ಜೀವ ವೈವಿಧ್ಯ ಮತ್ತು ರಕ್ಷಣೆ
ನಮ್ಮ ಸೌರ ಮಂಡಲದಲ್ಲಿ ಅತ್ಯಂತ ಸುಂದರವಾದ ಗ್ರಹವೆಂದರೆ ಅದು ಭೂಮಿ. ಬೇರೆ ಯಾವ ಗ್ರಹಗಳಲ್ಲಿಯೂ ಜೀವಿಗಳು ಕಂಡುಬರುವುದಿಲ್ಲ. ಈ ಭೂಮಿಯೊಂದು ವೈವಿಧ್ಯಗಳ ಅಗರ. ವಿಭಿನ್ನ ಚರಾಚರಗಳಿಂದ ಕೂಡಿದ ತೆರತೆರನಾದ ಆವಾಸ ಸ್ಥಾನಗಳನ್ನು ಹೊಂದಿದ ಒಂದು ಜೀವ ನಿಧಿ. ಇದೊಂದು ಚಿನ್ನದ ಕಣಜ, ನೀರಿನ ಚಿಲುಮೆ, ಇಂದ್ರನ ನಂದನವನ ಎಲ್ಲಕ್ಕಿಂತ ಮಿಗಿಲಾಗಿ ಭೂಮಿಯೊಂದು ಸೌಂದರ್ಯದ ಗುಡಿಸಲು. ಭೂಮಿಯಲ್ಲಿ ಏನುಂಟು ಏನಿಲ್ಲ ಎಲ್ಲವೂ ಇದೆ. ಪರಿಸ್ಥಿತಿ ಕೈ ಮೀರಿದರೆ ಏನು ಇಲ್ಲದಂತಾಗುತ್ತದೆ. ಇಲ್ಲಿ ಹಿಮದಿಂದ ಕೂಡಿದ ಪ್ರದೇಶಗಳು, ಮರಳು ತುಂಬಿದ ಮರುಭೂಮಿಗಳು, ವಿಶಾಲವಾದ ಸಮುದ್ರ, ಸಾಗರಗಳು, ಕೊಲ್ಲಿಗಳು, ಖಾರಿಗಳು, ಅಂಕುಡೊಂಕದ ನದಿಗಳು, ಕಣಿವೆಗಳು, ಬೆಟ್ಟಗುಡ್ಡಗಳು, ಲಕ್ಷಾಂತರ ಪ್ರಭೇದದ ಸಸ್ಯಗಳು, ಕೀಟಗಳು, ಪಕ್ಷಿಗಳು, ಪ್ರಾಣಿಗಳು ಇವೆ. ಒಂದು ಕಡೆ ವಿಶಾಲವಾದ ಬಯಲು ಪ್ರದೇಶ, ಇನ್ನೊಂದೆಡೆ ತಗ್ಗು ಪ್ರದೇಶಗಳು, ಮತ್ತೊಂದು ಕಡೆ ಎತ್ತರವಾದ ಪರ್ವತಗಳು ಮತ್ತೊಂದು ಕಡೆ ಸಿಹಿ ನೀರು ಹಾಗೆಯೇ ಉಪ್ಪು ನೀರು ಸರೋವರಗಳು, ಹೀಗೆ ಕೋಟಿ ಕೋಟಿ ಬಗೆಯ ಜೀವವೈವಿಧ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇವೆಲ್ಲವುಗಳಿಗೆ ಮೆರಗು ತಂದಿರುವುದು ಇಲ್ಲಿನ ಜನಸಂಖ್ಯೆ. ಕೋಟ್ಯಾಂತರ ಜೀವಿಗಳಿಂದ ತುಂಬಿ ತುಳುಕುತ್ತಿರುವ ಒಂದೇ ಒಂದು ಗ್ರಹವೆಂದರೆ ಅದು ಭೂಮಿ ಮಾತ್ರ. ಈ ಜೀವಿಗಳಿಂದಲೇ ಭೂಮಿಗೆ ಒಂದು ಅರ್ಥ ಬಂದಿದೆ. ಭೂಮಿಗೆ ಚೆಂದ ಹಾಗೂ ಅಂದದ ಸ್ಥಾನ ಮಾನ ಸಿಕ್ಕಿದೆ. ಈ ಭೂಮಿಯ ಮೇಲೆ ವಾಸಿಸುವ ಜೀವಿಗಳು ಒಂದು ಮತ್ತೊಂದರಂತೆ ಇಲ್ಲ. ಹಲವಾರು ಬಗೆಯ ವಿವಿಧತೆಗಳು ಕಂಡುಬರುತ್ತವೆ. ಹೀಗೆ ವಿವಿಧತೆಯಿಂದ ಕೂಡಿದ ಜೀವಿಗಳನ್ನು ಜೀವ ವೈವಿಧ್ಯ ಎಂದು ಕರೆಯುತ್ತೇವೆ. ಈ ಭೂಮಿ ಹುಟ್ಟಿ ಬಂದ ನಂತರ ವಿವಿಧ ಜಾತಿ ವರ್ಗಗಳ ಜೀವಿಗಳು ಭೂಮಿಯ ಮೇಲೆ ವಾಸಿಸಲು ಆರಂಭಿಸಿದವು. ಈ ಜೀವಿಗಳ ತೂಕ, ಆಕಾರ, ದಪ್ಪ, ಎತ್ತರ ಮೊದಲಾದವುಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ಬರಿ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳಿಂದ ಹಿಡಿದು ಬೃಹತ್ ಗಾತ್ರದ ಆನೆಗಳವರೆಗೆ, ಸಾಗರದಲ್ಲಿ ಈಜುವ ಚಿಕ್ಕ ಚಿಕ್ಕ ಮೀನುಗಳಿಂದ ಹಿಡಿದು ಸುಮಾರು 90 ಅಡಿ ಉದ್ದವಿರುವ ದೊಡ್ಡ ದೊಡ್ಡ ತಿಮಿಂಗಿಲಗಳವರೆಗೆ ಜೀವ ವೈವಿಧ್ಯ ಹರಡಿದೆ ಎಂದರೆ ಆಶ್ಚರ್ಯವಾಗದೆ ಇರದು. ಸಮುದ್ರದಲ್ಲಿ ಕಂಡು ಬರುವ ಚಿಕ್ಕ ಪಾಚಿಗಳಿಂದ ಹಿಡಿದು ಸುಮಾರು 300 ಅಡಿ ಎತ್ತರದವರೆಗೆ ಬೆಳೆಯುವ ದೊಡ್ಡ ದೊಡ್ಡ ಮರಗಳನ್ನು ಈ ಭೂಮಿ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಭೂಮಿಯ ಪರಿಸರ ವ್ಯವಸ್ಥೆಯಲ್ಲಿ ಅನೇಕ ಜಾತಿಯ ಸಸ್ಯಗಳು, ಸಸ್ಯಹಾರಿ, ಪ್ರಾಣಿಗಳು ಹಾಗೂ ಮಾಂಸಾಹಾರಿ ಪ್ರಾಣಿಗಳು ವಾಸಿಸುತ್ತಿವೆ. ಇವುಗಳು ಪರಿಸರವನ್ನು ತಕ್ಕಮಟ್ಟಿಗೆ ಸಮತೂಕದಲ್ಲಿ ಇಡುತ್ತವೆ.
1992ರಲ್ಲಿ ರಿಯೋಡಿ ಜನೈರೋದಲ್ಲಿ ನಡೆದ ಸಮ್ಮೇಳನದಲ್ಲಿ ಜೀವ ವೈವಿಧ್ಯತೆ ಕುರಿತು ಅರ್ಥ ಸಮೀಟ್‌ನಲ್ಲಿ ಈ ರೀತಿ ವಿವರಿಸಲಾಗಿದೆ. ಒಂದು ಭೂಭಾಗ ಸಾಗರ ಅಥವಾ ಇತರ ಭಾಗದಲ್ಲಿರುವ ಎಲ್ಲ ಜೀವಿ ಪರಿಸರ ವ್ಯವಸ್ಥೆಗಳ ಎಲ್ಲಾ ಜೀವಿಗಳನ್ನು ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಜೀವಿಗಳನ್ನು ಒಟ್ಟಾಗಿ ಜೀವ ವೈವಿಧ್ಯತೆ ಎಂದು ಕರೆಯಲಾಗಿದೆ. ಥಾಮಸ್ ಜಾಯ್ ಪ್ರಥಮ ಬಾರಿಗೆ ಬಯಾಲಜಿಕ್ ಡೈವರ್ಸಿಟಿ ಎಂಬ ಪದವನ್ನು 1980ರಲ್ಲಿ ಬಳಸಿದನು. ಮುಂದುವರೆದು ಹಾರ್ವರ್ಡ್ ವಿಶ್ವವಿದ್ಯಾಲಯದ ಡಬ್ಲ್ಯೂ ಡಿ ರೋಜನ್ 1985ರಲ್ಲಿ ಈ ಪದವನ್ನು ಬಳಸಿದನು. ಎಡ್ವರ್ಡ್ ವಿಲ್ಸನ್ ಈ ಪದವನ್ನು ಜನಪ್ರಿಯಗೊಳಿಸಿದನು.
