ಗ್ರಾಮ ಪಂಚಾಯಿತಿಯ ಕಾರ್ಯಗಳು

ಗ್ರಾಮ ಪಂಚಾಯಿತಿಯ ಕಾರ್ಯಗಳು

ಕರ್ನಾಟಕ ಪಂಚಾಯತ್ ಅದಿನಿಯಮ 1993ರ ಪ್ರಕರಣ ೪ರ ಅನ್ವಯ ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೆ ಒಳಪಟ್ಟು ಜಿಲ್ಲಾಧಿಕಾರಿಗಳು 5,000 ಕ್ಕಿಂತ ಕಡಿಮೆ ಇಲ್ಲದ ಹಾಗೂ 7,000 ಕ್ಕಿಂತ ಹೆಚ್ಚಿಲ್ಲದ ಜನಸಂಖ್ಯೆಯನ್ನು ಹೊಂದಿರುವ ಒಂದು ಗ್ರಾಮವನ್ನು ಅಥವಾ ಗ್ರಾಮಗಳ ಗುಂಪನ್ನು ಒಳಗೊಂಡಿರುವ ಯಾವುದೇ ಪ್ರದೇಶವನ್ನು ಗ್ರಾಮ ಪಂಚಾಯಿತಿ ಎಂದು ಘೋಷಿಸಬಹುದು. ಆದರೆ ಮಲೆನಾಡು ಪ್ರದೇಶಗಳಾದ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 25೦೦ ಕ್ಕಿಂತ ಕಡಿಮೆಯಿಲ್ಲದ ಜನಸಂಖ್ಯೆಯುಳ್ಳ ಪ್ರದೇಶವನ್ನು ಗ್ರಾಮ ಪಂಚಾಯತ್‌ ಎಂದು ಘೋಷಿಸಬಹುದು.

ಗ್ರಾಮ ಪಂಚಾಯಿತಿಯ ಕಾರ್ಯಗಳು: (Functions of Grama Panchayat)        

 ಗ್ರಾಮ ಪಂಚಾಯಿತಿ ಕಾರ್ಯಗಳು ಈ ಕೆಳಗಿನಂತಿವೆ

1)  ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು, ಪ್ರಕೃತಿ ವಿಕೋಪಗಳಿಗೆ ಪರಿಹಾರ ಒದಗಿಸುವುದು, ಹಾಗೂ ಗ್ರಾಮಗಳ ಅಂಕಿ ಅಂಶಗಳನ್ನು ಶೇಖರಿಸುವುದು.

2) ಕೃಷಿ ಹಾಗೂ ತೋಟಗಾರಿಕೆ ಫಾರಂಗಳನ್ನು ತೆರೆಯುವುದು ಹಾಗೂ ಅವುಗಳ ನಿರ್ವಹಣೆ ಮಾಡುವುದು ದಾಸ್ತಾನು ಮಳೆಗೆಗಳ ಸ್ಥಾಪನೆ ಮತ್ತು ನಿರ್ವಹಣೆ ಹಾಗೂ ವಸ್ತುಪ್ರದರ್ಶನಗಳನ್ನು ಏರ್ಪಡಿಸುವುದು.

3)  ಜಲಾನಯನ ಅಭಿವೃದ್ಧಿ, ಅಂತರ್ಜಲ ಮೂಲಗಳ ಅಭಿವೃದ್ಧಿ ಹಾಗೂ ಸಣ್ಣ ನೀರಾವರಿ ಕಾಮಗಾರಿ ನಿರ್ಮಾಣ.

4)  ಹಂದಿ ಸಾಗಾಣಿಕೆ, ಕೋಳಿ, ಹೈನು ಹಾಗೂ ಪಶುಸಾಗಾಣಿಕೆ ಪ್ರೋತ್ಸಾಹ, ಪಶು ಆಸ್ಪತ್ರೆಗಳ ನಿರ್ಮಾಣ ಮತ್ತು ಪಶುಗಳಿಗೆ ತಗಲುವ ಅಂಟುರೋಗಗಳ ನಿವಾರಣೆ.

