ಚೋಳರ ಕಾಲದ ಗ್ರಾಮಾಡಳಿತವು ಅತ್ಯಂತ ವೈಶಿಷ್ಟ್ಯಪೂರ್ಣವೆನಿಸಿತ್ತು. ಚೋಳರ ಗ್ರಾಮಾಡಳಿತದ ಸ್ಪಷ್ಟ ಚಿತ್ರಣವನ್ನು ಚೋಳಪರಾಂತಕನ ಉತ್ತರ ಮೇರೂರು ಶಾಸನ ವಿವರಣೆ ನೀಡುತ್ತದೆ. ಗ್ರಾಮಾಡಳಿತವನ್ನು ಗ್ರಾಮಸಭೆಯು ನೋಡಿಕೊಳ್ಳುತಿತ್ತು, ಗ್ರಾಮಾಡಳಿತದಲ್ಲಿ ಚೋಳ ಅಧಿಕಾರಿಗಳು ಸಲಹೆಗಾರರಾಗಿ ಮತ್ತು ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಉತ್ತರ ಮೇರೂರು ಶಾಸನದ ಪ್ರಕಾರ ಗ್ರಾಮಾಡಳಿತದಲ್ಲಿ ಎರಡು ಸಭೆಗಳಿದ್ದವು. ಅವುಗಳೆಂದರೆ ‘ಉರ್ ಮತ್ತು ಸಭಾ’. ಉರ್ಗಳು ಬಹುತೇಕ ಗ್ರಾಮಗಳಲ್ಲಿ ಅಸ್ತಿತ್ವದಲ್ಲಿದ್ದವು. ‘ಸಭಾ’ಗಳು ಬ್ರಾಹ್ಮಣರಿಗೆ ದತ್ತಿ ಕೊಡಲಾದ ಗ್ರಾಮಗಳಲ್ಲಿ ಕಂಡುಬರುತ್ತಿದ್ದವು. ಕೆಲವು ಗ್ರಾಮಗಳಲ್ಲಿ ‘ ಉರ್ ‘ಮತ್ತು ‘ಸಭಾ’ಗಳೆರಡು ಕಂಡುಬರುತ್ತಿದ್ದವು.
ಉತ್ತರ ಮೇರೂರ್ (ಚಂಗಲ್ ಪೇಟೆ ಜಿಲ್ಲೆ) ಶಿಲಾಶಾಸನವು ವೈಕುಂಠ ದೇವಸ್ಥಾನದ ಗೋಡೆಯ ಮೇಲೆ ಕೊರೆಯಲ್ಪಟ್ಟಿದೆ. ಇದು 2 ಶಾಸನಗಳನ್ನು ಒಳಗೊಂಡಿದ್ದು ಮೊದಲನೇ ಪರಾಂತಕನ 12 ಮತ್ತು 14ನೇ ಆಳ್ವಿಕೆಯ ವರ್ಷಗಳಲ್ಲಿ ಹೊರಡಿಸಲ್ಪಟ್ಟಿವೆ. ಮೊದಲನೇ ಶಾಸನವು ಗ್ರಾಮಸಭೆಗಳ ಸಂವಿಧಾನಿಕ ನೀತಿ ನಿಯಮಗಳನ್ನೊಳಗೊಂಡಿದೆ, ಎರಡನೆ ಶಾಸನವು ನೀತಿ ನಿಯಮಗಳ ದೀರ್ಘ ವಿವರಣೆಯನ್ನು ಮತ್ತು ಸುಧಾರಿತ ನೀತಿ ನಿಯಮಗಳನ್ನು ಒಳಗೊಂಡಿದೆ ಕ್ರಿಶ 921ರಲ್ಲಿ ಮೊದಲನೇ ಪರಾಂತಕನ 14ನೇ ಆಳ್ವಿಕೆಯ ವರ್ಷದಲ್ಲಿ ಹೊರಡಿಸಲ್ಪಟ್ಟ ಶಾಸನದ ನಿಯಮದ ಪ್ರಕಾರ ಹಳ್ಳಿಯಲ್ಲಿರುವ 30 ವಿಭಾಗಗಳ ಪೈಕಿ ಪ್ರತಿಯೊಂದು ವಿಭಾಗವು ಒಬ್ಬೊಬ್ಬ ಅಭ್ಯರ್ಥಿಯನ್ನು ಅಂತಿಮ ಆಯ್ಕೆಗೋಸ್ಕರ ನಾಮಕರಣ ಮಾಡಲಾಗುತಿತ್ತು ಈ ನಾಮಕರಣಗೊಳ್ಳುವ ಸದಸ್ಯರಿಗೆ ಕೆಲವು ಅರ್ಹತೆ ಮತ್ತು ಆನರ್ಹತೆಗಳನ್ನು ನಿಗಧಿಗೊಳಿಸಲಾಗಿತ್ತು.
