ಧಾರ್ಮಿಕ ನೀತಿ:

ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್‌ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು. ಜೊತೆಗೆ ಹಿಂದುಗಳೇ ಅಧಿಕವಾಗಿದ್ದ ಮೊಗಲ್ ಸಾಮ್ರಾಜ್ಯದಲ್ಲಿ ಅವರನ್ನು ತನ್ನೆಡೆಗೆ ಒಲಿಸಿಕೊಳ್ಳಲು ಉತ್ಸುಕನಾಗಿದ್ದನು. ಅಕ್ಬರ್‌ ಮಹಾಶಯ ಶೇಕ್‌ ಸಲೀಂ ಚಿಸ್ತಿಯ ಪರಮ ಭಕ್ತನಾಗಿದ್ದರಿಂದ ಫತೇಪುರ ಸಿಕ್ರಿಯಲ್ಲಿ ‘ಇಬಾದತ್‌ಖಾನ’ ಎಂಬ ಭವ್ಯ ಕಟ್ಟಡವನ್ನು ನಿರ್ಮಿಸಿದನು. ಪ್ರತಿ ಗುರುವಾರ ಇಸ್ಲಾಂ, ಹಿಂದೂ, ಜೈನ, ಕ್ರೈಸ್ತ ಹಾಗೂ ಸಿಖ್ ಧರ್ಮಗುರುಗಳನ್ನು ಅಲ್ಲಿಗೆ ಆಹ್ವಾನಿಸಿ ಧಾರ್ಮಿಕ ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದನು. ಕ್ರಿ.ಶ. 1579 ರಲ್ಲಿ ಅಕ್ಬರನು ಸುನಿಶ್ಚಯ ಶಾಸನವನ್ನು ಹೊರಡಿಸಿ ಧಾರ್ಮಿಕ ವಿಷಯಗಳಲ್ಲಿ ಧಾರ್ಮಿಕ ಪಂಡಿತರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಅಂತಿಮ ನಿರ್ಣಯವನ್ನು ಕೊಡುವ ಅಧಿಕಾರವನ್ನು ಬಾದಶಹ ಹೊಂದಿದ್ದನು.

ದಿನ್-ಇ-ಇಲಾಹಿ :

ಅಕ್ಷರನು ಸಾ.ಶ. 1582 ರಲ್ಲಿ ದಿನ್-ಇ-ಇಲಾಹಿ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು. ಈ ಹೊಸ ಧರ್ಮವು ಈ ಕೆಳಗಿನ ಪ್ರಮುಖ ತತ್ವಗಳನ್ನು ಒಳಗೊಂಡಿತ್ತು.

1) ಇದು ಸುಲ್-ಎ-ಕುಲ್ (ಸರ್ವರಿಗೂ ಶಾಂತಿ) ಎಂಬ ತತ್ವವನ್ನು ಒಳಗೊಂಡಿತ್ತು.

2) ಸ್ವಾತಂತ್ರ್ಯ ಮತ್ತು ಪರೋಪಕಾರ.

3) ಲೌಕಿಕ ವಿಚಾರಗಳಿಂದ ದೂರವಾಗಿರುವುದು.

4) ಏಕೀಶ್ವರ ತತ್ವಗಳ ತಳಹದಿಯನ್ನು ಹೊಂದಿತ್ತು.

5) ಯಾರೊಬ್ಬರ ಮನಸ್ಸನ್ನು ನೋಯಿಸದೆ ಮೃದುವಾಗಿ, ಹಿತವಾಗಿ ಸಭ್ಯತೆಯಿಂದ ನುಡಿಯುವುದು.

6) ದೇವರಿಗೆ ಆತ್ಮವನ್ನು ಅರ್ಪಿಸುವುದು. ಅಬುಲ್‌ ಫಜಲ್ ದಿನ್-ಇಲಾಹಿಯ ಪುರೋಹಿತನಾಗಿದ್ದನು. ಯಾರೇ ಈ ಧರ್ಮವನ್ನು ಸ್ವೀಕರಿಸಲು ಮುಂದೆ ಬಂದರೆ ಅಬುಲ್ ಫಜಲ್ ಆತನನ್ನು ಚಕ್ರವರ್ತಿಗೆ ಪರಿಚಯಿಸುತ್ತಿದ್ದನು. ಆಗ ಆ ವ್ಯಕ್ತಿ ತನ್ನ ರುಮಾಲನ್ನು ಕೈಯಲ್ಲಿರಿಸಿಕೊಂಡು ಚಕ್ರವರ್ತಿಯ ಪಾದಗಳಿಗೆ ನಮಸ್ಕರಿಸಬೇಕಿತ್ತು. ಚಕ್ರವರ್ತಿ ಆತನನ್ನು ಎಬ್ಬಿಸಿ ರುಮಾಲನ್ನು ಆತನ ತಲೆಯ ಮೇಲೆ ಇರಿಸುತ್ತಿದ್ದನು. ನಂತರ ‘ಶಸ್ತ್ರ’ ಎಂಬ ಸಂಕೇತವನ್ನು ಕೊಡುತ್ತಿದ್ದನು. ಆ ಸಂಕೇತದ ಮೇಲೆ ‘ಅಲ್ಲಾಹೂ ಅಕ್ಬರ್’ ಎಂದು ಬರೆಯಲಾಗಿತ್ತು. ಆದರೆ ದಿನ್-ಇಲಾಹಿಯನ್ನು ಬೆರಳೆಣಿಕೆಯಷ್ಟು ಜನ ಬಿಟ್ಟರೆ ಬೇರೆ ಯಾರೂ ಸ್ವೀಕರಿಸಲಿಲ್ಲ. ಅಕ್ಬರನ ಮರಣದ ನಂತರ ಅವನ ಹಿಂದೆಯೇ ಅದು ನಿರ್ನಾಮವಾಯಿತು.

