ಮೊಗಲರ ಆರ್ಥಿಕ ಸ್ಥಿತಿಗತಿ
ಬಾಬರನ ಆತ್ಮವೃತ್ತಾಂತ, ಗುಲ್‌ದನ್ ಬೇಗಂಳ ಹುಮಾಯೂನ್ ನಾಮ, ಅಬ್ದುಲ್ ಫಜಲ್‌ನ ಐನ್-ಎ-ಆಕ್ಬರಿ ಮೊದಲಾದ ವಿದೇಶಿ ಪ್ರವಾಸಿಗರ ಬರವಣಿಗೆಗಳು ಮತ್ತು ಸಮಕಾಲೀನ ಸಾಹಿತ್ಯ ಕೃತಿಗಳು -ಇವುಗಳಿಂದ ಮೊಗಲರ ಕಾಲದ ಆರ್ಥಿಕ ಪರಿಸ್ಥಿತಿಯ ಮಾಹಿತಿ ದೊರೆಯುತ್ತದೆ.
1. ಕೃಷಿ ಕ್ಷೇತ್ರ: ಮೊಗಲರ ಕಾಲದಲ್ಲಿ ವ್ಯವಸಾಯ ಮುಖ್ಯ ಉದ್ಯೋಗವಾಗಿತ್ತು. ಈ ಕಾಲದಲ್ಲಿಯೂ ಪ್ರಾಚೀನ ಕಾಲದ ಕೃಷಿ ಉಪಕರಣ, ವಿಧಾನಗಳನ್ನೇ ಬಳಸುತ್ತಿದ್ದರು. ಅಕ್ಬರ್ ವ್ಯವಸಾಯಕ್ಕೆ ಹೆಚ್ಚಿನ ಗಮನ ನೀಡಿದನು. ಶೇರ್‌ಶಹನು ಕೃಷಿಕ್ಷೇತ್ರದಲ್ಲಿ ಮಾಡಿದ್ದ ಹಲವು ಕಾರ್ಯಗಳನ್ನು ಆಕ್ಬರನು ಅನುಸರಿಸಿದನು. ವ್ಯವಸಾಯಗಾರರು ಬೇಸಾಯಕ್ಕೊಳಪಟ್ಟ ಜಮೀನಿಗೆ ಮಾತ್ರ ಕಂದಾಯ ಕೊಡಬೇಕಾಗಿತ್ತು. ಅಕ್ಬರನ ಕಾಲದಲ್ಲಿ ರೈತವಾರಿ ಪದ್ಧತಿಯಿದ್ದದರಿಂದ ರೈತರು ಮತ್ತು ಸರ್ಕಾರದ ನಡುವೆ ನೇರ ಸಂಬಂಧವಿತ್ತು. ಷಹಜಹಾನನ ಮತ್ತು ಔರಂಗಜೇಬರ ಅಳ್ವಿಕೆಗಳಲ್ಲಿ ಗೇಣಿದಾರರು ಅಧಿಕಾರಿಗಳ ಶೋಷಣೆಗೆ ಒಳಗಾಗಿದ್ದರು.
ರೈತರು ಗೋಧಿ, ಬಾರ್ಲಿ, ಬೇಳೆಕಾಳುಗಳು, ಎಣ್ಣೆಕಾಳುಗಳು, ಕಬ್ಬು, ನೀಲಿ ಮತ್ತು ಗಸಗಸೆಗಳನ್ನು ಬೆಳೆಯುತ್ತಿದ್ದರು. ಕೆಲವೊಂದು ಬೆಳೆಗಳು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದವು. ಕಬ್ಬನ್ನು ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಳಗಳಲ್ಲಿ, ನೀಲಿಯನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ, ಹತ್ತಿಯನ್ನು ಭಾರತದ ಹಲವೆಡೆ ಬೆಳೆಯುತ್ತಿದ್ದರು. ಕೃತಕ ನೀರಾವರಿ ಬಳಕೆಯಲ್ಲಿರಲಿಲ್ಲ. ಕೆರೆ ಮತ್ತು ಭಾವಿಗಳಿಂದ ನೀರಾವರಿ ಮಾಡಲಾಗುತ್ತಿತ್ತು. ಆದಾಗ್ಯೂ ದೇಶವು ಕೃಷಿ ಉತ್ಪಾದನೆಯಲ್ಲಿ ಸ್ವಯಂಪೂರ್ಣವಾಗಿತ್ತು.
2. ಕೈಗಾರಿಕೆ : ಮೊಗಲರ ಕಾಲದಲ್ಲಿ ಕೃಷಿಯಲ್ಲದೆ ಉತ್ಪಾದನೆಯ ವಸ್ತುಗಳಲ್ಲಿ ಮೀನು, ಲೋಹಗಳು, ಉಪ್ಪು, ಅಫೀಮು ಮತ್ತು ಮದ್ಯ ಪ್ರಮುಖವಾಗಿದ್ದವು. ಚಿನ್ನವು ಕುಮಾವ್ ಗುಡ್ಡಗಳಲ್ಲಿ ಮತ್ತು ಪಂಜಾಬಿನ ನದಿ ಪಾತ್ರಗಳಲ್ಲಿ ದೊರೆಯುತ್ತಿತ್ತು. ಕಬ್ಬಿಣ ಹಲವು ಕಡೆಗಳಲ್ಲಿ ದೊರೆಯುತ್ತಿದ್ದು, ಸಲಕರಣೆಗಳನ್ನು ಮಾಡಲು, ಶಸ್ತ್ರಾಸ್ತ್ರಗಳನ್ನು ಮಾಡಲು ಉಪಯೋಗಿಸುತ್ತಿದ್ದರು. ರಾಜಸ್ಥಾನ ಮತ್ತು ಮದ್ಯಭಾರತದಲ್ಲಿ ತಾಮ್ರದ ಗಣಿಗಳಿದ್ದವು. ಫತೇಪುರಸಿಕ್ರಿಯಲ್ಲಿ ಕೆಂಪುಶಿಲೆಯು, ಥಟ್ಟಾದಲ್ಲಿ ಹಳದಿ ಶಿಲೆಯು, ಜಯಪುರ ಮತ್ತು ಜೋಧ್‌ಪುರಗಳಲ್ಲಿ ಅಮೃತಶಿಲೆಯು ಸಿಗುತ್ತಿತ್ತು. ವಜ್ರಗಳು ಗೋಲ್ಕಂಡ ಮತ್ತು ಛೋಟಾನಾಗಪುರಗಳಲ್ಲಿ ಸಿಗುತ್ತಿತ್ತು. ಉಪ್ಪು, ಸಂಬಾರ್ ಸರೋವರ, ಪಂಜಾಬ್, ಗುಜರಾತ್, ಸಿಂದ್ ಪ್ರದೇಶದ ಸರೋವರ ಮತ್ತು ಸಮುದ್ರ ತೀರಗಳಿಂದ ದೊರೆಯುತ್ತಿತ್ತು. ಬಿಹಾರ ಮತ್ತು ಮಾಳ್ವಗಳಲ್ಲಿ ಆಫೀಮು ಹೆಚ್ಚಾಗಿ ಬೆಳೆಯುತ್ತಿದ್ದರು. ಮದ್ಯವನ್ನು ಹಲವೆಡೆ ತಯಾರಿಸುತ್ತಿದ್ದರು. ಮದ್ದುಗುಂಡುಗಳ ಬಳಕೆಗೆ ಪೆಟ್ಲುಪ್ಪನ್ನು ತಯಾರಿಸಿ ಬಳಸುತ್ತಿದ್ದರು. ಪ್ರತಿಯೊಂದು ಹಳ್ಳಿಯಲ್ಲಿಯೂ ಹತ್ತಿ ಬಟ್ಟೆಯ ಕೈಗಾರಿಕೆ ಬೆಳೆದಿತ್ತು. ಆಗ್ರ, ಬನಾರಸ್, ಜುನಾಪುರ, ಪಾಟ್ನ, ಬಾನ್ಪುರ, ಲಕ್ನೋ, ಖೈರಾಬಾದ್, ಬೀದರ್, ಬಂಗಾಳ, ಬಿಹಾರ, ಮಾಳ್ವಗಳ ಅನೇಕ ಪ್ರದೇಶಗಳು ಬಟ್ಟೆ ತಯಾರಿಕೆಯ ಪ್ರಮುಖ ಕೇಂದ್ರಗಳಾಗಿದ್ದವು. ಈ ಕೈಗಾರಿಕೆಯ ಜೊತೆಗೆ ಬಣ್ಣ ಹಾಕುವ ಕೈಗಾರಿಕೆ ಸಹ ಉಪಕೈಗಾರಿಕೆಯಾಗಿ ಬೆಳೆದಿತ್ತು. ಬಂಗಾರದ ಜರಿಯುಳ್ಳ ಬಟ್ಟೆಗಳನ್ನು ಅಯೋಧ್ಯೆ ಮತ್ತು ಖಾನ್ದೇಶಗಳಲ್ಲಿ ತಯಾರಿಸುತ್ತಿದ್ದರು. ಡಾಕಾವೂ ಸೇರಿದಂತೆ ಬಂಗಾಳದ ಹಲವು ನಗರಗಳು ರೇಷ್ಮೆ ವಸ್ತ್ರಗಳಿಗೆ, ನಯವಾದ ಮಸ್ಲಿನ್ ಬಟ್ಟೆಗೆ ಮತ್ತು ಚಾಪೆಗಳಿಗೆ ಪ್ರಸಿದ್ಧವಾಗಿದ್ದವು. ಮುಲ್ತಾನ್‌ನಲ್ಲಿ ಸುಂದರವಾದ ಪುಷ್ಪಸದೃಶ ರತ್ನಗಂಬಳಿಗಳನ್ನು ಮತ್ತು ಕಾಶ್ಮೀರದಲ್ಲಿ ಉಣ್ಣೆಯ ರತ್ನಗಂಬಳಿಗಳನ್ನು ಮತ್ತು ಇತರ ರೇಷ್ಮೆ ಮತ್ತು ಉಣ್ಣೆವಸ್ತುಗಳನ್ನು ತಯಾರಿಸುತ್ತಿದ್ದರು. ಜಹಾಂಗೀರನು ಅಮೃತಸರದಲ್ಲಿ ರತ್ನಗಂಬಳಿ ಮತ್ತು ಶಾಲಿನ ಕೈಗಾರಿಕೆ ಸ್ಥಾಪಿಸಿದನು. ಯುದ್ಧಕ್ಕೆ ಮತ್ತು ರಕ್ಷಣೆಗೆ ಬೇಕಾದ ಆಯುಧಗಳನ್ನು ಪ್ರಮುಖವಾಗಿ ಪಂಜಾಬ್, ಗುಜರಾತ್ ಮತ್ತು ಸೋಮನಾಥದಲ್ಲಿ ತಯಾರಿಸುತ್ತಿದ್ದರು. ಜುನಾಪುರ ಮತ್ತು ಗುಜರಾತ್‌ನಲ್ಲಿ ಸುಗಂಧ ದ್ರವ್ಯಗಳನ್ನು, ಸಿಯೋಲ್ ಕೋಟ್, ಗಯಾ ಮತ್ತು ಕಾಶ್ಮೀರಗಳಲ್ಲಿ ಕಾಗದವನ್ನು, ಬೀದರ್‌ನಲ್ಲಿ ಬೆಳ್ಳಿ ಮತ್ತು ಬಂಗಾರದ ಅಲಂಕಾರ ವಸ್ತುಗಳನ್ನು, ಪತೇಪುರಸಿಕ್ರಿ ಮತ್ತು ಬಿರಾರ್‌ಗಳಲ್ಲಿ ಗಾಜಿನ ವಸ್ತುಗಳನ್ನು ಉತ್ಪಾದನೆ ಮಾಡಲಾಗುತಿತ್ತು. ದಕ್ಷಿಣ ಭಾರತದಲ್ಲಿ ಮುತ್ತು ಮತ್ತು ಹವಳಗಳ ಕೈಗಾರಿಕೆ ಅಭಿವೃದ್ಧಿ ಹೊಂದಿತ್ತು. ಹಲವೆಡೆ ಮರದ ಮತ್ತು ಚರ್ಮದ ವಸ್ತುಗಳನ್ನು ತಯಾರಿಸಲಾಗುತ್ತಿತ್ತು.