ಸದಸ್ಯರಿಗಿರಬೇಕಾದ ಅರ್ಹತೆಗಳು:
ಚುನಾವಣೆಗೆ ಅಭ್ಯರ್ಥಿಯಾಗುವವನಿಗೆ ಕೆಳಗಿನ ಕನಿಷ್ಠ ಅರ್ಹತೆಗಳಿರಬೇಕಾಗಿತ್ತು.
1. ಅಭ್ಯರ್ಥಿಯು ಕನಿಷ್ಠ 1/4ವೇಲಿ (ಒಂದೂವರೆ ಎಕರೆಯಷ್ಟು) ತೆರಿಗೆ ಕೊಡುವ ಜಮೀನಿನ ಒಡೆಯನಾಗಿರಬೇಕು..
2. ತನ್ನದೇ ಆದ ಗೃಹನಿವೇಶನದಲ್ಲಿ ಕಟ್ಟಿದ ಒಂದು ಮನೆಯಲ್ಲಿ ವಾಸವಾಗಿರಬೇಕು.
3. 35 ವರ್ಷಕ್ಕಿಂತ ಹೆಚ್ಚು ಮತ್ತು 70ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
4. ವೈದಿಕ ಮಂತ್ರಗಳು ಮತ್ತು ಬ್ರಾಹ್ಮಣಗಳ ಜ್ಞಾನವಿರಬೇಕು, ಇಲ್ಲವಾದರೆ / ಬೇಲಿಯಷ್ಟು ಅವನಿಗೆ ಭೂಮಿಯಿದ್ದು ಅವನು ಒಂದು ವೇದ ಮತ್ತು ಒಂದು ಭಾಷ್ಯದಲ್ಲಿ ಪಾರಂಗತನಾಗಿರಬೇಕು.
5. ಮೇಲ್ಕಂಡ ಆರ್ಹತೆಗಳನ್ನು ಹೊಂದಿದವರಲ್ಲಿ ವ್ಯಾಪಾರವನ್ನು ಚೆನ್ನಾಗಿ ಅರಿತವರು ಹಾಗೂ ಗುಣವಂತರು, ಪ್ರಾಮಾಣಿಕರಿಗೆ ಮತ್ತು ಶುದ್ಧ ಮನಸ್ಸನ್ನು ಹೊಂದಿದವರನ್ನು ಆರಿಸಲಾಗುತ್ತಿತ್ತು.
ಅನರ್ಹತೆಗಳು:
ಈ ಮೇಲ್ಕಂಡ ಅರ್ಹತೆಗಳನ್ನು ಹೊಂದಿದ್ದರೂ, ಕೆಳಕಂಡ ಆಗರ್ಹತೆಗಳಿದ್ದಲ್ಲಿ ಅವರುಗಳಿಗೆ ಅವಕಾಶವಿರಲಿಲ್ಲ.
1. ಒಬ್ಬ ವ್ಯಕ್ತಿಯು ಕಳೆದ ವರ್ಷಗಳಿಂದ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿದ್ದರೆ ಪುನರಾಯ್ಕೆಗೆ ಅನರ್ಹನಾಗುತ್ತಿದ್ದನು.
