ನು ನಾಗರಿಕ ಮೊಕದ್ದಮೆಯಡಿಯಲ್ಲಿ ಬಂಧಿಸುವಂತಿಲ್ಲ. ಒಂದು ವೇಳೆ ಬಂಧಿಸುವ ಸಂದರ್ಭಗಳು ಬಂದರೆ ಸ್ಪೀಕರ್ ಅವರ ಅನುಮತಿ ಬೇಕೇ ಬೇಕು.

ಉಪಸಂಹಾರ

ಒಟ್ಟಾರೆ, ಲೋಕಸಭೆಯ ರಚನೆ ಮತ್ತು ಕಾರ್ಯವಿಧಾನಗಳು ಭಾರತದ ಪ್ರಜಾಪ್ರಭುತ್ವವನ್ನು ಸ್ಥಿರಗೊಳಿಸುತ್ತವೆ. ಸದಸ್ಯರ ಅರ್ಹತೆ, ಅವಧಿ, ಅಧಿವೇಶನಗಳು ಮತ್ತು ಹಕ್ಕುಗಳು ವ್ಯವಸ್ಥಿತ ಆಡಳಿತಕ್ಕೆ ನೆರವಾಗುತ್ತವೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಮೂಲಕ ಜನಾಭಿಪ್ರಾಯವನ್ನು ಕಾನೂನಾಗಿಸುವ ಶಕ್ತಿ ಲೋಕಸಭೆಗೆ ಇದೆ. ಆದ್ದರಿಂದಲೇ ಲೋಕಸಭೆ ಭಾರತೀಯ ಪ್ರಜಾಪ್ರಭುತ್ವದ ಜೀವಾಳವೆಂದು ಕರೆಯಲ್ಪಡುತ್ತದೆ.

ರಾಜ್ಯಸಭೆಯ ಕೆಲಸ ಕಾರ್ಯಗಳು

ಭಾರತದ ಶಾಸಕಾಂಗವು ವರ್ಷದಲ್ಲಿ ಎರಡು ಬಾರಿ ಸಭೆ ಸೇರಬೇಕು ಮತ್ತು ಎರಡು ಸಮಾವೇಶಗಳ ನಡುವಿನ ಅಂತರ ೬ ತಿಂಗಳ ಹೆಚ್ಚಾಗಿರಬಾರದೆಂದು ಭಾರತ ಸಂವಿಧಾನದ 85 ನೇ ವಿಧಿಯು ಸ್ಪಷ್ಟಪಡಿಸುತ್ತದೆ. ಅಧಿಕಾರ ಮತ್ತು ಕಾರ್ಯಗಳು ಈ ಎರಡು ಪದಗಳನ್ನು ಸಾಮಾನ್ಯವಾಗಿ ಸಮಾನಾರ್ಥ ಪದಗಳಾಗಿ ಬಳಕೆಗೆ ತರಲಾಗಿದೆ. ಇದಕ್ಕೆ ಕಾರಣವೆಂದರೆ ಒಬ್ಬ ಅಧಿಕಾರಿಯು ಕೆಲವು ಕಾರ್ಯಗಳನ್ನು ನಿರ್ವಹಿಸಬೇಕಾದರೆ ಅದಕ್ಕೆ ಅಗತ್ಯವಿರುವ ಅಧಿಕಾರವಿರಬೇಕು. ರಾಜ್ಯಸಭೆಯ ಕಾರ್ಯಗಳು ಈ ಕೆಳಗಿನಂತಿವೆ.

1. ಶಾಸನೀಯ ಕೆಲಸ ಕಾರ್ಯಗಳು: (Legislative Functions)

