ಭಾರತದ ಸಂವಿಧಾನದ ಲಕ್ಷಣಗಳು

ಭಾರತದ ಸಂವಿಧಾನದ ಲಕ್ಷಣಗಳು

ಭಾರತದ ಸಂವಿಧಾನ ಒಂದು ಸಾಮಾಜಿಕ ದಾಖಲೆ – ಗ್ರಾನ್ ವಿಲ್ಲೆ ಅಸಿಸ್ಟೆಂಟ್

ವಿಶಾಲ ಜನಸಂಖ್ಯೆ, ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಹೊಂದಿರುವ ಭಾರತದ ಆಡಳಿತಕ್ಕೆ ಸಂವಿಧಾನವೇ ಆಧಾರವಾಗಿದೆ. ಇದು ಕೇಂದ್ರ–ರಾಜ್ಯ ಸಂಬಂಧಗಳನ್ನು ಸಮನ್ವಯಗೊಳಿಸುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಇದು ಬಲವಾದ ಅಡಿಪಾಯವಾಗಿದೆ.

1. ಲಿಖಿತ ಹಾಗೂ ಬೃಹತ್ ಸಂವಿಧಾನ: 

ಭಾರತದ ಸಂವಿಧಾನವು ಪ್ರಪಂಚದಲ್ಲಿ ಅತ್ಯಂತ ವಿಸ್ತಾರವಾದ ಹಾಗೂ ಬೃಹತ್ ಗಾತ್ರದಿಂದ ಕೂಡಿದೆ. ಇದು ಅತಿ ಸೂಕ್ಷ್ಮ ವಿಷಯದಿಂದ ಹಿಡಿದು ಎಲ್ಲಾ ವಿಷಯಗಳನ್ನು ಯಾವುದೇ ಅನುಮಾನ, ಗೊಂದಲ ಹಾಗೂ ಘರ್ಷಣೆಗೆ ಎಡೆ ಮಾಡಿಕೊಡದೆ ಸವಿಸ್ತಾರವಾದ ಬಹುರೂಪದಲ್ಲಿದೆ. ಭಾರತದ ಸಂವಿಧಾನದ ಬೃಹತ್ ಗಾತ್ರವನ್ನು ಆನೆಯ ಗಾತ್ರಕ್ಕೆ ಹೋಲಿಸಿ ಆನೆಯ ಗಾತ್ರದ ಸಂವಿಧಾನ ಎನ್ನುವರು. ಆದರೆ ಭಾರತದ ಶ್ರೀಮಂತ ಚರಿತ್ರೆ ಸಂಸ್ಕೃತಿ ಹಾಗೂ ವಿಭಿನ್ನ ಸಾಮಾಜಿಕ ಆರ್ಥಿಕ ಹಿನ್ನೆಲೆಯನ್ನು ಗಮನಿಸಿದಾಗ ಸಂವಿಧಾನದ ಗಾತ್ರ ದೊಡ್ಡದೇನದಲ್ಲ ಎಂದು ಹೇಳಬಹುದು. ಈ ಸಂವಿಧಾನದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಲಾಗಿದೆ. ಪೌರತ್ವ, ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು, ಸಂಯುಕ್ತ ಪದ್ಧತಿ, ತುರ್ತು ಪರಿಸ್ಥಿತಿ ಅಧಿಕಾರಗಳು, ಸ್ವತಂತ್ರ ನ್ಯಾಯಾಂಗ ಪದ್ಧತಿ, ಚುನಾವಣೆಗಳು, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಚನೆ ಮತ್ತು ಅವುಗಳ ನಡುವಿನ ಸಂಬಂಧಗಳ ವಿಷಯಗಳನ್ನು ಸಂವಿಧಾನ ಹೊಂದಿದೆ. 1949 ನವೆಂಬರ್ 26ರಂದು ಅಂಗೀಕರಿಸಿದ ಸಂವಿಧಾನದಲ್ಲಿ 395 ವಿಧಿಗಳು 8 ಅನುಸೂಚಿಗಳು ಇದ್ದವು. ಕಾಲಕಾಲಕ್ಕೆ ಸಂವಿಧಾನದಲ್ಲಿ ತಿದ್ದುಪಡಿಗಳ ಆದ ಕಾರಣ ಸಂವಿಧಾನದ ವಿಧಿಗಳಲ್ಲಿ ಏರುಪೇರಾಗಿದೆ. ಕೆಲವು ವಿಧಿಗಳು ರದ್ದಾದರೆ ಇನ್ನು ಕೆಲವು ವಿಧಿಗಳು ಹೊಸದಾಗಿ ಸೇರಿಸಲ್ಪಟ್ಟವುಗಳಾಗಿವೆ. ಹೀಗಾಗಿ ಪ್ರಸ್ತುತ 460ಕ್ಕೂ ಹೆಚ್ಚು ವಿಧಿಗಳು, 25 ಭಾಗಗಳು ಹಾಗೂ 12 ಅಧಿಸೂಚಿಗಳು ಇವೆ. ಆದರೂ ವಿಧಿಗಳ ಮೊದಲ ಕ್ರಮ ಸಂಖ್ಯೆ ಮಾತ್ರ ಬದಲಾವಣೆಯಾಗಿಲ್ಲ. 1950 ರಿಂದ ಈವರೆಗೆ ಒಟ್ಟು 104 ಬಾರಿ ಸಂವಿಧಾನದ ವಿಧಿಗಳು ತಿದ್ದುಪಡಿಗೆ ಒಳಗಾಗಿವೆ.

2.  ಪ್ರಸ್ತಾವನೆ: 

ಸಂವಿಧಾನದ ತತ್ವಗಳು, ಮೌಲ್ಯಗಳು, ಗುರಿ ಹಾಗೂ ಉದ್ದೇಶಗಳನ್ನು ತಿಳಿಸುವ ಸಂವಿಧಾನದ ಭಾಗವನ್ನು ಪ್ರಸ್ತಾವನೆ ಅಥವಾ ಪೂರ್ವ ಪೀಠಿಕೆ ಎಂದು ಕರೆಯಲಾಗಿದೆ. ಅಮೇರಿಕ ಸಂವಿಧಾನದ ಪ್ರಭಾವಕ್ಕೆ ಒಳಗಾಗಿ ಭಾರತೀಯ ಪರಿಸರಕ್ಕೆ ಹೊಂದಿಕೊಳ್ಳುವ ಹಾಗೆ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತದ ಪ್ರಜೆಗಳಾದ ನಾವು ಎಂದು ಆರಂಭವಾಗುವ ಭಾರತದ ಸಂವಿಧಾನದ ಪ್ರಸ್ತಾವನೆಯೂ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿತಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂಬುದಾಗಿ ಮುಕ್ತಾಯಗೊಳ್ಳುತ್ತದೆ. ಕೆ. ಎಂ. ಮುನ್ಸಿಯವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದರೆ, ಮತ್ತೊಬ್ಬ ಚಿಂತಕರು ಇದನ್ನು ”ಸಂವಿಧಾನದ ಒಡವೆ” ಎಂದು ಕರೆದಿದ್ದಾರೆ.

3. ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ: 

ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಿದೆ. ಹೀಗಾಗಿ ಭಾರತದ ಆಂತರಿಕ ಹಾಗೂ ಬಾಹ್ಯ ವ್ಯವಹಾರಗಳಲ್ಲಿ ಹೊರಗಿನವರು ತಲೆಹಾಕಲು ಸಾಧ್ಯವಿಲ್ಲ. ಎಲ್ಲಾ ವಿಷಯಗಳಲ್ಲಿ ಭಾರತ ಸಂಪೂರ್ಣ ಸ್ವತಂತ್ರವನ್ನು ಪಡೆದುಕೊಂಡು ಒಂದು ಸಾರ್ವಭೌಮ ದೇಶವಾಗಿದೆ. ಇಲ್ಲಿ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಪ್ರಜೆಗಳ ಆಶಯದಂತೆ ಪ್ರಜೆಗಳ ಕಲ್ಯಾಣಕ್ಕಾಗಿ ದುಡಿಯಬೇಕು. ಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಯಾಗುತ್ತಾರೆ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ 18 ವರ್ಷ ತುಂಬಿದ ಸ್ತ್ರೀ ಪುರುಷರು ಮತದಾನ ಮಾಡುವ ಹಕ್ಕುವನ್ನು ಹೊಂದಿದ್ದಾರೆ. ದೇಶದ ಮುಖ್ಯಸ್ಥರು ಜನರಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಯ್ಕೆಯಾಗುತ್ತಿದ್ದರೆ. ಅದನ್ನು ಗಣರಾಜ್ಯ ಎಂದು ಕರೆಯುತ್ತಾರೆ. ಭಾರತದ ರಾಷ್ಟ್ರಪತಿಯು ರಾಜ್ಯಸಭೆ, ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾಗುವ ಕಾರಣ ಭಾರತವು ಗಣರಾಜ್ಯವಾಗಿದೆ ಎಂಬುದಕ್ಕೆ ಪುಷ್ಠಿ ನೀಡಿದಂತಾಗಿದೆ.

4. ಭಾಗಶಃ ನಮ್ಯ ಮತ್ತು ಭಾಗಶಃ ಅನಮ್ಯ ಸಂವಿಧಾನ: 

ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸದೆ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು ನಮ್ಯ ಎಂದು, ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸಿ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು  ಅನಮ್ಯ ಸಂವಿಧಾನ ಎಂದು ಕರೆಯುವರು. ಭಾರತದಲ್ಲಿ ಸಂವಿಧಾನದ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಅರ್ಧಕ್ಕಿಂತ ಕಡಿಮೆ ಇಲ್ಲದಂತೆ ರಾಜ್ಯಗಳು ಅನುಮೋದಿಸಬೇಕಾಗುತ್ತದೆ. ಉದಾಹರಣೆ: ರಾಜ್ಯದ ಹೆಸರಿನ ಬದಲಾವಣೆ, ರಾಜ್ಯಗಳ ಗಡಿ ಭಾಗಗಳ ಬದಲಾವಣೆ ಹಾಗೂ ರಾಜ್ಯ ಶಾಸಕಾಂಗದಲ್ಲಿ ಮೇಲ್ಮನೆಯ ರಚನೆ ಅಥವಾ ರದ್ದುಗೊಳಿಸುವುದು ಇತ್ಯಾದಿಗಳನ್ನು ಸರಳ ಬಹುಮತದ ಮೂಲಕ ಬದಲಾಯಿಸಬಹುದು. ಹೀಗಾಗಿ ಭಾರತದ ಸಂವಿಧಾನವು ಇಂಗ್ಲೆಂಡ್ ಸಂವಿಧಾನದಂತೆ ಸುಲಭವೂ ಆಗಿರದೆ ಅಮೆರಿಕಾದ ಸಂವಿಧಾನದಂತೆ ಕಠಿಣವೂ ಆಗಿರದೆ ಇವೆರಡರ ಸಮ್ಮಿಶ್ರದ ಲಕ್ಷಣಗಳಿಂದ ಕೂಡಿದೆ ಎಂದು ಹೇಳಬಹುದು.

5. ಸಂಸದೀಯ ಮಾದರಿ ಸರ್ಕಾರ: 

ನಮ್ಮ ದೇಶವು ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿದೆ. ಯಾವ ದೇಶವು ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿರುವುದೋ ಆ ದೇಶದ ಮುಖ್ಯಸ್ಥರು ಹೆಸರಿಗೆ ಮಾತ್ರ ಅಧಿಕಾರವನ್ನು ಹೊಂದಿರುತ್ತಾನೆ. ದೇಶದ ಎಲ್ಲಾ ಅಧಿಕಾರವೂ ಸಂಸತ್ತಿ(ಮಂತ್ರಿಮಂಡಲ)ಕ್ಕೆ ಒಳಪಟ್ಟಿರುತ್ತದೆ. ಉದಾಹರಣೆ: ಇಂಗ್ಲೆಂಡ್ ಹಾಗೂ ಭಾರತದಲ್ಲಿ ಅಧ್ಯಕ್ಷ ಹಾಗೂ ರಾಜರುಗಳು ನಾಮ ಮಾತ್ರ ಕಾರ್ಯಾಂಗ ಅಧಿಕಾರಿಗಳಾಗಿದ್ದು ನೈಜ ಅಧಿಕಾರಕ್ಕೆ ಮಂತ್ರಿಮಂಡಲ ಹೊಣೆಯಾಗಿರುತ್ತದೆ. ಸಂವಿಧಾನವು ಅಧ್ಯಕ್ಷರಿಗೆ ಸಾಕಷ್ಟು ಅಧಿಕಾರಗಳನ್ನು ನೀಡಿದೆಯಾದರೂ ಕೇವಲ ಅನಿವಾರ್ಯ ಸಂಬಂಧಗಳಲ್ಲಿ ಮಾತ್ರ ಅವರು ತಮ್ಮ ಅಧಿಕಾರವನ್ನು ಚಲಾಯಿಸಲು ಅವಕಾಶವಿರುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳು ಮಂತ್ರಿಮಂಡಲದ ಆದೇಶದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

6. ಸಂಯುಕ್ತ ಮತ್ತು ಏಕೀಕೃತ ಸಂವಿಧಾನ: 

“ ಕೇಂದ್ರ ಮತ್ತು ಪ್ರಾಂತ್ಯ ಎಂಬ ಎರಡು ರೀತಿಯ ಸರ್ಕಾರಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಗೆ ಸಂಯುಕ್ತ ವ್ಯವಸ್ಥೆ” ಎಂದು, ಕೇಂದ್ರ ಸರ್ಕಾರ ಪ್ರಭಲವಾಗಿದ್ದು ರಾಜ್ಯ ಸರ್ಕಾರಗಳು ಕೇಂದ್ರದ ನಿಯಂತ್ರಣದಲ್ಲಿರುವ ವ್ಯವಸ್ಥೆಯನ್ನು ಏಕಾತ್ಮಕ ವ್ಯವಸ್ಥೆ ಎಂದು ಕರೆಯಲಾಗುತ್ತದೆ.

ಭಾರತದ ಸಂವಿಧಾನದ ಮೊದಲನೆಯ ವಿಧಿಯು ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ವಿವರಿಸಿದೆ. ಆದರೆ ಸಂಯುಕ್ತ ವ್ಯವಸ್ಥೆಯಾಗಿದೆ ಎಂದು ಎಲ್ಲಿಯೂ ತಿಳಿಸಿಲ್ಲ. ಆದರೂ ಸಂಯುಕ್ತ ವ್ಯವಸ್ಥೆಯ ಲಕ್ಷಣಗಳಾದ ಸಂವಿಧಾನದ ಶ್ರೇಷ್ಠತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರ ಹಂಚಿಕೆ, ಸುಪ್ರೀಂಕೋರ್ಟ್ ಇರುವಿಕೆ, ಅನಮ್ಯ ತಿದ್ದುಪಡಿ ಮುಂತಾದವುಗಳನ್ನು ಅಳವಡಿಸಿಕೊಂಡಿದೆ. ಜೊತೆಗೆ ಏಕಾತ್ಮಕ ಅಂಶಗಳಾಗದ ಏಕ ಪೌರತ್ವ, ಏಕ ಸಂವಿಧಾನ, ಪ್ರಬಲ ಕೇಂದ್ರ ಸರ್ಕಾರ, ಅಖಿಲ ಭಾರತೀಯ ಸೇವೆಗಳು ಹಾಗೂ ಸಾಮಾನ್ಯ ಚುನಾವಣಾ ಆಯೋಗ ಮುಂತಾದವುಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದುದರಿಂದ ಭಾರತವನ್ನು ಅರೆ ಸಂಯುಕ್ತ ಸರ್ಕಾರ ಎಂದು ಕರೆಯಲಾಗಿದೆ. ಕೆ. ಸಿ. ವ್ಹೀರ್ ಅವರು ಭಾರತದ ಸಂವಿಧಾನವು ಭಾವನಾತ್ಮಕ ಸಂಯುಕ್ತ ವ್ಯವಸ್ಥೆಯಾಗಿದ್ದು ಸಂಯುಕ್ತ ಲಕ್ಷಣಗಳನ್ನು ಹೊಂದಿದ ಏಕಾತ್ಮಕ ವ್ಯವಸ್ಥೆ ಎಂದಿದ್ದಾರೆ.

