ನೀರಿನ ಮೇಲಿನ ಸಂಘರ್ಷಗಳು (ಅಂತರಾಷ್ಟ್ರೀಯ ಮತ್ತು ಅಂತರರಾಜ್ಯ)
ನೀರು ಅತ್ಯಂತ ಅಮೂಲ್ಯವಾದ ಸಂಪನ್ಮೂಲವಾಗಿದೆ. ಇದನ್ನು ಮಾನವ ಸೃಷ್ಟಿಸಲಾರ. ನೀರು ಯಾವಾಗಲೂ ಎತ್ತರವಾದ ಪ್ರದೇಶದಿಂದ ತಗ್ಗು ಪ್ರದೇಶದ ಕಡೆಗೆ ಹರಿಯುತ್ತದೆ. ನೀರು ನದಿಯನ್ನು ಸೇರಿ ಆನಂತರ ಸಾಗರದಲ್ಲಿ ಲೀನವಾಗುತ್ತದೆ. ನದಿಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಾಗೂ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹರಿಯುತ್ತವೆ. ಪ್ರಪಂಚದಲ್ಲಿ ಹರಿಯುವ ನದಿಗಳನ್ನು ಅಂತರಾಷ್ಟ್ರೀಯ ನದಿಗಳೆಂದು, ರಾಜ್ಯದಲ್ಲಿ ಹರಿವ ನದಿಗಳನ್ನು ಅಂತರ ರಾಜ್ಯ ನದಿಗಳೆಂದು ಕರೆಯುತ್ತಾರೆ. ಜನಸಂಖ್ಯೆಯು ತೀವ್ರವಾಗಿ ಏರಿಕೆ ಕಾಣುತ್ತಿರುವ ಇತ್ತೀಚಿನ ವರ್ಷಗಳಲ್ಲಿ ನೀರಿನ ಬಳಕೆಯು ಹೆಚ್ಚುತ್ತಿದೆ. ಹೀಗಾಗಿ ನೀರಿಗಾಗಿ ರಾಜ್ಯಗಳ ನಡುವೆ ಮತ್ತು ರಾಷ್ಟ್ರ ರಾಷ್ಟ್ರಗಳ ನಡುವೆ ಸಂಘರ್ಷ ಉಂಟಾಗುತ್ತದೆ. ಸಾಮಾನ್ಯವಾಗಿ ನದಿ ಹರಿವಿನ ಮೇಲ್ಭಾಗದಲ್ಲಿರುವ ದೇಶ ಅಥವಾ ರಾಜ್ಯಗಳು ಮಿತಿ ಮೀರಿ ನೀರನ್ನು ಬಳಸಿದರೆ ಕೆಳಭಾಗದಲ್ಲಿ ವಾಸಿಸುವ ರಾಷ್ಟ್ರ ಅಥವಾ ರಾಜ್ಯಗಳು ನೀರಿನ ಅಭಾವದಿಂದ ತತ್ತರಿಸಿದಾಗ ಜಲ ವಿವಾದ ಆರಂಭವಾಗುತ್ತದೆ.
1. ಅಂತರಾಷ್ಟ್ರೀಯ ಜಲವಿವಾದಗಳು: (International water disput)
ಜಗತ್ತಿನ ಸುಮಾರು 100 ದೇಶಗಳು 13 ನದಿ ಮತ್ತು ಸರೋವರಗಳ ನೀರನ್ನು ಹಂಚಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಈ ಕಾರಣದಿಂದ ಅಂತರಾಷ್ಟ್ರೀಯ ಜಲವಿವಾದ ಹುಟ್ಟಿಕೊಂಡಿದೆ.
- ಇಥಿಯೋಪಿಯಾ ಮತ್ತು ಈಜಿಪ್ಟ್ ನಡುವೆ ನೈಲ್ ನದಿಯ ನೀರಿಗಾಗಿ ವಿವಾದ ಉಂಟಾಗಿದೆ.
- ಗಂಗಾ ನದಿಯ ನೀರಿನ ಹಂಚಿಕೆಯಲ್ಲಿ ಭಾರತ ಹಾಗೂ ಬಾಂಗ್ಲಾದೇಶಗಳ ನಡುವೆ ಜಲ ವಿವಾದ ಉಂಟಾಗಿದೆ.
- ಸಿಂಧೂ ನದಿಯ ನೀರಿನ ಹಂಚಿಕೆಯ ವಿಷಯದಲ್ಲಿ ಭಾರತ ಪಾಕಿಸ್ತಾನಗಳ ನಡುವಿನ ಜಲ ವಿವಾದ.
- ಟೈಗ್ರಿಸ್ ನದಿಗಳ ನೀರಿನ ಹಂಚಿಕೆಯ ವಿಷಯದಲ್ಲಿ ಇಸ್ರೇಲ್, ಸಿರಿಯ ಹಾಗೂ ಜೋರ್ಡಾನ್‌ಗಳ ನಡುವೆ ಜಲ ವಿವಾದ ನಡೆದಿದೆ.
- ಇದೇ ನದಿಗಳ ನೀರಿನ ಸಲುವಾಗಿ ಇರಾಕ್, ಸಿರಿಯಾ ಮತ್ತು ಟರ್ಕಿಗಳ ನಡುವೆ ವಿವಾದ ಇದೆ.
- ಸುಯೇಜ್ ಕಾಲುವೆಯ ವಿವಾದ ಪ್ರಮುಖ ಅಂತರಾಷ್ಟ್ರೀಯ ವಿವಾದವಾಗಿದೆ.
2. ಅಂತರ ರಾಜ್ಯ ನದಿ ನೀರಿನ ವಿವಾದ: (Inter state water dispute)
- ಗೋದಾವರಿ ನದಿ ನೀರಿನ ವಿಷಯವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ ಹಾಗೂ ಒರಿಸ್ಸಾ ರಾಜ್ಯಗಳ ನಡುವೆ ವಿವಾದಗಳು ಇವೆ.
- ಕುಡಿಯುವ ನೀರು, ಜಲ ವಿದ್ಯುತ್ ತಯಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಕೃಷ್ಣಾ ನದಿ ಜಲವಿವಾದ ಉಂಟಾಯಿತು. ಇಂದಿಗೂ ಬಗೆ ಹರಿದಿಲ್ಲ.
- ನರ್ಮದಾ ನದಿ ನೀರಿನ ಹಂಚಿಕೆಯ ವಿಷಯವಾಗಿ ರಾಜಸ್ಥಾನ್, ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಜಲ ವಿವಾದ ಹುಟ್ಟಿಕೊಂಡಿತು.
- ರಾವಿ ಮತ್ತು ಬಿಯಾಸ್ ನದಿ ವಿವಾದ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳ ನಡುವೆ ನಡೆಯಿತು.
- ಕಾವೇರಿ ನದಿ ನೀರಿನ ಹಂಚಿಕೆಯ ವಿವಾದವು ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಪುದುಚೇರಿಗಳ ನಡುವೆ ನಡೆದಿದೆ.
- ಆಂಧ್ರಪ್ರದೇಶ ಹಾಗೂ ಒರಿಸ್ಸಾಗಳ ನಡುವಿನ ವನ್ಸಾಧರ ನೀರಿನ ವಿವಾದ.
- ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಮಹಾದಾಯಿ ನದಿ ನೀರಿನ ಹಂಚಿಕೆಯ ವಿವಾದ.
ಉಪಸಂಹಾರ
ನೀರಿನ ಮೇಲಿನ ಸಂಘರ್ಷಗಳು ಮಾನವ ನಿರ್ಮಿತ ಸಮಸ್ಯೆಗಳಾಗಿದ್ದು, ಪರಸ್ಪರ ಸಹಕಾರ ಮತ್ತು ಸಮನ್ವಯದಿಂದ ಅವುಗಳನ್ನು ಪರಿಹರಿಸಬಹುದು. ನದಿನೀರಿನ ನ್ಯಾಯಸಮ್ಮತ ಹಂಚಿಕೆ, ವೈಜ್ಞಾನಿಕ ನಿರ್ವಹಣೆ ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳು ಜಲವಿವಾದಗಳನ್ನು ತಗ್ಗಿಸಲು ಅಗತ್ಯವಾಗಿವೆ. ನೀರನ್ನು ರಾಜಕೀಯ ಲಾಭಕ್ಕಾಗಿ ಬಳಸದೇ, ಮಾನವೀಯ ದೃಷ್ಟಿಕೋನದಿಂದ ನೋಡಬೇಕಾಗಿದೆ. ಭವಿಷ್ಯದ ಪೀಳಿಗೆಗಾಗಿ ನೀರಿನ ಸಂರಕ್ಷಣೆ ಮತ್ತು ಸಮನ್ಯಾಯ ಬಳಕೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.