ಬೇಡಿಕೆಯು ಅನೇಕ ಅಂಶಗಳಿಂದ ನಿರ್ಧರಿತವಾಗುತ್ತದೆ. ಅವುಗಳು ಈ ಕೆಳಕಂಡಂತಿವೆ.

1) ಅಭಿರುಚಿಗಳು:

ಅನುಭೋಗಿಗಳ ಅಭಿರುಚಿ ಮತ್ತು ಹವ್ಯಾಸಗಳು ಬದಲಾವಣೆಗೊಂಡರೆ ಬೇಡಿಕೆಯಲ್ಲಿಯೂ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ : ಉಡುಪಿನ ಮಾದರಿಯಲ್ಲಿ ಬದಲಾವಣೆಯಾದರೆ ಅದನ್ನು ತಯಾರಿಸುವ ಸಾಮಗ್ರಿಗಳ ಬೇಡಿಕೆಯಲ್ಲಿಯೂ ಬದಲಾವಣೆಗಳಾಗುತ್ತವೆ. ಯಾವುದೇ ಒಂದು ವಸ್ತುವಿನ ಬಗೆಗೆ ಒಲವು ಅಥವಾ ಅಭಿರುಚಿ ಹೆಚ್ಚಿದರೆ ಅದಕ್ಕೆ ಬೇಡಿಕೆಯೂ ಅಧಿಕಗೊಳ್ಳುತ್ತದೆ.

2) ಅನುಭೋಗಿಗಳ ಆದಾಯ:

ಅನುಭೋಗಿಗಳ ಆದಾಯದ ಬದಲಾವಣೆಯೊಡನೆ ಬೇಡಿಕೆಯ ಮಟ್ಟವೂ ಬದಲಾಗುತ್ತದೆ. ಆದಾಯದ ಹೆಚ್ಚಳದೊಡನೆ ಜನರು ಅಧಿಕ ಪ್ರಮಾಣದಲ್ಲಿ ಕೊಳ್ಳುವುದು ಸಹಜ. ಆದಾಯ ಹೆಚ್ಚಿದಾಗ ಅನುಭೋಗಿಗಳು ಬೆಲೆಯ ಕುಸಿತಕ್ಕಾಗಿ ಕಾಯದೆ ಹೆಚ್ಚಿನ ವಸ್ತುಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಾರೆ.

3) ವಸ್ತುವಿನ ಬೆಲೆ:

ಬೇಡಿಕೆಯನ್ನು ನಿರ್ಧರಿಸುವ ಅತಿ ಪ್ರಮುಖವಾದ ಅಂಶವೆಂದರೆ ವಸ್ತುವಿನ ಬೆಲೆ. ಹೆಚ್ಚಿನ ಬೆಲೆಯಲ್ಲಿ ಕಡಿಮೆ ಪ್ರಮಾಣದಲ್ಲಿಯೂ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿಯೂ ವಸ್ತುವಿಗೆ ಬೇಡಿಕೆ ಇರುತ್ತದೆ. ಬೇಡಿಕೆ ಮಟ್ಟವು ಪ್ರಸ್ತುತ ಬೆಲೆ ಮಾತ್ರವಲ್ಲದೆ ಭವಿಷ್ಯದಲ್ಲಿನ ಬೆಲೆ ಬದಲಾವಣೆಯ ನಿರೀಕ್ಷೆಯಿಂದಲೂ ನಿರ್ಧಾರವಾಗುತ್ತದೆ.

4) ಹವಾಮಾನ:

ಋತುಮಾನಕ್ಕೆ ತಕ್ಕಂತೆ ವಸ್ತುಗಳಿಗೆ ಬೇಡಿಕೆ ಬದಲಾಗುತ್ತದೆ ಮತ್ತು ಯಾವುದೇ ಪ್ರದೇಶದಲ್ಲಿ ಹವಾಮಾನವು ಅಲ್ಲಿಯ ಜನರ ಬೇಡಿಕೆಯನ್ನು ನಿರ್ಧರಿಸುತ್ತದೆ. ಉದಾಹರಣೆಗೆ: ಚಳಿಗಾಲದಲ್ಲಿ ಉಣ್ಣೆಯ ಬಟ್ಟೆಗಳಿಗೂ, ಬೇಸಿಗೆಯಲ್ಲಿ ತಂಪು ಪಾನೀಯಗಳಿಗೂ, ಮಳೆಗಾಲದಲ್ಲಿ ಛತ್ರಿಗಳಿಗೂ ಬೇಡಿಕೆ ಅಧಿಕವಾಗಿರುವುದು ಸ್ವಾಭಾವಿಕ.

