ಸಮುದ್ರಗುಪ್ತ (ಕ್ರಿ.ಶ. 335-375)

ಸಮುದ್ರಗುಪ್ತ (ಕ್ರಿ.ಶ. 335-375)

ಈತ ಗುಪ್ತವಂಶದ ದೊರೆಗಳಲ್ಲಿಯೇ ಅತ್ಯಂತ ಪ್ರಸಿದ್ಧನಾಗಿದ್ದನು. ದಿಗ್ವಿಜಯವೇ ಈತನ ಮೂಲ ಗುರಿಯಾಗಿದ್ದಿತು. ಯುದ್ಧ ಭೂಮಿಯಲ್ಲಿ ಸೋಲಿಲ್ಲದ ಸರದಾರ. ಈತನ ಸಾಧನೆಗಳನ್ನು ಗಮನಿಸಿದ ಡಾ. ವಿ.ಎ. ಸ್ಮಿತ್ ಈತನನ್ನು ಭಾರತದ ನೆಪೋಲಿಯನ್ ಎಂದು ಕರೆದಿದ್ದಾರೆ.

ಸಿಂಹಾಸನಾರೋಹಣ : ಸಮುದ್ರಗುಪ್ತನು ಮೊದಲನೆಯ ಚಂದ್ರಗುಪ್ತನ ಜೇಷ್ಠ ಪುತ್ರನೇನೂ ಆಗಿರಲಿಲ್ಲ. ಭಾರತೀಯ ಸಂಪ್ರದಾಯದ ಪ್ರಕಾರ ರಾಜತ್ವ ವಂಶಪಾರಂಪರ್ಯವಾಗಿರಬೇಕಿತ್ತು. ಅಂದರೆ ಹಿರಿಯಮಗನೇ ತಂದೆಯ ನಂತರ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಸಮುದ್ರಗುಪ್ತ ಬಹಳ ಬುದ್ದಿವಂತ ಹಾಗೂ ಪರಾಕ್ರಮಿಯಾಗಿದ್ದರಿಂದ ಚಂದ್ರಗುಪ್ತ ತನ್ನ ಉತ್ತರಾಧಿಕಾರಿಯಾಗಿ ಸಮುದ್ರಗುಪ್ತನನ್ನೇ ಆಯ್ಕೆ ಮಾಡಿದನು. ಪ್ರಜೆಗಳ ಮತ್ತು ಮಾಂಡಳಿಕರ ಸನ್ನಿಧಿಯಲ್ಲಿ ಸಮುದ್ರಗುಪ್ತನಿಗೆ ಪಟ್ಟಕಟ್ಟಿ ಜಗತ್ತನ್ನೇ ಆಳು ಎಂದು ಆಶೀರ್ವದಿಸಿದನು.

ಸಮುದ್ರಗುಪ್ತನ ದಿಗ್ವಿಜಯಗಳು : ಸಮುದ್ರಗುಪ್ತ ತನ್ನ ದಿಗ್ವಿಜಯಗಳಿಂದ ಹೆಸರುವಾಸಿಯಾಗಿದ್ದಾನೆ. ಈತ ಕೈಗೊಂಡ ಎಲ್ಲಾ ದಂಡಯಾತ್ರೆಗಳಲ್ಲಿ ಜಯಶೀಲನಾಗಿದ್ದಾನೆ. ಈತನ ದಿಗ್ವಿಜಯಗಳ ಬಗ್ಗೆ ತಿಳಿದುಕೊಳ್ಳಲು ಅಲಹಾಬಾದ್ ಸ್ತಂಭಶಾಸನ ಅತಿ ಉಪಯುಕ್ತ ಆಧಾರವಾಗಿದೆ.

ಅಲಹಾಬಾದ್ ಶಾಸನ : ಈ ಶಾಸನವು ಇಂದು ಅಲಹಾಬಾದ್ ಕೋಟೆಯೊಳಗೆ ಇದೆ. ಇದಕ್ಕಿಂತ ಮುಂಚೆ ಅದು ಅಲಹಾಬಾದ್‌ನಿಂದ 28 ಮೈಲು ದೂರದ ಕೌಶಾಂಬಿಯಲ್ಲಿ ಇತ್ತು. ಈ ಸ್ತಂಭದ ಒಂದು ಭಾಗದಲ್ಲಿ ಅಶೋಕನ ಶಾಸನವಿದೆ. ಮತ್ತೊಂದು ಭಾಗದಲ್ಲಿ ಸಮುದ್ರಗುಪ್ತನ ದಿಗ್ವಿಜಯಗಳನ್ನು ತಿಳಿಸುವ ಶಾಸನವಿದೆ. ಸಮುದ್ರಗುಪ್ತನ ದಂಡನಾಯಕ ಮತ್ತು ಸಂಧಿವಿಗ್ರಹಿಯಾಗಿದ್ದ ಹರಿಶೇಣನು ಅಲಹಾಬಾದ್ ಸ್ತಂಭ ಶಾಸನದ ಕರ್ತೃ. ಇದು ಸಂಸ್ಕೃತ ಭಾಷೆಯಲ್ಲಿದೆ. ಚಂಪೂ ಶೈಲಿಯಲ್ಲಿದ್ದ ಇದು ಗದ್ಯ ಪದ್ಯಗಳೆರಡರಿಂದಲೂ ಮಿಶ್ರಣಗೊಂಡಿದೆ.

ಸಮುದ್ರಗುಪ್ತನ ದಿಗ್ವಿಜಯಗಳ ಕುರಿತು ಡಾ. ಆರ್. ಎಸ್. ತ್ರಿಪಾಟಿಯವರು ಯುದ್ಧ ಮತ್ತು ಆಕ್ರಮಣಗಳನ್ನೇ ಗುರಿಯಾಗಿ ಹೊಂದಿದ್ದ ಸಮುದ್ರಗುಪ್ತನು ಶಾಂತಿ ಹಾಗೂ ಧರ್ಮಗಳನ್ನು ಗುರಿಯಾಗಿ ಹೊಂದಿದ್ದ ಅಶೋಕನಿಗೆ ತದ್ವಿರುದ್ಧವಾಗಿದ್ದನು ಎಂದಿದ್ದಾರೆ. ಅಲಹಾಬಾದ್ ಸ್ತಂಭ ಶಾಸನದ ಪ್ರಕಾರ ಸಮುದ್ರಗುಪ್ತನ ದಿಗ್ವಿಜಯಗಳು ಈ ಕೆಳಗಿನಂತಿವೆ.

1) ಉತ್ತರ ಭಾರತದ ದಿಗ್ವಿಜಯಗಳು :

100 ಕದನಗಳ ಸಿಂಹ ಎಂದು ಹೆಸರಾದ ಸಮುದ್ರಗುಪ್ತನು ತನ್ನ ಅಧಿಕಾರವನ್ನು ವಿರೋಧಿಸಿದ ಉತ್ತರ ಭಾರತದ ಒಟ್ಟು 9 ಜನ ಅರಸರನ್ನು ಸೋಲಿಸಿದನು. ಅವರುಗಳೆಂದರೆ

ರಾಜರು ಆಳುತ್ತಿದ್ದ ಪ್ರದೇಶ ಈಗಿನ ರಾಜ್ಯಗಳು
1) ನಾಗಸೇನ 1) ಪದ್ಮಾವತಿ 1) ಮಧ್ಯಪ್ರದೇಶ
2) ಅಚ್ಯುತ 2) ಅಹಿಶ್ಚತ್ರ 2) ಉತ್ತರಪ್ರದೇಶ

3) ಗಣಪತಿನಾಗ

4) ರುದ್ರದೇವ

3) ಮಥುರ ಅಥವಾ ವಿಧಿಶ

3) ಉತ್ತರಪ್ರದೇಶ

4) ಮಧ್ಯಪ್ರದೇಶ

5) ಮತ್ತಿಲ 4) ವಾಕಟಾಕ ರಾಜ 5) ದೆಹಲಿ
6) ನಾಗದತ್ತ 5) ಬುಲಂದ ಶಹರ 6) ಮಥುರ
7) ಚಂದ್ರವರ್ಮ 6) ನಾಗದೊರೆ 7) ಬಂಗಾಳ
8) ನಂದಿ 7) ಪುಷ್ಕರಣದ ರಾಜ 8) ಉತ್ತರ ಪ್ರದೇಶ
9) ಬಲವರ್ಮನ್ 8) ನಾಗದೊರೆ 9) ಅಸ್ಸಾಂ
9) ಅಸ್ಸಾಂ

2) ಅಡವಿ ರಾಜ್ಯಗಳನ್ನು ಸೆದೆಬಡಿದದ್ದು : ಉತ್ತರ ಪ್ರದೇಶ, ಮಧ್ಯಪ್ರದೇಶ, ನಾಗಪುರ, ಬಾಗೇಲ್ ಖಂಡ, ರೇವಾ ಹಾಗೂ ವಿಂದ್ಯ ಪರ್ವತದ ಅಡವಿ ರಾಜ್ಯಗಳನ್ನು ಗೆದ್ದುಕೊಂಡ ಸಮುದ್ರಗುಪ್ತ ಅವುಗಳನ್ನು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು.

3) ದಕ್ಷಿಣ ಭಾರತದ ದಿಗ್ವಿಜಯಗಳು : ಆರ್ಯಾವರ್ತವನ್ನು ಗೆದ್ದುಕೊಂಡ ನಂತರ ಸಮುದ್ರಗುಪ್ತನು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ದಕ್ಷಿಣದ ಕಡೆಗೆ ಗಮನಹರಿಸಿದನು. ನಂತರ ದಕ್ಷಿಣದ ಎಲ್ಲಾ 12 ರಾಜರನ್ನು ಸೋಲಿಸಿದನೆಂದು ಅಲಹಾಬಾದ್ ಸ್ತಂಭಶಾಸನ ಹೇಳುತ್ತದೆ. ಅವುಗಳೆಂದರೆ

    ರಾಜನ ಹೆಸರು                                                 ಇಂದಿನ ಪ್ರದೇಶ

1) ಮಹಾಕಾಂತಾರದ ವ್ಯಾಘ್ರರಾಜ                 ಒರಿಸ್ಸಾ ಅಥವಾ ಬುಂದೇಲ ಖಂಡದ ಒಂದು ಪ್ರದೇಶ

2) ಕೋಸಲದ ಮಹೇಂದ್ರ                                 ದಕ್ಷಿಣ ಕೋಸ

(ರಾಯಪುರ, ಸಂಬಲಪುರ, ಬಿಲಾಸ್ ಪುರ)

3) ಕೊಟ್ಟೂರಿನ ಸ್ವಾಮಿದತ್ತ                          ಗಂಜಾಂ ಜಿಲ್ಲೆಯ ಮಹೇಂದ್ರಗಿರಿಯ ಹತ್ತಿರ ಕೊತ್ತೂರು

4) ಷಿಷ್ಠಪುರದ ಮಹೇಂದ್ರಗಿರಿ                        ಪಶ್ಚಿಮ ಗೋದಾವರಿ ಜಿಲ್ಲೆಯ ಇಂದಿನ ಪೀರಾಪುರಂ

5) ಕೌರಾಲದ ಮಾಂತರಾಜ                          ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರದೇಶ

6) ಏರಂಡಪಲ್ಲದ ದಮನ                              ವಿಶಾಖಪಟ್ಟಣದ ಪ್ರದೇಶ

7) ಕಂಚಿಯ ವಿಷ್ಣುಗೋಪ                              ತಮಿಳುನಾಡಿನ ಕಂಚಿ

8) ಅವಮುಕ್ತದ ನೀಲರಾಜ                           ಕಂಚಿಯ ಹತ್ತಿರದ ಪ್ರದೇಶ

9) ವೆಂಗಿಯ ಹಸ್ತಿವರ್ಮ                                ಕೃಷ್ಣಾ-ಗೋದಾವರಿ ನಡುವಣ ಪ್ರದೇಶ

10) ಪಾಲಕ್ಕದ ಉಗ್ರಸೇನ                            ನೆಲ್ಲೂರು ಜಿಲ್ಲೆಯ ಪಾಲಕ್ಕಾಡ

11) ದೇವರಾಷ್ಟ್ರದ ಕುಬೇರ                            ಮಹಾರಾಷ್ಟ್ರದ ಸತಾರಾ ಜಿಲ್ಲೆ

12) ಕುಸ್ತಲಪುರದ ಧನಂಜಯ                        ಉತ್ತರ ಅರ್ಕಾಟ ಜಿಲ್ಲೆ

ದಕ್ಷಿಣದ ಈ ಪ್ರಾಂತ್ಯಗಳು ಪಾಟಲಿಪುತ್ರದಿಂದ ಬಹಳ ದೂರವಿದ್ದುದರ ಕಾರಣ ಅವುಗಳನ್ನು ನೇರ ಆಳ್ವಿಕೆಗೆ ಒಳಪಡಿಸಲು ಸಮುದ್ರಗುಪ್ತನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆತ ತನ್ನ ಸಾರ್ವಭೌಮವನ್ನು ಒಪ್ಪಿಕೊಂಡ ಅರಸರಿಂದ ಕಪ್ಪಕಾಣಿಕೆಗಳನ್ನು ಸ್ವೀಕರಿಸಿ ಆ ಪ್ರದೇಶಗಳನ್ನು ಆಯಾ ರಾಜರುಗಳಿಗೆ ಒಪ್ಪಿಸಿದನು.