2. ಸಮಿತಿಯಲ್ಲಿದ್ದು ಸಮರ್ಪಕವಾದ ಲೆಕ್ಕಪತ್ರಗಳು ಹಾಗೂ ಇತರೆ ವಿಷಯಗಳ ಮಾಹಿತಿಯನ್ನು ಸಲ್ಲಿಸದೇ ಇರುವ ಅಭ್ಯರ್ಥಿ ಹಾಗೂ ಅವನ ಹತ್ತಿರದ ಸಂಬಂಧಿಕರು ಚುನಾವಣೆಗೆ ಸ್ಪರ್ಧಿಸಲು ಆನರ್ಹರಾಗುತ್ತಿದ್ದರು.
3. ಯಾರ ವಿರುದ್ಧ ಪಂಚ ಮಹಾಪಾಪಗಳಲ್ಲಿ ಮೊದಲ ನಾಲ್ಕು ಪಾಪಗಳಾದ ಬ್ರಾಹ್ಮಣ ಹತ್ಯೆ, ಮದ್ಯಸೇವನೆ, ಕಳ್ಳತನ ಮತ್ತು ವ್ಯಭಿಚಾರದ ಆರೋಪವಿರುತ್ತದೋ ಅವನ ಮತ್ತು ಅವನ ಸಂಬಂಧಿಕರು ಆಯ್ಕೆಯಾಗಲು ಅನರ್ಹರಾಗುತ್ತಿದ್ದರು.
4. ಅವಿವೇಕಿಗಳು, ಮತ್ತೊಬ್ಬರ ಆಸ್ತಿಲಂಪಟರು, ನಿಷಿದ್ದ ಆಹಾರವನ್ನು ಸೇವಿಸಿದವರು. ಕೀಳುಜಾತಿಯವರೊಂದಿಗೆ ಸಂಬಂಧ ಹೊಂದಿದ್ದಕ್ಕೆ ವರ್ಣಭ್ರಷ್ಟನಾಗಿದ್ದು ಪ್ರಾಯಶ್ಚಿತ್ತ ವಿಧಿಗಳನ್ನು ಆಚರಿಸದವರು ಆನರ್ಹರಾಗುತ್ತಿದ್ದರು.
ಈ ಮೇಲ್ಕಂಡ ಅರ್ಹತೆ ಆನರ್ಹತೆಗಳ ಹಿನ್ನೆಲೆಯಲ್ಲಿ ಗ್ರಾಮಸಭೆಯ ಸದಸ್ಯರನ್ನು ಆರಿಸಲಾಗುತ್ತಿತ್ತು.
ಆಯ್ಕೆಯ ವಿಧಾನ:
ಪ್ರತಿಯೊಂದು ಗ್ರಾಮವು ವಾರ್ಡ್ ಅಥವಾ ವಿಭಾಗಗಳನ್ನು ಹೊಂದಿತ್ತು ಗ್ರಾಮಸಭೆಗೆ ಪ್ರತಿ ವಾರ್ಡಿ ನಿಂದ ಒಬ್ಬೊಬ್ಬ ಅಭ್ಯರ್ಥಿಯನ್ನು ಚುನಾವಣೆಯ ಮೂಲಕ ಆರಿಸಲಾಗುತ್ತಿತ್ತು. ಚುನಾವಣೆಗೆ ಸ್ಪರ್ಧಿಸಿದ ವ್ಯಕ್ತಿಗಳ ಹೆಸರುಗಳನ್ನು ತಾಳೆಗರಿಯ ಮೇಲೆ ಬರೆದು ಅಗಲವಾದ ಬಾಯುಳ್ಳ ಪಾತ್ರೆಯಲ್ಲಿ ಹಾಕುತ್ತಿದ್ದರು. ನಂತರ ಸರ್ವಸದಸ್ಯರ ಮಹಾಸಭೆಯಲ್ಲಿ ಮಗುವಿನಿಂದ ಚೀಟಿಯನ್ನು ಪಾತ್ರೆಯಿಂದ ಎತ್ತುವುದರ ಮೂಲಕ (ಲಾಟರಿ ವ್ಯವಸ್ಥೆ – ಕುಡುವೊಲೈ) ಆಯ್ಕೆಯಾದ ಪ್ರತಿನಿಧಿಯ ಹೆಸರನ್ನು ಪ್ರಕಟಿಸಲಾಗುತಿತ್ತು ಆಯ್ಕೆಯಾದ ಸದಸ್ಯನ ಕಾಲಾವಧಿಯು ಒಂದು ವರ್ಷವಾಗಿತ್ತು.
