ಭಾರತದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಭೇದಗಳು

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಭೇದಗಳು

ವಿಶ್ವದಲ್ಲಿ ಸುಮಾರು 12 ಮಹಾಜೈವಿಕ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರಗಳು ಉಂಟು. ಅದರಲ್ಲಿ ಭಾರತವು ಸಹ ಒಂದು ಎಂದು ಪರಿಗಣಿತವಾಗಿದೆ. ಏಷ್ಯಾದ ಜೈವಿಕ ವೈವಿಧ್ಯ ದೇಶಗಳಲ್ಲಿ ನಾಲ್ಕನೇ ಸಾಧನೆ ಮಾಡಿದ ದೇಶ ಭಾರತವಾಗಿದೆ. ಹಾಗೆ ವಿಶ್ವದ ಸಸ್ಯ ವೈವಿಧ್ಯತೆ ಹೊಂದಿದ ದೇಶಗಳಲ್ಲಿ 10ನೇ ಸ್ಥಾನದಲ್ಲಿದೆ. ಪ್ರಪಂಚದ ದೇಶಿಯ ಕಸೇರುಕಗಳ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದೆ.

ಭಾರತದಲ್ಲಿ ತೀವ್ರ ಅಪಾಯದ ಅಂಚಿನಲ್ಲಿರುವ ಪ್ರಬಂಧಗಳೆಂದರೆ.

1 ಸಸ್ತನಿಗಳು:

  1. ಚಿಕ್ಕದಾದ ಕಾಡು ಹಂದಿ:  ಈ ಪ್ರಾಣಿಯ ನಾಶದಿಂದಾಗಿ ಇದನ್ನೇ ಅವಲಂಬಿಸಿ ಬದುಕು  ಕಂಡುಕೊಂಡಿದ್ದ ಹಾಗ್ ಎಂಬ ಜೀವಿಯು ಅಳಿವಿನ ಅಂಚಿನಲ್ಲಿದೆ.
  2. ಕೊಂಡಾನ ಇಲಿ:  ಭಾರತದಲ್ಲಿ ಮಾತ್ರ ಕಾಣಸಿಗುವ ಜಲವಾಸಿಯಾಗಿದ್ದು ಇದರ ಆವಾಸಸ್ಥಾನ ನಾಶವಾಗುತ್ತಿದೆ. ಹುಲ್ಲುಗಾವಲು ಮೇಯುವಿಕೆ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಂದ ಇಲಿ ವಿನಾಶದ ಅಂಚಿಗೆ ಬಂದು ತಲುಪಿದೆ.
  3. ಮಲಬಾರ್ ಕಿರುಬ:  ಇದು ಪಶ್ಚಿಮ ಘಟ್ಟದಲ್ಲಿ ಕಂಡುಬರುತ್ತದೆ. ಕಾಡುಗಳ ನಾಶದಿಂದಾಗಿ ಈ ಪ್ರಾಣಿ ಅಪಾಯವನ್ನು ಎದುರಿಸುತ್ತಿದೆ.
  4. ಜಾವಾದ ಘೇಂಡಾಮೃಗ: ಘೇಂಡಾಮೃಗದ 5 ಪ್ರಭೇದಗಳ ಪೈಕಿ ಇದು ಚಿಕ್ಕ ಪ್ರಭೇದವಾಗಿದೆ. ಹಿಮಾಲಯದ ಹಾಗೂ ಈಶಾನ್ಯ ಭಾರತದಲ್ಲಿ ಇದು ಕಂಡುಬರುತ್ತದೆ. ಇಂದು ಭಾರತದಲ್ಲಿ ಈ ಪ್ರಾಣಿ ಇಲ್ಲವಾಗಿದೆ.

2. ಸರಿಸೃಪಗಳು:

  1. ಉದ್ದ ಮುಖದ ಮೊಸಳೆ: ಮೀನುಗಳನ್ನು ತಿಂದು ಬದುಕುವ ಇದು ಚಂಬಲ್‌ ರಾಷ್ಟ್ರೀಯ ಅಭಯಾರಣ್ಯ, ರಾಜಸ್ಥಾನ್‌ ಹಾಗೂ ಮಧ್ಯ ಪ್ರದೇಶದಲ್ಲಿ ಕಂಡುಬರುತ್ತದೆ. ಅಣೆಕಟ್ಟು ನಿರ್ಮಾಣ ಹಾಗೂ ಕೃತಕ ಹಡಗುದಾಣ ನಿರ್ಮಾಣ ಮತ್ತು ಮರಳು ಗಣಿಗಾರಿಕೆಯಿಂದ ನಾಶವಾಗಿದೆ.
  2. ಗಿಡುಗ ಮೂಗಿನ ಆಮೆ: ಅತೀ ದುರ್ಬಲವಾದ ಸರಿಸೃಪವಾಗಿದೆ. ಮರುಳು ತೀರ ಬುಡದಲ್ಲಿ ಇದರ ವಾಸ. 25 ರಿಂದ 45 ವರ್ಷ ಬದುಕುತ್ತವೆ. ಆಮೆ ಚಿಪ್ಪು ಮಾರಾಟ, ಮಾಂಸಕ್ಕಾಗಿ ಹಾಗೂ ತೈಲಕ್ಕಾಗಿ ಇದನ್ನು ಕೊಲೆ ಮಾಡಲಾಗುತ್ತದೆ.
  3. ಸಿಸ್ಟಾರ ಹಗಲಿನ ಹಲ್ಲಿ: ಕಾಡಿನಲ್ಲಿ ವಾಸಿಸುವ ದೊಡ್ಡ ಹಲ್ಲಿ ಇದಾಗಿದೆ. ಪ್ರಮುಖವಾಗಿ ಕೀಟಗಳನ್ನು ತಿಂದು ಬದುಕುತ್ತವೆ. ರಾತ್ರಿ ವೇಳೆ ಇದರ ಓಡಾಟ ಹೆಚ್ಚು. ಪಶ್ಚಿಮ ಘಟ್ಟಗಳು, ನೀಲಗಿರಿ ಬೆಟ್ಟಗಳು ಇವುಗಳ ಆವಾಸ ಸ್ಥಾನ. ಕಾಡುಗಳ ನಾಶ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದಾಗಿ ಹಲ್ಲಿಗಳು ಅಳಿವಿನ ಅಂಚಿಗೆ ಬಂದು ತಲುಪಿವೆ.
  4. ಕಾಡು ಗೂಬೆ: ಇದು ಒಣಎಲೆ ಉದುರುವ ಕಾಡುಗಳಲ್ಲಿ ಕಂಡುಬರುತ್ತದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ದಕ್ಷಿಣ ಭಾಗದಲ್ಲಿ ಇದರ ವಾಸ. ಮರಗಳ ಸಾಗಾಣಿಕೆ ಮತ್ತು ಮರಗಳ ಕಟಾವುಗಳಿಂದ ಗೂಬೆಗಳು ಕಣ್ಮರೆಯಾಗುತ್ತಿವೆ.

3. ಪಕ್ಷಿಗಳು:

  1. ಬಿಳಿ ಹೊಟ್ಟೆಯ ಕೊಕ್ಕರೆ:  ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನಲ್ಲಿ ಅತಿ ವಿರಳವಾಗಿ ಕಂಡುಬರುವ ಈ ಪಕ್ಷಿಗಳು ಎತ್ತರದ ಹುಲ್ಲುಗಾವಲುಗಳನ್ನು ಆಶ್ರಯಿಸಿರುತ್ತವೆ. ಬೆಟ್ಟದ ಕಡಿದಾದ ಪ್ರದೇಶಗಳು ಇವುಗಳಿಗೆ ಇಷ್ಟ. ಅತಿಯಾದ ಬೇಟೆಯ ಕಾರಣದಿಂದಾಗಿ ಈ ಪಕ್ಷಿಗಳು ವಿನಾಶದ ಅಂಚಿನಲ್ಲಿದೆ.
  2. ಗುಲಾಬಿ ಬಣ್ಣ ತಲೆಯ ಬಾತುಕೋಳಿ:  ನಿಂತ ನೀರಿನ ಕೊಳಗಳು ಹಾಗೂ ಎತ್ತರದ ಹುಲ್ಲುಗಾವಲನ್ನು ಆಶ್ರಯಿಸಿ ಬದುಕುತ್ತಿರುವ ಈ ಬಾತುಕೋಳಿಯ ತಲೆಯು ಕಡುಗೆಂಪು ಗುಲಾಬಿ ಬಣ್ಣವನ್ನು ಹೊಂದಿದೆ.  ಇವು ಭಾರತ, ಬಾಂಗ್ಲಾದೇಶ ಹಾಗೂ ಮಯನ್ಮಾರಗಳಲ್ಲಿ ಕಂಡುಬಂದಿದೆ. ಜೌಗು ಪ್ರದೇಶಗಳ ಸವಕಳಿ, ಬೇಟೆಗಾರಿಕೆ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದಾಗಿ ಬಾತುಕೋಳಿಗಳ ಸಂತತಿ  ಅಳಿವಿನಂಚಿನಲ್ಲಿದೆ.
  3. ಗೊರವ ಹಕ್ಕಿ:  ಈ ಹಕ್ಕಿಗಳ ಸಂಖ್ಯೆ ಹಠಾತ್ತಾಗಿ ಕಡಿಮೆಯಾಗಿದೆ. ಪಾಳು ಬಿದ್ದ ಭೂಮಿ ಹಾಗೂ ಪೊದೆಗಳಲ್ಲಿ ಇವುಗಳ ವಾಸ. ಸೌದಿ ಅರೇಬಿಯಾ, ಸಿರಿಯಾ, ಈಜಿಪ್ಟ್‌, ಇರಾಕ್, ಭಾರತ ಹಾಗೂ ರಷ್ಯಾದಲ್ಲಿ ಈ ಬಗೆಯ ಪಕ್ಷಿಗಳು ಕಂಡುಬರುತ್ತವೆ. ತಗ್ಗು ಪ್ರದೇಶಗಳ ಸವಕಳಿ ಮತ್ತು ಅವುಗಳ ಆವಾಸಸ್ಥಾನಗಳಲ್ಲಿನ ಕಾಡು ನಾಶದಿಂದಾಗಿ ಗೊರವ ಹಕ್ಕಿಗಳ ಸಂತತಿ ಕಡಿಮೆಯಾಗುತ್ತಿದೆ.
  4. ಹಿಮಾಲಯದ ಕೌಜುಗ:  ಇದು ಹಾರಲು ಬಾರದ ಮತ್ತು ಹುಲ್ಲುಗಾವಲಿನಲ್ಲಿ ವಾಸಿಸುವ ಹಕ್ಕಿ. 1876ರಲ್ಲಿ ಕಂಡುಬಂದ ಈ ಹಕ್ಕಿ ಇಂದು ಆಗೊಮ್ಮೆ ಈಗೊಮ್ಮೆ ಕಂಡುಬರುತ್ತದೆ.
  5. ಸೈಬೀರಿಯನ್ ಕೊಕ್ಕರೆ:  ದೊಡ್ಡ ಗಾತ್ರದ ಸುಂದರ ಪಕ್ಷಿ ಇದಾಗಿದೆ. 2002 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಚೌಗು ಪ್ರದೇಶಗಳಲ್ಲಿ ಇವುಗಳ ವಾಸ. ಕೀಟನಾಶಕಗಳಿಂದ ಈ ಕೊಕ್ಕರೆಗಳು ನಾಶಗೊಳ್ಳುತ್ತವೆ. ಬೇಟೆಗಾರಿಕೆ ಹಾಗೂ ಕೃಷಿ ಭೂಮಿಯ ಪರಿವರ್ತನೆಯು ಸಹ ಇವುಗಳ ಅಳಿವಿಗೆ ಕಾರಣವಾಗಿದೆ.

4. ಉಭಯವಾಸಿಗಳು:

  1. ಭಾರತದ ಗುಂಡ್ಯ ಕಪ್ಪೆ: ಸಮುದ್ರಮಟ್ಟಕ್ಕಿಂತ 200 ಮೀಟರ್ ಎತ್ತರದಲ್ಲಿ ಇವುಗಳ ವಾಸ. ದನ-ಕರುಗಳ ಅತಿಯಾದ ಮೇಯುವಿಕೆ, ಮರ ಸಾಗಾಣಿಕೆ ಹಾಗೂ ರಸ್ತೆ ನಿರ್ಮಾಣದಂತಹ ಕಾರ್ಯಗಳಿಂದ ಈ ಕಪ್ಪೆಗಳ ಸಂತತಿ ನಾಶವಾಗುತ್ತಿದೆ.
  2. ಹುಲಿ ಕಪ್ಪೆ:  ಇದನ್ನು ಮಹಾರಾಷ್ಟ್ರದಲ್ಲಿ ಪತ್ತೆಹಚ್ಚಲಾಗಿದೆ. ಸಮುದ್ರ ಮಟ್ಟದಿಂದ 720 ಮೀಟರ್ ಎತ್ತರದಲ್ಲಿ ವಾಸಿಸುತ್ತದೆ. ಕಾಡುಗಳ ನಾಶ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದ ಈ ಕಪ್ಪೆಗಳ ಸಂತತಿ ಕಡಿಮೆಯಾಗುತ್ತಿದೆ.
  3. ಚಾರ್ಲ್ಸ್ ಡಾರ್ವಿನ್ ಕಪ್ಪೆ: ಇದು ಸಮುದ್ರ ಮಟ್ಟದಿಂದ 200 ಮೀಟರ್ ಎತ್ತರದಲ್ಲಿ ಕಂಡು ಬರುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇವುಗಳ ವಾಸ. ಕಾಡುಗಳ ನಾಶದಿಂದ ಈ ಕಪ್ಪೆಗಳು ವಿನಾಶದ ಅಂಚಿಗೆ ಬಂದು ತಲುಪಿವೆ.
  4. ಬಣ್ಣದ ಹೊಳೆಯುವ ಪೊದೆ ಕಪ್ಪೆ:  ಇದೊಂದು ಅಪರೂಪದ ಬಣ್ಣದ ಕಪ್ಪೆ. ಸಮುದ್ರ ಮಟ್ಟದಿಂದ 269 ಮೀಟರ್ ಎತ್ತರದಲ್ಲಿ ವಾಸಿಸುತ್ತದೆ. ಎರಾವಿಕುಲಂ ಅಭಯಾರಣ್ಯ ಇವುಗಳ ವಾಸ. ಕಾಡುಗಳ ನಾಶ ಹಾಗೂ ಇವುಗಳ ಆವಾಸಸ್ಥಾನಗಳ ನಾಶದಿಂದಾಗಿ ಈ ಕಪ್ಪೆಗಳು ಸಾವಕಾಶವಾಗಿ ಕಣ್ಮರೆಯಾಗುತ್ತಿವೆ.

