ಪ್ರಮುಖ ರಜಪೂತ ರಾಜವಂಶಗಳು

ಪ್ರಮುಖ ರಜಪೂತ ರಾಜವಂಶಗಳು

ಪರಿಚಯ
ರಾಜಪೂತರು ಪ್ರಾರಂಭಿಕ ಮಧ್ಯಯುಗೀನ ಭಾರತದಲ್ಲಿ ಶಕ್ತಿಶಾಲಿ ಯೋಧ ವರ್ಗವಾಗಿ ಹೊರಹೊಮ್ಮಿದರು. ಧೈರ್ಯ, ಗೌರವ, ನಿಷ್ಠೆ ಮತ್ತು ರಾಜಧರ್ಮ ಎಂಬ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು. 8ರಿಂದ 12ನೇ ಶತಮಾನಗಳ ನಡುವೆ ಉತ್ತರ ಹಾಗೂ ಮಧ್ಯ ಭಾರತದ ವಿವಿಧ ಭಾಗಗಳಲ್ಲಿ ಆಳಿದ ಚೌಹಾನರು, ಪರಮಾರರು ಮತ್ತು ಪ್ರತಿಹಾರರು ಪ್ರಮುಖ ರಾಜಪೂತ ವಂಶಗಳಾಗಿದ್ದರು. ಈ ವಂಶಗಳು ಹೊರಗಿನ ಆಕ್ರಮಣಗಳಿಗೆ ತಡೆಯೊಡ್ಡಿದಷ್ಟೇ ಅಲ್ಲದೆ, ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಧರ್ಮಕ್ಕೆ ಉತ್ತೇಜನ ನೀಡಿ ಮಧ್ಯಯುಗೀನ ಭಾರತೀಯ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದವು.

ಗೂರ್ಜರ ಪ್ರತಿಹಾರರು (ರಾಜಧಾನಿ – ಕನೂಜ್)

ಗೂರ್ಜರ ಪ್ರತಿಹಾರರು ರಾಮಾಯಣ ಕಾವ್ಯದ ಪ್ರಸಿದ್ಧ ಸೂರ್ಯವಂಶಕ್ಕೆ ಸೇರಿದ ಲಕ್ಷ್ಮಣನ ಹಾಗೂ ಹರಿಚಂದ್ರನೆಂಬ ಬ್ರಾಹ್ಮಣನ ವಂತಜರೆಂದು ಹೇಳಲಾಗಿದೆ. ಇವರು ಕ್ರಿ.ಶ.6ನೆಯ ಶತಮಾನದ ಉತ್ತರಾರ್ಧದ ಸುಮಾರಿಗೆ ಪ್ರಾಬಲ್ಯಾ ಬಂದರು. ಮೊದಲನೆಯ ನಾಗಭಟನು ಪ್ರತಿಹಾರ ಸ್ಥಾಪಕನಾಗಿದ್ದನು. ಇವನು ಕ್ರಿ.ಶ.725ರಿಂದ 740ರವರೆಗೆ ಆಳ್ವಿಕೆ ಮಾಡಿದನೆಂದು ಹೇಳಲಾಗಿದೆ. ಇವನು ಅರಬ್ಬರ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದನು. ಅನಂತರ ಬಲಿಷ್ಠ ಮೇಚ್ಚ ದೊರೆಯ ಬೃಹತ್ ಸೇನೆಯನ್ನು ಸೆದೆಬಡಿದನು. ಈತನ ಆಳ್ವಿಕೆಯ ನಂತರ ವತ್ಸರಾಜ ಕ್ರಿ.ಶ.778ರಲ್ಲಿ ಅಧಿಕಾರಕ್ಕೆ ಬಂದನು.

ವತ್ಸರಾಜ : (ಕ್ರಿ.ಶ 778-805)

ವತ್ಸರಾಜನು ಗೂರ್ಜರ ಪ್ರತಿಹಾರರ ಪ್ರಮುಖ ದೊರೆಯಾಗಿದ್ದಾನೆ. ಇವನು ಒಂದನೆಯ ನಾಗಭಟನಿಮೊಮ್ಮಗ. ಇವನು ಅತ್ಯಂತ ಧೈರ್ಯಶಾಲಿಯಾದ ಅರಸನಾಗಿದ್ದನು. ಇವನು ತನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಯುದ್ಧಗಳನ್ನು ಮಾಡಿದನು. ಇದರಿಂದ ವತ್ಸರಾಜನ ಸಾಮ್ರಾಜ್ಯ ಸಾಕಷ್ಟು ವಿಸ್ತಾರ ಹೊಂದಿದ್ದಿತು. ಇವನು ಬಂಗಾಳದ ಅರಸನಾದ ಧರ್ಮಪಾಲನನ್ನು ಸೋಲಿಸಿದನು. ನಂತರ ರಜಪೂತಾನದ ರಾಜನನ್ನು ಸೋಲಿಸಿ ಹಿಮ್ಮೆಟ್ಟಿಸಿದನು. ಇದಾದ ಕೆಲವೇ ದಿನಗಳಲ್ಲಿ ವತ್ಸರಾಜನು ಕನೂಜ್ ಮೇಲೆ ದಾಳಿ ನಡೆಸಿ ಅಲ್ಲಿನ ರಾಜನಾದ ಇಂದ್ರಾಯುಧನನ್ನು ಸೋಲಿಸಿದನು. ಸೋತ ಇಂದ್ರಾಯುಧ ವತ್ಸರಾಜನ ಮಾಂಡಲಿಕ ದೊರೆಯಾದನು. ಇದನ್ನು ಸಹಿಸದ ಧರ್ಮಪಾಲನು ವತ್ಸರಾಜನ ವಿರುದ್ಧ ದಂಡೆತ್ತಿ ಬಂದನು. ಹೀಗೆ ಗೌಡದೇಶದ ಧರ್ಮಪಾಲ ಹಾಗೂ ವತ್ಸರಾಜ ಕನೂಜ್‌ನ ವಿಷಯದಲ್ಲಿ ಪರಸ್ಪರ ಯುದ್ಧಕ್ಕೆ ನಿಂತರು. ಈ ಯುದ್ಧದಲ್ಲಿ ಧರ್ಮಪಾಲ ಸೋತು ಶರಣಾದನು. ಈ ಯುದ್ಧದ ವಿಷಯವನ್ನು ರಾಘವಪುರ ಶಿಲಾಶಾಸನ ತಿಳಿಸುತ್ತದೆ. ವತ್ಸರಾಜನ ಅಧಿಕಾರಾವಧಿಯಲ್ಲಿ ಪ್ರತಿಹಾರರು, ಪಾಲರು ಹಾಗೂ ರಾಷ್ಟ್ರಕೂಟರ ನಡುವೆ ತ್ರಿಕೋನ ಸ್ಪಧೆ ಏರ್ಪಟ್ಟಿತು. ಆದರೆ, ರಾಷ್ಟ್ರಕೂಟ ದೊರೆ ಧ್ರುವನು ವತ್ಸರಾಜನನ್ನು ಯುದ್ಧವೊಂದರಲ್ಲಿ ಸೋಲಿಸಿ ಓಡಿಸಿದನು. ಹೀಗೆ ಯುದ್ಧದಲ್ಲಿ ಪರಾಭವಗೊಂಡ ವತ್ಸರಾಜ ಮಾನಸಿಕವಾಗಿ ಕೊರಗಿ ನಿಧನನಾದನು.

ಎರಡನೆಯ ನಾಗಭಟ: (ಕ್ರಿ.ಶ.905-833)

ವತ್ಸರಾಜನ ಮರಣದ ನಂತರ ಎರಡನೆಯ ನಾಗಭಟನು ಸಿಂಹಾಸನಕ್ಕೆ ಬಂದನು. ಇವನು ಕ್ರಿ.ಶ.805 ರಿಂದ 833ರವರೆಗೆ ಆಡಳಿತ ನಡೆಸಿದನು. ಇವನು ಅಪ್ರತಿಮ ಶೂರನಾಗಿದ್ದು, ಪ್ರತಿಹಾರ ರಾಜ್ಯವನ್ನು ವಿಸ್ತರಿಸಿದನು. ಕ್ರಿ.ಶ.807ರ ತಾಮ್ರ ಶಾಸನದ ಪ್ರಕಾರ ಎರಡನೆಯ ನಾಗಭಟನು ರಾಷ್ಟ್ರಕೂಟರ ಅರಸನಾದ ಮೂರನೆಯ ಗೋವಿಂದನಿಂದ ಪರಾಭವ ಹೊಂದಿದನೆಂದು ತಿಳಿದುಬಂದಿದೆ. ಈತನ ಪ್ರಮುಖ ಯುದ್ಧಗಳೆಂದರೆ,

1) ಕನೂಜ್ ಮೇಲಿನ ಆಕ್ರಮಣ: ಎರಡನೆಯ ನಾಗಭಟನು ಕನೂಜ್ ಮೇಲೆ ದಾಳಿ ಮಾಡಿ ಅಲ್ಲಿನ ಅರಸನಾದ ಚಕ್ರಾಯುಧನನ್ನು ಸೋಲಿಸಿದನು. ಅನಂತರ ಕನೂಜ್ ಎರಡನೆಯ ನಾಗಭಟನ ಆಡಳಿತಕ್ಕೆ ಒಳಪಟ್ಟಿತು. ಅಂದಿನಿಂದ ಕನೂಜ್ ಎರಡನೆಯ ನಾಗಭಟನ ರಾಜಧಾನಿಯಾಯಿತು.

2) ಧರ್ಮಪಾಲನನ್ನು ಸೋಲಿಸಿದುದು: ಕನೂಜ್ ಅರಸನಾದ ಚಕ್ರಾಯುಧನು ಧರ್ಮಪಾಲನ ಆಶ್ರಯದಲ್ಲಿದ್ದನು. ಎರಡನೆಯ ನಾಗಭಟನಿಂದ ಚಕ್ರಾಯುಧ ಪರಾಭವಗೊಂಡ ನಂತರ ಧರ್ಮಪಾಲನು ನಾಗಭಟನ ವಿರುದ್ಧ ಹೋರಾಟ ಆರಂಭಿಸಿದನು. ಈ ಹೋರಾಟದಲ್ಲಿ ಧರ್ಮಪಾಲನು ಸೋಲನುಭವಿಸಿದನು. ಈ ಯುದ್ಧದ ಕುರಿತು ಗ್ವಾಲಿಯರ್ ಶಾಸನ ಮಾಹಿತಿ ಒದಗಿಸುತ್ತದೆ.

3) ರಾಷ್ಟ್ರಕೂಟರ ವಿರುದ್ಧ ದಾಳಿ: ಧರ್ಮಪಾಲನನ್ನು ಪರಾಭವಗೊಳಿಸಿದ ನಾಗಭಟನು ರಾಷ್ಟ್ರಕೂಟರ ಪ್ರದೇಶಗಳ ಕಡೆಗೆ ಗಮನಹರಿಸಿದನು. ಆದರೆ, ರಾಷ್ಟ್ರಕೂಟರ ದೊರೆ 3ನೆಯ ಗೋವಿಂದ ನಾಗಭಟನನ್ನು ಸೋಲಿಸಿ ಆತನ ಮುಂದುವರಿಕೆಗೆ ತಡೆಯೊಡ್ಡಿದನು. ಗ್ವಾಲಿಯರ್ ಶಾಸನವೇ ಹೇಳುವಂತೆ ಎರಡನೆಯ ನಾಗಭಟನು ಆಂದ್ರ, ಸಿಂದ್, ವಿದರ್ಭ ಹಾಗೂ ಕಳಿಂಗ ರಾಜ್ಯಗಳನ್ನು ಗೆದ್ದುಕೊಂಡನು.

4) ಮುಸ್ಲಿಮರ ಮೇಲೆ ದಾಳಿ: ಎರಡನೆಯ ನಾಗಭಟನು ಬಕ್ಷರನ ಸುಲ್ತಾನನನ್ನು ಸೋಲಿಸಿದನೆಂದು ಗ್ವಾಲಿಯರ್ ಶಾಸನವೇ ಹೇಳುತ್ತದೆ. ಅದು ಅಲ್ಲದೆ ಎರಡನೆಯ ನಾಗಭಟನು ತನ್ನ ಸಾಮಂತನಾದ ಗೋವಿಂದರಾಜನ ಜೊತೆಗೂಡಿ ಮುಸ್ಲಿಂರನ್ನು ಓಡಿಸಿದನೆಂದು ಹೇಳಲಾಗಿದೆ. ನಾಗಭಟನ ನಂತರ ಅವನ ಮಗ ರಾಮಭದ್ರ ಅಧಿಕಾರಕ್ಕೆ ಬಂದನು. ಇವನು ಕೇವಲ 3 ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದನು. ಇವನ ನಂತರ ಇವನ ಮಗನಾದ ಮಿಹಿರ ಭೋಜ ತನ್ನ ತಂದೆಯನ್ನು ಕೊಂದು ಅಧಿಕಾರಕ್ಕೆ ಬಂದನು.

ಮಿಹಿರ ಭೋಜ : (ಕ್ರಿ.ಶ. 836-865)

ಇವನು ಗೂರ್ಜರ ಪ್ರತಿಹಾರ ಚಕ್ರವರ್ತಿಗಳಲ್ಲಿಯೇ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಸಿದ್ಧ ಅರಸನಾಗಿದ್ದನು. ಇವನು ಪ್ರತಿಹಾರ ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತರಿಸಿದನು. ಈತ ಧ್ರುವ ಹಾಗೂ ಧರ್ಮಪಾಲರಿಗೆ ಸರಿಸಮವಾದ ಸ್ಥಾನವನ್ನು ಪಡೆದನು. ಇವನು ಭಗವತಿಯ ಪರಮಭಕ್ತನಾಗಿದ್ದನು. ಪ್ರಭಾಸ, ಆದಿ ಹಾಗೂ ಮಿಹಿರ ಎಂಬ ಬಿರುದುಗಳನ್ನು ಪಡೆದಿದ್ದನು. ಇವನು ಕ್ರಿಶ. 836ರಲ್ಲಿ ‘ಬರಾಹ್’ ತಾಮ್ರಶಾಸನವನ್ನು ಹೊರಡಿಸಿದನು.

ದಿಗ್ವಿಜಯಗಳು:

1) ಬಂದೇಲ್‌ಖಂಡದ ವಶ : ಬಂದೇಲ್ ಖಂಡವು ತನ್ನ ತಂದೆಯ ಕಾಲದಿಂದಲೂ ಸ್ವತಂತ್ರವಾಗಿದ್ದ ಕಾರಣದಿಂದ ಮಿಹಿರಬೋಜನು ಅಧಿಕಾರಕ್ಕೆ ಬಂದ ತಕ್ಷಣವೇ ಬಂದೇಲ್ ಖಂಡದ ಮೇಲೆ ದಂಡೆತ್ತಿಹೋಗಿ ಅಲ್ಲಿನ ರಾಜನಾದ ಜಯಶಕ್ತಿಯನ್ನು ಸೋಲಿಸಿ ಅದನ್ನು ತನ್ನ ರಾಜ್ಯದಲ್ಲಿ ಸೇರ್ಪಡೆಗೊಳಿಸಿದನು.

2) ರಾಜಪುತಾನದ ವಿರುದ್ಧ ದಂಡಯಾತ್ರೆ : ಮಿಹಿರಭೋಜನು ರಜಪೂತಾನದ ವಿರುದ್ಧ ದಾಳಿ ಮಾಡಿ ಅದನ್ನು ಗೆದ್ದು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು. ಈತನ ರಜಪೂತಾನದ ದಾಳಿಯ ಕುರಿತು ವರಾಹ ಹಾಗೂ ದೌಲತ್‌ಪುರದ ಶಾಸನಗಳು ಮಾಹಿತ ನೀಡುತ್ತವೆ.

