ಪೀಠಿಕೆ:
ಪ್ರವಾಸೋದ್ಯಮ ಹಾಗೂ ಇತಿಹಾಸ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಏಕೆಂದರೆ ಪ್ರವಾಸೋದ್ಯಮವು ಇತಿಹಾಸವನ್ನು ಸೃಷ್ಟಿಸಿದರೆ, ಇತಿಹಾಸವು ಪ್ರವಾಸೋದ್ಯಮವನ್ನು ಬೆಳೆಸುತ್ತದೆ. ಹಾಗಾಗಿ ಇತಿಹಾಸವು ಪ್ರವಾಸೋದ್ಯಮವನ್ನು ಕಟ್ಟುವ ಒಂದು ಕಾರ್ಖಾನೆಯಂತೆ ಕೆಲಸ ಮಾಡುತ್ತದೆ. ಐತಿಹಾಸಿಕ ಸ್ಮಾರಕಗಳಾದ ದೇವಾಲಯಗಳು ಅರಮನೆಗಳು, ಚರ್ಚುಗಳು, ಮಸೀದಿಗಳು, ವಾಸ್ತುಶಿಲ್ಪ ಹಾಗೂ ಶಿಲ್ಪ ಕಲೆಗಳು, ಪ್ರವಾಸೋದ್ಯಮದ ಉತ್ಪನ್ನಗಳಾಗಿವೆ. ಈ ಐತಿಹಾಸಿಕ ಸ್ಮಾರಕಗಳು ನಿರಂತರವಾಗಿ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತವೆ. ಅವುಗಳು ಪ್ರವಾಸಿಗರ ಸ್ವರ್ಗ ತಾಣಗಳೆನಿಸದ ಕಾರಣ ಪ್ರವಾಸಿಗರು ಆಕರ್ಷಿತರಾಗಿ ಸಾವಿರಾರು ಸಂಖ್ಯೆಯಲ್ಲಿ ಅವುಗಳ ವೀಕ್ಷಣೆಗಾಗಿ ಬರುತ್ತಾರೆ. ಈ ಸ್ಮಾರಕಗಳು ಗತಕಾಲದ ವೈಭವವನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಇವುಗಳ ವೀಕ್ಷಣೆಗೆ ಬೆಲೆಕಟ್ಟಲಾಗುತ್ತದೆ. ಹಾಗಾಗಿ ಇವುಗಳು ಲಾಭದಾಯಕ ಉತ್ಪನ್ನಗಳು ಎನಿಸಿಕೊಳ್ಳುತ್ತವೆ.
ಪ್ರಮುಖ ಕಲಾಸ್ಮಾರಕಗಳು : ಪ್ರವಾಸೋದ್ಯಮ ಆರಂಭಗೊಂಡಿದ್ದು ಈ ಕಲಾಸ್ಮಾರಕಗಳ ಸ್ಥಳಗಳಿಂದ ಎಂದು ಹೇಳಬಹುದು. ಇವುಗಳು ತುಂಬಾ ಆಕರ್ಷಕವಾಗಿದ್ದು ಪದೇಪದೇ ನೋಡಬೇಕೆನಿಸುವಷ್ಟು ಸುಂದರವಾಗಿರುತ್ತವೆ. ಇವುಗಳನ್ನು ನೋಡುತ್ತಾ ನಿಂತರೆ ನಾವೇ ಗತಕಾಲಕ್ಕೆ ಹೋದಂತೆ ಅನಿಸುತ್ತದೆ. ಉದಾ: ಚೀನಾದ ಮಹಾಗೋಡೆ, ಫ್ರಾನ್ಸಿನ ಐಫೆಲ್ ಗೋಪುರ, ಅಮೆರಿಕದ ಲಿಬರ್ಟಿ ಪ್ರತಿಮೆ, ಆಗ್ರಾದ ತಾಜ್‌ಮಹಲ್, ದೆಹಲಿಯ ಕೆಂಪುಕೋಟೆ ಮುಂತಾದವುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಭಾರತವು ಶ್ರೀಮಂತ ಸಾಂಸ್ಕೃತಿಕ ನೆಲೆಗಳ ನಾಡು, ಧಾರ್ಮಿಕ ಬೀಡು, ಪ್ರಕೃತಿಯ ನೆಲೆವೀಡು. ಇದು ಸಾವಿರಾರು ವರ್ಷಗಳಿಂದಲೂ ಅನೇಕ ಇತಿಹಾಸಿಕ ಪರಂಪರೆಗಳನ್ನು ತನ್ನ ಮಡಿಲಲ್ಲಿ ಹುದುಗಿಸಿಟ್ಟುಕೊಂಡಿದೆ. ದೇವಾಲಯಗಳು ಅರಮನೆಗಳು, ಕೋಟೆಗಳು. ಗುಡಿ ಗೋಪುರಗಳು. ಚರ್ಚುಗಳು. ಮಸೀದಿಗಳು. ವಸ್ತು ಸಂಗ್ರಹಾಲಯಗಳು ಪ್ರವಾಸಿಗರ ಸ್ವರ್ಗತಾಣಗಳಾಗಿವೆ. ಇವುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇವುಗಳೆಲ್ಲವೂ ಪ್ರವಾಸೋದ್ಯಮಕ್ಕೆ ಆದಾಯವನ್ನು ತರುತ್ತವೆ.