5) ಮೀನು ಸಾಗಾಣಿಕೆ ಹಾಗೂ ಮೀನು ಸಾಗಾಣಿಕೆ ಅಭಿವೃದ್ಧಿ ಮತ್ತು ಮೀನುಗಾರರ ಕಲ್ಯಾಣ ಕಾರ್ಯಗಳು.

6)  ಗ್ರಾಮೀಣ ಗುಡಿ ಕೈಗಾರಿಕೆಗೆ, ಪ್ರೋತ್ಸಾಹ ನೀಡುವುದು ಮತ್ತು ಅವುಗಳಿಗೆ ಮಾರುಕಟ್ಟೆಗಳನ್ನು ಒದಗಿಸುವುದು.

7) ಸಣ್ಣ ಕೈಗಾರಿಕೆಗಳ ಪ್ರೋತ್ಸಾಹ.   

8) ಗ್ರಾಮೀಣ ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು.

9)  ಶುದ್ಧವಾದ ಕುಡಿಯುವ ನೀರಿನ ಸರಬರಾಜು ಮಾಡುವುದು ಹಾಗೂ ಗ್ರಾಮ ನೈರ್ಮಲ್ಯವನ್ನು ಕಾಪಾಡುವುದು.

1೦) ಸಾಮಾಜಿಕ ಅರಣ್ಯ ನಿರ್ಮಾಣ ಮತ್ತು ಮೇವು ಅಭಿವೃದ್ಧಿಗೆ ಒತ್ತು ನೀಡುವುದು. ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವುದು.

11) ಗ್ರಾಮೀಣ ರಸ್ತೆಗಳು, ಕಾಲುದಾರಿ, ಅಣೆಕಟ್ಟುಗಳ ನಿರ್ಮಾಣ ಮತ್ತು ನಿರ್ವಹಣೆ.

12)  ಅಸಂಪ್ರದಾಯಕ ಇಂಧನ ಮೂಲಗಳ ಅಭಿವೃದ್ಧಿ ಹಾಗೂ ಪ್ರೋತ್ಸಾಹ.

13)  ಗ್ರಾಮೀಣ ಭಾಗದ ಜನರ ಬಡತನವನ್ನು ಹೋಗಲಾಡಿಸಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

14)  ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸ್ಥಾಪನೆ ಹಾಗೂ ಅವುಗಳ ನಿರ್ವಹಣೆ. ಆಶ್ರಮ ಶಾಲೆಗಳು ಹಾಗೂ ಅನಾಥಾಶ್ರಮಗಳ ಸ್ಥಾಪನೆ.

15)  ಗ್ರಾಮೀಣ ಕರಕುಶಲ ಮತ್ತು ವೃತ್ತಿ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆ.

16)  ಅನೌಪಚಾರಿಕ ಶಿಕ್ಷಣವನ್ನು ಆರಂಭಿಸುವುದು ಮತ್ತು ವಯಸ್ಕ ಸಾಕ್ಷರತಾ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

17)  ಗ್ರಾಮೀಣ ಭಾಗದಲ್ಲಿ ಜಾತ್ರೆ ಹಾಗೂ ಮಾರುಕಟ್ಟೆಗಳನ್ನು ನಿಯಂತ್ರಿಸುವುದು.

18)  ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ನಿರ್ಮಾಣ ಹಾಗೂ ನಿರ್ವಹಣೆ. ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳು ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ. ರೋಗನಿರೋಧಕ ಹಾಗೂ ಲಸಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

19)  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸುವುದು.

20) ಅಂಗವಿಕಲರು, ನಿರಾಶ್ರಿತರು ಹಾಗೂ ಮಾನಸಿಕ ಅಸ್ವಸ್ಥರ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸುವುದು.

21)  ದುರ್ಬಲ ವರ್ಗಗಳು ಹಾಗೂ ಪರಿಶಿಷ್ಟಜಾತಿ/ಜನಾಂಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಕಾಪಾಡುವುದು.

22)  ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು  ನೋಡಿಕೊಳ್ಳುವುದು.

23)  ಗ್ರಾಮೀಣ ವಿದ್ಯುದ್ಧೀಕರಣ

24)  ಸಹಕಾರ ಚಟುವಟಿಕೆಗಳಿಗೆ ಪ್ರೋತ್ಸಾಹ.

25)  ಸಂತೆಗಳನ್ನು ಏರ್ಪಡಿಸುವುದು ಮತ್ತು ನಿಯಂತ್ರಿಸುವುದು.

26)  ಗ್ರಂಥಾಲಯಗಳ ಹಾಗೂ ವಾಚನಾಲಯ ಕೊಠಡಿಗಳ ನಿರ್ಮಾಣ ಹಾಗೂ ನಿರ್ವಹಣೆ.

27)  ಸಾರ್ವಜನಿಕ ಉದ್ಯಾನವನಗಳ ಹಾಗೂ  ಕ್ರೀಡಾಂಗಣಗಳ ಸಂರಕ್ಷಣೆ.

28)  ರುದ್ರ ಭೂಮಿ ಸಂರಕ್ಷಣೆ.

ಉಪಸಂಹಾರ

ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಅಸ್ತಿವಾರವಾಗಿದೆ. ಜನರ ಭಾಗವಹಿಸುವಿಕೆಯಿಂದ ಇದು ಸಮಗ್ರ ಅಭಿವೃದ್ಧಿ ಸಾಧಿಸಲು ನೆರವಾಗುತ್ತದೆ. ಸ್ಥಳೀಯ ಸ್ವರಾಜ್ಯದ ತತ್ವವನ್ನು ಕಾರ್ಯರೂಪಕ್ಕೆ ತಂದು ಗ್ರಾಮಗಳ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿಯನ್ನು ಗ್ರಾಮ ಮಟ್ಟದಲ್ಲಿ ಪ್ರತಿಬಿಂಬಿಸುವ ಸಂಸ್ಥೆಯಾಗಿದೆ.

73 ಮತ್ತು 74 ನೇ ಸಂವಿಧಾನ ತಿದ್ದುಪಡಿ

73 ಮತ್ತು 74 ನೇ ಸಂವಿಧಾನ ತಿದ್ದುಪಡಿ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಳಮಟ್ಟಕ್ಕೆ ತಲುಪಿಸಲು 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳು ಪ್ರಮುಖ ಪಾತ್ರವಹಿಸಿವೆ. ಗ್ರಾಮ ಪಂಚಾಯತ್‌ನಿಂದ ಮಹಾನಗರ ಪಾಲಿಕೆಗಳವರೆಗೆ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಿಕ ಮಾನ್ಯತೆ ನೀಡಲಾಯಿತು. ಇವು ರಾಜಕೀಯ ವಿಕೇಂದ್ರೀಕರಣಕ್ಕೆ ಬಲ ನೀಡಿದವು. ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಾತಿ ನೀಡುವ ಮೂಲಕ ಸಮಾನತೆ ಸಾಧಿಸಲಾಯಿತು.

73ನೇ ಸಂವಿಧಾನ ತಿದ್ದುಪಡಿ: (73rd Constitutional Ammendment)

ಸಂವಿಧಾನದ 73ನೇ ತಿದ್ದುಪಡಿ ಭಾರತದ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಮೂರು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿದಾಗಲೂ ಸಾಧ್ಯವಾಗದಿದ್ದ  ರಾಜಕೀಯ ವಿಕೇಂದ್ರೀಕರಣವನ್ನು ಜಾರಿಗೆ ತಂದದ್ದು ಈ ತಿದ್ದುಪಡಿಯ ಸಾಧನೆ. ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಎಂಬ ಎರಡು ಹಂತಗಳೊಂದಿಗೆ ಗಾಂಧೀಜಿಯ ಕನಸಿನ ಸ್ಥಳಿಯ ಸರ್ಕಾರವೆಂಬ ಮೂರನೇ ಹಂತದ ಆಡಳಿತ ಘಟಕಗಳಿಗೆ ಮಾನ್ಯತೆ  ಒದಗಿಸಿದಂತಾಯಿತು. ರಾಜೀವಗಾಂಧಿಯವರ ಕನಸನ್ನು ನನಸು ಮಾಡಲು ಪಿ.ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿತು. ಪರಿಣಾಮವಾಗಿ ಸಂವಿಧಾನದ 73ನೇ ತಿದ್ದುಪಡಿಗೆ ಸಂಸತ್ತಿನ ಅಂಗೀಕಾರ 1992 ರಲ್ಲಿ ದೊರಕಿತು. 1993 ಏಪ್ರಿಲ್ 24ರಂದು ಪಂಚಾಯತ್ ರಾಜ್ಯ ಕಾನೂನು ಜಾರಿಗೆ ಬಂದಿತು. ʻʻದಿ ಪಂಚಾಯತ್ಸ್‌ʼʼ  ಶೀರ್ಷಿಕೆಯನ್ನು ಒಳಗೊಂಡ ೯ನೇ ಭಾಗವನ್ನು ಸಂವಿಧಾನದಲ್ಲಿ ಸೇರಿಸಿ 243 ರಿಂದ 243(೦) ವರೆಗೆ  ೧೬ ಹೊಸ ವಿಧಿಗಳನ್ನು ಅಳವಡಿಸಲಾಗಿದೆ. ಸುಮಾರು 29 ಕಾರ್ಯಗಳನ್ನು ಪಂಚಾಯತಿಗಳು ನಿರ್ವಹಿಸಬೇಕೆಂದು ಅದರಲ್ಲಿ ಸೂಚಿಸಲಾಗಿದೆ. 

1. ಸಂವಿಧಾನದ 243 (B)  ವಿಧಿಯ ಪ್ರಕಾರ ಪ್ರತಿ ರಾಜ್ಯದಲ್ಲಿ ಮೂರು ಹಂತದ ಅಂದರೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್‌ಗಳನ್ನು ರಚಿಸುವುದು. 20 ಲಕ್ಷಕ್ಕಿಂತ ಕಡಿಮೆ ಇರುವ ರಾಜ್ಯದಲ್ಲಿ ತಾಲೂಕು ಪಂಚಾಯಿತಿಯನ್ನು ರಚಿಸುವಂತಿಲ್ಲ.

2.  ಸಂವಿಧಾನದ 243 (C ) ವಿಧಿಯಂತೆ ನೇರ ಚುನಾವಣೆಗಳ ಮೂಲಕ ಸದಸ್ಯರು ಪ್ರಜೆಗಳಿಂದ ಆಯ್ಕೆಯಾಗಬೇಕು. ಗ್ರಾಮ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಚುನಾವಣೆಯನ್ನು ಪರೋಕ್ಷವಾಗಿ ನಡೆಸಬೇಕು.

3. 243 (D)  ವಿಧಿಯಂತೆ ಪ್ರತಿಯೊಂದು ಹಂತದ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆಗೆ ಅನುಸಾರವಾಗಿ ಕೆಲವು ಸ್ಥಾನಗಳನ್ನು ಮೀಸಲಾಗಿಡಬೇಕು. ಈ ವರ್ಗಗಳಿಗೆ ನಿಗದಿಪಡಿಸಿದ ಒಟ್ಟು ಮೀಸಲು ಕ್ಷೇತ್ರಗಳಲ್ಲಿ ೧/೩ ಕ್ಕೆ  ಕಡಿಮೆ ಇಲ್ಲದಂತೆ ಈ ವರ್ಗಗಳ ಮಹಿಳೆಯರಿಗೆ ಮೀಸಲು ಸ್ಥಾನಗಳ ಅವಕಾಶವಿದೆ.

4.  ಸಂವಿಧಾನದ 243 (E ) ವಿಧಿಯಂತೆ ಪಂಚಾಯಿತಿಗಳ ಅವಧಿ ಮೊದಲ ಸಭೆ ಸೇರುವ ದಿನದಿಂದ ಐದು ವರ್ಷಗಳು ಅವಧಿ  ಮುಗಿಯುವುದರೊಳಗೆ ಚುನಾವಣೆ ನಡೆಯಬೇಕು. ಒಂದು ವೇಳೆ ವಿಸರ್ಜನೆಯಾದರೆ ಆರು ತಿಂಗಳೊಳಗೆ ಚುನಾವಣೆ ನಡೆದು ಪಂಚಾಯಿತಿಯನ್ನು ರಚಿಸಬೇಕು.

5. ಸಂವಿಧಾನದ 243 (G) ವಿಧಿಯ ಪ್ರಕಾರ ಪಂಚಾಯಿತಿಗಳು ಸ್ವಯಂ ಸರ್ಕಾರಗಳಂತೆ ಕೆಲಸ ನಿರ್ವಹಿಸಲು ರಾಜ್ಯ ಶಾಸಕಾಂಗ ಕಾನೂನು ರಚಿಸಿ ಅವುಗಳಿಗೆ ಅಧಿಕಾರದ ಜವಾಬ್ದಾರಿಯನ್ನು ನೀಡಬೇಕು.

6.  ಸಂವಿಧಾನದ 243 (I) ಹೇಳುವಂತೆ ಪಂಚಾಯಿತಿಗಳ ಹಣಕಾಸು ಪರಿಸ್ಥಿತಿಯ ಪರಿಶೀಲನೆಗೆ ಹಾಗೂ ಶಿಫಾರಸ್ಸುಗಳಿಗೆ 73ನೇ ತಿದ್ದುಪಡಿ ಜಾರಿಗೆ ಬಂದ ಒಂದು ವರ್ಷದೊಳಗೆ ಹಾಗೂ ನಂತರ ಪ್ರತಿ ಐದು ವರ್ಷಕ್ಕೊಮ್ಮೆ ರಾಜ್ಯಪಾಲರು ಹಣಕಾಸು ಆಯೋಗವನ್ನು ನೇಮಿಸುವುದು.

7. ಸಂವಿಧಾನದ 243 (K)  ವಿಧಿಯ ಪ್ರಕಾರ ಪಂಚಾಯಿತಿಗಳ ಚುನಾವಣೆಗಾಗಿ ಮತದಾರರ ಪಟ್ಟಿಯನ್ನು  ಸಿದ್ಧಪಡಿಸಿ ಮೇಲ್ವಿಚಾರಣೆ ಮಾಡಲು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಾಗಿದೆ.

8. ಸಂವಿಧಾನದ 243 (M)  ವಿಧಿಯಂತೆ ಸಂವಿಧಾನದ 9ನೇ ಭಾಗವು ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂ, ಮಣಿಪುರ ಹಾಗೂ  ದಾರ್ಜಿಲಿಂಗ್‌ಗಳಿಗೆ ಅನ್ವಯಿಸುವುದಿಲ್ಲ.

9.  ಸಂವಿಧಾನದ 243 (O )  ಪಂಚಾಯಿತಿಗಳ  ಸ್ಥಾನ ಗೊತ್ತುಪಡಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

74ನೇ ಸಂವಿಧಾನ ತಿದ್ದುಪಡಿ: 74th Ammendment of Constitution)

 1993ರಲ್ಲಿ ಜಾರಿಗೆ ಬಂದ ಈ ತಿದ್ದುಪಡಿ ಕಾಯ್ದೆಯು ಸಂವಿಧಾನಕ್ಕೆ 9 (A ) ಭಾಗ ಮತ್ತು 243(P) ಯಿಂದ 243 (ZD) ವರೆಗಿನ ವಿಧಿಗಳನ್ನು ಸೇರಿಸಿತು. ಇಲ್ಲಿ ಸರ್ಕಾರಗಳು ನಿರ್ವಹಿಸಬೇಕಾದ 18 ಕಾರ್ಯಗಳನ್ನು 12ನೇ ಅನುಸೂಚಿಯಲ್ಲಿ ಭಾರತ ಸಂವಿಧಾನಕ್ಕೆ ಸೇರಿಸಿತು.

1.  ಸಂವಿಧಾನದ 243 (P ) ವಿಧಿಯು ನಗರಸಭೆ, ಮಹಾನಗರ ಪಾಲಿಕೆ ಮುಂತಾದ ಪದಗಳ ಅರ್ಥವನ್ನು ತಿಳಿಸುತ್ತದೆ.

2. ಸಂವಿಧಾನದ 243 (G ) ಪ್ರಕಾರ ರಾಜ್ಯದಲ್ಲಿ ನಗರಸಭೆ, ಮುನ್ಸಿಪಲ್ ಕೌನ್ಸಿಲ್ ಹಾಗೂ ಮಹಾನಗರ ಪಾಲಿಕೆ ಆರಂಭವಾಗಬೇಕೆಂದು ತಿಳಿಸಿತು.

3. ಸಂವಿಧಾನದ 243 (R) ವಿಧಿಯು ಪ್ರಕಾರ ವಿವಿಧ  ಹಂತದ ಎಲ್ಲಾ ಸ್ಥಳೀಯ ನಗರ ಸಂಸ್ಥೆಗಳು ತಮ್ಮ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿ ನೆಲೆಸಿರುವ ಮತದಾರರಿಂದ ಚುನಾಯಿತಗೊಂಡ ಸದಸ್ಯರಿಂದ ಕೂಡಿರಬೇಕೆಂದು ಸೂಚಿಸಿದೆ.

4.  ಸಂವಿಧಾನದ 243 (T) ವಿಧಿಯ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಮಹಿಳಾ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲಾತಿ ಒದಗಿಸಬೇಕು ಎಂದು ತಿಳಿಸಿದೆ.

5.  ಸಂವಿಧಾನದ 243 (U ) ವಿಧಿ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ೫ ವರ್ಷಗಳು ಎಂಬುದನ್ನು ಸೂಚಿಸುತ್ತದೆ. ಅವಧಿ ಮುಕ್ತಾಯಗೊಂಡ ಅಥವಾ ಅವಧಿಗೆ ಮುನ್ನ ವಿಸರ್ಜನೆಗೊಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ಆರು ತಿಂಗಳ ಒಳಗಾಗಿ ಚುನಾವಣೆಗಳನ್ನು ನಡೆಸಬೇಕು.

6.  ಸಂವಿಧಾನದ 243 (X ) ಶಾಸಕಾಂಗಗಳು ಜಾರಿಗೆ ತರುವ ಕಾನೂನಿನ ಪರಿಮಿತಿಯೊಳಗೆ ನಗರ ಸ್ಥಳೀಯ ಸಂಸ್ಥೆಗಳ ಹಣಕಾಸಿನ ಅಧಿಕಾರಗಳನ್ನು ಅಂದರೆ ತೆರಿಗೆ ಸಂಗ್ರಹದ ಮಾಹಿತಿಯನ್ನು ಒದಗಿಸುತ್ತದೆ.

7. ಸಂವಿಧಾನದ 243(V) ವಿಧಿಯಂತೆ ಸದಸ್ಯರ ಅರ್ಹತೆಯ ಬಗ್ಗೆ ತಿಳಿಸುತ್ತದೆ.

8.  243 (W ) ಸರ್ಕಾರದ ಅಧಿಕಾರಗಳು ಹಾಗೂ ಜವಾಬ್ದಾರಿಯನ್ನು ನಮೂದಿಸಲಾಗಿದೆ.

9. 243 (Y )  ವಿಧಿಯ ಪ್ರಕಾರ ರಾಜ್ಯದ ಹಣಕಾಸು ಆಯೋಗ ಈ ಸ್ಥಳೀಯ ಸರ್ಕಾರ ಹಣಕಾಸು ಪರಿಸ್ಥಿತಿಯನ್ನು ಪರಿಶೀಲಿಸಿ ಬೇಕಾದ ಶಿಫಾರಸ್ಸು ಮಾಡುತ್ತದೆ.

10.  243 (ZA )  ಪ್ರಕಾರ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ.

11.  243 (ZD )  ವಿಧಿಯ ಪ್ರಕಾರ ಜಿಲ್ಲಾ ಯೋಜನಾ ಸಮಿತಿ ರಚನೆಯ ಬಗ್ಗೆ ತಿಳಿಸುತ್ತದೆ.

ಉಪಸಂಹಾರ

73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿದ ಮೂಲಭೂತ ಕಾಯ್ದೆಗಳಾಗಿವೆ. ಸ್ಥಳೀಯ ಸ್ವರಾಜ್ಯ ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸಮೀಪದಿಂದ ಪರಿಹಾರ ನೀಡುವ ಅವಕಾಶ ಪಡೆದಿವೆ. ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ರಾಜಕೀಯ ಭಾಗವಹಿಸುವಿಕೆ ಹೆಚ್ಚಾಗಿದೆ. ಇವು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸಿಗೆ ಸಾಕಾರ ರೂಪ ನೀಡಿದಂತಾಗಿದೆ.