ಹಣಕಾಸಿನ ಮಸೂದೆಯನ್ನು ಹೊರತುಪಡಿಸಿ ಉಳಿದೆಲ್ಲಾ ಶಾಸನೀಯ ಅಧಿಕಾರದಲ್ಲಿ ರಾಜ್ಯಸಭೆಯು ಲೋಕಸಭೆಯಷ್ಟೇ ಸಮಾನವಕಾಶವನ್ನು ಹೊಂದಿದೆ. ಹಣಕಾಸಿಗೆ ಸಂಬಂಧಿಸಿದ ಮಸೂದೆಗಳು ರಾಜ್ಯಸಭೆಯಲ್ಲಿ ೨/೩  ಬಹುಮತ ಪಡೆದ ನಂತರವೇ ಮುಂದಿನ ನಿರ್ಧಾರಕ್ಕಾಗಿ ಲೋಕಸಭೆಗೆ ಹೋಗುತ್ತದೆ. ಯಾವುದೇ ಮಸೂದೆಯು ಕಾನೂನು ರೂಪ ತಾಳಲು ಎರಡೂ ಸದನಗಳ ಒಪ್ಪಿಗೆ ಬೇಕು. ಒಂದು ಮಸೂದೆಗೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದರೆ ಆಗ ರಾಷ್ಟ್ರಪತಿಗಳು ಉಭಯ ಸದನಗಳ ಜಂಟಿ ಅಧಿವೇಶನಗಳನ್ನು ಕರೆಯಬಹುದು. ಈ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಲೋಕಸಭೆಯ ಸ್ಪೀಕರ್ ನಿರ್ವಹಿಸುತ್ತಾರೆ. ನಂತರ ಎರಡು ಸದನಗಳ ಹಾಜರಿರುವ ಒಟ್ಟು ಸದಸ್ಯರುಗಳ ಸಂಖ್ಯೆಯ ಬಹುಮತದ  ಆಧಾರದ ಮೇಲೆ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ಲೋಕಸಭೆಯ ಸದಸ್ಯರುಗಳ ಸಂಖ್ಯಾಬಲ ಹೆಚ್ಚಿರುವ ಕಾರಣದಿಂದ ಲೋಕಸಭೆಯ ಅಭಿಪ್ರಾಯಕ್ಕೆ ಮನ್ನಣೆ ಸಿಗುವ ಸಂಭವ ಹೆಚ್ಚು.

ಲೋಕಸಭೆಯಲ್ಲಿ ಅಂಗೀಕರಿಸಿದ ಮಸೂದೆಯನ್ನು ಒಪ್ಪಿಗೆಗಾಗಿ ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತದೆ. ರಾಜ್ಯಸಭೆಯು ಆ ವಸೂದೆಯನ್ನು ಆರು ತಿಂಗಳವರೆಗೆ ತಡೆಹಿಡಿಯಬಹುದೇ ಹೊರತು ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಮುಂದೂಡಲು ಬರುವುದಿಲ್ಲ. ಆರು ತಿಂಗಳೊಳಗೆ ಮಸೂದೆಗೆ ಅನುಮೋದನೆ ನೀಡಬೇಕು. ಒಂದು ವೇಳೆ ಲೋಕಸಭೆಯಲ್ಲಿ ತೀರ್ಮಾನಿಸಿದ ಮಸೂದೆಗೆ 180 ದಿನಗಳಲ್ಲಿ ಅನುಮೋದನೆ ನೀಡದಿದ್ದಲ್ಲಿ ಆ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರಕಿದೆ ಎಂದು ಪರಿಗಣಿಸಲಾಗುವುದು.

 2.  ಹಣಕಾಸಿನ ಕಾರ್ಯಗಳು: (Financial Functions)

