ಗೌತಮ ಬುದ್ಧನ ಜೀವನ ಹಾಗೂ ಬೋಧನೆ

ಗೌತಮ ಬುದ್ಧನ ಜೀವನ ಹಾಗೂ ಬೋಧನೆ

ಗೌತಮ ಬುದ್ಧನ ಜೀವನ

ಬಾಲ್ಯ : ಏಷ್ಯಾದ ಬೆಳಕು ಎಂದು ಹೆಸರಾದ ಗೌತಮಬುದ್ಧ ಬೌದ್ಧ ಧರ್ಮದ ಸ್ಥಾಪಕ. ಈತ ಒಬ್ಬ ಮಹಾನ್ ದಾರ್ಶನಿಕ. ಈತನನ್ನು ಶಾಕ್ಯಮುನಿ ಹಾಗೂ ತಥಾಗತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಈತ ಕ್ರಿ.ಪೂ. 583 ರಂದು ವೈಶಾಖ ಶುದ್ಧ ಪೂರ್ಣಿಮೆಯಂದು ನೇಪಾಳದ ಲುಂಬಿನಿ ವನದಲ್ಲಿ ಜನಿಸಿದನು.  ತ್ರಿಪೀಟಕಗಳು ಹಾಗೂ ಜಾತಕ ಕಥೆಗಳು ಬುದ್ಧನ ಬಗ್ಗೆ ವಿವರಣೆ ನೀಡುತ್ತವೆ. ಈತನ ತಂದೆ ಶುದ್ಧೋದನ ಹಾಗೂ ತಾಯಿ ಮಾಯಾದೇವಿ, ಬುದ್ಧನ ಮೂಲ ಹೆಸರು ಸಿದ್ದಾರ್ಥ, ಶುದ್ಧೋದನ ಕಪಿಲ ವಸ್ತುವಿನ ಶಾಕ್ಯ ಕುಲಕ್ಕೆ ಸೇರಿದವನು. ಸಿದ್ದಾರ್ಥ ಜನಿಸಿದ ಕೇವಲ 7 ದಿನಗಳಲ್ಲಿ ಮಾಯಾದೇವಿ ತೀರಿಕೊಂಡಳು. ನಂತರ ಬುದ್ಧ ತನ್ನ ಮಲತಾಯಿ ಪ್ರಚಾಪತಿ ಗೌತಮಿಯ ಆಶ್ರಮದಲ್ಲಿ ಬೆಳೆದನು. ಸಂಪ್ರದಾಯದಂತೆ ಸಿದ್ದಾರ್ಥ ಜನಿಸಿದ ತಕ್ಷಣ ಶುದ್ಧೋದನ ಜ್ಯೋತಿಷಿಗಳನ್ನು ಕರೆದು ಮಗನ ಭವಿಷ್ಯವನ್ನು ಕೇಳಿದನು. ಈತ ಮಹಾರಾಜನಾಗುತ್ತಾನೆ ಇಲ್ಲವೆ ಜಗತ್ತನ್ನು ಉದ್ಧರಿಸುವ ಸನ್ಯಾಸಿಯಾಗುತ್ತಾನೆ ಎಂದು ಜ್ಯೋತಿಷಿ ಹೇಳಿದನು. ಈ ಮಾತನ್ನು ಕೇಳಿ ದಿಗ್ಬ್ರಮೆಗೊಂಡ ಶುದ್ಧೋದನ ತನ್ನ ಮಗ ಸನ್ಯಾಸಿಯಾಗದಿರಲಿ ಎಂದು ಬಯಸಿ ಅರಮನೆಯಲ್ಲಿಯೇ ಅವನಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದನು. ಅವನಿಗಾಗಿ ಅರಮನೆಗಳನ್ನು ನಿರ್ಮಿಸಿದನು. ಯಾಕೆಂದರೆ ತನ್ನ ಮಗ ಪ್ರಸಿದ್ಧ ಸಾಮ್ರಾಟನಾಗಲು ಬಯಸಿದ್ದನೇ ಹೊರತು ಸನ್ಯಾಸಿಯಾಗಲು ಅಲ್ಲ. ಹೀಗಾಗಿ ತನ್ನ ಮಗನ ಮನಸ್ಸಿಗೆ ಘಾಸಿಯಾಗುವ ಯಾವುದೇ ಘಟನೆ ನಡೆಯದಂತೆ ಎಚ್ಚರಿಕೆವಹಿಸಿದನು.

ವೈವಾಹಿಕ ಜೀವನ : ಬಾಲ್ಯದಿಂದಲೇ ಸಿದ್ದಾರ್ಥನಿಗೆ ಆಧ್ಯಾತ್ಮದ ಕಡೆಗೆ ಒಲವಿತ್ತು. ಹೀಗಾಗಿ ಶುದ್ಧೋದನ ತನ್ನ ಮಗನ ಮನಸ್ಸನ್ನು ಬೇರೆಡೆಗೆ ಸೆಳೆಯಲು ಉತ್ತಮ ಶಿಕ್ಷಣ ನೀಡುವ ಸಕಲ ಏರ್ಪಾಡು ಮಾಡಿದನು. ಸಿದ್ದಾರ್ಥ 16ನೇ ವಯಸ್ಸಿಗೆ ಬಂದಾಗ ಅವನ ಸೋದರ ಮಾವನ ಮಗಳಾದ ಯಶೋಧರಾ, ಭದ್ಧಕಚ್ಛಾನಾ, ಸುಭದ್ರಕಾ, ಬಿಂಬಾ ಅಥವಾ ಗೋಪಾ ಎಂದು ಕರೆಯಲ್ಪಡುವ ರಾಜಕುಮಾರಿಯೊಡನೆ ಮದುವೆ ಮಾಡಲಾಯಿತು. 13 ವರ್ಷಗಳ ಕಾಲ ಸಾಂಸಾರಿಕ ಜೀವನ ನಡೆಸಿ ರಾಹುಲ ಎಂಬ ಮುದ್ದಾದ ಮಗುವನ್ನು ಪಡೆದನು.

1) ನಾಲ್ಕು ಘಟನೆಗಳು : ಸಿದ್ದಾರ್ಥ ಅರಮನೆಯ ಸುಖಭೋಗ ಜೀವನದಲ್ಲಿ ಕೆಲಕಾಲ ಕಳೆದ ನಂತರ ಹೊರಪ್ರಪಂಚದ ಕುತೂಹಲವಾಯಿತು. ಒಂದು ದಿನ ಅರಮನೆಯ ಆಚೆ ಹೋಗಬೇಕೆನಿಸಿ ತನ್ನ ಸೇವಕ ಚನ್ನನೊಂದಿಗೆ ಕುದುರೆಯನ್ನು ಏರಿ ವಾಯುವಿಹಾರಕ್ಕೆ ಹೊರಟನು. ಈ ಸಂದರ್ಭದಲ್ಲಿ ಆತ ಕೆಳಕಂಡ ನಾಲ್ಕು ಮಹಾ ಘಟನೆಯನ್ನು ನೋಡಿದನು.

1) ವೃದ್ಧಾಪ್ಯದಿಂದ ನರಳುತ್ತಿದ್ದ ಮನುಷ್ಯ

2) ರೋಗದಿಂದ ಬಳಲುತ್ತಿದ್ದ ವಯೋವೃದ್ಧ

3) ಸನ್ಯಾಸಿ ಹಾಗೂ

4) ಹೆಣ

ಈ ನಾಲ್ಕು ದೃಶ್ಯಗಳು ಸಿದ್ದಾರ್ಥನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡಿದವು. ಮುಪ್ಪು, ರೋಗ ಹಾಗೂ ಮರಣಗಳಿಗೆ ತುತ್ತಾಗಬಲ್ಲ ಮಾನವ ದೇಹ ಕ್ಷಣಿಕ ಎಂಬ ಭಾವನೆಯನ್ನುಂಟು ಮಾಡಿದವು. ಇದರಿಂದ ಆತ ಮೋಹವಿಲ್ಲದ ಏಕಾಂತ ಜೀವನವನ್ನು ಬಯಸತೊಡಗಿದನು. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಿದನು

2)ಮಹಾಪರಿತ್ಯಾಗ : ಮುಪ್ಪು, ರೋಗ, ಸಾವು ಇವು ಸಿದ್ದಾರ್ಥನ ಮನಸ್ಸನ್ನು ಕಲಕಿದವು. ಅರಮನೆಯ ವೈಭೋಗ, ದುಃಖಮಯ ಜೀವನ, ಇವುಗಳಿಂದ ಅವನು ಬೇಸರಗೊಂಡಿದ್ದನು. ಮಾನವರೆಲ್ಲರ ಕಷ್ಟಕೋಟಲೆಗಳಿಗೆ ಕಾರಣವಾದ ಕಣ್ಣೀರನ್ನು ಒರೆಸಲು ಯತ್ನಿಸಿ ಸಂಸಾರವನ್ನು ತ್ಯಜಿಸಲು ತೀರ್ಮಾನಿಸಿದನು. ತನ್ನ 29ನೇ ವಯಸ್ಸಿನಲ್ಲಿ ಸಿದ್ದಾರ್ಥ ಒಂದು ರಾತ್ರಿ ತನ್ನ ಮಲತಾಯಿ, ಹೆಂಡತಿ, 6 ದಿನಗಳ ಮಗ ರಾಹುಲ, ಅರಮನೆ, ವೈಭೋಗ ಎಲ್ಲವನ್ನೂ ತೊರೆದು ಸನ್ಯಾಸಿಯಾಗಿ ಕಾಡಿಗೆ ಹೋದನು. ಇದನ್ನೇ ಮಹಾಪರಿತ್ಯಾಗ ಎಂದು ಕರೆಯಲಾಗಿದೆ.

3)ಸತ್ಯಾನ್ವೇಷಣೆ : ಸಿದ್ದಾರ್ಥ ಸನ್ಯಾಸಿಯ ಉಡುಪನ್ನು ಧರಿಸಿ ಕಾಡಿಗೆ ಹೋದನು. ಬದುಕಿನ ಸತ್ಯವನ್ನು ಹಾಗೂ ದುಃಖಕ್ಕೆ ಪರಿಹಾರವನ್ನು ಕಾಣಲು ಏಳು ವರ್ಷಗಳ ಕಾಲ ಗುರುಗಳ ಹತ್ತಿರ ಅಲೆದನು. ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಸಿದ್ದಾರ್ಥ ವೈಶಾಲಿಯ ಪ್ರಸಿದ್ಧ ದಾರ್ಶನಿಕನಾದ ಆರದ ಕಲಮನ ಬಳಿ ಎರಡು ವರ್ಷ ಶಿಷ್ಯನಾಗಿದ್ದನು. ಅಲ್ಲಿಯೂ ಅವನಿಗೆ ಸಾಧನೆಯ ಮಾರ್ಗ ಸಿಗಲಿಲ್ಲ. ಆನಂತರ ರಾಜಗೃಹಕ್ಕೆ ಹೋಗಿ ಉದ್ರಕಿ ಎಂಬುವವನ ಬಳಿ ಧ್ಯಾನಕ್ಕೆ ಕುಳಿತು ಏಕಾಗ್ರತೆಯನ್ನು ಪಡೆದನು. ಅನಂತರ ಗಯಾ ಕ್ಷೇತ್ರದ ಬಳಿಯಿರುವ ಉರುವಿಲ್ಲದಲ್ಲಿ ಕಠಿಣ ತಪಸ್ಸನ್ನು ಆಚರಿಸಿ ಎಲುಬಿನ ಹಂದರವಾದನು. ಆದರೂ ಆತನಿಗೆ ಜ್ಞಾನೋದಯವಾಗಲಿಲ್ಲ. ಕೊನೆಗೆ ನಿರಂಜನಾ ನದಿಯಲ್ಲಿ ಸ್ನಾನ ಮಾಡಿ ಸುಜಾತಾ ಎಂಬ ಕನ್ಯೆ ನೀಡಿದ ಮಧುಪಾಯಸವನ್ನು ಸ್ವೀಕರಿಸಿದನು. ಇದರಿಂದ ಅವನು ಜೀವ ಶಕ್ತಿಯನ್ನು ಪಡೆದನು. ನಿರಾಳ ಭಾವನೆಯಿಂದ ಬೋಧಗಯಾ ಬಳಿಯಿರುವ ಉರುವಲ ಎಂಬ ಗ್ರಾಮದ ಬಳಿಯ ಅರಳಿ ಮರದ ಕೆಳಗೆ ಕುಳಿತು ಧ್ಯಾನ ಮಗ್ನನಾದನು. ಕೊನೆಗೆ ವೈಶಾಖ ಶುದ್ಧ ಪೂರ್ಣಿಮೆಯ ದಿನ ಜ್ಞಾನೋದಯವಾಯಿತು. ಅಂದಿನಿಂದ ಸಿದ್ದಾರ್ಥ ಬುದ್ಧನಾದನು. ಬುದ್ಧ ಎಂದರೆ ಜ್ಞಾನೋದಯ ಅಥವಾ ಪರಮಜ್ಞಾನ ಪಡೆದವನು ಎಂದರ್ಥ, ಬುದ್ಧನು ತಪಸ್ಸು ಮಾಡಿದ ಸ್ಥಳವನ್ನು ಬೋಧಗಯಾ ಎಂದೂ, ಆ ಅರಳಿಮರವನ್ನು ಬೋಧಿವೃಕ್ಷ ಎಂದೂ ಕರೆಯಲಾಯಿತು.

4)ಧರ್ಮಚಕ್ರಪ್ರವರ್ತನ ಕಾಲ : ಬುದ್ಧ ತಾನು ಕಂಡುಕೊಂಡ ಪರಮ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸಲು ಅವನು ತನ್ನ ಮೊದಲ ಉಪದೇಶವನ್ನು ವಾರಣಾಸಿ ಸಮೀಪವಿರುವ ಸಾರನಾಥದ ಜಿಂಕೆಯ ವನದಲ್ಲಿ ನೀಡಿದನು. ಈ ಘಟನೆಯನ್ನೇ ಧರ್ಮಚಕ್ರ ಪ್ರವರ್ತನ ಅಥವಾ ಧರ್ಮಚಕ್ರ ತಿರುಗುವಿಕೆ ಎಂದು ಕರೆಯಲಾಗಿದೆ. ಬುದ್ಧನ ಮೊದಲ ಐದು ಜನ ಶಿಷ್ಯಂದಿರೆಂದರೆ ಕೊಂಡಣ್ಣ, ಎಪ್ಪು, ಭವ್ಹಾಜಿ, ಮಹಾನಾಮ ಹಾಗೂ ಅನ್ನಾಜಿ. ನಂತರ ಬುದ್ಧ ಈ ಐವರ ಸಹಾಯದೊಂದಿಗೆ ಬೌದ್ಧ ಸಂಘವನ್ನು ಸ್ಥಾಪಿಸಿದನು. ಅಂದಿನಿಂದ ಬುದ್ಧನ ಧರ್ಮಚಕ್ರ ಉರುಳಲು ಆರಂಭಿಸಿತು.