3. ನಾಣ್ಯಗಳು : ದೆಹಲಿಯಲ್ಲಿ ಪ್ರಧಾನ ಟಂಕಶಾಲೆ ಇತ್ತು. ಬಂಗಾಳ, ಲಾಹೋರ್, ಜಾನ್‌ಪುರ, ಅಹ್ಮದಾಬಾದ್ ಮತ್ತು ಪಾಟ್ನಗಳಲ್ಲಿ ಪ್ರಾಂತೀಯ ಟಂಕಶಾಲೆಗಳಿದ್ದವು. ಷಹಜಹಾನನ ಕಾಲದಲ್ಲಿ ಸೂರತ್‌ನಲ್ಲಿನ ಟಂಕಶಾಲೆ ಮುಖ್ಯವಾಗಿತ್ತು. ಮೊಗಲರ ಕಾಲದ ನಾಣ್ಯಗಳಲ್ಲಿ ಬೆಳ್ಳಿಯ ರೂಪಾಯಿಯ ತೂಕ 175 ಗ್ರೇನ್‌ಗಳಾಗಿತ್ತು. ಅಕ್ಬರನ ಮತ್ತು ಆತನ ತರುವಾಯದ ದೊರೆಗಳ ಕಾಲದಲ್ಲಿ ಮೊಗಲ್ ಸಾಮ್ರಾಜ್ಯದ ವಾಣಿಜ್ಯ ವ್ಯವಹಾರಗಳೆಲ್ಲ ವೃತ್ತಾಕಾರದ ಚಿನ್ನದ ಮೊಹರಗಳು, ರೂಪಾಯಿಗಳು ಮತ್ತು ದಾಮುಗಳಲ್ಲಿ (ತಾಮ್ರದ) ನಡೆಯುತ್ತಿದ್ದವು.
4. ವ್ಯಾಪಾರ : ಮೊಗಲರ ಕಾಲದಲ್ಲಿ ಏಷ್ಯಾ ಮತ್ತು ಯೂರೋಪ್ ರಾಷ್ಟ್ರಗಳೊಡನೆ ವ್ಯಾಪಾರ ಅತ್ಯಂತ ಚಟುವಟಿಕೆಯಿಂದ ನಡೆಯುತ್ತಿತ್ತು. ಶ್ರೀಲಂಕಾ, ಬರ್ಮ, ಚೈನಾ, ಜಪಾನ್, ಇಂಡೋನೇಷಿಯಾ, ನೇಪಾಳ, ಪರ್ಷಿಯಾ, ಮದ್ಯಏಷ್ಯಾ, ಆರೇಬಿಯಾ, ಕೆಂಪುಸಮುದ್ರದ ತೀರದ ಬಂದರುಗಳು, ಪೂರ್ವ ಆಫ್ರಿಕಾದೊಡನೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು.
ಭಾರತದ ಮುಖ್ಯ ರಫ್ತುವಸ್ತುಗಳೆಂದರೆ ಹತ್ತಿ ಬಟ್ಟೆಗಳು, ಮೆಣಸು, ನೀಲಿ, ಅಫೀಮು, ಪೆಟ್ಲುಪ್ಪು, ಸಾಂಬಾರ ಪದಾರ್ಥಗಳು, ಸಕ್ಕರೆ, ಉಪ್ಪು, ಮಣಿಗಳು, ಅರಿಶಿಣ, ಅರಗು, ವಿವಿಧ ಬಗೆಯ ಔಷಧಿಗಳು ಮತ್ತು ಇತರ ಸಾಮಗ್ರಿಗಳು, ಮುಖ್ಯವಾದ ಅಮದು ವಸ್ತುಗಳೆಂದರೆ- ಬೆಳ್ಳಿ, ಬಂಗಾರ, ಕುದುರೆಗಳು, ಲೋಹಗಳು, ದಂತ, ಹವಳ, ಶಿಲಾರಾಳ, ವೈಡೂರ್ಯ, ರೇಷ್ಮೆ ವಸ್ತ್ರಗಳು, ವೆಲ್ವೆಟ್, ಜರತಾರಿ, ಪಿಂಗಾಣಿ ವಸ್ತುಗಳು, ಆಫ್ರಿಕಾದ ಗುಲಾಮರು ಮತ್ತು ಯೂರೋಪಿನ ಮದ್ಯಪಾನೀಯಗಳು. ದೇಶಿಯ ಮತ್ತು ವಿದೇಶಿಯ ವ್ಯಾಪಾರದ ಪ್ರಮುಖ ಕೇಂದ್ರಗಳೆಂದರೆ ಸೂರತ್, ಬ್ರೋಚ್, ಬೇಸ್ಸೀನ್, ಚೌಲ್, ಗೋವಾ, ಕಲ್ಲಿಕೋಟೆ, ಕೊಚ್ಚಿನ್, ನಾಗಪಟ್ಟಣ, ಮಚಲಿಪಟ್ಟಣ, ಸೌತ್‌ಗೌವ್, ಪಾಟ್ನ, ಆಗ್ರಾ, ಕ್ಯಾಂಬೆ, ಮುಲ್ತಾನ್ ಮತ್ತು ಅಹ್ಮದಾಬಾದ್.