5) ಜನಸಂಖ್ಯೆ ಗಾತ್ರ:

ಜನಸಂಖ್ಯೆಯು ಅಧಿಕವಾಗಿದ್ದರೆ ಮತ್ತು ಅದು ನಿರಂತರವಾಗಿ ಇರುತ್ತಿದ್ದರೆ ಬೇಡಿಕೆಯ ಪ್ರಮಾಣ ಅಧಿಕವಾಗಿರುತ್ತದೆ. ಜನಸಂಖ್ಯಾ ಸಂಯೋಜನೆಯೂ ಸಹ ಬೇಡಿಕೆ ಗಾತ್ರ ಮತ್ತು ಸ್ವರೂಪದ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ರಾಷ್ಟ್ರದಲ್ಲಿರುವ ಪುರುಷರು ಮತ್ತು ಸ್ತ್ರೀಯರು, ಮಕ್ಕಳು, ತರುಣರು ಮತ್ತು ವೃದ್ಧರ ಸಂಖ್ಯೆಗೆ ಅನುಗುಣವಾಗಿ ವಿವಿಧ ವಸ್ತುಗಳಿಗೆ ಬೇಡಿಕೆ ನಿರ್ಧಾರವಾಗುತ್ತದೆ.

6) ಸಂಪತ್ತಿನ ವಿತರಣೆ:

ಸಂಪತ್ತಿನ ವಿತರಣೆಯು ಬೇಡಿಕೆಯ ಗಾತ್ರವನ್ನು ನಿರ್ಧರಿಸುವ ಮತ್ತೊಂದು ಅಂಶ, ಕೆಲವು ಜನರು ಮಾತ್ರ ಶ್ರೀಮಂತರಾಗಿದ್ದು ಬಹುಸಂಖ್ಯೆಯ ಜನರು ಬಡವರಾಗಿದ್ದರೆ, ಸುಖ ಸಾಧನದ ವಸ್ತುಗಳಿಗೆ ಬೇಡಿಕೆ ಅಧಿಕವಾಗಿರುತ್ತದೆ. ಸಂಪತ್ತು ಸಾಧ್ಯವಾದಷ್ಟು ಸಮವಾಗಿ ಹಂಚಿಕೆಯಾಗಿದ್ದರೆ, ಬಡವರಿಗೆ ಹೆಚ್ಚಿನ ಕೊಳ್ಳುವ ಶಕ್ತಿ ಇರುತ್ತದೆ. ಇದರ ಪರಿಣಾಮವಾಗಿ ಕನಿಷ್ಟ ಅವಶ್ಯಕತೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ, ಆದಾಯ ಮತ್ತು ಸಂಪತ್ತು ಕೆಲವೇ ಜನರಲ್ಲಿ ಕೇಂದ್ರಿಕೃತವಾಗಿದ್ದರೆ ಸಮಗ್ರ ಬೇಡಿಕೆಯ ಪ್ರಮಾಣವು ಕಡಿಮೆ ಇರುತ್ತದೆ. ತದ್ವಿರುದ್ದವಾಗಿ ಆದಾಯ ಮತ್ತು ಸಂಪತ್ತು ಸಮಾನವಾಗಿ ಹಂಚಿಕೆಯಾಗಿದ್ದರೆ ಸಮಗ್ರ ಬೇಡಿಕೆಯು ಅಧಿಕವಿರುತ್ತದೆ.

7) ಉಳಿತಾಯದ ಪ್ರವೃತ್ತಿ:

ಉಳಿತಾಯಗಳು ಹೆಚ್ಚಿದಾಗ ಅನುಭೋಗದ ಖರ್ಚಿಗೆ ಕಡಿಮೆ ಹಣ ದೊರೆಯುವುದರಿಂದ ಬೇಡಿಕೆ ಕಡಿಮೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಉಳಿತಾಯದ ಪ್ರವೃತ್ತಿ ಕಡಿಮೆಯಾದಾಗ ಬೇಡಿಕೆ ಹೆಚ್ಚುತ್ತದೆ.

8) ಉದ್ಯಮದ ಸ್ಥಿತಿಗತಿಗಳು:

ಉದ್ಯಮದ ಉತ್ಪಾದನೆ ಮತ್ತು ವ್ಯಾಪಾರದ ವಿಸ್ತರಣೆಗೆ ಅವಕಾಶಗಳಿರುವ ಸಂದರ್ಭದಲ್ಲಿ ವಸ್ತುಗಳಿಗೆ ಬೇಡಿಕೆ ಅಧಿಕವಾಗಿರುತ್ತದೆ. ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಬೇಡಿಕೆ ಕೆಳ ಮಟ್ಟದಲ್ಲಿರುತ್ತದೆ.

9) ನಿರೀಕ್ಷಣೆಗಳು:

ಬೆಲೆ ಬದಲಾವಣೆಯ ಬಗೆಗೆ ನಿರೀಕ್ಷಣೆಗಳೊಡನೆ ಬೇಡಿಕೆಯ ಪ್ರಮಾಣವೂ ಏರುಪೇರಾಗುತ್ತದೆ. ಭವಿಷ್ಯದಲ್ಲಿ ಬೆಲೆಗಳು ಏರುವವೆಂದು ನಿರೀಕ್ಷಿಸಿದರೆ ಪ್ರಸ್ತುತದಲ್ಲಿ ವಸ್ತುಗಳಿಗೆ ಬೇಡಿಕೆ ಅಧಿಕವಾಗುತ್ತದೆ ಹಾಗೂ ಭವಿಷ್ಯದಲ್ಲಿ ಬೆಲೆಗಳು ಇಳಿಯುವದೆಂದು ನಿರೀಕ್ಷಿಸಿದರೆ ಪ್ರಸ್ತುತದಲ್ಲಿ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ.