5.  ಮೀನುಗಳು:

  1. ಪಾಂಡಿಚೇರಿ ಸಾರ್ಕ್:  ಇದು ಸಮುದ್ರ ಕಡಲ ತೀರದಲ್ಲಿ ಕಂಡುಬರುತ್ತದೆ.  ಪಾಕಿಸ್ತಾನದವರೆಗೂ ಈ ಮೀನುಗಳು ಕಂಡುಬರುತ್ತವೆ. ಅನಿಯಂತ್ರಿತ ವಾಣಿಜ್ಯ ಮೀನುಗಾರಿಕೆಯ ಪರಿಣಾಮವಾಗಿ ಇವುಗಳ  ಸಂಖ್ಯೆ ಕಡಿಮೆಯಾಗಿದೆ.
  2. ಗಂಗಾ ನದಿ ಸಾರ್ಕ್: ಅಪರೂಪದಿಂದ ಕೂಡಿದ ಈ ಮೀನುಗಳು ಗಂಗಾ ನದಿಯ ಕೆಸರು ನೀರು ಹಾಗೂ ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತವೆ.
  3. ದೊಡ್ಡ ಗಾತ್ರದ ಗರಗಸ ಮೀನು:  ದೊಡ್ಡ ಗಾತ್ರದ ಮೀನು ಗರಗಸ ಹಲ್ಲುಗಳನ್ನು ಹೊಂದಿದೆ. ಇದು ಮೂರು ಮೀಟರ್ ಉದ್ದ ಬೆಳೆಯುವುದರಿಂದ ಇದಕ್ಕೆ ಗೂಳಿ ಶಾರ್ಕ್ ಎಂದು ಕರೆಯುತ್ತಾರೆ. ಹೂಳು ತುಂಬುವುದು, ನೀರಿನ ಮಲೀನತೆ, ಅಣೆಕಟ್ಟು ನಿರ್ಮಾಣ ಹಾಗೂ ಆವಾಸಸ್ಥಾನಗಳ ನಾಶ ಈ ಮೀನುಗಳ ಸಂತತಿಯ ಅವನತಿಗೆ ಕಾರಣವಾಗಿದೆ.
  4. ಚಾಕು ಅಲ್ಲಿನ ಮೀನು:  ಈ ಮೀನು ಬ್ಲೇಡ್ ರೀತಿಯ ಹಲ್ಲುಗಳನ್ನು ಹೊಂದಿದೆ. ಇದು ಸಾಗರದ ಆಳದಲ್ಲಿ ಇರುತ್ತದೆ. ಹಿಂದೂ ಮಹಾಸಾಗರ ಹಾಗೂ ಪೆಸಿಫಿಕ್ ಮಹಾಸಾಗರಗಳಲ್ಲಿ ಇವುಗಳ ವಾಸ. ಹೆಚ್ಚು ಬೇಡಿಕೆ ಇರುವ ಮೀನು ಇದಾಗಿದೆ.

ಉಪಸಂಹಾರ

ಭಾರತದಲ್ಲಿನ ಅಳಿವಿನಂಚಿನಲ್ಲಿರುವ ಹಾಗೂ ಸ್ಥಳೀಯ ಪ್ರಭೇದಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾಡು ನಾಶ, ಅಕ್ರಮ ಬೇಟೆ, ಮಾಲಿನ್ಯ ಮತ್ತು ಆವಾಸಸ್ಥಾನಗಳ ವಿನಾಶವನ್ನು ತಡೆಗಟ್ಟಿದಾಗ ಮಾತ್ರ ಜೀವ ವೈವಿಧ್ಯ ಉಳಿಯಲು ಸಾಧ್ಯ. ಸರ್ಕಾರದ ಕ್ರಮಗಳ ಜೊತೆಗೆ ಜನಜಾಗೃತಿ ಮತ್ತು ಸಮುದಾಯದ ಸಹಭಾಗಿತ್ವ ಅತ್ಯಂತ ಅಗತ್ಯ. ಇಂದೇ ನಾವು ಕೈಗೊಳ್ಳುವ ಸಂರಕ್ಷಣಾ ಪ್ರಯತ್ನಗಳು ನಾಳೆಯ ಪರಿಸರ ಸಮತೋಲನವನ್ನು ನಿರ್ಧರಿಸುತ್ತವೆ. ಪ್ರಕೃತಿಯನ್ನು ಉಳಿಸುವುದೇ ಭವಿಷ್ಯವನ್ನು ಉಳಿಸುವ ಮಾರ್ಗವಾಗಿದೆ

ಜೀವ ವೈವಿಧ್ಯ ಮತ್ತು ರಕ್ಷಣೆ

ಜೀವ ವೈವಿಧ್ಯ ಮತ್ತು ರಕ್ಷಣೆ

ನಮ್ಮ ಸೌರ ಮಂಡಲದಲ್ಲಿ ಅತ್ಯಂತ ಸುಂದರವಾದ ಗ್ರಹವೆಂದರೆ ಅದು ಭೂಮಿ. ಬೇರೆ ಯಾವ ಗ್ರಹಗಳಲ್ಲಿಯೂ ಜೀವಿಗಳು ಕಂಡುಬರುವುದಿಲ್ಲ. ಈ ಭೂಮಿಯೊಂದು ವೈವಿಧ್ಯಗಳ ಅಗರ. ವಿಭಿನ್ನ ಚರಾಚರಗಳಿಂದ ಕೂಡಿದ ತೆರತೆರನಾದ ಆವಾಸ ಸ್ಥಾನಗಳನ್ನು ಹೊಂದಿದ ಒಂದು ಜೀವ ನಿಧಿ. ಇದೊಂದು ಚಿನ್ನದ ಕಣಜ, ನೀರಿನ ಚಿಲುಮೆ, ಇಂದ್ರನ ನಂದನವನ ಎಲ್ಲಕ್ಕಿಂತ ಮಿಗಿಲಾಗಿ ಭೂಮಿಯೊಂದು ಸೌಂದರ್ಯದ ಗುಡಿಸಲು. ಭೂಮಿಯಲ್ಲಿ ಏನುಂಟು ಏನಿಲ್ಲ ಎಲ್ಲವೂ ಇದೆ. ಪರಿಸ್ಥಿತಿ ಕೈ ಮೀರಿದರೆ ಏನು ಇಲ್ಲದಂತಾಗುತ್ತದೆ. ಇಲ್ಲಿ ಹಿಮದಿಂದ ಕೂಡಿದ ಪ್ರದೇಶಗಳು, ಮರಳು ತುಂಬಿದ ಮರುಭೂಮಿಗಳು, ವಿಶಾಲವಾದ ಸಮುದ್ರ, ಸಾಗರಗಳು, ಕೊಲ್ಲಿಗಳು, ಖಾರಿಗಳು, ಅಂಕುಡೊಂಕದ ನದಿಗಳು, ಕಣಿವೆಗಳು, ಬೆಟ್ಟಗುಡ್ಡಗಳು, ಲಕ್ಷಾಂತರ ಪ್ರಭೇದದ ಸಸ್ಯಗಳು, ಕೀಟಗಳು, ಪಕ್ಷಿಗಳು, ಪ್ರಾಣಿಗಳು ಇವೆ. ಒಂದು ಕಡೆ ವಿಶಾಲವಾದ ಬಯಲು ಪ್ರದೇಶ, ಇನ್ನೊಂದೆಡೆ ತಗ್ಗು ಪ್ರದೇಶಗಳು, ಮತ್ತೊಂದು ಕಡೆ ಎತ್ತರವಾದ ಪರ್ವತಗಳು ಮತ್ತೊಂದು ಕಡೆ ಸಿಹಿ ನೀರು ಹಾಗೆಯೇ ಉಪ್ಪು ನೀರು ಸರೋವರಗಳು, ಹೀಗೆ ಕೋಟಿ ಕೋಟಿ ಬಗೆಯ ಜೀವವೈವಿಧ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇವೆಲ್ಲವುಗಳಿಗೆ ಮೆರಗು ತಂದಿರುವುದು ಇಲ್ಲಿನ ಜನಸಂಖ್ಯೆ. ಕೋಟ್ಯಾಂತರ ಜೀವಿಗಳಿಂದ ತುಂಬಿ ತುಳುಕುತ್ತಿರುವ ಒಂದೇ ಒಂದು ಗ್ರಹವೆಂದರೆ ಅದು ಭೂಮಿ ಮಾತ್ರ. ಈ ಜೀವಿಗಳಿಂದಲೇ ಭೂಮಿಗೆ ಒಂದು ಅರ್ಥ ಬಂದಿದೆ. ಭೂಮಿಗೆ ಚೆಂದ ಹಾಗೂ ಅಂದದ ಸ್ಥಾನ ಮಾನ ಸಿಕ್ಕಿದೆ. ಈ ಭೂಮಿಯ ಮೇಲೆ ವಾಸಿಸುವ ಜೀವಿಗಳು ಒಂದು ಮತ್ತೊಂದರಂತೆ ಇಲ್ಲ. ಹಲವಾರು ಬಗೆಯ ವಿವಿಧತೆಗಳು ಕಂಡುಬರುತ್ತವೆ. ಹೀಗೆ ವಿವಿಧತೆಯಿಂದ ಕೂಡಿದ ಜೀವಿಗಳನ್ನು ಜೀವ ವೈವಿಧ್ಯ ಎಂದು ಕರೆಯುತ್ತೇವೆ. ಈ ಭೂಮಿ ಹುಟ್ಟಿ ಬಂದ ನಂತರ ವಿವಿಧ ಜಾತಿ ವರ್ಗಗಳ ಜೀವಿಗಳು ಭೂಮಿಯ ಮೇಲೆ ವಾಸಿಸಲು ಆರಂಭಿಸಿದವು. ಈ ಜೀವಿಗಳ ತೂಕ, ಆಕಾರ, ದಪ್ಪ, ಎತ್ತರ ಮೊದಲಾದವುಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ಬರಿ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳಿಂದ ಹಿಡಿದು ಬೃಹತ್ ಗಾತ್ರದ ಆನೆಗಳವರೆಗೆ, ಸಾಗರದಲ್ಲಿ ಈಜುವ ಚಿಕ್ಕ ಚಿಕ್ಕ ಮೀನುಗಳಿಂದ ಹಿಡಿದು ಸುಮಾರು 90 ಅಡಿ ಉದ್ದವಿರುವ ದೊಡ್ಡ ದೊಡ್ಡ ತಿಮಿಂಗಿಲಗಳವರೆಗೆ ಜೀವ ವೈವಿಧ್ಯ ಹರಡಿದೆ ಎಂದರೆ ಆಶ್ಚರ್ಯವಾಗದೆ ಇರದು. ಸಮುದ್ರದಲ್ಲಿ ಕಂಡು ಬರುವ ಚಿಕ್ಕ ಪಾಚಿಗಳಿಂದ ಹಿಡಿದು ಸುಮಾರು 300 ಅಡಿ ಎತ್ತರದವರೆಗೆ ಬೆಳೆಯುವ ದೊಡ್ಡ ದೊಡ್ಡ ಮರಗಳನ್ನು ಈ ಭೂಮಿ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಭೂಮಿಯ ಪರಿಸರ ವ್ಯವಸ್ಥೆಯಲ್ಲಿ ಅನೇಕ ಜಾತಿಯ ಸಸ್ಯಗಳು, ಸಸ್ಯಹಾರಿ, ಪ್ರಾಣಿಗಳು ಹಾಗೂ ಮಾಂಸಾಹಾರಿ ಪ್ರಾಣಿಗಳು ವಾಸಿಸುತ್ತಿವೆ. ಇವುಗಳು ಪರಿಸರವನ್ನು ತಕ್ಕಮಟ್ಟಿಗೆ ಸಮತೂಕದಲ್ಲಿ ಇಡುತ್ತವೆ.