4) ಗಡಿನಾಡ ರಾಜ್ಯಗಳನ್ನು ಗೆದ್ದುಕೊಂಡದ್ದು : ಸಮುದ್ರಗುಪ್ತನ ಶಕ್ತಿ ಸಾಮರ್ಥ್ಯವನ್ನು ಕೇಳಿ ತಿಳಿದುಕೊಂಡಿದ್ದ ಗಡಿರಾಜ್ಯಗಳಾದ ಅಸ್ಸಾಂನ ಕಾಮರೂಪ, ಉತ್ತರ ಅಸ್ಸಾಂನ ದೇವಕ, ಬಂಗಾಳದ ಸಮತಟ, ನೇಪಾಳದ ಕರ್ತೃಪುರ ಹಾಗೂ ರೋಹಿಲ್ ಖಂಡಗಳ ರಾಜರು ತಾವಾಗಿಯೇ ಬಂದು ಸಮುದ್ರಗುಪ್ತನಿಗೆ ಕಪ್ಪಕಾಣಿಕೆ ಸಲ್ಲಿಸಿ ಸಾರ್ವಭೌಮತ್ವವನ್ನು ಒಪ್ಪಿಕೊಂಡರು

5) ಗಣರಾಜ್ಯಗಳ ವಿರುದ್ಧ ಯುದ್ಧ : ಗಣರಾಜ್ಯಗಳಾದ ಮಾಳ್ವರು, ಕಾಕರು, ಸಂಕನಿಕರು, ಕ್ಷುದ್ರಕರು, ಅಭೀರರು, ಅರ್ಜುನಾಯನರು, ಪ್ರರ್ಜನರು, ಯೌದೇಹರು ಹಾಗೂ ಮಾದ್ರಕರು ಸಮುದ್ರಗುಪ್ತನಿಂದ ಸೋತು ಸಾರ್ವಭೌಮತ್ವವನ್ನು ಸ್ವೀಕರಿಸಿದರು.

ವಿದೇಶಗಳಲ್ಲಿ ಅವನ ಮಹಿಮೆ : ಸಮುದ್ರಗುಪ್ತನ ಕೀರ್ತಿ ವಿದೇಶಗಳಿಗೂ ಹರಡಿತ್ತು. ಶಕರ ಹರಿಶೇಣನು ಗುಪ್ತರಿಗೆ ಹೆಚ್ಚು ಗೌರವ ನೀಡಿದ್ದನು. ಅದರಲ್ಲೂ ಕಾಬೂಲಿನ ಕುಶಾನ ಅರಸನಾದ ದೇವಪುತ್ರಶಾಹಿ ತನ್ನ ರಾಯಭಾರಿಗಳನ್ನು ಸಮುದ್ರಗುಪ್ತನ ಆಸ್ಥಾನಕ್ಕೆ ಕಳುಹಿಸಿಕೊಟ್ಟಿದ್ದನು. ಸಿಂಹಳದ ಅರಸ ಬುದ್ಧಗಯಾದಲ್ಲಿ ಒಂದು ಬೌದ್ಧವಿಹಾರವನ್ನು ನಿರ್ಮಿಸಲು ಸಮುದ್ರಗುಪ್ತನಿಂದ ಅನುಮತಿ ಪಡೆದನು.

6) ಸಮುದ್ರಗುಪ್ತನ ರಾಜ್ಯ ವಿಸ್ತಾರ : ಡಾ. ಆರ್.ಕೆ. ಮುಖರ್ಜಿಯವರ ಪ್ರಕಾರ ಸಮುದ್ರಗುಪ್ತನ ಸಾಮ್ರಾಜ್ಯ ಉತ್ತರ ಹಿಮಾಲಯದಿಂದ ಹಿಡಿದು ದಕ್ಷಿಣದಲ್ಲಿ ನರ್ಮದಾ ನದಿಯವರೆಗೆ ಹಾಗೂ ಪಂಜಾಬಿನಿಂದ ಹಿಡಿದು ಬ್ರಹ್ಮಪುತ್ರಾ ನದಿಯವರೆಗೂ ಹಬ್ಬಿದ್ದಿತು.

7) ಅಶ್ವಮೇಧಾಚರಣೆ : ಅನೇಕ ದಿಗ್ವಿಜಯಗಳನ್ನು ಪೂರ್ಣಗೊಳಿಸಿದ ಸಮುದ್ರಗುಪ್ತನು ಅವುಗಳ ನೆನಪಿಗಾಗಿ ಅಶ್ವಮೇಧಯಾಗವನ್ನು ಮಾಡಿದನು. ಹಾಗೂ ಅಶ್ವಮೇಧ, ಪರಾಕ್ರಮಿ, ರಾಜಾಧಿರಾಜ ಹಾಗೂ ಚಕ್ರವರ್ತಿ ಎಂಬ ಬಿರುದನ್ನು ಧರಿಸಿದನು. ತನ್ನ ವಿಜಯದ ಸಂಕೇತವಾಗಿ ಅನೇಕ ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದನು. ಅವುಗಳ ಮೇಲೆ ಕುದುರೆಯ ಚಿತ್ರವನ್ನು ಟಂಕಿಸಿದನು. ಅದಲ್ಲದೆ ವಿವಿಧ ಬಗೆಯ 9 ಚಿನ್ನದ ನಾಣ್ಯಗಳನ್ನು ಟಂಕಿಸಿದನು. ಅವುಗಳೆಂದರೆ 1) ಹುಲಿಮಾದರಿ 2) ವೀಣಾಪಾಣಿ 3) ಅಶ್ವಮೇಧ 4) ಭರ್ಚಿ 5) ಧನಸ್ಸು 6) ಶಂಖ 7) ಛತ್ರಿ 8) ಗಂಡುಗೊಡಲಿ ಇತ್ಯಾದಿ.

8) ಸಮುದ್ರಗುಪ್ತನ ಕಲಾಪೋಷಣೆ : ಕಲೆ, ಸಾಹಿತ್ಯ, ನೃತ್ಯ ಹಾಗೂ ಶಿಲ್ಪಕಲೆಗಳಿಗೆ ಗುಪ್ತರು ಮಹಾನ್ ಕಾಣಿಕೆಯನ್ನು ನೀಡಿದ್ದಾರೆ. ಅವನ ನಾಣ್ಯಗಳ ಮೇಲೆ ವೀಣಾಪಾಣನಾಗಿ ಕುಳಿತಿರುವ ಚಿತ್ರವನ್ನು ನೋಡಿದರೆ ಅವರಿಗೆ ಸಂಗೀತದ ಬಗ್ಗೆ ಇದ್ದ ಅಭಿರುಚಿಯನ್ನು ತಿಳಿಸುತ್ತದೆ. ಸಮುದ್ರಗುಪ್ತ ತನ್ನ ಆಸ್ಥಾನದಲ್ಲಿ ಅನೇಕ ಕವಿಗಳು ಹಾಗೂ ಪಂಡಿತರಿಗೆ ಆಶ್ರಯ ನೀಡಿದ್ದನು. ಅಹಲಾಬಾದ್ ಶಾಸನ ಸಮುದ್ರಗುಪ್ತನನ್ನು ಕವಿರಾಜ ಎಂದು ವರ್ಣಿಸಿದೆ. ಸ್ವತ ಅವನೇ ಕೃಷ್ಣ ಚರಿತ್ರೆಯನ್ನು ರಚಿಸಿದನು.

ವ್ಯಕ್ತಿತ್ವ : ಸಮುದ್ರಗುಪ್ತ ಅಸಾಧಾರಣ ಪ್ರತಿಭೆಯನ್ನು ಹೊಂದಿದ ಧೀಮಂತ ನೂರಾರು ಕದನಗಳಲ್ಲಿ ಹೋರಾಡಿ ಅಪಾರ ಗೆಲವು ಸಾಧಿಸಿದ ವೀರ. ಈತ ಅಲೆಕ್ಸಾಂಡರನಂತೆ ಯಶಸ್ವಿ ದಿಗ್ವಿಜಯಶಾಲಿ, ದಕ್ಷ ಆಡಳಿತಗಾರ, ಮಹಾಸಾಮ್ರಾಜ್ಯದ ನಿರ್ಮಾಪಕನಾಗಿ ಇಡೀ ಗುಪ್ತರಲ್ಲಿಯೇ ಪ್ರಸಿದ್ಧ ಅರಸನಾಗಿದ್ದನು. ಹರಿದು ಹಂಚಿಹೋಗಿದ್ದ ರಾಜ್ಯವನ್ನು ಒಂದುಗೂಡಿಸಿ ಏಕಚಕ್ರಾಧಿಪತ್ಯಕ್ಕೆ ಒಳಪಡಿಸಿದುದು ಸಮುದ್ರಗುಪ್ತನ ಮಹಾನ್ ಸಾಧನೆಯಾಗಿದೆ. ಆರ್.ಸಿ ಮುಜಂದಾರ್ ಬರೆದಂತೆ ಸಮುದ್ರಗುಪ್ತನು ಭಾರತೀಯ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿ, ವಿಶಿಷ್ಟ ದೊರೆ, ಸೇನಾನಿಯಾಗಿ ಹಾಗೂ ಆಡಳಿತಗಾರನಾಗಿ ಅವನ ಸಾಧನೆ ಅಪಾರ. ಇವನು ಭಾರತದ ಇತಿಹಾಸದಲ್ಲಿ ನವಯುಗಕ್ಕೆ ನಾಂದಿಹಾಡಿದನು. ಅದೇ ಮುಂದೆ ಸುವರ್ಣಯುಗಕ್ಕೆ ದಾರಿಯಾಯಿತು.

ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ

ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ

ಗುಪ್ತರ ಕಾಲದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನವು ಅಪೂರ್ವವಾದ ಮುನ್ನಡೆಯನ್ನು ಕಂಡಿತು. ಸೊನ್ನೆಯ ವಿಶಿಷ್ಟತೆಯನ್ನು ಜಗತ್ತಿಗೆ ತಿಳಿಸಿ ಕ್ರಾಂತಿಯನ್ನು ಎಬ್ಬಿಸಲಾಯಿತು. ಖಗೋಳ ಶಾಸ್ತ್ರ, ವೈದ್ಯಕೀಯ, ಗಣಿತ ಶಾಸ್ತ್ರ, ಲೋಹ ಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಅಭೂತಪೂರ್ವವಾದ ಯಶಸ್ಸನ್ನು ಸಂಪಾದಿಸಿದರು. ಪರಿಣಾಮವಾಗಿ ವೈಜ್ಞಾನಿಕ ಸಾಹಿತ್ಯ ರೂಪ ತಳೆಯಿತು.

ಆರ್ಯಭಟ : ಇವನು ಗುಪ್ತರ ಕಾಲದ ಶ್ರೇಷ್ಠ ಖಗೋಳ ವಿಜ್ಞಾನಿ ಮತ್ತು ಪ್ರಖ್ಯಾತ ಗಣಿತ ಶಾಸ್ತ್ರಜ್ಞ ಖಗೋಳ ಶಾಸ್ತ್ರವನ್ನು ಗಣಿತಶಾಸ್ತ್ರದಿಂದ ಪ್ರತ್ಯೇಕಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನ ಪ್ರಖ್ಯಾತ ಕೃತಿಗಳೆಂದರೆ, ‘ಆರ್ಯಭಟೀಯಂ’ ಮತ್ತು ‘ಸೂರ್ಯ ಸಿದ್ಧಾಂತ’

  1. ಆರ್ಯಭಟನು ತನ್ನ ಕೃತಿಯಲ್ಲಿ ಭೂಮಿ ಗುಂಡಾಗಿದೆ ಎಂಬ ವೈಜ್ಞಾನಿಕ ಸತ್ಯವನ್ನು ಸಾರಿದ್ದಾನೆ. ಅವನ ಮಾತಿನಲ್ಲೇ ಹೇಳುವುದಾದರೆ ‘ಭೂಗೋಲ: ಸರ್ವತೋ ವೃತಃ’.
  2. ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತಿರುವುದರಿಂದ ಹಗಲು ರಾತ್ರಿಗಳಾಗುತ್ತಿವೆ ಎಂದು ಪ್ರಕಟ ಪಡಿಸಿದ್ದಾನೆ.
  3. ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದರಿಂದ ಗ್ರಹಣಗಳಾಗುತ್ತವೆ ಎಂದು ಜಗತ್ತಿಗೆ ಸಾರಿ ಹೇಳಿದನು.
  4. ಸೂರ್ಯ ವರ್ಷದ (ಒಂದು ವರ್ಷದ) ಅವಧಿಯನ್ನು 365,3586805 ದಿನಗಳೆಂದು ಗೊತ್ತು ಪಡಿಸಿದನು.
  5. ಪ್ರಾಚೀನರಿಗೆ ಗೊತ್ತಿಲ್ಲದ ದಶಮಾಂಶ ಪದ್ಧತಿಯನ್ನು ಜಗತ್ತಿಗೆ ಕೊಟ್ಟ ಶ್ರೇಯಸ್ಸು ಆರ್ಯಭಟನಿಗೆ ಸಲ್ಲುತ್ತದೆ. ಅವನ ಅಂಕನ ಪದ್ಧತಿಯಲ್ಲಿ ಇದು ಬರುತ್ತದೆ. ಆದಾಗ್ಯೂ ಈ ಪದ್ಧತಿಯನ್ನು ಆರ್ಯಭಟನೇ ಹುಟ್ಟುಹಾಕಿದನೋ ಅಥವಾ ಅಸ್ತಿತ್ವದಲ್ಲಿ ಇದ್ದ ಪದ್ಧತಿಯೊಂದನ್ನು ಸುಧಾರಿಸಿದನೋ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.
  6. ಪೈ ನ ಸರಿಯಾದ ಮೌಲ್ಯ 3,1416 ಎಂದು ಪ್ರತಿಪಾಧಿಸಿದನು.

ವಿಶ್ವದ ವಿಜ್ಞಾನ ಕ್ಷೇತ್ರಕ್ಕೆ ಆರ್ಯಭಟನ ಕೊಡುಗೆ ಅಸಾಧಾರಣವಾದುದು. ಒಟ್ಟಿನಲ್ಲಿ ಇಡೀ ಪ್ರಪಂಚದ ಖಗೋಳ ಶಾಸ್ತ್ರಜ್ಞರ ಮಧ್ಯೆ ಅತಿ ಎತ್ತರದ ಸ್ಥಾನವನ್ನು ಅಲಂಕರಿಸಿದ್ದಾನೆ.

ವರಾಹಮಿಹಿರ : ವರಹಮಿಹಿರನು ಖಗೋಳ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಸಿದ್ಧ ಪಂಡಿತನಾಗಿದ್ದನು. ಇವನು ಖಗೋಳ ವಿಜ್ಞಾನವನ್ನು ಖಗೋಳ ವಿಜ್ಞಾನ, ಗಣಿತಶಾಸ್ತ್ರ, ಜಾತಕಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳೆಂದು ವಿಭಜಿಸಿದ್ದಾನೆ. ಅಲ್ಲದೆ ಖಗೋಳ ವಿಜ್ಞಾನಕ್ಕಿಂತ ಜ್ಯೋತಿಷ್ಯ ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾನೆ.

ವರಾಹಮಿಹಿರನ ಪ್ರಸಿದ್ಧ ಕೃತಿ ‘ಬೃಹತ್ ಸಂಹಿತ’ ಇದನ್ನು ವಿಶ್ವಕೋಶವೆಂದು ಪರಿಗಣಿಸಲಾಗಿದೆ. ಇದರಲ್ಲಿ ಗ್ರಹಗಳ ಚಲನ ವಲನಗಳು, ಮನುಷ್ಯರ ಮೇಲೆ ಅವುಗಳ ಪರಿಣಾಮಗಳು, ಕೆರೆಗಳನ್ನು ತೋಡುವುದು, ತೋಟವನ್ನು ಮಾಡುವುದು, ಬೇರೆ-ಬೇರೆ ವರ್ಗದ ಸ್ತ್ರೀಯರ ಹಾಗೂ ಪ್ರಾಣಿಗಳ ಲಕ್ಷಣಗಳು, ಶಕುನಶಾಸ್ತ್ರ, ಶಿಲ್ಪಶಾಸ್ತ್ರ, ವಾಸ್ತುಶಿಲ್ಪ, ಭೂಗೋಳ, ರತ್ನಪರೀಕ್ಷೆ, ವಿವಾಹ ಮೊದಲಾದವುಗಳ ಬಗ್ಗೆ ಮಾಹಿತಿ ಈ ಗ್ರಂಥದಲ್ಲಿದೆ. ಇವನ ಮತ್ತೊಂದು ಕೃತಿ ಪಂಚಸಿದ್ಧಾಂತಿಕ. ಇದರಲ್ಲಿ ಖಗೋಳ ವಿಜ್ಞಾನದ ಐದು ಪಂಥಗಳ ಬಗ್ಗೆ ಬರೆದಿದ್ದಾನೆ.

ಬ್ರಹ್ಮಗುಪ್ತ : ಇವನೂ ಸಹ ಪ್ರಸಿದ್ಧ ಖಗೋಳ ಮತ್ತು ಗಣಿತಶಾಸ್ತ್ರಜ್ಞನಾಗಿದ್ದನು. ಇವನ ಎರಡು ಕೃತಿಗಳೆಂದರೆ

ಬ್ರಹ್ಮ ಸಿದ್ಧಾಂತ ಮತ್ತು ಖಂಡಖಾದ್ಯ. ಇವನು ತನ್ನ ಕೃತಿಗಳಲ್ಲಿ ಚೌಕೋನ, ಷಟ್ಕೋನ, ತ್ರಿಕೋನ, ಜ್ಯಾಮಿತಿ, ಲಂಬಕೋನ, ವೃತ್ತ ಮುಂತಾದವುಗಳ ಬಗ್ಗೆ ಬರೆದಿದ್ದಾನೆ. ಗ್ರಹಗಳ ಸ್ಥಾನಗಳನ್ನು, ಗ್ರಹಣಗಳ ಲೆಕ್ಕಾಚಾರಗಳನ್ನು ಗುಣಿಸುವುದನ್ನು ವಿವರಿಸಿದ್ದಾನೆ. ಜಗತ್ತಿಗೆ ಆಕರ್ಷಿಸುವ ಶಕ್ತಿ ಇರುವುದರಿಂದಲೇ ಎಲ್ಲಾ ವಸ್ತುಗಳು ನೆಲಕ್ಕೆ ಬೀಳುತ್ತವೆ ಎಂಬ ಸಿದ್ಧಾಂತವನ್ನು ನ್ಯೂಟನ್‌ಗಿಂತ ಹಲವು ಶತಮಾನಗಳ ಹಿಂದೆಯೇ ಪ್ರಕಟಿಸಿದ್ದನು.

ವಾಗ್ಬಟ : ವಾಗ್ದಟನ ಪ್ರಸಿದ್ಧ ಕೃತಿ ‘ಅಷ್ಟಾಂಗ ಸಂಗ್ರಹ’. ಇದೊಂದು ವೈದ್ಯಶಾಸ್ತ್ರದ ಗ್ರಂಥವಾಗಿದ್ದು, ಆಯುರ್ವೇದದ ಬೆಳವಣಿಗೆಗೆ ಸಹಾಯಕವಾಯಿತು.

ಪಾಲಕಾಪ್ಯ : ಇವನ ಕೃತಿ ‘ಹಸ್ತಾ ಆಯುರ್ವೇದ’, ಅಂಗದೇಶದ ರಾಜನಾದ ರೋಮಪಾದ ಹಾಗೂ ಪಾಲಕಾಪ್ಯಮುನಿ ಇವರ ಸಂಭಾಷಣೆಯೇ ಗ್ರಂಥರೂಪವನ್ನು ಪಡೆದಿದೆ. ಇದರಲ್ಲಿ ಆನೆಗೆ ಬರುವ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ದೊರೆಯುತ್ತದೆ.

ಚರಕ, ಶುಶೃತ, ಧನ್ವಂತರಿ : ಇವರುಗಳು ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದರು. ಚರಕನ ‘ಚರಕಸಂಹಿತೆ’, ಸುಶೃತನ ‘ಸುಶೃತ ಸಂಹಿತೆ’ ಮತ್ತು ಧನ್ವಂತರಿಯ ‘ಆಯುರ್ವೇದ ನಿಘಂಟು’ ಪ್ರಾಚೀನ ಚಿಕಿತ್ಸಾ ಪದ್ಧತಿಯ ಪ್ರಸಿದ್ಧ ಕೃತಿಗಳಾಗಿವೆ.

ಲೋಹ ಜ್ಞಾನ : ಗುಪ್ತರ ಕಾಲದಲ್ಲಿ ಲೋಹ ವಿದ್ಯೆಯು ಅಭಿವೃದ್ಧಿಯಾಯಿತು. ಅವರ ಕಾಲದ ನಾಣ್ಯಗಳು ಮತ್ತು ಲೋಹಸ್ತಂಭಗಳು ಇದಕ್ಕೆ ಆಧಾರವಾಗಿವೆ. ದೆಹಲಿ ಬಳಿಯಿರುವ ಮೆಹರೌಲಿ ಎಂಬ ಹಳ್ಳಿಯಲ್ಲಿರುವ ಬೃಹತ್ ಕಬ್ಬಿಣದ ಸ್ತಂಭ ಜಗತ್ ಪ್ರಸಿದ್ಧವಾಗಿದೆ. ಇದು ಎರಡನೇ ಚಂದ್ರಗುಪ್ತನ ಕಾಲಕ್ಕೆ ಸೇರಿದ್ದು, ಅಂದಿನ ಲೋಹಜ್ಞಾನಕ್ಕೆ ಕನ್ನಡಿಯಾಗಿದೆ. ಇದು 23 ಅಡಿ 8 ಅಂಗುಲ ಉದ್ದವಿದೆ. 6000 ಕಿಲೋಗ್ರಾಂ ತೂಕವಿದೆ. ನೂರಾರು ವರ್ಷಗಳು ಕಳೆದರೂ ಮಳೆ, ಗಾಳಿಗೆ ಸ್ವಲ್ಪವೂ ತುಕ್ಕುಹಿಡಿಯದೆ ನಿಂತ ಪರಿ ಅಂದಿನ ಲೋಹ ವಿಜ್ಞಾನಕ್ಕೆ ಸಾಕ್ಷಿಯಾಗಿದೆ.

ಬುದ್ಧನ ತಾವುದ ಮೂರ್ತಿ: ಗುಪ್ತರ ಕಾಲದ ಬುದ್ಧನ ತಾಮ್ರದ ಮೂರ್ತಿಯೊಂದು ದೊರೆತ್ತಿದ್ದು, ಅದೀಗ ‘ಬರ್ಮಿಂಗ್‌ ಹ್ಯಾಂ’ ವಸ್ತು ಸಂಗ್ರಹಾಲಯದಲ್ಲಿದೆ. ಇದು 71/2 ಅಡಿ ಎತ್ತರವಿದೆ. 1000 ಕೆ.ಜಿ. ತೂಕವಿದೆ. ಇದೂ ಸಹ ಗುಪ್ತರಕಾಲದ ಲೋಹ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.

ಬಣ್ಣದ ತಯಾರಿಕೆ ಬಹಳ ಚೆನ್ನಾಗಿ ಬೆಳೆಯಿತು. ಇಂದಿಗೂ ಮಾಸದೇ ಉಳಿದ ವರ್ಣಲೇಪಿತ ಅಜಂತಾ ಚಿತ್ರಗಳು ಗುಪ್ತರ ಕಾಲದ ಅತ್ಯುತ್ತಮ ಕಲಾ ಕೊಡುಗೆಗಳಾಗಿವೆ. ಎ.ಎಲ್. ಭಾಷ್ಯಂ ರವರ ಪ್ರಕಾರ ʻದ ವಂಡರ್ ದಟ್ ವಾಸ್ ಇಂಡಿಯಾ’ ಎಂಬ ಕೃತಿಯಲ್ಲಿ ಹೇಳಿರುವಂತೆ ಗುಪ್ತರ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿ ಬಳಕೆಯಲ್ಲಿತ್ತು. ಎರಡನೆ ನಾಗಾರ್ಜುನನು ರಸಾಯನ ಶಾಸ್ತ್ರದಲ್ಲಿ ಬಹು ದೊಡ್ಡ ಪಂಡಿತನಾಗಿದ್ದನು. ಇವನನ್ನು ರಸಾಯನ ಶಾಸ್ತ್ರದ ಪಿತಾಮಹನೆಂದು ಕರೆಯಲಾಗಿದೆ.

