ಸಾರಿಗೆ ವ್ಯವಸ್ಥೆ (Transport)
ಪ್ರವಾಸಿಗನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಇರಬೇಕು. ಸಾರಿಗೆ ವ್ಯವಸ್ಥೆ ಇಲ್ಲದೆ ಹೋದರೆ ಪ್ರವಾಸೋದ್ಯಮ ನಡೆಯುವುದೇ ಇಲ್ಲ. ಒಂದು ಪ್ರವಾಸೋದ್ಯಮದ ಸ್ಥಳವು ದೇಶ, ವಿದೇಶ ಪ್ರವಾಸಿಗರನ್ನು ಆಕರ್ಷಿಸಲು ಆ ಸ್ಥಳಕ್ಕೆ ಸೂಕ್ತವಾದ ಸಾರಿಗೆ ಸಂಪರ್ಕ ವ್ಯವಸ್ಥೆ ಇರಬೇಕು. ಬಂದ ಪ್ರವಾಸಿಗರಿಗೆ ಉಳಿದುಕೊಳ್ಳಲು ಉತ್ತಮ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಆಗ ಮಾತ್ರ ಪ್ರವಾಸಿಗರು ಆ ಪ್ರದೇಶಗಳನ್ನು ಇಷ್ಟಪಡುತ್ತಾರೆ. ಸಾರಿಗೆ ವ್ಯವಸ್ಥೆಯನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ 1. ರಸ್ತೆಗಳು 2. ವಿಮಾನಯಾನ 3.ರೈಲುಮಾರ್ಗ 4. ಜಲಮಾರ್ಗ
- ರಸ್ತೆಗಳು: ಮಾನವ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಬೇಕೆಂದರೆ ರಸ್ತೆ ಸಾರಿಗೆ ಅತಿ ಮುಖ್ಯವಾಗಿದೆ. ಇಂದು ರಸ್ತೆ ಸಾರಿಗೆ ಅತ್ಯಂತ ಜನಪ್ರಿಯ ಸಾರಿಗೆಗಳಲ್ಲಿ ಒಂದು ರಸ್ತೆ ಸಾರಿಗೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ ಹಾಗೂ ತಾಲೂಕು ಹೆದ್ದಾರಿಗಳೆಂದು ವಿಭಜಿಸಲಾಗಿದೆ. ಈ ಹೆದ್ದಾರಿಗಳು ಸುರಕ್ಷಿತ ಮತ್ತು ಸುವ್ಯವಸ್ಥಿತವಾಗಿದ್ದರೆ ಮಾತ್ರ ಪ್ರವಾಸಿಗರು ತಮಗೆ ಇಚ್ಛಿಸಿದ ಪ್ರವಾಸಿ ತಾಣಗಳಿಗೆ ಹೋಗಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯು ಅತ್ಯಂತ ಸುಭದ್ರವಾದ ರಸ್ತೆ ಮಾರ್ಗಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು. ರಸ್ತೆಗಳ ಬದಿಗಳಲ್ಲಿ ಉತ್ತಮವಾದ ಮಾರ್ಗಸೂಚಿ ಫಲಕಗಳು ಇರಬೇಕು. ಪ್ರವಾಸಿಗರು ಸಂಚರಿಸುವ ರಸ್ತೆಗಳ ಎಡಬಲ ಬದಿಗಳಲ್ಲಿ ಸುಸಜ್ಜಿತವಾದ ಹೋಟೆಲ್ಗಳನ್ನು ನಿರ್ಮಿಸಬೇಕು. ರಸ್ತೆ ಸುರಕ್ಷತೆಗೆ ಹೆಚ್ಚು ಗಮನ ಹರಿಸಬೇಕು. ಇದರೊಂದಿಗೆ ಭದ್ರತೆಯು ಅಷ್ಟೇ ಪ್ರಮುಖವಾಗಿರುತ್ತದೆ. ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ಇಂಧನ ಪೂರೈಸುವ ವ್ಯವಸ್ಥೆಯನ್ನು ಕಲ್ಪಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉತ್ತಮವಾದ ರಸ್ತೆಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಪ್ರವಾಸ ತಾಣಗಳಿಗೆ ಆಕರ್ಷಿಸಬೇಕು, ನಂತರ ಪ್ರವಾಸಿ ಗಮ್ಯ ಸ್ಥಾನಗಳಿಗೆ ತಲುಪಲು ಮೋಟಾರ್ ಕೋಚುಗಳನ್ನು ಒದಗಿಸಬೇಕು. ಈ ಮೋಟಾರು ಕೋಚ್ಗಳಲ್ಲಿ ಸುಸ್ತಜಿತವಾದ ಆಸನ, ಕಿಟಕಿ, ಹವಾನಿಯಂತ್ರಕ ಸೌಲಭ್ಯಗಳನ್ನು ಒದಗಿಸಬೇಕು. ಬಂದ ಅತಿಥಿಗಳನ್ನು ಸತ್ಕರಿಸಲು ವಿವಿಧ ಭಾಷಾ ಕೌಶಲ್ಯವುಳ್ಳ ಚಾಲಕರನ್ನು ಮೋಟರು ಕೋಚ್ಗಳು ಹೊಂದಿರಬೇಕು. ಪ್ರವಾಸಿಗರ ತಂಗುದಾಣಗಳಲ್ಲಿ ಉತ್ತಮ ಸಾರಿಗೆ ಟ್ಯಾಕ್ಸಿಗಳು ಹಾಗೂ ಬಾಡಿಗೆ ಕಾರುಗಳನ್ನು ಒದಗಿಸಬೇಕು. ಟ್ಯಾಕ್ಸಿ ನಿರ್ವಾಹಕರು ಬಹು ಭಾಷೆಗಳನ್ನು ಬಲ್ಲವರಾಗಿರಬೇಕು.