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆಯೇ ಸಾರ್ವಭೌಮತ್ವವನ್ನು ಹೊಂದಿದೆ. ಸಂವಿಧಾನದ 10ನೇ ವಿಧಿಯ ಅನ್ವಯ ಹಣಕಾಸಿನ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆ ಮಾಡುವ ಅಧಿಕಾರವಿಲ್ಲದಿರುವುದೇ  ಇದಕ್ಕೆ ಕಾರಣ. ಹಾಗಾಗಿ ಹಣಕಾಸಿನ ಮಸೂದೆಯನ್ನು ಮೊದಲು ಲೋಕಸಭೆಯಲ್ಲಿಯೇ ಮಂಡಿಸಬೇಕು. ಲೋಕಸಭೆಯಲ್ಲಿ ಹಣಕಾಸಿನ ಮಸೂದೆಯನ್ನು ಮಂಡಿಸಿ ಅಂಗೀಕರಿಸಿ ನಂತರ ಅದನ್ನು ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತದೆ. ಆಗ ರಾಜ್ಯಸಭೆಯು ಈ ಮಸೂದೆಯ ಬಗ್ಗೆ ಚರ್ಚಿಸಬಹುದು ಅಥವಾ ಕೆಲವಾರು ತಿದ್ದುಪಡಿ ಮಾಡಲು ಸೂಚನೆ ನೀಡಬಹುದು. ಆದರೆ ರಾಜ್ಯಸಭೆಯ ಸೂಚನೆಯನ್ನು ಒಪ್ಪುವುದು ಮತ್ತು ಬಿಡುವುದು ಲೋಕಸಭೆಗೆ ಬಿಟ್ಟ ವಿಚಾರ. ಹಣಕಾಸು ಮಸೂದೆ ಕೈ ಸೇರಿದ 14 ದಿನದೊಳಗೆ ರಾಜ್ಯಸಭೆಯು ತನ್ನ ಒಪ್ಪಿಗೆಯನ್ನು ಸೂಚಿಸಬೇಕು. ಒಂದು ವೇಳೆ 14 ದಿನದೊಳಗೆ ಒಪ್ಪಿಗೆಯನ್ನು ಸೂಚಿಸಿ ಲೋಕಸಭೆಗೆ ಹಿಂತಿರುಗಿಸದಿದ್ದರೆ ಆ ವಸೂದೆಯನ್ನು ಉಭಯ ಸದನಗಳು ಒಪ್ಪಿಕೊಂಡಿವೆ ಎಂದು ಅರ್ಥ. ಹಾಗಾಗಿ ಹಣಕಾಸಿನ ಮಸೂದೆಯ ಮೇಲೆ ರಾಜ್ಯಸಭೆಗೆ ಯಾವ ಅಧಿಕಾರವನ್ನು ಸಂವಿಧಾನ ನೀಡಿಲ್ಲ. ಗ್ರ್ಯಾಂಟುಗಳ ಬೇಡಿಕೆಯನ್ನು ಸಹ ರಾಜ್ಯಸಭೆಯ ಮುಂದಿಡುವ ಅಗತ್ಯತೆ ಇಲ್ಲ.

3. ಕಾರ್ಯಾಂಗದ ಅಧಿಕಾರಗಳು: (Executive Powers)

 ಭಾರತದಲ್ಲಿ ಸಂಸದೀಯ ಪದ್ಧತಿ ಜಾರಿಯಲ್ಲಿರುವುದರಿಂದ ನೈಜಕಾರ್ಯಾಂಗವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆಯೇ ವಿನಹ ರಾಜ್ಯಸಭೆಗೆ ಅಲ್ಲ. ಪ್ರಧಾನಿ ನಾಯಕತ್ವದ ಕೇಂದ್ರ ಮಂತ್ರಿ ಮಂಡಲವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆ. ಲೋಕಸಭೆ ಅವಿಶ್ವಾಸ ಗೊತ್ತುವಳಿಯ ಮೂಲಕ ಕೇಂದ್ರ ಮಂತ್ರಿ ಮಂಡಳವನ್ನು ಅಧಿಕಾರದಿಂದ ಕಿತ್ತೊಗೆಯುವ ಅಧಿಕಾರವನ್ನು ಹೊಂದಿದೆ. ರಾಜ್ಯಸಭೆಗೆ ಕಾರ್ಯಾಂಗದ ಮೇಲೆ ಅಧಿಕಾರವಿಲ್ಲದಿದ್ದರೂ ಸರ್ಕಾರದ ಕಾರ್ಯಾಚರಣೆಯ ಕುರಿತು ಅವಶ್ಯ ಮಾಹಿತಿಯನ್ನು ಸಮಯದಿಂದ ಸಮಯಕ್ಕೆ ಪಡೆಯಬಹುದಾಗಿದೆ. ಆದರೆ ರಾಜ್ಯಸಭೆಯ ಅನುಮತಿಯನ್ನು ಪಡೆಯದೇ ಯಾವುದೇ ತೆರಿಗೆಯನ್ನು ವಿಧಿಸುವಂತಿಲ್ಲ ಮತ್ತು ವಸೂಲಿ ಮಾಡುವಂತೆಯೂ ಇಲ್ಲ. ರಾಷ್ಟ್ರಪತಿ ಮತ್ತು ಅಂತರಾಷ್ಟ್ರ ಮಟ್ಟದ ವಿಷಯಗಳ ಕುರಿತು ರಾಜ್ಯಸಭೆಯ ಸದಸ್ಯರು ಸರ್ಕಾರವನ್ನು ಪ್ರಶ್ನೆ ವೇಳೆ, ಶೂನ್ಯ ವೇಳೆ, ನಿಲುವಳಿ ಸೂಚನೆ, ಕಡಿತದ ಸೂಚನೆ ಹಾಗೂ ಗಮನಸೆಳೆಯುವ ಸೂಚನೆ ಮುಂತಾದ ಚರ್ಚಾ ಸಮಯಗಳಲ್ಲಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಹಾಕುವ ಮೂಲಕ ನಿಯಂತ್ರಿಸಬಹುದು.

