ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ತುಲನೆ

ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ತುಲನೆ

ಹೋಲಿಕೆಗಳು (ಸಮಾನ ಅಂಶಗಳು)

  1. ಇವೆರಡೂ ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿ ಪಾಳಿ ಭಾಷೆಯನ್ನು ಬಳಸಿಕೊಂಡವು.
  2. ಇವೆರಡೂ ವೈದಿಕ ಧರ್ಮದ ವಿರುದ್ಧ ಬಿರುಗಾಳಿಯನ್ನು ಎಬ್ಬಿಸಿದವು. ಅಂದರೆ ಹಿಂದೂಧರ್ಮ ಸುಧಾರಣೆಗಾಗಿ ಹುಟ್ಟಿಕೊಂಡ ಧರ್ಮಗಳು.
  3. ಇವೆರಡೂ ಸರಳವಾದ, ಪರಿಶುದ್ಧವಾದ, ಆಚಾರಯುತ ಜೀವನಕ್ಕೆ ಮಹತ್ವ ಕೊಟ್ಟಿದೆ.
  4. ಇವೆರಡೂ ಕರ್ಮಸಿದ್ಧಾಂತದಲ್ಲಿ ನಂಬಿಕೆ ಇಟ್ಟಿವೆ
  5. ಇವೆರಡೂ ಬ್ರಾಹ್ಮಣರಿಂದ ಹೊರತಾದ ಕ್ಷತ್ರಿಯರಿಂದ ಸ್ಥಾಪನೆಯಾದ ಧರ್ಮಗಳು,
  6. ಅಹಿಂಸೆ ಉತ್ತಮ ನಡತೆ, ಉತ್ತಮ ಜ್ಞಾನಕ್ಕೆ ಮಹತ್ವ, ಜಾತಿಪದ್ಧತಿ, ಧಾರ್ಮಿಕ ವಿಧಿ, ವೇದ, ಬ್ರಾಹ್ಮಣತ್ವ, ಯಜ್ಞಯಾಗಗಳನ್ನು ಖಂಡಿಸಿ ಸಮಾನತೆಯನ್ನು ಪ್ರತಿಪಾದಿಸಿದವು.
  7. ಕಲೆ, ಸಾಹಿತ್ಯಕ್ಕೆ ಎರಡೂ ಅಪೂರ್ವ ಕೊಡುಗೆ ನೀಡಿದವು.
  8. ಇವೆರಡೂ ಪ್ರಜಾಪ್ರಭುತ್ವ ಸಂಘ ಮಾದರಿಯಲ್ಲಿ ರಚಿಸಲ್ಪಟ್ಟಿವೆ.
  9. ಎರಡೂ ಶ್ರಮಜೀವನವನ್ನು ಒತ್ತಿ ಹೇಳಿವೆ.
  10. ಧಾರ್ಮಿಕ ಸಹಿಷ್ಣುತೆಯಲ್ಲಿ ನಂಬಿಕೆ ಹೊಂದಿವೆ.
  11. ಇವೆರಡೂ ಪ್ರಾಣಿಬಲಿಯನ್ನು ಖಂಡಿಸಿದವು. ಅಹಿಂಸೆಯನ್ನು ಒತ್ತಿ ಹೇಳಿದವು.
  12. ಇವೆರಡೂ ಮತ ಪ್ರಚಾರಕ (ಮಿಷನರಿ) ಧರ್ಮಗಳು.
  13. ಎರಡೂ ಜನಸಾಮಾನ್ಯರ ಆಡುಭಾಷೆಯಲ್ಲಿ ಬೋಧಿಸಿದವು.
  14. ಇವೆರಡೂ ಭಾರತದಲ್ಲಿ ಹುಟ್ಟಿದ ಧರ್ಮಗಳಾಗಿವೆ.
  15. ಎರಡೂ ವೇದ ಮತ್ತು ಬ್ರಾಹ್ಮಣರ ಶ್ರೇಷ್ಠತೆಯನ್ನು ಖಂಡಿಸಿದವು.
  16. ಇವೆರಡೂ ದೇವರು ಇರುವಿಕೆಯನ್ನು ನಂಬಲಿಲ್ಲ.
  17. ಎರಡೂ ಸನ್ಯಾಸತ್ವವನ್ನು ಒತ್ತಿ ಹೇಳಿದವು.
ವ್ಯತ್ಯಾಸಗಳು
ಜೈನಧರ್ಮ ಬೌದ್ಧ ಧರ್ಮ
1. ಅಹಿಂಸೆಗೆ ಹೆಚ್ಚಿನ ಮಹತ್ವ ಕೊಟ್ಟಿದೆ 1. ಅಹಿಂಸೆಗೆ ಅಷ್ಟಾಗಿ ಮಹತ್ವ ಕೊಟ್ಟಿಲ್ಲ.
2. ತಪಸ್ಸು, ದೇಹ ದಂಡನೆಗೆ ಮಹತ್ವ ಕೊಟ್ಟಿದೆ. 2. ಇಂದ್ರಿಯಗಳ ನಿಗ್ರಹಕ್ಕೆ ಹೆಚ್ಚಿನ ಮಹತ್ವ ನೀಡಿದೆ.
3 ಭಾರತದೊಳಗೆ ಮಾತ್ರ ಜನಪ್ರಿಯವಾಯಿತು. 3 ಭಾರತವಲ್ಲದೆ ಹೊರದೇಶಗಳಲ್ಲೂ ಪ್ರಖ್ಯಾತಿ ಪಡೆಯಿತು.
4. ಮೋಕ್ಷ ಸಾಧನೆಗೆ ಉಪವಾಸವ್ರತ, ಸಲ್ಲೇಖನ ವ್ರತ ಆಚರಣೆಯನ್ನು ನಂಬುತ್ತದೆ. ದೇಹನಗ್ನತೆಯಲ್ಲಿ ನಂಬಿಕೆ 4.

ಮೋಕ್ಷ ಸಾಧನೆಗೆ ಅಷ್ಟಾಂಗ ಮಾರ್ಗವನ್ನು ಒತ್ತಿ ಹೇಳಿದೆ. ನಗ್ನತೆಯಲ್ಲಿ ನಂಬಿಕೆ ಹೊಂದಿಲ್ಲ.

5. ಜೈನ ತೀರ್ಥಂಕರ ಪೂಜೆ 5. ಬೋಧಿಸತ್ವರ ಪೂಜೆ
6. ಹಿಂದೂ ಧರ್ಮದೊಂದಿಗೆ ನಿಕಟ ಸಂಬಂಧ ಹೊಂದಿದೆ 6. ಹಿಂದೂ ಧರ್ಮದಿಂದ ಸ್ವಲ್ಪ ಪ್ರತ್ಯೇಕ
7. ಪವಿತ್ರ ಗ್ರಂಥಗಳು – ಜೈನ ಅಂಗಗಳು 7. ಪವಿತ್ರ ಗ್ರಂಥಗಳು – ತ್ರಿಪಿಟಕಗಳು
8. ಸಂಘ ಜನಪ್ರಿಯವಾಗಿ ಸಂಘಟಿತವಾಗಿಲ್ಲ. 8. ಸಂಘ ಬಲಿಷ್ಠವಾಗಿ ಸಂಘಟನೆಗೊಂಡಿತ್ತು.
9. ನಿರ್ವಾಣ ಮತ್ತು ತ್ರಿರತ್ನಗಳಲ್ಲಿ ನಂಬಿಕೆ 9. ಅಷ್ಟಾಂಗ ಮಾರ್ಗದಲ್ಲಿ ನಂಬಿಕೆ
10. ಸ್ತ್ರೀಯರು, ಸಂಸಾರಿಗಳಿಗೆ ಮೋಕ್ಷ ಪಡೆಯಲು ಅರ್ಹರಲ್ಲ. 10. ಇದರಲ್ಲಿ ಅರ್ಹರಾಗಿರುತ್ತಾರೆ.
11. ಮುಕ್ತಿಯು ಮರಣದ ನಂತರ ಲಭಿಸುತ್ತದೆ. 11. ಮುಕ್ತಿ ಮರಣ ಮುನ್ನವೇ ಸಿಗುತ್ತದೆ.

ಹೀಗೆ ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ಪರಸ್ಪರ ಹೋಲಿಕೆ ಮತ್ತು ವ್ಯತ್ಯಾಸಗಳಿದ್ದರೂ, ಇವೆರೆಡೂ ಮಾನವ ಕುಲಕೋಟಿಯ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿವೆ.

ಬೌದ್ಧಧರ್ಮದ ಅಭ್ಯುದಯ ಮತ್ತು ಅವನತಿ

ಬೌದ್ಧಧರ್ಮದ ಅಭ್ಯುದಯ ಮತ್ತು ಅವನತಿ

ಗೌತಮ ಬುದ್ಧನಿಂದ ಸಂಸ್ಥಾಪಿಸಲ್ಪಟ್ಟ ಬೌದ್ಧಪಂಥವು ಸಮಗ್ರ ಭಾರತದಾದ್ಯಂತ ಪ್ರಸರಣಗೊಂಡು ಚೀನಾ, ಜಪಾನ್, ಬರ್ಮ, ಮಲಯ, ನೇಪಾಳ, ಭೂತಾನ್, ಟಿಬೆಟ್, ಸಿಂಹಳಗಳಲ್ಲಿ ಪ್ರಚಾರಗೊಂಡಿತು. ಭಾರತದಲ್ಲಿ ಜನ್ಮತಾಳಿದ ಬೌದ್ಧಪಂಥವು ತಾಯ್ಯಾಡಿನಲ್ಲಿ ಕಣ್ಮರೆಯಾದರೂ ಹೊರರಾಷ್ಟ್ರಗಳಲ್ಲಿ ಇಂದಿಗೂ ಪ್ರಧಾನ ಧರ್ಮವಾಗಿಯೇ ಉಳಿದುಕೊಂಡಿದೆ, ಬೌದ್ಧಪಂಥದ ಅಭ್ಯುದಯಕ್ಕೆ ಹಲವಾರು ಪ್ರಮುಖ ಕಾರಣಗಳಿದ್ದವು.

ಎ) ಬುದ್ಧನ ವ್ಯಕ್ತಿತ್ವ : ಬೌದ್ಧಪಂಥದ ಅಭ್ಯುದಯಕ್ಕೆ ಪ್ರಮುಖ ಕಾರಣ ಬುದ್ಧನ ಆಕರ್ಷಕ ವ್ಯಕ್ತಿತ್ವ. ʻವಿಲ್‌ಡೂರೆಂಟ್’ ಅಭಿಪ್ರಾಯದಂತೆ ‘ಬುದ್ಧನು ಏಷ್ಯಾದ ಜ್ಯೋತಿ, ಕಾರುಣ್ಯಮೂರ್ತಿ ಮತ್ತು ಸ್ಥಿತಪ್ರಜ್ಞ’. ಬುದ್ಧನ ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋಗಿ ಬೌದ್ಧಮತಾವಲಂಬಿಗಳಾದರು.

ಬಿ) ಬೌದ್ಧ ಮಹಾಸಭೆಗಳು : ಬೌದ್ಧಧರ್ಮದ ಅಭ್ಯುದಯಕ್ಕೆ 4 ಬೌದ್ಧ ಮಹಾಸಭೆಗಳು ನಡೆದಿರುವುದು ಕಾರಣವಾಗಿದೆ.

