ಪೂರ್ವವೈದಿಕ ಕಾಲವನ್ನು ಋಗ್ವೇದದ ಕಾಲವೆಂತಲೂ ಹೆಸರಿಸಲಾಗಿದೆ. ಋಗ್ವೇದದ ಕಾಲಮಾನದ ಬಗ್ಗೆ ತೀವ್ರ ಭಿನ್ನಾಭಿಪ್ರಾಯಗಳಿವೆ. ವಿಭಿನ್ನ ಕಾಲಮಾನಗಳ ಬಗ್ಗೆ ಅವಲೋಕಿಸಿದ ಆರ್.ಸಿ.ಮಜುಂದಾರ್ ರವರು ಕ್ರಿ.ಪೂ 2000-1500 ಋಗ್ವೇದದ ಕಾಲವೆಂದು ಅಭಿಪ್ರಾಯಪಟ್ಟಿದ್ದಾರೆ. ಋಗ್ವೇದದ ಕಾಲದ ಆರ್ಯರ ಜನಜೀವನವನ್ನು ಈ ಕೆಳಕಂಡ ಅಂಶಗಳಲ್ಲಿ ಅವಲೋಕಿಸಬಹುದು.
ಎ) ರಾಜಕೀಯ ವ್ಯವಸ್ಥೆ:
ಬಣ ರಾಜ್ಯಗಳು:
ಪೂರ್ವವೈದಿಕ ಕಾಲದ ಆರಂಭದಲ್ಲಿ ಬಣರಾಜ್ಯಗಳು ಸ್ಥಾಪನೆಯಾದವು. ಒಂದೊಂದು ಬಣಕ್ಕೆ ಒಂದೊಂದು ರಾಜ್ಯವಿತ್ತು. ಭರತ, ಕುರು, ಯದು ಮೊದಲಾದ ಬಣಗಳ ಹೆಸರುಗಳಿವೆ. ಬಣ ರಾಜ್ಯಗಳ ಮಧ್ಯೆ ಅಧಿಕಾರ ಸ್ಥಾಪನೆಗಾಗಿ ಹೋರಾಟಗಳು ನಡೆಯುತ್ತಿದ್ದವು. ಹಲವಾರು ಗ್ರಾಮಗಳನ್ನೊಳಗೊಂಡ ಘಟಕವನ್ನು ವಿಷಯ ವೆಂದು ವಿಷಯದ ಅಧಿಪತಿಯನ್ನು ವಿಷಯಪತಿ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಸಣ್ಣರಾಜ್ಯಗಳು ಏಳಿಗೆಗೆ ಬಂದವು. ರಾಜ್ಯಗಳನ್ನು ರಾಷ್ಟ್ರಎಂದು ಸಂಭೋದಿಸಿ, ಅದರ ಮುಖ್ಯಸ್ಥನನ್ನು ರಾಜನ್ ಎಂದು ಕರೆಯಲಾಗುತಿತು.
ರಾಜನ ಆಯ್ಕೆ:
ರಾಜನ ಆಯ್ಕೆಯು ಸಾಮಾನ್ಯವಾಗಿ ವಂಶಪಾರಂಪರ್ಯವಾಗಿತ್ತು. ಆದರೆ ಕೆಲವೊಮ್ಮೆ ರಾಜನನ್ನು ಚುನಾಯಿಸಲಾಗುತ್ತಿತ್ತು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ʻಐತ್ತರೇಯ’ ಬ್ರಾಹ್ಮಣದಲ್ಲಿ ರಾಜತ್ವದ ಉಗಮದ ಬಗ್ಗೆ ಉಲ್ಲೇಖವಿದ್ದು ʻಮನುಷ್ಯನ ದಿನನಿತ್ಯದ ಅವಶ್ಯಕತೆ ಮತ್ತು ಸೈನಿಕ ರಕ್ಷಣಾ ಅವಶ್ಯಕತೆಗಳಿಗಾಗಿ ರಾಜತ್ವ ಉದಯವಾಯಿತು ಎಂದಿದೆ’.
ಮಂತ್ರಿಗಳು ಮತ್ತು ಪ್ರಮುಖ ಅಧಿಕಾರಿಗಳು:
ರಾಜನಿಗೆ ಆಡಳಿತದಲ್ಲಿ ಸಹಕರಿಸಲು ಮಂತ್ರಿಪರಿಷತ್ ಇತ್ತು. ಇದರಲ್ಲಿರುವ ಮಂತ್ರಿಗಳು ಯೋಗ್ಯ ಮತ್ತು ಅನುಭವವುಳ್ಳ, ಶುದ್ಧ ಹಾಗೂ ಮೇಲ್ಮಟ್ಟದ ಚಾರಿತ್ರ್ಯ ಹೊಂದಿದವರಾಗಿದ್ದರು. ಬಂಡಿ ಚಲಿಸಲು ಚಕ್ರಗಳ ಅಗತ್ಯತೆ ಇರುವಂತೆ ಮಂತ್ರಿಗಳು ರಾಜನಿಗೆ ಅಗತ್ಯವಾಗಿ ಬೇಕಿತ್ತು. ಅಲ್ಲದೆ ಪುರೋಹಿತ, ಗ್ರಾಮಿಕ ಮತ್ತು ಸೇನಾನಿ ಎಂಬ ಆಡಳಿತಾಧಿಕಾರಿಗಳಿದ್ದರು.
ಪುರೋಹಿತನು ರಾಜ್ಯದ ಶ್ರೇಯಸ್ಸಿಗಾಗಿ ಪೌರೋಹಿತ್ಯದ ಕಾರ್ಯ ನಿರ್ವಹಿಸುತ್ತಿದ್ದನು. ಸೇನಾನಿಯು ರಾಜ್ಯದ ರಕ್ಷಣಾಕಾರ್ಯ ಮಾಡುತ್ತಿದ್ದನು. ಗ್ರಾಮಿಣಿಯು ಗ್ರಾಮೀಣ ಆಡಳಿತವನ್ನು ನೋಡಿಕೊಳ್ಳುತ್ತಿದ್ದನು.
ಸಭಾ ಮತ್ತು ಸಮಿತಿ:
ವೈದಿಕ ರಾಜ್ಯದ ವ್ಯವಹಾರಗಳಲ್ಲಿ ಪ್ರಸಿದ್ದ ಸಭೆಗಳಾದ ಸಭಾ ಮತ್ತು ಸಮಿತಿಗಳು ಭಾಗವಹಿಸುತ್ತಿದ್ದವು. ಸಭಾ ಮತ್ತು ಸಮಿತಿಗಳು ರಾಜನಿಗೆ ಸಲಹೆ, ಸೂಚನೆ ನೀಡುತ್ತಿದ್ದವು. ಎ.ಎಲ್.ಬಾಷ್ಯಂ ರವರು ತಮ್ಮ ಕೃತಿಯಾದ ‘ಎ ವಂಡರ್ ದಟ್ ವಾಸ್ ಇಂಡಿಯಾ’ ಎಂಬುದರಲ್ಲಿ ಸಭಾ ಮತ್ತು ಸಮಿತಿಗಳ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ಸಭಾ ಮತ್ತು ಸಮಿತಿಗಳನ್ನು ʻಸಭಾಪತಿ’ ಎಂಬುವನು ಅಧ್ಯಕ್ಷತೆವಹಿಸುತ್ತಿದ್ದನು. ಸಭಾ ಮತ್ತು ಸಮಿತಿಗಳ ನಿರ್ದಿಷ್ಟ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸುವುದು ಕಷ್ಟಸಾದ್ಯ.
ಬಿ) ಸಾಮಾಜಿಕ ಜೀವನ:
ಪೂರ್ವವೈದಿಕ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಹಲವಾರು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ.
