ಭಾರತದ ಸಂವಿಧಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಲು ಸಂವಿಧಾನ ರಚನಾಕಾರರು ಹಲವು ಅವಕಾಶಗಳನ್ನು ಕಲ್ಪಿಸಿದರು. ಆದರೆ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯನ್ನು ಭಾರತದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಕಷ್ಟ ಸಾಧ್ಯವಾಗುತ್ತಿದೆ. ಇದಕ್ಕೆ ಹಲವಾರು ಸಮಸ್ಯೆಗಳು ಕಂಡುಬರುತ್ತವೆ. ಅವುಗಳು ಈ ಕೆಳಗಿನಂತಿವೆ.

1. ಅಧಿಕಾರ ಕೇಂದ್ರೀಕರಣ: (Centralization Power)

ಭಾರತದ ಸಂವಿಧಾನದ 7ನೇ ಅನುಸೂಚಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯನ್ನು ಮಾಡಿದಾಗಲೂ ಕೇಂದ್ರ ಸರ್ಕಾರವೇ ಪ್ರಬಲವಾಗಿದ್ದು ಅದರಲ್ಲಿಯೇ ಅಧಿಕಾರ ಕೇಂದ್ರೀಕರಣವಾಗಿದ್ದನ್ನು ನಾವಿಂದು ನೋಡುತ್ತಿದ್ದೇವೆ. ಕೇಂದ್ರ ಪಟ್ಟಿಯ ವಿಷಯಗಳ ಕುರಿತಂತೆ ಕೇಂದ್ರವೇ ಸಾರ್ವಭೌಮಾಧಿಕಾರವನ್ನು ಹೊಂದಿದೆ. ಇನ್ನು ರಾಜ್ಯಸಭೆಯ ನಿರ್ಣಯ ಮತ್ತು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯ ಪಟ್ಟಿಯ ವಿಷಯದಲ್ಲಿಯೂ ತನ್ನ ಪ್ರಭಾವ ತೋರಿದೆ. ಹಾಗೆಯೇ ಸಮವರ್ತಿ ಪಟ್ಟಿಯ ವಿಷಯಗಳ ಮೇಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಶಾಸನ ರಚಿಸುವ ಅಧಿಕಾರವಿದ್ದರೂ ಸಹ ರಾಜ್ಯದ ಶಾಸನವು ಕೇಂದ್ರ ಶಾಸನಕ್ಕೆ ವಿರುದ್ಧವಾಗಿದ್ದರೆ ಆಗ ರಾಜ್ಯಗಳ ಕಾನೂನುಗಳು ರದ್ದುಗೊಂಡು ಕೇಂದ್ರದ ಕಾನೂನು ಅಂತಿಮವಾಗುತ್ತದೆ. ಇದು ಕೇಂದ್ರ ಸರ್ಕಾರವನ್ನು ಪ್ರಬಲಗೊಳಿಸಿ ರಾಜ್ಯ ಸರ್ಕಾರಗಳನ್ನು ನಿಷ್ಕ್ರಿಯಗೊಳಿಸುವಂತೆ ಮಾಡಿದೆ. ಅಧಿಕಾರದ ಅಸಮಾನತೆ ಭಾರತದ  ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ದೊಡ್ಡ ಸವಾಲಾಗಿದೆ.

2.  ರಾಜ್ಯ ತುರ್ತು ಪರಿಸ್ಥಿತಿಯ ದುರುಪಯೋಗ: (Misuse of State emergency)