10) ಹಣದ ಸರಬರಾಜು:

ಹಣದ ಸರಬರಾಜು ಅಧಿಕವಾದಾಗ ಜನರಿಗೆ ಹೆಚ್ಚಿನ ಕೊಳ್ಳುವ ಶಕ್ತಿ ದೊರೆತು ಬೇಡಿಕೆಯು ಅಧಿಕವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹಣದ ಸರಬರಾಜು ಕುಗ್ಗಿದರೆ ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿ ಬೆಲೆಗಳು ಇಳಿಯುತ್ತವೆ.

11) ಪೂರಕ ವಸ್ತುಗಳು:

ಒಂದು ವಸ್ತುವಿಗೆ ಬೇಡಿಕೆ ಹೆಚ್ಚಿದರೆ ಅದಕ್ಕೆ ಪೂರಕವಾಗಿರುವ ಇತರ ವಸ್ತುಗಳಿಗೂ ಬೇಡಿಕೆ ಏರುತ್ತದೆ. ಉದಾಹರಣೆಗೆ: ಪೆನ್ನುಗಳ ಬೇಡಿಕೆ ಹೆಚ್ಚಿದರೆ, ಮಸಿಗೆ (ಇಂಕು) ಬೇಡಿಕೆ ಅಧಿಕವಾಗುತ್ತದೆ. ವಾಹನಗಳಿಗೆ ಬೇಡಿಕೆ ಅಧಿಕವಾದೊಡನೆ ತೈಲಕ್ಕೆ ಬೇಡಿಕೆ ಏರುತ್ತದೆ.

12) ಬದಲಿ ವಸ್ತುಗಳ ಬೆಲೆ:

ಬದಲಿ (ಪರ್ಯಾಯ) ವಸ್ತುಗಳ ಬೆಲೆ ಬದಲಾದಾಗ ಕೊಂಡುಕೊಳ್ಳುತ್ತಿರುವ ವಸ್ತುವಿನ ಬೇಡಿಕೆಯಲ್ಲಿ ಏರುಪೇರಾಗುತ್ತದೆ. ಉದಾಹರಣೆಗೆ: ಚಹಾದ ಬೆಲೆ ಹೆಚ್ಚಾದಾಗ ಕಾಫಿಗೆ ಬೇಡಿಕೆ ಹೆಚ್ಚುತ್ತದೆ.

13) ಜಾಹೀರಾತು:

ವಸ್ತುವಿನ ಬಗೆಗೆ ಜಾಹೀರಾತು ಮತ್ತು ಪ್ರಚಾರದ ಪರಿಣಾಮವಾಗಿ ಅದಕ್ಕೆ ಬೇಡಿಕೆ ಹೆಚ್ಚಬಹುದು.

14) ಸರ್ಕಾರದ ನೀತಿ:

ಸರಕಾರದ ನೀತಿಯೂ ಕೂಡ ಬೇಡಿಕೆಯ ಗಾತ್ರವನ್ನು ನಿರ್ಧರಿಸುವ ಅಂಶಗಳಲ್ಲಿ ಒಂದಾಗಿದೆ. ಒಂದು ವಸ್ತುವಿನ ಮೇಲೆ ಹೆಚ್ಚು ತೆರಿಗೆ ಹಾಕಿದಾಗ ಅದರ ಬೆಲೆ ಏರಿದುದರ ಪರಿಣಾಮವಾಗಿ ಬೇಡಿಕೆ ತಗ್ಗುತ್ತದೆ. ಸರ್ಕಾರವು ಸಹಾಯ ಧನ ನೀಡಿದಾಗ ಆ ವಸ್ತುವಿನ ಬೆಲೆಯು ಕಡಿಮೆಯಾಗಿ ವಸ್ತುವಿಗೆ ಬೇಡಿಕೆ ಹೆಚ್ಚುತ್ತದೆ.

ಉಪಸಂಹಾರ

ಹೀಗೆ ಬೇಡಿಕೆಯು ಅಭಿರುಚಿಗಳು, ಅನುಭೋಗಿಗಳ ಆದಾಯ, ವಸ್ತುವಿನ ಬೆಲೆ, ಹವಾಮಾನ, ಜನಸಂಖ್ಯೆಯ ಗಾತ್ರ, ಸಂಪತ್ತಿನ ವಿತರಣೆ, ಉಳಿತಾಯದ ಪ್ರವೃತ್ತಿ, ಉದ್ಯಮದ ಸ್ಥಿತಿಗತಿ, ನಿರೀಕ್ಷಣೆಗಳು, ಹಣದ ಸರಭರಾಜು, ಪೂರಕ ವಸ್ತುಗಳು ಮುಂತಾದ ಅಂಶಗಳಿಂದ ನಿರ್ಧರಿತವಾಗುತ್ತದೆ.