ಆಧುನಿಕ ಪ್ರವಾಸೋದ್ಯಮದ ಅಂಶಗಳು ಈ ಕೆಳಗಿನಂತಿವೆ.

1. ರೈಲ್ವೆ ಪ್ರವಾಸ (Rail Tour)

19ನೇ ಶತಮಾನದ ಆರಂಭದಲ್ಲಿ ಪ್ರಪಂಚದಲ್ಲಿ ರೈಲು ಮಾರ್ಗದ ನಿರ್ಮಾಣದಿಂದ ಪ್ರಯಾಣದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಯಿತು. ಅತಿಯಾದ ವೇಗ, ಸುರಕ್ಷತೆ ಹಾಗೂ ಕಡಿಮೆ ವೆಚ್ಚದ ರೈಲ್ವೆ ಸಾರಿಗೆ ಬಹುಬೇಗನೆ ಜನಪ್ರಿಯವಾಯಿತು. 1825 ರಲ್ಲಿ ಪ್ರಪ್ರಥಮ ಬಾರಿಗೆ ಸರಕು ಸಾಗಾಣಿ ರೈಲು ಆರಂಭವಾಯಿತು. ತದನಂತರ 1830 ರ ಅವಧಿಯಲ್ಲಿ ಇಂಗ್ಲೆಂಡಿನ ಲಿವರ್‌ಫೂಲ್ ಮತ್ತು ಮ್ಯಾಂಚೆಸ್ಟರ್ ನಡುವೆ ಪ್ರಥಮ ರೈಲು ಮಾರ್ಗ ನಿರ್ಮಾಣವಾಯಿತು. 1841ರ ವೇಳೆಗೆ ಇಂಗ್ಲೆಂಡಿನ ಥಾಮಸ್ ಕುಕ್‌ ಕಂಪನಿಯು 570 ಪ್ರವಾಸಿಗರ ತಂಡವನ್ನು ಇಂಗ್ಲೆಂಡಿನ ಲೈಸೆಸ್ಟರ್ ನಿಂದ ಲಾಬೋರಾಗೆ ರೈಲಿನಲ್ಲಿ ಕರೆದುಕೊಂಡು ಹೋಯಿತು. ಇದು ಪ್ರಪಂಚದ ಮೊದಲ ರೈಲು ಪ್ರಯಾಣ ಎಂಬ ಕೀರ್ತಿಗೆ ಪಾತ್ರವಾಯಿತು. 1843ರಲ್ಲಿ ಸುಮಾರು 3000 ವಿದ್ಯಾರ್ಥಿಗಳನ್ನು ಕರೆದುಕೊಂಡು. ಡರ್ಬಿಯವರೆಗೆ ಪ್ರಯಾಣಿಸಿತು. 1845ರಲ್ಲಿ ಮಾಸ್‌ ಪ್ರವಾಸ ಆರಂಭವಾಯಿತು. 1848ರಲ್ಲಿ ಸ್ಕಾಟ್‌ಲ್ಯಾಂಡಿಗೆ ಪ್ರವಾಸ ಏರ್ಪಡಿಸಿತು. ಈ ಕಂಪನಿ ಆಲ್ಪ್‌ ಪರ್ವತಗಳಿಗೆ ಪ್ರವಾಸ ಏರ್ಪಡಿಸಿತು.  1855 ರಲ್ಲಿ ಖಂಡಾಂತರ ಪ್ರವಾಸ ಏರ್ಪಡಿಸಲಾಯಿತು. ಈ ಕಂಪನಿಯು ಪ್ರಪಂಚದ ಅತ್ಯಂತ ದೊಡ್ಡ ಪ್ರವಾಸಿ ಏಜೆನ್ಸಿಯಾಗಿ ಬೆಳೆಯಿತು. ವಿಶ್ವದಾದ್ಯಂತ ಇದರ ಶಾಖೆಗಳಿವೆ. ಹೀಗಾಗಿ ಥಾಮಸ್ ಕುಕ್‌ನನ್ನು ವಿಶ್ವದ ಪ್ರವಾಸ ಉದ್ಯಮದ ಪಿತಾಮಹ ಎಂದು ಕರೆಯುತ್ತಾರೆ.