3) ಪಂಜಾಬ್ ಮೇಲಿನ ದಾಳಿ: ಕಲ್ದಣನು ತನ್ನ ರಾಜತರಂಗಿಣಿಯಲ್ಲಿ ಬರೆದಂತೆ ಪಂಜಾಬಿನ ಕರ್ನಲ್ ಪ್ರಾಂತ್ಯವು ಮಿಹಿರಭೋಜನ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಆದರೆ, ಇದನ್ನು ಕಾಶ್ಮೀರದ ಶಂಕರ ವರ್ಮನ್ ಎಂಬ ಅರಸ ಗೆದ್ದುಕೊಂಡಿದ್ದನು. ಆದರೆ, ಮಿಹಿರಭೋಜನು ಪುನಃ ಪಂಜಾಬ್ ಮೇಲೆ ದಾಳಿ ಮಾಡಿ ಶಂಕರವರ್ಮನನ್ನು ಸೋಲಿಸಿ ಪಂಜಾಬನ್ನು ವಶಪಡಿಸಿಕೊಂಡನು.

4) ಪಶ್ಚಿಮ ಭಾರತದ ವಿರುದ್ಧ ದಾಳಿ: ಮಿಹಿರ ಭೋಜನ ಪಶ್ಚಿಮ ಭಾರತದಲ್ಲಿ ನೆಲೆಯೂರಿದ್ದ ಹೂಣರ ವಿರುದ್ಧ ದಾಳಿ ಮಾಡಿದನು. ಈ ದಂಡಯಾತ್ರೆಯ ನಾಯಕತ್ವವನ್ನು ಬಲವರ್ಮ ವಹಿಸಿದ್ದನು. ಮಿಹಿರ ಭೋಜನ ದಾಳಿಗೆ ಹೆದರಿದ ಹೂಣರು ಭಾರತದಿಂದ ಕಾಲೆಗೆದರು.

5) ಮಧ್ಯಭಾರತದ ಮೇಲೆ ದಾಳಿ: ಮಿಹಿರ ಭೋಜನು ಮಧ್ಯಭಾರತದ ಪ್ರದೇಶಗಳಾದ ಗ್ವಾಲಿಯರ್, ಝಾನ್ಸಿಗಳನ್ನು ವಶಪಡಿಸಿಕೊಂಡು ಅಲ್ಲಿ ತನ್ನ ಪ್ರತಿನಿಧಿಗಳನ್ನು ನೇಮಿಸಿದನು ಎಂದು ಗ್ವಾಲಿಯರ್ ಹಾಗೂ ದೇಘರ್ ಶಾಸನಗಳು ಹೇಳಿವೆ. 6) ರಾಷ್ಟ್ರಕೂಟರೊಂದಿಗೆ ಹೋರಾಟ: ರಾಷ್ಟ್ರಕೂಟ ದೊರೆಗಳಾದ ಅಮೋಘವರ್ಷ ಹಾಗೂ ಕೃಷ್ಣರ ವಿರುದ್ಧ ಮಿಹಿರಭೋಜನು ದಾಳಿ ಮಾಡಿ ಅವರನ್ನು ಸೋಲಿಸಿ ಕನೂಜನ್ನು ವಶಪಡಿಸಿಕೊಂಡನು. ನಂತರ ನರ್ಮದಾ ನದಿಯವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದನು. ರಾಷ್ಟ್ರಕೂಟರು ಹಾಗು ಮಿಹಿರಭೋಜನ ನಡುವೆ ಹಲವಾರು ಯುದ್ಧಗಳು ನಡೆದು ಅವರಿಬ್ಬರೂ ಸಾಕಷ್ಟು ಬಳಲಿದರು.

6) ಪಾಲರೊಂದಿಗೆ ಯುದ್ಧ: ಪಾಲ ದೊರೆ ದೇವಪಾಲನು ಅತ್ಯಂತ ಶಕ್ತಿಶಾಲಿ ಹಾಗು ಸಮರ್ಥ ದೊರೆಯಾಗಿದ್ದನು. ಇವನು ವಿಂದ್ಯಾಚಲ ಪೂರ್ವಗಡಿ ಭಾಗಗಳು ಹಾಗೂ ಉತ್ತರ ಗಡಿ ಪ್ರದೇಶಗಳ ರಾಜ್ಯಗಳಿಂದ ಅಧಿಕ ಪ್ರಮಾಣದ ತೆರಿಗೆಯನ್ನು ವಸೂಲಿಮಾಡಿ ದರ್ಪದಿಂದ ಮೆರೆಯುತ್ತಿದ್ದನು. ಇದರಿಂದ ಮಿಹಿರಭೋಜನು ದೇವಪಾಲನ ವಿರುದ್ಧ ಹಲವಾರು ಬಾರಿ ದಂಡಯಾತ್ರೆಯನ್ನು ಕೈಗೊಂಡನು. ಈ ದಂಡಯಾತ್ರೆಗಳು ಇಬ್ಬರಿಗೂ ಸಮಬಲದ ಗೆಲವುಗಳನ್ನು ತಂದುಕೊಟ್ಟವು.

ಮಿಹಿರಭೋಜನ ನಂತರ ಮಹೇಂದ್ರಪಾಲ ಹಾಗೂ ಎರಡನೆಯ ಭೋಜ ಕ್ರಮವಾಗಿ ಪ್ರತಿಹಾರರ ದೊರೆಗಳಾಗಿ ಅಧಿಕಾರ ಚಲಾಯಿಸಿದರು. ಇವರ ನಂತರ ಒಂದನೆಯ ಮಹಿಪಾಲ ಪ್ರತಿಹಾರರ ದೊರೆಯಾದನು.

ಒಂದನೆಯ ಮಹಿಪಾಲ:

ಎರಡನೆಯ ಭೋಜನ ನಂತರ ಒಂದನೆಯ ಮಹಿಪಾಲನು ಪ್ರತಿಹಾರರ ಅರಸನಾದನು. ಇವನು ಅತ್ಯಂತ ಶಕ್ತಿಶಾಲಿ ಅರಸನಾಗಿದ್ದು, ಕನೋಜನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡನು. ಈತ ಅಧಿಕಾರಕ್ಕೆ ಬಂದ ಹೊಸದರಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದನು. ಆದರೂ ಮಹಿಪಾಲ ದಕ್ಷ ಆಡಳಿತ ನಡೆಸುವ ಮೂಲಕ ಹೆಸರುವಾಸಿಯಾದನು.

1) ರಾಷ್ಟ್ರಕೂಟರೊಂದಿಗೆ ಯುದ್ಧ: ಸಿಂಹಾಸನಕ್ಕೆ ಬಂದ ಹೊಸದರಲ್ಲಿಯೇ ಒಂದನೆಯ ಮಹಿಪಾಲನಿಗೆ ರಾಷ್ಟ್ರಕೂಟರೊಂದಿಗೆ ಹೋರಾಟ ಮಾಡುವ ಸಂದರ್ಭ ಬಂದಿತು. ರಾಷ್ಟ್ರಕೂಟ ದೊರೆ ಇಂದ್ರನು ಕನೂಜನ್ನು ಸೂರೆಗೊಂಡು ಮಾಳವ ಹಾಗೂ ಉಚೈನಿಗಳನ್ನು ವಶಪಡಿಸಿಕೊಂಡನು. ಮಹಿಪಾಲ ಈ ಯುದ್ಧದಲ್ಲಿ ಸೋತು ರಣರಂಗದಿಂದ ಪಲಾಯನ ಮಾಡಿದನು. ಆದರೆ ಮಹಿಪಾಲ ಮತ್ತೊಮ್ಮೆ ರಾಷ್ಟ್ರಕೂಟರ ಅರಸ 3ನೆಯ ಇಂದ್ರನ ಕಾಲದಲ್ಲಿ ಕನೂಜನ್ನು ಮರಳಿ ಪಡೆದನು.

2) ಪಾಲರೊಂದಿಗೆ ಮಹಿಪಾಲನ ನೀತಿ: ಮಹಿಪಾಲನು ಪಾಲರೊಂದಿಗೆ ಯಾವುದೇ ರೀತಿಯಲ್ಲಿ ಯುದ್ಧಕ್ಕೆ ಹೋಗದೆ ಪಾಲರಿಗೆ ಸೋನೆ ನದಿಯ ಪೂರ್ವ ಭಾಗದಲ್ಲಿ ಪ್ರದೇಶಗಳನ್ನು ನೀಡಿದನು.

3) ಮಹಿಪಾಲನ ಇತರೆ ಯುದ್ಧಗಳು: ಮಹಿಪಾಲನು ಮೇಖಲ, ಕಳಿಂಗ, ಕೇರಳ ಹಾಗು ಕುಂತಲ ಮುಂತಾದ ಪ್ರದೇಶಗಳನ್ನು ಗೆದ್ದು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿದನು. ಧಾರಾ ಹಾಗೂ ಉಜೈನಿಗಳನ್ನು ಗೆದ್ದನೆಂದು ಪ್ರತಾಪಗಡ ಶಾಸನ ತಿಳಿಸುತ್ತದೆ.

4) ಸಾಮ್ರಾಜ್ಯ ವಿಸ್ತರಣೆ: ಮಹಿಪಾಲನ ಸಾಮ್ರಾಜ್ಯವು ಪಶ್ಚಿಮ ಬಿಹಾರದ ಗಡಿಗಳವರೆಗೂ ವಿಸ್ತರಿಸಿದ್ದಿತು. ಇವನಿಗೆ ನಿರ್ಭಯರಾಜನೆಂಬ ಬಿರುದು ಇದ್ದಿತು. ಮಹಿಪಾಲನು ಸಾಹಿತ್ಯಾಭಿಮಾನಿಯಾಗಿದ್ದು ಸ್ವತಃ ತಾನೇ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನ ಆಸ್ಥಾನದ ಕವಿ ರಾಜಶೇಖರನು ಬಾಲರಾಮಾಯಣ, ಬಾಲಭಾರತ, ಕರ್ಪೂರಮಂಜರಿ ಹಾಗು ಕಾವ್ಯಮೀಮಾಂಸ ಎಂಬ ಕೃತಿಗಳನ್ನು ರಚಿಸಿದನು. ವಿದ್ಯಪಾಲ ಎಂಬುದು ಇವನ ಮೇರು ಕೃತಿ. ರಾಜಶೇಖರನ ಕರ್ಪೂರ ಮಂಜರಿಯು ಭಾರತೀಯ ಇತಿಹಾಸದಲ್ಲಿನ ಸಾಹಿತ್ಯದ ಅತ್ಯಂತ ಶ್ರೇಷ್ಠ ಸುಖಾಂತ ನಾಟಕವಾಗಿದೆ. ಇವನ ನಂತರ ಎರಡನೆಯ ಮಹೇಂದ್ರಪಾಲ, ದೇವಪಾಲ, ಎರಡನೆಯ ವಿನಾಯಕಪಾಲ, ಎರಡನೆಯ ಮಹಿಪಾಲ, ವಿಜಯಪಾಲ ಹಾಗೂ ರಾಜ್ಯಪಾಲ ಅಧಿಕಾರ ನಡೆಸಿದರು. ನಂತರ ಬಂದ ಚಂದೇಲರು, ಕಳಚೂರಿಗಳು ಹಾಗೂ ಚೌಹಾನರು ಗೂರ್ಜರ ಪ್ರತಿಹಾರರನ್ನು ಮೂಲೆಗುಂಪು ಮಾಡಿದರು. ಅಂದಿಗೆ ಪ್ರತಿಹಾರರ ರಾಜ್ಯ ಅವನತಿ ಹೊಂದಿತು.

ಚೌಹಾನರು (ರಾಜಧಾನಿ-ಅಜ್ಮೀರ್, ಜೈಪುರ)

ರಜಪೂತರಲ್ಲಿ ಚೌಹಾನ ಸಂತತಿಯೇ ಅತ್ಯಂತ ಪ್ರಮುಖವಾದುದು. ಇವರು ಏಳನೆಯ ಶತಮಾನದಲ್ಲಿಯೇ ಶಾಕಂಬರಿಯನ್ನು ಪಡೆದುಕೊಂಡಿದ್ದರು. ಹೀಗಾಗಿ ಚೌಹಾನ ವಂಶದಲ್ಲಿ ಶಾಕಂಭರೀಯ ಚೌಹಾನರು, ರಣಸ್ತಂಭಪುರದ ಚೌಹಾನರು, ನಾಡೋಲಿಯ ಚೌಹಾನರು, ಜಾಬಾಲಿಪುರದ ಚೌಹಾನರು, ಸತ್ಯಪುರದ ಚೌಹಾನರು ಹಾಗೂ ದೇವಾಡದ ಚೌಹಾನರು ಎಂಬ ವಿವಿಧ ಶಾಖೆಗಳು ಇದ್ದವು. ಈ ಶಾಖೆಗಳಲ್ಲಿ ಶಾಕಂಬರಿಯ ಚೌಹಾನರೇ ಪ್ರಮುಖರು. ‘ಜೈಪುರ’ ಇವರ ರಾಜಧಾನಿಯಾಗಿತ್ತು. ಇವರು ಪ್ರತಿಹಾರರ ಸಾಮಂತರಾಗಿದ್ದರು. ಚಾಂದ್ ಬರ್ದಾಯಿಯ ಪೃಥ್ವಿರಾಜರಾಸೋ, ನಯಚಂದ್ರನ ಹಮ್ಮಿರ ಕಾವ್ಯ ಹಾಗೂ ಫೆರಸ್ತನ ಬರವಣಿಗೆಗಳು ಚೌಹಾನರ ಇತಿಹಾಸದ ಮೇಲೆ ಬೆಳಕು ಚಲ್ಲುತ್ತವೆ. ಇವರ ಮೂಲದ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲವಾದರೂ ಚಾಂದ್‌ ಬರ್ದಾಯಿಯ ಪ್ರಕಾರ ಬ್ರಹ್ಮನು ಮೌಂಟ ಅಬುವಿನಲ್ಲಿ ಯಜ್ಞ ಕೈಗೊಂಡಾಗ ಆ ಯಜ್ಞಕುಂಡದ ಮೂಲಕ ಚೌಹಾನರ ಮೂಲ ಪುರುಷ ಹೊರಬಂದನೆಂದು ಹೇಳಲಾಗಿದೆ.

ವಸುದೇವ ಚೌಹಾನ ಸಂತತಿಯ ಸ್ಥಾಪಕ. ಇವನ ನಂತರ ಬಂದ ಇಮ್ಮಡಿ ವಿಗ್ರರಾಜ ಕ್ರಿ.ಶ 973ರ ವರೆಗೆ ಆಳ್ವಿಕೆ ನಡೆಸಿದನು. ಇವನು ಅನಿಲ್‌ವಾಡದ ಮೊದಲನೆಯ ಮೂಲ ರಾಜನನ್ನು ಸೋಲಿಸಿದನೆಂದು ಹೇಳಲಾಗಿದೆ. ತದನಂತರ ಕ್ರಿಶ 1105 ರಲ್ಲಿ ಮೊದಲನೆಯ ಪೃಥ್ವಿರಾಜ ಅಧಿಕಾರಕ್ಕೆ ಬಂದನು. ಇವನ ಮಗ ಅಜಯರಾಜನು ಅಜಮೀರ ನಗರವನ್ನು ನಿರ್ಮಿಸಿದನು. ಅಜಯರಾಜನ ನಂತರ ಅವನ ಮಗ ಅರ್ಣೋರಾಜ ಅಧಿಕಾರಕ್ಕೆ ಬಂದನು. ಇವನು ಕಾಂಚನದೇವಿಯನ್ನು ಮದುವೆಯಾದನು. ಇವನು ಕ್ರಿ.ಶ 1153ರವರೆಗೆ ಅಧಿಕಾರ ಚಲಾಯಿಸಿದನು.

