ಪುರಂದರದಾಸರು(1484-1564)
ದಾಸಕೂಟದಲ್ಲಿ ಪ್ರಕಾಶಮಾನವಾಗಿ ಬೆಳಗಿದ ದೃವತಾರೆಯೆಂದರೆ ಪುರಂದರದಾಸರು. ಇವರು ಭಕ್ತಾಗ್ರೇಸರು ಹಾಗೂ ಉದ್ದಾಮ ಪಂಡಿತರಾಗಿದ್ದರು. ಇವರು ವ್ಯಾಸರಾಯರ ಪರಮಶಿಷ್ಯರು, ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ಗುರುಗಳಿಂದಲೇ ಹೊಗಳಿಸಿಕೊಂಡ ದಾಸ ಶಿಖಾಮಣಿ ಇವರು.ಇವರು ವಿಜಯನಗರ ಸಾಮ್ರಾಜ್ಯದ ಕೊನೆಯ ನೂರು ವರ್ಷಗಳ ಕಾಲದಲ್ಲಿ ಬದುಕಿದ್ದರು. ವಿಜಯನಗರ ಸಾಮ್ರಾಜ್ಯದ ಉಚ್ಚಾಯ ಕಾಲವಷ್ಟೇ ಅಲ್ಲ, ದಾಸ ಸಾಹಿತ್ಯದ ಸುಗ್ಗಿಯಕಾಲವೂ ಹೌದು. ತೆಲುಗಿನ ಅನ್ನಮಾಚಾರ್ಯ ಅವರ ಮೊಮ್ಮಗ ಚನ್ನಯಸೂರಿ ಹಾಗೂ ಕನಕದಾಸರು ಇವರ ಸಮಕಾಲೀನರಾಗಿದ್ದರು. ಬಳ್ಳಾರಿ ಜಿಲ್ಲೆಯ ಕಮಲಾಪುರದ ತಾಮ್ರಪಟವು ಪುರಂದರದಾಸರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ.ಕನ್ನಡದಲ್ಲಿ ಭಕ್ತಿ ಸಾಹಿತ್ಯವನ್ನು ಅತ್ಯಂತ ಶ್ರೀಮಂತಗೊಳಿಸಿದರು. ಸಂಗೀತಶಾಸ್ತ್ರಕ್ಕೆ ಅಪಾರವಾದ ಕೊಡುಗೆನೀಡಿದರು.ಆದುದರಿಂದ ಇವರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗಿದೆ.
ಬಾಲ್ಯ ಮತ್ತು ಏಳಿಗೆ
ಪುರಂದರದಾಸರ ಮೂಲಹೆಸರು ಶ್ರೀನಿವಾಸನಾಯಕ, ಇವರ ತಂದೆ ವರದಪ್ಪನಾಯಕ. ಪುರಂದರದಾಸರು ಮಹಾರಾಷ್ಟ್ರದ ಈಗಿನ ಪುರಂದರಗಡದಲ್ಲಿ ಜನಿಸಿದರು ಎಂದು ಹೇಳಲಾಗಿದೆ. ಆದರೆ ಈ ಕುರಿತು ಸಂಶೋಧನೆ ಮಾಡಿದ ಕಪಟರಾಳ ಕೃಷ್ಣರಾಯರು ಇವರ ಹುಟ್ಟೂರು ಮಹಾರಾಷ್ಟ್ರದ ʻಪುರಂದರ’ ಎಂಬ ಹಳ್ಳಿ ಎಂದು ಸೂಚಿಸಿದ್ದಾರೆ. ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಬರುವುದಿಲ್ಲ.
