ಗುಪ್ತರ ಕಾಲವನ್ನು ಸುವರ್ಣಯುಗವೆಂದು ಕರೆಯುತ್ತಾರೆ. ಗುಪ್ತರ ಕಾಲದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಅತ್ಯದ್ಭುತ ಪ್ರಗತಿಯೇ ಇದಕ್ಕೆ ಕಾರಣವಾಗಿದೆ.

1. ಗುಪ್ತ ದೊರೆಗಳು ವಿಶಾಲ ಭೂಪ್ರದೇಶವನ್ನು ಒಂದುಗೂಡಿಸಿ ಬಹುದೊಡ್ಡ ಸಾಮ್ರಾಜ್ಯವನ್ನು ಆಳಿದರು.

2. ಸಮುದ್ರಗುಪ್ತ, ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನಂತಹ ಮಹಾನ್ ದೊರೆಗಳು ಗುಪ್ತ ವಂಶದಲ್ಲಿ ಆಳ್ವಿಕೆ ನಡೆಸಿದರು. ಇವರು ಪರಕೀಯ ಆಳ್ವಿಕೆಯನ್ನು ನಿರ್ಮೂಲಗೊಳಿಸಿ ಸುಭದ್ರ ಆಡಳಿತವನ್ನು ಸ್ಥಾಪಿಸಿದರು.

3. ಗುಪ್ತ ಅರಸರು ಸಾಮ್ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು.

4. ಆರ್ಥಿಕವಾಗಿ ಗುಪ್ತರ ಕಾಲವು ಸುಸ್ಥಿತಿಯ ಮತ್ತು ಏಳೆಯ ಕಾಲವಾಗಿತ್ತು. ವ್ಯಾಪಾರ ಮತ್ತು ವಾಣಿಜ್ಯ ಉಚ್ಛಾಯಸ್ಥಿತಿಯಲ್ಲಿದ್ದವು.

5. ಕಾಳಿದಾಸ, ಬಾಸ, ವಿಷ್ಣುಶರ್ಮ, ಶೂದ್ರಕರಂತಹ ಇನ್ನೂ ಅನೇಕ ಕವಿಗಳು, ವಿದ್ವಾಂಸರು, ಸಾಹಿತಿಗಳು ನಾಟಕಕಾರರೂ ಇದ್ದು ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದರು.

6. ಇಡೀ ಪ್ರಪಂಚವೇ ವಿಜ್ಞಾನ ಕ್ಷೇತ್ರದಲ್ಲಿ ಗಾಢ ನಿದ್ರೆಯಲ್ಲಿದ್ದಾಗ ಎಚ್ಚೆತ್ತ ಕಾಲವೇ ಗುಪ್ತ ಯುಗವಾಗಿದೆ. ಇಡೀ ಪ್ರಪಂಚಕ್ಕೆ ಜ್ಞಾನದೀವಿಗೆ ಹಿಡಿದ ಆರ್ಯಭಟ, ವರಾಹಮಿಹಿರ, ಬ್ರಹ್ಮಗುಪ್ತ ರಂತಹ ಮಹಾನ್ ವಿಜ್ಞಾನಿಗಳು ಗುಪ್ತ ಕಾಲದಲ್ಲಿ ಇದ್ದುದು ಒಂದು ಹೆಗ್ಗಳಿಕೆ.

7. ಧಾರ್ಮಿಕವಾಗಿ ಜೈನ ಮತ ಮತ್ತು ಬೌದ್ಧಮತಗಳು ಅವನತಿಯ ಹಾದಿ ಹಿಡಿದರೂ ಹಿಂದೂಧರ್ಮ ಮಾತ್ರ ಪುನರುಜ್ಜಿವನವಾಯಿತು, ಪುಷ್ಪಾವಸ್ತೆಯ ಹಿಂದೂಧರ್ಮ ಪರಾಕಾಷ್ಠೆ ತಲುಪಿತು.

8. ಹಿಂದೂ ಕಲೆ ಮತ್ತು ವಾಸ್ತುಶಿಲ್ಪ ಉದಯವಾದದ್ದು ಮತ್ತು ಏಳಿಗೆ ಹೊಂದಿದ್ದು ಗುಪ್ತರ ಕಾಲದಲ್ಲಿ ವಿದೇಶಿ ಪ್ರಭಾವದಿಂದ ಮುಕ್ತವಾದ ಭಾರತೀಯ ಕಲೆ ಪರಿಪೂರ್ಣವಾಗಿ ಅರಳಿತು. ನವ ಮನ್ವಂತರಕ್ಕೆ ಕಾರಣವಾಯಿತು.

ವಿವಿಧ ವಿದ್ವಾಂಸರ ಅಭಿಪ್ರಾಯವನ್ನು ಗಮನಿಸುವುದಾದರೆ

ಬರ್ನೆಟ್ ಪ್ರಕಾರ: ʻಗುಪ್ತರ ಕಾಲವು ಗ್ರೀಕ್‌ ಪರಿಕ್ಲಿಸ್ ಮತ್ತು ರೋಮಿನ ಆಗಸ್ವಸ್‌ನ ಕಾಲದಂತೆ’

ಸ್ಮಿತ್ ಪ್ರಕಾರ: ʻಗುಪ್ತರ ಕಾಲವನ್ನು ಇಂಗ್ಲೆಂಡಿನ ಎಲಿಜಬೆತ್ ಮತ್ತು ಸ್ಟುಆರ್ಟ್ ಕಾಲಕ್ಕೆ ಹೋಲಿಸಬಹುದು’

ಮ್ಯಾಕ್ಸ್ ಮುಲ್ಲರ್ ಪ್ರಕಾರ: ʻಗುಪ್ತರ ಕಾಲ ಹಿಂದೂ ಧರ್ಮದ ಪುನರುಜೀವನದ ಕಾಲ’

ಡಾ॥ ಕುಮಾರಸ್ವಾಮಿಯವರ ಪ್ರಕಾರ: ʻಗುಪ್ತರ ಕಾಲದಲ್ಲಿ ಆದುದು ಹಿಂದೂ ಧರ್ಮದ ಪುನರುಜೀವನ ಅಲ್ಲ. ಬದಲಿಗೆ ಅತ್ಯುನ್ನತಿ ಕಾಲ’.

ಈ ಮೇಲಿನ ಕಾರಣಗಳಿಂದ ಗುಪ್ತರ ಕಾಲವನ್ನು ಭಾರತೀಯ ಸಂಸ್ಕೃತಿಯ ಸುವರ್ಣಯುಗವೆಂದು ಕರೆಯಲಾಗಿದೆ.

ಅದೊಂದು ಮಿಥ್ಯೆ:

ಗುಪ್ತರ ಕಾಲದ ಸುವರ್ಣಯುಗ ಕಲ್ಪನೆಯು ಒಂದು ಮಿಥ್ಯ, ಕಲ್ಪನೆ ಎಂಬ ಅಭಿಪ್ರಾಯವೂ ಇದೆ. ರೋಮಿಲಾ ಥಾಪರ್, ಡಿ.ಎನ್.ಜಾ, ಆರ್.ಡಿ.ಶರ್ಮ, ಡಿ.ಡಿ.ಕೋಶಾಂಬಿ ಮುಂತಾದವರು ಸುವರ್ಣಯುಗವು ಸುಳ್ಳೆಂದು ವಾದಿಸಿದ್ದಾರೆ. ಅವರ ಪ್ರಕಾರ

1. ಶ್ರೇಷ್ಠತೆಯ ಕಲ್ಪನೆ ಉಚ್ಚವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಕೆಳವರ್ಗದ ಪರಿಸ್ಥಿತಿ ಚಿಂತಾಜನಕವಾಗಿತ್ತು.

2. ಗುಪ್ತರಕಾಲದಲ್ಲಿ ಉಳಿಗಮಾನ್ಯ ಪದ್ಧತಿ ಅಸ್ತಿತ್ವದಲ್ಲಿತ್ತು. ಇದನ್ನು ಜಹಗೀರು ಪದ್ಧತಿ, ಪಾಳೆಗಾರಿಕೆ ಪದ್ಧತಿ ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತಾರೆ. ಇದರ ಪ್ರಕಾರ ದೇವಾಲಯಗಳಿಗೆ ಮತ್ತು ಬ್ರಾಹ್ಮಣರಿಗೆ ದಾನ ಕೊಡಲಾಗುತ್ತಿತ್ತು. ಹೀಗಾಗಿ ರೈತರು ಪರರ ದಾಸ್ಯಕ್ಕೆ ಒಳಗಾದರು. ಅವರು ಭೂ ಉತ್ಪನ್ನದ ಕೆಲವು ಭಾಗವನ್ನು ಈ ಊಳಿಗಮಾನ್ಯ ಪ್ರಭುವಿಗೆ ಕೊಡಬೇಕಾಗುತ್ತಿತ್ತು. ಪರಿಣಾಮವಾಗಿ ರೈತರ ಪರಿಸ್ಥಿತಿ ಚಿಂತಾಜನಕವಾಯಿತು.