ಪ್ರವಾಸೋದ್ಯಮ ಅಭಿವೃದ್ಧಿಗೆ ಹೆದ್ದಾರಿಗಳು ಎಷ್ಟು ಮಹತ್ವದ್ದಾಗಿವೆ ಎಂಬುದನ್ನು ಅರಿತ ಅಮೆರಿಕ ಹಾಗೂ ಇಂಗ್ಲೆಂಡ್ಗಳು ವೇಗದ ಹಾಗೂ ಮತ್ತು ಅತಿ ವೇಗದ ಹೆದ್ದಾರಿಗಳನ್ನು ನಿರ್ಮಿಸಿದವು. ಜಾಗತಿಕವಾಗಿ ಹೆಚ್ಚು ಪ್ರಖ್ಯಾತವಾದ ಇಂದಿನ ಹೆದ್ದಾರಿಗಳೆಂದರೆ ಅಮೆರಿಕದ, ಪಾನ್ ಅಮೆರಿಕ ಹೆದ್ದಾರಿಯು ಸುಮಾರು 23000 ಮೈಲಿ ಉದ್ದವಾಗಿದೆ. ಇದು ಅಲ್ಲದೆ ಟ್ರಾನ್ಸ್ ಯುರೋಪ್ ನಾರ್ತ್ ಸೌತ್ ಹೈವೇ. ಇದು ಸಿರಿಯಾದಿಂದ ಗ್ರೀಸ್ ವರೆಗೆ ವಿಸ್ತರಿಸಿದೆ. ಟ್ರಾನ್ಸ್-ಆಫ್ರಿಕನ್ ಹೆದ್ದಾರಿ ಈ ಹೆದ್ದಾರಿಯು ಕೀನ್ಯಾ ಉಗಾಂಡ ಹಾಗೂ ನೈಜೀರಿಯಾಗಳನ್ನು ಒಂದುಗೂಡಿಸುತ್ತದೆ. ಟ್ರಾನ್ಸ್ ವೆಸ್ಟ್ ಆಫ್ರಿಕನ್ ಹೆದ್ದಾರಿ. ಟ್ರಾನ್ಸ್ ಈಸ್ಟ್ ಆಫ್ರಿಕನ್ ಹೈವೇ ಫ್ಯಾನ್ ಅಮೆರಿಕನ್ ಹೈವೇ ಹಾಗೂ ಏಷ್ಯನ್ ಹೈವೇ ಪ್ರಮುಖವಾದವುಗಳಾಗಿವೆ. ಹೆದ್ದಾರಿಗಳನ್ನು ನಿರ್ಮಿಸುವಾಗ ಗಟ್ಟಿಮುಟ್ಟಾದ ಅತಿ ಹೆಚ್ಚು ವರ್ಷಗಳವರೆಗೆ ಬಾಳಿಕೆ ಬರುವಂತಹ ಮತ್ತು ಸರ್ವ ಋತುಗಳಿಗೆ ಹೊಂದಿಕೆಯಾಗುವಂತಹ ಅಂತರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವಂತೆ ಗಮನಹರಿಸಬೇಕು. ರಸ್ತೆಗಳ ಪಕ್ಕದಲ್ಲಿ ಹೋಟೆಲ್ಗಳು, ಶೌಚಾಲಯಗಳು, ಪಾರ್ಕ್ಗಳು, ತಿಂಡಿ ತಿನಿಸುಗಳು ದೊರಕುವಂತಿರಬೇಕು. ಅವುಗಳ ಕುರಿತು ರಸ್ತೆ ಫಲಕಗಳ ಮೂಲಕ ಸೂಚಿಸಬೇಕು. ಇದರಿಂದ ಪ್ರವಾಸಿಗರು ಸುಲಭವಾಗಿ ತಮ್ಮ ಪ್ರವಾಸಿ ತಾಣಗಳನ್ನು ತಲುಪಲು ಸಾಧ್ಯವಾಗುತ್ತದೆ.
