ಅರ್ಥ:
ಸಂಘಂ ಎಂದರೆ ಒಂದು ಕೂಟ ಎಂದರ್ಥ, ಸಂಘಂ ಎಂಬ ಪದವು ತಮಿಳಿನ ಕೂಡಲ್ ಎಂಬ ಪದದಿಂದ ಬಂದಿದೆ. ತಮಿಳಿನ ಕೂಡಲ್ ಎಂಬ ಪದವನ್ನು ಬೌದ್ಧರು ಹಾಗೂ ಜೈನರು ಸಂಘ ಎಂಬ ಸಂಸ್ಕೃತ ಪದಕ್ಕೆ ಸಮಾನವಾಗಿ ಬಳಸಿದರು. ಆದ್ದರಿಂದ ಕೂಡಲ್ ಹಾಗೂ ಸಂಘಂ ಎಂಬ ಎರಡು ಪದಗಳು ಸಮಾನಾರ್ಥ ಪದಗಳಾಗಿವೆ. ಸಂಘಂ ಎಂಬುದು ತಮಿಳು ಸಾಹಿತ್ಯರಾಶಿಯನ್ನು ಸೃಷ್ಠಿಸಿದ ಒಂದು ಸಂಸ್ಥೆ ಅಥವಾ ವಿದ್ವತ್ ಗೋಷ್ಠಿ ಸಾಹಿತ್ಯ ಎಂದರೆ ಕೂಟದ ವಿದ್ವತ್ ಜನರು ರಚಿಸಿದ ವಿಚಾರ ಪೂರಿತ ಸಾಹಿತ್ಯ. ಈ ಸಾಹಿತ್ಯ ಗೋಷ್ಠಿಯಲ್ಲಿ ಅಸಂಖ್ಯಾತ ದಾರ್ಶನಿಕರು, ಕವಿಗಳು ಹಾಗೂ ವಿದ್ವಾಂಸರು ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಸಂಘಂ ಸಾಹಿತ್ಯಗೋಷ್ಠಿಗಳು ಪಾಂಡ್ಯ ಅರಸರ ಆಶ್ರಯದಲ್ಲಿ ನಡೆಯುತ್ತಿದ್ದುದರಿಂದ ಅವರೂ ಸಹ ವಿದ್ವತ್ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದರು. ಈ ಗೋಷ್ಠಿಯಲ್ಲಿ ರಾಜಮನೆತನದವರೇ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದರಿಂದ ಅದು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಂದಿತು. ಅದರಲ್ಲೂ ತಮಿಳು ಭಾಷೆಯೇ ಈ ಗೋಷ್ಠಿಯ ಪ್ರಧಾನ ಭಾಷೆಯಾದ ಕಾರಣದಿಂದ ಪಾಂಡ್ಯರು, ಚೇರರು ಹಾಗೂ ಚೋಳರು ವಿಶೇಷವಾಗಿ ಅದರ ಪ್ರಚಾರಕ್ಕೆ ಶ್ರಮಿಸಿದರು. ತಮಿಳು ಆರಂಭದ ಭಾಷೆಯಾದ ಕಾರಣ ಈ ಕಾಲವನ್ನು ‘ಸಂಘಂ ಯುಗ’ ಎಂದು ಕರೆಯಲಾಗಿದೆ.
ಪ್ರಾಚೀನ ಕಾಲದಲ್ಲಿ ಒಟ್ಟು ಮೂರು ಸಂಘಂಗಳು ಅಸ್ತಿತ್ವದಲ್ಲಿ ಇದ್ದವು. ಈ ಮೂರು ಸಂಘಂಗಳು ಒಟ್ಟು 9990 ವರ್ಷಗಳ ಅವಧಿಯಲ್ಲಿ ಕಂಡುಬಂದಿದ್ದು, ಇದರಲ್ಲಿ 8598 ಕವಿಗಳು ಭಾಗವಹಿಸಿದ್ದರು. ಸುಮಾರು 197 ಪಾಂಡ್ಯ ಅರಸರು ಸಂಘಂ ಗೋಷ್ಠಿಗೆ ಮಹಾ ಶೋಷಕರಾಗಿದ್ದರು. ಕೆಲವು ಶಾಸನಗಳಲ್ಲಿ ಕಡುಂಗನ್ ಹಾಗೂ ಉಗ್ರಪ್ಪೆರುವಾಲುಡಿ ಎಂಬ ರಾಜರ ಹೆಸರುಗಳು ಕಂಡು ಬಂದಿವೆ.
ಸಂಘಂ ಕಾಲ:
ತಮಿಳು ಭಾಷೆಯ ಸಾಹಿತ್ಯದ ಆರಂಭದ ಯುಗವನ್ನು ಸಾಮಾನ್ಯವಾಗಿ ಸಂಘಂ ಯುಗ ಎಂದು ನಂಬಲಾಗಿದೆಯಾದರೂ ಭಾರತದ ಆನೇಕ ಇತಿಹಾಸತಜ್ಞರು ಸಂಘಂ ಯುಗದ ಬಗ್ಗೆ ತಮ್ಮದೇ ಆದ ವಿಭಿನ್ನ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸಂಘಂ ಯುಗದಲ್ಲಿ ರಚಿತವಾದ ಕವಿತೆಗಳು ಹಾಗೂ ಮಹಾಕಾವ್ಯಗಳಾದ ಶಿಲಪ್ಪಧಿಕಾರಂ ಹಾಗೂ ಮಣಿಮೇಖಲೈಗಳಲ್ಲಿ ಉಲ್ಲೇಖವಾಗಿರುವ ಸಾಮಾಜಿಕ ಜೀವನ ಮತ್ತು ಕ್ರಿಶ ಮೊದಲನೆಯ ಶತಮಾನದಲ್ಲಿ ರಚಿತವಾದ ಗ್ರೀಕ್ ಹಾಗೂ ರೋಮನ್ ಬರಹಗಳ ನಡುವೆ ಸಾಕಷ್ಟು ಸಾಮ್ಯತೆ ಇರುವುದರಿಂದ ಸಂಘಂ ಯುಗ ಕ್ರಿಶ. ಮೊದಲನೆಯ ಶತಮಾನದಲ್ಲಿ ಆರಂಭವಾಯಿತೆಂದು ಡಾ.ಎನ್.ಸುಬ್ರಮಣ್ಯಂರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಪ್ರೊ. ಕೆ.ಎ.ನೀಲಕಂಠಶಾಸ್ತ್ರೀಯವರು ಕ್ರಿಶ. ಮೊದಲ ಮೂರು ಶತಮಾನಗಳು ಸಹ ಸಂಘಂ ಕಾಲಗಳೆಂದೇ ಹೇಳಿದ್ದಾರೆ. ಇವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಪ್ರೊ.ಕೆ.ಸತ್ಯನಾಥ ಅಯ್ಯರ್ ಅವರು ಮುಷ್ಠಿಕರಿಸಿದ್ದಾರೆ. ಪಾಂಡ್ಯ ಅರಸರಿಂದ ಪೋಷಣೆಗೊಳಗಾಗಿದ್ದ ಸಂಘಂಗಳು ಈ ಕೆಳಗಿನಂತಿದೆ.
1) ಮೊದಲನೆಯ ಸಂಘಂ
ಮೊದಲನೆಯ ಸಂಘಂ ಕಾಲವು ದಕ್ಷಿಣ ಮಧುರೈ ನಗರದಲ್ಲಿ ಕಂಡು ಬಂದಿತು. ಇದು ಆದಿ ತಮಿಳು ಸಾಹಿತ್ಯದ ಕೇಂದ್ರಸ್ಥಾನವಾಗಿತ್ತು. ಮಧುರೈ ನಗರವು ಇಂದಿನ ಕನ್ಯಾಕುಮಾರಿಯವರೆಗೂ ವ್ಯಾಪಿಸಿತ್ತು. ನಂತರ ಕಡಲು ಕೊರೆತದ ಪರಿಣಾಮವಾಗಿ ಮಧುರೈ ನಗರ ಸಮುದ್ರದಲ್ಲಿ ಮುಳುಗಿ ಹೋಯಿತು. ಮೊದಲ ಸಂಘಂ ಸಂಸ್ಕೃತಿಯ ಅಧ್ಯಕ್ಷತೆಯನ್ನು ಆಗತ್ತಿಯರ್ ಎಂಬ ವ್ಯಕ್ತಿ ನಿರ್ವಹಿಸಿದ್ದನು. ಇದರಲ್ಲಿ ಒಟ್ಟು 549 ಜನ ಸದಸ್ಯರಿದ್ದರು. ಇದು ಸುಮಾರು 4400 ವರ್ಷಗಳ ಕಾಲ ಅಸ್ತಿತ್ವದಲ್ಲಿ ಇದ್ದಿತು. ಈ ಅವಧಿಯಲ್ಲಿ ರಚಿತವಾದ ಯಾವುದೇ ಗ್ರಂಥಗಳಾಗಲಿ, ಕೃತಿಗಳಾಗಲಿ ಮತ್ತು ಅವಶೇಷಗಳಾಗಲಿ ನಮಗೆ ಇಂದು ದೊರಕಿಲ್ಲ.