1992ರಲ್ಲಿ  ರಿಯೋಡಿ ಜನೈರೋದಲ್ಲಿ ನಡೆದ ಸಮ್ಮೇಳನದಲ್ಲಿ ಜೀವ ವೈವಿಧ್ಯತೆ ಕುರಿತು ಅರ್ಥ ಸಮೀಟ್‌ನಲ್ಲಿ ಈ ರೀತಿ ವಿವರಿಸಲಾಗಿದೆ. ಒಂದು ಭೂಭಾಗ ಸಾಗರ ಅಥವಾ ಇತರ ಭಾಗದಲ್ಲಿರುವ ಎಲ್ಲ ಜೀವಿ ಪರಿಸರ ವ್ಯವಸ್ಥೆಗಳ ಎಲ್ಲಾ ಜೀವಿಗಳನ್ನು ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಜೀವಿಗಳನ್ನು ಒಟ್ಟಾಗಿ ಜೀವ ವೈವಿಧ್ಯತೆ ಎಂದು ಕರೆಯಲಾಗಿದೆ. ಥಾಮಸ್ ಜಾಯ್ ಪ್ರಥಮ ಬಾರಿಗೆ ಬಯಾಲಜಿಕ್ ಡೈವರ್ಸಿಟಿ ಎಂಬ ಪದವನ್ನು 1980ರಲ್ಲಿ ಬಳಸಿದನು. ಮುಂದುವರೆದು ಹಾರ್ವರ್ಡ್ ವಿಶ್ವವಿದ್ಯಾಲಯದ ಡಬ್ಲ್ಯೂ ಡಿ ರೋಜನ್ 1985ರಲ್ಲಿ ಈ ಪದವನ್ನು ಬಳಸಿದನು. ಎಡ್ವರ್ಡ್ ವಿಲ್ಸನ್ ಈ ಪದವನ್ನು ಜನಪ್ರಿಯಗೊಳಿಸಿದನು.

  1. ವಿಶ್ವಸಂಪನ್ಮೂಲಗಳ ಸಂಸ್ಥೆಯ ಪ್ರಕಾರ ಪ್ರಪಂಚದ ಜೀವಿ ತಳಿಗಳ ವಿವಿಧತೆ ಹಾಗೂ ಅವುಗಳು ರೂಪಿಸಿಕೊಂಡಿರುವ ವಿವಿಧ ಸಮುಚ್ಚಯಗಳಿಗೆ ಜೀವವೈವಿಧ್ಯತೆ ಎಂದು ಕರೆಯಲಾಗಿದೆ.
  2. ರಾಬರ್ಟ್‌ ಮಾಲ್ತೂಸ್‌ ಪ್ರಕಾರ ಜೀವಿಗಳ ಜನನ ಸ್ವಾಭಾವಿಕವಾದರೂ ಬೆಳವಣಿಗೆಗೆ ನಡೆದ ಸ್ಪರ್ಧೆಯನ್ನು ವಿಶಾಲವಾಗಿ ಗ್ರಹಿಸಬೇಕು ಎಂದಿದ್ದಾರೆ.
  3. ಚಾರ್ಲ್ಸ್ ಡಾರ್ವಿನ್ ಜೀವ ಜಾತಿಗಳ ಉಗಮ ಬಹಳ ನಿಗೂಢವಾದದ್ದು ಪ್ರಕೃತಿ ಸಹಜವಾದ ಪ್ರಾಣಿಗಳಲ್ಲಿ ಸಸ್ಯಗಳಲ್ಲಿ ಕಂಡುಬರುವ ವ್ಯತ್ಯಾಸಗಳು ಬೇರೆ ಬೇರೆ ಬುಡಕಟ್ಟುಗಳಾಗಿ ಹೇಗೆ ವಿಂಗಡನೆಯಾಗುವವೋ ಅದೇ ರೀತಿ ಅತಿ ದೀರ್ಘಾವಧಿಯವರೆಗೆ ಹೊಸ ಹೊಸ ಜಾತಿಗಳು, ವರ್ಗಗಳು ಬೇರ್ಪಡುತ್ತಾ ಬಂದಿದೆ ಎಂದಿದ್ದಾರೆ.
  4. ಆಲ್ಫ್ರೆಡ್ ರಸೆಲ್ ವಾಲೆಸ್ ಜೀವ ವಿಕಾಸ ವೈವಿಧ್ಯಮಯವಾದದ್ದು. ವಿಸ್ಮಯವಾದುದು ವಿಕಾಸ ಹಂತಗಳು ಈ ಭೂಮಿಯ ಮೇಲೆ ಬಹು ರೋಚಕ ರೋಮಾಂಚಕ ಎಂದಿದ್ದಾರೆ.