5)ಬೌದ್ಧ ಧರ್ಮದ ಪ್ರಚಾರ : ಬುದ್ಧನು ತನ್ನ ಉಳಿದ 45 ವರ್ಷಗಳ ಕಾಲ ಊರೂರು ಅಲೆಯುತ್ತಾ ತನ್ನ ಬೋಧನೆಗಳನ್ನು ಮಾಡಿದನು. ಈ ಅವಧಿಯಲ್ಲಿ ಆತ ಕಾಶಿ, ಸಾರನಾಥ, ರಾಜಗೃಹ, ಕೌಶಾಂಬಿ, ಮಗಧ, ಕೋಶಲ, ಅಂಗ, ಮಿಥಿಲ ಹಾಗೂ ಕಪಿಲ ವಸ್ತುಗಳಿಗೆ ಭೇಟಿ ನೀಡಿದನು. ತಾನು ಹೋದಡೆಯಲೆಲ್ಲಾ ಬೆಂಬತ್ತಿ ಬಂದ ಜನರಿಗೆ ಭೇದ ಭಾವವಿಲ್ಲದೆ ಧರ್ಮಬೋಧೆಮಾಡಿದನು. ಆನಂದ ಈತನ ಮೊದಲ ಶಿಷ್ಯನಾಗಿದ್ದನು. ಬುದ್ಧನು ವರ್ಷದಲ್ಲಿ 4 ತಿಂಗಳು ಮಳೆಗಾಲವನ್ನು ಒಂದು ಕಡೆ ಕಳೆದು, ಉಳಿದ ಎಂಟು ತಿಂಗಳ ಕಾಲ ಪ್ರವಾಸದಲ್ಲಿ ತೊಡಗಿರುತ್ತಿದ್ದನು. ಹೀಗಾಗಿ ಆತನ ಧರ್ಮ ಬಹುಬೇಗ ಪಸರಿಸಿತು. ನಂತರ ಬುದ್ಧ ತನ್ನ 80ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಗೋರಕ್‌ಪುರ ಜಿಲ್ಲೆಯ ಕುಶಿನಗರ ಎಂಬಲ್ಲಿ ಕ್ರಿ.ಪೂ. 503ರಲ್ಲಿ ಪರಿನಿರ್ವಾಣ ಹೊಂದಿದನು. ಒಂದು ಆಸಕ್ತಿಕರವಾದ ವಿಷಯವೆಂದರೆ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣ ವೈಶಾಕ ಶುದ್ಧ ಪೂರ್ಣಿಮೆಯಂದು ಸಂಭವಿಸಿದವು. ಆದುದರಿಂದ ಬೌದ್ಧರು ಅವನ ಜನ್ಮದಿನವನ್ನು ಬೌದ್ಧ ಪೂರ್ಣಿಮೆ ಎಂದು ಆಚರಿಸುತ್ತಾರೆ.

ಗೌತಮ ಬುದ್ಧನ ಬೋಧನೆಗಳು :

ಬುದ್ಧನ ಬೋಧನೆಗಳನ್ನು ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪೀಟಕಗಳಾದ ಸುತ್ತಪಿಟಿಕ, ಅಭಿದಮ್ಮ ಪಿಟಿಕ ಹಾಗೂ ವಿನಯ ಪಿಟಿಕೆಗಳಲ್ಲಿ ಕಾಣಬಹುದು. ಇವುಗಳನ್ನು ಮೂರು ಪವಿತ್ರ ಬುಟ್ಟಿಗಳೆಂದು ಕರೆಯಲಾಗಿದೆ.

1)ನಾಲ್ಕು ಮೂಲ ತತ್ವಗಳು :

ಎ) ಅಹಿಂಸೆ (ಪ್ರಾಣಿ ಹಿಂಸೆ ಮಾಡದಿರುವುದು).

ಬಿ) ಸತ್ಯ (ಸುಳ್ಳು ಹೇಳದಿರುವುದು),

ಸಿ) ಕಳ್ಳತನ ಮಾಡದಿರುವುದು.

ಡಿ) ಪಾವಿತ್ರ್ಯತೆಯನ್ನು ಕಾಪಾಡುವುದು/ಬ್ರಹ್ಮಚರ್ಯೆಯನ್ನು ಪಾಲಿಸುವುದು.

2)ನಾಲ್ಕು ಆರ್ಯ ಸತ್ಯಗಳು :

ಎ) ಜೀವನವು ಅತ್ಯಂತ ದುಃಖಮಯವಾಗಿದೆ. (ಜನ್ಮ, ವೃದ್ಧಾಪ್ಯ, ರೋಗ, ಸಾವು ಇವೇ ದುಃಖದ ಮೂಲಗಳು)

ಬಿ) ದುಃಖಕ್ಕೆ ಆಸೆಯೇ ಮೂಲಕಾರಣ.

ಸಿ) ಆಸೆಯನ್ನು ತ್ಯಜಿಸಿದರೆ ದುಃಖದಿಂದ ಮುಕ್ತಿ ಹೊಂದಬಹುದು.

ಡಿ) ದುಃಖದಿಂದ ಪಾರಾಗಲು ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವುದು.

3) ಅಷ್ಟಾಂಗ ಮಾರ್ಗಗಳು : ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವುದರಿಂದ ಹುಟ್ಟು- ಸಾವುಗಳಿಂದ ಮುಕ್ತಿ ಹೊಂದಬಹುದು. ಬುದ್ಧ ಹೇಳಿದ ಅಷ್ಟಾಂಗ ಮಾರ್ಗಗಳೆಂದರೆ:

1) ಸಮ್ಯಕ್ ನುಡಿ    –          ಅಸತ್ಯವನ್ನು ನುಡಿಯದಿರುವುದು ಹಾಗೂ ಪರರ ನಿಂದನೆ ಮಾಡದಿರುವುದು.)

2) ಸಮ್ಯಕ್ ಚಾರಿತ್ರ್ಯ   –     ಕೊಲೆ, ಕಳ್ಳತನ ಹಾಗೂ ಅನೈತಿಕ ವ್ಯವಹಾರದಿಂದ ದೂರವಿರುವುದು.

3) ಸಮ್ಯಕ್ ಜೀವ     –        ಬೇರೆ ಜೀವಿಗಳಿಗೆ ತೊಂದರೆ ಕೊಡದಿರುವುದು

4) ಸಮ್ಯಕ್ ವಿಚಾರ   –        ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಇಟ್ಟುಕೊಳ್ಳುವುದು

5) ಸಮ್ಯಕ್ ನಂಬಿಕೆ    –       ಪರರಲ್ಲಿ ನಂಬಿಕೆ ಇಡುವುದು

6) ಸಮ್ಯಕ್ ಪ್ರಯತ್ನ   –       ಒಳ್ಳೆಯ ಪ್ರಯತ್ನಗಳನ್ನು ಮಾಡುವುದು

7) ಸಮ್ಯಕ್ ಧ್ಯಾನ      –        ಮನಸ್ಸನ್ನು ಹತೋಟಿಗೊಳಪಡಿಸಿಕೊಳ್ಳುವುದು

8) ಸಮ್ಯಕ್ ನೆನಪು     –        ಆತ್ಮಜ್ಞಾನ ಹಾಗೂ ಸಂಯಮದಿಂದ ಇರುವುದು

4) ಬೌದ್ಧ ಧರ್ಮದ ತ್ರಿರತ್ನಗಳು : ಬೌದ್ಧ ಧರ್ಮದಲ್ಲಿ ಬುದ್ಧ, ಧರ್ಮ ಮತ್ತು ಸಂಘ ಎಂಬುದು ಮೂರು ತ್ರಿರತ್ನಗಳಾಗಿವೆ.  ಬುದ್ಧಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ – ಸಂಘಂ ಶರಣಂ ಗಚ್ಛಾಮಿ

1. ಬುದ್ಧಂ ಶರಣಂ ಗಚ್ಛಾಮಿ :

ಅಂದರೆ “ನಾನು ಬುದ್ಧನಲ್ಲಿ ಶರಣಾಗುತ್ತೇನೆ” — ಆತನು ಜ್ಞಾನೋದಯವನ್ನು ಹೊಂದಿದ ಗುರು, ಮಾನವಕುಲಕ್ಕೆ ಮುಕ್ತಿಯ ಮಾರ್ಗ ತೋರಿಸಿದ ಪ್ರೇರಕ.

2. ಧಮ್ಮಂ ಶರಣಂ ಗಚ್ಛಾಮಿ :

ಅಂದರೆ “ನಾನು ಧರ್ಮದಲ್ಲಿ ಶರಣಾಗುತ್ತೇನೆ” — ಬುದ್ಧನು ಬೋಧಿಸಿದ ಸತ್ಯ, ಜ್ಞಾನ ಮತ್ತು ದುಃಖ ನಿವಾರಣೆಯ ಮಾರ್ಗವಾದ ಧರ್ಮದಲ್ಲಿ ಶರಣಾಗುವುದು.

3. ಸಂಘಂ ಶರಣಂ ಗಚ್ಛಾಮಿ :

ಅಂದರೆ “ನಾನು ಸಂಘದಲ್ಲಿ ಶರಣಾಗುತ್ತೇನೆ” — ಬುದ್ಧನ ಉಪದೇಶಗಳನ್ನು ಅನುಸರಿಸುವ ಭಿಕ್ಷುಗಳು, ಭಿಕ್ಷುನಿಯರು ಮತ್ತು ನಿಷ್ಠಾವಂತ ಅನುಯಾಯಿಗಳ ಸಮುದಾಯದಲ್ಲಿ ಶರಣಾಗುವುದು.

ಒಟ್ಟಾರೆ: ಇದು ಜ್ಞಾನ (ಬುದ್ಧ), ಸತ್ಯ (ಧಮ್ಮ), ಮತ್ತು ಆಧ್ಯಾತ್ಮಿಕ ಸಹವಾಸ (ಸಂಘ) — ಈ ಮೂರು ಶ್ರೇಷ್ಠ ಶರಣಾಗತಿಗಳಲ್ಲಿ ನಂಬಿಕೆಯನ್ನು ಸೂಚಿಸುವ ಬೌದ್ಧ ಜೀವನದ ಮೂಲ ತತ್ವವಾಗಿದೆ.

5) ಅಹಿಂಸೆ : ಬುದ್ಧ ಹಿಂಸೆಯನ್ನು ಖಂಡಿಸಿದನು. ಅಹಿಂಸಾವಾದಕ್ಕೆ ಹೆಚ್ಚು ಒತ್ತು ನೀಡಿದನು. ಜಗತ್ತಿನ ಪ್ರತಿ ಜೀವಿಯಲ್ಲೂ ಜೀವವಿದೆ ಅದನ್ನು ಹಿಂಸಿಸುವುದು ಮಹಾಪಾಪ ಎಂದು ಬೋಧಿಸಿದನು. ಯಜ್ಞಯಾಗಾದಿಗಳಲ್ಲಿ ಆಗುತ್ತಿದ್ದ ಪ್ರಾಣಿಬಲಿಯನ್ನು ಉಗ್ರವಾಗಿ ಖಂಡಿಸಿದನು. ಹಿಂಸಾತ್ಮಕ ಮಾರ್ಗವನ್ನು ಬಿಟ್ಟು ಸ್ನೇಹ, ಪ್ರೀತಿ, ಶಾಂತಿ, ಅನುಕಂಪ ಹಾಗೂ ಸೌಹಾರ್ಧತೆಯಿಂದ ಬದುಕುವಂತೆ ತನ್ನ ಅನುಯಾಯಿಗಳಿಗೆ ಕರೆನೀಡಿದನು.

6) ಜಾತಿ ಪದ್ಧತಿಯ ಖಂಡನೆ : ಬುದ್ಧ ಜಾತಿ ಪದ್ಧತಿಯನ್ನು ಖಂಡಿಸಿದನು. ಮನುಷ್ಯನ ಯೋಗ್ಯತೆಯನ್ನು ಅವನ ವ್ಯಕ್ತಿತ್ವದಿಂದ ಅಳೆಯಬೇಕೆ ವಿನಃ ಜಾತಿಯಿಂದ ಅಲ್ಲ ಎಂದನು. ಈ ಕಾರಣಕ್ಕಾಗಿ ಬುದ್ಧ ತನ್ನ ಸಂಘದಲ್ಲಿ ಸಾವಿರಾರು ಅಸ್ಪೃಶ್ಯರಿಗೆ ಸದಸ್ಯತ್ವವನ್ನು ನೀಡಿದನು.

7) ಪುನರ್ ಜನ್ಮ ಹಾಗೂ ಕರ್ಮ : ಮಹಾವೀರನಂತೆ ಬುದ್ಧ ಕೂಡಾ ಪುನರ್‌ಜನ್ಮ ಮತ್ತು ಕರ್ಮಗಳಲ್ಲಿ ನಂಬಿಕೆ ಇಟ್ಟಿದ್ದನು. ಮಾನವನ ಇಂದಿನ ಹುಟ್ಟು ಸಾವುಗಳಿಗೆ ಹಿಂದಿನ ನಮ್ಮ ಕರ್ಮಗಳೇ ಕಾರಣವಾಗಿವೆ. ಆದ್ದರಿಂದ ಉತ್ತಮ ಕರ್ಮಗಳನ್ನು ನಾವು ಮಾಡಿದರೆ ಮೋಕ್ಷ ಪಡೆಯಬಹುದು ಎಂದು ಬುದ್ಧ ಬೋಧಿಸಿದನು.

ಉಪಸಂಹಾರ :

ಗೌತಮ ಬುದ್ಧನ ಮಹತ್ವ ಮಾನವತೆಯ ಶಾಂತಿ, ಸಮಾನತೆ ಮತ್ತು ನೈತಿಕತೆಯ ಆಧಾರಶಿಲೆಯಾಗಿದೆ. ಆತ ಅಹಿಂಸೆ, ಸತ್ಯ, ಕರುಣೆ, ಸಹಿಷ್ಣುತೆ ಮತ್ತು ಸ್ವಸಂಯಮದ ಮೂಲಕ ಮಾನವನ ಆತ್ಮೋನ್ನತಿಗೆ ದಾರಿ ತೋರಿಸಿದನು. ಜಾತಿ, ಧರ್ಮ, ಲಿಂಗ ಅಥವಾ ಸಂಪತ್ತಿನ ಆಧಾರದ ಮೇಲೆ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಬೌದ್ಧ ತತ್ವಗಳು ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಮೂಲ ಆಧಾರಗಳಾಗಿವೆ. ಇಂದಿನ ಅಶಾಂತ, ಹಿಂಸಾತ್ಮಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಬುದ್ಧನ ಬೋಧನೆಗಳು ಅತಿ ಪ್ರಸ್ತುತವಾಗಿದ್ದು, ಅವು ಮಾನವನಿಗೆ ಆತ್ಮಶಾಂತಿ, ಸಾಮಾಜಿಕ ಸೌಹಾರ್ದತೆ ಹಾಗೂ ಪರಿಸರಸಂರಕ್ಷಣೆಯ ಮಾರ್ಗದರ್ಶನ ನೀಡುತ್ತವೆ. ಬುದ್ಧನ ಅಹಿಂಸೆ ಮತ್ತು ಮಿತಾಭೋಗದ ಸಂದೇಶವು ಇಂದಿನ ಜಾಗತಿಕ ಸಮಾಜಕ್ಕೆ ಮಾನವೀಯತೆ ಮತ್ತು ಶಾಂತಿಯ ದಾರಿ ತೋರಿಸುವ ಶಾಶ್ವತ ಬೆಳಕಾಗಿದೆ.

ಅಶೋಕ ಧಮ್ಮ

ಅಶೋಕ ಧಮ್ಮ

ಧರ್ಮ ಎಂಬ ಪದದ ಪ್ರಾಕೃತ ರೂಪವೇ ʻಧಮ್ಮ’. ಅಂದರೆ ಧಾರ್ಮಿಕತೆ, ದೈವಭಕ್ತಿ (Law of Piety), ನೈತಿಕತೆ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಎಂಬ ಅರ್ಥಗಳನ್ನು ಹೊಂದಿದೆ. ಅಶೋಕ ಧಮ್ಮದ ಮೂಲಭೂತ ತತ್ವಗಳನ್ನು ಅಶೋಕನೇ ಕೆತ್ತಿಸಿದ ಶಿಲಾಶಾಸನ ಗಳಲ್ಲಿ ಕಾಣಬಹುದು. ಅವುಗಳೆಂದರೆ

ಸಂಯಮ (Mastery of Senses)
ದಯಾ (Kindness)
ಶುಶೃಷಾ (Service)
ಅಪಚಿತ್ತಿ (Reverence – Deep Respect)
ದಾನ (Charity)
ಸಂಪ್ರತಿಪತ್ತಿ (Support)
ಕೃತಜ್ಞತಾ, (Gratitude)
ಶೌಚ (Purity)
ಭಾವಶುದ್ಧಿ (Purity of Thought)
ದೃಡಭಕ್ತಿ (Devotion)
ಸತ್ಯ (Truthfullness)
ಅಪಿಚಿತ್ತಿ (Reverence – Deep Respect)

ಈ ಮೇಲ್ಕಂಡ ಅಂಶಗಳನ್ನು ಒಳಗೊಂಡ ಅಶೋಕ ಧಮ್ಮವು ಯಾವ ಧರ್ಮದಿಂದ ಆಧಾರಿತವಾಗಿದೆ ಅಥವಾ ಪ್ರಭಾವಿತವಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.

ಡಾ. ಭಂಡಾರ್ಕರ್‌ ರವರ ಪ್ರಕಾರ ಅಶೋಕ ಧಮ್ಮವು ಬೌದ್ಧ ಧರ್ಮವಾಗಿದೆ. ಅವನು ಬೌದ್ಧಧರ್ಮಿಯನಾಗಿದ್ದಾನೆ. ಆದರೆ ಅದನ್ನು ವಿರೋಧಿಸುವ ಡಾ. ರಾಧಾಕುಮುದ್ ಮುಖರ್ಜಿಯವರು ಅಶೋಕ ತನ್ನ ಶಿಲಾಶಾಸನಗಳಲ್ಲಿ ಪ್ರತಿಪಾದಿಸಿದ ಧಮ್ಮ ಬೌದ್ಧಧರ್ಮವೇ ಆಗಿದ್ದರೆ, ಭಗವಾನ್ ಬುದ್ಧನ ನಾಲ್ಕು ಆರ್ಯಸತ್ಯಗಳನ್ನು ಹೇಳುತ್ತಿದ್ದ. ಅಷ್ಟಾಂಗಿಕ ಮಾರ್ಗಗಳನ್ನು ಮತ್ತು ನಿರ್ವಾಣವನ್ನಾದರೂ ಉಲ್ಲೇಖಿಸುತ್ತಿದ್ದ. ಭಗವಾನ್ ಬುದ್ಧನ ಮಹಾನ್ ವ್ಯಕ್ತಿತ್ವವನ್ನಾದರೂ ಕೊಂಡಾಡುತ್ತಿದ್ದ. ಆದರೆ ಅದ್ಯಾವುದನ್ನು ಮಾಡದ ಅಶೋಕ ಧಮ್ಮ, ಬೌದ್ಧಧರ್ಮ ಅಲ್ಲವೇ ಅಲ್ಲ ಎನ್ನುವುದು ಮುಖರ್ಜಿಯವರ ಸ್ಪಷ್ಟ ಅಭಿಪ್ರಾಯವಾಗಿದೆ.

ಕಲ್ಲಣನು ತನ್ನ ‘ರಾಜತರಂಗಿಣಿ’ ಎಂಬ ಕೃತಿಯಲ್ಲಿ ಅಶೋಕನು ಶಿವನ ಆರಾಧಕನಾಗಿದ್ದನೆಂದು ತಿಳಿಸುತ್ತಾನೆ. ಅಲ್ಲದೆ ಶಿಲಾಶಾಸನಗಳಲ್ಲಿ ತನ್ನನ್ನು ‘ದೇವನಾಂಪ್ರಿಯ ಪ್ರಿಯದರ್ಶಿ’ ಎಂದು ಕರೆದುಕೊಂಡಿದ್ದಾನೆ. ಕೆ.ಎಂ. ಪಣಿಕ್ಕರ್‌ರವರು ಈ ದೈವ ವೈದಿಕ ದೇವರಲ್ಲದೆ ಮತ್ತಾರು ಎಂದು ಪ್ರಶ್ನಿಸುತ್ತಾರೆ. ಅಂದರೆ ಅಶೋಕನು ವೈದಿಕನಾಗಿದ್ದ. ಅವನ ಧರ್ಮಕ್ಕೆ ʻವೈದಿಕಧರ್ಮ’ (ಹಿಂದೂಧರ್ಮ) ಆಧಾರವಾಗಿತ್ತು ಎಂದರ್ಥವಾಗುತ್ತದೆ. ಆದರೆ ಅದನ್ನು ವಿರೋಧಿಸುವ ಇತರೆ ವಿದ್ವಾಂಸರು ಅಶೋಕ ಪ್ರತಿಪಾದಿಸಿದ ಧಮ್ಮ ವೈದಿಕ ಧರ್ಮವೇ ಆಗಿದ್ದರೆ ಅದರ ಪ್ರತೀಕವಾದ ಪ್ರಾಣಿಬಲಿ, ಯಾಗ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ತನ್ನ ನಂಬಿಕೆಯನ್ನು ದೃಢಪಡಿಸುತ್ತಿದ್ದ ಎಂದಿದ್ದಾರೆ. ಆದರೆ ಅವುಗಳ ಬಗ್ಗೆ ಚಕಾರವೆತ್ತದ ಅಶೋಕ ವೈದಿಕ ಧರ್ಮದಿಂದ ಪ್ರಭಾವಿತನಾಗಿಲ್ಲ ಎಂಬುದು ತಿಳಿಯುತ್ತದೆ.

ವಾಸ್ತವವಾಗಿ ಅಶೋಕ ಧಮ್ಮವು ಯಾವುದೇ ಧರ್ಮದಿಂದ ಪ್ರಭಾವಿತವಾಗಿಲ್ಲದಿರುವುದನ್ನು ಕಾಣಬಹುದು. ಆದರೆ ಅದು ಎಲ್ಲಾ ಧರ್ಮಗಳ ಸಾರ ಸಂಗ್ರಹವಾಗಿದೆ. ಯಾವುದೇ ಜಾತಿ, ಮತ, ಧರ್ಮಗಳ ಚೌಕಟ್ಟಿಗೆ ಒಳಪಡದ ಸ್ವತಂತ್ರ ಅಭಿವ್ಯಕ್ತಿಯಾಗಿದೆ. ಡಾ. ಆರ್.ಸಿ. ಮಜುಂದಾರ್ ಪ್ರಕಾರ “ಅವನ ಧರ್ಮ ಧರ್ಮ ಎನ್ನುವುದಕ್ಕಿಂತ ಒಂದು ನೀತಿ ಸಂಹಿತೆ ಎಂದು ಕರೆಯುವುದು ಉಚಿತ’ ಎಂದಿದ್ದಾರೆ. ಆರ್.ಕೆ. ಮುಖರ್ಜಿಯವರ ಪ್ರಕಾರ “ಅಶೋಕನ ಧರ್ಮ ಯಾವುದೇ ನಿರ್ದಿಷ್ಟ ಪದ್ಧತಿಯಾಗಿರದೇ ಅದರಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮಿಯರಿಗೆ ಅವಶ್ಯಕವಾದ ನೀತಿ ಸಂಹಿತೆಯಾಗಿದ್ದವು. ಅವನ ಸ್ವಂತಿಕೆ ಅಡಗಿರುವುದು ಅವನು ಮಾಡಿದ ಕಾರ್ಯಗಳಲ್ಲಿ ಅಡಗಿದೆ” ಎಂದಿದ್ದಾರೆ. ಸ್ಮಿತ್‌ರವರು ಅಶೋಕನದು ಬೌದ್ಧಧರ್ಮವಾಗಿರದೇ ಅವನದೇ ಸ್ವಂತಿಕೆಯ ಧರ್ಮವೆಂದಿದ್ದಾರೆ.

ಸಾಮಾಜಿಕ ಹೊಣೆಗಾರಿಕೆ ಮತ್ತು ಒಬ್ಬರೊಂದಿಗೆ ಮತ್ತೊಬ್ಬರ ನಡತೆಗಳು ಹೇಗಿರಬೇಕೆಂಬುದರ ಮಹತ್ವವನ್ನು ಮನವರಿಕೆ ಮಾಡಿಕೊಡುವುದು ಧಮ್ಮದ ಉದ್ದೇಶವಾಗಿತ್ತು ಎಂದು ಪ್ರೊ|| ರೊಮಿಲಾ ಥಾಪರ್ ಅಭಿಪ್ರಾಯಪಟ್ಟಿದ್ದಾರೆ. ಅಶೋಕನ ಧಮ್ಮವು 4 ಪ್ರಮುಖ ತತ್ವಗಳನ್ನು ಆದರಿಸಿತ್ತು. ಅವುಗಳೆಂದರೆ 1. ಅಹಿಂಸೆ, 2. ಸಹಿಷ್ಣುತೆ, 3. ಶಾಂತಿ, 4. ಪ್ರಜಾಕಲ್ಯಾಣ.

 ಡಾ||ಆರ್.ಕೆ.ಮುಖರ್ಜಿಯವರ ಪ್ರಕಾರ ʻಅಶೋಕನ ಧಮ್ಮವು ಯಾವುದೇ ನಿರ್ದಿಷ್ಟ ಧಮ್ಮ ಹಾಗೂ ಧಾರ್ಮಿಕ ಪದ್ಧತಿಯಾಗಿರದೆ ಎಲ್ಲಾ ಜಾತಿ ಜನಾಂಗಕ್ಕೂ ಅಗತ್ಯವಾದ ನೈತಿಕ ಕಾನೂನುಗಳಾಗಿದ್ದವು’. ಡಾ|| ಭಂಡಾರ್ಕರ್ ರವರು ʻಅಶೋಕನ ಧಮ್ಮವು ಧಾರ್ಮಿಕವಲ್ಲದ ಬೌದ್ಧಧರ್ಮವಾಗಿತ್ತು’ ಎಂದಿದ್ದಾರೆ.

ಅಶೋಕ ಧಮ್ಮದ ಲಕ್ಷಣಗಳು :

1. ಅಹಿಂಸೆ :

ಅಹಿಂಸೆಯು ಅಶೋಕ ಧಮ್ಮದ ಸಾರವಾಗಿತ್ತು. ಇವನು ಕಳಿಂಗ ಯುದ್ಧಾನಂತರ ಅಹಿಂಸಾ ನೀತಿಯನ್ನು ಪಾಲಿಸಿದನು, ತನ್ನ ರಾಜ್ಯದಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಿದನು. ಸ್ವತಃ ಬೇಟೆಯಾಡುವುದನ್ನು ನಿಲ್ಲಿಸಿದನು. ಮಾಂಸಾಹಾರವನ್ನು ಬಿಟ್ಟುಬಿಟ್ಟನು. ಯಜ್ಞಯಾಗಗಳನ್ನು ನಿಷೇಧಿಸಿದನು. ಪ್ರಾಣಿಗಳನ್ನು ಕೊಲ್ಲದಂತೆ ರಾಜಾಜ್ಞೆಯನ್ನು ಮಾಡಿದನು. ತನ್ನ ಶಿಲಾಶಾಸನದಲ್ಲಿ ಅಹಿಂಸೆಯ ಮಹತ್ವವನ್ನು ಸಾರಿದನು.

2. ಸಹಿಷ್ಣುತೆ :

ಸಹಿಷ್ಣುತೆ ಎಂದರೆ ಗುಲಾಮರು ಮತ್ತು ನೌಕರರ ಜೊತೆಗೆ ಸಹಾನುಭೂತಿ, ಜನ್ಮದಾತ್ಮಗಳಿಗೆ ಹಿರಿಯರಿಗೆ, ಗುರುವರ್ಯರಿಗೆ ಗೌರವ ಕೊಡುವುದರ ಜೊತೆಗೆ ವಿದೇಯರಾಗಿರಬೇಕು. ಅಲ್ಲದೆ ಕಿರಿಯರಿಗೆ ಪ್ರೀತ್ಯಾದಾರಗಳನ್ನು, ಆಶ್ರಿತರಿಗೆ, ಬಡವರಿಗೆ, ಸಂಕಷ್ಟದಲ್ಲಿರುವವರಿಗೆ, ಸ್ನೇಹಿತರಿಗೆ, ಪರಿಚಿತರಿಗೆ ಸನ್ಯಾಸಿಗಳಿಗೆ ಬ್ರಾಹ್ಮಣರಿಗೆ ಔದಾರ್ಯತೆಯನ್ನು ತೋರಿಸಬೇಕೆಂದು ಹೇಳುತ್ತಾನೆ. ಅಶೋಕನ ವೈಯಕ್ತಿಕ ಧರ್ಮ ಬೌದ್ಧ ಧರ್ಮವಾಗಿದ್ದರೂ ಅನ್ಯ ಮತಗಳನ್ನು ಕೀಳಾಗಿ ಕಾಣಲಿಲ್ಲ. ಬ್ರಾಹ್ಮಣರನ್ನು ಪ್ರೀತಿ ವಿಶ್ವಾಸಗಳಿಂದ ಕಂಡನು.

ಎರಡನೇ ಶಿಲಾಶಾಸನದಲ್ಲಿ ಅರಸನು ಎಲ್ಲಾ ಪಂಥಗಳನ್ನು ಗೌರವಿಸುತ್ತಾನೆ ಎಂದು ಅಶೋಕನೇ ಬರೆಸಿದ್ದಾನೆ. ಅಲ್ಲದೇ ಅಜೀವಿಕರಿಗಾಗಿ ಗಯಾ ಬಳಿ ಗುಹೆಗಳನ್ನು ಸಹ ನಿರ್ಮಿಸಿದ್ದಾನೆ. ಯಾರನ್ನೂ ಸಹ ಮತಾಂತರಕ್ಕೆ ಅಶೋಕ ಬಲಾತ್ಕರಿಸಲಿಲ್ಲ. ಇದು ಅಶೋಕನ ಮತ್ತು ಧಮ್ಮದ ಹೆಗ್ಗಳಿಕೆಯಾಗಿದೆ. ಅಶೋಕನ ಧಮ್ಮದ ಪ್ರಕಾರ ತನ್ನ ಪಂಥಕ್ಕಿಂತ ಪರಪಂಥವನ್ನು ಗೌರವಿಸಿದಾಗ ತನ್ನ ಪಂಥವು ಪ್ರಬಲಗೊಳ್ಳುತ್ತದೆ. ಪ್ರತಿಯೊಂದು ಪಂಥವು ಒಂದಲ್ಲಾ ಒಂದು ಕಾರಣಕ್ಕಾಗಿ ಪೂಜ್ಯಭಾವನೆಗೆ ಅರ್ಹ.

3. ಶಾಂತಿ :
ಶಾಂತಿಯು ಯಶಸ್ಸಿನ ಸಾಧನೆಯ ಮೂಲಮಂತ್ರವಾಗಿದೆ. ಅಶಾಂತಿಯು ಅವ್ಯವಸ್ಥೆಯ ಆಗರವಾಗುತ್ತದೆ.
4. ವಿಶ್ವ ಸಹೋದರತ್ವ :

ಅಶೋಕನು ವಿಶ್ವ ಸಹೋದರತ್ವವನ್ನು ಎತ್ತಿ ಹಿಡಿದನು. ವಿಶ್ವದ ಜನರೆಲ್ಲರೂ ತನ್ನ ಸಹೋದರರೆಂದು ಸಾರಿದನು. ಇದನ್ನೇ ಅಶೋಕ ಧಮ್ಮದ ಪ್ರಮುಖ ಲಕ್ಷಣವನ್ನಾಗಿಸಿದನು. ಈ ದೃಷ್ಟಿಯಿಂದ ಅಶೋಕನು ʻಜಗತ್ತಿನ ಪ್ರಥಮ ಅಂತರರಾಷ್ಟ್ರೀಯವಾದಿ’ ಎಂದು ಕರೆಯಬಹುದು.

5. ಪ್ರಜಾಕಲ್ಯಾಣ :

ಅಶೋಕ ಧಮ್ಮದ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಪ್ರಜಾ ಕಲ್ಯಾಣವಾಗಿದೆ ಅಥವಾ ಸುಖಿರಾಜ್ಯದ (Welfare state) ಸ್ಥಾಪನೆಯಾಗಿದೆ. ತನ್ನ ಪ್ರಜೆಗಳೆಲ್ಲರ ನೈತಿಕ, ಲೌಕಿಕ ಮತ್ತು ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ ಅಶೋಕನು ಅವರೆಲ್ಲರ ಸುಖಸಂತೋಷಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟನು. ಅಂತೆಯೇ ತನ್ನ ಒಂದನೇ ಕಳಿಂಗ ಶಿಲಾಶಾಸನದಲ್ಲಿ ಪ್ರಜೆಗಳೆಲ್ಲರೂ ತನ್ನ ಮಕ್ಕಳೇ. ಅವರು ಇಹಲೋಕದಲ್ಲಿ ಮಾತ್ರವಲ್ಲದೇ ಪರಲೋಕದಲ್ಲೂ ಸುಖವಾಗಿರಬೇಕು” ಎಂದು ತಿಳಿಸಿದ್ದಾನೆ. 6ನೇ ಶಿಲಾಶಾಸನದಲ್ಲಿ “ಎಲ್ಲರೂ ನನ್ನ ಮಕ್ಕಳೇ, ನಾನು ಎಲ್ಲೇ ಇರಲಿ, ಭೋಜನ ಮಾಡುತ್ತಿರಲಿ ಅಂತಃಪುರದಲ್ಲಿರಲಿ, ಗೋಶಾಲೆಯಲ್ಲಿರಲಿ, ಮಲಗುವ ಕೊಠಡಿಯಲ್ಲಿರಲಿ, ಅರಮನೆಯಲ್ಲಿರಲಿ, ಪ್ರಜೆಗಳು ತನ್ನನ್ನು ಭೇಟಿಯಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದು. ಅದಕ್ಕೆ ನಾನು ಸದಾ ಸಿದ್ಧ” ಎಂದು ತಿಳಿಸಿದ್ದಾನೆ. ಸುಖಿರಾಜ್ಯ ಸ್ಥಾಪನೆಗಾಗಿ ಸಾರ್ವಜನಿಕ ಉಪಯೋಗಿ ಕೆಲಸಗಳಲ್ಲಿ ತನ್ನನ್ನು ತಾನು ಅಶೋಕ ತೊಡಗಿಸಿಕೊಂಡಿದ್ದಾನೆ. ಈ ದೃಷ್ಟಿಯಿಂದ ಪ್ರಜಾಕಲ್ಯಾಣಕ್ಕಾಗಿ ಶ್ರಮಿಸಿದ ಸಾಮ್ರಾಟರಲ್ಲಿ ಅಶೋಕ ಮಹಾಶಯನೇ ಮೊದಲಿಗನು. ಪ್ರಜಾಕಲ್ಯಾಣದಲ್ಲಿ ಜಾರಿಗೆ ತಂದ ಲೋಕೋಪಯೋಗಿ ಕಾರ್ಯಗಳು ಅತ್ಯಂತ ಅವಿಸ್ಮರಣೀಯವಾಗಿದೆ. ಅವುಗಳೆಂದರೆ:

ರಸ್ತೆಗಳ ನಿರ್ಮಾಣ,    

ಸಾಲುಮರಗಳನ್ನು ನೆಡಿಸಿದ್ದು,

ಅನ್ನ ಛತ್ರಾಲಯಗಳ ಸ್ಥಾಪನೆ,                                             

ಪ್ರತಿ 9 ಮೈಲುಗಳಿಗೆ ಒಂದು ಬಾವಿಯ ನಿರ್ಮಾಣ,

ಚಿಕಿತ್ಸಾಲಯಗಳ ಸ್ಥಾಪನೆ,                                                   

ವಿಶ್ರಾಂತಿ ಗೃಹಗಳ ಸ್ಥಾಪನೆ,

ಗಿಡಮೂಲಿಕೆಯ ಸಸ್ಯಗಳನ್ನು ಬೆಳೆಸಿದ್ದು ಮೊದಲಾದವು ಪ್ರಜಾಕಲ್ಯಾಣದ ಸಾಧನೆಗಳಾಗಿವೆ.

ಅಶೋಕನು ತನ್ನ  ಧಮ್ಮದ ಪ್ರಚಾರಕ್ಕೆ ಕೈಗೊಂಡ ಕ್ರಮಗಳು :

1. ತನ್ನ ವೈಯಕ್ತಿಕ ಉದಾಹರಣೆಯನ್ನು ಜನರ ಮುಂದಿಡುವ ಮೂಲಕ :

* ದಿಗ್ವಿಜಯಕ್ಕೆ ಸಮಾಪ್ತಿ ಹಾಡಿದನು

* ಪ್ರಾಣಿ ಬಲಿ, ಬೇಟೆ, ಮಾಂಸಾಹಾರ ತ್ಯಜಿಸಿದನು

* ಜನೋಪಯೋಗಿ (ಪ್ರಜಾಕಲ್ಯಾಣ) ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡನು

2. ಹೆಚ್ಚು ಪ್ರಚಾರ ಕೈಗೊಳ್ಳುವ ಮೂಲಕ :

* ಶಿಲಾಶಾಸನಗಳ ಮೇಲೆ, ಸ್ತಂಭಗಳ ಮೇಲೆ ಮತ್ತು ಕಲ್ಲುಬಂಡೆಗಳ ಮೇಲೆ ತನ್ನ ಧಮ್ಮದ ಮಾಹಿತಿಯನ್ನು ಕೆತ್ತಿಸಿದನು

* ಧಮ್ಮ ಮಹಾಮಾತ್ರರನ್ನು ನೇಮಿಸಿ ಅವರನ್ನು ಹೊರ ಪ್ರಾಂತಗಳು ಮತ್ತು ಹೊರ ದೇಶಗಳಿಗೆ ಧರ್ಮಪ್ರಚಾರಕರಾಗಿ ಕಳುಹಿಸಿದನು

* ತನ್ನ ಅಧಿಕಾರಿಗಳು ಪ್ರಜಾಹಿತಕ್ಕೆ ಒತ್ತು ಕೊಡುವಂತೆ ಆದೇಶ ನೀಡಿದನು

* ಜನರನ್ನು ನೇರವಾಗಿ ಸಂಪರ್ಕಿಸಿ ಅವರ ಕುಂದು ಕೊರತೆ ಅರಿಯುವ ಪ್ರಯತ್ನಮಾಡಿದನು

* ಧಮ್ಮದ ಬಗ್ಗೆ ಪ್ರಜ್ಞಾವಂತರೊಂದಿಗೆ ಚರ್ಚಿಸಿ ಧಮ್ಮದ ಮಹತ್ವವನ್ನು ಸಾರುವ  ಕೆಲಸಮಾಡಿದನು

ಅಶೋಕ ಧಮ್ಮದ ಪ್ರಭಾವ (ಪರಿಣಾಮ) :

* ಅಶೋಕನ ರಾಜನೀತಿಯ ಮೇಲೆ ಅಶೋಕ ಧಮ್ಮವು ಹೆಚ್ಚಿನ ಪ್ರಭಾವ ಬೀರಿತು.

* ಅಶೋಕನು ತನ್ನ ದಿಗ್ವಿಜಯ ನೀತಿಯನ್ನು ಸಂಪೂರ್ಣವಾಗಿ ಕೈಬಿಟ್ಟನು. ತನ್ನ ವೈಯಕ್ತಿಕ ಅಧಿಕಾರದ ತೆವಲಿಗಾಗಿ ಹಾಗೂ ಸಾಮ್ರಾಜ್ಯಾಧಿಪತಿ ಎಂಬ ಉಮೇದಿಗಾಗಿ ಹಲವು ಜೀವಗಳನ್ನು ಬಲಿಕೊಟ್ಟು ರಾಜ್ಯ ರಾಜ್ಯಗಳನ್ನು ಗೆಲ್ಲುವ ತನ್ನ ನೀತಿಗೆ ಮಂಗಳ ಹಾಡಿದನು.

* ತನ್ನ ಸಮಕಾಲೀನ ರಾಜ್ಯಗಳೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಸ್ಥಾಪಿಸಿದನು.

* ಆಕ್ರಮಣಕಾರಿ ನೀತಿಯನ್ನು ಕೈಬಿಟ್ಟನು.

* ತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಯಾವುದೇ ಹೊಸ ಯುದ್ಧ / ದಿಗ್ವಿಜಯ ನಡೆಸದಂತೆ ಕಟ್ಟಪ್ಪಣೆ ಮಾಡಿದನು. ಆ ಮೂಲಕ ರಕ್ತಪಾತವನ್ನು ತಪ್ಪಿಸಿದನು.

* ನಂತರದ ದೊರೆಗಳು ಮತ್ತು ಪ್ರಜೆಗಳಿಗೆ ಬೇರಿ ಘೋಷಕ್ಕಿಂತ ಧರ್ಮಘೋಷವೇ ಕಿವಿಗೆ ಹೆಚ್ಚು ಬೀಳುವಂತಾಯಿತು.

* ಆದರೆ ಅಶೋಕ ಅನುಸರಿಸಿದ ಅಹಿಂಸಾ ನೀತಿಯಿಂದ ಸಾಮ್ರಾಜ್ಯದ ನಿರಂತರತೆಗೆ ಭಂಗ ಉಂಟಾಯಿತು. ಸೈನಿಕರಲ್ಲಿದ್ದ ಕ್ಷಾತ್ರ ತೇಜಸ್ಸು ನಾಶವಾಗಿ ಪರಕೀಯರು ಆಕ್ರಮಣ ಮಾಡಿದಾಗ ದೇಶವನ್ನು ರಕ್ಷಿಸಲು ಅಸಮರ್ಥರಾದರು. ಇದರಿಂದಾಗಿ ಮೌರ್ಯ ವಂಶದ ಆಳ್ವಿಕೆ ಅಶೋಕನ ನಂತರ ಸರ್ವನಾಶದತ್ತ ಸಾಗಿತ್ತು.

* ಹೆಚ್.ಸಿ. ರಾಯ್ ಚೌದರಿಯವರು ಅಭಿಪ್ರಾಯ ಪಡುವಂತೆ “ಮೌರ್ಯ ಸಾಮ್ರಾಜ್ಯದ ಕ್ಷಾತ್ರ ತೇಜಸ್ಸು ಕಳಿಂಗ ರಣರಂಗ ದ ಕಡೆಯ ಸೈನಿಕನ ನೋವಿನ ನರಳಾಟದ ಕಡೆಯ ಸೊಲ್ಲಿನಲ್ಲಿ ನಾಶವಾಯಿತು” ಎಂದಿದ್ದಾರೆ.

ಭಾರತದಲ್ಲಿ ಪೋರ್ಚುಗೀಸರು

ಭಾರತದಲ್ಲಿ ಪೋರ್ಚುಗೀಸರು

ಭಾರತವು ಪ್ರಾಚೀನ ಕಾಲದಿಂದಲೂ ಯುರೋಪಿನ ರಾಷ್ಟ್ರಗಳೊಂದಿಗೆ ವ್ಯಾಪಾರದ ಸಂಬಂಧವನ್ನು ಹೊಂದಿತ್ತು. ಭಾರತದಲ್ಲಿ ಸಿಗುತ್ತಿದ್ದ ಮುತ್ತು, ರತ್ನ, ಹವಳ, ಬೆಳ್ಳಿ, ರೇಷ್ಮೆ, ಶ್ರೀಗಂಧ ಹಾಗೂ ಸಾಂಬಾರ ಪದಾರ್ಥಗಳಿಗೆ ಯುರೋಪಿನ ಮಾರುಕಟ್ಟೆಗಳಲ್ಲಿ ಬಾರೀ ಬೇಡಿಕೆಯಿತ್ತು. ಈ ವ್ಯಾಪಾರ ಕಾನ್ ಸ್ಟಾಂಟಿನೋಪಲ್ ಮಾರ್ಗದ ಮೂಲಕ ನಡೆಯುತ್ತಿತ್ತು. ಇದು ಪೂರ್ವ ಹಾಗೂ ಪಶ್ಚಿಮನಾಡುಗಳ ನಡುವಿನ ಪ್ರಮುಖ ವ್ಯಾಪಾರಿ ಮಾರ್ಗವನ್ನು ಕಲ್ಪಿಸಿತ್ತು. ಕ್ರಿ.ಶ. 1453ರಲ್ಲಿ ಅಟೋಮನ್ ತುರ್ಕರು ಕಾನ್ ಸ್ಟಾಂಟಿನೋಪಲ್‌ನ್ನು ವಶಪಡಿಸಿಕೊಂಡು ಪೂರ್ವ ಹಾಗೂ ಪಶ್ಚಿಮ ನಾಡುಗಳ ನಡುವಿನ ವ್ಯಾಪಾರಿ ಮಾರ್ಗವನ್ನು ಮುಚ್ಚಿದರು. ಇದರಿಂದ ಪೂರ್ವದ ಪ್ರಮುಖ ವಸ್ತುಗಳು ಯುರೋಪಿಯನ್ನರಿಗೆ ದೊರಕದಾದವು. ಭಾರತದ ವಸ್ತುಗಳಿಲ್ಲದೆ ಯುರೋಪಿಯನ್ನರ ಬದುಕು ದುಸ್ತರವಾಯಿತು. ಹೀಗಾಗಿ ಯುರೋಪಿಯನ್ನರು ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಹೀಗೆ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ ಮೊದಲ ಯುರೋಪಿಯನ್ನರೆಂದರೆ ಪೋರ್ಚುಗೀಸರು. ಕ್ರಿ.ಶ. 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ್ ನಾವಿಕನೆಂದರೆ ವಾಸ್ಕೋ-ಡ-ಗಾಮಾ. ಈತನ ಭೂ ಅನ್ವೇಷಣೆಯ ನಂತರ ಭಾರತಕ್ಕೆ ಪೋರ್ಚುಗೀಸರು ಡಚ್ಚರು, ಫ್ರೆಂಚರು ಹಾಗೂ ಇಂಗ್ಲೀಷರು ಒಬ್ಬೊಬ್ಬರಾಗಿ ಆಗಮಿಸಿದರು.

1. ಬಾರ್ಥೋಲೋಮೀಯೋ ಡಯಾಸ್(Bartolomeu Dias):

ಪೋರ್ಚುಗೀಸ್ ರಾಜಕುಮಾರನಾದ ಹೆನ್ರಿಯ ಬೆಂಬಲದಿಂದ ಈತ ಕ್ರಿ.ಶ. 1487ರಲ್ಲಿ ಆಫ್ರಿಕಾದ ಕೇಪ್ ಆಫ್ ಗುಡ್‌ಹೋಪ್ ಭೂಶಿರವನ್ನು ಶೋಧಿಸಿದ.

2.ವಾಸ್ಕೋ-ಡ-ಗಾಮಾ(Vascoda Gama)(1498-1502):

ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ ನಾವಿಕ ವಾಸ್ಕೋ-ಡ-ಗಾಮ. ಈತ ಪೋರ್ಚುಗಲ್‌ನ ರಾಜ ಇಮ್ಯಾನುಯಲ್‌ನ ಆರ್ಥಿಕ ಸಹಾಯದೊಂದಿಗೆ ಕ್ರಿ.ಶ. 1497ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಶೋಧಿಸಲು ಲಿಸ್ಟನ್ ನಗರದಿಂದ ಹೊರಟು ಕೇಪ್ ಆಫ್ ಗುಡ್‌ಹೋಪ್ ಭೂಶಿರದ ಮೂಲಕ ಮೋಸಾಂಬಿಕಕ್ಕೆ ಬಂದು ತಲುಪಿದನು. ಅನಂತರ ಅರಬ್ ನಾವಿಕನ ಸಹಾಯದಿಂದ ಅರಬ್ಬಿಸಮುದ್ರದ ಗುಂಟ ಸಾಗಿ 1498ನೇ ಮೇ 17ರಂದು ಭಾರತದ ಮಲಬಾರ್ ಕರಾವಳಿಯ ಕಲ್ಲಿಕೋಟೆಗೆ ಬಂದು ತಲುಪಿದ. ಕಲ್ಲಿಕೋಟೆಯ ದೊರೆ ಜಾಮೋರಿನ್ ವಾಸ್ಕೋ-ಡ-ಗಾಮನನ್ನು ಆದರದಿಂದ ಬರಮಾಡಿಕೊಂಡು ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿಯನ್ನು ನೀಡಿದನು. 

3. ಕೆಬ್ರಾಲ್ Pedro Álvares Cabral (1500):

ಪೆಟ್ರೋ ಅಲ್ವಾರಿಸ್ ಕೆಬ್ರಾಲ್ ತನ್ನ 13 ನೌಕೆಗಳೊಂದಿಗೆ ಲಿಸ್ಟನ್ ಬಂದರಿನಿಂದ ಹೊರಟು ಅರಬ್ಬಿಸಮುದ್ರದ ಮೂಲಕ ಸಾಗಿ ಭಾರತಕ್ಕೆ ಬಂದು ತಲುಪಿದನು. 

4. ವಾಸ್ಕೋ-ಡ-ಗಾಮನ ಪುನರಾಗಮ:

ಕ್ರಿ.ಶ. 1502ರಲ್ಲಿ ವಾಸ್ಕೋ-ಡ-ಗಾಮ ಭಾರತಕ್ಕೆ ಎರಡನೆಯ ಬಾರಿಗೆ ಆಗಮಿಸಿದ. ಆಗ ಈತ ಕಣ್ಣಾನೂರು, ಕೊಚ್ಚಿನ್ ಹಾಗೂ ಕಲ್ಲಿಕೋಟೆಗಳಲ್ಲಿ ವ್ಯಾಪಾರಿ ಕೋಠಿಗಳನ್ನು ನಿರ್ಮಿಸಿದ.

5. ಪ್ರಾನ್ಸಿಸ್ಕೋ-ಡಿ-ಅಲ್ವೇಡಾ Francisco de Almeida (1505):

ಪ್ರಾನ್ಸಿಸ್ಕೋ-ಡಿ-ಅಡಾ ಭಾರತಕ್ಕೆ ಬಂದ ಪೋರ್ಚುಗೀಸರ ಪ್ರಥಮ ವೈಸರಾಯ್. ಈತ ಭಾರತದೊಂದಿಗೆ ಜಲಮಾರ್ಗದ ಮೂಲಕ ವ್ಯಾಪಾರ ಮಾಡುವ ಇರಾದೆಯನ್ನು ಹೊಂದಿದ್ದ. ಹೀಗಾಗಿ ಈತನ ನೀತಿಯನ್ನು ‘ನೀಲಿಜಲನೀತಿ’ ಎಂದು ಕರೆಯಲಾಗಿದೆ.

6. ಅಲ್ಪಾನೊ-ಡಿ-ಆಲ್ಬುಕರ್ಕ Afonso de Albuquerque (1509):

ಈತ ಭಾರತಕ್ಕೆ ಬಂದ ಪೋರ್ಚುಗೀಸರ ಎರಡನೆಯ ವೈಸ್‌ರಾಯ್. ಅಲ್ಬುಕರ್ಕ ಒಬ್ಬ ದಕ್ಷ ಆಡಳಿತಗಾರ. ಮುತ್ಸದ್ದಿ ಹಾಗೂ ಸಮಾಜ ಸುಧಾರಕನಾಗಿದ್ದ. ಈತ ಪೋರ್ಚುಗೀಸ್ ಸಾಮ್ರಾಜ್ಯಕ್ಕೆ ಭದ್ರವಾದ ತಳಹದಿಯನ್ನು ಹಾಕಿದ. ಹೀಗಾಗಿ ಈತನನ್ನು “ಭಾರತದಲ್ಲಿನ ಪೋರ್ಚುಗೀಸ್ ಸಾಮ್ರಾಜ್ಯದ ಸ್ಥಾಪಕ” ಎಂದು ಕರೆಯಲಾಗಿದೆ. 

ಅಲ್ಬುಕರ್ಕನ ಸಾಧನೆಗಳು:

1. ಕ್ರಿ.ಶ. 1510ರಲ್ಲಿ ಗೋವಾ ಬಂದರನ್ನು ವಿಜಾಪುರದ ಸುಲ್ತಾನನಿಂದ ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ.

2. ಅಲ್ಬುಕರ್ಕ್ ತನ್ನ 6 ವರ್ಷದ ಅಧಿಕಾರವಧಿಯಲ್ಲಿ ಗುಜರಾತಿನ ಡಿಯು-ದಮನ್, ಗೋವಾ, ಪರ್ಶಿಯನ್ ಕೊಲ್ಲಿಯ ಓರ್ಮುಜ್ ಹಾಗೂ ಮಲಕ್ಕಾವನ್ನು ಗೆದ್ದುಕೊಂಡ.

3. ಈತ ಡಿಯು, ದಮನ್, ಗೋವಾ, ಕಲ್ಲಿಕೋಟೆ, ಚೌಲ್, ಕೊಚ್ಚಿನ್, ಕಣ್ಣಾನೂರ ಹಾಗೂ ಸಾಲ್‌ಸೆಟ್‌ಗಳಲ್ಲಿ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಿದನು.

4. ಮಲಬಾರ್ ಕರಾವಳಿಯ ರಾಜರಿಂದ ಕಪ್ಪಕಾಣಿಕೆಗಳನ್ನು ವಸೂಲಿ ಮಾಡಿ ಅಲ್ಲಿ ಪೋರ್ಚುಗೀಸರ ಪ್ರಭಾವವನ್ನು ಹೆಚ್ಚಿಸಿದನು.

5. ಪೋರ್ಚುಗೀಸ್ ಆಡಳಿತದಲ್ಲಿ ಹಿಂದುಗಳಿಗೆ ಅವಕಾಶ ನೀಡುವ ಮೂಲಕ ಭಾರತೀಯರ ಪ್ರೀತಿಗೆ ಪಾತ್ರನಾದನು.

6. ಭಾರತದಲ್ಲಿ ಪೋರ್ಚುಗೀಸರ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಅಲ್ಬುಕರ್ಕ್ ಪೋರ್ಚುಗೀಸ್ ಪುರುಷರು ಭಾರತೀಯ ಸ್ತ್ರೀಯರನ್ನು ಮದುವೆಯಾಗುವಂತೆ ಪ್ರೋತ್ಸಾಹ ನೀಡಿದನು.

7. ಪೋರ್ಚುಗೀಸರ ಕೋಠಿಗಳು : ಕೊಚ್ಚಿನ್, ಕಣ್ಣಾನೂರು, ಕ್ವಿಲಾನ್, ಮಂಗಳೂರು, ಗೋವಾ, ಡಿಯು, ದಮನ್, ಬಸೈನ್, ಸಾಲೈಟ್, ಸೂರತ್, ಚಿತ್ತಗಾಂಗ್ ಹಾಗೂ ಹೂಗ್ಲಿ.

ಪೋರ್ಚುಗೀಸ್ ಸಂಪರ್ಕದಿಂದ ಉಂಟಾದ ಪರಿಣಾಮಗಳು:

1. ಪೋರ್ಚುಗೀಸರ ಆಗಮನದಿಂದ ಭಾರತದ ಬಟ್ಟೆ, ಅಕ್ಕಿ ಹಾಗೂ ಸಾಂಬಾರ ಪದಾರ್ಥಗಳಿಗೆ ಯುರೋಪಿನಲ್ಲಿ ಬಾರಿ ಬೇಡಿಕೆಯುಂಟಾಯಿತು.

2. ಪೋರ್ಚುಗೀಸರು ಅಮೇರಿಕದ ಬೆಳೆಗಳಾದ ತಂಬಾಕು, ನೆಲಗಡಲೆ, ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳ, ಆಲೂಗಡ್ಡೆ ಹಾಗೂ ಗೋಡಂಬಿಗಳನ್ನು ಭಾರತದಲ್ಲಿ ಪರಿಚಯಿಸಿದರು.

3. ಪೋರ್ಚುಗೀಸರು ಗೇರುಬೀಜ, ಟೊಮ್ಯಾಟೋ, ಅನಾನಸ್ ಹಾಗೂ ಪಪ್ಪಾಯಿಗಳನ್ನು ತಂದು ಭಾರತದಲ್ಲಿ ಬೆಳೆಯಲು ಆರಂಭಿಸಿದರು.

ಪೋರ್ಚುಗೀಸರ ಅವನತಿಗೆ ಕಾರಣಗಳು:

ಪೋರ್ಚುಗೀಸರು ಕ್ರಮೇಣ ತಮ್ಮ ವಸಾಹತುಗಳನ್ನು ಕಳೆದುಕೊಳ್ಳಲಾರಂಬಿಸಿದರು. ಹೀಗಾಗಿ ಅವರ ಅವನತಿ ಸನ್ನಿಹಿತವಾದಂತೆ ಕಂಡು ಬಂದಿತು. ಪೋರ್ಚುಗೀಸರ ಅವನತಿಗೆ ಈ ಕೆಳಗಿನ ಕಾರಣಗಳನ್ನು ಕೊಡಬಹುದು.

1. ಅಲ್ಬುಕರ್ಕನ ನಂತರ ಬಂದ ಅಧಿಕಾರಿಗಳು ಅಸಮರ್ಥರಾಗಿದ್ದರು.