7. ಮೂಲಭೂತ ಹಕ್ಕುಗಳು: 

ಭಾರತದ ಸಂವಿಧಾನದ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಅಳವಡಿಸಿ ಪ್ರಜೆಗಳ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಸಂವಿಧಾನ ರಚನಾಕಾರರು ಸಂವಿಧಾನದ ಮೂರನೇ ಭಾಗದ 12 ರಿಂದ 15 ನೇ ವಿಧಿಯವರೆಗೆ ಏಳು ಮೂಲಭೂತ ಹಕ್ಕುಗಳನ್ನು ನೀಡಿದ್ದರು. ಆದರೆ 1978 ರಲ್ಲಿ 44ನೇ ವಿಧಿಗೆ ತಿದ್ದುಪಡಿ ತಂದು ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈಬಿಡಲಾಯಿತು. ಪ್ರಸ್ತುತ ಈಗ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರ ಹಕ್ಕುಗಳು ಇವೆ. ಭಾರತೀಯ ಪೌರರು ಮೂಲಭೂತ ಹಕ್ಕುಗಳನ್ನು ಹೊಂದಿದ್ದರೂ ತುರ್ತುಪರಿಸ್ಥಿತಿಯಲ್ಲಿ ಅವುಗಳನ್ನು ಕಸಿದುಕೊಳ್ಳಬಹುದಾಗಿದೆ. ಹಾಗೂ ಸಾಮಾನ್ಯ ಪರಿಸ್ಥಿತಿಯಲ್ಲಿ ಅವುಗಳನ್ನು ಮಿತಿಗೊಳಿಸಬಹುದಾಗಿದೆ.

8. ರಾಜ್ಯ ನಿರ್ದೇಶಕ ತತ್ವಗಳು :(Directive principles of state policy)

ದೇಶದ ಪ್ರಜೆಗಳ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನ ನೀಡಿರುವ ಮಾರ್ಗದರ್ಶಿ ಸೂತ್ರಗಳಿಗೆ ರಾಜ್ಯ ನಿರ್ದೇಶಕ ತತ್ವಗಳು ಎಂದು ಕರೆಯುತ್ತಾರೆ. ಸಂವಿಧಾನದ ನಾಲ್ಕನೇ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದ್ದು ಇವು ಸರ್ಕಾರವು ಅನುಸರಿಸಬೇಕಾದ ನೀತಿ ನಿಯಮಗಳ ಬಗೆಗೆ ನಿರ್ದೇಶನಗಳನ್ನು ನೀಡುತ್ತವೆ. ಒಂದು ವೇಳೆ ಸರ್ಕಾರ ಅವುಗಳನ್ನು ಪಾಲಿಸದೆ ಹೋದರೆ ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ನ್ಯಾಯಾಲಯಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಸರ್ಕಾರದ ಮೇಲೆ ಬಲವಂತವಾಗಿಯೂ ಹೇರುವಂತಿಲ್ಲ. ದೇಶದ ಸಂವಿಧಾನದ ಹೊರತಾಗಿ ಬೇರೆ ಯಾವುದೇ ದೇಶಗಳ ಸಂವಿಧಾನದಲ್ಲಿ ಇಂತಹ ನಿರ್ದೇಶಕ ತತ್ವಗಳು ಕಂಡುಬರುವುದಿಲ್ಲ. ಆದರೂ ನಿರ್ದೇಶಕ ತತ್ವಗಳನ್ನು ರಾಜ್ಯ ಆಡಳಿತದಲ್ಲಿ ಮೂಲಭೂತವೆಂದು ಪರಿಗಣಿಸಲಾಗಿದ್ದು ಸರ್ಕಾರಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೆ ತರಬೇಕೆಂದು ಹೇಳಲಾಗಿದೆ. ಇಲ್ಲವಾದರೆ ಡಾಕ್ಟರ್ ಅಂಬೇಡ್ಕರ್ ಹೇಳಿದಂತೆ ಜನರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ರಾಜ್ಯ ನಿರ್ದೇಶಕ ತತ್ವಗಳು ಸರ್ಕಾರದ ದಾರಿ ದೀಪಗಳಾಗಿವೆ. ರಾಜ್ಯ ನಿರ್ದೇಶಕ ತತ್ವಗಳು ಗಾಂಧೀವಾದ, ಸಮಾಜವಾದ ಹಾಗೂ ಉದಾರವಾದ ತತ್ವಗಳಿಂದ ಸ್ಪೂರ್ತಿ ಪಡೆದಿವೆ.

9. ಮೂಲಭೂತ ಕರ್ತವ್ಯಗಳು:  (Fundamental Duties)

ಮೂಲಭೂತ ಕರ್ತವ್ಯಗಳು ದೇಶದ ಪ್ರಜೆಗಳು ದೇಶಕ್ಕಾಗಿ ನಿರ್ವಹಿಸಬೇಕಾದ ಸರಳ ಕಾರ್ಯಗಳಾಗಿವೆ. ಆರಂಭದಲ್ಲಿ ಭಾರತದ ಸಂವಿಧಾನದಲ್ಲಿ ಭಾರತೀಯ ಪ್ರಜೆಗಳು ನಿರ್ವಹಿಸಬಹುದಾದ ಮೂಲಭೂತ ಕರ್ತವ್ಯಗಳ ಪ್ರಸ್ತಾಪವಿರಲಿಲ್ಲ. 1976ರ 42ನೇ ಸಂವಿಧಾನದ ತಿದ್ದುಪಡಿಯ ಮೂಲಕ ಭಾಗ ನಾಲ್ಕು A 51ನೇ ವಿಧಿ ಅಡಿಯಲ್ಲಿ ಸೇರಿಸಲಾಯಿತು. ಪ್ರತಿ ಹಕ್ಕಿಗೂ ಅನುರೂಪವಾದ ಕರ್ತವ್ಯವಿರುವುದರಿಂದ ರಾಜ್ಯದಿಂದ ಹಕ್ಕುಗಳನ್ನು ಪಡೆದು ಅನುಭವಿಸುವ  ಪ್ರಜೆಗಳು ಕೃತಜ್ಞತಾಪೂರ್ವಕವಾಗಿ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ದೇಶ ಸೇವೆಗೆ ಕರೆ ಬಂದರೆ ದೇಶ ಸೇವೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು. ದೇಶದ ಏಕತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ.

10. ಸ್ವತಂತ್ರ ನ್ಯಾಯಾಂಗ: (Independent judiciary)

ಭಾರತದಲ್ಲಿ ಪ್ರಜೆಗಳಿಗೆ ಸಮಾನವಾಗಿ ನ್ಯಾಯ ವಿತರಣೆ ಮಾಡುವ ಉದ್ದೇಶದಿಂದ ಭಾರತದ ಸಂವಿಧಾನವು ನ್ಯಾಯಾಂಗವನ್ನು ಶಾಸಕಾಂಗ ಹಾಗೂ ಕಾರ್ಯಾಂಗದಿಂದ ಬೇರ್ಪಡಿಸಿದೆ. ಏಕೆಂದರೆ ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗದ ಅಂಕಿತದಲ್ಲಿದ್ದರೆ ಅವುಗಳು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳಬಹುದೆಂಬ ಗುಮಾನಿಯಿಂದ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಂಬಿಕೆ ಉಳಿಯುವಂತೆ ಮಾಡಲು ಮತ್ತು ನ್ಯಾಯಾಂಗದ ಪಾವಿತ್ರ್ಯತೆಯನ್ನು ಕಾಪಾಡಲು ಸಂವಿಧಾನ ರಚನಾ ಸಮಿತಿಯ ಸದಸ್ಯರು ನ್ಯಾಯಾಂಗವನ್ನು ಉಳಿದ ಎರಡು ಅಂಗಗಳಿಂದ ದೂರವಿರಿಸಿದರು. ಹೀಗಾಗಿ ಇಂದಿಗೂ ನ್ಯಾಯಾಂಗವು ಪ್ರತ್ಯೇಕವಾಗಿದ್ದು ನ್ಯಾಯಾಧೀಶರ ಸಂಬಳವನ್ನು ಸರ್ಕಾರ ನೀಡದೇ ಬದಲಾಗಿ “ಭಾರತದ ಸಂಗ್ರಹ ನಿಧಿಯಿಂದ ಭರಿಸಲಾಗುತ್ತದೆ.” ನ್ಯಾಯಾಧೀಶರ ನೇಮಕಾತಿಯಲ್ಲಿಯೂ ಸಹ ಸರ್ಕಾರದ ಪಾತ್ರವೇನೂ ಇರುವುದಿಲ್ಲ.

11. ನ್ಯಾಯಾಂಗ ವಿಮರ್ಶೆ:

ಕೇಂದ್ರ ಹಾಗೂ ರಾಜ್ಯ ಶಾಸಕಾಂಗಗಳು ಸಂವಿಧಾನದ ನಿಯಮಾವಳಿಗನುಗುಣವಾಗಿ ಕಾನೂನುಗಳನ್ನು ರೂಪಿಸಬೇಕು. ಶಾಸಕಾಂಗಗಳು ರೂಪಿಸುವ ಕಾನೂನುಗಳು ಸಂವಿಧಾನ ವಿರುದ್ಧವಾಗಿದ್ದರೆ ಅವುಗಳನ್ನು ಅಸಿಂಧು ಅಥವಾ ಕಾನೂನುಬಾಹಿರ ಎಂದು ಘೋಷಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ. ಇದನ್ನೇ ನ್ಯಾಯಿಕ ವಿಮರ್ಶೆ ಎಂದು ಕರೆಯುತ್ತಾರೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುವಂತಿಲ್ಲ. ನ್ಯಾಯಾಂಗ ಒಮ್ಮೆ ಕೊಟ್ಟ ತೀರ್ಪನ್ನು ಯಾರೂ ಪ್ರಶ್ನಿಸುವಂತಿಲ್ಲ. ಸಂವಿಧಾನದ ಅರ್ಥವನ್ನು ಯಾವುದೇ ಪಕ್ಷಪಾತವಿಲ್ಲದೆ ವ್ಯಕ್ತಪಡಿಸಲು ನ್ಯಾಯಾಲಯಗಳಿಗೆ ಈ ಅಧಿಕಾರವನ್ನು ಕೊಡಲಾಗಿಯೇ ವಿನಹಃ ಶಾಸಕಾಂಗಗಳ ಅಧಿಕಾರಗಳನ್ನು ಮೊಟಕುಗೊಳಿಸುವ ಉದ್ದೇಶದಿಂದಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ನ್ಯಾಯಾಂಗ ವಿಮರ್ಶೆಯ ಮೂಲಕ ನ್ಯಾಯಾಲಯವು ಸಂವಿಧಾನದ ಸಮತೋಲನ ಚಕ್ರದಂತೆ ಕಾರ್ಯನಿರ್ವಹಿಸುತ್ತದೆ.

12. ಜಾತ್ಯಾತೀತ ರಾಷ್ಟ್ರ: (Secular state)

 ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಮಹತ್ವ ನೀಡದೇ ಅಸ್ತಿತ್ವದಲ್ಲಿರುವ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಂಡರೆ ಅದನ್ನು ಜಾತ್ಯತೀತ ಎಂದು ಕರೆಯಲಾಗುವುದು. ಈ ಜಾತ್ಯತೀತ ಎಂಬ ಪದವು 1950ರ ಮೂಲ ಸಂವಿಧಾನದಲ್ಲಿ ಇರಲಿಲ್ಲ. ಇದನ್ನು 1976ರಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಜಾತ್ಯತೀತ ಎಂಬ ಪದವು ಇಂಗ್ಲಿಷ್ ಪದವಾದ ಸೆಕ್ಯುಲರಿಸಂ ಎಂಬ ಪದದಿಂದ ಬಂದಿದೆ. ಇದು ಕನ್ನಡದಲ್ಲಿ ನಾಸ್ತಿಕ ಅಥವಾ ದೈವ ವಿರೋಧಿ ಎಂದರ್ಥವಾಗುತ್ತದೆ. ಭಾರತಕ್ಕೆ ಸಂಬಂಧಿಸಿದಂತೆ ಜಾತ್ಯತೀತ ಪದವನ್ನು ಧರ್ಮ ನಿರಪೇಕ್ಷತೆಯನ್ನು ಸೂಚಿಸಲು ಬಳಸಲಾಯಿತು. ಭಾರತದ ಸಂವಿಧಾನದ ಪ್ರಕಾರ ಭಾರತವು ಜಾತ್ಯತೀತ ದೇಶವಾಗಿದ್ದು ಹಿಂದೂ, ಇಸ್ಲಾಂ, ಜೈನ, ಬೌದ್ಧ, ಕ್ರೈಸ್ತ ಹಾಗೂ ಪಾರ್ಶಿಗಳನ್ನು ಸಮಾನವಾಗಿ ಗೌರವಿಸುತ್ತದೆ. ರಾಜ್ಯವು ಯಾವುದೇ ಧರ್ಮದ ಪರ ಅಥವಾ ವಿರೋಧಿಯಾಗಿರಬಾರದು. ಭಾರತೀಯನು ತನಗೆ ಇಷ್ಟ ಬಂದ ಮತವನ್ನು ಇತರರಿಗೆ ತೊಂದರೆ ಆಗದಂತೆ ಅವಲಂಬಿಸಿ ಪ್ರಚಾರ ಮಾಡಬಹುದಾಗಿದೆ. ಅಸ್ಪೃಶ್ಯತೆಯ ನಿವಾರಣೆಯು ಭಾರತದ ಸಂವಿಧಾನದ ಮಹತ್ತರವಾದ ಆಶಯವಾಗಿದೆ.

13. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ: (Universal Audalt Franchies)

ಜಾತಿ, ಲಿಂಗ, ಧರ್ಮ, ಭಾಷೆ, ಬಡತನ, ಸಿರಿತನ, ಬಣ್ಣ, ಅಂತಸ್ತು, ಆಸ್ತಿ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯ ಮಾಡದೆ ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡುವ ವ್ಯವಸ್ಥೆಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದು ಕರೆಯುವರು. ದೇಶದಿಂದ ದೇಶಕ್ಕೆ ವಯಸ್ಕ ಮತದಾನ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಭಾರತದ ಸಂವಿಧಾನ ಪಿತಾಮಹರು ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿಯನ್ನು ಬೆಂಬಲಿಸಿ ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯಾಚರಣೆಗೆ ಅದನ್ನು ಅಳವಡಿಸಿದರು. ಸಂವಿಧಾನದ 15ನೇ ಭಾಗದಲ್ಲಿರುವ 326 ನೇ ವಿಧಿಯಲ್ಲಿ ವಯಸ್ಕ ಮತದಾನ ಪದ್ಧತಿಯನ್ನು ಪರಿಚಯ ಮಾಡಲಾಯಿತು. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಮತದಾನ ಮಾಡುವ ಅವಕಾಶವಿದೆ. 1988ರಲ್ಲಿ ಸಂಸತ್ತು 326 ನೇ ವಿಧಿಯನ್ನು ತಿದ್ದುಪಡಿ ಮಾಡಿ ಮತದಾನದ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿತು. ಈ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು 1989ರಲ್ಲಿ ಅಂಕಿತವನ್ನು ಹಾಕಿದರು. ಈ ಪದ್ಧತಿಯು ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿದೆ. ಸಮಾಜದ ವಿವಿಧ ಜನಾಂಗಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆದು ಬಂದಿದೆ. ಯಾರನ್ನು, ಯಾವಾಗ ಮತ್ತು ಹೇಗೆ ಆಯ್ಕೆ ಮಾಡಬೇಕೆಂಬ ಸಾಮಾನ್ಯ ಜ್ಞಾನ ಇಂದು ಪ್ರಜ್ಞಾವಂತ ನಾಗರಿಕರಿಗೆ ಬಂದಿದೆ. ಅದರಲ್ಲಿ ಅವರು ಯಶಸ್ವಿಯೂ ಆಗುತ್ತಿದ್ದಾರೆ. ತಪ್ಪು ಮಾಡಿದ ಪಕ್ಷವನ್ನು ಪದಚ್ಯುತಿಗೊಳಿಸುವುದರಲ್ಲಿ ಭಾರತೀಯ ಪ್ರಜೆಗಳು  ಧೈರ್ಯ ತೋರುತ್ತಿದ್ದಾರೆ.

ತುರ್ತು ಪರಿಸ್ಥಿತಿಗಳು: (Emergency)

ದೇಶ ಎದುರಿಸಬಹುದಾದ ಅಸಹಜ ಸೈನಿಕ ಸಂವಿಧಾನಾತ್ಮಕ ಅಥವಾ ಆರ್ಥಿಕ ಸನ್ನಿವೇಶಗಳನ್ನು ತುರ್ತು ಪರಿಸ್ಥಿತಿ ಎಂದು ಕರೆಯುತ್ತಾರೆ. ಜರ್ಮನಿಯ ವೈಮರ್ ಸಂವಿಧಾನದಿಂದ ಪ್ರಭಾವಿತರಾದ ಸಂವಿಧಾನ ರಚನಾಕಾರರು 18ನೇ ಭಾಗದ 352 ರಿಂದ 360 ನೇ ವಿಧಿಯವರೆಗೆ ಭವಿಷ್ಯದಲ್ಲಿ ಎದುರಾಗಬಲ್ಲ ಮೂರು ಬಗೆಯ ತುರ್ತು ಪರಿಸ್ಥಿತಿಗಳಿಗೆ ಪರಿಹಾರೋಪಾಯಗಳನ್ನು ನಮೂದಿಸಿದ್ದಾರೆ. ಭಾರತದ ಸಂವಿಧಾನದಲ್ಲಿ ತಿಳಿಸಲಾದ ಮೂರು ಬಗೆಯ ತುರ್ತು ಪರಿಸ್ಥಿತಿಗಳೆಂದರೆ,

೧)  352ನೇ ವಿಧಿಯಂತೆ ಬಾಹ್ಯ ಆಕ್ರಮಣ ಅಥವಾ ಆಂತರಿಕ ಸಶಸ್ತ್ರ ಬಂಡಾಯಗಳ ಕಾರಣಕ್ಕೆ ಘೋಷಿಸುವ ತುರ್ತು ಪರಿಸ್ಥಿತಿ.

೨) 356ನೇ ವಿಧಿಯಂತೆ ರಾಜ್ಯವೊಂದರ ಸಂವಿಧಾನಾತ್ಮಕ ಯಂತ್ರ ಕುಸಿದಾಗ ರಾಜ್ಯಪಾಲರಿಂದ ವರದಿ ಪಡೆದು ಆ ರಾಜ್ಯದಲ್ಲಿ ಘೋಷಿಸಲಾಗುವ ರಾಜ್ಯ ತುರ್ತು ಪರಿಸ್ಥಿತಿ.

೩)  360ನೇ ವಿಧಿಯಂತೆ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ತಲೆದೂರಿದಾಗ ಘೋಷಿಸಲಾದ ಆರ್ಥಿಕ ತುರ್ತು ಪರಿಸ್ಥಿತಿ. ಸಾಮಾನ್ಯವಾಗಿ ತುರ್ತು ಪರಿಸ್ಥಿತಿ ಜಾರಿಯಾದಾಗ ಕೇಂದ್ರ ಸರ್ಕಾರ ಪ್ರಬಲವಾಗಿ ರಾಜ್ಯ ಸರ್ಕಾರಗಳು ದುರ್ಬಲವಾಗುತ್ತವೆ.

15. ಎರವಲು ಸಂವಿಧಾನ: 

ಭಾರತದ ಸಂವಿಧಾನ ರಚನೆಯಲ್ಲಿ ಸಂವಿಧಾನ ರಚನೆಗಾರರು ಜಗತ್ತಿನ ಬೇರೆಬೇರೆ ದೇಶಗಳ ಸಂವಿಧಾನಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡರು. ಆದರೆ ಯಥಾವತ್ತಾಗಿ ಬೇರೆ ಸಂವಿಧಾನಗಳ ನಿಯಮಾವಳಿಗಳನ್ನು ಸೇರಿಸದೆ ಭಾರತದ ಪರಿಸ್ಥಿತಿಗೆ ತಕ್ಕ ಹಾಗೆ ಅವುಗಳಲ್ಲಿ ಅಗತ್ಯ ಮಾರ್ಪಾಡಿನೊಂದಿಗೆ ಅಳವಡಿಸಲು ಪ್ರಯತ್ನಿಸಿದ್ದಾರೆ. ಮೂಲಭೂತ ಹಕ್ಕುಗಳು, ಸರ್ವೋಚ್ಚ ನ್ಯಾಯಾಲಯ, ಪ್ರಸ್ತಾವನೆ ಮುಂತಾದವುಗಳ ಮೇಲೆ ಅಮೇರಿಕ ಸಂವಿಧಾನದ ಪ್ರಭಾವವಾಗಿದ್ದರೆ. ಸಂಸತ್ತು, ಮಂತ್ರಿ ಮಂಡಲ, ಶಾಸನ ರಚನೆ ಮುಂತಾದವುಗಳ ಮೇಲೆ ಇಂಗ್ಲೆಂಡ್ ಸಂವಿಧಾನದ ಪ್ರಭಾವ ಹೆಚ್ಚಾಗಿದೆ. ರಾಜ್ಯ ನಿರ್ದೇಶಕ ತತ್ವಗಳು ಐರ್ಲೆಂಡ್ ಸಂವಿಧಾನದಿಂದ ಪ್ರಭಾವಿತವಾಗಿದ್ದರೆ, ತುರ್ತುಪರಿಸ್ಥಿತಿಯು ಜರ್ಮನಿಯ ಸಂವಿಧಾನದಿಂದ ಪ್ರಭಾವಿತವಾಗಿದೆ. ಜೊತೆಗೆ ಕೆನಡಾ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸಂವಿಧಾನಗಳು ಹಲವು ವಿಧಗಳಲ್ಲಿ ನೆರವಾಗಿವೆ.

16.  ಏಕ ಪೌರತ್ವ: (One citizenship)

ಭಾರತದಲ್ಲಿ ಏಕ ಪೌರತ್ವ ವ್ಯವಸ್ಥೆ ಇದೆ. ಕಾಶ್ಮೀರಿನಿಂದ ಕನ್ಯಾಕುಮಾರಿಯವರೆಗೆ ಎಲ್ಲಾ ಪ್ರಾಂತ್ಯಗಳ ಜನರು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಹಾಗೆಯೇ ದೇಶದಾದ್ಯಂತ ಒಂದೇ ಕಾನೂನು ಒಂದೇ ಸಂವಿಧಾನವಿದ್ದು ಎಲ್ಲ ಜನರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಪ್ರಜೆಗಳು ಯಾವುದೇ ರಾಜ್ಯದಲ್ಲಿ ಜನಿಸಿದರೂ ಎಲ್ಲರೂ ಭಾರತೀಯ ಪ್ರಜೆಗಳೇ ಆಗಿರುತ್ತಾರೆ. ಸಂವಿಧಾನದ 11ನೇ ವಿಧಿ ನೀಡಿರುವ ಅಧಿಕಾರದ ಅನ್ವಯ ಸಂಸತ್ತು ಪೌರತ್ವಕ್ಕೆ ಸಂಬಂಧಿಸಿದಂತೆ 1955ರ ಪೌರತ್ವ ಕಾನೂನನ್ನು ಅಂಗೀಕರಿಸಿತು. ಆ ಪ್ರಕಾರ ಏಕ ಸಂವಿಧಾನ, ಏಕ ಪೌರತ್ವ ಹಾಗೂ ಏಕ ರಾಷ್ಟ್ರ ಭಾಷೆ ಎಂಬುದನ್ನು ತಿಳಿಸಿ ಹೇಳಿದೆ. ಇದರ ಮೂಲ ಉದ್ದೇಶ ದೇಶದ ಐಕ್ಯತೆಯನ್ನು ಸಾಧಿಸುವುದಾಗಿದೆ.

17. ಅಧಿಕಾರ ವಿಕೇಂದ್ರೀಕರಣ: (Decentralization of power)

ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ವಿಭಜನೆಯಾಗುವುದನ್ನು ಅಧಿಕಾರ ವಿಕೇಂದ್ರೀಕರಣ ಎಂದು ಕರೆಯಲಾಗುವುದು. ಇಲ್ಲಿ ಮೂರು ವಿಧವಾದ ಅಧಿಕಾರ ಹಂಚಿಕೆಯಾಗುವುದನ್ನು ಕಾಣಬಹುದಾಗಿದೆ. ಕೇಂದ್ರ ಸರ್ಕಾರಕ್ಕೆ 97 ವಿಷಯಗಳನ್ನು, ಕೇಂದ್ರ ಸೂಚಿಯಲ್ಲಿ ರಾಜ್ಯಗಳಿಗೆ 66 ವಿಷಯಗಳನ್ನು ರಾಜ್ಯ ಸೂಚಿಯಲ್ಲಿ ವಿಭಜಿಸುವುದಲ್ಲದೆ, ಸಮವರ್ತಿ ಸೂಚಿಯಲ್ಲಿರುವ ಕೆಲವಾರು ವಿಷಯಗಳ ಮೇಲೆ ಕೇಂದ್ರ ಹಾಗೂ ರಾಜ್ಯಗಳೆರಡೂ ಅಧಿಕಾರವನ್ನು ಹೊಂದಿವೆ. ಈ ಅಧಿಕಾರದ ವಿಭಜನೆಯನ್ನು ನೋಡಿದಾಗ ಕೇಂದ್ರಕ್ಕೆ ರಾಜ್ಯಗಳಿಂದ ಹೆಚ್ಚಿನ ಅಧಿಕಾರಗಳಿರುವುದು ಕಂಡುಬರುತ್ತದೆ.

 18. ಅಖಿಲ ಭಾರತ ಸೇವೆಗಳು: (All indian services)

ಭಾರತದ ಫೆಡರಲ್ ಪದ್ಧತಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳಿಗೆ ಪ್ರತ್ಯೇಕ ಆಡಳಿತ ಸೇವೆಗಳಿದ್ದರೂ ಸಂವಿಧಾನದ 312ನೇ ವಿಧಿ ಅನ್ವಯ ಅಖಿಲ ಭಾರತ ಸೇವೆಗಳಿಗೆ ಅವಕಾಶ ಮಾಡಲಾಗಿದೆ. ಈ ವಿಧಿಯ ಅನ್ವಯ ರಾಜ್ಯಸಭೆಯ ಶಿಫಾರಸ್ಸಿನ ಆಧಾರದ ಮೇಲೆ ಸಂಸತ್ತು ಅಖಿಲ ಭಾರತ ಸೇವೆಗಳನ್ನು ರಚಿಸಲು ಅಧಿಕಾರ ಪಡೆದಿದೆ. ಕೇಂದ್ರದಲ್ಲಿ ಕೇಂದ್ರ ಲೋಕಸೇವಾ ಆಯೋಗವಿದ್ದು ಅದು ಐಎಎಸ್, ಐಪಿಎಸ್, ಐಎಫ್ಎಸ್, ಐಆರ್‌ಎಸ್ ನಂತಹ  ಪರೀಕ್ಷೆಗಳನ್ನು ನಡೆಸಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡುತ್ತದೆ. ಇನ್ನು ಪ್ರತಿ ರಾಜ್ಯಗಳಲ್ಲಿ ಒಂದೊಂದು ರಾಜ್ಯ ಲೋಕಸೇವಾ ಆಯೋಗಗಳಿದ್ದು ಕೆಎಎಸ್ ನಂತಹ ಪರೀಕ್ಷೆಗಳನ್ನು ನಡೆಸಿ ಅಧಿಕಾರಿಗಳ ನೇಮಕ ಮಾಡಿ ಆಡಳಿತ ಯಂತ್ರವನ್ನು ಪರಿಣಾಮಕಾರಿಯಾಗಿ ಚುರುಕುಗೊಳಿಸಲಾಗುತ್ತದೆ.

19. ಉಚಿತ ಪ್ರಾಥಮಿಕ ಶಿಕ್ಷಣ: (Free primary education)

ಒಂದು ದೇಶದ ಪ್ರಗತಿಗೆ ಅಲ್ಲಿನ ಜನರೇ ಕಾರಣರಾಗುತ್ತಾರೆ. ಅವರನ್ನು ಪೌರರು ಎಂದು ಕರೆಯಲಾಗುವುದು. ಅವರು ರಾಷ್ಟ್ರದ ಉನ್ನತಿಗಾಗಿ ಹೋರಾಡಬೇಕಾದರೆ ಅಕ್ಷರಸ್ಥರಾಗುವುದು ಬಹಳ ಮುಖ್ಯವಾದುದು. ಅನಕ್ಷರಸ್ಥರಿಂದ ಯಾವ ದೇಶವೂ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗದು. ಆದುದರಿಂದ ಭಾರತದ ಸಂವಿಧಾನದಲ್ಲಿ 14 ವರ್ಷದ ಎಲ್ಲಾ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲು ನಿರ್ದೇಶನ ನೀಡಿದೆ. ಇದರಿಂದ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಲು ಸಾಧ್ಯವಾಗುತ್ತದೆ.

20. ಸ್ತ್ರೀಯರ ಸ್ಥಾನಮಾನಗಳು: (Position of women)

ಭಾರತದ ಸಂವಿಧಾನದಲ್ಲಿ ಸ್ತ್ರೀಯರಿಗೆ ಪುರುಷನಷ್ಟೇ ಸರಿಸಮಾನವಾದ ಸ್ಥಾನಮಾನಗಳನ್ನು ನೀಡಲಾಗಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವ, ಮತ ಹಾಕುವ ಮತ್ತು ಸರ್ಕಾರಿ ಹುದ್ದೆಗಳನ್ನು ಪಡೆಯುವಾಗ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ. ಪರಿಣಾಮವಾಗಿ ದೇಶದಲ್ಲಿ ಸತತವಾಗಿ 16 ವರ್ಷಗಳವರೆಗೆ ಮಹಿಳೆಯೊಬ್ಬಳು ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿದಳು. 6 ವರ್ಷಗಳ ಕಾಲ ಮಹಿಳೆಯೊಬ್ಬಳು ಕರ್ನಾಟಕ ವಿಧಾನಸಭೆಯ ಅಧ್ಯಕ್ಷಳಾಗಿದ್ದಳು. ಕಿರಣ್‌ ಬೇಡಿ ದೇಶದ ಮೊದಲ ಮಹಿಳಾ ಐ.ಪಿ.ಎಸ್‌ ಅಧಿಕಾರಿಯಾಗಿದ್ದರು. ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವುದನ್ನು ನೋಡಿದರೆ ಮಹಿಳೆಯರಿಗೆ ಸಂವಿಧಾನದಲ್ಲಿ ನೀಡಿದ ಸಮಾನಾವಕಾಶವೇ ಕಾರಣವಾಗಿದೆ.

ಉಪಸಂಹಾರ

ಭಾರತದ ಸಂವಿಧಾನವು ದೇಶದ ಆಡಳಿತ ವ್ಯವಸ್ಥೆಯ ಹೃದಯವಾಗಿದ್ದು ಪ್ರಜೆಗಳ ಹಕ್ಕುಗಳನ್ನು ಕಾಪಾಡುವ ರಕ್ಷಾಕವಚವಾಗಿದೆ. ಇದು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತದೆ. ಕಾಲಾನುಕ್ರಮದಲ್ಲಿ ತಿದ್ದುಪಡಿಗಳ ಮೂಲಕ ಸಮಾಜದ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿರುವುದು ಇದರ ವಿಶೇಷತೆ. ಆದ್ದರಿಂದ ಭಾರತದ ಸಂವಿಧಾನವು ಕೇವಲ ಕಾನೂನು ಪುಸ್ತಕವಲ್ಲ; ಅದು ಭಾರತದ ಆತ್ಮ ಮತ್ತು ದರ್ಶನವಾಗಿದೆ.

ಸಂವಿಧಾನ ರಚನೆಗಾಗಿ ಮಹನೀಯರು ನೀಡಿದ ಕೊಡುಗೆಗಳು

ಸಂವಿಧಾನ ರಚನೆಗಾಗಿ ಮಹನೀಯರು ನೀಡಿದ ಕೊಡುಗೆಗಳು

ಭಾರತದ ಸಂವಿಧಾನದ ರಚನೆಗೆ ಅನೇಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೊಡುಗೆಗಳನ್ನು ನೀಡಿದ್ದಾರೆ. ಆ ಪೈಕಿ ಕೆಲವರು ಗಣನೀಯ ಪಾತ್ರ ನಿರ್ವಹಿಸಿದ್ದಾರೆ. ಅವರಲ್ಲಿ ಪ್ರಮುಖ ನಾಯಕರ ಕೊಡುಗೆಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

1. ಜವಾಹರಲಾಲ್ ನೆಹರು ಪಾತ್ರ: 

ಭಾರತದ ಸ್ವಾತಂತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಜವಹರಲಾಲ್ ನೆಹರು ಅವರು ಸ್ವಾತಂತ್ರದ ಹೊಸ್ತಿಲಲ್ಲಿ ಹಂಗಾಮಿ ಸರ್ಕಾರದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ದೇಶದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಅಲಿಪ್ತ ನೀತಿ, ಪಂಚಶೀಲ ಹಾಗೂ ಪಂಚವಾರ್ಷಿಕ ಯೋಜನೆಗಳಿಗೆ ಅಡಿಪಾಯ ಹಾಕಿ ಪ್ರಜಾಸತ್ತಾತ್ಮಕವಾದ ಸಮಾಜದ ನಿರ್ಮಾಣಕ್ಕೆ ಕಾರಣರಾದರು. ಸ್ವಾತಂತ್ರ್ಯ ಚಳುವಳಿಯ ಕಾವು ಅಧಿಕಗೊಂಡ ಕಾಲದಲ್ಲಿ ಅಂದರೆ 1933 ಅಕ್ಟೋಬರ್ 2ರಂದು ಭಾರತದ ಹೊಸ ಸಂವಿಧಾನದ ರಚನೆಗೆ ಅವರು ಪ್ರಥಮ ಬಾರಿ ಬ್ರಿಟಿಷ್ ಸರ್ಕಾರಕ್ಕೆ ಆಗ್ರಹಿಸಿದರು. 1934 ರಲ್ಲಿ ಭಾರತೀಯ ಕಾಂಗ್ರೆಸ್ ಇವರಿಗೆ ಪೂರ್ಣ ಬೆಂಬಲವನ್ನು ನೀಡಿತು. 1938ರಲ್ಲಿ ಹರಿಪುರ ಕಾಂಗ್ರೆಸ್ ಭಾರತಕ್ಕೆ ಹೊಸ ಸಂವಿಧಾನ ರಚಿಸುವಂತೆ ಆಂಗ್ಲರ ಮೇಲೆ ಒತ್ತಡವನ್ನು ಹಾಕುವ ನಿರ್ಣಯವನ್ನು ಅಂಗೀಕರಿಸಿತು

ಆನಂತರ ಜವಾಹರ್ ಲಾಲ್ ನೆಹರು ಅವರು 1946 ಡಿಸೆಂಬರ್ 13ರಂದು ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯೋದ್ದೇಶಗಳ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯವು ಸ್ವಾಯತ್ತ ಪ್ರಾಂತ್ಯಗಳಿಂದ ಕೂಡಿದ ಒಕ್ಕೂಟ, ಜನತಾ ಪರಮಾಧಿಕಾರ, ಭಾರತದ ವಿವಿಧ ಜನಾಂಗಗಳ ಹಕ್ಕುಗಳ ಭರವಸೆ, ಮನುಕುಲದ ಕಲ್ಯಾಣ, ದೇಶದ ಐಕ್ಯತೆ ಹಾಗೂ ಸಾರ್ವಭೌಮತ್ವ, ಸಂವಿಧಾನ ರಚಿಸುವಾಗ ಮಾಡಬೇಕಾದ ಕಾರ್ಯಗಳು, ಗುರಿಗಳು, ಸಂವಿಧಾನ ಒಳಗೊಳ್ಳಬೇಕಾದ ಆದರ್ಶಗಳು ಹಾಗೂ ಸಂವಿಧಾನ ವ್ಯಾಪ್ತಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸಂವಿಧಾನ ರಚನಾ ಸಮಿತಿಯು ಪ್ರಮುಖ ವಿಚಾರಗಳ ಚರ್ಚೆಗಾಗಿ ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯ ಅಧ್ಯಕ್ಷೀಯ ಸ್ಥಾನವನ್ನು ನೆಹರೂ ಅವರ ವಹಿಸಿಕೊಂಡಿದ್ದರು. ಈ ಸಮಿತಿಯು ಹಲವಾರು ದಿನಗಳ ಕಾಲ ವಿವಿಧ ರೀತಿಯ ಚರ್ಚೆಗಳನ್ನು ನಡೆಸಿತು. ಆಗ ಜವಾಹರಲಾಲ್ ನೆಹರು ಅವರು ಒಕ್ಕೂಟ ರಚನೆ, ಅಲ್ಪಸಂಖ್ಯಾತರ ಹಕ್ಕುಗಳು, ಭಾಷೆ ಹಾಗೂ ಗಡಿ ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಭಾಷಣ ಮಾಡಿದರು. ಇದರ ಜೊತೆಗೆ ಅಂಬೇಡ್ಕರರು ತಾಳುತ್ತಿದ್ದ ನಿಲುವುಗಳಿಗೆ ಬೆಂಬಲವನ್ನು ಸೂಚಿಸುವ ಮೂಲಕ ಸಂವಿಧಾನದ ಬಗ್ಗೆ ಸರ್ವಸಮ್ಮತವಾದ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲು ನೆಹರು ಪ್ರಯತ್ನಿಸಿದರು.

2. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ರ ಪಾತ್ರ: (Contribution of Ambedkar)

ಭಾರತದ ಸಂವಿಧಾನ ರಚನಾ ಸಮಿತಿಯು ಕಾರ್ಯ ನಿರ್ವಹಿಸುತ್ತಿರುವ ನಡುವೆಯೇ ಲಾರ್ಡ್ ಮೌಂಟ್ ಬ್ಯಾಟನ್ನರ ಯೋಜನೆಯಂತೆ ದೇಶವನ್ನು ವಿಭಜಿಸಿ ಭಾರತ ಹಾಗೂ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳನ್ನಾಗಿ ಅಸ್ತಿತ್ವಕ್ಕೆ ತರಲಾಯಿತು. ಆಗ ನೂತನವಾಗಿ ವಿಭಜನೆಗೊಂಡ ಪಾಕಿಸ್ತಾನವು ತನ್ನದೇ ಆದ ಹೊಸ ಸಂವಿಧಾನವನ್ನು ಹೊಂದಲು ಅವಕಾಶ ನೀಡಲಾಯಿತು. ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರ್ಪಡೆಯಾದ ಕಾರಣ ಆ ಪ್ರದೇಶದ ಸ್ಥಾನಗಳು ಸಂವಿಧಾನ ರಚನಾ ಸಮಿತಿಯಲ್ಲಿ ಕಡಿತವಾದವು. ಹೀಗಾಗಿ ರಚನಾ ಸಭೆಯ ಸದಸ್ಯರ ಸಂಖ್ಯೆ 389ರಿಂದ 299 ಕ್ಕೆ ಇಳಿಯಿತು. 299 ಸದಸ್ಯರ ಪೈಕಿ ಬ್ರಿಟಿಷ್ ಪ್ರಾಂತ್ಯಗಳಿಂದ 22೯ ಹಾಗೂ ದೇಶಿಯ ಸಂಸ್ಥಾನಗಳಿಂದ 70 ಸದಸ್ಯರು ರಚನಾ ಸಭೆಯಲ್ಲಿ ಉಳಿದುಕೊಂಡರು. ಅಂಬೇಡ್ಕರರು ಮುಸ್ಲಿಂ ಲೀಗ್ ಅಧಿಕಾರದಲ್ಲಿದ್ದ ಪ್ರದೇಶವಾದ ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾಗಿದ್ದರು. ಅವರು ಆಯ್ಕೆಗೊಂಡ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ ಕಾರಣ ಅಂಬೇಡ್ಕರ್ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ದಲಿತ ಜನಾಂಗ ಭಾರತದಲ್ಲಿಯೇ ಅಧಿಕ ಪ್ರಮಾಣದಲ್ಲಿ ಇರುವಾಗ ಪಾಕಿಸ್ತಾನ ಸಂವಿಧಾನ ರಚನಾ ಸಮಿತಿಯ ಸದಸ್ಯತ್ವವನ್ನು ಪಡೆದುಕೊಂಡು ತಾನೇನು ಸಾಧಿಸಬೇಕಾಗಿದೆ ಎಂಬ ಸ್ಪಷ್ಟ ನಿಲುವು ಅಂಬೇಡ್ಕರರದ್ದಾಗಿತ್ತು. ಬಳಿಕ ಅವರು ಮುಂಬೈ ಪ್ರಾಂತ್ಯದಿಂದ ಆಯ್ಕೆಯಾಗಿ ತಮ್ಮ ಆಳವಾದ ಪಾಂಡಿತ್ಯ, ಸತತ ಅಧ್ಯಯನ, ಹಿತಮಿತವಾದ ಮಾತುಗಾರಿಕೆ, ದೇಶದ ಮುಂದಿನ ದೂರ ದೃಷ್ಟಿ ಮುಂತಾದವುಗಳಿಂದ ಅವರು ದೇಶದ ಅಗ್ರಗಣ್ಯ ನಾಯಕರಾಗಿ ಗುರುತಿಸಿಕೊಂಡರು. 1947 ಆಗಸ್ಟ್ 30 ರಂದು ಡಾ. ಬಿಆರ್ ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಮಿತಿಯಲ್ಲಿ ಅನೇಕರು ಸದಸ್ಯರಾಗಿ ಆಯ್ಕೆಗೊಂಡಿದ್ದರು. ಕರಡು ಸಮಿತಿಯ ಸದಸ್ಯರು ಒಂದಿಲ್ಲ ಒಂದು ಕಾರಣದಿಂದ ಸಭೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರು. ಅಂಬೇಡ್ಕರ್ ಒಬ್ಬರೇ ಹಗಲಿರುಳು ಎನ್ನದೆ ನಿರಂತರವಾಗಿ ಸಂವಿಧಾನ ರಚನೆಯಲ್ಲಿ ತೊಡಗಿ ತಮ್ಮ ಇಡೀ ಜೀವನದ ಸರ್ವಸ್ವವನ್ನು ಧಾರೆ ಎರೆದರು.

 ಸತತ ಅಧ್ಯಯನ, ದೂರದೃಷ್ಟಿ ಹಾಗೂ ದೇಹ ಬಾಧೆಯನ್ನು ಲೆಕ್ಕಿಸದೆ ಕರಡು ಪ್ರತಿಯನ್ನು ರಚಿಸಿ ಸಿದ್ಧಗೊಳಿಸಿದರು. ಹೀಗೆ ಸಿದ್ಧಗೊಂಡ ಸಂವಿಧಾನದ ಕರಡು ಪ್ರತಿಯ ಕುರಿತು ದೀರ್ಘಕಾಲದವರೆಗೆ ಚರ್ಚೆಗಳು ನಡೆದವು. ಜನರಿಂದ ಸ್ವೀಕರಿಸಲಾದ ಅಹವಾಲುಗಳು, ಸಲಹೆ ಹಾಗೂ ಸೂಚನೆಗಳನ್ನು ಪರಿಶೀಲಿಸಿ ಅನೇಕ ತಿದ್ದುಪಡಿಗಳನ್ನು ಮಾಡಲಾಯಿತು. ಸಂವಿಧಾನದ ಅಂಗೀಕಾರದ ವೇಳೆ ಸದಸ್ಯರು ಕೇಳುತ್ತಿದ್ದ ಪ್ರಶ್ನೆಗಳು, ವ್ಯಕ್ತಪಡಿಸಿದ ಸಂಶಯ, ಗೊಂದಲಗಳಿಗೆ ಡಾ. ಅಂಬೇಡ್ಕರ್ ನಿರರ್ಗಳವಾಗಿ ಉತ್ತರಿಸಿ ಸದಸ್ಯರುಗಳನ್ನು ಬೆರಗಾಗುವಂತೆ ಮಾಡಿದರು. ದೇಶದ ಭೌಗೋಳಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸುವುದು ಇದೆಯಲ್ಲಾ ಅದು ಒಂದು ಸವಾಲಿನ ಸಂಗತಿ. ಅಂತಹ ಸವಾಲನ್ನು ಎದುರಿಸಿ ನಿಂತ ಧೀಮಂತ ವ್ಯಕ್ತಿ ಡಾಕ್ಟರ್ ಅಂಬೇಡ್ಕರ್. ಹೀಗಾಗಿ ಅವರನ್ನು ಆಧುನಿಕ ಮನು, ಸಂವಿಧಾನ ಶಿಲ್ಪಿ, ಸಂವಿಧಾನ ಪಿತಾಮಹ, ಸಂವಿಧಾನ ಜನಕ ಹಾಗೂ ದಲಿತ ಸೂರ್ಯ ಎಂಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಭಾರತದ ಸಂವಿಧಾನ ರಚನೆಗೆ ಅಂಬೇಡ್ಕರ್‌ ಕೊಡುಗೆಯ ಬಗ್ಗೆ ಭಾರತದ ಮೊದಲ ರಾಷ್ಟ್ರಪತಿ ಡಾ|| ಬಾಬುರಾಜೇಂದ್ರ ಪ್ರಸಾದರು ಹೀಗೆ ಹೇಳಿದ್ದಾರೆ.

ʻʻ ಸಂವಿಧಾನ ಸಭೆಯ ಅಧ್ಯಕ್ಷನಾಗಿ ಪ್ರತಿದಿನ ಚಟುವಟಿಕೆಗಳನ್ನು ಬಹಳ ಕೂಲಂಕುಷವಾಗಿ ಗಮನಿಸಿದ್ದೇನೆ. ಸಂವಿಧಾನ ಕರಡು ರಚನೆ ಸಮಿತಿ ಮತ್ತು ವಿಶೇಷವಾಗಿ ಅದರ ಅಧ್ಯಕ್ಷರಾದ ಡಾ|| ಬಿ.ಆರ್‌ ಅಂಬೇಡ್ಕರ್‌ ಅವರು ಇಷ್ಟು ಶ್ರದ್ಧೆ ಮತ್ತು ಉತ್ಸುಕತೆಯಿಂದ ಈ ಕಾರ್ಯವನ್ನು ನಡೆಸಿದ್ದಕ್ಕೆ ಎಲ್ಲರಿಗಿಂತ ಹೆಚ್ಚು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಡಾ|| ಬಿ.ಆರ್‌ ಅಂಬೇಡ್ಕರ್‌ರವರನ್ನು ಕರಡು ರಚನೆ ಸಮಿತಿಗೆ ಸೇರಿಸಿದ್ದು ಮತ್ತು ಅದರ ಅಧ್ಯಕ್ಷರನ್ನಾಗಿ ಮಾಡಿದ್ದು ನಾವು ಮಾಡಿದ ಅತ್ಯತ್ತಮ ಕೆಲಸ.

 ಸಂವಿದಾನ ರಚನಾ ಸಮಿತಿಯ ಉಪಾಧ್ಯಕ್ಷರಾಗಿದ್ದ ಶ್ರೀ ಟಿ.ಟಿ. ಕೃಷ್ಣಮಾಚಾರಿ ಹೇಳುತ್ತಾರೆ. ʻʻಸಂವಿಧಾನ ಕರಡು ಸಮಿತಿಗೆ ನೇಮಕವಾದ ೭ ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು. ಆ ಜಾಗಕ್ಕೆ ಬೇರೊಬ್ಬರನ್ನು ನೇಮಕಗೊಳಿಸಲಾಯಿತು. ಆದರೆ ಒಬ್ಬರು ನಿಧನರಾದರು ಅವರ ಜಾಗಕ್ಕೆ ಯಾರನ್ನೂ ತುಂಬಲಿಲ್ಲ. ಮತ್ತೊಬ್ಬರು ಅಮೇರಿಕಾದಲ್ಲಿಯೇ ಇದ್ದರು. ಅವರ ಜಾಗವನ್ನು ಬೇರೆಯವರು ತುಂಬಲಿಲ್ಲ. ಇನ್ನೊಬ್ಬರು ರಾಜ್ಯದ ಆಡಳಿತದ ಕಾರ್ಯದಲ್ಲಿ ನಿರತರಾಗಿದ್ದರು ಮತ್ತೇ ಇಬ್ಬರು ದೆಹಲಿಯಿಂದ ದೂರವೇ ಉಳಿದರು. ಕಾರಣ ಅವರು ಅನಾರೋಗ್ಯದಿಂದ ನರಳುತ್ತಿದ್ದರು. ನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ|| ಅಂಬೇಡ್ಕರ್‌ರವರ ಮೇಲೆ ಬಿತ್ತು. ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲಾ ಯಾವುದೇ ಅನುಮಾನಗಳಿಲ್ಲದೆ ಅವರಿಗೆ ಚಿರಋಣಿಯಾಗಿರಬೇಕು.

3. ವಲ್ಲಭಭಾಯಿ ಪಟೇಲರ ಕೊಡುಗೆ:(Contribution of Vallabhai Patel)

ಸರ್ದಾರ್ ವಲ್ಲಭಬಾಯಿ ಪಟೇಲರು ಸಹ ಭಾರತ ಸಂವಿಧಾನದ ರಚನೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದರು. ಜೊತೆಗೆ ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ನಡುವೆ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ಭಾರತೀಯ ಸಂವಿಧಾನ ರಚನೆಯ ಕಾರ್ಯದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿ ಜನಮನದಲ್ಲಿ ಅಜರಾಮರವಾಗಿ ಉಳಿದರು. ಈ ಕಾರಣದಿಂದ ಪಟೇಲರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ. ರಚನಾ ಸಭೆಯ ಕೊಡುಗೆಯಲ್ಲಿ ಇವರ ಪಾತ್ರವನ್ನು ಈ ಕೆಳಗಿನಂತೆ ನೋಡಬಹುದು.

೧) ಸುಮಾರು 500ಕ್ಕೂ ಹೆಚ್ಚಿನ ದೇಶಿಯ ಸಂಸ್ಥಾನಗಳನ್ನು ಏಕೀಕರಿಸಿ ಭಾರತದಲ್ಲಿ ಸೇರ್ಪಡೆಗೊಳಿಸಿದ ಅವರ ಕಾರ್ಯ ಪ್ರಪಂಚವೇ ಮೆಚ್ಚುವಂತದ್ದಾಗಿತ್ತು.

೨)  ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯ ಕುರಿತು ಸಂವಿಧಾನ ರಚನಕಾರರ ಗಮನ ಸೆಳೆದು ಭಾರತವನ್ನು ಒಂದು ಒಕ್ಕೂಟ ದೇಶವನ್ನಾಗಿ ಮಾಡಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ.

