ಸ್ಪೀಕರ್‌ನ ಅಧಿಕಾರ ಕಾರ್ಯಗಳು

ಸ್ಪೀಕರ್‌ನ ಅಧಿಕಾರ ಕಾರ್ಯಗಳು

ಸ್ಪೀಕರ್ ಎಂಬುದು ಕೇವಲ ಸ್ಥಾನವಲ್ಲ, ಅದು ಸಂಸತ್ತಿನ ಗೌರವದ ಪ್ರತೀಕವಾಗಿದೆ. ಸದನದ ಶಾಂತಿ, ಶಿಸ್ತು ಮತ್ತು ಸಮನ್ವಯವನ್ನು ಕಾಪಾಡುವಲ್ಲಿ ಸ್ಪೀಕರ್ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಜಾಪ್ರಭುತ್ವದ ಯಶಸ್ಸು ಸ್ಪೀಕರ್ ಅವರ ನ್ಯಾಯಸಮ್ಮತ ಕಾರ್ಯನಿರ್ವಹಣೆಯ ಮೇಲೆ ಅವಲಂಬಿತವಾಗಿದೆ.

ಸ್ಪೀಕರ್ ನ ಕಾರ್ಯಗಳು ಈ ಕೆಳಗಿನಂತಿವೆ

  1. ಸ್ಪೀಕರ್ ಲೋಕಸಭೆಯ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ ಸದನದ ಕಲಾಪಗಳನ್ನು ನಿಯಮಾವಳಿಗನುಸಾರ  ನಡೆಯುವಂತೆ ನೋಡಿಕೊಳ್ಳುತ್ತಾರೆ. ವಿವಿಧ ವಿಷಯಗಳ ಚರ್ಚೆಗೆ ಸಮಯವನ್ನು ನಿಗದಿ ಮಾಡುತ್ತಾರೆ.
  2. ಸದನದಲ್ಲಿ ಯಾರು ಮಾತನಾಡಬೇಕು ಮತ್ತು ಎಷ್ಟು ಮಾತನಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್ ಅವರಿಗೆ ಇರುತ್ತದೆ. ಜೊತೆಗೆ ಅನ್‌ಪಾರ್ಲಿಮೆಂಟರಿ ಪದಗಳನ್ನು ಪ್ರಯೋಗಿಸಿ ಮಾತನಾಡದಂತೆ ತಡೆಯುತ್ತಾರೆ.
  3. ಸದನದಲ್ಲಿ ನಿರ್ದಿಷ್ಟ ಹಾಜರಾತಿ ಇರದೆ ಹೋದರೆ ಸಭೆಯನ್ನು ಮುಂದೂಡುತ್ತಾರೆ. ಸಭೆಯಲ್ಲಿ ಗದ್ದಲ ಮತ್ತು ಕೋಲಹಲವಾದರೂ ಕೆಲವು ನಿಮಿಷಗಳವರೆಗೆ ಸಭೆಯನ್ನು ಮುಂದೂಡುತ್ತಾರೆ.
  4. ಲೋಕಸಭಾ ಸದಸ್ಯರು ಸ್ಪೀಕರ್ ಅವರ ಅನುಮತಿ ಮೇರೆಗೆ ಪ್ರಶ್ನೆ ಕೇಳುವುದು ಹಾಗೂ ಚರ್ಚೆನಡೆಯುವುದರ ಮೂಲಕ ನಿರ್ಣಯಗಳನ್ನು ಮತ್ತು ಮಸೂದೆಗಳನ್ನು ಮಂಡಿಸಬೇಕು.
  5. ಸದನದಲ್ಲಿ ಮೊದಲು ಚರ್ಚಿಸಬೇಕಾದ ವಿಷಯಗಳನ್ನು ಸ್ಪೀಕರ್ ತೀರ್ಮಾನಿಸುತ್ತಾರೆ. ಯಾವುದಾದರೂ ಮಸೂದೆ ಅದು ಹಣಕಾಸಿನ ಮಸೂದೆಯೋ ಅಥವಾ ಅಲ್ಲವೋ ಎಂಬುದನ್ನು ತೀರ್ಮಾನಿಸುವ ಅಂತಿಮ ಅಧಿಕಾರ ಅವರಿಗೆ ಇದೆ.
  6. ಸದನದಲ್ಲಿ ಶಿಸ್ತು, ಶಾಂತಿ ಹಾಗೂ ಸಂಯಮಗಳನ್ನು ಸ್ಪೀಕರ್ ಕಾಪಾಡುತ್ತಾರೆ. ಸದಸ್ಯರು ಒಂದು ವೇಳೆ ಅಶಿಸ್ತಿನಿಂದ ನಡೆದುಕೊಂಡರೆ ಅವರನ್ನು ಸದನದಿಂದ ಹೊರ ಹೋಗುವಂತೆ ಹೇಳುವ ಅಧಿಕಾರವನ್ನು ಸ್ಪೀಕರ್ ಪಡೆದಿದ್ದಾರೆ.
  7. ಸದನದಲ್ಲಿ ಚರ್ಚೆಯಾದ ಮಸೂದೆಯ ಪರ ವಿರೋಧ ಸಮಾನ ಮತಗಳು ಬಂದರೆ ಸ್ಪೀಕರ್ ತಮ್ಮ ಮತ(Casting Vote)ನ್ನು ಚಲಾಯಿಸಬಹುದು.
  8. ಅಸಂಬದ್ಧ ಚರ್ಚೆಗಳನ್ನು ಕಲಾಪ ಪಟ್ಟಿಯಿಂದ ತೆಗೆದು ಹಾಕುವ ಅಧಿಕಾರವು ಸ್ಪೀಕರಿಗೆ ಇದೆ.
  9. ಸ್ಪೀಕರ್ ಅವರು ರೂಲ್ಸ್ ಕಮಿಟಿ ಮತ್ತು ಬಿಸಿನೆಸ್ ಅಡ್ವೆಸರಿ ಕಮಿಟಿಗಳ ಅಧ್ಯಕ್ಷರಾಗಿದ್ದು ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅಂದಾಜು ಸಮಿತಿ ಹಾಗೂ ಸಾರ್ವಜನಿಕ ಉದ್ಯಮ ಸಮಿತಿಗಳ ಅಧ್ಯಕ್ಷರುಗಳನ್ನು ಸ್ಪೀಕರ್ ಅವರೇ ನೇಮಿಸುತ್ತಾರೆ.
  10. ಸ್ಪೀಕರ್ ಸ್ಥಾನ ಶ್ರೇಷ್ಠವಾದದ್ದು ಹಾಗೂ ಗೌರವತವಾದುದು ಇವರು ಆಳುವ ಪಕ್ಷದಿಂದ ಆಯ್ಕೆಯಾದರೂ ಸದನದಲ್ಲಿ ಯಾವುದೇ ತಾರತಮ್ಯ ಮಾಡದೆ ಸದನದ ಗೌರವವನ್ನು ಕಾಪಾಡುತ್ತಾರೆ.
  11. ಲೋಕಸಭೆಯ ಸದಸ್ಯರ ಪಕ್ಷಾಂತರ ಕುರಿತಂತೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಲೋಕಸಭಾ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಅಧ್ಯಕ್ಷನಿಗಿರುತ್ತದೆ.
  12. ಲೋಕಸಭಾ ಸದಸ್ಯರ ರಾಜೀನಾಮೆಯನ್ನು ಸ್ವೀಕರಿಸುವ ಹಾಗೂ ರಾಜೀನಾಮೆಯ ನೈಜತೆಯನ್ನು ಪರಿಶೀಲಿಸುವ ಅಧಿಕಾರಸ್ಪೀಕರ್‌ವರಿಗಿದೆ. 

ಉಪಸಂಹಾರ

ಈ ಹಿಂದೆ ಜೀವಿ ಮಾವಲಂಕರ್ ಮತ್ತು ವಿಠ್ಠಲ್‌ಬಾಯಿ ಪಟೇಲರು ಧೈರ್ಯ ಹಾಗೂ ದಿಟ್ಟತನದಿಂದ ನಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕ್ಲಿಪ್ಟನ್ ಬ್ರೌನ್ ಹೇಳಿದಂತೆ ಸ್ಪೀಕರ್ ಗಮನಿಸಬೇಕಾದ ವಿಷಯವೆಂದರೆ I am not  government man nar the opposition man and I am the house of the commons man ಸಭೆಯಲ್ಲಿ ಗೊಂದಲ ಹಾಗೂ ಉದ್ರೇಕಗಳುಂಟಾದರೆ ಸ್ಪೀಕರ್ ತಮ್ಮ ನಗುವಿನ ಹಾಗೂ  ಹಾಸ್ಯ ಚಟಾಕಿಗಳ ಮೂಲಕ ಸದಸ್ಯರನ್ನು ಸಮಾಧಾನಗೊಳಿಸಬೇಕು.

ಲೋಕಸಭೆಯ ರಚನೆ

ಲೋಕಸಭೆಯ ರಚನೆ

ʻʻಭಾರತದ ಕೇಂದ್ರ ಶಾಸಕಾಂಗವಾದ ಸಂಸತ್ತಿನ ಕೆಳಮನೆಯನ್ನು ಲೋಕಸಭೆ ಎನ್ನಲಾಗುತ್ತದೆ.ʼʼ ಲೋಕಸಭೆಯು ಭಾರತದ ಪ್ರಜೆಗಳನ್ನು ಪ್ರತಿನಿಧಿಸುತ್ತಿರುವುದರಿಂದ ಇದನ್ನು ʻಕೆಳಮನೆʼ ʻಪ್ರತಿನಿಧಿಸಭೆʼ ಜನತಾ ಸದನ ಹಾಗೂ ಪ್ರಜಾಸದನ ಎಂದು ಸಹ ಕರೆಯಲಾಗುತ್ತದೆ. ಲೋಕಸಭೆಯು ಇಂಗ್ಲೆಂಡಿನ ಹೌಸ್‌ ಆಫ್‌ ಕಾಮನ್ಸ್‌ ಮತ್ತು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್‌ಗೆ ಸಮನಾಗಿದೆ.

1. ಲೋಕಸಭೆಯ ಗಾತ್ರ: (Size of Loksabha)

ಭಾರತದ ಸಂವಿಧಾನದಲ್ಲಿ ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆಯನ್ನು 552 ಕ್ಕೆ ನಿಗದಿಪಡಿಸಲಾಗಿದೆ. ಈ ೫೫೨ ಸ್ಥಾನಗಳಲ್ಲಿ ರಾಷ್ಟ್ರಪತಿಗಳು ಇಬ್ಬರು ಆಂಗ್ಲೋ ಇಂಡಿಯನ್ನರನ್ನು ನಾಮಕರಣಗೊಳಿಸುತ್ತಾರೆ. ಉಳಿದ 550 ಸ್ಥಾನಗಳು ಪ್ರಜೆಗಳಿಂದ ಚುನಾವಣೆಯಲ್ಲಿ ಆಯ್ಕೆಗೊಂಡ ಪ್ರತಿನಿಧಿಗಳಿಗೆ ಮೀಸಲಾಗಿದ್ದವು. 2019ರ ವೇಳೆಗೆ ಲೋಕಸಭೆಯ ಸದಸ್ಯರ ಸಂಖ್ಯೆ 545ಕ್ಕೆ ಸೀಮಿತಗೊಂಡಿದೆ. ಅದರಲ್ಲಿ ಇಬ್ಬರು ಆಂಗ್ಲೋ ಇಂಡಿಯನ್ನರು ನೇಮಕವಾದರೆ ಉಳಿದ 543 ಸ್ಥಾನಗಳು ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಮೀಸಲು. 2019 ರಲ್ಲಿ ಸಂವಿಧಾನದ 104ನೇ ತಿದ್ದುಪಡಿಯನ್ವಯ ಆಂಗ್ಲೋ ಇಂಡಿಯನ್ ಸದಸ್ಯರುಗಳ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ. ಪರಿಣಾಮವಾಗಿ ಇಂದು 543 ಸ್ಥಾನಗಳು ಮಾತ್ರ ಉಳಿದಿವೆ. 543 ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿಡಲಾಗಿದೆ.

2.  ಚುನಾವಣಾ ವಿಧಾನ: (Election Method)

ಲೋಕಸಭೆಯ 543 ಮತ ಕ್ಷೇತ್ರಗಳ ಅಭ್ಯರ್ಥಿಗಳು ನೇರವಾಗಿ ಪ್ರಜೆಗಳಿಂದ ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾಗುತ್ತಾರೆ. ಉಳಿದ ಎರಡು ಸ್ಥಾನಗಳನ್ನು ರಾಷ್ಟ್ರಪತಿಗಳು ನಾಮಕರಣಗೊಳಿಸುತ್ತಾರೆ. ಭಾರತದ ಜನಸಂಖ್ಯೆಗನುಗುಣವಾಗಿ ಭಾರತದ ಪ್ರತಿಯೊಂದು ರಾಜ್ಯಗಳ ಮತಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಗೊಳ್ಳಬೇಕಾದ ಸ್ಥಾನಮಾನಗಳನ್ನು ಸಂವಿಧಾನದಲ್ಲಿ ನಿಗದಿಪಡಿಸಲಾಗಿದೆ. ಅದರಂತೆ ಕರ್ನಾಟಕವು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಚುನಾವಣಾ ಆಯೋಗವು ಭಾರತದ ಭೂ ಭಾಗವನ್ನು 543 ಲೋಕಸಭಾ ಮತಕ್ಷೇತ್ರಗಳನ್ನಾಗಿ ವಿಂಗಡಿಸಿ ಆಯಾ ಸಮುದಾಯಗಳಿಗೆ ಸಮಾನವಾಗಿ ಸೀಟುಗಳನ್ನು ಹಂಚಿಕೆ ಮಾಡುತ್ತದೆ. ಪರಿಶಿಷ್ಟ ಜಾತಿಗಳಿಗೆ 87 ಹಾಗೂ ಪರಿಶಿಷ್ಟ ಪಂಗಡಗಳಿಗೆ 44 ಸೀಟುಗಳನ್ನು ಒಟ್ಟು 132 ಮತಕ್ಷೇತ್ರಗಳನ್ನು ಮೀಸಲಿಡಲಾಗುತ್ತದೆ. ಈ ಕ್ಷೇತ್ರಗಳ ಚುನಾವಣೆಯನ್ನು ವಯಸ್ಕ ಮತದಾನ ಪದ್ದತಿಯಂತೆ ನಡೆಸಲಾಗುತ್ತದೆ.

3.  ಅರ್ಹತೆಗಳು: (Qualification)

 ಲೋಕಸಭಾ ಸದಸ್ಯನಾಗಬಯಸುವ ವ್ಯಕ್ತಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.

  1.  ಆತ ಭಾರತದ ಪ್ರಜೆಯಾಗಿರಬೇಕು.
  2.  ಆತನಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
  3.  ಆತ ಯಾವುದಾದರೂ ಲೋಕಸಭಾ ಕ್ಷೇತ್ರದ ಮತದಾರನಾಗಿಬೇಕು.
  4.  ಲೋಕಸಭಾ ಸದಸ್ಯನಿಗಿರಬೇಕಾದ ಎಲ್ಲಾ ಅರ್ಹತೆಗಳು ಇರಬೇಕು.
  5.  ಕೇಂದ್ರ ರಾಜ್ಯ ಅಥವಾ ಯಾವುದೇ ಸರ್ಕಾರಿ ಹುದ್ದೆಯಲ್ಲಿರಬಾರದು.
  6. ಆತ ಹುಚ್ಚ, ದಿವಾಳಿ ಅಥವಾ ಮತಿವಿಕಲನಾಗಿರಬಾರದು

 4. ಅಧಿಕಾರ ಅವಧಿ: (Term of Power)

ಲೋಕಸಭಾ ಸದಸ್ಯರ ಅಧಿಕಾರಾವಧಿ ಸಾಮಾನ್ಯವಾಗಿ ಐದು ವರ್ಷಗಳು. ಚುನಾವಣೆಗಳು ನಡೆದು ಮೊದಲನೇ ಅಧಿವೇಶನವು ಸೇರುವ ದಿನದಿಂದ ಐದು ವರ್ಷಗಳ ಕಾಲದವರೆಗೆ ಅಧಿಕಾರದಲ್ಲಿರುವುದು. ಆದರೆ ರಾಷ್ಟ್ರಪತಿಗಳು ಲೋಕಸಭಾ ಅಧಿಕಾರಾವಧಿ ಮುಗಿಯುವ ಮುಂಚಿತವಾಗಿ ವಿಸರ್ಜನೆಗೊಳಿಸಬಹುದು. ಈ ರೀತಿಯ ವಿಸರ್ಜನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಹಲವು ಬಾರಿ ರಾಷ್ಟ್ರಪತಿಗಳು ಲೋಕಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಿದ್ದಾರೆ. ಉದಾಹರಣೆ 1998ರ 12ನೇ ಲೋಕಸಭೆಯನ್ನು 1999 ರಲ್ಲಿ ವಿಸರ್ಜಿಸಲಾಯಿತು. ಇದರೊಂದಿಗೆ ತುರ್ತುಪರಿಸ್ಥಿತಿಯೇನಾದರೂ ಸಂಭವಿಸಿದರೆ ಲೋಕಸಭೆಯ ಅವಧಿಯನ್ನು ಒಂದು ವರ್ಷ ಮುಂದೂಡಬಹುದು. ಅದಕ್ಕೆ ಸಂಸತ್ತಿನ ಅನುಮತಿ ಬೇಕು, ತುರ್ತುಪರಿಸ್ಥಿತಿ ಮುಗಿದ ಆರು ತಿಂಗಳೊಳಗೆ ಚುನಾವಣೆಗಳು ನಡೆಯಬೇಕು.

5. ಅಧಿವೇಶನಗಳು: (Sessions)

ರಾಷ್ಟ್ರಪತಿಗಳು ಲೋಕಸಭೆಯ ಅಧಿವೇಶನವನ್ನು ಕರೆಯುವ ಅಥವಾ ಮುಂದೂಡುವ ಅಧಿಕಾರವನ್ನು ಹೊಂದಿದ್ದಾರೆ ಲೋಕಸಭೆಯು ಸಾಮಾನ್ಯವಾಗಿ ಮೂರು ಬಾರಿ ಅಧಿವೇಶನವನ್ನು ಕರೆಯುತ್ತದೆ. ಬಜೆಟ್ ಅಧಿವೇಶನ( ಫೆಬ್ರವರಿ- ಮೇ)  ಮುಂಗಾರು ಅಧಿವೇಶನ (ಜುಲೈ-ಸೆಪ್ಟೆಂಬರ್) ಹಾಗೂ ಚಳಿಗಾಲದ ಅಧಿವೇಶನ (ನವೆಂಬರ್-ಡಿಸೆಂಬರ್) ಸಂವಿಧಾನದ ಪ್ರಕಾರ ಲೋಕಸಭೆಯ ಎರಡು ಅಧಿವೇಶನಗಳ ನಡುವಿನ ಅಂತರ ಆರು ತಿಂಗಳು ಮೀರುವಂತಿಲ್ಲ. ಆದರೆ ಪ್ರತಿವರ್ಷ ಎರಡು ಅಧಿವೇಶನಗಳು ನಡೆಯಲೇಬೇಕು.

6. ಕೋರಂ: (Quoram)

ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ಕಲಾಪಗಳು ಜರುಗಲು ಹಾಜರಿರಬೇಕಾದ ಕನಿಷ್ಠ ಸದಸ್ಯರ ಸಂಖ್ಯೆಯನ್ನು ಕೋರಂ ಎಂದು ಕರೆಯಲಾಗುತ್ತದೆ. ಲೋಕಸಭೆಯ ಕೋರಂ ಸಂಖ್ಯೆ ಒಟ್ಟು ಸದಸ್ಯರ ೧/೧೦ ಷ್ಟು ಬಹುಮತ ಇರಬೇಕು. ಲೋಕಸಭಾ ಅಧಿವೇಶನದಲ್ಲಿ ಬಹುಮತದ ಸಂಖ್ಯೆಯಷ್ಟು ಸದಸ್ಯರು ಹಾಜರಾಗದಿದ್ದರೆ ಸ್ಪೀಕರ್ ಅಧಿವೇಶನವನ್ನು ಮುಂದೂಡುತ್ತಾರೆ.

7. ಅಧ್ಯಕ್ಷ ಮತ್ತು ಉಪಾಧ್ಯಕ್ಷ: (Speaker and Deputy Speaker)

ʻʻ ಲೋಕಸಭೆಯ ಅಧ್ಯಕ್ಷನನ್ನು ಸ್ಪೀಕರ್ ಎಂದು ಕರೆಯಲಾಗಿದೆʼʼ. ಲೋಕಸಭೆಯ ಸದಸ್ಯರು ತನ್ನಲ್ಲಿಯೇ ಒಬ್ಬ ಅಧ್ಯಕ್ಷ ಮತ್ತು ಉಪಾಧ್ಯಕ್ಷನ್ನು ಆಯ್ಕೆ ಮಾಡುತ್ತಾರೆ. ಲೋಕಸಭೆಯ ಕಾರ್ಯಕಲಾಪಗಳು ಲೋಕಸಭಾ ಸ್ಪೀಕರ್ ನೇತೃತ್ವದಲ್ಲಿಯೇ ನಡೆಯುತ್ತವೆ. ಅಧ್ಯಕ್ಷರ ಅನುಪಸ್ಥಿಯಲ್ಲಿ ಉಪಾಧ್ಯಕ್ಷರು ಸಭೆಯ ಕಾರ್ಯಕಲಾಪಗಳನ್ನು ನಿರ್ವಹಿಸಿಕೊಂಡು ಹೋಗುತ್ತಾರೆ.