ನಾಲ್ಕನೆಯ ವಿಗ್ರರಾಜ: (1153-1163)

ಅರ್ಣೋರಾಜನ ಮಗನಾದ ವಿಗ್ರರಾಜ ಕ್ರಿ.ಶ 1153 ರಿಂದ 1163ರ ವರೆಗೆ ಆಳ್ವಿಕೆ ನಡೆಸಿದನು. ಇವನು ಚೌಹಾನರಲ್ಲಿಯೇ ಪ್ರಸಿದ್ಧ ದೊರೆಯಾಗಿದ್ದನು. ಇವನಿಗೆ ಬಿಸಿಲದೇವ ಎಂದು ಇನ್ನೊಂದು ಹೆಸರಿದ್ದೀತು. ಇವನ ಆಡಳಿತಾವಧಿಯಲ್ಲಿ ಚೌಹಾನರ ಸಾಮ್ರಾಜ್ಯ ವಿಶಾಲವಾಗಿ ಹರಡಿತ್ತು. ಇವನು ದೆಹಲಿಯನ್ನು ತೋಮರ ರಾಜನಿಂದ ವಶಪಡಿಸಿಕೊಂಡನು. ನಂತರ ಚಾಲುಕ್ಯ ಅರಸ ಕುಮಾರ ಪಾಲನ ಮೇಲೆ ದಂಡಯಾತ್ರೆಯನ್ನು ಕೈಗೊಂಡು ತನ್ನ ತಂದೆಗೆ ಆಗಿದ್ದ ಅವಮಾನದ ಸೇಡನ್ನು ತೀರಿಸಿಕೊಂಡನು. ಈತ ಮುಸ್ಲಿಂ ರೊಂದಿಗೆ ಸಾಕಷ್ಟು ಯುದ್ಧಗಳನ್ನು ಮಾಡಿದನು. ಅವರಿಂದ ಯಮುನಾ ಹಾಗೂ ಸೆಟ್ಲಜ್ ನದಿಗಳ ನಡುವಣ ಪ್ರದೇಶಗಳನ್ನು ವಶಪಡಿಸಿಕೊಂಡನು. ಪರಮಾರರಿಂದ ಜ್ವಾಲಾಪುರವನ್ನು ಗೆದ್ದುಕೊಂಡನು. ಹೀಗೆ ವಿಶಾಲ ಸಾಮ್ರಾಜ್ಯವನ್ನು ನಿರ್ಮಿಸಿದ್ದ ನಾಲ್ಕನೆಯ ವಿಗ್ರರಾಜನಿಗೆ ʻಮಹಾರಾಜಾಧಿರಾಜ ಹಾಗೂ ಪರಮೇಶ್ವರ’ ಇಂಬ ಬಿರುದುಗಳನ್ನು ನೀಡಲಾಗಿತ್ತು. ಈತ ದಿಗ್ವಿಜಯಿಶಾಲಿಯಾಗಿದ್ದುದು ಅಲ್ಲದೆ ಉತ್ತಮ ಕವಿಯೂ ಆಗಿದ್ದನು. ಇವನು ‘ಹರಕೇಲಿ’ಎಂಬ ನಾಟಕವನ್ನು ರಚಿಸಿದ್ದಾನೆ. ಇವನ ಆಸ್ಥಾನದ ಕವಿಯಾಗಿದ್ದ ಸೋಮದೇವ ʻಲಲಿತಾವಿಗ್ರಹ’ ಎಂಬ ನಾಟಕವನ್ನು ಬರೆದಿದ್ದಾನೆ. ಈ ಮೇಲಿನ ಎರಡು ನಾಟಕಗಳ ತುಣುಕುಗಳನ್ನು ಅಜ್ಜರನ ಒಂದು ಪ್ರಧಾನವಾದ ಮಸೀದಿಯಲ್ಲಿನ ಹಾಸುಗಲ್ಲುಗಳ ಮೇಲೆ ಕೆತ್ತಲಾಗಿದೆ. ವಿಗ್ರರಾಜನು ಅಣ್ಣೀರಿನಲ್ಲಿ ಒಂದು ಶಾಲೆಯೊಂದನ್ನು ಸ್ಥಾಪಿಸಿದನು. ವಿಗ್ರರಾಜನ ನಂತರ ಅವನ ಸೋದರ ಸೋಮೇಶ್ವರನ ಮಗ ಮೂರನೆಯ ಪೃಥ್ವಿರಾಜ ಸಿಂಹಾಸನಕ್ಕೆ ಬಂದನು.

ಮಾಳವದ ಪರಮಾರರು: (ರಾಜಧಾನಿ ಧಾರಾ)

ಗೂರ್ಜರ ಪ್ರತಿಹಾರರಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಪರಮಾರರು ಅಧಿಕಾರಕ್ಕೆ ಬಂದರು. ಇವರು ರಾಷ್ಟ್ರಕೂಟ ಅರಸರ ಸಾಮಂತರಾಗಿದ್ದರು. ರಜಪೂತಾನದ ಸಿರೋಹಿ ರಾಜ್ಯದ ಮೌಂಟ್ ಅಬು ಪರಮಾರರ ಮೂಲ ಸ್ಥಳ. ಇವರ ಮೊದಲ ರಾಜಧಾನಿ ಉಜೈನಿ ಆಗಿದ್ದು, ನಂತರ ಧಾರಾ ನಗರವನ್ನು ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡರು. ಉಪೇಂದ್ರ ಪರಮಾರ ಮನೆತನದ ಸ್ಥಾಪಕ. ಇವನು ಮೌಂಟ್ ಅಬು ಬಳಿಯ ಚಂದ್ರವತಿಯ ಕಡೆಯಿಂದ ಬಂದವನೆಂದು ಹೇಳಲಾಗಿದೆ. ಇವನ ನಂತರ ಒಂದನೆಯ ವೈರಸಿಂಹ, ಸೀಯಕ, ಎರಡನೆಯ ವೈರಸಿಂಹ, ಎರಡನೆಯ ಸೀಯಕ ಕ್ರಮವಾಗಿ ಮಾಳವವನ್ನು ಆಳಿದರು.

ವಾಕ್ಷತಿ ಮುಂಜ;

ಇವನು ಪರಮಾರರ ಏಳನೆಯ ದೊರೆ. ಈತ ಕ್ರಿ.ಶ.993ರಲ್ಲಿ ಅಧಿಕಾರಕ್ಕೆ ಬಂದನು. ಇವನಿಗೆ ವಾಕ್ರತಿ, ಉತ್ಸಲ, ಅಮೋದವಂಶ ಎಂಬ ಬಿರುದುಗಳಿದ್ದವು.

ಇವನ ಸಾಮ್ರಾಜ್ಯ ಪೂರ್ವದ ಬಿಲ್ಲಾದಿಂದ ಪಶ್ಚಿಮದ ಸಬರಮತಿವರೆಗೆ ವಿಸ್ತರಿಸಿದ್ದಿತು. ವಾಕೃತಿ ಅನೇಕ ಯುದ್ಧಗಳನ್ನು ಮಾಡಿದ್ದಾನೆ. ಅವುಗಳೆಂದರೆ,

1) ಕಲಚೂರಿಗಳ ಮೇಲೆ ದಾಳಿ: ಕಲಚೂರಿ ಚಕ್ರವರ್ತಿ ಎರಡನೆಯ ಯುವರಾಜನು ವಾಕ್ರತಿ ಮುಂಜಿನಿಂದ ಸೋತು ತ್ರಿಪುರಿಯನ್ನು ಆತನಿಗೆ ನೀಡಿದನು.

2) ಗುಜರಾತಿನ ಚಾಲುಕ್ಯರ ವಿರುದ್ಧ ದಂಡಯಾತ್ರೆ: ವಾಕೃತಿ ಮುಂಜ ಗುಜರಾತಿನ ಚಾಲುಕ್ಯ ಅರಸನಾದ ಒಂದನೆಯ ಮೂಲರಾಜನನ್ನು ಸೋಲಿಸಿ ಅವನನ್ನು ಮಾರ್ವಾಟದ ಮರುಭೂಮಿಯವರೆಗೆ ಅಟ್ಟಿಸಿಕೊಂಡು ಹೋದನು.

3) ಚೋಳರ ವಿರುದ್ಧ ವಿಜಯ: ಮುಂಜನು ಚೋಳರ ವಿರುದ್ಧ ಹಲವಾರು ಬಾರಿ ವಿಜಯಸಾಧಿಸಿದ್ದನೆಂದು ಅನೇಕ ಇತಿಹಾಸಕಾರರು ಹೇಳಿದ್ದಾರೆ.

4) ಚಾಹಮಾನರ ವಿರುದ್ಧ ಹೋರಾಟ: ವಾಕ್ಷತಿ ಮುಂಜನು ಚಾಹಮಾನರ ಬಲಿರಾಜನನ್ನು ಸೋಲಿಸಿ ಮೌಂಟ ಅಬು ಹಾಗು ಜೋದಪುರ ಪ್ರದೇಶವನ್ನು ವಶಪಡಿಸಿಕೊಂಡನೆಂದು ಕಂತೇರಿ ಶಾಸನದಲ್ಲಿ ತಿಳಿಸಲಾಗಿದೆ. ಮೌಂಟ ಅಬುವನ್ನು ಗೆದ್ದ ನಂತರ ಮುಂಜ ತನ್ನ ಮಗನಾದ ಅರಣ್ಯ ರಾಜನನ್ನು ಮೌಂಟ ಅಬುವಿನ ಪ್ರಾಂತಾಧಿಕಾರಿಯನ್ನಾಗಿ ನೇಮಿಸಿದನು.

5) ಗುಹಿಲರ ಮೇಲಿನ ದಾಳಿ: ಮುಂಜನು ಗುಹಿಲರ ಅರಸನಾದ ಶಕ್ತಿ ಕುಮಾರನ ವಿರುದ್ಧ ದಂಡಯಾತ್ರೆಯನ್ನು ಕೈಗೊಂಡನು. ಈ ಯುದ್ಧದಲ್ಲಿ ಶಕ್ತಿಕುಮಾರ ಸೋತು ಮುಂಜನಿಗೆ ಸಾಕಷ್ಟು ಪ್ರಮಾಣದಲ್ಲಿ ಸಂಪತ್ತನ್ನು ನೀಡಿದನು.

6) ಹೂಣರ ಮೇಲೆ ದಾಳಿ: ಮುಂಜನು ಉತ್ತರ ಮಾಳವದಲ್ಲಿ ಹೂಣರನ್ನು ಸೋಲಿಸಿದನು.

7) ಲಾಟರ ವಿರುದ್ಧ ದಂಡಯಾತ್ರೆ: ತಪತಿ ನದಿಯ ದಡದಲ್ಲಿದ್ದ ಲಾಟ ದೇಶವು ಕಲ್ಯಾಣಿ ಚಾಲುಕ್ಯರ ಅರಸನಾದ ಎರಡನೆಯ ತೈಲಪನ ಆಳ್ವಿಕೆಗೆ ಒಳಪಟ್ಟಿತು. ಆಗ ಮಂಜನು ಲಾಟದ ಮೇಲೆ ದಾಳಿ ಮಾಡಿ ಎರಡನೆಯ ತೈಲಪನ ದಂಡನಾಯಕನಾದ ಬಾರಪ್ಪನನ್ನು ಸೋಲಿಸಿ ಲಾಟನ್ನು ವಶಪಡಿಸಿಕೊಂಡನು.

8) ಕರ್ನಾಟಕದ ಚಾಲುಕ್ಯರ ವಿರುದ್ಧ ಹೋರಾಟ: ಎರಡನೆಯ ತೈಲಪನ ವಿರುದ್ಧ ಮುಂಜ ಆರು ಬಾರಿ ದಂಡಯಾತ್ರೆಯನ್ನು ಕೈಗೊಂಡನಾದರೂ ಅವನನ್ನು ಸಂಪೂರ್ಣವಾಗಿ ಸೋಲಿಸಲು ಅವನಿಂದ ಸಾಧ್ಯವಾಗಿರಲಿಲ್ಲ. ಇದರಿಂದ ವ್ಯಾಕುಲನಾದ ಮುಂಜ ಏಳನೆಯ ಬಾರಿಗೆ ಚಾಲುಕ್ಯ ದೊರೆ ತೈಲಪನ ವಿರುದ್ಧ ದಂಡಯಾತ್ರೆಗೆ ಸಿದ್ಧತೆಯನ್ನು ಮಾಡಿಕೊಂಡನು. ಆಗ ಮುಂಜನ ದಂಡನಾಯಕನಾದ ರುದ್ರಾದಿತ್ಯ ಮುಂದೆ ಆಗಬಹುದಾಗಿದ್ದ ಅಪಾಯವನ್ನು ತನ್ನ ಒಡೆಯನಿಗೆ ತಿಳಿಸಿದನು. ಆದರೂ ರುದ್ರಾದಿತ್ಯನ ಮಾತನ್ನು ತಿರಸ್ಕರಿಸಿ ಗೋದಾವರಿ ನದಿಯನ್ನು ದಾಟಿ ಚಾಲುಕ್ಯರ ವಿರುದ್ಧ ಧಾಳಿ ಮಾಡಿದನು. ಆದರೆ ತೈಲಪನ ಸೈನಿಕರು ಮುಂಜನನ್ನು ಸುತ್ತುವರೆದು ಸೆರೆಹಿಡಿದರು. ಸೆರೆಸಿಕ್ಕ ಮುಂಜನನ್ನು ತೈಲಪ ಬಂಧನದಲ್ಲಿ ಇರಿಸಿದನು. ಕಾರಾಗೃಹದಲ್ಲಿ ಇದ್ದಾಗ ತೈಲಪನ ತಂಗಿ ಮುಂಜನಲ್ಲಿ ಅನುರಕ್ತಳಾದಳು. ಈ ವಿಷಯ ಗೊತ್ತಾಗುತ್ತಲೇ ತೈಲಪ ಮುಂಜನನ್ನು ಹಿಡಿದು ರುಂಡವನ್ನು ತುಂಡರಿಸಿದನು. ಹೀಗೆ ಮಹಾನ್ ಪರಾಕ್ರಮಿಯಾಗಿದ್ದ ಮುಂಜನ ಬದುಕು ದುರಂತದಲ್ಲಿ ಅಂತ್ಯವಾಯಿತು.

ಮುಂಜನು ಕೇವಲ ದಿಗ್ವಿಜಯಿಯಾಗಿರದೆ ಕಲಾಪೋಷಕನೂ ಆಗಿದ್ದನು. ಇವನು ಅನೇಕ ಕವಿಗಳಿಗೆ ಆಶ್ರಯದಾತನಾಗಿದ್ದನು. ಪದ್ಮಗುಪ್ತನೆಂಬ ಕವಿ ‘ಸಾಹಸಾಂಕಚರಿತ’ ಎಂಬ ಕೃತಿಯನ್ನು ರಚಿಸಿದನು. ಧನಂಜಯ ‘ದಶರೂಪಕ’ವನ್ನು ಬರೆದನು. ಭಟ್ಟಹಾಲಾಯುಧ, ಅಮಿತಗತಿ, ಶುಭನ ಎಂಬುವವರೂ ಸಹ ಉತ್ತಮ ಕವಿಗಳಾಗಿದ್ದರು. ಮುಂಜನು ತನ್ನ ಅಧಿಕಾರಾವಧಿಯಲ್ಲಿ ಅನೇಕ ಕೆರೆಗಳನ್ನು ಹಾಗೂ ದೇವಾಲಯಗಳನ್ನು ನಿರ್ಮಿಸಿದನು.

ಉಪಸಂಹಾರ
ಈ ರೀತಿಯಾಗಿ ಚೌಹಾನರು, ಪರಮಾರರು ಮತ್ತು ಪ್ರತಿಹಾರರು ಎಂಬ ವಂಶಗಳ ಮೂಲಕ ರಾಜಪೂತರು ಸೈನಿಕ ಶಕ್ತಿ, ಸಾಂಸ್ಕೃತಿಕ ಪೋಷಣೆ ಮತ್ತು ಪ್ರಾದೇಶಿಕ ಆಡಳಿತದ ದೀರ್ಘಕಾಲಿಕ ಪರಂಪರೆಯನ್ನು ಭಾರತೀಯ ಇತಿಹಾಸದಲ್ಲಿ ಬಿಟ್ಟುಹೋಗಿದ್ದಾರೆ.

ಭಾರತದಲ್ಲಿ ಪೋರ್ಚುಗೀಸರು

ಭಾರತದಲ್ಲಿ ಪೋರ್ಚುಗೀಸರು

ಭಾರತವು ಪ್ರಾಚೀನ ಕಾಲದಿಂದಲೂ ಯುರೋಪಿನ ರಾಷ್ಟ್ರಗಳೊಂದಿಗೆ ವ್ಯಾಪಾರದ ಸಂಬಂಧವನ್ನು ಹೊಂದಿತ್ತು. ಭಾರತದಲ್ಲಿ ಸಿಗುತ್ತಿದ್ದ ಮುತ್ತು, ರತ್ನ, ಹವಳ, ಬೆಳ್ಳಿ, ರೇಷ್ಮೆ, ಶ್ರೀಗಂಧ ಹಾಗೂ ಸಾಂಬಾರ ಪದಾರ್ಥಗಳಿಗೆ ಯುರೋಪಿನ ಮಾರುಕಟ್ಟೆಗಳಲ್ಲಿ ಬಾರೀ ಬೇಡಿಕೆಯಿತ್ತು. ಈ ವ್ಯಾಪಾರ ಕಾನ್ ಸ್ಟಾಂಟಿನೋಪಲ್ ಮಾರ್ಗದ ಮೂಲಕ ನಡೆಯುತ್ತಿತ್ತು. ಇದು ಪೂರ್ವ ಹಾಗೂ ಪಶ್ಚಿಮನಾಡುಗಳ ನಡುವಿನ ಪ್ರಮುಖ ವ್ಯಾಪಾರಿ ಮಾರ್ಗವನ್ನು ಕಲ್ಪಿಸಿತ್ತು. ಕ್ರಿ.ಶ. 1453ರಲ್ಲಿ ಅಟೋಮನ್ ತುರ್ಕರು ಕಾನ್ ಸ್ಟಾಂಟಿನೋಪಲ್‌ನ್ನು ವಶಪಡಿಸಿಕೊಂಡು ಪೂರ್ವ ಹಾಗೂ ಪಶ್ಚಿಮ ನಾಡುಗಳ ನಡುವಿನ ವ್ಯಾಪಾರಿ ಮಾರ್ಗವನ್ನು ಮುಚ್ಚಿದರು. ಇದರಿಂದ ಪೂರ್ವದ ಪ್ರಮುಖ ವಸ್ತುಗಳು ಯುರೋಪಿಯನ್ನರಿಗೆ ದೊರಕದಾದವು. ಭಾರತದ ವಸ್ತುಗಳಿಲ್ಲದೆ ಯುರೋಪಿಯನ್ನರ ಬದುಕು ದುಸ್ತರವಾಯಿತು. ಹೀಗಾಗಿ ಯುರೋಪಿಯನ್ನರು ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಹೀಗೆ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ ಮೊದಲ ಯುರೋಪಿಯನ್ನರೆಂದರೆ ಪೋರ್ಚುಗೀಸರು. ಕ್ರಿ.ಶ. 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ್ ನಾವಿಕನೆಂದರೆ ವಾಸ್ಕೋ-ಡ-ಗಾಮಾ. ಈತನ ಭೂ ಅನ್ವೇಷಣೆಯ ನಂತರ ಭಾರತಕ್ಕೆ ಪೋರ್ಚುಗೀಸರು ಡಚ್ಚರು, ಫ್ರೆಂಚರು ಹಾಗೂ ಇಂಗ್ಲೀಷರು ಒಬ್ಬೊಬ್ಬರಾಗಿ ಆಗಮಿಸಿದರು.

1. ಬಾರ್ಥೋಲೋಮೀಯೋ ಡಯಾಸ್(Bartolomeu Dias):

ಪೋರ್ಚುಗೀಸ್ ರಾಜಕುಮಾರನಾದ ಹೆನ್ರಿಯ ಬೆಂಬಲದಿಂದ ಈತ ಕ್ರಿ.ಶ. 1487ರಲ್ಲಿ ಆಫ್ರಿಕಾದ ಕೇಪ್ ಆಫ್ ಗುಡ್‌ಹೋಪ್ ಭೂಶಿರವನ್ನು ಶೋಧಿಸಿದ.

2.ವಾಸ್ಕೋ-ಡ-ಗಾಮಾ(Vascoda Gama)(1498-1502):

ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ ನಾವಿಕ ವಾಸ್ಕೋ-ಡ-ಗಾಮ. ಈತ ಪೋರ್ಚುಗಲ್‌ನ ರಾಜ ಇಮ್ಯಾನುಯಲ್‌ನ ಆರ್ಥಿಕ ಸಹಾಯದೊಂದಿಗೆ ಕ್ರಿ.ಶ. 1497ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಶೋಧಿಸಲು ಲಿಸ್ಟನ್ ನಗರದಿಂದ ಹೊರಟು ಕೇಪ್ ಆಫ್ ಗುಡ್‌ಹೋಪ್ ಭೂಶಿರದ ಮೂಲಕ ಮೋಸಾಂಬಿಕಕ್ಕೆ ಬಂದು ತಲುಪಿದನು. ಅನಂತರ ಅರಬ್ ನಾವಿಕನ ಸಹಾಯದಿಂದ ಅರಬ್ಬಿಸಮುದ್ರದ ಗುಂಟ ಸಾಗಿ 1498ನೇ ಮೇ 17ರಂದು ಭಾರತದ ಮಲಬಾರ್ ಕರಾವಳಿಯ ಕಲ್ಲಿಕೋಟೆಗೆ ಬಂದು ತಲುಪಿದ. ಕಲ್ಲಿಕೋಟೆಯ ದೊರೆ ಜಾಮೋರಿನ್ ವಾಸ್ಕೋ-ಡ-ಗಾಮನನ್ನು ಆದರದಿಂದ ಬರಮಾಡಿಕೊಂಡು ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿಯನ್ನು ನೀಡಿದನು. 

3. ಕೆಬ್ರಾಲ್ Pedro Álvares Cabral (1500):

ಪೆಟ್ರೋ ಅಲ್ವಾರಿಸ್ ಕೆಬ್ರಾಲ್ ತನ್ನ 13 ನೌಕೆಗಳೊಂದಿಗೆ ಲಿಸ್ಟನ್ ಬಂದರಿನಿಂದ ಹೊರಟು ಅರಬ್ಬಿಸಮುದ್ರದ ಮೂಲಕ ಸಾಗಿ ಭಾರತಕ್ಕೆ ಬಂದು ತಲುಪಿದನು. 

4. ವಾಸ್ಕೋ-ಡ-ಗಾಮನ ಪುನರಾಗಮ:

ಕ್ರಿ.ಶ. 1502ರಲ್ಲಿ ವಾಸ್ಕೋ-ಡ-ಗಾಮ ಭಾರತಕ್ಕೆ ಎರಡನೆಯ ಬಾರಿಗೆ ಆಗಮಿಸಿದ. ಆಗ ಈತ ಕಣ್ಣಾನೂರು, ಕೊಚ್ಚಿನ್ ಹಾಗೂ ಕಲ್ಲಿಕೋಟೆಗಳಲ್ಲಿ ವ್ಯಾಪಾರಿ ಕೋಠಿಗಳನ್ನು ನಿರ್ಮಿಸಿದ.

5. ಪ್ರಾನ್ಸಿಸ್ಕೋ-ಡಿ-ಅಲ್ವೇಡಾ Francisco de Almeida (1505):

ಪ್ರಾನ್ಸಿಸ್ಕೋ-ಡಿ-ಅಡಾ ಭಾರತಕ್ಕೆ ಬಂದ ಪೋರ್ಚುಗೀಸರ ಪ್ರಥಮ ವೈಸರಾಯ್. ಈತ ಭಾರತದೊಂದಿಗೆ ಜಲಮಾರ್ಗದ ಮೂಲಕ ವ್ಯಾಪಾರ ಮಾಡುವ ಇರಾದೆಯನ್ನು ಹೊಂದಿದ್ದ. ಹೀಗಾಗಿ ಈತನ ನೀತಿಯನ್ನು ‘ನೀಲಿಜಲನೀತಿ’ ಎಂದು ಕರೆಯಲಾಗಿದೆ.

6. ಅಲ್ಪಾನೊ-ಡಿ-ಆಲ್ಬುಕರ್ಕ Afonso de Albuquerque (1509):

ಈತ ಭಾರತಕ್ಕೆ ಬಂದ ಪೋರ್ಚುಗೀಸರ ಎರಡನೆಯ ವೈಸ್‌ರಾಯ್. ಅಲ್ಬುಕರ್ಕ ಒಬ್ಬ ದಕ್ಷ ಆಡಳಿತಗಾರ. ಮುತ್ಸದ್ದಿ ಹಾಗೂ ಸಮಾಜ ಸುಧಾರಕನಾಗಿದ್ದ. ಈತ ಪೋರ್ಚುಗೀಸ್ ಸಾಮ್ರಾಜ್ಯಕ್ಕೆ ಭದ್ರವಾದ ತಳಹದಿಯನ್ನು ಹಾಕಿದ. ಹೀಗಾಗಿ ಈತನನ್ನು “ಭಾರತದಲ್ಲಿನ ಪೋರ್ಚುಗೀಸ್ ಸಾಮ್ರಾಜ್ಯದ ಸ್ಥಾಪಕ” ಎಂದು ಕರೆಯಲಾಗಿದೆ. 

ಅಲ್ಬುಕರ್ಕನ ಸಾಧನೆಗಳು:

1. ಕ್ರಿ.ಶ. 1510ರಲ್ಲಿ ಗೋವಾ ಬಂದರನ್ನು ವಿಜಾಪುರದ ಸುಲ್ತಾನನಿಂದ ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ.

2. ಅಲ್ಬುಕರ್ಕ್ ತನ್ನ 6 ವರ್ಷದ ಅಧಿಕಾರವಧಿಯಲ್ಲಿ ಗುಜರಾತಿನ ಡಿಯು-ದಮನ್, ಗೋವಾ, ಪರ್ಶಿಯನ್ ಕೊಲ್ಲಿಯ ಓರ್ಮುಜ್ ಹಾಗೂ ಮಲಕ್ಕಾವನ್ನು ಗೆದ್ದುಕೊಂಡ.

3. ಈತ ಡಿಯು, ದಮನ್, ಗೋವಾ, ಕಲ್ಲಿಕೋಟೆ, ಚೌಲ್, ಕೊಚ್ಚಿನ್, ಕಣ್ಣಾನೂರ ಹಾಗೂ ಸಾಲ್‌ಸೆಟ್‌ಗಳಲ್ಲಿ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಿದನು.

4. ಮಲಬಾರ್ ಕರಾವಳಿಯ ರಾಜರಿಂದ ಕಪ್ಪಕಾಣಿಕೆಗಳನ್ನು ವಸೂಲಿ ಮಾಡಿ ಅಲ್ಲಿ ಪೋರ್ಚುಗೀಸರ ಪ್ರಭಾವವನ್ನು ಹೆಚ್ಚಿಸಿದನು.

5. ಪೋರ್ಚುಗೀಸ್ ಆಡಳಿತದಲ್ಲಿ ಹಿಂದುಗಳಿಗೆ ಅವಕಾಶ ನೀಡುವ ಮೂಲಕ ಭಾರತೀಯರ ಪ್ರೀತಿಗೆ ಪಾತ್ರನಾದನು.

6. ಭಾರತದಲ್ಲಿ ಪೋರ್ಚುಗೀಸರ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಅಲ್ಬುಕರ್ಕ್ ಪೋರ್ಚುಗೀಸ್ ಪುರುಷರು ಭಾರತೀಯ ಸ್ತ್ರೀಯರನ್ನು ಮದುವೆಯಾಗುವಂತೆ ಪ್ರೋತ್ಸಾಹ ನೀಡಿದನು.

7. ಪೋರ್ಚುಗೀಸರ ಕೋಠಿಗಳು : ಕೊಚ್ಚಿನ್, ಕಣ್ಣಾನೂರು, ಕ್ವಿಲಾನ್, ಮಂಗಳೂರು, ಗೋವಾ, ಡಿಯು, ದಮನ್, ಬಸೈನ್, ಸಾಲೈಟ್, ಸೂರತ್, ಚಿತ್ತಗಾಂಗ್ ಹಾಗೂ ಹೂಗ್ಲಿ.

ಪೋರ್ಚುಗೀಸ್ ಸಂಪರ್ಕದಿಂದ ಉಂಟಾದ ಪರಿಣಾಮಗಳು:

1. ಪೋರ್ಚುಗೀಸರ ಆಗಮನದಿಂದ ಭಾರತದ ಬಟ್ಟೆ, ಅಕ್ಕಿ ಹಾಗೂ ಸಾಂಬಾರ ಪದಾರ್ಥಗಳಿಗೆ ಯುರೋಪಿನಲ್ಲಿ ಬಾರಿ ಬೇಡಿಕೆಯುಂಟಾಯಿತು.

2. ಪೋರ್ಚುಗೀಸರು ಅಮೇರಿಕದ ಬೆಳೆಗಳಾದ ತಂಬಾಕು, ನೆಲಗಡಲೆ, ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳ, ಆಲೂಗಡ್ಡೆ ಹಾಗೂ ಗೋಡಂಬಿಗಳನ್ನು ಭಾರತದಲ್ಲಿ ಪರಿಚಯಿಸಿದರು.

3. ಪೋರ್ಚುಗೀಸರು ಗೇರುಬೀಜ, ಟೊಮ್ಯಾಟೋ, ಅನಾನಸ್ ಹಾಗೂ ಪಪ್ಪಾಯಿಗಳನ್ನು ತಂದು ಭಾರತದಲ್ಲಿ ಬೆಳೆಯಲು ಆರಂಭಿಸಿದರು.

ಪೋರ್ಚುಗೀಸರ ಅವನತಿಗೆ ಕಾರಣಗಳು:

ಪೋರ್ಚುಗೀಸರು ಕ್ರಮೇಣ ತಮ್ಮ ವಸಾಹತುಗಳನ್ನು ಕಳೆದುಕೊಳ್ಳಲಾರಂಬಿಸಿದರು. ಹೀಗಾಗಿ ಅವರ ಅವನತಿ ಸನ್ನಿಹಿತವಾದಂತೆ ಕಂಡು ಬಂದಿತು. ಪೋರ್ಚುಗೀಸರ ಅವನತಿಗೆ ಈ ಕೆಳಗಿನ ಕಾರಣಗಳನ್ನು ಕೊಡಬಹುದು.

1. ಅಲ್ಬುಕರ್ಕನ ನಂತರ ಬಂದ ಅಧಿಕಾರಿಗಳು ಅಸಮರ್ಥರಾಗಿದ್ದರು.

2. ಪೋರ್ಚುಗೀಸ್ ಅಧಿಕಾರಿಗಳು ಭ್ರಷ್ಟರೂ ಹಾಗೂ ವಿಷಯ ಲಂಪಟರೂ ಆಗಿದ್ದರು.

3. ಪೋರ್ಚುಗೀಸರ ಧಾರ್ಮಿಕ ನೀತಿ ಅಸಹನೆಯಿಂದ ಕೂಡಿದುದಾಗಿತ್ತು.

4. ಇಂಗ್ಲೀಷರು ಹಾಗೂ ಡಚ್ಚರು ಸ್ಪ್ಯಾನಿಷ್ ಆರ್ಮುಡಾವನ್ನು ವಶಪಡಿಸಿಕೊಂಡುದುದು ಪೋರ್ಚುಗೀಸರ ಅವನತಿಗೆ ಕಾರಣವಾಯಿತು.

