ಧರ್ಮ ಎಂಬ ಪದದ ಪ್ರಾಕೃತ ರೂಪವೇ ʻಧಮ್ಮ’. ಧಮ್ಮ ಎಂದರೆ ಧಾರ್ಮಿಕತೆ, ದೈವಭಕ್ತಿ (Law of Piety), ನೈತಿಕತೆ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಎಂಬ ಅರ್ಥಗಳನ್ನು ಹೊಂದಿದೆ. ಅಶೋಕ ಧಮ್ಮದ ಮೂಲಭೂತ ತತ್ವಗಳನ್ನು ಅಶೋಕನೇ ಕೆತ್ತಿಸಿದ ಶಿಲಾಶಾಸನಗಳಲ್ಲಿ ಕಾಣಬಹುದು. ಅವುಗಳೆಂದರೆ
ಸಂಯಮ (Mastery of Senses)
ದಯಾ (Kindness)
ಶುಶೃಷಾ (Service)
ಅಪಚಿತ್ತಿ (Reverence – Deep Respect)
ದಾನ (Charity)
ಸಂಪ್ರತಿಪತ್ತಿ (Support)
ಕೃತಜ್ಞತಾ, (Gratitude)
ಶೌಚ (Purity)
ಭಾವಶುದ್ಧಿ (Purity of Thought)
ದೃಡಭಕ್ತಿ (Devotion)
ಸತ್ಯ (Truthfullness)
ಅಪಿಚಿತ್ತಿ (Reverence – Deep Respect)
ಈ ಮೇಲ್ಕಂಡ ಅಂಶಗಳನ್ನು ಒಳಗೊಂಡ ಅಶೋಕ ಧಮ್ಮವು ಯಾವ ಧರ್ಮದಿಂದ ಆಧಾರಿತವಾಗಿದೆ ಅಥವಾ ಪ್ರಭಾವಿತವಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.
ಡಾ. ಭಂಡಾರ್ಕರ್ ರವರ ಪ್ರಕಾರ ಅಶೋಕ ಧಮ್ಮವು ಬೌದ್ಧ ಧರ್ಮವಾಗಿದೆ. ಅವನು ಬೌದ್ಧಧರ್ಮಿಯನಾಗಿದ್ದಾನೆ. ಆದರೆ ಅದನ್ನು ವಿರೋಧಿಸುವ ಡಾ. ರಾಧಾ ಕುಮುದ್ ಮುಖರ್ಜಿಯವರು ಅಶೋಕ ತನ್ನ ಶಿಲಾಶಾಸನಗಳಲ್ಲಿ ಪ್ರತಿಪಾದಿಸಿದ ಧಮ್ಮ ಬೌದ್ಧಧರ್ಮವೇ ಆಗಿದ್ದರೆ, ಭಗವಾನ್ ಬುದ್ಧನ ನಾಲ್ಕು ಆರ್ಯಸತ್ಯಗಳನ್ನು, ಅಷ್ಟಾಂಗಿಕ ಮಾರ್ಗಗಳನ್ನು ಮತ್ತು ನಿರ್ವಾಣವನ್ನಾದರೂ ಉಲ್ಲೇಖಿಸುತ್ತಿದ್ದ. ಭಗವಾನ್ ಬುದ್ಧನ ಮಹಾನ್ ವ್ಯಕ್ತಿತ್ವವನ್ನಾದರೂ ಕೊಂಡಾಡುತ್ತಿದ್ದ. ಆದರೆ ಅದ್ಯಾವುದನ್ನು ಮಾಡದ ಅಶೋಕ ಧಮ್ಮ, ಬೌದ್ಧಧರ್ಮ ಅಲ್ಲವೇ ಅಲ್ಲ ಎನ್ನುವುದು ಮುಖರ್ಜಿಯವರ ಸ್ಪಷ್ಟ ಅಭಿಪ್ರಾಯವಾಗಿದೆ.
