ಶಕ್ತಿ ಸಂಪನ್ಮೂಲಗಳ ವರ್ಗೀಕರಣ
ಒಂದು ಕಾರ್ಯವನ್ನು ನಿರ್ವಹಿಸಲು ಬಳಸುವ ಸಾಮರ್ಥ್ಯವನ್ನು ಶಕ್ತಿ ಎಂದು ಕರೆಯಬಹುದು. ಅಥವಾ ಶಕ್ತಿಯನ್ನು ಉತ್ಪಾದಿಸಲು ಬಳಸುವ ನೈಸರ್ಗಿಕ ಮೂಲವನ್ನು ಶಕ್ತಿ ಸಂಪನ್ಮೂಲಗಳು ಎಂದು ಹೆಸರು. ಮಾನವನು ನಿರ್ವಹಿಸುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಶಕ್ತಿಯು ಪ್ರಧಾನವಾದ ಪಾತ್ರ ವಹಿಸುತ್ತದೆ. ಈ ಶಕ್ತಿಯು ಹಲವು ಮೂಲಗಳಿಂದ ದೊರೆಯುತ್ತದೆ. ಅವುಗಳನ್ನೇ ಶಕ್ತಿ ಸಂಪನ್ಮೂಲಗಳು ಎಂದು ಕರೆಯಬಹುದು. ಕಲ್ಲಿದ್ದಲು, ನೀರು, ಗಾಳಿ, ಖನಿಜ, ತೈಲ, ಜೈವಿಕ ಅನಿಲ, ವಿದ್ಯುತ್ ಶಕ್ತಿ, ಸೌರ ಶಕ್ತಿ ಹಾಗೂ ಪವನ ಶಕ್ತಿ ಮುಂತಾದವುಗಳು ಪ್ರಮುಖ ಶಕ್ತಿ ಸಂಪನ್ಮೂಲಗಳಾಗಿವೆ. ಒಂದು ದೇಶದ ಪ್ರಗತಿ ನಿಂತಿರುವುದು ಆ ದೇಶದ ಶಕ್ತಿ ಸಂಪನ್ಮೂಲಗಳನ್ನು ಅವಲಂಬಿಸಿದೆ. ಇಂದಿನ ನಮ್ಮ ಆಧುನಿಕ ಜೀವನದಲ್ಲಿ ಶಕ್ತಿಯ ಪಾತ್ರ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ.
ಶಕ್ತಿ ಸಂಪನ್ಮೂಲಗಳ ವರ್ಗೀಕರಣ: (Classification of energy resources)
ಶಕ್ತಿ ಸಂಪನ್ಮೂಲಗಳನ್ನು ಪ್ರಮುಖವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ.
- ನವೀಕರಿಸಬಹುದಾದ ಅಥವಾ ಮುಗಿದು ಹೋಗದ ಶಕ್ತಿ ಸಂಪನ್ಮೂಲಗಳು
- ನವೀಕರಿಸಲಾಗದ ಅಥವಾ ಮುಗಿದು ಹೋಗುವ ಶಕ್ತಿ ಸಂಪನ್ಮೂಲಗಳು
1. ನವೀಕರಿಸಬಹುದಾದ ಅಥವಾ ಮುಗಿದು ಹೋಗದ ಶಕ್ತಿ ಸಂಪನ್ಮೂಲಗಳು:(Renewable energy resources)
ʻʻಕೆಲವು ಸಂಪನ್ಮೂಲಗಳನ್ನು ಬಳಕೆ ಮಾಡಿದಂತೆಲ್ಲ ನವೀಕರಣ ಹೊಂದುತ್ತವೆ. ಹೀಗಾಗಿ ಇವುಗಳನ್ನು ಮುಗಿದು ಹೋಗದ ಸಂಪನ್ಮೂಲಗಳು ಎಂದು ಕರೆಯುತ್ತಾರೆ.ʼʼ ಈ ಸಂಪನ್ಮೂಲಗಳು ನಿಸರ್ಗದಲ್ಲಿ ಅವ್ಯಾಹತವಾಗಿ ದೊರಕುವುದರಿಂದ ಅವುಗಳನ್ನು ನಿರಂತರವಾಗಿ ಬಳಸಿಕೊಳ್ಳಬಹುದಾಗಿದೆ.
ಉದಾ: ಸೌರಶಕ್ತಿ, ಗಾಳಿ ಶಕ್ತಿ, ಜಲ, ವಿದ್ಯುತ್, ಜೈವಿಕ ಅನಿಲ, ಅಣು ಶಕ್ತಿ, ಸಮುದ್ರದ ಅಲೆಗಳು ಮುಂತಾದವುಗಳು ಮುಗಿದು ಹೋಗದಿರುವ ಸಂಪನ್ಮೂಲಗಳಾಗಿವೆ.
2. ನವೀಕರಿಸಲಾಗದ ಅಥವಾ ಮುಗಿದು ಹೋಗುವ ಶಕ್ತಿ ಸಂಪನ್ಮೂಲಗಳು: (Non renewable resources)
ಯಾವ ಶಕ್ತಿ ಸಂಪನ್ಮೂಲಗಳನ್ನು ಪುನರ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲವೋ ಅವುಗಳನ್ನು ನವೀಕರಿಸಲಾಗದ ಅಥವಾ ಮುಗಿದುಹೋಗುವ ಶಕ್ತಿ ಸಂಪನ್ಮೂಲಗಳು ಎಂದು ಕರೆಯುತ್ತಾರೆ. ಉದಾ: ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮೊದಲಾದವುಗಳು.