ಅಶೋಕನ ಶಾಸನಗಳು

ಅಶೋಕನ ಶಾಸನಗಳು

ಪೀಠಿಕೆ:

ಭಾರತದಲ್ಲಿ ಅಶೋಕನಿಂದಲೇ ಶಾಸನಗಳ ರಚನೆ ಪ್ರಾರಂಭವಾಯಿತು. ಆದ್ದರಿಂದ ಅಶೋಕನನ್ನು ‘ಶಾಸನಗಳ ಆದ್ಯಪ್ರವರ್ತಕ’ನೆಂದೇ ಹೆಸರಿಸಲಾಗಿದೆ. ತನ್ನ ಆಳ್ವಿಕೆಯ ಅವಧಿಯಲ್ಲಿ ಸಾಮ್ರಾಜ್ಯದಾದ್ಯಂತ ಶಾಸನಗಳನ್ನು ಕೆತ್ತಿಸಿದ್ದನು. ಹೀಗೆ ಕೆತ್ತಿಸಿದ ಬಹುಸಂಖ್ಯಾತ ಶಾಸನಗಳು ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ದೊರೆತಿವೆ. ವಿವಿಧ ಭಾಷೆ ಮತ್ತು ಲಿಪಿಗಳಲ್ಲಿ ರಚನೆಗೊಂಡ ಶಾಸನಗಳು ಲಭ್ಯವಾಗಿವೆ. ಅಶೋಕನ ಹೆಚ್ಚು ಶಾಸನಗಳು ಪ್ರಾಕೃತ ಭಾಷೆ ಹಾಗೂ ಬ್ರಾಹ್ಮಲಿಪಿಯಲ್ಲಿವೆ. ವಾಯುವ್ಯ ಭಾರತದಲ್ಲಿ ದೊರೆತ ಅಶೋಕನ ಶಾಸನಗಳು ಪ್ರಾಕೃತ ಭಾಷೆ ಹಾಗೂ ಖರೋಷ್ಠಿ ಲಿಪಿಯಲ್ಲಿವೆ. ಅಫಘಾನಿಸ್ತಾನದ ಕಂದಹಾರ್‌ನಲ್ಲಿನ ಶಾಸನಗಳು ಗ್ರೀಕ್ ಮತ್ತು ಅರಾಮಿಕ್ ಭಾಷೆಗಳನ್ನು ಮತ್ತು ಗ್ರೀಕ್ ಲಿಪಿಯನ್ನು ಒಳಗೊಂಡಿವೆ. ಅಶೋಕನ ಶಾಸನಗಳನ್ನು ಪ್ರಥಮಬಾರಿಗೆ ಅಧ್ಯಯನ ಮಾಡಿ ಅರ್ಥೈಸಿದ ಕೀರ್ತಿ ಜೇಮ್ಸ್ ಪ್ರಿನ್ಸೆಫ್ ಗೆ ಸಲ್ಲುತ್ತದೆ. ಅಶೋಕನ ಶಾಸನಗಳನ್ನು ಅವುಗಳ ರಚನೆಯ ಆಧಾರದ ಮೇಲೆ ಹಲವು ಭಾಗಗಳಾಗಿ ವರ್ಗೀಕರಿಸಿ ನೋಡಬಹುದು.

1. ಮುಖ್ಯ ಶಿಲಾಶಾಸನಗಳು :

ಮುಖ್ಯ ಶಿಲಾಶಾಸನಗಳಲ್ಲಿ 14 ಶಿಲಾಶಾಸನಗಳು ಕಂಡುಬಂದಿವೆ. ಅವುಗಳು ವಿವಿಧ ಸ್ಥಳಗಳಲ್ಲಿ ದೊರೆತಿವೆ. ಮುಖ್ಯವಾದವುಗಳೆಂದರೆ

  1. ಗಿರ್ನಾರ್ ಶಾಸನ (ಗುಜರಾತ್ ರಾಜ್ಯ),
  2. ಕಾಲ್ಸಿ (ಉತ್ತರಾಂಚಲ್ ರಾಜ್ಯ),
  3. ಶಹಬಾಜ್‌ ಘರಿ ಶಿಲಾಶಾಸನ (ಪಾಕಿಸ್ತಾನ),
  4. ಮನ್‌ಸೆಹ್ರ ಶಾಸನ (ಪಾಕಿಸ್ತಾನ),
  5. ದೌಲಿ ಶಿಲಾಶಾಸನ (ಒರಿಸ್ಸಾ),
  6. ಔಗಢ ಶಿಲಾಶಾಸನ (ಒರಿಸ್ಸಾ)
  7. ಬಾಂಬೆಸೊಪಾರ ಶಾಸನ (ಮಹಾರಾಷ್ಟ್ರ),
  8. ಯರಗುಡಿ ಶಿಲಾಶಾಸನ (ಆಂಧ್ರಪ್ರದೇಶ),
  9. ಮಸ್ಕಿ ಶಾಸನ (ಕರ್ನಾಟಕ).

2. ಗೌಣಶಿಲಾ ಶಾಸನಗಳು :

  1. ರೂಪನಾಥ್ ಶಿಲಾಶಾಸನ (ಮದ್ಯಪ್ರದೇಶ),
  2. ಸಹಸ್ರಾಮ್ ಶಿಲಾಶಾಸನ (ಬಿಹಾರ),
  3. ಬೈರತ್ ಶಿಲಾಶಾಸನ (ರಾಜಸ್ಥಾನ),
  4. ಕಲ್ಕತ್ತ-ಬೈರತ್ ಶಿಲಾಶಾಸನ: ಇದನ್ನು ಭಟ್ರುಶಿಲಾಶಾಸನವೆಂದು ಕರೆಯಲಾಗಿದೆ.
  5. ಮಸ್ಕಿ ಶಿಲಾಶಾಸನ (ಕನಾಟಕ),
  6. ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರ (ಕರ್ನಾಟಕ),
  7. ಗವಿಮಠ ಮತ್ತು ಪಾಲ್ಕಿಗುಂಡು ಶಿಲಾಶಾಸನಗಳು (ಕರ್ನಾಟಕ),
  8. ರಜುಲಮಂಡಗಿರಿ ಶಿಲಾಶಾಸನ (ಆಂಧ್ರಪ್ರದೇಶ),
  9. ಗರ್ಜಾ ಶಾಸನ (ಮದ್ಯಪ್ರದೇಶ).

ಮಸ್ಕಿ ಶಾಸನದಲ್ಲಿ ಅಶೋಕನನ್ನು ʻದೇವಾನಾಂಪ್ರಿಯ ಅಶೋಕಸ’ ಎಂದು ಸಂಬೋಧಿಸಿದ್ದರೆ, ಗರ್ಜಾ ಶಾಸನದಲ್ಲಿ ‘ದೇವನಾಂಪಿಯ ಪಿಯದಸಿ’ ಎಂಬ ವಿವರವಿದೆ. ಗೌಣಶಿಲಾ ಶಾಸನಗಳಿಂದ ಅಶೋಕನ ವೈಯುಕ್ತಿಕ ಇತಿಹಾಸ, ಧರ್ಮದ ಸಾರಾಂಶ, ಅಶೋಕನ ಬಿರುದುಗಳ ವಿವರಗಳು ಕಂಡುಬರುತ್ತವೆ.

3. ಮುಖ್ಯಸ್ತಂಭ ಶಾಸನಗಳು :

  1. ದೆಹಲಿ – ತೊಪ್ರಾಸ್ತಂಭ ಶಾಸನ,
  2. ದೆಹಲಿ – ಮೀರತ್ ಸ್ತಂಭ ಶಾಸನ,
  3. ಲೋರಿಯಾ – ಅರಾರಜ್ ಮತ್ತು ಲೋರಿಯನಂದನ್‌ ಘರ್ ಸ್ತಂಭಗಳು,
  4. ರಾಮ್ ಪೂರ್ವಸ್ತಂಭ ಶಾಸನ
  5. ಅಲಹಾಬಾದ್-ಕೋಸಂ ಸ್ತಂಭಶಾಸನ

ಮುಖ್ಯ ಸ್ತಂಭಶಾಸನಗಳನ್ನು ಶಿಲಾ ಶಾಸನಗಳ ಅನುಬಂಧಗಳು ಅಥವಾ ಪುರವಣಿಗಳೆಂದು ಪರಿಗಣಿಸಲಾಗಿದೆ.

4. ಗೌಣಸ್ತಂಭಶಾಸನಗಳು :

  1. ಸಾಂಚಿ ಸ್ತಂಭ ಶಾಸನ (ಮದ್ಯಪ್ರದೇಶ),
  2. ಸಾರನಾಥ್ ಸ್ತಂಭ ಶಾಸನ,
  3. ಅಲಹಾಬಾದ್-ಕೋಸಂ ಸ್ತಂಭ ಶಾಸನ : ಇವುಗಳು ಬೌದ್ಧಸಂಘದಲ್ಲಿ ಉಂಟಾಗಿದ್ದ ಒಡಕನ್ನು ಬಗೆಹರಿಸಿ ಏಕತೆಯನ್ನು ಕಾಪಾಡಲು ಅಶೋಕ ಪ್ರಯತ್ನಿಸಿದ ಅಂಶವನ್ನು ದಾಖಲಿಸುತ್ತವೆ.

5. ಸ್ಮರಣಾರ್ಥ ಸ್ತಂಭಶಾಸನಗಳು :

  1. ರುಮ್ಮಿಂಡೈ ಸ್ತಂಭ ಶಾಸನ (ನೇಪಾಳದ ತರೈನಲ್ಲಿದೆ),
  2. ನಿಗಾಲಿಸಾಗರ್ ಸ್ತಂಭ ಶಾಸನ (ನೇಪಾಳದ ತರೈನಲ್ಲಿದೆ).

6. ಗುಹಾ ಶಾಸನಗಳು :

ಗುಹಾ ಶಾಸನಗಳು ಗಯಾದಿಂದ 24ಕೀ.ಮೀ ದೂರದಲ್ಲಿರುವ ಬಾರಾಬರ್ ಬೆಟ್ಟ ಪ್ರದೇಶದಲ್ಲಿದೆ. ಈ ಬೆಟ್ಟಗಳು ಎರಡು ವಿಧದ ಗುಹೆಗಳನ್ನೊಳಗೊಂಡಿದೆ. ಅವುಗಳೆಂದರೆ ಬಾರಾಬರ್ ಮತ್ತು ನಾಗಾರ್ಜುನ. ಬಾರಾಬರ್ ಬೆಟ್ಟದಲ್ಲಿ ಅಶೋಕನು ಗುಹಾಲಯಗಳನ್ನು ನಿರ್ಮಿಸಿ ಅಜೀವಿಕ ಪಂಥದವರಿಗೆ ದಾನನೀಡಿದ್ದನೆಂದು ಹಾಗೂ ಶಾಸನಗಳ ಹೊರಡಿಸಿದ್ದನೆಂದು ತಿಳಿದುಬರುತ್ತದೆ.

ಅಶೋಕನ ಆತ್ಮಕಥನಗಳೆಂದು ಪರಿಗಣಿಸಲ್ಪಟ್ಟಿರುವ ಈ ಶಾಸನಗಳು ಅಂದಿನ ರಾಜಕೀಯ, ಧಾರ್ಮಿಕ ಹಾಗೂ ವಿದೇಶ ಸಂಬಂಧವನ್ನು ಅರಿಯಲು ಸಹಾಯಕವಾಗಿದೆ. ಡಾ|| ಆರ್.ಎಸ್.ಶರ್ಮ ಅಭಿಪ್ರಾಯದಂತೆ ಇವುಗಳು ಅಶೋಕನ ‘ದೇಶೀಯ ಹಾಗೂ ವಿದೇಶೀಯ ನೀತಿಗಳನ್ನು ಮತ್ತು ಸಾಮ್ರಾಜ್ಯದ ಎಲ್ಲೆಯನ್ನು ಅರಿಯಲು ಸಹಾಯಕವಾಗಿದೆ’.

ಅಶೋಕನ ಆಡಳಿತ ವ್ಯವಸ್ಥೆ

ಅಶೋಕನ ಆಡಳಿತ ವ್ಯವಸ್ಥೆ

ಸಾಹಸಪ್ರಿಯನೂ, ದಿಗ್ವಿಜಯಶಾಲಿಯೂ ಆಗಿದ್ದ ಅಶೋಕ ಮಹಾಶಯ ದಕ್ಷ ಆಡಳಿತಗಾರನೂ ಸಹ ಆಗಿದ್ದನು. ಆತನ ಆಡಳಿತವು ಪ್ರಾಚೀನ ಭಾರತದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿರುವ ಆದರ್ಶ ಮತ್ತು ಮಾದರಿಯಾದ ಆಡಳಿತವಾಗಿದೆ. ಭಾರತ ಖಂಡದ ಚರಿತ್ರೆಯಲ್ಲಿ ಮೊದಲ ಬಾರಿಗೆ ವಿಶಾಲ ಮತ್ತು ಐಕ್ಯತೆಯ ಸಾಮ್ರಾಜ್ಯವನ್ನು ಅಶೋಕ ಸ್ಥಾಪಿಸಿದ್ದನು. ಅಶೋಕನ ಆಡಳಿತ ಸಂಘಟನೆಯಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಅಂತಹ ಲಕ್ಷಣಗಳು ಮೌರ್ಯರ ಆಡಳಿತದ ಲಕ್ಷಣಗಳಾಗಿಯೂ ಕಂಡುಬರುತ್ತವೆ. ಅಂತಹ ಪ್ರಮುಖ ಲಕ್ಷಣಗಳೆಂದರೆ :

  1. ಪ್ರಬಲ ಕೇಂದ್ರಾಡಳಿತ,
  2. ವಿಕೇಂದ್ರೀಕೃತ ಆಡಳಿತ
  3. ಪ್ರಜಾಹಿತ ಆಡಳಿತ
  4. ಲೋಕೋಪಯೋಗಿ ಕಾರ್ಯಗಳು

1. ಪ್ರಬಲ ಕೇಂದ್ರಾಡಳಿತ :

ಅಶೋಕನ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರಸರ್ಕಾರವು ಅತ್ಯಂತ ಪ್ರಬಲವಾದುದಾಗಿತ್ತು. ಕೇಂದ್ರಾಡಳಿತವು ರಾಜ ಮತ್ತು ಮಂತ್ರಿಪರಿಷತ್‌ ಸಹಾಯದಿಂದ ನಡೆಯುತ್ತಿತ್ತು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ಅಧಿಕಾರಿಗಳ ದೃಷ್ಟಿಯಿಂದ ರಾಜನು ನಿರಂಕುಶಾಧಿಕಾರಿಯಾಗಿದ್ದನು. ಆದರೆ ಆಡಳಿತ ನಿರಂಕುಶ ರೀತಿಯಲ್ಲಿ ಇರಲಿಲ್ಲ. ರಾಜನು ಸಾಮಾನ್ಯ ಆಡಳಿತಗಾರನಾಗಿ, ಅತ್ಯುಚ್ಛ ನ್ಯಾಯಾಧೀಶನಾಗಿ, ಶ್ರೇಷ್ಠ ದಂಡನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು.

ಮಂತ್ರಿಪರಿಷತ್ : ಕೇಂದ್ರಾಡಳಿತದಲ್ಲಿ ರಾಜನಿಗೆ ಸಹಕಾರಿಯಾಗಿ ಮಂತ್ರಿಪರಿಷತ್ ಇತ್ತು. ಕೇಂದ್ರಾಡಳಿತದಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರು ಕಾರ್ಯನಿರ್ವಹಿಸುತ್ತಿದ್ದರು.

ಅಂತ ಮಹಾಮಾತ್ರರು : ರಾಜ್ಯದ ಗಡಿಭಾಗಗಳ ರಕ್ಷಣಾ ಕಾರ್ಯವನ್ನು ನಿರ್ವಹಿಸುತ್ತಿದ್ದರು.

ಧರ್ಮ ಮಹಾಮಾತ್ರರು : ಧಾರ್ಮಿಕ ಶ್ರೇಯಸ್ಸನ್ನು ಸಾಧಿಸುತ್ತಿದ್ದರು.

ಸ್ತ್ರೀ ಅದ್ಯಕ್ಷ ಮಹಾಮಾತ್ರರು : ಸ್ತ್ರೀಯರ ಹಿತವನ್ನು ನೋಡಿಕೊಳ್ಳುತ್ತಿದ್ದರು.

2. ವಿಕೇಂದ್ರೀಕೃತ ಆಡಳಿತ :

ಅಶೋಕನು ಸಂಸ್ಥಾಪಿಸಿದ್ದ ಆಡಳಿತವು ವಿಕೇಂದ್ರೀಕೃತ ಸ್ವರೂಪದ್ದಾಗಿತ್ತು. ಅಶೋಕನ ಕಾಲದಲ್ಲಿ 5 ಪ್ರಾಂತ್ಯಗಳಿದ್ದು ಪ್ರಾಂತ್ಯಾಧಿಕಾರಿಗಳು ಪ್ರಾಂತೀಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಅವುಗಳೆಂದರೆ; ಕಳಿಂಗ, ಕೋಸಲ, ಪಾಟಲೀಪುತ್ರ, ಉಜ್ಜಯನಿ ಮತ್ತು ಸುವರ್ಣಗಿರಿ, ಕೇಂದ್ರಾಡಳಿತದಂತೆಯೇ ಪ್ರಾಂತೀಯ ಆಡಳಿತವು ಸಹ ವ್ಯವಸ್ಥಿತ ಮತ್ತು ಸುಭದ್ರ ಆಡಳಿತವೆನಿಸಿತ್ತು.

3. ಪ್ರಜಾಹಿತ ಆಡಳಿತ (ಸುಖೀ ರಾಜ್ಯದ ಸ್ಥಾಪನೆ):

ಅಶೋಕನು ಸಂಸ್ಥಾಪಿಸಿದ್ದ ಆಡಳಿತವು ಪ್ರಜಾಹಿತ ಆಡಳಿತವೆನಿಸಿತ್ತು. ಪ್ರಜಾಹಿತಾಕಾಂಕ್ಷೆಯೇ ರಾಜನ ಆಡಳಿತದ ಮೂಲ ಮಂತ್ರವಾಗಿತ್ತು. ಪ್ರಜಾ ಅಭ್ಯುದಯವೇ ರಾಜನ ಅಭ್ಯುದಯವಾಗಿತ್ತು.

4. ಪ್ರಜಾಕಲ್ಯಾಣ (ಲೋಕೋಪಯೋಗಿ ಕಾರ್ಯಗಳು):

ಪ್ರಜಾಕಲ್ಯಾಣ ಕಾರ್ಯಕ್ಕಾಗಿ ಕೆಲವು ಲೋಕೋಪಯೋಗಿ ಕಾರ್ಯಗಳನ್ನು ಜಾರಿಗೆ ತಂದಿದ್ದನು. ಪ್ರಯಾಣಿಕರಿಗಾಗಿ ಮಾರ್ಗಗಳನ್ನು ನಿರ್ಮಿಸಿದ್ದನು. ಮಾರ್ಗಗಳ ಎರಡು ಕಡೆಗೂ ನೆರಳಿಗಾಗಿ ಆಲದ ಮರಗಳನ್ನು ನೆಡಿಸಿದ್ದನು. ಮಾವಿನ ತೋಪುಗಳನ್ನು ಬೆಳೆಸಿದ್ದನು. ಪ್ರತಿ 9 ಮೈಲುಗಳಿಗೆ ಬಾವಿಯನ್ನು ತೊಡಿಸಿದ್ದನು. ಮಾರ್ಗದ ಮಧ್ಯೆ ವಿಶ್ರಾಂತಿ ಗೃಹಗಳನ್ನು ಕಟ್ಟಿಸಿದ್ದನು. ಪ್ರಾಣಿ ಮತ್ತು ಮಾನವರ ಉಪಯೋಗಕ್ಕಾಗಿ ಚಿಕಿತ್ಸಾಲಯಗಳನ್ನು ತೆರೆದಿದ್ದನು. ಚಿಕತ್ಸೆಗಾಗಿ ಗಿಡಮೂಲಿಕೆಗಳ ವನವನ್ನು ಬೆಳೆಸಿದ್ದನು. ಅಶೋಕನ 7 ನೇ ಸ್ತಂಭಶಾಸನ ಮತ್ತು 2ನೇ ಬಂಡೆಕಲ್ಲು ಶಾಸನದಿಂದ ಅಶೋಕನ ಪ್ರಜಾಹಿತ ಕಾರ್ಯಗಳ ವಿವರ ತಿಳಿದುಬರುತ್ತದೆ. ಈ ಮೇಲಿನ ಅಂಶಗಳನ್ನು ಅವಲೋಕಿಸಿದ ಚರಿತ್ರಾಕಾರ ʻಫೀಟ್’ ಅಭಿಪ್ರಾಯ ಪಡುವಂತೆ `ಪ್ರಜಾಹಿತಕಾರ್ಯಕ್ಕೆ ಅಶೋಕನ ಧಾರ್ಮಿಕ ಮತ್ತು ನೈತಿಕ ಅಂಶಗಳು ಆಧಾರಗಳಾಗಿದ್ದವು’.

5. ಶಾಂತಿ ಮತ್ತು ಅಹಿಂಸೆಯ ತತ್ವ :

ಅಶೋಕನ ಆಳ್ವಿಕೆಯಲ್ಲಿ ಶಾಂತಿ ಮತ್ತು ಅಹಿಂಸೆಯ ತತ್ವವು ಮೂಲ ಆಧಾರವಾಗಿತ್ತು. ಶಾಂತಿ ಮತ್ತು ಅಹಿಂಸಾತತ್ವವು ಬೌದ್ಧ ಧಾರ್ಮಿಕ ತತ್ವಗಳನ್ನು ಆಧರಿಸಿದೆ. ಯುದ್ಧದಿಂದ ಮತ್ತು ಹಿಂಸೆಗಳ ಮೂಲಕ ಭೂಪ್ರದೇಶ ಗೆಲ್ಲುವುದನ್ನು ತ್ಯಜಿಸುವುದು, ಜೊತೆಗೆ ಪ್ರಾಣಿಹತ್ಯೆಯನ್ನು ತಡೆಗಟ್ಟುವುದೇ ಆಗಿದೆ.

ಅಶೋಕ ಮತ್ತು ಬೌದ್ಧಧರ್ಮದ ಪ್ರಸಾರ

ಅಶೋಕ ಮತ್ತು ಬೌದ್ಧಧರ್ಮದ ಪ್ರಸಾರ

ಕಳಿಂಗ ಯುದ್ಧಾನಂತರ ಮನಪರಿವರ್ತನೆಯಾಗಿ ಬೌದ್ಧಮತಾವಲಂಬಿಯಾದ ಅಶೋಕ ಮಹಾಶಯ ಆ ಪಂಥದ ಶ್ರೇಯಸ್ಸಿಗಾಗಿ ಅಪಾರವಾಗಿ ಶ್ರಮಿಸಿದನು. ಬೌದ್ಧ ಮತದ ಅಭಿವೃದ್ಧಿಗಾಗಿ ಅಶೋಕನು ಮಾಡಿದ ಸ್ಮರಣಾರ್ಹ ಸೇವೆಯ ಹಿನ್ನೆಲೆಯಲ್ಲಿ ಆತನನ್ನು 2ನೇ ಬುದ್ಧನೆಂದು ಹೆಸರಿಸಲಾಗಿದೆ. ಪೊ|| ಆರ್.ಸತ್ಯನಾಥ ಅಯ್ಯರ್ ‘ಅಶೋಕನು ಭಗವಾನ್ ಬುದ್ಧನ ಉಪದೇಶಗಳ ಸಾರವನ್ನು ಅಧಿಕೃತವಾಗಿ ಪ್ರಸಾರಮಾಡಿದನು’ ಎಂದಿದ್ದಾರೆ. ಬೌದ್ಧಪಂಥದ ಶ್ರೇಯೋಭಿವೃದ್ದಿಗಾಗಿ 5 ಮಾರ್ಗಗಳನ್ನು ಅನುಸರಿಸಿದನು.