ಭಾರತದ ಒಕ್ಕೂಟದ ಯಾವುದೇ ಒಂದು ರಾಜ್ಯದಲ್ಲಿ ಸಂವಿಧಾನಾತ್ಮಕ ಯಂತ್ರವು ಕುಸಿದು ಬಿದ್ದರೆ ಅಂದರೆ ಚುನಾವಣೆಯಲ್ಲಿ ಯಾವುದೇ ಪಕ್ಷವು ಬಹುಮತ ಪಡೆಯದಿದ್ದಾಗ ಸರ್ಕಾರ ರಚನೆಯನ್ನು ಮಾಡಲು ಹಿಂಜರಿಯುವ ಸಂದರ್ಭ ಬಂದರೆ ಅಥವಾ ಅಧಿಕಾರರೂಢ ಆಡಳಿತ ಪಕ್ಷವು ವಿಶ್ವಾಸ ಮತ ಕಳೆದುಕೊಂಡು ಅಲ್ಪ ಮತಕ್ಕೆ ಕುಸಿದಾಗ ರಾಜ್ಯಪಾಲರ ವರದಿಯ ಪ್ರಕಾರ ಕೇಂದ್ರ ಸರ್ಕಾರವು ಆ ರಾಜ್ಯದಲ್ಲಿ ರಾಷ್ಟ್ರಪತಿಯವರ ಮೂಲಕ ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುತ್ತದೆ. ʻʻಸಂವಿಧಾನದ 356ನೇ ವಿಧಿಯಲ್ಲಿ ಈ ಬಗೆಯ ರಾಜ್ಯ ತುರ್ತು ಪರಿಸ್ಥಿತಿಗೆ ರಾಷ್ಟ್ರಪತಿ ಆಳ್ವಿಕೆ ಎಂದು ಕರೆಯಲಾಗುತ್ತದೆ.ʼʼ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷವು ರಾಜ್ಯದಲ್ಲಿ ವಿರೋಧ ಪಕ್ಷವಿದ್ದರೆ ಅದನ್ನು ಬೀಳಿಸಲು, ವಿರೋಧ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯಲು ರಾಜಕೀಯ ಅಸ್ಥಿರತೆ ಮತ್ತು ರಾಜಕೀಯ ಭ್ರಷ್ಟಾಚಾರ ಹಾಗೂ ಕಾನೂನು ವ್ಯವಸ್ಥೆಯ ಕುಸಿತ ಮುಂತಾದ ನೆಪಗಳನ್ನು ಒಡ್ಡಿ ಈ 356ನೇ ವಿಧಿಯನ್ನು ಬಳಸಿರುವುದು ಸಾಕಷ್ಟು ವೇಳೆಯಲ್ಲಿ ಕಂಡುಬಂದಿದೆ. ನೆಹರು ಸರ್ಕಾರ 7 ಬಾರಿ. ಶಾಸ್ತ್ರಿ ಸರ್ಕಾರ 2 ಬಾರಿ, ಇಂದಿರಾಗಾಂಧಿ ಸರ್ಕಾರ 48 ಬಾರಿ, ಮೊರಾರ್ಜಿ ಹಾಗೂ ಚರಣ್ ಸಿಂಗ್ ಸರ್ಕಾರಗಳು 17 ಬಾರಿ, ರಾಜೀವ್ ಗಾಂಧಿ ಸರ್ಕಾರ 6 ಬಾರಿ, ವಿ.ಪಿ ಸಿಂಗ್ ಸರ್ಕಾರ 2 ಬಾರಿ, ಚಂದ್ರಶೇಖರ್ ಸರ್ಕಾರ 4 ಬಾರಿ, ನರಸಿಂಹರಾವ್ ಸರ್ಕಾರ 11 ಬಾರಿ, ದೇವೇಗೌಡ ಸರ್ಕಾರ 2 ಬಾರಿ, ವಾಜಪೇಯಿ ಸರ್ಕಾರ 4 ಬಾರಿ, ಹಾಗೂ ಮನಮೋಹನ್ ಸಿಂಗ್ ಸರ್ಕಾರ 7 ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತಂದಿವೆ.

3. ತೆರಿಗೆ ಕುರಿತಾದ ಗೊಂದಲಗಳು: (Confusion Of Tax)

ತೆರಿಗೆ ವಿಷಯದಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಾಕಷ್ಟು ಗೊಂದಲಗಳು ಮತ್ತು ಅಸಮಾಧಾನಗಳು ಕಂಡುಬರುತ್ತವೆ. ಸಂವಿಧಾನದಲ್ಲಿ ಸ್ಪಷ್ಟತೆಯ ಅಭಾವದಿಂದಾಗಿ ಕೇಂದ್ರವು ರಾಜ್ಯಗಳ ವಿರುದ್ಧ ವಿಜಯಶಾಲಿಯಾಗುತ್ತಿದೆ. 2016ರಲ್ಲಿ ಜಾರಿಗೆ ಬಂದ ಸರಕು ಹಾಗೂ ಸೇವಾ ತೆರಿಗೆಯು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿದೆ. ಸರಕು ಮತ್ತು ಸೇವಾ ತೆರಿಗೆ ಅಧಿಕಾರವನ್ನು ಅಂತರರಾಜ್ಯ ಮಂಡಳಿಯು ಹೊಂದದೇ ಇರುವುದು ಮತ್ತು ಅದನ್ನು ಹಣಕಾಸು ಆಯೋಗಕ್ಕೆ ನೀಡಿರುವುದು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ. ಇದರಿಂದ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯು ತನ್ನ ಕಾರ್ಯವನ್ನು ನೆರವೇರಿಸಲು ಅಡಚಣೆ ಉಂಟಾಗುತ್ತದೆ.