ಧಾರ್ಮಿಕ ಕೇಂದ್ರಗಳು (Religious centers)
ಭಾರತವು ಹಲವು ಧರ್ಮಗಳ ಹಾಗೂ ಹಲವು ಮತ ಜಾತಿಗಳ ಕೇಂದ್ರವಾಗಿದೆ. ಇಲ್ಲಿ ಸಾವಿರಾರು ಭಾಷೆಗಳನ್ನಾಡುವ, ನೂರಾರು ಜಾತಿಗಳಿರುವ ಹಾಗೂ ಹಲವು ಧರ್ಮಗಳ ಜನರು ವಾಸಿಸುತ್ತಿದ್ದಾರೆ. ಉದಾ: ಹಿಂದೂ, ಜೈನ, ಬೌದ್ಧ, ಕ್ರೈಸ್ತ, ಪಾರ್ಶಿ ಹಾಗೂ ಇಸ್ಲಾಂ ಧರ್ಮಗಳಿರುವ ಈ ನಾಡಿನಲ್ಲಿ ಕೆಲವು ಧಾರ್ಮಿಕ ಕೇಂದ್ರಗಳಾಗಿ, ಇನ್ನು ಕೆಲವು ಪ್ರವಾಸಿ ಕೇಂದ್ರಗಳಾಗಿ, ಬೆಳೆದು ನಿಂತಿವೆ. ಅಮರನಾಥ, ಕಾಶಿ, ಕೇದಾರನಾಥ, ಹರಿದ್ವಾರ, ಕಾಶಿ, ಪುರಿ, ಸಾರನಾಥ, ಮೌಂಟ್ ಅಬು, ಗುರುದ್ವಾರ, ಶೇಕ್‌ಸಲೀಚೀಸ್ತಿ ಸಮಾಧಿ, ಸೆಂಟ್ ಫಿಲೋಮಿನಾ ಚರ್ಚ್ ಮುಂತಾದವುಗಳು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರ ತೀರ್ಥಯಾತ್ರೆ ಕ್ಷೇತ್ರಗಳಾಗಿವೆ.
ಭಾರತದ ದೇವಾಲಯಗಳು (Temples of India)
ಭಾರತದ ದೇವಾಲಯಗಳೇ ಇತಿಹಾಸದ ಮೇರು ಉತ್ಪನ್ನಗಳಾಗಿವೆ. ಅವುಗಳನ್ನು ನೋಡಿ ಕಣ್ತುಂಬಿಕೊಳ್ಳಲು ದಿನಕ್ಕೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಉದಾ: ಐಹೊಳೆ, ಬಾದಾಮಿ, ಪಟ್ಟದಕಲ್ಲು, ದೇವಾಲಯಗಳು ಹಂಪಿಯ ವಿಜಯ ವಿಠ್ಠಲ ಸ್ವಾಮಿ, ಹಾಜಾರ ರಾಮಸ್ವಾಮಿ, ಸಂಗೀತ ಮಂಟಪ, ಕೃಷ್ಣಸ್ವಾಮಿ, ಸಾಸಿವೆ ಕಾಳು ಗಣೇಶ, ಕಡಲೆ ಕಾಳು ಗಣೇಶ, ಸೂರ್ಯ ದೇವಾಲಯ, ಕೊನಾರ್ಕ ಜಗನ್ನಾಥ ದೇವಾಲಯ ಪುರಿ, ಕಾಶಿ ವಿಶ್ವನಾಥ ದೇವಾಲಯ, ಮಹಾಬಲಿಪುರಂ ದೇವಾಲಯ, ಬೃಹದೇಶ್ವರ ದೇವಾಲಯ, ಕೈಲಾಸನಾಥ ದೇವಾಲಯ, ಎಲ್ಲೋರ, ಖಜರಾಹೋ ದೇವಾಲಯ, ಹಳೇಬೀಡು, ಬೇಲೂರು ಹಾಗೂ ಸೋಮನಾಥಪುರದ ದೇವಾಲಯಗಳು, ತಲಕಾಡಿನ ದೇವಾಲಯಗಳು, ಭುವನೇಶ್ವರಿ ಚಾಮುಂಡಿ ದೇವಾಲಯಗಳಲ್ಲಿನ ಅಪೂರ್ವ ವಾಸ್ತುಶಿಲ್ಪ ಪ್ರವಾಸಿಗರ ಮನಸೂರೆಗೊಂಡಿದೆ.
ಬೌದ್ಧ ಕಲಾ ಕೇಂದ್ರಗಳು (centres of Buddist Art)
ಭಾರತದಲ್ಲಿನ ಅಜಂತಾ, ಎಲ್ಲೋರಾ, ನಾಸಿಕ್, ಕಾರ್ಲೆ, ಸಾಂಚಿ, ಅಮರಾವತಿ, ನಾಗಾರ್ಜುನ ಕೊಂಡಗಳಲ್ಲಿನ ಚೈತ್ಯಾಲಯ, ಸ್ಥೂಪಗಳು ಹಾಗೂ ವಿಹಾರಗಳು ಬೌದ್ಧ ಕಲೆಗೆ ಹೆಸರುವಾಸಿಯಾಗಿವೆ. ಇವುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಂಚಿಯ ಸ್ತೂಪ ಭಾರತದ ಅತ್ಯಂತ ದೊಡ್ಡ ಸ್ತೂಪವಾಗಿದ್ದು ಅಶೋಕ ಚಕ್ರವರ್ತಿಯಿಂದ ನಿರ್ಮಾಣವಾಗಿದೆ. ಸಾರನಾಥದಲ್ಲಿ ಅಶೋಕ ಸ್ತಂಭವಿದೆ.
ಶಿಲ್ಪಕಲಾ ತಾಣಗಳು (Sculptures Sights)
ಕೈಲಾಸನಾಥ ದೇವಾಲಯ ಎಲ್ಲೋರಾ, ಅಜಂತಾದ ಗುಹಾಲಯಗಳು ಮಹಾರಾಷ್ಟ್ರ, ಪಗೋಡಗಳು, ಮಹಾಬಲಿಪುರಂ, ಏಕಶಿಲಾ ರಥ, ಹಂಪಿ, ಬಡವಿಲಿಂಗ, ಉಗ್ರನರಸಿಂಹ, ಗೊಮ್ಮಟೇಶ್ವರ ಮೂರ್ತಿ ಶ್ರವಣಬೆಳಗೊಳ ಮುಂತಾದವುಗಳು ಶಿಲ್ಪಕಲಾ ದೃಷ್ಟಿಯಿಂದ ಅಪಾರ ಜನಮನಗಳಿಸಿವೆ. ಇಂದು ಇವುಗಳು ದೊಡ್ಡ ಪ್ರವಾಸಿ ತಾಣಗಳಾಗಿ ಹೆಸರುವಾಸಿಯಾಗಿವೆ.