2. ಪೋರ್ಚುಗೀಸ್ ಅಧಿಕಾರಿಗಳು ಭ್ರಷ್ಟರೂ ಹಾಗೂ ವಿಷಯ ಲಂಪಟರೂ ಆಗಿದ್ದರು.

3. ಪೋರ್ಚುಗೀಸರ ಧಾರ್ಮಿಕ ನೀತಿ ಅಸಹನೆಯಿಂದ ಕೂಡಿದುದಾಗಿತ್ತು.

4. ಇಂಗ್ಲೀಷರು ಹಾಗೂ ಡಚ್ಚರು ಸ್ಪ್ಯಾನಿಷ್ ಆರ್ಮುಡಾವನ್ನು ವಶಪಡಿಸಿಕೊಂಡುದುದು ಪೋರ್ಚುಗೀಸರ ಅವನತಿಗೆ ಕಾರಣವಾಯಿತು.

5. ಪೋರ್ಚುಗೀಸ್ ಅಧಿಕಾರಿಗಳು ವಿಜಯನಗರದ ಅರಸರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಕ್ರಿ.ಶ.1565 ರಲ್ಲಿ ತಾಳಿಕೋಟೆ ಕದನದಲ್ಲಿ ವಿಜಯನಗರ ಅರಸರು ಸಂಪೂರ್ಣವಾಗಿ ಪರಾಭವಗೊಂಡರು. ಹೀಗಾಗಿ ಪೋರ್ಚುಗೀಸರು ವಿಜಯನಗರವನ್ನೇ ಅವಲಂಬಿಸಿದ್ದರಿಂದ ಅವರ ವ್ಯಾಪಾರಕ್ಕೆ ಕಟ್ಟುಬಿದ್ದಿತು.

6. ಮರಾಠರು ಸಾಲೈಟ್ ಹಾಗು ಬಸೈನ್‌ಗಳನ್ನು ವಶಪಡಿಸಿಕೊಂಡು ಮಹಾರಾಷ್ಟ್ರದ ಕರಾವಳಿಯಿಂದ ಪೋರ್ಚುಗೀಸರನ್ನು ಹೊರಹಾಕಿದರು.

7. ಪೋರ್ಚುಗೀಸರ ಭೂಸೈನ್ಯ ಹಾಗೂ ನೌಕಾಸೈನ್ಯ ಪ್ರಬಲವಾಗಿರಲಿಲ್ಲ. ಇದು ಅವರ ಅವನತಿಗೆ ಮತ್ತೊಂದು ಕಾರಣವಾಯಿತು.

8. ಭಾರತಕ್ಕಿಂತ ಅತ್ಯಂತ ಹೆಚ್ಚು ಸಂಪದ್ಭರಿತವಾಗಿದ್ದ ಬ್ರೆಜಿಲ್ ಪೋರ್ಚುಗಿಸರನ್ನು ಆ ಕಡೆಗೆ ಆಕರ್ಷಿಸಿತು.

9. ಪೋರ್ಚುಗಲ್ ಚಿಕ್ಕ ರಾಷ್ಟ್ರವಾಗಿದ್ದು ಭಾರತದಂತಹ ದೊಡ್ಡ ರಾಷ್ಟ್ರವನ್ನು ಎದುರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ.

10. ಉತ್ತರದಲ್ಲಿ ಮೊಗಲ್ ಸಾಮ್ರಾಜ್ಯ ಸ್ಥಾಪನೆಯಾಗಿದ್ದರಿಂದ ಪೋರ್ಚುಗೀಸರು ತಮ್ಮ ಪ್ರಭಾವವನ್ನು ಅಲ್ಲಿ ಹೆಚ್ಚಿಸಿಕೊಳ್ಳಲು ಅಸಮರ್ಥರಾದರು.

11. ಪೋರ್ಚುಗೀಸರು ಡಿಯು, ದಾಮನ್ ಹಾಗೂ ಗೋವಾ ಹೊರತು ಪಡಿಸಿ ತಮ್ಮ ಎಲ್ಲಾ ವಸಹಾತುಗಳನ್ನು ಕಳೆದುಕೊಂಡರು.

12. ಫ್ರೆಂಚರು ಹಾಗೂ ಬ್ರಿಟಿಷರು ತಮ್ಮ ಪ್ರಬಲವಾದ ನೌಕಾಶಕ್ತಿಯಿಂದ ಪೋರ್ಚುಗೀಸರನ್ನು ಸೋಲಿಸಿ ಭಾರತದಿಂದ ಹೊರಹಾಕಿದರು.

ಶಿವಾಜಿಯ ಆಡಳಿತ ಪದ್ಧತಿ

ಶಿವಾಜಿಯ ಆಡಳಿತ ಪದ್ಧತಿ

1) ಆಡಳಿತ:

ಶಿವಾಜಿಯು ದಕ್ಷ ಆಡಳಿತಗಾರ, ರಾಜನೀತಿ ನಿಪುಣ ಹಾಗೂ ವೀರಯೋಧನಾಗಿದ್ದನು. ಅವನಲ್ಲಿ ಹೆಚ್ಚಿನ ಅಧಿಕಾರ ಕೇಂದ್ರೀಕೃತವಾಗಿದ್ದರೂ ನಿರಂಕುಶಾಧಿಕಾರಿಯಂತೆ ವರ್ತಿಸಲಿಲ್ಲ. ಪ್ರಜೆಗಳ ಕಲ್ಯಾಣದಲ್ಲಿಯೇ ತೃಪ್ತಿಯನ್ನು ಕಾಣುತ್ತಿದ್ದನು. ಆಡಳಿತದ ಅನುಕೂಲಕ್ಕಾಗಿ ಕೇಂದ್ರದಲ್ಲಿ 18 ಇಲಾಖೆಗಳನ್ನು ರಚಿಸಿದ್ದನು. ಈ ಆಡಳಿತ ವಿಭಾಗಗಳನ್ನು ನೋಡಿಕೊಳ್ಳಲು ಎಂಟು ಜನ ಸಚಿವ (ಅಷ್ಟಪ್ರಧಾನ) ರನ್ನು ನೇಮಿಸಿದನು. ಮರಾಠಿ ಇವರ ಆಡಳಿತ ಭಾಷೆಯಾಗಿತ್ತು.

ಅಷ್ಟಪ್ರಧಾನರು:

ಶಿವಾಜಿಗೆ ಆಡಳಿತದಲ್ಲಿ ಸಹಾಯ ನೀಡಲು ಅಷ್ಟಪ್ರಧಾನರು ಎಂಬ ಮಂತ್ರಿಮಂಡಳವಿತ್ತು. ಇವರು ಶಿವಾಜಿಯಿಂದ ನೇಮಕಗೊಳ್ಳುತ್ತಿದ್ದರು.

1. ಪೇಳ್ವೆ (ಪ್ರಧಾನಮಂತ್ರಿ) – ಕೇಂದ್ರ ಸರ್ಕಾರದ ಆಡಳಿತ ಇಲಾಖೆಗಳ ಮೇಲ್ವಿಚಾರಕ.

2. ಅಮಾತ್ಯ (ಹಣಕಾಸು ಸಚಿವ) – ಸಾರ್ವಜನಿಕ ಲೆಕ್ಕಪತ್ರಗಳ ತಖ್ಯೆಯನ್ನು ಇಡುವವ.

3. ಮಂತ್ರಿ (ಕಾರ್ಯದರ್ಶಿ)- ರಾಜನ ದೈನಂದಿನ ವ್ಯವಹಾರಗಳನ್ನು ದಾಖಲು ಮಾಡುವವ.

4. ಸಚಿವ (ಗೃಹಮಂತ್ರಿ)- ಅರಸನ ಪತ್ರವ್ಯವಹಾರಗಳನ್ನು ನೋಡಿಕೊಳ್ಳುವವ.

5. ಸಮಂತ (ವಿದೇಶಾಂಗ ಮಂತ್ರಿ)- ಯುದ್ಧ, ಶಾಂತಿ, ಒಪ್ಪಂದ ಹಾಗೂ ವಿದೇಶಿವ್ಯವಹಾರ ನೋಡಿಕೊಳ್ಳುವುದು.

6. ಸೇನಾಪತಿ (ದಂಡನಾಯಕ)- ಸೈನ್ಯ ಸಂಘಟನೆ, ಯುದ್ಧತಂತ್ರ, ಸೈನಿಕರ ಸಂಬಳ ಬಟವಾಡೆ ಮಾಡುವವ

7. ಪಂಡಿತ್‌ ರಾವ್ (ಪುರೋಹಿತ)- ಧಾರ್ಮಿಕ ವಿಷಯಗಳ ಬಗ್ಗೆ ಅರಸನಿಗೆ ಮಾಹಿತಿ ನೀಡುವವ.

8. ನ್ಯಾಯಾದೀಶ (ನ್ಯಾಯಾಡಳಿತವರಿಷ್ಠ)- ರಾಜ್ಯದ ನ್ಯಾಯಾಡಳಿತದ ಬಗ್ಗೆ ಕ್ರಮ ಜರುಗಿಸುವವರು. 

2) ಪ್ರಾಂತ ಸರ್ಕಾರ:

ಆಡಳಿತ ಅನುಕೂಲಕ್ಕಾಗಿ ಶಿವಾಜಿ ತನ್ನ ಸಾಮ್ರಾಜ್ಯವನ್ನು ಹಲವಾರು ಪ್ರಾಂತಗಳನ್ನಾಗಿ ವಿಂಗಡಿಸಿದನು. ಪ್ರತಿಯೊಂದು ಪ್ರಾಂತಗಳಿಗೆ “ಸರ್‌ದೇಶ ಮುಖಿ” ಎಂಬ ಅಧಿಕಾರಿಯನ್ನು ನೇಮಿಸಿದ್ದನು. ಪ್ರಾಂತಗಳನ್ನು ಜಿಲ್ಲೆಗಳನ್ನಾಗಿ, ಜಿಲ್ಲೆಗಳನ್ನು ತರಫ್‌ಗಳನ್ನಾಗಿ, ತರಘಗಳನ್ನು ಗ್ರಾಮಗಳನ್ನಾಗಿ ವಿಂಗಡಿಸಿದನು. ಜಿಲ್ಲೆಗಳನ್ನು ದೇಶಾಧಿಕಾರಿ, ತರಪ್‌ಗಳನ್ನು ಅಮಲ್ದಾರರು, ಗ್ರಾಮಗಳನ್ನು ಪಟೇಲರು ನೋಡಿಕೊಳ್ಳುತ್ತಿದ್ದರು.

3) ಕಂದಾಯ ಪದ್ಧತಿ:

ಶಿವಾಜಿ ಭೂಮಿಯನ್ನು ಅಳತೆ ಮಾಡಿಸಿ ಫಲವತ್ತತೆಗೆ ಅನುಗುಣವಾಗಿ ಭೂಕಂದಾಯವನ್ನು ನಿಗದಿಗೊಳಿಸಿದನು. ರಾಜ್ಯದ ಒಟ್ಟು ಉತ್ಪನ್ನದ ಶೇ. 30 ಭಾಗದಷ್ಟು ಭೂಕಂದಾಯವನ್ನು ವಸೂಲಿ ಮಾಡುತ್ತಿದ್ದ. ರೈತರು ನೇರವಾಗಿ ಸರ್ಕಾರಕ್ಕೆ ಕಂದಾಯ ಸಲ್ಲಿಸಬೇಕಾಗುತ್ತಿದ್ದರಿಂದ ಮಧ್ಯವರ್ತಿಗಳ ಹಾವಳಿ ಇರಲಿಲ್ಲ. ಕಂದಾಯ ವಸೂಲಿಗಾಗಿ ಶಿವಾಜಿಯು ಸುಬೇದಾರ, ಕಾರಕೂನ ಹಾಗೂ ಕೋಶಾಧಿಕಾರಿಗಳನ್ನು ನೇಮಿಸಿದ್ದನು. ಕಂದಾಯದ ಗುತ್ತಿಗೆ ಕ್ರಮವನ್ನು ತಗೆದು ಹಾಕಲಾಯಿತು. ನಂತರ ಕಂದಾಯದ ಪ್ರಮಾಣವನ್ನು 33 ರಿಂದ 40ಕ್ಕೆ ಏರಿಸಲಾಯಿತು. ರೈತರು ಕಂದಾಯವನ್ನು ಹಣ ಅಥವಾ ದಾನ್ಯದ ರೂಪದಲ್ಲಿ ನೀಡಬಹುದಾಗಿತ್ತು. ಕಂದಾಯ ವಸೂಲಿಯಲ್ಲಿನ ಭ್ರಷ್ಟಾಚಾರವನ್ನು ತಡೆಯಲು ಶಿವಾಜಿ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಗಳನ್ನು ಕೈಗೊಂಡನು. ರೈತರಿಗೆ ಬೀಜ, ರಸಗೊಬ್ಬರ ಹಾಗೂ ಕೃಷಿ ಸಲಕರಣೆಗಳನ್ನು ಕೊಳ್ಳಲು ಶಿವಾಜಿ ಸಾಲನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದನು. ಅವರು ಸುಲಭ ಕಂತುಗಳಲ್ಲಿ ಸಾಲ ಮರುಪಾವತಿ ಮಾಡಬೇಕಾಗುತ್ತಿತ್ತು.

4) ಚೌತ್ ಮತ್ತು ಸರದೇಶಮುಖಿ:

ಶಿವಾಜಿಯ ರಾಜ್ಯ ಬೆಟ್ಟಗುಡ್ಡಗಳಿಂದ ಕೂಡಿದ್ದು ಹೆಚ್ಚು ಭೂಕಂದಾಯ ಸಂಗ್ರಹವಾಗುತ್ತಿರಲಿಲ್ಲ. ಈ ಕಾರಣದಿಂದ ರಾಜ್ಯದ ಬೊಕ್ಕಸವನ್ನು ಭರ್ತಿಮಾಡಲು. ಶಿವಾಜಿ ಅಕ್ಕ ಪಕ್ಕದ ರಾಜ್ಯಗಳ ಶತೃಗಳಿಂದ ಚೌತ್ ಮತ್ತು ಸರದೇಶಮುಖಿ ಎಂಬ ಎರಡು ತೆರಿಗೆಗಳನ್ನು ವಸೂಲಿ ಮಾಡುತ್ತಿದ್ದನು.