ಕಲ್ಲಣನು ತನ್ನ ‘ರಾಜತರಂಗಿಣಿ’ ಎಂಬ ಕೃತಿಯಲ್ಲಿ ಅಶೋಕನು ಶಿವನ ಆರಾಧಕನಾಗಿದ್ದನೆಂದು ತಿಳಿಸುತ್ತಾನೆ. ಅಲ್ಲದೆ ಶಿಲಾಶಾಸನಗಳಲ್ಲಿ ತನ್ನನ್ನು ‘ದೇವನಾಂಪ್ರಿಯ ಪ್ರಿಯದರ್ಶಿ’ ಎಂದು ಕರೆದುಕೊಂಡಿದ್ದಾನೆ. ಕೆ.ಎಂ. ಪಣಿಕ್ಕರ್ರವರು ಈ ದೈವ ವೈದಿಕ ದೇವರಲ್ಲದೆ ಮತ್ತಾರು ಎಂದು ಪ್ರಶ್ನಿಸುತ್ತಾರೆ. ಅಂದರೆ ಅಶೋಕನು ವೈದಿಕನಾಗಿದ್ದ. ಅವನ ಧರ್ಮಕ್ಕೆ ʻವೈದಿಕಧರ್ಮ’ (ಹಿಂದೂಧರ್ಮ) ಆಧಾರವಾಗಿತ್ತು ಎಂದರ್ಥವಾಗುತ್ತದೆ. ಆದರೆ ಅದನ್ನು ವಿರೋಧಿಸುವ ಇತರೆ ವಿದ್ವಾಂಸರು ಅಶೋಕ ಪ್ರತಿಪಾದಿಸಿದ ಧಮ್ಮ ವೈದಿಕ ಧರ್ಮವೇ ಆಗಿದ್ದರೆ ಅದರ ಪ್ರತೀಕವಾದ ಪ್ರಾಣಿಬಲಿ, ಯಾಗ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ತನ್ನ ನಂಬಿಕೆಯನ್ನು ದೃಢಪಡಿಸುತ್ತಿದ್ದ ಎಂದಿದ್ದಾರೆ. ಆದರೆ ಅವುಗಳ ಬಗ್ಗೆ ಚಕಾರವೆತ್ತದ ಅಶೋಕ ವೈದಿಕ ಧರ್ಮದಿಂದ ಪ್ರಭಾವಿತನಾಗಿಲ್ಲ ಎಂಬುದು ತಿಳಿಯುತ್ತದೆ.
ವಾಸ್ತವವಾಗಿ ಅಶೋಕ ಧಮ್ಮವು ಯಾವುದೇ ಧರ್ಮದಿಂದ ಪ್ರಭಾವಿತವಾಗಿಲ್ಲದಿರುವುದನ್ನು ಕಾಣಬಹುದು. ಆದರೆ ಅದು ಎಲ್ಲಾ ಧರ್ಮಗಳ ಸಾರ ಸಂಗ್ರಹವಾಗಿದೆ. ಯಾವುದೇ ಜಾತಿ, ಮತ, ಧರ್ಮಗಳ ಚೌಕಟ್ಟಿಗೆ ಒಳಪಡದ ಸ್ವತಂತ್ರ ಅಭಿವ್ಯಕ್ತಿಯಾಗಿದೆ. ಡಾ. ಆರ್.ಸಿ. ಮಜುಂದಾರ್ ಪ್ರಕಾರ “ಅವನ ಧರ್ಮ ಧರ್ಮ ಎನ್ನುವುದಕ್ಕಿಂತ ಒಂದು ನೀತಿ ಸಂಹಿತೆ ಎಂದು ಕರೆಯುವುದು ಉಚಿತ’ ಎಂದಿದ್ದಾರೆ. ಆರ್.ಕೆ. ಮುಖರ್ಜಿಯವರ ಪ್ರಕಾರ “ಅಶೋಕನ ಧರ್ಮ ಯಾವುದೇ ನಿರ್ದಿಷ್ಟ ಪದ್ಧತಿಯಾಗಿರದೇ ಅದರಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮಿಯರಿಗೆ ಅವಶ್ಯಕವಾದ ನೀತಿ ಸಂಹಿತೆಯಾಗಿದ್ದವು. ಅವನ ಸ್ವಂತಿಕೆ ಅಡಗಿರುವುದು ಅವನು ಮಾಡಿದ ಕಾರ್ಯಗಳಲ್ಲಿ ಅಡಗಿದೆ” ಎಂದಿದ್ದಾರೆ. ಸ್ಮಿತ್ರವರು ಅಶೋಕನದು ಬೌದ್ಧಧರ್ಮವಾಗಿರದೇ ಅವನದೇ ಸ್ವಂತಿಕೆಯ ಧರ್ಮವೆಂದಿದ್ದಾರೆ.