ಬೌದ್ಧ ಸಮ್ಮೇಳನಗಳು

ಕ್ರಸಂ.

ವರ್ಷ

ಅಧ್ಯಕ್ಷತೆ

ಸ್ಥಳ

ಆಶ್ರಯದಾತ

ಉದ್ದೇಶ

1.

ಕ್ರಿ.ಪೂ 487

ಮಹಾಕಶ್ಯಪ

ರಾಜಗೃಹ

ಅಜಾತಶತೃ

ತ್ರಿಪಿಟಕಗಳ ರಚನೆ

2.

ಕ್ರಿ.ಪೂ 387

ಸಬಾಕಾಮಿ

ವೈಶಾಲಿ

ಕಾಲಾಶೋಕ

ಸಂಘ ತೇರವಾದಿ ಮತ್ತು ಮಹಾ ಸಾಂಘಿಕರಾಗಿ ವಿಭಜನೆ

3.

ಕ್ರಿ.ಪೂ 251

ಮೊಗ್ಗಲಿಪುತ್ರ

ಪಾಟಲೀಪುತ್ರ

ಅಶೋಕ

ವಿದೇಶಗಳಿಗೆ ಮಿಷನರಿಗಳ ನೇಮಕ, ಅಭಿಧಮ್ಮ ಪೀಟಕ ರಚನೆ

4.

ಕ್ರಿ.ಪೂ 100

ವಸುಮಿತ್ರ

ಕುಂಡಲಿವನ

ಕಾನಿಷ್ಕ

18 ಪಂಥಿಯರ ನಡುವೆ ಭಿನ್ನತೆ

5.

ಕ್ರಿ.ಪೂ 643

ಹೂಯೆನ್‌ತ್ಸಾಂಗ್

ಕನೂಜ್

ಹರ್ಷವರ್ಧನ

ಮತ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದು

ಸಿ) ಬೌದ್ಧಸಂಘದ ಪಾತ್ರ : ಧರ್ಮದ ಪ್ರಾಬಲ್ಯಕ್ಕೆ ಮತ್ತೊಂದು ಪ್ರಮುಖ ಕಾರಣ ಬೌದ್ಧಸಂಘದ ಕ್ರಿಯಾತ್ಮಕ ಕಾರ್ಯ ನಿರ್ವಹಣೆ. ಬೌದ್ಧಸಂಘದ ಸನ್ಯಾಸಿ-ಸನ್ಯಾಸಿನಿಯರು ಧರ್ಮದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಹೀಗಾಗಿ ಧರ್ಮವು ಏಳಿಗೆಗೆ ಬಂದಿತು.

ಡಿ) ಧಾರ್ಮಿಕ ತತ್ವಗಳು ಮತ್ತು ಬೋಧನೆಯ ಭಾಷೆ : ಧರ್ಮದ ಪ್ರವರ್ಧಮಾನಸ್ಥಿತಿಗೆ ಮೂಲಕಾರಣ ಧರ್ಮದ ತತ್ವಗಳು, ನಾಲ್ಕು ಆರ್ಯಸತ್ಯಗಳು ಮತ್ತು ಅಷ್ಟಾಂಗಸಿದ್ಧ ಮಾರ್ಗಗಳು ಜನಸಾಮಾನ್ಯರಿಗೆ ಆಕರ್ಷಿತವಾದವು. ಧಾರ್ಮಿಕ ತತ್ವಗಳನ್ನು ಸರಳ ಮತ್ತು ಸುಲಭ ಭಾಷೆಯಲ್ಲಿ (ಪಾಳಿಭಾಷೆಯಲ್ಲಿ) ಬೋಧಿಸಲಾಯಿತು. ಇದು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಾಗಿತ್ತು.

ಬೌದ್ಧ ಧರ್ಮದ ಅವನತಿ

ಪ್ರಾಚೀನ ವಿಶ್ವದ ಪ್ರಮುಖ ಧರ್ಮವಾಗಿದ್ದ ಬೌದ್ಧಪಂಥವು ಭಾರತದಲ್ಲಿ ಪತನದ ಸ್ಥಿತಿ ತಲುಪಿತ್ತು. ಬೌದ್ಧಧರ್ಮದ ಅವನತಿಗೆ ಹಲವಾರು ಕಾರಣಗಳಿದ್ದವು.

1. ಧಾರ್ಮಿಕ ವಿಂಗಡಣೆ : ಬೌದ್ಧಪಂಥದ ವಿಭಜನೆಯು ಧರ್ಮದ ಅವನತಿಗೆ ಒಂದು ಪ್ರಮುಖ ಕಾರಣವಾಯಿತು. ಕಾನಿಷ್ಕನ ಆಳ್ವಿಕೆಯ ವೇಳೆಗೆ ಬೌದ್ಧಪಂಥವು ಹೀನಯಾನ ಮತ್ತು ಮಹಾಯಾನ ಬೌದ್ಧ ಪಂಥಗಳೆಂದು ವಿಂಗಡಿಸಲ್ಪಟ್ಟಿತು. ಧಾರ್ಮಿಕ ಅನೈಕ್ಯತೆಯು ಧರ್ಮದ ಅವನತಿಗೆ ಒಂದು ಕಾರಣವಾಯಿತು. ಬುದ್ಧನ ತತ್ವಗಳ ಅವಲಂಭಿಸಿ ಮೂರ್ತಿ ಪೂಜೆಯನ್ನು ಅವಲಂಬಿಸಿದವರು ಮಹಾಯಾನ ಪಂಥದವರಾದರು. ಬುದ್ಧನತತ್ವಗಳ ಅವಲಂಭಿಸಿ ಸರಳನಿಯಮ ಪಾಲಿಸಿದವರು ಹೀನಯಾನ ಪಂಥದವರಾದರು.

2. ರಾಜರ ಪ್ರೋತ್ಸಾಹ ದೊರಕದಿದ್ದುದು : ರಾಜರ ಆಶ್ರಯ ಮತ್ತು ಪ್ರೋತ್ಸಾಹ ಪಡೆದು ಪ್ರಾಬಲ್ಯಕ್ಕೆ ಬಂದ ಬೌದ್ಧಧರ್ಮವು ಕ್ರಮೇಣ ರಾಜರ ಆಶ್ರಯವಿಲ್ಲದೆ ಅವನತಿಯತ್ತ ಸಾಗಲು ಕಾರಣವಾಯಿತು.

3. ವೈದಿಕ ಪಂಥದ ಪುನರುಜ್ಜಿವನ : ಚೌದ್ಧಧರ್ಮವು ವಿಂಗಡಣೆಗೊಂಡು ಅವನತಿಯತ್ತ ಸಾಗುತ್ತಿದ್ದಾಗ ಶಂಕರಾಚಾರ್ಯ ಮತ್ತು ಕುಮಾರಿಲಭಟ್ಟರು ವೈದಿಕ ಪಂಥದ ಪುನರುಜ್ಜಿವನ ಕಾರ್ಯ ಕೈಗೊಂಡಿದ್ದರಿಂದ ವೈದಿಕ ಪಂಥವು ಮತ್ತೆ ಪ್ರಾಬಲ್ಯಕ್ಕೆ ಬಂದಿತು.

4. ಮಹಮ್ಮದೀಯರ ಧಾಳಿಗಳು : ಭಾರತವನ್ನು ಪ್ರವೇಶಿಸಿದ ಟರ್ಕೊ-ಅಫ್‌ಘನ್ನರು ದೆಹಲಿ ಸುಲ್ತಾನರು ‘ಜಸಿಯಾ’ ತಲೆಗಂದಾಯ ಜಾರಿಗೆ ತಂದು ಹಿಂದೂಗಳನ್ನು ಇಸ್ಲಾಂ ಪಂಥಕ್ಕೆ ಪರಿವರ್ತಿಸುವ ಕಾರ್ಯ ಕೈಗೊಂಡರು. ಬೌದ್ಧಕಲಾಸ್ಮಾರಕಗಳನ್ನು ಶಿಥಿಲಗೊಳಿಸಿದರು. ಹೀಗೆ ಮಹಮ್ಮದೀಯರ ಧಾಳಿಯೂ ಸಹ ಬೌದ್ಧಧರ್ಮದ ಅವನತಿಗೆ ಕಾರಣವಾಯಿತು.

5. ಸಂಸ್ಕೃತ ಭಾಷೆಯ ಬಳಕೆ : ಬೌದ್ಧ ಪಂಥದ ಅವನತಿಗೆ ಪಾಳಿಭಾಷೆಗೆ ಬದಲು ಸಂಸ್ಕೃತ ಭಾಷೆಯ ಬಳಸಿದ್ದರಿಂದ ಈ ಭಾಷೆಯು ಜನಸಾಮಾನ್ಯರಿಗೆ ಅರ್ಥವಾಗಲಿಲ್ಲ. ಅರ್ಥವಾಗದ ಭಾಷೆಯ ಬಳಕೆಯು ಅವನತಿಗೆ ಒಂದು ಕಾರಣವಾಯಿತು.

6. ಬೌದ್ಧಸಂಘದ ನಿಷ್ಕ್ರಿಯತೆ : ಬೌದ್ಧಧರ್ಮದ ಏಳಿಗೆಗೆ ಕಾರಣವಾಗಿದ್ದ ಬೌದ್ಧಸಂಘವು ಧರ್ಮದ ಅವನತಿಗೂ ಕಾರಣವಾಯಿತು. ಬೌದ್ಧ ಸಂಘದ ಸನ್ಯಾಸಿ-ಸನ್ಯಾಸಿನಿಯರು ಧಾರ್ಮಿಕ ನಿಷ್ಠೆಯನ್ನು ಮರೆತರು. ವೈಯುಕ್ತಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿದರು. ಧರ್ಮದ ಪಾವಿತ್ರತೆಯನ್ನು ಸಂಘವು ನಿರ್ಲಕ್ಷಿಸಿತು. ಬೌದ್ಧ ಸಂಘದ ನಿಷ್ಕ್ರಿಯತೆಯೂ ಧರ್ಮದ ಅವನತಿಗೆ ಪ್ರಮುಖ ಕಾರಣವಾಯಿತು.

ಉಪಸಂಹಾರ:

ಆಧುನಿಕ ಭಾರತದಲ್ಲಿ ಬೌದ್ಧ ಧರ್ಮವು ಮತ್ತೆ ತಲೆ ಎತ್ತುತ್ತಿದ್ದು ಇದಕ್ಕೆ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್‌.ಅಂಬೇಡ್ಕರ್‌ ಬೌದ್ಧ ಧರ್ಮಕ್ಕೆ ಮತಾಂತರವಾದದ್ದು ಪ್ರಮುಖವಾದ ಕಾರಣವಾಗಿದೆ. ಮುಖ್ಯವಾಗಿ ಬುದ್ಧನ ವ್ಯಕ್ತಿತ್ವದ ಸೂಜಿಗಲ್ಲಿನ ಸೆಳೆತ ಕಾಲಾತೀತವಾದದ್ದು.

