
ಸಂಸ್ಕೃತಿಯ ಲಕ್ಷಣಗಳು
ಸಂಸ್ಕೃತಿಯು ಸಮಾಜದ ಅತ್ಯಂತ ಆಳವಾದ ಉಡುಗೊರೆಗಳಲ್ಲಿ ಒಂದಾಗಿದೆ. ಇದು ತಲೆಮಾರುಗಳಿಂದ ನಡವಳಿಕೆಗಳು, ನಂಬಿಕೆಗಳು ಮತ್ತು ಆದರ್ಶಗಳನ್ನು ರೂಪಿಸುತ್ತದೆ. ಇದು ಸಂಕೀರ್ಣ ಮತ್ತು ಕ್ರಿಯಾತ್ಮಕ ಶಕ್ತಿಯಾಗಿದ್ದು, ನಮ್ಮ ದೈನಂದಿನ ಜೀವನ, ಸಂವಹನ ಮತ್ತು ಮೌಲ್ಯಗಳಿಗೆ ಮಾರ್ಗದರ್ಶನ ನೀಡುತ್ತದೆ. ಕೆಳಗೆ ಸಂಸ್ಕೃತಿಯ ಪ್ರಮುಖ ಗುಣಲಕ್ಷಣಗಳನ್ನು ಮತ್ತು ಅವು ಸಮಾಜ ಮತ್ತು ವೈಯಕ್ತಿಕ ಗುರುತುಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ವಿವರಿಸಲಾಗಿದೆ.
1) ಸಂಸ್ಕೃತಿಯು ಸಾಮಾಜಿಕವಾದುದು:
ಸಂಸ್ಕೃತಿಯು ಸಾಮಾಜಿಕವಾದುದೇ ಹೊರತು ವೈಯಕ್ತಿಕವಾದುದಲ್ಲ. ಅದು ಸಮಾಜ ನೀಡಿದ ಕೊಡುಗೆ. ಊಟ ಮಾಡುವುದು, ಉಡುಪು ಹಾಕಿಕೊಳ್ಳುವುದು, ಉಗುರು ಸ್ವಚ್ಛಗೊಳಿಸಿಕೊಳ್ಳುವುದು, ತಲೆಬಾಚಿಕೊಳ್ಳುವುದು. ಹಲ್ಲುಜ್ಜುವುದು, ಶಿಸ್ತಿನಿಂದ ವರ್ತಿಸುವುದು, ಗುರುಹಿರಿಯರಿಗೆ ಗೌರವ ನೀಡುವುದು ಮುಂತಾದವುಗಳನ್ನು ಕಲಿಸಿಕೊಡುವ ಒಂದು ವ್ಯವಸ್ಥೆಯೇ ಸಂಸ್ಕೃತಿ, ಸಂಸ್ಕೃತಿಯನ್ನು ಮನಬಂದಂತೆ ಬಳಸಿಕೊಳ್ಳುವಂತಿಲ್ಲ. ಇವುಗಳನ್ನು ಸಮಾಜ ಸ್ಥಾಪಿತ ಕಟ್ಟುಪಾಡುಗಳಿಗೆ ಅನುಗುಣವಾಗಿ ನಿರ್ವಹಿಸಬೇಕು. ಹಸಿವನ್ನು ಇಂಗಿಸಿಕೊಳ್ಳುವುದು, ಲೈಂಗಿಕ ಅಪೇಕ್ಷೆಯನ್ನು ಪೂರೈಸಿಕೊಳ್ಳುವುದು. ಮುಂತಾದವುಗಳನ್ನು ಪ್ರಾಣಿಗಳ ಹಾಗೆ ಪೂರೈಸಿಕೊಳ್ಳದೆ ಸಮಾಜದಲ್ಲಿ ತನ್ನದೇ ಆದ ಮಾರ್ಗವನ್ನು ಕಂಡುಕೊಂಡಿದ್ದಾನೆ. ಆದುದರಿಂದ ಸಂಸ್ಕೃತಿಯು ಸಮಾಜದ ಒಂದು ಉತ್ಪನ್ನವಾಗಿದೆ. ಸಾಂಸ್ಕೃತಿಕ ಅಂಶಗಳಾದ ಸಂಪ್ರದಾಯ, ಲೋಕರೂಢಿ, ನೈತಿಕ ನಿಯಮಗಳು, ಧರ್ಮ, ಸಾಹಿತ್ಯ, ಕಲೆ, ಸಾಹಿತ್ಯ, ಶಿಕ್ಷಣ, ಜೀವನ ಮೌಲ್ಯಗಳು ಆದರ್ಶಗಳು ಮೊದಲಾದವುಗಳ ಮೇಲೆ ಸಮಾಜ ಜೀವನವು ಭದ್ರವಾಗಿರುತ್ತದೆ.