೩)  ಮೂಲಭೂತ ಹಕ್ಕುಗಳ ಉಪಸಮಿತಿಯ ಮುಖ್ಯಸ್ಥರಾಗಿ ಅವರು ಕೈಗೊಂಡ ಕಾರ್ಯಗಳು ಹೆಚ್ಚು ಜನಪ್ರಿಯಗೊಂಡವು.

೪)  ಪ್ರಾಂತೀಯ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಒಕ್ಕೂಟ ವ್ಯವಸ್ಥೆ ರಚನೆಗೆ ತಮ್ಮದೇ ಆದ ಕೊಡುಗೆ ನೀಡಿದರು.

೫)  ಬಹುಸಂಖ್ಯಾತರ ಹಕ್ಕುಗಳೊಂದಿಗೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಮತೋಲನಗೊಳಿಸಲು ಸಂವಿಧಾನ ರಚನಕಾರರನ್ನು ಒತ್ತಾಯಿಸಿ ಯಶಸ್ವಿಯಾದರು.

೬)  ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಯನ್ನು ಪಟೇಲರು ಬೆಂಬಲಿಸಿ ನಾಗರೀಕ ಹಕ್ಕುಗಳು ಜನರಿಗೆ ದೊರೆಯುವಂತೆ ಮಾಡಿದರು.

೭)  ಸಂವಿಧಾನ ರಚನಾ ಸಭೆಯ ವಿವಿಧ ಗುಂಪುಗಳೊಂದಿಗೆ ಸಮನ್ವಯ ಸಾಧಿಸಿದರು.

೮)  ಪಟೇಲರು ಅಖಿಲ ಭಾರತದ ಸೇವೆಗಳ ಸೃಷ್ಟಿ ಹಾಗು ರಾಜ್ಯಗಳ ಆಡಳಿತದ ಕುರಿತು ಚರ್ಚಿಸಿ ಜಾರಿಗೊಳಿಸಿದರು. 

ಉಪಸಂಹಾರ

ಭಾರತದ ಸ್ವಾತಂತ್ರ್ಯ ನಂತರ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಿದ ಮಹತ್ವದ ದಾಖಲೆ ಎಂದರೆ ಭಾರತೀಯ ಸಂವಿಧಾನ. ಇದನ್ನು ರೂಪಿಸಲು ಅನೇಕ ಪ್ರಜ್ಞಾವಂತ ನಾಯಕರು ತಮ್ಮ ಬುದ್ಧಿಮತ್ತೆ, ಅನುಭವ ಮತ್ತು ದೂರದೃಷ್ಟಿಯನ್ನು ಸಮರ್ಪಿಸಿದರು. ಅವರಲ್ಲಿಯೇ ಜವಾಹರಲಾಲ್ ನೆಹರು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ವಲ್ಲಭಭಾಯಿ ಪಟೇಲ ಅವರ ಕೊಡುಗೆಗಳು ಅತ್ಯಂತ ಮಹತ್ವಪೂರ್ಣವಾಗಿವೆ.

ಸಂವಿಧಾನ ಬೇಡಿಕೆಯ ಇತಿಹಾಸ

ಸಂವಿಧಾನ ಬೇಡಿಕೆಯ ಇತಿಹಾಸ

ಸುಮಾರು ೨೦ನೇ ಶತಮಾನದ ದ್ವಿತಿಯಾರ್ಧದಲ್ಲಿ ಭಾರತೀಯರಿಗೆ ಸಂವಿಧಾನದ ಸ್ಪಷ್ಟ ಪರಿಕಲ್ಪನೆಯೇ ಇರಲಿಲ್ಲ. ಇಂತಹ ಸಮಯದಲ್ಲಿಯೇ ಭಾರತೀಯ ರಾಷ್ಟ್ರೀಯತೆಯ ಉದಯ, ಸ್ವದೇಶಿ ಚಳುವಳಿ, ಗಾಂಧಿ ನಾಯಕತ್ವದಲ್ಲಿ ನಡೆದ ಅಸಹಕಾರ ಚಳುವಳಿ, ಖಿಲಾಫತ್‌ ಚಳುವಳಿ ಹಾಗೂ ೧೯೪೨ ಚಲೇಜಾವ್‌ ಚಳುವಳಿಗಳು ಭಾರತೀಯರಲ್ಲಿ ಸಂವಿಧಾನದ ಬಯಕೆಯನ್ನು ಹೆಚ್ಚಿಸುವಂತೆ ಮಾಡಿದವು. ಆರಂಭದಲ್ಲಿ ಸಂವಿಧಾನದ ಕುರಿತು ಭಾರತೀಯರಿಗೆ ಸ್ಪಷ್ಟತೆ ಇರಲಿಲ್ಲ. ಬರಬರುತ್ತಾ ಅದರ ಬಗ್ಗೆ ಕಲ್ಪನೆಗಳು ಮೂಡಲಾರಂಭಿಸಿದವು. ಅಂದಿನಿಂದ ಭಾರತದ ಸಂವಿಧಾನದ ಇತಿಹಾಸ ಪರಿಪೂರ್ಣವಾಗಿ ಸಂವಿಧಾನ ಬೇಡಿಕೆಯ ಇತಿಹಾಸವನ್ನು ಅರಿತುಕೊಳ್ಳುವಂತೆ ಮಾಡಿತು.

  1. ೧೯೧೮ ರ ಡಿಸೆಂಬರ್‌, ೩೩ನೇ ದೆಹಲಿ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪ್ರಥಮ ಬಾರಿಗೆ ಸಂವಿಧಾನ ರಚನಾ ಬೇಡಿಕೆಯ ನಿರ್ಣಯವನ್ನು ಅಂಗೀಕರಿಸಿತು. ಈ ನಿರ್ಣಯವು ಸ್ವಯಂ ನಿರ್ಧಾರವಾಗಿದ್ದು ಬ್ರಿಟಿಷ್‌ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಥಮ ಪ್ರಯತ್ನ ಇದಾಗಿತ್ತು. ಕಾಲಕಳೆದಂತೆ ಅದೊಂದು ನಿರ್ದಿಷ್ಟ ಬೇಡಿಕೆಯಾಗಿ ರೂಪುಗೊಂಡಿತು.
  2. ೧೯೨೨ ಜನವರಿ ೫ ರಂದು ಮಹಾತ್ಮಾ ಗಾಂಧೀಜಿಯವರು ಯಂಗ್‌ ಇಂಡಿಯಾ ಪತ್ರಿಕೆಗೆ ಬರೆಯುತ್ತಾ ಸ್ವಯಂ ಆಳ್ವಿಕೆಯ ಪರಿಕಲ್ಪನೆಯು ಬ್ರಿಟೀಷ್‌ ಸಂಸತ್ತಿನ ಉಚಿತ ಕೊಡುಗೆಯಾಗಿರದೆ ಭಾರತೀಯರು ತಮ್ಮ ಪ್ರತಿನಿಧಿಗಳ ಮೂಲಕ ತಮ್ಮ ಮನದಾಸೆಯನ್ನು ಅಭಿವ್ಯಕ್ತಗೊಳಿಸುವುದಾಗಿದೆ.
  3. 1924 ಫೆಬ್ರವರಿ 8ರಂದು ಸ್ವರಾಜ್ ಪಕ್ಷದ ಸ್ಥಾಪಕರಾದ ಮೋತಿಲಾಲ್ ನೆಹರು ಅವರು ಕೇಂದ್ರ ಶಾಸಕಾಂಗದಲ್ಲಿ ನಿಯಮಾವಳಿ ಒಂದನ್ನು ಮಂಡಿಸಿ ಭಾರತಕ್ಕೆ ಸಂವಿಧಾನ ರಚನೆಯ ಕುರಿತು ಚರ್ಚಿಸಲು ಇಂಗ್ಲೆಂಡಿನಲ್ಲಿ ದುಂಡು ಮೇಜಿನ ಪರಿಷತ್ತನ್ನು ಆಯೋಜಿಸುವಂತೆ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹಾಕಿದರು. ಆದರೆ ಬ್ರಿಟಿಷ್ ಸರ್ಕಾರ ಅದ್ಯಾವುದಕ್ಕೂ ಜಗ್ಗಲಿಲ್ಲ ಬಗ್ಗಲಿಲ್ಲ ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ.
  4. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನವು 1927 ಮೇ 17ರಂದು ಮುಂಬೈಯಲ್ಲಿ ಜರುಗಿತ್ತು. ಈ ಅಧಿವೇಶನದಲ್ಲಿ ಮೋತಿಲಾಲ್ ನೆಹರು ಅವರು ನಿಳುವಳಿಯೊಂದನ್ನು ಮಂಡಿಸಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ಕೇಂದ್ರ ಹಾಗೂ ಪ್ರಾಂತ್ಯ ಶಾಸನ ಸಭೆಯ ಸರ್ವ ಪಕ್ಷಗಳ ಪ್ರತಿನಿಧಿಗಳ ಸಮಿತಿಯ ಮೂಲಕ ಭಾರತದ ಸಂವಿಧಾನದ ರಚನೆಗೆ ಮುಂದಾಗಬೇಕೆಂದು ಆಗ್ರಹಿಸಿದರು. ಪರಿಣಾಮವಾಗಿ 1928 ಮೇ 19 ರಂದು ಜರುಗಿದ ಸರ್ವ ಪಕ್ಷ ಸಮ್ಮೇಳನವು ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಿತು. ನೆಹರು ಅವರು 1928 ಆಗಸ್ಟ್ ೧೦ ರಂದು ವರದಿಯೊಂದನ್ನು ತಯಾರಿಸಿ ಬ್ರಿಟಿಷ್ ಸರ್ಕಾರದ ಮುಂದಿಟ್ಟರು. ಈ ವರದಿಯಲ್ಲಿ ಭಾರತಕ್ಕೆ ಪೂರ್ಣ ಜವಾಬ್ದಾರಿಯುಳ್ಳ ಸರ್ಕಾರ ರಚನೆಯ ಸಂವಿಧಾನವನ್ನು ರಚಿಸಬೇಕೆಂಬ ಬೇಡಿಕೆಯನ್ನು ಇಟ್ಟರು.
  5. 1929ರ ಲಾಹೋರ್ ಅಧಿವೇಶನವು ರಾವಿ ನದಿಯ ದಂಡೆಯ ಮೇಲೆ ನಡೆಯಿತು. ಅಂದು ಜವಹರಲಾಲ್ ನೆಹರು ಅವರು ತ್ರಿವರ್ಣ ಧ್ವಜವನ್ನು ಹಾರಿಸಿ ಸಂಪೂರ್ಣ ಸ್ವರಾಜ್ಯದ ರಚನೆಯೇ ನಮ್ಮ ಗುರಿಯಾಗಿದೆ ಎಂದು ಘೋಷಿಸಿದರು.
  6. 1933 ಅಕ್ಟೋಬರ್ 2ರಂದು ಲಕ್ನೋ ಹೆರಾಲ್ಡ್ ಗೆ ನೆಹರು ಅವರು ಬರೆದ ಲೇಖನದಲ್ಲಿ ಭಾರತದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾರತೀಯ ಪ್ರತಿನಿಧಿಗಳಿಂದ ರಚನೆಗೊಂಡ ಸಂವಿಧಾನದ ಜಾರಿಯಿಂದ ಮಾತ್ರ ರಾಜಕೀಯ ಪರಿಹಾರವಾಗಬಲ್ಲದು ಎಂಬ ಅಭಿಪ್ರಾಯವನ್ನು ಜನತೆಯ ಮುಂದಿಟ್ಟರು.
  7. 1935ರ ಕಾಯ್ದೆಗನುಗುಣವಾಗಿ ರಚನೆಯಾದ ಕೇಂದ್ರ ಹಾಗೂ ಪ್ರಾಂತೀಯ ಸರ್ಕಾರಗಳು 1937ರಲ್ಲಿ ಒಂದು ನಿರ್ಣಯಕ್ಕೆ ಬಂದವು. ಈ ನಿರ್ಣಯದಲ್ಲಿ 1935 ರಲ್ಲಿ ಭಾರತ ಸರ್ಕಾರದ ಕಾಯ್ದೆಯು ಭಾರತೀಯರ ಆಶಯಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು ಅದನ್ನು ರದ್ದುಪಡಿಸಿ ಭಾರತೀಯರಿಂದ ಕೂಡಿದ ಸಂವಿಧಾನ ರಚನಾ ಸಭೆಯನ್ನು ರಚಿಸಬೇಕೆಂದು ಒತ್ತಾಯಿಸಲಾಯಿತು.
  8. 1939ರಲ್ಲಿ ಪ್ರಪಂಚದ ದ್ವಿತೀಯ ಮಹಾಯುದ್ಧ ಆರಂಭವಾಯಿತು. ಆಂಗ್ಲರು ಸೋಲಿನ ಭೀತಿಯನ್ನು ಎದುರಿಸಿದರು. ಆಗ ಅವರು ಭಾರತೀಯರ ಸಹಕಾರವನ್ನು ಬಯಸಿದರು. ಆಗ ಕಾಂಗ್ರೆಸ್ ಕಾರ್ಯಕಾರಿ ಮಂಡಳಿಯು ಭಾರತದ ಸ್ವಾತಂತ್ರ್ಯ ಹಾಗೂ ಸಂವಿಧಾನ ರಚಿಸಿಕೊಳ್ಳುವ ಹಕ್ಕನ್ನು ನೀಡುವುದಾದರೆ ಸಹಕಾರದ ಪರಿಶೀಲನೆಯನ್ನು ಮಾಡಬಹುದೆಂಬ ನಿರ್ಣಯವನ್ನು ಕೈಗೊಂಡಿತು.
  9. 1940 ಆಗಸ್ಟ್ 8ರಂದು ಬ್ರಿಟಿಷ್ ಸರ್ಕಾರ ಭಾರತೀಯರ ಸಂವಿಧಾನದ ರಚನಾ ಸಭೆಯ ಬೇಡಿಕೆಯನ್ನು ಪರೋಕ್ಷವಾಗಿ ಅಂಗೀಕರಿಸಿತು. ಯುದ್ಧ ನಂತರ ಸಂವಿಧಾನ ರಚನಾ ಸಭೆಯ ಸ್ಥಾಪನೆ ಮಾಡಲಾಗುವುದೆಂದು ಬ್ರಿಟಿಷ್ ವೈಸರಾಯ್ ಲಿನ್ಲಿತ್ಲೋ ಘೋಷಿಸಿದರು.
  10. 1942ರ ಮಾರ್ಚ್ ಕ್ರಿಪ್ಸ್ ಆಯೋಗವು ಭಾರತೀಯರ ರಚನಾ ಸಭೆಯ ಬೇಡಿಕೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿತು. ಜೊತೆಗೆ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಿ ಭಾರತದ ಆಂತರಿಕ ಮತ್ತು ಬಾಹ್ಯ ಸ್ವಾತಂತ್ರ್ಯದ ಭರವಸೆಯನ್ನು ನೀಡಿತು. ಆದರೆ ಭಾರತೀಯರು ಕ್ರಿಪ್ಸ್ ಆಯೋಗದ ಭರವಸೆಯನ್ನು ನಂಬಲಿಲ್ಲ. ಗಾಂಧೀಜಿಯವರು ಈ ಆಯೋಗವನ್ನು ಮುಳುಗುತ್ತಿರುವ ಬ್ಯಾಂಕಿನ ಮುಂದಿನ ದಿನಾಂಕವನ್ನು ಹೊಂದಿದ ಚೆಕ್ ಎಂದು ಟೀಕಿಸಿದರು. ಅದೇ ವರ್ಷ ಅವರು ಬ್ರಿಟಿಷರ ವಿರುದ್ಧ ಚಲೇ ಜಾವ್‌ ಚಳುವಳಿಯನ್ನು ಆರಂಭಿಸಿದರು.
  11. 1946ರಲ್ಲಿ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಬಂದಿತು. ಆಯೋಗವು ಭಾರತೀಯರ ಸಂವಿಧಾನ ಬೇಡಿಕೆ ಒಪ್ಪಿಕೊಂಡಿತು. 389 ಸದಸ್ಯರುಳ್ಳ ಭಾರತ ಸಂವಿಧಾನ ರಚನಾ ಸಭೆಯು ಸಂವಿಧಾನ ರಚನೆಗೆ ಕ್ಯಾಬಿನೆಟ್ ಆಯೋಗ ಅಂಗೀಕಾರ ಮುದ್ರೆಯೊತ್ತುವ ಮೂಲಕ ಭಾರತೀಯರ ಬಹುದಿನಗಳ ಕನಸನ್ನು ನನಸಾಗಿಸಿತು.