 4.  ನ್ಯಾಯಾಂಗಿಯ ಅಧಿಕಾರಗಳು: (Judicial Power)

ರಾಜ್ಯಸಭೆಯು ನ್ಯಾಯಾಧೀಶನ ಸ್ಥಾನದಲ್ಲಿ ಕುಳಿತು ನ್ಯಾಯ ನಿರ್ಣಯವನ್ನು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾಜ್ಯಸಭೆಯು ಲೋಕಸಭೆಯೊಂದಿಗೆ ಸೇರಿ ಸಂವಿಧಾನ ಉಲ್ಲಂಘನೆಗಾಗಿ ಮಹಾಭಿಯೋಗ ನಿರ್ಣಯವನ್ನು ಅಂಗೀಕರಿಸುವುದರ ಮೂಲಕ ರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಅಧಿಕಾರ ಹೊಂದಿದೆ. ಹಾಗೆಯೇ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು  ಪದಚ್ಯುತಗೊಳಿಸುವ ಅಧಿಕಾರವನ್ನು ಪಡೆದಿದೆ. ಇದಕ್ಕೆ ಸದನದಲ್ಲಿ ೨/೩ ಬಹುಮತದ ನಿರ್ಣಯಬೇಕು. ಆಗ ರಾಷ್ಟ್ರಪತಿಗಳು ಮತ್ತು ನ್ಯಾಯಾಧೀಶರು ಪದತ್ಯಾಗ ಮಾಡುತ್ತಾರೆ. ಇದನ್ನೇ ʻʻವಾಗ್ದಂಡನೆ  ಅಥವಾ ಮಹಾಭಿಯೋಗ ಎಂದು ಕರೆಯುತ್ತಾರೆ. ಆದರೆ ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸಲು ಮಹಾಭಿಯೋಗದ ಅಗತ್ಯ ಇರುವುದಿಲ್ಲ. ರಾಜ್ಯಸಭೆಯ ಹೆಚ್ಚಿನ ಸದಸ್ಯರು ಒಂದು ಮಂಡನೆಯನ್ನು ಹೊರಡಿಸುತ್ತಾರೆ.  ನಂತರ ಅದಕ್ಕೆ ಲೋಕಸಭೆಯ ಒಪ್ಪಿಗೆ ದೊರಕಿದರೆ ಉಪರಾಷ್ಟ್ರಪತಿಗಳು ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಅದೇ ರೀತಿ ಮುಖ್ಯ ಚುನಾವಣಾ ಅಧಿಕಾರಿಗಳು ಮಹಾಲೇಖಪಾಲಕರು, ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌ಗಳು ಹಾಗೂ ಮುಖ್ಯವಿಜಿಲೆನ್ಸ್ ಅಧಿಕಾರಿಗಳನ್ನು ಪದಚ್ಯುತಿಗೊಳಿಸುವಲ್ಲಿ ರಾಜ್ಯಸಭೆಯ ಪಾತ್ರವಿರುತ್ತದೆ.

5. ಚುನಾವಣಾ ಅಧಿಕಾರಗಳು: (Election Powers)

ರಾಜ್ಯಸಭೆಯ ಸದಸ್ಯರು ವಿಶೇಷ ಮತದಾನದ ಹಕ್ಕನ್ನು ಪಡೆದಿದ್ದಾರೆ. ಉದಾಹರಣೆ ರಾಜ್ಯಸಭೆಯ ಚುನಾಯಿತ ಸದಸ್ಯರು ಲೋಕಸಭೆ ಹಾಗೂ ಎಲ್ಲಾ ವಿಧಾನಸಭಾ ಸದಸ್ಯರೊಂದಿಗೆ ಸೇರಿ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುತ್ತಾರೆ. ಹಾಗೆಯೇ ರಾಜ್ಯಸಭೆಯ ಸದಸ್ಯರು ಹಾಗೂ ಲೋಕಸಭಾಸದಸ್ಯರು ಸೇರಿ ಉಪ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯಸಭಾ ಸದಸ್ಯರು ತಮ್ಮೊಳಗೆ ಒಬ್ಬನನ್ನು ರಾಜ್ಯಸಭಾ ಉಪಸಭಾಪತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

6. ಸಂವಿಧಾನ ತಿದ್ದುಪಡಿ ಅಧಿಕಾರ: (Power of Constitutional Amendments)

ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಯಾವುದೇ ಸದನದಲ್ಲಾದರೂ ಮಂಡಿಸಬಹುದು. ಸಂವಿಧಾನ ತಿದ್ದುಪಡಿ ಮಸೂದೆ ಮೊದಲು ರಾಜ್ಯಸಭೆಯಲ್ಲಿ ಮಂಡನೆಯಾದಾಗ ಅದರ ಅನುಮೋದನೆಗಾಗಿ ಲೋಕಸಭೆಗೆ ಕಳುಹಿಸಿಕೊಡಲಾಗುತ್ತದೆ. ಆದರೆ ಆ ಮಸೂದೆಯು ಶಾಸನವಾಗಿ ಹೊರ ಬರಬೇಕಾದರೆ ಸದನದಲ್ಲಿ ಹಾಜರಾಗಿರುವ ೨/೩  ಬಹುಮತದ ಸದಸ್ಯರ ಬೆಂಬಲ ಬೇಕು. ತಿದ್ದುಪಡಿ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸಭೆಯೇ ಸಾರ್ವಭೌಮತ್ವವನ್ನು  ಹೊಂದಿದೆ. ಒಂದು ವೇಳೆ ತಿದ್ದುಪಡಿಗೆ ಸಂಬಂಧಿಸಿದಂತೆ ಗೊಂದಲಗಳು ಉಂಟಾದರೆ ಜಂಟಿ ಸಮಾವೇಶದ ಮೂಲಕ ಸಮಸ್ಯೆಯನ್ನು ಬಗೆಹರಿಸುವ ವಿಧಾನ ಭಾರತದ ಸಂವಿಧಾನದಲ್ಲಿ ಇಲ್ಲ. ರಾಜ್ಯಸಭೆಯು ತಿದ್ದುಪಡಿ ಮಸೂದೆಯನ್ನು ಒಂದು ವೇಳೆ ಅಂಗೀಕರಿಸದೆ ಹೋದರೆ ತಿದ್ದುಪಡಿ ಮಸೂದೆಯು ಬಿದ್ದು ಹೋಗುತ್ತದೆ.

7. ತುರ್ತು ಪರಿಸ್ಥಿತಿಯನ್ನು ಅನುಮೋದಿಸುವುದು: (Passing the Emergency)

 ಸಂವಿಧಾನದ 352ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಒಂದು ತಿಂಗಳೊಳಗೆ ಸಂಸತ್ತಿನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇಲ್ಲವಾದರೆ ತುರ್ತು ಪರಿಸ್ಥಿತಿ ರದ್ದಾಗುತ್ತದೆ. ಒಂದು ವೇಳೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಲೋಕಸಭೆ ವಿಸರ್ಜನೆಗೊಂಡಿದ್ದರೆ ರಾಜ್ಯಸಭೆಯ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆದರೆ ಹೊಸ ಲೋಕಸಭೆಯು ಅಸ್ತಿತ್ವಕ್ಕೆ ಬಂದ ನಂತರ 30 ದಿನದೊಳಗೆ ತುರ್ತು ಪರಿಸ್ಥಿತಿಗೆ ಲೋಕಸಭೆಯು ಅಂಗೀಕಾರ ಪಡೆದುಕೊಳ್ಳಬೇಕು.

 8. ಇತರೆ ಅಧಿಕಾರಗಳು: (Other Powers)

ಸಂವಿಧಾನದ 249ನೇ ವಿಧಿಯ ಪ್ರಕಾರ ರಾಜ್ಯಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸಿದ ಮೂರನೇ ಎರಡಕ್ಕಿಂತ ಹೆಚ್ಚಿನ ಸದಸ್ಯರ ಬಹುಮತದೊಂದಿಗೆ ರಾಜ್ಯ ಪಟ್ಟಿಯ ವಿಷಯವನ್ನು ರಾಷ್ಟ್ರೀಯ ಮಹತ್ವವುಳ್ಳ ವಿಷಯವೆಂದು ತೀರ್ಮಾನಿಸಲಾಗಿದೆ.