ರಜಪೂತ ನೀತಿ:

ಅಕ್ಬರನ ರಜಪೂತ ಧೋರಣೆಯು ರಾಜಕೀಯ ಹಿತಾಸಕ್ತಿ, ನ್ಯಾಯ ಹಾಗೂ ಸಮಾನತೆಯ ತತ್ವಗಳನ್ನು ಆಧರಿಸಿತ್ತು. ಹೊರನಾಡಿನವರಾದ ಮುಸಲ್ಮಾನ ಅಧಿಕಾರಿಗಳು ಹಾಗೂ ಸರದಾರರನ್ನು ಸಂಪೂರ್ಣವಾಗಿ ನಂಬುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅಕ್ಷರನಿಗೆ ತನ್ನ ಆಡಳಿತದ ಮೊದಲ ವರ್ಷದಲ್ಲಿಯೇ ಮನವರಿಕೆಯಾಯಿತು. ಮುಸಲ್ಮಾನರು ಸ್ವಹಿತಕ್ಕಾಗಿ ದುಡಿಯುವರೆಂಬ ಸತ್ಯ ಅವನಿಗೆ ಆಗಲೇ ಮನದಟ್ಟಾಯಿತು. ಈ ಕಾರಣದಿಂದಾಗಿ ಅಕ್ಬರನು ಮೊಗಲ್ ಸಾಮ್ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಅದರಲ್ಲೂ ರಜಪೂತರನ್ನು ಅತ್ಯಂತ ವಿಶ್ವಾಸಪೂರ್ವಕವಾಗಿ ನಡೆಸಿಕೊಂಡುದುದನ್ನು ಭಾರತೀಯ ಇತಿಹಾಸಕಾರರು ಮುಕ್ತಕಂಠದಿಂದ ಹೊಗಳಿದ್ದಾರೆ. ಈ ಹಿಂದೆ ಬಾಬರನಾಗಲಿ, ಹುಮಾಯೂನನಾಗಲೀ ರಜಪೂತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಲಿಲ್ಲ. ಸರ್ಕಾರದ ಉನ್ನತ ಹುದ್ದೆಗೆ ಅವರನ್ನು ನೇಮಕವನ್ನು ಮಾಡಿರಲಿಲ್ಲ. ಆದರೆ ಅಕ್ಬರ್‌ ಮಾತ್ರ ರಜಪೂತರಿಗೆ ರಾಜಕೀಯದಲ್ಲಿ ಅಗ್ರಸ್ಥಾನವನ್ನು ನೀಡಿದನು. ಇದರಿಂದಾಗಿ ಅಕ್ಬರ್‌ ಭಾರತೀಯ ಇತಿಹಾಸದಲ್ಲಿ ವಿಶಿಷ್ಠವಾದ ಸ್ಥಾನವನ್ನು ಪಡೆದಿದ್ದಾನೆ.

1) ಅಕ್ಬರನು ತನ್ನ ಸೈನಿಕ ಶಿಬಿರ ಹಾಗೂ ದರ್ಬಾರಿನಲ್ಲಿಯೇ ದಂಗೆಕೋರರನ್ನು ಎದುರಿಸಬೇಕಾಗಿದ್ದ ಕಾರಣದಿಂದ ಅವನು ರಜಪೂತರ ಬಗ್ಗೆ ಸೌಮ್ಯ ನೀತಿಯನ್ನು ಅನುಸರಿಸಿದನು.

2) ಅಕ್ಬರನ ಪ್ರಧಾನಮಂತ್ರಿಯಾಗಿದ್ದ ಶಹ ಮನ್ಸೂರ್ ಅಕ್ಬರನ ಮಲತಮ್ಮನಾದ ಮಹಮ್ಮದ್ ಹಕೀಂನಿಗೆ ಬೆಂಬಲ ನೀಡಿ ದ್ರೋಹ ಬಗೆದುದು ಅಕ್ಬರನು ರಜಪೂತರ ಬಗ್ಗೆ ಕಾಳಜಿ ವಹಿಸಲು ಕಾರಣವಾಯಿತು.

3 ) ಬೈರಾಂಖಾನನು ಅಕ್ಬರನ ವಿರುದ್ಧ ದಂಗೆ ಎದ್ದುದು ಹಾಗೂ ಮಹಮ್ ಅನಗಾ ಸ್ವಾರ್ಥಿಯಾದುದು ಅಕ್ಬರನು ರಜಪೂತರ ಬಗ್ಗೆ ನಿಷ್ಟೆ ತೋರಲು ಕಾರಣವಾಯಿತು.