 ಭೂಮಿಯ ಮೇಲೆ ಕಂಡು ಬರಬಹುದಾದ ಜೀವ ವೈವಿಧ್ಯತೆಯಲ್ಲಿ ಬಿಲಿಯನ್‌ಗಟ್ಟಲೆ ವಿವಿಧ ಬಗೆಯ ಜೀವ ಪ್ರಭೇದಗಳಿವೆ. ಈ ಜೀವ ಪ್ರಭೇದಗಳು ಸುಮಾರು ನಾಲ್ಕು ಬಿಲಿಯನ್ ವರ್ಷಗಳಿಂದ ವಿಕಾಸ ಹೊಂದುತ್ತಾ ಬಂದಿದೆ. ಒಂದು ಅಂದಾಜಿನ ಪ್ರಕಾರ ಒಟ್ಟು ಜೀವಿಗಳ ಸಂಖ್ಯೆಯು ಸುಮಾರು ಏಳು ಬಿಲಿಯನ್ ಅಷ್ಟು ಇರಬಹುದಾಗಿದೆ. ಭೂಮಿಯ ಮೇಲಿನ ಒಟ್ಟು ಜೀವಿಗಳಲ್ಲಿ ಶೇಕಡ 70ರಷ್ಟು ಪ್ರಾಣಿಗಳಿವೆ. ಸಸ್ಯಗಳು 22% ರಷ್ಟು ಇವೆ. ಪ್ರಾಣಿ ಪ್ರಪಂಚದಲ್ಲಿ ಕೀಟಗಳೇ ಅತಿ ಹೆಚ್ಚಾಗಿವೆ. ಭಾರತ ಪ್ರಪಂಚದ 2.4 ರಷ್ಟು ಭೂಭಾಗವನ್ನು ಮಾತ್ರ ಹೊಂದಿದ್ದರೂ 7% ಪ್ರಭೇದಗಳನ್ನು, 17.5% ಜನಸಂಖ್ಯೆಯನ್ನು ಹಾಗೂ 92,000( 7.5%) ಪ್ರಾಣಿ ಪ್ರಭೇದಗಳನ್ನು ಹೊಂದಿದೆ. ಒಂದು ಅಂದಾಜಿನಂತೆ ಜೀವ ಪ್ರಭೇದಗಳ ಲೆಕ್ಕಾಚಾರ ಈ ಕೆಳಗಿನಂತಿವೆ.

ಕಸೇರುಕ ಪ್ರಾಣಿಗಳು ಆಕಸೇರುಕ ಪ್ರಾಣಿಗಳು ಸಸ್ಯಗಳು
1. ಸಸ್ತನಿಗಳು- 4170 ಕೀಟಗಳು-1000000  ಹೂ ಬಿಡುವ ಸಸ್ಯಗಳು- 250000
2.  ಪಕ್ಷಿಗಳು-  9020  ಸಂಧಿಪದಿಗಳು- 200000  ಹೂ ಬಿಡದ ಸಸ್ಯಗಳು- 130000
3. ಸರಿಸೃಪಗಳು- 5085  ಇತರೆ ಅಕಸೇರುಕಗಳು-200000  
4.  ಉಭಯವಾಸಿಗಳು- 3300 ಆಕಸೇರುಕ ಪ್ರಾಣಿಗಳು:  
5.  ಮೀನುಗಳು- 4100    

ಭೂಮಿಯ ಮೇಲೆ ಇಷ್ಟೆಲ್ಲಾ ಸಸ್ಯ, ಪ್ರಾಣಿ, ಪಕ್ಷಿ ಪ್ರಭೇದಗಳಿದ್ದರೂ ಅವೆಷ್ಟೋ ಇನ್ನೂ ಕಣ್ಣಿಗೆ ಕಾಣದಷ್ಟು ಪ್ರಭೇದಗಳು ಉಳಿದುಕೊಂಡಿವೆ. ಈ ಜೀವಿಗಳ ವಾಸಸ್ಥಾನಗಳು ಕಲ್ಪನೆಗೆ ಮೀರಿದ್ದಾಗಿವೆ. ಈ ಜೀವಿಗಳ ವಾಸ ಇಂದು ನಿನ್ನೆಯದಲ್ಲ. ಅದು ಕೋಟಿ ಕೋಟಿ ವರ್ಷಗಳ ನಿರಂತರವಾದ ಕ್ರಿಯೆಯಿಂದ ಆಗಿದ್ದಾಗಿದೆ. ಇಂತಹ ಜಟಿಲವಾದ ಪರಿಸರದಲ್ಲಿ ಕೆಲವು ಪ್ರಾಣಿ, ಪಕ್ಷಿಗಳು ತಮ್ಮ ಕೊಂಡಿಯನ್ನು ಕಳಚಿಕೊಂಡರೆ ಪರಿಸರದಲ್ಲಿ ತಕ್ಷಣವೇ ಅಸಮತೋಲನ ಕಂಡುಬರುತ್ತದೆ. ಮುಖ್ಯವಾಗಿ ಮಾನವನ ಕೆಟ್ಟ ಚಟಗಳಿಂದಾಗಿ ಪರಿಸರ ದಿನೇ ದಿನೇ ಅವನತಿಗೊಳ್ಳುತ್ತಿದ್ದು ಅದರೊಂದಿಗೆ ಜೀವಿಗಳು ಕಣ್ಮರೆಯಾಗುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ. ಈಗಾಗಲೇ ಅಮೆರಿಕ ಹಾಗೂ ಬ್ರೆಜಿಲ್ ಗಳಲ್ಲಿ ಮರಗಳನ್ನು ಕಡಿದು ಕದ್ದು ಮಾರುತ್ತಿರುವ ಜಾಲವೊಂದು ಪತ್ತೆಯಾಗಿದೆ.

ಇನ್ನು ಭಾರತದಲ್ಲಿ ಜಿಂಕೆ, ಹುಲಿ, ಚಿರತೆ, ಸಿಂಹ, ಆನೆ, ಕಾಡುಕೋಣ, ಕಾಡೆಮ್ಮೆ ಮುಂತಾದವುಗಳನ್ನು ಕೊಂದು ಅವುಗಳ ಚರ್ಮ, ದಂತ, ಮಾಂಸ, ಕೊಂಬುಗಳನ್ನು ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಇವುಗಳಿಗೆ ತಡೆಯೊಡದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರಾಣಿಗಳನ್ನು ಚಿತ್ರಪಟಗಳಲ್ಲಿ ಕಾಣುವ ಸನ್ನಿವೇಶ ದೂರ ಉಳಿದಿಲ್ಲ ಎಂದು ಹೇಳಬಹುದು. ಇಂತಹ ಪರಿಸ್ಥಿತಿಯ ನಡುವೆ ಅನೇಕ ಜೀವಿಗಳು ಸಂತಾನೋತ್ಪತ್ತಿ ಮಾಡಿ ತಮ್ಮ ಸಂತತಿಗಳನ್ನು ಹೆಚ್ಚಿಸಿಕೊಳ್ಳುತ್ತಿವೆ. ಇನ್ನು ಕೆಲವು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ವಿಫಲಗೊಂಡು ಸಾಯುತ್ತಿವೆ. ಹೊಂದಾಣಿಕೆಯ ಅಥವಾ ಬಲಿಷ್ಠ ಜೀವಿಗಳು ಸಂತಾನೋತ್ಪತ್ತಿಯಲ್ಲಿ ಯಶಸ್ವಿ ಆದರೆ ಹೊಂದಿಕೊಳ್ಳದ ಅಥವಾ ದುರ್ಬಲಗೊಂಡ ಜೀವಿಗಳು ಸಂತಾನೋತ್ಪತ್ತಿಯಲ್ಲಿ ಅಸಮರ್ಥಗೊಳ್ಳುತ್ತವೆ. ಹೀಗಾಗಿ ಪರಿಸರದಲ್ಲಿ ಏರುಪೇರು ಕಂಡುಬರುತ್ತದೆ.