4. ಅಂತರ ರಾಜ್ಯ  ಮಂಡಳಿಯ ವೈಫಲ್ಯ: (Failure of Interstate)

ಭಾರತದ ಒಕ್ಕೂಟ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಅಂತರರಾಜ್ಯ ಮಂಡಳಿಯು ಉತ್ತಮ ವೇದಿಕೆಯಾಗಬೇಕಿತ್ತು, ಆದರೆ ವಿವಿಧ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಉತ್ತಮ ಬಾಂಧವ್ಯವನ್ನು ಉಂಟು ಮಾಡಿ ಸಾಮರಸ್ಯತೆಯನ್ನು ಕಾಪಾಡಿಕೊಂಡು ಬರುವಂತೆ ಮಾಡುವಲ್ಲಿ ಈ ಅಂತರಾಜ್ಯ ಮಂಡಳಿಯು ಸಂಪೂರ್ಣವಾಗಿ ವಿಫಲಗೊಂಡಿದೆ. ಏಕೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಕೇವಲ ಎರಡೇ ಬಾರಿ ಸಭೆ ಸೇರಿ ಇತಿಹಾಸ ಸೃಷ್ಟಿಸಿದೆ. ಈ ಮಂಡಳಿಯು ಕಾಲಕಾಲಕ್ಕೆ ಸಭೆ ಸೇರಿದ್ದರೆ ರಾಜ್ಯಗಳು ಮತ್ತು ಕೇಂದ್ರಗಳ ನಡುವಿನ ಗೊಂದಲ ಬಹುಮಟ್ಟಿಗೆ ಕಡಿಮೆಯಾಗುತ್ತಿತ್ತು. ಮಂಡಳಿಯು ತನ್ನ ಉದ್ದೇಶವನ್ನೇ ಮರೆತದ್ದು ಒಂದು ಮಹಾ ದುರಂತವೆಂದು ಹೇಳಬಹುದು.

5. ವಿಶ್ವಾಸಾರ್ಹತೆಯ ಕೊರತೆ:

ಕೇಂದ್ರ ಹಾಗೂ ರಾಜ್ಯಗಳ ನಡುವೆ ವಿಶ್ವಾಸದ ಕೊರತೆ ಕಂಡುಬರುತ್ತಿದೆ.  ಕೇಂದ್ರ ಸರ್ಕಾರ ಯಾವುದೇ ಕಾರ್ಯಗಳನ್ನು ಮಾಡ ಹೊರಟರೆ ಅದು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು, ಉಳಿದ ರಾಜ್ಯಗಳಿಗೆ ನುಂಗಲಾರದ ತುತ್ತಾಗಿದೆ. ನೋಟುಗಳ ಅಮಾನೀಕರಣ, ಪೌರತ್ವ ತಿದ್ದುಪಡಿ ಕಾಯ್ದೆ, ಇಂಧನ ದರಗಳ ಏರಿಕೆ ಮುಂತಾದ ಸಮಯಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಕೈಗೊಳ್ಳಲು ಮುಂದಾದಾಗ ಸಹಜವಾಗಿ ರಾಜ್ಯಗಳು ಮತ್ತು ಕೇಂದ್ರದ ನಡುವೆ ಬಿರುಕು ಕಾಣಿಸಿಕೊಳ್ಳುತ್ತದೆ. ಇದು ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಮುಂದುವರಿಕೆಗೆ ಸವಾಲಾಗಿ ಪರಿಣಮಿಸುತ್ತದೆ.

ಉಪಸಂಹಾರ

ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಯಶಸ್ಸು ಕೇಂದ್ರ ಮತ್ತು ರಾಜ್ಯಗಳ ಪರಸ್ಪರ ವಿಶ್ವಾಸ ಮತ್ತು ಗೌರವದ ಮೇಲೆ ಅವಲಂಬಿತವಾಗಿದೆ. ಅಧಿಕಾರ ಸಮತೋಲನ, ಪಾರದರ್ಶಕತೆ ಮತ್ತು ನಿಯಮಿತ ಸಂವಾದವು ಮಾತ್ರ ಈ ಸವಾಲುಗಳನ್ನು ನಿವಾರಿಸಬಹುದು. ಸಂವಿಧಾನದ ಆತ್ಮವನ್ನು ಉಳಿಸಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಭಾರತೀಯ ಫೆಡರಲಿಸಂ ಬಲವಾಗುತ್ತದೆ. ಇದೇ ದೇಶದ ಸಮಗ್ರ ಅಭಿವೃದ್ಧಿಗೆ ದಾರಿ ತೋರಿಸುತ್ತದೆ.