8. ವೇತನ ಹಾಗೂ ವಿನಾಯಿತಿಗಳು: 

ಲೋಕಸಭಾ ಸದಸ್ಯರಿಗೆ ೧ ಲಕ್ಷ ರೂ ವೇತನ ೭೦ ಸಾವಿರ ಕ್ಷೇತ್ರ ಭತ್ಯೆಯೇ ಹಾಗೂ 60,000 ಕಚೇರಿ ವೆಚ್ಚರವನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಜೊತೆಗೆ ಅಧಿವೇಶನಕ್ಕೆ ಹಾಜರಾಗಿ ಸಹಿ ಮಾಡಿದರೆ ಪ್ರತಿದಿನ 2,000ರೂ ಭತ್ಯೆಯನ್ನು ನೀಡಲಾಗುತ್ತದೆ. ಇದರೊಂದಿಗೆ ಉಚಿತ ರೈಲು ಹಾಗೂ ವಿಮಾನ ಪ್ರಯಾಣ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಅದು ಅಲ್ಲದೆ ಉಚಿತ ನಿವೇಶನ, ದೂರವಾಣಿ ಕರೆಗಳು, ವಿದ್ಯುತ್, ಆರೋಗ್ಯ ಹಾಗೂ ನೀರಿನ ಸೌಲಭ್ಯಗಳನ್ನು ಸಹ ಕಲ್ಪಿಸಿಕೊಡಲಾಗುತ್ತದೆ. ಲೋಕಸಭಾ ಸದಸ್ಯರು ಅಧಿವೇಶನದ ಸಂದರ್ಭದಲ್ಲಿ ಅನಿರ್ಬಂದಿತವಾಗಿ ಮಾತನಾಡುವ ಹಕ್ಕನ್ನು ಪಡೆದಿರುತ್ತಾರೆ. ಅಧಿವೇಶನದ ವೇಳೆ ಮಾತನಾಡುವ ಮಾತುಗಳಿಗೆ ಶಿಕ್ಷೆ ನೀಡುವಂತಿಲ್ಲ. ಅಧಿವೇಶನ ನಡೆಯುವ ಮುನ್ನ ಹಾಗೂ ಅಧಿವೇಶನದ ಸಂದರ್ಭಗಳಲ್ಲಿ ಹಾಗೂ ನಂತರ 40 ದಿನಗಳವರೆಗೆ ಲೋಕಸಭಾ ಸದಸ್ಯನನ್ನು ನಾಗರಿಕ ಮೊಕದ್ದಮೆಯಡಿಯಲ್ಲಿ ಬಂಧಿಸುವಂತಿಲ್ಲ. ಒಂದು ವೇಳೆ ಬಂಧಿಸುವ ಸಂದರ್ಭಗಳು ಬಂದರೆ ಸ್ಪೀಕರ್ ಅವರ ಅನುಮತಿ ಬೇಕೇ ಬೇಕು.

ಉಪಸಂಹಾರ

ಒಟ್ಟಾರೆ, ಲೋಕಸಭೆಯ ರಚನೆ ಮತ್ತು ಕಾರ್ಯವಿಧಾನಗಳು ಭಾರತದ ಪ್ರಜಾಪ್ರಭುತ್ವವನ್ನು ಸ್ಥಿರಗೊಳಿಸುತ್ತವೆ. ಸದಸ್ಯರ ಅರ್ಹತೆ, ಅವಧಿ, ಅಧಿವೇಶನಗಳು ಮತ್ತು ಹಕ್ಕುಗಳು ವ್ಯವಸ್ಥಿತ ಆಡಳಿತಕ್ಕೆ ನೆರವಾಗುತ್ತವೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಮೂಲಕ ಜನಾಭಿಪ್ರಾಯವನ್ನು ಕಾನೂನಾಗಿಸುವ ಶಕ್ತಿ ಲೋಕಸಭೆಗೆ ಇದೆ. ಆದ್ದರಿಂದಲೇ ಲೋಕಸಭೆ ಭಾರತೀಯ ಪ್ರಜಾಪ್ರಭುತ್ವದ ಜೀವಾಳವೆಂದು ಕರೆಯಲ್ಪಡುತ್ತದೆ.

ರಾಜ್ಯಸಭೆಯ ಕೆಲಸ ಕಾರ್ಯಗಳು

ಭಾರತದ ಶಾಸಕಾಂಗವು ವರ್ಷದಲ್ಲಿ ಎರಡು ಬಾರಿ ಸಭೆ ಸೇರಬೇಕು ಮತ್ತು ಎರಡು ಸಮಾವೇಶಗಳ ನಡುವಿನ ಅಂತರ ೬ ತಿಂಗಳ ಹೆಚ್ಚಾಗಿರಬಾರದೆಂದು ಭಾರತ ಸಂವಿಧಾನದ 85 ನೇ ವಿಧಿಯು ಸ್ಪಷ್ಟಪಡಿಸುತ್ತದೆ. ಅಧಿಕಾರ ಮತ್ತು ಕಾರ್ಯಗಳು ಈ ಎರಡು ಪದಗಳನ್ನು ಸಾಮಾನ್ಯವಾಗಿ ಸಮಾನಾರ್ಥ ಪದಗಳಾಗಿ ಬಳಕೆಗೆ ತರಲಾಗಿದೆ. ಇದಕ್ಕೆ ಕಾರಣವೆಂದರೆ ಒಬ್ಬ ಅಧಿಕಾರಿಯು ಕೆಲವು ಕಾರ್ಯಗಳನ್ನು ನಿರ್ವಹಿಸಬೇಕಾದರೆ ಅದಕ್ಕೆ ಅಗತ್ಯವಿರುವ ಅಧಿಕಾರವಿರಬೇಕು. ರಾಜ್ಯಸಭೆಯ ಕಾರ್ಯಗಳು ಈ ಕೆಳಗಿನಂತಿವೆ.

1. ಶಾಸನೀಯ ಕೆಲಸ ಕಾರ್ಯಗಳು: (Legislative Functions)

ಹಣಕಾಸಿನ ಮಸೂದೆಯನ್ನು ಹೊರತುಪಡಿಸಿ ಉಳಿದೆಲ್ಲಾ ಶಾಸನೀಯ ಅಧಿಕಾರದಲ್ಲಿ ರಾಜ್ಯಸಭೆಯು ಲೋಕಸಭೆಯಷ್ಟೇ ಸಮಾನವಕಾಶವನ್ನು ಹೊಂದಿದೆ. ಹಣಕಾಸಿಗೆ ಸಂಬಂಧಿಸಿದ ಮಸೂದೆಗಳು ರಾಜ್ಯಸಭೆಯಲ್ಲಿ ೨/೩  ಬಹುಮತ ಪಡೆದ ನಂತರವೇ ಮುಂದಿನ ನಿರ್ಧಾರಕ್ಕಾಗಿ ಲೋಕಸಭೆಗೆ ಹೋಗುತ್ತದೆ. ಯಾವುದೇ ಮಸೂದೆಯು ಕಾನೂನು ರೂಪ ತಾಳಲು ಎರಡೂ ಸದನಗಳ ಒಪ್ಪಿಗೆ ಬೇಕು. ಒಂದು ಮಸೂದೆಗೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದರೆ ಆಗ ರಾಷ್ಟ್ರಪತಿಗಳು ಉಭಯ ಸದನಗಳ ಜಂಟಿ ಅಧಿವೇಶನಗಳನ್ನು ಕರೆಯಬಹುದು. ಈ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಲೋಕಸಭೆಯ ಸ್ಪೀಕರ್ ನಿರ್ವಹಿಸುತ್ತಾರೆ. ನಂತರ ಎರಡು ಸದನಗಳ ಹಾಜರಿರುವ ಒಟ್ಟು ಸದಸ್ಯರುಗಳ ಸಂಖ್ಯೆಯ ಬಹುಮತದ  ಆಧಾರದ ಮೇಲೆ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ಲೋಕಸಭೆಯ ಸದಸ್ಯರುಗಳ ಸಂಖ್ಯಾಬಲ ಹೆಚ್ಚಿರುವ ಕಾರಣದಿಂದ ಲೋಕಸಭೆಯ ಅಭಿಪ್ರಾಯಕ್ಕೆ ಮನ್ನಣೆ ಸಿಗುವ ಸಂಭವ ಹೆಚ್ಚು.

ಲೋಕಸಭೆಯಲ್ಲಿ ಅಂಗೀಕರಿಸಿದ ಮಸೂದೆಯನ್ನು ಒಪ್ಪಿಗೆಗಾಗಿ ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತದೆ. ರಾಜ್ಯಸಭೆಯು ಆ ವಸೂದೆಯನ್ನು ಆರು ತಿಂಗಳವರೆಗೆ ತಡೆಹಿಡಿಯಬಹುದೇ ಹೊರತು ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಮುಂದೂಡಲು ಬರುವುದಿಲ್ಲ. ಆರು ತಿಂಗಳೊಳಗೆ ಮಸೂದೆಗೆ ಅನುಮೋದನೆ ನೀಡಬೇಕು. ಒಂದು ವೇಳೆ ಲೋಕಸಭೆಯಲ್ಲಿ ತೀರ್ಮಾನಿಸಿದ ಮಸೂದೆಗೆ 180 ದಿನಗಳಲ್ಲಿ ಅನುಮೋದನೆ ನೀಡದಿದ್ದಲ್ಲಿ ಆ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರಕಿದೆ ಎಂದು ಪರಿಗಣಿಸಲಾಗುವುದು.

 2.  ಹಣಕಾಸಿನ ಕಾರ್ಯಗಳು: (Financial Functions)

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆಯೇ ಸಾರ್ವಭೌಮತ್ವವನ್ನು ಹೊಂದಿದೆ. ಸಂವಿಧಾನದ 10ನೇ ವಿಧಿಯ ಅನ್ವಯ ಹಣಕಾಸಿನ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆ ಮಾಡುವ ಅಧಿಕಾರವಿಲ್ಲದಿರುವುದೇ  ಇದಕ್ಕೆ ಕಾರಣ. ಹಾಗಾಗಿ ಹಣಕಾಸಿನ ಮಸೂದೆಯನ್ನು ಮೊದಲು ಲೋಕಸಭೆಯಲ್ಲಿಯೇ ಮಂಡಿಸಬೇಕು. ಲೋಕಸಭೆಯಲ್ಲಿ ಹಣಕಾಸಿನ ಮಸೂದೆಯನ್ನು ಮಂಡಿಸಿ ಅಂಗೀಕರಿಸಿ ನಂತರ ಅದನ್ನು ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತದೆ. ಆಗ ರಾಜ್ಯಸಭೆಯು ಈ ಮಸೂದೆಯ ಬಗ್ಗೆ ಚರ್ಚಿಸಬಹುದು ಅಥವಾ ಕೆಲವಾರು ತಿದ್ದುಪಡಿ ಮಾಡಲು ಸೂಚನೆ ನೀಡಬಹುದು. ಆದರೆ ರಾಜ್ಯಸಭೆಯ ಸೂಚನೆಯನ್ನು ಒಪ್ಪುವುದು ಮತ್ತು ಬಿಡುವುದು ಲೋಕಸಭೆಗೆ ಬಿಟ್ಟ ವಿಚಾರ. ಹಣಕಾಸು ಮಸೂದೆ ಕೈ ಸೇರಿದ 14 ದಿನದೊಳಗೆ ರಾಜ್ಯಸಭೆಯು ತನ್ನ ಒಪ್ಪಿಗೆಯನ್ನು ಸೂಚಿಸಬೇಕು. ಒಂದು ವೇಳೆ 14 ದಿನದೊಳಗೆ ಒಪ್ಪಿಗೆಯನ್ನು ಸೂಚಿಸಿ ಲೋಕಸಭೆಗೆ ಹಿಂತಿರುಗಿಸದಿದ್ದರೆ ಆ ವಸೂದೆಯನ್ನು ಉಭಯ ಸದನಗಳು ಒಪ್ಪಿಕೊಂಡಿವೆ ಎಂದು ಅರ್ಥ. ಹಾಗಾಗಿ ಹಣಕಾಸಿನ ಮಸೂದೆಯ ಮೇಲೆ ರಾಜ್ಯಸಭೆಗೆ ಯಾವ ಅಧಿಕಾರವನ್ನು ಸಂವಿಧಾನ ನೀಡಿಲ್ಲ. ಗ್ರ್ಯಾಂಟುಗಳ ಬೇಡಿಕೆಯನ್ನು ಸಹ ರಾಜ್ಯಸಭೆಯ ಮುಂದಿಡುವ ಅಗತ್ಯತೆ ಇಲ್ಲ.