ವಿಭಕ್ತ ಕುಟುಂಬ (Nuclear family ):
ಋಗ್ವೇದದ ಪ್ರಾರಂಭದಲ್ಲಿ ʻವಿಭಕ್ತ ಕುಟುಂಬ’ವಿತ್ತು. ಇಲ್ಲಿ ತಂದೆ-ತಾಯಿ ಮತ್ತು ಮಕ್ಕಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಋಗ್ವೇದದ ಅಂತ್ಯದ ಕಾಲದಲ್ಲಿ ಆಸ್ತಿಯ ಕಲ್ಪನೆ ಬೆಳೆದಂತೆ ಅವಿಭಕ್ತಕುಟುಂಬ ವ್ಯವಸ್ಥೆ ಬೆಳೆದು ಬಂದಿದ್ದು ಕಂಡುಬರುತ್ತದೆ.
ಪಿತೃ ಪ್ರಧಾನ ಕುಟುಂಬ:
ಸಾಮಾಜಿಕ ವ್ಯವಸ್ಥೆಯ ಮತ್ತೊಂದು ಪ್ರಮುಖ ಲಕ್ಷಣ ಪಿತೃಪ್ರಧಾನ ಕುಟುಂಬದ ರಚನೆ. ತಂದೆಯ ಮರಣಾನಂತರ ಹಿರಿಯ ಮಗ ಅಧಿಕಾರಕ್ಕೆ ಬರುತ್ತಿದ್ದನು.
ಸ್ತ್ರೀಯರ ಸ್ಥಾನ:
ಪುರುಷನಂತೆ ಸ್ತ್ರೀಗೂ ಸಮಾಜದಲ್ಲಿ ಪ್ರಮುಖ ಸ್ಥಾನವಿತ್ತು. ಸ್ತ್ರೀಯು ಪುರುಷನಂತೆ ವೇದಾಧ್ಯಯನ ಮಾಡಲು ಅವಕಾಶವಿತ್ತು. ಲೋಪಮುದ್ರ, ವಿಶ್ವಾವರ, ಅಪಾಲ ಮೊದಲಾದ ಸ್ತ್ರೀಯರು ವಿದ್ವಾಂಸರಾಗಿದ್ದರು.
ಜಾತಿಪದ್ಧತಿ:
ಜಾತಿಪದ್ಧತಿಯು ಅಸ್ತಿತ್ವದಲ್ಲಿತ್ತೇ ಅಥವಾ ಇಲ್ಲವೆ ಎಂಬುದರ ಬಗ್ಗೆ ಖಚಿತವಾಗಿ ಹೇಳುವುದು ಕಷ್ಟ. ಈ ಕಾಲದಲ್ಲಿ ಕ್ಷತ್ರ ಮತ್ತು ವಿಶ ಎಂಬ ಎರಡು ಜಾತಿಗಳಿರಬೇಕೆಂದು ಅಭಿಪ್ರಾಯ.
ಉಡುಪು ಮತ್ತು ಆಭರಣಗಳು:
ಹತ್ತಿ ಮತ್ತು ಉಣ್ಣೆಯ ಬಟ್ಟೆಗಳನ್ನು ಧರಿಸುತ್ತಿದ್ದರು. -ಪುರುಷರ ಉಡುಪುಗಳು ಮೇಲುಹೊದಿಕೆ ಮತ್ತು ಕೆಳಹೊದಿಕೆ ಎಂದು ವಿಂಗಡಿಸಲಾಗಿತ್ತು. ಸ್ತ್ರೀ-ಪುರುಷರು ಆಭರಣಪ್ರಿಯರಾಗಿದ್ದರು. ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಿದ ವಿವಿಧ ಆಭರಣಗಳನ್ನು ಹಾಕಿಕೊಳ್ಳುತ್ತಿದ್ದರು.