2) ಎರಡನೆಯ ಸಂಘಂ
ಎರಡನೆಯ ಸಂಘಂ ಸಂಸ್ಕೃತಿಯು ಕಪಾಟಪುರಂನಲ್ಲಿ ಕಂಡು ಬಂದಿತು. ಕಪಾಟಿ ಎಂದರೆ ಬಾಗಿಲು ಅಥವಾ ದ್ವಾರ ಎಂದರ್ಥ. ಈ ನಗರವನ್ನು ಪಾಂಡ್ಯ ಅರಸರು ಸ್ಥಾಪಿಸಿದ್ದರು. ಇದು ಸಹ ಕಡಲ ಕೊರೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಹೋಗಿತ್ತು ಸಂಘಂನ ಮೊದಲ ನಗರದ ನಾಶದಿಂದ ಪಾಂಡ್ಯರು ಪಾಠ ಕಲಿಯಲಿಲ್ಲವಾದ್ದರಿಂದ ಅವರು ಎರಡನೆಯ ನಗರವನ್ನು ಸಹ ಕಳೆದುಕೊಳ್ಳಬೇಕಾಯಿತು. ಈ ನಗರದ ಕುರಿತು ರಾಮಾಯಣದಲ್ಲಿ ಪ್ರಸ್ತಾಪ ಮಾಡಲಾಗಿದೆ. ಎರಡನೆಯ ಸಂಘಂನ ಅಧ್ಯಕ್ಷರಾಗಿ ಆಗತ್ತಿಯರ್ ಕಾರ್ಯ ನಿರ್ವಹಿಸಿದನು. ಇದರ ಸದಸ್ಯರ ಒಟ್ಟು ಸಂಖ್ಯೆ 49ರಷ್ಟು ಇದ್ದೀತು. ಇದು 3700 ವರ್ಷಗಳ ಬಾಳಿತು. ಸುಮಾರು 59 ಪಾಂಡ್ಯ ಅರಸರು ಇದನ್ನು ಪೋಷಿಸಿ ಬೆಳೆಸಿದರು. ಈ ಅವಧಿಯಲ್ಲಿ ಅನೇಕ ಕೃತಿಗಳು ರಚನೆಯಾದರೂ ಅವುಗಳೆಲ್ಲಾ ನಾಶವಾಗಿ ಕೇವಲ ಒಂದೇ ಒಂದು ಕೃತಿ ಇಂದಿಗೂ ಉಳಿದು ಬಂದಿದೆ, ಅನುವೇ ತೊಲ್ ಗ್ರಾಪಿಯಂ ಈಗಿರುವ ಸಂಘಂ ಸಾಹಿತ್ಯ ಕೃತಿಗಳಲ್ಲಿ ಇದು ಅತ್ಯಂತ ಪ್ರಾಚೀನವಾದ ಕೃತಿಯಾಗಿದೆ. ಇದು ತಮಿಳು ಭಾಷೆ ಹಾಗೂ ವ್ಯಾಕರಣದ ಕುರಿತು ಮಹತ್ವ ಪೂರ್ಣವಾದ ಮಾಹಿತಿಯನ್ನು ಒದಗಿಸುತ್ತದೆ. ತೊಲ್ಕಾಪಿಯಂ ಕೃತಿಯನ್ನು ತೊಲ್ಕಾಪಿಯರ್ ಎಂಬುವವನು ರಚಿಸಿದನು. ಇವನು ಆಗಸ್ತ್ರ ಮುನಿಯ ಶಿಷ್ಯನೆಂದು ನಂಬಲಾಗಿದೆ.