ಗ್ರಾಮ ಸಮಿತಿಗಳು ಅಥವಾ ವಾರಿಯಮ್ಗಳು:
ಆಯ್ಕೆಯಾದ 30 ಸದಸ್ಯರಲ್ಲಿ ಪ್ರಮುಖ ಸಮಿತಿಗಳನ್ನು ರಚಿಸಲಾಗುತ್ತಿತ್ತು.
1. ವಾರ್ಷಿಕಸಮಿತಿ (ಸಂವತ್ಸರ ವಾರಿಯಮ್) ಈ ಸಮಿತಿಯಲ್ಲಿ 12ಮಂದಿ ಸದಸ್ಯರಿದ್ದರು.
2. ತೊಟ್ಟಿವಾರಿಯಂ (ತೋಟ ಸಮಿತಿ) ಸಮಿತಿಯಲ್ಲಿ 12ಸದಸ್ಯರಿದ್ದರು.
3. ವಿಧಿವಾರಿಯಮ್ (ಕೆರೆಸಮಿತಿ) ಈ ಸಮಿತಿಯಲ್ಲಿ 6ಸದಸ್ಯರಿದ್ದರು.
ಈ ಮೇಲಿನ ಪ್ರಮುಖ ಸಮಿತಿಗಳಲ್ಲದೆ
1. ಪಂಚವಾರ ಸಮಿತಿ : 6 ಸದಸ್ಯರು,
2. ಪೊನ್ಸಾರಿಯಮ್ (ಚಿನ್ನದ ಸಮಿತಿ): 6 ಸದಸ್ಯರು.
ಇವರ ಅಧಿಕಾರವಧಿಯು 360 ದಿನಗಳಾಗಿದ್ದವು. ಸಮಿತಿಗಳ ಸಂಖ್ಯೆ ಮತ್ತು ಸದಸ್ಯರ ಸಂಖ್ಯೆಯು ಗ್ರಾಮದಿಂದ ಗ್ರಾಮಕ್ಕೆ ವ್ಯತ್ಯಾಸವಾಗುತ್ತಿತ್ತು, ಸಮಿತಿಗಳ ಸದಸ್ಯರನ್ನು ‘ವರಿಯಪೆರುಮಕ್ಕಳ್’ ಎಂದು ಕರೆಯಲಾಗುತಿತ್ತು. ಗ್ರಾಮಸಭೆಯನ್ನು ಗ್ರಾಮದ ದೇವಾಲಯಗಳಲ್ಲಿ ನಡೆಸಲಾಗುತಿತ್ತು ಕೆಲವು ಗ್ರಾಮಗಳಲ್ಲಿ ಮಹಾಸಭಾ ಮತ್ತು ಪೆರುಂಗಿರಿ ಎಂಬ ಸಮಿತಿಗಳಿದ್ದು ಅವುಗಳ ಸದಸ್ಯರನ್ನು ಪೆರುಮಕ್ಕಳ್ ಎಂದು ಕರೆಯಲಾಗುತ್ತಿತ್ತು.
ಗ್ರಾಮ ಸಭೆಯ (ಸಮಿತಿಗಳ) ಅಧಿಕಾರ ಹಾಗೂ ಕಾರ್ಯಗಳು:
ಗ್ರಾಮಸಭೆಯು ಆ ಗ್ರಾಮದ ಸಕಲ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರ ಹೊಂದಿತ್ತು.
1) ಗ್ರಾಮಸಭೆ ಖಾಸಗೀ ಭೂಮಿಯ ಮೇಲೆ ಅಧಿಪತ್ಯ ಹೊಂದಿದ್ದು, ಖಾಸಗಿ ಆಸ್ತಿಯ ವರ್ಗಾವಣೆಯ ಕಾರ್ಯವನ್ನು ಸಾಮಾನ್ಯಸಭೆಯು ನಿರ್ವಹಿಸುತ್ತಿತ್ತು. ಆಸ್ತಿಯ ವರ್ಗಾವಣೆಯಾಗಲು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು.