ಚೌತ್:

ಮರಾಠರ ದಾಳಿಯಿಂದ ತಪ್ಪಿಸಿಕೊಳ್ಳಲು ನೆರೆಹೊರೆಯ ರಾಜ್ಯಗಳು ಶಿವಾಜಿಗೆ ತಮ್ಮ ರಾಜ್ಯದ ಆದಾಯದ 1/4 ಭಾಗದಷ್ಟು ತೆರಿಗೆಯನ್ನು ಸಲ್ಲಿಸಬೇಕಿತ್ತು.

ಸರ್‌ದೇಶ ಮುಖಿ:

ನೆರೆಹೊರೆಯ ರಾಜ್ಯಗಳು ಮಿಲಿಟರಿ ತೆರಿಗೆಯಾಗಿ ಶಿವಾಜಿಗೆ 1/10 ಭಾಗದಷ್ಟು ತೆರಿಗೆಯನ್ನು ಸಲ್ಲಿಸುವುದು.

5) ಸೇನಾಡಳಿತ:

ಶಿವಾಜಿಯ ಒಬ್ಬ ಮಹಾ ಸೇನಾಧಿಕಾರಿಯಾಗಿದ್ದರಿಂದ ತನ್ನ ಸೇನೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಸೈನಿಕರನ್ನೇ ನೇಮಕಮಾಡಿಕೊಂಡಿದ್ದನು. ಸೈನಿಕರಿಗೆ ಜಹಗೀರು ಬದಲಾಗಿ ವೇತನವನ್ನು ನೀಡುವ ಪದ್ಧತಿಯನ್ನು ಜಾರಿಗೆ ತಂದನು. ಹೀಗಾಗಿ ಶಿವಾಜಿಯ ಸೈನ್ಯದಲ್ಲಿ ದಕ್ಷತೆ ಹೆಚ್ಚಿತ್ತೆಂದು ಹೇಳಬಹುದು. ಶಿವಾಜಿಯ ಸೈನ್ಯವು ಕಾಲ್ಗಳ, ಅಶ್ವಪಡೆ, ಗಜದಳ ಹಾಗೂ ಒಂಟೆಪಡೆಗಳನ್ನು ಒಳಗೊಂಡಿತ್ತು. ಇವನ ಸೈನ್ಯದಲ್ಲಿ 10000 ಕಾಲ್ದಳ, 30000 ಅಶ್ವಪಡೆ, 300 ಒಂಟೆಪಡೆ ಹಾಗೂ 1260 ಗಜಪಡೆ ಇತ್ತೆಂದು ಹೇಳಲಾಗಿದೆ.

6) ನ್ಯಾಯಾಡಳಿತ:

ಶಿವಾಜಿಯೇ ರಾಜ್ಯದ ಸರ್ವೋಚ್ಛ ನ್ಯಾಯಾದೀಶನಾಗಿದ್ದನು. ಈತನ ತೀರ್ಪೆ ಅಂತಿಮವಾಗಿತ್ತು. ಇವನು ಸಿವಿಲ್ ಮತ್ತು ಕ್ರಿಮಿನಲ್ ಕಟ್ಟೆಗಳನ್ನು ಬಗೆಹರಿಸುತ್ತಿದ್ದನು. ಪ್ರಾಂತಗಳಲ್ಲಿ ಗವರ್ನ‌್ರಗಳು ನ್ಯಾಯಾದೀಶರಾಗಿದ್ದರು. ಗ್ರಾಮಗಳ ವ್ಯಾಜ್ಯಗಳನ್ನು ಪಟೇಲರು ಬಗೆಹರಿಸುತ್ತಿದ್ದರು.

ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಧಾರ್ಮಿಕ ನೀತಿ:

ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್‌ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು. ಜೊತೆಗೆ ಹಿಂದುಗಳೇ ಅಧಿಕವಾಗಿದ್ದ ಮೊಗಲ್ ಸಾಮ್ರಾಜ್ಯದಲ್ಲಿ ಅವರನ್ನು ತನ್ನೆಡೆಗೆ ಒಲಿಸಿಕೊಳ್ಳಲು ಉತ್ಸುಕನಾಗಿದ್ದನು. ಅಕ್ಬರ್‌ ಮಹಾಶಯ ಶೇಕ್‌ ಸಲೀಂ ಚಿಸ್ತಿಯ ಪರಮ ಭಕ್ತನಾಗಿದ್ದರಿಂದ ಫತೇಪುರ ಸಿಕ್ರಿಯಲ್ಲಿ ‘ಇಬಾದತ್‌ಖಾನ’ ಎಂಬ ಭವ್ಯ ಕಟ್ಟಡವನ್ನು ನಿರ್ಮಿಸಿದನು. ಪ್ರತಿ ಗುರುವಾರ ಇಸ್ಲಾಂ, ಹಿಂದೂ, ಜೈನ, ಕ್ರೈಸ್ತ ಹಾಗೂ ಸಿಖ್ ಧರ್ಮಗುರುಗಳನ್ನು ಅಲ್ಲಿಗೆ ಆಹ್ವಾನಿಸಿ ಧಾರ್ಮಿಕ ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದನು. ಕ್ರಿ.ಶ. 1579 ರಲ್ಲಿ ಅಕ್ಬರನು ಸುನಿಶ್ಚಯ ಶಾಸನವನ್ನು ಹೊರಡಿಸಿ ಧಾರ್ಮಿಕ ವಿಷಯಗಳಲ್ಲಿ ಧಾರ್ಮಿಕ ಪಂಡಿತರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಅಂತಿಮ ನಿರ್ಣಯವನ್ನು ಕೊಡುವ ಅಧಿಕಾರವನ್ನು ಬಾದಶಹ ಹೊಂದಿದ್ದನು.

ದಿನ್-ಇ-ಇಲಾಹಿ :

ಅಕ್ಷರನು ಸಾ.ಶ. 1582 ರಲ್ಲಿ ದಿನ್-ಇ-ಇಲಾಹಿ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು. ಈ ಹೊಸ ಧರ್ಮವು ಈ ಕೆಳಗಿನ ಪ್ರಮುಖ ತತ್ವಗಳನ್ನು ಒಳಗೊಂಡಿತ್ತು.

1) ಇದು ಸುಲ್-ಎ-ಕುಲ್ (ಸರ್ವರಿಗೂ ಶಾಂತಿ) ಎಂಬ ತತ್ವವನ್ನು ಒಳಗೊಂಡಿತ್ತು.

2) ಸ್ವಾತಂತ್ರ್ಯ ಮತ್ತು ಪರೋಪಕಾರ.

3) ಲೌಕಿಕ ವಿಚಾರಗಳಿಂದ ದೂರವಾಗಿರುವುದು.

4) ಏಕೀಶ್ವರ ತತ್ವಗಳ ತಳಹದಿಯನ್ನು ಹೊಂದಿತ್ತು.

5) ಯಾರೊಬ್ಬರ ಮನಸ್ಸನ್ನು ನೋಯಿಸದೆ ಮೃದುವಾಗಿ, ಹಿತವಾಗಿ ಸಭ್ಯತೆಯಿಂದ ನುಡಿಯುವುದು.

6) ದೇವರಿಗೆ ಆತ್ಮವನ್ನು ಅರ್ಪಿಸುವುದು. ಅಬುಲ್‌ ಫಜಲ್ ದಿನ್-ಇಲಾಹಿಯ ಪುರೋಹಿತನಾಗಿದ್ದನು. ಯಾರೇ ಈ ಧರ್ಮವನ್ನು ಸ್ವೀಕರಿಸಲು ಮುಂದೆ ಬಂದರೆ ಅಬುಲ್ ಫಜಲ್ ಆತನನ್ನು ಚಕ್ರವರ್ತಿಗೆ ಪರಿಚಯಿಸುತ್ತಿದ್ದನು. ಆಗ ಆ ವ್ಯಕ್ತಿ ತನ್ನ ರುಮಾಲನ್ನು ಕೈಯಲ್ಲಿರಿಸಿಕೊಂಡು ಚಕ್ರವರ್ತಿಯ ಪಾದಗಳಿಗೆ ನಮಸ್ಕರಿಸಬೇಕಿತ್ತು. ಚಕ್ರವರ್ತಿ ಆತನನ್ನು ಎಬ್ಬಿಸಿ ರುಮಾಲನ್ನು ಆತನ ತಲೆಯ ಮೇಲೆ ಇರಿಸುತ್ತಿದ್ದನು. ನಂತರ ‘ಶಸ್ತ್ರ’ ಎಂಬ ಸಂಕೇತವನ್ನು ಕೊಡುತ್ತಿದ್ದನು. ಆ ಸಂಕೇತದ ಮೇಲೆ ‘ಅಲ್ಲಾಹೂ ಅಕ್ಬರ್’ ಎಂದು ಬರೆಯಲಾಗಿತ್ತು. ಆದರೆ ದಿನ್-ಇಲಾಹಿಯನ್ನು ಬೆರಳೆಣಿಕೆಯಷ್ಟು ಜನ ಬಿಟ್ಟರೆ ಬೇರೆ ಯಾರೂ ಸ್ವೀಕರಿಸಲಿಲ್ಲ. ಅಕ್ಬರನ ಮರಣದ ನಂತರ ಅವನ ಹಿಂದೆಯೇ ಅದು ನಿರ್ನಾಮವಾಯಿತು.

ರಜಪೂತ ನೀತಿ:

ಅಕ್ಬರನ ರಜಪೂತ ಧೋರಣೆಯು ರಾಜಕೀಯ ಹಿತಾಸಕ್ತಿ, ನ್ಯಾಯ ಹಾಗೂ ಸಮಾನತೆಯ ತತ್ವಗಳನ್ನು ಆಧರಿಸಿತ್ತು. ಹೊರನಾಡಿನವರಾದ ಮುಸಲ್ಮಾನ ಅಧಿಕಾರಿಗಳು ಹಾಗೂ ಸರದಾರರನ್ನು ಸಂಪೂರ್ಣವಾಗಿ ನಂಬುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅಕ್ಷರನಿಗೆ ತನ್ನ ಆಡಳಿತದ ಮೊದಲ ವರ್ಷದಲ್ಲಿಯೇ ಮನವರಿಕೆಯಾಯಿತು. ಮುಸಲ್ಮಾನರು ಸ್ವಹಿತಕ್ಕಾಗಿ ದುಡಿಯುವರೆಂಬ ಸತ್ಯ ಅವನಿಗೆ ಆಗಲೇ ಮನದಟ್ಟಾಯಿತು. ಈ ಕಾರಣದಿಂದಾಗಿ ಅಕ್ಬರನು ಮೊಗಲ್ ಸಾಮ್ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಅದರಲ್ಲೂ ರಜಪೂತರನ್ನು ಅತ್ಯಂತ ವಿಶ್ವಾಸಪೂರ್ವಕವಾಗಿ ನಡೆಸಿಕೊಂಡುದುದನ್ನು ಭಾರತೀಯ ಇತಿಹಾಸಕಾರರು ಮುಕ್ತಕಂಠದಿಂದ ಹೊಗಳಿದ್ದಾರೆ. ಈ ಹಿಂದೆ ಬಾಬರನಾಗಲಿ, ಹುಮಾಯೂನನಾಗಲೀ ರಜಪೂತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಲಿಲ್ಲ. ಸರ್ಕಾರದ ಉನ್ನತ ಹುದ್ದೆಗೆ ಅವರನ್ನು ನೇಮಕವನ್ನು ಮಾಡಿರಲಿಲ್ಲ. ಆದರೆ ಅಕ್ಬರ್‌ ಮಾತ್ರ ರಜಪೂತರಿಗೆ ರಾಜಕೀಯದಲ್ಲಿ ಅಗ್ರಸ್ಥಾನವನ್ನು ನೀಡಿದನು. ಇದರಿಂದಾಗಿ ಅಕ್ಬರ್‌ ಭಾರತೀಯ ಇತಿಹಾಸದಲ್ಲಿ ವಿಶಿಷ್ಠವಾದ ಸ್ಥಾನವನ್ನು ಪಡೆದಿದ್ದಾನೆ.

1) ಅಕ್ಬರನು ತನ್ನ ಸೈನಿಕ ಶಿಬಿರ ಹಾಗೂ ದರ್ಬಾರಿನಲ್ಲಿಯೇ ದಂಗೆಕೋರರನ್ನು ಎದುರಿಸಬೇಕಾಗಿದ್ದ ಕಾರಣದಿಂದ ಅವನು ರಜಪೂತರ ಬಗ್ಗೆ ಸೌಮ್ಯ ನೀತಿಯನ್ನು ಅನುಸರಿಸಿದನು.

2) ಅಕ್ಬರನ ಪ್ರಧಾನಮಂತ್ರಿಯಾಗಿದ್ದ ಶಹ ಮನ್ಸೂರ್ ಅಕ್ಬರನ ಮಲತಮ್ಮನಾದ ಮಹಮ್ಮದ್ ಹಕೀಂನಿಗೆ ಬೆಂಬಲ ನೀಡಿ ದ್ರೋಹ ಬಗೆದುದು ಅಕ್ಬರನು ರಜಪೂತರ ಬಗ್ಗೆ ಕಾಳಜಿ ವಹಿಸಲು ಕಾರಣವಾಯಿತು.

3 ) ಬೈರಾಂಖಾನನು ಅಕ್ಬರನ ವಿರುದ್ಧ ದಂಗೆ ಎದ್ದುದು ಹಾಗೂ ಮಹಮ್ ಅನಗಾ ಸ್ವಾರ್ಥಿಯಾದುದು ಅಕ್ಬರನು ರಜಪೂತರ ಬಗ್ಗೆ ನಿಷ್ಟೆ ತೋರಲು ಕಾರಣವಾಯಿತು.

ಮಹಾತ್ಮ ಕಬೀರ್ ಮತ್ತು ಗುರುನಾನಕರು

ಮಹಾತ್ಮ ಕಬೀರ್ ಮತ್ತು ಗುರುನಾನಕರು

ಪೀಠಿಕೆ

ಕಬೀರ್ ಮತ್ತು ಗುರುನಾನಕ್ ಇಬ್ಬರೂ ಮಧ್ಯಕಾಲೀನ ಭಾರತದ ಮಹಾನ್ ಸಂತರು ಮತ್ತು ಭಕ್ತಿ ಚಳವಳಿಯ ಪ್ರಮುಖ ಮುಖಂಡರಾಗಿದ್ದರು.ಕಬೀರ್ ಅವರ ಭಜನೆಗಳು ಸರಳ ಭಾಷೆಯಲ್ಲಿ ದೇವರ ಸತ್ಯವನ್ನು ವಿವರಿಸಿ, ಜನಸಾಮಾನ್ಯರಲ್ಲಿ ಭಕ್ತಿ ಮತ್ತು ನೈತಿಕತೆ ಬೆಳೆಸಿದವು. ಅವರು ಜಾತಿ-ಮತ ಬೇಧಗಳನ್ನು ವಿರೋಧಿಸಿ, ಮಾನವೀಯತೆ ಮತ್ತು ಸಮಾನತೆಯ ಸಂದೇಶವನ್ನು ಸಾರಿದರು.ಅವರ ದೋಹಗಳು (ಸಣ್ಣ ಕವಿತೆಗಳು) ಜನರಲ್ಲಿ ನೈತಿಕ ಜಾಗೃತಿ ಮೂಡಿಸಿದವು.