1) ಧರ್ಮ ಮಹಾಮಾತ್ರರ ನೇಮಕ, 

2) ಬೌದ್ಧ ಸಂಘಗಳ ಸ್ಥಾಪನೆ,

3) ಧಾರ್ಮಿಕ ಯಾತ್ರೆಗಳು,    

4) ಶಿಲಾಶಾಸನ ಪದ್ಧತಿ,

5) ಬೌದ್ಧಯತಿಗಳ ನೇಮಕ.

1.ಧರ್ಮಮಹಾಮಾತ್ರರ ನೇಮಕ : ಬೌದ್ಧಧರ್ಮದ ಸಂವರ್ಧನೆಗಾಗಿ ಧರ್ಮಮಹಾಮಾತ್ರರನ್ನು ನೇಮಿಸಲಾಗಿತ್ತು. 13ನೇ ಬಂಡೆಕಲ್ಲು ಶಾಸನ ತಿಳಿಸುವಂತೆ ಧರ್ಮಪ್ರಚಾರ ಮಾಡಲು ಮತ್ತು ಪ್ರಚಾರವಾದುದು ಕಾರ್ಯಗತವಾಗಿದೆಯೇ ಎಂದು ಪರಿಶೀಲಿಸಲು 256ವಿಶೇಷ ಅಧಿಕಾರಿಗಳನ್ನು ನೇಮಿಸಿದ್ದನು. ಧಮ್ಮಮಹಾಮಾತ್ರರನ್ನು ಧರ್ಮಆಯುಕ್ತರೆಂದು ಸಹ ಕರೆಯಲಾಗುತ್ತಿತ್ತು.

2. ಬೌದ್ಧಸಂಘಗಳ ಸ್ಥಾಪನೆ : ಬೌದ್ಧಸನ್ಯಾಸಿ, ಸನ್ಯಾಸಿನಿಯರಿಂದ ಕೂಡಿದ ಸಂಘವು ಧರ್ಮದ ಶ್ರೇಯಸ್ಸಿಗಾಗಿ ಅಪಾರ ಶ್ರಮಿಸುತ್ತಿತ್ತು. ಸಂಘದ ಪಾತ್ರ ಕುರಿತು ‘ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ’ ಎಂಬ ಅಂಶ ಪ್ರಧಾನವಾದುದು. ಬೌದ್ಧ ಸಂಘದ ಬಗ್ಗೆ ಅಶೋಕ ಮಹಾಶಯನ ಅಭಿಪ್ರಾಯ ʻಸಾಂಚಿ ಹಾಗೂ ಸಾರನಾಥ’ ಶಾಸನಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ‘ನನ್ನ ಪುತ್ರ. ಪೌತ್ರರಿರುವವರೆಗೂ ಸೂರ್ಯ ಚಂದ್ರರಿರುವವರೆಗೂ ಬೌದ್ಧ ಬಿಕ್ಷು-ಚಿಕ್ಷುಣಿಯರ ಸಂಘವು ಸಮಗ್ರವಾಗಿರತಕ್ಕದ್ದು’ ಎಂದು ಹೇಳಿದ್ದಾನೆ.

3. ಧಾರ್ಮಿಕ ಯಾತ್ರೆಗಳು : ಧರ್ಮಪ್ರಚಾರಕ್ಕಾಗಿ ಧಾರ್ಮಿಕ ಯಾತ್ರೆಗಳನ್ನು ನಡೆಸಿದನು. ಬುದ್ಧನಿಗೆ ಸಂಬಂಧಿಸಿದ ಪ್ರದೇಶಗಳಾದ ಲುಂಬಿನಿವನ, ಕಪಿಲವಸ್ತು, ಸಾರನಾಥ, ಕುಶೀನಗರ ಮೊದಲಾದ ಪ್ರದೇಶಗಳಿಗೆ ಧರ್ಮಯಾತ್ರೆ ಕೈಗೊಂಡನು.

4. ಬೌದ್ಧಯತಿಗಳ ನೇಮಕ : ಬೌದ್ಧಧರ್ಮದ ಪ್ರಚಾರಕ್ಕಾಗಿ ಬೌದ್ಧಯತಿಗಳನ್ನು ನೇಮಿಸಿದನು. ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರೆಯರನ್ನು ಧರ್ಮ ಪ್ರಚಾರಕ್ಕಾಗಿ ಸಿಲೋನ್‌ ಗೆ ಕಳುಹಿಸಿದನು. ಅಶೋಕನು ಈ ಕೆಳಕಂಡ ಪ್ರದೇಶಗಳಿಗೆ ವಿವಿಧ ಪ್ರಚಾರಕರನ್ನು ಕಳುಹಿಸಿದನು. ಮಜ್ಜಾಂತಿಕ- ಕಾಶ್ಮೀರ ಮತ್ತು ಗಾಂಧಾರ, ಮಹಾರಕ್ಷಿತ-ಯವನದೇಶ, ಮಜ್ಜಿಮ-ಹಿಮಾಲಯ ದೇಶ, ಮಹಾಧರ್ಮ ರಕ್ಷಿತ-ಮಹಾರಾಷ್ಟ್ರ, ರಕ್ಷಿತ-ವಾರಣಾಸಿ, ಮಹಾದೇವ-ಮಹಿಷಾ ಮಂಡಲ(ಮೈಸೂರು-ಕರ್ನಾಟಕ), ಸೋನ ಮತ್ತು ಉತ್ತರ-ಸುವರ್ಣ ಭೂಮಿ ಮತ್ತು ಪೆಗು.

5. 3ನೇ ಬೌದ್ಧ ಸಮ್ಮೇಳನ : ಬೌದ್ಧ ಪಂಥದ ಅಭ್ಯುದಯ ಮತ್ತು ಶ್ರೇಯಸ್ಸು ಹಾಗೂ ಐಕ್ಯತೆಯ ಸ್ಥಾಪನೆಗಾಗಿ ಪಾಟಲೀಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನವನ್ನು ನಡೆಸಿದನು. ಈ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಆಚಾರ್ಯ ಮೊಗ್ಗಲಿಪುತ್ರತಿಸ್ಸ ವಹಿಸಿದ್ದನು. ಕ್ರಿ.ಪೂ 234ರಲ್ಲಿ ಆದ ಮೂರನೇ ಬೌದ್ಧ ಸಮ್ಮೇಳನವು ಮಹತ್ವದ ಸಾಧನೆ ಮಾಡಿತು. ಈ ಸಮ್ಮೇಳನದ ಮೂಲಕ ಉಪಖಂಡದ ವಿವಿಧ ಭಾಗಗಳಿಗೆ ಧರ್ಮ ಪ್ರಚಾರಕ್ಕಾಗಿ ಪ್ರಚಾರಕರನ್ನು ಕಳುಹಿಸಲಾಯಿತು. ಜನಸಾಮಾನ್ಯರನ್ನು ಧರ್ಮದ ಕಡೆಗೆ ಆಕರ್ಷಿಸಲು ಸ್ತೂಪಗಳನ್ನು ಕಟ್ಟಿಸಿದನು. ಅಶೋಕನು ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 84,000 ಸ್ತೂಪಗಳನ್ನು ನಿರ್ಮಿಸಿದ್ದನೆಂದು ತಿಳಿದುಬರುತ್ತದೆ. ಬೌದ್ಧಧರ್ಮದ ತತ್ವಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ದೃಷ್ಠಿಯಿಂದ ಕಲ್ಲುಬಂಡೆಗಳ ಮೇಲೆ ಬೌದ್ಧ ಧಾರ್ಮಿಕ ತತ್ವಗಳನ್ನು ಕೆತ್ತಿಸಿದನು.

ಅಶೋಕನ ಧರ್ಮಪ್ರಚಾರ ಕಾರ್ಯವನ್ನು ಗಮನಿಸಿಯೇ ಡಾ|| ಆರ್.ಎಸ್.ಶರ್ಮರವರು ʻಪ್ರಾಚೀನ ವಿಶ್ವದ ಇತಿಹಾಸದಲ್ಲಿ ಅಶೋಕಮಹಾಶಯ ಅತ್ಯುತ್ತಮ ಧರ್ಮಪ್ರಚಾರಕ’ ಎಂದಿದ್ದಾರೆ. ಡಾ||ಆರ್.ಕೆ.ಮುಖರ್ಜಿ ಯವರು ತಮ್ಮ ಕೃತಿಯಾದ ‘ಹಿಸ್ಟರಿ ಆಫ್ ಏನ್ಸಿಯಂಟ್ ಇಂಡಿಯಾ’ ದಲ್ಲಿ ‘ನಾಗರೀಕ ಪ್ರಪಂಚದ ಸವಿಸ್ತಾರ ಪ್ರದೇಶದ ಮೇಲೆ ಭಾರತೀಯ ಸಂಸ್ಕೃತಿಯ ನೈತಿಕ ಪ್ರಾಬಲ್ಯತೆಯನ್ನು ತರುವಲ್ಲಿ ಅಶೋಕ ಸಾಧನವಾಗಿ ವರ್ತಿಸಿದನು’ ಎಂದಿದ್ದಾರೆ. ಬೌದ್ಧ ಮತದ ಅಭಿವೃದ್ಧಿಗಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಅಶೋಕ ಮಹಾಶಯನನ್ನು 2ನೇ ಬುದ್ದನೆಂದೇ ಹೆಸರಿಸಲಾಗಿದೆ. ಧರ್ಮಾಶೋಕನ ಅಪಾರ ಪರಿಶ್ರಮದಿಂದ ಬೌದ್ಧಧರ್ಮವು ದೇಶ ವಿದೇಶಗಳಲ್ಲಿ ಹರಡಲ್ಪಟ್ಟ ಪ್ರಧಾನ ಧರ್ಮವಾಯಿತು.

ಕುಶಾನರ ಕಾಲದ ಸಾಹಿತ್ಯ

ಕುಶಾನರ ಕಾಲದ ಸಾಹಿತ್ಯ

ಕುಶಾನರ ಕಾಲದಲ್ಲಿ ಸಾಹಿತ್ಯ ಕೂಡ ಹೆಚ್ಚು ಅಭಿವೃದ್ಧಿ ಹೊಂದಿತು. ಕುಶಾನ ದೊರೆಗಳು ಸಾಹಿತ್ಯಾಭಿಮಾನಿ ಗಳಾಗಿದ್ದು ಸಾಹಿತ್ಯದ ಬೆಳೆವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ಇದರಿಂದಾಗಿ ಹಲವಾರು ಪ್ರಮುಖ ಕೃತಿಗಳು ರಚನೆಯಾದವು. ಕುಶಾನರ ಕಾಲದ ಪ್ರಮುಖ ಸಾಹಿತ್ಯಕ, ಧಾರ್ಮಿಕ ಕೃತಿಗಳು ಮತ್ತು ಅವುಗಳ ಐತಿಹಾಸಿಕ ಮೌಲ್ಯವನ್ನು ಅವಲೋಕಿಸಬಹುದು.

ಅಶ್ವಘೋಷ : ಕಾನಿಷ್ಕನ ಆಸ್ಥಾನದಲ್ಲಿದ್ದ ‘ಅಶ್ವಘೋಷ’ ಕವಿಯಾಗಿ, ತತ್ವಜ್ಞಾನಿಯಾಗಿ, ನಾಟಕಕಾರನಾಗಿ, ಸಂಗೀತಗಾರನಾಗಿ ಪ್ರಖ್ಯಾತಿ ಹೊಂದಿದ್ದನು. ಇವನ ಪ್ರಮುಖ ಕೃತಿಗಳೆಂದರೆ:

1. ಬುದ್ಧಚರಿತ : ಬುದ್ಧನ ಜೀವನ ಚರಿತ್ರೆಯ ಬಗ್ಗೆ ವಿವರಣೆ ನೀಡುತ್ತದೆ.

2. ಸೌಂದರಾನಂದ : ಬುದ್ಧನ ಜೀವನದ ಪ್ರಮುಖ ಘಟನೆಗಳ ಬಗ್ಗೆ ವಿಶ್ಲೇಷಿಸುತ್ತದೆ.

3. ವಜ್ರಸೂಚಿ : ಸಮಕಾಲೀನವಾಗಿದ್ದ ಜಾತಿಪದ್ಧತಿಯನ್ನು ಖಂಡಿಸುತ್ತದೆ.