ಪುರಂದರದಾಸರ ವೈಯಕ್ತಿಕ ಜೀವನದ ಬಗ್ಗೆ ನಮಗೆ ಸರಿಯಾಗಿ ಮಾಹಿತಿ ಇಲ್ಲವಾದರೂ ಇವರ ತಂದೆ ವರದಪ್ಪನಾಯಕ ಪುರಂದರಘಡದ ಆಗರ್ಭ ಶ್ರೀಮಂತ ವ್ಯಾಪಾರಿಯಾಗಿದ್ದರು. ಅವರ ಮಗ ಶ್ರೀನಿವಾಸನಾಯಕನೂ ಆಗರ್ಭ ಶ್ರೀಮಂತ ವ್ಯಾಪಾರದಿಂದ ಅನರ್ಘ್ಯ ರತ್ನಗಳನ್ನು ಹೊಂದಬೇಕೆಂಬುದು ಅವನ ಬಯಕೆಯಾಗಿತ್ತು. ಇವನು ಎಷ್ಟು ಶ್ರೀಮಂತನೋ ಅಷ್ಟೇ ಜಿಪುಣ ಕೂಡ. ವಜ್ರದ ವ್ಯಾಪಾರದಲ್ಲಿ ಇವನನ್ನು ಮೀರಿಸುವವರೇ ಇರಲಿಲ್ಲ. ಸುವರ್ಣ ವ್ಯಾಪಾರದ ರಹಸ್ಯಗಳನೆಲ್ಲಾ ಇವನು ಕರಗತ ಮಾಡಿಕೊಂಡಿದ್ದನು. ತಂದೆಯ ಸಾವಿನ ನಂತರ ಇವನ ವ್ಯಾಪಾರ ಮತ್ತಷ್ಟು ವಿಸ್ತಾರಗೊಂಡಿತು. ಸಂಪತ್ತು ಮನೆಯ ತುಂಬೆಲ್ಲಾ ಹುಳುಕಾಡತೊಡಗಿತು. ಸಂಪತ್ತು ಹೆಚ್ಚಿದಂತೆಲ್ಲಾ ಅವನ ಲೋಭ, ಮಧ, ಮತ್ಸರಗಳೆಲ್ಲಾ ಹೆಚ್ಚುತ್ತಾ ಹೋದವು. ಮನೆಯಲ್ಲಿ ಮಡದಿ ಲಕ್ಷ್ಮೀಬಾಯಿ ಓರ್ವ ಧರ್ಮನಿಷ್ಟಳಾಗಿದ್ದಳು. ಆದರೆ ಶ್ರೀನಿವಾಸ ನಾಯಕನಿಗೆ ದಾನಧರ್ಮದಲ್ಲಿ ನಂಬಿಕೆಯಾಗಲಿ, ನಿಷ್ಠೆಯಾಗಲಿ ಇರಲೇ ಇಲ್ಲ. ಪರೋಪಕಾರ ಎಂದರೆ ಅವನಿಗೆ ಆಗದ ಮಾತಾಗಿತ್ತು. ಈತನ ರೀತಿನೀತಿ ಇವನ ಪತ್ನಿಗೆ ಸರಿಬರಲಿಲ್ಲ. ಆದರೂ ಪತಿಯ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸಬೇಕಾದ ಅನಿವಾರ್ಯತೆ ಇತ್ತು ಅಂತಹ ಪರಿಸ್ಥಿತಿಯಲ್ಲಿಯೂ ಮಡದಿ ದೈವಭಕ್ತಿ ಹಾಗೂ ಪರೋಪಕಾರಕ್ಕೆ ಹೆಸರುವಾಸಿಯಾಗಿದ್ದಳು. ಬಡವರನ್ನು ಕಂಡರೆ ಮಡುಗುತ್ತಿದ್ದಳು. ಶ್ರೀನಿವಾಸನಾಯಕ ಎಷ್ಟೊಂದು ಜಿಪುಣನೆಂದರೆ ತನ್ನ ಮನೆಗೆ ಬಂದು ಹೋಗುವವರನ್ನು ಉಪವಾಸದಿಂದಲೇ ಕಳುಹಿಸುತ್ತಿದ್ದನು. ಇಂತಹ ಜಿಪುಣನಾದ ಶ್ರೀನಿವಾಸನಾಯಕ ಪುರಂದರದಾಸನಾಗಿ ಪರಿವರ್ತನೆ ಹೊಂದಿದ ಕಥೆ ಅತ್ಯಂತ ಸ್ವಾರಸ್ಯಕರವಾಗಿದೆ.
ಒಂದು ದಿನ ಭಗವಂತ ಬ್ರಾಹ್ಮಣವೇಷದಲ್ಲಿ ನಾಯಕನ ಅಂಗಡಿಗೆ ಬಂದು ಮಗನ ಉಪನಯನಕ್ಕಾಗಿ ಧನಸಹಾಯ ಮಾಡಬೇಕೆಂದು ಕೇಳಿಕೊಂಡ. ಜಿಪುಣನಾದ ಶ್ರೀನಿವಾಸನಾಯಕ ಹಲವಾರು ಬಾರಿ ಎಡತಾಕಿಸಿ ಅಂತಿಮವಾಗಿ ಕಾಸೊಂದನ್ನು ಆತನ ಕಡೆಗೆ ಬಿಸಾಕಿದ, ಆದರೆ ಅದೇ ಬ್ರಾಹ್ಮಣ ನಾಯಕನ ಮನೆಗೆ ಹೋಗಿ ಹಣಕಾಸಿನ ನೆರವನ್ನು ಬೇಡಿದ. ಧರ್ಮಪಾರಾಯಣಿಯಾದ ಲಕ್ಷ್ಮೀಬಾಯಿ ತನ್ನಲ್ಲಿ ಹಣವಿಲ್ಲದಿದುದರಿಂದ ತನ್ನ ವಜ್ರದ ಮೂಗುತಿಯನ್ನೇ ದಾನವಾಗಿ ಕೊಟ್ಟು ಕಳುಹಿಸಿದಳು. ಬ್ರಾಹ್ಮಣ ಆ ಮೂಗುತಿಯನ್ನು ಮಾರಲು ನಾಯಕನ ಅಂಗಡಿಗೆ ಹೋದನು. ಅದನ್ನು ತನ್ನ ಹೆಂಡತಿಯ ವಜ್ರದ ಮೂಗುತಿಯೆಂದು ಗುರುತಿಸಿದ ನಾಯಕ ಅದನ್ನು ಸಂದೂಕಿನಲ್ಲಿ ಭದ್ರವಾಗಿ ಇಟ್ಟು ನಾಳೆ ಹಣವನ್ನು ನೀಡುವೆನೆಂದು ಬ್ರಾಹ್ಮಣನನ್ನು ಸಾಗು ಹಾಕಿದನು. ನಂತರ ಮನೆಗೆಹೋಗಿ ವಿಚಾರಿಸಲಾಗಿ ದಿಗ್ಧಮೆಗೊಂಡ ಲಕ್ಷ್ಮಿಬಾಯಿ ಉತ್ತರಿಸಲಾಗದೆ ವಿಷಸೇವನೆಗೆ ಪ್ರಯತ್ನಿಸಿದಳು. ವಿಷವನ್ನು ಕುಡಿಯಲು ಬಟ್ಟಲನ್ನು ಎತ್ತಿದಾಕ್ಷಣವೇ ಮೂಗುತಿಯು ಅವಳ ಬಟ್ಟಲೊಳಗೆ ಬಿದ್ದುಬಿಟ್ಟಿತು. ಅದನ್ನು ತೆಗೆದುಕೊಂಡು ತನ್ನ ಗಂಡನಿಗೆ ನೀಡಿದಳು. ಆಶ್ಚರ್ಯಚಕಿತನಾದ ಶ್ರೀನಿವಾಸನಾಯಕ ತನ್ನ ಅಂಗಡಿಗೆ ಬಂದು ಪರೀಕ್ಷಿಸಿದ. ಹಾಕಿದ ಬೀಗ ಹಾಗೆಯೇ ಇದೆ. ಆದರೆ ಒಳಗಡೆ ಮಾತ್ರ ಮೂಗುತಿ ಇಲ್ಲ. ಆಗ ಅವನಿಗೆ ಬ್ರಾಹ್ಮಣನಾಗಿ ಬಂದವನು ಭಗವಂತನೇ ಇರಬೇಕೆಂದು ಅರಿವಾಯಿತು. ಇದರಿಂದ ಅವನ ಕಣ್ಣು ತೆರೆಯಿತು. ಭಗವಂತನ ಇಂತಹ ಪವಾಡ ನೋಡಿ ನಾಚಿಕೊಂಡ ಶ್ರೀನಿವಾಸನಾಯಕ ತನ್ನ ಐಶ್ವರ್ಯವನ್ನೆಲ್ಲಾ ಗಾನಮಾಡಿ ʻಕೃಷ್ಣಾರ್ಪಣ’ಎಂದು ಸರ್ವತ್ಯಾಗಮಾಡಿ ದಾಸಶ್ರೇಷ್ಟ ನಾದನು. ಅಂದಿನಿಂದ ʻಪುರಂದರದಾಸ’ ಎಂದು ಪ್ರಖ್ಯಾತರಾದರು. ಹೀಗೆ ಎಲ್ಲವನ್ನೂ ತ್ಯಾಗಮಾಡಿದ ಪುರಂದರದಾಸ “ಈಸಬೇಕು ಇದ್ದು ಜೈಸಬೇಕು, ಹೇಸಿಗೆ ಸಂಸಾರದಲ್ಲಿ ಆಸೆ ಲೇಪವಿಲ್ಲದ ಹಾಗೆʼʼ ಎಂಬ ಕೀರ್ತನೆಯನ್ನು ಹಾಡುತ್ತಾ ಕುಣಿಯುತ್ತಾ ಊರ ಬೀದಿಬೀದಿ ತಿರುಗತೊಡಗಿದರು.ಈ ತೆರನಾದ ಶ್ರೀನಿವಾಸನ ವಿಚಿತ್ರವನ್ನು ಕಂಡು ಇವನಿಗೆಲ್ಲೊ ಹುಚ್ಚು ಹಿಡಿದಿದೆ ಎಂದು ಜನ ಮಾತನಾಡಿಕೊಂಡರು.