3. ಕಾರ್ಯಾಂಗದ ಅಧಿಕಾರಗಳು: (Executive Powers)

 ಭಾರತದಲ್ಲಿ ಸಂಸದೀಯ ಪದ್ಧತಿ ಜಾರಿಯಲ್ಲಿರುವುದರಿಂದ ನೈಜಕಾರ್ಯಾಂಗವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆಯೇ ವಿನಹ ರಾಜ್ಯಸಭೆಗೆ ಅಲ್ಲ. ಪ್ರಧಾನಿ ನಾಯಕತ್ವದ ಕೇಂದ್ರ ಮಂತ್ರಿ ಮಂಡಲವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆ. ಲೋಕಸಭೆ ಅವಿಶ್ವಾಸ ಗೊತ್ತುವಳಿಯ ಮೂಲಕ ಕೇಂದ್ರ ಮಂತ್ರಿ ಮಂಡಳವನ್ನು ಅಧಿಕಾರದಿಂದ ಕಿತ್ತೊಗೆಯುವ ಅಧಿಕಾರವನ್ನು ಹೊಂದಿದೆ. ರಾಜ್ಯಸಭೆಗೆ ಕಾರ್ಯಾಂಗದ ಮೇಲೆ ಅಧಿಕಾರವಿಲ್ಲದಿದ್ದರೂ ಸರ್ಕಾರದ ಕಾರ್ಯಾಚರಣೆಯ ಕುರಿತು ಅವಶ್ಯ ಮಾಹಿತಿಯನ್ನು ಸಮಯದಿಂದ ಸಮಯಕ್ಕೆ ಪಡೆಯಬಹುದಾಗಿದೆ. ಆದರೆ ರಾಜ್ಯಸಭೆಯ ಅನುಮತಿಯನ್ನು ಪಡೆಯದೇ ಯಾವುದೇ ತೆರಿಗೆಯನ್ನು ವಿಧಿಸುವಂತಿಲ್ಲ ಮತ್ತು ವಸೂಲಿ ಮಾಡುವಂತೆಯೂ ಇಲ್ಲ. ರಾಷ್ಟ್ರಪತಿ ಮತ್ತು ಅಂತರಾಷ್ಟ್ರ ಮಟ್ಟದ ವಿಷಯಗಳ ಕುರಿತು ರಾಜ್ಯಸಭೆಯ ಸದಸ್ಯರು ಸರ್ಕಾರವನ್ನು ಪ್ರಶ್ನೆ ವೇಳೆ, ಶೂನ್ಯ ವೇಳೆ, ನಿಲುವಳಿ ಸೂಚನೆ, ಕಡಿತದ ಸೂಚನೆ ಹಾಗೂ ಗಮನಸೆಳೆಯುವ ಸೂಚನೆ ಮುಂತಾದ ಚರ್ಚಾ ಸಮಯಗಳಲ್ಲಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಹಾಕುವ ಮೂಲಕ ನಿಯಂತ್ರಿಸಬಹುದು.

 4.  ನ್ಯಾಯಾಂಗಿಯ ಅಧಿಕಾರಗಳು: (Judicial Power)

ರಾಜ್ಯಸಭೆಯು ನ್ಯಾಯಾಧೀಶನ ಸ್ಥಾನದಲ್ಲಿ ಕುಳಿತು ನ್ಯಾಯ ನಿರ್ಣಯವನ್ನು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾಜ್ಯಸಭೆಯು ಲೋಕಸಭೆಯೊಂದಿಗೆ ಸೇರಿ ಸಂವಿಧಾನ ಉಲ್ಲಂಘನೆಗಾಗಿ ಮಹಾಭಿಯೋಗ ನಿರ್ಣಯವನ್ನು ಅಂಗೀಕರಿಸುವುದರ ಮೂಲಕ ರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಅಧಿಕಾರ ಹೊಂದಿದೆ. ಹಾಗೆಯೇ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು  ಪದಚ್ಯುತಗೊಳಿಸುವ ಅಧಿಕಾರವನ್ನು ಪಡೆದಿದೆ. ಇದಕ್ಕೆ ಸದನದಲ್ಲಿ ೨/೩ ಬಹುಮತದ ನಿರ್ಣಯಬೇಕು. ಆಗ ರಾಷ್ಟ್ರಪತಿಗಳು ಮತ್ತು ನ್ಯಾಯಾಧೀಶರು ಪದತ್ಯಾಗ ಮಾಡುತ್ತಾರೆ. ಇದನ್ನೇ ʻʻವಾಗ್ದಂಡನೆ  ಅಥವಾ ಮಹಾಭಿಯೋಗ ಎಂದು ಕರೆಯುತ್ತಾರೆ. ಆದರೆ ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸಲು ಮಹಾಭಿಯೋಗದ ಅಗತ್ಯ ಇರುವುದಿಲ್ಲ. ರಾಜ್ಯಸಭೆಯ ಹೆಚ್ಚಿನ ಸದಸ್ಯರು ಒಂದು ಮಂಡನೆಯನ್ನು ಹೊರಡಿಸುತ್ತಾರೆ.  ನಂತರ ಅದಕ್ಕೆ ಲೋಕಸಭೆಯ ಒಪ್ಪಿಗೆ ದೊರಕಿದರೆ ಉಪರಾಷ್ಟ್ರಪತಿಗಳು ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಅದೇ ರೀತಿ ಮುಖ್ಯ ಚುನಾವಣಾ ಅಧಿಕಾರಿಗಳು ಮಹಾಲೇಖಪಾಲಕರು, ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌ಗಳು ಹಾಗೂ ಮುಖ್ಯವಿಜಿಲೆನ್ಸ್ ಅಧಿಕಾರಿಗಳನ್ನು ಪದಚ್ಯುತಿಗೊಳಿಸುವಲ್ಲಿ ರಾಜ್ಯಸಭೆಯ ಪಾತ್ರವಿರುತ್ತದೆ.

5. ಚುನಾವಣಾ ಅಧಿಕಾರಗಳು: (Election Powers)

ರಾಜ್ಯಸಭೆಯ ಸದಸ್ಯರು ವಿಶೇಷ ಮತದಾನದ ಹಕ್ಕನ್ನು ಪಡೆದಿದ್ದಾರೆ. ಉದಾಹರಣೆ ರಾಜ್ಯಸಭೆಯ ಚುನಾಯಿತ ಸದಸ್ಯರು ಲೋಕಸಭೆ ಹಾಗೂ ಎಲ್ಲಾ ವಿಧಾನಸಭಾ ಸದಸ್ಯರೊಂದಿಗೆ ಸೇರಿ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುತ್ತಾರೆ. ಹಾಗೆಯೇ ರಾಜ್ಯಸಭೆಯ ಸದಸ್ಯರು ಹಾಗೂ ಲೋಕಸಭಾಸದಸ್ಯರು ಸೇರಿ ಉಪ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯಸಭಾ ಸದಸ್ಯರು ತಮ್ಮೊಳಗೆ ಒಬ್ಬನನ್ನು ರಾಜ್ಯಸಭಾ ಉಪಸಭಾಪತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

6. ಸಂವಿಧಾನ ತಿದ್ದುಪಡಿ ಅಧಿಕಾರ: (Power of Constitutional Amendments)

ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಯಾವುದೇ ಸದನದಲ್ಲಾದರೂ ಮಂಡಿಸಬಹುದು. ಸಂವಿಧಾನ ತಿದ್ದುಪಡಿ ಮಸೂದೆ ಮೊದಲು ರಾಜ್ಯಸಭೆಯಲ್ಲಿ ಮಂಡನೆಯಾದಾಗ ಅದರ ಅನುಮೋದನೆಗಾಗಿ ಲೋಕಸಭೆಗೆ ಕಳುಹಿಸಿಕೊಡಲಾಗುತ್ತದೆ. ಆದರೆ ಆ ಮಸೂದೆಯು ಶಾಸನವಾಗಿ ಹೊರ ಬರಬೇಕಾದರೆ ಸದನದಲ್ಲಿ ಹಾಜರಾಗಿರುವ ೨/೩  ಬಹುಮತದ ಸದಸ್ಯರ ಬೆಂಬಲ ಬೇಕು. ತಿದ್ದುಪಡಿ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸಭೆಯೇ ಸಾರ್ವಭೌಮತ್ವವನ್ನು  ಹೊಂದಿದೆ. ಒಂದು ವೇಳೆ ತಿದ್ದುಪಡಿಗೆ ಸಂಬಂಧಿಸಿದಂತೆ ಗೊಂದಲಗಳು ಉಂಟಾದರೆ ಜಂಟಿ ಸಮಾವೇಶದ ಮೂಲಕ ಸಮಸ್ಯೆಯನ್ನು ಬಗೆಹರಿಸುವ ವಿಧಾನ ಭಾರತದ ಸಂವಿಧಾನದಲ್ಲಿ ಇಲ್ಲ. ರಾಜ್ಯಸಭೆಯು ತಿದ್ದುಪಡಿ ಮಸೂದೆಯನ್ನು ಒಂದು ವೇಳೆ ಅಂಗೀಕರಿಸದೆ ಹೋದರೆ ತಿದ್ದುಪಡಿ ಮಸೂದೆಯು ಬಿದ್ದು ಹೋಗುತ್ತದೆ.

7. ತುರ್ತು ಪರಿಸ್ಥಿತಿಯನ್ನು ಅನುಮೋದಿಸುವುದು: (Passing the Emergency)

 ಸಂವಿಧಾನದ 352ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಒಂದು ತಿಂಗಳೊಳಗೆ ಸಂಸತ್ತಿನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇಲ್ಲವಾದರೆ ತುರ್ತು ಪರಿಸ್ಥಿತಿ ರದ್ದಾಗುತ್ತದೆ. ಒಂದು ವೇಳೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಲೋಕಸಭೆ ವಿಸರ್ಜನೆಗೊಂಡಿದ್ದರೆ ರಾಜ್ಯಸಭೆಯ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆದರೆ ಹೊಸ ಲೋಕಸಭೆಯು ಅಸ್ತಿತ್ವಕ್ಕೆ ಬಂದ ನಂತರ 30 ದಿನದೊಳಗೆ ತುರ್ತು ಪರಿಸ್ಥಿತಿಗೆ ಲೋಕಸಭೆಯು ಅಂಗೀಕಾರ ಪಡೆದುಕೊಳ್ಳಬೇಕು.