3. ಮೂರನೆಯ ಸಂಘಂ ಸಂಸ್ಕೃತಿ
ಮೂರನೆಯ ಸಂಘಂ ಸಂಸ್ಕೃತಿಯು ಇಂದಿನ ಮಧುರೈ ನಗರದಲ್ಲಿ ಆರಂಭವಾಯಿತು. ಕಪಾಟಿಪುರಂ ನಗರವು ಸಮುದ್ರದ ಕೊರೆತಕ್ಕೆ ಸಿಕ್ಕು ನಾಶವಾದ ನಂತರ ಪಾಂಡ್ಯ ದೊರೆಯಾದ ಉಗ್ರಪ್ಪೆರುವಲುಡಿ ಎಂಬಾತನು ವೈಗೈ ನದಿಯ ದಂಡೆಯ ಮೇಲೆ ಮಧುರೈ ನಗರವನ್ನು ಸ್ಥಾಪಿಸಿ ಅದನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಮೂರನೆಯ ಸಂಘಂನ ಅಧ್ಯಕ್ಷತೆಯನ್ನು ನಕ್ಕಿನಾರ್ ಎಂಬಾತ ಪಹಿಸಿದ್ದನು. ಇದರ ಒಟ್ಟು ಸದಸ್ಯರ ಸಂಖ್ಯೆ 49ರಷ್ಟು ಇತ್ತು. ಇದು ಸುಮಾರು 1850 ವರ್ಷಗಳ ಕಾಲ ಬಾಳಿದ್ದಿತು. ಇದನ್ನು ಒಟ್ಟು 59 ಪಾಂಡ್ಯ ಅರಸರು ಪೋಷಿಸಿಕೊಂಡು ಬಂದಿದ್ದರು. ಇತಿಹಾಸಕಾರರ ಪ್ರಕಾರ ಮೊದಲೆರಡು ಸಂಘಂಗಳ ವರ್ಣನೆಯು ಅತ್ಯಂತ ಉತ್ತೇಕ್ಷೆಯಿಂದ ಕೂಡಿದ್ದು ಮೂರನೆಯ ಸಂಘಂ ಮಾತ್ರ ಐತಿಹಾಸಿಕವಾಗಿ ಅಸ್ತಿತ್ವದಲ್ಲಿ ಇದ್ದಿತೆಂದು ಹೇಳಲಾಗಿದೆ.
ಸಂಘಂ ಸಾಹಿತ್ಯ:
ತೊಲ್ಕಾಪಿಯಂ ಎಂಬ ವ್ಯಾಕರಣ ಕೃತಿಯು ತೊಳ್ಕಾಪಿಯರ್ನಿಂದ ರಚನೆಯಾಗಿದ್ದು, ಎರಡನೆಯ ಸಂಘಂ ಸಾಹಿತ್ಯದಲ್ಲಿ ಉಳಿದಿರುವ ಏಕೈಕ ಪ್ರಾಚೀನ ಕೃತಿಯಾಗಿದೆ. ಇದು ಅಕ್ಷರ ಸಂಯೋಜನೆ, ಪದ ಸಂಯೋಜನೆ, ಛಂದಸ್ಸು ಶಾಸ್ತ್ರ, ಪದಗಳ ವಿಂಗಡನೆ, ಅಂದಿನ ಸಾಮಾಜಿಕ ಆಚರಣೆಗಳು, ಸಾಹಿತ್ಯ ನಿಯಮಗಳು ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಈ ಕೃತಿಯು ಮೂರು ಪ್ರಮುಖ ವಿಭಾಗಗಳನ್ನು ಹೊಂದಿದ್ದು, ಪ್ರತಿ ವಿಭಾಗವೂ 9 ಉಪ ಅಧ್ಯಾಯವನ್ನು ಒಳಗೊಂಡಿದೆ. ಜೊತೆಗೆ 1612 ಸೂತ್ರಗಳು ಇದರಲ್ಲಿವೆ ಆಗತ್ತಿಯಂ, ಪನ್ನಿರುಪದಲಂ, ಪಟ್ಟಪಾಡು, ಪವಿನೇಲ್, ಕೀಲ್ ಕಣಕ್ಕು, ಶಿಲಪ್ಪದಿಕಾರಂ, ಮಣಿಮೇಖಲೈ ಮುಂತಾದವು ಆ ಕಾಲಕ್ಕೆ ಸೇರಿದ ಪ್ರಮುಖ ಕೃತಿಗಳಾಗಿವೆ. ಎಟ್ಟುಟೊಗೈ (ಎಂಟು ಕವಿತಾ ಸಂಗ್ರಹಗಳು)
1) ಐಂಗೂರು ನೂರು ಎಂಬುದು 500 ಶೃಂಗಾರ ಕಾವ್ಯವಾಗಿದ್ದು ಇದನ್ನು ಗುಡಲೂರ್ ಕಿಲಾರಿಯವರು ಸಂಗ್ರಹ ಮಾಡಿದ್ದಾರೆ.
2) ನರಿನೈ ಕವನ ಸಂಗ್ರಹವು 400 ಕವನಗಳನ್ನು ಒಳಗೊಂಡಿದೆ. ಇದು ಸಂಗೀತ ಹಾಗೂ ಸಂಗೀತಗಾರರ ಬಗ್ಗೆ ಮಾಹಿತಿ ನೀಡುತ್ತದೆ. ಅಂದಿನ ಕಾಲದ ಪ್ರಮುಖ ರೇವು ಪಟ್ಟಣಗಳು ಮತ್ತು ಬೃಹತ್ ನಗರಗಳ ಕುರಿತು ಸಾಕಷ್ಟು ವಿವರಣೆ ಈ ಕೃತಿಯಲ್ಲಿದೆ.