ಭಾರತದಲ್ಲಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೆಂದರೆ ಪಶ್ಚಿಮ ವೇಗದೂತ ಹೆದ್ದಾರಿ, ಪೂರ್ವ ವೇಗದ ಹೆದ್ದಾರಿ, ಕಲ್ಕತ್ತಾ ಹಾಗೂ ಡಂಡಂ ನಡುವಿನ ರಾಷ್ಟ್ರೀಯ ಹೆದ್ದಾರಿ, ಗ್ರ್ಯಾಂಡ್ ಟ್ರಂಕ್ ಹೆದ್ದಾರಿ ಹಾಗೂ ಕಲ್ಕತ್ತಾ ಹಾಗೂ ದುರ್ಗಾಪುರ ನಡುವಿನ ಹೆದ್ದಾರಿ.
- ವಿಮಾನಯಾನ: ವಿಮಾನಯಾನ ಸಾರಿಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖವಾದ ಸಾರಿಗೆ ವ್ಯವಸ್ಥೆಯಾಗಿದೆ. ದೀರ್ಘಾವಧಿ ಪ್ರಯಾಣಕ್ಕೆ ವಾಯು ಸಾರಿಗೆಯು ಹೆಚ್ಚು ಫಲಪ್ರದವಾಗಿದೆ. ವಿಮಾನಯಾನ ಸಾರಿಗೆಯು ವಿದೇಶಿಯರನ್ನು ಬಹುಬೇಗನೆ ಸೆಳೆಯುತ್ತದೆ. ವಿಮಾನಯಾನ ಸಾರಿಗೆಯು ಪ್ರವಾಸಿಗರ ಕೈಗೆಟಕುವ ದರಗಳು ಅದರಲ್ಲಿನ ಶುಚಿತ್ವ ಕಾಲಕಾಲಕ್ಕೆ ದೊರಕುವ ಊಟ ತಿಂಡಿಗಳು ಹಾಗೂ ಅತ್ಯಂತ ಭದ್ರತೆಯಿಂದ ಕೂಡಿದ್ದರೆ ಪ್ರವಾಸಿಗರು ಹೆಚ್ಚು ಹೆಚ್ಚು ವಿಮಾನಯಾನವನ್ನು ಬಯಸುತ್ತಾರೆ. 1958ರ ವೇಳೆಗೆ ಅತಿ ವೇಗದ ಜಟ್ ವಿಮಾನ ಸಂಚಾರ ಜಾರಿಗೆ ಬಂದ ನಂತರ ರೈಲು ಹಾಗೂ ರಸ್ತೆ ಮತ್ತು ಹಡಗು ಸಂಚಾರದಲ್ಲಿ ಸ್ವಲ್ಪಮಟ್ಟಿಗೆ ಇಳಿತವನ್ನು ಕಾಣಲಾಯಿತು. ನ್ಯೂಯಾರ್ಕ್ ಹಾಗೂ ಪ್ಯಾರಿಸ್ ನಡುವೆ ಅಮೆರಿಕ ಬೋರಿಂಗ್ 707 ಎಂಬ ವಿಮಾನವು 1958 ರಲ್ಲಿ ಪ್ರಥಮ ಬಾರಿಗೆ ತನ್ನ ಹಾರಾಟವನ್ನು ಆರಂಭಿಸಿತು. ಇದರ ಹಿಂದೆಯೇ 1968ರಲ್ಲಿ ಎಲ್ಲಾ ಯುರೋಪಿನ ಏರ್ಲೈನ್ಗಳು ಜೆಟ್ ವಿಮಾನ ಸಾರಿಗೆ ವ್ಯವಸ್ಥೆಯನ್ನು ಆರಂಭಮಾಡಿದವು. ಅದರಂತೆ 1970ರಲ್ಲಿ ಜಂಬೋಜೆಟ್ ವಿಮಾನದ ಹಾರಾಟ ಆರಂಭವಾಯಿತು. ಇಲ್ಲಿಂದ ಅಂತರಾಷ್ಟ್ರೀಯ ಪ್ರವಾಸೋದ್ಯಮ ವಿಶಾಲವಾಗಿ ಹರಡಿತು. ವಿಮಾನ ಹಾರಾಟದ ಪರಿಣಾಮವಾಗಿ ವಿಶ್ವ ಇಂದು ಬಹಳ ಚಿಕ್ಕದಾಗಿ ಪರಿಣಮಿಸಿದೆ. ನಮ್ಮ ದೇಶದಲ್ಲಿಯೂ ಸಹ ಇಂಡಿಯನ್ ಏರ್ಲೈನ್ ಮತ್ತು ಖಾಸಗಿ ಒಡೆತನದಲ್ಲಿನ ಸಹರಾ, ಕಿಂಗ್ಫಿಷರ್, ಡೆಕ್ಕನ್ ಜೆಟ್, ಏರ್ಲೈನ್ಗಳು ಅತ್ಯುತ್ತಮವಾದ ಸಾರಿಗೆಯನ್ನು ಒದಗಿಸುತ್ತಿವೆ.