 8. ಇತರೆ ಅಧಿಕಾರಗಳು: (Other Powers)

ಸಂವಿಧಾನದ 249ನೇ ವಿಧಿಯ ಪ್ರಕಾರ ರಾಜ್ಯಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸಿದ ಮೂರನೇ ಎರಡಕ್ಕಿಂತ ಹೆಚ್ಚಿನ ಸದಸ್ಯರ ಬಹುಮತದೊಂದಿಗೆ ರಾಜ್ಯ ಪಟ್ಟಿಯ ವಿಷಯವನ್ನು ರಾಷ್ಟ್ರೀಯ ಮಹತ್ವವುಳ್ಳ ವಿಷಯವೆಂದು ತೀರ್ಮಾನಿಸಲಾಗಿದೆ.

ಸಂವಿಧಾನದ 312ನೇ ವಿಧಿಯಂತೆ ರಾಜ್ಯಸಭೆ ೨/೩  ಹೆಚ್ಚಿನ ಬಹುಮತದೊಂದಿಗೆ ನಿರ್ಣಯವನ್ನು ಅಂಗೀಕರಿಸಿ ಒಂದು ಅಥವಾ ಹೆಚ್ಚಿನ ಅಖಿಲ ಭಾರತೀಯ ಸೇವೆಗಳನ್ನು ರಚಿಸಬಹುದಾಗಿದೆ.

ಉಪಸಂಹಾರ

ಒಟ್ಟಾರೆ ರಾಜ್ಯಸಭೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಲೋಕಸಭೆಯ ಮೇಲೆ ಸಮತೋಲನ ಸಾಧಿಸುವುದರ ಮೂಲಕ ಸಂವಿಧಾನದ ಮೌಲ್ಯಗಳನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಶಾಸನ, ಸಂವಿಧಾನ ತಿದ್ದುಪಡಿ, ತುರ್ತು ಪರಿಸ್ಥಿತಿ ಹಾಗೂ ಚುನಾವಣಾ ಪ್ರಕ್ರಿಯೆಗಳಲ್ಲಿ ರಾಜ್ಯಸಭೆಯ ಪಾತ್ರ ಅನನ್ಯವಾಗಿದೆ. ಹೀಗಾಗಿ ರಾಜ್ಯಸಭೆಯ ಕಾರ್ಯಗಳು ಭಾರತೀಯ ಸಂಸತ್ತಿನ ಸ್ಥಿರತೆ ಮತ್ತು ಸಮರ್ಥತೆಗೆ ಬಲ ನೀಡುತ್ತವೆ.

42 ನೇ ಸಂವಿಧಾನ ತಿದ್ದುಪಡಿ

42 ನೇ ಸಂವಿಧಾನ ತಿದ್ದುಪಡಿ

ಭಾರತದ ಸಂವಿಧಾನವು ಜಾರಿಗೆಗೊಂಡ 25 ವರ್ಷಗಳ ಸಂವಿಧಾನಾತ್ಮಕ ಸುಧಾರಣೆಗಾಗಿ ಇಂದಿರಾಗಾಂಧಿ ನೇತೃತ್ವದ ಸರ್ಕಾರವು ಸ್ವರ್ಣಸಿಂಗ್‌ ಸಮಿತಿಯನ್ನು ನೇಮಕ ಮಾಡಿತು. ಈ ಸಮಿತಿಯ ಶಿಫಾರಸ್ಸಿನಂತೆ ಸಂವಿಧಾನಕ್ಕೆ 42 ನೇ ತಿದ್ದುಪಡಿ ಮಾಡಿ 1976 ಡಿಸೆಂಬರ್‌ 16 ರಂದು ಆದೇಶ ಹೊರಡಿಸಿತು. ಸಂವಿಧಾನ ಜಾರಿಯ ನಂತರ ತಿದ್ದುಪಡಿಗೊಂಡ 42 ನೇ ವಿಧಿಯು ಉಳಿದೆಲ್ಲಾ ತಿದ್ದುಪಡಿಗಳಿಗಿಂತ ಅತ್ಯಂತ ವಿಶಾಲವಾದ ಮತ್ತು ವಿವಾದಾತ್ಮಕವಾದ ತಿದ್ದುಪಡಿ ಎನಿಸಿಕೊಂಡಿತು. 1950ರ ಮೂಲ ಸಂವಿಧಾನದ ಪ್ರಸ್ತಾವನೆಯ 7ನೇ ಅನುಸೂಚಿ, 53 ವಿಧಿಗಳು ಮತ್ತು ಪ್ರಮುಖ ತತ್ವಗಳಲ್ಲಿ ಬದಲಾವಣೆಗೆ ಕಾರಣವಾದ ತಿದ್ದುಪಡಿಯು ಕಿರು ಸಂವಿಧಾನ ಎನಿಸಿಕೊಂಡಿದೆ. ಈ ತಿದ್ದುಪಡಿಯ ಬದಲಾವಣೆಗಳು ಈ ಕೆಳಗಿನಂತಿವೆ.

a. ಪ್ರಸ್ತಾವನೆ:

ಈ ತಿದ್ದುಪಡಿಯು ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯಾತೀತ ಹಾಗೂ ಅಖಂಡತೆ ಎಂಬ ಪದಗಳನ್ನು ಸೇರಿಸಿತು.

b. ರಾಜ್ಯನೀತಿ ನಿರ್ದೇಶಕ ತತ್ವಗಳು:

 ಈಗಾಗಲೇ ಸಂವಿಧಾನದ 4ನೇ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ರಾಜ್ಯ ನಿರ್ದೇಶಕ ತತ್ವಗಳಿಗೆ ಮೂರು ಹೊಸ ನಿರ್ದೇಶನಗಳನ್ನು ಸೇರಿಸಲಾಯಿತು. ಈಗಾಗಲೇ ಜಾರಿಯಲ್ಲಿದ್ದ 39 ನೇ ವಿಧಿಯಲ್ಲಿದ್ದ ಅಂಶಗಳ ಜೊತೆಗೆ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಂಬಂಧಿಸಿದ ಅಂಶಗಳನ್ನು ಹೊಸದಾಗಿ ಸೇರಿಸಲಾಯಿತು. ಹಾಗೆಯೇ ಬಡವರಿಗೆ ಉಚಿತ ನ್ಯಾಯ ಮತ್ತು ಸಮಾನ ನ್ಯಾಯವನ್ನು ಬಲಗೊಳಿಸುವ ಕಾನೂನನ್ನು 39(A) ವಿಧಿಯಲ್ಲಿ, ಉದ್ಯಮದಲ್ಲಿ ಕಾರ್ಮಿಕರಿಗೆ ಅವಕಾಶ ಒದಗಿಸುವ 43(A) ವಿಧಿಯನ್ನು ಹಾಗೂ ಪರಿಸರ ರಕ್ಷಣೆ ಹಾಗೂ ವನ್ಯ ಜೀವಿ ರಕ್ಷಣೆ 48(A) ವಿಧಿಯನ್ನು ಸಂವಿಧಾಕ್ಕೆ ಹೊಸದಾಗಿ ತಿದ್ದುಪಡಿ ಮಾಡಿ ಸೇರಿಸಲಾಯಿತು.

c. ಮೂಲಭೂತ ಕರ್ತವ್ಯಗಳು:

ಸಂವಿಧಾನಕ್ಕೆ 4(A) ಭಾಗವನ್ನು ಸೇರಿಸುವ ಮೂಲಕ ಸಂವಿಧಾನದ ತಿದ್ದುಪಡಿ ಮಾಡಲಾಯಿತು. ಈ ಭಾಗದಲ್ಲಿ ಭಾರತೀಯರು ಪಾಲಿಸಬೇಕಾದ 10 ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ 51(A) ವಿಧಿಯಲ್ಲಿ ಸೇರಿಸಲ್ಪಟ್ಟವು.

d. ಸಂಸತ್ತು:

ಈ ತಿದ್ದುಪಡಿಯ ಮೂಲಕ ಸಂಸತ್ತಿಗೆ ಸಂಬಂಧಿಸಿದ ವಿವಿಧ ನಿಬಂಧನೆಗಳನ್ನು ಬದಲಾಯಿಸಲು ಸಾಧ್ಯವಾಯಿತು. ರಾಜ್ಯ ಶಾಸಕಾಂಗಗಳು ಮತ್ತು ಸಂಸತ್ತಿಗೆ ಕಲಾಪಗಳು ಜರುಗಲು ಕನಿಷ್ಠ 10% ರಷ್ಟು ಸದಸ್ಯರ ಕೋರಂ ಸಂಖ್ಯೆಯನ್ನು ರದ್ದುಗೊಳಿಸಿತು. ಸಂಸತ್ತು ಅಂಗೀಕರಿಸುವ ಶಾಸನಗಳನ್ನು ನ್ಯಾಯಾಂಗದ ವಿಮರ್ಶಾಧಿಕಾರದಿಂದ ಹೊರಗಿಡಲಾಯಿತು. ರಾಷ್ಟ್ರಪತಿಯು ಸಚಿವ ಸಂಪುಟದ ಸಲಹೆಯನ್ನು ತಿರಸ್ಕರಿಸದಂತೆ ಬದಲಾವಣೆ ತರಲಾಯಿತು.

e. ನ್ಯಾಯಾಂಗ:

ಉಚ್ಛನ್ಯಾಯಾಲಯಗಳು ರಿಟ್‌ ಹೊರಡಿಸುವ ಅಧಿಕಾರವನ್ನು ಈ ತಿದ್ದುಪಡಿಯಿಂದ ಮೊಟಕುಗೊಳಿಸಲಾಯಿತು. ಮುಂದುವರೆದು ಸಂವಿಧಾನಕ್ಕೆ 14(A) ಭಾಗವನ್ನು ಸೇರಿಸಿ ಆಡಳಿತಾತ್ಮಕ ನ್ಯಾಯಮಂಡಳಿಯನ್ನು ರಚಿಸಲು ಸಂಸತ್ತಿಗೆ ಅವಕಾಶ ಕಲ್ಪಿಸಲಾಯಿತು.

f. ತುರ್ತು ಪರಿಸ್ಥಿತಿ:

ಭಾರತದ ಭದ್ರತೆಗೆ ಆತಂಕ ಎದುರಾದಾಗ ಭಾರತದ ಯಾವುದೇ ಮೂಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದರೆ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಇನ್ನುಳಿದ ರಾಜ್ಯಗಳು ನಡೆದುಕೊಳ್ಳಬೇಕೆಂದು ಈ ತಿದ್ದುಪಡಿಯ ಮೂಲಕ ತಿಳಿಸಲಾಯಿತು. ತುರ್ತು ಪರಿಸ್ಥಿತಿ ಘೋಷಣೆಯಾದರೆ ಪ್ರಜೆಗಳ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಲು

ಅವಕಾಶ ಕಲ್ಪಿಸಲಾಯಿತು. ಸಂವಿಧಾನದ 356ನೇ ವಿಧಿಯಂತೆ ತುರ್ತು ಪರಿಸ್ಥಿತಿ ಘೋಷಣೆಯಾದರೆ 6 ತಿಂಗಳು ಇದ್ದ ಅವಧಿಯು 1 ವರ್ಷಕ್ಕೆ ವಿಸ್ತಾರಗೊಂಡಿತು.

g. ಏಳನೇ ಅನುಸೂಚಿ:

ಸಂವಿಧಾನ ಜಾರಿಗೊಂಡಾಗಿನಿಂದ ರಾಜ್ಯ ಪಟ್ಟಿಯಲ್ಲಿದ್ದ ಶಿಕ್ಷಣ, ಅರಣ್ಯ, ವನ್ಯಜೀವಿ, ಪಕ್ಷಿರಕ್ಷಣೆ, ತೂಕ ಮತ್ತು ಅಳತೆ, ನ್ಯಾಯಿಕ ಆಡಳಿತ, ಸರ್ವೋಚ್ಛ ಮತ್ತು ಉಚ್ಛನ್ಯಾಯಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ನ್ಯಾಯಾಲಯಗಳ ಸಂಘಟನೆಯ ವಿಷಯವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು.

