ಆರ್ಯರ ಕಾಲದ ಸಾಹಿತ್ಯ

ಆರ್ಯರ ಕಾಲದ ಸಾಹಿತ್ಯ

ಆರ್ಯರ ಸಂಸ್ಕೃತಿಯನ್ನು ಸಮಗ್ರವಾಗಿ ತಿಳಿಯಲು ನಮಗಿರುವ ಮೂಲಾಧಾರಗಳೆಂದರೆ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಆರಣ್ಯಕಗಳು, ಉಪನಿಷತ್ ಗಳು. ಇವುಗಳನ್ನು ಒಟ್ಟಾರೆ ಹೆಸರಿಸಿರುವುದು ʻವೇದವಾಜ್ಯಯ’ ಎಂಬುದಾಗಿ. ಅಲ್ಲದೆ ರಾಮಾಯಣ ಮತ್ತು ಮಹಾಭಾರತ ಎರಡು ಪ್ರಮುಖ ಮಹಾಕಾವ್ಯಗಳಿವೆ.

ಎ) ಚತುರ್ವೇದಗಳು : ʻವೇದ’ ಎಂಬುದು ಸಂಸ್ಕೃತ ಭಾಷೆಯ ‘ವಿದ್’ ಎಂಬ ಪದದಿಂದ ಬಂದಿದೆ. ಇದರ ಅರ್ಥ ‘ಜ್ಞಾನ’ ಎಂಬುದಾಗಿ ಚತುರ್ವೇದಗಳು ಜ್ಞಾನಕಾಂಡದ ಅಂಗಗಳು. ಆರ್ಯರು ತಮ್ಮ ಪೂರ್ವಿಕರಿಂದ ಪಡೆದ ಮಂತ್ರಗಳನ್ನು ಸ್ವರಬದ್ಧವಾಗಿ ಪಠಿಸುತ್ತಿದ್ದರು. ಅವುಗಳೇ ಋಕ್ಕುಗಳು ಅಥವಾ ಸೂಕ್ತಗಳು, ಚತುರ್ವೇದಗಳು ಇಂತಹ ಸೂಕ್ತಗಳಿಂದ ಕೂಡಿವೆ.

ವೇದಗಳು ನಾಲ್ಕು 1) ಋಗ್ವೇದ, 2) ಯಜುರ್ವೇದ, 3) ಸಾಮವೇದ 4) ಅಥರ್ವಣವೇದ.

1) ಋಗ್ವೇದ : ವೇದಗಳಲ್ಲಿ ಅತ್ಯಂತ ಪ್ರಾಚೀನವಾದುದು ಋಗ್ವೇದ , ಋಗ್ವೇದದಲ್ಲಿ 1028 ಸೂಕ್ತಗಳಿವೆ. ಇದನ್ನು 10 ಮಂಡಲಗಳಾಗಿ ವಿಂಗಡಿಸಲಾಗಿದೆ.’ ಋಗ್ವೇದದ ಕಾಲಮಾನ ಕ್ರಿ.ಪೂ 2000 ದಿಂದ 1500. ಆರ್ಯರ ನಾಗರೀಕತೆಯ ಆರಂಭದ ಚಾರಿತ್ರಿಕ ವಿಚಾರಗಳ ಬಗ್ಗೆ ಋಗ್ವೇದವು ಹೆಚ್ಚು ವಿವರ ನೀಡುತ್ತದೆ. ಹಾಗಾಗಿ ಋಗ್ವೇದವು ಒಂದು ಚಾರಿತ್ರಿಕ ಆಧಾರ.

2) ಯಜುರ್ವೇದ : ಋಗ್ವೇದದ ಕೆಲವು ಸೂಕ್ತಗಳ ಸಂಗ್ರಹವೇ ಯಜುರ್ವೇದವಾಗಿದೆ. ಯಜುರ್ವೇದವನ್ನು ಶುಕ್ಲಯಜುರ್ವೇದ ಮತ್ತು ಕೃಷ್ಣ ಯಜುರ್ವೇದವೆಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಯಜುರ್ವೇದವು ಉತ್ತರ ವೈದಿಕ ಕಾಲದಲ್ಲಿ ರಚನೆಯಾಗಿದೆ.

3) ಸಾಮವೇದ : ಋಗ್ವೇದದ ಕೆಲವು ಸೂಕ್ತಗಳ ಸಂಗ್ರಹಣೆಯೇ ಸಾಮವೇದ. ಇವುಗಳನ್ನು ಗಾನಮಯವಾಗಿ ರಚಿಸಲಾಗಿದೆ. ಇದರಲ್ಲಿ 78 ಮಂತ್ರಗಳು ಮಾತ್ರ ಹೊಸದಾಗಿ ಸೇರ್ಪಡೆಯಾಗಿವೆ. ಸಾಮವೇದದ ಸೂಕ್ತಗಳನ್ನು ಪಠಿಸುವಾಗ ಗಾನಮಯವಾಗಿಯೇ ಪಠಿಸಬೇಕಾಗಿತ್ತು. ಇದರಲ್ಲಿ ಭಾರತೀಯ ಸಂಗೀತ ಶಾಸ್ತ್ರದ ಸಪ್ತಸ್ವರಗಳು ಪ್ರಯೋಗಿಸಲ್ಪಟ್ಟಿವೆ ಎಂಬುದು ಕೆಲವರ ಅನಿಸಿಕೆ, ಆರ್ಯರ ಸಂಗೀತ ಜ್ಞಾನದ ಬಗ್ಗೆ ಇದು ವಿವರ ನೀಡುತ್ತದೆ.

4) ಅಥರ್ವಣವೇದ : ವೇದಗಳಲ್ಲಿ ಕೊನೆಯದು ಅಥರ್ವಣವೇದ, ಅಥರ್ವಣವೇದವು ಪದ್ಯ ಮತ್ತು ಗದ್ಯ ಶೈಲಿಯಲ್ಲಿ ರಚಿಸಲ್ಪಟ್ಟಿದೆ. ಇದರಲ್ಲಿ ʻ6000′ ಮಂತ್ರಗಳಿವೆ.

ಇದರಲ್ಲಿರುವ ವಿಷಯ ಮತ್ತು ವಿಚಾರಗಳೆಂದರೆ:- ವಿವಾಹ ಪದ್ಧತಿ, ಶವಸಂಸ್ಕಾರ, ರಾಜನ ಆಯ್ಕೆ, ಗೃಹನಿರ್ಮಾಣ, ಮಾಯ, ಮಾಟ, ಮಂತ್ರ ಮತ್ತು ದುಷ್ಟಶಕ್ತಿಗಳನ್ನು ದೂರವಿಡುವ ತಂತ್ರಗಳು, ದೀರ್ಘಾಯುಕ್ರಮ, ಆರೋಗ್ಯಕ್ರಮ, ಸತ್ಯವ್ರತ, ಶ್ರೇಯಸ್ಸು, ರೋಗಗಳ ನಿವಾರಣೆ, ಔಷಧಿಗಳ ವಿವರ ಇನ್ನೂ ಅನೇಕ ವಿಷಯಗಳಿಂದ ಕೂಡಿರುವುದರಿಂದ ಇದಕ್ಕೆ ʻಬ್ರಹ್ಮವೇದ’ ಎಂದು ಕರೆಯಲಾಗುತ್ತಿತ್ತು.

ಬಿ) ವೇದಾಂಗಗಳು ಮತ್ತು ಉಪವೇದಗಳು : ವೇದಾಂಗಗಳು ಮತ್ತು ಉಪವೇದಗಳು ವೈದಿಕ ಸಾಹಿತ್ಯದ ಅನುಬಂಧ ಭಾಗಗಳಾಗಿವೆ. ವೇದಾಂಗಗಳು ಆರು. ಅವುಗಳೆಂದರೆ:- ಶಿಕ್ಷ, ಛಂದಸ್ಸು, ವ್ಯಾಕರಣ, ನಿರುಕ್ತ, ಕಲ್ಪ, ಜ್ಯೋತಿಷ್ಯ. ವೇದಾಂಗಗಳು ಧರ್ಮಸೂತ್ರ, ಧಾರ್ಮಿಕ ರೀತಿ ನಿಬಂಧನೆ, ಲೌಕಿಕ ಮತ್ತು ವ್ಯಾಪಾರ ಜೀವನಕ್ಕೆ ಸಂಬಂಧಿಸಿದ ನೀತಿ ನಿಯಮಗಳ ಬಗ್ಗೆ ತಿಳಿಸುತ್ತವೆ. ಉಪವೇದಗಳಾದ ಆಯುರ್ವೇದ, ಧನುರ್ವೇದ, ಶಿಲ್ಪ ಮತ್ತು ಗಂಧರ್ವ ವೇದಗಳು ಲೌಕಿಕ ವಿಷಯಗಳನ್ನು ಒಳಗೊಂಡಿವೆ.

ಸಿ) ಬ್ರಾಹ್ಮಣಗಳು : ವೇದಗಳ ಕಾಲದ ಕೆಲವು ಸೂಕ್ತಗಳನ್ನು ಗದ್ಯದ ರೂಪದಲ್ಲಿ ಸಂಗ್ರಹಿಸಿಲಾಗಿದೆ. ಅವುಗಳೇ ಬ್ರಾಹ್ಮಣಗಳು. ಐತ್ತರೇಯ ಬ್ರಾಹ್ಮಣ, ತೈತ್ತರೇಯ ಬ್ರಾಹ್ಮಣ, ಗೋಪಥ ಬ್ರಾಹ್ಮಣ ಮತ್ತು ಛಾಂದೋಗ್ಯ ಬ್ರಾಹ್ಮಣಗಳು ಪ್ರಮುಖವಾಗಿದೆ. ಇವುಗಳು ಉತ್ತರ ವೈದಿಕ ಕಾಲದಲ್ಲಿ ರಚಿಸಲ್ಪಟ್ಟಿದ್ದು ಆ ಕಾಲದ ಜನಜೀವನದ ಬಗ್ಗೆ ವಿವರ ನೀಡುತ್ತವೆ.

ಡಿ) ಅರಣ್ಯಕಗಳು : ಉತ್ತರ ವೈದಿಕಕಾಲದಲ್ಲಿ ಋಷಿಮುನಿಗಳು ಪ್ರಶಾಂತವಾದ ಅರಣ್ಯಗಳಲ್ಲಿ ಕುಳಿತು ರಚಿಸಿದ ಸೂಕ್ತಗಳೇ ಅರಣ್ಯಕಗಳು.

ಇ) ಉಪನಿಷತ್ತುಗಳು : ಅರಣ್ಯಕಗಳನ್ನು ಕಾಲಾನಂತರ ಉಪನಿಷತ್ತುಗಳೆಂದು ಹೆಸರಿಸಲಾಯಿತು. ಒಟ್ಟು ಹನ್ನೆರಡು ಉಪನಿಷತ್ತುಗಳಿವೆ. ಈಶ, ಕೇನ, ಕಠ, ಪ್ರಶ್ನೆ, ಮುಂಡಕ, ಮಾಂಡೂಕ್ಯ, ಐತ್ತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ, ಕೌಷೀತಕಿ, ಶ್ವೇತಾಶ್ವತರ, ಉಪನಿಷತ್ತುಗಳಲ್ಲಿ ಹಿಂದೂ ಧರ್ಮದ ಪರಮಸತ್ಯದ ಸ್ವರೂಪವು ವಿವರವಾಗಿ ನಿರೂಪಿತವಾಗಿದೆ. ಇ.ಇ.ಪಾರ್ಗಿಟರ್‌ರವರ ಪ್ರಕಾರ ‘ವಿಶ್ವದ ತತ್ವಜ್ಞಾನ ರಾಶಿಗೆ ಭಾರತ ಅರ್ಪಿಸಿರುವ ಅಮೂಲ್ಯವಾದ ಕೊಡುಗೆಗಳೇ ಉಪನಿಷತ್ತುಗಳು’.

ಆರ್ಯರ ಮೂಲ

ಆರ್ಯರ ಮೂಲ

ಪ್ರಾಚೀನ ಭಾರತದಲ್ಲಿನ ಎರಡು ಪ್ರಮುಖ ಸಂಸ್ಕೃತಿಗಳಲ್ಲಿ ವೈದಿಕ ಸಂಸ್ಕೃತಿಯು ಒಂದು ಸಿಂಧೂ ಸಂಸ್ಕೃತಿಯ ಪತನಾ ನಂತರ ಆರ್ಯರ ಸಂಸ್ಕೃತಿಯು ರೂಪುಗೊಂಡಿತು. ವೈದಿಕ ಸಂಸ್ಕೃತಿಯು ಕ್ರಿ.ಪೂ 2000 ದ ವೇಳೆಗೆ ಅಸ್ತಿತ್ವದಲ್ಲಿದ್ದಿರಬೇಕೆಂದು ಚರಿತ್ರಾಕಾರರು ಅಭಿಪ್ರಾಯಪಟ್ಟಿದ್ದಾರೆ.

ನಿರ್ಮಾತೃಗಳು : ವೈದಿಕ ಸಂಸ್ಕೃತಿಯ ನಿರ್ಮಾತೃಗಳು ಆರ್ಯರಾಗಿದ್ದರೆಂದು ತಿಳಿದುಬಂದಿದೆ. ಆದರೆ ಆರ್ಯರ ಮೂಲ ತುಂಬ ವಿವಾದಗ್ರಸ್ಥ ವಿಷಯವಾಗಿದೆ.

ಆರ್ಯರ ಮೂಲ ತೀವ್ರ ಭಿನ್ನಾಭಿಪ್ರಾಯಗಳಿಂದ ಕೂಡಿದೆ. ಮೂಲದ ಬಗ್ಗೆ ಕೆಳಕಂಡ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

1. ಮಧ್ಯ ಏಷ್ಯಾ ಆರ್ಯರ ಮೂಲಸ್ಥಾನ :

ಜರ್ಮನಿಯ ಖ್ಯಾತ ಭಾಷಾಶಾಸ್ತ್ರಜ್ಞ ‘ಪ್ರೊ|| ಮ್ಯಾಕ್ಸ್ ಮುಲ್ಲರ್’ ಈ ಅಭಿಪ್ರಾಯವನ್ನು ನೀಡಿದ್ದಾರೆ. ಇವರು ವೇದಗಳ ಭಾಷೆಗೂ ಮತ್ತು ಝಂಡ್ ಅವೆಸ್ತಾಗಳ ಭಾಷೆಗೂ ಹೋಲಿಕೆ ಇರುವುದರಿಂದ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಪರಸ್ಪರ ಭಾಷೆಗಳ ಶಬ್ದಗಳನ್ನು ಅದಲು-ಬದಲು ಮಾಡಿ ಶಬ್ದಾರ್ಥರೂಪವನ್ನು ಕಂಡುಹಿಡಿಯಬಹುದಾಗಿದೆ. ಏಷ್ಯಾಮೈನರ್‌ನ ಬೋಗಝ್ ಕಾಯ್ ಶಾಸನದಿಂದ ಇಂಡೋ-ಇರಾನಿಯನ್ ಗುಂಪು ಮದ್ಯವಿಷ್ಯಾದಲ್ಲಿ ಮೊದಲೇ ನೆಲೆಸಿತ್ತೆಂದು ತಿಳಿದುಬರುತ್ತದೆ.

* 16ನೇ ಶತಮಾನದಲ್ಲಿ ಭಾರತಕ್ಕೆ ಬಂದು ಗೋವಾದಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದ ಪ್ಲಾರೈಂಟೈನಿನ ವ್ಯಾಪಾರಿ ಫಿಲಿಫೊ ಸಸೆಟ್ಟಿ ಎಂಬುವನು ಸಂಸ್ಕೃತ ಮತ್ತು ಯೂರೋಪಿನ ಭಾಷೆಗಳ ನಡುವೆ ಸಾಮೀಪ್ಯವಿದೆಯೆಂದು ತಿಳಿಸಿದ್ದಾರೆ. ಉದಾ: ತಂದೆ, ತಾಯಿ, ಸಹೋದರ, ಗೋವು ಎಂಬ ಪದ ತೆಗೆದುಕೊಂಡಾಗ;

ಸಂಸ್ಕೃತ

ಪರ್ಶಿಯನ್

ಲ್ಯಾಟಿನ್

ಇಂಗ್ಲೀಷ್

ಗ್ರೀಕ್

ಪಿತೃ

ಪಿದರ್

ಪಾಟರ್

ಫಾದರ್

ಪೇಟರ್

ಮಾತೃ

ಮಾದರ್

ಮಾಟರ್

ಮದರ್

ಮೆಟರ್

ಭ್ರಾತೃ

ಭ್ರಾತರ್

ಪ್ರೆಟರ್

ಬ್ರದರ್

ಪ್ರೇಟರ್

ಗೋ

ಗೋಸ

ವಾಸ

ಕೌ

ವೋಸ

2. ಯೂರೋಪ್ ಆರ್ಯರ ಮೂಲಸ್ಥಾನ :

* ಜೋನ್ಸ್ ಮೊದಲಾದ ವಿದ್ವಾಂಸರು ಆರ್ಯರ ಮೂಲಸ್ಥಾನ ಆಗ್ನೆಯ ಯೂರೋಪ್ ಎಂದಿದ್ದಾರೆ.

* ಸರ್ ವಿರಿಯಂ ಜೋನ್ಸ್‌ರವರು 1786 ರಲ್ಲಿ ಗ್ರೀಕ್, ಲ್ಯಾಟನ್, ಗಾಥಿಕ್, ಕೆಲ್ಟಿಕ್ ಮತ್ತು ಪರ್ಷಿಯನ್ ಭಾಷೆಗಳಿಗೂ ಹಾಗೂ ಸಂಸ್ಕೃತ ಭಾಷೆಗಳ ನಡುವೆ ಸಾಮೀಪ್ಯವಿದೆಯೆಂದು ತಿಳಿಸಿದ್ದಾರೆ. ಅದೇ ರೀತಿ ಸರ್ ವಿಲಿಯಂ ಜೋನ್ಸ್ ರವರು ಗ್ರೀಕ್, ಲ್ಯಾಟಿನ್, ಗಾಥಿಕ್, ಕೆಲ್ವಿಕ್ ಮತ್ತು ಪರ್ಷಿಯನ್ ಭಾಷೆಗಳಿಗೂ ಹಾಗೂ ಸಂಸ್ಕೃತ ಭಾಷೆಗೂ ಸಾಮೀಪ್ಯವಿದ್ದು ಈ ಎಲ್ಲಾ ಭಾಷೆಗಳೂ ಒಂದೇ ಮೂಲದಿಂದ ಬಂದಿದೆಯೆಂದು ಪ್ರತಿಪಾದಿಸಿದ್ದಾರೆ.

ಇವರುಗಳ ಪ್ರಕಾರ ಈ ಭಾಷೆಗಳನ್ನಾಡುವ ಜನರು ಪ್ರಾರಂಭದಲ್ಲಿ ಒಂದೇ ಪ್ರದೇಶದಲ್ಲಿ ವಾಸವಾಗಿದ್ದು ಆನಂತರ ಯೂರೋಪ್ ಏಷ್ಯಾ ಮತ್ತಿತರ ಪ್ರದೇಶಗಳಿಗೆ ವಲಸೆ ಹೋದರು. ಇವರು ತಮ್ಮ ವಾದಕ್ಕೆ ಆಧಾರವಾಗಿ ಭಾಷೆಗಳಲ್ಲಿನ ಸಾಹಿತ್ಯದಲ್ಲಿ ಹವಾಗುಣ, ಋತುಗಳು ಪ್ರಾಣಿ, ಸಸ್ಯವರ್ಗ, ಮತ್ತು ಭೌಗೋಳಿಕಾಂಶಗಳ ವಿವರಣೆಯಲ್ಲಿ ಒಂದೇ ವಿಧವಾದ ಹೆಸರುಗಳನ್ನು ಬಳಸಿರುವುದನ್ನು ಪತ್ತೆ ಹಚ್ಚಿದ್ದಾರೆ, ಹೊಂಗೆಮರ, ಎಲ್ಲೊ, ಓಕ್ ಮರಗಳು ಮತ್ತು ಹಸು ಆರ್ಯರಿಗೆ ಚಿರಪರಿಚಿತವಾಗಿತ್ತು. ಆರ್ಯರಿಗೆ ಪರಿಚಿತವಾದ ಗಿಡಮರ ಪ್ರಾಣಿಗಳು ಆಗ್ನೆಯ ಯೂರೋಪಿನಲ್ಲಿ ವಿಪುಲವಾಗಿದ್ದುದು ಅಲ್ಲಿನ ಪಳೆಯುಳಿಕೆಗಳಿಂದ ದೃಡಪಟ್ಟಿದೆ.

3. ಹಂಗೇರಿ ಆರ್ಯರ ಮೂಲಸ್ಥಾನ :

ಡಾ|| ಪಿ.ಗೈಲ್ಸ್ ಮತ್ತು ಪ್ರೊ|| ಮ್ಯಾಕ್ ಡೊನೆಲ್ ರವರು ಸಹಭಾಷೆಯ ಸಾಮ್ಯತೆಯ ಆಧಾರದ ಮೇಲೆ ಆರ್ಯರ ಮೂಲಸ್ಥಾನವು ಹಂಗೇರಿ ಎಂದು ಪ್ರತಿಪಾದಿಸಿದ್ದಾರೆ. ಭಾಷೆಗಳ ಸಾಹಿತ್ಯದಲ್ಲಿ ಸಸ್ಯ, ಪ್ರಾಣಿ, ಹವಾಗುಣ, ಋತುಗಳನ್ನು ಒಂದೇ ಹೆಸರಿನಲ್ಲಿ ಗುರುತಿಸಿರುವುದನ್ನು ಇವರು ತಮ್ಮ ವಾದಕ್ಕೆ ಬಳಸಿಕೊಂಡಿದ್ದಾರೆ.

4. ದಕ್ಷಿಣ ರಷ್ಯಾ ಮೂಲಸ್ಥಾನ :

ಬ್ರಾಂಡನ್‌ ಸ್ಟೈನ್, ಪೂಕೊರನೆ, ನೆಹರಿಂಗ್, ವೊಲ್ಗಾರ್ ಹಾಗೂ ಇತ್ತೀಚಿಗೆ ಡಾ|| ಬಿ.ಕೆ.ಘೋಷ್ ರವರು ಭಾಷೆಗಳ ಆಧಾರದ ಮೇಲೆ ಮತ್ತು ಕೆಲವು ಪುರಾತನ ಅವಶೇಷಗಳ ಆಧಾರದ ಮೇಲೆ ರಷ್ಯಾದ ದಕ್ಷಿಣದ ಸೈಫಿ ಹುಲ್ಲುಗಾವಲು ಪ್ರದೇಶ ಆರ್ಯರ ಮೂಲ ನೆಲೆಯೆಂದು ಅಭಿಪ್ರಾಯಪಟ್ಟಿದ್ದಾರೆ.

5. ಆರ್ಕ್ಟಿಕ್ ಪ್ರದೇಶ ಮೂಲಸ್ಥಾನ :

ಬಾಲಗಂಗಾಧರ ತಿಲಕ್‌ ರವರು ತಮ್ಮ ʻಆರ್ಕ್ಟಿಕ್ ಹೋಂ ಆಫ್ ದಿ ವೇದಾಸ್’ ಎಂಬ ಕೃತಿಯಲ್ಲಿ ಆರ್ಕ್ಟಿಕ್ ಪ್ರದೇಶ ಅಥವಾ ಉತ್ತರ ದೈವಪ್ರದೇಶವು ಆರ್ಯರ ಮೂಲಸ್ಥಾನ ವೆಂದಿದ್ದಾರೆ. ಇದಕ್ಕೆ ಅವರು ನೀಡುವ ಆಧಾರಗಳೆಂದರೆ ವೈದಿಕ ಕೃತಿಗಳಲ್ಲಿನ ನಿಸರ್ಗ, ಸಸ್ಯ, ಗಿಡಮರಗಳ ಮೇಲಿನ ವಿವರಣೆಯು ಆರ್ಕ್ಟಿಕ್ ಪ್ರದೇಶಕ್ಕೆ ಹೋಲಿಕೆಯಾಗುತ್ತದೆ. ತಿಲಕ್‌ ರವರು ಋಗ್ವೇದ ಮತ್ತು ಜೆಂಡ್ ಅವೆಸ್ತಾಗಳನ್ನು ದೀರ್ಘವಾಗಿ ಅಧ್ಯಯನಮಾಡಿ ಈ ನಿರ್ಧಾರಕ್ಕೆ ಬಂದಿದ್ದಾರೆ.

6. ಟಿಬೆಟ್ ಮೂಲಸ್ಥಾನ :

ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ʻಸತ್ಯಾರ್ಥಪ್ರಕಾಶ’ ಕೃತಿಯಲ್ಲಿ ಆರ್ಯರ ಮೂಲಸ್ಥಾನ ಟಿಬೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಫ್.ಇ. ಪಾರ್ಗಿಟರ್ ರವರು ತಮ್ಮ ʻಏನ್ಸಿಯಂಟ್ ಇಂಡಿಯನ್ ಹಿಸ್ಟಾರಿಕಲ್ ಟ್ರಡಿಷನ್ಸ್’ ಎಂಬ ಕೃತಿಯಲ್ಲಿ ದಯಾನಂದ ಸರಸ್ವತಿಯವರ ವಾದವನ್ನು ಬೆಂಬಲಿಸಿದ್ದಾನೆ. ಏಕೆಂದರೆ ಟಿಬೆಟಿಯನ್ ರ ಆಚರಣೆಗೂ ಮತ್ತು ಆರ್ಯರ ಆಚರಣೆಗಳ ನಡುವೆ ಹೋಲಿಕೆ ಇದೆ. ಹೀಗೆ ಆರ್ಯರ ಮೂಲದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಮೇಲಿನ ಅಭಿಪ್ರಾಯಗಳನ್ನು ಅವಲೋಕಿಸಿದ ನಂತರ ಆರ್ಯರ ಮೂಲ ವಿದೇಶವೆಂದು ತಿಳಿದುಬರುತ್ತದೆ. ಆದರೆ ಆರ್ಯರು ಭಾರತ ದೇಶೀಯರು ಎಂಬ ವಾದವೂ ಸಹ ಇದೆ.

ಉತ್ತರ ವೈದಿಕ ಕಾಲ

ಉತ್ತರ ವೈದಿಕ ಕಾಲ

ಉತ್ತರ ವೈದಿಕ ಕಾಲವನ್ನು ಕೊನೆಯ ವೇದಗಳ ಕಾಲದ ನಾಗರೀಕತೆ ಎಂದು ಸಹ ಹೆಸರಿಸಲಾಗಿದೆ. ಉತ್ತರ ವೈದಿಕಕಾಲದ ಕಾಲಮಾನ ಕ್ರಿ.ಪೂ 1200 ರಿಂದ ಕ್ರಿ.ಪೂ 600, ಋಗ್ವೇದದ ಕಾಲದಲ್ಲಿ ಸಪ್ತಸಿಂಧು ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಆರ್ಯರ ಸಂಸ್ಕೃತಿ ಕ್ರಮೇಣ ಋಗ್ವೇದದ ಕಾಲದಲ್ಲಿ ವಿಸ್ತರಣೆಗೊಂಡಿತು. ಉತ್ತರ ವೈದಿಕಕಾಲದಲ್ಲಿ ಪೂರ್ವವೈದಿಕ ಕಾಲಕ್ಕಿಂತ ಭಿನ್ನವಾದ ಜನಜೀವನ ಕಂಡುಬಂದಿತು.

ಆಧಾರಗಳು : ಉತ್ತರ ವೈದಿಕಕಾಲದ ಆರ್ಯರ ಸಂಸ್ಕೃತಿಯ ಬಗ್ಗೆ ತಿಳಿಯಲು ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ, ಬ್ರಾಹ್ಮಣಗಳು, ಅರಣ್ಯಕಗಳು ಹಾಗೂ ಉಪನಿಷತ್ತುಗಳು ಸಹಕಾರಿಯಾಗಿವೆ.

ಆರ್ಯರ ಜನಜೀವನ : ಉತ್ತರ ವೈದಿಕಕಾಲದ ಆರ್ಯರ ಜನಜೀವನವು ರಾಜಕೀಯ ವ್ಯವಸ್ಥೆ, ಸಾಮಾಜಿಕ ಸ್ಥಿತಿ, ಆರ್ಥಿಕ ಜೀವನ, ಧಾರ್ಮಿಕ ವ್ಯವಸ್ಥೆ, ಶಿಕ್ಷಣ ಮತ್ತು ಸಾಹಿತ್ಯ ಹಾಗೂ ತತ್ವಜ್ಞಾನದ ಬೆಳವಣಿಗೆಯನ್ನು ಅವಲಂಭಿಸಿತ್ತು.

ಎ. ರಾಜಕೀಯ ವ್ಯವಸ್ಥೆ :

ಪೂರ್ವವೈದಿಕ ಕಾಲದ ರಾಜಕೀಯ ವ್ಯವಸ್ಥೆಯಲ್ಲಿ ಋಗ್ವೇದ ಕಾಲಕ್ಕಿಂತ ಭಿನ್ನವಾದ ಲಕ್ಷಣಗಳು ಕಂಡುಬಂದವು. ಅಂತಹ ಲಕ್ಷಣಗಳಲ್ಲಿ ಪ್ರಮುಖವಾದವುಗಳೆಂದರೆ :

ರಾಜ್ಯಗಳ ಏಳಿಗೆ :

ಪೂರ್ವವೈದಿಕ ಕಾಲದಲ್ಲಿದ್ದ ಬಣರಾಜ್ಯಗಳು ನಶಿಸಿ ಚಿಕ್ಕಪುಟ್ಟ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಂತಹ ರಾಜ್ಯಗಳಲ್ಲಿ ಪ್ರಮುಖವಾದವು ಕಾಶಿ, ಕೋಸಲ, ವಿದೇಹ, ಮಗಧ ಹಾಗೂ ಅಂಗರಾಜ್ಯಗಳು,

ಎ) ಕಾಶಿ : ಕಾಶಿಯು ಒಂದು ರಾಜ್ಯವಾಗಿತ್ತು. ಬ್ರಹ್ಮದತ್ತ ಸಂತತಿಯವರು ಕಾಶಿ ರಾಜ್ಯವಾಳುತ್ತಿದ್ದರು. ಕಾಶಿಯ ಪ್ರಖ್ಯಾತ ಅರಸರಲ್ಲಿ ಅಜಾತಶತ್ರು ಪ್ರಮುಖನಾಗಿದ್ದನು. ಅಜಾತಶತ್ರುವು ದಕ್ಷ ಅರಸನಾಗಿದ್ದುದಲ್ಲದೆ ವಿದ್ವಾಂಸರಿಗೆ ಅಪಾರ ಪ್ರೋತ್ಸಾಹ ನೀಡಿದ್ದನು. ಕ್ರಿ.ಪೂ 700 ರವೇಳೆಗೆ ಕಾಶಿಯು ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಕ್ರಮೇಣ ಕಾಶಿಯು ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿತ್ತು.

ಬಿ) ಕೋಸಲ: ಕೋಸಲ ಸಹ ಒಂದು ಪ್ರಮುಖ ರಾಜ್ಯವಾಗಿತ್ತು. ಆದರೆ ಅಯೋದ್ಯ ಅವರ ಆರಂಭದ ರಾಜಧಾನಿಯಾಗಿದ್ದು ಸಾಕೇತ ಮತ್ತು ಶ್ರಾವಸ್ಥಿ ಆನಂತರದ ರಾಜದಾನಿಗಳು. ಪುರಾಣಗಳು 31 ಇಕ್ಷಾಕು ಅರಸರು ಆಳ್ವಿಕೆ ನಡೆಸಿದರೆಂದು ತಿಳಿಸುತ್ತವೆ. ಶುದ್ಧೋದನ, ಸಿದ್ದಾರ್ಥ, ರಾಹುಲ ಪ್ರಮುಖರಾಗಿದ್ದರು. ಕಾಶಿ ಮತ್ತು ಕೋಸಲದ ಮಧ್ಯ ರಾಜಕೀಯ ಪ್ರಭುತ್ವ ಸ್ಥಾಪನೆಗಾಗಿ ಹೋರಾಟ ನಡೆದು ಕೋಸಲ ಪ್ರಬಲವಾಯಿತು.

ಸಿ) ವಿದೇಹ : ಕೋಸಲದ ಪೂರ್ವಕ್ಕೆ ವಿದೇಹ ರಾಜ್ಯವಿದ್ದು, ಮಿಥೆಲೆಯು ಕೋಸಲದ ರಾಜಧಾನಿಯಾಗಿತ್ತು. ವಿದೇಹದ ಅರಸ ಜನಕ ಕ್ಷತ್ರಿಯನಾಗಿದ್ದರೂ ಬ್ರಹ್ಮ ವಿದ್ಯೆಯ ಪ್ರವೀಣವೆನಿಸಿದ್ದನು. ಅವನನ್ನು ಜನಕ ಮಹರ್ಷಿ ಎಂದೇ ಕರೆಯಲಾಗುತ್ತಿತ್ತು. ಕೋಸಲ ಮತ್ತು ವಿದೇಹ ರಾಜ್ಯಗಳ ಮಧ್ಯೆ ವೈವಾಹಿಕ ಬಾಂಧವ್ಯವಿತ್ತು.

ಡಿ) ಮಗಧ : ಕೋಸಲ ಮತ್ತು ವಿದೇಹ ರಾಜ್ಯಗಳ ಪೂರ್ವಕ್ಕೆ ಮಗಧರಾಜ್ಯವಿತ್ತು. ವೈದಿಕ ಸಾಹಿತ್ಯ ಕೃತಿಗಳು ಮಗಧರು ದಕ್ಷಿಣ ಬಿಹಾರದಲ್ಲಿ ಪ್ರಾಬಲ್ಯಕ್ಕೆ ಬಂದರೆಂದು ತಿಳಿಸುತ್ತವೆ. ಯಜುರ್ವೇದ ಮತ್ತು ಅಥರ್ವಣ ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಂತೆ ಮಗಧ ದೊರೆಗಳು ಕ್ಷತ್ರಿಯ ಮತ್ತು ವೈಶ್ಯ ಮಿಶ್ರಜಾತಿಗೆ ಸೇರಿದವರಾಗಿದ್ದರು. ಇವರು ವೈದಿಕ ಸಂಸ್ಕೃತಿಯನ್ನು ಅನುಸರಿಸುತ್ತಿರಲಿಲ್ಲ.

ರಾಜನ ಆಡಳಿತ ಮತ್ತು ಅಧಿಕಾರಗಳು :

ರಾಜನು ಅಪರಿಮಿತವಾದ ಆಡಳಿತಾಧಿಕಾರವನ್ನು ಪಡೆದಿದ್ದನು. ಸಾಮಾನ್ಯ ಆಡಳಿತನಿರ್ವಹಣೆ ಮತ್ತು ನ್ಯಾಯಿಕ ಅಧಿಕಾರಗಳು ರಾಜನಿಗಿದ್ದವು. ರಾಜನ ಆಡಳಿತಾತ್ಮಕ ಅಧಿಕಾರಗಳನ್ನು ಪ್ರಶ್ನಿಸುವಂತಿರಲಿಲ್ಲ.

ಎ) ಅಧಿಕಾರಿಗಳು:-ರಾಜನ ರಾಜ್ಯಾಡಳಿತದಲ್ಲಿ ಸಹಕರಿಸಲು ಪುರೋಹಿತ, ಗ್ರಾಮಿಣಿ ಮತ್ತು ಸೇನಾನಿ ಗಳಿದ್ದರು ಅಲ್ಲದೆ ಭಾಗದುಗ(ಕರವಸೂಲಿಗಾರ) ಸಾರಥಿಸಮ್‌ ಗ್ರಹಿತ್ತಿ (ಕೋಶಾಧಿಕಾರಿ) ಪಲಗಲ(ಆಸ್ಥಾನಿಕ) ಎಂಬ ಅಧಿಕಾರಿಗಳ ವಿವರಗಳು ದೊರೆತಿವೆ.

ಬಿ) ಸಭಾ ಮತ್ತು ಸಮಿತಿಗಳು : ಪೂರ್ವ ವೈದಿಕ ಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲಿಯೂ ಸಭಾ ಮತ್ತು ಸಮಿತಿಗಳು ಅಸ್ತಿತ್ವದಲ್ಲಿದ್ದವು. ಎ.ಎಲ್.ಬಾಷಂ ʻಎ ವಂಡರ್ ದಟ್ ವಾಸ್ ಇಂಡಿಯಾ’ ದಲ್ಲಿ ಅಭಿಪ್ರಾಯಪಡುವಂತೆ ʻಸಭಾ ಮತ್ತು ಸಮಿತಿಗಳು ರಾಜ್ಯಾಡಳಿತದಲ್ಲಿ ಸಹಕರಿಸುತ್ತಿದ್ದವು’.