ಮೌರ್ಯರ ಆಡಳಿತ ವ್ಯವಸ್ಥೆ

ಮೌರ್ಯರ ಆಡಳಿತ ವ್ಯವಸ್ಥೆ

ಪೀಠಿಕೆ:

ಪ್ರಾಚೀನ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಖಂಡ ಮತ್ತು ಐತಿಹಾಸಿಕ ಸಾಮ್ರಾಜ್ಯ ನಿರ್ಮಿಸಿದ ಮೌರ್ಯರು ಸುಭದ್ರ ಮತ್ತು ಸುವ್ಯವಸ್ಥಿತ ಆಡಳಿತವನ್ನು ಸಂಸ್ಥಾಪಿಸಿದ್ದರು. ಇಂತಹ ಆಡಳಿತವು ಮಾದರಿಯಾದ ಒಂದು ಆಡಳಿತವೆಂದು ತಿಳಿದುಬರುತ್ತದೆ. ಮೌರ್ಯರ ಆಡಳಿತ ವ್ಯವಸ್ಥೆಯನ್ನು ಸಮಗ್ರವಾಗಿ ತಿಳಿದುಕೊಳ್ಳಲು ಸಹಾಯಕವಾಗಿರುವ ಆಧಾರಗಳೆಂದರೆ ಕೌಟಿಲ್ಯನ ಅರ್ಥಶಾಸ್ತ್ರ, ಮೆಗಾಸ್ಥನೀಸನ ಇಂಡಿಕಾ ಮತ್ತು ಅಶೋಕನ ಶಾಸನಗಳು ಹಾಗು ವಿದೇಶಿಯರ ಬರಹಗಳು ಮೊದಲಾದ ಆಕರಗಳು ಮೌರ್ಯರ ಆಡಳಿತದ ಸ್ಪಷ್ಟ ಚಿತ್ರಣ ನೀಡುತ್ತವೆ. ಉತ್ತುಂಗ ಸ್ಥಿತಿಯಲ್ಲಿ ಮೌರ್ಯರ ಪ್ರಭುತ್ವವು ಉತ್ತರದಲ್ಲಿ ಪರ್ಶಿಯಾದಿಂದ ದಕ್ಷಿಣದಲ್ಲಿ ಕರ್ನಾಟಕ ದವರೆಗೂ ವಿಸ್ತರಿಸಿತ್ತು. ಇಂತಹ ಮೌರ್ಯ ಪ್ರಭುತ್ವದ ಆಡಳಿತದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡು ಬರುತ್ತವೆ. ಅವುಗಳೆಂದರೆ

  1. ಪ್ರಬಲ ಕೇಂದ್ರೀಕೃತ ಆಡಳಿತ : ಮೌರ್ಯರ ಆಡಳಿತವು ಭಾಗಶಃ ಕೇಂದ್ರೀಕೃತವೂ ಮತ್ತು ಭಾಗಶಃ ವಿಕೇಂದ್ರೀಕೃತವೂ ಆದ ಲಕ್ಷಣಗಳನ್ನು ಒಳಗೊಂಡಿತ್ತು. ಹರಿದು ಹಂಚಿಹೋಗಿದ್ದ ಭಾರತವನ್ನು ಏಕಚಕ್ರಾಧಿಪತ್ಯಕ್ಕೆ ತರುವ ಮೂಲಕ ಭಾರತದಲ್ಲಿ ರಾಜಕೀಯ ಸ್ಥಿರತೆಯನ್ನು ಸ್ಥಾಪಿಸಿದ್ದರು. ರಾಜ ಮತ್ತು ಮಂತ್ರಿಪರಿಷತ್ ಮೂಲಕ ಕೇಂದ್ರಾಡಳಿತವು ಪ್ರಬಲವಾಗಿ ಬೆಳೆದದ್ದು ಕಂಡುಬರುತ್ತದೆ.
  2. ಸಾಂಕುಶ ಪ್ರಜಾಪ್ರಭುತ್ವ : ಮೌರ್ಯರ ಆಡಳಿತ ವ್ಯವಸ್ಥೆಯ ಒಂದು ಗುಣಾತ್ಮಕ ಲಕ್ಷಣವೆಂದರೆ ಸಾಂಕುಶ ಪ್ರಭುತ್ವದ ಸ್ಥಾಪನೆ. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದರಿಂದ ಅದು ನಿರಂಕುಶ ಆಡಳಿತಾಧಿಕಾರವೆಂದು ಗುರುತಿಸಿದ್ದರೂ, ಆಡಳಿತ ಮಾತ್ರ ಸಾಂಕುಶ ರೀತಿಯದಾಗಿತ್ತು. ರಾಜನು ಪ್ರಜಾ ಅಭ್ಯುದಯಕ್ಕಾಗಿ ಆಡಳಿತವನ್ನು ಬಳಸಿದ್ದು ಪ್ರಧಾನವಾಗಿ ಕಂಡುಬರುತ್ತದೆ.
  3. ವಿಕೇಂದ್ರೀಕೃತ ಆಡಳಿತ: ಮೌರ್ಯರ ಆಡಳಿತ ವ್ಯವಸ್ಥೆಯ ಮತ್ತೊಂದು ಪ್ರಧಾನ ಲಕ್ಷಣವೆಂದರೆ ವಿಕೇಂದ್ರೀಕೃತ ಆಡಳಿತದ ಸ್ಥಾಪನೆ. ವಿಶಾಲ ಸಾಮ್ರಾಜ್ಯವನ್ನು ಏಕವ್ಯಕ್ತಿಯ, ಅರಸೊತ್ತಿಗೆಯ ಆಡಳಿತಕ್ಕೊಳಪಡಿಸುವುದು ಕಠಿಣವೆಂಬ ದೃಷ್ಟಿಯಿಂದ ವಿಕೇಂದ್ರೀಕರಣಕ್ಕೆ ಹೆಚ್ಚು ಮಹತ್ವ ನೀಡಲಾಗಿತ್ತು. ವಿಕೇಂದ್ರೀಕೃತ ಆಡಳಿತದಲ್ಲಿ ಪ್ರಾಂತ್ಯಾಡಳಿತ, ಜಿಲ್ಲೆಯ ಆಡಳಿತ ಮತ್ತು ನಗರಾಡಳಿತಗಳು ಕಂಡುಬರುತ್ತಿದ್ದವು.

1. ಕೇಂದ್ರಾಡಳಿತ.

ಕೇಂದ್ರಾಡಳಿತವು ರಾಜ ಮತ್ತು ಮಂತ್ರಿ ಪರಿಷತ್ ಮೂಲಕ ನಡೆಯುತ್ತಿತ್ತು.

ಅರಸ : ಕೇಂದ್ರಾಡಳಿತದ ಕೇಂದ್ರಬಿಂದು ರಾಜನಾಗಿದ್ದನು. ರಾಜನ ಆಯ್ಕೆಯು ಸಾಮಾನ್ಯವಾಗಿ ವಂಶಪಾರಂಪರ್ಯವಾಗಿತ್ತು. ಅಲ್ಲದೆ ದಕ್ಷತೆ ಮತ್ತು ಅರ್ಹತೆಯ ಆಧಾರದ ಮೇಲೂ ರಾಜನ ಆಯ್ಕೆಯಾಗುತ್ತಿತ್ತು. ಉದಾ:-ಅಶೋಕ ಮಹಾಶಯ ದಕ್ಷತೆಯ ಆಧಾರದ ಮೇಲೆ ಅರಸನಾಗಿದ್ದನು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ಸಾಮಾನ್ಯ ಆಡಳಿತಗಾರನಾಗಿ, ಅತ್ಯುಚ್ಛ ನ್ಯಾಯಾದೀಶನಾಗಿ, ಶ್ರೇಷ್ಠ ದಂಡನಾಯಕನಾಗಿ ರಾಜನು ಕಾರ್ಯ ನಿರ್ವಹಿಸುತ್ತಿದ್ದನು. ರಾಜನಿಗೆ ಅಧಿಕಾರಗಳ ದೃಷ್ಟಿಯಿಂದ ನಿರಂಕುಶಾಧಿಕಾರಿಯಾದರೂ ಆಡಳಿತ ಮಾತ್ರ ಪ್ರಜಾಹಿತಕಾರಿಯಾಗಿತ್ತು. ಪ್ರಜಾ ಅಭ್ಯುದಯವೇ ರಾಜನ ಅಭ್ಯುದಯವೆಂಬ ದೃಷ್ಠಿಯಿಂದ ರಾಜನು ಆಡಳಿತ ನಡೆಸುತ್ತಿದ್ದನು. ಕೌಟಿಲ್ಯನ ಅರ್ಥಶಾಸ್ತ್ರ, ಮೌರ್ಯರ ಆಡಳಿತಕ್ಕೆ ಮಾರ್ಗದರ್ಶಕವಾಗಿತ್ತು.

ಮಂತ್ರಿ ಪರಿಷತ್ : ರಾಜನು ಆಡಳಿತ ನಿರ್ವಹಣೆಯಲ್ಲಿ ಮಂತ್ರಿಪರಿಷತ್‌ನ್ನು ಸ್ಥಾಪಿಸಿಕೊಂಡಿದ್ದನು. ಒಂದು ಗಾಡಿ ಉರುಳಲು ಎರಡು ಚಕ್ರಗಳ ಸಹಾಯದಂತೆ ರಾಜ್ಯಾಡಳಿತ ನಡೆಸಲು ರಾಜ ಮತ್ತು ಮಂತ್ರಿಪರಿಷತ್ ಪರಸ್ಪರ ಸಹಕರಿಸಿ ಆಡಳಿತ ನಡೆಸಬೇಕಾಗಿತ್ತು. ರಾಜನು ರಾಜ್ಯದ ಸಪ್ತಾಂಗಗಳಲ್ಲಿ ಒಂದು ಅಂಗ ಮಾತ್ರ ಉಳಿದವು ಗಳೆಂದರೆ ಅಮಾತ್ಯ, ಕೋಶ(ಖಜಾನೆ), ಬಲ(ಸೇನೆ), ಜನಪದ(ಪ್ರಾಂತ್ಯ), ದುರ್ಗ(ಕೋಟೆ) ಮತ್ತು ಮಿತ್ರ(ನೆರೆರಾಜ್ಯ). ಮಂತ್ರಿಗಳನ್ನು ಆಯ್ಕೆಮಾಡುವಾಗ ದಕ್ಷತೆ, ಅರ್ಹತೆ, ವಿದ್ಯೆ ಮತ್ತು ಕಾನೂನಿನ ಪರಿಜ್ಞಾನ ಹೊಂದಿರುವವರನ್ನು ಮಾತ್ರ ಆರಿಸಲಾಗುತ್ತಿತ್ತು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಮಂತ್ರಿಪರಿಷತ್ ರಚನೆ ಮತ್ತು ಕಾರ್ಯನಿರ್ವಹಣೆಯ ವಿವರಗಳು ಸ್ಪಷ್ಟವಾಗಿ ತಿಳಿದುಬರುತ್ತವೆ. ಮಂತ್ರಿಪರಿಷತ್‌ ಸದಸ್ಯರ ಸಂಖ್ಯೆಯು ಅವಶ್ಯಕತೆಯನ್ನು ಆಧರಿಸಿತ್ತು. ವರ್ಷಕ್ಕೆ 12,000 ಪಣಗಳನ್ನು ಸಂಭಾವನೆಯಾಗಿ ಮಂತ್ರಿಗಳಿಗೆ ನೀಡಲಾಗುತ್ತಿತ್ತು. ಮಂತ್ರಿಪರಿಷತ್ ಸಭೆಯನ್ನು ಅರಸನ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿತ್ತು. ಮಂತ್ರಿ ಪರಿಷತ್‌ನ ಕಾರ್ಯಚಟುವಟಿಕೆಗಳ ವಿವರಗಳನ್ನು ಗುಪ್ತವಾಗಿ ಇಡಲಾಗುತ್ತಿತ್ತು.