ಮುಸ್ಲಿಂ ಸ್ಮಾರಕಗಳು (Monuments of Muslims)
ಭಾರತಕ್ಕೆ ಬಂದ ಮುಸ್ಲಿಮರಲ್ಲಿ ದೆಹಲಿ ಸುಲ್ತಾನರು ಮತ್ತು ಮೊಘಲರು ಅಗ್ರಗಣ್ಯರಾಗಿದ್ದಾರೆ. ಅವರು ತಮ್ಮ ಆಡಳಿತದ ಜೊತೆಗೆ ಹಲವಾರು ಐತಿಹಾಸಿಕ ಸ್ಮಾರಕಗಳನ್ನು ನಿರ್ಮಿಸಿದರು. ಅವುಗಳೆಂದರೆ ಕುತುಬುದ್ದೀನ್ ಐಬಕ್‌ನಿಂದ ನಿರ್ಮಾಣವಾದ ಕುತುಬ್ ಮಿನಾರ್, ಷಹಜಹಾನ್‌ನಿಂದ ನಿರ್ಮಾಣಗೊಂಡ ಕೆಂಪು ಕೋಟೆ, ಆಗ್ರಾಕೋಟೆ, ತಾಜ್‌ಮಹಲ್ ಅಕ್ಬರ್‌ನಿಂದ ನಿರ್ಮಿತಗೊಂಡ ಫತೇಪುರ ಸಿಕ್ರಿ, ಜೋಧಬಾಯಿ ಅರಮನೆ, ಬೀರಬಲ್ ಅರಮನೆ, ಮಚ್ಚಿ ಮಹಲ್, ಸಿಕಂದರನ ಅಕ್ಬರ್ ಗೋರಿ, ಆದಿಲ್‌ಷಾಯಿಂದ ತಯಾರಾದ ಗೋಲ್‌ಗುಂಬಜ್, ಬಹಮನಿ ಸುಲ್ತಾನರು ನಿರ್ಮಿಸಿದ ಗುಲ್ಬರ್ಗಾದ ಜಾಮಿ ಮಸೀದಿ, ಮಹಮ್ಮದ್ ಗವಾನನಿಂದ ರಚಿತವಾದ ಮದರಸ ಮೊದಲಾದವುಗಳು ವಿಶ್ವ ಪರಂಪರೆಯ ತಾಣವಾಗಿವೆ. ತಾಜ್‌ಮಹಲ್ ಇಂದು ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಏಕಮೇವ ಕಟ್ಟಡವಾಗಿದೆ.
ವಸ್ತು ಸಂಗ್ರಹಾಲಯಗಳು (Museums)
ಪ್ರವಾಸೋದ್ಯಮ ಉತ್ಪನ್ನಗಳಲ್ಲಿ ಪ್ರಮುಖವಾದ ಪಾತ್ರ ವಹಿಸುವ ಸಾಧನವೆಂದರೆ ಅದು ವಸ್ತು ಸಂಗ್ರಹಾಲಯ. ವಸ್ತು ಸಂಗ್ರಹಾಲಯಗಳು ಭಾರತದ ಸಾಂಸ್ಕೃತ ಭಂಡಾರ ಎಂದು ಹೇಳಬಹುದು. ಇವುಗಳು ಗತಕಾಲದ ವೈಭವವನ್ನು ಮರುಕಳಿಸುತ್ತವೆ. ವಸ್ತು ಸಂಗ್ರಹಾಲಗಳಲ್ಲಿ ಗತಕಾಲದ ಐತಿಹಾಸಿಕ ಕಂಚಿನ ಮೂರ್ತಿಗಳು, ಚಿನ್ನ ಬೆಳ್ಳಿ ಆಭರಣಗಳು, ಶಿರಾಸ್ತ್ರಣಗಳು, ಆಯುಧಗಳು, ನಾಣ್ಯಗಳು, ಬಟ್ಟೆಗಳು, ಮಡಿಕೆ ಕುಡಿಕೆಗಳು, ಕಲಾತ್ಮಕ ವಸ್ತುಗಳು, ಗಡಿಯಾರಗಳು, ದಿನನಿತ್ಯದ ವಸ್ತುಗಳು, ಖಡ್ಗಗಳು, ಕಸೂತಿಗಳು, ಸೌಂದರ್ಯವರ್ಧಕ ವಸ್ತುಗಳು, ಬಾಚಣಿಕೆಗಳು, ಕನ್ನಡಿಗಳು ಮುಂತಾದವುಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಅವುಗಳನ್ನು ನೋಡಲು ಆಗಮಿಸುವ ಪ್ರವಾಸಿಗರಿಂದ ಹಣವನ್ನು ಪಡೆಯಲಾಗುತ್ತದೆ. ದೆಹಲಿ, ಕಲ್ಕತ್ತಾ, ಬೆಂಗಳೂರು, ಮುಂಬೈ, ಹೈದರಾಬಾದ್ ಮೊದಲಾದ ವಸ್ತು ಸಂಗ್ರಾಲಯಗಳು ವಿಶ್ವ ಪ್ರಸಿದ್ಧಿಯನ್ನು ಪಡೆದಿವೆ.