ಇಂದಿನ ಪ್ರಸ್ತುತ ದಿನಗಳಲ್ಲಿ ಪ್ರವಾಸಿ ಕೇಂದ್ರಗಳು ಸಾಕಷ್ಟು ಅಭಿವೃದ್ಧಿಯನ್ನು ಹೊಂದುತ್ತಿವೆ. ಈ ಕಾರಣಗಳಿಂದಾಗಿ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಬರುವುದು ಹೆಚ್ಚಾಗಿದೆ. ಪ್ರವಾಸಿಗನು ಯಾವ ಉದ್ದೇಶಕ್ಕಾಗಿ ಪ್ರವಾಸ ಕೈಗೊಳ್ಳುತ್ತಾನೆ. ಆದರಿಂದ ಅವನಿಗೆ ಉಂಟಾಗುವ ಲಾಭಗಳೇನು ಎಂಬುದನ್ನು ಆಧಾರವಾಗಿಟ್ಟುಕೊಂಡು ಪ್ರವಾಸಿ ಮಾರ್ಗಗಳನ್ನು ಈ ಕೆಳಗಿನಂತೆ ವಿಭಾಗಿಸಲಾಗಿದೆ. ಅವುಗಳೆಂದರೆ.
1. ಮನರಂಜನಾ ಪ್ರವಾಸೋದ್ಯಮ (Recreational Tourism)
ಇಂದಿನ ಕಾಲದ ಯುವಕ-ಯುತಿಯರು, ವಯೋವದೃದ್ಧರು ಹಾಗೂ ಕುಟುಂಬಸ್ತರು ಪ್ರವಾಸಕ್ಕೆ ಬರುತ್ತಾರೆಂದರೆ ಅದು ಮನರಂಜನೆಗಾಗಿ ಎಂಬಂತಾಗಿದೆ. ವಿಶ್ರಾಂತಿ, ವಿರಾಮ, ಮನರಂಜನೆ, ಸೂರ್ಯಾಸ್ತ ವೀಕ್ಷಣೆ, ಸಮುದ್ರದಲ್ಲಿ ಈಜಾಡಲು, ಮರುಳುಗಾಡಿನಲ್ಲಿ ಮಲಗಲು, ಕ್ರೀಡೆ, ವಾತಾವರಣದ ಬದಲಾವಣೆ, ಸಂತೋಷ, ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ಮಾನಸಿಕ ತೃಪ್ತಿಗಾಗಿ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ವಾರದ ಕೊನೆಯ ದಿನಗಳಲ್ಲಿ ನೌಕರರು ಪ್ರವಾಸ ಕೈಗೊಳ್ಳುತ್ತಾರೆ. ಶ್ರೀಮಂತರು, ಮಧ್ಯಮ ವರ್ಗದವರು ಮೋಜಿಗಾಗಿ ಗಿರಿಧಾಮಗಳು, ವನ್ಯಪ್ರಾಣಿಧಾಮಗಳು, ಸಮುದ್ರ ತೀರಗಳು, ಕಣಿವೆಗಳು, ಜಲಪಾತಗಳು, ಐತಿಹಾಸಿಕ ಸ್ಥಳಗಳು ಹಾಗೂ ಪಕ್ಷಿ ಧಾಮಗಳಿಗೆ ಭೇಟಿ ನೀಡುತ್ತಾರೆ.
2. ಸಾಂಸ್ಕೃತಿಕ ಪ್ರವಾಸೋದ್ಯಮ (Cultural Tourism)
ಒಂದು ದೇಶದ ಪ್ರವಾಸಿಯು ಮತ್ತೊಂದು ದೇಶಕ್ಕೆ ಪ್ರವಾಸಕ್ಕೆ ಬರಲು ಮುಖ್ಯವಾದ ಕಾರಣವೆಂದರೆ ಆದೇಶದ ಸಂಸ್ಕೃತಿ, ಪರಂಪರೆ, ಲೋಕರೂಢಿ, ಆಚಾರ-ವಿಚಾರ, ಧರ್ಮ, ಭಾಷೆ, ಜನರ ಭಾವನೆಗಳು, ಕಲೆ, ಸಂಗೀತ, ನೃತ್ಯ, ಕ್ರೀಡೆ, ಸಾಹಿತ್ಯ, ಆಹಾರ-ವಿಹಾರ, ಪಾನೀಯ, ಕುಶಲಕಲೆ, ಉಡುಪು, ಜೀವನಶೈಲಿ ಮುಂತಾದವುಗಳನ್ನು ತಿಳಿದುಕೊಳ್ಳಲು, ಇಲ್ಲಿನ ಸಂಗೀತೋತ್ಸವ, ನಾಟಕೋತ್ಸವ, ತೆಪ್ಪೋತ್ಸವ, ಗಣೇಶೋತ್ಸವ, ಜಾನಪದ ಕಲೆ, ಮೈಸೂರು ದಸರಾ, ಕರಗ, ಪರಿಷೆ ಮುಂತಾದವುಗಳನ್ನು ನೋಡಲು ಬರುತ್ತಾರೆ. ಭರತನಾಟ್ಯಂ, ಕಥಕ್ಕಳಿ, ಕೂಚಿಪುಡಿ, ಯಕ್ಷಗಾನ, ಬಯಲಾಟ ಮೊದಲಾವುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
3. ಜನಾಂಗೀಯ ಪ್ರವಾಸೋದ್ಯಮ (Ethnic Tourism)
ಬೇರೆ ಬೇರೆ ಜನಾಂಗಗಳ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ, ಲೋಕರೂಢಿ, ಭಾಷೆ, ಆಹಾರ-ವಿಹಾರ, ಪಾನೀಯ, ಸಂಪ್ರದಾಯ ಮುಂತಾದವುಗಳನ್ನು ಅರಿಯಲು ಪ್ರವಾಸಿಗರು ಪ್ರವಾಸಕೈಗೊಳ್ಳುತ್ತಾರೆ. ಭಾರತದ ವಿವಿಧ ಭಾಗಗಳಲ್ಲಿ ವಾಸಿಸುವ ಆದಿವಾಸಿ, ಗುಡ್ಡಗಾಡು ಹಾಗೂ ಗಿರಿಜನರ ಸಂಸ್ಕೃತಿಗಳ ಶೋಧ ಮಾಡುವುದು. ಈ ಪ್ರವಾಸದ ಉದ್ದೇಶವಾಗಿರುತ್ತದೆ. ಉದಾ: ಆಸ್ಸಾಂ, ಮಧ್ಯಭಾರತದ, ಬಿಹಾರ, ತಮಿಳುನಾಡು, ಕರ್ನಾಟಕದಲ್ಲಿ ನೆಲಸಿರುವ ವಿವಿಧ ಆದಿವಾಸಿಗಳಾದ ಮುಂಡರು, ನಾಗರು, ಸಂತಾಲರು, ಬಿಲ್ಲರು, ಕೋಲರು, ತೋಡರು ಹಾಗೂ ರಾಮೋಸಿ ಮೊದಲಾದ ಜನಾಂಗಗಳ ಅಧ್ಯಯನ ಮಾಡಲು ಪ್ರವಾಸ ಕೈಗೊಳ್ಳಲಾಗುತ್ತದೆ.