ವಿಮಾನ ಸಂಸ್ಥೆಗಳು ಗಮ್ಯಸ್ಥಾನಗಳಿಗೆ ಹತ್ತಿರವಾಗಿರುವಂತೆ ರನ್ವೇಗಳನ್ನು ನಿರ್ಮಿಸಬೇಕು. ಪ್ರವಾಸಿಗರು ವಿಮಾನ ನಿಲ್ದಾಣಗಳಲ್ಲಿ ಇಳಿದ ನಂತರ ಅವರಿಗೆ ವಿಶ್ರಾಂತಿಗಾಗಿ ವಿಶ್ರಾಂತಿ ಕೊಠಡಿಗಳು, ಪೊಲೀಸ್ ಭದ್ರತೆ, ಆರೋಗ್ಯ ಸೇವೆಗಳು ತೆರಿಗೆ ಇಲ್ಲದೆ ವಸ್ತುಗಳ ಖರೀದಿ, ಉಪಹಾರ ವ್ಯವಸ್ಥೆ, ಮಧ್ಯದಂಗಡಿ, ವಿದೇಶಿ ವಿನಿಮಯ, ಸೀಟು ಖರೀದಿಯ ಅನುಕೂಲತೆ, ಬಾಡಿಗೆ ಕಾರುಗಳು, ಪ್ರವಾಸಿ ಏಜೆನ್ಸಿಗಳು ಮತ್ತು ತರಬೇತಿ ಹೊಂದಿದ ಸಿಬ್ಬಂದಿಗಳ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು. ಇತ್ತೀಚಿಗೆ ವಿಮಾನಗಳ ಪತನ, ಅಪಹರಣ ಹಾಗೂ ಭಯೋತ್ಪಾದನೆಗಳು ಹೆಚ್ಚುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ. ನಿಲ್ದಾಣಗಳು ಉತ್ತಮ ಗುಣಮಟ್ಟವನ್ನು ಹೊಂದಿರಬೇಕು. ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ವಿಮಾನಗಳು ರನ್ವೇಗಳಿಂದ ಜಾರಿ ಅಪಘಾತಕ್ಕೆ ಈಡಾಗಿ ನೂರಾರು ಜನ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತೇವೆ ಹಾಗೂ ಸೂಕ್ತ ಭದ್ರತೆ ಇದ್ದಷ್ಟು ಒಳ್ಳೆಯದು.