ಉಪಸಂಹಾರ

ಜೀವ ವೈವಿಧ್ಯವು ಭೂಮಿಯ ಜೀವಂತಿಕೆಯ ಮೂಲವಾಗಿದ್ದು, ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಾನವನ ಅಜಾಗರೂಕತೆ, ಅರಣ್ಯ ನಾಶ ಮತ್ತು ಅಕ್ರಮ ಬೇಟೆಯಿಂದ ಅನೇಕ ಜೀವ ಪ್ರಭೇದಗಳು ನಾಶದ ಅಂಚಿಗೆ ತಲುಪಿವೆ. ಪರಿಸರದ ಸಮತೋಲನ ಕಾಪಾಡಲು ಸಸ್ಯ, ಪ್ರಾಣಿ ಮತ್ತು ಅವುಗಳ ವಾಸಸ್ಥಾನಗಳನ್ನು ರಕ್ಷಿಸುವುದು ಅತ್ಯಂತ ಅಗತ್ಯ. ಜೀವ ವೈವಿಧ್ಯ ಉಳಿದರೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಮತ್ತು ಸುಂದರವಾದ ಭೂಮಿಯನ್ನು ನೀಡಲು ಸಾಧ್ಯ. ಆದ್ದರಿಂದ ಸಂರಕ್ಷಣೆಯತ್ತ ಜಾಗೃತಿಯಿಂದ ಹೆಜ್ಜೆ ಇಡುವುದು ನಮ್ಮ ಕರ್ತವ್ಯವಾಗಿದೆ

ಸುಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳು

ಸುಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳು

ʻʻ ಸುಸ್ಥಿರ ಅಭಿವೃದ್ಧಿ ಎಂದರೆ ಪ್ರಸ್ತುತ ಪೀಳಿಗೆಯ ಅಗತ್ಯತೆಯನ್ನು ಪೂರೈಸುವಾಗ ಭವಿಷ್ಯದ ಪೀಳಿಗೆಯ ಅಗತ್ಯತೆಗಳಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು.ʼʼ ಇದರ ಅರ್ಥವೆಂದರೆ ಪರಿಸರ, ಆರ್ಥಿಕ ಹಾಗೂ ಸಾಮಾಜಿಕ ಅಂಶಗಳ ನಡುವೆ  ಸಮತೋಲನ ಕಾಯ್ದುಕೊಂಡು ನಾವು ಇಂದು ಬಳಸುವ ಸಂಪನ್ಮೂಲಗಳು ಮುಂದಿನ ಪೀಳಿಗೆಗೂ ಲಭ್ಯವಿರುವಂತೆ ನೋಡಿಕೊಳ್ಳುವುದು. ಉದಾ:  ನಿಗದಿತ ಪ್ರಮಾಣದಲ್ಲಿ ಆದಾಯ ಬರುವಂತೆ ಕಾರ್ಯನಿರ್ವಹಣೆ ಮಾಡುವುದು. ನಿಗದಿತ ಪ್ರಮಾಣದಲ್ಲಿ ಉತ್ಪಾದನೆ, ನಿಗದಿತ ಪ್ರಮಾಣದಲ್ಲಿ ಮಾಂಸ ದೊರಕುವಂತೆ ಮಾಡುವುದು ಮತ್ತು ನಿಗದಿತ ಪ್ರಮಾಣದಲ್ಲಿ ಸಂಪನ್ಮೂಲಗಳು ದೊರಕುವಂತೆ ಮಾಡುವುದು. ಸುಸ್ಥಿರ ಎಂಬ ಪದವು ಪ್ರಥಮ ಬಾರಿಗೆ 1713 ರಲ್ಲಿ ಜರ್ಮನಿಯ ಫಾರೆಸ್ಟ್ರಿ ಕೈಪಿಡಿಯಲ್ಲಿ ಬಳಕೆಯಾಯಿತು. ನಂತರ 1987ರಲ್ಲಿ ವಿಶ್ವ ಸಂಸ್ಥೆಯಿಂದ ನೇಮಕಗೊಂಡಿದ್ದ ಬ್ರಂಡ್ ಟ್ಲಾಂಡ್‌  ಕಮಿಷನ್ ವರದಿಯಲ್ಲಿ ಈ ಪದವನ್ನು ವ್ಯಾಪಕವಾಗಿ ಬಳಕೆ ಮಾಡಲಾಯಿತು. 

ನೈಸರ್ಗಿಕ ಸಂಪನ್ಮೂಲಗಳು ಹಾಳಾಗದಂತೆ ಅವುಗಳನ್ನು ಅಪಾಯಕ್ಕೆ ದೂಡುವುದನ್ನು ತಡೆಗಟ್ಟಿ ಪರಿಸರ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಸ್ಥಿರವಾದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯೇ ಮೂಲ ಗುರಿಯಾಗಿಬೇಕು. ಅದು ಇಂದಿನ ಮೂಲ ಉದ್ದೇಶವೂ ಆಗಿರಬೇಕು ಎಂಬುದನ್ನು ಎಲ್ಲರೂ ಅರಿತುಕೊಳ್ಳುವುದು ಇಂದಿನ ಸಾಮಾಜಿಕ ವ್ಯವಸ್ಥೆಯ ಬಯಕೆಯಾಗಿದೆ. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಅಭಿವೃದ್ಧಿಗಳು ಸಂಪನ್ಮೂಲಗಳನ್ನು ವಿನಾಶದ ಅಂಚಿಗೆ ತಳ್ಳಿದೆ. ಇವುಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಯು ಅವುಗಳನ್ನು ಅನುಭವಿಸುವಂತೆ ಮಾಡಿ ಸ್ಥಿರತೆಯನ್ನು ಕಾಪಾಡುವುದೇ ಪ್ರಮುಖ ಉದ್ದೇಶವನ್ನು ಸುಸ್ಥಿರತೆಯು ಹೊಂದಿದೆ. ಆದರೆ ಅಭಿವೃದ್ಧಿಯ ನೆಪದಲ್ಲಿ ಇಂದಿನ ಮಾನವ ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ಮಾಡುತ್ತಲೇ ಬಂದಿದ್ದಾನೆ. ಅವನು ನೈಸರ್ಗಿಕ ವ್ಯವಸ್ಥೆಯ ಸಮಗ್ರತೆಯನ್ನು ಹಾಗೂ ಸ್ಥಿರತೆಯನ್ನು ಹಾಳು ಮಾಡದೆ ತನ್ನ ಅಗತ್ಯಗಳನ್ನು ಇದ್ದುದ್ದಲ್ಲಿಯೇ ಪೂರೈಸಿಕೊಳ್ಳಬೇಕು. ಇದೇ ಸುಸ್ಥಿರತೆಯ ಮೂಲ ಮಂತ್ರವಾಗಿದೆ. ಪರಿಸರ ಸಂರಕ್ಷಣೆಯಿಂದಲೇ ಸುಸ್ಥಿರತೆಗೆ ಸಾಧ್ಯವಾಗಿದೆ ಎಂಬುದನ್ನು ಮಾನವ ಅರಿತುಕೊಳ್ಳಬೇಕು. ಆಧುನಿಕ ಮಾನವನ ಮೂಲ ಗುರಿ ಎಂದರೆ ಆಧುನಿಕ ಅಭಿವೃದ್ಧಿ ಹಾಗೂ ಸುಸ್ಥಿರ ವ್ಯವಸ್ಥೆಯನ್ನು ಏಕಕಾಲದಲ್ಲಿ ಸಾಧಿಸುವುದು ಆಗಬೇಕು. ಸುಸ್ಥಿರತೆಯಿಂದ ಭವಿಷ್ಯದ ಪರಿಸರಕ್ಕೆ ಧಕ್ಕೆ ಆಗಬಾರದು ಮತ್ತು ವರ್ತಮಾನ ಕಾಲದ ಅಗತ್ಯಗಳನ್ನು ಪೂರೈಸಿಕೊಳ್ಳುವಂತಿರಬೇಕು.