ವಿವಾಹ ಪದ್ಧತಿ:
ಏಕಪತ್ನಿತ್ವ ಮತ್ತು ಬಹುಪತ್ನಿತ್ವ ಪದ್ಧತಿಗಳೆರಡು ಅಸ್ತಿತ್ವದಲ್ಲಿದ್ದವು. ರಾಜರು ಬಹುಪತ್ನಿ ವ್ರತಸ್ಥರಾಗಿದ್ದರು. ವರದಕ್ಷಿಣೆ ಸಾಮಾನ್ಯ ಸಂಗತಿಯಾಗಿದ್ದು ಕೆಲವೊಮ್ಮೆ ವಧುದಕ್ಷಿಣೆ ಪದ್ಧತಿಯು ಕಂಡುಬರುತ್ತಿತ್ತು. ವಿವಾಹದ ಪ್ರಮುಖ ಉದ್ದೇಶಗಳಲ್ಲಿ ಪುರುಷ ಸಂತಾನ ಪಡೆಯುವುದು ಪ್ರಮುಖವಾಗಿತ್ತು.
ಆಹಾರ ಪಾನೀಯಗಳು:
ಮಿಶ್ರ ಆಹಾರ ಪದ್ಧತಿ ಕಂಡುಬರುತಿತ್ತು. ಗೋದಿ, ಬಾರಿ, ಬೆಣ್ಣೆ, ತುಪ್ಪ, ಸಸ್ಯಹಾರಗಳಾದರೆ ಕುರಿ, ಮೇಕೆ, ಕೋಳಿ ಮೊದಲಾದ ಪ್ರಾಣಿಗಳನ್ನು ಮಾಂಸಹಾರಕ್ಕಾಗಿ ಬಳಸುತ್ತಿದ್ದರು. ಸೋಮರಸ ಮತ್ತು ಸುರೆ ಎಂಬ ಮತ್ತಿನ ಪಾನೀಯಗಳನ್ನು ಸೇವಿಸುತ್ತಿದ್ದರು.
ಮನರಂಜನೆ:
ಮನರಂಜನೆಗಾಗಿ ಒಳಾಂಗಣ ಮತ್ತು ಹೊರಾಂಗಣದ ಆಟಗಳನ್ನು ಆಡುತ್ತಿದ್ದರು. ಚದುರಂಗ, ಚೌಕಾಬಾರ ಒಳಾಂಗಣದ ಆಟಗಳಾಗಿದ್ದರೆ, ಬೇಟೆಯಾಡುವುದು ರಥದ ಜೂಜು, ಕುದುರೆಯ ಜೂಜು ಮೊದಲಾದವು ಹೊರಾಂಗಣದ ಆಟಗಳಾಗಿದ್ದವು.
ಸಿ) ಆರ್ಥಿಕ ಜೀವನ:
ಋಗ್ವೇದ ಕಾಲದ ಆರ್ಯನ್ನರ ಆರ್ಥಿಕ ವ್ಯವಸ್ಥೆಯು ಕೆಲವು ಪ್ರಮುಖ ಕಸುಬುಗಳನ್ನು ಹಲವಾರು ಉಪಕಸುಬುಗಳನ್ನು ಆಧರಿಸಿತ್ತು. ಪ್ರಮುಖ ಕಸುಬುಗಳು: ವ್ಯವಸಾಯ, ವ್ಯಾಪಾರ, ಪಶುಪಾಲನೆ ಪ್ರಧಾನ ಕಸುಬುಗಳಾಗಿದ್ದವು.
ವ್ಯವಸಾಯ:
ಇದು ಋಗ್ವೇದ ಕಾಲದ ಪ್ರಧಾನ ಕಸುಬುಗಳಲ್ಲೊಂದು. ಕಾಡನ್ನು ಕಡಿದು ವ್ಯವಸಾಯ ಯೋಗ್ಯ ಭೂಮಿಯನ್ನು ನಿರ್ಮಿಸಿಕೊಂಡಿದ್ದರು. ಭೂಮಿಯ ಉಳುಮೆಗೆ ನೇಗಿಲನ್ನು ಬಳಸುತ್ತಿದ್ದರು ಹೋರಿಗಳು ಬಳಕೆ ಯಲ್ಲಿದ್ದವು. ಬಾರ್ಲಿಯು ಪ್ರಧಾನ ಬೆಳೆಯಾಗಿತ್ತು. ಇದನ್ನು ʻಯವ’ ಎಂದು ಹೆಸರಿಸಲಾಗಿದೆ.
ಪಶುಪಾಲನೆ:
ಈ ಕಾಲದ ಮತ್ತೊಂದು ಪ್ರಧಾನ ಕಸುಬು ʻಹಸುವು’ ಪವಿತ್ರವಾದುದಾಗಿತ್ತು. ಹಸುವನ್ನು ʻಅಘ್ನʼ ಎಂದು ಕರೆಯುತ್ತಿದ್ದರು. ಗೋಮಾಂಸ ಸೇವನೆ ನಿಷೇದಿಸಲ್ಪಟ್ಟಿತ್ತು. ಗೋವನ್ನು ಕೊಂದರೆ ಕೊಂದ ವ್ಯಕ್ತಿಯನ್ನು ಮರಣದಂಡನೆಗೆ ಗುರಿಪಡಿಸುತ್ತಿದ್ದರು, ಕುದುರೆ ಬಳಕೆ ಹೆಚ್ಚಾಗಿದ್ದು ಕತ್ತೆ, ಕುರಿ, ಮೇಕೆಗಳನ್ನು ಸಹ ಸಾಕುತ್ತಿದ್ದರು.
ವ್ಯಾಪಾರ:
ಆಂತರಿಕ ಮತ್ತು ಅಂತರಾಷ್ಟ್ರೀಯ ವ್ಯಾಪಾರ ಅಸ್ತಿತ್ವದಲ್ಲಿತ್ತು. ವ್ಯಾಪಾರದಲ್ಲಿ ವಸ್ತು ವಿನಿಮಯ ಪದ್ಧತಿ ಅಸ್ತಿತ್ವದಲ್ಲಿದ್ದು ಹಸುವನ್ನು ವಿನಿಮಯಕ್ಕಾಗಿ ಬಳಸುತ್ತಿದ್ದರು. ಎತ್ತಿನ ಗಾಡಿ, ರಥ ಮತ್ತು ದೋಣಿಗಳನ್ನು ವಸ್ತುಗಳ ಸಾಗಾಣಿಕೆಗೆ ಬಳಸುತ್ತಿದ್ದರು. ಭೂಸಾರಿಗೆ ಮತ್ತು ಜಲಸಾರಿಗೆಗಳೆರಡು ಅಭಿವೃದ್ಧಿಹೊಂದಿದ್ದವು.
ಉಪಕಸುಬುಗಳು:
ವೈದಿಕಸಂಸ್ಕೃತಿಯ ಜನರು ಜೀವನ ನಿರ್ವಹಣೆಗಾಗಿ ಹಲವಾರು ಉಪಕಸುಬುಗಳನ್ನು ಅವಲಂಬಿಸಿದ್ದರು. ನೂಲುವುದು, ನೇಯ್ಗೇ, ಆಭರಣಗಳ ತಯಾರಿಕೆ, ಕರಕುಶಲ ಕಲೆ ಮೊದಲಾದವು ಉಪಕಸುಬುಗಳಾಗಿದ್ದವು.
ಡಿ) ಧಾರ್ಮಿಕ ಜೀವನ:
ಪೂರ್ವ ವೈದಿಕಕಾಲದ ಆರ್ಯರಧಾರ್ಮಿಕ ಜೀವನವು ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿತ್ತು.
ಪ್ರಕೃತಿಯ ಆರಾಧನೆ:
ಆರ್ಯರ ಪ್ರಾರಂಭಿಕ ಧಾರ್ಮಿಕ ಜೀವನದಲ್ಲಿ ಪ್ರಕೃತಿಯ ಆರಾಧನೆಯು ಪ್ರಮುಖವಾಗಿ ಕಂಡುಬರುತ್ತದೆ. ಪ್ರಕೃತಿಯಲ್ಲಿ ಬರುವ 33 ದೇವಾನುದೇವತೆಗಳನ್ನು ಆರಾಧಿಸುತ್ತಿದ್ದರು. ಇಂತಹ ದೇವತೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದರು.
