ಅಂತರಾಷ್ಟ್ರೀಯ ಒಪ್ಪಂದಗಳು

ಅಂತರಾಷ್ಟ್ರೀಯ ಒಪ್ಪಂದಗಳು

ಇಡೀ ಭೂಮಂಡಲವನ್ನು ಆವರಿಸಿರುವ ಪರಿಸರವು ಅಂತರಾಷ್ಟ್ರೀಯ ಸಂಪನ್ಮೂಲವಾಗಿದೆ. ಪರಿಸರವು ಯಾವುದೇ ಭಾಗದಲ್ಲಿ ಮಲಿನಗೊಂಡರೂ ಅದರ ಪರಿಣಾಮ ಪ್ರಪಂಚದ ಎಲ್ಲಾ ದೇಶಗಳ ಮೇಲೆ ಉಂಟಾಗುತ್ತದೆ. ಸಾಗರ, ಸಮುದ್ರ, ಅಂತರಾಷ್ಟ್ರೀಯ ನದಿಗಳು, ಗಾಳಿ ಮೊದಲಾದವುಗಳು ಇಡೀ ವಿಶ್ವಕ್ಕೆ ಸಂಬಂಧಿಸಿವೆ. ಹೀಗಾಗಿ ಪರಿಸರ ಮಾಲಿನ್ಯ ಎಲ್ಲಾ ದೇಶಗಳ ವ್ಯಾಪ್ತಿಗೆ ಒಳಪಡುವುದರಿಂದ ಜಗತ್ತಿನ ಎಲ್ಲಾ ದೇಶಗಳು ಪರಿಸರ ರಕ್ಷಣೆಗಾಗಿ ಟೊಂಕ ಕಟ್ಟಿನಿಂತಿವೆ. ಇದಕ್ಕೆ ಎಲ್ಲಾ ದೇಶಗಳ ಒಪ್ಪಿಗೆಯು ಇದೆ. ಪರಿಸರ ರಕ್ಷಣೆಗಾಗಿ ವಿಶ್ವದ ವಿವಿಧ ದೇಶಗಳು ಹಲವಾರು ಒಪ್ಪಂದಗಳನ್ನು ಸಹ ಮಾಡಿಕೊಂಡಿವೆ. ಅವುಗಳಲ್ಲಿ ಪ್ರಮುಖವಾದವುಗಳು ಈ ಕೆಳಗಿನಂತಿವೆ.

1.  ಮಾಂಟ್ರಿಯಲ್ ಶಿಷ್ಟಾಚಾರ: 

ದಿನೇ ದಿನೇ ಓಜೋನ್ ಪದರು ನಾಶಗೊಳ್ಳುತ್ತಿರುವುದರಿಂದ ಆತಂಕಗೊಂಡ ವಿಶ್ವದ ಅನೇಕ ದೇಶಗಳು 1987ರಲ್ಲಿ ಪರಿಸರವನ್ನು ರಕ್ಷಿಸುವ ಸಲುವಾಗಿ ಜಾಗತಿಕ ಸಮಾವೇಶವನ್ನು ಕೆನಡಾದ ಮಾಂಟ್ರಿಯಲ್‌ನಲ್ಲಿ ಹಮ್ಮಿಕೊಂಡವು. ಈ ಸಮಾವೇಶದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಓಜೋನ್‌ ವಿನಾಶಕ ವಸ್ತುಗಳನ್ನು ಕ್ರಮೇಣವಾಗಿ ಕಿತ್ತು ಹಾಕಲು ನಿರ್ಣಯವನ್ನು ತೆಗೆದುಕೊಂಡವು. ವೈದ್ಯಕೀಯ ಅಥವಾ ಸಂಶೋಧನಾ ಕ್ಷೇತ್ರವನ್ನು ಹೊರತುಪಡಿಸಿ ಅವುಗಳ ಬಳಕೆಯನ್ನು ಕಡಿಮೆಗೊಳಿಸಲಾಯಿತು. ಹೀಗಾಗಿ ಇದನ್ನು ʻʻಮಾಂಟ್ರಿಯಲ್ ಶಿಷ್ಟಾಚಾರʼʼ ಎಂದು ಕರೆಯುತ್ತಾರೆ. ಮಾಂಟ್ರಿಯಲ್ ಶಿಷ್ಟಾಚಾರವೆಂದರೆ ಓಝೋನ್ ಪದರಿಗೆ ಹಾನಿಯನ್ನು ಉಂಟುಮಾಡುವಂತಹ ಯಾವುದೇ ಮಲಿನಕಾರಕ ವಸ್ತುಗಳನ್ನು ಉಪಯೋಗಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡುವುದು ಎಂದರ್ಥ. ಇದು 1989 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಜಗತ್ತಿನ ಬಹುತೇಕ ದೇಶಗಳು ಮಾಂಟ್ರಿಯಲ್ ಶಿಷ್ಟಾಚಾರವನ್ನು ಒಪ್ಪಿಕೊಂಡಿವೆ. 1990ರ ಲಂಡನ್ ಸಮಾವೇಶದಲ್ಲಿ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಅಭಿವೃದ್ಧಿಯನ್ನು ಹೊಂದಿದ ದೇಶಗಳು ನೀಡಿದ ಕೊಡುಗೆಯಿಂದ ಬಹುಪಕ್ಷಿಯ ನಿಧಿಯನ್ನು ಆರಂಭಿಸಲಾಯಿತು. ಈ ನಿಧಿಯನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಓಜೋನ್‌ ಪದರು ವಿನಾಶದ ವಸ್ತುಗಳ ಬದಲಾಗಿ ಪರ್ಯಾಯ ರಸಾಯನಿಕಗಳನ್ನು ಉತ್ಪಾದಿಸುವ ತಂತ್ರಜ್ಞಾನಕ್ಕೆ ಬಳಕೆ ಮಾಡಬಹುದುದಾಗಿದೆ.

ಭಾರತವು 1992 ರಲ್ಲಿ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಸಹಿ ಹಾಕಿತು. ತದನಂತರ 1998ರ ಅರಣ್ಯ ಸಚಿವಾಲಯದ ನಿಬಂಧನೆಗಳ ಪ್ರಕಾರ 2003 ಫೆಬ್ರವರಿ ಹೊತ್ತಿಗೆ ವಿನಾಶಗಳ ಬಳಕೆಯನ್ನು ನಿಲ್ಲಿಸಬೇಕಿತ್ತು. ಆ ಪ್ರಕಾರ ಹ್ಯಾಲೋಜೀನ್ ಬಳಕೆಯನ್ನು ಸ್ಥಗಿತಗೊಳಿಸಿ ಸಿ. ಎಫ್. ಸಿ. ಗಳನ್ನು ಕಡಿಮೆಗೊಳಿಸಿದೆ. ಮಾಂಟ್ರಿಯಲ್ ಶಿಷ್ಟಾಚಾರವು ಈಗಾಗಲೇ ಎಂಟು ಬಾರಿ ತಿದ್ದುಪಡಿಗೆ ಒಳಪಟ್ಟಿರುವುದರಿಂದ ಈ ಶಿಷ್ಟಾಚಾರ ಯಶಸ್ವಿಯಾಗಿದೆ. ಈ ಒಪ್ಪಂದವು 2050 ರ ವೇಳೆಗೆ ಓಝೋನ್ ಪದರದ ಮೂಲಸ್ಥಿತಿಯನ್ನು ಮರುಸ್ಥಾಪಿಸುವಲ್ಲಿ ಸಫಲತೆಯನ್ನು ಕಾಣುವತ್ತ ಹೆಜ್ಜೆ ಹಾಕಿದೆ.