ಸಿ) ಅಶ್ವಮೇಧಯಾಗ, ರಾಜಸೂಯ ಯಾಗಗಳು:- ರಾಜರುಗಳು ವಿಶಾಲ ರಾಜ್ಯವನ್ನು ಸ್ಥಾಪಿಸಿದ್ದರಿಂದ ಅದರ ಜ್ಞಾಪಕಾರ್ಥವಾಗಿ ರಾಜಸೂಯಯಾಗ

ಬಿ. ಸಾಮಾಜಿಕ ಸ್ಥಿತಿಗತಿ :

ಉತ್ತರ ವೈದಿಕಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಅಂತಹ ಪ್ರಮುಖ ಲಕ್ಷಣಗಳೆಂದರೆ.

ಎ) ಅವಿಭಕ್ತಕುಟುಂಬ ಪದ್ಧತಿ : ಪೂರ್ವ ವೈದಿಕಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲೂ ಅವಿಭಕ್ತ ಕುಟುಂಬ ಪದ್ಧತಿಯು ಮುಂದುವರೆಯಿತು.

ಬಿ) ಸ್ತ್ರೀಯರ ಸ್ಥಾನ : ಉತ್ತರ ವೈದಿಕಕಾಲದಲ್ಲಿ ಸ್ತ್ರೀಯರ ಸ್ಥಾನವು ಗೌಣವಾದುದಾಗಿರಲಿಲ್ಲ. ಕೌಟುಂಬಿಕ ವ್ಯವಹಾರಗಳಲ್ಲಿ ಸ್ತ್ರೀಯರು ಪಾಲ್ಗೊಳ್ಳುತ್ತಿದ್ದರು.

ಸಿ) ಉಡುಪು ಮತ್ತು ಆಭರಣಗಳು : ಪೂರ್ವ ವೈದಿಕಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲಿ ಸ್ತ್ರೀ-ಪುರುಷರು ಹತ್ತಿ ಮತ್ತು ಉಣ್ಣೆಯ ಉಡುಪುಗಳನ್ನು ಧರಿಸುತ್ತಿದ್ದರು. ಈ ಕಾಲದಲ್ಲಿಯೂ ಸ್ತ್ರೀ-ಪುರುಷರು ಆಭರಣಪ್ರಿಯರಾಗಿದ್ದರು.

ಡಿ) ಆಹಾರ, ಪಾನೀಯಗಳು : ಮಿಶ್ರ ಆಹಾರ ಪದ್ಧತಿ ಅಸ್ತಿತ್ವದಲ್ಲಿತ್ತು. ಸಸ್ಯಹಾರ ಮತ್ತು ಮಾಂಸಾಹಾರಗಳು ಬಳಕೆಯಲ್ಲಿದ್ದವು. ʻಸೋಮರಸ ಮತ್ತು ಸುರೆ’ ಎಂಬ ಮತ್ತಿನ ಪಾನೀಯಗಳನ್ನು ಸೇವಿಸುತ್ತಿದ್ದರು.

ಇ) ವಿವಾಹ ಪದ್ಧತಿ : ಉತ್ತರ ವೈದಿಕಕಾಲದಲ್ಲಿ 8 ಬಗೆಯ ವಿವಾಹ ಪದ್ಧತಿಗಳು ಅಸ್ತಿತ್ವದಲ್ಲಿದ್ದವೆಂದು ಧರ್ಮಸೂತ್ರಗಳು ವಿವರನೀಡುತ್ತವೆ. ಅವುಗಳೆಂದರೆ ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಗಾಂಧರ್ವ, ಅಸುರ, ರಾಕ್ಷಸ ಮತ್ತು ಪೈಶಾಚ. ವಿಧವಾ ವಿವಾಹ ಪದ್ಧತಿಯಲ್ಲಿ ನಿರ್ಬಂಧದ ವಿವಾಹ ಅಸ್ತಿತ್ವದಲ್ಲಿತ್ತು.

ಎಫ್) ಜಾತಿ ಪದ್ಧತಿ : ಉತ್ತರ ವೈದಿಕಕಾಲದಲ್ಲಿನ ಸಾಮಾಜಿಕ ವ್ಯವಸ್ಥೆಯ ಒಂದು ಪ್ರಧಾನ ಲಕ್ಷಣವೆಂದರೆ ಜಾತಿ ಪದ್ಧತಿ ಅಸ್ತಿತ್ವಕ್ಕೆ ಬಂದದ್ದು. ಋಗ್ವೇದದ 10ನೇ ಮಂಡಲದಲ್ಲಿ ಜಾತಿ ಪದ್ಧತಿಯ ಉಗಮ ಮತ್ತು ಜಾತಿಗಳ ನಿರ್ದಿಷ್ಟ ಕಸುಬುಗಳ ಬಗ್ಗೆ ವಿವರವಿದೆ. ವರ್ಣಪದ್ಧತಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಜಾತಿಗಳಿದ್ದವು. ಬ್ರಾಹ್ಮಣರು ಬ್ರಹ್ಮನ ಮುಖದಿಂದಲೂ, ಕ್ಷತ್ರಿಯರು ಬ್ರಹ್ಮನ ಭುಜಗಳಿಂದಲೂ, ವೈಶ್ಯರು ಬ್ರಹ್ಮನ ತೊಡೆಗಳಿಂದಲೂ ಮತ್ತು ಶೂದ್ರರು ಬ್ರಹ್ಮನ ಪಾದಗಳಿಂದಲೂ ಜನಿಸಿದವರೆಂದು ಉಲ್ಲೇಖಗಳಿವೆ. ಬ್ರಾಹ್ಮಣರು-ವೇದಾಧ್ಯಯನವನ್ನು, ಕ್ಷತ್ರಿಯರು ರಾಜ್ಯರಕ್ಷಣೆಯನ್ನು, ವೈಶ್ಯರು ವ್ಯಾಪಾರ ವಾಣಿಜ್ಯವನ್ನೂ, ಶೂದ್ರರು ಮೇಲಿನ ಮೂರು ವರ್ಗಗಳ ಸೇವೆಯನ್ನು ಮಾಡಬೇಕಾಗಿತ್ತು.

ಜಿ) ಆಶ್ರಮ ವ್ಯವಸ್ಥೆ : ಉತ್ತರ ವೈದಿಕಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿನ ಒಂದು ಪ್ರಮುಖ ಲಕ್ಷಣವೆಂದರೆ ವರ್ಣಾಶ್ರಮ ವ್ಯವಸ್ಥೆಯ ಅಸ್ತಿತ್ವ, ಅವುಗಳೆಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಾಶ್ರಮಗಳು.

ಬ್ರಹ್ಮಚರ್ಯ : ಈ ಆಶ್ರಮವನ್ನು ಅವಲಂಬಿಸಿದ ಬಾಲಕ ಉಪನಯನ ಸಂಸ್ಕಾರವಾದ ಮೇಲೆ ಯೋಗ್ಯವಾದ ಗುರುವಿನ ಬಳಿ ಶಿಕ್ಷಣವನ್ನು ಪಡೆಯಬೇಕಾಗಿತ್ತು. ಶಿಕ್ಷಣವನ್ನು ಆಶ್ರಮದಲ್ಲಿ ಪಡೆಯಬೇಕಾಗಿತ್ತು. 8 ರಿಂದ 25 ವರ್ಷಗಳವರೆಗೆ ಶಿಕ್ಷಣವನ್ನು ಪಡೆಯಬಹುದಾಗಿತ್ತು. ಶಿಕ್ಷಣದ ಜೊತೆಗೆ ಆಶ್ರಮದ ಕೆಲಸಕಾರ್ಯಗಳನ್ನು ಸಹ ನಿರ್ವಹಿಸಬೇಕಾಗಿತ್ತು. ಸೂಕ್ತ ಶಿಕ್ಷಣ ಪಡೆದ ನಂತರ ಗುರುವಿನ ಆಶೀರ್ವಾದ ಪಡೆದು ಗುರುಕಾಣಿಕೆ ಸಲ್ಲಿಸಿ ಆಶ್ರಮವನ್ನು ತ್ಯಜಿಸಬೇಕಾಗಿತ್ತು.

ಗೃಹಸ್ಥಾಶ್ರಮ : ಗೃಹಸ್ಥಾಶ್ರಮನ್ನು ಅವಲಂಬಿಸಿದ ವ್ಯಕ್ತಿಯ ಶಿಕ್ಷಣದ ನಂತರ ಗೃಹಸ್ಥಾಶ್ರಮ ಪ್ರವೇಶಿಸಬೇಕಾಗಿತ್ತು. ಗೃಹಸ್ಥಾಶ್ರಮದಲ್ಲಿ 40 ಸಂಸ್ಕಾರ ವಿಧಿಗಳನ್ನು ಆಚರಿಸುತ್ತ ಪಿತೃಋಣ, ಸಮಾಜದ ಋಣ ಮತ್ತು ದೇವಋಣ ಗಳನ್ನು ತೀರಿಸಬೇಕಾಗಿತ್ತು. ಗೃಹಸ್ಥಾಶ್ರಮವು ಶಿಸ್ತುಬದ್ಧ ಜೀವನವಾಗಿತ್ತು.

ಸನ್ಯಾಸಾಶ್ರಮ : ಗೃಹಸ್ಥಾಶ್ರಮದ ನಂತರ 50 ವರ್ಷ ದಾಟಿದವರು ಸನ್ಯಾಸಾಶ್ರಮವನ್ನು ಪ್ರವೇಶಿಸಬೇಕಿತ್ತು. ಐಹಿಕ ಭೋಗಗಳನ್ನು ತ್ಯಜಿಸಿ, ಒಂದೆಡೆ ವಾಸಿಸದೆ ಧ್ಯಾನಾಸಕ್ತನಾಗಿ ವೇದಮಂತ್ರಗಳ ಪಠಿಸುತ್ತಾ ಸಂಧ್ಯಾವಿಧಿಗಳನ್ನು ನೆರವೇರಿಸಿಕೊಂಡು ಭಿಕ್ಷಾನ್ನದಿಂದ ಹಸಿವನ್ನು ನೀಗಿಸಿಕೊಳ್ಳಬೇಕಾಗಿತ್ತು.

ವಾನಪ್ರಸ್ಥಾಶ್ರಮ : ಸನ್ಯಾಸಾಶ್ರಮದನಂತರ ಅಂತಿಮವಾಗಿ ವಾನಪ್ರಸ್ಥಾಶ್ರಮವನ್ನು ಅವಲಂಬಿಸಬಹುದಿತ್ತು. ವಾನಪ್ರಸ್ಥಾಶ್ರಮದ ವ್ಯಕ್ತಿಗಳು ಕಾಡುಗಳಲ್ಲಿ ಸಂಚರಿಸುತ್ತ ನಾರುಡಿಗೆಯನ್ನು ಧರಿಸಿ ಹಣ್ಣು-ಗೆಡ್ಡೆ-ಗೆಣಸುಗಳನ್ನು ತಿಂದು ಹಸಿವನ್ನು ನೀಗಿಸಬೇಕಾಗಿತ್ತು. ಅಂತಿಮವಾಗಿ ನಿರಾಹಾರಿಯಾಗಿ ಧ್ಯಾನಾಸಕ್ತನಾಗಿ ಇಹಲೋಕವನ್ನು ತ್ಯಜಿಸಬೇಕಾಗಿತ್ತು.

ಆಶ್ರಮ ವ್ಯವಸ್ಥೆಯು ಕಡ್ಡಾಯವಾಗಿ ಅಸ್ತಿತ್ವದಲ್ಲಿರಲಿಲ್ಲ. ಆಶ್ರಮ ವ್ಯವಸ್ಥೆಯ ಅನುಸರಣೆಯಿಂದ ಐಹಿಕ ಜೀವನದಲ್ಲಿ ಸದ್ಧತಿ ಮತ್ತು ಮೋಕ್ಷ ದೊರೆಯುವುದೆಂಬ ನಂಬಿಕೆ ಇತ್ತು. ಬ್ರಾಹ್ಮಣರು 4 ಆಶ್ರಮಗಳನ್ನೂ ಅವಲಂಬಿಸಿದ್ದರೆ ಉಳಿದ ವರ್ಗಗಳು ಕೇವಲ ಗೃಹಸ್ಥಾಶ್ರಮವನ್ನು ಮಾತ್ರ ಅವಲಂಬಿಸಿದ್ದರು.

ಸಿ. ಆರ್ಥಿಕ ಸ್ಥಿತಿಗತಿ :

ಉತ್ತರ ವೈದಿಕಕಾಲದ ಆರ್ಥಿಕ ಸ್ಥಿತಿಗತಿಯು ಪೂರ್ವವೈದಿಕಕಾಲಕ್ಕಿಂತ ಸ್ವಲ್ಪ ಭಿನ್ನತೆಯಿಂದ ಕೂಡಿತ್ತು. ಪ್ರಮುಖ ಕಸುಬುಗಳು ಮತ್ತು ಉಪಕಸುಬುಗಳು ಕಂಡುಬರುತ್ತಿದ್ದವು.

ಎ) ವ್ಯವಸಾಯ : ಒಂದು ಪ್ರಧಾನ ಕಸುಬಾಗಿತ್ತು. ಗಂಗಾ ನದಿಯ ಬಯಲಿನಲ್ಲಿ ‘ರಾಜಸಾರಿ’ ಎಂಬ ಭತ್ತವನ್ನು ಹೇರಳವಾಗಿ ಬೆಳೆಯುತ್ತಿದ್ದರು. ಭೂಮಿಯನ್ನು ಉಳುಮೆ ಮಾಡಲು, ಭಾರವಾದ ನೇಗಿಲನ್ನು ಎಳೆಯಲು 24 ಎತ್ತುಗಳನ್ನು ಉಪಯೋಗಿಸುತ್ತಿದ್ದರು. ಭತ್ತ, ಗೋದಿ, ಬಾರ್ಲಿ, ಬೀನ್ಸ್, ಎಣ್ಣೆ ಬೀಜಗಳನ್ನು ಬೆಳೆಯುತ್ತಿದ್ದರು

ಬಿ) ವ್ಯಾಪಾರ : ಆಂತರಿಕ ಮತ್ತು ಅಂತರಾಷ್ಟ್ರೀಯ ವ್ಯಾಪಾರಗಳೆರಡು ಅಸ್ತಿತ್ವದಲ್ಲಿದ್ದವು. ಆಂತರಿಕ ವ್ಯಾಪಾರವು ದಕ್ಷಿಣ ಭಾರತದೊಂದಿಗೂ ಅಂತರಾಷ್ಟ್ರೀಯ ವ್ಯಾಪಾರವು ಬ್ಯಾಬಿಲೋನಿಯಾ ಮೊದಲಾದ ದೇಶಗಳೊಡನೆ ನಡೆಯುತ್ತಿತ್ತು. ಸಾಗರೋತ್ತರ ವ್ಯಾಪಾರವು ಅಭಿವೃದ್ಧಿಗೊಂಡಿತ್ತು.

ಸಿ) ಪಶುಪಾಲನೆ : ಪಶುಪಾಲನೆಯು ಮತ್ತೊಂದು ಪ್ರಧಾನ ಕಸುಬಾಗಿತ್ತು. ಹಸುವು ಪವಿತ್ರ ಮತ್ತು ಪೂಜಾರ್ಹ ವಾದುದಾಗಿತ್ತು. ಒಬ್ಬ ವ್ಯಕ್ತಿಯ ಶ್ರೀಮಂತಿಕೆಯನ್ನೂ ಅವನು ಹೊಂದಿರುವ ಹಸುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತಿತ್ತು. ಕುರಿ, ಮೇಕೆ, ಕುದುರೆ ಮೊದಲಾದ ಪ್ರಾಣಿಗಳನ್ನು ಸಾಕುತ್ತಿದ್ದರು

ಡಿ) ಉಪಕಸುಬುಗಳು : ನೂಲುವುದು, ನೇಯ್ದೆ, ಕುಂಬಾರಿಕೆ, ಮರಗೆಲಸ, ಗಾರೆಕೆಲಸ, ಆಭರಣಗಳ ತಯಾರಿಕೆ, ಕಸೂತಿಕೆಲಸ, ಚಾಪೆ ಮತ್ತು ಬುಟ್ಟಿ ಹೆಣೆಯುವುದು ಮೊದಲಾದ ಹಲವು ಉಪಕಸುಬುಗಳಿದ್ದವು.

ಉತ್ತರ ವೈದಿಕಕಾಲದಲ್ಲಿ ಭಿನ್ನವಾದ ಧಾರ್ಮಿಕ ಜೀವನವು ಕಂಡುಬರುತ್ತಿತ್ತು.

ಡಿ. ಧಾರ್ಮಿಕ ಸ್ಥಿತಿ :

ಎ) ಯಾಗಯಜ್ಞಗಳ ಪ್ರಾಬಲ್ಯ : ಉತ್ತರ ವೈದಿಕಕಾಲದಲ್ಲಿ ಯಾಗ ಯಜ್ಞಗಳು ಹೆಚ್ಚು ಬೆಳವಣಿಗೆಗೊಂಡವು, ಪುರೋಹಿತರ ಸಂಖ್ಯೆ 16ಕ್ಕೇರಿತ್ತು. ಜನಸಾಮಾನ್ಯರು ಯಾಗ ಯಜ್ಞಗಳ ಬಗ್ಗೆ ಒಲವು ತೋರಿಸಿದರು. ಯಾಗ ಯಜ್ಞಗಳ ಆಚರಣೆ ಮತ್ತು ಮಂತ್ರೋಚ್ಛಾರಣೆಯಿಂದಾಗಿ ಪುರೋಹಿತರ ಸ್ಥಾನಮಾನವು ಮೇಲಕ್ಕೇರಿತ್ತು. ವೈದಿಕ ಯುಗದ ಕೊನೆಯ ವೇಳೆಗೆ ಜನಸಾಮಾನ್ಯರು ಯಾಗ ಯಜ್ಞಗಳು ಆರ್ಥಿಕವಾಗಿ ಹೊರೆಯಾದವುಗಳೆಂದು ನಿರ್ಧರಿಸಿದ್ದರು.

ಬಿ) ಏಕದೇವತಾ ಆರಾಧನಾ ಪದ್ಧತಿ : ಉತ್ತರ ವೈದಿಕಕಾಲದಲ್ಲಿ ಬಹುದೇವತಾ ಆರಾಧನಾ ಪದ್ಧತಿಯು ಅಂತ್ಯಗೊಂಡು ಏಕದೇವತಾ ಆರಾಧನಾ ಪದ್ಧತಿಯು ಅಸ್ತಿತ್ವಕ್ಕೆ ಬಂದಿತ್ತು. ಜೀವಾತ್ಮನೂ, ಸಕಲ ಚರಾಚರವಸ್ತುಗಳ ನಿಯಂತ್ರಕನೂ ಆದ ‘ದೇವನೊಬ್ಬನೇ’ ಎಂಬ ಭಾವನೆ ಮೂಡಿಬಂದಿತು. ಹೀಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಅವರ ಪತ್ನಿಯರಾದ ಸರಸ್ವತಿ, ಲಕ್ಷ್ಮೀ, ಪಾರ್ವತಿಯರ ಆರಾಧನೆಯೂ ಕಂಡುಬಂದಿತ್ತು. ಹೀಗಾಗಿ ವೈದಿಕ ಯುಗದ ಅಂತ್ಯದ ವೇಳೆಗೆ ವೈದಿಕ ಧರ್ಮಕ್ಕೆ ಬದಲು ಹೊಸ ಮತಗಳ ಉದಯಕ್ಕೆ ಪ್ರೋತ್ಸಾಹ ದೊರಕಿತು.

ಇ. ಶಿಕ್ಷಣ ಮತ್ತು ಸಾಹಿತ್ಯ :

ವೈದಿಕ ಯುಗದ ಕೊನೆಯ ವೇಳೆಗೆ ಗುರುಕುಲಾಶ್ರಮದ ಶಿಕ್ಷಣವು ಪ್ರಧಾನವಾಗಿ ಕಂಡುಬಂದಿತು. ಉಪನಯನ ಸಂಸ್ಕಾರವಾದ ಮೇಲೆ ಯೋಗ್ಯ ಗುರುಗಳ ಬಳಿ ಆಶ್ರಮದಲ್ಲಿ ಶಿಕ್ಷಣವನ್ನು ಪಡೆಯಬೇಕಿತ್ತು. 8 ರಿಂದ 25 ವರ್ಷಗಳವರೆಗೆ ಶಿಕ್ಷಣ ಪಡೆಯಬಹುದಾಗಿತ್ತು. ಶಿಕ್ಷಣಾರ್ಥಿಯು ಶಿಕ್ಷಣದ ಜೊತೆಗೆ ಆಶ್ರಮದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗಿತ್ತು. ಪುರಾಣಗಳು, ಧರ್ಮಶಾಸ್ತ್ರಗಳು, ವೇದಗಳು, ವೇದಾಂಗಗಳು, ಚರಿತ್ರೆ, ವೈದ್ಯಶಾಸ್ತ್ರ ಮೊದಲಾದ ವಿಭಿನ್ನ ವಿಷಯಗಳ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು. ಪೂರ್ಣ ಶಿಕ್ಷಣ ಪಡೆದ ವಿದ್ಯಾರ್ಥಿ ಗುರುವಿನ ಆಶೀರ್ವಾದ ಪಡೆದು ಆಶ್ರಮ ತ್ಯಜಿಸಬೇಕಾಗಿತ್ತು.

ಸಾಹಿತ್ಯದಲ್ಲಿ ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದಗಳು, ಬ್ರಾಹ್ಮಣಗಳು, ಅರಣ್ಯಕಗಳು ಉಪನಿಷತ್‌ಗಳು ಹಾಗೂ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ರಚನೆಗೊಂಡವು. [ಸೂಚನೆ: ಉತ್ತರ ವೈದಿಕ ಕಾಲದ ಸಾಹಿತ್ಯದ ಬಗ್ಗೆ ಹಿಂದೆಯೇ ವಿವರಿಸಲಾಗಿದೆ. ‘ಆರ್ಯ ಸಂಸ್ಕೃತಿಯ ರಚನೆಗಿರುವ ಮೂಲಾಧಾರಗಳು’ ಎಂಬ ಪ್ರಾರಂಭಿಕ ಭಾಗವನ್ನು ಗಮನಿಸಿ]

ಎಫ್. ತತ್ವಜ್ಞಾನ :

ಉತ್ತರ ವೈದಿಕಕಾಲದಲ್ಲಿ ತತ್ವಜ್ಞಾನವು ಬೆಳವಣಿಗೆ ಹೊಂದಿತ್ತು. ಜನಕ ಮಹರ್ಷಿ ರಾಜನಾಗಿದ್ದನಲ್ಲದೆ ಪ್ರಖ್ಯಾತ ತತ್ವಜ್ಞಾನಿಯೂ ಆಗಿದ್ದನು. ಆಗಾಗ್ಗೆ ತನ್ನ ರಾಜ್ಯದಲ್ಲಿ ತತ್ವಜ್ಞಾನದ ಸಭೆಗಳನ್ನು ನಡೆಸುತ್ತಿದ್ದನು. ವಿಶ್ವಾವರ, ಮೈತ್ರೇಯಿ ಮತ್ತು ಗಾರ್ಗಿ ಎಂಬ ಖ್ಯಾತ ಮಹಿಳಾ ವಿದ್ವನ್ಮಣಿಗಳು ಈ ಸಭೆಗೆ ಹಾಜರಾಗಿ ತಾತ್ವಿಕ ಚಿಂತನೆ ನಡೆಸುತ್ತಿದ್ದರು. ಇ.ಇ.ಪಾರ್ಗಿಟರ್ ಅಭಿಪ್ರಾಯದಂತೆ ‘ವಿಶ್ವದ ತತ್ವಜ್ಞಾನರಾಶಿಗೆ ಭಾರತದ ಅತ್ಯಮೂಲ್ಯವಾದ ಕೊಡುಗೆಗಳೆಂದರೆ ಉಪನಿಷತ್‌ಗಳು’.

ಹೀಗೆ ವೈದಿಕಯುಗದ ಉತ್ತರಾರ್ದದ ಜನಜೀವನದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡು ಬರುತ್ತವೆ.

ಪೂರ್ವವೇದ ಮತ್ತು ಉತ್ತರ ವೇದಗಳ ಕಾಲದ ನಡುವಿನ ತುಲನೆ

ಪೂರ್ವವೇದ ಮತ್ತು ಉತ್ತರ ವೇದಗಳ ಕಾಲದ ನಡುವಿನ ತುಲನೆ

ಹೋಲಿಕೆಗಳು (ಸಮಾನ ಅಂಶಗಳು) :

  1. ರಾಜಕೀಯವಾಗಿ ಹೋಲಿಕೆ : ಅನುವಂಶಿಕ ರಾಜಪ್ರಭುತ್ವ, ರಾಜನ ಕರ್ತವ್ಯಗಳು, ಸಭಾ ಮತ್ತು ಸಮಿತಿಗಳ ಅಸ್ತಿತ್ವ ಉತ್ತರ ವೇದಗಳ ಕಾಲದಲ್ಲೂ ಮುಂದುವರೆಯಿತು.
  2. ಸಾಮಾಜಿಕವಾಗಿ ಹೋಲಿಕೆ : ಅವಿಭಕ್ತ ಕೌಟುಂಬಿಕ ವ್ಯವಸ್ಥೆ, ಪಿತೃ ಪ್ರಧಾನ ಕುಟುಂಬ, ಗಂಡು ಸಂತಾನ ಇಷ್ಟ ಪಡುವುದು, ಆಹಾರ ಪಾನೀಯ, ಮನರಂಜನೆ, ಉಡುಗೆ ತೊಡುಗೆ, ಪೂರ್ವ ವೇದಗಳ ಕಾಲದಲ್ಲಿದ್ದಂತೆ ಉತ್ತರ ವೇದಗಳ ಕಾಲದಲ್ಲೂ ಮುಂದುವರೆಯಿತು.
  3. ಆರ್ಥಿಕವಾಗಿ ಹೋಲಿಕೆ : ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆ, ಕಬ್ಬಿಣದ ಬಳಕೆ, ವ್ಯಾಪಾರ ವಾಣಿಜ್ಯ, ಕೈಗಾರಿಕೆ ಪೂರ್ವ ವೇದಗಳ ಕಾಲದಲ್ಲಿ ಇದ್ದಂತೆ ಉತ್ತರ ವೇದಗಳ ಕಾಲದಲ್ಲಿ ಮುಂದುವರೆಯಿತು.
  4. ಧಾರ್ಮಿಕವಾಗಿ ಹೋಲಿಕೆ : ಹಸು ಪೂಜನೀಯವಾಗಿತ್ತು, ಪುರೋಹಿತರ ಪ್ರಾಬಲ್ಯವಿತ್ತು. ಜಾತಿ ಪದ್ಧತಿ, ಧಾರ್ಮಿಕ ಆಚರಣೆಗಳು ಎಂದಿನಂತೆ ಉತ್ತರ ವೇದಗಳ ಕಾಲದಲ್ಲಿ ಮುಂದುವರೆಯಿತು.

ವ್ಯತ್ಯಾಸಗಳು

ಉತ್ತರ ವೇದಗಳ ಕಾಲ

ಉತ್ತರ ವೈದಿಕ ಕಾಲ

1.

ರಾಜನು ಬಲಿಷ್ಯನಾಗಿರಲಿಲ್ಲ, ಆತ ಧರ್ಮ ಮತ್ತು ಕಾನೂನುಗಳಿಗೆ ತಲೆ ಭಾಗಬೇಕಿತ್ತು.

1.

ರಾಜನ ಬಲಿಷ್ಠನಾಗಿದ್ದನು. ಆತ ದೈವಾಂಶ ಸಂಭೂತನೆಂದು ಪರಿಗಣಿಸಲ್ಪಟ್ಟಿದ್ದನು.

2.

ಪುರೋಹಿತನ ಸ್ಥಾನಮಾನ ಉತ್ತಮವಾಗಿತ್ತು. ಪುರೋಹಿತಶಾಹಿ ಪ್ರಾಬಲ್ಯ ಇದ್ದಿತು.

2.

ಪುರೋಹಿತನ ಸ್ಥಾನಮಾನ ಕುಗ್ಗಿತು. ರಾಜತ್ವ ಪ್ರಾಬಲ್ಯ ಪಡೆಯಿತು.

3.

ಸಭಾ ಮತ್ತು ಸಮಿತಿಗಳು ಪ್ರಾಬಲ್ಯವಾಗಿದ್ದವು. ಅವು ರಾಜನನ್ನು ನಿಯಂತ್ರಿಸಿದ್ದವು.

3.

ಸಭಾ ಮತ್ತು ಸಮಿತಿಗಳ ಪ್ರಾಬಲ್ಯ ಕುಗ್ಗಿತು. ಕೇವಲ ರಾಜನ ಸಲಹಾ ಅಂಗಗಳಾಗಿ ಉಳಿದವು.

4.

ಜಾತಿಪದ್ಧತಿ ಅಸ್ತಿತ್ವದಲ್ಲಿರಲಿಲ್ಲ ಕರ್ತವ್ಯವಾಗಿತ್ತು.

4.

ಜಾತಿಪದ್ಧತಿ ಅಸ್ತಿತ್ವದಲ್ಲಿತ್ತು. ಅದು ತುಂಬಾ ಸಂಕೀರ್ಣದತ್ತ ಸಾಗಿತ್ತು.

5.

ರಾಜನು ನಿರಂಕುತನಾಗಿರಲಿಲ್ಲ. ಪ್ರಜಾ ಕಲ್ಯಾಣ ಅವನ ಆದ್ಯ ಕರ್ತವ್ಯವಾಗಿತ್ತು.

5.

ರಾಜನು ನಿರಂಕುಶನಾದನು. ಅವನು ದೈವತ್ವ ಸ್ಥಾನಕ್ಕೇರಿದನು.

6.

ಸ್ತ್ರೀಯರಿಗೆ ಗೌರವ ಸ್ಥಾನಮಾನಗಳಿದ್ದವು.

6.

ಸ್ತ್ರೀಯರ ಸ್ಥಾನಮಾನಗಳು ಕುಗ್ಗಿದವು.

7.

ಗ್ರಾಮೀಣ ಜೀವನ ಪ್ರಧಾನವಾಗಿತ್ತು.

7.

ನಗರ ಜೀವನ ಸಾಮಾನ್ಯವಾಯಿತು.

8.

ಅಂತರಜಾತಿ ವಿವಾಹ, ಬಾಲ್ಯ ವಿವಾಹ, ಬಹುಪತ್ನಿತ್ವಗಳು ಇರಲಿಲ್ಲ

8.

ಇವೆಲ್ಲವೂ ರೂಢಿಗೆ ಬಂದವು.

9.

9. ಇಂದ್ರ, ವರುಣ, ಮಿತ್ರ, ಅಗ್ನಿ, ಸೂರ್ಯ ದೇವತೆಗಳ ಜನಪ್ರಿಯತೆ, ಮೂರ್ತಿಪೂಜೆ ಇರಲಿಲ್ಲ.

9.

ಬ್ರಹ್ಮ, ವಿಷ್ಣು, ಶಿವ ದೇವರುಗಳ ಜನಪ್ರಿಯತೆ, ದೇವತಾವತಾರಗಳಲ್ಲಿ ನಂಬಿಕೆ ಉಂಟಾಯಿತು.

10.

ಯಜ್ಞಗಳ ಆಚರಣೆ ಸರಳವಾಗಿತ್ತು. ಧರ್ಮಾಚರಣೆ ಸುಲಭವಾಗಿತ್ತು.

10.

ಯಜ್ಞಗಳ ಆಚರಣೆ ದುಬಾರಿಯಾಯಿತು. ಈಗ ವೈದಿಕ ಧರ್ಮ ತುಂಬಾ ಜಟಿಲವಾಯಿತು.

11.

ವೃತ್ತಿ ಸಂಘಗಳು ಇರಲಿಲ್ಲ

11.

ವೃತ್ತಿ ಸಂಘಗಳು ಇದ್ದವು.

12.

ರಾಜನಿಗೆ ನೆರವಾಗುತ್ತಿದ್ದ ಅಧಿಕಾರಿಗಳ ಸಂಖ್ಯೆ ಕಡಿಮೆ ಇದ್ದಿತು.

12.

ರಾಜನಿಗೆ ನೆರವಾಗುತ್ತಿದ್ದ ಅಧಿಕಾರಿಗಳ ಸಂಖ್ಯೆ ಹೆಚ್ಚಾಯಿತು.

13.

ಆಂತರಿಕ ವ್ಯಾಪಾರ ಜನಪ್ರಿಯವಾಯಿತು.

13.

ವಿದೇಶಿ ವ್ಯಾಪಾರ ಜನಪ್ರಿಯವಾಯಿತು.

14.

ಮಂತ್ರ, ತಂತ್ರ, ಭೂತಗಳಲ್ಲಿ ನಂಬಿಕೆ ಇರಲಿಲ್ಲ.

14.

ಇವುಗಳಲ್ಲಿ ನಂಬಿಕೆ ಬೆಳೆಯಿತು.

15.

ಬ್ರಾಹ್ಮಣರ ಪ್ರಾಬಲ್ಯ ಇತ್ತು.

15.

ಕ್ಷತ್ರಿಯರ ಪ್ರಾಬಲ್ಯವಿತ್ತು.

16.

ಮಾಂಸಹಾರ ವಿರಳವಾಗಿತ್ತು.

16.

ಮಾಂಸಹಾರ ಸಾಮಾನ್ಯವಾಯಿತು.

17.

ಸಪ್ತಸಿಂಧೂ ಆರರ ನೆಲೆ.

17.

ಆರ್ಯಾವರ್ತ ಆರ್ಯರ ನೆಲೆ.

ಪೂರ್ವವೈದಿಕ ಕಾಲ

ಪೂರ್ವವೈದಿಕ ಕಾಲ

ಪೂರ್ವವೈದಿಕ ಕಾಲವನ್ನು ಋಗ್ವೇದದ ಕಾಲವೆಂತಲೂ ಹೆಸರಿಸಲಾಗಿದೆ. ಋಗ್ವೇದದ ಕಾಲಮಾನದ ಬಗ್ಗೆ ತೀವ್ರ ಭಿನ್ನಾಭಿಪ್ರಾಯಗಳಿವೆ. ವಿಭಿನ್ನ ಕಾಲಮಾನಗಳ ಬಗ್ಗೆ ಅವಲೋಕಿಸಿದ ಆರ್.ಸಿ.ಮಜುಂದಾ‌ರ್ ರವರು ಕ್ರಿ.ಪೂ 2000-1500 ಋಗ್ವೇದದ ಕಾಲವೆಂದು ಅಭಿಪ್ರಾಯಪಟ್ಟಿದ್ದಾರೆ.  ಋಗ್ವೇದದ ಕಾಲದ ಆರ್ಯರ ಜನಜೀವನವನ್ನು ಈ ಕೆಳಕಂಡ ಅಂಶಗಳಲ್ಲಿ ಅವಲೋಕಿಸಬಹುದು.

ಎ) ರಾಜಕೀಯ ವ್ಯವಸ್ಥೆ:
ಬಣ ರಾಜ್ಯಗಳು:

ಪೂರ್ವವೈದಿಕ ಕಾಲದ ಆರಂಭದಲ್ಲಿ ಬಣರಾಜ್ಯಗಳು ಸ್ಥಾಪನೆಯಾದವು. ಒಂದೊಂದು ಬಣಕ್ಕೆ ಒಂದೊಂದು ರಾಜ್ಯವಿತ್ತು. ಭರತ, ಕುರು, ಯದು ಮೊದಲಾದ ಬಣಗಳ ಹೆಸರುಗಳಿವೆ. ಬಣ ರಾಜ್ಯಗಳ ಮಧ್ಯೆ ಅಧಿಕಾರ ಸ್ಥಾಪನೆಗಾಗಿ ಹೋರಾಟಗಳು ನಡೆಯುತ್ತಿದ್ದವು. ಹಲವಾರು ಗ್ರಾಮಗಳನ್ನೊಳಗೊಂಡ ಘಟಕವನ್ನು ವಿಷಯ ವೆಂದು ವಿಷಯದ ಅಧಿಪತಿಯನ್ನು ವಿಷಯಪತಿ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಸಣ್ಣರಾಜ್ಯಗಳು ಏಳಿಗೆಗೆ ಬಂದವು. ರಾಜ್ಯಗಳನ್ನು ರಾಷ್ಟ್ರಎಂದು ಸಂಭೋದಿಸಿ, ಅದರ ಮುಖ್ಯಸ್ಥನನ್ನು ರಾಜನ್ ಎಂದು ಕರೆಯಲಾಗುತಿತು.

ರಾಜನ ಆಯ್ಕೆ:

ರಾಜನ ಆಯ್ಕೆಯು ಸಾಮಾನ್ಯವಾಗಿ ವಂಶಪಾರಂಪರ್ಯವಾಗಿತ್ತು. ಆದರೆ ಕೆಲವೊಮ್ಮೆ ರಾಜನನ್ನು ಚುನಾಯಿಸಲಾಗುತ್ತಿತ್ತು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ʻಐತ್ತರೇಯ’ ಬ್ರಾಹ್ಮಣದಲ್ಲಿ ರಾಜತ್ವದ ಉಗಮದ ಬಗ್ಗೆ ಉಲ್ಲೇಖವಿದ್ದು ʻಮನುಷ್ಯನ ದಿನನಿತ್ಯದ ಅವಶ್ಯಕತೆ ಮತ್ತು ಸೈನಿಕ ರಕ್ಷಣಾ ಅವಶ್ಯಕತೆಗಳಿಗಾಗಿ ರಾಜತ್ವ ಉದಯವಾಯಿತು ಎಂದಿದೆ’.

ಮಂತ್ರಿಗಳು ಮತ್ತು ಪ್ರಮುಖ ಅಧಿಕಾರಿಗಳು:

ರಾಜನಿಗೆ ಆಡಳಿತದಲ್ಲಿ ಸಹಕರಿಸಲು ಮಂತ್ರಿಪರಿಷತ್ ಇತ್ತು. ಇದರಲ್ಲಿರುವ ಮಂತ್ರಿಗಳು ಯೋಗ್ಯ ಮತ್ತು ಅನುಭವವುಳ್ಳ, ಶುದ್ಧ ಹಾಗೂ ಮೇಲ್ಮಟ್ಟದ ಚಾರಿತ್ರ್ಯ ಹೊಂದಿದವರಾಗಿದ್ದರು. ಬಂಡಿ ಚಲಿಸಲು ಚಕ್ರಗಳ ಅಗತ್ಯತೆ ಇರುವಂತೆ ಮಂತ್ರಿಗಳು ರಾಜನಿಗೆ ಅಗತ್ಯವಾಗಿ ಬೇಕಿತ್ತು. ಅಲ್ಲದೆ ಪುರೋಹಿತ, ಗ್ರಾಮಿಕ ಮತ್ತು ಸೇನಾನಿ ಎಂಬ ಆಡಳಿತಾಧಿಕಾರಿಗಳಿದ್ದರು.

ಪುರೋಹಿತನು ರಾಜ್ಯದ ಶ್ರೇಯಸ್ಸಿಗಾಗಿ ಪೌರೋಹಿತ್ಯದ ಕಾರ್ಯ ನಿರ್ವಹಿಸುತ್ತಿದ್ದನು. ಸೇನಾನಿಯು ರಾಜ್ಯದ ರಕ್ಷಣಾಕಾರ್ಯ ಮಾಡುತ್ತಿದ್ದನು. ಗ್ರಾಮಿಣಿಯು ಗ್ರಾಮೀಣ ಆಡಳಿತವನ್ನು ನೋಡಿಕೊಳ್ಳುತ್ತಿದ್ದನು.

ಸಭಾ ಮತ್ತು ಸಮಿತಿ:

ವೈದಿಕ ರಾಜ್ಯದ ವ್ಯವಹಾರಗಳಲ್ಲಿ ಪ್ರಸಿದ್ದ ಸಭೆಗಳಾದ ಸಭಾ ಮತ್ತು ಸಮಿತಿಗಳು ಭಾಗವಹಿಸುತ್ತಿದ್ದವು. ಸಭಾ ಮತ್ತು ಸಮಿತಿಗಳು ರಾಜನಿಗೆ ಸಲಹೆ, ಸೂಚನೆ ನೀಡುತ್ತಿದ್ದವು. ಎ.ಎಲ್.ಬಾಷ್ಯಂ ರವರು ತಮ್ಮ ಕೃತಿಯಾದ ‘ಎ ವಂಡರ್ ದಟ್ ವಾಸ್ ಇಂಡಿಯಾ’ ಎಂಬುದರಲ್ಲಿ ಸಭಾ ಮತ್ತು ಸಮಿತಿಗಳ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ಸಭಾ ಮತ್ತು ಸಮಿತಿಗಳನ್ನು ʻಸಭಾಪತಿ’ ಎಂಬುವನು ಅಧ್ಯಕ್ಷತೆವಹಿಸುತ್ತಿದ್ದನು. ಸಭಾ ಮತ್ತು ಸಮಿತಿಗಳ ನಿರ್ದಿಷ್ಟ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸುವುದು ಕಷ್ಟಸಾದ್ಯ.

ಬಿ) ಸಾಮಾಜಿಕ ಜೀವನ:

ಪೂರ್ವವೈದಿಕ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಹಲವಾರು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ.

ವಿಭಕ್ತ ಕುಟುಂಬ (Nuclear family ):

ಋಗ್ವೇದದ ಪ್ರಾರಂಭದಲ್ಲಿ ʻವಿಭಕ್ತ ಕುಟುಂಬ’ವಿತ್ತು. ಇಲ್ಲಿ ತಂದೆ-ತಾಯಿ ಮತ್ತು ಮಕ್ಕಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಋಗ್ವೇದದ ಅಂತ್ಯದ ಕಾಲದಲ್ಲಿ ಆಸ್ತಿಯ ಕಲ್ಪನೆ ಬೆಳೆದಂತೆ ಅವಿಭಕ್ತಕುಟುಂಬ ವ್ಯವಸ್ಥೆ ಬೆಳೆದು ಬಂದಿದ್ದು ಕಂಡುಬರುತ್ತದೆ.

ಪಿತೃ ಪ್ರಧಾನ ಕುಟುಂಬ:

ಸಾಮಾಜಿಕ ವ್ಯವಸ್ಥೆಯ ಮತ್ತೊಂದು ಪ್ರಮುಖ ಲಕ್ಷಣ ಪಿತೃಪ್ರಧಾನ ಕುಟುಂಬದ ರಚನೆ. ತಂದೆಯ ಮರಣಾನಂತರ ಹಿರಿಯ ಮಗ ಅಧಿಕಾರಕ್ಕೆ ಬರುತ್ತಿದ್ದನು.

ಸ್ತ್ರೀಯರ ಸ್ಥಾನ:

ಪುರುಷನಂತೆ ಸ್ತ್ರೀಗೂ ಸಮಾಜದಲ್ಲಿ ಪ್ರಮುಖ ಸ್ಥಾನವಿತ್ತು. ಸ್ತ್ರೀಯು ಪುರುಷನಂತೆ ವೇದಾಧ್ಯಯನ ಮಾಡಲು ಅವಕಾಶವಿತ್ತು. ಲೋಪಮುದ್ರ, ವಿಶ್ವಾವರ, ಅಪಾಲ ಮೊದಲಾದ ಸ್ತ್ರೀಯರು ವಿದ್ವಾಂಸರಾಗಿದ್ದರು.

ಜಾತಿಪದ್ಧತಿ:

ಜಾತಿಪದ್ಧತಿಯು ಅಸ್ತಿತ್ವದಲ್ಲಿತ್ತೇ ಅಥವಾ ಇಲ್ಲವೆ ಎಂಬುದರ ಬಗ್ಗೆ ಖಚಿತವಾಗಿ ಹೇಳುವುದು ಕಷ್ಟ. ಈ ಕಾಲದಲ್ಲಿ ಕ್ಷತ್ರ ಮತ್ತು ವಿಶ ಎಂಬ ಎರಡು ಜಾತಿಗಳಿರಬೇಕೆಂದು ಅಭಿಪ್ರಾಯ.

ಉಡುಪು ಮತ್ತು ಆಭರಣಗಳು:

ಹತ್ತಿ ಮತ್ತು ಉಣ್ಣೆಯ ಬಟ್ಟೆಗಳನ್ನು ಧರಿಸುತ್ತಿದ್ದರು.  -ಪುರುಷರ ಉಡುಪುಗಳು ಮೇಲುಹೊದಿಕೆ ಮತ್ತು ಕೆಳಹೊದಿಕೆ ಎಂದು ವಿಂಗಡಿಸಲಾಗಿತ್ತು. ಸ್ತ್ರೀ-ಪುರುಷರು ಆಭರಣಪ್ರಿಯರಾಗಿದ್ದರು. ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಿದ ವಿವಿಧ ಆಭರಣಗಳನ್ನು ಹಾಕಿಕೊಳ್ಳುತ್ತಿದ್ದರು.

ವಿವಾಹ ಪದ್ಧತಿ:

ಏಕಪತ್ನಿತ್ವ ಮತ್ತು ಬಹುಪತ್ನಿತ್ವ ಪದ್ಧತಿಗಳೆರಡು ಅಸ್ತಿತ್ವದಲ್ಲಿದ್ದವು. ರಾಜರು ಬಹುಪತ್ನಿ ವ್ರತಸ್ಥರಾಗಿದ್ದರು. ವರದಕ್ಷಿಣೆ ಸಾಮಾನ್ಯ ಸಂಗತಿಯಾಗಿದ್ದು ಕೆಲವೊಮ್ಮೆ ವಧುದಕ್ಷಿಣೆ ಪದ್ಧತಿಯು ಕಂಡುಬರುತ್ತಿತ್ತು. ವಿವಾಹದ ಪ್ರಮುಖ ಉದ್ದೇಶಗಳಲ್ಲಿ ಪುರುಷ ಸಂತಾನ ಪಡೆಯುವುದು ಪ್ರಮುಖವಾಗಿತ್ತು.

ಆಹಾರ ಪಾನೀಯಗಳು:

ಮಿಶ್ರ ಆಹಾರ ಪದ್ಧತಿ ಕಂಡುಬರುತಿತ್ತು. ಗೋದಿ, ಬಾರಿ, ಬೆಣ್ಣೆ, ತುಪ್ಪ, ಸಸ್ಯಹಾರಗಳಾದರೆ ಕುರಿ, ಮೇಕೆ, ಕೋಳಿ ಮೊದಲಾದ ಪ್ರಾಣಿಗಳನ್ನು ಮಾಂಸಹಾರಕ್ಕಾಗಿ ಬಳಸುತ್ತಿದ್ದರು. ಸೋಮರಸ ಮತ್ತು ಸುರೆ ಎಂಬ ಮತ್ತಿನ ಪಾನೀಯಗಳನ್ನು ಸೇವಿಸುತ್ತಿದ್ದರು.

ಮನರಂಜನೆ:

ಮನರಂಜನೆಗಾಗಿ ಒಳಾಂಗಣ ಮತ್ತು ಹೊರಾಂಗಣದ ಆಟಗಳನ್ನು ಆಡುತ್ತಿದ್ದರು. ಚದುರಂಗ, ಚೌಕಾಬಾರ ಒಳಾಂಗಣದ ಆಟಗಳಾಗಿದ್ದರೆ, ಬೇಟೆಯಾಡುವುದು ರಥದ ಜೂಜು, ಕುದುರೆಯ ಜೂಜು ಮೊದಲಾದವು ಹೊರಾಂಗಣದ ಆಟಗಳಾಗಿದ್ದವು.

ಸಿ) ಆರ್ಥಿಕ ಜೀವನ:

ಋಗ್ವೇದ ಕಾಲದ ಆರ್ಯನ್ನರ ಆರ್ಥಿಕ ವ್ಯವಸ್ಥೆಯು ಕೆಲವು ಪ್ರಮುಖ ಕಸುಬುಗಳನ್ನು ಹಲವಾರು ಉಪಕಸುಬುಗಳನ್ನು ಆಧರಿಸಿತ್ತು. ಪ್ರಮುಖ ಕಸುಬುಗಳು: ವ್ಯವಸಾಯ, ವ್ಯಾಪಾರ, ಪಶುಪಾಲನೆ ಪ್ರಧಾನ ಕಸುಬುಗಳಾಗಿದ್ದವು.

ವ್ಯವಸಾಯ:

ಇದು ಋಗ್ವೇದ ಕಾಲದ ಪ್ರಧಾನ ಕಸುಬುಗಳಲ್ಲೊಂದು. ಕಾಡನ್ನು ಕಡಿದು ವ್ಯವಸಾಯ ಯೋಗ್ಯ ಭೂಮಿಯನ್ನು ನಿರ್ಮಿಸಿಕೊಂಡಿದ್ದರು. ಭೂಮಿಯ ಉಳುಮೆಗೆ ನೇಗಿಲನ್ನು ಬಳಸುತ್ತಿದ್ದರು ಹೋರಿಗಳು ಬಳಕೆ ಯಲ್ಲಿದ್ದವು. ಬಾರ್ಲಿಯು ಪ್ರಧಾನ ಬೆಳೆಯಾಗಿತ್ತು. ಇದನ್ನು ʻಯವ’ ಎಂದು ಹೆಸರಿಸಲಾಗಿದೆ.

ಪಶುಪಾಲನೆ:

ಈ ಕಾಲದ ಮತ್ತೊಂದು ಪ್ರಧಾನ ಕಸುಬು ʻಹಸುವು’ ಪವಿತ್ರವಾದುದಾಗಿತ್ತು. ಹಸುವನ್ನು ʻಅಘ್ನʼ ಎಂದು ಕರೆಯುತ್ತಿದ್ದರು. ಗೋಮಾಂಸ ಸೇವನೆ ನಿಷೇದಿಸಲ್ಪಟ್ಟಿತ್ತು. ಗೋವನ್ನು ಕೊಂದರೆ ಕೊಂದ ವ್ಯಕ್ತಿಯನ್ನು ಮರಣದಂಡನೆಗೆ ಗುರಿಪಡಿಸುತ್ತಿದ್ದರು, ಕುದುರೆ ಬಳಕೆ ಹೆಚ್ಚಾಗಿದ್ದು ಕತ್ತೆ, ಕುರಿ, ಮೇಕೆಗಳನ್ನು ಸಹ ಸಾಕುತ್ತಿದ್ದರು.

ವ್ಯಾಪಾರ:

ಆಂತರಿಕ ಮತ್ತು ಅಂತರಾಷ್ಟ್ರೀಯ ವ್ಯಾಪಾರ ಅಸ್ತಿತ್ವದಲ್ಲಿತ್ತು. ವ್ಯಾಪಾರದಲ್ಲಿ ವಸ್ತು ವಿನಿಮಯ ಪದ್ಧತಿ ಅಸ್ತಿತ್ವದಲ್ಲಿದ್ದು ಹಸುವನ್ನು ವಿನಿಮಯಕ್ಕಾಗಿ ಬಳಸುತ್ತಿದ್ದರು. ಎತ್ತಿನ ಗಾಡಿ, ರಥ ಮತ್ತು ದೋಣಿಗಳನ್ನು ವಸ್ತುಗಳ ಸಾಗಾಣಿಕೆಗೆ ಬಳಸುತ್ತಿದ್ದರು. ಭೂಸಾರಿಗೆ ಮತ್ತು ಜಲಸಾರಿಗೆಗಳೆರಡು ಅಭಿವೃದ್ಧಿಹೊಂದಿದ್ದವು.

ಉಪಕಸುಬುಗಳು:

ವೈದಿಕಸಂಸ್ಕೃತಿಯ ಜನರು ಜೀವನ ನಿರ್ವಹಣೆಗಾಗಿ ಹಲವಾರು ಉಪಕಸುಬುಗಳನ್ನು ಅವಲಂಬಿಸಿದ್ದರು. ನೂಲುವುದು, ನೇಯ್ಗೇ, ಆಭರಣಗಳ ತಯಾರಿಕೆ, ಕರಕುಶಲ ಕಲೆ ಮೊದಲಾದವು ಉಪಕಸುಬುಗಳಾಗಿದ್ದವು.

ಡಿ) ಧಾರ್ಮಿಕ ಜೀವನ:

ಪೂರ್ವ ವೈದಿಕಕಾಲದ ಆರ್ಯರಧಾರ್ಮಿಕ ಜೀವನವು ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿತ್ತು.

ಪ್ರಕೃತಿಯ ಆರಾಧನೆ:

ಆರ್ಯರ ಪ್ರಾರಂಭಿಕ ಧಾರ್ಮಿಕ ಜೀವನದಲ್ಲಿ ಪ್ರಕೃತಿಯ ಆರಾಧನೆಯು ಪ್ರಮುಖವಾಗಿ ಕಂಡುಬರುತ್ತದೆ. ಪ್ರಕೃತಿಯಲ್ಲಿ ಬರುವ 33 ದೇವಾನುದೇವತೆಗಳನ್ನು ಆರಾಧಿಸುತ್ತಿದ್ದರು. ಇಂತಹ ದೇವತೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದರು.

1.ಭೂದೇವತೆಗಳು

2. ಸ್ವರ್ಗದ ದೇವತೆಗಳು

3.ಆಂತರಿಕ್ಷ ದೇವತೆಗಳು 

ಆರಾಧನೆಯ ಪ್ರಮುಖ ದೇವಾನುದೇವತೆಗಳು:

ಇಂದ್ರ, ಅಗ್ನಿ, ವಾಯು, ಪೃಥ್ವಿ, ವರುಣ, ಉಷಸ್ ಇವುಗಳು ಪ್ರಧಾನವಾದ ದೇವಾನುದೇವತೆಗಳಾಗಿದ್ದರು.

ಯಾಗ ಯಜ್ಞಾದಿಗಳು:

ಪೂರ್ವ ವೈದಿಕಕಾಲದ ಧಾರ್ಮಿಕ ವ್ಯವಸ್ಥೆಯಲ್ಲಿನ ಬೆಳವಣಿಗೆಯ ಒಂದು ಪ್ರಮುಖ ಅಂಶವೆಂದರೆ ಯಾಗಯಜ್ಞಾದಿಗಳು ಹುಟ್ಟಿಕೊಂಡಿದ್ದು. ಪೂರ್ವವೈದಿಕಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಪುರೋಹಿತರ ವಿಶೇಷ ಪೂಜೆಗಳು ಮತ್ತು ಅಂತಹ ಪೂಜಾ ಸಮಯದಲ್ಲಿ ಮಂತ್ರಗಳ ಪಠಣ ವ್ಯವಸ್ತೆಯೇ ಯಾಗಯಜ್ಞಗಳಾಗಿ ರೂಪುಗೊಂಡವು. ಯಾಗ ಯಜ್ಞಗಳನ್ನು ಆಚರಿಸುವುದರಿಂದ ಇಹ ಜೀವನದಲ್ಲಿ ನೆಮ್ಮದಿಯು, ಸದ್ಗತಿಯು, ಮೋಕ್ಷವು ದೊರೆಯುತ್ತದೆ ಎಂಬ ನಂಬಿಕೆ ಪ್ರಬಲವಾಯಿತು. ಇದರ ಹಿನ್ನೆಲೆಯಲ್ಲಿ ಯಾಗಯಜ್ಞಗಳು ಪ್ರಧಾನವಾಗಿ ಕಂಡುಬಂದವು. ಇಂತಹ ಯಾಗ ಯಜ್ಞಗಳು ಜನಸಾಮಾನ್ಯರಿಗೆ ಅಧಿಕ ಆರ್ಥಿಕ ಹೊರೆಯಾಗಿದ್ದರೂ ಅವುಗಳ ಆಚರಣೆ ಅನಿವಾರ್ಯವೆನಿಸಿತ್ತು. ಪೂರ್ವ ವೈದಿಕ ಕಾಲದಲ್ಲಿ ಏಳು ಮಂದಿ ಪುರೋಹಿತರು ಧಾರ್ಮಿಕ ವ್ಯವಸ್ಥೆಯಲ್ಲಿ ಪ್ರಧಾನಪಾತ್ರ ವಹಿಸುತ್ತಿದ್ದರು.

ಬಲಿಪದ್ಧತಿ:

ಯಾಗ ಯಜ್ಞಗಳ ಆಚರಣೆಯ ನಂತರ ಪ್ರಾಣಿಗಳನ್ನು ಇಷ್ಟದೇವತೆಗಳಿಗೆ ಬಲಿಯಾಗಿ ನೀಡುತ್ತಿದ್ದರು. ಗೋಹತ್ಯೆಯಿಂದಾಗಿ ಗೋಸಂಪತ್ತು ಕ್ಷೀಣಿಸಿತು. ಯಜ್ಞದ ಕಾಲದಲ್ಲಿ ಬಂದ ಅತಿಥಿಗಳನ್ನು ಗೊಗ್ನ ಎಂದು ಕರೆಯುತಿದ್ದರು. ‘ಗೊಗ್ನ’ ಎಂದರೆ ಗೋವನ್ನು ಸೇವಿಸುವವನು ಎಂದರ್ಥ. ಕ್ರಮೇಣ ಗೋಭಕ್ಷಣೆ ಮಹಾಪಾಪವೆಂದು ಅವುಗಳ ರಕ್ಷಣೆಗಾಗಿ ಧಾರ್ಮಿಕ ವಿಧಿಯನ್ನೇ ಮಾಡಿದರು.

ಋಗ್ವೇದ ಕಾಲದ ಸಾಹಿತ್ಯ:

ಋಗ್ವೇದ ಕಾಲದಲ್ಲಿ ‘ಋಗ್ವೇದ’ ಸಾಹಿತ್ಯ ಮಾತ್ರ ರಚನೆಯಾಯಿತು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಹಿಂದೆಯೇ ನೀಡಲಾಗಿದೆ. ‘ಆರ್ಯ ಸಂಸ್ಕೃತಿಯ ರಚನೆಗಿರುವ ಮೂಲಾಧಾರಗಳು’ ಎಂಬ ಭಾಗವನ್ನು ಗಮನಿಸಿ.

ವಿಜ್ಞಾನ:

ಋಗ್ವೇದ ಕಾಲದ ಜನರಿಗೆ ವೈದ್ಯಕೀಯ ಪದ್ಧತಿಯ ಪರಿಚಯವಿತ್ತು. ಅನೇಕ ರೋಗಗಳು ಮತ್ತು ಅವುಗಳಿಗೆ ಬಳಸುವ ಗಿಡಮೂಲಿಕೆ ಔಷಧಿಗಳು ಹಾಗೂ ರೋಗ ನಿವಾರಣಾ ಮಂತ್ರ-ತಂತ್ರಗಳ ಬಗ್ಗೆ ವಿವರಗಳು ದೊರೆತಿವೆ. ಕ್ಷಯ, ಕುಷ್ಟ, ಕಾಮಾಲೆ, ಆಮಶಂಕೆ, ಅರಳು ಮರಳು ಮೊದಲಾದ ಅನೇಕ ರೋಗಗಳ ಬಗ್ಗೆ ಋಗ್ವೇದದಲ್ಲಿ ವಿವರಗಳಿವೆ. ಔಷಧಿಯ ಜೊತೆಗೆ ಶಸ್ತ್ರ ಚಿಕಿತ್ಸಾ ವಿಧಾನವು ಬಳಕೆಯಲ್ಲಿತ್ತು. ಯುದ್ಧಗಳಲ್ಲಿ ಹೋರಾಡುವಾಗ ಕಾಲು ಕಳೆದುಕೊಂಡವರಿಗೆ ಶಸ್ತ್ರ ಚಿಕಿತ್ಸಾ ವಿಧಾನದ ಮೂಲಕ ಕಬ್ಬಿಣದ ಕಾಲುಗಳನ್ನು ಜೋಡಿಸುತ್ತಿದ್ದರು. ಗಾಯಗಳು ಮತ್ತು ಹಾವು ಕಡಿತವನ್ನು ವೈದ್ಯರು ಯಶಸ್ವಿಯಾಗಿ ವಾಸಿ ಮಾಡುತ್ತಿದ್ದರು. ಖಗೋಳ ವಿಜ್ಞಾನದ ಪರಿಚಯ ಸ್ವಲ್ಪಮಟ್ಟಿಗಿದ್ದಿತು. ನಕ್ಷತ್ರಗಳ ಚಲನೆಯನ್ನು ಗಮನಿಸಿ. ಪತ್ತೆಮಾಡಿದ್ದರು. ಋಗ್ವೇದ ಕಾಲದಲ್ಲಿಯೇ 30 ದಿನಗಳ 12 ತಿಂಗಳುಗಳನ್ನು ಒಂದು ವರ್ಷವೆಂದು ಪರಿಗಣಿಸಲಾಗಿತ್ತು.