1.ಭೂದೇವತೆಗಳು
2. ಸ್ವರ್ಗದ ದೇವತೆಗಳು
3.ಆಂತರಿಕ್ಷ ದೇವತೆಗಳು
ಆರಾಧನೆಯ ಪ್ರಮುಖ ದೇವಾನುದೇವತೆಗಳು:
ಇಂದ್ರ, ಅಗ್ನಿ, ವಾಯು, ಪೃಥ್ವಿ, ವರುಣ, ಉಷಸ್ ಇವುಗಳು ಪ್ರಧಾನವಾದ ದೇವಾನುದೇವತೆಗಳಾಗಿದ್ದರು.
ಯಾಗ ಯಜ್ಞಾದಿಗಳು:
ಪೂರ್ವ ವೈದಿಕಕಾಲದ ಧಾರ್ಮಿಕ ವ್ಯವಸ್ಥೆಯಲ್ಲಿನ ಬೆಳವಣಿಗೆಯ ಒಂದು ಪ್ರಮುಖ ಅಂಶವೆಂದರೆ ಯಾಗಯಜ್ಞಾದಿಗಳು ಹುಟ್ಟಿಕೊಂಡಿದ್ದು. ಪೂರ್ವವೈದಿಕಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಪುರೋಹಿತರ ವಿಶೇಷ ಪೂಜೆಗಳು ಮತ್ತು ಅಂತಹ ಪೂಜಾ ಸಮಯದಲ್ಲಿ ಮಂತ್ರಗಳ ಪಠಣ ವ್ಯವಸ್ತೆಯೇ ಯಾಗಯಜ್ಞಗಳಾಗಿ ರೂಪುಗೊಂಡವು. ಯಾಗ ಯಜ್ಞಗಳನ್ನು ಆಚರಿಸುವುದರಿಂದ ಇಹ ಜೀವನದಲ್ಲಿ ನೆಮ್ಮದಿಯು, ಸದ್ಗತಿಯು, ಮೋಕ್ಷವು ದೊರೆಯುತ್ತದೆ ಎಂಬ ನಂಬಿಕೆ ಪ್ರಬಲವಾಯಿತು. ಇದರ ಹಿನ್ನೆಲೆಯಲ್ಲಿ ಯಾಗಯಜ್ಞಗಳು ಪ್ರಧಾನವಾಗಿ ಕಂಡುಬಂದವು. ಇಂತಹ ಯಾಗ ಯಜ್ಞಗಳು ಜನಸಾಮಾನ್ಯರಿಗೆ ಅಧಿಕ ಆರ್ಥಿಕ ಹೊರೆಯಾಗಿದ್ದರೂ ಅವುಗಳ ಆಚರಣೆ ಅನಿವಾರ್ಯವೆನಿಸಿತ್ತು. ಪೂರ್ವ ವೈದಿಕ ಕಾಲದಲ್ಲಿ ಏಳು ಮಂದಿ ಪುರೋಹಿತರು ಧಾರ್ಮಿಕ ವ್ಯವಸ್ಥೆಯಲ್ಲಿ ಪ್ರಧಾನಪಾತ್ರ ವಹಿಸುತ್ತಿದ್ದರು.
ಬಲಿಪದ್ಧತಿ:
ಯಾಗ ಯಜ್ಞಗಳ ಆಚರಣೆಯ ನಂತರ ಪ್ರಾಣಿಗಳನ್ನು ಇಷ್ಟದೇವತೆಗಳಿಗೆ ಬಲಿಯಾಗಿ ನೀಡುತ್ತಿದ್ದರು. ಗೋಹತ್ಯೆಯಿಂದಾಗಿ ಗೋಸಂಪತ್ತು ಕ್ಷೀಣಿಸಿತು. ಯಜ್ಞದ ಕಾಲದಲ್ಲಿ ಬಂದ ಅತಿಥಿಗಳನ್ನು ಗೊಗ್ನ ಎಂದು ಕರೆಯುತಿದ್ದರು. ‘ಗೊಗ್ನ’ ಎಂದರೆ ಗೋವನ್ನು ಸೇವಿಸುವವನು ಎಂದರ್ಥ. ಕ್ರಮೇಣ ಗೋಭಕ್ಷಣೆ ಮಹಾಪಾಪವೆಂದು ಅವುಗಳ ರಕ್ಷಣೆಗಾಗಿ ಧಾರ್ಮಿಕ ವಿಧಿಯನ್ನೇ ಮಾಡಿದರು.
ಋಗ್ವೇದ ಕಾಲದ ಸಾಹಿತ್ಯ:
ಋಗ್ವೇದ ಕಾಲದಲ್ಲಿ ‘ಋಗ್ವೇದ’ ಸಾಹಿತ್ಯ ಮಾತ್ರ ರಚನೆಯಾಯಿತು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಹಿಂದೆಯೇ ನೀಡಲಾಗಿದೆ. ‘ಆರ್ಯ ಸಂಸ್ಕೃತಿಯ ರಚನೆಗಿರುವ ಮೂಲಾಧಾರಗಳು’ ಎಂಬ ಭಾಗವನ್ನು ಗಮನಿಸಿ.
ವಿಜ್ಞಾನ:
ಋಗ್ವೇದ ಕಾಲದ ಜನರಿಗೆ ವೈದ್ಯಕೀಯ ಪದ್ಧತಿಯ ಪರಿಚಯವಿತ್ತು. ಅನೇಕ ರೋಗಗಳು ಮತ್ತು ಅವುಗಳಿಗೆ ಬಳಸುವ ಗಿಡಮೂಲಿಕೆ ಔಷಧಿಗಳು ಹಾಗೂ ರೋಗ ನಿವಾರಣಾ ಮಂತ್ರ-ತಂತ್ರಗಳ ಬಗ್ಗೆ ವಿವರಗಳು ದೊರೆತಿವೆ. ಕ್ಷಯ, ಕುಷ್ಟ, ಕಾಮಾಲೆ, ಆಮಶಂಕೆ, ಅರಳು ಮರಳು ಮೊದಲಾದ ಅನೇಕ ರೋಗಗಳ ಬಗ್ಗೆ ಋಗ್ವೇದದಲ್ಲಿ ವಿವರಗಳಿವೆ. ಔಷಧಿಯ ಜೊತೆಗೆ ಶಸ್ತ್ರ ಚಿಕಿತ್ಸಾ ವಿಧಾನವು ಬಳಕೆಯಲ್ಲಿತ್ತು. ಯುದ್ಧಗಳಲ್ಲಿ ಹೋರಾಡುವಾಗ ಕಾಲು ಕಳೆದುಕೊಂಡವರಿಗೆ ಶಸ್ತ್ರ ಚಿಕಿತ್ಸಾ ವಿಧಾನದ ಮೂಲಕ ಕಬ್ಬಿಣದ ಕಾಲುಗಳನ್ನು ಜೋಡಿಸುತ್ತಿದ್ದರು. ಗಾಯಗಳು ಮತ್ತು ಹಾವು ಕಡಿತವನ್ನು ವೈದ್ಯರು ಯಶಸ್ವಿಯಾಗಿ ವಾಸಿ ಮಾಡುತ್ತಿದ್ದರು. ಖಗೋಳ ವಿಜ್ಞಾನದ ಪರಿಚಯ ಸ್ವಲ್ಪಮಟ್ಟಿಗಿದ್ದಿತು. ನಕ್ಷತ್ರಗಳ ಚಲನೆಯನ್ನು ಗಮನಿಸಿ. ಪತ್ತೆಮಾಡಿದ್ದರು. ಋಗ್ವೇದ ಕಾಲದಲ್ಲಿಯೇ 30 ದಿನಗಳ 12 ತಿಂಗಳುಗಳನ್ನು ಒಂದು ವರ್ಷವೆಂದು ಪರಿಗಣಿಸಲಾಗಿತ್ತು.