2) ಅರಣ್ಯಭೂಮಿ ಮತ್ತು ನಾಳುಭೂಮಿಯನ್ನು ಕೃಷಿಗೆ ಯೋಗ್ಯಭೂಮಿಯಾಗಿ ಪರಿವರ್ತಿಸುವುದು, ಸಾಗುವಳಿ ಭೂಮಿಯ ಉತ್ಪಾದನೆಯ ಆಧಾರದ ಮೇಲೆ ಭೂಕಂದಾಯ ನಿಗಧಿ ಮತ್ತು ವಸೂಲಿ ಮಾಡಲಾಗುತ್ತಿತ್ತು. ಭೂಮಾಲಿಕರು ಭೂಕಂದಾಯವನ್ನು ಪ್ರತಿವರ್ಷ ಕೊಡುವುದರ ಬದಲು ಒಮ್ಮೆಗೇ ದೊಡ್ಡಮೊತ್ತದ ಹಣವನ್ನು ಸಲ್ಲಿಸಬಹುದಿತ್ತು.
3) ಭೂಕಂದಾಯವನ್ನು ಸಮರ್ಪಕವಾಗಿ ಸಂದಾಯ ಮಾಡದಿದ್ದಾಗ ಭೂಮಿಯನ್ನು ಹರಾಜು ಮಾಡಿ ಹಣ ವಸೂಲಿ ಮಾಡಲಾಗುತಿತ್ತು.
4) ಭೂಮಿಯ ಅಳತೆಯ ಜವಾಬ್ದಾರಿಯನ್ನು ಕೇಂದ್ರಸರ್ಕಾರ ಹೊಂದಿತ್ತು. ಆದರೂ ಮಹಾಸಭೆಯ ಅನುಮತಿ ಪಡೆಯಬೇಕಾಗಿತ್ತು.
5) ಗ್ರಾಮೀಣ ಅಭಿವೃದ್ಧಿಗಾಗಿ ವಿಶೇಷ ಕರವನ್ನು ವಸೂಲಿ ಮಾಡುವ ಅಧಿಕಾರ ಗ್ರಾಮಸಭೆಗಿದ್ದು, ವಿಶೇಷ ಕರ ಹೊರತು ಪಡಿಸಿ ಭೂಕಂದಾಯದಿಂದ ಬರುತ್ತಿದ್ದ ಮೊತ್ತವನ್ನು ಕೇಂದ್ರ ಸರ್ಕಾರದ ಖಜಾನೆಗೆ ತುಂಬಬೇಕಾಗಿತ್ತು.
6) ದೊಡ್ಡ ಗ್ರಾಮದ ಆಡಳಿತ ನೋಡಿಕೊಳ್ಳಲು ಅನೇಕ ಸಮಿತಿಗಳು ನೇಮಕವಾಗಿದ್ದು ಅವುಗಳಿಗೆ ಸಹಾಯ ಮಾಡಲು ಅನೇಕ ಅಧಿಕಾರಿಗಳಿದ್ದರು. ನಾಯತ್ತರ್ (ನ್ಯಾಯ ಸಮಿತಿ) ಎಂಬ ಸಮಿತಿಯು ಮಹಾಸಭೆಯ ಒಂದು ಅಂಗವಾಗಿದ್ದು, ಅಪರಾಧಗಳನ್ನು ಪತ್ತೆಹಚ್ಚುವುದು, ಸಂಘರ್ಷಗಳು, ವಿವಾದಗಳನ್ನು ಬಗೆಹರಿಸುವುದು ಈ ಸಮಿತಿಯ ಕಾರ್ಯವಾಗಿತ್ತು.