ಉಪಸಂಹಾರ 

ಒಟ್ಟಿನಲ್ಲಿ 42ನೇ ಸಂವಿಧಾನ ತಿದ್ದುಪಡಿ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಇದು ಆಡಳಿತದ ಬಲವರ್ಧನೆ ಜೊತೆಗೆ ನ್ಯಾಯಾಂಗ ಮತ್ತು ಪ್ರಜೆಗಳ ಹಕ್ಕುಗಳ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿತು. ಅನೇಕ ಅಂಶಗಳು ನಂತರದ ತಿದ್ದುಪಡಿಗಳ ಮೂಲಕ ಪರಿಷ್ಕೃತಗೊಂಡರೂ, ಇದರ ಪ್ರಭಾವ ಅಳಿಸಲಾಗದಂತಿದೆ. ಅದರೊಂದಿಗೆ, 42ನೇ ತಿದ್ದುಪಡಿ ಸಂವಿಧಾನದ ಶಕ್ತಿ ಮತ್ತು ಸವಾಲುಗಳನ್ನು ಅರಿಯಲು ಸಹಾಯಕವಾಗಿದೆ.

ಮೂಲಭೂತ ಕರ್ತವ್ಯಗಳು

ಮೂಲಭೂತ ಕರ್ತವ್ಯಗಳು

“ ಭಾರತೀಯ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶಕ್ಕಾಗಿ ನಿರ್ವಹಿಸಬೇಕಾದ ಕಾರ್ಯಗಳನ್ನು ಮೂಲಭೂತ ಕರ್ತವ್ಯಗಳು ಎಂದು ಕರೆಯಲಾಗುತ್ತದೆ.” ಸಂವಿಧಾನದ ಕರ್ತವ್ಯಗಳು ಮೂಲಭೂತ ಹಕ್ಕುಗಳನ್ನು ಗೊತ್ತುಪಡಿಸಿದ ಹಾಗೆ ಮೂಲಭೂತ ಹಕ್ಕುಗಳನ್ನು ಸಹ ಸಂವಿಧಾನದಲ್ಲಿ ನಿರ್ಧರಿಸುವ ಅಗತ್ಯ ಹಿಂದಿನ ಸಂವಿಧಾನ ರಚನಾಕಾರರಿಗೆ ಕಾಣಲಿಲ್ಲ. ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿಯೇ ಹೋಗುವುದರಿಂದ ಯಾರೂ ಸಹ ಕರ್ತವ್ಯಗಳನ್ನು ನಿರ್ವಹಿಸದೇ ಹಕ್ಕುಗಳನ್ನು ಅನುಭವಿಸಲು ಸಾಧ್ಯವಿಲ್ಲ ಎಂಬ ಭರವಸೆಯ ಮೇಲೆ ಹಾಗೆ ಮಾಡಲಾಯಿತು ಎನ್ನಲಾಗಿದೆ. ಆದರೆ ರಷ್ಯಾ, ಚೈನಾ ಹಾಗೂ ಇತರೆ ಸಮಾಜವಾದಿ ದೇಶಗಳಲ್ಲಿ ಮೂಲಭೂತ ಕರ್ತವ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದನ್ನು ನೋಡಬಹುದಾಗಿದೆ. ಜಪಾನಿನಲ್ಲಿಯೂ ಸಹ ಹಕ್ಕುಗಳ ಜೊತೆಗೆ ಕರ್ತವ್ಯಗಳೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಈ ಕಾರಣದಿಂದಾಗಿ ಹಕ್ಕು ಮತ್ತು ಕರ್ತವ್ಯಗಳನ್ನು ಒಂದು ನಾಣ್ಯದ ಎರಡು ಮುಖಗಳೆಂದು ಹೇಳಬಹುದಾಗಿದೆ. ಇದನ್ನರಿತ ಭಾರತ ಸಂವಿಧಾನದ ರಚನಾಕಾರರು ಪಟ್ಟಿ ಮಾಡಿದ ಕರ್ತವ್ಯಗಳನ್ನು ಪ್ರಜೆಗಳು ಸುಮಾರು ಮೂರು ದಶಕಗಳ ಬಳಿಕವೂ ಉದಾಸೀನ ಮಾಡುತ್ತಲೇ ಬಂದರು. ಇದನ್ನರಿತ ಶ್ರೀಮತಿ ಇಂದಿರಾಗಾಂಧಿ ಸರ್ಕಾರ 1975 ಫೆಬ್ರುವರಿ ತಿಂಗಳಲ್ಲಿ ಸಂವಿಧಾನ ಸುಧಾರಣೆಗಾಗಿ ಸ್ವರ್ಣಸಿಂಗ್‌ ರವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಅದೇ ವರ್ಷ ಮೇ ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಈ ಸಮಿತಿಯು ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಸೇರಿಸಲು ಶಿಫಾರಸ್ಸು ಮಾಡಿತು. ಸ್ವರ್ಣ ಸಿಂಗ್‌ ಸಮಿತಿಯ ಶಿಫಾರಸ್ಸಿನನ್ವಯ ಸಂಸತ್ತು 1976 ರಲ್ಲಿ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಭಾರತೀಯ ಪ್ರಜೆಗಳ ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರಿಸಿತು. ಈ ತಿದ್ದುಪಡಿಯ ಪ್ರಕಾರ ಸಂವಿಧಾಕ್ಕೆ 4(A) ಭಾಗ ಮತ್ತು 51(A) ವಿಧಿಯನ್ನು ಹೊಸದಾಗಿ ಸೇರಿಸಿ 10 ಮೂಲಭೂತ ಕರ್ತವ್ಯಗಳನ್ನು ನಿಗದಿಗೊಳಿಸಿತು. ಮುಂದುವರೆದು 2002 ರಲ್ಲಿ ಸಂವಿಧಾನದ 86 ನೇ ತಿದ್ದುಪಡಿಯ ಮೂಲಕ ಮತ್ತೊಂದು ಕರ್ತವ್ಯವನ್ನು ಸೇರಿಸಿತು. ಪ್ರಸ್ತುತ ಈಗ 11 ಮೂಲಭೂತ ಕರ್ತವ್ಯಗಳಿದ್ದು ಅವುಗಳು ಈ ಕೆಳಗಿನಂತಿವೆ.

1. ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ಸಂವಿಧಾನಾತ್ಮಕ ಆದರ್ಶ ಹಾಗೂ ಸಂಸ್ಥೆಗಳನ್ನು ಗೌರವಿಸುವುದು:

ಭಾರತದ ಪ್ರಜೆಗಳಾದ ನಾವು ರಾಷ್ಟ್ರಗೀತೆಯನ್ನು ನಿಗದಿಪಡಿಸಿದ ಸಮಯದಲ್ಲಿಯೇ ಹಾಡಿ ಮುಗಿಸಬೇಕು. ಪ್ರತಿಯೊಬ್ಬರೂ ರಾಷ್ಟ್ರಗೀತೆಯನ್ನು ಹಾಡುವಾಗ ಎದ್ದು ನಿಂತು ಗೌರವ ಸೂಚಿಸಬೇಕು. 2002 ರ ಧ್ವಜ ಸಂಹಿತೆಯ ಪ್ರಕಾರ ಅದನ್ನು ಉಪಯೋಗಿಸುವ ಮೂಲಕ ಗೌರವ ಕೊಡಬೇಕು. ಇದರೊಂದಿಗೆ ಸಂವಿಧಾನದ ಆದರ್ಶಗಳಾದ ಸಮಾಜವಾದ, ಜಾತ್ಯಾತೀತತೆ, ಗಣತಂತ್ರ ವ್ಯವಸ್ಥೆ, ಸಾಮಾಜಿಕ ನ್ಯಾಯ ಮುಂತಾದವುಗಳನ್ನು ಪಾಲಿಸುವ ಮೂಲಕ ಗೌರವಿಸಬೇಕು.ಇದು ಅಲ್ಲದೆ ಸಂಸತ್ತು, ಸರ್ವೋಚ್ಛ ನ್ಯಾಯಾಲಯ, ಚುನಾವಣಾ ಆಯೋಗ ಮುಂತಾದ ಸಂಸ್ಥೆಗಳನ್ನು ಸಹ ಗೌರವಿಸಿ ಅವುಗಳಿಗೆ ವಿಧೇಯತೆಯನ್ನು ತೋರಬೇಕು. ರಾಷ್ಟ್ರ ರಕ್ಷಣೆಗಾಗಿ ದುಡಿಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ.

2. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಉದಾತ್ತ ಮೌಲ್ಯಗಳನ್ನು ಪಾಲಿಸುವುದು:

ಭಾರತವು ಸುಮಾರು 300 ವರ್ಷಗಳಿಗೂ ಅಧಿಕ ವರ್ಷಗಳ ಕಾಲ ಬ್ರಿಟೀಷರ ದಾಸ್ಯಕ್ಕೆ ಒಳಗಾಗಿತ್ತು. ಬ್ರಿಟೀಷರಿಂದ ಭಾರತವನ್ನು ಬಿಡುಗಡೆಗೊಳಿಸಲು ದೇಶದ ಮಹಾನ್‌ ನಾಯಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದರು. ಅನೇಕ ಮಹನೀಯರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದರು. ಬ್ರಿಟೀಷರ ವಿರುದ್ಧ ನಿರಂತರ ಹೋರಾಟ ನಡೆಯಿತು. ಈ ಹೋರಾಟಕ್ಕೆ ಫ್ರಾನ್ಸಿನ ಕ್ರಾಂತಿಯ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳು ಭಾರತೀಯರ ಮೇಲೆ ಪ್ರಭಾವ ಬೀರಿದವು. ಅಂತಿಮವಾಗಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಡುವಲ್ಲಿ ಯಶಸ್ವಿಯಾದರು. ಹಾಗಾಗಿ ನಮ್ಮ ಹೋರಾಟಗಾರರು ಪಾಲಿಸಿಕೊಂಡು ಬಂದಿದ್ದ ತ್ಯಾಗ, ಬಲಿದಾನ ಹಾಗೂ ಅಹಿಂಸೆ ಇತ್ಯಾದಿ ಉದಾತ್ತ ಮೌಲ್ಯಗಳನ್ನು ಇಂದಿನ ನಮ್ಮ ಪ್ರಜೆಗಳು ತಮ್ಮ ನಿತ್ಯ ಜೀವನದಲ್ಲಿ ಪಾಲಿಸುವುದು ಅವರ ಆದ್ಯ ಕರ್ತವ್ಯಗಳಾಗಿವೆ.