ಸಾಮಾಜಿಕ ಪರಿಸ್ಥಿತಿ
ಮೊಗಲ್ ಕಾಲದಲ್ಲಿನ ಸಮಾಜವು ಪ್ಯೂಡಲ್ ತಳಹದಿಯ ಮೇಲೆ ಸಂಘಟಿತವಾಗಿತ್ತು. ಚಕ್ರವರ್ತಿಯು ಸಮಾಜದಲ್ಲಿ ಅತ್ಯಂತ ಬಲಾಢ್ಯವಾದ ಮತ್ತು ಗೌರವಾನ್ವಿತ ವ್ಯಕ್ತಿಯಾಗಿದ್ದನು. ಸಮಾಜ ವ್ಯವಸ್ಥೆಯ ತುತ್ತ ತುದಿಯಲ್ಲಿದ್ದ ಮೊಗಲ್ ಬಾದಶಹನ ಕೆಳಗೆ ಆತನ ಸರದಾರರು ಇದ್ದರು.
ಶ್ರೀಮಂತರು ವೈಭವದ ಜೀವನವನ್ನು ನಡೆಸಿದರೆ, ಸಾಮಾನ್ಯರು ಕಡುಬಡತನ ಅನುಭವಿಸುತ್ತಿದ್ದರು.
1. ಉಡುಪು : ಕಡಿಮೆ ಬಟ್ಟೆಯನ್ನು ಧರಿಸುವುದು ದಕ್ಷಿಣದಲ್ಲಿ ರೂಢಿಯಲ್ಲಿತ್ತು. ಇದಕ್ಕೆ ಹವಾಮಾನವೇ ಕಾರಣ. ಉತ್ತರ ಭಾರತದಲ್ಲಿ ಕೆಲವೊಂದು ಋತುಗಳಲ್ಲಿ ಮಾತ್ರ ಜನತೆ ಮೈತುಂಬ ಬಟ್ಟೆ ಧರಿಸುತ್ತಿದ್ದರು. ಉಳಿದಂತೆ ಹೆಚ್ಚು ಬಟ್ಟೆ ಧರಿಸುತ್ತಿರಲಿಲ್ಲ. ಕೆಳವರ್ಗದ ಜನರಿಗೆ ಸಾಕಷ್ಟು ಬಟ್ಟೆ ಇರಲಿಲ್ಲ. ಅವರು ಉಣ್ಣೆ ಬಟ್ಟೆಗಳನ್ನು ಧರಿಸುವುದಂತೂ ಅಸಾಧ್ಯವಾಗಿತ್ತು.
2. ಆಹಾರ : ಆಹಾರಕ್ಕೆ ಸಂಬಂಧಿಸಿದಂತೆ ಕಾಳು ಮತ್ತು ಬೇಳೆಗಳನ್ನು ಜನರು ದಿನನಿತ್ಯದ ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಬಂಗಾಳ ಮತ್ತು ಕರಾವಳಿ ಪ್ರದೇಶದಲ್ಲಿ ಈ ಆಹಾರದ ಜೊತೆಗೆ ಮೀನನ್ನು ಉಪಯೋಗಿಸುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಮಾಂಸವನ್ನು ಉಪಯೋಗಿಸುತ್ತಿದ್ದರು. ಉತ್ತರ ಭಾರತದಲ್ಲಿ ಗೋಧಿ ಹೆಚ್ಚಾಗಿ ಬಳಸುತ್ತಿದ್ದರು. ಬೆಣ್ಣೆ ಮತ್ತು ಎಣ್ಣೆ ಸುಲಭದರದಲ್ಲಿ ದೊರೆಯುತ್ತಿದ್ದರಿಂದ ಸಾಮಾನ್ಯ ಜನತೆ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಸಕ್ಕರೆ ಮತ್ತು ಉಪ್ಪು ದುಬಾರಿಯಾಗಿದ್ದವು.