ಸಾಮಾಜಿಕ ಹೊಣೆಗಾರಿಕೆ ಮತ್ತು ಒಬ್ಬರೊಂದಿಗೆ ಮತ್ತೊಬ್ಬರ ನಡತೆಗಳು ಹೇಗಿರಬೇಕೆಂಬುದರ ಮಹತ್ವವನ್ನು ಮನವರಿಕೆ ಮಾಡಿಕೊಡುವುದು ಧಮ್ಮದ ಉದ್ದೇಶವಾಗಿತ್ತು ಎಂದು ಪ್ರೊ|| ರೊಮಿಲಾ ಥಾಪರ್ ಅಭಿಪ್ರಾಯಪಟ್ಟಿದ್ದಾರೆ. ಅಶೋಕನ ಧಮ್ಮವು 4 ಪ್ರಮುಖ ತತ್ವಗಳನ್ನು ಆದರಿಸಿತ್ತು. ಅವುಗಳೆಂದರೆ 1. ಅಹಿಂಸೆ, 2. ಸಹಿಷ್ಣುತೆ, 3. ಶಾಂತಿ, 4. ಪ್ರಜಾಕಲ್ಯಾಣ.
ರೋಗ ಪೀಡಿತರಾದಾಗ, ವಿವಾಹದ ಸಂದರ್ಭದಲ್ಲಿ, ಹುಟ್ಟಿನ ಸಂದರ್ಭದಲ್ಲಿ ಹಾಗೂ ಪ್ರವಾಸಕ್ಕೆ ಹೋಗುವ ಮುನ್ನ ಅನುಸರಿಸಬೇಕಾದ ಸಂಪ್ರದಾಯಗಳನ್ನು ಅಶೋಕನ ಧಮ್ಮವು ಭ್ರಷ್ಟ ಹಾಗೂ ಅನುಪಯುಕ್ತ ಸಂಪ್ರದಾಯಗಳೆಂದು ಪರಿಗಣಿಸಿತ್ತು. ಡಾ||ಆರ್.ಕೆ.ಮುಖರ್ಜಿಯವರ ಪ್ರಕಾರ ʻಅಶೋಕನ ಧಮ್ಮವು ಯಾವುದೇ ನಿರ್ದಿಷ್ಟ ಧಮ್ಮ ಹಾಗೂ ಧಾರ್ಮಿಕ ಪದ್ಧತಿಯಾಗಿರದೆ ಎಲ್ಲಾ ಜಾತಿ ಜನಾಂಗಕ್ಕೂ ಅಗತ್ಯವಾದ ನೈತಿಕ ಕಾನೂನುಗಳಾಗಿದ್ದವು’. ಡಾ|| ಭಂಡಾರ್ಕರ್ ರವರು ʻಅಶೋಕನ ಧಮ್ಮವು ಧಾರ್ಮಿಕವಲ್ಲದ ಬೌದ್ಧಧರ್ಮವಾಗಿತ್ತು’ ಎಂದಿದ್ದಾರೆ.