ಮುಂದೆ ಪುರಂದರದಾಸರು ವ್ಯಾಸರಿಂದ ದೀಕ್ಷೆಯನ್ನು ಪಡೆದರು. ಇವರಿಗೆ ಲಕ್ಷ್ಮಣದಾಸ ಹೇಚಣದಾಸ ಹಾಗು ಮಧ್ವಪತಿದಾಸರೆಂಬ ಮಕ್ಕಳಿದ್ದರು. ಇವರೂ ಸಹ ಕೀರ್ತನೆಗಳನ್ನು ರಚಿಸಿ ಪ್ರಸಿದ್ಧರಾದರು. ಪುರಂದರದಾಸರಿಗೆ ಮಗಳೊಬ್ಬಳಿದ್ದಳೆಂದು ಹೇಳಲಾಗಿದೆ. ಆದರೆ ಮಕ್ಕಳು ಇವರ ಕಾಲದಲ್ಲಿಯೇ ಕಾಲವಾದರು. “ಗಿಳಿಯು ಪಂಜರದೊಳಿಲ್ಲ” ಎಂಬ ಪುರಂದರದಾಸರ ಕೀರ್ತನೆಯಿಂದಲೇ ಅವರ ಪುತ್ರವಿಯೋಗದ ಬಗ್ಗೆ ತಿಳಿದುಕೊಳ್ಳಬಹುದು. ಪುರಂದರದಾಸರು ತಮ್ಮ ಕೀರ್ತನೆಗಳನ್ನು ಹಾಡುತ್ತ ಶ್ರೀರಂಗ, ಕಂಚಿ, ಕಾಳಹಸ್ತಿ, ಸಿಂಹಗಿರಿ, ಹಸ್ತಿಶೈಲಿ, ಆಹೋಬಲ, ಶ್ರೀಶೈಲ, ಉಡುಪಿ. ಭದ್ರಾಚಲ ಮುಂತಾದ ಕಡೆಗೆ ಪ್ರವಾಸಮಾಡಿ ಜನಪ್ರಿಯಗೊಳಿಸಿದರು. ಇವರು ಪಾಂಡುರಂಗನ ಪರಮಭಕ್ತರು. ಪುರಂದರದಾಸರು ತಮ್ಮ ಬದುಕಿನ ಬಹುಭಾಗವನ್ನು ಪಂಪಾಕ್ಷೇತ್ರದಲ್ಲಿ ಕಳೆದರು. ಇವರು ಪುರಂದರ ವಿಠ್ಠಲನ ಅಂಕಿತದಲ್ಲಿ ಗೀತೆಗಳು, ಪದಗಳು, ಸುಳಾದಿಗಳು, ಉಗಾಭೋಗಗಳನ್ನು ರಚಿಸಿದ್ದಾರೆ. ಇವರು ನಾಲ್ಕು ಲಕ್ಷ ಇಪ್ಪತ್ತೈದು ಸಾವಿರ ಕೃತಿಗಳನ್ನು ರಚಿಸಿದರು ಎಂದು ಹೇಳಲಾಗಿದೆ. ಆದರೆ ಈಗ ಉಳಿದಿರುವುದು ಸಾವಿರ ಮಾತ್ರ ಶ್ರೀನಿವಾಸ ಪುರಂದರದಾಸರಾದ ಬಗ್ಗೆ ಈ ಕೀರ್ತನೆಯಿಂದ ತಿಳಿಯಬಹುದಾಗಿದೆ.
