ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವ

ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವ

ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯು ಮೂಲಭೂತವಾಗಿ ‘ರಾಜಕೀಯ ಪರಿಕಲ್ಪನೆ’ಯಾಗಿದೆ. ಅಲ್ಲದೇ ಇದು ಪ್ರಾಚೀನ ಕಾಲದಿಂದಲೂ ಪರಿಚಿತವಾದಂತಹ ರಾಜಕೀಯ ವ್ಯವಸ್ಥೆಯಾಗಿದೆ. ಪ್ರಜಾಪ್ರಭುತ್ವವು ಬಹುಮುಖ್ಯವಾದ ಆದರ್ಶ ತತ್ವವಾಗಿದ್ದು, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆ ಇದರ ಮೂಲಾಧಾರವಾಗಿವೆ. ಪ್ರಜಾಪ್ರಭುತ್ವವೆಂಬುದು ಒಂದು ಬಗೆಯ ಸರ್ಕಾರ ಪದ್ಧತಿಯಾಗಿದೆ. ಇದು ರಾಜ್ಯ ಪದ್ಧತಿ, ಸಾಮಾಜಿಕ ಪದ್ಧತಿ ಹಾಗೂ ಜೀವನ ವಿಧಾನವಾಗಿದೆ ಹಾಗೂ ಪ್ರಜಾಪ್ರಭುತ್ವ ಎಂದರೆ ಕೇವಲ ಸರ್ಕಾರ ಪದ್ಧತಿ ಮಾತ್ರವಾಗಿರದೆ, ಮಾನವನ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಇವೇ ಮೊದಲಾದ ಸ್ವಾತಂತ್ರ್ಯ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಪ್ರಜಾಪ್ರಭುತ್ವ ಸರ್ಕಾರದ ಮುಖ್ಯ ಉದ್ದೇಶವು ಯಾವಾಗಲೂ ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿಯ ವಿಕಾಸ ಹಾಗೂ ಸಾರ್ವಜನಿಕ ಹಿತಸಾಧನೆಯೇ ಆಗಿರುತ್ತದೆ.

ಪ್ರಜಾಪ್ರಭುತ್ವದ ಮೂಲವನ್ನು ಪ್ರಾಚೀನ ಗ್ರೀಕರ ಕಾಲದಿಂದಲೇ ಕಾಣಬಹುದು. ಗ್ರೀಕ್‌ ನಗರ ರಾಜ್ಯಗಳಾದ ಅಥೆನ್ಸ್ ಮತ್ತು ಸ್ಪಾರ್ಟಾಗಳು ಪ್ರತ್ರಕ್ಷ ಪ್ರಜಾಪ್ರಭುತ್ವ ಸರ್ಕಾರ ಪದ್ಧತಿಯನ್ನು ಹೊಂದಿದ್ದವು. ಈ ಪದ್ಧತಿಯು ಶ್ರೇಷ್ಠವಾದ ಪದ್ಧತಿಯೆಂದು ಗ್ರೀಕರು ಪರಿಗಣಿಸಿದ್ದರು. ಈ ನಗರ ರಾಜ್ಯಗಳಲ್ಲಿ ಜನರು ನೇರವಾಗಿ ಸರ್ಕಾರದ ಆಳ್ವಿಕೆಯಲ್ಲಿ ಭಾಗವಹಿಸುವ ಮೂಲಕ ಅಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿದ್ದರು. ಇಲ್ಲಿ ಜನಸಂಖ್ಯೆಯು ಮಿತವಾಗಿದ್ದು, ಸರಕಾರದ ಅಳ್ವಿಕೆಯಲ್ಲಿ ಜನರು ಪ್ರತ್ಯಕ್ಷವಾಗಿ ಭಾಗವಹಿಸುತ್ತಿದ್ದರು.