4. ಸರಿಪುತ್ರಪ್ರಕರಣ : ಇದು ನಾಟಕ ರೂಪದಲ್ಲಿದ್ದು ಸರಿಪುತ್ರ ಮತ್ತು ಮೊಗ್ಗಲ್ಲನರ ಮತಾಂತರದ ಬಗ್ಗೆ ವಿವರ ನೀಡುತ್ತದೆ. ಫ್ರೆಂಚ್ ವಿದ್ವಾಂಸ ‘ಸೆಲ್ವನ್‌ವಿ’ ಅಭಿಪ್ರಾಯಪಡುವಂತೆ ‘ಅಶ್ವಘೋಷನ ಸಾಹಿತ್ಯದ ಶ್ರೀಮಂತಿಕೆ ಮತ್ತು ವೈವಿಧ್ಯತೆಯು ನಮಗೆ ಮಿಲ್ಟನ್, ಗಯಟೆ, ಕಾಂಟ್, ವಾಲ್ವೇರ್’ ಮೊದಲಾದವರ ನೆನಪನ್ನು ಗಮನಕ್ಕೆ ತರುತ್ತದೆ. ಅಶ್ವಘೋಷನು ಕಾಳಿದಾಸ ಮತ್ತು ಭಾಸಕವಿಯಿಂದ ಪ್ರಭಾವಿತನಾಗಿರ ಬೇಕೆಂದು ಕೆಲವು ವಿದ್ವಾಂಸರ ಅಭಿಪ್ರಾಯ.

ನಾಗಾರ್ಜುನ : ಇವನ ಕೃತಿಗಳು: 1. ಶತಸಾಹಸಿಕ ಪ್ರಜ್ಞಾಪರಿಮಿತ 2. ಮಾಧ್ಯಮಿಕ ಸೂತ್ರ 3. ಸಹೃಲೇಖ

ನಾಗಾರ್ಜುನ ಕಾನಿಷ್ಕನ ಆಸ್ಥಾನದ ಮತ್ತೋರ್ವ ಪ್ರಖ್ಯಾತ ಕವಿ. ಮಹಾಯಾನ ಪಂಥದ ಪ್ರತಿಪಾದಕನಾದ ನಾಗಾರ್ಜುನ ಮಾದ್ಯಮಿಕ ಸೂತ್ರದಲ್ಲಿ ಸಾಪೇಕ್ಷ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಪ್ರಜ್ಞಾಪರಿಮಿತ ವೇದಾಂತದ ಕೃತಿಯಾಗಿದೆ.

‘ಸಹೃಲೇಖ’ ಕೃತಿಯು ನಾಲ್ಕು ಆರ್ಯಸತ್ಯಗಳು ಮತ್ತು ಅಷ್ಟಾಂಗ ಸಿದ್ದಮಾರ್ಗಗಳನ್ನು ಕುರಿತು ವಿಶ್ಲೇಷಿಸುತ್ತದೆ. ಈ ಕೃತಿಯ ಸರ್ವೋತ್ಕೃಷ್ಟ ಅಂಶವೆಂದರೆ ಮಿತ್ರರು ಮತ್ತು ವೈರಿಗಳಲ್ಲಿ ಯಾವುದೇ ಭೇದಭಾವವನ್ನು ಮಾಡಬಾರದೆಂಬುದು. ನಾಗಾರ್ಜುನನ್ನು ಭಾರತದ ಮಾರ್ಟಿನ್ ಲೂಥರ್ ಮತ್ತು ಭಾರತದ ಐನ್ ಸ್ಟೈನ್ ಎಂದೇ ಕರೆಯಲಾಗಿದೆ. ನಾಗಾರ್ಜುನನ ವಿದ್ವತ್ತನ್ನು ಗಮನಿಸಿದ ಚೀನಿ ಯಾತ್ರಿಕ ಹ್ಯುಯನ್ ತ್ಸಾಂಗ್ ಹೇಳುವಂತೆ ‘ಜಗತ್ತಿನ ನಾಲ್ಲು ಜ್ಯೋತಿಗಳಲ್ಲಿ ನಾಗಾರ್ಜುನನು ಕೂಡ ಒಬ್ಬನಾಗಿದ್ದಾನೆ’.

ಚರಕ : ಕುಶಾನರ ಕಾಲದಲ್ಲಿದ್ದ ಚರಕನು ಆಯುರ್ವೇದ ಔಷಧ ಶಾಸ್ತ್ರದ ಮಹಾನ್ ಪಂಡಿತನೆನಿಸಿದ್ದನು. ಇವನು ಕಾನಿಷ್ಕನ ಆಸ್ಥಾನದ ಪ್ರಖ್ಯಾತ ವೈದ್ಯನಾಗಿದ್ದನು. ಇವನು ‘ಚರಕಸಂಹಿತೆ’ ಯೆಂಬ ವೈದ್ಯಕೀಯ ಕೃತಿಯನ್ನು ರಚಿಸಿದ್ದಾನೆ. ಇದು ಕ್ರಿ.ಶ 7ನೇಶತಮಾನದಲ್ಲಿ ಪರ್ಶಿಯನ್ ಭಾಷೆಗೂ ಕ್ರಿಶ ೫ನೇ ಶತಮಾನದಲ್ಲಿ ಅರೇಬಿಕ್ ಭಾಷೆಗೂ ಭಾಷಾಂತರವಾಯಿತು.ಕಾನಿಷ್ಕನ ಕಾಲಾವಧಿಯಲ್ಲಿ ವಸುಮಿತ್ರ ಮತ್ತು ಪಾರ್ಶ್ವ ಎಂಬ ವಿದ್ವಾಂಸರುಗಳಿದ್ದರು. ವಸುಮಿತ್ರನು ನಾಲ್ಕನೇ ಬೌದ್ಧ ಮಹಾಸಮ್ಮೇಳನದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದನು. ಕುಶಾನರ ಕಾಲದಲ್ಲಾದ ಸಾಹಿತ್ಯದ ಚಟುವಟಿಕೆಗಳ ನ್ನು ಗಮನಿಸಿ ಡಾ|ಹೆಚ್.ಜಿ.ರಾಲಿಸನ್ ರವರು ‘ಕುಶಾನರ ಕಾಲವು ಗುಪ್ತರ ಯುಗಕ್ಕೆ ಅತ್ಯುತ್ತಮ ಪೂರ್ವಭಾವಿ ಪೀಠಿಕೆಯಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾನಿಷ್ಕ (ಕ್ರಿ.ಶ. 78-120)

ಕಾನಿಷ್ಕ (ಕ್ರಿ.ಶ. 78-120)

ಕುಶಾನ ಅರಸರಲ್ಲಿಯೇ ಅತ್ಯಂತ ಸಮರ್ಥ ಹಾಗೂ ಪ್ರಸಿದ್ದನಾದ ದೊರೆಯೆಂದರೆ ಕಾನಿಷ್ಕ. ಈತನ ಸಿಂಹಾಸನದ ಬಗ್ಗೆ ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿವೆ. ಡಾ. ಪ್ಲೀಟ ಹಾಗೂ ಕನ್ನಿಹ್ಯಾಂರು ಈತನ ಅಧಿಕಾರಾವಧಿ ಕ್ರಿ.ಪೂ. 58 ವಿಕ್ರಮ ಶಕೆ ಎಂದು ಹೇಳಿದರೆ, ಡಾ. ಮುಜುಮದಾರರು ಕ್ರಿ.ಶ. 248ರಲ್ಲಿ ಕಾನಿಷ್ಕ ಸಿಂಹಾಸನಕ್ಕೆ ಬಂದ ವರ್ಷವೆಂದಿದ್ದಾರೆ. ಡಾ. ಜಿ. ಭಂಡಾರಕರವರು ಕ್ರಿ.ಶ. 278ರಲ್ಲಿ ಅಧಿಕಾರಕ್ಕೆ ಬಂದನು ಎಂದರೆ, ರಾಯ್ ಚೌದರಿಯವರು ಕಾನಿಷ್ಕ ಕ್ರಿ.ಶ. 78ರಲ್ಲಿ ಸಿಂಹಾಸನಾಧೀಶ್ವರನಾದನು ಎಂದಿದ್ದಾರೆ. ಈತ ಕ್ರಿ.ಶ. 78ರಲ್ಲಿ ಅಧಿಕಾರಕ್ಕೆ ಬಂದುದರಿಂದ ಶಾಲಿವಾಹನ ಶಕೆಯನ್ನು ಆರಂಭಿಸಿದನು.

ದಿಗ್ವಿಜಯಗಳು :

1) ಕಾಶ್ಮೀರ ಕಣಿವೆಯನ್ನು ಕಾನಿಷ್ಕ ಹೆಚ್ಚು ಇಷ್ಟಪಡುತ್ತಿದ್ದುದರಿಂದಾಗಿ ಅದರ ಮೇಲೆ ಯುದ್ಧ ಘೋಷಿಸಿ ಸುಲಭವಾಗಿ ವಶಪಡಿಸಿಕೊಂಡನು.

2) ಉತ್ತರ ಭಾರತದ ಪಂಜಾಬ್ ಹಾಗೂ ಮಥುರಾಗಳಲ್ಲಿ ಪ್ರಬಲರಾಗಿದ್ದ ಕ್ಷತ್ರಪರ ವಿರುದ್ಧ ಯುದ್ಧ ಕೈಗೊಂಡು ಆ ಪ್ರದೇಶಗಳನ್ನು ಯಾವುದೇ ಪ್ರಯಾಸವಿಲ್ಲದೆ ವಶಪಡಿಸಿಕೊಂಡನು.

3) ಮಾಳವದ ಕ್ಷತ್ರಪರನ್ನು ಸಹ ಸೋಲಿಸಿ ಆ ಪ್ರದೇಶವನ್ನು ಆಕ್ರಮಿಸಿದನು.

4) ಈತ ಚೀನಿಯರೊಂದಿಗೆ ಹೋರಾಡಿ ಅಂತಿಮವಾಗಿ ಕಾಸ್ಗರ್, ಖೊಟಾನ್ ಹಾಗೂ ಯಾರ್ಕಂಡ್ ಪ್ರದೇಶಗಳನ್ನು ಆಕ್ರಮಿಸಿದನು.

5) ಚೀನಾದ ಪಾನ್-ಪಾನ್ ಬಾವೋನ ಮೇಲೆ ಯುದ್ಧ ಘೋಷಿಸಿ ಅವನಿಂದ ಸೋತ ಕಾನಿಷ್ಕ ತನ್ನ ಮೊದಲ ಚೀನಾದ ದಂಡಯಾತ್ರೆಯನ್ನು ಕೊನೆಗಾಣಿಸಿದ.

6) ಎರಡನೆಯ ದಂಡಯಾತ್ರೆಯಲ್ಲಿ ಕಾನಿಷ್ಕ ಚೀನಾದ ಪಾನ್‌ ಚಾವೋನ ಮಗನಾದ ಪಾನ್ ಯಾಂಗನನ್ನು ಸೋಲಿಸಿ ಮೊದಲಿನ ಸೇಡನ್ನು ತೀರಿಸಿಕೊಂಡನು. ಕಾನಿಷ್ಕನ ಸಾಮ್ರಾಜ್ಯವು ಭಾರತದ ಆಚೆ ಅಪಘಾನಿಸ್ತಾನ್, ಬ್ಯಾಸ್ಟ್ರಿಯಾ, ಕಾಪ್ಟರ್, ಖೋಟಾನ್ ಹಾಗೂ ಯಾರ್ಕಂಡ್ ಪ್ರಾಂತ್ಯಗಳನ್ನು ಒಳಗೊಂಡಿದ್ದರೆ ಭಾರತದಲ್ಲಿ ಪಂಜಾಬ್, ಸಿಂಥ್, ಕಾಶ್ಮೀರ್ ಹಾಗೂ ಉತ್ತರ ಪ್ರದೇಶದ ಬಹುಭಾಗವನ್ನು ಒಳಗೊಂಡಿದ್ದಿತು.

ಕಾನಿಷ್ಕನ ಆಡಳಿತ : ಕಾನಿಷ್ಕ ಒಬ್ಬ ಯೋಧ, ಉತ್ತಮ ಆಡಳಿತಗಾರ, ಶ್ರೇಷ್ಠ ರಾಜಕಾರಿಣಿ ಹಾಗೂ ಧಾರ್ಮಿಕ ನೀತಿಯುಳ್ಳವನೂ ಆಗಿದ್ದನು. ಇವನು ನಿರಂಕುಶಾಧಿಕಾರಿಯಾಗಿ ಆಡಳಿತ ನಡೆಸಿದರೂ ಪ್ರಜೆಗಳಿಗೆ ಎಂದಿಗೂ ತೊಂದರೆಯನ್ನು ಕೊಡಲಿಲ್ಲ. ಕಾನಿಷ್ಕ ತನ್ನ ಆಡಳಿತಾವಧಿಯಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದನು.

1) ಕೃಷಿಯನ್ನು ಅಭಿವೃದ್ಧಿಗೊಳಿಸುವ ಮೂಲಕ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದನು.

2) ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡಿದನು.

3) ರೈತರು ಹೈನಿಗಾಗಿ ಹೆಚ್ಚು ಹೆಚ್ಚು ದನಕರುಗಳನ್ನು ಸಾಕುವಂತೆ ಪ್ರೋತ್ಸಾಹ ಕೊಟ್ಟನು.

4) ಪ್ರಕೃತಿ ವಿಕೋಪಗಳಾದ ಕ್ಷಾಮ, ನೆರೆಹಾವಳಿ ಹಾಗೂ ಬರಗಾಲದಂತಹ ಸಮಯದಲ್ಲಿ ಸರ್ಕಾರದಿಂದ ದವಸ ಧಾನ್ಯಗಳನ್ನು ಹಂಚುವ ವ್ಯವಸ್ಥೆ ಮಾಡಿದನು.

5) ಸಾಮ್ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ವಿಭಾಗಿಸಿ ಅವುಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದನು.

6) ರಾಜ್ಯದ ಎಲ್ಲಾ ಆಗು ಹೋಗುಗಳನ್ನು ಬರೆದಿಡುವ ಪದ್ಧತಿಯನ್ನು ಜಾರಿಗೆ ತಂದನು.

ಕಾನಿಷ್ಕನ ಧಾರ್ಮಿಕ ನೀತಿ :

ಅಶೋಕನ ಹಾಗೆ ಕಾನಿಷ್ಕ ಬೌದ್ಧ ಮತಾವಲಂಬಿಯಾಗಿದ್ದನು. ಈತ ಬೌದ್ಧ ಮತವನ್ನು ಸ್ವೀಕರಿಸಿದ್ದರೂ ಇತರ ಧರ್ಮಗಳನ್ನು ಕಡೆಗಣಿಸಿರಲಿಲ್ಲ. ಈತನ ನಾಣ್ಯಗಳ ಮೇಲೆ ರೋಮನ್, ಗ್ರೀಕ್, ಪರ್ಶಿಯನ್ ಹಾಗೂ ಹಿಂದೂ ದೇವತೆಗಳ ಹೆಸರನ್ನು ಮುದ್ರಿಸಲಾಗಿದೆ.

ಕಾನಿಷ್ಕ ಮತ್ತು ಬೌದ್ಧ ಧರ್ಮ :

ಕಾನಿಷ್ಕ ಕೇವಲ ದಿಗ್ವಿಜಯಿಯಾಗಿರದೆ ಬೌದ್ಧ ಧರ್ಮದ ಮಹಾಪೋಷಕನಾಗಿ ಪ್ರಸಿದ್ದಿಯನ್ನು ಪಡೆದಿದ್ದಾನೆ. ಅಶೋಕನನ್ನು ಬಿಟ್ಟರೆ ಬೌದ್ಧ ಧರ್ಮದ ಖ್ಯಾತಿಗೆ ಶ್ರಮಿಸಿದವರಲ್ಲಿ ಕಾನಿಷ್ಕನೇ ಅಗ್ರಗಣ್ಯ. ಇವನ ಕಾಲದಲ್ಲಿ ಬೌದ್ಧ ಧರ್ಮ ಭಾರತವನ್ನು ದಾಟಿ ವಿದೇಶದಲ್ಲಿಯೂ ಹರಡಿತ್ತು. ಆ ಮೂಲಕ ಭಾರತ ವಿದೇಶಿ ಸಂಪರ್ಕವನ್ನು ಪಡೆಯಿತು. ಈತನ ಕಾಲದಲ್ಲಿಯೂ ದೇಶದಾದ್ಯಂತ ಅನೇಕ ಬೌದ್ಧ ಸ್ತೂಪಗಳು, ಸಂಘಾರಾಮಗಳು, ಗುಹಾಲಯಗಳು, ಅರಮನೆಗಳು ಹಾಗೂ ಬೌದ್ಧ ಮೂರ್ತಿಗಳು ನಿರ್ಮಾಣಗೊಂಡವು. ಪ್ರಥಮ ಬಾರಿಗೆ ಭಾರತದಲ್ಲಿ ಕಾನಿಷ್ಕನ ಕಾಲದಲ್ಲಿ ಬುದ್ಧನನ್ನು ಮೂರ್ತಿರೂಪದಲ್ಲಿ ಪೂಜಿಸುವ ಪದ್ಧತಿ ಜಾರಿಗೆ ಬಂದಿತು.

ನಾಲ್ಕನೆಯ ಬೌದ್ಧ ಸಮ್ಮೇಳನ : ಬೌದ್ಧ ಮತಾವಲಂಬಿಯಾಗಿದ್ದ ಕಾನಿಷ್ಕ ಬೌದ್ಧ ಧರ್ಮದ ಪ್ರಚಾರಕ್ಕಾಗಿ ವಿಶೇಷ ಕಾಳಜಿ ವಹಿಸಿದನು. ಈತ ಕಾಶ್ಮೀರಿನ ಕುಂಡಲಿವನ ಎಂಬಲ್ಲಿ ನಾಲ್ಕನೆಯ ಬೌದ್ಧ ಸಮ್ಮೇಳನವನ್ನು ಸಂಘಟಿಸಿದನು. ಈ ಸಭೆಯ ಅಧ್ಯಕ್ಷತೆಯನ್ನು ವಸುಮಿತ್ರನೂ ಉಪಾಧ್ಯಕ್ಷನಾಗಿ ಅಶ್ವಘೋಷನೂ ವಹಿಸಿದ್ದರು. ಬೌದ್ಧರಲ್ಲಿ ಕಾಣಿಸಿಕೊಂಡ ಆಂತರಿಕ ಒಡುಕು ಹಾಗೂ ಭಿನ್ನಮತವನ್ನು ಹೋಗಲಾಡಿಸುವುದು ಈ ಸಮ್ಮೇಳನದ ಉದ್ದೇಶವಾಗಿದ್ದಿತು. ಅಶ್ವಘೋಷ ಹಾಗೂ ವಸುಮಿತ್ರ ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಬೌದ್ಧ ಸನ್ಯಾಸಿಗಳು ಈ ಸಭೆಗೆ ಹಾಜರಾಗಿದ್ದರು. ಬುದ್ಧನ ತ್ರಿಪಿಟಕಗಳ ವಿಷಯಗಳನ್ನು ಕ್ರೋಢೀಕರಿಸಿ ಮಹಾವಿಭಾಷ್ಯ ಎಂಬ ಗ್ರಂಥವನ್ನು ಹೊರತರಲಾಯಿತು. ಇವುಗಳನ್ನು ತಾಮ್ರಪಟಗಳ ಮೇಲೆ ಕೊರೆಯಿಸಿ ಶಿಲಾ ಪೆಟ್ಟಿಗೆಯಲ್ಲಿ ತುಂಬಿ ಇದರ ಮೇಲೆ ಸ್ತೂಪವನ್ನು ನಿರ್ಮಿಸಲಾಯಿತು.

ಈ ಮಹಾಸಭೆಯಲ್ಲಿ ಬೌದ್ಧರಲ್ಲಿದ್ದ ಆಂತರಿಕ ಭಿನ್ನಮತ ಮತ್ತಷ್ಟು ಗರಿಗೆದರಿ ಹೀನಾಯಾನ ಹಾಗೂ ಮಹಾಯಾನ ಎಂಬ ಎರಡು ಪಂಥಗಳು ಹುಟ್ಟಿಕೊಂಡವು.

ಹೀನಾಯಾನ ಪಂಥದವರು

ಮಹಾಯಾನ ಪಂಥದವರು

1.

ಬುದ್ಧನನ್ನು ದೇವತಾ ರೂಪಕ್ಕೆ

1.

ಬುದ್ಧನನ್ನು ದೇವರೆಂದು ನಂಬಿದ್ದರು.

2.

ಇವರು ಬುದ್ಧನ ತತ್ವಗಳನ್ನು ಚಾಚು ತಪ್ಪದೆ ಪಾಲಿಸಿದರು.

2.

ಬೌದ್ಧ ಧರ್ಮದಲ್ಲಿ ಸಾಕಷ್ಟು ಬದಲಾವಣೆ

3.

ಅಶೋಕ ಈ ಪಂಥವನ್ನು ಪೋಷಿಸಿ ಬೆಳೆಸಿದನು

3.

ಕಾನಿಷ್ಕ ಈ ಪಂಥವನ್ನು ಪೋಷಿಸಿ ಬೆಳೆಸಿದನು.

4.

ಬುದ್ಧನನ್ನು ಚಿನ್ನೆಯ ರೂಪದಲ್ಲಿ ಪೂಜಿಸುವರು.

4.

ಮೂರ್ತಿ ರೂಪದಲ್ಲಿ ಪೂಜಿಸುವರು.

5.

ಬೋಧಿಸತ್ವನನ್ನೂ ಪೂಜಿಸುವದಿಲ್ಲ

5.

ಬೋಧಿಸತ್ವನ ಪೂಜೆ ಇಲ್ಲಿ ಕಡ್ಡಾಯ.

6.

ಇದು ಹಿಂದೂ ಧರ್ಮದಿಂದ ದೂರವಿದೆ.

6.

ಇದು ಹಿಂದು ಧರ್ಮಕ್ಕೆ ಹತ್ತಿರವಾಗಿದೆ.

7.

ಇವರು ಹಿಂದೂ ಧರ್ಮದಲ್ಲಿ ನಂಬಿಕೆ ಹೊಂದಿಲ್ಲ

7.

ಇವರು ದೇವರ ಅವತಾರದಲ್ಲಿ ನಂಬಿಕೆ ಇಟ್ಟಿದ್ದರು.

8.

ಇವರ ಸಾಹಿತ್ತಿಕ ಭಾಷೆ ಪಾಳಿ

8.

ಸಂಸ್ಕೃತ ಇವರ ಸಾಹಿತ್ತಿಕ ಭಾಷೆ.

9.

ಕರ್ಮದಲ್ಲಿ ಇವರಿಗೆ ನಂಬಿಕೆ ಹೆಚ್ಚು

9.

ಭಕ್ತಿಯಲ್ಲಿ ನಂಬಿಕೆ ಹೆಚ್ಚು.

10.

ನಿರ್ಮಾಣವೇ ಜೀವನದ ಪರಮ ಗುರಿ.

10.

ಸ್ವರ್ಗ ಪಡೆಯುವುದು ಇವರ ಗುರಿ

11.

ಅಷ್ಟಾಂಗ ಮಾರ್ಗವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು.

11.

ಪೂಜಾವಿಧಾನಗಳ ಪಾಲನೆ.

12.

ಶ್ರೀಲಂಕಾ, ಬರ್ಮಾದಲ್ಲಿ ಇದರ ಜನಪ್ರಿಯತೆ

12.

ಟೆಬೇಟ ಕೋರಿಯಾದಲ್ಲಿ ಇದರ ಜನಪ್ರಿಯತೆ

13

ಪಾಟಲಿಪುತ್ರ ಇವರ ಧಾರ್ಮಿಕ ಕೇಂದ್ರ

13

ಗಾಂಧಾರ ಇವರ ಧಾರ್ಮಿಕ ಕೇಂದ್ರ

14.

ಸಂಸ್ಕಾರ ವಿಧಿಗಳಿಗೆ ಅವಕಾಶವಿಲ್ಲ

14.

ಸಂಸ್ಕಾರ ವಿಧಿಗಳಿಗೆ ಅವಕಾಶವಿದೆ.

ಸಾಹಿತ್ಯ :

ಸಾಹಿತ್ಯಾಭಿಮಾನಿಯಾಗಿದ್ದ ಕಾನಿಷ್ಕ ವಿದ್ವಾಂಸರನ್ನು ಕಂಡರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಈತ ಅನೇಕ ವಿದ್ವಾಂಸರಿಗೆ ಆಶ್ರಯ ನೀಡಿದ್ದನು. ಈತನ ಆಸ್ಥಾನದಲ್ಲಿ ಅನೇಕ ತತ್ವಜ್ಞಾನಿಗಳು, ಕವಿಗಳು, ವಿದ್ವಾಂಸರು, ನಾಟಕಗಾರರು ಹಾಗೂ ಸಂಗೀತಗಾರರಿದ್ದರು. ಅವರ ಹೆಸರು ಹಾಗೂ ಕೃತಿಗಳು ಈ ಕೆಳಗಿನಂತಿವೆ.

ಕವಿಗಳು  ಕೃತಿಗಳು
1) ಅಶ್ವಘೋಷ ಸುಂದರನಂದ ಹಾಗೂ ವಜ್ರಸೂಚಿ 1) ಬುದ್ಧ ಚರಿತ ಹಾಗೂ ಸೂತ್ರಾಲಂಕಾರ,

2) ನಾಗಾರ್ಜುನ

(ಕುಶಾನರ ಕಾಲದ ಮಾರ್ಟಿನ್ ಲೂಥರ್)

2) ಮಾಧ್ಯಮಿಕ ಸೂತ್ರ
3) ವಸುಮಿತ್ರ 3) ಮಹಾವಿಭಾಷ್ಯ (ಇದನ್ನು ಬೌದ್ಧರ ವಿಶ್ವಕೋಶ ಎನ್ನಲಾಗಿದೆ.)
4) ಚರಕ 4) ಚರಕ ಸಂಹಿತೆ
5) ಎರಡನೆಯ ನಾಗಾರ್ಜುನ 5) ರಸವೈದ್ಯ
6) ಸುಶ್ರೂಷ 6) ಸುಶ್ರೂಷ ಸಂಹಿತ
7) ವಾಗ್ಭಟ 7) ಅಷ್ಟಾಂಗ ಸಂಗ್ರಹ ಹಾಗೂ ಅಷ್ಟಾಂಗ ಹೃದಯ
ಸಿಂದೂ ನಾಗರೀಕತೆಯ ಪೀಠಿಕೆ

ಸಿಂದೂ ನಾಗರೀಕತೆಯ ಪೀಠಿಕೆ

ಪೀಠಿಕೆ :

ವಿಶ್ವದ ಅತ್ಯಂತ ಪ್ರಾಚೀನ ಮತ್ತು ಪ್ರಮುಖ ನಾಗರೀಕತೆಗಳಲ್ಲಿ ಹರಪ್ಪದ ನಾಗರೀಕತೆಯು ಒಂದು. ಭೂಮಿಯ ಗರ್ಭದಲ್ಲಿ ಹುದುಗಿಕೊಂಡಿದ್ದ ಈ ನಾಗರೀಕತೆಯು 1921-22ರಲ್ಲಿ ಸಂಶೋಧಿಸಲ್ಪಟ್ಟಿತು. ಇದರಿಂದಾಗಿ ಭಾರತವು ನಾಗರೀಕತೆಯ ತೊಟ್ಟಿಲು ರಾಷ್ಟ್ರವಾಗಿತ್ತು ಎಂಬುದು ತಿಳಿದುಬರುತ್ತದೆ. ಹರಪ್ಪ ಸಂಸ್ಕೃತಿಯು ಬೆಳಕಿಗೆ ಬಂದದ್ದರಿಂದ ಭಾರತವು ಅನಾಗರೀಕ ರಾಷ್ಟ್ರವೆಂಬ ವಿದೇಶಿಯರ ಅಭಿಪ್ರಾಯ ಹುಸಿಗೊಂಡಿತು. ಹರಪ್ಪ ಸಂಸ್ಕೃತಿಯ ವಿಶಿಷ್ಟವಾದ ಒಂದು ಸಂಸ್ಕೃತಿಯಾಗಿದ್ದು ಸಮಕಾಲೀನ ನಾಗರೀಕತೆಗಳಿಗಿಂತ ವಿಶಿಷ್ಟವಾದ ಲಕ್ಷಣಗಳನ್ನು ಒಳಗೊಂಡಿದೆ. ಹರಪ್ಪ ಸಂಸ್ಕೃತಿಯ ಸಂಶೋಧನೆಯೊಂದಿಗೆ ಸುಮಾರು 3000 ವರ್ಷಗಳಿಗೂ ಹಿಂದೆಯೇ ಭಾರತವು ವ್ಯವಸ್ಥಿತವಾದ ಜನಜೀವನವನ್ನು ಹೊಂದಿದ್ದ ನಾಡಾಗಿತ್ತೆಂದು ತಿಳಿದುಬರುತ್ತದೆ.

ಹರಪ್ಪ ಸಂಸ್ಕೃತಿಯ ಸಂಶೋಧನೆ :

ಹರಪ್ಪಾ ಸಂಸ್ಕೃತಿಯು ಬೆಳಕಿಗೆ ಬಂದದ್ದು ಒಂದು ಆಶ್ಚರ್ಯಕರ ಸಂಗತಿಯಾಗಿದೆ. ಭಾರತದಲ್ಲಿನ ಆಂಗ್ಲ ಸರ್ಕಾರವು 1856ರಲ್ಲಿ ರೈಲ್ವೆ ರಸ್ತೆಯ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದಾಗ ಸುಟ್ಟ ಇಟ್ಟಿಗೆಗಳು ಸಿಂದ್ ಪ್ರದೇಶದಲ್ಲಿ ದೊರೆತವು. ಕ್ರಿ.ಶ 1862 ರಲ್ಲಿ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್ ಹರಪ್ಪದ ಬಳಿ ಕೆಲವು ಮುದ್ರೆಗಳನ್ನು ಪತ್ತೆ ಹಚ್ಚಿದರು. ಇದೇ ವೇಳೆಯಲ್ಲಿ ಬ್ರಿಟೀಷ್ ಸರ್ಕಾರವು ಸಂಶೋಧನೆಗಾಗಿ 2.5ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿತು. ಇದು ಸಂಶೋಧನಾ ಕಾರ್ಯ ಚುರುಕುಗೊಳ್ಳಲು ಕಾರಣವಾಯಿತು. ಇದೇ ವೇಳೆಯಲ್ಲಿ ದಯಾರಾಂ ಸಹನಿ 1921-22ರಲ್ಲಿ ಹರಪ್ಪದಲ್ಲಿ, ಆ‌ರ್.ಡಿ. ಬ್ಯಾನರ್ಜಿ 1922-23ರಲ್ಲಿ ಮೆಹೆಂಜೋದಾರೋವಿನಲ್ಲಿ ನಡೆಸಿದ ಉತ್ಖನನದ ಫಲವಾಗಿ ಸಂಶೋಧನಾ ಕಾರ್ಯಕ್ಕೆ ಹೆಚ್ಚು ಚಾಲನೆ ದೊರೆಯಿತು.

ಹರಪ್ಪ ಸಂಸ್ಕೃತಿಯ ಕಾಲಮಾನ :

ಸರ್‌ಜಾನ್ ಮಾರ್ಷಲ್ ರವರ ಪ್ರಕಾರ – ಕ್ರಿ.ಪೂ 3250-2750,

ಮಾರ್ಟಿಮರ್ ವೀಲರ್ ಕ್ರಿ.ಪೂ – 2500-1500,

ವತ್ಸರ ಪ್ರಕಾರ ಕ್ರಿ.ಪೂ  – 3500 ಕ್ಕೂ ಮುಂಚಿತವಾಗಿ ಈ ನಾಗರೀಕತೆ ಬೆಳೆದಿದೆ.

ಹರಪ್ಪ ಸಂಸ್ಕೃತಿಯ ವಿಭಿನ್ನ ಹೆಸರುಗಳು :

ಹರಪ್ಪ ನಾಗರೀಕತೆಯನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಅವುಗಳೆಂದರೆ : ಸಿಂಧೂಬಯಲಿನ ನಾಗರೀಕತೆ

ಇಂಡೋ-ಸುಮೇರಿಯನ್ ನಾಗರೀಕತೆ

ಚಾಲ್ಕೋಲಿಥಿಕ್ ಸಂಸ್ಕೃತಿ

ಪ್ರಾಗ್ಭಾರತೀಯ ಸಂಸ್ಕೃತಿ-ಹೀಗೆ ವಿಭಿನ್ನ ಹೆಸರುಗಳಿವೆ.

ನಾಗರೀಕತೆಯ ಜನಾಂಗ :

ಹರಪ್ಪ ಸಂಸ್ಕೃತಿಯ ನಿರ್ಮಾತೃಗಳು ಯಾರು ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ದಸ್ಯುಗಳು ಅಥವಾ ದ್ರಾವಿಡರು ಈ ನಾಗರೀಕತೆಯ ನಿರ್ಮಾತೃಗಳೆಂದು ಅಭಿಪ್ರಾಯ ಪಡಲಾಗಿದೆ. ಆದರೆ ಸಂಶೋಧನೆಯ ಕಾಲದಲ್ಲಿ ಆಸ್ಟ್ರೋಲಾಯ್ಡ್-ಮಂಗೋಲಿಯನ್ ಮೊದಲಾದ ಬುಡಕಟ್ಟಿನ ಜನಾಂಗಗಳ ಅವಶೇಷಗಳು ದೊರೆತಿವೆ.

ಪ್ರಮುಖ ನಿವೇಶನಗಳು

ಸಿಂಧೂ ಸಂಸ್ಕೃತಿಯ ಸಂಶೋಧನೆಯಿಂದ ಇದುವರೆಗೆ ಸುಮಾರು 300 ನಿವೇಶನಗಳ ಸ್ಥಳಗಳನ್ನು ಪತ್ತೆ ಹಚ್ಚಲಾಗಿದೆ. ಹಲವು ಪ್ರಮುಖ ನಗರಗಳು ಬೆಳಕಿಗೆ ಬಂದಿವೆ. ಅಂತಹ ನಗರಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ಅರಿಯುವುದು ಅಗತ್ಯವೆನಿಸುತ್ತದೆ.

1) ಹರಪ್ಪ : ಇದು ಹರಪ್ಪ ನಾಗರೀಕತೆಯ ಕಾಲದ ಒಂದು ಪ್ರಮುಖ ನಿವೇಶನ ಪ್ರಾರಂಭದಲ್ಲಿ ಪತ್ತೆ ಹಚ್ಚಿದ ವಿಶಾಲವಾದ ನಿವೇಶನವೂ ಇದೇ ಆಗಿದೆ. ಈ ನಿವೇಶನವು ಪಂಜಾಬಿನ ಮಾಂಟೆಗೋಮರಿ ಜಿಲ್ಲೆಯಲ್ಲಿದೆ. 1921 ರಲ್ಲಿ ಡಾ|| ದಯಾರಾಂ ಸಹನಿಯವರು ಪ್ರಥಮ ಉತ್ಖನನ ನಡೆಸಿದರು. ಆನಂತರ ಹೆಚ್ಚಿನ ಸಂಶೋಧನೆಯನ್ನು ಎಂ.ಎಸ್ ವತ್ಸ 1923 ರಿಂದ 34 ರ ಅವಧಿಯಲ್ಲು, ಕೆ.ಎನ್ ದೀಕ್ಷಿತ್ 1940ರಲ್ಲು, ಸರ್‌ಮಾರ್ಟಿಮರ್ ವೀಲರ್ 1962ರಲ್ಲು ಕೈ ಗೊಂಡರು. ಇದೊಂದು ಪ್ರಮುಖ ನಗರವಾಗಿದ್ದು, ಈ ಚಾರಿತ್ರಿಕ ಹಿನ್ನೆಲೆಯಲ್ಲಿ ಹರಪ್ಪ ಸಂಸ್ಕೃತಿಯೆಂದೇ ಹೆಸರಿಸಲಾಗಿದೆ.

2) ಮೆಹೆಂಜೋದಾರೋ (ಮಡಿದವರ ದಿಬ್ಬ) : ಸಂಶೋಧನೆಯ ಕಾಲದಲ್ಲಿ ದೊರೆತ ಮತ್ತೊಂದು ಪ್ರಮುಖ ನಿವೇಶನ ಮೆಹೆಂಜೋದಾರೋ. ಇದು ಇಂದು ಪಾಕಿಸ್ಥಾನದ ಸಿಂದ್ ಪ್ರಾಂತ್ಯದ ಲರ್ಕಾನ ಜಿಲ್ಲೆಯಲ್ಲಿದೆ. ಹರಪ್ಪ ಮತ್ತು ಮೆಹೆಂಜೋದಾರೋಗಳ ಮಧ್ಯ 640 ಕಿ.ಮೀ ಅಂತರವಿದೆ. ಮೆಹೆಂಜೋದಾರೋ ಎಂಬ ಪದದ ಅರ್ಥ- ʻಮಡಿದವರ ದಿಬ್ಬ’, ಮೆಹೆಂಜೋದಾರೋವನ್ನು ಉತ್ಖನನ ಮಾಡಿದವರು ಸರ್‌ಜಾನ್‌ ಮಾರ್ಷಲ್ ಮತ್ತು ಮೆಕೆರವರು. 1927 ರಿಂದ 31ರ ಅವಧಿಯಲ್ಲಿ ಮಹೆಂಜೋದಾರೋವಿನಲ್ಲಿ ಹೆಚ್ಚಿನ ಸಂಶೋಧನಾ ಕಾರ್ಯ ನಡೆಸಿದ ಕೀರ್ತಿ ಸರ್‌ಮಾರ್ಟಿಮರ್ ವೀಲರ್ ಮತ್ತು ಜಾರ್ಜ ಎಫ್ ಡೇಲ್ಸ್‌ ರವರಿಗೆ ಸಲ್ಲುತ್ತದೆ.

3) ಲೋಥಾಲ್ : ಹರಪ್ಪ ಸಂಸ್ಕೃತಿಯ ಕಾಲದ ಮತ್ತೊಂದು ಪ್ರಮುಖ ನಿವೇಶನ ಲೋಥಾಲ್. ಇದು ಸಾಬರಮತಿಯ ಉಪನದಿಯ ತಗ್ಗು ಪ್ರದೇಶದಲ್ಲಿದೆ. ಆಹ್ಮದಾಬಾದಿನ ನೈರುತ್ಯಕ್ಕೆ 80 ಕಿ.ಮೀ ದೂರವಿರುವ ಲೋಥಾಲ್ ಒಂದು ತೀರ ಪ್ರದೇಶದ ನಗರವಾಗಿದೆ. ಎಸ್.ಆರ್.ರಾವ್‌ ರವರು ಪ್ರಾಕ್ತನಾಶಾಸ್ತ್ರ ಇಲಾಖೆಯ ತಂಡದೊಂದಿಗೆ 1959 ರಿಂದ 1962 ರವರೆಗೆ ಸಂಶೋಧನಾಕಾರ್ಯ ಕೈಗೊಂಡಿದ್ದರು. ಲೋಥಾಲ್ ಸಿಂದೂಕೊಳ್ಳದ ಸಂಸ್ಕೃತಿಯ ಹಡಗುಕಟ್ಟೆಯ ಪ್ರಮುಖ ಕೇಂದ್ರವಾಗಿತ್ತು. ತೀರಪ್ರದೇಶವಾದ ಕಾರಣ ನಗರದ ರಕ್ಷಣೆಗಾಗಿ ಸುತ್ತಲೂ ಇಟ್ಟಿಗೆಯ ಗೋಡೆಯನ್ನು ನಿರ್ಮಿಸಲಾಗಿದೆ. ಲೋಥಾಲ್ ಹೆಸರಾಂತ ಬಂದರಾಗಿದ್ದು ಮಣಿಗಳ ತಯಾರಿಕೆಯ ಕೇಂದ್ರವೂ ಆಗಿತ್ತು.

4) ಕಾಲಿಬಂಗನ್ : ಸರಸ್ವತಿ ನದಿಯ ಬಲದಂಡೆಯ ಮೇಲಿರುವ ನಿವೇಶನವಾಗಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಬರುವ ಈ ನಿವೇಶನವನ್ನು ಘೋಷ್‌ ರವರು 1953ರಲ್ಲಿ ಪತ್ತೆಹಚ್ಚಿದರು. 1961 ರಿಂದ 1969ರ ಅವಧಿಯಲ್ಲಿ ಬಿ.ಬಿ.ಲಾಲ್ ಮತ್ತು ಥಾಪರ್‌ರವರು ಹೆಚ್ಚಿನ ಸಂಶೋಧನೆ ಮಾಡಿದ್ದಾರೆ. ಈ ನಗರದಲ್ಲಿ ದೊರೆತ ಅವಶೇಷಗಳ ಆಧಾರದ ಮೇಲೆ ನಗರದ ಸುತ್ತಲೂ ಕೋಟೆಯನ್ನು ನಿರ್ಮಿಸಲಾಗಿತ್ತೆಂದು ಮತ್ತು ಪ್ರಕೃತಿಯ ವಿಕೋಪಕ್ಕೆ ತುತ್ತಾಗಿರುವ ನಗರವಾಗಿತ್ತೆಂದು ಪತ್ತೆಹಚ್ಚಲಾಗಿದೆ.

5) ಬನವಲಿ : ಹರ್ಯಾಣದ ಹಿಸ್ಸಾರ್ ಜಿಲ್ಲೆಯಲ್ಲಿರುವ ಈ ನಿವೇಶನವನ್ನು ಆರ್.ಎಸ್.ಬಿಸ್ ಪತ್ತೆಹಚ್ಚಿದರು. ಸರಸ್ವತಿ ನದಿಯ ದಂಡೆಯ ಮೇಲಿರುವ ಬನವಲಿಯಲ್ಲಿ ಮಡಿಕೆಗಳು ಹೆಚ್ಚಾಗಿ ದೊರೆತಿವೆ. ಮಡಿಕೆಗಳ ತಯಾರಿಕೆಯ ಕೇಂದ್ರವಾಗಿದ್ದು ಇದರ ಮೇಲೆ ಚಿತ್ರಕಲೆಯು ಕಂಡುಬರುತ್ತದೆ.

6) ಚಾನ್ಹುದಾರೊ : ಈ ನಿವೇಶನವನ್ನು 1931ರಲ್ಲಿ ಎನ್.ಜಿ.ಮಜುಂದಾರ್ ರವರು ಕಂಡುಹಿಡಿದರು.1935ರಲ್ಲಿ ಮ್ಯಾಕೆಯವರು ವ್ಯಾಪಕ ಉತ್ಖನನ ಕೈಗೊಂಡರು.ಈ ನಗರವು ಮಹೆಂಜೊದಾರೊದಿಂದ 129 ಕಿ.ಮೀ.ದೂರದಲ್ಲಿದೆ.

ಕಲೆ

ಹರಪ್ಪ ಸಂಸ್ಕೃತಿಯ ಜನರು ಕಲಾಭಿರುಚಿಯುಳ್ಳವರಾಗಿದ್ದರು. ತಮ್ಮ ಕಲಾ ಪ್ರತಿಭೆಯನ್ನು ಮುದ್ರೆಗಳು ಸ್ತ್ರೀ-ಪುರುಷರ ಆಕೃತಿಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಅವರ ಮಡಿಕೆಗಳ ಮೇಲಿನ ಚಿತ್ರಗಳು ಕಲಾ ಕೌಶಲ್ಯತೆಯನ್ನು ಸೂಚಿಸುತ್ತದೆ, ಮುದ್ರೆಗಳ ಮೇಲೆ ಚಿತ್ರಿಸಿರುವ ಡುಬ್ಬದ ಗೂಳಿ, ಎಮ್ಮೆ, ಕಾಡುಕೋಣ, ಹಸುಗಳ ಚಿತ್ರಗಳು ಕಲೆಯ ಪ್ರತೀಕವಾಗಿವೆ. ಸೂಕ್ಷ್ಮಮಣಿಗಳ ತಯಾರಿಕೆ. ಮಣಿಯ ಮೇಲೆ ಕೆತ್ತಲ್ಪಟ್ಟ ಮಂಗಗಳ ಚಿತ್ರಗಳು ಕಲಾ ಶ್ರೇಷ್ಟತೆಗೆ ನಿದರ್ಶನವಾಗಿದೆ. ಹರಪ್ಪ ಸಂಸ್ಕೃತಿಯ ಕಲಾ ಶ್ರೀಮಂತಿಕೆಯನ್ನು ವ್ಯಕ್ತಪಡಿಸುವ ಶಿವನ ತಾಂಡವ ನೃತ್ಯದ ದಾರ್ಶನಿಕ ಭಾವದ ಮೂರ್ತಿ, ನಟರಾಜನ ಮೂರ್ತಿ, ಮೆಹೆಂಜೋದಾರೋವಿನಲ್ಲಿ ದೊರೆತಿರುವ ನೃತ್ಯ ಭಂಗಿಯ ಸ್ತ್ರೀ ಪ್ರತಿಮೆಗಳು ನಿಜಕ್ಕು ಕಲಾಪ್ರತಿಭೆಯನ್ನು ಪ್ರತಿಬಿಂಬಿಸಿದ್ದಾರೆ. ಇವುಗಳನ್ನು ಅವಲೋಕಿಸಿದ ಸರ್.ಜಾನ್ ಮಾರ್ಷಲ್ ಗ್ರೀಕರ ಕಲೆಯನ್ನು ನಾಚಿಸುವಂತಹ ಕಲಾಭಿವೃದ್ಧಿ ಹರಪ್ಪ ಸಂಸ್ಕೃತಿಯಲ್ಲಿ ಇತ್ತೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಡಿಕೆಗಳ ಮೇಲೆ ಬಿಡಿಸಿರುವ ರೇಖೆಯುಳ್ಳ ಚಿತ್ರಗಳು ಮನುಷ್ಯಾಕೃತಿ, ಪ್ರಾಣಿ, ಗಿಡ ಮರಗಳು ಮತ್ತು ಹಕ್ಕಿ ಪಕ್ಷಿಗಳ ಚಿತ್ರಗಳು ನೋಡಲು ನಯನ ಮನೋಹರವಾಗಿವೆ.

ಮುದ್ರೆಗಳು : ಹರಪ್ಪ ಸಂಸ್ಕೃತಿಯ ಕಾಲದಲ್ಲಿನ ಸುಮಾರು 2500ಕ್ಕೂ ಹೆಚ್ಚು ಮುದ್ರೆಗಳು ದೊರೆತಿವೆ. ಮುದ್ರೆಗಳು ಕಲೆಯ ಪ್ರತೀಕವೂ ಆಗಿವೆ. ಚದುರಾಕಾರದ ಮುದ್ರೆಗಳಲ್ಲಿ ಲಿಪಿ ಮತ್ತು ಆಕೃತಿಗಳೆರಡು ಇವೆ. ಆಯತಾಕಾರದ ಮುದ್ರೆಗಳು ಕೇವಲ ಲಿಪಿಯನ್ನೊಳಗೊಂಡಿರುತ್ತವೆ. ಮುದ್ರೆಗಳ ಮೇಲೆ ಇಳಿ ಕೆತ್ತನೆಯಾಗಿ ಕೊರೆದ ಚಿತ್ರಗಳು, ಮಾನವರ, ಪ್ರಾಣಿಗಳ, ದೇವರ ಆಕೃತಿಗಳು, ಲೌಕಿಕ ಮತ್ತು ಪೌರಾಣಿಕ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳಿವೆ. ಮುದ್ರೆಯ ಮೇಲಿರುವ ಗೂಳಿಯ ಚಿತ್ರ ಎಮ್ಮೆಯ ಮೇಲೆ ಈಟಿಯಿಂದ ಆಕ್ರಮಣ ಮಾಡುತ್ತಿರುವ ಮನುಷ್ಯನ ಚಿತ್ರವಿದೆ. ಮಹೆಂಜೋದಾರೋದ ಮುದ್ರೆಯೊಂದರಲ್ಲಿ ಗೂಳಿಯಾಕಾರದ ಮುನುಷ್ಯ ಕೊಂಬುಳ್ಳ ಹುಲಿಯ ಮೇಲೆ ಆಕ್ರಮಣ ಮಾಡುತ್ತಿರುವ ದೃಶ್ಯವಿದೆ. ಮುದ್ರೆಗಳು ಹರಪ್ಪ ಸಂಸ್ಕೃತಿಯ ಕಲೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