3. ಆಭರಣಗಳು ಮತ್ತು ಮನರಂಜನೆ : ಸರದಾರರು ಬೆಲೆಯುಳ್ಳ ಪೋಷಾಕನ್ನು ಮತ್ತು ರತ್ನಾಭರಣಗಳನ್ನು ಧರಿಸುತ್ತಿದ್ದರು. ಸರದಾರರು ವಿವಿಧ ಪ್ರಕಾರಗಳ ಕ್ರೀಡೆ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಜೂಜುಗಾರಿಕೆ ರೂಡಿಯಲ್ಲಿತ್ತು.
4. ಮೂಢನಂಬಿಕೆಗಳು : ಹಿಂದೂ ಸಮಾಜದಲ್ಲಿ ಸತಿ ಪದ್ಧತಿ, ಬಾಲ್ಯ ವಿವಾಹ, ಶಿಶು ಹತ್ಯೆ ಮತ್ತು ವರದಕ್ಷಿಣೆ ಪದ್ಧತಿಗಳು ರೂಡಿಯಲ್ಲಿದ್ದವು. ಅಕ್ಬರನು ಬಲಾತ್ಕಾರದ ಸತಿಪದ್ದತಿಯನ್ನು ನಿಷೇಧಿಸಲು ಯತ್ನಿಸಿದನು.
5. ಧಾರ್ಮಿಕ ವಿಧಿ ವಿಧಾನಗಳು : ಹಿಂದೂಗಳು ಗಂಗಾನದಿಯನ್ನು ಅತ್ಯಂತ ಪವಿತ್ರವೆಂದು ಭಾವಿಸಿದ್ದರು. ಈ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯಕರವೆಂಬ ಭಾವನೆಯಿತ್ತು. ಹಿಂದೂಗಳು ಮತ್ತು ಮುಸಲ್ಮಾನರು ಜ್ಯೋತಿಷ್ಯದಲ್ಲಿ ನಂಬಿಕೆಯುಳ್ಳವರಾಗಿದ್ದರು. ಮುಸಲ್ಮಾನರು ಅನೇಕ ಪೀರರನ್ನು ಪೂಜಿಸುತ್ತಿದ್ದರು. ಈದ್ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಿದ್ದರು. ಶಿಯಾ ಮತ್ತು ಸುನ್ನಿ ಪಂಥಗಳ ನಡುವೆ ತೀವ್ರವಾದ ದ್ವೇಷವಿತ್ತು.
6. ಸಾಮಾನ್ಯ ವರ್ಗ : ಇವರು ಅಧಿಕವಾಗಿದ್ದು, ರೈತರು, ಕೃಷಿಕಾರ್ಮಿಕರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು, ಸೇವಕರು, ಗುಲಾಮರು ಇನ್ನೂ ಮುಂತಾದ ಜನರಿದ್ದರು. ಮೇಲಿನ ವರ್ಗದವರಿಗೆ ಹೋಲಿಸಿದಲ್ಲಿ ಇವರ ಜೀವನ ಕಷ್ಟಗಳಿಂದ ಕೂಡಿತ್ತು. ಉಡಲು ಬಟ್ಟೆ ಇರಲಿಲ್ಲ. ಉಣ್ಣೆಯ ಬಟ್ಟೆ ಮತ್ತು ಪಾದರಕ್ಷೆಗಳು ಇವರಿಗೆ ಎಟುಕುವಂತಿರಲಿಲ್ಲ. ಬರಗಾಲ ಬಂದಾಗಲಂತೂ ಇವರ ಜೀವನ ಇನ್ನೂ ತುಂಬಾ ಕಷ್ಟವಾಗುತ್ತಿತ್ತು.
ಉಪಸಂಹಾರ
ಮೊಗಲ್ ಕಾಲದಲ್ಲಿ ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಸಮೃದ್ಧವಾಗಿದ್ದರೂ ವರ್ಗ ಭೇದ ಸ್ಪಷ್ಟವಾಗಿತ್ತು. ಕೃಷಿ, ಕೈಗಾರಿಕೆ ಮತ್ತು ವ್ಯಾಪಾರಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಿದ್ದವು. ಆದರೆ ಸಾಮಾನ್ಯ ಜನರ ಜೀವನದಲ್ಲಿ ಕಷ್ಟಗಳು ಮತ್ತು ಅಸಮಾನತೆಗಳೂ ಕಂಡುಬಂದವು. ಈ ಕಾಲದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಭಾರತೀಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ.