ವರ್ಧನರ ಸಾಹಿತ್ಯ

ವರ್ಧನರ ಸಾಹಿತ್ಯ

ವರ್ಧನರು ಸಾಹಿತ್ಯ ಮತ್ತು ಸಂಸ್ಕೃತಿಯ ಏಳಿಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈ ಸಂತತಿಯ ಪ್ರಖ್ಯಾತ ದೊರೆಯಾದ ಹರ್ಷವರ್ಧನನು ಸಾಹಿತ್ಯ ಮತ್ತು ಶಿಕ್ಷಣದ ಉದಾರ ಪೋಷಕನಾಗಿದ್ದನು. ತನ್ನ ರಾಜಾದಾಯದ 1/4 ಭಾಗವನ್ನು ಸಾಹಿತ್ಯದ ಅಭಿವೃದ್ಧಿಗೆ ಬಳಸುತ್ತಿದ್ದನು. ಅಂದರೆ ಆ ಹಣವನ್ನು ಕವಿಗಳ, ವಿದ್ವಾಂಸರ ಸನ್ಮಾನಕ್ಕೆ, ಕೊಡುಗೆಗೆ ಮತ್ತು ತಾಳೆಗರಿಗಳ ಪ್ರತಿಮಾಡಿಸಲು ಬಳಸುತ್ತಿದ್ದನು. ಸ್ವತ: ವಿದ್ವಾಂಸ ಮತ್ತು ಬರಹಗಾರನಾಗಿದ್ದ.

ಹರ್ಷವರ್ಧನನು 3 ನಾಟಕಗಳನ್ನು ಬರೆದಿದ್ದಾನೆ. ಸಂಸ್ಕೃತ ಭಾಷೆಯ ಅವುಗಳೆಂದರೆ,

(1) ನಾಗಾನಂದ 

(2) ಪ್ರಿಯದರ್ಶಿನಿ

(3) ರತ್ನಾವಳಿ.

ಈ ನಾಟಕಗಳ ಕತೃ ಹರ್ಷನೇ ಅಥವಾ ಬೇರೆಯವರೇ ಎಂಬ ಬಗ್ಗೆ ವಿದ್ವಾಂಸರಲ್ಲಿ ಜಿಜ್ಞಾಸೆಯುಂಟು. ಆದಾಗ್ಯೂ ಕತೃತ್ವವನ್ನು ನಿರಾಕರಿಸುವ ಗಟ್ಟಿ ಸಾಕ್ಷ್ಯಗಳು ದೊರೆಯಲಿಲ್ಲವಾಗಿ ಹರ್ಷನದೇ ಎಂದು ನಂಬಲಾಗಿದೆ. ರತ್ನಾವಳಿ ಮತ್ತು ಪ್ರಿಯದರ್ಶಿಕಾಗಳು ಪ್ರೇಮ ಮತ್ತು ಆಸ್ಥಾನ ಅಂತಃಕಲಹವನ್ನು ಪ್ರಸ್ತಾಪಿಸುತ್ತವೆ. ನಾಗಾನಂದವು ಬೌದ್ಧ ತಾತ್ವಿಕ ಚಿಂತನೆಯ ನಾಟಕವಾಗಿದೆ. 12ನೇ ಶತಮಾನದ ಕವಿಯಾದ ಜಯದೇವನು ತನ್ನ ಪ್ರಸಿದ್ಧ ಗೀತ ಗೋವಿಂದದಲ್ಲಿ ಹರ್ಷನನ್ನು ಬಾಸ ಮತ್ತು ಕಾಳಿದಾಸರಿಗೆ ಹೋಲಿಸಿದ್ದಾನೆ.

ಹರ್ಷನ ಆಸ್ಥಾನದಲ್ಲಿ ಬಾಣ, ಮಯೂರ, ಮಾತಂಗ, ದಿವಾಕರ, ಸಿದ್ದಸೇನ, ಹರಿದತ್ತ ಮುಂತಾದವರು ಇದ್ದರು.

ಬಾಣ: ಹರ್ಷಚರಿತ, ಕಾದಂಬರಿ, ಚಂಡಿಶತಕ, ಪಾರ್ವತಿ ಪರಿಣಯ

ಭತೃಹರಿ : ಭತೃಹರಿ ಶತಕ

ಮಯೂರ : ಸೂರ್ಯಶತಕ, ಅಷ್ಟಕ

ಹ್ಯೂಯನ್ ತ್ಸಾಂಗ್ : ಸಿ.ಯೂ.ಕಿ

ಹರ್ಷನು ತನ್ನ ಆಸ್ಥಾನದ ಎಲ್ಲಾ ವಿದ್ವಾಂಸರುಗಳಿಂದಲೂ ಬುದ್ಧನ ಪೂರ್ವಜನ್ಮಕ್ಕೆ ಸಂಬಂಧಿಸಿದಂತೆ ಪದ್ಯ ಬರೆಸಿ ಅದನ್ನು ಸಂಪಾದಿಸಿ ‘ಜಾತಕ ಮಾಲಾ’ ಎಂದು ಕೃತಿಗೆ ಹೆಸರು ಕೊಟ್ಟನು. ಬಾಣನ ಹರ್ಷಚರಿತವು ಹರ್ಷನ ಆತ್ಮಚರಿತ್ರೆಯೇ ಆಗಿದೆ.

ನಳಂದ ವಿಶ್ವವಿದ್ಯಾನಿಲಯ

ಗುಪ್ತರ ದೊರೆಯಾದ ಒಂದನೇ ಕುಮಾರಗುಪ್ತನಿಂದ(ಶಕ್ರಾದಿತ್ಯ) ಕ್ರಿಶ 5ನೆಯ ಶತಮಾನದಲ್ಲಿ ನಳಂದ ವಿಶ್ವವಿದ್ಯಾನಿಲಯವು ಸ್ಥಾಪಿಸಲ್ಪಟ್ಟಿತು. ಇದನ್ನು ನಂತರದ ಕಾಲದಲ್ಲಿ ಇತರ ಗುಪ್ತ ದೊರೆಗಳಾದ ಬುಧಗುಪ್ತ, ತಥಾಗತಗುಪ್ತ, ಬಾಲಾದಿತ್ಯರು ಬೆಳೆಸಿದರು. ಶಕದೊರೆಗಳು, ಕಾಮರೂಪದ ಬಾಸ್ಕರವರ್ಮ ಮುಂತಾದವರು ಆಶ್ರಯಧಾತರಾಗಿದ್ದರು. ವರ್ಧನರ ಕಾಲದಲ್ಲಿ ಏಳೆಯ ಶೃಂಗವನ್ನು ಮುಟ್ಟಿದ ಇದಕ್ಕೆ ಹರ್ಷವರ್ಧನನು ಮಹಾಪೋಷಕನಾಗಿದ್ದನು. ಅನೇಕ ಕಟ್ಟಡಗಳನ್ನು ನಿರ್ಮಿಸಿ, ವಿಶ್ವವಿದ್ಯಾಲಯದ ನಿರ್ವಹಣೆಗೆ ಸುಮಾರು 100 ಹಳ್ಳಿಗಳ ಭೂಕಂದಾಯವನ್ನು ದಾನವಾಗಿ ನೀಡಿದನು.

ಪ್ರಾಚೀನ ಭಾರತದ ಅತ್ಯಂತ ಪ್ರಸಿದ್ಧ ವಿಶ್ವವಿದ್ಯಾಲಯವಾದ ನಳಂದವು ‘ನಾಲಂದ’ ಎಂಬಲ್ಲಿತ್ತು. ಇದು ಈಗಿನ ಬಿಹಾರ ರಾಜ್ಯದ ರಾಜಘರ್ ಗೆ ಏಳು ಮೈಲಿ ದೂರದಲ್ಲಿರುವ ಇಂದಿನ ಬರಗಾಂವ್ ಗ್ರಾಮವೇ ಆಗಿದೆಯೆಂದು ಧೃಡಪಟ್ಟಿದೆ. ಇಲ್ಲಿ 1975 ರಲ್ಲಿ ಕನ್ನಿಂಗ್ ಹ್ಯಾಂ ಮತ್ತು 1913 ರಲ್ಲಿ ಡಾ|ಸ್ಪೂನರ್ ರವರು ಉತ್ಖನನ ನಡೆಸಿದ್ದಾರೆ.

ಹ್ಯಯನ್‌ತ್ಸಾಂಗ್ ಮತ್ತು ಇಕ್ಸಿಂಗರ ಪ್ರಕಾರ ಮತ್ತು ಭೂ ಉತ್ಖನನದಲ್ಲಿ ಕೆಲಮಟ್ಟಿಗೆ ದೃಡಪಟ್ಟರು ವಂತೆ ನಳಂದವು ಬಹುದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿ 8 ದೊಡ್ಡ ಹಜಾರಗಳು, 300 ಇತರ ಕೊಠಡಿಗಳು ಇದ್ದವು. ಇವುಗಳನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿತ್ತು. ವಿದ್ವಾಂಸರ ವಾಸಕ್ಕೆ ಮಹಡಿ ಮನೆಗಳಿದ್ದವು. ವಿಶ್ವವಿದ್ಯಾಲಯದ ಆವರಣದಲ್ಲಿ ಸ್ತೂಪಗಳು, ವಿಹಾರಗಳು, ಗೋಪುರಗಳಿದ್ದವು, ಮಾವಿನ ತೋಪುಗಳಿದ್ದವು,  ತಾವರೆ ಹೂವಿನ ಪುಷ್ಕರಣಿಗಳಿದ್ದವು.

ಖಗೋಳ ವೀಕ್ಷಣಾಲಯವೂ ಇತ್ತು. 3 ಅಂತಸ್ತಿನ ಮೂರು ಬೃಹತ್ ಕಟ್ಟಡಗಳಲ್ಲಿ ಗ್ರಂಥಾಲಯವಿತ್ತು. ಅವುಗಳನ್ನು ರತ್ನದಧಿ, ರತ್ನರಂಜಕ ಮತ್ತು ರತ್ನಸಾಗರಗಳೆಂದು ಕರೆಯಲಾಗುತ್ತಿತ್ತು. ಗ್ರಂಥಾಲಯವಿದ್ದ ಪ್ರದೇಶವನ್ನು ‘ಧರ್ಮಗಂಜ್ ‘ ಎಂದು ಕರೆಯಲಾಗುತ್ತಿತ್ತು. ಗ್ರಂಥಾಲಯದಲ್ಲಿ ಅಪೂರ್ವ ಓಲೆಗರಿಗಳನ್ನು, ಹಸ್ತಪ್ರತಿಗಳನ್ನು ಸಂಗ್ರಹಿಸಿಡಲಾಗಿತ್ತು.

ವಿಶ್ವವಿದ್ಯಾಲಯದಲ್ಲಿ 1500 ಅಧ್ಯಾಪಕರಿದ್ದರು. ದಿಗ್‌ನಾಗ್, ಸ್ಥಿರಮತಿ, ಧರ್ಮಪಾಲ ಹಾಗು ಶೀಲಭದ್ರ, ಶಾಂತರಕ್ಷಿತ, ಬುದ್ಧಕೀರ್ತಿ, ಕಮಲಶೀಲ, ಪದ್ಮಸಂಭವ, ಮುಂತಾದ ಪ್ರಸಿದ್ಧ ಪ್ರಾಧ್ಯಾಪಕ ಪಂಡಿತರಿದ್ದರು. ಧರ್ಮಪಾಲನು ಪ್ರಸಿದ್ಧ ವಿದ್ವಾಂಸನಾಗಿದ್ದು ಮೂಲತ: ಕಂಚಿಯವನಾಗಿದ್ದನು. ಇವನ ನಂತರ ಶೀಲಭದ್ರನು ಕುಲಪತಿಯಾದನು. ಇವನು ಸಮತಟ ಪ್ರದೇಶದವನಾಗಿದ್ದನು.

ಹೂಯನ್‌ ತ್ಸಾಂಗ್ ನಳಂದದ ಪ್ರಸಿದ್ದ ವಿದ್ಯಾರ್ಥಿಯಾಗಿದ್ದನು. ಮೂಲತ: ಚೀನಾದೇಶದವನಾದ ಇವನು ಯಾತ್ರಿಕನಾಗಿ ಭಾರತಕ್ಕೆ ಬಂದು ನಳಂದದಲ್ಲಿ ಅಧ್ಯಯನ ಮಾಡಿದ್ದನು. ಇವನು ಎಲ್ಲಾ ಪರೀಕ್ಷೆಗಳಲ್ಲೂ ಉತ್ತೀರ್ಣಗೊಂಡು ಧರ್ಮಾಚಾರ್ಯ, ಮೋಕ್ಷಚಾರ್ಯ ಮತ್ತು ಮಹಾಯಾನದೇವ ಎಂಬ ಪದವಿಗಳನ್ನು ಪಡೆದಿದ್ದನು.

ಚೀಣಾದಿಂದ ಬಂದ ʻಇತ್ಸಿಂಗ್ʼ ಸಹ 10 ವರ್ಷಗಳ ಕಾಲ ಇಲ್ಲಿಯೇ ಅಧ್ಯಯನ ಮಾಡಿದ್ದನು. ದೇಶವಿದೇಶಗಳಿಂದ ಸುಮಾರು 10,000 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದರು. ಇದೊಂದು ವಸತಿ ವಿಶ್ವವಿದ್ಯಾನಿಲಯವಾಗಿದ್ದು ಉಚಿತ ಊಟ, ಉಪಹಾರ, ಉಡುಪು ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು.

ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಾಗಿ ಪ್ರವೇಶಪಡೆಯುವುದು ಸುಲಭವಾಗಿರಲಿಲ್ಲ. ಅಂದರೆ ಪ್ರವೇಶ ಕೋರಿ ಬಂದವರಿಗೆಲ್ಲ ಪ್ರವೇಶ ಸಿಗುತ್ತಿರಲಿಲ್ಲ. ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಮೂರು ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತಿತ್ತು. ಈ ನಡುವೆ ಅಭ್ಯರ್ಥಿಯ ನಡೆನುಡಿಯ ಮತ್ತು ಜ್ಞಾಪಕಶಕ್ತಿಯನ್ನು ಪರೀಕ್ಷಿಸಲಾಗುತ್ತಿತ್ತು. ಕೊನೆಗೆ ಪರೀಕ್ಷೆಯನ್ನು ಎದುರಿಸಬೇಕಾಗುತ್ತಿತ್ತು. ಈ ಪರೀಕ್ಷೆಯು ಅತ್ಯಂತ ಕಠಿಣ ವಾಗಿದ್ದು ಪಾಸಾದ ಅಭ್ಯರ್ಥಿಯನ್ನು ವಿದ್ಯಾರ್ಥಿಯಾಗಿ ಸೇರಿಸಿಕೊಳ್ಳಲಾಗುತ್ತಿತ್ತು. ಇಲ್ಲಿ ಸ್ತ್ರೀಯರಿಗೂ ಪ್ರವೇಶಾ ವಕಾಶವಿದ್ದು, ಅವರು ಸನ್ಯಾಸಿಗಳ ಮತ್ತು ವಿದ್ಯಾರ್ಥಿಗಳ ಕೊಠಡಿಗೆ ಮಾತ್ರ ಹೋಗುವಂತಿರಲಿಲ್ಲ. ಬೇಕಿದ್ದರೆ ಹೊರಗಡೆ ಮಾತನಾಡಬಹುದಿತ್ತು.

ನಳಂದ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವು ಮಾಧ್ಯಮವಾಗಿತ್ತು. ಇಲ್ಲಿಯ ಪಠ್ಯ ವಿಷಯಗಳೆಂದರೆ, ಮಹಾಯಾನ, ಹೀನಯಾನ, ವೈದಿಕ ಸಾಹಿತ್ಯ, ವ್ಯಾಕರಣ, ವೈದ್ಯಕೀಯಶಾಸ್ತ್ರ, ಕಲೆ ಮತ್ತು ತಂತ್ರವಿದ್ಯೆ. ವ್ಯಾಸಂಗವು 3 ಹಂತಗಳಲ್ಲಿ ನಡೆಯುತ್ತಿತ್ತು. ಅವುಗಳೆಂದರೆ;

1. 8 ರಿಂದ 13 ವರ್ಷದವರೆಗೆ ಪ್ರಾಥಮಿಕ ಹಂತ

2. 13 ರಿಂದ20 ವರ್ಷದವರೆಗೆ ಮಾಧ್ಯಮಿಕ ಹಂತ

3. ನಂತರ ಉಚ್ಚ ಶಿಕ್ಷಣ ಹಂತ

ನಳಂದದಲ್ಲಿ ಶಿಕ್ಷಣವು ಉಪನ್ಯಾಸ, ಚರ್ಚೆ, ಪ್ರಶೋತ್ತರ, ತಾಳೆಗರಿಗಳ ಪ್ರತಿಮಾಡುವಿಕೆ, ಅನುವಾದ ಮತ್ತು ವಾದ ವಿವಾದದ ಮೂಲಕ ದೊರೆಯುತ್ತಿತ್ತು. ಉಚ್ಚ ಶಿಕ್ಷಣವು ಆಧುನಿಕ ಸಂಶೋಧನಾ ರೂಪದಲ್ಲಿದ್ದು ಕೊಟ್ಟ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹರಿಸಬೇಕಾಗಿತ್ತು. ಪ್ರಬಂಧಗಳನ್ನು ರಚಿಸಿ ಮಂಡಿಸಬೇಕಾಗಿತ್ತು. ಇದನ್ನು ಪರೀಕ್ಷಿಸಿ ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿತ್ತು.

ಪ್ರಾಚೀನ ಕಾಲದಲ್ಲಿ ನಳಂದ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವುದು ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇದೊಂದು ಅಂತರರಾಷ್ಟ್ರೀಯ ವಿದ್ಯಾಕೇಂದ್ರವಾಗಿದ್ದು, ದೇಶವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಸುತ್ತ-ಮುತ್ತಲ ರಾಜ್ಯಗಳಲ್ಲದೆ ಆಗ್ನೆಯ ಏಷ್ಯಾ ದೇಶಗಳಿಂದಲೂ ರಾಜಾಶ್ರಯ ಈ ವಿಶ್ವವಿದ್ಯಾಲಯಕ್ಕೆ ದೊರೆಯುತ್ತಿತ್ತು.

ನಳಂದ ವಿಶ್ವವಿದ್ಯಾಲಯವು ಪ್ರಾಚೀನ ಭಾರತದಲ್ಲಿ ಹೆಸರುವಾಸಿಯಾಗಲು ಕಾರಣವೆಂದರೆ;

1. ಇಲ್ಲಿ ಸಿಗುತ್ತಿದ್ದ ಉಚಿತ ಶಿಕ್ಷಣ

2. ಬೌದ್ಧ ವಿಷಯಗಳೊಂದಿಗೆ ಇತರ ವಿಷಯಗಳಿಗೂ ಅವಕಾಶ

3. ಪಠ್ಯದಲ್ಲಿ ಲೌಕಿಕ ವಿಷಯಗಳಿಗೂ ಮಹತ್ವ

4. ಪ್ರಸಿದ್ಧ ವಿದ್ವಾಂಸರ ಬೋಧನೆ.

5. ಉತ್ತಮ ಗ್ರಂಥಾಲಯಗಳು ಮತ್ತು ವಸತಿ ಗೃಹಗಳ ಸೌಕರ್ಯ

6. ರಾಜಮಹಾರಾಜರ ಬೆಂಬಲದ ಪ್ರತಿಷ್ಠೆ

7. ದೊಡ್ಡದೊಡ್ಡ ಕಟ್ಟಡಗಳು ಗಾಂಭೀರ್ಯ ಮತ್ತು ಮಹತ್ವವನ್ನು ಸಾರುತ್ತಿದ್ದುದು.

8. ಇಲ್ಲಿ ನೀಡಿದ್ದ ಬೌದ್ಧಿಕ ಸ್ವಾತಂತ್ರ್ಯ

ಇಂತಹ ಪ್ರಸಿದ್ಧ ವಿಶ್ವವಿದ್ಯಾಲಯವನ್ನು 12ನೆಯ ಶತಮಾನದಲ್ಲಿ ಹೂಣರ ನಾಯಕ ಮಿಹಿರಗುಲ ನಾಶಪಡಿಸಿದನು. ಆದರೆ ರಾಜಾ ಬಾಲಾದಿತ್ಯ ಜೀರ್ಣೋದ್ದಾರ ಮಾಡಿದ್ದನಾದರೂ, 12ನೆಯ ಶತಮಾನದ ಅಂತ್ಯದಲ್ಲಿ ಮತ್ತೆ ದಾಳಿಗೀಡಾಯಿತು. ಬಿಹಾರವನ್ನು ಗೆದ್ದ ಬಕ್ತಿಯಾರ್ ಖಲ್ಟಿಯು ನಳಂದ ವಿಶ್ವವಿದ್ಯಾಲಯ ವನ್ನು ನಾಶಮಾಡಿದನು. ಗ್ರಂಥಭಂಡಾರಕ್ಕೆ ಬೆಂಕಿ ಇಟ್ಟು ಪೂರ್ಣನಾಶ ಗೊಳಿಸಿದ್ದಲ್ಲದೆ ವಿದ್ಯಾರ್ಥಿಗಳನ್ನು ಮತ್ತು ವಿದ್ವಾಂಸರನ್ನೂ ಹಿಂಸಿಸಿದ. ಪರಿಣಾಮವಾಗಿ ಗತಕಾಲದ ಜ್ಞಾನ ಕೇಂದ್ರವೊಂದು ಅವನತಿ ಹೊಂದಿತು.