1. ಸುಸ್ಥಿರತೆಯ ಪರಿಕಲ್ಪನೆ (Concept of Sustainable Development)

ʻʻ ನಿಸರ್ಗದತ್ತವಾದ ಸಂಪನ್ಮೂಲಗಳಿಗೆ ಚ್ಯುತಿ ಬರದಂತೆ ಅಥವಾ ಅಂತಹ ಸಂಪನ್ಮೂಲಗಳು ಅಭಿವೃದ್ಧಿಯಾಗುವಂತೆ ಮಾನವನಿಂದ ನಿರ್ವಹಿಸಲ್ಪಟ್ಟ ಉತ್ಪಾದಕತೆಯ ಪ್ರಕ್ರಿಯೆಯನ್ನು ಸುಸ್ಥಿರತೆ ಎಂದು ವ್ಯಾಖ್ಯಾನಿಸಬಹುದುʼʼ.  ಭವಿಷ್ಯದ ಹಿತದೃಷ್ಟಿಯಿಂದ ನೈಸರ್ಗಿಕ ಪರಿಸರವನ್ನು ಕಾಪಾಡಿ ಸುಸ್ಥಿರತೆಗೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ಇಂದಿನ ಮಾನವನ ಆದ್ಯ ಕರ್ತವ್ಯವಾಗಿದೆ. ಕೈಗಾರಿಕಾ ಕ್ರಾಂತಿಯು ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿತು. ವಿಶ್ವದ ಹಲವಾರು ಪರಿಸರ ಹಾಗೂ ಸಾಮಾಜಿಕ ಬಿಕ್ಕಟ್ಟುಗಳು ಸುಸ್ಥಿರತೆಯ ಅಗತ್ಯಗಳನ್ನು ಬಿಂಬಿಸಿದವು. ಅಂತಹ ಸಾಮಾಜಿಕ ಬಿಕ್ಕಟ್ಟುಗಳು ಈ ಕೆಳಗಿನಂತಿವೆ.

1. ಅಭಿವೃದ್ಧಿಶೀಲ ರಾಷ್ಟ್ರಗಳು ಮಾಡಿದ ಅಧಿಕ ಸಾಲದ ಆಘಾತ

2.  ರಂಗೇಲಾಪ್ ಪರಮಾಣು ದುರಂತ

3.  1950ರ ದಶಕದಲ್ಲಿ ಉಂಟಾದ ಜಪಾನಿನ ಮಿನಾಮಟ ದುರಂತ  

4.  1984ರ ಭೂಪಾಲ ಅನಿಲ ದುರಂತ

5.  ಚೆರ್ನೋಬಿಲ್ ಅಣು ದುರಂತ 1986

6.  1973-1979ರ ನಡುವಿನ ತೈಲ ಅಪಘಾತಗಳು

7.  1923ರ ಅಮೆರಿಕಾದ ಹಣದುಬ್ಬರದ ಏರಿಕೆ.

8. 1907ರ ಅಮೇರಿಕಾದ ಬ್ಯಾಂಕಿಂಗ್ ವ್ಯವಸ್ಥೆ

 ಇದರೊಂದಿಗೆ ಜಾಗತಿಕ ತಾಪಮಾನ, ವಾಯುಮಾಲಿನ್ಯ, ಜಲಮಾಲಿನ್ಯ, ಓಜೋನ್ ಪದರು  ಕ್ಷೀಣ, ಜೀವ ವೈವಿಧ್ಯಗಳ ನಾಶ ಇತ್ಯಾದಿಗಳು.

 ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಹಲವು ಅಂಶಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗಿದೆ. ಅವುಗಳಲ್ಲಿ ಕೆಲವೊಂದು ಈ ಕೆಳಗಿನಂತೆ ನೋಡಬಹುದು.

1. ದಿನೇ ದಿನೇ ಹದಗೆಡುತ್ತಿರುವ ಪರಿಸರ ಮಾಲಿನ್ಯವನ್ನು  ನಿಯಂತ್ರಿಸುವುದು ಮತ್ತು ಪರಿಸರ ಮಾಲಿನ್ಯವಾಗದಂತೆ ತಡೆಯುವುದು.

2.  ಬೆಳೆಯುತ್ತಿರುವ ನಗರಗಳು ಹೆಚ್ಚು ಮಾಲಿನ್ಯಕಾರಕವಾಗಿದ್ದು ಮಾಲಿನ್ಯವನ್ನು ತಡೆಗಟ್ಟಿ ನಗರ ಯೋಜನೆಗಳಿಗೆ ಹೊಸ ಕಾನೂನುಗಳನ್ನು ರೂಪಿಸುವುದು.

3.  ಸಾಮಾಜಿಕ ಅರಣ್ಯವನ್ನು ಬೆಳೆಸುವುದು ಮತ್ತು ಸಂರಕ್ಷಿಸುವುದು.

4.  ಸಂಪನ್ಮೂಲಗಳನ್ನು ಮಿತಿಯಾಗಿ ಬಳಸುವುದು ಮತ್ತು ನೀರನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು.

5. ಶಕ್ತಿ ಸಂಪನ್ಮೂಲಗಳನ್ನು ರಕ್ಷಿಸುವುದು.

6.  ಕರಾವಳಿ ಹಾಗೂ ಸಮುದ್ರ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು.

7.  ಪರಿಸರವನ್ನು ನಾಶ ಮಾಡುವ ಜನರನ್ನು ಹಿಡಿದು ಶಿಕ್ಷಿಸುವುದು.

8.  ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು.

9.  ಹಸಿರು ಕ್ರಾಂತಿಯನ್ನು ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿಗೆ ತರುವುದು.

ಇದರೊಂದಿಗೆ 1972ರಲ್ಲಿ ಮೆಡಿಟೇರಿನಿಯನ್ ಸಮುದ್ರ ತೀರವು ಬಹಳ ಮಲಿನಗೊಂಡಿದೆ ಎಂದು ತಿಳಿದು ಅಂತರಾಷ್ಟ್ರೀಯ ಸ್ಟಾಕ್ ಹೋಂ ಸಮ್ಮೇಳನವನ್ನು ಪ್ರಥಮ ಬಾರಿಗೆ ಕರೆಯಲಾಯಿತು. ಈ ಸಮ್ಮೇಳನದಲ್ಲಿ ಪರಿಸರ ರಕ್ಷಣೆಗೆ ಮೊದಲ ಆದ್ಯತೆಯನ್ನು ನೀಡುವಂತೆ ಯುರೋಪಿನ ದೇಶಗಳಿಗೆ ಕರೆ ನೀಡಲಾಯಿತು. 1973ರಲ್ಲಿ ʻʻದಿ  ಯುರೋಪಿಯನ್ ಕಮ್ಯುನಿಟಿಸ್‌  ಎನ್ವಿರಾನ್ಮೆಂಟ್ ಪ್ರೊಟೆಕ್ವಿವಿಟಿ  ಪ್ರೋಗ್ರಾಮ್” ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಯಾರು ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತಾರೋ ಅವರು ದಂಡ ಕೊಡಬೇಕಾಗುವುದು ಎಂಬ ತೀರ್ಮಾನವನ್ನು ಅಂಗೀಕರಿಸಲಾಯಿತು. 