4. ಐತಿಹಾಸಿಕ ಪ್ರವಾಸೋದ್ಯಮ (Historical Tourism)
ಐತಿಹಾಸಿಕ ಪರಂಪರೆಯ ತಾಣಗಳಾದ ವಸ್ತುಸಂಗ್ರಹಾಲಯಗಳು, ದೇವಾಲಯಗಳು, ಅರಮನೆಗಳು, ಸ್ತೂಪಗಳು, ಚೈತ್ಯಗಳು, ಗುಹಾಲಯಗಳು, ಚರ್ಚುಗಳು, ಮಸೀದಿಗಳು, ಕೋಟೆಗಳು ಹಾಗೂ ಸ್ಮಾರಕಗಳನ್ನು ಸಂದರ್ಶಿಸುವುದನ್ನು ಐತಿಹಾಸಿಕ ಪ್ರವಾಸೋದ್ಯಮ ಎಂದು ಕರೆಯುತ್ತಾರೆ. ಪ್ರಸ್ತುತ ದಿನಗಳಲ್ಲಿ ಶೇ 50% ರಷ್ಟು ಜನರು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ ಪ್ರವಾಸದಿಂದ ಪ್ರವಾಸಿಗರು ಪ್ರಾಚೀನ ಕಾಲದ ಅನುಭವವನ್ನು ಪಡೆಯುತ್ತಾರೆ. ಇದರ ಅನುಭವ ವ್ಯಾಪಕವಾದುದು. ವೈವಿಧ್ಯಮಯವಾದುದು ಮತ್ತು ವಿಶಿಷ್ಟವಾದುದು ಆಗಿದೆ.
5. ಸಾಮಾಜಿಕ ಪ್ರವಾಸೋದ್ಯಮ (Social Tourism)
ಕಡಿಮೆ ಆದಾಯವನ್ನು ಹೊಂದಿದ ಮಧ್ಯಮವರ್ಗ ಹಾಗೂ ಬಡವರು ಸರ್ಕಾರ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳು ನೀಡುವ ಹಣಕಾಸಿನ ಸಹಾಯದಿಂದ ಪ್ರವಾಸವನ್ನು ಕೈಗೊಳ್ಳುವುದನ್ನು ಸಾಮಾಜಿಕ ಪ್ರವಾಸೋದ್ಯಮ ಎಂದು ಕರೆಯುತ್ತಾರೆ. ಬಡವರು ಪ್ರವಾಸ ಖರ್ಚನ್ನು ಭರಿಸಲು ಅಸಮರ್ಥರಾದಾಗ ಸರ್ಕಾರವೇ ಮುಂದೆ ಬಂದು ಅವರಿಗೆ ಆರ್ಥಿಕ ಸಹಾಯವನ್ನು ನೀಡುತ್ತದೆ. ಸರ್ಕಾರವು ಕಾರ್ಮಿಕರಿಗೆ ರಜೆ ಸಹಿತ ಹಣಕಾಸಿನ ನೆರವನ್ನು ನೀಡಿ ಪ್ರವಾಸಕ್ಕೆ ಪ್ರೋತ್ಸಾಹಿಸುತ್ತದೆ.
6. ಪರಿಸರ ಪ್ರವಾಸೋದ್ಯಮ (Environmental Tourism)
ನೈಸರ್ಗಿಕ ತಾಣಗಳಾದ ಸಮುದ್ರಗಳು, ಸಾಗರಗಳು, ಸರೋವರಗಳು, ಹೊಳೆಗಳು, ಜಲಪಾತಗಳು, ಕಮರಿಗಳು, ಗುಡ್ಡಬೆಟ್ಟಗಳು, ಗಿರಿಧಾಮಗಳು, ವನ್ಯಜೀವಿ ತಾಣಗಳು, ಝರಿಗಳು, ಅಭಯಾರಣ್ಯಗಳು, ಕಾಡುಗಳು, ಹುಲ್ಲುಗಾವಲುಗಳು, ಪ್ರಪಾತಗಳು, ಉದ್ಯಾನವನಗಳು, ಪ್ರಾಣಿಗಳು ಪಕ್ಷಿಗಳು ಸಸ್ಯಸಂಕುಲಗಳು ಮೊದಲಾದವುಗಳನ್ನು ವೀಕ್ಷಿಸಲು ಪ್ರವಾಸಿಗರು ಬೃಹತ್ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿ ಚಾರಣ, ಕಾಲ್ನಡಿಗೆ, ದೋಣಿ ವಿಹಾರ, ಬಂಡೆಗಳನ್ನು ಹತ್ತಿ ಜಾರುವಿಕೆ ಮೊದಲಾದ ಕಾರ್ಯಗಳಲ್ಲಿ ತೊಡಗಬಹುದು.