 ಫುಲ್‌ಮನ್ ಕಂಪನಿ: ಇಂಗ್ಲೆಂಡಿನಿಂದ ಸ್ಪೂರ್ತಿಗೊಂಡ ಆಸ್ಟ್ರಿಯಾ, ಫ್ರಾನ್ಸಿಸ್, ಸ್ವಿಜರ್ಲ್ಯಾಂಡ್ ಹಾಗೂ ಅಮೆರಿಕೆಗಳು ಸಹ ರೈಲು ಸಂಚಾರದಲ್ಲಿ ಪ್ರಗತಿಯನ್ನು ಸಾಧಿಸಿದವು. ಹಾಗೆಯೇ  1853ರಲ್ಲಿ ಭಾರತದಲ್ಲಿಯೂ ರೈಲು ಮಾರ್ಗವನ್ನು ಹಾಕಲಾಯಿತು. ಪ್ರಥಮ ರೈಲು ಬಾಂಬೆ ಇಂದ ಠಾಣಾದ ವರೆಗೆ ಸಂಚರಿಸಿತು. 1870ರಲ್ಲಿ ಅಮೆರಿಕಾದ ಪುಲ್‌ಮನ್ ಗ್ರ್ಯಾಂಡ್ ಟೂರನ್ನು ರೈಲಿನಲ್ಲಿ ಏರ್ಪಡಿಸಿದನು. ಅದು ಪ್ರತಿರಾತ್ರಿಗೆ 2 ಡಾಲರ್ ಶುಲ್ಕವನ್ನು ವಿಧಿಸಿತು. ತದನಂತರ ಅಮೆರಿಕದಲ್ಲಿ ತಯಾರಾದ ಪುಲ್‌ಮನ್ ಕಾರುಗಳನ್ನು  ಇಂಗ್ಲೆಂಡಿಗೆ ಆಮದು ಮಾಡಿಕೊಳ್ಳಲಾಯಿತು.  1872 ರಲ್ಲಿ ಪುಲ್‌ಮನ್ ಕಂಪನಿ 750 ಕಾರುಗಳನ್ನು ತಯಾರಿಸಿತ್ತು. ಈ ಕಂಪನಿಯಲ್ಲಿ ಆಗಲೇ ರೂ.30,000 ಕಾರ್ಮಿಕರು ಕೆಲಸ ಮಾಡುತ್ತಿದ್ದರು. 150 ದೇಶಗಳಲ್ಲಿ ಈ ಕಂಪನಿ ತನ್ನ ಶಾಖೆಗಳನ್ನು ತೆರೆದಿತ್ತು. 1950ರ ವೇಳೆ ಅತಿ ವೇಗದ ರೈಲು ಪ್ರಯಾಣ ಆರಂಭವಾಯಿತು. 1960ರಲ್ಲಿ ವಿದ್ಯುತ್ ರೈಲು ತಯಾರಾಯಿತು. ಆಗ ಅದು 160 ಕಿಮೀ ವೇಗದಲ್ಲಿ ಚಲಿಸಿತು. ಜಪಾನಿನ ರೈಲು 210 ಕಿಮೀ ವೇಗದಲ್ಲಿ ಕೇವಲ 3 ಗಂಟೆಗಳಲ್ಲಿ ಟೋಕಿಯೋ ಮತ್ತು ಒಸಾಕಗಳ ನಡುವೆ ಓಡಲು ಆರಂಭಿಸಿತು. 1981ರ ವೇಳೆಗೆ 360 ಕಿ.ಮೀ ವೇಗದಲ್ಲಿ ಓಡುವ ರೈಲನ್ನು ಫ್ರಾನ್ಸ್‌ ಶೋಧಿಸಿತು.  ಅದು ಈಗ 560 ಕಿಮೀ ಅಂತರವನ್ನು 1 ಗಂಟೆ 48 ನಿಮಿಷಗಳಲ್ಲಿ ಕ್ರಮಿಸುತ್ತದೆ. ಚೀನಾದಲ್ಲಿ ಇತ್ತೀಚಿಗೆ ಗಂಟೆಗೆ 700 ರಿಂದ 1000 ಕಿ.ಮೀ ವೇಗದ ರೈಲನ್ನು ಓಡಿಸಲಾಗುತ್ತಿದೆ. ಭಾರತದಲ್ಲಿಯೂ ಬುಲೆಟ್ ರೈಲು ಹಾಗೂ ವಂದೇ ಭಾರತ ರೈಲುಗಳು ಓಡಾಡುತ್ತಿವೆ. ದೇಶದಲ್ಲಿ ಇವುಗಳಲ್ಲದೆ ಸೂಪರ್ ಫಾಸ್ಟ್ ರೈಲುಗಳು ಸಾಕಷ್ಟಿವೆ.