ಅಶೋಕ ಧಮ್ಮದ ಲಕ್ಷಣಗಳು :
1. ಅಹಿಂಸೆ :
ಅಹಿಂಸೆಯು ಅಶೋಕ ಧಮ್ಮದ ಸಾರವಾಗಿತ್ತು. ಇವನು ಕಳಿಂಗ ಯುದ್ಧಾನಂತರ ಅಹಿಂಸಾ ನೀತಿಯನ್ನು ಪಾಲಿಸಿದನು, ತನ್ನ ರಾಜ್ಯದಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಿದನು. ಸ್ವತಃ ಬೇಟೆಯಾಡುವುದನ್ನು ನಿಲ್ಲಿಸಿದನು. ಮಾಂಸಾಹಾರವನ್ನು ಬಿಟ್ಟುಬಿಟ್ಟನು. ಯಜ್ಞಯಾಗಗಳನ್ನು ನಿಷೇಧಿಸಿದನು. ಪ್ರಾಣಿಗಳನ್ನು ಕೊಲ್ಲದಂತೆ ರಾಜಾಜ್ಞೆಯನ್ನು ಮಾಡಿದನು. ತನ್ನ ಶಿಲಾಶಾಸನದಲ್ಲಿ ಅಹಿಂಸೆಯ ಮಹತ್ವವನ್ನು ಸಾರಿದನು.
2. ಸಹಿಷ್ಣುತೆ :
ಸಹಿಷ್ಣುತೆ ಎಂದರೆ ಗುಲಾಮರು ಮತ್ತು ನೌಕರರ ಜೊತೆಗೆ ಸಹಾನುಭೂತಿ, ಜನ್ಮದಾತ್ಮಗಳಿಗೆ ಹಿರಿಯರಿಗೆ, ಗುರುವರ್ಯರಿಗೆ ಗೌರವ ಕೊಡುವುದರ ಜೊತೆಗೆ ವಿದೇಯರಾಗಿರಬೇಕು. ಅಲ್ಲದೆ ಕಿರಿಯರಿಗೆ ಪ್ರೀತ್ಯಾದಾರಗಳನ್ನು, ಆಶ್ರಿತರಿಗೆ, ಬಡವರಿಗೆ, ಸಂಕಷ್ಟದಲ್ಲಿರುವವರಿಗೆ, ಸ್ನೇಹಿತರಿಗೆ, ಪರಿಚಿತರಿಗೆ ಸನ್ಯಾಸಿಗಳಿಗೆ ಬ್ರಾಹ್ಮಣರಿಗೆ ಔದಾರ್ಯತೆಯನ್ನು ತೋರಿಸಬೇಕೆಂದು ಹೇಳುತ್ತಾನೆ. ಅಶೋಕನ ವೈಯಕ್ತಿಕ ಧರ್ಮ ಬೌದ್ಧ ಧರ್ಮವಾಗಿದ್ದರೂ ಅನ್ಯ ಮತಗಳನ್ನು ಕೀಳಾಗಿ ಕಾಣಲಿಲ್ಲ. ಬ್ರಾಹ್ಮಣರನ್ನು ಪ್ರೀತಿ ವಿಶ್ವಾಸಗಳಿಂದ ಕಂಡನು.
ಎರಡನೇ ಶಿಲಾಶಾಸನದಲ್ಲಿ ಅರಸನು ಎಲ್ಲಾ ಪಂಥಗಳನ್ನು ಗೌರವಿಸುತ್ತಾನೆ ಎಂದು ಅಶೋಕನೇ ಬರೆಸಿದ್ದಾನೆ. ಅಲ್ಲದೇ ಅಜೀವಿಕರಿಗಾಗಿ ಗಯಾ ಬಳಿ ಗುಹೆಗಳನ್ನು ಸಹ ನಿರ್ಮಿಸಿದ್ದಾನೆ. ಯಾರನ್ನೂ ಸಹ ಮತಾಂತರಕ್ಕೆ ಅಶೋಕ ಬಲಾತ್ಕರಿಸಲಿಲ್ಲ. ಇದು ಅಶೋಕನ ಮತ್ತು ಧಮ್ಮದ ಹೆಗ್ಗಳಿಕೆಯಾಗಿದೆ. ಅಶೋಕನ ಧಮ್ಮದ ಪ್ರಕಾರ ತನ್ನ ಪಂಥಕ್ಕಿಂತ ಪರಪಂಥವನ್ನು ಗೌರವಿಸಿದಾಗ ತನ್ನ ಪಂಥವು ಪ್ರಬಲಗೊಳ್ಳುತ್ತದೆ. ಪ್ರತಿಯೊಂದು ಪಂಥವು ಒಂದಲ್ಲಾ ಒಂದು ಕಾರಣಕ್ಕಾಗಿ ಪೂಜ್ಯಭಾವನೆಗೆ ಅರ್ಹ.