ಲಿಪಿ : ಹರಪ್ಪ ಸಂಸ್ಕೃತಿಯ ಲಿಪಿಯನ್ನು ಸಂಶೋಧನೆಯ ಕಾಲದಲ್ಲಿ ದೊರೆತ ಮುದ್ರೆಗಳ ಸಹಾಯದಿಂದ ಅರಿಯುವ ಪ್ರಯತ್ನ ಮಾಡಲಾಗಿದೆ. ಸಿಂಧೂ ಸಂಸ್ಕೃತಿಯ ಭಾಷೆ ಮತ್ತು ಲಿಪಿಯ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಕ್ಕೆ ಬರುವುದು ಕಷ್ಟಸಾಧ್ಯವಾಗಿದೆ. ಈ ಸಂಸ್ಕೃತಿಯ ಕಾಲದ ಭಾಷೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಪರ್ಪೋಲ ಮೊದಲಾದ ಸ್ಕ್ಯಾಂಡಿನೇವಿಯನ್ನರ ಸಂಶೋಧನೆಯಿಂದ ಭಾಷೆಯು ದ್ರಾವಿಡ ಗುಂಪಿಗೆ ಹತ್ತಿರವಾದುದೆಂದು ತಿಳಿಸಿದ್ದಾರೆ. ಪ್ರಸಿದ್ಧ ವಿದ್ವಾಂಸ ಸಹಾದೇವನ್‌ರವರು ಸಿಂಧೂ ಲಿಪಿಯನ್ನು ಕಂಪ್ಯೂಟರ್ ಸಹಾಯದಿಂದ ಅಧ್ಯಯನ ಮಾಡಿ ಭಾಷೆಯು ದ್ರಾವಿಡ ಗುಂಪಿನದು ಎಂದಿದ್ದಾರೆ. ಎಸ್.ಆರ್.ರಾವ್‌ರವರು ಮುದ್ರೆಗಳ ಮೇಲಿನ ಬರಹಗಳನ್ನು ಅಧ್ಯಯನಮಾಡಿ ಇಂಡೋ-ಆರ್ಯನ್ ಅಥವಾ ಇಂಡೋ-ಯುರೋಪಿಯನ್ ಭಾಷೆಯ ವರ್ಗಕ್ಕೆ ಸೇರಿದ್ದು ವೇದ ಪೂರ್ವದ ಭಾಷೆಯಾಗಿದೆಯೆಂದಿದ್ದಾರೆ. ಲ್ಯಾಂಡ್ನ್‌ರವರು ಬ್ರಾಹ್ಮಿ ಲಿಪಿಯ ಮೂಲವಾಗಿದೆ ಎಂದಿದ್ದಾರೆ. ಸಿಂಧೂ ಲಿಪಿಯ ಬರವಣಿಗೆಯು ಬಲದಿಂದ ಎಡಕ್ಕೆ ಕೆತ್ತಲ್ಪಟ್ಟಿದ್ದು ವರ್ಣಮಾಲೆಯಾಗಿರದೆ ಚಿತ್ರಗಳನ್ನಾದರಿಸಿದ ಲಿಪಿಯಾಗಿದೆ. 250 ರಿಂದ 400 ಚಿತ್ರಗಳನ್ನು ಒಳಗೊಂಡಿದೆ. 26 ಚಿತ್ರಗಳಿದ್ದು ಪ್ರತಿಯೊಂದು ಚಿತ್ರವು ಒಂದೊಂದು ಶಬ್ದವನ್ನೊಳಗೊಂಡಿದೆ. ಎಸ್.ಆರ್.ರಾವ್‌ರವರು ಮನುಷ್ಯ ಮತ್ತು ಮೀನಿನ ಚಿತ್ರಗಳನ್ನು ರೇಖಾರೂಪದಲ್ಲಿ ಬಿಡಿಸಲಾಗಿದೆ ಎಂದಿದ್ದಾರೆ. ಸಿಂಧೂ ಲಿಪಿಯನ್ನು ಓದಲು ಇತ್ತೀಚಿಗೆ ಹೆಚ್ಚಿನ ಪ್ರಯತ್ನಗಳು ನಡೆದಿವೆ. ಆದರೆ ಸಿಂಧೂಲಿಪಿಯು ಇದುವರೆವಿಗೂ ನಿಗೂಢವಾಗಿಯೇ ಉಳಿದಿದೆ.

ಹರಪ್ಪ ಸಂಸ್ಕೃತಿಯ ಅವನತಿ

ಪ್ರಾಚೀನ ಹರಪ್ಪ ಸಂಸ್ಕೃತಿಯು ನೂರಾರು ವರ್ಷಗಳ ಕಾಲ ಬಾಳಿ ಬದುಕಿ ಕ್ರಿಪೂ 2000 ದ ವೇಳೆಗೆ ಅವನತಿ ಹೊಂದಿರಬೇಕೆಂದು ಮಾರ್ಟಿಮರ್ ವೀಲರ್ ಅಭಿಪ್ರಾಯಪಟ್ಟಿದ್ದಾರೆ. ನಾಗರೀಕತೆಯ ಅವನತಿಗೆ ಇತಿಹಾಸಕಾರರು ಅನೇಕ ಕಾರಣಗಳನ್ನು ನೀಡಿದ್ದಾರೆ. ಅಂತಹ ಪ್ರಮುಖ ಕಾರಣಗಳೆಂದರೆ.

1. ಭೌಗೋಳಿಕ ಬದಲಾವಣೆಗಳು :

ಹರಪ್ಪ ಸಂಸ್ಕೃತಿಯ ಕಾಲದಲ್ಲಿ ಹವಾಮಾನದಲ್ಲಿ ಅನೇಕ ಬದಲಾವಣೆಗಳು ಆದವು. ಇಟ್ಟಿಗೆ ಸುಡಲು ಮರಗಳನ್ನು ಕಡಿದಿದ್ದರಿಂದ ಉಷ್ಣತೆಯ ಪ್ರಮಾಣ ಹೆಚ್ಚಿ ಮಳೆ ಕಡಿಮೆಯಾಯಿತೆಂದು ಇದರಿಂದ ಕೃಷಿ ಭೂಮಿಯ ಫಲವತ್ತತೆ ಕಡಿಮೆಯಾಗಿ ಮರುಭೂಮಿಯಾಗಿ ಮಾರ್ಪಟ್ಟಿತೆಂದು ಅಮಲಾನಂದ ಘೋಷ್ ಅಭಿಪ್ರಾಯ ಪಡುತ್ತಾರೆ. ಇದರಿಂದಾಗಿಯೇ ಹರಪ್ಪ ಸಂಸ್ಕೃತಿ ಅವನತಿಯಾಯಿತೆಂದು ಅವರ ನಿಲುವಾಗಿದೆ.

2. ಪ್ರವಾಹ :

ಹರಪ್ಪ ಸಂಸ್ಕೃತಿಯು ಸಿಂಧೂನದಿಯ ದಂಡೆಯ ಮೇಲೆ ಬೆಳವಣಿಗೆ ಹೊಂದಿದ್ದರಿಂದ ಸಿಂಧೂನದಿಯು ಉಕ್ಕಿ- ಹರಿದು ಪ್ರವಾಹಕ್ಕೆ ತುತ್ತಾಗಿ ನಾಗರೀಕತೆ ನಾಶವಾಗಿದೆಯೆಂದು ಸರಜಾನ್ ಮಾರ್ಷಲ್ ಮತ್ತು ಮೆಕೆ ಅಭಿಪ್ರಾಯಪಟ್ಟಿದ್ದಾರೆ.

3. ಆರ್ಯನ್ನರ ದಾಳಿ :

ಹರಪ್ಪ ನಾಗರೀಕತೆಯು ಆರ್ಯನ್ನರ ದಾಳಿಯಿಂದ ನಾಶಗೊಂಡಿದೆಯೆಂದು ಮಾರ್ಟಿಮರ್ ವ್ಹೀಲರ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಸಂಶೋಧನೆಯ ಕಾಲದಲ್ಲಿ ಅಸ್ತವ್ಯಸ್ತವಾಗಿ, ಅಂಗಾಂಗಳು ಕತ್ತರಿಸಲ್ಪಟ್ಟ ಅಸ್ಥಿಪಂಜರಗಳು ದೊರೆತಿವೆ. ಅಸ್ಥಿಪಂಜರಗಳ ಅಧ್ಯಯನದಿಂದ ಅವು ಒಮ್ಮೆಲೆ ಮರಣಹೊಂದಿದ ಶವಗಳೆಂದು ಶಿರಕ್ಕೆ ಕತ್ತಿಯಿಂದ ಗಾಯವಾದಂತಹ ಗುರುತಿದೆ. ಸಂಶೋದನೆಯ ಕಾಲದಲ್ಲಿ ಆರ್ಮೆನಾಯ್ಡ್ ಜನಾಂಗಕ್ಕೆ ಸೇರಿದ ತಲೆಬುರುಡೆ ದೊರೆತಿದ್ದು ಆ ಜನಾಂಗದವರೇ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ.

4. ಪೂರಕ ಅಂಶಗಳೇ ಕಾರಣವಾಗಿರುವುದು :

ಬಿ.ಕೆ. ಥಾಪರ್ ಅಭಿಪ್ರಾಯಪಡುವಂತೆ ಹವಾಯಣ, ನದಿಯ ಪಾತ್ರದ ಪ್ರಭಾವ, ನೈಸರ್ಗಿಕ ಸಂಪನ್ಮೂಲಗಳು ಬೆಳವಣಿಗೆಗೆ ಪೂರಕವಾಗಿದ್ದಂತೆ ಅವನತಿಗೂ ಕಾರಣವಾಗಿರಬೇಕೆಂದು ತಿಳಿಸಿದ್ದಾರೆ.

5. ಸ್ಥಳೀಯ ಹವಾಮಾನ :

ಆರ್.ಎಲ್. ಸ್ಟೀನ್ ಪ್ರಕಾರ ಬೆಲ್ಕೋಲಿಥಿಕ್ ಯುಗದಿಂದ ಸ್ಥಳೀಯ ಹವಾಮಾನವು ಬದಲಾವಣೆಗೊಂಡಿತು. ಇದು ಸಿಂಧೂ ಕೃಷಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು. ಆ ಕಾರಣ ಮಳೆಯು ಕಡಿಮೆಯಾಗುತ್ತಾ ಹೋಗಿ ಶಾಖ ಹೆಚ್ಚಾಗಿ ಮಣ್ಣಿನ ತೇವಾಂಶ ಕಡಿಮೆಯಾಗಿ, ಕೃಷಿಯು ಆಸಾಧ್ಯವೆನಿಸಿ ಅವನತಿಯತ್ತ ನಾಗರೀಕತೆ ಸಾಗಿರಬೇಕು.

6. ಭೂಕಂಪ, ಬರಗಾಲ, ಸಾಂಕ್ರಮಿಕ ಕಾಯಿಲೆ :

ಭೂಕಂಪ, ಬರಗಾಲಗಳಿಂದಲೂ ಹರಪ್ಪ ಸಂಸ್ಕೃತಿ ನಾಶವಾಗಿರಬಹುದು ಅಥವಾ ಯಾವುದೋ ಸಾಂಕ್ರಮಿಕ ಕಾಯಿಲೆಗೆ ತುತ್ತಾಗಿರಬಹುದಾದ ಸಾಧ್ಯತೆಯೂ ಇದೆ.

7. ಮರುಭೂಮಿಯ ವಿಸ್ತಾರ :

ಹರಪ್ಪ ನಾಗರೀಕತೆಯ ಸುತ್ತಲೂ ಮರುಭೂಮಿ ವಿಸ್ತಾರಗೊಂಡು ಲವಣಾಂಶ ಅಧಿಕವಾಗಿರಬೇಕು. ಇದು ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡಿ ಒಂದು ಮಹಾನ್ ನಾಗರೀಕತೆಯ ಅಂತ್ಯಕ್ಕೆ ಕಾರಣವಾಗಿರಬೇಕು.