- ರೈಲು ಮಾರ್ಗಗಳು: ಪ್ರವಾಸಿಗರಿಗೆ ರೈಲು ಸಂಚಾರ ಅತ್ಯಂತ ಕಡಿಮೆ ವೆಚ್ಚದ್ದಾಗಿದ್ದು ಮತ್ತು ದೀರ್ಘಾವಧಿ ಪ್ರವಾಸಕ್ಕೆ ಯೋಗ್ಯಕರವಾಗಿದೆ. ಭಾರತೀಯ ರೈಲುಗಳು ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕಾಗಿದೆ. ರೈಲುಗಳು ಚೊಕ್ಕಟವಾಗಿದ್ದು ಉತ್ತಮವಾದ ಆಸನಗಳನ್ನು ಹೊಂದಿರಬೇಕು. ರೈಲುಗಳಲ್ಲಿ ಹವಾನಿಯಂತ್ರಕಗಳಿದ್ದು ಶೌಚಾಲಯ, ಗಾಳಿ, ಬೆಳಕು, ನೀರಿನ ಪೂರೈಕೆ, ಉಪಹಾರ ಸೌಲಭ್ಯಗಳನ್ನು ರೈಲ್ವೆ ಇಲಾಖೆ ಪ್ರವಾಸಿಗರಿಗೆ ಒದಗಿಸಬೇಕು. ರೈಲು ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ ಇರಬೇಕು. ಆರೋಗ್ಯ ಸೇವೆಯನ್ನು ಒದಗಿಸಬೇಕು ರೈಲುಗಳನ್ನು ಕಾಲಕಾಲಕ್ಕೆ ಆಧುನಿಕರಣಗೊಳಿಸಬೇಕು. ಋತುಮಾನಕ್ಕೆ ಅನುಗುಣವಾಗಿ ರೈಲುಗಳನ್ನು ಓಡಿಸುವ ವ್ಯವಸ್ಥೆ ಮಾಡಬೇಕು. ಟಿಕೆಟ್ ಬುಕಿಂಗ್ನಲ್ಲಿ ಆಗುತ್ತಿರುವ ಅನಾನುಕೂಲತೆಯನ್ನು ನಿವಾರಿಸಬೇಕು. ಇತ್ತೀಚಿಗೆ ದೇಶದಲ್ಲೆಲ್ಲಡೆ “ವಂದೇ ಭಾರತ್” ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ. ಪ್ರವಾಸಿಗರಿಗೆ ಉತ್ತಮವಾದ ಆಸನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಊಟದ ವ್ಯವಸ್ಥೆ ಹಾಗೂ ಪ್ರಯಾಣಿಕರಿಗೆ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಬಹುದಾಗಿದೆ. ವಿದೇಶಿ ರೈಲುಗಳಿಗೆ ಹೋಲಿಸಿದರೆ ಭಾರತೀಯ ರೈಲುಗಳ ಗುಣಮಟ್ಟ ಬಹಳ ಕಳಪೆಯಾಗಿದೆ. ಆಧುನಿಕ ಜನರ ಗಾದೆ ಮಾತೊಂದಿದೆ “ವಿದೇಶಿ ರೈಲಿನಲ್ಲಿ ಕಾಲು ತೊಳೆದುಕೊಂಡು ಕಾಲಿಡಬೇಕು, ಆದರೆ ಭಾರತೀಯ ರೈಲಿನಲ್ಲಿ ತಿರುಗಾಡಿಕೊಂಡು ಬಂದು ಕಾಲು ತೊಳೆದುಕೊಳ್ಳಬೇಕು”. ಚೀನಾ, ಜಪಾನ್, ಫ್ರಾನ್ಸ್ಗಳು ಗಂಟೆಗೆ 700 ರಿಂದ 1000 ಕಿ.ಮಿ ವೇಗವಾಗಿ ಚಲಿಸುವ ಬುಲೆಟ್ ಟ್ರೈನ್ಗಳನ್ನು ಓಡಿಸುತ್ತಿವೆ. ಆದರೆ ಭಾರತೀಯ ರೈಲುಗಳ ವೇಗ ಮಾತ್ರ ವೃದ್ಧಿಯಾಗಲೇ ಇಲ್ಲ. ಅವುಗಳು ಗಂಟೆಗೆ 150 ಕಿ.ಮೀ ಓಡಿದರೆ ಅದೇ ಹೆಚ್ಚುಗಾರಿಕೆ. ರೈಲುಗಳಲ್ಲಿನ ಶುಚಿತ್ವದ ಕೊರತೆಯಿಂದ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿಲ್ಲ. ಶುಚಿತ್ವ ಇದ್ದರೆ ಮಾತ್ರ ಪ್ರಯಾಣಿಕರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ರೈಲು ನಿಲ್ದಾಣದಿಂದ ಪ್ರವಾಸಿಗರು ತಮ್ಮ ತಂಗುದಾಣಗಳಿಗೆ ಹೋಗಲು ಸೂಕ್ತ ವಾಹನಗಳ ಸೌಲಭ್ಯಗಳನ್ನು ಕಲ್ಪಿಸಬೇಕು. ರೈಲು ಹಾಗೂ ವಿಮಾನಗಳ ವೇಳಾಪಟ್ಟಿಯಲ್ಲಿ ಸಮನ್ವಯತೆ ಇರುವಂತೆ ನೋಡಿಕೊಂಡರೆ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಪ್ರವಾಸಿಗರು ಬರುವ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹೋಟೆಲ್, ಆರೋಗ್ಯ ಕೇಂದ್ರಗಳು, ನೈರ್ಮಲ್ಯ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಬೇಕು.
ಗಾಲಿಗಳ ಮೇಲೆ ಅರಮನೆ:
ಭಾರತದ ಅತ್ಯಂತ ಐಷಾರಾಮಿ ರೈಲು ಇದಾಗಿದೆ. ಇದು ಚಕ್ರ ಅಥವಾ ಗಾಲಿಗಳ ಮೇಲೆ ಚಲಿಸುತ್ತದೆ. ಅರಮನೆಯಲ್ಲಿ ಸಿಗಬಹುದಾದ ಎಲ್ಲಾ ಮೂಲಭೂತ ಸೌಕರ್ಯಗಳು ಈ ರೈಲಿನಲ್ಲಿ ಲಭ್ಯ. ಅಂದರೆ ಸುಖಾಸನ ಹವಾನಿಯಂತ್ರಕ, ಬಿಸಿನೀರು, ಬಾರ್ ಅಂಡ್ ರೆಸ್ಟೋರೆಂಟ್, ಉಪಹಾರ, ಗ್ರಂಥಾಲಯ ಶೌಚಾಲಯ ಹಾಗೂ ವಿಶ್ರಾಂತಿ ಗೃಹಗಳು ಮುಂತಾದ ಸೌಲಭ್ಯಗಳು ದೊರಕುತ್ತಿವೆ. ಈ ರೈಲನ್ನು ಅರಮನೆಯ ಹಾಗೆ ಶೃಂಗಾರ ಮಾಡಲಾಗಿರುತ್ತವೆ. ಈ ರೈಲು ದೆಹಲಿಯಿಂದ ಆರಂಭವಾಗಿ ಜೋದಪುರ ಚಿತ್ತೂರ್ಗರ್, ಉದಯಪುರ, ಜೈಸಲ್ಮೇಲ್, ಭರತಪುರ ಹಾಗೂ ಆಗ್ರಾಗಳನ್ನು ಸಂದರ್ಶಿಸಿ ಮತ್ತೆ ದೆಹಲಿಯನ್ನು ಬಂದು ಸೇರುತ್ತದೆ. ಪ್ರಯಾಣದ ಸಮಯ 7 ರಾತ್ರಿ 8 ದಿನಗಳು. ಈ ರೈಲು ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ರೈಲಿನಲ್ಲಿ ಪ್ರಯಾಣ ಮಾಡಿದರೆ ದೇಶದ ಗತವೈಭವ ನೆನಪಾಗುತ್ತದೆ. ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತವಾದ ಅನುಭವ. ಇದೇ ರೀತಿಯ ರೈಲು ವ್ಯವಸ್ಥೆ ರಾಜಸ್ಥಾನ್ ಹಾಗೂ ಕರ್ನಾಟಕದಲ್ಲಿ ಪರಿಚಯಿಸಲಾಗಿದೆ.
ಸುವರ್ಣ ರಥ
ಭಾರತದ ಪ್ರಮುಖ ಐಷಾರಾಮಿ ಪ್ರವಾಸಿ ರೈಲುಗಳಲ್ಲಿ ಒಂದಾಗಿದ್ದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇದನ್ನು ನಿರ್ವಹಿಸುತ್ತಿದೆ. ಕರ್ನಾಟಕ, ಗೋವಾ, ಕೇರಳ ಹಾಗೂ ತಮಿಳುನಾಡಿನ ಪ್ರಸಿದ್ಧ ವಿಶ್ವ ಪರಂಪರೆಯ ತಾಣಗಳು ಹಾಗೂ ಪ್ರವಾಸಿ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಈ ರೈಲು ದಕ್ಷಿಣ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಇತಿಹಾಸವನ್ನು ಅನುಭವಿಸಲು ಉತ್ತಮ ಅವಕಾಶ ಕಲ್ಪಿಸುತ್ತದೆ.
ಈ ರೈಲನ್ನು 2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲರು ಉದ್ಘಾಟಿಸಿದ್ದರು. ಈ ರೈಲಿನಲ್ಲಿ 11 ಬೋಗಿಗಳಿದ್ದು ಪ್ರತಿಯೊಂದು ಬೋಗಿಯಲ್ಲಿ ಟಿ.ವಿ, ವೈ ಪೈ ಪರಿಸರ, ವಿದೇಶಿಯ ಪ್ರವಾಸಿಗರು ಬಯಸುವ ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಸ್ಪಾ ಹಾಗೂ ವ್ಯಾಯಾಮ ಶಾಲೆಗಳು ಇವೆ. ರೈಲುಭೋಗಿಗಳನ್ನು ಮೈಸೂರು. ಹಳೆಬೀಡುಗಳ ವಾಸ್ತುಶಿಲ್ಪದಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಭೋಗಿಗಳಿಗೆ ಕನ್ನಡನಾಡಿನ ಆಳರಸರ ಹೆಸರನ್ನು ಇಡಲಾಗಿದೆ. ರೈಲಿನಲ್ಲಿ ರುಚಿಕರವಾದ ಆಹಾರವನ್ನು ಒದಗಿಸುವ ಎರಡು ರೆಸ್ಟೋರೆಂಟ್ಗಳು ಇವೆ. ಇಲ್ಲಿ ರುಚಿ ರುಚಿಯಾದ ಪಾಕಗಳನ್ನು ಸಿದ್ಧಪಡಿಸಿಕೊಡಲಾಗುತ್ತದೆ.