ಅದೇ ರೀತಿ ಪ್ರಾಚೀನ ಭಾರತದಲ್ಲಿ ವೇದಗಳ ಕಾಲದಲ್ಲಿ ಗಣರಾಜ್ಯ ಎಂಬ ಪ್ರಜಾ ಸರಕಾರಗಳಿದ್ದವು. ಸಭಾ ಮತ್ತು ಸಮಿತಿಗಳೆಂಬ ಸಮಿತಿಗಳು(ವ್ಯವಸ್ಥೆಯು) ರಾಜ ಅಥವಾ ಆಡಳಿತಾಧಿಕಾರಿಗಳಿಗೆ ಸಲಹೆ ನೀಡುತ್ತಿದ್ದವು. ಪ್ರಾಚೀನ ಭಾರತದ ಕೆಲವು ಸಣ್ಣ ಪುಟ್ಟ ಗಣರಾಜ್ಯಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿ ಆಚರಣೆಯಲ್ಲಿದ್ದವು.

ರೋಮನ್ ಸಾಮ್ರಾಜ್ಯ ಬೆಳವಣಿಗೆಯಾದಂತೆ ಪ್ರಜಾಪ್ರಭುತ್ವ ಪದ್ಧತಿಯು ಅವನತಿಯ ಹಾದಿಯನ್ನು ಹಿಡಿಯಿತು. ಮುಂದೆ ಮಧ್ಯಯುಗದಲ್ಲಿ ಊಳಿಗಮಾನ್ಯ ಪದ್ಧತಿಯು ಪ್ರಜಾಪ್ರಭುತ್ವಕ್ಕೆ ಸಹಕಾರಿಯಾಗಲಿಲ್ಲ.

ಪ್ರಜಾಪ್ರಭುತ್ವ ತತ್ವವು ಹೆಚ್ಚು ಪ್ರಚಲಿತಕ್ಕೆ ಬಂದದ್ದು 17ನೇ ಶತಮಾನದಲ್ಲಿಯೇ. 17ನೇ ಶತಮಾನದಲ್ಲಿ ಯುರೋಪಿನಲ್ಲಿ ನಡೆದ ಕೆಲವು ಮಹತ್ವದ ಘಟನೆಗಳು ಪ್ರಜಾಪ್ರಭುತ್ವದ ಬೆಳವಣಿಗೆಗೆ ಸಹಕಾರಿಯಾದವು. ಉದಾಹರಣೆಗೆ ಇಂಗ್ಲೆಂಡಿನ ರಾಣಿ ಎಲಿಜಬೆತ್‌ನ ಕಾಲದಲ್ಲಿ ನಡೆದ ಕ್ರೈಸ್ತಮತ ಸುಧಾರಣೆ, ಇಂಗ್ಲೆಂಡಿನಲ್ಲಿ ಗ್ಲೋರಿಯಸ್ ರೆವಲ್ಯೂಷನ್. ಅಮೇರಿಕಾದ ಕ್ರಾಂತಿ, ಫ್ರಾನ್ಸ್‌ನ ಕ್ರಾಂತಿ (1789), ಇವೇ ಮೊದಲಾದವುಗಳು ಪ್ರಜಾಪ್ರಭುತ್ವ ಬೆಳವಣಿಗೆಯ ಮೈಲು ಗಲ್ಲುಗಳಾಗಿವೆ. ಈಗ ಪ್ರಜಾಪ್ರಭುತ್ವ 20ನೇಯ ಶತಮಾನದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದೆ. ಈ ಶತಮಾನವನ್ನು ಪ್ರಜಾಪ್ರಭುತ್ವದ ಯುಗವೆಂದೇ ಕರೆಯಲಾಗುತ್ತಿದೆ. 20ನೇ ಶತಮಾನದಲ್ಲಿ ಪ್ರಪಂಚದಾದ್ಯಂತ ಹೆಚ್ಚಿನ ರಾಷ್ಟ್ರಗಳು ಪ್ರಜಾಪ್ರಭುತ್ವ ಪದ್ಧತಿಯನ್ನು ಆಚರಣೆಗೆ ತಂದಿವೆ.