2. ಕ್ಯೂಟೋ ಶಿಷ್ಟಾಚಾರ 

 ಹಸಿರು ಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಬಗ್ಗೆ ಹಲವು ದೇಶಗಳ ನಡುವಿನ ಪ್ರಮುಖ ಅಂತರಾಷ್ಟ್ರೀಯ ಒಪ್ಪಂದವೇ ಕ್ಯೂಟೊ ಶಿಷ್ಟಾಚಾರ. ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆಯ ಚೌಕಟ್ಟು  ಸಮಾವೇಶದ ಅಡಿಯಲ್ಲಿ ಕ್ಯೂಟೊ ಶಿಷ್ಟಾಚಾರವು 1997 ಡಿಸೆಂಬರ್ 11ರಂದು ಅಂಗೀಕಾರವಾಯಿತು. ವಿಶ್ವದ 192 ದೇಶಗಳು ಈ ಒಪ್ಪಂದಕ್ಕೆ 2005 ಫೆಬ್ರವರಿ 16ರಂದು ಸಹಿಹಾಕಿದವು. ಈ ಒಪ್ಪಂದದ ಮೂಲ ಗುರಿ ಎಂದರೆ ವಾಯುಮಂಡಲದಲ್ಲಿನ ಹಸಿರು ಮನೆ ಅನಿಲಗಳ ಪ್ರಮಾಣವನ್ನು ಕಡಿಮೆಗೊಳಿಸಿ ವಿಶ್ವ ತಾಪಮಾನ ಹೆಚ್ಚಳ ಹಾಗೂ ಅದರಿಂದ ಉಂಟಾಗುವ ಬದಲಾವಣೆಗಳನ್ನು ತಡೆಗಟ್ಟುವುದಾಗಿದೆ. ಇದಕ್ಕೆ ಕಾರಣವಾಗಿರುವಂತಹ ಪ್ರಮುಖ ಹಸಿರು ಮನೆ ಅನಿಲಗಳೆಂದರೆ ಇಂಗಾಲದ ಡೈಆಕ್ಸೈಡ್‌ CO2, ಮೀಥೇನ್ CH4, ನೈಟ್ರಸ್ ಆಕ್ಸೈಡ್ NO2, ಹೈಡ್ರೋ ಫ್ಲೋರೋ ಕಾರ್ಬನ್‌ಗಳು CFCs, ಫರ್ ಫ್ಲೋರೋ ಕಾರ್ಬನ್ PFCs, ಸಲ್ಫರ್ ಹೆಕ್ಸಾ ಫ್ಲೋರೈಡ್ SF6 ಇವುಗಳು ಹೊರ ಸೂಸುವ ಅನಿಲಗಳನ್ನು ತಗ್ಗಿಸುವ ತೀರ್ಮಾನ ಕೈಗೊಳ್ಳಲಾಯಿತು. ಈ ಒಪ್ಪಂದದಲ್ಲಿ 2012ರ ವೇಳೆಗೆ 1990ರ ಇಂಗಾಲಾಮ್ಲ ಬಿಡುಗಡೆಗಿಂತ ಶೇ 8 ರಿಂದ 10ರಷ್ಟು ಪ್ರಮಾಣವನ್ನು ಮಿತಿಗೊಳಿಸುವಂತೆ ಸೂಚಿಸಲಾಯಿತು. ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಬೆಳೆಸುವಂತೆ ಸೂಚಿಸಲಾಯಿತು. ಈ ವಿಷಯದಲ್ಲಿ ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳ ನಡುವೆ ಒಮ್ಮತದ ನಿರ್ಧಾರದಲ್ಲಿ ಭಿನ್ನಾಭಿಪ್ರಾಯಗಳು ಕಂಡು ಬಂದವು. ಆದರೂ 2050ರ ವೇಳೆಗೆ ಹಸಿರು ಮನೆ ಅನಿಲಗಳ ಹರಡುವಿಕೆಯ ಪ್ರಮಾಣವನ್ನು ತಗ್ಗಿಸಲು ಬಹುಪಾಲು ದೇಶಗಳು ಒಪ್ಪಿಕೊಂಡವು.

3. ಜೀವ ವೈವಿಧ್ಯತೆ ಸಮ್ಮೇಳನ: 

ಇದೊಂದು ಅಂತರಾಷ್ಟ್ರೀಯ ಸಮಾವೇಶವಾಗಿದ್ದು ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು ಇದರ ಗುರಿಯಾಗಿದೆ. ಜೀವವೈವಿಧ್ಯತೆ ಸಮಾವೇಶ ಬ್ರೆಜಿಲ್‌ನ ರೆಯೋಡಿ ಜನೈರೋ ನಗರದಲ್ಲಿ ವಿಶ್ವಸಂಸ್ಥೆಯ ಎನ್‌ವಿರಾನ್‌ಮೆಂಟ್ ಪ್ರೋಗ್ರಾಮ್ (UNEP) ಆಯೋಜನೆ ಮಾಡಿದ್ದು ರಯೋ ಸಮಿತಿನಲ್ಲಿ ವಿಶ್ವದ ಬಹುತೇಕ ದೇಶಗಳು ಸಹಿ ಹಾಕಿದ ಅತಿ ಮುಖ್ಯ ಒಡಂಬಡಿಕೆಯಾಗಿದೆ. ಇದು 1993ರಲ್ಲಿ ಜಾರಿಗೆ ಬಂದಿದ್ದು ಈ ಒಪ್ಪಂದಕ್ಕೆ ಪೂರಕವಾಗಿ ಕಾರ್ಟಿಜೀನಾ ಹಾಗೂ ನಗೋಯ ಪ್ರೋಟೋಕಾಲ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಈ ಒಪ್ಪಂದದ ಉದ್ದೇಶಗಳೆಂದರೆ ಜೀವ ವೈವಿಧ್ಯ ಘಟಕಗಳ ಸುಸ್ಥಿರ ಬಳಕೆ. ಜೈವಿಕ ಸಂಪನ್ಮೂಲಗಳ ನ್ಯಾಯಯುತ ಹಾಗೂ ಸಮಾನ ಹಂಚಿಕೆ ನಂತರ 1994ರಲ್ಲಿ ಜೀವವೈವಿಧ್ಯತೆಯ ಪ್ರಥಮ ಸಮಾವೇಶ ಬಹುಮಾಸದಲ್ಲಿ ಜರುಗಿತು.

4. ಕಾರ್ಟೀಜಿನಾ ಶಿಷ್ಟಾಚಾರ:

ಕಾರ್ಟಿಜಿನಾ ಶಿಷ್ಟಾಚಾರ ಜೀವ ವೈವಿಧ್ಯತೆಯ ಪೂರಕವಾಗಿ ಜಾರಿಗೆ ಬಂದಿತು. ಇದು ಜೈವಿಕ ಒಪ್ಪಂದದ ಮೇಲಿನ ಸಮಾವೇಶವಾಗಿದೆ. ಜೀವಿಗಳಿಗೆ ಒದಗಬಹುದಾದ ಅಪಾಯವನ್ನು ತಪ್ಪಿಸಲು 2003 ಸೆಪ್ಟೆಂಬರ್ 11ರಂದು ಕಾರ್ಟಿಜಿನಾ ಶಿಷ್ಟಾಚಾರ ಜಾರಿಗೆ ಬಂದಿತು. ಇದು ಕುಲಾಂತರಿ ಜೀವಿಗಳನ್ನು ಆಮದು ಮಾಡಿಕೊಳ್ಳುವ ಜೀವಿಗಳಿಗೆ ಎಲ್ಲಾ ರೀತಿಯ ಉಚಿತ ಮಾಹಿತಿಯನ್ನು ಒದಗಿಸುತ್ತದೆ.