ಈ ರೈಲು ಬೆಂಗಳೂರು ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಹಂಪಿ ಬಾದಾಮಿ, ಗೋವಾ, ಕಬಿನಿ, ಮೈಸೂರು, ಬೃಂದಾವನ, ಹಳೇಬೀಡು, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪಿ, ಪಟ್ಟದಕಲ್ಲು ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಪುನ ಬೆಂಗಳೂರಿಗೆ ಬಂದು ಸೇರುತ್ತದೆ. ಒಟ್ಟು 7 ದಿನಗಳ ಪ್ರವಾಸವಿದ್ದು 30 ಜನ ಪ್ರವಾಸಿಗರು ಕುಳಿತುಕೊಳ್ಳಬಹುದಾದಷ್ಟು ಆಸನಗಳು ಇವೆ. ಒಂದು ವಾರದಲ್ಲಿ 500 ಕಿ ಮೀ ದೂರವನ್ನು ಸಂಚರಿಸಿ 1500 ವರ್ಷಗಳ ಇತಿಹಾಸದ ಅನುಭವ ನೀಡುತ್ತದೆ. ವಿವಿಧ ಪ್ಯಾಕೇಜ್ಗಳಲ್ಲಿ ಇದು ಸಂಚರಿಸುತ್ತದೆ.
ಇದು ಅತ್ಯಂತ ದುಬಾರಿಯಾಗಿದ್ದು ಒಬ್ಬರಿಗೆ ಕನಿಷ್ಠ 4 ಲಕ್ಷ ರೂಗಳಷ್ಟು ಖರ್ಚಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ ʻಗರಿಬೀ ರಥʼ ಎನ್ನುವ ಮತ್ತೊಂದು ರೈಲು ಬಡವರಿಗಾಗಿ ಉದ್ಘಾಟನೆಯಾಗಿದೆ.
- ಜಲ ಸಾರಿಗೆ: ದ್ವೀಪಗಳನ್ನು ಸಂದರ್ಶಿಸುವ ಪ್ರವಾಸಿಗರಿಗೆ ಹಡಗು, ಹರಿಗೋಲು ಹಾಗೂ ವಸತಿ ದೋಣಿಗಳನ್ನು ಪ್ರವಾಸೋದ್ಯಮ ಇಲಾಖೆ ಒದಗಿಸಬೇಕು. ಪ್ರವಾಸಿ ಹಡುಗುಗಳಲ್ಲಿ ಈಜುಕೊಳ, ವ್ಯಾಯಾಮಶಾಲೆ, ಜೂಜುಕಟ್ಟೆ, ಹೋಟೆಲ್, ಚಲನಚಿತ್ರ, ಕ್ರೀಡೆ, ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಬೇಕು. ಉದಾ: ಗ್ರೀಸ್, ಪ್ಲಾರಿಡಾ, ಹವಾಯ್, ಮೆಕ್ಸಿಕೋ, ಕೆರೆಬಿಯನ್ ಹಾಗೂ ಆಸ್ಟ್ರೇಲಿಯಾ ಸಮುದ್ರಯಾನಿಗಳಿಗೆ ಈ ರೀತಿಯಾದ ಹಡಗುಗಳ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ.
ಕರ್ನಾಟಕ ಪ್ರವಾಸೋದ್ಯಮವು ನದಿ, ಸರೋವರ, ಕರಾವಳಿ ತೀರಗಳಲ್ಲಿ ಪ್ರವಾಸಿಗರಿಗೆ ದೋಣಿ ವಿಹಾರ ಮತ್ತು ಕ್ರೂಸ್ ಅನುಭವಗಳನ್ನು ಒದಗಿಸುವ ಮೂಲಕ ಆಲಮಟ್ಟಿ ಬಾಗಲಕೋಟೆ, ಕರಾವಳಿ ಭಾಗಗಳಲ್ಲಿ ದೋಣಿ ಹಾಗೂ ಫೈಬರ್ ದೋಣಿ ಸೇವೆಗಳನ್ನು ಒಳನಾಡಿನ ಸಾರಿಗೆ ಇಲಾಖೆಯು ಪ್ರೋತ್ಸಾಹಿಸುತ್ತಿದೆ. ಇದು ಪ್ರವಾಸೋದ್ಯಮದ ಮೂಲಕ ಆದಾಯ ಮತ್ತು ಮನರಂಜನೆ ಹೆಚ್ಚಿಸುವ ಸುಸ್ಥಿರ ಮಾರ್ಗವಾಗಿದೆ.