ಮೌರ್ಯರು ತಮ್ಮ ಆಡಳಿತವನ್ನು 18 ವಿವಿಧ ಇಲಾಖೆಗಳಲ್ಲಿ ವಿಭಾಗಿಸಿದ್ದರು. ಪ್ರತಿಯೊಂದು ಇಲಾಖೆಯನ್ನು ಮೇಲ್ವಿಚಾರಕನ ಅಧೀನಕ್ಕೊಳಪಡಿಸಲಾಗಿತ್ತು. ಅಂತಹ ಇಲಾಖೆಗಳೆಂದರೆ ಖಜಾನೆ, ಗಣಿ, ವಿದೇಶಾಂಗ, ಅರಣ್ಯ, ತೂಕ ಅಳತೆ, ಶಸ್ತ್ರಾಗಾರ, ಸುಂಕ, ನೇಯ್ದೆ, ಕೃಷಿ, ಅಬಕಾರಿ, ವೇಶೈಯರು, ಬಂದೀಖಾನೆ, ರಸ್ತೆ, ಬಂದರು. ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ಮೊದಲಾದವು

2. ಪ್ರಾಂತೀಯ ಆಡಳಿತ :

ವಿಶಾಲವಾದ ಮೌರ್ಯಚಕ್ರಾಧಿಪತ್ಯವನ್ನು ಆಡಳಿತದ ಅನುಕೂಲತೆಯ ದೃಷ್ಟಿಯಿಂದ ಪ್ರಾಂತೀಯ ಆಡಳಿತದಲ್ಲಿ ಸಂಘಟಿಸಲಾಗಿತ್ತು. ಪ್ರಾಂತ್ಯಗಳು ವಿಭಜನೆಯ ದೃಷ್ಟಿಯಿಂದ ಏಕರೂಪವಾಗಿರಲಿಲ್ಲ. ಕೆಲವು ದೊಡ್ಡ ಪ್ರಾಂತ್ಯಗಳಿದ್ದರೆ ಹಲವು ಚಿಕ್ಕ ಪ್ರಾಂತ್ಯಗಳಿದ್ದವು. ಚಂದ್ರಗುಪ್ತನ ಕಾಲಾವಧಿಯಲ್ಲಿನ ಪ್ರಾಂತೀಯ ಆಡಳಿತದ ಸ್ಪಷ್ಟ ಚಿತ್ರಣ ದೊರಕುವುದಿಲ್ಲ. ಆದರೆ ಅಶೋಕ, ಮೌರ್ಯನ ಕಾಲದಲ್ಲಿ ಕಳಿಂಗ, ತಕ್ಷಶಿಲೆ, ಉಜ್ಜಯನಿ ಮತ್ತು ಸುವರ್ಣಗಿರಿ ಎಂಬ ನಾಲ್ಕು ಪ್ರಾಂತ್ಯಗಳಿದ್ದವೆಂದು ತಿಳಿದು ಬರುತ್ತದೆ.

ರಾಜಪ್ರತಿನಿಧಿ : ಪ್ರಾಂತ್ಯಾಡಳಿತದ ಮುಖ್ಯಸ್ಥನನ್ನು ರಾಜಪ್ರತಿನಿಧಿ ಅಥವಾ ಗೌರ್ನರ್ ಎಂದು ಹೆಸರಿಸ ಲಾಗಿತ್ತು. ಯುವರಾಜ ಅಥವಾ ರಾಜನ ಸಂಬಂಧಿಗಳು ಪ್ರಾಂತ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದರು. ಪ್ರಾಂತೀಯ ಆಡಳಿತವು ಸಹ ಕೇಂದ್ರಾಡಳಿತದಂತೆಯೇ ಸುವ್ಯವಸ್ಥಿತ ಆಡಳಿತವಾಗಿತ್ತು. ಪ್ರಾಂತ್ಯಗಳ ಸಾಮಾನ್ಯ ಆಡಳಿತ ನೋಡಿಕೊಳ್ಳುವುದು, ನ್ಯಾಯಪರಿಪಾಲನೆ ಮತ್ತು ಶಿಸ್ತು ಸ್ಥಾಪನೆಯು ಗೌರ್ನರ್‌ನ ಕರ್ತವ್ಯವಾಗಿತ್ತು. ಪ್ರಾಂತ್ಯಗಳಲ್ಲಿನ ಸುಂಕವನ್ನು ವಸೂಲಿಮಾಡಿ ಖಜಾನೆಗೆ ಸಲ್ಲಿಸಬೇಕಾಗಿತ್ತು. ಅಲ್ಲದೆ ಪ್ರಾಂತ್ಯದ ಪರಿಸ್ಥಿತಿಯ ಬಗ್ಗೆ ವರದಿಯನ್ನು ಸಹ ಸಲ್ಲಿಸಬೇಕಾಗಿತ್ತು.

ಪ್ರಾಂತ್ಯಗಳಲ್ಲಿ ಸುವ್ಯವಸ್ಥಿತ ಆಡಳಿತಕ್ಕಾಗಿ ಹಲವು ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅವರೆಂದರೆ, ರಾಜುಕರು, ಯುಕ್ತರು, ಪ್ರಾದೇಶಿಕರು ಮತ್ತು ಪುರುಷರು. ಆದರೆ ಇವರುಗಳ ಕಾರ್ಯನಿರ್ವಹಣೆಯ ಬಗ್ಗೆ ಏಕಾಭಿಪ್ರಾಯವಿಲ್ಲ ಪ್ರಾಂತ್ಯಗಳನ್ನು ಆಹರ, ವಿಷಯ ಹಾಗೂ ಪ್ರದೇಶಗಳೆಂದು ಸಹ ವಿಭಾಗಿಸಲಾಗಿತ್ತು.

3. ಜಿಲ್ಲೆಯ ಆಡಳಿತ:

ಪ್ರಾಂತ್ಯದ ಆಡಳಿತದ ಕೆಳಹಂತದಲ್ಲಿ ಜಿಲ್ಲೆಯ ಆಡಳಿತವಿದ್ದಿತು. ಪ್ರತಿಯೊಂದು ಜಿಲ್ಲೆ ಯಲ್ಲಿಯೂ ‘ಸ್ಥಾನಿಕರು’ ಆಡಳಿತ ನೋಡಿಕೊಳ್ಳುತ್ತಿದ್ದರು. ಜಿಲ್ಲೆಯ ಕಂದಾಯ ವಸೂಲಾತಿ, ನ್ಯಾಯಪರಿಪಾಲನೆ ಮತ್ತು ಶಿಸ್ತಿನ ಸ್ಥಾಪನೆ, ಸ್ಥಾನಿಕ ಆಡಳಿತಗಾರನ ಆದ್ಯ ಕರ್ತವ್ಯವಾಗಿತ್ತು. ಸ್ಥಾನಿಕನ ಸಹಾಯಕ್ಕೆ ಗೋಪ ಎಂಬ ಅಧಿಕಾರಿಯಿದ್ದನು. ಸ್ಥಾನಿಕನ ಆಡಳಿತವನ್ನು ಇಂದಿನ ಜಿಲ್ಲಾಧಿಕಾರಿಗಳ ಆಡಳಿತಕ್ಕೆ ಹೋಲಿಸಬಹುದು.

4. ನಗರಾಡಳಿತ (ಪಾಟಲೀಪುತ್ರದ ಆಡಳಿತ ವ್ಯವಸ್ಥೆ)

ಮೆಗಾಸ್ಥನೀಸನ ಇಂಡಿಕಾ ಕೃತಿಯು ಮೌರ್ಯರ ನಗರಾಡಳಿತದ ಬಗ್ಗೆ ಸ್ಪಷ್ಟ ವಿವರ ನೀಡುತ್ತದೆ. ಮೌರ್ಯರ ಕಾಲದ ನಗರಾಡಳಿತಕ್ಕೆ ಪಾಟಲೀಪುತ್ರವು ಸ್ಪಷ್ಟ ಉದಾಹರಣೆಯಾಗಿತ್ತು. ಪಾಟಲೀಪುತ್ರದ ಆಡಳಿತವು ಮಾದರಿಯಾದ ನಗರಾಡಳಿತಕ್ಕೆ ಸ್ಪಷ್ಟ ನಿದರ್ಶನವೆನಿಸಿದೆ. ನಗರಾಡಳಿತವನ್ನು ನೋಡಿಕೊಳ್ಳಲು 30 ಅಧಿಕಾರಿಗಳಿದ್ದರು. ಆರು ಸಮಿತಿಗಳಿದ್ದು(ಮಂಡಳಿ) ಪ್ರತಿ ಸಮಿತಿಯಲ್ಲೂ ಐದು ಜನ ಸದಸ್ಯರಿದ್ದರು. ಪ್ರತಿ ಸಮಿತಿಯು ಒಂದೊಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಬೇಕಾಗಿತ್ತು.

  1. ಕೈಗಾರಿಕಾ ಸಮಿತಿ : ಈ ಸಮಿತಿಯು ಕೈಗಾರಿಕೆ ಮತ್ತು ಕರಕುಶಲತೆಯನ್ನು ನೋಡಿಕೊಳ್ಳುತ್ತಿತ್ತು. ಅಂದರೆ ಸರಕುಗಳ ಉತ್ಪಾದನೆಯಲ್ಲಿ ಉತ್ತಮ ಕಚ್ಚಾಸರಕುಗಳನ್ನು ಬಳಸಲಾಗಿದೆಯೇ ಅಥವಾ ಇಲ್ಲವೆ ಎಂಬ ಬಗ್ಗೆ.
  2. ವಿದೇಶಿಯರ ಚಲನ ವಲನ ಸಮಿತಿ : ಈ ಸಮಿತಿಯು ವಿದೇಶಿಯರ ಯೋಗಕ್ಷೇಮವನ್ನು ನೋಡಿಕೊಳ್ಳುತಿತ್ತು. ವಿದೇಶಿಯರ ವಸತಿ, ವೈದ್ಯಕೀಯ ಮತ್ತು ಸಂರಕ್ಷಣೆಯ ಜವಾಬ್ದಾರಿ, ಪ್ರವಾಸದ ಸಂದರ್ಭದಲ್ಲಿ ಮರಣ ಹೊಂದಿದ ವಿದೇಶಿಯರ ಸರಕುಗಳನ್ನು ಅವರ ಸಂಬಂಧಿಗಳಿಗೆ ತಲುಪಿಸುವುದು.
  3. ಜನಗಣತಿ ಸಮಿತಿ : ಈ ಸಮಿತಿಯ ಜವಾಬ್ದಾರಿ ಜನನ-ಮರಣಗಳ ದಾಖಲೆಯ-ಸಂಗ್ರಹಣೆ ಮತ್ತು ವರದಿ ನೀಡಿಕೆ.
  4. ವ್ಯಾಪಾರ ಮತ್ತು ವಾಣಿಜ್ಯ ಸಮಿತಿ : ಈ ಸಮಿತಿಯು ವ್ಯಾಪಾರ ಮತ್ತು ವಾಣಿಜ್ಯವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿತ್ತು.
  5. ಸರಕು ಮೇಲ್ವಿಚಾರಣ ಸಮಿತಿ : ಸರಕುಗಳ ಮೇಲ್ವಿಚಾರಣೆಯನ್ನು ಮಾಡುತಿತ್ತು. ಸರಕುಗಳ ವಿಕ್ರಯಕಾರ್ಯ ಮತ್ತು ಸರಕುಗಳ ಕಲಬೆರೆಕೆಯನ್ನು ತಡೆಯುವುದು ಈ ಸಮಿತಿಯ ಕಾರ್ಯವಾಗಿತ್ತು.
  6. ತೆರಿಗೆ ವಸೂಲಿ ಸಮಿತಿ : ಈ ಸಮಿತಿಯು ಮಾರಾಟವಾಗುತ್ತಿದ್ದ ಸರಕುಗಳ ಮೇಲೆ 1/10 ರಷ್ಟು ಕರವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ಹೊಂದಿತ್ತು. ಹೀಗೆ ವಿವಿಧ ಸಮಿತಿಗಳು ವಿಭಿನ್ನ ಆಡಳಿತ ಸಂಘಟನೆಯನ್ನು ನೋಡಿಕೊಳ್ಳುತ್ತಿದ್ದವು.

ನೌಕಾ ಸಮಿತಿ, ರಥ ಸಮಿತಿ,

ಕಾಲ್ಗಳ ಸಮಿತಿ, ಗಜದಳ ಸಮಿತಿ,

ಸಾರಿಗೆ ಮತ್ತು ಸರಬರಾಜು ಸಮಿತಿ. ಅಶ್ವದಳ ಸಮಿತಿ,

ಮೌರ್ಯರು ವ್ಯವಸ್ಥಿತ ಸೈನಾಡಳಿತ ಹೊಂದಿದ್ದರಿಂದ ವಿಶಾಲಸಾಮ್ರಾಜ್ಯ ನಿರ್ಮಿಸಿ ದಕ್ಷ ಆಡಳಿತ ನಡೆಸಿದರು.

5. ಗೂಢಾಚಾರ ವ್ಯವಸ್ಥೆ

ಮೌರ್ಯರು ತಮ್ಮ ಆಡಳಿತದ ಅವಧಿಯಲ್ಲಿ ಗುಪ್ತ ಗೂಢಾಚಾರ ಪದ್ಧತಿಯನ್ನು ಹೊಂದಿದ್ದರು. ಗೂಢಾಚಾರರನ್ನು ರಾಜನ ಕಣ್ಣುಗಳು ಹಾಗೂ ಕಿವಿಗಳು ಎಂದೇ ಭಾವಿಸಲಾಗಿತ್ತು. ಗೂಢಾಚಾರರು ಸಾಮ್ರಾಜ್ಯದ ದೈನಂದಿನ ಚಟುವಟಿಕೆಗಳಲ್ಲದೆ, ಮುಖ್ಯವಾದ ರಹಸ್ಯ ವಿಚಾರಗಳನ್ನು ಸಂಗ್ರಹಿಸಿ ಅರಸನಿಗೆ ವರದಿ ಒಪ್ಪಿಸುತ್ತಿದ್ದರು. ಗೂಢಾಚಾರರು ಮಂತ್ರಿಗಳು ಮತ್ತು ರಾಣಿಯರ ಚಟುವಟಿಕೆಗಳ ಮೇಲೂ ಗಮನ ಹರಿಸಬೇಕಾಗಿತ್ತು. ಗೂಢಾಚಾರರು ತಪ್ಪು ವರದಿಯನ್ನು ಸಲ್ಲಿಸಿದರೆ ಅಂತಹವರಿಗೆ ಕಠಿಣ ಶಿಕ್ಷೆ ನೀಡಲಾಗುತಿತ್ತು.

6. ಕಂದಾಯ ಆಡಳಿತ

ಮೌರ್ಯರು ತಮ್ಮ ಆಡಳಿತದ ಅವಧಿಯಲ್ಲಿ ವ್ಯವಸ್ಥಿತವಾದ ಕಂದಾಯದ ಆಡಳಿತವನ್ನು ಜಾರಿಗೆ ತಂದಿದ್ದರು. ವಿವಿಧ ಆದಾಯದ ಮೂಲಗಳಿಂದ ಆದಾಯವನ್ನು ಸಂಗ್ರಹಿಸಿ ಖಜಾನೆಯನ್ನು ಸುಸ್ಥಿತಿಯಲ್ಲಿಡಲು ಪ್ರಯತ್ನಿಸಿದರು. ಆರ್ಥಿಕ ದುಸ್ಥಿತಿ ಉಂಟಾಗದಂತೆ ಗಮನ ಹರಿಸುತ್ತಿದ್ದರು. ಮೌರ್ಯರು ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ತೆರಿಗೆಯನ್ನು ವಸೂಲಿ ಮಾಡುತ್ತಿದ್ದರು. ತೆರಿಗೆ ನಿಗದಿಗೊಳಿಸುವಾಗ ಉದಾರ ನೀತಿಯನ್ನು ಅನುಸರಿಸಲಾಗುತಿತ್ತು.

  • ಭೂಕಂದಾಯವು ಸಾಮ್ರಾಜ್ಯದ ಆದಾಯದ ಮೂಲಗಳಲ್ಲಿ ಪ್ರಮುಖವಾಗಿತ್ತು. ಭೂಮಿಯ ಗುಣಮಟ್ಟವನ್ನು ಆಧರಿಸಿ ಉತ್ಪಾದನೆಯ 1/6 ರಿಂದ 1/4ರಷ್ಟು ಭೂಕಂದಯವನ್ನು ವಸೂಲಿಮಾಡಲಾಗುತಿತ್ತು.
  • ಪ್ರಾಣಿಗಳ ಮೇಲೆ ತೆರಿಗೆಯನ್ನು ಹಾಕುವ ಕ್ರಮ ಅನುಸರಣೆಯಲ್ಲಿತ್ತು. ಕುರಿಗಳು ಮತ್ತು ಹಸುಗಳ ಮೇಲೆ ತೆರಿಗೆಯನ್ನು ಹಾಕಲಾಗುತಿತ್ತು.
  • ವ್ಯಾಪಾರ ವಾಣಿಜ್ಯದ ಮೇಲೆ ತೆರಿಗೆ ಹಾಕಲಾಗುತಿತ್ತು. 1/5ಭಾಗವನ್ನು ಸುಂಕದ ವಸೂಲಿಯಾಗಿ ಸಂಗ್ರಹಿಸಲಾಗುತಿತ್ತು.
  • ಗಣಿಗಳು ಮತ್ತು ಕಾಡಿನ ವಸ್ತುಗಳ ಮೇಲೆ ಸಾಮ್ರಾಜ್ಯವು ಒಡೆತನ ಹೊಂದಿತ್ತು.

ಹೀಗೆ ವಿವಿಧ ಮೂಲಗಳಿಂದ ಸಂಗ್ರಹಣೆಗೊಂಡ ಆದಾಯವನ್ನು ಸಾಮ್ರಾಜ್ಯದ ವಿವಿಧ ವೆಚ್ಚಕ್ಕಾಗಿ ಬಳಸಲಾಗುತ್ತಿತ್ತು. ಹುಟ್ಟುವಳಿಯ ಅಧಿಕ ಭಾಗವನ್ನು ಸೇನೆಯ ವೆಚ್ಚಕ್ಕಾಗಿ ಬಳಸಲಾಗುತಿತ್ತು.

ಮೌರ್ಯರ ಆಡಳಿತ ವ್ಯವಸ್ಥೆಯ ದೋಷಗಳು

  1. ಕ್ರಿಮಿನಲ್ ಕಾಯಿದೆ ಕಠಿಣವಾಗಿತ್ತು. ಮರಣ ದಂಡನೆ ಸಾಮಾನ್ಯವಾಗಿತ್ತು.
  2. ರಾಜ್ಯದ ಒಳಗಡೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಲು ರಹದಾರಿ ಪತ್ರ ಬೇಕಾಗಿತ್ತು. ಇದರಿಂದ ವ್ಯಾಪಾರಿಗಳಿಗೂ ಮತ್ತು ಸಾಮಾನ್ಯ ಜನರಿಗೂ ತೊಂದರೆಯಾಗಿತ್ತು.
  3. ಗೂಢಾಚಾರ ವ್ಯವಸ್ಥೆ ಪ್ರಬಲವಾಗಿದ್ದು ಜನರು ಮಾತನಾಡಲು ಹೆದರಿಕೊಳ್ಳುತ್ತಿದ್ದರು. ವಾಕ್ ಸ್ವಾತಂತ್ರ್ಯಕ್ಕೆ ಚ್ಯುತಿಯಾಗಿತ್ತು.

ಒಟ್ಟಾರೆ ಮೌರ್ಯರ ಆಡಳಿತ ವ್ಯವಸ್ಥೆಯಲ್ಲಿ ದೋಷಗಳಿದ್ದರೂ ಅತ್ಯಧಿಕ ಸಂಖ್ಯೆಯಲ್ಲಿ ಗುಣಗಳೇ ಕಂಡುಬರುತ್ತವೆ. ಮೆಗಾಸ್ಥನೀಸನ ಇಂಡಿಕಾ ಮತ್ತು ಕೌಟಿಲ್ಯನ ಅರ್ಥಶಾಸ್ತ್ರ ಕೃತಿಗಳು ಮೌರ್ಯರ ಆಡಳಿತ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತವೆ. ಪ್ರಾಚೀನಕಾಲದಲ್ಲಿ ಮೌರ್ಯರು ಭಾರತೀಯ ಆಡಳಿತ ವ್ಯವಸ್ಥೆಗೆ ಉತ್ತಮ ಅಡಿಪಾಯ ಹಾಕಿದರು. ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯ ಮೂಲ ಬೇರುಗಳನ್ನು ಮೌರ್ಯರ ಆಡಳಿತದಲ್ಲಿಯೇ ಗುರುತಿಸಬೇಕಾಗುತ್ತದೆ.