5. ರಸಾಯನಿಕ ಅಸ್ತ್ರ ನಿರ್ಬಂಧನ ಒಕ್ಕೂಟ: 

ದೈಹಿಕ ಹೋರಾಟದ ಬದಲು ರಸಾಯನಿಕ ವಸ್ತುಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ನಾಗರಿಕರ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ, ಹಾಗೂ ಆರೋಗ್ಯ ಹಾನಿ ಉಂಟು ಮಾಡುವುದನ್ನು ರಸಾಯನಿಕ ಅಸ್ತ್ರ ಎಂದು ಕರೆಯುವರು. ವಿಷಪೂರಿತ ರಸಾಯನಿಕಗಳನ್ನು ಇದಕ್ಕಾಗಿಯೇ ಬಳಕೆ ಮಾಡಲಾಗುತ್ತದೆ. ಈ ಒಕ್ಕೂಟವು 1993 ಸಮಾವೇಶಗೊಂಡಿತು. ಇದರಲ್ಲಿ 165 ದೇಶಗಳು ಭಾಗವಹಿಸಿದ್ದವು ಹಾಗೂ ತಮ್ಮ ಒಪ್ಪಿಗೆಯನ್ನು ಸೂಚಿಸಿದವು. ಇದು 1997ರಲ್ಲಿ ಜಾರಿಗೆ ಬಂದಿತು. ಈ ಒಪ್ಪಂದದ ಪ್ರಕಾರ.

  1.  ಪ್ರಪಂಚದ ಯಾವುದೇ ರಾಷ್ಟ್ರವು ಅಣ್ವಸ್ತ್ರ ಅಭಿವೃದ್ಧಿ, ಉತ್ಪಾದನೆ, ಸಂಗ್ರಹಣೆ, ಅಣ್ವಸ್ತ್ರಗಳನ್ನು ಇರಿಸಿಕೊಳ್ಳುವಂತಿಲ್ಲ.
  2.  ರಸಾಯನಿಕ ಅಸ್ತ್ರಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದನ್ನು ನಿರ್ಬಂಧಿಸಿದೆ.
  3.  ರಸಾಯನಿಕ ಅಸ್ತ್ರಗಳನ್ನು ಬಳಕೆ ಮಾಡುವುದನ್ನು ತಡೆಗಟ್ಟಲಾಗಿದೆ.
  4.  ಒಕ್ಕೂಟ ನಿರ್ಬಂಧಿತ ವಸ್ತುಗಳನ್ನು ಬಳಸುವಂತಿಲ್ಲ.

ಇದರ ಕೇಂದ್ರ ಕಚೇರಿ ನೆದರ್ಲ್ಯಾಂಡ್‌ನ ಹೇಗ್‌ ಎಂಬಲ್ಲಿದೆ. ಈ ಕಚೇರಿಯ ಕಾರ್ಯವೈಖರಿಯನ್ನು ಕಂಡು 2013ರಲ್ಲಿ ಅದಕ್ಕೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಭಾರತ ಈ ಒಕ್ಕೂಟದ ಸದಸ್ಯ ದೇಶವಾಗಿದೆ. 2000 ದಲ್ಲಿ ಭಾರತವು ʻʻದಿ ಕೆಮಿಕಲ್ ವೆಪೆನ್ಸ್‌ ಕನ್ವೆನ್ಸನಲ್ ಆಕ್ಟ್‌ನ್ನು ಜಾರಿಗೆ ತಂದಿದೆ.

ಉಪಸಂಹಾರ

ಅಂತರಾಷ್ಟ್ರೀಯ ಒಪ್ಪಂದಗಳು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಮಾಂಟ್ರಿಯಲ್ ಮತ್ತು ಕ್ಯೂಟೋ ಶಿಷ್ಟಾಚಾರಗಳಂತಹ ಒಪ್ಪಂದಗಳು ಜಾಗತಿಕ ಪರಿಸರ ಸಮಸ್ಯೆಗಳನ್ನು ತಗ್ಗಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಸೂಚಿಸಿವೆ. ಜೀವ ವೈವಿಧ್ಯತೆ ಸಮ್ಮೇಳನ ಹಾಗೂ ಕಾರ್ಟಿಜಿನಾ ಶಿಷ್ಟಾಚಾರಗಳು ಪ್ರಕೃತಿ ಸಂಪತ್ತಿನ ಸುಸ್ಥಿರ ಬಳಕೆಗೆ ಮಾರ್ಗದರ್ಶನ ನೀಡುತ್ತವೆ. ರಸಾಯನಿಕ ಅಸ್ತ್ರ ನಿರ್ಬಂಧನ ಒಕ್ಕೂಟವು ಮಾನವ ಜೀವ ರಕ್ಷಣೆಗೆ ಸಹಕಾರಿಯಾಗಿದೆ. ಈ ಒಪ್ಪಂದಗಳನ್ನು ಯಶಸ್ವಿಯಾಗಿ ಜಾರಿಗೆ ತರುವುದು ಪ್ರತಿಯೊಂದು ರಾಷ್ಟ್ರದ ಜವಾಬ್ದಾರಿಯಾಗಿದೆ.

ಜಲಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 1974

ಜಲಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 1974

ಭಾರತದಲ್ಲಿ ಜಲಮಾಲಿನ್ಯವನ್ನು ತಡೆಗಟ್ಟಿ ನೀರಿನ ಗುಣಮಟ್ಟವನ್ನು ಕಾಪಾಡಲು ಜಲ ಮಾಲಿನ್ಯ ಕಾಯಿದೆಯನ್ನು 1974ರಲ್ಲಿ ಜಾರಿಗೆ ತರಲಾಯಿತು. ನಂತರ ಇದನ್ನು 1988 ರಲ್ಲಿ ತಿದ್ದುಪಡಿ ಮಾಡಲಾಯಿತು. ಇದರಿಂದ ಜಲಮಾಲಿನ್ಯ ನಿಯಂತ್ರಣ ಮಂಡಳಿಗೆ ಹೆಚ್ಚು ಅಧಿಕಾರ ಸಿಕ್ಕಂತಾಯಿತು. ಈ ಕಾಯಿದೆಯು 8 ಅಧ್ಯಾಯ ಹಾಗೂ 64 ವಿಭಾಗಗಳನ್ನು ಒಳಗೊಂಡಿದೆ.

ಕೇಂದ್ರ ಮಂಡಳಿಯ ಕಾರ್ಯಗಳು: 