ಗುಪ್ತರ ಕಾಲದ ಧರ್ಮ

ಗುಪ್ತರ ಕಾಲದ ಧರ್ಮ

ಗುಪ್ತರ ಕಾಲದಲ್ಲಿ ಹಿಂದೂ ಧರ್ಮ

ಗುಪ್ತರ ಆಳ್ವಿಕೆಯಿಂದ ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ಪ್ರಾಪ್ತವಾಯಿತು. ಇಲ್ಲಿಯವರೆಗೂ ಅಷ್ಟಾಗಿ ಇರದ ರಾಜಾಶ್ರಯ ಈಗ ದೊರೆತು ಪ್ರಬಲವಾಯ್ತು. ಪರಿಣಾಮವಾಗಿ ಬೌದ್ಧಧರ್ಮ ಅವನತಿಯತ್ತ ಸಾಗಿದರೆ ಹಿಂದೂಧರ್ಮ ಪುನರುಜ್ಜಿವನವಾಗತೊಡಗಿತು.

1. ಹಿಂದೂ ಕಲಾ ಮತ್ತು ವಾಸ್ತು ಪರಂಪರೆಯ ಪ್ರಾರಂಭ : ಗುಪ್ತರಿಗಿಂತ ಹಿಂದೆ ಹಿಂದು ದೇವರ ವಿಗ್ರಹ ಕೆತ್ತುವ ಅಥವಾ ದೇವಾಲಯ ನಿರ್ಮಿಸುವ ಪರಿಪಾಠವಿರಲಿಲ್ಲ. ಅದನ್ನು ಪ್ರಾರಂಭ ಮಾಡಿದವರೇ ಗುಪ್ತರು. ಪರಿಣಾಮವಾಗಿ ದೇವಾನು ದೇವತೆಗಳ ವಿಗ್ರಹಗಳು ಮತ್ತು ಅಸಂಖ್ಯಾತ ದೇವಾಲಯಗಳು ನಿರ್ಮಾಣವಾದವು. ಗುಪ್ತ ದೊರೆಗಳು ಹೇರಳವಾಗಿ ಧನಸಹಾಯವನ್ನೂ ಮಾಡಿದರು. ಆ ಮೂಲಕ ಗುಪ್ತರು ಭಾರತೀಯ ಕಲೆ ಮತ್ತು ವಾಸ್ತುಶಿಲ್ಪದ ಪರಂಪರೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ.

2. ಬ್ರಾಹ್ಮಣರಿಗೆ ಪ್ರಥಮ ಪ್ರಾಶಸ್ಯ : ಶ್ರೇಣೀಕೃತ ಭಾರತೀಯ ಸಮಾಜದಲ್ಲಿ ಬ್ರಾಹ್ಮಣರ ಸ್ಥಾನ ಮೊದಲಿನದಾಗಿದೆ. ಆದರೆ ಮೌರ್ಯರ ಮತ್ತು ಕುಶಾನರ ಕಾಲದಲ್ಲಿ ಬೌದ್ಧಧರ್ಮದ ಪ್ರಭಾವದ ಹಿನ್ನೆಲೆಯಲ್ಲಿ ಬ್ರಾಹ್ಮಣರ ಸ್ಥಾನಮಾನ ಮಂಕಾಗಿತ್ತು. ಯಾವಾಗ ಗುಪ್ತರು ಅಧಿಕಾರಕ್ಕೆ ಬಂದರೋ ಅವರು ಸನಾತನ ಧರ್ಮಕ್ಕೆ ಪ್ರಾಮುಖ್ಯತೆ ನೀಡತೊಡಗಿದರು. ಪರಿಣಾಮವಾಗಿ ಸನಾತನ ಧರ್ಮ ಅಥಾರ್ತ್ ಬ್ರಾಹ್ಮಣಧರ್ಮದ ವಾರಸುದಾರರಂತಿದ್ದ ಬ್ರಾಹ್ಮಣರಿಗೂ ಪ್ರಥಮ ಪ್ರಾಶಸ್ತ್ರ ಲಭ್ಯವಾಯಿತು. ಅರಮನೆಗಳಲ್ಲಿ, ಆಡಳಿತದಲ್ಲಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರಿಗೆ ವಿಶೇಷ ಮಹತ್ವ ನೀಡತೊಡಗಿದ್ದರಿಂದ ಅವರ ಸ್ಥಾನ ಹೆಚ್ಚಾಯಿತು.

3 ಯಜ್ಞ-ಯಾಗಗಳ ಏಲ್ಲೆ : ಹಿಂದೂ ಧರ್ಮದ ವಿಶೇಷ ಲಕ್ಷಣಗಳಲ್ಲಿ ಯಜ್ಞ ಯಾಗಗಳು ಬರುತ್ತವೆ. ಹಿಂದೂಧರ್ಮದ ಅನುಯಾಯಿಗಳಾದ ಗುಪ್ತರು ಯಜ್ಞ- ಯಾಗಾಧಿಗಳಿಗೆ ಪ್ರಾಶಸ್ತ್ರ ನೀಡತೊಡಗಿದರು. ಪರಿಣಾಮವಾಗಿ ಅಶ್ವಮೇದ, ವಾಜಪೇಯ, ರಾಜಸೂಯ ಯಾಗಗಳು ಬಹು ಜನಪ್ರಿಯವಾದವು.

4. ಶೈವ ಮತ್ತು ಶಾಕ್ತ ಪಂಥಗಳ ಪ್ರಚಾರ : ಗುಪ್ತರ ಕಾಲದಲ್ಲಿ ಲಕುಲೀಶನಿಂದ ಶೈವ ಪಂಥ ಹೆಚ್ಚು ಪ್ರಚಾರವಾಯಿತು. ಹಾಗೆಯೇ ಶಾಕ್ತ ಪಂಥಗಳು ಅಥವಾ ದೇವಿ/ಶಕ್ತಿಯ ಆರಾಧನೆ ಕೂಡ ಜನಪ್ರಿಯವಾಯಿತು.

5. ವಿವಿಧ ಹೆಸರುಗಳಿಂದ ದೇವರ ಆರಾಧನೆ : ಗುಪ್ತರ ಕಾಲಾವಧಿಯಲ್ಲಿ ಶಿವ ಮತ್ತು ವಿಷ್ಣುರ ಅವತಾರಗಳು ಜನಪ್ರಿಯವಾದವು. ವಿಷ್ಣುವನ್ನು ಕೃಷ್ಣ, ಜನಾರ್ಧನ, ಅನಂತಶಯನ, ಗದಾಧರ, ವಾಸುದೇವ, ಗೋವಿಂದ, ನಾರಾಯಣ ಎಂಬುದಾಗಿ ಕರೆದು ವಿವಿಧ ರೂಪಗಳಲ್ಲಿ ಆರಾಧಿಸತೊಡಗಿದರು. ಶಿವನನ್ನು ಜನಾರ್ಧನ, ಶಂಕರ, ಹರನೆಂದು ಪೂಜಿಸತೊಡಗಿದರು. ಪಾರ್ವತಿಯು ಆಧಿಶಕ್ತಿ, ಭಗವತಿಯಾಗಿ ಕಂಡು ಬಂದಳು. ವಿಗ್ರಹಾರಾಧನೆ ಬಹು ಜನಪ್ರಿಯವಾಯಿತು.

6. ಪುರಾಣಗಳ ಪರಿಪೂರ್ಣತೆ : ಹಿಂದೂ ಧರ್ಮದ ಅವಿಭಾಜ್ಯ ಅಂಗಗಳಾದ 18 ಪುರಾಣಗಳು ಪರಿಪೂರ್ಣವಾಗಿ ರಚಿಸಲ್ಪಟ್ಟಿದ್ದು ಗುಪ್ತರ ಕಾಲಾವಧಿಯಲ್ಲಿ. ಅವು ಪುನಃ ಬರೆಯಲ್ಪಟ್ಟಿದ್ದು ಮತ್ತು ಪರಿಷ್ಕಾರವಾದದ್ದೂ ಆ ಕಾಲಾವಧಿಯಲ್ಲೆ.

7. ವೈಷ್ಣವ ಪಂಥದ ಪ್ರಾಧಾನ್ಯತೆ : ಗುಪ್ತ ಅರಸರು ಬಹುಮುಖ್ಯವಾಗಿ ವಿಷ್ಣು ಆರಾಧಕರಾಗಿದ್ದರು. ತಮ್ಮನ್ನು ಪರಮ ಭಾಗವತರೆಂದು ಕರೆದುಕೊಂಡಿದ್ದಾರೆ. ಗುಪ್ತರ ನಾಣ್ಯಗಳಲ್ಲಿ ವಿಷ್ಣುವಿನ ಪತ್ನಿ ಲಕ್ಷ್ಮಿಯ ಚಿತ್ರ ಮುದ್ರಿಸಲ್ಪಟ್ಟಿದೆ. ಅರಸರು ವಿಷ್ಣುವಿನ ವಾಹನವಾದ ಗರುಡನ ಚಿತ್ರವನ್ನು ಬಳಸುತ್ತಿದ್ದರು. ಅವರ ಬಾವುಟವನ್ನು ವಿಷ್ಣು ದ್ವಜವೆಂದು ಕರೆಯುತ್ತಿದ್ದರು

8. ಸಪ್ತ ಮಾತೃಕೆಯರ ಆರಾಧನೆ : ಗುಪ್ತರ ಕಾಲದಲ್ಲಿ ಸಪ್ತಮಾತೃಕೆಯರ ಹೆಸರುಗಳು ಕಂಡು ಬರುತ್ತವೆ. ಬ್ರಾಹ್ಮ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಂದ್ರಿ, ಚಾಮುಂಡಿ ಎಂಬ ಸಪ್ತ ಮಾತೃಕೆಯರ ಆರಾಧನೆ ಜನಪ್ರಿಯವಾಗಿರುವುದು ಕಂಡು ಬರುತ್ತದೆ.

ರಜಪೂತರ ಮೂಲ

ರಜಪೂತರ ಮೂಲ

ಪರಿಚಯ:
ರಜಪೂತಗಳ ಮೂಲದ ಪ್ರಶ್ನೆ ಭಾರತೀಯ ಇತಿಹಾಸಲೇಖನದಲ್ಲಿ ದೀರ್ಘಕಾಲದಿಂದಲೂ ಚರ್ಚೆಗೆ ಒಳಗಾಗಿರುವ ಮಹತ್ವದ ವಿಷಯವಾಗಿದೆ. ಕೆಲ ಪಂಡಿತರು ರಾಜಪುತರಿಗೆ ವಿದೇಶೀ ಮೂಲವಿದೆ ಎಂದು ವಾದಿಸಿದರೆ, ಇನ್ನಿತರರು ಅವು ಸಂಪೂರ್ಣವಾಗಿ ಭಾರತೀಯ ಮೂಲದವರೇ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ವಿಭಿನ್ನ ಸಾಕ್ಷ್ಯಗಳು ಮತ್ತು ವಿಧಾನಗಳನ್ನು ಆಧರಿಸಿದ ಈ ಪರಸ್ಪರ ವಿರೋಧಿ ಅಭಿಪ್ರಾಯಗಳು ಪಂಡಿತರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿವೆ.

ರಜಪೂತ ಎಂಬ ಪದವನ್ನು ಪ್ರಪ್ರಥಮ ಬಾರಿಗೆ ಕ್ರಿ.ಶ.17ನೆಯ ಶತಮಾನದಲ್ಲಿ ಬಳಸಲಾಯಿತು. ರಜಪೂತರು ಯಾರು? ಅವರ ಮೂಲ ಎಲ್ಲಿಯದು? ಇವುಗಳಿಗೆ ಸಮರ್ಪಕವಾದ ಉತ್ತರಗಳು ದೊರೆತಿಲ್ಲ. ಇವರು ಕ್ಷತ್ರಿಯರ ಜೊತೆಗೆ ಯಾವ ಸಂಬಂಧವನ್ನು ಹೊಂದಿದ್ದರು ಎಂಬ ವಿಷಯವೂ ತಿಳಿಯದು. ಇದರಿಂದಾಗಿ ರಜಪೂತರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದ್ದರಿಂದ ಇತಿಹಾಸಕಾರರ ವಿಭಿನ್ನ ಸಿದ್ಧಾಂತಗಳನ್ನು ಈ ಕೆಳಗಿನಂತೆ ನೋಡಬಹುದು.