3) ಆಕನಾನೂರು ಎಂಬ ಕಾವ್ಯ ಸುಮಾರು 400 ಪ್ರೇಮ ಕವನಗಳನ್ನು ಒಳಗೊಂಡಿದೆ. ಇದನ್ನು ರುದ್ರಶರ್ಮನೆಂಬುವವನು ಸಂಗ್ರಹಿಸಿದನು. ಇದು ಯುದ್ಧ ಹಾಗೂ ಸೈನಿಕರ ಬಗ್ಗೆ ಅಪಾರವಾದ ಮಾಹಿತಿಯನ್ನು ನೀಡುವ ಅತ್ಯಂತ ಜನಪ್ರಿಯವಾದ ಗ್ರಂಥವಾಗಿದೆ.
4) ಕುರಂತುಗೊಯ್ ಎಂಬುದು ಸಹ 400 ಪ್ರೇಮ ಕವನಗಳನ್ನು ಒಳಗೊಂಡಿದೆ. ಈ ಕವನ ಸಂಕಲನವು ಸಂಘಂ ಯುಗದ ಸುಂದರ ಸಾಮಾಜಿಕ ವ್ಯವಸ್ಥೆಯ ಕುರಿತು ವಿಪುಲವಾದ ಮಾಹಿತಿಯನ್ನು ನೀಡುತ್ತದೆ.
5) ಪುರನಾನೂರು 400 ಕವನಗಳನ್ನು ಹೊಂದಿದ ಒಂದು ಬೃಹತ್ ಕೃತಿಯಾಗಿದೆ. ಈ ಕವನ ಸಂಕಲನದಲ್ಲಿ ಅಂದಿನ ರಾಜರನ್ನು ಹೊಗಳಿ ಬರೆಯಲಾಗಿದೆ.
6) ಕಲಿತ್ತೊಗೈ ಎಂಬುದು 150 ಪ್ರೇಮ ಪ್ರಸಂಗಗಳನ್ನು ಒಳಗೊಂಡ ಕವನ ಸಂಕಲನವಾಗಿದೆ.
7) ಪರಿಪಾದಲ್ 24 ಪದ್ಯಗಳನ್ನು ಒಳಗೊಂಡ ಕೃತಿಯಾಗಿದ್ದು, ಇದರಲ್ಲಿ ದೇವರನ್ನು ಕುರಿತು ಹೊಗಳಿ ಬರೆಯಲಾಗಿದೆ.
8) ಪದಿರುಪತ್ತು ಚೇರ ರಾಜರನ್ನು ಹೊಗಳಿ ಬರೆದ 8 ಪದ್ಯಗಳ ಕೃತಿಯಾಗಿದೆ. ಈ ಮೇಲಿನ ಎಂಟು ಕವಿತಾ ಸಂಗ್ರಹಗಳು ಒಟ್ಟು 2282 ಪದ್ಯಗಳನ್ನು ಹೊಂದಿದ್ದು, ಇವುಗಳನ್ನು ಒಟ್ಟು 200 ಕವಿಗಳು ಬರೆದಿರಬಹುದೆಂದು ನಂಬಲಾಗಿದೆ.
ಪತ್ತುಪಾಟ್ಟು: (ಹತ್ತು ಕಾವ್ಯ ಸಂಕಲನಗಳು)
ಪತ್ತುಪಾಟ್ಟು ಎಂಬ ಹತ್ತು ಕಾವ್ಯ ಸಂಕಲನಗಳು ಈ ಕಾಲದಲ್ಲಿ ರಚನೆಯಾದವು. ಅವುಗಳೆಂದರೆ,
1) ತಿರುಮುರುಗಾರುಪ್ಪಡೈ
2) ಪೊಠುನಾರಾರುಪ್ಪಡೈ
3) ಶಿರುಪಾನಾರುಪ್ಪಡ್ಡೆ
4) ಪೆರುಂಪಾಣಾರುಪ್ಪಡೈ
5) ಮಲೈಪ್ರಾಟ್ಟು
6) ಮಧುರೈಕಾಂಚಿ
7) ನೆಡುನಾಂಲವಾಡೈ
8) ಕುರಿಯಂಜಿಪ್ಪಾಟು
9) ಪಟ್ಟಿನಪಾಲೈ
10) ಮಲೈಪಡುಕಾಡಾಂ. ಈ ಮೇಲಿನ ಎಲ್ಲಾ ಕೃತಿಗಳಲ್ಲಿ ಪ್ರೇದು ಹಾಗೂ ಪ್ರೇಮವನ್ನು ಹೊರತುಪಡಿಸಿ ಎಲ್ಲ ವಿಷಯಗಳೂ ಇದರಲ್ಲಿ ಇವೆ. ಈ ಎಲ್ಲಾ ಕವಿತೆಗಳು ಮುಖ್ಯವಾಗಿ ಪ್ರದೇಶಕ್ಕನುಗುಣವಾಗಿ ತಮಿಳು ಭೂಮಿ, ಬೆಟ್ಟ ಪ್ರದೇಶ, ಒಣಭೂಮಿ, ಅರಣ್ಯ ಸಾಗುವಳಿ ಬಯಲು ಮತ್ತು ಕರಾವಳಿ ಎಂದು ವಿಭಾಗಗೊಂಡಿವೆ.
ಪಡಿನೆಂಕಿಲ್ಲನಕ್ಕು (ಹದಿನೆಂಟು ಸಣ್ಣ ಗ್ರಂಥಗಳು)
ಇವು ಚಿಕ್ಕಚಿಕ್ಕ ಪದಿನೆಂಟು ಕವನ ಸಂಗ್ರಹಗಳಾಗಿವೆ. ಇವು ಯುದ್ಧ, ಜನಜೀವನ ಹಾಗೂ ಸೈನಿಕರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿವೆ. ಇವುಗಳು ಹೆಚ್ಚಾಗಿ ನೀತಿಬೋಧೆ ಹಾಗೂ ನೈತಿಕ ನಿಯಮಗಳನ್ನು ಬೋಧಿಸುವಂತಾಗಿದೆ. ಇವುಗಳಲ್ಲಿ ಬಹುಮುಖ್ಯವಾದವುಗಳೆಂದರೆ
1) ನಾಲಡಿಯರ್
2) ನಮ್ಮಡಿಕ್ಕಡಿಗೈ
3) ಇನ್ಸಾನಾರ್ ಪಾಡು
4) ಇನಿಯನಾರ್ ಪಾಡು
5) ಕಾರ್ನಾರ್ ಪಾಡು
6) ಕಳಿವಡಿನಾರ್ ನಾಡು
7) ಪಿಂಟಿನೈ ಐಂಪಾಡು
8)ಪಿಂಟಿನೈ ಎಳಪಾಡು
9) ತಿಣೈಮೊಳಿ ಐಂಪಾಟು
10) ತಿಣ್ಣೆಮೊಲೆನೂರೈಂಪಾಡು
11) ಇನ್ನಿಲೈ
12) ಕುರಳ್
13) ತಿರಿಕಡಗಂ
14) ಆಚಾರಕ್ಕೊವೈ
15) ತಳಿಮೊಳಿ
16) ಶಿರುಪಂಚಮೂಲಂ
17) ಮುದುಮೊಳೆಕ್ಕಾಂಚಿ
18) ಎಳಾದಿ ಇವುಗಳಲ್ಲಿ ಅತ್ಯಂತ ಪ್ರಮುಖವಾದ ಕೃತಿ ಎಂದರೆ ತಿರುವಳ್ಳುವರ್ ರಚಿಸಿದ ತಿರುವಕ್ಕುರಳ್ ಇದನ್ನು ತಮಿಳು ಭೂಮಿಯ ಬೈಬಲ್ ಎಂದು ಹೆಸರಾಗಿದೆ. ಈ ಮೇಲಿನ ಎಲ್ಲಾ ಕೃತಿಗಳು ಆರ್ಯಧರ್ಮ ಮತ್ತು ಅದರ ವಿಚಾರಗಳು, ಆಚರಣೆಗಳು ಮುಂತಾದ ವಿಷಯಗಳ ಕುರಿತು ತಿಳಿಸುತ್ತವೆ.
ಎರಡು ಮಹಾಕಾವ್ಯಗಳು:
ಕ್ರಿಶ.ಎರಡನೆಯ ಶತಮಾನವನ್ನು ತಮಿಳು ಸಾಹಿತ್ಯದ ಸುವರ್ಣಯುಗ ಎಂದು ಕರೆಯಲಾಗಿದೆ. ಕಾರಣ ಈ ಅವಧಿಯಲ್ಲಿ ಆನೇಕ ಮಹಾಕಾವ್ಯಗಳು ರಚನೆಯಾದವು. ಅವುಗಳೆಂದರೆ ಶಿಲಪ್ಪದಿಕಾರಂ, ಮಣಿಮೇಖಲೈ, ಜೀವನ ಸಿಂತಾಮಣಿ, ವಳಯಾಪಟಿ ಮತ್ತು ಕುಂಡಲಕೇಶಿ. ಇವುಗಳಲ್ಲಿ ಎರಡನ್ನು ಕ್ರಿಶ ಎರಡನೆಯ ಶತಮಾನದಲ್ಲಿ ಬರೆಯಲಾಗಿದೆ ಎಂದು ಹೇಳಲಾಗಿದೆ. ಅವುಗಳೆಂದರೆ ಇಲಂಗೋ-ಅಡಿಗಳ್ ಅವರಿಂದ ಬರೆಯಲಾದ ಶಿಲಪ್ಪದಿಕಾರಂ ಹಾಗೂ ಸತ್ತಲೈ ಸಾತ್ತನಾರ್ ಬರೆದ ಮಣಿಮೇಖಲೈ, ಈ ಎರಡೂ ಕೃತಿಗಳನ್ನು ಹೋಮರ್ ಕವಿಯ ಇಲಿಯಡ್ ಹಾಗು ಓಡಿಸ್ಸಿ ಎಂಬ ಮಹಾಕಾವ್ಯಗಳಿಗೆ ಹೋಲಿಸಲಾಗಿದೆ.
1) ಶಿಲಪ್ಪದಿಕಾರಂ:
ಶಿಲಪ್ಪದಿಕಾರಂ ಕಾವ್ಯವು ಇಳಂಗೊ ಅಡಿಗಳ್ ಎಂಬುವವನಿಂದ ರಚಿತವಾಯಿತು. ಇವನು ಚೋಳ ಅರಸನಾದ ಕರಿಕಾಲ ಚೋಳನ ಮೊಮ್ಮಗ. ಇಳಂಗೋ ಅಡಿಗಳ್ ಈ ಕಾವ್ಯವನ್ನು ಕ್ರಿ.ಶ. ಎರಡನೆಯ ಶತಮಾನದಲ್ಲಿ ರಚಿಸಿದನು. ಈ ಕೃತಿಯು ವರ್ತಕ ಕೋವಲನ್ ಹಾಗೂ ಕನ್ನಗಿಯರ ಕಥೆಯನ್ನು ಒಳಗೊಂಡಿದೆ. ಪ್ರಹರ್ ಪಟ್ಟಣದ ವರ್ತಕನಾದ ಕೋವಲನ್ ಎಂಬುದವನು ಮಾಧವಿ ಎಂಬ ವೇಶೈಯ ಮೋಹಕ್ಕೆ ಒಳಗಾಗಿ ಸಾದ್ವಿ ಹಾಗೂ ಸುಂದರವಾದ ತನ್ನ ಹೆಂಡತಿ ಕನ್ನಗಿಯನ್ನು ಕಡೆಗಣಿಸುತ್ತಾನೆ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಮಾಧವಿಯ ಮನೆಯಲ್ಲಿಯೇ ಕಾಲ ಕಳೆಯುತ್ತಾನೆ. ಈ ಅವಧಿಯಲ್ಲಿ ಕೋವಲನ್ ತಾನು ಸಂಪಾದಿಸಿದ ಆಸ್ತಿಯೆಲ್ಲವನ್ನು ಕಳೆದುಕೊಂಡು ಮತ್ತೆ ತನ್ನ ಹೆಂಡತಿಯಾದ ಕನ್ನಗಿಯ ಬಳಿಗೆ ಹಿಂತಿರುಗುತ್ತಾನೆ. ಗಂಡ ಮಾಡಿದ ತಪ್ಪನ್ನು ಕ್ಷಮಿಸಿದ ಕನ್ನಗಿಯು ಕೋವಲನ್ನನ್ನು ಪ್ರಹಾರ್ ಪಟ್ಟಣದಿಂದ ಕರೆದುಕೊಂಡು ಮಧುರಾ ನಗರಕ್ಕೆ ಹೋಗಿ ಹೊಸ ಜೀವನವನ್ನು ಆರಂಭಿಸುತ್ತಾಳೆ. ಮಧುರಾ ನಗರದಲ್ಲಿ ಇದ್ದಾಗ ಜೀವನ ಸಾಗಿಸುವುದು ಅವರಿಗೆ ತುಂಬಾ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಗಿಯು ತನ್ನ ಬಳಿ ಇದ್ದ ಕಾಲಂದಿಗೆಯಲ್ಲಿ ಒಂದನ್ನು ಮಾಡಲು ಕೋವಲನ್ನಿಗೆ ನೀಡುತ್ತಾಳೆ. ಕಾಲಂದಿಗೆಯನ್ನು ಮಾರಿ ಬಂದ ಹಣದಿಂದ ಹೊಸ ಜೀವನವನ್ನು ಆರಂಭಿಸುತ್ತಾರೆ. ಆದರೆ, ಅಲ್ಲಿನ ರಾಜನು ತನ್ನ ಹೆಂಡತಿಯ ಕಾಲಂದಿಗೆಯನ್ನೇ ಮಾರಿದ್ದಾನೆ ಎಂದು ಅವನ ಮೇಲೆ ಕಳ್ಳತನದ ಆಪಾದನೆಯನ್ನು ಹೊರಿಸುತ್ತಾನೆ. ಪರಿಣಾಮವಾಗಿ ಆತ ಮರಣದಂಡನೆ ಶಿಕ್ಷೆಗೆ ಒಳಗಾಗುತ್ತಾನೆ. ಆಗ ಕನ್ನಗಿಯು ತನ್ನ ಬಳಿ ಇದ್ದ ಇನ್ನೊಂದು ಕಾಲಂದಿಗೆಯನ್ನು ಅರಸನಿಗೆ ತೋರಿಸುವುದರ ಮೂಲಕ ಕೋವಲನ್ ನಿರಪರಾಧಿ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತಾಳೆ. ತನ್ನ ತಪ್ಪಿಗೆ ಪ್ರಾಯಶ್ಚಿತ ಎಂಬಂತೆ ಅರಸ ಹೃದಯಾಘಾತಕ್ಕೆ ಒಳಗಾಗಿ ನಿಧನನಾಗುತ್ತಾನೆ. ಇದೊಂದು ಜೈನ ಕಾವ್ಯ. ಇದು ಮುಖ್ಯವಾಗಿ ಕನ್ನಗಿಯ ಪಾತಿವ್ರತ್ಯ, ಜೀವನ ಪ್ರೇಮ, ವಾತ್ಸಲ್ಯ ಹಾಗೂ ವಿಧಿಯ ಅಟ್ಟಹಾಸದ ಕುರಿತು ವಿವರಣೆ ನೀಡುತ್ತದೆ. ಕನ್ನಗಿಯನ್ನು ಪಾತಿವ್ರತ್ಯದ ದೇವತೆಯಾಗಿ ಆಕೆಗೆ ಚೇರ ಅರಸ ಶೆಂಗುಟ್ಟುವನ್ ದೇವಾಲಯವನ್ನು ಕಟ್ಟಿಸಿರುವುದನ್ನು ಈ ಮಹಾಕಾವ್ಯ ತಿಳಿಸುತ್ತದೆ. ಕನ್ನಗಿಯು ಸ್ವರ್ಗದಲ್ಲಿ ತನ್ನ ಗಂಡನನ್ನು ಸೇರಿಕೊಳ್ಳುತ್ತಾಳೆ. ಪರಿಣಾಮವಾಗಿ ಈ ನಾಡಿನಲ್ಲಿ ಕನ್ನಗಿ ಎಂಬ ಪಂಥವೊಂದು ಹುಟ್ಟಿಕೊಳ್ಳುತ್ತದೆ.
ಮಣಿಮೇಖಲೈ:
ಈ ಕಾವ್ಯವನ್ನು ಚಾತನಾರ್ ಎಂಬುವವನು ರಚಿಸಿದನು. ಇದೊಂದು ಬೌದ್ಧ ಕಾವ್ಯ ಇದು ಕೋವಲನ್ ಹಾಗೂ ಮಾಧವಿಯವರ ಮಗಳಾಗಿದ್ದ ಮಣೀಮೇಖಲೈಳ ಸಾಧನೆಯ ಕುರಿತು ಮಾಹಿತಿ ಒದಗಿಸುತ್ತದೆ. ಮಣಿಮೇಖಲೈ ಹೇಗೆ ತನ್ನ ಪಾತಿವ್ರತ್ಯವನ್ನು ರಾಜಕುಮಾರ ಉದಯ ಕುಮಾರನಿಂದ ರಕ್ಷಿಸಿಕೊಂಡಳು ಮತ್ತು ಬೌದ್ಧ ಧರ್ಮವನ್ನು ಪ್ರಚಾರ ಮಾಡುತ್ತಾ ಆಕೆ ಜನರ ಹಸಿವು ರೋಗರುಜಿನ ಮತ್ತು ಬಡತನವನ್ನು ನಿವಾರಿಸಲು ಹೋರಾಟ ನಡೆಸಿದಳು ಎಂಬುದರ ಕುರಿತು ಈ ಕೃತಿ ಹೇಳುತ್ತದೆ.