7. ಸಾಹಸ ಪ್ರವಾಸೋದ್ಯಮ (Adventure Tourism)
ಸಾಹಸ ಪ್ರವಾಸೋದ್ಯಮ ಎಂದರೆ ಯುವಕ-ಯುವತಿಯರಿಗೆ ಬಲು ಪ್ರಿಯವಾದುದು. ಚಾರಣ, ಪರ್ವತಾರೋಹಣ, ಬಂಡೆ ಹತ್ತುವುದು, ನೀರಿನಲ್ಲಿ ಈಜುವುದು, ದೋಣಿವಿಹಾರ, ಮೀನು ಹಿಡಿಯುವುದು, ಮರುಭೂಮಿ ಪ್ರವಾಸ, ಬಂಡೆಗಳ ಮೇಲೆ ಜಾರುವಿಕೆ, ಕೊಳವೆಗಳ ಮೂಲಕ ಉಸಿರಾಡಿ ಈಜುವುದು, ಗಾಳಿಯಲ್ಲಿ ತೆಲಾಡುವುದು, ಮೋಟಾರ್ ಬೋಟ್ ಸವಾರಿ, ಮೊದಲಾದ ಸಾಹಸ ಕ್ರೀಡೆಗಳಿಗಾಗಿ ಪ್ರವಾಸಿಗಳು ಅಂತಹ ಪ್ರದೇಶಗಳಿಗೆ ಹೋಗುತ್ತಾರೆ.
8. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪ್ರವಾಸಗಳು (Religious and Spiritual Tourism)
ಭಾರತವು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ನಾಡು. ಇಲ್ಲಿ ಅನೇಕ ಧಾರ್ಮಿಕ ಕೇಂದ್ರಗಳು ಹಾಗೂ ಯಾತ್ರಾ ಸ್ಥಳಗಳಿವೆ. ಹಾಗೆಯೇ ಅನೇಕ ಆಧ್ಯಾತ್ಮಿಕ ಕೇಂದ್ರಗಳೂ ಉಂಟು. ಪ್ರವಾಸಿಗರು ಇಂತಹ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಪುನೀತರಾಗುತ್ತಾರೆ. ಅವುಗಳಲ್ಲಿ ಕಾಶಿ, ಕೇದಾರನಾಥ, ಪುರಿ, ಅಮರನಾಥ, ಬದರಿ, ತಿರುಪತಿ, ಧರ್ಮಸ್ಥಳ, ತಿರುಮಲೈ, ಸಾರನಾಥ ಹಾಗೂ ಮೌಂಟ್ ಅಬು ಮುಂತಾದ ಪ್ರದೇಶಗಳನ್ನು ಸಂದರ್ಶಿಸಿ ಮಾನಸಿಕ ಶಾಂತಿ ನೆಮ್ಮದಿ ಹಾಗೂ ಮುಕ್ತಿಯನ್ನು ಪಡೆಯುತ್ತಾರೆ. ಯಾತ್ರಿಕರೇ ಪ್ರವಾಸೋದ್ಯಮದ ಕೇಂದ್ರ ಬಿಂದುಗಳು ಹಾಗೆಯೇ ಮುಸಲ್ಮಾನರು ಮೆಕ್ಕಾ, ಮದೀನಾಗಳಿಗೆ, ಕ್ರೈಸ್ತರು ಬೆಲ್‌ಹೆಮ್, ಜೆರುಸೆಲೇಂ ಹಾಗೂ ರೋಮ್‌ಗಳಿಗೆ ಭೇಟಿ ನೀಡಿ ತಮ್ಮ ಆಧ್ಯಾತ್ಮಿಕ ದಾಹವನ್ನು ತೀರಿಸಿಕೊಳ್ಳುತ್ತಾರೆ.