3. ಭಾರತದ ಸಾರ್ವಭೌಮತೆ, ಐಕ್ಯತೆ ಹಾಗೂ ಅಖಂಡತೆಯನ್ನು ಎತ್ತಿ ಹಿಡಿಯುವುದು:

ಭಾರತದ ಪರಮಾಧಿಕಾರಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯಗಳನ್ನು ಮಾಡದಂತೆ ಪ್ರಜೆಗಳು ಎಚ್ಚರವಹಿಸುವುದು ಬಹಳ ಮುಖ್ಯವಾದ ಕರ್ತವ್ಯ. ಪ್ರಜೆಗಳು ತಮ್ಮ ನಡುವಿನ ಜಾತಿ, ಧರ್ಮ, ಮೇಲು-ಕೀಳು, ಸ್ಪೃಶ್ಯ –ಅಸ್ಪೃಶ್ಯ , ಬಡವ-ಶ್ರೀಮಂತ, ಧರ್ಮ, ಪ್ರದೇಶ, ಸ್ಥಾನಮಾನ ಹಾಗೂ ಭಾಷೆಗಳನ್ನು ಬದಿಗೊತ್ತಿ ನಾವೆಲ್ಲಾ ಭಾರತೀಯರು ಎನ್ನುವ ಭಾವನೆಗಳನ್ನು ಮೂಡಿಸಿಕೊಳ್ಳಬೇಕು. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ದೇಶ ಎಂಬುದನ್ನು ಯಾವ ಪ್ರಜೆಗಳೂ ಮರೆಯಬಾರದು. ಸಹೋದರತೆಯನ್ನು ರೂಢಿಸಿಕೊಂಡು ನಾವೆಲ್ಲಾ ಒಂದೇ ಕುಟುಂಬದ ಸದಸ್ಯರು ಎನ್ನುವ ತತ್ವವನ್ನು ಎಲ್ಲಡೆ ಸಾರಬೇಕು. ಸರ್ವೇಜನ ಸುಖಿನೋಭವಂತು ಮತ್ತು ವಸುದೈವ ಕುಟುಂಬಕಂ ಎನ್ನುವ ಎರಡು ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಖಂಡತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಿರುವುದೇ ಪ್ರಜೆಗಳ ಮೂಲ ಕರ್ತವ್ಯವಾಗಬೇಕು.

4. ದೇಶದ ರಕ್ಷಣೆಗೆ ಕರೆ ಬಂದಾಗ ದೇಶಸೇವೆಗೆ ಸದಾ ಸಿದ್ಧರಾಗಿರುವುದು:

ಭಯೋತ್ಪಾದನೆ ಹಾಗೂ ಕೋಮುಭಾವನೆಯಿಂದ ಪ್ರತಿಯೊಂದು ದೇಶಗಳು ಇಂದು ಸಂಕಷ್ಟವನ್ನು ಎದುರಿಸುತ್ತಿವೆ. ಅದರಲ್ಲೂ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇದು ಸರ್ವೇಸಾಮನ್ಯವಾಗಿದೆ. ಆದುದರಿಂದ ದೇಶ ಇಂತಹ ಆಪತ್ತಿಗೆ ಸಿಲುಕಿದಾಗ ಪ್ರಜೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಬೇಕಾಗುತ್ತದೆ. ಪ್ರಜೆಗಳು ಜೀವ ನೀಡಿದರೆ ದೇಶ ಜೀವಂತವಾಗಿರುತ್ತದೆ. ಮಾತೃಭೂಮಿಗೋಸ್ಕರ ಪೌರನು ಯಾವ ತ್ಯಾಗಕ್ಕೂ ಸಿದ್ಧನಿರಬೇಕು. ಅದು ಆತನ ಕರ್ತವ್ಯವೂ ಹೌದು ಯುದ್ಧದ ಸಂದರ್ಭದಲ್ಲಿ ಅಷ್ಟೇ ಅಲ್ಲದೇ ಪ್ರವಾಹ, ಭೂಕಂಪ, ನೆರೆಹಾವಳಿ, ಪ್ರಕೃತಿ ವಿಕೋಪಗಳು ಮುಂತಾದ ಸಂದರ್ಭದಲ್ಲಿಯೂ ಪ್ರಜೆಗಳು ಧೃತಿಗೆಡದೆ ಸಹಾಯಹಸ್ತ ನೀಡಬೇಕು.

5. ಭಾರತದ ಸಾರ್ವಭೌಮತೆ, ಐಕ್ಯತೆ ಹಾಗೂ ಅಖಂಡತೆಯನ್ನು ಎತ್ತಿ ಹಿಡಿಯುವುದು:

ಭಾರತದ ಪರಮಾಧಿಕಾರಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯಗಳನ್ನು ಮಾಡದಂತೆ ಪ್ರಜೆಗಳು ಎಚ್ಚರವಹಿಸುವುದು ಬಹಳ ಮುಖ್ಯವಾದ ಕರ್ತವ್ಯ. ಪ್ರಜೆಗಳು ತಮ್ಮ ನಡುವಿನ ಜಾತಿ, ಧರ್ಮ, ಮೇಲು-ಕೀಳು, ಸ್ಪೃಶ್ಯ –ಅಸ್ಪೃಶ್ಯ , ಬಡವ-ಶ್ರೀಮಂತ, ಧರ್ಮ, ಪ್ರದೇಶ, ಸ್ಥಾನಮಾನ ಹಾಗೂ ಭಾಷೆಗಳನ್ನು ಬದಿಗೊತ್ತಿ ನಾವೆಲ್ಲಾ ಭಾರತೀಯರು ಎನ್ನುವ ಭಾವನೆಗಳನ್ನು ಮೂಡಿಸಿಕೊಳ್ಳಬೇಕು. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ದೇಶ ಎಂಬುದನ್ನು ಯಾವ ಪ್ರಜೆಗಳೂ ಮರೆಯಬಾರದು. ಸಹೋದರತೆಯನ್ನು ರೂಢಿಸಿಕೊಂಡು ನಾವೆಲ್ಲಾ ಒಂದೇ ಕುಟುಂಬದ ಸದಸ್ಯರು ಎನ್ನುವ ತತ್ವವನ್ನು ಎಲ್ಲಡೆ ಸಾರಬೇಕು. ಸರ್ವೇಜನ ಸುಖಿನೋಭವಂತು ಮತ್ತು ವಸುದೈವ ಕುಟುಂಬಕಂ ಎನ್ನುವ ಎರಡು ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಖಂಡತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಿರುವುದೇ ಪ್ರಜೆಗಳ ಮೂಲ ಕರ್ತವ್ಯವಾಗಬೇಕು.

6. ದೇಶದ ರಕ್ಷಣೆಗೆ ಕರೆ ಬಂದಾಗ ದೇಶಸೇವೆಗೆ ಸದಾ ಸಿದ್ಧರಾಗಿರುವುದು:

ಭಯೋತ್ಪಾದನೆ ಹಾಗೂ ಕೋಮುಭಾವನೆಯಿಂದ ಪ್ರತಿಯೊಂದು ದೇಶಗಳು ಇಂದು ಸಂಕಷ್ಟವನ್ನು ಎದುರಿಸುತ್ತಿವೆ. ಅದರಲ್ಲೂ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇದು ಸರ್ವೇಸಾಮನ್ಯವಾಗಿದೆ. ಆದುದರಿಂದ ದೇಶ ಇಂತಹ ಆಪತ್ತಿಗೆ ಸಿಲುಕಿದಾಗ ಪ್ರಜೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಬೇಕಾಗುತ್ತದೆ. ಪ್ರಜೆಗಳು ಜೀವ ನೀಡಿದರೆ ದೇಶ ಜೀವಂತವಾಗಿರುತ್ತದೆ. ಮಾತೃಭೂಮಿಗೋಸ್ಕರ ಪೌರನು ಯಾವ ತ್ಯಾಗಕ್ಕೂ ಸಿದ್ಧನಿರಬೇಕು. ಅದು ಆತನ ಕರ್ತವ್ಯವೂ ಹೌದು ಯುದ್ಧದ ಸಂದರ್ಭದಲ್ಲಿ ಅಷ್ಟೇ ಅಲ್ಲದೇ ಪ್ರವಾಹ, ಭೂಕಂಪ, ನೆರೆಹಾವಳಿ, ಪ್ರಕೃತಿ ವಿಕೋಪಗಳು ಮುಂತಾದ ಸಂದರ್ಭದಲ್ಲಿಯೂ ಪ್ರಜೆಗಳು ಧೃತಿಗೆಡದೆ ಸಹಾಯಹಸ್ತ ನೀಡಬೇಕು.

7. ಪ್ರಜೆಗಳ ನಡುವೆ ಸಾಮರಸ್ಯ ಮತ್ತು ಸಹೋದರತೆಯನ್ನು ಬೆಳೆಸುವುದು ಹಾಗೂ ಮಹಿಳೆಯರನ್ನು ಗೌರವಿಸುವುದು:

ಭಾರತವು ವೈವಿಧ್ಯತೆಗಳಿಂದ ಕೂಡಿದ ಏಕತೆಯ ರಾಷ್ಟ್ರವಾಗಿದೆ. ಇಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಪ್ರಾದೇಶಿಕ ಹಾಗೂ ಭಾಷಾ ವೈವಿಧ್ಯತೆ ಇದೆ. ಇವುಗಳ ನಡುವೆ ಸಾಮರಸ್ಯತೆಯನ್ನು ಉಂಟುಮಾಡಿ ಸಮಾಜದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನಾತ್ಮಕ ಬೆಸುಗೆಯನ್ನು ಹಾಕಬೇಕಾದದ್ದು ಅಗತ್ಯವಾಗಿದೆ. ಪ್ರತಿಯೊಬ್ಬ ಪ್ರಜೆಯೂ ಸಹೋದರತೆಯ ಭಾವನೆಯನ್ನು ಮೂಡಿಸಿಕೊಳ್ಳಬೇಕು. ಜೊತೆಗೆ ಸ್ತ್ರೀಯರಿಗೆ ಗೌರವ ಕೊಡಬೇಕು. ಯಾವುದೇ ಸಮಾಜ ಸ್ತ್ರೀಯರನ್ನು ಕಡೆಗಣಿಸಿದರೆ ಆ ಸಮಾಜ ಉದ್ಧಾರವಾಗದು ಎಂಬುದನ್ನೂ ಅರಿತುಕೊಳ್ಳಬೇಕು. ಸ್ತ್ರೀಯರನ್ನು ಗೌರವಿಸುವುದೇ ಪ್ರಜೆಗಳ ಆದ್ಯ ಕರ್ತವ್ಯವಾಗಬೇಕು.

8. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಗೌರವಿಸುವುದು:

ಪ್ರಾಚೀನ ಕಾಲದಿಂದಲೂ ಭಾರತವು ಶ್ರೀಮಂತ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ. ಇಲ್ಲಿ ಭವ್ಯ ಕಲಾಪರಂಪರೆ, ಭಾರತೀಯ ವಾಸ್ತುಶಿಲ್ಪ, ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ಲಲಿತ ಕಲೆಗಳು ಒಂದೊಂದು ಕ್ಷೇತ್ರದಲ್ಲಿ ತನ್ನದೇ ಆದ ಸೊಬಗಿನಿಂದ ಕಂಗೊಳಿಸುತ್ತಿದೆ. ಮಹಾರಾಷ್ಟ್ರದ ಅಜಂತಾ, ಎಲ್ಲೋರಾ ಹಾಗೂ ಎಲಿಫೆಂಟಾ, ಕರ್ನಾಟಕದ ಬಾದಾಮಿಯಲ್ಲಿ ಕಂಡುಬರುವ ಭಿತ್ತಿಚಿತ್ರಗಳು ಮಥುರಾದ ದೇವಾಲಯಗಳು, ಅಮರಾವತಿ, ನಾಗಾರ್ಜುನಕೊಂಡ, ಸಾಂಚಿ ಕಾರ್ಲೆಗಳಲ್ಲಿನ ಬೌದ್ಧ ಸ್ತೂಪಗಳು ಮತ್ತು ಮಧುರೈ, ಕಾಂಚಿ ಹಾಗೂ ತಂಜಾವೂರುಗಳಲ್ಲಿನ ದೇವಾಲಯಗಳು, ಹಂಪೆ, ಹಳೇಬೀಡು, ಬೇಲೂರಿನ ಶಿಲ್ಪಗಳು, ಗುಲಬರ್ಗಾ, ಬೀದರ್‌ ಹಾಗೂ ಬಿಜಾಪುರದಲ್ಲಿನ ಮಸೀದಿಗಳು, ಅರಮನೆಗಳು, ಉದ್ಯಾನವನಗಳು ಒಂದೇ ಎರಡೇ ಹಲವಾರು ಸಾಂಸ್ಕೃತಿಕ ಶ್ರೀಮಂತಿಕೆಯ ಅಧ್ಬುತಗಳು. ಇಂತಹ ಶ್ರೀಮಂತಿಕೆಯನ್ನು ಭಾರತೀಯರಾದ ನಾವುಗಳು ಸದಾ ಗೌರವಿಸುತ್ತಾ ಮುಂದಿನ ಪೀಳಿಗೆಯು ಸಹ ಅವುಗಳನ್ನು ಗೌರವಿಸುವಂತೆ ಮಾಡಬೇಕಾದುದು ನಮ್ಮ ಕರ್ತವ್ಯವಾಗಿದೆ.

9. ಪರಿಸರ ಸಂರಕ್ಷಣೆ:

ಭಾರತವು ಒಂದು ಕಡೆ ನೆಲ ಹಾಗೂ ಮೂರುಕಡೆಗಳಲ್ಲಿ ಸಾಗರಗಳನ್ನು ಹೊಂದಿ ಪರ್ಯಾಯ ಪ್ರಸ್ಥಭೂಮಿ ಎಂದು ಹೆಸರಾಗಿದೆ. ದೇಶದಲ್ಲಿ ಅರಣ್ಯ, ಸಸ್ಯಸಂಪತ್ತು, ಪ್ರಾಣಿಸಂಪತ್ತು, ಪಕ್ಷಿಸಂಕುಲ ತುಂಬಿ ತುಳುಕುತ್ತಿದೆ. ಆದರೆ ಇಂದಿನ ಮಿತಿಮೀರಿದ ಜನಸಂಖ್ಯೆಯಿಂದಾಗಿ ಭಾರತದ ಪರಿಸರ ಹಿಂದೆಂದಿಗಿಂತಲೂ ಇಂದು ಕಲುಷಿತಗೊಂಡಿದೆ. ಅರಣ್ಯಗಳು ಕಡಿಮೆಯಾಗುತ್ತಿವೆ. ಜಲಮೂಲಗಳು ಬತ್ತಿಹೋಗುತ್ತಿವೆ. ಜಲಚರಗಳು ನಾಶವಾಗುತ್ತಿವೆ. ವನ್ಯಪ್ರಾಣಿಗಳು ಕಾಣೆಯಾಗಿವೆ. ವಾಯುಮಾಲಿನ್ಯ, ಜಲಮಾಲಿನ್ಯ ಹಾಗೂ ಭೂಮಾಲಿನ್ಯದಿಂದಾಗಿ ರೋಗರುಜಿನಗಳು ದಿನೇ ದಿನೇ ಅಟ್ಟಹಾಸ ಮೆರೆಯುತ್ತಿವೆ. ಹಾಗಾಗಿ ಭಾರತೀಯರು ಪರಿಸರವನ್ನು ರಕ್ಷಿಸಿ ದೇಶವನ್ನು ಇಂತಹ ಅಪಾಯಗಳಿಂದ ಪಾರುಮಾಡುವ ಹೊಣೆಗಾರಿಕೆಯನ್ನು ಹೊರಬೇಕಾದುದು ಅನಿವಾರ್ಯವಾಗಿದೆ.

10. ವೈಜ್ಞಾನಿಕ ಮನೋಭಾವವನನ್ನು ಬೆಳಿಸಿಕೊಳ್ಳುವುದು:

ಭಾರತದ ಮನುಕುಲಕ್ಕೆ ಮಾರಕವಾದ ಜಾತೀಯತೆ, ಸಂಕುಚಿತ ಮನೋಭಾವ, ಭಾಷಾ ವೈವಿಧ್ಯತೆ, ಪ್ರಾದೇಶಿಕತೆ, ಕೋಮುವಾದ, ಅಸ್ಪೃಶ್ಯತೆ, ಕಂದಾಚಾರಗಳು, ಪೂರ್ವಾಗ್ರಹ, ಮೌಢ್ಯಗಳು, ರೂಢಿ ಸಂಪ್ರದಾಯಗಳು ಮತ್ತು ಸಾಮಾಜಿಕ ಅನಿಷ್ಟಗಳಾದ ಸತಿ, ದೇವದಾಸಿ ಹಾಗೂ ವೇಶ್ಯಾವೃತ್ತಿ ಮುಂತಾದವುಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಮಾನವೀಯ ಗುಣಗಳಾದ ದಯೆ, ಕರುಣೆ, ಅನುಕಂಪ, ಸಹಕಾರ, ತ್ಯಾಗ ಮುಂತಾದವುಗಳನ್ನು ಅಳವಡಿಸಿಕೊಳ್ಳಬೇಕು.

12. ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ ಗೌರವಿಸುವುದು:

ಸ್ವತಂತ್ರ ಭಾರತದಲ್ಲಿ ನಡೆಯುವ ಸಾರ್ವಜನಿಕ ಪ್ರತಿಭಟನೆ, ಹರತಾಳ ಹಾಗೂ ಹಿಂಸಾಚಾರದಂತಹ ಸಂದರ್ಭಗಳಲ್ಲಿ ಭಾರತೀಯರು ಅದರಲ್ಲೂ ಯುವಕರು ಸಾರ್ವಜನಿಕ ಆಸ್ತಿಗಳನ್ನು ನಾಶಪಡಿಸುವುದು, ಕಟ್ಟಡಗಳಿಗೆ ಕಲ್ಲು ಎಸೆಯುವುದು, ಬಸ್ಸುಗಳಿಗೆ ಬೆಂಕಿ ಹಚ್ಚುವುದು ಮುಂತಾದ ಹಿಂಸಾಕೃತ್ಯಗಳಲ್ಲಿ ತೊಡಗುತ್ತಾರೆ. ಹೀಗೆ ನಾಶಗೊಂಡ ಆಸ್ತಿಗಳ ಪುನರ್‌ ನಿರ್ಮಾಣಕ್ಕೆ ಸಾರ್ವಜನಿಕರ ತೆರಿಗೆ ಹಣದಿಂದಲೇ ಖರ್ಚುವೆಚ್ಚಗಳನ್ನು ಮಾಡಬೇಕಾಗುತ್ತದೆ. ಜೊತೆಗೆ ಹಿಂಸಾಚಾರಕ್ಕೆ ಒಳಗಾದ ವ್ಯಕ್ತಿಗಳಿಗೆ ಅಥವಾ ಆಸ್ತಿ ಪಾಸ್ತಿಗಳ ಹಾನಿಗಳನ್ನು ತುಂಬಿಕೊಡಲು ಸಾರ್ವಜನಿಕರ ಹಣವನ್ನೇ ಸರ್ಕಾರ ನೀಡುತ್ತದೆ. ಹಾಗಾಗಿ ಪ್ರಜೆಗಳು ಇತರರ ಮೇಲೆ ಹಿಂಸಾಚಾರ ನೆಡೆಸುವುದನ್ನು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಧಕ್ಕೆ ತರುವುದನ್ನು ನಿಲ್ಲಿಸಿ ದೇಶದ ಸಮಗ್ರತೆಗೆ ಪಣತೊಡಬೇಕಾದುದು ಅವರ ಕರ್ತವ್ಯವಾಗಿದೆ.

13. ದೇಶದ ಅಭಿವೃದ್ಧಿಗೆ ಶ್ರಮಿಸುವುದು:

ಯಾವುದೇ ದೇಶದ ಅಭಿವೃದ್ಧಿಯು ಆ ದೇಶದ ಜನರನ್ನು ಅವಲಂಬಿಸಿದೆ. ಒಂದು ದೇಶದ ಸಂಪತ್ತು ಎಂದರೆ ಆ ದೇಶದ ಪ್ರಜೆಗಳೇ ಆಗಿದ್ದಾರೆ. ಅವರು ತಮ್ಮ ಆಸಕ್ತಿದಾಯಕ ಮತ್ತು ಸಾಮರ್ಥ್ಯವಿರುವ ಕ್ಷೇತ್ರದಲ್ಲಿ ಶ್ರದ್ಧೆಯಿಂದ ದುಡಿದು ಪ್ರಗತಿ ಸಾಧಿಸಬೇಕು. ಆಗ ಮಾತ್ರ ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ.

14. ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಶಿಕ್ಷಣ ನೀಡುವುದು:

ಸಂವಿಧಾನದ 86 ನೇ ತಿದ್ದುಪಡಿಯ ಮೂಲಕ 2002 ರಲ್ಲಿ ಸಂವಿಧಾನದ ಮೂರನೇ ಭಾಗಕ್ಕೆ 21 ವಿಧಿ ಸೇರಿಸಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿತು. ಇದರಿಂದ 14 ವರ್ಷ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡುವುದು ಸರ್ಕಾರದ ಕರ್ತವ್ಯವೆಂದು ಪರಿಗಣಿಸಲಾಯಿತು.

ಉಪಸಂಹಾರ  

ಮೂಲಭೂತ ಕರ್ತವ್ಯಗಳು ಜಾಗೃತ ನಾಗರಿಕನ ಲಕ್ಷಣಗಳಾಗಿವೆ. ಪ್ರಜೆಗಳು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಿದರೆ ಮಾತ್ರ ಹಕ್ಕುಗಳಿಗೆ ನಿಜವಾದ ಅರ್ಥ ಸಿಗುತ್ತದೆ. ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರಭಕ್ತಿ ಈ ಕರ್ತವ್ಯಗಳ ಮೂಲ ಉದ್ದೇಶವಾಗಿದೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನು ಮೂಲಭೂತ ಕರ್ತವ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.