ಉಪಸಂಹಾರ

ಭಾರತೀಯ ಸಂವಿಧಾನ ಬೇಡಿಕೆಯ ಇತಿಹಾಸವು ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗವಾಗಿದೆ. ರಾಷ್ಟ್ರೀಯ ಚಳುವಳಿಗಳು ಭಾರತೀಯರಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸಿದವು. ಮಹಾತ್ಮಾ ಗಾಂಧೀಜಿ ಮತ್ತು ಜವಹರಲಾಲ್ ನೆಹರು ಅವರ ನಾಯಕತ್ವದಲ್ಲಿ ಈ ಬೇಡಿಕೆ ಸ್ಪಷ್ಟ ರೂಪ ಪಡೆದಿತು. ಅಂತಿಮವಾಗಿ ಸಂವಿಧಾನ ರಚನಾ ಸಭೆಯ ಸ್ಥಾಪನೆಯೊಂದಿಗೆ ಭಾರತೀಯರ ಬಹುದಿನಗಳ ಕನಸು ನನಸಾಯಿತು.

ಭಾರತದ ಸಂವಿಧಾನಾತ್ಮಕ ಇತಿಹಾಸ

ಭಾರತದ ಸಂವಿಧಾನಾತ್ಮಕ ಇತಿಹಾಸ

ಪೀಠಿಕೆ:  ಜಗತ್ತಿನ ಪ್ರತಿಯೊಂದು ದೇಶಗಳೂ ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ. ಈ ಸಂವಿಧಾನವು ತನ್ನದೇ ಆದ ಇತಿಹಾಸವನ್ನು ಸಹ ಹೊಂದಿದೆ. ಹಾಗೆಯೇ ಭಾರತದ ಸಂವಿಧಾನವು ಸಹ ವಿಶ್ವದ ಇತರೆ ಸಂವಿಧಾನಗಳಿಗಿಂತ ವಿಶೇಷವಾದ ಇತಿಹಾಸವನ್ನು ಹೊಂದಿದೆ. ಇದಕ್ಕೆ ಮೂಲ ಕಾರಣ ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆ. ಆರಂಭದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಗೆ ಒಳಪಟ್ಟ ಭಾರತದಲ್ಲಿ ಏಕಪಕ್ಷಿಯ ಆಡಳಿತ, ಕಂಪನಿಯ ಸರ್ವಾಧಿಕಾರ ಹಾಗೂ ಜನ ವಿರೋಧಿ ನೀತಿಗಳು ಜಾರಿಯಲ್ಲಿದ್ದವು. 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತೀಯರಿಗೆ ಸ್ವಾತಂತ್ರ್ಯದ ಕನಸು ಚಿಗುರೊಡೆಯಲು ಬುನಾದಿಯನ್ನು ಹಾಕಿತು. ತದನಂತರ 1885 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗಿ ಕ್ರಮೇಣ ಭಾರತೀಯರು ಸ್ವಾತಂತ್ರ್ಯ ಹೊಂದಬೇಕೆಂಬ ಪ್ರಯತ್ನಗಳು ಗರಿಗೆದರಿದಾಗ ಸಂವಿಧಾನಾತ್ಮಕ ನಿಲುವುಗಳು ಸ್ಪಷ್ಟವಾದವು. ಈ ಸಂವಿಧಾನಾತ್ಮಕ ಇತಿಹಾಸವನ್ನು ಸಂವಿಧಾನಾತ್ಮಕ ಬೆಳವಣಿಗೆಯ ಇತಿಹಾಸ ಮತ್ತು ಸಂವಿಧಾನಾತ್ಮಕ ಬೇಡಿಕೆ ಇತಿಹಾಸ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಸಂವಿಧಾನಾತ್ಮಕ ಬೆಳವಣಿಗೆಯ ಇತಿಹಾಸ: (History and development of constitution)

ಆರಂಭದಲ್ಲಿ ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಆಗಮಿಸಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಕಾಲಕ್ರಮೇಣ ಭಾರತೀಯ ರಾಜಕೀಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಯಿತು. ಕಂಪನಿಯ ನೌಕರರು ಸ್ವಾರ್ಥ, ಪಕ್ಷಪಾತ, ಅಧಿಕಾರ ದುರುಪಯೋಗ ಮತ್ತು ಲಂಚಗುಳಿತನದಲ್ಲಿ ಭಾಗಿಗಳಾಗಿ ಕಂಪನಿಗೆ ಕೆಟ್ಟ ಹೆಸರು ತಂದರು. ಆಗ ಕಂಪನಿಯನ್ನು ನಿಯಂತ್ರಿಸಿ ಆಡಳಿತಾತ್ಮಕ ಚೌಕಟ್ಟನ್ನು ರೂಪಿಸಲು ಬ್ರಿಟಿಷ್ ಸಂಸತ್ತು ಕಾಲ ಕಾಲಕ್ಕೆ ಕೆಲವು ಕಾನೂನುಗಳನ್ನು ಜಾರಿಗೆ ತಂದಿತು. ಈ ಕಾನೂನುಗಳು ಅಂದಿನ ಸಂವಿಧಾನದ ಸ್ವರೂಪವನ್ನು ಪಡೆದಿದ್ದವಲ್ಲದೆ ಪ್ರಸ್ತುತ ಭಾರತದ ಸಂವಿಧಾನಕ್ಕೆ ಆಧಾರಗಳೆನಿಸಿದವು. ಹೀಗೆ ಆಂಗ್ಲ ಸರ್ಕಾರ ಆಗಾಗ ಕಾನೂನುಗಳನ್ನು ಜಾರಿಗೊಳಿಸಿದುದು ಭಾರತದ ಸಂವಿಧಾನಾತ್ಮಕ ಬೆಳವಣಿಗೆಯ ಇತಿಹಾಸವನ್ನು ಸ್ಪಷ್ಟ ಪಡಿಸುತ್ತದೆ. ಅಂತಹ ಕಾನೂನುಗಳು ಈ ಕೆಳಗಿನಂತಿವೆ,

1. ರೆಗ್ಯುಲೇಟಿಂಗ್ ಆಕ್ಟ್: 1773: ಇದು ಭಾರತದಲ್ಲಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ನಿಯಂತ್ರಣದಲ್ಲಿ ಇಡಲು ಬ್ರಿಟಿಷ್ ಸಂಸತ್ತು ರಚಿಸಿದ ಮೊದಲ ಕಾಯಿದೆಯಾಗಿತ್ತು. ರೆಗ್ಯುಲೇಟಿಂಗ್ ಆಕ್ಟ್ ಪ್ರಕಾರ ಬಂಗಾಳದ ಗವರ್ನರ್‌ನನ್ನು ಭಾರತದ ಗವರ್ನರ್ ಜನರಲ್ ಆಗಿ ನೇಮಕ ಮಾಡಲಾಯಿತು. ಮುಂಬೈ ಮತ್ತು ಮದ್ರಾಸ್ ಪ್ರಾಂತ್ಯಗಳು ಈತನ ಅಧೀನಕ್ಕೊಳಪಟ್ಟವು. ಗವರ್ನರ್ ಜನರಲ್ ನ ಸಲಹಾ ಸಮಿತಿಗೆ ನಾಲ್ಕು ಜನ ಸದಸ್ಯರುಗಳನ್ನು ನೇಮಕ ಮಾಡಲಾಯಿತು. ಮೂರು ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಕಲ್ಕತ್ತಾದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ೧೭೭೪ ರಲ್ಲಿ ಸ್ಥಾಪಿಸಲಾಯಿತು. ಕಂಪನಿಯ ನೌಕರರು ಲಂಚ ಪಡೆಯದಂತೆ ಮತ್ತು ಖಾಸಗಿ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದಂತೆ ನಿರ್ಬಂಧ ಹೇರಲಾಯಿತು. ಇನ್ನು ಮುಂದೆ ಕಂಪನಿಯ ಆಡಳಿತ ಮಂಡಳಿಯು ಭಾರತದ ಕಂದಾಯ, ನಾಗರಿಕ ಹಾಗೂ ಸೈನಿಕ ಆಡಳಿತದ ಕುರಿತಂತೆ ಕಾಲಕಾಲಕ್ಕೆ ಬ್ರಿಟಿಷ್ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಯಿತು.

2.  ಪಿಟ್ಸ್ ಇಂಡಿಯಾ ಕಾಯ್ದೆ 1784: ಬ್ರಿಟಿಷರು ಜಾರಿಗೆ ತಂದ ಭಾರತದಲ್ಲಿನ ಎರಡನೇ ಅತಿ ಮುಖ್ಯ ಕಾಯಿದೆಯಾಗಿದೆ. ಪಿಟ್ಸ್ ಇಂಡಿಯಾ ಕಾಯ್ದೆಯ ಪ್ರಕಾರ ಭಾರತದ ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರವನ್ನು ಬೋರ್ಡ್ ಆಫ್ ಕಂಟ್ರೋಲ್ ಹಾಗೂ ಭಾರತದ ಆಡಳಿತದ ವ್ಯವಹಾರಗಳನ್ನು ಕೋರ್ಟ್ ಆಫ್ ಡೈರೆಕ್ಟರ್ಗಳಿಗೆ ವಹಿಸಿಕೊಡಲಾಯಿತು. ಗೌರ್ನರ್ ಜನರಲ್‌ನ ಸಲಹಾ ಸಮಿತಿಯ ಸದಸ್ಯರ ಸಂಖ್ಯೆಯನ್ನು ನಾಲ್ಕರಿಂದ ಮೂರಕ್ಕೆ ಇಳಿಸಲಾಯಿತು. ಈ ಕಾಯ್ದೆಯು ಮದ್ರಾಸ್‌ ಹಾಗೂ ಮುಂಬೈ ಪ್ರಾಂತ್ಯಗಳ ಗವರ್ನರ್ ಗಳನ್ನು ಭಾರತದ ಗವರ್ನರ್ ಜನರಲ್ ನ ಹತೋಟಿಗೆ ಒಳಪಡಿಸಲಾಯಿತು. ಭಾರತದ ಗವರ್ನರ್ ಜನರಲ್ ಇಂಗ್ಲೆಂಡ್ ಪಾರ್ಲಿಮೆಂಟಿನ ಅನುಮತಿಯನ್ನು ಪಡೆಯದ ಹೊರತು ಯುದ್ಧ ಹೂಡುವುದು ಮತ್ತು ಶಾಂತಿ ಒಪ್ಪಂದ ಮಾಡಿಕೊಳ್ಳುವುದನ್ನು ನಿರ್ಬಂಧಿಸಿತು. ಕಂಪನಿಯ ನೌಕರರ ಅಕ್ರಮವನ್ನು ತಡೆಯಲು ವಿಶೇಷವಾದ ನ್ಯಾಯಾಲಯವನ್ನು ಸ್ಥಾಪಿಸಿತು. ಗವರ್ನರ್ ಜನರಲ್ ಬೋರ್ಡ್ ಆಫ್ ಕಂಟ್ರೋಲ್ ಹಾಗೂ ಕೋರ್ಟ್ ಆಫ್ ಡೈರೆಕ್ಟರ್ ಗಳ ಆದೇಶವನ್ನು ಪಾಲಿಸಬೇಕಿತ್ತು.

3.  ಚಾರ್ಟರ್ ಕಾಯ್ದೆಗಳು: 1773ರ ರೆಗ್ಯೂಲೇಟಿಂಗ್ ಕಾಯ್ದೆಯನ್ನು ಪುನರ್ ನವೀಕರಿಸಲು 20 ವರ್ಷಗಳಿಗೊಮ್ಮೆ ಚಾರ್ಟರ್ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು. ಬ್ರಿಟಿಷ್ ಪಾರ್ಲಿಮೆಂಟಿನಿಂದ ಅನುಮೋದನೆ ಪಡೆದ ನಂತರ ಚಾರ್ಟರ್ ಕಾಯ್ದೆಗಳನ್ನು 1793, ೧813, 1833 ಹಾಗೂ ೧೮೫೩ ರಲ್ಲಿ ಕಾರ್ಯರೂಪಕ್ಕೆ ತರಲಾಯಿತು.

  1. ಚಾರ್ಟರ್ಕಾಯಿದೆ 1793: 1793ರಲ್ಲಿ ಜಾರಿಗೆ ಬಂದ ಚಾರ್ಟರ್ ಕಾಯ್ದೆಯ ಪ್ರಕಾರ ಕಂಪನಿಯ ವ್ಯಾಪಾರದ ಏಕಸ್ವಾಮ್ಯ ಮತ್ತು ವಿಶೇಷ ಸವಲತ್ತುಗಳನ್ನು ಮುಂದಿನ 20 ವರ್ಷಗಳವರೆಗೆ ಅಂದರೆ 1813ರ ವರೆಗೆ ನವೀಕರಿಸಲಾಯಿತು.  ಕಂಪನಿಗೆ ಭಾರತದ ಪ್ರದೇಶಗಳಿಂದ ಬರುವ ಕಂದಾಯದಿಂದ ಕಂಪನಿಯ ಸಿಬ್ಬಂದಿಗಳಿಗೆ ವೇತನ ನೀಡುವಂತೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಯಿತು.
  2. ಚಾರ್ಟರ್ ಕಾಯ್ದೆ 1813: 1813ರ ಚಾರ್ಟರ್ ಕಾಯ್ದೆಯು ಕಂಪನಿಯ ವ್ಯಾಪಾರದ ಏಕಸ್ವಾಮ್ಯವನ್ನು ರದ್ದುಪಡಿಸಿ ಕಂಪನಿಯ ಪ್ರದೇಶಗಳನ್ನು ಬ್ರಿಟಿಷ್ ಇಂಡಿಯಾ ಪ್ರದೇಶಗಳೆಂದು ಹೆಸರಿಸಲಾಯಿತು. ಜೊತೆಗೆ ಇಂಗ್ಲೆಂಡಿನ ಪ್ರಜೆಗಳು ಭಾರತದಲ್ಲಿ ಮುಕ್ತವಾಗಿ ವ್ಯಾಪಾರ ಮಾಡಲು ಅನುಮತಿ ನೀಡಲಾಯಿತು.  ಈ ಕಾಯ್ದೆಯ ಪ್ರಕಾರ ಭಾರತದಲ್ಲಿ ಶಿಕ್ಷಣ ಅಭಿವೃದ್ಧಿಗಾಗಿ ಪ್ರತಿ ವರ್ಷ ಒಂದು ಲಕ್ಷ ರೂಗಳನ್ನು ವಿನಿಯೋಗಿಸಲು ಅವಕಾಶ ಕಲ್ಪಿಸಲಾಯಿತು.
  3. ಚಾರ್ಟರ್ ಕಾಯ್ದೆ 1833: 1833ರ ಕಾಯಿದೆಯು ಉದಾರವಾದಿ ಸಿದ್ಧಾಂತವನ್ನು ಜಾರಿಗೊಳಿಸಿತು. ಈ ಕಾಯ್ದೆಯ ಪ್ರಕಾರ ಈಗಾಗಲೇ ಇದ್ದ ಮೂರು ಜನರಿಂದ ಕೂಡಿದ ಗವರ್ನರ್ ಜನರಲ್ ಕೌನ್ಸಿಲ್ ಗೆ ನಾಲ್ಕನೆಯದಾಗಿ ಕಾನೂನು ಸದಸ್ಯನನ್ನು ನೇಮಕ ಮಾಡಲಾಯಿತು. ಭಾರತೀಯ ಕಾನೂನುಗಳ ಕ್ರೋಢೀಕರಣಕ್ಕಾಗಿ ಟಿ.ಬಿ ಮೆಕಾಲೆಯವರ ಅಧ್ಯಕ್ಷತೆಯಲ್ಲಿ ಒಂದು ಕಾನೂನು ಆಯೋಗವನ್ನು ರಚಿಸಲಾಯಿತು. ಕಂಪನಿಯ ಆಡಳಿತಾತ್ಮಕವಾದ ವಾಣಿಜ್ಯ ಸೌಲಭ್ಯಗಳನ್ನು ರದ್ದುಪಡಿಸಿ ಕೇವಲ ಆಡಳಿತದ ಕಡೆಗೆ ಗಮನಹರಿಸುವಂತೆ ಮಾಡಲಾಯಿತು.
  4. ಚಾರ್ಟರ್ ಕಾಯ್ದೆ 1853: ಈ ಕಾಯ್ದೆಯ ಪ್ರಕಾರ ಗವರ್ನರ್ ಜನರಲ್ ನ ಶಾಸನೀಯ ಮತ್ತು ಕಾರ್ಯಾಂಗೀಯ ಅಧಿಕಾರಿಗಳು ಬೇರ್ಪಟ್ಟವು. ಜೊತೆಗೆ ಆರು ಜನ ಸದಸ್ಯರನ್ನು ಒಳಗೊಂಡ ಕೇಂದ್ರ ಶಾಸನ ಪರಿಷತ್ತನ್ನು ರಚಿಸಲಾಯಿತು. ಭಾರತದಲ್ಲಿ ಪ್ರಥಮ ಬಾರಿಗೆ ನಾಗರಿಕ ಸೇವಾ ಹುದ್ದೆಗಳ ನೇಮಕಕ್ಕಾಗಿ ಭಾರತೀಯರ ಮುಕ್ತ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಯಿತು.