“ದಂಡಿಗೆ ಬೆತ್ತ ಹಿಡಿಯುವುದಕ್ಕೆ ನಾಚುತ್ತಿದ್ದ
ಅವರನ್ನು ದಂಡಿಗೆ ಬೆತ್ತ ಹಿಡಿಯುವಂತೆ ಮಾಡಿದಳು
ಆ ಮಡದಿ
ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಗರ್ವಿಸುತ್ತಿದ್ದ
ಅವರಿಗೆ ಆ ಬಗ್ಗೆ ಅಭಿಮಾನವನ್ನುಂಟು ಮಾಡಿದಳು ಆ ಆರ್ಧಾಂಗಿ!”
ಪುರಂದರದಾಸರ ಬೋಧನೆಗಳು:
ಪುರಂದರದಾಸರು ನಿಂತ ನೀರಿನಂತೆ ಜಡವಾಗಿದ್ದ ಸಮಾಜವನ್ನು ಚಲನಶೀಲ ಸಮಾಜವನ್ನಾಗಿ ಪರಿವರ್ತಿಸಲು ಯತ್ನಿಸಿದರು.ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ಸತಿಪದ್ಧತಿಯನ್ನು ಉಗ್ರವಾಗಿ ಖಂಡಿಸಿದರು.
1. ಸಮಾಜದಲ್ಲಿನ ಮೂಢನಂಬಿಕೆ ಹಾಗೂ ಜನರ ಆಡಂಬರವನ್ನು ಖಂಡಿಸುತ್ತಾ “ಉದರವೈರಾಗ್ಯವಿದ್ದು ನಮ್ಮ ಪದುಮನಾಮನಲಿ ಲೇಶಭಕುತಿಯಿಲ್ಲ” ಎಂದು ವರ್ಣಿಸುತ್ತ ಮನುಷ್ಯನ ಅಂತರಂಗದ ಕ್ರೋಧ, ಮದ, ಮತ್ಸರಗಳನ್ನು ಬಯಲಿಗೆಳೆದರು.
2.ಬದುಕಿನ ಡಾಂಭಿಕತೆಯನ್ನು, ಜ್ಞಾನರಹಿತವಾದ ವರ್ತನೆಯನ್ನು ಗೇಲಿ ಮಾಡಿದ ಪುರಂದರದಾಸರು “ಮಡಿಮಡಿಯೆಂದು ಅಡಿಗಡಿಗೆ ಹಾರುವೆ ಮಡಿ ಮಾಡುವ ಬಗೆ ಬೇರುಂಟೆ” ಎಂದು ನುಡಿದರು.
3. “ಇರಬೇಕು ಇರದಿರಬೇಕು ಆಶಾಲೇಷ ಮಾಡದಾಂಗ ಈಸಬೇಕು ಇದ್ದು ಜೈಸಬೇಕು” ನಿರರ್ಥಕವಾಗಿ ಬದುಕನ್ನು ಸಾಗಿಸುವ ಸ್ತ್ರೀಯರನ್ನು ಕೂಡಿಕೊಂಡು ಇಡೀ ಜೀವನವನ್ನು ಹಾಳುಮಾಡಿಕೊಳ್ಳುವ ಮೂಢರನ್ನು ಪುರಂದರದಾಸರು ಅತ್ಯಂತ ಸೊಗಸಾಗಿ ಚಿತ್ರಿಸಿದ್ದಾರೆ.
4. “ಕಲ್ಲಾಗಿರಬೇಕು ಕಠಿಣಭವತೊರೆಯೊಳಗೆ, ಬಿಲ್ಲಾಗಿರಬೇಕು ಬಲ್ಲವರೊಳಗೆ” ಎಂದು ಬದುಕಿನ ನಶ್ವರತೆಯನ್ನು ವ್ಯರ್ಥ ವರ್ತನೆಯ ಕುರಿತು “ಅಂಬಿಗ ನಾ ನಿನ್ನ ನಂಬಿದೆ” ಎಂಬ ಪದದಲ್ಲಿ ಸುಂದರವಾದ ರೂಪ ಕೊಟ್ಟಿದ್ದಾರೆ.
5. ʻಪಯಣಿಗನು ನದಿ ದಾಟಬೇಕಿದೆ ಅವನು ಕುಳಿತಿರುವ ದೋಣಿಯಲ್ಲಿ ಒಂಬತ್ತು ರಂಧ್ರಗಳಿವೆ. ಅದು ಆರು ತೆರೆಗಳನ್ನು ಹಾಯಬೇಕಿದೆ’ ಎಂತಹ ಸುಂದರವಾದ ರೂಪಕವನ್ನು ಪುರಂದರರು ನೀಡಿದ್ದಾರೆ. ಹೀಗೆ ಪುರಂದರ ದಾಸರು ಬದುಕಿನ ವಿವಿಧ ಸಮಸ್ಯೆಗಳನ್ನು ವಿವಿಧ ದೃಷ್ಟಿಕೋನದಿಂದ ನೋಡಿದ್ದಾರೆ. ಆದರೆ ಅದಕ್ಕೆ ಪರಿಹಾರ ಪುರಂದರ ವಿಠ್ಠಲನ ಸನ್ನಿಧಿ ಮಾತ್ರ ಎಂದು ಹೇಳಿದ್ದಾರೆ.
6. ಪರಿಶುದ್ಧ ಹರಿಧ್ಯಾನವನ್ನು ಸೂಚಿಸಲು ಪುರಂದರರು “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕುʼʼ ಎಂದಿದ್ದಾರೆ.
ಪಂಡರಾಪುರದಿಂದ ಹಂಪೆಗೆ ಹೋದ ಪುರಂದರದಾಸರು ವಿರುಪಾಕ್ಷ ದೇವರ ದರ್ಶನವನ್ನು ಮಾಡಿ “ಕೈಲಾಸವಾಸ ಗೌರೀಶ ಈಶ” ಎಂಬ ಕೀರ್ತನೆಯನ್ನು ಹಾಡಿ ಆನಂದಪರವಶರಾದರು.ಹೀಗೆ ಹಂಪೆಯಲ್ಲಿ ಸಂಸಾರಸಮೇತರಾಗಿ ನೆಲಸಿದ ಪುರಂದರದಾಸರು ವಿರಕ್ತರಾಗಿ ಹರಿಭಕ್ತಿ ಸಾಧನೆಯೇ ಮುಕ್ತಿಗೆ ಮಾರ್ಗವೆಂದು ಸಾರಿದರು. ಬೇಲೂರು ಕೇಶವದಾಸರು ಹೇಳುವಂತೆ “ಪಂಚಮರ ಉದ್ಧಾರ, ಕೀರ್ತನ ಪದ್ಧತಿ ಉದ್ದಾರ, ಸಂಗೀತಶಾಸ್ತ್ರ ಉದ್ಧಾರ, ಕರ್ನಾಟಕ ಭಾಷೋಜ್ಜೀವನ,ಹರಿಕಥೆಯ ಮೂಲಕ ಭಕ್ತಿಯ ಪ್ರಸಾರ ಮಾಡಿದ ದಾಸ ಶ್ರೇಷ್ಠ” ಪುರಂದರದಾಸರು.
ಉಪಸಂಹಾರ
ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಭಕ್ತಿ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಜನರಿಗೆ ಸಾರಿದ ಮಹಾನ್ ದಾಸರು. ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ಅನ್ಯಾಯಗಳನ್ನು ವಿರೋಧಿಸಿ ಸಮಾನತೆ ಹಾಗೂ ಧಾರ್ಮಿಕ ಚಿಂತನೆಗಳನ್ನು ಉತ್ತೇಜಿಸಿದರು. ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅವರ ಕೊಡುಗೆ ಅಪಾರವಾಗಿದ್ದು ಅವರು ಶಾಶ್ವತವಾಗಿ ಸ್ಮರಣೀಯರಾಗಿದ್ದಾರೆ. ಆದ್ದರಿಂದ ಪುರಂದರದಾಸರು ಕನ್ನಡ ಸಂಸ್ಕೃತಿ ಮತ್ತು ಭಕ್ತಿ ಪರಂಪರೆಯಲ್ಲಿ ಅಜರಾಮರ ವ್ಯಕ್ತಿತ್ವವಾಗಿದ್ದಾರೆ.