ದೋಣಿ ವಿಹಾರ: ಕೆರೆ ನದಿ ಹಿನ್ನಿರು ಪ್ರದೇಶಗಳಲ್ಲಿ ಜನಪ್ರಿಯ.
ಹೌಸ್ ಬೋಟ್ ಮತ್ತು ಕ್ರೂಸ್: ಕರಾವಳಿ ಹಾಗೂ ಪ್ರಮುಖ ಜಲಾಶಯಗಳಲ್ಲಿ ವಸತಿ ಹಾಗೂ ವಿಹಾರದ ಅನುಭವ ನೀಡುತ್ತವೆ.
ಪರಿಸರ ಪ್ರವಾಸೋದ್ಯಮ: ನದಿ ದಂಡೆಗಳ ಸೌಂದರ್ಯವನ್ನು ಸವಿಯಲು ಜನಸಾರಿಗೆ ಸಹಾಯಮಾಡುತ್ತದೆ.
ಜಲಸಾರಿಗೆ ವಾಹನ ವಿಧಗಳು: ಹಡಗುಗಳು, ದೋಣಿಗಳು ಮತ್ತು ಬೋಟುಗಳು, ಪೆರ್ರಿಗಳು, ರೋ-ರೋ, ಸ್ಟೀಮರ್ಗಳು ಟ್ಯಾಂಕರ್ಗಳು ಮೊದಲಾದವುಗಳು.
ಸಾರಿಗೆಯಲ್ಲಿ ಹೊಸ ಮೈಲುಗಲ್ಲುಗಳು
- ರೈಟ್ ಸಹೋದರರು ಪ್ರಪ್ರಥಮ ಬಾರಿಗೆ ವಿಮಾನವನ್ನು ಕಂಡುಹಿಡಿದರು.
- 1975ರಲ್ಲಿ ಪ್ರಪ್ರಥಮವಾಗಿ ಫ್ರಾನ್ಸ್ನ ಪೆರ್ರಿಯರಿನಿಂದ ಉಗಿ ಹಡಗು ಶೋಧನೆಯಾಯಿತು.
- 1939ರಲ್ಲಿ ರಷ್ಯಾದ ಇಗೋರ್ ಸಿಕೋರಸ್ಕಿಯಿಂದ ಹೆಲಿಕ್ಯಾಪ್ಟರ್ ಸಂಶೋಧನೆಯಾಯಿತು.
- 1927ರಲ್ಲಿ ಪ್ರಥಮ ಬಾರಿಗೆ ದೆಹಲಿಯಿಂದ ಕೈರೋಗೆ ಮೊದಲ ಇಂಡಿಯನ್ ವಿಮಾನವನ್ನು ಹಾರಿಸಲಾಯಿತು.
- 1927ರಲ್ಲಿ ದೆಹಲಿಯಲ್ಲಿ ಮೊದಲ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಯಿತು.
- 1919 ರಲ್ಲಿ ಪ್ರಥಮ ಫ್ರಾನ್ಸ್ ಅಟ್ಲಾಂಟ್ ಏರ್ಲೈನ್ ನ್ಯೂಪೌಂಡ್ಲ್ಯಾಂಡಿನಿಂದ ಐರ್ಲ್ಯಾಂಡ್ಗೆ ಹಾರಾಟ.
- 1981 ರಲ್ಲಿ ಜೂಲಿಯನ್ ನಾಟಿ ಎಂಬುವವನು ಪ್ರಥಮ ಸೋಲಾರ್ ಚಾಲಿತ ಪ್ಯಾರಾಚ್ಯೂಟ್ ಕಂಡು ಹಿಡಿದನು.
- 1984ರ ವೇಳೆಗೆ ರಾಕೇಶ್ ಶರ್ಮ ರಷ್ಯಾದ ಸಹಾಯದಿಂದ ಪ್ರಥಮ ಬಾರಿಗೆ ಗಗನ ನೌಕಯಾತ್ರೆ ಮಾಡಿದನು.
- ಕಲ್ಪನಾ ಚಾವ್ಲಾ ಪ್ರಥಮ ಗಗನಯಾತ್ರಿ ಎಂಬ ಕೀರ್ತಿಗೆ ಪಾತ್ರಳಾದಳು.
- 2002 ರಲ್ಲಿ ಪ್ರಥಮ ಆಧುನಿಕ ಸಬಮರಿನ್ ಸಂಶೋಧನೆಯಾಯಿತು.