2) ಸಂಸ್ಕೃತಿಯು ಕಲಿಕೆಯಿಂದ ಉಂಟಾದುದು:
ಸಂಸ್ಕೃತಿಯ ಸಂಪಾದಿಸಿದ ಗುಣ. ಆದರೆ ಅದು ಪ್ರಕೃತಿ ನಿರ್ಮಿತವಲ್ಲ. ಸಂಸ್ಕೃತಿಯ ಮೂಲ ಪ್ರವೃತ್ತಿಯೂ ಅಲ್ಲ. ತಂದೆ-ತಾಯಿಗಳಿಂದ ಬಂದ ಜೈವಿಕ ಗುಣವೂ ಆಗಿರುವುದಿಲ್ಲ. ಅದನ್ನು ಮಾನವನೇ ಪೋಷಿಸಿ ಬೆಳಸಿಕೊಂಡು ಬರುವುದು ಅಗತ್ಯ. ಸಾಮಾಜೀಕರಣ, ಅಭ್ಯಾಸಿಸಬಲ್ಲ ಹಾಗೂ ವಿಚಾರ ಮಾಡಿ ಅರಗಿಸಿಕೊಂಡ ವಿಶಿಷ್ಟ ಲಕ್ಷಣಗಳನ್ನು ಸಂಸ್ಕೃತಿ ಎಂದು ಹೇಳಬಹುದು. ಕೆಲವು ಪ್ರಾಣಿಗಳು ತಮ್ಮ ಹುಟ್ಟಿನಿಂದ ಬಂದ ಕೆಲವು ಮೂಲ ಪ್ರವೃತ್ತಿಗಳಿಗನುಗುಣವಾಗಿ ವರ್ತಿಸುತ್ತವೆ. ಕಲಿಕೆಗೆ ಬೇಕಾದ ವಾಕ್ ಚಾತುರ್ಯ, ಬುದ್ಧಿಶಕ್ತಿ, ಆಲೋಚನಾಶಕ್ತಿ ಹಾಗೂ ಅವಕಾಶಗಳು ಅವುಗಳಿಗೆ ಇರುವುದಿಲ್ಲ. ಆದರೆ ಮಾನವನಿಗೆ ಈ ಎಲ್ಲಾ ಶಕ್ತಿಗಳು ಹುಟ್ಟಿನಿಂದ ಬಂದಿರುತ್ತವೆ. ಅವುಗಳನ್ನು ಸರಿಯಾಗಿ ಉಪಯೋಗಿಸಬೇಕಷ್ಟೇ. ಮಾನವನು ತನ್ನ ಹಿರಿಯರಿಂದ ಸಂಸ್ಕೃತಿಯನ್ನು ಕಲಿಯುತ್ತಾನೆ. ಸಂಸ್ಕೃತಿ ಕೇವಲ ಮಾನವರಲ್ಲಿ ಮಾತ್ರ ಕಂಡು ಬರುವಂತಹದು.
3) ಸಂಸ್ಕೃತಿಯು ಹಂಚಿಕೊಳ್ಳಲ್ಪಟ್ಟಿದುದು:
ಸಂಸ್ಕೃತಿಯು ಯಾವುದೇ ಒಬ್ಬ ವ್ಯಕ್ತಿಯ ಸ್ವಂತ ಆಸ್ತಿಯಲ್ಲ. ಇದು ಸಮಾಜದ ಇಡೀ ಸಮೂಹಕ್ಕೆ ಸಂಬಂಧಿಸಿದ್ದಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿ ಭಾಷೆ, ನೀತಿ, ರೀತಿ, ಪದ್ಧತಿ, ಲೋಕರೂಢಿ, ನಂಬಿಕೆ, ಭಾವನೆ, ನೈತಿಕ ನಿಯಮ ಮುಂತಾದವುಗಳನ್ನು ಒಂದು ಗುಂಪಿನ ಜೊತೆಗೆ ಹಂಚಿಕೊಳ್ಳುತ್ತಾನೆ. ರಾಬರ್ ಬಿಯರ್ ಸೈಡ್ ಹೇಳುವಂತೆ ಸಂಸ್ಕೃತಿಯು ಒಂದಕ್ಕಿಂತ ಹೆಚ್ಚು ಜನರು ಅನುಸರಿಸುವ ಅಥವಾ ಹೊಂದಿದ ನಂಬಿದ ಬಳಸಿದ ಅಳವಡಿಸಿಕೊಂಡ ಸಂಗತಿಗಳೇ ಆಗಿದೆ. ಇದು ತನ್ನ ಅಸ್ತಿತ್ವಕ್ಕೆ ಸಮೂಹ ಜೀವನವನ್ನು ಅವಲಂಬಿಸಿದೆ.
4) ಸಂಸ್ಕೃತಿಯು ಸಂಚರಣೆಯಾಗುವಂತಹದು:
ಸಂಸ್ಕೃತಿಯು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗಿಕೊಂಡು ಬಂದದ್ದಾಗಿದೆ. ಅದು ಎಂದಿಗೂ ಮುಗಿಯದ ಪ್ರಕ್ರಿಯೆ, ಗತಕಾಲದಿಂದ ಇದು ಹೊಂದಿಕೊಂಡಿದೆ. ಭಾಷೆ, ಭಾವನೆ, ಆಚಾರ, ವಿಚಾರ, ಸಂಪ್ರದಾಯ, ಲೋಕರೂಢಿ ಮೊದಲಾದ ಮೌಲ್ಯಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾವಣೆಗೊಳ್ಳುತ್ತವೆ. ಭಾಷೆ ಹಾಗೂ ಕಲಿಕೆಯಿಂದ ಸಂಸ್ಕೃತಿ ಮತ್ತಷ್ಟು ಶ್ರೀಮಂತವಾಗುತ್ತದೆ. ಔಪಚಾರಿಕ ಶಿಕ್ಷಣ ಹಾಗೂ ಸಾಮಾಜೀಕರಣಗೊಳ್ಳುವಿಕೆ ಸಂಸ್ಕೃತಿಯು ತಲತಲಾಂತರವಾಗಿ ನಿರಂತರವಾಗಿ ಸಾಗಿ ಬರಲು ಒತ್ತು ನೀಡುತ್ತದೆ
5) ಸಂಸ್ಕೃತಿ ಸಾಪೇಕ್ಷವಾದುದು:
ಸಂಸ್ಕೃತಿಯು ಕಾಲದಿಂದ ಕಾಲಕ್ಕೆ ಮತ್ತು ಸಮಾಜದಿಂದ ಸಮಾಜಕ್ಕೆ ಬದಲಾವಣೆಗೊಳ್ಳುತ್ತಲೇ ಇರುತ್ತದೆ. ಪ್ರತಿಯೊಂದು ಸಮಾಜದ ಸಂಸ್ಕೃತಿಯು ದೊಡ್ಡದಾದುದು. ಸಂಪ್ರದಾಯ ನೈತಿಕ ನಿಯಮ, ಲೋಕರೂಢಿ, ಊಟೋಪಚಾರ, ವಿಧಾನಗಳು, ಮೌಲ್ಯ ವ್ಯವಸ್ಥೆ ಹಾಗೂ ಸಂಸ್ಥೆ ಇತ್ಯಾದಿಗಳಲ್ಲಿ ವ್ಯತ್ಯಾಸವುಂಟು. ಸಂಸ್ಕೃತಿ ಕಾಲದಿಂದ ಕಾಲಕ್ಕೆ ಹೇಗೆ ಬದಲಾವಣೆಗೊಳ್ಳುತ್ತದೆ ಎಂಬುದನ್ನು ಐತಿಹಾಸಿಕ ಆಧಾರಗಳಿಂದ ತಿಳಿಯಬಹುದು.
6) ಸಂಸ್ಕೃತಿಯು ಪರಿವರ್ತನಾಶೀಲವಾದುದು:
ಸಂಸ್ಕೃತಿಯು ಎಂದಿಗೂ ನಿಂತ ನೀರಿನಂತೆ ಅಲ್ಲ. ಅದು ಪರಿವರ್ತನಾಶೀಲವಾದುದು. ಇದು ಒಂದು ಜೀವನ ವಿಧಾನವನ್ನು ತಿಳಿಸುತ್ತದೆ. ಅವಿಷ್ಕಾರಗಳು, ಸಮಸ್ಯೆಗಳು, ಯೋಜಿತ ಬದಲಾವಣೆಗಳು ಸಂಸ್ಕೃತಿಯನ್ನು ಆಧರಿಸಿವೆ. ಬದಲಾದ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಹೊಸ ಜೀವನ ವಿಧಾನಗಳನ್ನು ಕಂಡುಕೊಳ್ಳಲಾಗುತ್ತಿದೆ. ಹಾಗೂ ಅಳವಡಿಸಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಬದಲಾವಣೆ ತರುವ ಪ್ರತಿಯೊಂದು ಅಂಶವೂ ಸಂಸ್ಕೃತಿಯಲ್ಲಿ ಬದಲಾವಣೆ ತರಬಹುದಾಗಿದೆ.
7) ಸಂಸ್ಕೃತಿಯು ನಿರಂತರವಾದುದು ಹಾಗೂ ಸಂಗ್ರಹಕಾರಕವಾದುದು:
ಸಂಸ್ಕೃತಿಯು ನಿರಂತರವಾದುದು ಸಂಗ್ರಹಕಾರಕವಾದುದಾಗಿದೆ. ಅದು ಸಮಾಜದಲ್ಲಿ ಸತತವಾಗಿ ಸಾಗಿ ಬರುತ್ತದೆ. ಅದಕ್ಕೆ ಅಂತ್ಯವೆಂಬುದೇ ಇಲ್ಲ. ಅದೊಂದು ನಿರಂತರ ಜೀವನ ಪ್ರವಾಹ. ಗತಕಾಲದ ಹಾಗೂ ವರ್ತಮಾನಕಾಲದ ಎಲ್ಲಾ ಸಾಧನೆಗಳನ್ನು ತನ್ನಲ್ಲಿ ಸೇರಿಸಿಕೊಂಡು ಸದಾಕಾಲ ಬೆಳೆಯುವ ಒಂದು ಪ್ರಕ್ರಿಯೆ ಸಂಸ್ಕೃತಿ, ಸಂಸ್ಕೃತಿಯಲ್ಲಿನ ಹಲವಾರು ಅಂಶಗಳು ಗತಕಾಲದಲ್ಲಿ ಕಳಚಿ ಹೋಗಬಹುದಾದರೂ ನೂತನ ಅಂಶಗಳ ಸೇರ್ಪಡಿಕೆಗೆ ಸದಾ ಕಾಯುತ್ತಿರುತ್ತದೆ.
8) ಸಂಸ್ಕೃತಿಯು ಏಕರೂಪವಾದುದು ಹಾಗೂ ಸಮಗ್ರವಾದುದು:
ಸಂಸ್ಕೃತಿಯು ಏಕರೂಪವಾದದು ಹಾಗೂ ಸಮಗ್ರವಾದುದು ಆಗಿದೆ. ಅದರ ವಿವಿಧ ಅಂಶಗಳ ನಡುವೆ ಏಕತೆ ಇದೆ. ಯಾವುದೇ ಸಮಾಜದ ಸಂಸ್ಕೃತಿಯ ಪ್ರಭಾವ ಆ ಸಮಾಜದ ಆರ್ಥಿಕ, ರಾಜಕೀಯ, ಧಾರ್ಮಿಕ ಶೈಕ್ಷಣಿಕ, ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳ ಮೇಲೆ ಗಣನೀಯವಾಗಿರುತ್ತದೆ.
9) ಸಂಸ್ಕೃತಿ ತೃಪ್ತಿದಾಯಕವಾದುದು:
ಸಂಸ್ಕೃತಿಯು ಜೈವಿಕ ಹಾಗೂ ಸಾಮಾಜಿಕ ಎರಡೂ ಪ್ರಕಾರದ ಮಾನವ ಅಗತ್ಯಗಳ ಈಡೇರಿಕೆಗೆ ಅಗತ್ಯವಾದ ಪರಿಸರವನ್ನು ಒದಗಿಸುತ್ತದೆ. ಇದು ಅಲ್ಲದೆ ಮಾನವನ ವಿಭಿನ್ನ ಚಟುವಟಿಕೆಗಳನ್ನು ಸಂಸ್ಕೃತಿಯೇ ನಿರ್ಧರಿಸುತ್ತದೆ.
10) ಸಂಸ್ಕೃತಿಯು ಆದರ್ಶ ಸೂಚಕವಾದುದು:
ಸಂಸ್ಕೃತಿಯು ಆದರ್ಶಪ್ರಾಯವಾಗಿರುತ್ತದೆ. ಅದು ನಿರ್ದಿಷ್ಟ ಸಮಾಜದ ಜನರು ಪಾಲಿಸಬೇಕಾದ ಆದರ್ಶಪ್ರಾಯವಾದ ಅಂಶಗಳಾದ ನಡೆನುಡಿ ಹಾಗೂ ಸಂಪ್ರದಾಯಗಳನ್ನು ಹೇಳಿಕೊಡುತ್ತದೆ. ಸಂಸ್ಕೃತಿ ಸಾಮಾನ್ಯವಾಗಿ ಕರೆಯಲು ಅನುಕರಣೆ ಮಾಡಲು ಹಾಗೂ ಅನುಸರಿಸಲು ಅನುಕೂಲವಾಗಿರುತ್ತದೆ. ವ್ಯಕ್ತಿಯ ಹಾಗೂ ಸಮಾಜದ ಹಿತವನ್ನು ಕಾಪಾಡಲು ಸಮರ್ಥವಾಗಿರುತ್ತದೆ.
ಉಪಸಂಹಾರ
ಒಟ್ಟಾರೆಯಾಗಿ ಹೇಳುವುದಾದರೆ, ಸಂಸ್ಕೃತಿಯು ಮಾನವನ ಅನುಭವ, ಕಲಿಕೆ ಮತ್ತು ಅಭಿವ್ಯಕ್ತಿಯ ಎಳೆಗಳಿಂದ ನೇಯ್ದ ವಸ್ತ್ರವಾಗಿದೆ. ಅದರ ಸಾಮಾಜಿಕ, ಹಂಚಿದ, ಪರಿವರ್ತಕ ಮತ್ತು ನಿರಂತರ ಸ್ವಭಾವವು ನಮ್ಮ ಜಗತ್ತನ್ನು ರೂಪಿಸುತ್ತಿದೆ. ಪ್ರತಿ ಪೀಳಿಗೆಯೊಂದಿಗೆ ವಿಕಸನಗೊಳ್ಳುವ ಶ್ರೀಮಂತ ಪರಂಪರೆಯನ್ನು ಅದು ಸೃಷ್ಟಿಸುತ್ತಿದೆ. ಸಂಸ್ಕೃತಿಯ ಮೂಲಕ, ಸಮಾಜವು ನಮಗೆಲ್ಲರಿಗೂ ತಿಳಿಸುವ, ಮಾರ್ಗದರ್ಶನ ನೀಡುವ ಮತ್ತು ಸ್ಫೂರ್ತಿ ನೀಡುವ ಮೌಲ್ಯಗಳು ಮತ್ತು ಆದರ್ಶಗಳ ಅಡಿಪಾಯವನ್ನು ಅದು ನಿರ್ಮಿಸುತ್ತಿದೆ.
Call Us : +91 8431122691
Mail Us: admin@softonis.com
Visit Once: Opposite Abhishek optical Second cross right side, Ashok Nagara, Shivamogga, Karnataka 577202.