1) ವಿದೇಶಿ ಮೂಲದ ಸಿದ್ಧಾಂತ:

ರಜಪೂತರ ವಿದೇಶಿ ಮೂಲ ಸಿದ್ಧಾಂತವನ್ನು ಪ್ರತಿಪಾದಿಸಿದವರು ಕರ್ನಲ್ ಟಾಡ್, ವಿ.ಎ.ಸ್ಮಿತ್ ಹಾಗೂ ಕ್ರೂಕ್ ಮುಂತಾದವರು. ವಿದೇಶದಿಂದ ಬಂದು ಭಾರತದಲ್ಲಿಯೇ ನೆಲಸಿದ ಶಕರು, ಕುಶಾನರು ಹಾಗು ಹೂಣರು ಭಾರತದ ಮೇಲೆ ದಾಳಿ ಮಾಡಿ ಅಂತಿಮವಾಗಿ ಅವರು ಭಾರತೀಯರೊಂದಿಗೆ ಬೆರೆತುಹೋದರು. ವೈದಿಕ ಹಾಗೂ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದ ಇವರು ಭಾರತೀಯ ಧರ್ಮವನ್ನು ಅನುಸರಿಸಲಾರಂಭಿಸಿದರು. ಕಾಲಾನಂತರ ಭಾರತೀಯರೊಂದಿಗೆ ವೈವಾಹಿಕ ಸಂಬಂಧವನ್ನು ಬೆಳಸಿಕೊಂಡಿದುದು ಅಲ್ಲದೆ ಭಾರತೀಯ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಸ್ವೀಕರಿಸಿ ಭಾರತೀಯರೇ ಆದರು. ತಮ್ಮ ಮೂಲ ಸತ್ವವನ್ನು ಕಳೆದುಕೊಂಡು ಭಾರತೀಯತೆಯನ್ನು ಅಳವಡಿಸಿಕೊಂಡರು. ಶಿವ, ಸೂರ್ಯ, ಬುದ್ಧ ಹಾಗೂ ಅಗ್ನಿ ಮುಂತಾದ ದೇವತೆಗಳನ್ನು ಪೂಜಿಸುವ ಮೂಲಕ ಭಾರತೀಯ ಹೆಸರುಗಳನ್ನು ಇಟ್ಟುಕೊಂಡು ಕೊನೆಗೆ ಭಾರತೀಯರೇ ಆದರು. ಅಶ್ವಮೇಧಯಾಗ, ಅಶ್ವಪೂಜೆ, ಸ್ತ್ರೀಯರ ಸ್ಥಾನಮಾನ, ಮಧ್ಯಸೇವನೆ, ಆಯುಧಗಳ ಪೂಜೆ ಮುಂತಾದ ವಿಷಯಗಳಲ್ಲಿ ವಿದೇಶಿಯರಾದ ಶಕರು, ಹೂಣರು ಹಾಗೂ ಕುಶಾನರ ಮತ್ತು ರಜಪೂತರ ನಡುವೆ ಯಾವ ಬದಲಾವಣೆ ಕಾಣಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ರಜಪೂತರು ಹಾಗೂ ವಿದೇಶಿ ಬುಡಕಟ್ಟುಗಳ ನಡುವಿನ ಹೋಲಿಕೆಯನ್ನು ಬಯಲಿಗೆಳೆದ ಇತಿಹಾಸ ತಜ್ಞರೆಂದರೆ ಕರ್ನಲ್ ಟಾಡ್. ಕರ್ನಲ್ ಟಾಡ್‌ ಈ ಅಭಿಪ್ರಾಯವನ್ನು ಬೆಂಬಲಿಸಿದವರೆಂದರೆ ವಿಲಿಯಂ ಬ್ರೂಕ್, ಡಾ| ಈಶ್ವರಿ ಪ್ರಸಾದ್ ಹಾಗೂ ಡಾ॥ ಬಂಡಾರಕರ್.ರಜಪೂತರು ತಮ್ಮನ್ನು ರಾಜಪುತ್ರರು ಎಂದು ಕರೆದುಕೊಂಡಿದ್ದಾರೆ. ರಜಪೂತ ಎಂಬ ಪದವು ರಾಜಪುತ್ರ ಎಂಬ ಪದದ ಅಪಬ್ರಂಶವಾಗಿದೆ. ರಜಪೂತರು ವಿದೇಶಿ ಮೂಲದವರು ಎಂಬ ಅಭಿಪ್ರಾಯವನ್ನು ವಿದ್ವಾಂಸರು ಈ ಕೆಳಗಿನ ಅಂಶಗಳಿಂದಲೂ ದೃಡಪಡಿಸಿದ್ದಾರೆ.

1) ರಜಪೂತರು ಎನ್ನುವ ವಿಶಿಷ್ಟ ಹೆಸರು ವೇದಗಳ ಕಾಲದ ಸಾಹಿತ್ಯದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ಆದರೆ ಇಂತಹ ಹೆಸರು ಹೂಣರು ಭಾರತಕ್ಕೆ ಬಂದಾಗಿನಿಂದ ಈಚೆಗೆ ಕಂಡುಬರುತ್ತದೆ. ಆದುದರಿಂದ ರಜಪೂತರು ವಿದೇಶಿಯರು ಎಂಬ ವಾದವನ್ನು ಇತಹಾಸಕಾರರು ಮಂಡಿಸುತ್ತಾರೆ.

2) ರಜಪೂತರು ಆಚರಿಸುತ್ತಿದ್ದ ಅಗ್ನಿಪೂಜೆ ಹೂಣರು ಹಾಗೂ ಶಕರಿಂದ ಬಳುವಳಿಯಾಗಿ ಬಂದಿದೆ.

3) ಭಾರತಕ್ಕೆ ಬಂದ ವಿದೇಶಿ ದಾಳಿಕೋರರು ಹಿಂದೂ ಧರ್ಮವನ್ನು ಒಪ್ಪಿಕೊಂಡರು. ಇವರು ಯುದ್ಧ ಪ್ರಿಯರು ಹಾಗೂ ಆಕ್ರಮಣಶೀಲರೂ ಆಗಿದ್ದು, ಸಹಜವಾಗಿ ಅವರು ಹೋರಾಟದ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದರು. ನಂತರ ಕ್ಷತ್ರಿಯ ವರ್ಗಕ್ಕೆ ಸೇರಿ ಗುಜರಾತ್ ಪ್ರಾಂತದಲ್ಲಿ ನೆಲಸಿದರು.

4) ರಜಪೂತ ಮನೆತನಗಳಾದ ಚೌಹಾನರು, ಪ್ರತೀಹಾರರು, ಪರಮಾರರು ಹಾಗೂ ಸೋಲಂಕಿಗಳು ಶಕರಿಂದ ರೂಪಾಂತರ ಹೊಂದಿದವರೆಂದು ಕರ್ನಲ್ ಟಾಡ್ ಅಭಿಪ್ರಾಯಪಟ್ಟಿದ್ದಾರೆ.

2) ದೇಶೀಯ ಸಿದ್ಧಾಂತ ಅಥವಾ ಸೂರ್ಯ ಕುಲ ಸಿದ್ಧಾಂತ:

ಗೌರಿಶಂಕರ್ ಓಝ, ವೇದವ್ಯಾಸ, ಡಾ|| ಸಿ.ಎ.ವೈದ್ಯ ಮುಂತಾದ ವಿದ್ವಾಂಸರು ರಜಪೂತರು ವಿದೇಶಿಯರು ಅಲ್ಲ. ಅವರು ದೇಶೀಯರೇ ಆಗಿದ್ದಾರೆ ಎಂದು ವಾದಿಸಿದ್ದಾರೆ. ಇವರು ರಜಪೂತರ ವಿದೇಶಿ ಮೂಲವನ್ನು ತಿರಸ್ಕರಿಸುತ್ತಾರೆ. ಗೌರಿಶಂಕರ್ ಓಝರವರು ತಮ್ಮ ‘ಹಿಸ್ಟರಿ ಆಪ್ ರಾಜಪುಠಾಣ ಎಂಬ ಕೃತಿಯಲ್ಲಿ ರಜಪೂತರು ಭಾರತೀಯರು ಎಂದು ವಾದಿಸಿದ್ದಾರೆ. ರಜಪೂತರು ಆರ್ಯ ಜನಾಂಗಕ್ಕೆ ಸೇರಿದವರು ಹಾಗೂ ಕ್ಷತ್ರಿಯ ವಂಶಗಳಾದ ಸೂರ್ಯ ಹಾಗೂ ಚಂದ್ರ ವಂಶಗಳಿಗೆ ಸೇರಿದವರು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಶ್ರೀರಾಮನಿಂದ ವಂಶೋದ್ಧವವಾದವರು ಸೂರ್ಯವಂಶೀಯರು, ಶ್ರೀಕೃಷ್ಣನ ಸಂತತಿಯವರು ಚಂದ್ರವಂಶಸ್ಥರೆಂದು ತಿಳಿಯಲಾಗಿದೆ. ಬೌದ್ಧಿಕ ದೇಹ ಪ್ರಮಾಣ, ಸ್ವಾಭಿಮಾನ, ತ್ಯಾಗದ ಗುಣಗಳು ಆರ್ಯವಂಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಇವೆಲ್ಲ ಗುಣಗಳು ರಜಪೂತರಲ್ಲಿ ಕಂಡುಬಂದಿದ್ದರಿಂದ ಅವರು ವಿದೇಶಿಯರು ಎಂದು ಹೇಳಲು ಬರುವುದಿಲ್ಲ ಎಂದು ಹೇಳಲಾಗಿದೆ. ರಜಪೂತರ ಭಾರತೀಯ ಮೂಲವನ್ನು ಪ್ರತಿಪಾದಿಸುವ ಆರ್.ಸಿ. ಮುಜುಮ್ದಾರರು “ರಜಪೂತರು ಕ್ಷತ್ರಿಯ ಮೂಲದವರಾಗಿದ್ದು ಪುರಾಣಗಳಲ್ಲಿ ಮತ್ತು ಬಾಣನ ಹರ್ಷಚರಿತದಲ್ಲಿ ರಜಪೂತರ ಹೆಸರನ್ನು ಉಲ್ಲೇಖಿಸಲಾಗಿದೆ. ರಜಪೂತ ಮೂಲದವರು ಕ್ಷತ್ರಿಯ ಹಾಗೂ ಬ್ರಾಹ್ಮಣ ಪಂಗಡಕ್ಕೂ ಸೇರಿದವರಾಗಿದ್ದರು. ರಜಪೂತರ ಮೂಲ ಪದ ರಾಜಪುತ್ರ ಪದವನ್ನು ಮಹಾ ಭಾರತದಲ್ಲಿಯೂ ಕಾಣಬಹುದಾಗಿದೆ. ಮಹಾಭಾರತದ ವಿರಾಟ ಪರ್ವದಲ್ಲಿ ಬ್ರೌಪದಿಯನ್ನು ರಾಜಪುತ್ರಿಯೆಂದು ಸಂಭೋದಿಸಲಾಗಿದೆ. ರಾಜಸ್ಥಾನದ ಅರಸರು ಇಂದಿಗೂ ಚಂದ್ರವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಬಿಕಾನೇರ್, ಮೇವಾಡ್ ಹಾಗೂ ಜಯಪುರದ ಅರಸರು ಇಂದಿಗೂ ಸೂರ್ಯವಂಶಕ್ಕೆ ಸೇರಿದವರು ಎಂದು ಹೇಳಲಾಗಿದೆ.