2. ಹಡಗು ಪ್ರವಾಸ:  ಜಲ ಸಾರಿಗೆಯು ಅತ್ಯಂತ ಅಗ್ಗದ ಸಾರಿಗೆಯಾಗಿದೆ. ಉಪ್ಪು ನೀರಿನ ಸ್ನಾನವು ಆರೋಗ್ಯಕ್ಕೆ ಹಿತಕರವಾದುದು ಎಂಬ ಭಾವನೆ ಜನರಲ್ಲಿ ಬೆಳೆದ ಹಾಗೆ ಸಮುದ್ರದಲ್ಲಿನ ಹಡಗು ಸಂಚಾರ ಹೆಚ್ಚಾಯಿತು. 1758 ರಲ್ಲಿ ʻಕಾಕ್ಸ್‌ ಅಂಡ್‌ ಕಿಂಗ್‌ʼ ಎಂಬ ಪ್ರವಾಸಿ ಸಂಸ್ಥೆ ಶ್ರೀಮಂತರನ್ನು ಹಡಗಿನ ಮೂಲಕ ಅಮೇರಿಕಾ ಪ್ರವಾಸಕ್ಕೆ ಕರೆದುಕೊಂಡು ಹೋಯಿತು. 1840 ರಲ್ಲಿ ಕುನಾರ್ಡ್‌ ಸ್ಟೀಮ್‌ ಶಿಪ್‌ ಕಂಪನಿ ಪ್ರಥಮ ಬಾರಿಗೆ ಹಡಗು ಪ್ರವಾಸವನ್ನು ಏರ್ಪಡಿಸಿತು. 1866 ರಲ್ಲಿ ಥಾಮಸ್‌ ಕುಕ್‌ ಕಂಪನಿಯು ಸಹ ಪ್ರವಾಸ ಹಮ್ಮಿಕೊಂಡಿತು. 19 ನೇ ಶತಮಾನದ ಅಂತ್ಯದಲ್ಲಿ ಜಲಸಾರಿಗೆ ತೀವ್ರವಾಗಿ ಬೆಳೆಯಿತು. ಆದರೆ 20 ನೇ ಶತಮಾನದ ಮಧ್ಯ ಭಾಗದಲ್ಲಿ ವಿಮಾನ ಸಾರಿಗೆ ಆರಂಭವಾದ ಮೇಲೆ ಹಡಗು ಸಾರಿಗೆ ಪ್ರಯಾಣ ಕಡಿಮೆಯಾಯಿತು.

3. ಮೋಟಾರು ವಾಹನಗಳ ಪ್ರವಾಸ (Motars Tours)

1890 ರಿಂದ ಈಚೆಗೆ ಮೋಟಾರ್ ವಾಹನಗಳು ಪ್ರವಾಸಕ್ಕೆ ಬಳಕೆಯಾದವು. ಜರ್ಮನಿಯ ಕಾರ್ಲಬೆಂಜ್ ಪ್ರಥಮ ಬಾರಿಗೆ ಮೋಟಾರು ಕಾರು ತಯಾರಿಸಿದನು. ಅಂದಿನಿಂದ ಭೂಸಾರಿಗೆ ಆರಂಭವಾಯಿತು. 1908ರ ವೇಳೆಗೆ ಹೆನ್ರಿ ಫೋರ್ಡ್ ತಯಾರಿಸಿದ ಮಾಡೆಲ್ ಟೀ ಕಾರುಗಳು ರೈಲ್ವೆ ಏಕಸ್ವಾಮ್ಯವನ್ನು ಮುರಿದವು. 1930ರಲ್ಲಿ ಪ್ರವಾಸಕ್ಕೆ ಬಸ್ಸುಗಳು ಬಳಕೆಯಾದವು.

4. ವಿಮಾನ ಸಾರಿಗೆ (Air Transport)

1900ರಲ್ಲಿ ರೈಟ್ ಸಹೋದರರಿಂದ ವಿಮಾನ ಕಂಡು ಹಿಡಿಯಲ್ಪಟದಟ್ಟಂದಿನಿಂದ ಇಂದಿನವರೆಗೆ ವಾಯು ಸಂಚಾರ ದ್ವಿಗುಣಗೊಂಡಿದೆ. ಇದು ಪ್ರವಾಸೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿತು. ವೇಗ, ಸುರಕ್ಷಿತ ಹಾಗೂ ಸೌಕರ್ಯಕ್ಕೆ ವಿಮಾನ ಸಾರಿಗೆ ಹೆಸರಾಯಿತು. ವಾಯು ಸಾರಿಗೆ ಹೆಚ್ಚದಂತೆ ಪ್ರಪಂಚದ ಎಲ್ಲಾ ದೇಶಗಳಲ್ಲಿ ರನ್ ವೇಗಳು ಸ್ಥಾಪನೆಯಾದವು. ಕಡಿಮೆ ವೇಗದಿಂದ ಅತಿ ವೇಗದ ವಿಮಾನಗಳು ಹಾರಾಟವನ್ನು ಆರಂಭಿಸಿದವು. ಎಲ್ಲಾ ಸಾರಿಗೆಗಳಿಗಿಂತ ವಿಮಾನ ಸಾರಿಗೆ ಇಂದು ಹೆಚ್ಚು ಜನಪ್ರಿಯವಾಗಿದೆ.