- ವಿಶ್ವಸಂಪನ್ಮೂಲಗಳ ಸಂಸ್ಥೆಯ ಪ್ರಕಾರ ಪ್ರಪಂಚದ ಜೀವಿ ತಳಿಗಳ ವಿವಿಧತೆ ಹಾಗೂ ಅವುಗಳು ರೂಪಿಸಿಕೊಂಡಿರುವ ವಿವಿಧ ಸಮುಚ್ಚಯಗಳಿಗೆ ಜೀವವೈವಿಧ್ಯತೆ ಎಂದು ಕರೆಯಲಾಗಿದೆ.
- ರಾಬರ್ಟ್ ಮಾಲ್ತೂಸ್ ಪ್ರಕಾರ ಜೀವಿಗಳ ಜನನ ಸ್ವಾಭಾವಿಕವಾದರೂ ಬೆಳವಣಿಗೆಗೆ ನಡೆದ ಸ್ಪರ್ಧೆಯನ್ನು ವಿಶಾಲವಾಗಿ ಗ್ರಹಿಸಬೇಕು ಎಂದಿದ್ದಾರೆ.
- ಚಾರ್ಲ್ಸ್ ಡಾರ್ವಿನ್ ಜೀವ ಜಾತಿಗಳ ಉಗಮ ಬಹಳ ನಿಗೂಢವಾದದ್ದು ಪ್ರಕೃತಿ ಸಹಜವಾದ ಪ್ರಾಣಿಗಳಲ್ಲಿ ಸಸ್ಯಗಳಲ್ಲಿ ಕಂಡುಬರುವ ವ್ಯತ್ಯಾಸಗಳು ಬೇರೆ ಬೇರೆ ಬುಡಕಟ್ಟುಗಳಾಗಿ ಹೇಗೆ ವಿಂಗಡನೆಯಾಗುವವೋ ಅದೇ ರೀತಿ ಅತಿ ದೀರ್ಘಾವಧಿಯವರೆಗೆ ಹೊಸ ಹೊಸ ಜಾತಿಗಳು, ವರ್ಗಗಳು ಬೇರ್ಪಡುತ್ತಾ ಬಂದಿದೆ ಎಂದಿದ್ದಾರೆ.
- ಆಲ್ಫ್ರೆಡ್ ರಸೆಲ್ ವಾಲೆಸ್ ಜೀವ ವಿಕಾಸ ವೈವಿಧ್ಯಮಯವಾದದ್ದು. ವಿಸ್ಮಯವಾದುದು ವಿಕಾಸ ಹಂತಗಳು ಈ ಭೂಮಿಯ ಮೇಲೆ ಬಹು ರೋಚಕ ರೋಮಾಂಚಕ ಎಂದಿದ್ದಾರೆ.
ಭೂಮಿಯ ಮೇಲೆ ಕಂಡು ಬರಬಹುದಾದ ಜೀವ ವೈವಿಧ್ಯತೆಯಲ್ಲಿ ಬಿಲಿಯನ್‌ಗಟ್ಟಲೆ ವಿವಿಧ ಬಗೆಯ ಜೀವ ಪ್ರಭೇದಗಳಿವೆ. ಈ ಜೀವ ಪ್ರಭೇದಗಳು ಸುಮಾರು ನಾಲ್ಕು ಬಿಲಿಯನ್ ವರ್ಷಗಳಿಂದ ವಿಕಾಸ ಹೊಂದುತ್ತಾ ಬಂದಿದೆ. ಒಂದು ಅಂದಾಜಿನ ಪ್ರಕಾರ ಒಟ್ಟು ಜೀವಿಗಳ ಸಂಖ್ಯೆಯು ಸುಮಾರು ಏಳು ಬಿಲಿಯನ್ ಅಷ್ಟು ಇರಬಹುದಾಗಿದೆ. ಭೂಮಿಯ ಮೇಲಿನ ಒಟ್ಟು ಜೀವಿಗಳಲ್ಲಿ ಶೇಕಡ 70ರಷ್ಟು ಪ್ರಾಣಿಗಳಿವೆ. ಸಸ್ಯಗಳು 22% ರಷ್ಟು ಇವೆ. ಪ್ರಾಣಿ ಪ್ರಪಂಚದಲ್ಲಿ ಕೀಟಗಳೇ ಅತಿ ಹೆಚ್ಚಾಗಿವೆ. ಭಾರತ ಪ್ರಪಂಚದ 2.4 ರಷ್ಟು ಭೂಭಾಗವನ್ನು ಮಾತ್ರ ಹೊಂದಿದ್ದರೂ 7% ಪ್ರಭೇದಗಳನ್ನು, 17.5% ಜನಸಂಖ್ಯೆಯನ್ನು ಹಾಗೂ 92,000( 7.5%) ಪ್ರಾಣಿ ಪ್ರಭೇದಗಳನ್ನು ಹೊಂದಿದೆ. ಒಂದು ಅಂದಾಜಿನಂತೆ ಜೀವ ಪ್ರಭೇದಗಳ ಲೆಕ್ಕಾಚಾರ ಈ ಕೆಳಗಿನಂತಿವೆ.
| ಕಸೇರುಕ ಪ್ರಾಣಿಗಳು | ಆಕಸೇರುಕ ಪ್ರಾಣಿಗಳು | ಸಸ್ಯಗಳು |
| 1. ಸಸ್ತನಿಗಳು- 4170 | ಕೀಟಗಳು-1000000 | ಹೂ ಬಿಡುವ ಸಸ್ಯಗಳು- 250000 |
| 2. ಪಕ್ಷಿಗಳು- 9020 | ಸಂಧಿಪದಿಗಳು- 200000 | ಹೂ ಬಿಡದ ಸಸ್ಯಗಳು- 130000 |
| 3. ಸರಿಸೃಪಗಳು- 5085 | ಇತರೆ ಅಕಸೇರುಕಗಳು-200000 | |
| 4. ಉಭಯವಾಸಿಗಳು- 3300 | ಆಕಸೇರುಕ ಪ್ರಾಣಿಗಳು: | |
| 5. ಮೀನುಗಳು- 4100 |
ಭೂಮಿಯ ಮೇಲೆ ಇಷ್ಟೆಲ್ಲಾ ಸಸ್ಯ, ಪ್ರಾಣಿ, ಪಕ್ಷಿ ಪ್ರಭೇದಗಳಿದ್ದರೂ ಅವೆಷ್ಟೋ ಇನ್ನೂ ಕಣ್ಣಿಗೆ ಕಾಣದಷ್ಟು ಪ್ರಭೇದಗಳು ಉಳಿದುಕೊಂಡಿವೆ. ಈ ಜೀವಿಗಳ ವಾಸಸ್ಥಾನಗಳು ಕಲ್ಪನೆಗೆ ಮೀರಿದ್ದಾಗಿವೆ. ಈ ಜೀವಿಗಳ ವಾಸ ಇಂದು ನಿನ್ನೆಯದಲ್ಲ. ಅದು ಕೋಟಿ ಕೋಟಿ ವರ್ಷಗಳ ನಿರಂತರವಾದ ಕ್ರಿಯೆಯಿಂದ ಆಗಿದ್ದಾಗಿದೆ. ಇಂತಹ ಜಟಿಲವಾದ ಪರಿಸರದಲ್ಲಿ ಕೆಲವು ಪ್ರಾಣಿ, ಪಕ್ಷಿಗಳು ತಮ್ಮ ಕೊಂಡಿಯನ್ನು ಕಳಚಿಕೊಂಡರೆ ಪರಿಸರದಲ್ಲಿ ತಕ್ಷಣವೇ ಅಸಮತೋಲನ ಕಂಡುಬರುತ್ತದೆ. ಮುಖ್ಯವಾಗಿ ಮಾನವನ ಕೆಟ್ಟ ಚಟಗಳಿಂದಾಗಿ ಪರಿಸರ ದಿನೇ ದಿನೇ ಅವನತಿಗೊಳ್ಳುತ್ತಿದ್ದು ಅದರೊಂದಿಗೆ ಜೀವಿಗಳು ಕಣ್ಮರೆಯಾಗುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ. ಈಗಾಗಲೇ ಅಮೆರಿಕ ಹಾಗೂ ಬ್ರೆಜಿಲ್ ಗಳಲ್ಲಿ ಮರಗಳನ್ನು ಕಡಿದು ಕದ್ದು ಮಾರುತ್ತಿರುವ ಜಾಲವೊಂದು ಪತ್ತೆಯಾಗಿದೆ.
ಇನ್ನು ಭಾರತದಲ್ಲಿ ಜಿಂಕೆ, ಹುಲಿ, ಚಿರತೆ, ಸಿಂಹ, ಆನೆ, ಕಾಡುಕೋಣ, ಕಾಡೆಮ್ಮೆ ಮುಂತಾದವುಗಳನ್ನು ಕೊಂದು ಅವುಗಳ ಚರ್ಮ, ದಂತ, ಮಾಂಸ, ಕೊಂಬುಗಳನ್ನು ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಇವುಗಳಿಗೆ ತಡೆಯೊಡದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರಾಣಿಗಳನ್ನು ಚಿತ್ರಪಟಗಳಲ್ಲಿ ಕಾಣುವ ಸನ್ನಿವೇಶ ದೂರ ಉಳಿದಿಲ್ಲ ಎಂದು ಹೇಳಬಹುದು. ಇಂತಹ ಪರಿಸ್ಥಿತಿಯ ನಡುವೆ ಅನೇಕ ಜೀವಿಗಳು ಸಂತಾನೋತ್ಪತ್ತಿ ಮಾಡಿ ತಮ್ಮ ಸಂತತಿಗಳನ್ನು ಹೆಚ್ಚಿಸಿಕೊಳ್ಳುತ್ತಿವೆ. ಇನ್ನು ಕೆಲವು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ವಿಫಲಗೊಂಡು ಸಾಯುತ್ತಿವೆ. ಹೊಂದಾಣಿಕೆಯ ಅಥವಾ ಬಲಿಷ್ಠ ಜೀವಿಗಳು ಸಂತಾನೋತ್ಪತ್ತಿಯಲ್ಲಿ ಯಶಸ್ವಿ ಆದರೆ ಹೊಂದಿಕೊಳ್ಳದ ಅಥವಾ ದುರ್ಬಲಗೊಂಡ ಜೀವಿಗಳು ಸಂತಾನೋತ್ಪತ್ತಿಯಲ್ಲಿ ಅಸಮರ್ಥಗೊಳ್ಳುತ್ತವೆ. ಹೀಗಾಗಿ ಪರಿಸರದಲ್ಲಿ ಏರುಪೇರು ಕಂಡುಬರುತ್ತದೆ.
ಉಪಸಂಹಾರ
ಜೀವ ವೈವಿಧ್ಯವು ಭೂಮಿಯ ಜೀವಂತಿಕೆಯ ಮೂಲವಾಗಿದ್ದು, ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಾನವನ ಅಜಾಗರೂಕತೆ, ಅರಣ್ಯ ನಾಶ ಮತ್ತು ಅಕ್ರಮ ಬೇಟೆಯಿಂದ ಅನೇಕ ಜೀವ ಪ್ರಭೇದಗಳು ನಾಶದ ಅಂಚಿಗೆ ತಲುಪಿವೆ. ಪರಿಸರದ ಸಮತೋಲನ ಕಾಪಾಡಲು ಸಸ್ಯ, ಪ್ರಾಣಿ ಮತ್ತು ಅವುಗಳ ವಾಸಸ್ಥಾನಗಳನ್ನು ರಕ್ಷಿಸುವುದು ಅತ್ಯಂತ ಅಗತ್ಯ. ಜೀವ ವೈವಿಧ್ಯ ಉಳಿದರೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಮತ್ತು ಸುಂದರವಾದ ಭೂಮಿಯನ್ನು ನೀಡಲು ಸಾಧ್ಯ. ಆದ್ದರಿಂದ ಸಂರಕ್ಷಣೆಯತ್ತ ಜಾಗೃತಿಯಿಂದ ಹೆಜ್ಜೆ ಇಡುವುದು ನಮ್ಮ ಕರ್ತವ್ಯವಾಗಿದೆ