ಪ್ರಜಾಪ್ರಭುತ್ವ ಅರ್ಥ

ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ರಾಜಕೀಯ ವ್ಯವಸ್ಥೆಗಳಲ್ಲೆಲ್ಲಾ ಪ್ರಜಾಪ್ರಭುತ್ವವೇ ಅತ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಮತ್ತು ನಾಗರೀಕ ಸರಕಾರವಾಗಿದೆ.

ಪ್ರಜಾಪ್ರಭುತ್ವ ಎಂಬ ಪದವು ‘ಡೆಮಾಕ್ರಸಿ’ ಎಂಬ ಇಂಗ್ಲೀಷ್ ಪದದ ಕನ್ನಡ ರೂಪಾಂತರವಾಗಿದೆ. ಈ ಡೆಮಾಕ್ರಸಿ ಎಂಬ ಇಂಗ್ಲೀಷ್ ಪದವು ಡೆಮೋಸ್ (Demos), ಮತ್ತು ಕ್ರಾಟಿಯಾ (Kratia) ಎಂಬ ಎರಡು ಪದಗಳಿಂದ ಬಂದಿದೆ. ಡೆಮೋಸ್ (Demos) ಎಂದರೆ ‘ಜನತೆ’ ಎಂದು, ಕ್ರಾಟಿಯಾ ಎಂದರೆ ‘ಅಧಿಕಾರ’ ಅಥವಾ ‘ಶಕ್ತಿ’ ಅಥವಾ ‘ಬಲ’ ಎಂದರ್ಥ. ಅಂದರೆ ಡೆಮಾಕ್ರಸಿ ಎಂದರೆ ‘ಜನತೆಯ ಅಧಿಕಾರ’, ‘ಪ್ರಜಾಶಕ್ತಿ’ ಎನ್ನಬಹುದು. ಅಂದರೆ ಪ್ರಜಾಪ್ರಭುತ್ವ ವೆಂದರೆ ಪ್ರಜೆಗಳ ಕೈಯಲ್ಲಿರುವ ಅಧಿಕಾರವಾಗಿದ್ದು, ಪ್ರಜೆಗಳೇ ಪ್ರತ್ಯಕ್ಷವಾಗಿ ಅಥವಾ ಪ್ರರೋಕ್ಷವಾಗಿ ಪ್ರತಿನಿಧಿಗಳ ಮೂಲಕ ನಡೆಯುವ ಸರಕಾರವಾಗಿದೆ. ಪ್ರಜಾಪ್ರಭುತ್ವ ಸರಕಾರವು ಪ್ರಜೆಗಳ ಸರಕಾರವಾಗಿದ್ದು, ಇಲ್ಲಿ ಪ್ರಜೆಗಳೇ ಪ್ರಭುಗಳಾಗಿರುತ್ತಾರೆ.

ಪ್ರಜಾಪ್ರಭುತ್ವದ ಅರ್ಥ ಮತ್ತು ಸ್ವರೂಪವನ್ನು ತಿಳಿಯಬೇಕಾದರೆ ಪ್ರಜಾಪ್ರಭುತ್ವದ ಬಗೆಗಿರುವ ವ್ಯಾಖ್ಯಾನಗಳನ್ನು ತಿಳಿಯುವುದು ಸೂಕ್ತ. ಅದರಂತೆ ಅಂಗ್ಲೋ ಅಮೇರಿಕನ್ ರಾಜಕೀಯ ಚಿಂತಕರು, ಪ್ರಜಾಪ್ರಭುತ್ವವೆಂದರೆ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಕಾನೂನಿನ ಮುಂದೆ ಸಮಾನತೆ, ಸರಕಾರವನ್ನು ವಿರೋಧಿಸುವ ಮತ್ತು ಟೀಕಿಸುವ ಹಕ್ಕು, ಯಾವುದೇ ಬಗೆಯ ಉದ್ಯೋಗವನ್ನು ಹೊಂದುವ ಸ್ವಾತಂತ್ರ್ಯ ಇದೇ ಮೊದಲಾದ ಅವಕಾಶಗಳಿರುವ ಸರಕಾರ ಪದ್ಧತಿಯೇ ಪ್ರಜಾಪ್ರಭುತ್ವ ಎಂದಿದ್ದಾರೆ.

ಇದೇ ರೀತಿ ಹಲವು ರಾಜಕೀಯ ಚಿಂತಕರುಗಳು ಪ್ರಜಾಪ್ರಭುತ್ವ ಎಂದರೇನು ಎಂಬುದರ ಬಗ್ಗೆ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿದ್ದಾರೆ ಅವುಗಳೆಂದರೆ :

1) ಅಬ್ರಾಹಂ ಲಿಂಕನ್‌ರವರ ಪ್ರಕಾರ

‘ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ಇರುವ ಸರಕಾರವೇ ಪ್ರಜಾಪ್ರಭುತ್ವ’ ಎಂದಿದ್ದಾರೆ.

2) ಸರ್‌ಜಾನ್‌ ಶಿಬಿರವರು

‘ಪ್ರತಿಯೊಬ್ಬರು ಭಾಗವಹಿಸುವ ಒಂದು ಬಗೆಯ ಸರಕಾರ ಪದ್ಧತಿಯೇ ಪ್ರಜಾಪ್ರಭುತ್ವವಾಗಿದೆ’ ಎಂದಿದ್ದಾರೆ.

3) ಹಾಲ್‌'ರವರು

‘ಜನಾಭಿಪ್ರಾಯದಿಂದ ನಿಯಂತ್ರಿಸಲ್ಪಡುವ ಒಂದು ರೀತಿಯ ರಾಜಕೀಯ ಸಂಘಟನೆಯೆ ಪ್ರಜಾಪ್ರಭುತ್ವ’ ಎಂದಿದ್ದಾರೆ.

4) ಹೆರೋಡೋಟಸ್‌ರವರು

‘ಪ್ರಜಾಪ್ರಭುತ್ವವೆಂದರೆ ಪ್ರಜೆಗಳ ನೇರ ಆಡಳಿತ, ಪ್ರಜೆಗಳಿಗೆ ಸಮಾನ ಸ್ವಾತಂತ್ರ್ಯ ಹಾಗೂ ಹಕ್ಕುಗಳಿರುವುದು, ಅಧಿಕಾರಿಗಳು ಪ್ರಜೆಗಳಿಗೆ ಜವಬ್ದಾರರಾಗಿರುವುದು, ಇವು ಪ್ರಜಾಪ್ರಭುತ್ವ ಸರಕಾರದ ಅಂಶಗಳಾಗಿವೆ’ ಎಂದಿದ್ದಾರೆ.

5) ಆರ್ನೆಸ್ಟ್ ಬಾರ್ಕ‌್ರರವರು

‘ಪ್ರಜಾಪ್ರಭುತ್ವವೆಂದರೆ ಚರ್ಚೆ ಮತ್ತು ವಿಮರ್ಶೆಯ ಮೂಲಕ ನಡೆಯುವ ಸರಕಾರ’ ಎಂದಿದ್ದಾರೆ.

6) ಪೆರಿಕ್ಲಿಸ್‌ರವರು

‘ಜನಸಾಮಾನ್ಯರಲ್ಲಿ ಅಧಿಕಾರವಿರುವುದೇ ಪ್ರಜಾಪ್ರಭುತ್ವ’ ಎಂದಿದ್ದಾರೆ.

7) ಲಾರ್ಡ್ ಬೈಸ್‌ರವರು

‘ವಿಧಿಬದ್ಧವಾದ ರಾಜ್ಯದ ಪರಮಾಧಿಕಾರವು ವ್ಯಕ್ತಿ ಅಥವಾ ಯಾವುದೇ ವರ್ಗ ಅಥವಾ ಗುಂಪಿಗೆ ಸೇರದೇ, ಇಡೀ ಸಮಾಜದಲ್ಲಿರುವುದೇ ಪ್ರಜಾಪ್ರಭುತ್ವ’ ಎಂದಿದ್ದಾರೆ.

8) ಮೋ. ಡೈಸಿಯವರು

‘ಪ್ರಜಾಪ್ರಭುತ್ವವು ಒಂದು ಸರಕಾರಿ ಪದ್ಧತಿಯಾಗಿದ್ದು, ಈ ಸರಕಾರದಲ್ಲಿನ ಆಡಳಿತ ವರ್ಗವು ಇಡೀ ರಾಷ್ಟ್ರವನ್ನು ಪ್ರತಿನಿಧಿಸುವಂತಿದ್ದರೆ, ಇಲ್ಲಿ ಪ್ರಜಾಪ್ರಭುತ್ವ ಸರಕಾರವಿದೆ ಎಂದಾಗುತ್ತದೆ’ ಎಂದಿದ್ದಾರೆ.

9) ಕೆ.ಎಂ. ಪಣೀಕರ್‌ರವರ ಪ್ರಕಾರ

‘ವಾಸ್ತವವಾಗಿ ಪ್ರಜಾಪ್ರಭುತ್ವವು ಸರಕಾರದ ಒಂದು ಸ್ವರೂಪವಲ್ಲ, ಅದು ಅಗತ್ಯ ಸ್ವಾತಂತ್ರ, ಅಭಿಪ್ರಾಯ ಪ್ರಕಟಣಾ ಸ್ವಾತಂತ್ರ, ಸಂಘ ಸಂಸ್ಥೆಗಳ ಸ್ಥಾಪನಾ ಸ್ವಾತಂತ್ರ್ಯಗಳನ್ನು ರಾಜ್ಯದೊಡನೆ ವ್ಯಕ್ತಿ ಸಂಬಂಧವನ್ನು ರೂಪಿಸುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಂಶಗಳ ಒಂದು ಸಂಕೀರ್ಣ ರೂಪ’ ಎಂದಿದ್ದಾರೆ.

10) ಪೋ. ಗಿಡ್ಡಿಂಗ್‌ರವರು

‘ಪ್ರಜಾಪ್ರಭುತ್ವವೆಂದರೆ ಒಂದು ಸರಕಾರದ ಪದ್ಧತಿ ಅಥವಾ ಒಂದು ರಾಜ್ಯದ ಪದ್ಧತಿ ಅಥವಾ ಒಂದು ಸಮಾಜದ ಪದ್ಧತಿ ಅಥವಾ ಈ ಮೂರರ ಸಂಕೀರ್ಣ ಸ್ವರೂಪವಾಗಿದೆ’ ಎಂದಿದ್ದಾರೆ.

ಈ ಮೇಲಿನ ವ್ಯಾಖ್ಯೆಗಳಿಂದ ಪ್ರಜಾಪ್ರಭುತ್ವವೆಂದರೆ ಒಂದು ಬಗೆಯ ಸರಕಾರ ಪದ್ಧತಿಯಾಗಿದ್ದು, ಇಲ್ಲಿ ಪ್ರಜೆಗಳೇ ಪ್ರಭುಗಳಾಗಿರುತ್ತಾರೆ.

ಈ ಪ್ರಜೆಗಳು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವಂತದ್ದಾಗಿರುತ್ತದೆ. ಈ ಪದ್ಧತಿಯಲ್ಲಿ ಪ್ರಜೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರತಿನಿಧಿಗಳ ಮೂಲಕ ಸರಕಾರ ಯಂತ್ರವನ್ನು ಚಲಾಯಿಸುತ್ತಾರೆ. ಒಟ್ಟಾರೆ ಇದು ಪ್ರಜೆಗಳಿಂದ ನಡೆಯುವ ಸರಕಾರ ಪದ್ಧತಿಯಾಗಿದೆ.