3) ಅಗ್ನಿಕುಲ ಸಿದ್ಧಾಂತ:

ಅನೇಕ ರಜಪೂತ ಅರಸರು ತಮ್ಮನ್ನು ಅಗ್ನಿಕುಲದವರು ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕಥೆಯೊಂದನ್ನು ಚಾಂದ್ ಬರ್ದಾಯ್ ಬರೆದ ‘ಪೃಥ್ವಿರಾಜರಾಸೋ’ ಎಂಬ ಕಾವ್ಯದಲ್ಲಿ ಕಾಣಬಹುದಾಗಿದೆ. ಪುರಾಣ ಪುರುಷನಾದ ಪರಷುರಾಮನು ಕ್ಷತ್ರಿಯರನ್ನು ನಾಶಮಾಡಿದಾಗ ಬ್ರಾಹ್ಮಣರು ರಕ್ಷಕರಿಲ್ಲದೆ ಪರಿತಪಿಸಿದರು. ಅವರು ತಮ್ಮನ್ನು ರಕ್ಷಿಸುವ ಯೋಧರಿಗಾಗಿ ಒಂದು ಯಜ್ಞವೊಂದನ್ನು ನಡೆಸಿದರು. ಈ ಯಜ್ಞವು ಸುಮಾರು 40 ದಿನಗಳವರೆಗೆ ನಡೆಯಿತು. ಯಜ್ಞದ ಕೊನೆಯ ದಿನದಲ್ಲಿ ಅಲ್ಲಿನ ಅಗ್ನಿಕುಂಡದಲ್ಲಿ ನಾಲ್ಕು ಜನ ವೀರ ಪುರಷರು ಉದ್ಭವಗೊಂಡರು. ಅವರು ಚೌಹಾನರು, ಪ್ರತಿಹಾರ, ಪರಮಾರ ಹಾಗೂ ಚಾಲುಕ್ಯ ಎಂಬ ನಾಲ್ಕು ವಂಶಗಳ ಮೂಲ ವ್ಯಕ್ತಿಗಳಾಗಿದ್ದರು. ಈ ಸಿದ್ಧಾಂತವು ಪೌರಾಣಿಕ ಅಂಶಗಳಿಗೆ ಸಂಬಂಧಪಟ್ಟ ಕಾರಣದಿಂದ ವಿದ್ವಾಂಸರು ಇದರ ಕಡೆಗೆ ಹೆಚ್ಚು ಒಲವು ತೋರಿಸಿಲ್ಲ. ಡಾ| ಈಶ್ವರಿ ಪ್ರಸಾದರು ಈ ಸಿದ್ಧಾಂತ ಕಾಲ್ಪನಿಕವಾಗಿದೆ ಎಂದು ಹೇಳಿದ್ದಾರೆ.

4) ಗೊಂಡ ವಂಶದ ಅರಸರ ಸಿದ್ಧಾಂತ:

ರಜಪೂತರು ಇಲ್ಲಿನ ಮೂಲ ನಿವಾಸಿಗಳ ವಂಶಸ್ತರಾಗಿದ್ದಾರೆ ಎಂದು ಕೆಲ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಸತ್ಯನಾಥ ಅಯ್ಯರ್ ಅವರು ರಜಪೂತರು ಗೊಂಡರು ಹಾಗೂ ಭಾರರೆಂಬ ಮೂಲದವರಾಗಿದ್ದು, ಭಾರತೀಯರಲ್ಲಿಯೇ ಅನಾಗರಿಕ ಗುಂಪುಗಳಾಗಿದ್ದರು. ಮುದ್ರೆ ಎಂಬ ಬ್ರಾಹ್ಮಣ ಕುಲದವರಿಂದ ಸ್ಥಾಪಿಸಲ್ಪಟ್ಟ ಕೆಲವು ವಂಶೀಯರು ನಂತರ ಕ್ಷತ್ರಿಯರೆಂದು ಪ್ರಸಿದ್ಧರಾದರು. ಇದಕ್ಕೆ ಕಾರಣವೆಂದರೆ ಅವರು ಕ್ಷತ್ರಿಯರೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದುದು. ರಜಪೂತ ರಾಣಿಯಾದ ರಾಣಿ ದುರ್ಗಾವತಿ ‘ಗೊಂಡ ವಂಶ’ಕ್ಕೆ ಸೇರಿದವಳಾಗಿದ್ದಳೆಂಬುದು ಗಮನಿಸಬೇಕಾದ ಅಂಶವಾಗಿದೆ.

5) ಸರ್ವಸಮ್ಮತ ಸಿದ್ಧಾಂತ:

ಮೇಲಿನ ಎಲ್ಲಾ ಸಿದ್ಧಾಂತಗಳ ಆಧಾರದ ಮೇಲೆ ತಿಳಿದುಬರುವುದೇನೆಂದರೆ ರಜಪೂತರು ಪೂರ್ಣವಾಗಿ ಭಾರತೀಯರೂ ಅಲ್ಲ. ಪೂರ್ಣವಾಗಿ ವಿದೇಶಿಯರೂ ಅಲ್ಲ. ಅವೆರಡರ ಸಂಗಮವೇ ರಜಪೂತರು. ವಿದೇಶಿಯರಾದ ಹೂಣರು, ಕುಶಾನರು ಹಾಗೂ ಶಕರು ಭಾರತೀಯ ಬಹುಸಂಖ್ಯಾತ ಜನರೊಂದಿಗೆ ಬೆರೆತು ಕ್ಷತ್ರಿಯರೆನಿಸಿಕೊಂಡರು. ಆರಂಭದಲ್ಲಿ ರಜಪೂತರು ಹುಟ್ಟು ಹೋರಾಟಗಾರರಾಗಿದ್ದು ಸದಾ ಯುದ್ಧೋತ್ಸಾಹಿಗಳಾಗಿದ್ದರು. ಕಾಲ ಕಳೆದಂತೆ ಅವರಲ್ಲಿ ವಿದೇಶಿಯ ಭಾವನೆ ಮರೆತುಹೋಗಿ ಭಾರತೀಯ ಸಂಸ್ಕೃತಿ ಮನೆ ಮಾಡಿತು. ನಂತರದ ದಿನಗಳಲ್ಲಿ ರಜಪೂತರು ಸ್ವಾತಂತ್ರ್ಯ ಅಭಿಮಾನ ಹಾಗೂ ಆತ್ಮಗೌರವವನ್ನು ಬೆಳೆಸಿಕೊಂಡರು. ಮುಸ್ಲಿಂರನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಂಡರು. ಆದರೆ ಮುಸ್ಲಿಂ ಸುಲ್ತಾನರ ಮೋಸ, ವಂಚನೆ ಹಾಗು ಕುಯುಕ್ತಿಯಿಂದ ರಜಪೂತರು ಸೋಲನುಭವಿಸಬೇಕಾಯಿತು. ಒಟ್ಟಿನಲ್ಲಿ ರಜಪೂತರು ವಿದೇಶಿಯರೆಂದು ಕಂಡುಬಂದರೂ ಅವರು ಭಾರತೀಯರೇ ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ.

ಉಪಸಂಹಾರ:
ಅಂತಿಮವಾಗಿ, ರಾಜಪುತಗಳ ಮೂಲದ ಕುರಿತು ನಡೆಯುವ ವಾದವಿವಾದಗಳು ಇತಿಹಾಸವು ಸದಾ ಬೆಳೆಯುವ ಹಾಗೂ ಪುನರ್ವ್ಯಾಖ್ಯಾನಗೊಳ್ಳುವ ವಿಷಯವೆಂಬುದನ್ನು ತೋರಿಸುತ್ತವೆ. ಪಂಡಿತರು ತಮ್ಮ ತಮ್ಮ ಸಿದ್ಧಾಂತಗಳನ್ನು ಉತ್ಸಾಹದಿಂದ ಸಮರ್ಥಿಸಿದರೂ, ಅಂತಿಮ ಒಮ್ಮತದ ಕೊರತೆ ಇತಿಹಾಸವು ವ್ಯಾಖ್ಯಾನದ ಮೇಲೂ ಅವಲಂಬಿತವಾಗಿದೆ ಎಂಬುದನ್ನು ನೆನಪಿಸುತ್ತದೆ.

ರಜಪೂತರ ಕಾಲದ ಸಾಹಿತ್ಯ

ರಜಪೂತರ ಕಾಲದ ಸಾಹಿತ್ಯ

ಮಧ್ಯಯುಗದ ರಾಜಪುತ ರಾಜಸಭೆಗಳು ಕೇವಲ ಯುದ್ಧವೀರತೆಯ ಕೇಂದ್ರಗಳಾಗಿರಲಿಲ್ಲ; ಅವು ಬೌದ್ಧಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಚೈತನ್ಯಮಯ ಕೇಂದ್ರಗಳಾಗಿದ್ದವು. ರಾಜರು ಪಂಡಿತರು, ಕವಿಗಳು ಮತ್ತು ಇತಿಹಾಸಕಾರರಿಗೆ ಆಶ್ರಯ ನೀಡಿದ್ದು, ಜ್ಞಾನವನ್ನು ರಾಜ್ಯಾಡಳಿತ ಮತ್ತು ಸಾಂಸ್ಕೃತಿಕ ಗೌರವದ ಪ್ರಮುಖ ಅಂಶವೆಂದು ಪರಿಗಣಿಸಿದ್ದರು. ಅರಮನೆಯ ಸಭಾಂಗಣಗಳಲ್ಲಿ ಸಂಸ್ಕೃತ, ಡಿಂಗಲ್, ಬ್ರಜ್ ಮತ್ತು ಪರ್ಶಿಯನ್ ಭಾಷೆಗಳ ಸಾಹಿತ್ಯ ಅರಳಿತು. ವಂಶಗೌರವ ಮತ್ತು ವೀರತೆಯನ್ನು ಕೀರ್ತಿಸುವ ಕಾವ್ಯಗಳೊಂದಿಗೆ ತತ್ತ್ವಚಿಂತನೆ, ನೈತಿಕತೆ ಮತ್ತು ಇತಿಹಾಸದ ಬರವಣಿಗೆಗಳು ಬೆಳವಣಿಗೆಯಾಯಿತು. ಈ ಬೌದ್ಧಿಕ ವಾತಾವರಣವು ಪ್ರಾದೇಶಿಕ ಗುರುತನ್ನು ಉಳಿಸಿ ಭಾರತೀಯ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿತು.

ಶಿಕ್ಷಣ:

ರಜಪೂತರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ರಜಪೂತರ ಕಾಲದ ವಿದ್ಯಾರ್ಥಿಗಳು 14 ವಿಷಯಗಳನ್ನು ಅಧ್ಯಯನ ಮಾಡಬೇಕಿತ್ತು. ವಿದ್ಯಾರ್ಥಿಗಳಿಗೆ ಕೃಷಿ, ವಾಣಿಜ್ಯ, ಶಿಲ್ಪಕಲೆ ಹಾಗೂ ಅಪರಾಧಶಾಸ್ತ್ರಗಳ ಕುರಿತು ಶಿಕ್ಷಣ ನೀಡಲಾಗುತ್ತಿತ್ತು. ನಳಂದ, ಪಾಟಲಿಪುತ್ರ, ಉಜೈನಿ ಹಾಗೂ ಕಂಪಿಲಿ ಪ್ರಮುಖ ಶಿಕ್ಷಣ ಕೇಂದ್ರಗಳಾಗಿದ್ದವು.