5. ಪೋರ್ಚುಗೀಸ್ ಅಧಿಕಾರಿಗಳು ವಿಜಯನಗರದ ಅರಸರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಕ್ರಿ.ಶ.1565 ರಲ್ಲಿ ತಾಳಿಕೋಟೆ ಕದನದಲ್ಲಿ ವಿಜಯನಗರ ಅರಸರು ಸಂಪೂರ್ಣವಾಗಿ ಪರಾಭವಗೊಂಡರು. ಹೀಗಾಗಿ ಪೋರ್ಚುಗೀಸರು ವಿಜಯನಗರವನ್ನೇ ಅವಲಂಬಿಸಿದ್ದರಿಂದ ಅವರ ವ್ಯಾಪಾರಕ್ಕೆ ಕಟ್ಟುಬಿದ್ದಿತು.

6. ಮರಾಠರು ಸಾಲೈಟ್ ಹಾಗು ಬಸೈನ್‌ಗಳನ್ನು ವಶಪಡಿಸಿಕೊಂಡು ಮಹಾರಾಷ್ಟ್ರದ ಕರಾವಳಿಯಿಂದ ಪೋರ್ಚುಗೀಸರನ್ನು ಹೊರಹಾಕಿದರು.

7. ಪೋರ್ಚುಗೀಸರ ಭೂಸೈನ್ಯ ಹಾಗೂ ನೌಕಾಸೈನ್ಯ ಪ್ರಬಲವಾಗಿರಲಿಲ್ಲ. ಇದು ಅವರ ಅವನತಿಗೆ ಮತ್ತೊಂದು ಕಾರಣವಾಯಿತು.

8. ಭಾರತಕ್ಕಿಂತ ಅತ್ಯಂತ ಹೆಚ್ಚು ಸಂಪದ್ಭರಿತವಾಗಿದ್ದ ಬ್ರೆಜಿಲ್ ಪೋರ್ಚುಗಿಸರನ್ನು ಆ ಕಡೆಗೆ ಆಕರ್ಷಿಸಿತು.

9. ಪೋರ್ಚುಗಲ್ ಚಿಕ್ಕ ರಾಷ್ಟ್ರವಾಗಿದ್ದು ಭಾರತದಂತಹ ದೊಡ್ಡ ರಾಷ್ಟ್ರವನ್ನು ಎದುರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ.

10. ಉತ್ತರದಲ್ಲಿ ಮೊಗಲ್ ಸಾಮ್ರಾಜ್ಯ ಸ್ಥಾಪನೆಯಾಗಿದ್ದರಿಂದ ಪೋರ್ಚುಗೀಸರು ತಮ್ಮ ಪ್ರಭಾವವನ್ನು ಅಲ್ಲಿ ಹೆಚ್ಚಿಸಿಕೊಳ್ಳಲು ಅಸಮರ್ಥರಾದರು.

11. ಪೋರ್ಚುಗೀಸರು ಡಿಯು, ದಾಮನ್ ಹಾಗೂ ಗೋವಾ ಹೊರತು ಪಡಿಸಿ ತಮ್ಮ ಎಲ್ಲಾ ವಸಹಾತುಗಳನ್ನು ಕಳೆದುಕೊಂಡರು.

12. ಫ್ರೆಂಚರು ಹಾಗೂ ಬ್ರಿಟಿಷರು ತಮ್ಮ ಪ್ರಬಲವಾದ ನೌಕಾಶಕ್ತಿಯಿಂದ ಪೋರ್ಚುಗೀಸರನ್ನು ಸೋಲಿಸಿ ಭಾರತದಿಂದ ಹೊರಹಾಕಿದರು.

ಶಿವಾಜಿಯ ಆಡಳಿತ ಪದ್ಧತಿ

ಶಿವಾಜಿಯ ಆಡಳಿತ ಪದ್ಧತಿ

1) ಆಡಳಿತ:

ಶಿವಾಜಿಯು ದಕ್ಷ ಆಡಳಿತಗಾರ, ರಾಜನೀತಿ ನಿಪುಣ ಹಾಗೂ ವೀರಯೋಧನಾಗಿದ್ದನು. ಅವನಲ್ಲಿ ಹೆಚ್ಚಿನ ಅಧಿಕಾರ ಕೇಂದ್ರೀಕೃತವಾಗಿದ್ದರೂ ನಿರಂಕುಶಾಧಿಕಾರಿಯಂತೆ ವರ್ತಿಸಲಿಲ್ಲ. ಪ್ರಜೆಗಳ ಕಲ್ಯಾಣದಲ್ಲಿಯೇ ತೃಪ್ತಿಯನ್ನು ಕಾಣುತ್ತಿದ್ದನು. ಆಡಳಿತದ ಅನುಕೂಲಕ್ಕಾಗಿ ಕೇಂದ್ರದಲ್ಲಿ 18 ಇಲಾಖೆಗಳನ್ನು ರಚಿಸಿದ್ದನು. ಈ ಆಡಳಿತ ವಿಭಾಗಗಳನ್ನು ನೋಡಿಕೊಳ್ಳಲು ಎಂಟು ಜನ ಸಚಿವ (ಅಷ್ಟಪ್ರಧಾನ) ರನ್ನು ನೇಮಿಸಿದನು. ಮರಾಠಿ ಇವರ ಆಡಳಿತ ಭಾಷೆಯಾಗಿತ್ತು.

ಅಷ್ಟಪ್ರಧಾನರು:

ಶಿವಾಜಿಗೆ ಆಡಳಿತದಲ್ಲಿ ಸಹಾಯ ನೀಡಲು ಅಷ್ಟಪ್ರಧಾನರು ಎಂಬ ಮಂತ್ರಿಮಂಡಳವಿತ್ತು. ಇವರು ಶಿವಾಜಿಯಿಂದ ನೇಮಕಗೊಳ್ಳುತ್ತಿದ್ದರು.

1. ಪೇಳ್ವೆ (ಪ್ರಧಾನಮಂತ್ರಿ) – ಕೇಂದ್ರ ಸರ್ಕಾರದ ಆಡಳಿತ ಇಲಾಖೆಗಳ ಮೇಲ್ವಿಚಾರಕ.

2. ಅಮಾತ್ಯ (ಹಣಕಾಸು ಸಚಿವ) – ಸಾರ್ವಜನಿಕ ಲೆಕ್ಕಪತ್ರಗಳ ತಖ್ಯೆಯನ್ನು ಇಡುವವ.

3. ಮಂತ್ರಿ (ಕಾರ್ಯದರ್ಶಿ)- ರಾಜನ ದೈನಂದಿನ ವ್ಯವಹಾರಗಳನ್ನು ದಾಖಲು ಮಾಡುವವ.

4. ಸಚಿವ (ಗೃಹಮಂತ್ರಿ)- ಅರಸನ ಪತ್ರವ್ಯವಹಾರಗಳನ್ನು ನೋಡಿಕೊಳ್ಳುವವ.

5. ಸಮಂತ (ವಿದೇಶಾಂಗ ಮಂತ್ರಿ)- ಯುದ್ಧ, ಶಾಂತಿ, ಒಪ್ಪಂದ ಹಾಗೂ ವಿದೇಶಿವ್ಯವಹಾರ ನೋಡಿಕೊಳ್ಳುವುದು.

6. ಸೇನಾಪತಿ (ದಂಡನಾಯಕ)- ಸೈನ್ಯ ಸಂಘಟನೆ, ಯುದ್ಧತಂತ್ರ, ಸೈನಿಕರ ಸಂಬಳ ಬಟವಾಡೆ ಮಾಡುವವ

7. ಪಂಡಿತ್‌ ರಾವ್ (ಪುರೋಹಿತ)- ಧಾರ್ಮಿಕ ವಿಷಯಗಳ ಬಗ್ಗೆ ಅರಸನಿಗೆ ಮಾಹಿತಿ ನೀಡುವವ.

8. ನ್ಯಾಯಾದೀಶ (ನ್ಯಾಯಾಡಳಿತವರಿಷ್ಠ)- ರಾಜ್ಯದ ನ್ಯಾಯಾಡಳಿತದ ಬಗ್ಗೆ ಕ್ರಮ ಜರುಗಿಸುವವರು. 

2) ಪ್ರಾಂತ ಸರ್ಕಾರ:

ಆಡಳಿತ ಅನುಕೂಲಕ್ಕಾಗಿ ಶಿವಾಜಿ ತನ್ನ ಸಾಮ್ರಾಜ್ಯವನ್ನು ಹಲವಾರು ಪ್ರಾಂತಗಳನ್ನಾಗಿ ವಿಂಗಡಿಸಿದನು. ಪ್ರತಿಯೊಂದು ಪ್ರಾಂತಗಳಿಗೆ “ಸರ್‌ದೇಶ ಮುಖಿ” ಎಂಬ ಅಧಿಕಾರಿಯನ್ನು ನೇಮಿಸಿದ್ದನು. ಪ್ರಾಂತಗಳನ್ನು ಜಿಲ್ಲೆಗಳನ್ನಾಗಿ, ಜಿಲ್ಲೆಗಳನ್ನು ತರಫ್‌ಗಳನ್ನಾಗಿ, ತರಘಗಳನ್ನು ಗ್ರಾಮಗಳನ್ನಾಗಿ ವಿಂಗಡಿಸಿದನು. ಜಿಲ್ಲೆಗಳನ್ನು ದೇಶಾಧಿಕಾರಿ, ತರಪ್‌ಗಳನ್ನು ಅಮಲ್ದಾರರು, ಗ್ರಾಮಗಳನ್ನು ಪಟೇಲರು ನೋಡಿಕೊಳ್ಳುತ್ತಿದ್ದರು.

3) ಕಂದಾಯ ಪದ್ಧತಿ:

ಶಿವಾಜಿ ಭೂಮಿಯನ್ನು ಅಳತೆ ಮಾಡಿಸಿ ಫಲವತ್ತತೆಗೆ ಅನುಗುಣವಾಗಿ ಭೂಕಂದಾಯವನ್ನು ನಿಗದಿಗೊಳಿಸಿದನು. ರಾಜ್ಯದ ಒಟ್ಟು ಉತ್ಪನ್ನದ ಶೇ. 30 ಭಾಗದಷ್ಟು ಭೂಕಂದಾಯವನ್ನು ವಸೂಲಿ ಮಾಡುತ್ತಿದ್ದ. ರೈತರು ನೇರವಾಗಿ ಸರ್ಕಾರಕ್ಕೆ ಕಂದಾಯ ಸಲ್ಲಿಸಬೇಕಾಗುತ್ತಿದ್ದರಿಂದ ಮಧ್ಯವರ್ತಿಗಳ ಹಾವಳಿ ಇರಲಿಲ್ಲ. ಕಂದಾಯ ವಸೂಲಿಗಾಗಿ ಶಿವಾಜಿಯು ಸುಬೇದಾರ, ಕಾರಕೂನ ಹಾಗೂ ಕೋಶಾಧಿಕಾರಿಗಳನ್ನು ನೇಮಿಸಿದ್ದನು. ಕಂದಾಯದ ಗುತ್ತಿಗೆ ಕ್ರಮವನ್ನು ತಗೆದು ಹಾಕಲಾಯಿತು. ನಂತರ ಕಂದಾಯದ ಪ್ರಮಾಣವನ್ನು 33 ರಿಂದ 40ಕ್ಕೆ ಏರಿಸಲಾಯಿತು. ರೈತರು ಕಂದಾಯವನ್ನು ಹಣ ಅಥವಾ ದಾನ್ಯದ ರೂಪದಲ್ಲಿ ನೀಡಬಹುದಾಗಿತ್ತು. ಕಂದಾಯ ವಸೂಲಿಯಲ್ಲಿನ ಭ್ರಷ್ಟಾಚಾರವನ್ನು ತಡೆಯಲು ಶಿವಾಜಿ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಗಳನ್ನು ಕೈಗೊಂಡನು. ರೈತರಿಗೆ ಬೀಜ, ರಸಗೊಬ್ಬರ ಹಾಗೂ ಕೃಷಿ ಸಲಕರಣೆಗಳನ್ನು ಕೊಳ್ಳಲು ಶಿವಾಜಿ ಸಾಲನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದನು. ಅವರು ಸುಲಭ ಕಂತುಗಳಲ್ಲಿ ಸಾಲ ಮರುಪಾವತಿ ಮಾಡಬೇಕಾಗುತ್ತಿತ್ತು.

4) ಚೌತ್ ಮತ್ತು ಸರದೇಶಮುಖಿ:

ಶಿವಾಜಿಯ ರಾಜ್ಯ ಬೆಟ್ಟಗುಡ್ಡಗಳಿಂದ ಕೂಡಿದ್ದು ಹೆಚ್ಚು ಭೂಕಂದಾಯ ಸಂಗ್ರಹವಾಗುತ್ತಿರಲಿಲ್ಲ. ಈ ಕಾರಣದಿಂದ ರಾಜ್ಯದ ಬೊಕ್ಕಸವನ್ನು ಭರ್ತಿಮಾಡಲು. ಶಿವಾಜಿ ಅಕ್ಕ ಪಕ್ಕದ ರಾಜ್ಯಗಳ ಶತೃಗಳಿಂದ ಚೌತ್ ಮತ್ತು ಸರದೇಶಮುಖಿ ಎಂಬ ಎರಡು ತೆರಿಗೆಗಳನ್ನು ವಸೂಲಿ ಮಾಡುತ್ತಿದ್ದನು.

ಚೌತ್:

ಮರಾಠರ ದಾಳಿಯಿಂದ ತಪ್ಪಿಸಿಕೊಳ್ಳಲು ನೆರೆಹೊರೆಯ ರಾಜ್ಯಗಳು ಶಿವಾಜಿಗೆ ತಮ್ಮ ರಾಜ್ಯದ ಆದಾಯದ 1/4 ಭಾಗದಷ್ಟು ತೆರಿಗೆಯನ್ನು ಸಲ್ಲಿಸಬೇಕಿತ್ತು.

ಸರ್‌ದೇಶ ಮುಖಿ:

ನೆರೆಹೊರೆಯ ರಾಜ್ಯಗಳು ಮಿಲಿಟರಿ ತೆರಿಗೆಯಾಗಿ ಶಿವಾಜಿಗೆ 1/10 ಭಾಗದಷ್ಟು ತೆರಿಗೆಯನ್ನು ಸಲ್ಲಿಸುವುದು.

5) ಸೇನಾಡಳಿತ:

ಶಿವಾಜಿಯ ಒಬ್ಬ ಮಹಾ ಸೇನಾಧಿಕಾರಿಯಾಗಿದ್ದರಿಂದ ತನ್ನ ಸೇನೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಸೈನಿಕರನ್ನೇ ನೇಮಕಮಾಡಿಕೊಂಡಿದ್ದನು. ಸೈನಿಕರಿಗೆ ಜಹಗೀರು ಬದಲಾಗಿ ವೇತನವನ್ನು ನೀಡುವ ಪದ್ಧತಿಯನ್ನು ಜಾರಿಗೆ ತಂದನು. ಹೀಗಾಗಿ ಶಿವಾಜಿಯ ಸೈನ್ಯದಲ್ಲಿ ದಕ್ಷತೆ ಹೆಚ್ಚಿತ್ತೆಂದು ಹೇಳಬಹುದು. ಶಿವಾಜಿಯ ಸೈನ್ಯವು ಕಾಲ್ಗಳ, ಅಶ್ವಪಡೆ, ಗಜದಳ ಹಾಗೂ ಒಂಟೆಪಡೆಗಳನ್ನು ಒಳಗೊಂಡಿತ್ತು. ಇವನ ಸೈನ್ಯದಲ್ಲಿ 10000 ಕಾಲ್ದಳ, 30000 ಅಶ್ವಪಡೆ, 300 ಒಂಟೆಪಡೆ ಹಾಗೂ 1260 ಗಜಪಡೆ ಇತ್ತೆಂದು ಹೇಳಲಾಗಿದೆ.

6) ನ್ಯಾಯಾಡಳಿತ:

ಶಿವಾಜಿಯೇ ರಾಜ್ಯದ ಸರ್ವೋಚ್ಛ ನ್ಯಾಯಾದೀಶನಾಗಿದ್ದನು. ಈತನ ತೀರ್ಪೆ ಅಂತಿಮವಾಗಿತ್ತು. ಇವನು ಸಿವಿಲ್ ಮತ್ತು ಕ್ರಿಮಿನಲ್ ಕಟ್ಟೆಗಳನ್ನು ಬಗೆಹರಿಸುತ್ತಿದ್ದನು. ಪ್ರಾಂತಗಳಲ್ಲಿ ಗವರ್ನ‌್ರಗಳು ನ್ಯಾಯಾದೀಶರಾಗಿದ್ದರು. ಗ್ರಾಮಗಳ ವ್ಯಾಜ್ಯಗಳನ್ನು ಪಟೇಲರು ಬಗೆಹರಿಸುತ್ತಿದ್ದರು.

ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಧಾರ್ಮಿಕ ನೀತಿ:

ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್‌ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು. ಜೊತೆಗೆ ಹಿಂದುಗಳೇ ಅಧಿಕವಾಗಿದ್ದ ಮೊಗಲ್ ಸಾಮ್ರಾಜ್ಯದಲ್ಲಿ ಅವರನ್ನು ತನ್ನೆಡೆಗೆ ಒಲಿಸಿಕೊಳ್ಳಲು ಉತ್ಸುಕನಾಗಿದ್ದನು. ಅಕ್ಬರ್‌ ಮಹಾಶಯ ಶೇಕ್‌ ಸಲೀಂ ಚಿಸ್ತಿಯ ಪರಮ ಭಕ್ತನಾಗಿದ್ದರಿಂದ ಫತೇಪುರ ಸಿಕ್ರಿಯಲ್ಲಿ ‘ಇಬಾದತ್‌ಖಾನ’ ಎಂಬ ಭವ್ಯ ಕಟ್ಟಡವನ್ನು ನಿರ್ಮಿಸಿದನು. ಪ್ರತಿ ಗುರುವಾರ ಇಸ್ಲಾಂ, ಹಿಂದೂ, ಜೈನ, ಕ್ರೈಸ್ತ ಹಾಗೂ ಸಿಖ್ ಧರ್ಮಗುರುಗಳನ್ನು ಅಲ್ಲಿಗೆ ಆಹ್ವಾನಿಸಿ ಧಾರ್ಮಿಕ ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದನು. ಕ್ರಿ.ಶ. 1579 ರಲ್ಲಿ ಅಕ್ಬರನು ಸುನಿಶ್ಚಯ ಶಾಸನವನ್ನು ಹೊರಡಿಸಿ ಧಾರ್ಮಿಕ ವಿಷಯಗಳಲ್ಲಿ ಧಾರ್ಮಿಕ ಪಂಡಿತರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಅಂತಿಮ ನಿರ್ಣಯವನ್ನು ಕೊಡುವ ಅಧಿಕಾರವನ್ನು ಬಾದಶಹ ಹೊಂದಿದ್ದನು.

ದಿನ್-ಇ-ಇಲಾಹಿ :

ಅಕ್ಷರನು ಸಾ.ಶ. 1582 ರಲ್ಲಿ ದಿನ್-ಇ-ಇಲಾಹಿ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು. ಈ ಹೊಸ ಧರ್ಮವು ಈ ಕೆಳಗಿನ ಪ್ರಮುಖ ತತ್ವಗಳನ್ನು ಒಳಗೊಂಡಿತ್ತು.

1) ಇದು ಸುಲ್-ಎ-ಕುಲ್ (ಸರ್ವರಿಗೂ ಶಾಂತಿ) ಎಂಬ ತತ್ವವನ್ನು ಒಳಗೊಂಡಿತ್ತು.

2) ಸ್ವಾತಂತ್ರ್ಯ ಮತ್ತು ಪರೋಪಕಾರ.

3) ಲೌಕಿಕ ವಿಚಾರಗಳಿಂದ ದೂರವಾಗಿರುವುದು.

4) ಏಕೀಶ್ವರ ತತ್ವಗಳ ತಳಹದಿಯನ್ನು ಹೊಂದಿತ್ತು.

5) ಯಾರೊಬ್ಬರ ಮನಸ್ಸನ್ನು ನೋಯಿಸದೆ ಮೃದುವಾಗಿ, ಹಿತವಾಗಿ ಸಭ್ಯತೆಯಿಂದ ನುಡಿಯುವುದು.

6) ದೇವರಿಗೆ ಆತ್ಮವನ್ನು ಅರ್ಪಿಸುವುದು. ಅಬುಲ್‌ ಫಜಲ್ ದಿನ್-ಇಲಾಹಿಯ ಪುರೋಹಿತನಾಗಿದ್ದನು. ಯಾರೇ ಈ ಧರ್ಮವನ್ನು ಸ್ವೀಕರಿಸಲು ಮುಂದೆ ಬಂದರೆ ಅಬುಲ್ ಫಜಲ್ ಆತನನ್ನು ಚಕ್ರವರ್ತಿಗೆ ಪರಿಚಯಿಸುತ್ತಿದ್ದನು. ಆಗ ಆ ವ್ಯಕ್ತಿ ತನ್ನ ರುಮಾಲನ್ನು ಕೈಯಲ್ಲಿರಿಸಿಕೊಂಡು ಚಕ್ರವರ್ತಿಯ ಪಾದಗಳಿಗೆ ನಮಸ್ಕರಿಸಬೇಕಿತ್ತು. ಚಕ್ರವರ್ತಿ ಆತನನ್ನು ಎಬ್ಬಿಸಿ ರುಮಾಲನ್ನು ಆತನ ತಲೆಯ ಮೇಲೆ ಇರಿಸುತ್ತಿದ್ದನು. ನಂತರ ‘ಶಸ್ತ್ರ’ ಎಂಬ ಸಂಕೇತವನ್ನು ಕೊಡುತ್ತಿದ್ದನು. ಆ ಸಂಕೇತದ ಮೇಲೆ ‘ಅಲ್ಲಾಹೂ ಅಕ್ಬರ್’ ಎಂದು ಬರೆಯಲಾಗಿತ್ತು. ಆದರೆ ದಿನ್-ಇಲಾಹಿಯನ್ನು ಬೆರಳೆಣಿಕೆಯಷ್ಟು ಜನ ಬಿಟ್ಟರೆ ಬೇರೆ ಯಾರೂ ಸ್ವೀಕರಿಸಲಿಲ್ಲ. ಅಕ್ಬರನ ಮರಣದ ನಂತರ ಅವನ ಹಿಂದೆಯೇ ಅದು ನಿರ್ನಾಮವಾಯಿತು.

ರಜಪೂತ ನೀತಿ:

ಅಕ್ಬರನ ರಜಪೂತ ಧೋರಣೆಯು ರಾಜಕೀಯ ಹಿತಾಸಕ್ತಿ, ನ್ಯಾಯ ಹಾಗೂ ಸಮಾನತೆಯ ತತ್ವಗಳನ್ನು ಆಧರಿಸಿತ್ತು. ಹೊರನಾಡಿನವರಾದ ಮುಸಲ್ಮಾನ ಅಧಿಕಾರಿಗಳು ಹಾಗೂ ಸರದಾರರನ್ನು ಸಂಪೂರ್ಣವಾಗಿ ನಂಬುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅಕ್ಷರನಿಗೆ ತನ್ನ ಆಡಳಿತದ ಮೊದಲ ವರ್ಷದಲ್ಲಿಯೇ ಮನವರಿಕೆಯಾಯಿತು. ಮುಸಲ್ಮಾನರು ಸ್ವಹಿತಕ್ಕಾಗಿ ದುಡಿಯುವರೆಂಬ ಸತ್ಯ ಅವನಿಗೆ ಆಗಲೇ ಮನದಟ್ಟಾಯಿತು. ಈ ಕಾರಣದಿಂದಾಗಿ ಅಕ್ಬರನು ಮೊಗಲ್ ಸಾಮ್ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಅದರಲ್ಲೂ ರಜಪೂತರನ್ನು ಅತ್ಯಂತ ವಿಶ್ವಾಸಪೂರ್ವಕವಾಗಿ ನಡೆಸಿಕೊಂಡುದುದನ್ನು ಭಾರತೀಯ ಇತಿಹಾಸಕಾರರು ಮುಕ್ತಕಂಠದಿಂದ ಹೊಗಳಿದ್ದಾರೆ. ಈ ಹಿಂದೆ ಬಾಬರನಾಗಲಿ, ಹುಮಾಯೂನನಾಗಲೀ ರಜಪೂತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಲಿಲ್ಲ. ಸರ್ಕಾರದ ಉನ್ನತ ಹುದ್ದೆಗೆ ಅವರನ್ನು ನೇಮಕವನ್ನು ಮಾಡಿರಲಿಲ್ಲ. ಆದರೆ ಅಕ್ಬರ್‌ ಮಾತ್ರ ರಜಪೂತರಿಗೆ ರಾಜಕೀಯದಲ್ಲಿ ಅಗ್ರಸ್ಥಾನವನ್ನು ನೀಡಿದನು. ಇದರಿಂದಾಗಿ ಅಕ್ಬರ್‌ ಭಾರತೀಯ ಇತಿಹಾಸದಲ್ಲಿ ವಿಶಿಷ್ಠವಾದ ಸ್ಥಾನವನ್ನು ಪಡೆದಿದ್ದಾನೆ.

1) ಅಕ್ಬರನು ತನ್ನ ಸೈನಿಕ ಶಿಬಿರ ಹಾಗೂ ದರ್ಬಾರಿನಲ್ಲಿಯೇ ದಂಗೆಕೋರರನ್ನು ಎದುರಿಸಬೇಕಾಗಿದ್ದ ಕಾರಣದಿಂದ ಅವನು ರಜಪೂತರ ಬಗ್ಗೆ ಸೌಮ್ಯ ನೀತಿಯನ್ನು ಅನುಸರಿಸಿದನು.

2) ಅಕ್ಬರನ ಪ್ರಧಾನಮಂತ್ರಿಯಾಗಿದ್ದ ಶಹ ಮನ್ಸೂರ್ ಅಕ್ಬರನ ಮಲತಮ್ಮನಾದ ಮಹಮ್ಮದ್ ಹಕೀಂನಿಗೆ ಬೆಂಬಲ ನೀಡಿ ದ್ರೋಹ ಬಗೆದುದು ಅಕ್ಬರನು ರಜಪೂತರ ಬಗ್ಗೆ ಕಾಳಜಿ ವಹಿಸಲು ಕಾರಣವಾಯಿತು.

3 ) ಬೈರಾಂಖಾನನು ಅಕ್ಬರನ ವಿರುದ್ಧ ದಂಗೆ ಎದ್ದುದು ಹಾಗೂ ಮಹಮ್ ಅನಗಾ ಸ್ವಾರ್ಥಿಯಾದುದು ಅಕ್ಬರನು ರಜಪೂತರ ಬಗ್ಗೆ ನಿಷ್ಟೆ ತೋರಲು ಕಾರಣವಾಯಿತು.

ಮಹಾತ್ಮ ಕಬೀರ್ ಮತ್ತು ಗುರುನಾನಕರು

ಮಹಾತ್ಮ ಕಬೀರ್ ಮತ್ತು ಗುರುನಾನಕರು

ಪೀಠಿಕೆ

ಕಬೀರ್ ಮತ್ತು ಗುರುನಾನಕ್ ಇಬ್ಬರೂ ಮಧ್ಯಕಾಲೀನ ಭಾರತದ ಮಹಾನ್ ಸಂತರು ಮತ್ತು ಭಕ್ತಿ ಚಳವಳಿಯ ಪ್ರಮುಖ ಮುಖಂಡರಾಗಿದ್ದರು.ಕಬೀರ್ ಅವರ ಭಜನೆಗಳು ಸರಳ ಭಾಷೆಯಲ್ಲಿ ದೇವರ ಸತ್ಯವನ್ನು ವಿವರಿಸಿ, ಜನಸಾಮಾನ್ಯರಲ್ಲಿ ಭಕ್ತಿ ಮತ್ತು ನೈತಿಕತೆ ಬೆಳೆಸಿದವು. ಅವರು ಜಾತಿ-ಮತ ಬೇಧಗಳನ್ನು ವಿರೋಧಿಸಿ, ಮಾನವೀಯತೆ ಮತ್ತು ಸಮಾನತೆಯ ಸಂದೇಶವನ್ನು ಸಾರಿದರು.ಅವರ ದೋಹಗಳು (ಸಣ್ಣ ಕವಿತೆಗಳು) ಜನರಲ್ಲಿ ನೈತಿಕ ಜಾಗೃತಿ ಮೂಡಿಸಿದವು.

ಗುರು ನಾನಕ್ ಸಿಖ್ ಧರ್ಮದ ಸ್ಥಾಪಕರಾಗಿ, “ಏಕ ದೇವ, ಸರ್ವರೂ ಸಮಾನ” ಎಂಬ ತತ್ವವನ್ನು ಪ್ರಸಾರ ಮಾಡಿದರು.ಅವರು ಅಹಂಕಾರ, ದ್ವೇಷ ಮತ್ತು ಮೂಢನಂಬಿಕೆಗಳನ್ನು ತೊರೆದು ಸೇವೆ, ಪ್ರೀತಿ ಮತ್ತು ಶ್ರಮದ ಮೂಲಕ ಬದುಕುವುದನ್ನು ಬೋಧಿಸಿದರು.ಗುರುನಾನಕ್ “ಸಂಗತ” ಮತ್ತು “ಲಂಗರ್” ಪದ್ಧತಿಗಳನ್ನು ಆರಂಭಿಸಿ, ಸಮಾಜದಲ್ಲಿ ಸಮಾನತೆ ಮತ್ತು ಸಹಭೋಜನದ ಪರಂಪರೆಯನ್ನು ರೂಪಿಸಿದರು. ಇವರಿಬ್ಬರೂ ಧಾರ್ಮಿಕ ಸಹಿಷ್ಣುತೆ, ಶಾಂತಿ ಮತ್ತು ಸಾಮಾಜಿಕ ಸಮಾನತೆಗೆ ನಿಲ್ಲುವ ಮಹತ್ವದ ಸಂತರಾಗಿದ್ದಾರೆ ಹಾಗೂ ಸಮಾಜ ಮಹಾನ್‌ ಸುಧಾರಕರಾಗಿದ್ದಾರೆ.

ಮಹಾತ್ಮ ಕಬೀರ್

ಮಹಾತ್ಮ ಕಬೀರರು ಭಕ್ತಿ ಚಳುವಳಿಯ ಅಗ್ರಗಣ್ಯ ನಾಯಕರು. ಇವರು ಸಾ. ಶ. 1398ರಲ್ಲಿ ಒಬ್ಬ ಬ್ರಾಹ್ಮಣವಿಧವೆಗೆ ಜನಿಸಿದಾಗ ಅವಳು ಸಮಾಜಕ್ಕೆ ಹೆದರಿ ಆ ಮಗುವನ್ನು ಲಹರ್‌ತಾಲಾ ಎಂಬ ಕೊಳದ ಬಳಿ ಬಿಟ್ಟುಹೋದಳು. ಆಗ ಬನಾರಸ್ಸಿನ ನೀರು ಮತ್ತು ನೀಮಾ ಎಂಬ ಮುಸ್ಲಿಂ ದಂಪತಿಗಳಿಗೆ ಆ ಮಗು ದೊರಕಿತು. ಅವರು ಆ ಮಗುವನ್ನು ಪ್ರೀತಿಯಿಂದ ಸಾಕಿ ಬೆಳಸಿದರು. ಕಬೀರರು ಸೂಫಿ ಸಂತ ಪೀರ್ ರಾಕಿಯ ಪ್ರಭಾವಕ್ಕೆ ಒಳಗಾದರು. ನಂತರ ರಮಾನಂದರ ಶಿಷ್ಯರಾಗಿ ಸನ್ಯಾಸಿ ದೀಕ್ಷೆ ಪಡೆದರು.

ಬೋಧನೆಗಳು:

ಕಬೀರರು ಮುಕ್ತಿಗೆ ಜ್ಞಾನಮಾರ್ಗ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಇವರು ಏಕೀಶ್ವರ ವಾದವನ್ನು ಪ್ರತಿಪಾದಿಸಿದರು. ದೇವರು ಒಬ್ಬನೆ ಅವನು ನಿರ್ಗುಣ, ನಿರಾಕಾರ, ಸರ್ವವ್ಯಾಪಿ, ಸರ್ವಶಕ್ತ ಹಾಗೂ ಸರ್ವಜೀವಿಗಳ ರಕ್ಷಕನಾಗಿದ್ದಾನೆ ಎಂದು ಬೋಧಿಸಿದರು. ಇವರು ಜಾತಿಪದ್ಧತಿ, ಸಾಮಾಜಿಕ ಅಸಮಾನತೆ, ಮೂರ್ತಿಪೂಜೆ, ಬಾಲ್ಯವಿವಾಹ, ಸತಿಸಹಗಮನ, ಮೂಢನಂಬಿಕೆ ಹಾಗೂ ಪರ್ದಾಪದ್ಧತಿಯನ್ನು ಖಂಡಿಸಿದರು. ದೇಹದಂಡನೆ, ಉಪವಾಸ, ಅರ್ಥವಿಲ್ಲದ ಆಚರಣೆ, ತೀರ್ಥಯಾತ್ರೆ ಹಾಗೂ ಯಜ್ಞಯಾಗಾದಿಗಳಿಂದ ದೇವರು ಒಲಿಯಲಾರನು ಎಂದು ಎಚ್ಚರಿಸಿದರು. ಪರಿಶುದ್ಧ ಭಕ್ತಿಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು. ಮೂರ್ತಿ ಪೂಜೆಯನ್ನು ಖಂಡಿಸುತ್ತಾ “ಕಲ್ಲನ್ನು ಪೂಜಿಸಿ ಭಗವಂತನನ್ನು ಪಡೆಯುವದಾದರೆ ನಾನು ಬೆಟ್ಟವನ್ನೇ ಪೂಜಿಸುವೆ. ಪವಿತ್ರ ನದಿಗಳ ನೀರಿನ ಸ್ನಾನದಿಂದ ಮೋಕ್ಷ ಪಡೆಯುವುದಾದರೆ ಆ ನದಿಗಳಲ್ಲಿ ವಾಸವಾಗಿರುವ ಮೀನು ಕಪ್ಪೆಗಳೇಕೆ ಮುಕ್ತಿ ಹೊಂದಿಲ್ಲ?” ಎಂದು ಮೂದಲಿಸಿದರು.ಇಡೀ ವಿಶ್ವಕ್ಕೆ ದೇವರು ಒಬ್ಬನೆ. ಹಿಂದುಗಳು ದೇವರನ್ನು ಈಶ್ವರ ಎಂದು ಕರೆದರೆ ಮುಸಲ್ಮಾನರು ಅಲ್ಲಾ ಎಂದು ಕರೆಯುವರು. ಹಿಂದುಗಳಲ್ಲಿ ರಾಮನಾದರೆ ಮುಸಲ್ಮಾನರಲ್ಲಿ ರಹೀಮ. ಹಿಂದುಗಳು ಕೃಷ್ಣ ಎಂದು ಪೂಜಿಸಿದರೆ ಮುಸಲ್ಮಾನರು ಕರೀಮನೆಂದು ಪೂಜಿಸುವರು. ಹೀಗಾಗಿ ನಾನು ರಾಮರಹಿಮರ ಮಗನೆಂದು ಸಾರಿದರು. ಕಬೀರರು ತಮ್ಮ ಬೋಧನೆಗಳನ್ನು ಸರಳ ಭಾಷೆಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬೋಧಿಸಿದರು. ಇವರ ತತ್ವಗಳನ್ನು ದೋಹಾಗಳಲ್ಲಿ ಕಾಣಬಹುದಾಗಿದೆ.ಕಬೀರರ ಅನುಯಾಯಿಗಳಿಗೆ ಕಬೀರಪಂಥಿಗಳೆಂದು ಹೆಸರು.

ಗುರುನಾನಕರು

ಸಿಖ್ ಧರ್ಮದ ಸ್ಥಾಪಕರಾದ ಗುರುನಾನಕರು ಬಾಲ್ಯದಲ್ಲಿ ಐಹಿಕ ಜೀವನದಲ್ಲಿ ಆಸಕ್ತಿ ಬೆಳಸಿಕೊಳ್ಳದೆ ಏಕಾಂಗಿಯಾಗಿ ದೇವರ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಇದರಿಂದ ಚಿಂತಿತರಾದ ಇವರ ತಂದೆ ನಾನಕರನ್ನು ಲೌಕಿಕದ ಕಡೆಗೆ ತರಲು ಸಾ.ಶ. 1488 ರಲ್ಲಿ ಬಟಾಲಾದ ನಿವಾಸಿ ಮೂಲಚಂದನ ಮಗಳಾದ ಸುಲಖನಿ ಎಂಬುವಳೊಂದಿಗೆ ವಿವಾಹ ಮಾಡಿದರು. ಕೆಲ ವರ್ಷಗಳಲ್ಲಿ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಜನಿಸಿದರು. ಆದರೂ ನಾನಕರು ದೇವರ ಧ್ಯಾನವನ್ನು ಮಾತ್ರ ಬಿಡಲೇ ಇಲ್ಲ.

ಜ್ಞಾನೋದಯ:

ಒಂದು ದಿನ ಗುರುನಾನಕರು ಸುಲ್ತಾನಪುರದ ಸಣ್ಣ ನೀರಿನ ಕೊಳದಲ್ಲಿ ಸ್ನಾನಮಾಡುತ್ತಿರುವಾಗ ದೇವರ ದರ್ಶನವಾಯಿತು. ಈ ದಿವ್ಯ ದರ್ಶನದಿಂದ ನಾನಕರಿಗೆ ಜ್ಞಾನೋದಯವಾಯಿತು ಎಂದು ತಿಳಿದು ಬರುತ್ತದೆ. ಜ್ಞಾನೋದಯದ ನಂತರ ನಾನಕರು ಸಂಸಾರ ಬಂಧನದಿಂದ ಬಿಡುಗಡೆ ಹೊಂದಿ ತಾನು ಕಂಡುಕೊಂಡ ಸತ್ಯದ ಸಾರವನ್ನು ಜಗತ್ತಿಗೆ ತಿಳಿಸಲು ಊರೂರು ಸುತ್ತಿದರು. ಅನೇಕ ಪಂಡಿತ ಪಾಮರರೊಂದಿಗೆ ಚರ್ಚೆಗಿಳಿದರು. ಮೆಕ್ಕಾ ಮದಿನಾಗಳಿಗೂ ಭೇಟಿನೀಡಿದರು.ನಂತರ ಚೀನಾ, ಟಿಬೇಟ್, ಶ್ರೀಲಂಕಾ, ಹರಿದ್ವಾರ, ಕಾಶಿ, ಅಸ್ಸಾಂ, ದೆಹಲಿ, ಕುರುಕ್ಷೇತ್ರ ಹಾಗೂ ಒರಿಸ್ಸಾಗಳನ್ನು ಸಂದರ್ಶಿಸಿದರು. ನಂತರ ರಾವಿನದಿಯ ದಂಡೆಯ ಮೇಲಿದ್ದ ಕರ್ತಾರಪುರ ಎಂಬ ನಗರದಲ್ಲಿ ಖಾಯಂ ಆಗಿ ನೆಲಸಿ ಸಾಕಷ್ಟು ಅನುಯಾಯಿಗಳನ್ನು ಪಡೆದರು. ತಮ್ಮ ಜೀವಿತದ ಕೊನೆಯ ಕಾಲದಲ್ಲಿ ನಾನಕರು ಬಾಯಿಲಹಾನಾ ಎಂಬ ಶಿಷ್ಯನಿಗೆ ಉತ್ತರಾಧಿಕಾರಿ ಪಟ್ಟವನ್ನು ಕಟ್ಟಿ ಸಾ.ಶ.1530 ರಲ್ಲಿ ಕರ್ತಾರಪುರದಲ್ಲಿ ನಿಧನರಾದರು.

ಬೋಧನೆಗಳು:

ಗುರುನಾನಕರು ಏಕೀಶ್ವರ ತತ್ವವನ್ನು ಪ್ರತಿಪಾದಿಸಿದರು. ದೇವರು ಒಬ್ಬನೆ ಅವನು ನಿರ್ಗುಣ, ನಿರಾಕಾರ, ಸರ್ವವ್ಯಾಪಿ, ನಿರ್ವಿಕಾರ, ನಿರ್ಮಲಚಿತ್ತ ಹಾಗೂ ಲೋಕೋದ್ಧಾರಕನಾಗಿದ್ದಾನೆಂದರು. ದೇವರ ಸ್ಮರಣೆಯಿಂದ ಮುಕ್ತಿ ಸಾಧ್ಯ ಎಂದು ಸಾರಿದರು. ನಾನಕರು ಜಾತಿಪದ್ಧತಿ, ಮೂರ್ತಿಪೂಜೆ, ಪರ್ದಾಪದ್ಧತಿ ಹಾಗೂ ಬಾಲ್ಯವಿವಾಹವನ್ನು ಖಂಡಿಸಿದರು. ಇವರು ಪುನರ್‌ಜನ್ಮದಲ್ಲಿ ನಂಬಿಕೆ ಇಟ್ಟಿದ್ದರು. ಹಿಂದೂ ಮುಸಲ್ಮಾನರ ನಡುವೆ ಐಕ್ಯತೆಯನ್ನು ಸಾಧಿಸಿದರು. ಪ್ರತಿಯೊಬ್ಬರೂ ಸ್ವಾರ್ಥ, ಮೋಸ, ವಂಚನೆ, ಕಪಟ ಹಾಗೂ ಅಸತ್ಯವನ್ನು ತ್ಯಜಿಸುವಂತೆ ಕರೆನೀಡಿದರು. ಗುರುನಾನಕರ ಬೋಧನೆಗಳನ್ನು ಸಿಖ್‌ರ ಪವಿತ್ರ ಗ್ರಂಥವಾದ ‘ಗುರುಗ್ರಂಥ ಸಾಹಿಬ್’ದಲ್ಲಿ ನೋಡಬಹುದು. ಇದು ಗುರುಮುಖ ಲಿಪಿಯಲ್ಲಿದೆ. ‘ಗುರುದ್ವಾರ’ ಸಿಖ್ರ ಪವಿತ್ರವಾದ ಸ್ಥಳವಾಗಿದೆ.

ಶ್ರೀ ಕೃಷ್ಣದೇವರಾಯನ ಸಾಧನೆಗಳು

ಶ್ರೀ ಕೃಷ್ಣದೇವರಾಯನ ಸಾಧನೆಗಳು

ಕೃಷ್ಣದೇವರಾಯ (1509-1529): ಈತ ವಿಜಯನಗರ ಅರಸರಲ್ಲಿಯೇ ಅಲ್ಲದೆ ಇಡೀ ಭಾರತದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠದೊರೆ ಎಂದು ಪ್ರಸಿದ್ಧನಾಗಿದ್ದಾನೆ. ಸಾ.ಶ.1509 ಅಗಸ್ಟ್ 8ನೆಯ ತಾರೀಖು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣದೇವರಾಯನು ಪಟ್ಟಾಭಿಷಿಕ್ತನಾದನು. ಆಗ ಆತನಿಗೆ ಕೇವಲ 25 ವರ್ಷ ವಯಸ್ಸು. ಸಾ.ಶ. 1509 ರಿಂದ 1529 ರವರೆಗೆ ಸುಮಾರು 20 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಈತ ವಿಜಯನಗರವನ್ನು ವೈಭವ ಹಾಗೂ ಕೀರ್ತಿಯ ಉನ್ನತ ಶಿಖರಕ್ಕೆ ಏರಿಸಿದನು. ಕೃಷ್ಣದೇವರಾಯ ಒಬ್ಬ ದಕ್ಷ ಆಡಳಿತಗಾರ, ವೀರಯೋಧ, ಅಪ್ರತಿಮ ಸಾಹಸಿ, ಚತುರ ರಾಜಕಾರಣಿ ಹಾಗೂ ಕಲೆ ವಾಸ್ತುಶಿಲ್ಪಗಳ ಆರಾಧಕನಾಗಿದ್ದನು.

ಕೃಷ್ಣದೇವರಾಯನ ದಿಗ್ವಿಜಯಗಳು
1) ವಿಜಾಪೂರ ಸುಲ್ತಾನನೊಂದಿಗೆ ಯುದ್ಧ (ಕ್ರಿ.ಶ. 1509):

ಕೃಷ್ಣದೇವರಾಯ ಸಿಂಹಾಸನಾಧೀಶ್ವರನಾದ ಕೆಲವೇ ದಿನಗಳಲ್ಲಿ ವಿಜಾಪುರದ ಸುಲ್ತಾನ ಯೂಸುಫ್ ಆದಿಲ್‌ಷಾ ಬಹಮನಿಯ ಸುಲ್ತಾನನಾಗಿದ್ದ ಮಹಮದ್‌ಷಾನ ಜೊತೆ ಸೇರಿ ರಾಯನ ಮೇಲೆ ಯುದ್ಧ ಸಾರಿದನು. ಆಗ ಕೃಷ್ಣದೇವರಾಯ ಸಿಡಿಲಿನಂತೆ ಅವರ ಮೇಲೆರಗಿ ‘ಡೋಣಿ’ ಎಂಬಲ್ಲಿ ಅವರನ್ನು ಸೋಲಿಸಿದನು. ಸೋತ ಮಹಮದ್ ಷಾ ಯುದ್ಧ ರಂಗದಿಂದ ಪಲಾಯನ ಮಾಡಿದನು. ಯೂಸಫ್ ಆದಿಲ್‌ ಷಾನನ್ನು ಕೋವಿಲಕೊಂಡದ ಬಳಿ ಸೋಲಿಸಿದನು. ಯೂಸಫ್ ಆದಿಲ್‌ಷಾ ರಣರಂಗದಲ್ಲಿ ವೀರಮರಣವನ್ನು ಹೊಂದಿದನು.

2) ಬೀದರ್ ಮುತ್ತಿಗೆ (ಕ್ರಿ.ಶ. 1514):

ವಿಜಾಪುರದ ಸುಲ್ತಾನನನ್ನು ಸೋಲಿಸಿದ ಕೃಷ್ಣದೇವರಾಯ ಬೀದರಿಗೆ ಮುತ್ತಿಗೆ ಹಾಕಿ ಅಲ್ಲಿ ತನ್ನ ಪ್ರಧಾನಮಂತ್ರಿಯಿಂದ ಬಂಧಿತನಾಗಿದ್ದ ಎರಡನೆಯ ಮಹಮ್ಮದ್ಾನನ್ನು ಬಂಧನದಿಂದ ಬಿಡುಗಡೆಗೊಳಿಸಿ ಪುನಃ ಸಿಂಹಾಸನದ ಮೇಲೆ ಕೂಡಿಸಿದನು. ಇದರಿಂದಾಗಿ ರಾಯನು ‘ಯವನರಾಜ ಪ್ರತಿಷ್ಠಾಪನಚಾರ್ಯ’ ಎಂಬ ಬಿರುದನ್ನು ಪಡೆದನು.

3) ಉಮ್ಮತ್ತೂರಿನ ಮುತ್ತಿಗೆ:

ಉಮ್ಮತ್ತೂರಿನ ಪಾಳೆಯಗಾರ ಗಂಗರಾಜನು ಬಂಡೆದ್ದು ಪೆನುಕೊಂಡೆಯನ್ನು ಆಕ್ರಮಿಸಿದನು. ಇವನ ಸೊಕ್ಕನ್ನು ಅಡಗಿಸಲು ಕೃಷ್ಣದೇವರಾಯನು ಸೈನ್ಯ ಸಮೇತ ಅಲ್ಲಿಗೆ ಧಾವಿಸಿ ಬಂದು ಪಾಳೆಯಗಾರನ ಮುಖ್ಯ ಕೇಂದ್ರಗಳಾಗಿದ್ದ ಶ್ರೀರಂಗಪಟ್ಟಣ ಹಾಗೂ ಶಿವನಸಮುದ್ರಗಳನ್ನು ಮುತ್ತಿ ಅವುಗಳನ್ನು ವಶಪಡಿಸಿಕೊಂಡನು. ನಂತರ ಅವುಗಳ ಆಡಳಿತವನ್ನು ಬೆಂಗಳೂರು ಕೆಂಪೇಗೌಡನಿಗೆ ವಹಿಸಿಕೊಟ್ಟನು.

4) ಕಳಿಂಗ, ಆಂಧ್ರಗಳ ಮುತ್ತಿಗೆ (ಕ್ರಿ.ಶ. 1513):

ಸಾ.ಶ. 1513ರಲ್ಲಿ ಕೃಷ್ಣದೇವರಾಯನು ಓರಿಸ್ಸಾದ ಪ್ರತಾಪರುದ್ರನ ವಿರುದ್ಧ ಯುದ್ಧವನ್ನು ಘೋಷಿಸಿ ಅವನನ್ನು ಸೋಲಿಸಿ ಉದಯಗಿರಿಯನ್ನು ಗೆದ್ದುಕೊಂಡನು. ನಂತರ ಕಳಿಂಗ ಕದನದಲ್ಲಿ ಆದಂಕಿ ಕಂದಕೂರು, ಪೆನುಕೊಂಡ, ನಾಗಾರ್ಜುನಕೊಂಡ, ಬಿಲ್ಲಮಕೊಂಡ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡನು.ನಂತರ ತನ್ನ ದಿಗ್ವಿಜಯ ಯಾತ್ರೆಯನ್ನು ಓರಿಸ್ಸಾದವರೆಗೆ ಮುಂದುವರೆಸಿ ಅದರ ರಾಜಧಾನಿಯಾಗಿದ್ದ ‘ಕಟಕ್’ನ್ನು ಗೆದ್ದುಕೊಂಡನು. ಗಜಪತಿ ಪ್ರತಾಪರುದ್ರ ವಿಧಿಯಿಲ್ಲದೆ ಕೃಷ್ಣದೇವರಾಯನಿಗೆ ಶರಣಾದನು. ನಂತರ ಕೃಷ್ಣದೇವರಾಯನೊಂದಿಗೆ ಶಾಂತಿಒಪ್ಪಂದ ಮಾಡಿಕೊಂಡು ತನ್ನ ಮಗಳಾದ ಜಗನ್‌ಮೋಹಿನಿಯನ್ನು ರಾಯನಿಗೆ ಕೊಟ್ಟು ಮದುವೆ ಮಾಡಿದನು.

5) ಗೋಲ್ಕಂಡ ಯುದ್ಧ (ಕ್ರಿ.ಶ.1512):

ಗೋಲ್ಕಂಡದ ಕುಲಿ ಕುತುಬ್‌ ಷಾ ವಿಜಯನಗರದ ಮೇಲೆ ದಾಳಿ ಮಾಡಿದನು. ಇವನನ್ನು ಎದುರಿಸಲು ರಾಯನು ಸಾಳುವ ತಿಮ್ಮರಸನ ನೇತೃತ್ವದಲ್ಲಿ ಸೈನ್ಯವನ್ನು ರವಾನಿಸಿದನು. ತಿಮ್ಮರಸ ಗೋಲ್ಕಂಡದ ಸುಲ್ತಾನನನ್ನು ಸೋಲಿಸಿ ಅಲ್ಲಿಂದ ಓಡಿಸಿದನು.

6) ರಾಯಚೂರು ಯುದ್ಧ (ಕ್ರಿ.ಶ.1520):

ವಿಜಾಪುರದ ಸುಲ್ತಾನ ಇಸ್ಮಾಯಿಲ್ ಆದಿಲ್‌ಷಾ ರಾಯಚೂರಿನ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡನು. ಇದರಿಂದ ಕುಪಿತಗೊಂಡ ಕೃಷ್ಣದೇವರಾಯನು ಇಸ್ಮಾಯಿಲ್‌ನನ್ನು ರಾಯಚೂರು ಕದನದಲ್ಲಿ ಸೋಲಿಸಿದನು. ನಂತರ ಸೋತ ಇಸ್ಮಾಯಿಲ್ ಅಲ್ಲಿಂದ ಪಲಾಯನ ಮಾಡಿದನು.

7) ಪೋರ್ಚುಗೀಸರೊಂದಿಗೆ ಉತ್ತಮ ಸಂಬಂಧ:

ಸಾ.ಶ. 1510ರಲ್ಲಿ ಪೋರ್ಚುಗೀಸರು ಗೋವೆಯನ್ನು ವಿಜಾಪುರದ ಸುಲ್ತಾನನಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೆ ರಾಯನು ಪರೋಕ್ಷವಾಗಿ ಬೆಂಬಲ ನೀಡಿದ್ದನು. ಇದರಿಂದ ಸಂತೃಪ್ತರಾಗಿದ್ದ ಪೋರ್ಚುಗೀಸರು ಕೃಷ್ಣದೇವರಾಯನೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡಿದ್ದರಲ್ಲದೆ. ಅವನಿಗೆ ಕುದುರೆಗಳನ್ನು ಸರಬರಾಜು ಮಾಡಿದರು.

8) ದಖನ್ ದಂಡಯಾತ್ರೆ:

ಕೃಷ್ಣದೇವರಾಯನ ಸೇನಾನಾಯಕನಾದ ವಿಜಯಪ್ಪ ಎಂಬುವವನು ದಕ್ಷಿಣ ಭಾರತದ ಮೇಲೆ ದಾಳಿಮಾಡಿ ಚೋಳ ಹಾಗೂ ಪಾಂಡ್ಯರನ್ನು ಸೋಲಿಸಿ ಕೊಡಗು ಹಾಗೂ ಮಲಬಾರನ್ನು ವಶಪಡಿಸಿಕೊಂಡನು.

9) ಶ್ರೀಲಂಕಾದ ವಿರುದ್ಧ ಯುದ್ಧ:

ಸಿಂಹಳದ ಪ್ರಜೆಗಳು ಅಲ್ಲಿನ ದೊರೆ ರಾಜವಿಜಯಬಾಹುವನ್ನು ದೇಶ ಬಿಟ್ಟು ಹೊರಹಾಕಿದರು. ಹೀಗೆ ದೇಶ ಭ್ರಷ್ಟನಾಗಿ ಬಂದ ರಾಜವಿಜಯ ಬಾಹು ಶ್ರೀಕೃಷ್ಣದೇವರಾಯನ ಸಹಾಯ ಯಾಚಿಸಿದನು. ಆಗ ರಾಯನು ರಾಜವಿಜಯಬಾಹುವಿನ ಪರವಾಗಿ ಹೋರಾಟ ಮಾಡಿ ಸಿಂಹಳಿಯರನ್ನು ಸೋಲಿಸಿ ವಿಜಯ ಬಾಹುವಿನ ಮಗನಾದ “ಭುವನೈಕ್ಯಬಾಹುವನ್ನು” ಸಿಂಹಳದ ಸಿಂಹಾಸನಕ್ಕೆ ತಂದನು. ಆಗ ಕೃಷ್ಣದೇವರಾಯನು ದಕ್ಷಿಣಾಧಿಪತಿ ಎಂಬ ಬಿರುದನ್ನು ಪಡೆದನು.

10) ಸಾಂಸ್ಕೃತಿಕ ಸಾಧನೆಗಳು:

ಕೃಷ್ಣದೇವರಾಯನು ವೈಷ್ಣವನಾಗಿದ್ದರೂ, ಅನ್ಯಧರ್ಮಗಳನ್ನು ಎಂದೂ ಕಡೆಗಣಿಸಲಿಲ್ಲ. ರಾಯನು ಕ್ರೈಸ್ತ, ಇಸ್ಲಾಂ, ಶೈವ, ಬೌದ್ಧ ಹಾಗೂ ಜೈನ ಧರ್ಮಗಳಿಗೆ ದಾನ ದತ್ತಿಗಳನ್ನು ನೀಡಿದನು. ಉದಯಗಿರಿಯಿಂದ ಬಾಲಗೋಪಾಲ ವಿಗ್ರಹವನ್ನು ತಂದು ರಾಜಧಾನಿಯಲ್ಲಿ ಪ್ರತಿಷ್ಠಾಪಿಸಿದನು. ಹಂಪೆಯ ವಿರುಪಾಕ್ಷ ದೇವಾಲಯದ ಪೂಜೆ ಮಾಡಲು ಸಕಲ ಕ್ರಮ ಕೈಗೊಂಡನು. ರಾಯನ ಆಸ್ಥಾನಕ್ಕೆ ಯಾರೇ ಬಂದರೂ ಅವರನ್ನು ಕ್ರೈಸ್ತರೇ? ಯಹೂದಿಗಳೇ?ಜೈನರೇ? ಮುಸಲ್ಮಾನರೇ? ಎಂದು ಪ್ರಶ್ನಿಸದೇ ಅವರನ್ನು ಉದಾರವಾಗಿ ಕಾಣುತ್ತಿದ್ದನು.

11)ಕಲೆ ಮತ್ತು ವಾಸ್ತುಶಿಲ್ಪ:

ಕೃಷ್ಣದೇವರಾಯನು ಮಹಾ ನಿರ್ಮಾಣಕಾರನಾಗಿದ್ದನು. ಇವನು ಹಂಪಿಯಲ್ಲಿ ಉಗ್ರನರಸಿಂಹ, ಏಕಶಿಲಾರಥ, ಭವ್ಯ ಕಟ್ಟಡಗಳು ಹಾಗೂ ಮೂರ್ತಿಗಳನ್ನು ನಿರ್ಮಿಸಿದ್ದಾನೆ. ಹಂಪಿಯ ಹಜಾರರಾಮಸ್ವಾಮಿ ದೇವಾಲಯ, ಕೃಷ್ಣಸ್ವಾಮಿ, ವಿಜಯವಿಠಲಸ್ವಾಮಿ ಹಾಗೂ ಮಹಾನವಮಿ ದಿಬ್ಬಗಳನ್ನು ನಿರ್ಮಾಣಮಾಡಿದನು. ಅದಲ್ಲದೆ ರಾಯಗೋಪುರ, ಕಲ್ಯಾಣಮಂಟಪ, ಗೋಪುರ ಮುಂತಾದವುಗಳು ಇವನ ಕಾಲದಲ್ಲಿ ಆರಂಭಗೊಂಡವು. ರಾಯನು ತನ್ನ ತಾಯಿ ನಾಗಲಾಂಬ ಹೆಸರಿನಲ್ಲಿ ನಾಗಲಾಪುರವನ್ನು ಮತ್ತು ತನ್ನ ರಾಣಿ ತಿರುಮಲಾದೇವಿಯ ಹೆಸರಿನಲ್ಲಿ ಹೊಸಪೇಟೆಯನ್ನು ನಿರ್ಮಿಸಿದನು. ತನ್ನ ಪ್ರೀತಿಯ ಮಡದಿ ಚಿನ್ನಾಂಬೆಯ ಹೆಸರಿನಲ್ಲಿ ಒಂದು ನಗರವನ್ನು ನಿರ್ಮಿಸಿದನು. ಅಲ್ಲದೆ ಅನೇಕ ಕೋಟೆಗಳು, ಕೆರೆಗಳು ಹಾಗೂ ಅಣೆಕಟ್ಟೆಗಳನ್ನು ನಿರ್ಮಿಸಿದನು. ಇವನಿಗೆ ಕನ್ನಡರಾಜ್ಯರಮಾರಮಣ,ಕವಿಪುಂಗವ, ಕರ್ನಾಟಕಾಂದ್ರಭೋಜ ಮತ್ತು ಯವನರಾಜ್ಯಪ್ರತಿಸ್ಥಾಪನಾಚಾರ್ಯಎಂಬ ಬಿರುದುಗಳಿದ್ದವು.

12) ಸಾಹಿತ್ಯ:

ಕೃಷ್ಣದೇವರಾಯನ ಕಾಲದಲ್ಲಿ ಸಾಹಿತ್ಯ ಸಾಕಷ್ಟು ಹುಲುಸಾಗಿ ಬೆಳೆಯಿತು. ಇವನು ಸ್ವತಃ ಸಂಸ್ಕೃತ ಹಾಗೂ ತೆಲುಗು ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದನು. ಕೃಷ್ಣದೇವರಾಯನು ತೆಲುಗು ಭಾಷೆಯಲ್ಲಿ ಅಮುಕ್ತಮಲ್ಯದ ಹಾಗೂ ಸಂಸ್ಕೃತದಲ್ಲಿ ಜಾಂಬುವತಿ ಕಲ್ಯಾಣ, ಉಷಾಪರಿಣಯ, ಮದಲಸ ಚರಿತ ಮುಂತಾದವುಗಳನ್ನು ರಚಿಸಿದನು. ಇವನ ಆಸ್ಥಾನದಲ್ಲಿ ಅಷ್ಟದಿಗ್ಗಜರು ಎಂಬ ಎಂಟು ಕವಿಗಳಿದ್ದರು. ಅವರುಗಳೆಂದರೆ.

1. ಅಲ್ಲಸಾನಿ ಪೆದ್ದಣ್ಣ

2. ನಂದಿ ತಿಮ್ಮಣ್ಣ

3. ಮಾದಯ್ಯಗಾರಿ ಮಲ್ಲಣ್ಣ  

4. ರಾಮರಾಜ ಭೂಷಣ

5. ಪಿಂಗಳಿ ಸೂರಣ್ಣ

6. ರಾಮಭದ್ರಿಯ

7.ತೆನಾಲಿ ರಾಮಕೃಷ್ಣ

8. ದೂರ್ಜಟಿ.

ಕೃಷ್ಣದೇವರಾಯ ಒಬ್ಬ ಶ್ರೇಷ್ಠ ಆಡಳಿತಗಾರ, ರಾಜನೀತಿನಿಪುಣ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಮಹಾಪೋಷಕನಾಗಿದ್ದನು. ಕೃಷ್ಣದೇವರಾಯ ಉತ್ತಮ ಕವಿ, ನ್ಯಾಯಪರ ಹಾಗೂ ನಿಷ್ಪಕ್ಷಪಾತಿ ದೊರೆಯಾಗಿದ್ದನು. ಪೋರ್ಚುಗೀಸ್ ಪ್ರವಾಸಿ ಪೇಯಿಸ್ ಹೇಳಿರುವಂತೆ “ರಾಯನು ಮಧ್ಯಮ ಎತ್ತರದವನಾಗಿದ್ದು ಆಕರ್ಷಕ ಮೈಬಣ್ಣ ಹಾಗೂ ಮೈಕಟ್ಟನ್ನು ಹೊಂದಿದ್ದಾನೆ. ಇವನ ಮುಖದ ಮೇಲೆ ಸಿಡುಬಿನ ಕಲೆಗಳಿವೆ. ಇವನು ಸದಾ ಹಸನ್ಮುಖಿಯಾಗಿದ್ದು ವಿನೋಧಪರನಾಗಿದ್ದಾನೆ” ಎಂದಿದ್ದಾನೆ.