4. ಭಾರತ ಸರ್ಕಾರ ಕಾಯ್ದೆ 1858 : 1857ರ ಭಾರತದ ಸಿಪಾಯಿ ದಂಗೆಯ ನಂತರ ಜಾರಿಗೊಂಡ ಮೊದಲ ಕಾಯಿದೆಯಾಗಿದೆ. ಈ ಕಾಯ್ದೆಯು ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಕೊನೆಗೊಳಿಸಿತು. ನಂತರ ಕಂಪನಿಯ ಆಡಳಿತವು ನೇರವಾಗಿ ಬ್ರಿಟನ್ ರಾಣಿಯ ಕೈಗೆ ಹಸ್ತಾಂತರಗೊಂಡಿತು. ರಾಣಿಯ ಪರವಾಗಿ ಭಾರತದ ಆಡಳಿತವನ್ನು ಭಾರತದ ವ್ಯವಹಾರಗಳ ರಾಜ್ಯ ಕಾರ್ಯದರ್ಶಿಯು ನೋಡಿಕೊಳ್ಳಲು ಅನುಮತಿಸಲಾಯಿತು. ಭಾರತದ ಗವರ್ನರ್ ಜನರಲ್ ಈಗ ಭಾರತದ ವೈಸರಾಯ್ ಆದನು. ಬೋರ್ಡ್ ಆಫ್ ಕಂಟ್ರೋಲ್ ಹಾಗೂ ಕೋರ್ಟ್ ಆಫ್ ಡೈರೆಕ್ಟರ್ ಗಳು ರದ್ದಾದವು. ಭಾರತದ ವ್ಯವಹಾರಗಳ ರಾಜ್ಯ ಕಾರ್ಯದರ್ಶಿಗೆ ಸಲಹೆ ನೀಡಲು ಹದಿನೈದು ಸದಸ್ಯರುಗಳನ್ನೊಳಗೊಂಡ ಭಾರತೀಯ ಪರಿಷತ್ತು ನೇಮಕವಾಯಿತು. ಭಾರತದಲ್ಲಿ ಜಾರಿಯಾಗುವ ಕಾಯಿದೆಗಳನ್ನು ಈ ಪರಿಷತ್ತು ವಿಮರ್ಶೆ ಮಾಡುವ ಅಧಿಕಾರವನ್ನು ಹೊಂದಿತ್ತು.

5. ಭಾರತ ಸರ್ಕಾರ ಕಾಯ್ದೆ 1861:  ವೈಸರಾಯ ಕಾರ್ಯಕಾರಿ ಮಂಡಳಿ ಹಾಗೂ ಶಾಸನೀಯ ಮಂಡಳಿಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯವನ್ನು ನೀಡಲಾಯಿತು. ಜೊತೆಗೆ ಕೇಂದ್ರ ಹಾಗೂ ಪ್ರಾಂತ್ಯಗಳಲ್ಲಿ ಶಾಸನಸಭೆಗಳನ್ನು ಸ್ಥಾಪಿಸಲು ಅನುಮತಿ ನೀಡಲಾಯಿತು.  ಪ್ರಥಮ ಬಾರಿಗೆ ಮುಂಬೈ ಹಾಗೂ ಮದ್ರಾಸ್ ಪ್ರಾಂತ್ಯಗಳಲ್ಲಿ ಶಾಸನಸಭೆಗಳನ್ನು ಸ್ಥಾಪಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಚಾಲನೆ ನೀಡಲಾಯಿತು.

6. ಭಾರತದ ಕಾಯ್ದೆ 1892:  ಈ ಕಾಯ್ದೆಯು ಪರೋಕ್ಷ ಚುನಾವಣೆಗೆ ಅವಕಾಶ ಕಲ್ಪಿಸಿತು. ಮುಂದುವರೆದು ಶಾಸನಸಭೆಗಳ ಗಾತ್ರವನ್ನು ಹೆಚ್ಚಿಸಿತ್ತು. ಮುಂಗಡಪತ್ರದ ಕುರಿತು ಚರ್ಚಿಸುವ ಮತ್ತು ಕಾರ್ಯಕಾರಿ ನಡುವಳಿಕೆಗಳನ್ನು ಪ್ರಶ್ನಿಸುವ ಅಧಿಕಾರಗಳನ್ನು ಶಾಸನ ಸಭೆಗೆ ನೀಡಲಾಯಿತು.

7. ಭಾರತೀಯ ಸರ್ಕಾರದ ಕಾಯಿದೆ 1909:  ಈ ಕಾಯ್ದೆಯನ್ನು ಮಾರ್ಲೆ-ಮಿಂಟೋ ಸುಧಾರಣೆ ಎಂದು ಕರೆಯುತ್ತಾರೆ. ಇದು ಶಾಸನಸಭೆಗಳಿಗೆ ಪ್ರತ್ಯೇಕ ಚುನಾವಣೆಯನ್ನು ಜಾರಿಗೊಳಿಸಿ ಜನತಾ ಪ್ರಾತಿನಿಧ್ಯಕ್ಕೆ ಸೀಮಿತವಾದ ಅವಕಾಶ ಕಲ್ಪಿಸಿತು. ಕೇಂದ್ರ ಶಾಸನಸಭೆಯನ್ನು ಇಂಪೀರಿಯಲ್ ಕೌನ್ಸಿಲ್ ಎಂದು ಬದಲಾಯಿಸಿತು. ಈ ಕಾಯ್ದೆಯಿಂದ ಕೇಂದ್ರ ಶಾಸಕಾಂಗದ ಸದಸ್ಯತ್ವವನ್ನು 16 ರಿಂದ 60 ಕ್ಕೆ ಏರಿಸಲಾಯಿತು. ಇದು ಮುಸಲ್ಮಾನರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಮೀಸಲಾಗಿರಿಸಿತು. ಪರೋಕ್ಷವಾಗಿ ಈ ಕಾಯ್ದೆಯು ಕೋಮುವಾರು ಚುನಾವಣಾ ಪದ್ಧತಿಯನ್ನು ಜಾರಿಗೆ ತಂದಿತು.

8.  ಮಾಂಟೆಗ್ಯೂ-ಚೇಮ್ಸ್ ಫರ್ಡ್ ಕಾಯ್ದೆ 1919:  1909ರ ಕಾಯ್ದೆಯು ಭಾರತೀಯರ ಆಶೋತ್ತರಗಳನ್ನು ಈಡೇರಿಸಲು ವಿಫಲವಾದ ಕಾರಣ ಭಾರತೀಯರು ಬಾಲಗಂಗಾಧರ ತಿಲಕರ ಅಧ್ಯಕ್ಷತೆಯಲ್ಲಿ ಹೋಂ ರೂಲ್ ಚಳುವಳಿಯನ್ನು ಆರಂಭಿಸಿದರು. ಈ ಮಧ್ಯ ಸೂರತ್ ಅದಿವೇಶನದಲ್ಲಿ ಇಬ್ಬಾಗವಾಗಿದ್ದ ಮಂದಗಾಮಿಗಳು ಹಾಗೂ ತೀವ್ರಗಾಮಿಗಳು 1916ರಲ್ಲಿ ಮತ್ತೆ ಒಂದಾಗಿ ಸ್ವರಾಜ್ಯ ಹೋರಾಟವನ್ನು ಮುಂದುವರಿಸಿದರು. ಇವರೊಂದಿಗೆ ಮುಸ್ಲಿಂ ಲೀಗ್ ಸಹ ಕೈಜೋಡಿಸಿತು. ಆಗ ಭಾರತೀಯರನ್ನು ಸಮಾಧಾನಗೊಳಿಸಲು ಭಾರತದ ವ್ಯವಹಾರಗಳ ಕಾರ್ಯದರ್ಶಿ ಮಾಂಟೆಗ್ಯೂ ಹಾಗೂ ಭಾರತದ ಗವರ್ನರ್ ಜನರಲ್ ಜೇಮ್ಸ್ ಫರ್ಡ್ ಭಾರತೀಯರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ನೀಡುವ ವರದಿಯೊಂದನ್ನು ತಯಾರಿಸಿದರು. ಈ ವರದಿಯನ್ನೇ 1919ರ ಭಾರತ ಸರ್ಕಾರದ ಕಾಯ್ದೆ ಎಂದು ಕರೆಯುತ್ತಾರೆ. ಈ ಕಾಯ್ದೆಯ ಪ್ರಕಾರ ಆಡಳಿತ ವಿಷಯಗಳನ್ನು ಕೇಂದ್ರ ಹಾಗೂ ಪ್ರಾಂತ್ಯ ವಿಷಯಗಳು ಎಂದು ವಿಭಾಗಿಸಿ ಮುಂದುವರೆದು ಪ್ರಾಂತ್ಯ ವಿಷಯಗಳನ್ನು ಮೀಸಲು ಹಾಗೂ ವರ್ಗಾಯಿಸಿದ ವಿಷಯಗಳು ಎಂಬುದಾಗಿ ವಿಂಗಡಿಸಲಾಯಿತು.

9. ಭಾರತ ಸರ್ಕಾರ ಕಾಯ್ದೆ 1935: 1919ರ ಮಾಂಟೆಗೋ ಚೇಮ್ಸ್ ಫರ್ಡ್ ಸುಧಾರಣೆಯು ಭಾರತೀಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಶಾಸನಸಭೆಯಲ್ಲಿ ಈ ಕಾಯ್ದೆಯ ಕುರಿತು ವ್ಯಾಪಕವಾಗಿ ಅಸಮಾಧಾನವನ್ನು ವ್ಯಕ್ತಪಡಿಸಲಾಯಿತು. ಭಾರತದಲ್ಲಿ ಎಲ್ಲಾ ಪಕ್ಷಗಳು ಮೋತಿಲಾಲ್ ನೆಹರು ನೇತೃತ್ವದಲ್ಲಿ ಸಮಿತಿ ಒಂದನ್ನು ರಚಿಸಿದವು. ಈ ನೆಹರು ಸಮಿತಿ ತನ್ನ ವರದಿಯಲ್ಲಿ ಸಂಯುಕ್ತ ಪದ್ಧತಿಯನ್ನು ಮತ್ತು ಪೂರ್ಣ ಸ್ವರಾಜ್ಯವನ್ನು ಶಿಫಾರಸ್ಸು ಮಾಡಿತು. ನೆಹರು ವರದಿಯ ಬೆನ್ನಲ್ಲೇ ಲಂಡನ್ ನಲ್ಲಿ ಮೂರು ದುಂಡು ಮೇಜಿನ ಪರಿಷತ್ತುಗಳು ನಡೆದವು. ಕಾಂಗ್ರೆಸ್ ಈ ಪರಿಷತ್ತನ್ನು ಬಹಿಷ್ಕರಿಸಿದರೆ, ಡಾ. ಬಿಆರ್ ಅಂಬೇಡ್ಕರ್ ಈ ಸಮ್ಮೇಳನದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಭಾರತದ ಗುರಿ ಎಂದು ಘೋಷಿಸಿದರು. ಆಗ ಭಾರತದ ಸುಧಾರಣೆಗಳ ಕುರಿತು ಬ್ರಿಟಿಷ್ ಸರ್ಕಾರ 1933ರಲ್ಲಿ ಒಂದು ಶ್ವೇತಪತ್ರವನ್ನು ಹೊರಡಿಸಿ ಅಂತಿಮವಾಗಿ ಪಾರ್ಲಿಮೆಂಟಿನಲ್ಲಿ ಮಸೂದೆ ಅಂಗೀಕರಿಸಲ್ಪಟ್ಟಿತ್ತು. ಇದು ಆಗಸ್ಟ್ 2 1935 ರಂದು ಬ್ರಿಟಿಷ್ ರಾಣಿಯ ಒಪ್ಪಿಗೆ ಪಡೆದು ಕಾಯ್ದೆಯಾಯಿತು.

ಈ ಕಾಯ್ದೆಯ ಪ್ರಕಾರ ಬ್ರಿಟಿಷರಿಂದ ನೇರವಾಗಿ ಆಳಲ್ಪಡುತ್ತಿದ್ದ ಬ್ರಿಟಿಷ್ ಪ್ರಾಂತ್ಯಗಳು ಹಾಗೂ ದೇಶಿಯ ರಾಜ ಮಹಾರಾಜರಿಂದ ಆಳಲ್ಪಡುತ್ತಿದ್ದ ದೇಶಿಯ ಸಂಸ್ಥಾನಗಳು ಎಂಬ ಎರಡು ಬಗೆಯ ಆಡಳಿತಾತ್ಮಕ ಘಟಕಗಳುಳ್ಳ ಸಂಯುಕ್ತ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸಿತು.

10. ಭಾರತದ ಸ್ವತಂತ್ರ ಕಾಯ್ದೆ 1947:  1935 ರ ಭಾರತ ಸರ್ಕಾರದ ಕಾಯ್ದೆಯೂ ಸಹ ಭಾರತೀಯರ ಅಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿತು. ಈ ನಡುವೆ 1939ರಲ್ಲಿ ದ್ವಿತೀಯ ಪ್ರಪಂಚದ ಮಹಾಯುದ್ಧ ನಡೆಯಿತು. ಆಂಗ್ಲರು ಭಾರತೀಯರಿಂದ ಯುದ್ಧದಲ್ಲಿ ಸಹಾಯಬೇಡಿ 1940ರಲ್ಲಿ ಆಗಸ್ಟ್ ಕೊಡುಗೆ ಮತ್ತು 1942 ರಲ್ಲಿ ಕ್ರಿಪ್ಸ್ ಆಯೋಗದ ಮೂಲಕ ಭಾರತೀಯರನ್ನು ಸಮಾಧಾನಗೊಳಿಸಿ ತನ್ನತ್ತ ಸೆಳೆಯಲು ಪ್ರಯತ್ನಿಸಿತು. ಈ ನಡುವೆ ಮಹಾತ್ಮ ಗಾಂಧೀಜಿಯವರು 1942 ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಯನ್ನು ಆರಂಭಿಸಿದರು. 1945ರಲ್ಲಿ ಯುದ್ಧ ಮುಕ್ತಾಯವಾಯಿತು. 1946ರಲ್ಲಿ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಆಗಮಿಸಿ ಮಧ್ಯಂತರ ಸರ್ಕಾರವನ್ನು ರಚಿಸುವುದು ಮತ್ತು ದೇಶ ವಿಭಜನೆಯ ನಿರಾಕರಣೆಯ ಸಲಹೆಗಳನ್ನು ಪ್ರಸ್ತಾಪಿಸಿತು. ದೇಶ ವಿಭಜನೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಹೋಯಿತು. ಅಂತಿಮವಾಗಿ ಲಾರ್ಡ್ ಮೌಂಟ್ ಬ್ಯಾಟನ್ ರ ಯೋಜನೆಯಂತೆ ದೇಶವನ್ನು ವಿಭಜಿಸಲಾಯಿತು. ಮತ್ತು ಬ್ರಿಟಿಷ್ ಸರ್ಕಾರ ಸ್ವತಂತ್ರ ಕಾಯ್ದೆಯನ್ನು 1947ರಲ್ಲಿ ಅಂಗೀಕರಿಸಿತು. ಈ ಕಾಯ್ದೆಯ ಮುಖ್ಯ ಅಂಶಗಳೆಂದರೆ.

೧) 1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಮತ್ತು ಭಾರತವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಡೊಮಿನಿಯನ್ ರಾಷ್ಟ್ರಗಳಾಗಿ ವಿಭಜಿಸುವುದು.

೨)  1947 ಆಗಸ್ಟ್ 15ಕ್ಕೆ ಭಾರತ ಮೇಲಿನ ಬ್ರಿಟಿಷ್ ಸಾರ್ವಭೌಮತ್ವ ಅಂತ್ಯಗೊಳ್ಳುವುದು ನಂತರ ಬ್ರಿಟಿಷ್ ಸರ್ಕಾರಕ್ಕೆ ಸ್ವತಂತ್ರ ರಾಷ್ಟ್ರಗಳ ಮೇಲೆ ಯಾವುದೇ ಆಡಳಿತಾತ್ಮಕವಾದ ಅಧಿಕಾರ ಇರುವುದಿಲ್ಲ.

೩)  ದೇಶಿಯ ಸಂಸ್ಥಾನಗಳು ಭಾರತಕ್ಕಾದರೂ ಸೇರಬಹುದು ಇಲ್ಲವೇ ಪಾಕಿಸ್ತಾನಕ್ಕಾದರೂ ಸೇರಬಹುದು.

೪)  ಪೂರ್ವ ಬಂಗಾಳ, ಪಶ್ಚಿಮ ಪಂಜಾಬ್, ಸಿಂಧ್ ಮತ್ತು ಬಲೂಚಿಸ್ಥಾನ್ ಪ್ರಾಂತ್ಯಗಳ ಹಾಗೂ ಅಸ್ಸಾಂನ ಸಿಲ್ಹೆಟ್ ಪ್ರಾಂತ್ಯಗಳು ಪಾಕಿಸ್ತಾನಕ್ಕೆ ಸೇರುವುದು. ಉಳಿದಂತೆ ಎಲ್ಲಾ ಪ್ರದೇಶಗಳು ಭಾರತದಲ್ಲಿಯೇ ಉಳಿಯುವುದು.