ಸಾಹಿತ್ಯ :

ರಜಪೂತ ರಾಜರು ಸ್ವತಃ ಶ್ರೇಷ್ಠ ವಿದ್ವಾಂಸರು ಮತ್ತು ಬರಹಗಾರರಾಗಿದ್ದರು. ಅಲ್ಲದೆ ಸಾಹಿತ್ಯದ ಪೋಷಕರು, ಸಾಹಿತ್ಯಾಭಿಮಾನಿಗಳು ಸಹ ಆಗಿದ್ದರು. ರಜಪೂತರು ಸಾಹಿತ್ಯಕ್ಕೆ ನೀಡಿದ ಅಪಾರ ಪ್ರೋತ್ಸಾಹದಿಂದ ಹಲವಾರು ಪ್ರಮುಖ ಸಾಹಿತ್ಯಕ ಕೃತಿಗಳು ರಚನೆಗೊಂಡವು. ಖಗೋಳ ಶಾಸ್ತ್ರ, ವೈದ್ಯಕೀಯ, ವ್ಯಾಕರಣ, ಮತ್ತು ವಾಸ್ತುಶಿಲ್ಪ ವಿಷಯಗಳಲ್ಲಿಯು ಕೃತಿಗಳು ರಚಿಸಲ್ಪಟ್ಟವು. ರಜಪೂತರ ಕಾಲದಲ್ಲಿ ರಚನೆಗೊಂಡ ಪ್ರಮುಖ ಕೃತಿಗಳೆಂದರೆ;

ಭಟ್ಟಿ – ರಾವಣವಧ,

ಮಾಘ – ಶಿಶುಪಾಲವಧೆ,

ಶ್ರೀ ಹರ್ಷ – ನೈಷದ ಚರಿತ,

ಧಾಮೋದರಗುಪ್ತ – ಕಲ್ತನಿಮಾತಾ,

ಜಯದೇವ – ಗೀತ ಗೋವಿಂದ

ರಜಪೂತರ ಕಾಲದಲ್ಲಿ ರಚನೆಯಾದ ಗದ್ಯಕೃತಿಗಳು:-

ದಂಡಿ – ದಶಕುಮಾರ ಚರಿತ,

ದಮ್ಮಪಾಲ – ತಿಲಕಮಂಜರಿ,

ಯಶಸ್ತಿಲಕ – ವಾಸವದತ್ತ,

ಸುಬಂಧು – ಕಾದಂಬರಿ,

ರಜಪೂತರ ಕಾಲದಲ್ಲಿ ನಾಟಕ ರೂಪದಲ್ಲಿ ಕೆಲವು ಕೃತಿಗಳು ರಚಿಸಲ್ಪಟ್ಟವು. ಅಂತಹ ಕೃತಿಗಳೆಂದರೆ;

ಭವಭೂತಿ – ಮಾಲತಿ ಮಾಧವ,

– ಮಹಾವೀರಚರಿತ,

– ಉತ್ತರ ರಾಮಚರಿತ,

ಆನಂದ ವರ್ಧನ – ಪ್ರಭೋಧ ಚಂದ್ರ,

ರಾಜಶೇಖರ – ಕರ್ಪೂರ ಮಂಜರಿ,

ಭಟ್ಟನಾರಾಯಣ – ವೇಣಿಸಂಹಾರ,

ಮುರಾರಿ – ಅನರ್ಷರಾಘವ,

ರಜಪೂತರ ಕಾಲದಲ್ಲಿ ಕೆಲವು ಐತಿಹಾಸಿಕ ಕೃತಿಗಳು ಸಹ ರಚನೆಗೊಂಡವು, ಅಂತಹ ಪ್ರಮುಖ ಕೃತಿಗಳೆಂದರೆ:-

ಕಲ್ಹಣನ – ರಾಜತರಂಗಿಣಿ,

ಬಿಲ್ಹಣನ – ವಿಕ್ರಮಾಂಕ ದೇವಚರಿತ

ಸಂದ್ಯಾಕಾರಂದಿತನ – ರಾಮಚರಿತ,

ಈ ಕೃತಿಗಳಲ್ಲದೆ ವ್ಯಕ್ತಿಚರಿತ್ರೆಯನ್ನು ಆಧರಿಸಿ ಕೆಲವು ಕೃತಿಗಳು ರಚಿಸಲ್ಪಟ್ಟವು. ಅವುಗಳೆಂದರೆ

ಚಾಂದ್ಬರ್ದಾಯಿಯ – ಪೃಥ್ವಿರಾಜ ರಾಸೋ

ಹೇಮಚಂದ್ರನ – ಕುಮಾರಪಾಲ ಚರಿತ

ಸಾಹಿತ್ಯದ ಇತರೆ ಪ್ರಕಾರಗಳ ಆಧರಿಸಿ ಕೆಲವು ಕೃತಿಗಳು ರಚಿಸಲ್ಪಟ್ಟವು. ಅವುಗಳೆಂದರೆ:-

ಕ್ಷೇಮೇಂದ್ರನ-ಬೃಹತ್ ಕಥಾಮಂಜರಿ.

ಸೋಮದೇವಸಕ ಸಪ್ತಾತಿಯ – ಕಥಾಸರಿತ್ ಸಾಗರ

ವ್ಯಾಕರಣಕ್ಕೆ ಸಂಬಂಧಿಸಿದಂತೆ ಜಯಾದಿತ್ಯನು ಪಾತಂಜಲಿಯ ಮಹಾಭಾಷ್ಯದ ಮೇಲೆ ಭಾಷ್ಯಕೃತಿಯ ರಚಿಸಿದನು. ಸರ್ವವರ್ಮನ ಕಾತಂತ್ರ ಮತ್ತೊಂದು ವ್ಯಾಕರಣ ಕೃತಿಯಾಗಿದೆ.

ರಜಪೂತರ ಕಾಲದಲ್ಲಿ ವಾತ್ಸಾಯನನ ಕಾಮಸೂತ್ರಕ್ಕೆ ಹಲವು ಬಾಷ್ಯಗಳನ್ನು ಬರೆಯಲಾಯಿತು.

ಕೋಶಪಂಡಿತ – ಕೋಶಶಾಸ್ತ್ರ,

ಸಾರಂಗದೇವ –  ಸಂಗೀತ ರತ್ನಾಕರ,

ತತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ,

ಹೇಮಚಂದ್ರ – ಪ್ರಮಮ್ ಮೀಮಾಂಸೆ,

ಧರ್ಮಕೀರ್ತಿ – ನ್ಯಾಯಬಂಧು.

ವೈದ್ಯಕೀಯ ಮತ್ತು ಖಗೋಳಶಾಸ್ತ್ರದ ಕೃತಿಗಳಲ್ಲಿ

ವಿಜ್ಞಾನೇಶ್ವರ – ಮಿತಾಕ್ಷರ ಸಂಹಿತೆ,

ವಾಗ್ಟಟ – ಅಷ್ಟಾಂಗ ಸಂಗ್ರಹ,

ಭಾಸ್ಕರಾಚಾರ್ಯ – ಸಿದ್ಧಾಂತ ಶಿರೋಮಣಿ.

ರಜಪೂತರ ಕಾಲದಲ್ಲಿ ಸಾಹಿತ್ಯಕ ಕೃತಿಗಳಲ್ಲದೆ ವೈದ್ಯಕೀಯ, ಖಗೋಳ, ಮತ್ತು ವ್ಯಾಕರಣ ಹಾಗೂ ಚಾರಿತ್ರಿಕ ಕೃತಿಗಳು ರಚನೆಯಾದವು

ಉಪಸಂಹಾರ:

ರಾಜಪುತ ರಾಜಸಭೆಗಳ ಸಾಹಿತ್ಯಿಕ ಕೊಡುಗೆಗಳು ಭಾರತೀಯ ಬೌದ್ಧಿಕ ಇತಿಹಾಸದಲ್ಲಿ ಶಾಶ್ವತವಾದ ಗುರುತು ಮೂಡಿಸಿವೆ. ವಿವಿಧ ಭಾಷೆಗಳು ಮತ್ತು ಸಾಹಿತ್ಯ ಪ್ರಕಾರಗಳಿಗೆ ಆಶ್ರಯ ನೀಡುವ ಮೂಲಕ ವೀರಗಾಥೆಗಳು, ರಾಜಸಭಾ ವೃತ್ತಾಂತಗಳು, ಭಕ್ತಿ ಕಾವ್ಯಗಳು ಮತ್ತು ತತ್ತ್ವಚಿಂತನೆಯ ಕೃತಿಗಳು ಸಂರಕ್ಷಿಸಲ್ಪಟ್ಟವು. ಈ ಸಾಹಿತ್ಯವು ರಾಜಸತ್ತೆ ಮತ್ತು ವೀರತೆಯನ್ನು ಮಾತ್ರವಲ್ಲ, ಕಾಲಘಟ್ಟದ ಸಾಮಾಜಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಸಂವಹನಗಳನ್ನೂ ಪ್ರತಿಬಿಂಬಿಸಿತು. ಜ್ಞಾನ ಮತ್ತು ಸಾಹಿತ್ಯಕ್ಕೆ ನೀಡಿದ ಮಹತ್ವವು ಮುಂದಿನ ತಲೆಮಾರಿನ ಬರಹಗಾರರು ಮತ್ತು ಇತಿಹಾಸಕಾರರಿಗೆ ಪ್ರೇರಣೆಯಾಯಿತು. ಹೀಗಾಗಿ, ರಾಜಪುತ ಸಾಹಿತ್ಯ ಆಶ್ರಯವು ಯುದ್ಧವಿಜಯಗಳಷ್ಟೇ ಗೌರವಯುತ ಹಾಗೂ ಶಾಶ್ವತವೆಂಬ ಸಂದೇಶವನ್ನು ನೀಡುತ್ತದೆ.

ರಜಪೂತರ ಕಾಲದ ಸಾಮಾಜಿಕ ಜೀವನ

ರಜಪೂತರ ಕಾಲದ ಸಾಮಾಜಿಕ ಜೀವನ

ರಜಪೂತರ ಕಾಲದ ಸಾಮಾಜಿಕ ವ್ಯವಸ್ಥೆ ಚಾತುರ್ವಣ್ರ ಪದ್ಧತಿಯ ಅಡಿಪಾಯದ ಮೇಲೆ ನಿರ್ಮಾಣವಾಗಿತ್ತು. ಇದರಿಂದ ಜಾತಿ ಪದ್ಧತಿ ಆ ಕಾಲದಲ್ಲಿಯೂ ಅತ್ಯಂತ ಕಠಿಣವಾಗಿತ್ತು ಎಂಬುದನ್ನು ತಿಳಿಯಬಹುದು. ಮುಸ್ಲಿಂ ಬರಹಗಾರರ ಪ್ರಕಾರ ರಜಪೂತರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವರ್ಣಗಳೆಂದರೆ ಸಬಕುಪಿರಿಯಾ (ಕ್ಷತ್ರಿಯ) ಬ್ರಹ್ಮ (ಬ್ರಾಹ್ಮಣ) ಬೈಸೂರಿಯಾ (ವೈಶ್ಯ) ಸುದರಿಯಾ (ಶೂದ್ರ). ಈ ನಾಲ್ಕು ವರ್ಣಗಳ ಜೊತೆಗೆ ಅನೇಕ ಉಪಜಾತಿಗಳು ಸಹ ಪ್ರಚಲಿತದಲ್ಲಿದ್ದವು.

ಬ್ರಾಹ್ಮಣರು ರಜಪೂತರ ಕಾಲದಲ್ಲಿ ಸಾಮಾಜಿಕವಾಗಿ ಮೇರು ಸ್ಥಾನದಲ್ಲಿ ಇದ್ದರು. ಉಳಿದ ವರ್ಗದ ಜನ ಇವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಇವರು ಮಂತ್ರಿಗಳಾಗಿ, ಪರೋಹಿತರಾಗಿ, ಸಲಹೆಗಾರರಾಗಿ, ತತ್ವಜ್ಞಾನಿಗಳಾಗಿ, ಉಪಾಧ್ಯಾಯರಾಗಿ ಸೇವೆಸಲ್ಲಿಸುತ್ತಿದ್ದರು. ಬ್ರಾಹ್ಮಣರಲ್ಲಿ ದೀಕ್ಷಿತ್, ಪಾಂಡೆ, ಶರ್ಮ, ಚತುರ್ವೇದಿ, ಪಾಠಕ್, ತ್ರಿವೇದಿ, ತ್ರಿಪಾಠಿ, ಸರಯೂಪರಿ, ಸರಸ್ವತ ಹಾಗೂ ಕನ್ಯಾಕುಬ್ಬ ಎಂಬ ಪಂಗಡಗಳು ಇದ್ದವು. ಇವರಿಗೆ ಮರಣದಂಡನೆಯಿಂದ ವಿನಾಯಿತಿ ಇತ್ತು. ಯಜ್ಞಯಗಾದಿಗಳನ್ನು ಇವರೇ ನೆರವೇರಿಸುತ್ತಿದ್ದರು. ಕ್ಷತ್ರಿಯರು ರಜಪೂತರ ಕಾಲದಲ್ಲಿ ಆಳುವ ವರ್ಗಕ್ಕೆ ಸೇರಿತ್ತು. ಆಡಳಿತಗಾರರು ಮತ್ತು ಸೈನಿಕರು ಕ್ಷತ್ರಿಯರೇ ಆಗಿರುತ್ತಿದ್ದರು. ರಾಜ್ಯದ ರಕ್ಷಣೆ ಹಾಗೂ ಪ್ರಜಾರಕ್ಷಣೆ ಕ್ಷತ್ರಿಯರಿಗೆ ಸೇರಿದ್ದಿತು. ಇವರು ಸೂರ್ಯ ಹಾಗೂ ಚಂದ್ರವಂಶಕ್ಕೆ ಸೇರಿದುದರಿಂದ ಇವರು ಪರಿಶುದ್ಧವಾಗಿದ್ದರು. ಬ್ರಾಹ್ಮಣರೂ ಸಹ ಕ್ಷತ್ರಿಯರ ಮುಂದೆ ತಲೆಬಾಗಬೇಕಿತ್ತು. ಕ್ಷತ್ರಿಯರು ತಮ್ಮ ಬಹುಕಾಲವನ್ನು ಯುದ್ಧದಲ್ಲಿಯೇ ಕಳೆಯಬೇಕಿತ್ತು. ವೈಶ್ಯರು ವ್ಯಾಪಾರ ಹಾಗೂ ವಾಣಿಜ್ಯ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು.