ಅಶೋಕನ ಶಾಸನಗಳು

ಅಶೋಕನ ಶಾಸನಗಳು

ಪೀಠಿಕೆ:

ಭಾರತದಲ್ಲಿ ಅಶೋಕನಿಂದಲೇ ಶಾಸನಗಳ ರಚನೆ ಪ್ರಾರಂಭವಾಯಿತು. ಆದ್ದರಿಂದ ಅಶೋಕನನ್ನು ‘ಶಾಸನಗಳ ಆದ್ಯಪ್ರವರ್ತಕ’ನೆಂದೇ ಹೆಸರಿಸಲಾಗಿದೆ. ತನ್ನ ಆಳ್ವಿಕೆಯ ಅವಧಿಯಲ್ಲಿ ಸಾಮ್ರಾಜ್ಯದಾದ್ಯಂತ ಶಾಸನಗಳನ್ನು ಕೆತ್ತಿಸಿದ್ದನು. ಹೀಗೆ ಕೆತ್ತಿಸಿದ ಬಹುಸಂಖ್ಯಾತ ಶಾಸನಗಳು ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ದೊರೆತಿವೆ. ವಿವಿಧ ಭಾಷೆ ಮತ್ತು ಲಿಪಿಗಳಲ್ಲಿ ರಚನೆಗೊಂಡ ಶಾಸನಗಳು ಲಭ್ಯವಾಗಿವೆ. ಅಶೋಕನ ಹೆಚ್ಚು ಶಾಸನಗಳು ಪ್ರಾಕೃತ ಭಾಷೆ ಹಾಗೂ ಬ್ರಾಹ್ಮಲಿಪಿಯಲ್ಲಿವೆ. ವಾಯುವ್ಯ ಭಾರತದಲ್ಲಿ ದೊರೆತ ಅಶೋಕನ ಶಾಸನಗಳು ಪ್ರಾಕೃತ ಭಾಷೆ ಹಾಗೂ ಖರೋಷ್ಠಿ ಲಿಪಿಯಲ್ಲಿವೆ. ಅಫಘಾನಿಸ್ತಾನದ ಕಂದಹಾರ್‌ನಲ್ಲಿನ ಶಾಸನಗಳು ಗ್ರೀಕ್ ಮತ್ತು ಅರಾಮಿಕ್ ಭಾಷೆಗಳನ್ನು ಮತ್ತು ಗ್ರೀಕ್ ಲಿಪಿಯನ್ನು ಒಳಗೊಂಡಿವೆ. ಅಶೋಕನ ಶಾಸನಗಳನ್ನು ಪ್ರಥಮಬಾರಿಗೆ ಅಧ್ಯಯನ ಮಾಡಿ ಅರ್ಥೈಸಿದ ಕೀರ್ತಿ ಜೇಮ್ಸ್ ಪ್ರಿನ್ಸೆಫ್ ಗೆ ಸಲ್ಲುತ್ತದೆ. ಅಶೋಕನ ಶಾಸನಗಳನ್ನು ಅವುಗಳ ರಚನೆಯ ಆಧಾರದ ಮೇಲೆ ಹಲವು ಭಾಗಗಳಾಗಿ ವರ್ಗೀಕರಿಸಿ ನೋಡಬಹುದು.

1. ಮುಖ್ಯ ಶಿಲಾಶಾಸನಗಳು :

ಮುಖ್ಯ ಶಿಲಾಶಾಸನಗಳಲ್ಲಿ 14 ಶಿಲಾಶಾಸನಗಳು ಕಂಡುಬಂದಿವೆ. ಅವುಗಳು ವಿವಿಧ ಸ್ಥಳಗಳಲ್ಲಿ ದೊರೆತಿವೆ. ಮುಖ್ಯವಾದವುಗಳೆಂದರೆ

  1. ಗಿರ್ನಾರ್ ಶಾಸನ (ಗುಜರಾತ್ ರಾಜ್ಯ),
  2. ಕಾಲ್ಸಿ (ಉತ್ತರಾಂಚಲ್ ರಾಜ್ಯ),
  3. ಶಹಬಾಜ್‌ ಘರಿ ಶಿಲಾಶಾಸನ (ಪಾಕಿಸ್ತಾನ),
  4. ಮನ್‌ಸೆಹ್ರ ಶಾಸನ (ಪಾಕಿಸ್ತಾನ),
  5. ದೌಲಿ ಶಿಲಾಶಾಸನ (ಒರಿಸ್ಸಾ),
  6. ಔಗಢ ಶಿಲಾಶಾಸನ (ಒರಿಸ್ಸಾ)
  7. ಬಾಂಬೆಸೊಪಾರ ಶಾಸನ (ಮಹಾರಾಷ್ಟ್ರ),
  8. ಯರಗುಡಿ ಶಿಲಾಶಾಸನ (ಆಂಧ್ರಪ್ರದೇಶ),
  9. ಮಸ್ಕಿ ಶಾಸನ (ಕರ್ನಾಟಕ).

2. ಗೌಣಶಿಲಾ ಶಾಸನಗಳು :

  1. ರೂಪನಾಥ್ ಶಿಲಾಶಾಸನ (ಮದ್ಯಪ್ರದೇಶ),
  2. ಸಹಸ್ರಾಮ್ ಶಿಲಾಶಾಸನ (ಬಿಹಾರ),
  3. ಬೈರತ್ ಶಿಲಾಶಾಸನ (ರಾಜಸ್ಥಾನ),
  4. ಕಲ್ಕತ್ತ-ಬೈರತ್ ಶಿಲಾಶಾಸನ: ಇದನ್ನು ಭಟ್ರುಶಿಲಾಶಾಸನವೆಂದು ಕರೆಯಲಾಗಿದೆ.
  5. ಮಸ್ಕಿ ಶಿಲಾಶಾಸನ (ಕನಾಟಕ),
  6. ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರ (ಕರ್ನಾಟಕ),
  7. ಗವಿಮಠ ಮತ್ತು ಪಾಲ್ಕಿಗುಂಡು ಶಿಲಾಶಾಸನಗಳು (ಕರ್ನಾಟಕ),
  8. ರಜುಲಮಂಡಗಿರಿ ಶಿಲಾಶಾಸನ (ಆಂಧ್ರಪ್ರದೇಶ),
  9. ಗರ್ಜಾ ಶಾಸನ (ಮದ್ಯಪ್ರದೇಶ).

ಮಸ್ಕಿ ಶಾಸನದಲ್ಲಿ ಅಶೋಕನನ್ನು ʻದೇವಾನಾಂಪ್ರಿಯ ಅಶೋಕಸ’ ಎಂದು ಸಂಬೋಧಿಸಿದ್ದರೆ, ಗರ್ಜಾ ಶಾಸನದಲ್ಲಿ ‘ದೇವನಾಂಪಿಯ ಪಿಯದಸಿ’ ಎಂಬ ವಿವರವಿದೆ. ಗೌಣಶಿಲಾ ಶಾಸನಗಳಿಂದ ಅಶೋಕನ ವೈಯುಕ್ತಿಕ ಇತಿಹಾಸ, ಧರ್ಮದ ಸಾರಾಂಶ, ಅಶೋಕನ ಬಿರುದುಗಳ ವಿವರಗಳು ಕಂಡುಬರುತ್ತವೆ.

3. ಮುಖ್ಯಸ್ತಂಭ ಶಾಸನಗಳು :

  1. ದೆಹಲಿ – ತೊಪ್ರಾಸ್ತಂಭ ಶಾಸನ,
  2. ದೆಹಲಿ – ಮೀರತ್ ಸ್ತಂಭ ಶಾಸನ,
  3. ಲೋರಿಯಾ – ಅರಾರಜ್ ಮತ್ತು ಲೋರಿಯನಂದನ್‌ ಘರ್ ಸ್ತಂಭಗಳು,
  4. ರಾಮ್ ಪೂರ್ವಸ್ತಂಭ ಶಾಸನ
  5. ಅಲಹಾಬಾದ್-ಕೋಸಂ ಸ್ತಂಭಶಾಸನ

ಮುಖ್ಯ ಸ್ತಂಭಶಾಸನಗಳನ್ನು ಶಿಲಾ ಶಾಸನಗಳ ಅನುಬಂಧಗಳು ಅಥವಾ ಪುರವಣಿಗಳೆಂದು ಪರಿಗಣಿಸಲಾಗಿದೆ.

4. ಗೌಣಸ್ತಂಭಶಾಸನಗಳು :

  1. ಸಾಂಚಿ ಸ್ತಂಭ ಶಾಸನ (ಮದ್ಯಪ್ರದೇಶ),
  2. ಸಾರನಾಥ್ ಸ್ತಂಭ ಶಾಸನ,
  3. ಅಲಹಾಬಾದ್-ಕೋಸಂ ಸ್ತಂಭ ಶಾಸನ : ಇವುಗಳು ಬೌದ್ಧಸಂಘದಲ್ಲಿ ಉಂಟಾಗಿದ್ದ ಒಡಕನ್ನು ಬಗೆಹರಿಸಿ ಏಕತೆಯನ್ನು ಕಾಪಾಡಲು ಅಶೋಕ ಪ್ರಯತ್ನಿಸಿದ ಅಂಶವನ್ನು ದಾಖಲಿಸುತ್ತವೆ.

5. ಸ್ಮರಣಾರ್ಥ ಸ್ತಂಭಶಾಸನಗಳು :

  1. ರುಮ್ಮಿಂಡೈ ಸ್ತಂಭ ಶಾಸನ (ನೇಪಾಳದ ತರೈನಲ್ಲಿದೆ),
  2. ನಿಗಾಲಿಸಾಗರ್ ಸ್ತಂಭ ಶಾಸನ (ನೇಪಾಳದ ತರೈನಲ್ಲಿದೆ).

6. ಗುಹಾ ಶಾಸನಗಳು :

ಗುಹಾ ಶಾಸನಗಳು ಗಯಾದಿಂದ 24ಕೀ.ಮೀ ದೂರದಲ್ಲಿರುವ ಬಾರಾಬರ್ ಬೆಟ್ಟ ಪ್ರದೇಶದಲ್ಲಿದೆ. ಈ ಬೆಟ್ಟಗಳು ಎರಡು ವಿಧದ ಗುಹೆಗಳನ್ನೊಳಗೊಂಡಿದೆ. ಅವುಗಳೆಂದರೆ ಬಾರಾಬರ್ ಮತ್ತು ನಾಗಾರ್ಜುನ. ಬಾರಾಬರ್ ಬೆಟ್ಟದಲ್ಲಿ ಅಶೋಕನು ಗುಹಾಲಯಗಳನ್ನು ನಿರ್ಮಿಸಿ ಅಜೀವಿಕ ಪಂಥದವರಿಗೆ ದಾನನೀಡಿದ್ದನೆಂದು ಹಾಗೂ ಶಾಸನಗಳ ಹೊರಡಿಸಿದ್ದನೆಂದು ತಿಳಿದುಬರುತ್ತದೆ.

ಅಶೋಕನ ಆತ್ಮಕಥನಗಳೆಂದು ಪರಿಗಣಿಸಲ್ಪಟ್ಟಿರುವ ಈ ಶಾಸನಗಳು ಅಂದಿನ ರಾಜಕೀಯ, ಧಾರ್ಮಿಕ ಹಾಗೂ ವಿದೇಶ ಸಂಬಂಧವನ್ನು ಅರಿಯಲು ಸಹಾಯಕವಾಗಿದೆ. ಡಾ|| ಆರ್.ಎಸ್.ಶರ್ಮ ಅಭಿಪ್ರಾಯದಂತೆ ಇವುಗಳು ಅಶೋಕನ ‘ದೇಶೀಯ ಹಾಗೂ ವಿದೇಶೀಯ ನೀತಿಗಳನ್ನು ಮತ್ತು ಸಾಮ್ರಾಜ್ಯದ ಎಲ್ಲೆಯನ್ನು ಅರಿಯಲು ಸಹಾಯಕವಾಗಿದೆ’.