3. ಪುರೋಹಿತ ವರ್ಗವು ಪ್ರಾಬಲ್ಯಗೊಂಡು ಜಾತಿವ್ಯವಸ್ಥೆ ಜಟಿಲಗೊಂಡಿತು

4. ಆರ್ಥಿಕ ಪ್ರಗತಿ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಯಿತು.

5. ತೆರೆಗೆಗಳಿಂದ ಜನಸಾಮಾನ್ಯರ ಶೋಷಣೆ ನಿರಂತರವಾಯಿತು.

6. ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವ್ಯವಸ್ಥೆ ಹದಗೆಟ್ಟಿತು.

7. ಸಂಸ್ಕೃತ ಸಾಹಿತ್ಯ ಜನಸಾಮಾನ್ಯರನ್ನು ತಲುಪಲಿಲ್ಲ. ಕೇವಲ ವಿದ್ವಾಂಸರ ಮತ್ತು ಆಸ್ಥಾನ ಭಾಷೆಯಾಗಿ ಜನರಿಂದ ದೂರವಾಯಿತು.

8. ಹಿಂದೂ ಧರ್ಮದ ಪುನರುಜ್ಜಿವನವೆಂದರೆ ಅದು ತನ್ನ ಗರ್ಭದಲ್ಲಿ ಇಟ್ಟುಕೊಂಡ ವರ್ಣಾಶ್ರಮ ಧರ್ಮದ ಪುನರುಜ್ಜಿವನವೇ ಆಗಿದೆ. ಪರಿಣಾಮವಾಗಿ ಜಾತಿ ವ್ಯವಸ್ಥೆ ಮತ್ತಷ್ಟು ಕಠಿಣವಾಯಿತು. ಮೇಲು-ಕೀಳು ಕಲ್ಪನೆ ಮತ್ತಷ್ಟು ವ್ಯಾಪಕವಾಯಿತು. ಕೆಳಜಾತಿಯ ಜನರ ಪರಿಸ್ಥಿತಿ ಪ್ರಾಣಿಗಳಿಗಿಂತ ಕೀಳಾಯಿತು. ಸಮಾನತೆ ಶೂನ್ಯವಾಯಿತು.

ಉಪಸಂಹಾರ:

ಆಗ ಬ್ರಿಟೀಶರು ಆಳುತ್ತಿದ್ದರು. ಅವರು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಹೀಗಳೆಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಜನರನ್ನು ಜಾಗೃತಗೊಳಿಸಲು ಮತ್ತು ರಾಷ್ಟ್ರೀಯತೆಯ ಕಿಡಿ ಹೊತ್ತಿಸಲು ‘ಸುವರ್ಣಯುಗ’ ಕಲ್ಪನೆಯನ್ನು ತರಲಾಯಿತು. ಆದರೆ ಈಗ ಅದರ ಅವಶ್ಯಕತೆಯಿಲ್ಲ. ಹೀಗಾಗಿ ಗುಪ್ತರ ಕಾಲದ ಸುವರ್ಣಯುಗವನ್ನು ಮೇಲ್ವರ್ಗಕ್ಕೆ, ಬ್ರಾಹ್ಮಣಶಾಹಿ ಧರ್ಮಕ್ಕೆ, ಸಂಸ್ಕೃತ ಭಾಷೆಗೆ, ಸಾಹಿತ್ಯ ಮತ್ತು ಕಲಾರಂಗಕ್ಕೆ ಮಾತ್ರ ಸೀಮಿತ ಗೊಳಿಸಬಹುದು. ಉಳಿದಂತೆ ‘ಸುವರ್ಣಯುಗ’ವನ್ನು ಮಿಥೈಯೆಂದೆ ಗುರುತಿಸಬಹುದು.