ಇವರಿಗೂ ವೇದಾಧ್ಯಯನವನ್ನು ನಿರಾಕರಿಸಲಾಗಿತ್ತು. ಶೂದ್ರರು ವ್ಯವಸಾಯ ಹಾಗೂ ಕುಶಲಕಲೆಗಳಲ್ಲಿ ನಿರತರಾಗುವ ಮೂಲಕ ಈ ಮೇಲಿನ ಮೂರು ವರ್ಗಗಳ ಜನರ ಸೇವೆಯನ್ನು ಮಾಡಬೇಕಿತ್ತು. ಇನ್ನು ಅಸ್ಪೃಶ್ಯರು ಊರ ಹೊರಗೆ ವಾಸಿಸಬೇಕಿತ್ತು. ಇವರ ಬದುಕು ಸಹ ದುಸ್ತರವಾಗಿತ್ತು.

ಈ ಮೇಲಿನ ವರ್ಗಗಳ ಜೊತೆಗೆ ರಜಪೂತರ ಕಾಲದಲ್ಲಿ ಅನೇಕ ಜಾತಿ ಹಾಗೂ ಉಪಜಾತಿಗಳಿದ್ದವು. ಉದಾ. ನೇಕಾರರು, ಅಕ್ಕಸಾಲಿಗ, ಗಾಣಿಗ, ಗೌಳಿಗ, ಬಡಗಿ ಇತ್ಯಾದಿ. ಇವುಗಳ ಜೊತೆಗೆ ‘ಕಾಯಸ್ತ’ ಎಂಬ ವರ್ಗವೊಂದು ಹುಟ್ಟಿಕೊಂಡಿತು. ಕವಿಗಳನ್ನು ಈ ಕಾಲದಲ್ಲಿ ‘ಭಟ ಅಥವಾ ಚರಣ್’ ಎಂದು ಕರೆಯಲಾಯಿತು. ಇವರು ಯಾವಾಗಲೂ ರಾಜರನ್ನು ಹೊಗಳಿ ಬರೆಯಬೇಕಿತ್ತು. ಕೆಲವು ಸಲ ಇವರು ದೂತಾವಾಸದ ಕೆಲಸವನ್ನು ನಿರ್ವಹಿಸಬೇಕಿತ್ತು. ರಜಪೂತ ವರ್ಗದಲ್ಲಿನ ಹುಟ್ಟು ಸಾವು ಇತ್ಯಾದಿಗಳ ಮಾಹಿತಿಯನ್ನು ದಾಖಲು ಮಾಡಿಕೊಳ್ಳುವ ಕಾಯಕ ಇವರದಾಗಿತ್ತು.

ಸ್ತ್ರೀಯರ ಸ್ಥಾನಮಾನ:

ರಜಪೂತ ಸಮಾಜದಲ್ಲಿ ಮಹಿಳೆಯರು ಹೆಚ್ಚು ಸ್ವಾತಂತ್ರ್ಯವನ್ನು ಹೊಂದಿದ್ದರು. ಇವರು ರಜಪೂತ ಸಂಸ್ಕೃತಿಯ ಉನ್ನತ ಆಧಾರ ಸ್ತಂಭಗಳಾಗಿದ್ದರು.

ಸ್ತ್ರೀಯರಿಗೆ ಸಮಾಜದಲ್ಲಿ ಗೌರವಯುತವಾದ ಸ್ಥಾನಮಾನಗಳನ್ನು ನೀಡಲಾಗಿತ್ತು. ಸ್ತ್ರೀಯರಲ್ಲಿ ಅಪಾರವಾದ ದೇಶಭಕ್ತಿ ಇದ್ದಿತು. ಪುರುಷರಂತೆ ಸ್ತ್ರೀಯರಿಗೂ ವಿದ್ಯಾಭ್ಯಾಸದ ಸೌಕರ್ಯಗಳನ್ನು ನೀಡಲಾಗಿತ್ತು. ಹೀಗಾಗಿ ಅವರು ವಿದ್ಯಾವಂತರಾಗಿದ್ದಲ್ಲದೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿಯೂ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು. ವಿದ್ಯೆಯ ಜೊತೆಗೆ ಸಂಗೀತ, ನೃತ್ಯ, ಕಲೆ ಹಾಗೂ ಲಲಿತ ಕಲೆಗಳಲ್ಲಿ ಪರಿಣತಿಯನ್ನು ಪಡೆದಿದ್ದರು. ರಜಪೂತರ ಕಾಲದಲ್ಲಿ ಆನೇಕ ಸ್ತ್ರೀಯರು ಕವಿಗಳಾಗಿ ಸಾಹಿತಿಗಳಾಗಿ ಹಾಗು ಬರಹಗಾರ್ತಿಯರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಅಂತವರಲ್ಲಿ ಪ್ರಮುಖರಾದವರೆಂದರೆ, ಇಂದುಲೇಖಾ, ಮರುಳಾ, ಶೀಲ, ಪದ್ಮಶೀಲ, ಸುಭದ್ರ, ಲಕ್ಷ್ಮಿ, ವಿಜ್ಜಿಕಾ, ಮೋರಿಕಾ, ಮಪಲ್ಯ, ಮದಾಲಸ ಮುಂತಾದವರು. ರಾಜಶೇಖರನ ಪತ್ನಿ ‘ಆವಂತಿಸುಂದರಿ’ ಬಹುದೊಡ್ಡ ಸಂಸ್ಕೃತ ಪಂಡಿತೆಯಾಗಿದ್ದಳು. ಸೋಲಂಕಿ ದೊರೆ ವಿಕ್ರಮಾದಿತ್ಯನ ಸೋದರಿ ಅಕ್ಕಾದೇವಿಯು ಆಡಳಿತದಲ್ಲಿ ನಿಪುಣೆಯಾಗಿದ್ದು, ನಾಲ್ಕು ಪ್ರಾಂತಗಳ ಆಡಳಿತವನ್ನು ನಿರ್ವಹಿಸಿದ್ದಳು. ಸ್ವತಃ ತಾನೇ ಯುದ್ಧ ಭೂಮಿಗೆ ತೆರಳಿ ಯುದ್ಧದ ನಾಯಕತ್ವವನ್ನು ವಹಿಸುತ್ತಿದ್ದಳು. ಅಬ್ದುರಿಸಿ ಬರೆದಂತೆ ಅನೇಕ ಸ್ತ್ರೀಯರು ಸಂಸ್ಕೃತ ಭಾಷೆಯನ್ನು ಓದಲು ಹಾಗೂ ಬರೆಯಲು ಕಲಿತಿದ್ದರು. ಅದು ಅಲ್ಲದೆ ನೃತ್ಯ, ಸಂಗೀತ ಹಾಗೂ ಭಾವಚಿತ್ರ ರಚನೆಯಲ್ಲಿ ಪ್ರವೀಣರಾಗಿದ್ದರು. ಪುರುಷರ ಜೊತೆ ಅನೇಕ ಸಲ ವಾದ ಮಾಡಿ ಅವರನ್ನು ಸೋಲಿಸುತ್ತಿದ್ದರು. ರಜಪೂತ ಹೆಣ್ಣುಮಕ್ಕಳು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದರು.

ವಿದೇಶಿಯರ ದಾಳಿ ಹೆಚ್ಚಾದಂತೆ ರಜಪೂತ ಸಮಾಜದಲ್ಲಿ ಅನೇಕ ಸಾಮಾಜಿಕ ಪಿಡುಗುಗಳು ಕಾಣಿಸಿಕೊಂಡವು. ಮುಸಲ್ಮಾನರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ರಜಪೂತ ಮಹಿಳೆಯರು ಸಾಮೂಹಿಕ ಅಗ್ನಿ ಪ್ರವೇಶ ಅಥವಾ ಜೋಹಾರ್ ಪದ್ಧತಿಯನ್ನು ಅನುಸರಿಸಲಾರಂಭಿಸಿದರು. ಗಂಡನ ಸಾವಿನ ನಂತರ ವಿಧವತ್ವವನ್ನು ತಪ್ಪಿಸಿಕೊಳ್ಳಲು ಅವಳು ಗಂಡನ ಚಿತೆಯಲ್ಲಿ ಅಗ್ನಿಪ್ರವೇಶ ಮಾಡುವ ಮೂಲಕ ಸತಿ ಪದ್ಧತಿಗೆ ಚಾಲನೆ ನೀಡಿದಳು. ಆ ಕಾಲದಲ್ಲಿ ಬಾಲ್ಯವಿವಾಹ ಜಾರಿಯಲ್ಲಿ ಇರಲಿಲ್ಲ. ಆದರೆ, ಮುಸಲ್ಮಾನರ ದಾಳಿಯ ಪರಿಣಾಮವಾಗಿ ಬಾಲ್ಯ ವಿವಾಹ ಪದ್ಧತಿಯೂ ಜಾರಿಗೆ ಬಂದಿತು. ಹೆಣ್ಣು ಮಗುವಿನ ಹತ್ಯೆಯಂತಹ ಪದ್ಧತಿ ಜಾರಿಗೆ ಬಂದಿತು. ವಿಧವಾ ವಿವಾಹ ಅಷ್ಟೊಂದು ಪ್ರಚಲಿತವಾಗಿರಲಿಲ್ಲ. ವಿಧವೆಯರಿಗೆ ಸಮಾಜದಲ್ಲಿ ಯಾವುದೇ ರೀತಿಯ ಸ್ಥಾನಮಾನವನ್ನು ನೀಡಿರಲಿಲ್ಲ.

ಜೆನಾನಾದಲ್ಲಿರುವ ರಜಪೂತ ಸ್ತ್ರೀ

ಈ ಚಿತ್ರವು ರಾಜಮಹಲಿನ ಜೆನಾನಾದೊಳಗಿನ ಪೂತ ಸ್ತ್ರೀಯ ಖಾಸಗಿ ಜೀವನವನ್ನು ಚಿತ್ರಿಸುತ್ತದೆ. ಶಾಂತ ಹಾಗೂ ಸಂಯಮಿತ ಭಂಗಿಯಲ್ಲಿ ಕುಳಿತಿರುವ ಆಕೆಯು ಜಪುತ ವರ್ಗದ ಸಂಸ್ಕೃತಿಯಲ್ಲಿ ಮೌಲ್ಯವಾದ ಗೌರವ, ನಿಯಂತ್ರಣ ಮತ್ತು ಆಂತರಿಕ ಬಲವನ್ನು ಪ್ರತಿಬಿಂಬಿಸುತ್ತದೆ. ಅಲಂಕಾರಿಕ ವಸ್ತ್ರಗಳು, ಪಾರದರ್ಶಕ ಒಡವೆ ಮತ್ತು ಸೊಗಸಾದ ಆಭರಣಗಳು ಆಕೆಯ ರಾಜಕೀಯ ಸ್ಥಾನಮಾನ ಹಾಗೂ ಪರ್ದಾ ಪದ್ಧತಿಯನ್ನು ಸೂಚಿಸುತ್ತವೆ. ಹಿನ್ನಲೆಯಲ್ಲಿ ಕಾಣುವ ಸೂಕ್ಷ್ಮ ಕೆತ್ತನೆಯ ಕಮಾನು ಪೂತ ವಾಸ್ತುಶಿಲ್ಪದ ವೈಭವವನ್ನು ತೋರಿಸುತ್ತದೆ. ಸುಗಂಧ ದ್ರವ್ಯಗಳು, ಅಲಂಕಾರ ಸಾಮಗ್ರಿಗಳು ಮತ್ತು ಹುಕ್ಕಾ ಸಂಸ್ಕೃತಿಯ ದಿನಚರಿಯನ್ನು ಸೂಚಿಸುತ್ತವೆ. ಹಿನ್ನಲೆಯಲ್ಲಿ ಇರುವ ಸಹಾಯಕಿ ಮಹಿಳೆ ಜೆನಾನಾದೊಳಗಿನ ಗೌಪ್ಯತೆ ಮತ್ತು ಸಹವಾಸವನ್ನು ಒತ್ತಿಹೇಳುತ್ತದೆ.