ಗುರು ನಾನಕ್ ಸಿಖ್ ಧರ್ಮದ ಸ್ಥಾಪಕರಾಗಿ, “ಏಕ ದೇವ, ಸರ್ವರೂ ಸಮಾನ” ಎಂಬ ತತ್ವವನ್ನು ಪ್ರಸಾರ ಮಾಡಿದರು.ಅವರು ಅಹಂಕಾರ, ದ್ವೇಷ ಮತ್ತು ಮೂಢನಂಬಿಕೆಗಳನ್ನು ತೊರೆದು ಸೇವೆ, ಪ್ರೀತಿ ಮತ್ತು ಶ್ರಮದ ಮೂಲಕ ಬದುಕುವುದನ್ನು ಬೋಧಿಸಿದರು.ಗುರುನಾನಕ್ “ಸಂಗತ” ಮತ್ತು “ಲಂಗರ್” ಪದ್ಧತಿಗಳನ್ನು ಆರಂಭಿಸಿ, ಸಮಾಜದಲ್ಲಿ ಸಮಾನತೆ ಮತ್ತು ಸಹಭೋಜನದ ಪರಂಪರೆಯನ್ನು ರೂಪಿಸಿದರು. ಇವರಿಬ್ಬರೂ ಧಾರ್ಮಿಕ ಸಹಿಷ್ಣುತೆ, ಶಾಂತಿ ಮತ್ತು ಸಾಮಾಜಿಕ ಸಮಾನತೆಗೆ ನಿಲ್ಲುವ ಮಹತ್ವದ ಸಂತರಾಗಿದ್ದಾರೆ ಹಾಗೂ ಸಮಾಜ ಮಹಾನ್‌ ಸುಧಾರಕರಾಗಿದ್ದಾರೆ.

ಮಹಾತ್ಮ ಕಬೀರ್

ಮಹಾತ್ಮ ಕಬೀರರು ಭಕ್ತಿ ಚಳುವಳಿಯ ಅಗ್ರಗಣ್ಯ ನಾಯಕರು. ಇವರು ಸಾ. ಶ. 1398ರಲ್ಲಿ ಒಬ್ಬ ಬ್ರಾಹ್ಮಣವಿಧವೆಗೆ ಜನಿಸಿದಾಗ ಅವಳು ಸಮಾಜಕ್ಕೆ ಹೆದರಿ ಆ ಮಗುವನ್ನು ಲಹರ್‌ತಾಲಾ ಎಂಬ ಕೊಳದ ಬಳಿ ಬಿಟ್ಟುಹೋದಳು. ಆಗ ಬನಾರಸ್ಸಿನ ನೀರು ಮತ್ತು ನೀಮಾ ಎಂಬ ಮುಸ್ಲಿಂ ದಂಪತಿಗಳಿಗೆ ಆ ಮಗು ದೊರಕಿತು. ಅವರು ಆ ಮಗುವನ್ನು ಪ್ರೀತಿಯಿಂದ ಸಾಕಿ ಬೆಳಸಿದರು. ಕಬೀರರು ಸೂಫಿ ಸಂತ ಪೀರ್ ರಾಕಿಯ ಪ್ರಭಾವಕ್ಕೆ ಒಳಗಾದರು. ನಂತರ ರಮಾನಂದರ ಶಿಷ್ಯರಾಗಿ ಸನ್ಯಾಸಿ ದೀಕ್ಷೆ ಪಡೆದರು.

ಬೋಧನೆಗಳು:

ಕಬೀರರು ಮುಕ್ತಿಗೆ ಜ್ಞಾನಮಾರ್ಗ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಇವರು ಏಕೀಶ್ವರ ವಾದವನ್ನು ಪ್ರತಿಪಾದಿಸಿದರು. ದೇವರು ಒಬ್ಬನೆ ಅವನು ನಿರ್ಗುಣ, ನಿರಾಕಾರ, ಸರ್ವವ್ಯಾಪಿ, ಸರ್ವಶಕ್ತ ಹಾಗೂ ಸರ್ವಜೀವಿಗಳ ರಕ್ಷಕನಾಗಿದ್ದಾನೆ ಎಂದು ಬೋಧಿಸಿದರು. ಇವರು ಜಾತಿಪದ್ಧತಿ, ಸಾಮಾಜಿಕ ಅಸಮಾನತೆ, ಮೂರ್ತಿಪೂಜೆ, ಬಾಲ್ಯವಿವಾಹ, ಸತಿಸಹಗಮನ, ಮೂಢನಂಬಿಕೆ ಹಾಗೂ ಪರ್ದಾಪದ್ಧತಿಯನ್ನು ಖಂಡಿಸಿದರು. ದೇಹದಂಡನೆ, ಉಪವಾಸ, ಅರ್ಥವಿಲ್ಲದ ಆಚರಣೆ, ತೀರ್ಥಯಾತ್ರೆ ಹಾಗೂ ಯಜ್ಞಯಾಗಾದಿಗಳಿಂದ ದೇವರು ಒಲಿಯಲಾರನು ಎಂದು ಎಚ್ಚರಿಸಿದರು. ಪರಿಶುದ್ಧ ಭಕ್ತಿಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು. ಮೂರ್ತಿ ಪೂಜೆಯನ್ನು ಖಂಡಿಸುತ್ತಾ “ಕಲ್ಲನ್ನು ಪೂಜಿಸಿ ಭಗವಂತನನ್ನು ಪಡೆಯುವದಾದರೆ ನಾನು ಬೆಟ್ಟವನ್ನೇ ಪೂಜಿಸುವೆ. ಪವಿತ್ರ ನದಿಗಳ ನೀರಿನ ಸ್ನಾನದಿಂದ ಮೋಕ್ಷ ಪಡೆಯುವುದಾದರೆ ಆ ನದಿಗಳಲ್ಲಿ ವಾಸವಾಗಿರುವ ಮೀನು ಕಪ್ಪೆಗಳೇಕೆ ಮುಕ್ತಿ ಹೊಂದಿಲ್ಲ?” ಎಂದು ಮೂದಲಿಸಿದರು.ಇಡೀ ವಿಶ್ವಕ್ಕೆ ದೇವರು ಒಬ್ಬನೆ. ಹಿಂದುಗಳು ದೇವರನ್ನು ಈಶ್ವರ ಎಂದು ಕರೆದರೆ ಮುಸಲ್ಮಾನರು ಅಲ್ಲಾ ಎಂದು ಕರೆಯುವರು. ಹಿಂದುಗಳಲ್ಲಿ ರಾಮನಾದರೆ ಮುಸಲ್ಮಾನರಲ್ಲಿ ರಹೀಮ. ಹಿಂದುಗಳು ಕೃಷ್ಣ ಎಂದು ಪೂಜಿಸಿದರೆ ಮುಸಲ್ಮಾನರು ಕರೀಮನೆಂದು ಪೂಜಿಸುವರು. ಹೀಗಾಗಿ ನಾನು ರಾಮರಹಿಮರ ಮಗನೆಂದು ಸಾರಿದರು. ಕಬೀರರು ತಮ್ಮ ಬೋಧನೆಗಳನ್ನು ಸರಳ ಭಾಷೆಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬೋಧಿಸಿದರು. ಇವರ ತತ್ವಗಳನ್ನು ದೋಹಾಗಳಲ್ಲಿ ಕಾಣಬಹುದಾಗಿದೆ.ಕಬೀರರ ಅನುಯಾಯಿಗಳಿಗೆ ಕಬೀರಪಂಥಿಗಳೆಂದು ಹೆಸರು.

ಗುರುನಾನಕರು

ಸಿಖ್ ಧರ್ಮದ ಸ್ಥಾಪಕರಾದ ಗುರುನಾನಕರು ಬಾಲ್ಯದಲ್ಲಿ ಐಹಿಕ ಜೀವನದಲ್ಲಿ ಆಸಕ್ತಿ ಬೆಳಸಿಕೊಳ್ಳದೆ ಏಕಾಂಗಿಯಾಗಿ ದೇವರ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಇದರಿಂದ ಚಿಂತಿತರಾದ ಇವರ ತಂದೆ ನಾನಕರನ್ನು ಲೌಕಿಕದ ಕಡೆಗೆ ತರಲು ಸಾ.ಶ. 1488 ರಲ್ಲಿ ಬಟಾಲಾದ ನಿವಾಸಿ ಮೂಲಚಂದನ ಮಗಳಾದ ಸುಲಖನಿ ಎಂಬುವಳೊಂದಿಗೆ ವಿವಾಹ ಮಾಡಿದರು. ಕೆಲ ವರ್ಷಗಳಲ್ಲಿ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಜನಿಸಿದರು. ಆದರೂ ನಾನಕರು ದೇವರ ಧ್ಯಾನವನ್ನು ಮಾತ್ರ ಬಿಡಲೇ ಇಲ್ಲ.

ಜ್ಞಾನೋದಯ:

ಒಂದು ದಿನ ಗುರುನಾನಕರು ಸುಲ್ತಾನಪುರದ ಸಣ್ಣ ನೀರಿನ ಕೊಳದಲ್ಲಿ ಸ್ನಾನಮಾಡುತ್ತಿರುವಾಗ ದೇವರ ದರ್ಶನವಾಯಿತು. ಈ ದಿವ್ಯ ದರ್ಶನದಿಂದ ನಾನಕರಿಗೆ ಜ್ಞಾನೋದಯವಾಯಿತು ಎಂದು ತಿಳಿದು ಬರುತ್ತದೆ. ಜ್ಞಾನೋದಯದ ನಂತರ ನಾನಕರು ಸಂಸಾರ ಬಂಧನದಿಂದ ಬಿಡುಗಡೆ ಹೊಂದಿ ತಾನು ಕಂಡುಕೊಂಡ ಸತ್ಯದ ಸಾರವನ್ನು ಜಗತ್ತಿಗೆ ತಿಳಿಸಲು ಊರೂರು ಸುತ್ತಿದರು. ಅನೇಕ ಪಂಡಿತ ಪಾಮರರೊಂದಿಗೆ ಚರ್ಚೆಗಿಳಿದರು. ಮೆಕ್ಕಾ ಮದಿನಾಗಳಿಗೂ ಭೇಟಿನೀಡಿದರು.ನಂತರ ಚೀನಾ, ಟಿಬೇಟ್, ಶ್ರೀಲಂಕಾ, ಹರಿದ್ವಾರ, ಕಾಶಿ, ಅಸ್ಸಾಂ, ದೆಹಲಿ, ಕುರುಕ್ಷೇತ್ರ ಹಾಗೂ ಒರಿಸ್ಸಾಗಳನ್ನು ಸಂದರ್ಶಿಸಿದರು. ನಂತರ ರಾವಿನದಿಯ ದಂಡೆಯ ಮೇಲಿದ್ದ ಕರ್ತಾರಪುರ ಎಂಬ ನಗರದಲ್ಲಿ ಖಾಯಂ ಆಗಿ ನೆಲಸಿ ಸಾಕಷ್ಟು ಅನುಯಾಯಿಗಳನ್ನು ಪಡೆದರು. ತಮ್ಮ ಜೀವಿತದ ಕೊನೆಯ ಕಾಲದಲ್ಲಿ ನಾನಕರು ಬಾಯಿಲಹಾನಾ ಎಂಬ ಶಿಷ್ಯನಿಗೆ ಉತ್ತರಾಧಿಕಾರಿ ಪಟ್ಟವನ್ನು ಕಟ್ಟಿ ಸಾ.ಶ.1530 ರಲ್ಲಿ ಕರ್ತಾರಪುರದಲ್ಲಿ ನಿಧನರಾದರು.

ಬೋಧನೆಗಳು:

ಗುರುನಾನಕರು ಏಕೀಶ್ವರ ತತ್ವವನ್ನು ಪ್ರತಿಪಾದಿಸಿದರು. ದೇವರು ಒಬ್ಬನೆ ಅವನು ನಿರ್ಗುಣ, ನಿರಾಕಾರ, ಸರ್ವವ್ಯಾಪಿ, ನಿರ್ವಿಕಾರ, ನಿರ್ಮಲಚಿತ್ತ ಹಾಗೂ ಲೋಕೋದ್ಧಾರಕನಾಗಿದ್ದಾನೆಂದರು. ದೇವರ ಸ್ಮರಣೆಯಿಂದ ಮುಕ್ತಿ ಸಾಧ್ಯ ಎಂದು ಸಾರಿದರು. ನಾನಕರು ಜಾತಿಪದ್ಧತಿ, ಮೂರ್ತಿಪೂಜೆ, ಪರ್ದಾಪದ್ಧತಿ ಹಾಗೂ ಬಾಲ್ಯವಿವಾಹವನ್ನು ಖಂಡಿಸಿದರು. ಇವರು ಪುನರ್‌ಜನ್ಮದಲ್ಲಿ ನಂಬಿಕೆ ಇಟ್ಟಿದ್ದರು. ಹಿಂದೂ ಮುಸಲ್ಮಾನರ ನಡುವೆ ಐಕ್ಯತೆಯನ್ನು ಸಾಧಿಸಿದರು. ಪ್ರತಿಯೊಬ್ಬರೂ ಸ್ವಾರ್ಥ, ಮೋಸ, ವಂಚನೆ, ಕಪಟ ಹಾಗೂ ಅಸತ್ಯವನ್ನು ತ್ಯಜಿಸುವಂತೆ ಕರೆನೀಡಿದರು. ಗುರುನಾನಕರ ಬೋಧನೆಗಳನ್ನು ಸಿಖ್‌ರ ಪವಿತ್ರ ಗ್ರಂಥವಾದ ‘ಗುರುಗ್ರಂಥ ಸಾಹಿಬ್’ದಲ್ಲಿ ನೋಡಬಹುದು. ಇದು ಗುರುಮುಖ ಲಿಪಿಯಲ್ಲಿದೆ. ‘ಗುರುದ್ವಾರ’ ಸಿಖ್ರ ಪವಿತ್ರವಾದ ಸ್ಥಳವಾಗಿದೆ.