9. ಆರೋಗ್ಯ ಪ್ರವಾಸೋದ್ಯಮ : (Health Tourism )
ದೈಹಿಕ ಅನಾರೋಗ್ಯ ಪೀಠಿತರು ತಮ್ಮ ಆರೋಗ್ಯ ಸುಧಾರಣೆಗಾಗಿ ಅನೇಕ ನೈಸರ್ಗಿಕ ಅಥವಾ ಪ್ರಕೃತಿ ಚಿಕಿತ್ಸಾಲಯಗಳಿಗೆ ಭೇಟಿ ನೀಡುವುದು ವಾಡಿಕೆ. ಇದನ್ನೇ ಆರೋಗ್ಯ ಪ್ರವಾಸೋದ್ಯಮ ಎಂದು ಕರೆಯುತ್ತಾರೆ. ಅನೇಕರು ಸ್ಪಾ ಹಾಗೂ ಕ್ಲಿನಿಕ್ ಗಳಿಗೆ ಹೋಗುತ್ತಾರೆ. ಸೂರ್ಯ ಕಿರಣ, ಸಮುದ್ರ ಸ್ನಾನ, ಶುದ್ಧ ಗಾಳಿ, ಯೋಗ, ತೈಲ ಅಭ್ಯಂಜನ ಮುಂತಾದವುಗಳಿಗಾಗಿ ಗಿರಿಧಾಮಗಳು ಹಾಗೂ ವಿಹಾರಧಾಮಗಳಿಗೆ ಭೇಟಿ ನೀಡುತ್ತಾರೆ. ಸ್ಪಾಗಳಲ್ಲಿ ಸ್ನಾನ ಮಾಡಿದರೆ ಸರ್ವ ರೋಗಗಳು ವಾಸಿಯಾಗುತ್ತವೆ ಎಂಬ ಪ್ರತಿತಿಯಿದೆ. ಸ್ವಿಜ್ಜರ್‌ಲ್ಯಾಂಡಿನಲ್ಲಿ ಸ್ಥಾಪನೆಯಾದ ಸ್ಯಾನಿಟೋರಿಯಂಗಳು ಮುಂದೆ ವಿಶ್ರಾಂತಿ ಧಾಮಗಳಾಗಿ ಮಾರ್ಪಾಡದವು. ಹಾಗೆಯೇ ʻʻಗಂಗಾ ಸ್ನಾನಂ ತುಂಗಾ ಪಾನಂʼʼ ಎಂದು ಹೇಳುತ್ತಾರೆ. ಗಂಗಾ ನದಿ ಸ್ನಾನ ಮಾಡುವುದರಿಂದ ಮತ್ತು ತುಂಗಾ ನದಿಯ ನೀರನ್ನು ಕುಡಿಯುವುದರಿಂದ ಸರ್ವ ರೋಗಗಳು ನಿವಾರಣೆಯಾಗುತ್ತದೆ ಎಂಬುದು ನಮ್ಮ ಆಧ್ಯಾತ್ಮಿಕ ವಾದಿಗಳ ನಂಬಿಕೆ. ಕೇರಳದಲ್ಲಿ ʻʻಆಯುರ್ಗಾಮʼʼ ಎಂಬ ಆಯುರ್ವೇದ ಗ್ರಾಮಗಳಿವೆ. ಇಲ್ಲಿ ಯೋಗ, ಜಲ ಮರ್ದನ, ಅಂಗಮರ್ಧನ, ಬೆಳಕಿನ ಕಿರಣ ಚಿಕಿತ್ಸೆ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿದೇಶಿಯರು ಭಾರತದ ಹಲವು ಕಡಲ ತೀರಗಳಿಗೆ ಬಂದು ಬಿಸಿಲಲ್ಲಿ ಮೈಯೊಡ್ಡಿ ಮಲಗುತ್ತಿರುವ ದೃಶ್ಯವನ್ನು ಕಾಣಬಹುದು.