7) ಗ್ರಾಮಸಭೆಯು ಗ್ರಾಮದ ನಿರ್ದಿಷ್ಟ ಪ್ರದೇಶದಲ್ಲಿ ಕೆಲವು ನಿರ್ದಿಷ್ಟ ವಸ್ತುಗಳನ್ನು ಮಾರಾಟಮಾಡಬೇಕೆಂದು ನಿಗದಿಗೊಳಿಸಿತ್ತು. ವ್ಯಾಪಾರಿ ವಸ್ತುಗಳ ಮೇಲೆ ತೆರಿಗೆ ವಿಧಿಸಿ ವಸೂಲಿ ಮಾಡಲಾಗುತಿತ್ತು. ತೋಟ ನಿರ್ವಹಣಾ ಸಮಿತಿಯು ರಸ್ತೆಗಳ ದುರಸ್ತಿ, ನಿರ್ಮಾಣ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಹೊಂದಿತ್ತು. ಕೆರೆ ಉಸ್ತುವಾರಿ ಸಮಿತಿಯು ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಕೆರೆಕಟ್ಟೆ, ಕಾಲುವೆಗಳ ನಿರ್ಮಾಣ, ದುರಸ್ಥಿಕಾರ್ಯವನ್ನು ನಿರ್ವಹಿಸುತಿತ್ತು. ‘ಧರ್ಮವಾರಿಯಮ್’ ಸಮಿತಿಯು ದಾನದತ್ತಿಗಳ ಮೇಲ್ವಿಚಾರಣೆ, ವೈದ್ಯಕೀಯ, ಶೈಕ್ಷಣಿಕ ಹಾಗೂ ಧರ್ಮಾರ್ಥ ಕಾರ್ಯಗಳನ್ನು ನಿರ್ವಹಿಸುತಿತ್ತು. ಗ್ರಾಮಸಮಿತಿಯು ನೈಸರ್ಗಿಕ ವಿಕೋಪಗಳಾದ ಪ್ರವಾಹ, ಬರಗಾಲ, ಆಹಾರದ ಅಭಾವದಂತಹ ಸಂದರ್ಭದಲ್ಲಿ ಜನರಿಗೆ ಸಹಕರಿಸುತಿತ್ತು.
ದೋಷಗಳು:
ಚೋಳರ ಕಾಲದ ಗ್ರಾಮಾಡಳಿತವು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದ್ದರೂ ಕೆಲವಾರು ಲೋಪದೋಷಗಳನ್ನು ಹೊಂದಿತ್ತು.
1. ಗ್ರಾಮಸಭೆಯ ಸದಸ್ಯನಾಗಲು ನಿಗದಿಪಡಿಸಿದ ಆಸ್ತಿಯನ್ನು ಹೊಂದಿರಬೇಕಾಗಿತ್ತು. ಆಸ್ತಿ ರಹಿತರಿಗೆ ಸದಸ್ಯನಾಗಲು ಅವಕಾಶವಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಾಡಳಿತವನ್ನು ‘ಸೀಮಿತ ಪ್ರಜಾಪ್ರಭುತ್ವ’ ಎಂದು ಕರೆಯಬಹುದಾಗಿದೆ.
2. ಗ್ರಾಮಾಡಳಿತವು ಎಲ್ಲಾ ಹಳ್ಳಿಗಳಲ್ಲಿಯೂ ಅಸ್ತಿತ್ವದಲ್ಲಿರಲಿಲ್ಲ. ಬ್ರಾಹ್ಮಣರ ಹಳ್ಳಿಗಳಲ್ಲಿ ಮಾತ್ರವಿದ್ದು ಅಬ್ರಾಹ್ಮಣರ ಹಳ್ಳಿಗಳಲ್ಲಿ ಕಂಡುಬರುತ್ತಿರಲಿಲ್ಲ.
3. ಕೆಲವೊಂದು ಅನರ್ಹತೆಗಳಲ್ಲಿ ‘ವರ್ಣ ಭ್ರಷ್ಟರಾದವರು'(ಬೇರೆ ಜಾತಿಯೊಂದಿಗೆ ಸಂಬಂಧ ಹೊಂದಿದವರು) ಸಹ ಬಂದಿದೆ. ಇದು ಇಂದಿನ ಸಂದರ್ಭದಲ್ಲಿ ಸಮಂಜಸ ಎನಿಸುವುದಿಲ್ಲ. ಬದಲಿಗೆ ಚಲನಶೀಲವಲ್ಲದ ಮೂಢ ಸಂಪ್ರದಾಯದಂತೆ ಕಂಡುಬರುತ್ತದೆ.