  1. ಪ್ರವಾಹದ ನೀರು ಹಾಗೂ ಬಾವಿಗಳ ನೀರನ್ನು ಶುದ್ಧೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವುದು.
  2.  ರಾಜ್ಯ ಮಂಡಳಿ ಹಾಗೂ ರಾಜ್ಯ ಸರಕಾರ ಸಹಕಾರ ಮಂಡಳಿಗಳ ನಡುವಿನ ಬಿಕ್ಕಟ್ಟನ್ನು ಬಗೆ ಹರಿಸುವುದು.
  3.  ಜಲ ಸಂರಕ್ಷಣೆ ಹಾಗೂ ಮಾಲಿನ್ಯ ತಡೆ ನಿಯಂತ್ರಣಕ್ಕೆ ತಾಂತ್ರಿಕ ಸಹಾಯ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡುವುದು. 
  4. ಮಾಲಿನ್ಯಕ್ಕೆ ಕಾರಣವಾದ ಅಂಶಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ತರುವಾಯ ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ನೀಡುವುದು.
  5.  ತ್ಯಾಜ್ಯ ಉಪಚಾರ ಹಾಗೂ ತ್ಯಾಜ್ಯ ವಿಲೇವಾರಿ ಮಾನದಂಡಗಳನ್ನು ರೂಪಿಸುವುದು.
  6.  ಜಲಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೋದ್ಯಮಗಳ ಮೇಲೆ ಕಾನೂನು ಕ್ರಮ ಜರುಗಿಸುವುದು. ಶಿಕ್ಷೆ ಹಾಗೂ ದಂಡಗಳನ್ನು ವಿಧಿಸುವುದು.
  7.  ಕೊಳಚೆ ನೀರು ಹಾಗೂ ವಾಣಿಜ್ಯ ಸಂಕೀರ್ಣಗಳಿಂದ ಉತ್ಪತ್ತಿಯಾಗುವ ವ್ಯರ್ಥ ಪದಾರ್ಥಗಳನ್ನು ಹೊರ ಹಾಕುವ ಮೊದಲು ಸಂರಕ್ಷಣೆಗೊಳಿಸಿದ ಬಗ್ಗೆ ಮಾಹಿತಿ ನೀಡುವುದು.
  8.  ನೀರಿಗೆ ಕಲ್ಮಷಗಳನ್ನು ಸೇರಿಸುವುದನ್ನು ತಡೆಯುವುದು.
  9.  ಪ್ರಾಣಿ, ಸಸ್ಯ ಹಾಗೂ ಜಲಚರ ಜೀವಿಗಳಿಗೆ ಹಾನಿಕಾರಕವಾಗದಂತೆ ನೀರಿನ ಗುಣಮಟ್ಟವನ್ನು ಪರೀಕ್ಷಿಸುವುದು.
  10.  ಕೈಗಾರಿಕೆ ಸಂಸ್ಥೆಗಳು ಜಲಮಾಲಿನ್ಯವನ್ನು ಮಾಡುತ್ತಿರುವುದು ಕಂಡು ಬಂದರೆ ಅವುಗಳಿಗೆ ವಿದ್ಯುತ್ ಹಾಗೂ ನೀರಿನ ಸರಬರಾಜನ್ನು ಕಡಿತಗೊಳಿಸುವುದು.

ರಾಜ್ಯ ಮಂಡಳಿಯ ಕಾರ್ಯಗಳು: 

  1. ಜಲ ಸಂರಕ್ಷಣೆ ಹಾಗೂ ಜಲಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಸರ್ಕಾರಗಳಿಗೆ ಸಲಹೆ ಸೂಚನೆಗಳನ್ನು ನೀಡುವುದು.
  2. ಜಲ ಮಾಲಿನ್ಯಕ್ಕೆ ಸಂಬಂಧಿಸಿದಂತೆ ತರಬೇತಿಯನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಗಳೆರಡೂ ಸೇರಿ ಕಾರ್ಯಕ್ರಮವನ್ನು ನಿರೂಪಿಸುವುದು.
  3. ಉದ್ಯಮಗಳಿಂದ ವಿಸರ್ಜಿಸಲ್ಪಡುವ ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ಅವುಗಳ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡುವುದು.
  4.  ಜಲ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆ ಹಾಗೂ ಪ್ರಯೋಗಾಲಯಗಳನ್ನು ಸೂಕ್ತವಾದ ಸ್ಥಳಗಳಲ್ಲಿ ಸ್ಥಾಪಿಸುವಂತೆ ಸಲಹೆಗಳನ್ನು ನೀಡುವುದು.
  5.  ವಾರ್ಷಿಕ ತ್ಯಾಜ್ಯ ಸಂರಕ್ಷಣೆಯ ಮಾನದಂಡಗಳನ್ನು ನೀಡುವುದು.
  6.  ಜಲಮಾಲಿನ್ಯ ಮತ್ತು ಸಂರಕ್ಷಣೆಗೆ ಅಗತ್ಯ ಯೋಜನೆಗಳನ್ನು ರೂಪಿಸುವುದು ಮತ್ತು ಅನುಷ್ಠಾನಕ್ಕೆ ತರುವುದು.

ಉಪಸಂಹಾರ

ಜಲಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 1974ವು ನೀರಿನ ಮೂಲಗಳನ್ನು ರಕ್ಷಿಸಲು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಕೇಂದ್ರ ಹಾಗೂ ರಾಜ್ಯ ಜಲಮಾಲಿನ್ಯ ನಿಯಂತ್ರಣ ಮಂಡಳಿಗಳ ಕಾರ್ಯಗಳಿಂದ ಕೈಗಾರಿಕಾ ತ್ಯಾಜ್ಯ ಹಾಗೂ ಕೊಳಚೆ ನೀರಿನ ನಿಯಂತ್ರಣ ಸಾಧ್ಯವಾಗಿದೆ. ಈ ಕಾಯಿದೆಯು ಪರಿಸರ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಸಾರ್ವಜನಿಕ ಸಹಕಾರ ಮತ್ತು ಕಾನೂನು ಅನುಷ್ಠಾನದಿಂದ ಮಾತ್ರ ಶುದ್ಧ ನೀರನ್ನು ಮುಂದಿನ ತಲೆಮಾರಿಗೆ ಉಳಿಸಬಹುದು. ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 1981

ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 1981

ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಕೈಗಾರಿಕೆಗಳಿಂದ ವಾಯು ಮಾಲಿನ್ಯವಾಗುತ್ತಿದೆ. ಇದು ಮಾನವನ ಆರೋಗ್ಯ ಹಾಗೂ ಪರಿಸರದ ಮೇಲೆ ತೀವ್ರ ಪರಿಣಾಮವನ್ನುಂಟುಮಾಡುತ್ತದೆ. ಭಾರತವು ಒಕ್ಕೂಟ ರಾಷ್ಟ್ರಗಳ (UN) ಮಾನವ ಮತ್ತು ಪರಿಸರ ಸಮಾವೇಶ ಸ್ಟಾಕ್ ಹೋಂ 1972 ರಲ್ಲಿ ಭಾಗವಹಿಸಿದ ನಂತರ ಈ ವಾಯುಮಾಲಿನ್ಯ ತಡೆ ಹಾಗೂ ನಿಯಂತ್ರಣ ಕಾಯಿದೆ 1981 ನ್ನು ಜಾರಿಗೆ ತರಲಾಯಿತು. ಇದು 7 ಅಧ್ಯಾಯಗಳು ಹಾಗೂ 54 ಭಾಗಗಳನ್ನು ಹೊಂದಿದೆ.

ಕೇಂದ್ರ ಮಂಡಳಿಯ ಕಾರ್ಯಗಳು:  ಕೇಂದ್ರ ಮಂಡಳಿಯ ಕಾರ್ಯಗಳು ಈ ಕೆಳಗಿನಂತಿವೆ.