ಸಂವಿಧಾನದ 312ನೇ ವಿಧಿಯಂತೆ ರಾಜ್ಯಸಭೆ ೨/೩  ಹೆಚ್ಚಿನ ಬಹುಮತದೊಂದಿಗೆ ನಿರ್ಣಯವನ್ನು ಅಂಗೀಕರಿಸಿ ಒಂದು ಅಥವಾ ಹೆಚ್ಚಿನ ಅಖಿಲ ಭಾರತೀಯ ಸೇವೆಗಳನ್ನು ರಚಿಸಬಹುದಾಗಿದೆ.

ಉಪಸಂಹಾರ

ಒಟ್ಟಾರೆ ರಾಜ್ಯಸಭೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಲೋಕಸಭೆಯ ಮೇಲೆ ಸಮತೋಲನ ಸಾಧಿಸುವುದರ ಮೂಲಕ ಸಂವಿಧಾನದ ಮೌಲ್ಯಗಳನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಶಾಸನ, ಸಂವಿಧಾನ ತಿದ್ದುಪಡಿ, ತುರ್ತು ಪರಿಸ್ಥಿತಿ ಹಾಗೂ ಚುನಾವಣಾ ಪ್ರಕ್ರಿಯೆಗಳಲ್ಲಿ ರಾಜ್ಯಸಭೆಯ ಪಾತ್ರ ಅನನ್ಯವಾಗಿದೆ. ಹೀಗಾಗಿ ರಾಜ್ಯಸಭೆಯ ಕಾರ್ಯಗಳು ಭಾರತೀಯ ಸಂಸತ್ತಿನ ಸ್ಥಿರತೆ ಮತ್ತು ಸಮರ್ಥತೆಗೆ ಬಲ ನೀಡುತ್ತವೆ.

42 ನೇ ಸಂವಿಧಾನ ತಿದ್ದುಪಡಿ

42 ನೇ ಸಂವಿಧಾನ ತಿದ್ದುಪಡಿ

ಭಾರತದ ಸಂವಿಧಾನವು ಜಾರಿಗೆಗೊಂಡ 25 ವರ್ಷಗಳ ಸಂವಿಧಾನಾತ್ಮಕ ಸುಧಾರಣೆಗಾಗಿ ಇಂದಿರಾಗಾಂಧಿ ನೇತೃತ್ವದ ಸರ್ಕಾರವು ಸ್ವರ್ಣಸಿಂಗ್‌ ಸಮಿತಿಯನ್ನು ನೇಮಕ ಮಾಡಿತು. ಈ ಸಮಿತಿಯ ಶಿಫಾರಸ್ಸಿನಂತೆ ಸಂವಿಧಾನಕ್ಕೆ 42 ನೇ ತಿದ್ದುಪಡಿ ಮಾಡಿ 1976 ಡಿಸೆಂಬರ್‌ 16 ರಂದು ಆದೇಶ ಹೊರಡಿಸಿತು. ಸಂವಿಧಾನ ಜಾರಿಯ ನಂತರ ತಿದ್ದುಪಡಿಗೊಂಡ 42 ನೇ ವಿಧಿಯು ಉಳಿದೆಲ್ಲಾ ತಿದ್ದುಪಡಿಗಳಿಗಿಂತ ಅತ್ಯಂತ ವಿಶಾಲವಾದ ಮತ್ತು ವಿವಾದಾತ್ಮಕವಾದ ತಿದ್ದುಪಡಿ ಎನಿಸಿಕೊಂಡಿತು. 1950ರ ಮೂಲ ಸಂವಿಧಾನದ ಪ್ರಸ್ತಾವನೆಯ 7ನೇ ಅನುಸೂಚಿ, 53 ವಿಧಿಗಳು ಮತ್ತು ಪ್ರಮುಖ ತತ್ವಗಳಲ್ಲಿ ಬದಲಾವಣೆಗೆ ಕಾರಣವಾದ ತಿದ್ದುಪಡಿಯು ಕಿರು ಸಂವಿಧಾನ ಎನಿಸಿಕೊಂಡಿದೆ. ಈ ತಿದ್ದುಪಡಿಯ ಬದಲಾವಣೆಗಳು ಈ ಕೆಳಗಿನಂತಿವೆ.

a. ಪ್ರಸ್ತಾವನೆ:

ಈ ತಿದ್ದುಪಡಿಯು ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯಾತೀತ ಹಾಗೂ ಅಖಂಡತೆ ಎಂಬ ಪದಗಳನ್ನು ಸೇರಿಸಿತು.

b. ರಾಜ್ಯನೀತಿ ನಿರ್ದೇಶಕ ತತ್ವಗಳು:

 ಈಗಾಗಲೇ ಸಂವಿಧಾನದ 4ನೇ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ರಾಜ್ಯ ನಿರ್ದೇಶಕ ತತ್ವಗಳಿಗೆ ಮೂರು ಹೊಸ ನಿರ್ದೇಶನಗಳನ್ನು ಸೇರಿಸಲಾಯಿತು. ಈಗಾಗಲೇ ಜಾರಿಯಲ್ಲಿದ್ದ 39 ನೇ ವಿಧಿಯಲ್ಲಿದ್ದ ಅಂಶಗಳ ಜೊತೆಗೆ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಂಬಂಧಿಸಿದ ಅಂಶಗಳನ್ನು ಹೊಸದಾಗಿ ಸೇರಿಸಲಾಯಿತು. ಹಾಗೆಯೇ ಬಡವರಿಗೆ ಉಚಿತ ನ್ಯಾಯ ಮತ್ತು ಸಮಾನ ನ್ಯಾಯವನ್ನು ಬಲಗೊಳಿಸುವ ಕಾನೂನನ್ನು 39(A) ವಿಧಿಯಲ್ಲಿ, ಉದ್ಯಮದಲ್ಲಿ ಕಾರ್ಮಿಕರಿಗೆ ಅವಕಾಶ ಒದಗಿಸುವ 43(A) ವಿಧಿಯನ್ನು ಹಾಗೂ ಪರಿಸರ ರಕ್ಷಣೆ ಹಾಗೂ ವನ್ಯ ಜೀವಿ ರಕ್ಷಣೆ 48(A) ವಿಧಿಯನ್ನು ಸಂವಿಧಾಕ್ಕೆ ಹೊಸದಾಗಿ ತಿದ್ದುಪಡಿ ಮಾಡಿ ಸೇರಿಸಲಾಯಿತು.

c. ಮೂಲಭೂತ ಕರ್ತವ್ಯಗಳು:

ಸಂವಿಧಾನಕ್ಕೆ 4(A) ಭಾಗವನ್ನು ಸೇರಿಸುವ ಮೂಲಕ ಸಂವಿಧಾನದ ತಿದ್ದುಪಡಿ ಮಾಡಲಾಯಿತು. ಈ ಭಾಗದಲ್ಲಿ ಭಾರತೀಯರು ಪಾಲಿಸಬೇಕಾದ 10 ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ 51(A) ವಿಧಿಯಲ್ಲಿ ಸೇರಿಸಲ್ಪಟ್ಟವು.

d. ಸಂಸತ್ತು:

ಈ ತಿದ್ದುಪಡಿಯ ಮೂಲಕ ಸಂಸತ್ತಿಗೆ ಸಂಬಂಧಿಸಿದ ವಿವಿಧ ನಿಬಂಧನೆಗಳನ್ನು ಬದಲಾಯಿಸಲು ಸಾಧ್ಯವಾಯಿತು. ರಾಜ್ಯ ಶಾಸಕಾಂಗಗಳು ಮತ್ತು ಸಂಸತ್ತಿಗೆ ಕಲಾಪಗಳು ಜರುಗಲು ಕನಿಷ್ಠ 10% ರಷ್ಟು ಸದಸ್ಯರ ಕೋರಂ ಸಂಖ್ಯೆಯನ್ನು ರದ್ದುಗೊಳಿಸಿತು. ಸಂಸತ್ತು ಅಂಗೀಕರಿಸುವ ಶಾಸನಗಳನ್ನು ನ್ಯಾಯಾಂಗದ ವಿಮರ್ಶಾಧಿಕಾರದಿಂದ ಹೊರಗಿಡಲಾಯಿತು. ರಾಷ್ಟ್ರಪತಿಯು ಸಚಿವ ಸಂಪುಟದ ಸಲಹೆಯನ್ನು ತಿರಸ್ಕರಿಸದಂತೆ ಬದಲಾವಣೆ ತರಲಾಯಿತು.