 1992 ರಲ್ಲಿ ಬ್ರೆಜಿಲ್ ನ ರಿಯೋಡಿಜನೈರೋದಲ್ಲಿ  ಜರುಗಿದ ಪೃಥ್ವಿ ಸಮ್ಮೇಳನದಲ್ಲಿ ಸುಮಾರು 1500 ವಿಜ್ಞಾನಿಗಳು 99 ನೊಬೆಲ್ ಪ್ರಶಸ್ತಿ ವಿಜೇತರು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ 21 ಮಾರ್ಗಸೂಚಿ ತತ್ವಗಳನ್ನು ಅಂಗೀಕರಿಸಲಾಯಿತು. ಅದರ ಪ್ರಕಾರ ಮಾಲಿನ್ಯ ಮಾಡಿದವರೇ ದಂಡ ಭರಿಸಬೇಕು. ಜಾಗತಿಕ ಪರಿಸರಕ್ಕೆ ಹಾನಿ ಮಾಡಿದ ದೇಶಗಳೇ ಪರಿಸರವನ್ನು ಸ್ವಚ್ಛಗೊಳಿಸುವ ಹೊಣೆಯನ್ನು ಹೋರಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳನ್ನು ಆದೇಶಗಳೇ ಭರಿಸಬೇಕು.

2. ಸುಸ್ಥಿರ ಅಭಿವೃದ್ಧಿಯ ಗುರಿಗಳು: ( Sustainable development goal )

ಸುಸ್ಥಿರ ಅಭಿವೃದ್ಧಿಯ ಗುರಿಗಳು 2030ರ ವೇಳೆಗೆ ಜನರನ್ನು ಮತ್ತು ನಮ್ಮ ಗ್ರಹವನ್ನು ಉತ್ತಮಪಡಿಸುವ 17 ವಿಶ್ವ ಸಂಸ್ಥೆಯ ಗುರಿಗಳಾಗಿವೆ. ಈ ಗುರಿಗಳು ಬಡತನವನ್ನು ನಿರ್ಮೂಲನೆ ಮಾಡುವುದು, ಹಸಿವನ್ನು ಕೊನೆಗಾಣಿಸುವುದು, ಆರೋಗ್ಯ ಹಾಗೂ ಶಿಕ್ಷಣವನ್ನು ಸುಧಾರಿಸುವುದು, ಲಿಂಗಸಮಾನತೆಯನ್ನು ಉಂಟುಮಾಡುವುದು, ಹವಾಮಾನ ಬದಲಾವಣೆಯನ್ನು ಎದುರಿಸುವುದು ಹಾಗೂ ನ್ಯಾಯ ಸಂಸ್ಥೆಗಳನ್ನು ಬಲಪಡಿಸುವುದು ಮುಂತಾದವುಗಳನ್ನು ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿಯ 17 ಗುರಿಗಳು ಈ ಕೆಳಗಿನಂತಿವೆ.

೧. ಬಡತನದ ಎಲ್ಲಾ ರೂಪಗಳನ್ನು ನಿರ್ಮೂಲನೆಗೊಳಿಸುವುದು.

೨.  ಆಹಾರ, ಭದ್ರತೆ ಹಾಗೂ ಸುಸ್ಥಿರ ಕೃಷಿಯನ್ನು ಅಭಿವೃದ್ಧಿಪಡಿಸುವುದು.

೩. ಎಲ್ಲರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಕಾಪಾಡುವುದು, ಆರೋಗ್ಯದ ಬಗ್ಗೆ ಖಚಿತಪಡಿಸಿಕೊಳ್ಳುವುದು.

೪.  ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಹಾಗೂ ಸಮಾನತೆಯನ್ನು ನೀಡುವುದು.

೫. ಲಿಂಗಸಮಾನತೆಯನ್ನು ಸಾಧಿಸುವುದು ಹಾಗೂ ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸುವುದು.

೬.  ಕುಡಿಯುವ ನೀರು ಹಾಗೂ ನೈರ್ಮಲ್ಯದ ಬಗ್ಗೆ ಗಮನಹರಿಸುವುದು.

೭. ಪ್ರತಿಯೊಬ್ಬರ ವಿಶ್ವಾಸಾರ್ಹ ಸುಸ್ಥಿರ ಹಾಗೂ ಆಧುನಿಕ ಶಕ್ತಿಯನ್ನು ಖಚಿತ ಪಡಿಸಿಕೊಳ್ಳುವುದು.

೮. ಪ್ರತಿಯೊಬ್ಬರಿಗೂ ಉದ್ಯೋಗ ನೀಡುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.

೯.  ಮೂಲಸೌಕರ್ಯವನ್ನು ನೀಡುವ ಮೂಲಕ ಕೈಗಾರೀಕರಣಕ್ಕೆ ಪ್ರೋತ್ಸಾಹ ಕೊಡುವುದು.

೧೦. ದೇಶ ದೇಶಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದು.

೧೧. ನಗರಗಳು ಮತ್ತು ಮಾನವ ವಸಹಾತು ಪ್ರದೇಶಗಳಿಗೆ ಸುರಕ್ಷಿತವಾದ ವಾತಾವರಣ ಕಲ್ಪಿಸುವುದು.

೧೨. ಸುಸ್ಥಿರ ಬಳಕೆ ಹಾಗೂ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು.

೧೩. ಹವಾಮಾನ ಬದಲಾವಣೆ ಹಾಗೂ ಅದರಿಂದ ಉಂಟಾಗುವ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು. 

೧೪. ಸಾಗರ ಹಾಗೂ ಸಾಗರ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ಸಂಪತ್ತಿನ ಸಂರಕ್ಷಣೆಗಾಗಿ ಸತತ ಹೋರಾಡುವುದು.

೧೫. ಪರಿಸರ ಮಾಲಿನ್ಯ, ಅರಣ್ಯ ನಾಶ, ಭೂಮಿಯ ಅವನತಿಯನ್ನು ತಡೆಗಟ್ಟುವುದು ಹಾಗೂ ಜೀವವೈವಿಧ್ಯತೆಯನ್ನು ರಕ್ಷಿಸುವುದು.

೧೬. ಶಾಂತಿಯುತ ಹಾಗೂ ನ್ಯಾಯಯುತ ಸಮಾಜಗಳ ನಿರ್ಮಾಣ.

೧೭. ಜಾಗತಿಕ ಸಹಭಾಗಿತ್ವವನ್ನು ಪುನರುಜ್ಜೀವನಗೊಳಿಸುವುದು.

ಉಪಸಂಹಾರ

ಸುಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿಯು ಇಂದಿನ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹತ್ವದ ಮಾರ್ಗವಾಗಿದೆ. ಪರಿಸರ ಸಂರಕ್ಷಣೆ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಇವುಗಳ ನಡುವೆ ಸಮತೋಲನ ಸಾಧಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ವಿಶ್ವ ಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳು ಮಾನವ ಸಮಾಜವನ್ನು ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯದತ್ತ ಕೊಂಡೊಯ್ಯುವ ದಿಕ್ಕು ಸೂಚಿಸುತ್ತವೆ. ಈ ಗುರಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಉಳಿಸಿಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಸುಸ್ಥಿರತೆಯನ್ನು ಜೀವನಶೈಲಿಯಾಗಿ ಅಳವಡಿಸಿಕೊಳ್ಳುವುದು ಕಾಲದ ಅಗತ್ಯವಾಗಿದೆ.