ಅಶೋಕನ ಆಡಳಿತ ವ್ಯವಸ್ಥೆ

ಅಶೋಕನ ಆಡಳಿತ ವ್ಯವಸ್ಥೆ

ಸಾಹಸಪ್ರಿಯನೂ, ದಿಗ್ವಿಜಯಶಾಲಿಯೂ ಆಗಿದ್ದ ಅಶೋಕ ಮಹಾಶಯ ದಕ್ಷ ಆಡಳಿತಗಾರನೂ ಸಹ ಆಗಿದ್ದನು. ಆತನ ಆಡಳಿತವು ಪ್ರಾಚೀನ ಭಾರತದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿರುವ ಆದರ್ಶ ಮತ್ತು ಮಾದರಿಯಾದ ಆಡಳಿತವಾಗಿದೆ. ಭಾರತ ಖಂಡದ ಚರಿತ್ರೆಯಲ್ಲಿ ಮೊದಲ ಬಾರಿಗೆ ವಿಶಾಲ ಮತ್ತು ಐಕ್ಯತೆಯ ಸಾಮ್ರಾಜ್ಯವನ್ನು ಅಶೋಕ ಸ್ಥಾಪಿಸಿದ್ದನು. ಅಶೋಕನ ಆಡಳಿತ ಸಂಘಟನೆಯಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಅಂತಹ ಲಕ್ಷಣಗಳು ಮೌರ್ಯರ ಆಡಳಿತದ ಲಕ್ಷಣಗಳಾಗಿಯೂ ಕಂಡುಬರುತ್ತವೆ. ಅಂತಹ ಪ್ರಮುಖ ಲಕ್ಷಣಗಳೆಂದರೆ :

  1. ಪ್ರಬಲ ಕೇಂದ್ರಾಡಳಿತ,
  2. ವಿಕೇಂದ್ರೀಕೃತ ಆಡಳಿತ
  3. ಪ್ರಜಾಹಿತ ಆಡಳಿತ
  4. ಲೋಕೋಪಯೋಗಿ ಕಾರ್ಯಗಳು

1. ಪ್ರಬಲ ಕೇಂದ್ರಾಡಳಿತ :

ಅಶೋಕನ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರಸರ್ಕಾರವು ಅತ್ಯಂತ ಪ್ರಬಲವಾದುದಾಗಿತ್ತು. ಕೇಂದ್ರಾಡಳಿತವು ರಾಜ ಮತ್ತು ಮಂತ್ರಿಪರಿಷತ್‌ ಸಹಾಯದಿಂದ ನಡೆಯುತ್ತಿತ್ತು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ಅಧಿಕಾರಿಗಳ ದೃಷ್ಟಿಯಿಂದ ರಾಜನು ನಿರಂಕುಶಾಧಿಕಾರಿಯಾಗಿದ್ದನು. ಆದರೆ ಆಡಳಿತ ನಿರಂಕುಶ ರೀತಿಯಲ್ಲಿ ಇರಲಿಲ್ಲ. ರಾಜನು ಸಾಮಾನ್ಯ ಆಡಳಿತಗಾರನಾಗಿ, ಅತ್ಯುಚ್ಛ ನ್ಯಾಯಾಧೀಶನಾಗಿ, ಶ್ರೇಷ್ಠ ದಂಡನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು.

ಮಂತ್ರಿಪರಿಷತ್ : ಕೇಂದ್ರಾಡಳಿತದಲ್ಲಿ ರಾಜನಿಗೆ ಸಹಕಾರಿಯಾಗಿ ಮಂತ್ರಿಪರಿಷತ್ ಇತ್ತು. ಕೇಂದ್ರಾಡಳಿತದಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರು ಕಾರ್ಯನಿರ್ವಹಿಸುತ್ತಿದ್ದರು.

ಅಂತ ಮಹಾಮಾತ್ರರು : ರಾಜ್ಯದ ಗಡಿಭಾಗಗಳ ರಕ್ಷಣಾ ಕಾರ್ಯವನ್ನು ನಿರ್ವಹಿಸುತ್ತಿದ್ದರು.

ಧರ್ಮ ಮಹಾಮಾತ್ರರು : ಧಾರ್ಮಿಕ ಶ್ರೇಯಸ್ಸನ್ನು ಸಾಧಿಸುತ್ತಿದ್ದರು.

ಸ್ತ್ರೀ ಅದ್ಯಕ್ಷ ಮಹಾಮಾತ್ರರು : ಸ್ತ್ರೀಯರ ಹಿತವನ್ನು ನೋಡಿಕೊಳ್ಳುತ್ತಿದ್ದರು.

2. ವಿಕೇಂದ್ರೀಕೃತ ಆಡಳಿತ :

ಅಶೋಕನು ಸಂಸ್ಥಾಪಿಸಿದ್ದ ಆಡಳಿತವು ವಿಕೇಂದ್ರೀಕೃತ ಸ್ವರೂಪದ್ದಾಗಿತ್ತು. ಅಶೋಕನ ಕಾಲದಲ್ಲಿ 5 ಪ್ರಾಂತ್ಯಗಳಿದ್ದು ಪ್ರಾಂತ್ಯಾಧಿಕಾರಿಗಳು ಪ್ರಾಂತೀಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಅವುಗಳೆಂದರೆ; ಕಳಿಂಗ, ಕೋಸಲ, ಪಾಟಲೀಪುತ್ರ, ಉಜ್ಜಯನಿ ಮತ್ತು ಸುವರ್ಣಗಿರಿ, ಕೇಂದ್ರಾಡಳಿತದಂತೆಯೇ ಪ್ರಾಂತೀಯ ಆಡಳಿತವು ಸಹ ವ್ಯವಸ್ಥಿತ ಮತ್ತು ಸುಭದ್ರ ಆಡಳಿತವೆನಿಸಿತ್ತು.

3. ಪ್ರಜಾಹಿತ ಆಡಳಿತ (ಸುಖೀ ರಾಜ್ಯದ ಸ್ಥಾಪನೆ):

ಅಶೋಕನು ಸಂಸ್ಥಾಪಿಸಿದ್ದ ಆಡಳಿತವು ಪ್ರಜಾಹಿತ ಆಡಳಿತವೆನಿಸಿತ್ತು. ಪ್ರಜಾಹಿತಾಕಾಂಕ್ಷೆಯೇ ರಾಜನ ಆಡಳಿತದ ಮೂಲ ಮಂತ್ರವಾಗಿತ್ತು. ಪ್ರಜಾ ಅಭ್ಯುದಯವೇ ರಾಜನ ಅಭ್ಯುದಯವಾಗಿತ್ತು.

4. ಪ್ರಜಾಕಲ್ಯಾಣ (ಲೋಕೋಪಯೋಗಿ ಕಾರ್ಯಗಳು):

ಪ್ರಜಾಕಲ್ಯಾಣ ಕಾರ್ಯಕ್ಕಾಗಿ ಕೆಲವು ಲೋಕೋಪಯೋಗಿ ಕಾರ್ಯಗಳನ್ನು ಜಾರಿಗೆ ತಂದಿದ್ದನು. ಪ್ರಯಾಣಿಕರಿಗಾಗಿ ಮಾರ್ಗಗಳನ್ನು ನಿರ್ಮಿಸಿದ್ದನು. ಮಾರ್ಗಗಳ ಎರಡು ಕಡೆಗೂ ನೆರಳಿಗಾಗಿ ಆಲದ ಮರಗಳನ್ನು ನೆಡಿಸಿದ್ದನು. ಮಾವಿನ ತೋಪುಗಳನ್ನು ಬೆಳೆಸಿದ್ದನು. ಪ್ರತಿ 9 ಮೈಲುಗಳಿಗೆ ಬಾವಿಯನ್ನು ತೊಡಿಸಿದ್ದನು. ಮಾರ್ಗದ ಮಧ್ಯೆ ವಿಶ್ರಾಂತಿ ಗೃಹಗಳನ್ನು ಕಟ್ಟಿಸಿದ್ದನು. ಪ್ರಾಣಿ ಮತ್ತು ಮಾನವರ ಉಪಯೋಗಕ್ಕಾಗಿ ಚಿಕಿತ್ಸಾಲಯಗಳನ್ನು ತೆರೆದಿದ್ದನು. ಚಿಕತ್ಸೆಗಾಗಿ ಗಿಡಮೂಲಿಕೆಗಳ ವನವನ್ನು ಬೆಳೆಸಿದ್ದನು. ಅಶೋಕನ 7 ನೇ ಸ್ತಂಭಶಾಸನ ಮತ್ತು 2ನೇ ಬಂಡೆಕಲ್ಲು ಶಾಸನದಿಂದ ಅಶೋಕನ ಪ್ರಜಾಹಿತ ಕಾರ್ಯಗಳ ವಿವರ ತಿಳಿದುಬರುತ್ತದೆ. ಈ ಮೇಲಿನ ಅಂಶಗಳನ್ನು ಅವಲೋಕಿಸಿದ ಚರಿತ್ರಾಕಾರ ʻಫೀಟ್’ ಅಭಿಪ್ರಾಯ ಪಡುವಂತೆ `ಪ್ರಜಾಹಿತಕಾರ್ಯಕ್ಕೆ ಅಶೋಕನ ಧಾರ್ಮಿಕ ಮತ್ತು ನೈತಿಕ ಅಂಶಗಳು ಆಧಾರಗಳಾಗಿದ್ದವು’.

5. ಶಾಂತಿ ಮತ್ತು ಅಹಿಂಸೆಯ ತತ್ವ :

ಅಶೋಕನ ಆಳ್ವಿಕೆಯಲ್ಲಿ ಶಾಂತಿ ಮತ್ತು ಅಹಿಂಸೆಯ ತತ್ವವು ಮೂಲ ಆಧಾರವಾಗಿತ್ತು. ಶಾಂತಿ ಮತ್ತು ಅಹಿಂಸಾತತ್ವವು ಬೌದ್ಧ ಧಾರ್ಮಿಕ ತತ್ವಗಳನ್ನು ಆಧರಿಸಿದೆ. ಯುದ್ಧದಿಂದ ಮತ್ತು ಹಿಂಸೆಗಳ ಮೂಲಕ ಭೂಪ್ರದೇಶ ಗೆಲ್ಲುವುದನ್ನು ತ್ಯಜಿಸುವುದು, ಜೊತೆಗೆ ಪ್ರಾಣಿಹತ್ಯೆಯನ್ನು ತಡೆಗಟ್ಟುವುದೇ ಆಗಿದೆ.