  1.  ವಾಯುವಿನ ಗುಣಮಟ್ಟ ಕಾಯ್ದುಕೊಳ್ಳಲು, ಮಾಲಿನ್ಯವನ್ನು ತಡೆಗಟ್ಟಲು, ನಿಯಂತ್ರಿಸಲು, ಕಡಿಮೆ ಮಾಡಲು ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು.
  2. ವಾಯು ಮಾಲಿನ್ಯವನ್ನು ತಡೆಗಟ್ಟಲು ದೇಶ ವ್ಯಾಪಿ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳುವುದು.
  3.  ವಾಯುವಿನ ಗುಣಮಟ್ಟವನ್ನು ಸುಧಾರಿಸುವ ಹಾಗೂ ಅದರ ಸಮಸ್ಯೆಗಳ ಬಗ್ಗೆ ಕಾಲಕಾಲಕ್ಕೆ ಸಲಹೆಯನ್ನು ನೀಡುವುದು.
  4.  ವಾಯುಮಾಲಿನ್ಯವನ್ನು ತಡೆಗಟ್ಟಲು ಬೇಕಾಗುವ ತಾಂತ್ರಿಕ ಸಹಾಯ ಮತ್ತು ಮಾರ್ಗದರ್ಶನಗಳನ್ನು ರಾಜ್ಯ ಮಂಡಳಿ ಹಾಗೂ ಕೈಗಾರಿಕೆಗಳಿಗೆ ಪೂರೈಸುವುದು.
  5.  ವಾಯುಮಾಲಿನ್ಯವನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ತರಬೇತಿಯನ್ನು ನೀಡುವುದು.
  6. ವಾಯುಮಾಲಿನ್ಯದ ಕುರಿತು ಸಂಶೋಧನೆಗಳನ್ನು ನಡೆಸಲು ಪ್ರಯೋಗಾಲಯಗಳನ್ನು ಸ್ಥಾಪಿಸುವುದು.
  7. ವಾಯು ಮಾಲಿನ್ಯ ಗುಣಮಟ್ಟವನ್ನು ಕಾಪಾಡುವುದು.
  8. ವಾಯುಮಾಲಿನ್ಯಕ್ಕೆ ಕಾರಣ, ಪರಿಣಾಮ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಮಗ್ರವಾದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದು. ಇದಕ್ಕಾಗಿ ಸಮೂಹ ಮಾಧ್ಯಮಗಳನ್ನು ಬಳಸಿಕೊಳ್ಳುವುದು.
  9.  ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳು ಶೇ. 4.5 ಕ್ಕಿಂತ ಹೆಚ್ಚು ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡದಂತೆ ಕ್ರಮ ಜರುಗಿಸುವುದು.
  10. ವಾಹನಗಳಿಗೆ ಶಬ್ಧ ಮಾಡುವ ಉಪಕರಣಗಳನ್ನು ನಿಗದಿಪಡಿಸದಂತೆ ಬಳಕೆ ಮಾಡಬೇಕು.

ರಾಜ್ಯ ಮಂಡಳಿಗಳ ಕಾರ್ಯಗಳು:

  1.  ಮಾಲಿನ್ಯ ನಿಯಂತ್ರಣ ಕುರಿತು ರಾಜ್ಯ ಸರ್ಕಾರಗಳಿಗೆ ಸಲಹೆ ಹಾಗೂ ಶಿಫಾರಸ್ಸುಗಳನ್ನು ನೀಡುವುದು.
  2.  ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವುದು.
  3.  ವಾಯುಮಾಲಿನ್ಯದ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ಸೇರಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  4.  ವಾಯು ಮಾಲಿನ್ಯ ಪ್ರದೇಶಗಳನ್ನು ಪರಿಶೀಲಿಸುವುದು.
  5. ವಾಯುಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ಗುರುತಿಸುವುದು ಹಾಗೂ ಅಂತಹ ಕೈಗಾರಿಕೆಗಳಿಗೆ ಎಚ್ಚರಿಕೆಯನ್ನು ನೀಡುವುದು.
  6.  ವಾಯುಮಾಲಿನ್ಯವನ್ನು ಕಡಿಮೆ ಮಾಡುವಂತಹ ಕ್ರಮಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಕ್ಕೆ ತರುವಂತೆ ಕ್ರಮ ಜರುಗಿಸುವುದು.

ಉಪಸಂಹಾರ

ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ–1981 ದೇಶದ ಪರಿಸರ ಸಂರಕ್ಷಣೆಗೆ ಮಹತ್ವದ ಕಾನೂನು ಸಾಧನವಾಗಿದೆ. ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ಕಾಯಿದೆಯ ಮೂಲಕ ವಾಯು ಗುಣಮಟ್ಟವನ್ನು ಸುಧಾರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೈಗಾರಿಕೆಗಳು ಮತ್ತು ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸುವುದರಿಂದ ಮಾತ್ರ ಆರೋಗ್ಯಕರ ಪರಿಸರ ಸಾಧ್ಯವಾಗುತ್ತದೆ. ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಶುದ್ಧ ವಾಯು ನಮ್ಮ ಮೂಲಭೂತ ಹಕ್ಕಾಗಿದೆ.

ಪರಿಸರ ಸಂರಕ್ಷಣಾ ಕಾಯಿದೆ 1986

ಪರಿಸರ ಸಂರಕ್ಷಣಾ ಕಾಯಿದೆ 1986

ಈ ಕಾಯಿದೆಯನ್ನು ಪರಿಸರ ರಕ್ಷಣೆ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಪರಿಸರವನ್ನು ಉತ್ತಮಪಡಿಸುವಿಕೆಯ ದೃಷ್ಟಿಯಿಂದ ಜಾರಿಗೆ ತರಲಾಯಿತು. ಪರಿಸರ ಸಂರಕ್ಷಣಾ ಕಾಯಿದೆಯು 1986 ನವೆಂಬರ್ 19ರಂದು ಶ್ರೀಮತಿ ದಿವಂಗತ ಇಂದಿರಾಗಾಂಧಿಯವರ ಜನ್ಮದಿನದ ಪ್ರಯುಕ್ತ ಜಾರಿಗೆ ಬಂದಿತು. ಈ ಕಾಯಿದೆಯಲ್ಲಿ 4 ಪ್ರಮುಖ ಅಧ್ಯಾಯಗಳು ಇವೆ. 26 ಭಾಗಗಳು ಇವೆ. ಈ ಕಾಯಿದೆಯಲ್ಲಿ ಪರಿಸರ ಮಾಲಿನ್ಯ, ಮಾನವ ಹಾಗೂ ಇತರ ಜೀವಿಗಳಿಗೆ ಹಾನಿಯನ್ನುಂಟು ಮಾಡುವ ಅಪಾಯಕಾರಿ ವಸ್ತುಗಳು ಎಂಬ ಮೂರು ಶಬ್ಧಗಳ ಕುರಿತು ವಿವರಿಸಲಾಗಿದೆ.

ಪರಿಸರ:  ಪರಿಸರ ಎಂಬ ಪದವು ನೀರು ಗಾಳಿ ಹಾಗೂ ಭೂಮಿಗಳ ನಡುವಿನ ಸಂಬಂಧ ಈ ಮೂರು ಘಟಕಗಳೊಂದಿಗೆ ಮಾನವ ಹಾಗೂ ಇತರೆ ಪ್ರಾಣಿಗಳು ಸಸ್ಯಗಳು ಹಾಗೂ ಸೂಕ್ಷ್ಮಾಣು ಜೀವಿಗಳು ಹೊಂದಿರುವ ಸಂಬಂಧ.

ಪರಿಸರ ಮಾಲಿನ್ಯ:  ಪರಿಸರ ಇಂದು ಹೆಚ್ಚು ಮಲಿನಕಾರಕವಾಗಿದೆ.

ಅಪಾಯಕಾರಿ ಅಂಶ:  ಯಾವುದೇ ಅನಿಲ ಮತ್ತು ಅದರ ರಸಾಯನಿಕ ಅಥವಾ ಭೌತಿಕ ರಸಾಯನಿಕ ಗುಣಗಳಿಂದ  ಅಥವಾ ಅವುಗಳನ್ನು ಬಳಸಿದಾಗ ಮಾನವನಿಗೆ ಅಥವಾ ಇತರ ಜೀವ ಜಂತುಗಳಿಗೆ ಸಸ್ಯಗಳಿಗೆ ಅಥವಾ ಸೂಕ್ಷ್ಮಾಣು ಜೀವಿಗಳಿಗೆ ಹಾನಿಯನ್ನು ಉಂಟು ಮಾಡುವಂತಿದ್ದರೆ ಅದು ಅಪಾಯಕಾರಿ ವಸ್ತುವಾಗುತ್ತದೆ. ಈ ಕಾಯಿದೆಯು ಕೇಂದ್ರ ಸರ್ಕಾರಕ್ಕೆ ಈ ಕೆಳಕಂಡ ಉದ್ದೇಶಗಳಿಗಾಗಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರ ನೀಡಿತು.