e. ನ್ಯಾಯಾಂಗ:

ಉಚ್ಛನ್ಯಾಯಾಲಯಗಳು ರಿಟ್‌ ಹೊರಡಿಸುವ ಅಧಿಕಾರವನ್ನು ಈ ತಿದ್ದುಪಡಿಯಿಂದ ಮೊಟಕುಗೊಳಿಸಲಾಯಿತು. ಮುಂದುವರೆದು ಸಂವಿಧಾನಕ್ಕೆ 14(A) ಭಾಗವನ್ನು ಸೇರಿಸಿ ಆಡಳಿತಾತ್ಮಕ ನ್ಯಾಯಮಂಡಳಿಯನ್ನು ರಚಿಸಲು ಸಂಸತ್ತಿಗೆ ಅವಕಾಶ ಕಲ್ಪಿಸಲಾಯಿತು.

f. ತುರ್ತು ಪರಿಸ್ಥಿತಿ:

ಭಾರತದ ಭದ್ರತೆಗೆ ಆತಂಕ ಎದುರಾದಾಗ ಭಾರತದ ಯಾವುದೇ ಮೂಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದರೆ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಇನ್ನುಳಿದ ರಾಜ್ಯಗಳು ನಡೆದುಕೊಳ್ಳಬೇಕೆಂದು ಈ ತಿದ್ದುಪಡಿಯ ಮೂಲಕ ತಿಳಿಸಲಾಯಿತು. ತುರ್ತು ಪರಿಸ್ಥಿತಿ ಘೋಷಣೆಯಾದರೆ ಪ್ರಜೆಗಳ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಲು

ಅವಕಾಶ ಕಲ್ಪಿಸಲಾಯಿತು. ಸಂವಿಧಾನದ 356ನೇ ವಿಧಿಯಂತೆ ತುರ್ತು ಪರಿಸ್ಥಿತಿ ಘೋಷಣೆಯಾದರೆ 6 ತಿಂಗಳು ಇದ್ದ ಅವಧಿಯು 1 ವರ್ಷಕ್ಕೆ ವಿಸ್ತಾರಗೊಂಡಿತು.

g. ಏಳನೇ ಅನುಸೂಚಿ:

ಸಂವಿಧಾನ ಜಾರಿಗೊಂಡಾಗಿನಿಂದ ರಾಜ್ಯ ಪಟ್ಟಿಯಲ್ಲಿದ್ದ ಶಿಕ್ಷಣ, ಅರಣ್ಯ, ವನ್ಯಜೀವಿ, ಪಕ್ಷಿರಕ್ಷಣೆ, ತೂಕ ಮತ್ತು ಅಳತೆ, ನ್ಯಾಯಿಕ ಆಡಳಿತ, ಸರ್ವೋಚ್ಛ ಮತ್ತು ಉಚ್ಛನ್ಯಾಯಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ನ್ಯಾಯಾಲಯಗಳ ಸಂಘಟನೆಯ ವಿಷಯವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು.

ಉಪಸಂಹಾರ 

ಒಟ್ಟಿನಲ್ಲಿ 42ನೇ ಸಂವಿಧಾನ ತಿದ್ದುಪಡಿ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಇದು ಆಡಳಿತದ ಬಲವರ್ಧನೆ ಜೊತೆಗೆ ನ್ಯಾಯಾಂಗ ಮತ್ತು ಪ್ರಜೆಗಳ ಹಕ್ಕುಗಳ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿತು. ಅನೇಕ ಅಂಶಗಳು ನಂತರದ ತಿದ್ದುಪಡಿಗಳ ಮೂಲಕ ಪರಿಷ್ಕೃತಗೊಂಡರೂ, ಇದರ ಪ್ರಭಾವ ಅಳಿಸಲಾಗದಂತಿದೆ. ಅದರೊಂದಿಗೆ, 42ನೇ ತಿದ್ದುಪಡಿ ಸಂವಿಧಾನದ ಶಕ್ತಿ ಮತ್ತು ಸವಾಲುಗಳನ್ನು ಅರಿಯಲು ಸಹಾಯಕವಾಗಿದೆ.