3. ಶಾಂತಿ :
ಶಾಂತಿಯು ಯಶಸ್ಸಿನ ಸಾಧನೆಯ ಮೂಲಮಂತ್ರವಾಗಿದೆ. ಅಶಾಂತಿಯು ಅವ್ಯವಸ್ಥೆಯ ಆಗರವಾಗುತ್ತದೆ.
4. ವಿಶ್ವ ಸಹೋದರತ್ವ :
ಅಶೋಕನು ವಿಶ್ವ ಸಹೋದರತ್ವವನ್ನು ಎತ್ತಿ ಹಿಡಿದನು. ವಿಶ್ವದ ಜನರೆಲ್ಲರೂ ತನ್ನ ಸಹೋದರರೆಂದು ಸಾರಿದನು. ಇದನ್ನೇ ಅಶೋಕ ಧಮ್ಮದ ಪ್ರಮುಖ ಲಕ್ಷಣವನ್ನಾಗಿಸಿದನು. ಈ ದೃಷ್ಟಿಯಿಂದ ಅಶೋಕನು ʻಜಗತ್ತಿನ ಪ್ರಥಮ ಅಂತರರಾಷ್ಟ್ರೀಯವಾದಿ’ ಎಂದು ಕರೆಯಬಹುದು.
5. ಪ್ರಜಾಕಲ್ಯಾಣ :
ಅಶೋಕ ಧಮ್ಮದ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಪ್ರಜಾ ಕಲ್ಯಾಣವಾಗಿದೆ ಅಥವಾ ಸುಖ ರಾಜ್ಯದ ಸ್ಥಾಪನೆಯಾಗಿದೆ. ತನ್ನ ಪ್ರಜೆಗಳೆಲ್ಲರ ನೈತಿಕ, ಲೌಕಿಕ ಮತ್ತು ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ ಅಶೋಕನು ಅವರೆಲ್ಲರ ಸುಖಸಂತೋಷಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟನು. ಅಂತೆಯೇ ತನ್ನ ಒಂದನೇ ಕಳಿಂಗ ಶಿಲಾಶಾಸನದಲ್ಲಿ ಪ್ರಜೆಗಳೆಲ್ಲರೂ ತನ್ನ ಮಕ್ಕಳೇ. ಅವರು ಇಹಲೋಕದಲ್ಲಿ ಮಾತ್ರವಲ್ಲದೇ ಪರಲೋಕದಲ್ಲೂ ಸುಖವಾಗಿರಬೇಕು” ಎಂದು ತಿಳಿಸಿದ್ದಾನೆ. 6ನೇ ಶಿಲಾಶಾಸನದಲ್ಲಿ “ಎಲ್ಲರೂ ನನ್ನ ಮಕ್ಕಳೇ, ನಾನು ಎಲ್ಲೇ ಇರಲಿ, ಭೋಜನ ಮಾಡುತ್ತಿರಲಿ ಅಂತಃಪುರದಲ್ಲಿರಲಿ, ಗೋಶಾಲೆಯಲ್ಲಿರಲಿ, ಮಲಗುವ ಕೊಠಡಿಯಲ್ಲಿರಲಿ, ಅರಮನೆಯಲ್ಲಿರಲಿ, ಪ್ರಜೆಗಳು ತನ್ನನ್ನು ಭೇಟಿಯಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದು. ಅದಕ್ಕೆ ನಾನು ಸದಾ ಸಿದ್ಧ” ಎಂದು ತಿಳಿಸಿದ್ದಾನೆ. ಸುಖ ರಾಜ್ಯ ಸ್ಥಾಪನೆಗಾಗಿ ಸಾರ್ವಜನಿಕ ಉಪಯೋಗಿ ಕೆಲಸಗಳಲ್ಲಿ ತನ್ನನ್ನು ತಾನು ಅಶೋಕ ತೊಡಗಿಸಿಕೊಂಡಿದ್ದಾನೆ. ಈ ದೃಷ್ಟಿಯಿಂದ ಪ್ರಜಾಕಲ್ಯಾಣಕ್ಕಾಗಿ ಶ್ರಮಿಸಿದ ಸಾಮ್ರಾಟರಲ್ಲಿ ಅಶೋಕ ಮಹಾಶಯನೇ ಮೊದಲಿಗನು. ಪ್ರಜಾಕಲ್ಯಾಣದಲ್ಲಿ ಜಾರಿಗೆ ತಂದ ಲೋಕೋಪಯೋಗಿ ಕಾರ್ಯಗಳು ಅತ್ಯಂತ ಅವಿಸ್ಮರಣೀಯವಾಗಿದೆ. ಮಾರ್ಗಗಳ ನಿರ್ಮಾಣ, ಸಾಲುಮರಗಳನ್ನು ನೆಡಿಸಿದ್ದು, ಅನ್ನ ಛತ್ರಾಲಯಗಳ ಸ್ಥಾಪನೆ, ಪ್ರತಿ 9 ಮೈಲುಗಳಿಗೆ ಒಂದು ಬಾವಿಯ ನಿರ್ಮಾಣ, ಚಿಕಿತ್ಸಾಲಯಗಳ ಸ್ಥಾಪನೆ, ವಿಶ್ರಾಂತಿ ಗೃಹಗಳ ಸ್ಥಾಪನೆ, ಗಿಡಮೂಲಿಕೆಯ ಸಸ್ಯಗಳನ್ನು ಬೆಳೆಸಿದ್ದು ಮೊದಲಾದವು ಪ್ರಜಾಕಲ್ಯಾಣದ ಸಾಧನೆಗಳಾಗಿವೆ.
ಅಶೋಕನು ಧಮ್ಮದ ಪ್ರಚಾರಕ್ಕೆ ಕೈಗೊಂಡ ಕ್ರಮಗಳು :
1. ತನ್ನ ವೈಯಕ್ತಿಕ ಉದಾಹರಣೆಯನ್ನು ಜನರ ಮುಂದಿಡುವ ಮೂಲಕ :
* ದಿಗ್ವಿಜಯಕ್ಕೆ ಸಮಾಪ್ತಿ ಹಾಡುವ ಮೂಲಕ
* ಪ್ರಾಣಿ ಬಲಿ, ಬೇಟೆ, ಮಾಂಸಾಹಾರ ತ್ಯಜಿಸುವ ಮೂಲಕ
* ಜನೋಪಯೋಗಿ (ಪ್ರಜಾಕಲ್ಯಾಣ) ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ
2. ಹೆಚ್ಚು ಪ್ರಚಾರ ಕೈಗೊಳ್ಳುವ ಮೂಲಕ :
* ಶಿಲಾಶಾಸನಗಳ ಮೇಲೆ, ಸ್ತಂಭಗಳ ಮೇಲೆ ಮತ್ತು ಕಲ್ಲುಬಂಡೆಗಳ ಮೇಲೆ ತನ್ನ ಧಮ್ಮದ ಮಾಹಿತಿಯನ್ನು ಕೆತ್ತಿಸುವ ಮೂಲಕ
* ಧಮ್ಮ ಮಹಾಮಾತ್ರರನ್ನು ನೇಮಿಸಿ ಅವರನ್ನು ಹೊರ ಪ್ರಾಂತಗಳು ಮತ್ತು ಹೊರ ದೇಶಗಳಿಗೆ ಧರ್ಮಪ್ರಚಾರಕರಾಗಿ ಕಳುಹಿಸುವ ಮೂಲಕ
* ತನ್ನ ಅಧಿಕಾರಿಗಳು ಪ್ರಜಾಹಿತಕ್ಕೆ ಒತ್ತು ಕೊಡುವಂತೆ ಆದೇಶಿಸುವ ಮೂಲಕ
* ಜನರನ್ನು ನೇರವಾಗಿ ಸಂಪರ್ಕಿಸಿ ಅವರ ಕುಂದು ಕೊರತೆ ಅರಿಯುವ ಮೂಲಕ
* ಧಮ್ಮದ ಬಗ್ಗೆ ಪ್ರಜ್ಞಾವಂತರೊಂದಿಗೆ ಚರ್ಚಿಸಿ ಧಮ್ಮದ ಮಹತ್ವವನ್ನು ಸಾರುವ ಮೂಲಕ
ಅಶೋಕ ಧಮ್ಮದ ಪ್ರಭಾವ (ಪರಿಣಾಮ) :
* ಅಶೋಕನ ರಾಜನೀತಿಯ ಮೇಲೆ ಅಶೋಕ ಧಮ್ಮವು ಹೆಚ್ಚಿನ ಪ್ರಭಾವ ಬೀರಿತು.