10. ಕ್ರೀಡಾ ಪ್ರವಾಸೋದ್ಯಮ: (Sports Tourism)
ಕ್ರಿಕೆಟ್, ಒಲಂಪಿಕ್ಸ್ ಕ್ರೀಡೆಗಳು, ಟೆನ್ನಿಸ್ ಮೊದಲಾದ ಕ್ರೀಡಾ ಚಟುವಟಿಕೆಗಳನ್ನು ನೋಡಲು ಮತ್ತು ಭಾಗವಹಿಸಲು ಅನೇಕರು ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ.
11. ಶೈಕ್ಷಣಿಕ ಪ್ರವಾಸೋದ್ಯಮ: (Educational Tourism)
ವಿದೇಶಗಳಲ್ಲಿ ಶಿಕ್ಷಣ ಪಡೆಯಲು, ಸಂಶೋಧನೆ ಮಾಡಲು, ಶೈಕ್ಷಣಿಕ ಸಮ್ಮೇಳನಗಳಲ್ಲಿ ಭಾಗವಹಿಸಲು ಪ್ರವಾಸ ಕೈಗೊಳ್ಳುವ ಇಂದು ಸಾಮಾನ್ಯವಾಗಿದೆ. ವೈದ್ಯಕೀಯ, ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಅಧ್ಯಯನಕ್ಕಾಗಿ ಪ್ರಪಂಚದ ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳುತ್ತಾರೆ.
12. ವ್ಯಾಪಾರಿ ಪ್ರವಾಸೋದ್ಯಮ : ( Business Tourism)
ಬೇರೆ ಬೇರೆ ದೇಶಗಳ ಕೈಗಾರಿಕಾ ಉತ್ಪಾದನೆ ಅಲ್ಲಿನ ತಾಂತ್ರಿಕ ವರ್ಗ, ಆಡಳಿತ ಅನುಭವ, ವಾಣಿಜ್ಯ ಬೆಳವಣಿಗೆ, ಕೈಗಾರಿಕಾ ಸಮಾವೇಶ, ಮುಂತಾದವುಗಳ ಕುರಿತು ಅಧ್ಯಯನ ಮಾಡಲು ಹಾಗೂ ವ್ಯಾಪಾರದಲ್ಲಿ ಪಾಲ್ಗೊಳ್ಳಲು ಪ್ರವಾಸಿಗರು ದೂರದ ದೇಶಗಳಿಗೆ ಪ್ರವಾಸ ಹಮ್ಮಿಕೊಳ್ಳುತ್ತಾರೆ.
13. ಕುಟುಂಬ ಪ್ರವಾಸೋದ್ಯಮ (Family Tourism)
ತಮ್ಮ ಬಂಧು, ಬಳಗ, ಮಿತ್ರರು ಬೇರೆ ಬೇರೆ ದೇಶಗಳಲ್ಲಿ ಇರುವುದರಿಂದ ಅವರನ್ನು ಭೇಟಿಯಾಗಲು ಪ್ರವಾಸ ಮಾಡುತ್ತಾರೆ. ಇದನ್ನೇ ಕುಟುಂಬ ಪ್ರವಾಸೋದ್ಯಮ ಎಂದು ಕರೆಯುತ್ತಾರೆ.
14. ರಾಜಕಾರಣಿಗಳು ರಾಜಕೀಯ ಪ್ರವಾಸವನ್ನು ಕೈಗೊಳ್ಳುವುದು.
15. ಸರ್ಕಾರಿ ನೌಕರರು ವೇತನ ಸಹಿತ ವಿದೇಶಗಳಿಗೆ ಪ್ರವಾಸ ಕೈಗೊಳ್ಳುವುದು.