ಅಶೋಕ ಮತ್ತು ಬೌದ್ಧಧರ್ಮದ ಪ್ರಸಾರ

ಅಶೋಕ ಮತ್ತು ಬೌದ್ಧಧರ್ಮದ ಪ್ರಸಾರ

ಕಳಿಂಗ ಯುದ್ಧಾನಂತರ ಮನಪರಿವರ್ತನೆಯಾಗಿ ಬೌದ್ಧಮತಾವಲಂಬಿಯಾದ ಅಶೋಕ ಮಹಾಶಯ ಆ ಪಂಥದ ಶ್ರೇಯಸ್ಸಿಗಾಗಿ ಅಪಾರವಾಗಿ ಶ್ರಮಿಸಿದನು. ಬೌದ್ಧ ಮತದ ಅಭಿವೃದ್ಧಿಗಾಗಿ ಅಶೋಕನು ಮಾಡಿದ ಸ್ಮರಣಾರ್ಹ ಸೇವೆಯ ಹಿನ್ನೆಲೆಯಲ್ಲಿ ಆತನನ್ನು 2ನೇ ಬುದ್ಧನೆಂದು ಹೆಸರಿಸಲಾಗಿದೆ. ಪೊ|| ಆರ್.ಸತ್ಯನಾಥ ಅಯ್ಯರ್ ‘ಅಶೋಕನು ಭಗವಾನ್ ಬುದ್ಧನ ಉಪದೇಶಗಳ ಸಾರವನ್ನು ಅಧಿಕೃತವಾಗಿ ಪ್ರಸಾರಮಾಡಿದನು’ ಎಂದಿದ್ದಾರೆ. ಬೌದ್ಧಪಂಥದ ಶ್ರೇಯೋಭಿವೃದ್ದಿಗಾಗಿ 5 ಮಾರ್ಗಗಳನ್ನು ಅನುಸರಿಸಿದನು.

1) ಧರ್ಮ ಮಹಾಮಾತ್ರರ ನೇಮಕ, 

2) ಬೌದ್ಧ ಸಂಘಗಳ ಸ್ಥಾಪನೆ,

3) ಧಾರ್ಮಿಕ ಯಾತ್ರೆಗಳು,    

4) ಶಿಲಾಶಾಸನ ಪದ್ಧತಿ,

5) ಬೌದ್ಧಯತಿಗಳ ನೇಮಕ.

1.ಧರ್ಮಮಹಾಮಾತ್ರರ ನೇಮಕ : ಬೌದ್ಧಧರ್ಮದ ಸಂವರ್ಧನೆಗಾಗಿ ಧರ್ಮಮಹಾಮಾತ್ರರನ್ನು ನೇಮಿಸಲಾಗಿತ್ತು. 13ನೇ ಬಂಡೆಕಲ್ಲು ಶಾಸನ ತಿಳಿಸುವಂತೆ ಧರ್ಮಪ್ರಚಾರ ಮಾಡಲು ಮತ್ತು ಪ್ರಚಾರವಾದುದು ಕಾರ್ಯಗತವಾಗಿದೆಯೇ ಎಂದು ಪರಿಶೀಲಿಸಲು 256ವಿಶೇಷ ಅಧಿಕಾರಿಗಳನ್ನು ನೇಮಿಸಿದ್ದನು. ಧಮ್ಮಮಹಾಮಾತ್ರರನ್ನು ಧರ್ಮಆಯುಕ್ತರೆಂದು ಸಹ ಕರೆಯಲಾಗುತ್ತಿತ್ತು.

2. ಬೌದ್ಧಸಂಘಗಳ ಸ್ಥಾಪನೆ : ಬೌದ್ಧಸನ್ಯಾಸಿ, ಸನ್ಯಾಸಿನಿಯರಿಂದ ಕೂಡಿದ ಸಂಘವು ಧರ್ಮದ ಶ್ರೇಯಸ್ಸಿಗಾಗಿ ಅಪಾರ ಶ್ರಮಿಸುತ್ತಿತ್ತು. ಸಂಘದ ಪಾತ್ರ ಕುರಿತು ‘ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ’ ಎಂಬ ಅಂಶ ಪ್ರಧಾನವಾದುದು. ಬೌದ್ಧ ಸಂಘದ ಬಗ್ಗೆ ಅಶೋಕ ಮಹಾಶಯನ ಅಭಿಪ್ರಾಯ ʻಸಾಂಚಿ ಹಾಗೂ ಸಾರನಾಥ’ ಶಾಸನಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ‘ನನ್ನ ಪುತ್ರ. ಪೌತ್ರರಿರುವವರೆಗೂ ಸೂರ್ಯ ಚಂದ್ರರಿರುವವರೆಗೂ ಬೌದ್ಧ ಬಿಕ್ಷು-ಚಿಕ್ಷುಣಿಯರ ಸಂಘವು ಸಮಗ್ರವಾಗಿರತಕ್ಕದ್ದು’ ಎಂದು ಹೇಳಿದ್ದಾನೆ.

3. ಧಾರ್ಮಿಕ ಯಾತ್ರೆಗಳು : ಧರ್ಮಪ್ರಚಾರಕ್ಕಾಗಿ ಧಾರ್ಮಿಕ ಯಾತ್ರೆಗಳನ್ನು ನಡೆಸಿದನು. ಬುದ್ಧನಿಗೆ ಸಂಬಂಧಿಸಿದ ಪ್ರದೇಶಗಳಾದ ಲುಂಬಿನಿವನ, ಕಪಿಲವಸ್ತು, ಸಾರನಾಥ, ಕುಶೀನಗರ ಮೊದಲಾದ ಪ್ರದೇಶಗಳಿಗೆ ಧರ್ಮಯಾತ್ರೆ ಕೈಗೊಂಡನು.

4. ಬೌದ್ಧಯತಿಗಳ ನೇಮಕ : ಬೌದ್ಧಧರ್ಮದ ಪ್ರಚಾರಕ್ಕಾಗಿ ಬೌದ್ಧಯತಿಗಳನ್ನು ನೇಮಿಸಿದನು. ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರೆಯರನ್ನು ಧರ್ಮ ಪ್ರಚಾರಕ್ಕಾಗಿ ಸಿಲೋನ್‌ ಗೆ ಕಳುಹಿಸಿದನು. ಅಶೋಕನು ಈ ಕೆಳಕಂಡ ಪ್ರದೇಶಗಳಿಗೆ ವಿವಿಧ ಪ್ರಚಾರಕರನ್ನು ಕಳುಹಿಸಿದನು. ಮಜ್ಜಾಂತಿಕ- ಕಾಶ್ಮೀರ ಮತ್ತು ಗಾಂಧಾರ, ಮಹಾರಕ್ಷಿತ-ಯವನದೇಶ, ಮಜ್ಜಿಮ-ಹಿಮಾಲಯ ದೇಶ, ಮಹಾಧರ್ಮ ರಕ್ಷಿತ-ಮಹಾರಾಷ್ಟ್ರ, ರಕ್ಷಿತ-ವಾರಣಾಸಿ, ಮಹಾದೇವ-ಮಹಿಷಾ ಮಂಡಲ(ಮೈಸೂರು-ಕರ್ನಾಟಕ), ಸೋನ ಮತ್ತು ಉತ್ತರ-ಸುವರ್ಣ ಭೂಮಿ ಮತ್ತು ಪೆಗು.

5. 3ನೇ ಬೌದ್ಧ ಸಮ್ಮೇಳನ : ಬೌದ್ಧ ಪಂಥದ ಅಭ್ಯುದಯ ಮತ್ತು ಶ್ರೇಯಸ್ಸು ಹಾಗೂ ಐಕ್ಯತೆಯ ಸ್ಥಾಪನೆಗಾಗಿ ಪಾಟಲೀಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನವನ್ನು ನಡೆಸಿದನು. ಈ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಆಚಾರ್ಯ ಮೊಗ್ಗಲಿಪುತ್ರತಿಸ್ಸ ವಹಿಸಿದ್ದನು. ಕ್ರಿ.ಪೂ 234ರಲ್ಲಿ ಆದ ಮೂರನೇ ಬೌದ್ಧ ಸಮ್ಮೇಳನವು ಮಹತ್ವದ ಸಾಧನೆ ಮಾಡಿತು. ಈ ಸಮ್ಮೇಳನದ ಮೂಲಕ ಉಪಖಂಡದ ವಿವಿಧ ಭಾಗಗಳಿಗೆ ಧರ್ಮ ಪ್ರಚಾರಕ್ಕಾಗಿ ಪ್ರಚಾರಕರನ್ನು ಕಳುಹಿಸಲಾಯಿತು. ಜನಸಾಮಾನ್ಯರನ್ನು ಧರ್ಮದ ಕಡೆಗೆ ಆಕರ್ಷಿಸಲು ಸ್ತೂಪಗಳನ್ನು ಕಟ್ಟಿಸಿದನು. ಅಶೋಕನು ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 84,000 ಸ್ತೂಪಗಳನ್ನು ನಿರ್ಮಿಸಿದ್ದನೆಂದು ತಿಳಿದುಬರುತ್ತದೆ. ಬೌದ್ಧಧರ್ಮದ ತತ್ವಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ದೃಷ್ಠಿಯಿಂದ ಕಲ್ಲುಬಂಡೆಗಳ ಮೇಲೆ ಬೌದ್ಧ ಧಾರ್ಮಿಕ ತತ್ವಗಳನ್ನು ಕೆತ್ತಿಸಿದನು.

ಅಶೋಕನ ಧರ್ಮಪ್ರಚಾರ ಕಾರ್ಯವನ್ನು ಗಮನಿಸಿಯೇ ಡಾ|| ಆರ್.ಎಸ್.ಶರ್ಮರವರು ʻಪ್ರಾಚೀನ ವಿಶ್ವದ ಇತಿಹಾಸದಲ್ಲಿ ಅಶೋಕಮಹಾಶಯ ಅತ್ಯುತ್ತಮ ಧರ್ಮಪ್ರಚಾರಕ’ ಎಂದಿದ್ದಾರೆ. ಡಾ||ಆರ್.ಕೆ.ಮುಖರ್ಜಿ ಯವರು ತಮ್ಮ ಕೃತಿಯಾದ ‘ಹಿಸ್ಟರಿ ಆಫ್ ಏನ್ಸಿಯಂಟ್ ಇಂಡಿಯಾ’ ದಲ್ಲಿ ‘ನಾಗರೀಕ ಪ್ರಪಂಚದ ಸವಿಸ್ತಾರ ಪ್ರದೇಶದ ಮೇಲೆ ಭಾರತೀಯ ಸಂಸ್ಕೃತಿಯ ನೈತಿಕ ಪ್ರಾಬಲ್ಯತೆಯನ್ನು ತರುವಲ್ಲಿ ಅಶೋಕ ಸಾಧನವಾಗಿ ವರ್ತಿಸಿದನು’ ಎಂದಿದ್ದಾರೆ. ಬೌದ್ಧ ಮತದ ಅಭಿವೃದ್ಧಿಗಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಅಶೋಕ ಮಹಾಶಯನನ್ನು 2ನೇ ಬುದ್ದನೆಂದೇ ಹೆಸರಿಸಲಾಗಿದೆ. ಧರ್ಮಾಶೋಕನ ಅಪಾರ ಪರಿಶ್ರಮದಿಂದ ಬೌದ್ಧಧರ್ಮವು ದೇಶ ವಿದೇಶಗಳಲ್ಲಿ ಹರಡಲ್ಪಟ್ಟ ಪ್ರಧಾನ ಧರ್ಮವಾಯಿತು.