* ಅಶೋಕನು ತನ್ನ ದಿಗ್ವಿಜಯ ನೀತಿಯನ್ನು ಸಂಪೂರ್ಣವಾಗಿ ಕೈಬಿಟ್ಟನು. ತನ್ನ ವೈಯಕ್ತಿಕ ಅಧಿಕಾರದ ತೆವಲಿಗಾಗಿ ಹಾಗೂ ಸಾಮ್ರಾಜ್ಯಾಧಿಪತಿ ಎಂಬ ಉಮೇದಿಗಾಗಿ ಹಲವು ಜೀವಗಳನ್ನು ಬಲಿಕೊಟ್ಟು ರಾಜ್ಯ ರಾಜ್ಯಗಳನ್ನು ಗೆಲ್ಲುವ ತನ್ನ ನೀತಿಗೆ ಮಂಗಳ ಹಾಡಿದನು.
* ತನ್ನ ಸಮಕಾಲೀನ ರಾಜ್ಯಗಳೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಸ್ಥಾಪಿಸಿದನು.
* ಆಕ್ರಮಣಕಾರಿ ನೀತಿಯನ್ನು ಕೈಬಿಟ್ಟನು.
* ತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಯಾವುದೇ ಹೊಸ ಯುದ್ಧ / ದಿಗ್ವಿಜಯ ನಡೆಸದಂತೆ ಕಟ್ಟಪ್ಪಣೆ ಮಾಡಿದನು. ಆ ಮೂಲಕ ರಕ್ತಪಾತವನ್ನು ತಪ್ಪಿಸಿದನು.
* ನಂತರದ ದೊರೆಗಳು ಮತ್ತು ಪ್ರಜೆಗಳಿಗೆ ಬೇರಿ ಘೋಷಕ್ಕಿಂತ ಧರ್ಮಘೋಷವೇ ಕಿವಿಗೆ ಹೆಚ್ಚು ಬೀಳುವಂತಾಯಿತು.
* ಆದರೆ ಅಶೋಕ ಅನುಸರಿಸಿದ ಅಹಿಂಸಾ ನೀತಿಯಿಂದ ಸಾಮ್ರಾಜ್ಯದ ನಿರಂತರತೆಗೆ ಭಂಗ ಉಂಟಾಯಿತು. ಸೈನಿಕರಲ್ಲಿದ್ದ ಕ್ಷಾತ್ರ ತೇಜಸ್ಸು ನಾಶವಾಗಿ ಪರಕೀಯರು ಆಕ್ರಮಣ ಮಾಡಿದಾಗ ದೇಶವನ್ನು ರಕ್ಷಿಸಲು ಅಸಮರ್ಥರಾದರು. ಇದರಿಂದಾಗಿ ಮೌರ್ಯ ವಂಶದ ಆಳ್ವಿಕೆ ಅಶೋಕನ ನಂತರ ಸರ್ವನಾಶದತ್ತ ಸಾಗಿತ್ತು.
* ಹೆಚ್.ಸಿ. ರಾಯ್ ಚೌದರಿಯವರು ಅಭಿಪ್ರಾಯ ಪಡುವಂತೆ “ಮೌರ್ಯ ಸಾಮ್ರಾಜ್ಯದ ಕ್ಷಾತ್ರ ತೇಜಸ್ಸು ಕಳಿಂಗ ರಣರಂಗದ ಕಡೆಯ ಸೈನಿಕನ ನೋವಿನ ನರಳಾಟದ ಕಡೆಯ ಸೊಲ್ಲಿನಲ್ಲಿ ನಾಶವಾಯಿತು” ಎಂದಿದ್ದಾರೆ.