೫)  ಎರಡು ದೇಶಗಳ ನಡುವೆ ಉದ್ಭವವಾಗುವ ವಿವಾದಗಳನ್ನು ಬಗೆಹರಿಸಲು ಒಂದು ನ್ಯಾಯಮಂಡಳಿಯನ್ನು ರಚಿಸುವುದು.

೬)  ಭಾರತದ ಚಕ್ರವರ್ತಿ ಎಂಬ ಬ್ರಿಟನ್ ಚಕ್ರವರ್ತಿಯ ಬಿರುದು ರದ್ದುಪಡಿಸಲಾಯಿತು.

೭)  ಭಾರತದ ರಾಜ್ಯ ಕಾರ್ಯದರ್ಶಿಯ ಹುದ್ದೆ ಹಾಗೂ ಇಂಡಿಯನ್ ಆಫೀಸ್ ರದ್ದಾಯಿತು.

೮)  ಬ್ರಿಟನ್ ಚಕ್ರವರ್ತಿಯಿಂದ ಆದ ನೇಮಕಗಳು ಹಾಗೂ ರಾಜರೊಂದಿಗೆ ಮಾಡಿಕೊಂಡ ಬ್ರಿಟನ್ ಒಪ್ಪಂದಗಳು 1947 ಆಗಸ್ಟ್ 15ಕ್ಕೆ ಅಂತ್ಯಗೊಳ್ಳುವುದು.

ಉಪಸಂಹಾರ

ಬ್ರಿಟಿಷ್ ಆಡಳಿತದಲ್ಲಿ ಜಾರಿಗೊಂಡ ವಿವಿಧ ಕಾಯ್ದೆಗಳು ಭಾರತದ ಆಡಳಿತ ವ್ಯವಸ್ಥೆಯನ್ನು ಕ್ರಮೇಣ ರೂಪಿಸಿದವು. ಈ ಕಾಯ್ದೆಗಳು ಜನಪ್ರಾತಿನಿಧ್ಯ, ಅಧಿಕಾರ ವಿಕೇಂದ್ರೀಕರಣ ಮತ್ತು ಸಂಯುಕ್ತ ಪದ್ಧತಿಯ ಕಲ್ಪನೆಯನ್ನು ಪರಿಚಯಿಸಿದವು. Government of India Act 1935 ಭಾರತದ ಸಂವಿಧಾನಕ್ಕೆ ನೇರವಾದ ಆಧಾರವಾಗಿತ್ತು. ಈ ಇತಿಹಾಸವನ್ನು ಅರಿಯುವುದು ಭಾರತದ ಸಂವಿಧಾನಾತ್ಮಕ ಮೌಲ್ಯಗಳನ್ನು ತಿಳಿಯಲು ಅತ್ಯಂತ ಅಗತ್ಯವಾಗಿದೆ.

ಸಂವಿಧಾನದ ವಿಧಗಳು

ಸಂವಿಧಾನದ ವಿಧಗಳು

ಜಗತ್ತಿನ ಪ್ರತಿಯೊಂದು ದೇಶಗಳು ತಮ್ಮ ಸಾಂಸ್ಕೃತಿಕ, ಭೌಗೋಳಿಕ, ರಾಜಕೀಯ ಹಾಗೂ ಧಾರ್ಮಿಕ ನೆಲೆಯಲ್ಲಿ ಸಂವಿಧಾನವನ್ನು ರಚಿಸಿ ಅಳವಡಿಸಿಕೊಂಡಿವೆ. ಈ ಕಾರಣದಿಂದ ಪ್ರಪಂಚದಾದ್ಯಂತ ಏಕರೂಪದ ಸಂವಿಧಾನವನ್ನು ನಾವು ನೋಡಲು ಸಾಧ್ಯವಾಗುವುದಿಲ್ಲ. ಹೀಗೆ ವೈವಿಧ್ಯಮಯವಾದ ಸಂವಿಧಾನವನ್ನು ಆಧರಿಸಿ ರಾಜಕೀಯ ಚಿಂತಕರು ನಾಲ್ಕು ರೀತಿಯ ಸಂವಿಧಾನವನ್ನು ಗುರುತಿಸಿದ್ದಾರೆ ಅವುಗಳು ಈ ಕೆಳಕಂಡಂತಿವೆ.

A. ಲಿಖಿತ ಸಂವಿಧಾನ: ಸಂವಿಧಾನವು ಬರಹ ರೂಪದಲ್ಲಿರುವ ನಿಯಮಾವಳಿಗಳನ್ನು ಹೊಂದಿದ್ದರೆ ಅದನ್ನು ಲಿಖಿತ ಸಂವಿಧಾನ ಎಂದು ಕರೆಯುಲಾಗಿದೆ ಭಾರತವು ಲಿಖಿತ ಸಂವಿಧಾನವನ್ನು ಹೊಂದಿದ ಬೃಹತ್ ಪ್ರಜಾಪ್ರಭುತ್ವ ದೇಶವಾಗಿದೆ ಅಮೆರಿಕ ಸಂವಿಧಾನವು ಕೂಡ ಲಿಖಿತ ಸಂವಿಧಾನವನ್ನು ಹೊಂದಿದ್ದು ಇದನ್ನು ಫಿಲಿಡೆಲ್ವಿಯಾ ಸಭೆಯು ರಚಿಸಿದಂತೆ ಭಾರತದ ಸಂವಿಧಾನವನ್ನು ಸಂವಿಧಾನದ ರಚನಾ ಸಭೆಯಿಂದ ರಚಿಸಲಾಯಿತು. ಭಾರತದ ಸಂವಿಧಾನವನ್ನು ರಚಿಸಲು ಸರಿಸುಮಾರು ಮೂರು ವರ್ಷಗಳ ಕಾಲ ತೆಗೆದುಕೊಂಡು ಕೊನೆಗೆ ಭಾರತ ಸರ್ಕಾರದಿಂದ ಅಂಗೀಕಾರಗೊಂಡಿತು. ಈ ಸಂವಿಧಾನದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಲಾಗಿದೆ. ಪೌರತ್ವ, ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು, ಸಂಯುಕ್ತ ಪದ್ದತಿ, ತುರ್ತು ಪರಿಸ್ಥಿತಿ ಅಧಿಕಾರಗಳು, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಸಾರ್ವತ್ರಿಕ ಚುನಾವಣೆಗಳು, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆಗಳು, ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳ ರಚನೆ ಹಾಗೂ ಅವುಗಳ ನಡುವಿನ ಸಂಬಂಧಗಳು ಮುಂತಾದ ವಿಷಯಗಳ ಬಗ್ಗೆ ಸಮಗ್ರವಾದ ವಿವರಣೆಗಳನ್ನು ಒಳಗೊಂಡಿದೆ 1949ರ ನವೆಂಬರ್ 26ರಂದು ಅಂಗೀಕರಿಸಲ್ಪಟ್ಟ ಸಂವಿಧಾನದಲ್ಲಿ 395 ವಿಧಿಗಳು 8 ಅನುಸೂಚಿಗಳು ಇದ್ದವು. ಅನೇಕ ಸಂವಿಧಾನ ತಿದ್ದುಪಡಿಗಳ ಪರಿಣಾಮವಾಗಿ ವಿಧಿಗಳ ಸಂಖ್ಯೆಯಲ್ಲಿ ಏರುಪೇರು ಕಂಡು ಬಂದಿದೆ.  ಕೆಲವು ವಿಧಿಗಳು ರದ್ದಾಗಿ ಮತ್ತೆ ಕೆಲವು ವಿಧಿಗಳು ಸಂವಿಧಾನಕ್ಕೆ ಸೇರ್ಪಡೆಗೊಂಡಿದ್ದರೂ ವಿಧಿಗಳ ಮೊದಲ ಕ್ರಮ ಸಂಖ್ಯೆ ಮಾತ್ರ ಬದಲಾಗಿಲ್ಲ ಭಾರತದ ಸಂವಿಧಾನವು ಲಿಖಿತ ಸಂವಿಧಾನವಾಗಿದ್ದರೂ ಅದು ಸಂಪ್ರದಾಯಗಳ ರೂಪದ ಕೆಲವು ಅಲಿಖಿತ ಅಂಶಗಳನ್ನು ಕೂಡ ಹೊಂದಿದೆ ಈ ಎಲ್ಲಾ ಅಂಶಗಳು ಸಹ ಸಂವಿಧಾನದ ಪ್ರಮುಖ ಭಾಗಗಳಾಗಿವೆ. ಅಲಿಖಿತ ಅಂಶಗಳು ಲಿಖಿತ ಅಂಶಗಳಿಗೆ ಪೂರಕವಾಗಿದ್ದು ಅವುಗಳ ಕೆಲವು ಉದಾಹರಣೆಗಳನ್ನು ಈ ಕೆಳಕಂಡಂತೆ ನೋಡಬಹುದು. 

1. ಪ್ರಧಾನಮಂತ್ರಿಯು ಬಹುಮತ ಪಡೆಯದಿದ್ದು ಒಂದು ವೇಳೆ ರಾಷ್ಟ್ರಪತಿಗಳೇನಾದರೂ ಅವರನ್ನು ಪ್ರಧಾನಮಂತ್ರಿಯಾಗಿ ನೇಮಕ ಮಾಡಿದರೆ ಅಂತಹ ಪ್ರಧಾನ ಮಂತ್ರಿಯು ಒಂದು ತಿಂಗಳಲ್ಲಿ ವಿಶ್ವಾಸ ಮತವನ್ನು ಗಳಿಸಬೇಕು.

2.  ಜೇಷ್ಠತೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ನೇಮಿಸಬೇಕು.

3.  ಸಾರ್ವಜನಿಕ ಲೆಕ್ಕ ಸಮಿತಿಯ ಅಧ್ಯಕ್ಷರು ಯಾವುದೇ ವಿರೋಧ ಪಕ್ಷದವರಾಗಿರಬಹುದು.

B. ಅಲಿಖಿತ ಸಂವಿಧಾನ: “ಸಂವಿಧಾನದ ಬಹುತೇಕ ನಿಯಮಾವಳಿಗಳು ಬರಹ ರೂಪದಲ್ಲಿರದೆ ರೂಡಿ ಮತ್ತು ಸಂಪ್ರದಾಯಗಳ ರೂಪದಲ್ಲಿ ಇದ್ದರೆ ಅದನ್ನು ಅಲಿಖಿತ ಸಂವಿಧಾನ ಎಂದು ಕರೆಯಲಾಗುತ್ತದೆ.” ಅಲಿಖಿತ ಸಂವಿಧಾನವಿರುವಲ್ಲಿ ಸರ್ಕಾರದ ಅಧಿಕಾರ ಹಂಚಿಕೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಾವಳಿಗಳು ಬರಹ ರೂಪದಲ್ಲಿರದೆ ಅಲಿಖಿತ ರೂಪದಲ್ಲಿರುತ್ತವೆ.

ಅಲಿಖಿತ ಸಂವಿಧಾನದ ಬಹುತೇಕ ತತ್ವಗಳು ಕಾಲಾನುಕ್ರಮದಲ್ಲಿನ ಅನುಭವಗಳಿಂದ ಅಸ್ತಿತ್ವದಲ್ಲಿ ಇರುತ್ತವೆ. ಮುಂದುವರೆದು ಸಂವಿಧಾನ ರಚನಾ ಸಭೆಯಿಂದ ಉದ್ದೇಶಪೂರ್ವಕವಾಗಿ ರಚನೆಗೊಂಡ ಕೃತಕ ನಿಯಮಗಳನ್ನು ಅಲಿಖಿತ ಸಂವಿಧಾನವು ಒಳಗೊಂಡಿರುವುದಿಲ್ಲ. ಅಧಿಕ ಅಲಿಖಿತ ನಿಯಮಗಳನ್ನು ಹೊಂದಿರುವ ಬ್ರಿಟಿಷ್ ಸಂವಿಧಾನವನ್ನು ಅಲಿಖಿತ ಸಂವಿಧಾನವೆಂದು ಪರಿಗಣಿಸಲಾಗಿದೆ.

C. ಭಾಗಶಃ ನಮ್ಯ ಹಾಗೂ ಭಾಗಶಃ ಅನಮ್ಯ:

ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸದೆ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು ನಮ್ಯ ಅಥವಾ ಸುಲಭ ಸಂವಿಧಾನವೆಂದು ಮತ್ತು ಯಾವ ಸಂವಿಧಾನವನ್ನು ತಿದ್ದುಪಡಿ ಮಾಡಲು ವಿಶೇಷ ವಿಧಾನವನ್ನು ಅನುಸರಿಸಬೇಕು ಅದನ್ನು ಅನಮ್ಯ ಅಥವಾ ಕಠಿಣ ಸಂವಿಧಾನವೆಂದು ಕರೆಯಲಾಗಿದೆ. ಭಾರತದ ಸಂವಿಧಾನವು ಬ್ರಿಟಿಷ್ ಸಂವಿಧಾನದಂತೆ ನಮ್ಮಯವೂ ಅಲ್ಲ ಅಥವಾ ಅಮೆರಿಕಾದ ಸಂವಿಧಾನದಂತೆ ಅನಮ್ಯವೂ ಅಲ್ಲ. ಹೆಚ್ಚು ಕಠಿಣ ಮಾರ್ಗವನ್ನು ಅನುಸರಿಸಿ ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. 

ಸಂವಿಧಾನದಂತೆ ಸಂಸತ್ತು ಪರಮೋಚ್ಚ ಅಧಿಕಾರವನ್ನು ಹೊಂದಿದ್ದು ಸಂವಿಧಾನದ ನಿಯಮಾವಳಿಗಳನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಪಡೆದಿದೆ. ಪರಿಣಾಮವಾಗಿ ಬ್ರಿಟಿಷ್ ಸಂಸತ್ತು ಸಾಮಾನ್ಯ ಕಾನೂನನ್ನು ಬದಲಾಯಿಸುವಂತೆ ಸಂವಿಧಾನದ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಅನುಮತಿಯನ್ನು ಪಡೆದಿದೆ.  ಈ ಕಾರಣದಿಂದ ಬ್ರಿಟಿಷ್‌ ಸಂವಿಧಾನವನ್ನು ನಮ್ಯ ಸಂವಿಧಾನ ಎಂದು ಕರೆಯಲಾಗಿದೆ ಈ ರೀತಿಯ ತಿದ್ದುಪಡಿಯಿಂದಾಗಿ ಆಗಾಗ ಆಗುತ್ತಿರುವ ಬದಲಾವಣೆಗಳನ್ನು ತ್ವರಿತವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ.

ಇನ್ನು ಅನಮ್ಯ ಸಂವಿಧಾನ ಹೊಂದಿದ ದೇಶಗಳಲ್ಲಿ ತ್ವರಿತ ಬದಲಾವಣೆಗೆ ಹಿನ್ನಡೆ ಉಂಟಾಗುತ್ತದೆ. ಉದಾಹರಣೆ ಅಮೇರಿಕಾದ ಸಂವಿಧಾನವು ಜಗತ್ತಿನ ಅತಿ ಕಠಿಣವಾದ ಸಂವಿಧಾನವೆನಿಸಿದ್ದು ಜಾರಿಗೊಂಡು ಎರಡು ಶತಮಾನಗಳು ಕಳೆದರೂ ಈವರೆಗೆ ಕೇವಲ 27 ತಿದ್ದುಪಡಿಗಳನ್ನು ಮಾತ್ರ ಮಾಡಲಾಗಿದೆ.

ಉಪಸಂಹಾರ

ಸಂವಿಧಾನವು ದೇಶದ ಆಡಳಿತ, ಹಕ್ಕುಗಳು ಮತ್ತು ಕರ್ತವ್ಯಗಳಿಗೆ ದಿಕ್ಕು ನೀಡುವ ಪ್ರಮುಖ ದಾಖಲೆ ಆಗಿದೆ. ಲಿಖಿತ ಹಾಗೂ ಅಲಿಖಿತ ಸಂವಿಧಾನಗಳು ತಮ್ಮದೇ ಆದ ಲಾಭ–ಮಿತಿಗಳನ್ನು ಹೊಂದಿವೆ. ನಮ್ಯ ಮತ್ತು ಅನಮ್ಯ ಸಂವಿಧಾನಗಳ ಸಂಯೋಜನೆಯೇ ಸ್ಥಿರ ಹಾಗೂ ಚುರುಕಾದ ಆಡಳಿತಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಭಾರತ ಸಂವಿಧಾನವು ಜಗತ್ತಿನ ಅತ್ಯಂತ ಸಮಗ್ರ ಮತ್ತು ಸಮತೋಲನದ ಸಂವಿಧಾನಗಳಲ್ಲಿ ಒಂದಾಗಿದೆ.