 ಪರಿಸರವನ್ನು ರಕ್ಷಿಸುವುದು ಹಾಗೂ ಅದರ ಸುಧಾರಣೆಗಾಗಿ ಕ್ರಮಗಳನ್ನು ಕೈಗೊಳ್ಳುವಂತೆ, ಕೇಂದ್ರ ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ. ಜೊತೆಗೆ ಅಧಿಕಾರಿಗಳ ನೇಮಕ ಮತ್ತು ಅವರು ನಿರ್ವಹಿಸುವ ಕಾರ್ಯ ಸೂಚಿಯನ್ನು ನಿರ್ದೇಶಿಸುತ್ತದೆ.

ಕೇಂದ್ರ ಸರ್ಕಾರದ ಸಾಮಾನ್ಯ ಅಧಿಕಾರಗಳು:

  1. ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು, ನಿಯಂತ್ರಿಸುವುದು ಮತ್ತು ಕಡಿಮೆ ಮಾಡುವುದು. ಇದನ್ನು ರಾಷ್ಟ್ರದಾದ್ಯಂತ ಜಾರಿಗೆ ತಂದು ವಿವಿಧ ರೀತಿಯಲ್ಲಿ ಪರಿಸರದ ಗುಣಮಟ್ಟವನ್ನು ಕಾಪಾಡುವುದು.
  2. ಪರಿಸರಕ್ಕೆ ಧಕ್ಕೆ ಬಾರದಂತಹ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡುವುದು.
  3. ಪರಿಸರ ಸಂರಕ್ಷಣಾ ಕಾಯಿದೆಯನ್ನು ಉಲ್ಲಂಘನೆ ಮಾಡಿ ಪರಿಸರ ಮಾಲಿನ್ಯದಲ್ಲಿ ತೊಡಗುವವರಿಗೆ ದಂಡ ಮತ್ತು ಕಾರಾಗೃಹ ಶಿಕ್ಷೆಯನ್ನು ವಿಧಿಸುವುದು.
  4. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪದಾರ್ಥ ಹಾಗೂ ಸ್ಥೂಲ ಪದಾರ್ಥಗಳನ್ನು ಉತ್ಪಾದನೆ ಮಾಡುವ ಕಾರ್ಯವಿಧಾನವನ್ನು ಪರೀಕ್ಷೆಗೆ ಒಳಪಡಿಸುವುದು.
  5. ಪರಿಸರ ಮಾಲಿನ್ಯಕ್ಕೆ ಕಾರಣವನ್ನು ಸಂಶೋಧನೆಯ ಮೂಲಕ ಗೊತ್ತುಪಡಿಸಿಕೊಳ್ಳುವುದು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು.
  6. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಪ್ರಯೋಗ ಶಾಲೆಯನ್ನು ತೆರೆಯುವುದು.
  7. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೈಪಿಡಿ ಹಾಗೂ ಮಾರ್ಗದರ್ಶಿ ನಿಯಮಗಳ ಪಟ್ಟಿಯನ್ನು ತಯಾರಿಸುವುದು.
  8. ಈ ಕಾಯಿದೆಯ ಪ್ರಕಾರ ಯಾವುದೇ ಕೈಗಾರಿಕೋದ್ಯಮಿ ಪರಿಸರಕ್ಕೆ ಧಕ್ಕೆ ತರುವಂತಹ ತ್ಯಾಜ್ಯಗಳನ್ನು ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಬಿಡುಗಡೆ ಮಾಡುವಂತಿಲ್ಲ.

ಈ ಕಾಯಿದೆಯ ಪ್ರಕಾರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳು ಈ ಕೆಳಗಿನಂತಿವೆ.

  1. ಅಪಾಯಕಾರಿ ವಸ್ತುಗಳ ನಿರ್ವಹಣೆ ಹಾಗೂ ರಕ್ಷಣೆ ಮಾಡುವುದು.
  2. ರಾಜ್ಯ ಉದ್ಯಮಗಳು ತ್ಯಾಜ್ಯ ವಸ್ತುಗಳನ್ನು ವಿಸರ್ಜಿಸುವುದಕ್ಕೆ ಮುಂಚೆ ಅವುಗಳನ್ನು ಪರೀಕ್ಷೆಗೆ ಒಳಪಡಿಸುವುದು ಹಾಗೂ ನಂತರ ಆದೇಶಿಸುವುದು.
  3. ಅಪಾಯಕಾರಿ ವಸ್ತುಗಳನ್ನು ಉಪಯೋಗಿಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ಕ್ರಮ ಜರುಗಿಸುವುದು.
  4. ಕೈಗಾರಿಕೆಗಳು ತಮ್ಮ ತ್ಯಾಜ್ಯ ವಸ್ತುಗಳನ್ನು ಪುನರ್‌ಬಳಕೆ ಮಾಡುವಂತೆ ಪ್ರೋತ್ಸಾಹ ನೀಡುವುದು.
  5. ಕೈಗಾರಿಕೆಗಳಲ್ಲಿ ಮಾಲಿನ್ಯಕಾರಕಗಳನ್ನು ಮಿತಿಗೊಳಿಸುವುದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಉದ್ಯಮಿಗಳಿಗೆ ಉತ್ತೇಜನ ನೀಡುವುದು.
  6. ಪರಿಸರ ಮಾಲಿನ್ಯದ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ವಿತರಿಸುವುದು.
  7. ಕೈಗಾರಿಕೆಗಳಿಂದ ಸಾಗರ, ಸಮುದ್ರ, ಸರೋವರ, ನದಿ, ಕೆರೆಗಳಿಗೆ, ತ್ಯಾಜ್ಯ ವಸ್ತುಗಳು ಸೇರದಂತೆ ಕ್ರಮ ವಹಿಸುವಂತೆ ಕೈಗಾರಿಕೋದ್ಯಮಿಗಳಿಗೆ ಎಚ್ಚರಿಕೆ ನೀಡುವುದು.
  8. ಈ ಕುರಿತು ಪ್ರಾಧಿಕಾರಿ ಹಾಗೂ ನಿಯೋಗಗಳಿಗೆ ಮಾಹಿತಿ ನೀಡುವುದು.
  9. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಕೈಪಿಡಿ ಹಾಗೂ ಪುಸ್ತಕಗಳನ್ನು ರಚಿಸಿ ಹಂಚುವುದು.
  10. ಅಪಾಯಕಾರಿ ವಸ್ತುಗಳನ್ನು ನಿರ್ವಹಿಸುತ್ತಿರುವ ವ್ಯಕ್ತಿಗಳು ರಕ್ಷಣಾ ವಿಧಾನಗಳನ್ನು ಪಾಲಿಸುವಂತೆ ಮಾರ್ಗದರ್ಶನ ನೀಡುವುದು.

ಉಪಸಂಹಾರ

ಪರಿಸರ ಸಂರಕ್ಷಣಾ ಕಾಯಿದೆ 1986 ಭಾರತದಲ್ಲಿ ಪರಿಸರ ರಕ್ಷಣೆಗೆ ಮೈಲುಗಲ್ಲಾಗಿದೆ. ಈ ಕಾಯಿದೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪರಿಸರ ಮಾಲಿನ್ಯವನ್ನು ತಡೆಯಲು ಅಗತ್ಯವಾದ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ. ಕೈಗಾರಿಕೆಗಳು ಹಾಗೂ ನಾಗರಿಕರು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಈ ಕಾಯಿದೆಯ ಮುಖ್ಯ ಉದ್ದೇಶವಾಗಿದೆ. ಪರಿಸರವನ್ನು ರಕ್ಷಿಸುವುದು ಕೇವಲ ಸರ್ಕಾರದ ಕರ್ತವ್ಯವಲ್ಲ, ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯೂ ಹೌದು. ಜಾಗೃತಿ ಮತ್ತು ಪಾಲನೆ ಮೂಲಕ ಮಾತ್ರ ಸ್ವಚ್ಛ ಹಾಗೂ ಸುರಕ್ಷಿತ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬಹುದು

ಆಮ್ಲ ಮಳೆ ಮತ್ತು ಮಾನವ ಸಮುದಾಯಗಳು ಹಾಗೂ ಕೃಷಿಯ ಮೇಲಿನ ಪರಿಣಾಮಗಳು

ಆಮ್ಲ ಮಳೆ ಮತ್ತು ಮಾನವ ಸಮುದಾಯಗಳು ಹಾಗೂ ಕೃಷಿಯ ಮೇಲಿನ ಪರಿಣಾಮಗಳು

ಕಲ್ಲಿದ್ದಲು, ಪೆಟ್ರೋಲಿಯಂ, ವಾಹನಗಳು, ವಿದ್ಯುತ್ ಉತ್ಪಾದನೆ, ಲೋಹ ಕರಗಿಸುವ ಕಾರ್ಯಗಾರ, ಮನೆಗಳಲ್ಲಿ ಉರಿಸುವ ಸೌದೆ, ಮೊದಲಾದವುಗಳಿಂದ ಹೊರಬಂದ ಹೊಗೆಯಲ್ಲಿ ಗಂಧಕದ ಡೈಆಕ್ಸೈಡ್ ಹಾಗೂ ಸಾರಜನಕದ ಡೈಆಕ್ಸೈಡ್‌ಗಳು ಇರುತ್ತವೆ. ಅವುಗಳು ಗಾಳಿಯಲ್ಲಿ ಸೇರಿ ಭೂಮಿಯ ಮೇಲ್ಭಾಗದ ಹವೆಯಲ್ಲಿ ಹಲವಾರು ಕಿ.ಮೀಗಳವರೆಗೆ ಚಲಿಸುತ್ತವೆ. ನಂತರ ನೀರಾವಿಯೊಂದಿಗೆ ಸಂಯೋಜನೆ ಹೊಂದಿ ರಸಾಯನಿಕ ಕ್ರಿಯೆಗೆ ಒಳಪಡುತ್ತವೆ. ತದನಂತರ ಆಮ್ಲದ ದ್ರಾವಣವಾಗಿ ಬದಲಾಗುತ್ತವೆ. ಹೀಗೆ ಆಮ್ಲದಿಂದ ಕೂಡಿದ ಮೋಡಗಳು ಮಳೆಯಲ್ಲಿ ವಿಲೀನಗೊಂಡು ವೃಷ್ಠಿರೂಪದಲ್ಲಿ ಭೂಮಿಯ ಮೇಲೆ ಬೀಳುತ್ತವೆ. ಇದನ್ನೇ ʻʻಆಮ್ಲ ಮಳೆʼʼ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಮಳೆ, ಮಂಜು, ಮೊದಲಾದ ರೂಪದಲ್ಲಿ ಆಮ್ಲಗಳು ವಾತಾವರಣದಿಂದ ಭೂಮಿಯ ಮೇಲೆ ಚೆಲ್ಲಲ್ಪಡುವ ಪ್ರಕ್ರಿಯೆಯನ್ನು ಆಮ್ಲ ಮಳೆ ಎಂದು ಕರೆಯುವರು.

ವಾಯುಮಂಡಲದ ನೀರಾವಿ ನೀರಿನ ಹನಿಗಳ ರೂಪದಲ್ಲಿ ಭೂಮಿಯ ಮೇಲೆ ಬೀಳುವುದನ್ನು ಆಮ್ಲ ಮಳೆ ಎಂದು ಕರೆಯುವರು. ಈ ನೀರಾವಿ ಅಧಿಕ ಪ್ರಮಾಣದ ಆಮ್ಲವನ್ನು ಒಳಗೊಂಡಿರುವುದರಿಂದ ಇದಕ್ಕೆ ಹುಳಿ ಮಳೆ ಎಂದು ಸಹ ಕರೆಯುತ್ತಾರೆ.

ರಸಾಯನಿಕ ಆಮ್ಲ ಗುಣವನ್ನು PH ಎಂಬ ಮಾನದಂಡದಿಂದ ಅಳಿಯಲಾಗುತ್ತದೆ. ಶುದ್ಧ ನೀರಿನ PH 7 ಆಗಿದ್ದರೆ ಆಮ್ಲಿಯ ನೀರಿನ PH ಅದಕ್ಕಿಂತ ಕಡಿಮೆಯಾಗಿರುತ್ತದೆ. ಅಮೆರಿಕದಂತಹ ಮಾಲಿನ್ಯಭರಿತ ದೇಶಗಳಲ್ಲಿ ಬೀಳುವ ಆಮ್ಲ ಮಳೆ ನೀರಿನ PH 4.3 ರಷ್ಟು ಕಡಿಮೆ ಇದೆ.

ಆಮ್ಲ ಮಳೆಯನ್ನು ಮೊದಲ ಬಾರಿಗೆ ಗುರುತಿಸಿದ ಖ್ಯಾತಿ ಇಂಗ್ಲೆಂಡಿನ ರಸಾಯನಿಕ ತಜ್ಞ ರಾಬರ್ಟ್ ಹ್ಯಾಂಗಸ್‌ ಸ್ಮಿತ್ ಎಂಬವರಿಗೆ ಸಲ್ಲುತ್ತದೆ. ಇವರು 1852 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಸುರಿದ ಮಳೆಯ ನೀರಿನಲ್ಲಿ ಅಸಾಧಾರಣ ಆಮ್ಲಿಯ ಮಟ್ಟವನ್ನು ಗುರುತಿಸಿದರು. ತದನಂತರ 1960 ರಲ್ಲಿ ಸ್ವೀಡನ್ ದೇಶದ ಸ್ವೇಂಟಿ ಓಡೆನ್‌ ಎಂಬುವರು ಆ ದೇಶದ 25% ರಷ್ಟು ಜಲಮೂಲಗಳು ಆಮ್ಲ ಮಳೆಯ ಪರಿಣಾಮದಿಂದ ಹಾಳಾಗುವುದನ್ನು ಗುರುತಿಸಿದರು. ಇತ್ತೀಚಿನ ಅಧ್ಯಯನಗಳ ಆಧಾರದ ಮೇರೆಗೆ ಕಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್, ವಿಶಾಖಪಟ್ಟಣಂ, ಬೆಂಗಳೂರು, ಮೊದಲಾದ ಮಹಾನಗರಗಳು ಸಹ ಆಮ್ಲ ಮಳೆಯ ತೊಂದರೆಗೆ ಸಿಲುಕಿವೆ.

ಆಮ್ಲಮಳೆಯ ಪರಿಣಾಮಗಳು (ಸಮುದಾಯ ಹಾಗೂ ಕೃಷಿ) 

  1. ಆಮ್ಲ ಮಳೆಯು ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಕರಗಿಸಿ ಆಹಾರ ಪದಾರ್ಥಗಳು ಫಲವತ್ತಾಗಿ ಬೆಳೆಯಲು ತಡೆಯನ್ನೊಡ್ಡುತ್ತದೆ.
  2. ಆಮ್ಲ ಮಳೆಯು ಮಣ್ಣಿನಲ್ಲಿರುವ ಅಲ್ಯುಮಿನಿಯಂ ಹಾಗೂ ಪಾದರಸಗಳನ್ನು ಕರಗಿಸಿ ಜಲಮೂಲಗಳನ್ನು ಕಲುಷಿತಗೊಳಿಸುತ್ತದೆ. ಮಣ್ಣಿನಲ್ಲಿರುವ ಪೋಷಕಾಂಶಗಳು ಕರಗಿ ಹೋದರೆ ಸಸ್ಯಗಳ ಸಂತತಿ ವಿನಾಶದ ಅಂಚಿಗೆ ಬಂದು ತಲುಪುತ್ತದೆ.
  3. ಆಮ್ಲ ಮಳೆಯು ಸಮುದ್ರ ಹಾಗೂ ಸಾಗರ, ಸರೋವರ ಮತ್ತು ನದಿಗಳ ಮೂಲಕ ಸೇರಿ ಜಲರಾಶಿಗಳ ಜೀವ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ.
  4. ಆಮ್ಲ ಮಳೆಯು ಜಲಭಾಗದ ಆಹಾರ ಸರಪಳಿ, ಆಹಾರ ಜಾಲ ಹಾಗೂ ಮೀನಿನ ಉತ್ಪಾದನೆಯನ್ನು ಕುಂಠಿತಗೊಳಿಸಿ ಅವುಗಳನ್ನು ಮೃತ ಸರೋವರಗಳನ್ನಾಗಿ ಮಾಡಿದೆ.
  5. ಆಮ್ಲ ಮಳೆಯಿಂದ ಬೆಳೆಗಳು ಹಾಗೂ ಅರಣ್ಯಗಳ ಮರಗಳ ಎಲೆಗಳು ಉದುರುತ್ತವೆ ಇದರಿಂದ ದ್ಯುತಿ ಸಂಶ್ಲೇಷಣೆ ಹಾಗೂ ಸಸ್ಯಗಳ ಆಹಾರ ಉತ್ಪಾದನೆಯಲ್ಲಿ ಹಿನ್ನಡೆ ಉಂಟಾಗುತ್ತದೆ.
  6. ಆಮ್ಲ ಮಳೆಯಿಂದ ಮರ ಗಿಡಗಳು ದುರ್ಬಲಗೊಂಡು ಸುಲಭವಾಗಿ ರೋಗಗಳಿಗೆ ತುತ್ತಾಗುತ್ತವೆ.
  7. ಆಮ್ಲ ಮಳೆಯು ವಿಶ್ವದಾದ್ಯಂತ ಸುಂದರ ಶಿಲ್ಪಗಳು, ಐತಿಹಾಸಿಕ ಕಟ್ಟಡಗಳು, ಸೇತುವೆಗಳು ಮುಂತಾದವುಗಳನ್ನು ವಿರೂಪಗೊಳಿಸುತ್ತದೆ ಹಾಗೂ ಶಿಥಿಲಗೊಳಿಸುತ್ತದೆ.
  8. ವಿಶ್ವ ಪ್ರಸಿದ್ಧ ತಾಜ್‌ಮಹಲ್ ಕಟ್ಟಡವು ಅಮೃತಶಿಲೆಯಿಂದ ರಚಿಸಲ್ಪಟ್ಟಿದ್ದು ಸ್ಥಳೀಯ ಕಾರ್ಖಾನೆಗಳು ಬಿಡುವ ಹೊಗೆಯ ಮಲಿನಕಾರಕ ಅಂಶಗಳಿಂದ ಉಂಟಾಗುವ ಆಮ್ಲ ಮಳೆಯಿಂದ ಹಾಳಾಗಿದೆ. ಅತ್ಯಂತ ಬೆಳಕು ಹಾಗೂ ಹೊಳಪಿನಿಂದ ಕೂಡಿದ ತಾಜ್‌ಮಹಲ್ ಕಳೆಗುಂದಿ ಮಾಸಿದ ಬಣ್ಣಕ್ಕೆ ತಿರುಗಿದೆ.
  9. ಕಬ್ಬಿಣ ಹಾಗೂ ಉಕ್ಕು, ತವರ ಮೊದಲಾದವು ಆಮ್ಲ ಮಳೆಯಿಂದ ತುಕ್ಕು ಹಿಡಿದು ಹಾಳಾಗುತ್ತವೆ.
  10. ಗಣಿಗಾರಿಕೆ ಮತ್ತು ಪೆಟ್ರೋ ಕೆಮಿಕಲ್ ಪಕ್ಕದ ಪ್ರದೇಶದಲ್ಲಿರುವ ಡಾಂಪಿಯರ್ ರಾಕ್ ಆರ್ಟ್ ಕಾಂಪ್ಲೆಕ್ಸ್‌ನಲ್ಲಿರುವ ಚಿತ್ರಕಲೆಗಳ ಮೇಲೆ ಆಮ್ಲಮಳೆಯ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಉಂಟಾಗಿದೆ. ಅನೇಕ ಕಲಾಕೃತಿಗಳು ನಿಧಾನವಾಗಿ ಮಂದವಾಗುತ್ತಿವೆ.
  11. ಹಾಗೆಯೇ ಅಥೆನ್ಸ್, ಪಾರ್ಥೆನಾನ್‌, ರೋಂನ, ಕಲೋಸಿಯಂ ಅಂತಹ ಅನುಪಮ ಸೌಂದರ್ಯದ ವಾಸ್ತುಶಿಲ್ಪಗಳು ಸಹ  ಆಮ್ಲ ಮಳೆಯ ಕಾರಣದಿಂದ ಹಾಳಾಗಿವೆ.
  12. ಆಮ್ಲೀಯ ಮಳೆಯಿಂದ ಮಾನವ ಸಮುದಾಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗಿದೆ. ಆಮ್ಲಿಯ ಮಳೆಯಿಂದ ಗಾಳಿಯನ್ನು ಸೇರುವ ಗಂಧಕದ ಡೈಆಕ್ಸೈಡ್ ಹಾಗೂ ಸಾರಜನಕದ ಆಕ್ಸೈಡ್‌ಗಳು ಉಸಿರಾಟದ ತೊಂದರೆಗೆ ಕಾರಣವಾಗಿವೆ. ಅಸ್ತಮಾ ಹಾಗೂ ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇದು ಅಲ್ಲದೆ ಚರ್ಮರೋಗ ಹಾಗೂ ಕೂದಲು ಉದುರುವುದು ಮುಂತಾದ ಗಂಭೀರ ಖಾಯಿಲೆಗಳು ಕಾಣಿಸಿಕೊಂಡಿವೆ.

ಉಪಸಂಹಾರ

ಆಮ್ಲ ಮಳೆಯು ಕೃಷಿ ಉತ್ಪಾದನೆ, ಅರಣ್ಯ ಸಂಪತ್ತು, ಜಲಜೀವ ವೈವಿಧ್ಯ ಹಾಗೂ ಮಾನವ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಇದು ಕೇವಲ ಪ್ರಕೃತಿಗೆ ಮಾತ್ರವಲ್ಲದೆ, ಮಾನವ ನಿರ್ಮಿತ ಐತಿಹಾಸಿಕ ಸ್ಮಾರಕಗಳು ಮತ್ತು ಮೂಲಸೌಕರ್ಯಗಳಿಗೂ ಹಾನಿ ಉಂಟುಮಾಡುತ್ತಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು ವಾಯುಮಾಲಿನ್ಯ ಕಡಿತಗೊಳಿಸುವ ಕ್ರಮಗಳು, ಸ್ವಚ್ಛ ಇಂಧನ ಬಳಕೆ ಮತ್ತು ಪರಿಸರ ಸ್ನೇಹಿ ನೀತಿಗಳ ಅನುಷ್ಠಾನ ಅತ್ಯಗತ್ಯವಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯೆಂಬ ಅರಿವು ಮೂಡಿದಾಗ ಮಾತ್ರ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ಉಳಿಸಬಹುದು.